ಭಾನುವಾರ, ಜುಲೈ 10, 2022

 ಏನಾದರೂ ಮಾಡುತಿರು ತಮ್ಮ; ಸುಮ್ಮನೆ ಕುಳಿತಿರಬೇಡ!

ಡಾ. ಕಿರಣ್ ವಿ.ಎಸ್.

ವೈದ್ಯರು

“ಕೂತು ಉಣ್ಣುವವನಿಗೆ ಕುಡಿಕೆ ಹೊನ್ನು ಸಾಲದು” ಎನ್ನುವ ಗಾದೆಯಿದೆ. “ಹಾಗಿದ್ದರೆ ಇನ್ನು ಮುಂದೆ ನಿಂತೋ, ಮಲಗಿಯೋ ಉಣುತ್ತೇನೆ” ಎನ್ನುವ ಕಥಾನಾಯಕನೂ ಬೀಚಿಯವರ ಕಾದಂಬರಿಯಲ್ಲಿ ಇದ್ದಾನೆ! ಅದು ಸ್ವಂತ ಸಂಪಾದನೆಯಿಲ್ಲದೆ, ಹಿರಿಯರು ಮಾಡಿಟ್ಟ ಆಸ್ತಿಯನ್ನು ಕರಗಿಸುವವರ ಕುರಿತಾದ ನಾಣ್ಣುಡಿ. ಆದರೆ ಉದ್ಯೋಗ ಮಾಡುವಾಗ ಬಹಳ ಕಾಲ ಒಂದೇ ಸಮನೆ ಕೂತಿದ್ದರೆ? “ಅಂಥವರಿಗೆ ಉಳಿಯುವುದು ಸಣ್ಣ ಕುಡಿಕೆಯಷ್ಟು ಆಯುಷ್ಯ ಮಾತ್ರ” ಎನ್ನುತ್ತಾರೆ ವಿಜ್ಞಾನಿಗಳು. ಒಟ್ಟಿನಲ್ಲಿ ಉಣ್ಣುವುದೋ ಅಥವಾ ಕೆಲಸ ಮಾಡುವುದೋ, ಕೂತು ಮಾಡಬಾರದು ಎಂದಾಯಿತು. ಏನಿದು ಕೂತು ಕೆಲಸ ಮಾಡುವವರ ಕತೆ?

ಕೆಲವರ್ಷಗಳ ಹಿಂದೆ ಅಮೆರಿಕದ ಮೆಯೊ ಕ್ಲಿನಿಕ್ ನಿರ್ದೇಶಕರಾದ ಜೇಮ್ಸ್ ಲೆವಿನ್ ಅವರು ಸಂದರ್ಶನವೊಂದರಲ್ಲಿ ಬಹಳ ಕಾಲ ಸುಮ್ಮನೆ ಕುಳಿತಿರುವವರ ಕುರಿತಾಗಿ ಮಾತನಾಡುತ್ತಾ, “ಧೂಮಪಾನ ಮಾಡುವವರಿಗೆ ಆರೋಗ್ಯ ಸಮಸ್ಯೆಗಳು ಯಾವ ರೀತಿ ಆಗುತ್ತವೋ, ಅದಕ್ಕಿಂತ ಹೆಚ್ಚಿನ ಆರೋಗ್ಯ ಸಮಸ್ಯೆಗಳು ಚಟುವಟಿಕೆ ಇಲ್ಲದೆ ಸುಮ್ಮನೆ ಕುಳಿತಿರುವವರಲ್ಲಿ ಆಗುತ್ತದೆ” ಎನ್ನುವ ಸಾಮ್ಯ ಕೊಟ್ಟಿದ್ದರು. ಇದು ವಿಶ್ವದಾದ್ಯಂತ “ಕುಳಿತಿರುವುದು ಧೂಮಪಾನಕ್ಕೆ ಸಮ” ಎನ್ನುವ ಅರ್ಥದಲ್ಲಿ ಪ್ರಸಿದ್ಧವಾಯಿತು. ಧೂಮಪಾನದ ಸಾಮ್ಯ ಕೇವಲ ಅಪಾಯದ ಮಟ್ಟವನ್ನು ವಿವರಿಸಲು ಮಾತ್ರ. ಬೇರೆ ಯಾವುದೇ ಚಟಗಳಿಲ್ಲದೆ ಕೇವಲ ಧೂಮಪಾನ ಮಾತ್ರ ಮಾಡುವವರಿಗೂ ಬಹಳಷ್ಟು ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಅಂತೆಯೇ, ಬೇರೆ ಯಾವುದೇ ದುರಭ್ಯಾಸಗಳು ಇಲ್ಲದವರೂ ದಿನದ ಬಹುಕಾಲ ಚಟುವಟಿಕೆಯಿಲ್ಲದೆ ಕೂರುವುದು ಹಲವಾರು ಅನಾರೋಗ್ಯಗಳಿಗೆ ದಾರಿಯಾಗುತ್ತದೆ ಎಂದು ಅರ್ಥ.  

ಸುಮ್ಮನೆ ಕುಳಿತಿದ್ದರೆ ಏನು ಸಮಸ್ಯೆ? “ಜಡವಾಗಿ ಬಿದ್ದುಕೊಂಡಿರುವಾಗಲೇ ಮನುಷ್ಯ ಸುರಕ್ಷಿತ; ಆಗ ಆತ ಯಾರಿಗೂ ಕೇಡು ಮಾಡಲಾರ” ಎನ್ನುವ ಚಮತ್ಕಾರದ ಮಾತುಗಳಿವೆ. ಸಮಸ್ಯೆ ಇತರರಿಗೆ ಕೇಡು ಮಾಡುವುದಲ್ಲ; ನಮ್ಮ ದೇಹಕ್ಕೇ ಅಪಾಯ ತಂದುಕೊಳ್ಳುವುದು. ನಮ್ಮ ದೇಹ ನಿರಂತರವಾಗಿ ಕೆಲಸ ಮಾಡುತ್ತಿರುವ ಹಲವಾರು ಅಂಗಗಳ ಘಟಕ. ಇದು ಸರಾಗವಾಗಿ ಕಾರ್ಯ ನಿರ್ವಹಿಸಲು ಅಹರ್ನಿಶಿಯೂ ರಕ್ತ ಪರಿಚಲನೆ ಆಗಬೇಕು. ಹೃದಯದಿಂದ ಒತ್ತಲ್ಪಡುವ ರಕ್ತ ದೇಹದ ಎಲ್ಲ ಮೂಲೆಗಳಿಗೂ ತಲುಪಲು ಮಾಂಸಖಂಡಗಳ ಸಹಕಾರ ಬೇಕು. ಇದು ಸಾಧ್ಯವಾಗುವುದು ಶರೀರದ ಚಲನೆಯಿಂದ. ಇದಕ್ಕಾಗಿಯೇ ನಮ್ಮ ಶರೀರಕ್ಕೆ ಕ್ಲುಪ್ತ ವ್ಯಾಯಾಮ ಅಗತ್ಯ ಎಂದು ವೈದ್ಯರು ತಾಕೀತು ಮಾಡುತ್ತಾರೆ.

ಚಟುವಟಿಕೆಯಿಲ್ಲದೆ ಕುಳಿತುಕೊಂಡಿರುವುದು ನಮ್ಮ ಕಾಲಘಟ್ಟದ ಅತಿರೇಕಗಳಲ್ಲಿ ಒಂದು. ಈಗಂತೂ ಬಯಸಿದ ವಸ್ತುಗಳು ಮನೆಬಾಗಿಲಿಗೆ ತಲುಪುತ್ತವೆ. ಅದನ್ನೂ ಕೂತ ಕಡೆಯಿಂದ ಕದಲದೆ ಫೋನಿನಲ್ಲೊ, ಗಣಕದಲ್ಲೂ ಸಂದೇಶ ಕಳಿಸಿ ತರಿಸಬಹುದು. ನೋಡಲು ನೂರಾರು ಕಾರ್ಯಕ್ರಮಗಳ, ಸಿನೆಮಾಗಳ ಆಯ್ಕೆಗಳಿರುವ ದೂರದರ್ಶನವನ್ನು ಕೂತ ಸೋಫಾದಿಂದ ಎದ್ದೇಳದೇ ರಿಮೋಟ್ ಮೂಲಕ ನಿರ್ವಹಿಸಬಹುದು. ಕೋವಿಡ್-19 ಎನ್ನುವ ಜಾಗತಿಕ ಕಾಯಿಲೆ “ಮನೆಯಿಂದಲೇ ಕಚೇರಿಯ ಕೆಲಸ ಮಾಡುವ” ಸೌಲಭ್ಯ ಕಲ್ಪಿಸಿತು. ಇದರ ಲಾಭಗಳನ್ನು ಗ್ರಹಿಸಿದ ಸಂಸ್ಥೆಗಳು ಆ ಸೌಲಭ್ಯವನ್ನು ಮುಂದುವರೆಸಿದವು. ಮುಂಜಾನೆ ಬೇಗನೆ ಎದ್ದು, ಸಿದ್ಧರಾಗಿ, ಆಫೀಸಿನ ವಾಹನ ಹಿಡಿದು ನಿರ್ದಿಷ್ಟ ಕಾಲಕ್ಕೆ ಕಚೇರಿ ತಲುಪುತ್ತಿದ್ದ ಪೀಳಿಗೆಯೊಂದು, ನಿಧಾನವಾಗಿ ಎದ್ದು, ಯಾವುದೇ ತಯಾರಿ ಇಲ್ಲದೆ, ನೇರವಾಗಿ ಮನೆಯ ಮೂಲೆಯೊಂದರಿಂದ ಕಚೇರಿಯ ಕೆಲಸವನ್ನು ಮಾಡುವ ಅವಕಾಶ ದೇಹದ ಚಟುವಟಿಕೆಯನ್ನು ಇನ್ನಷ್ಟು ಕಡಿಮೆ ಮಾಡಿದೆ. ಹೀಗೆ, ನಮ್ಮ ಜೀವನಶೈಲಿ ನಿಧಾನವಾಗಿ ಸೋಮಾರಿತನವನ್ನು ಪ್ರೋತ್ಸಾಹಿಸುತ್ತಿದೆ. ಇದರಿಂದ ದೀರ್ಘಕಾಲಿಕವಾಗಿ ಶರೀರದ ನಿರ್ವಹಣೆಯ ಮೇಲೆ ಸಾಕಷ್ಟು ಕೆಟ್ಟ ಪ್ರಭಾವ ಆಗುತ್ತದೆ.    

ಶರೀರದ ಸೌಖ್ಯದ ಮೇಲೆ ನಿಯಮಿತ ವ್ಯಾಯಾಮದ ಒಳ್ಳೆಯ ಪರಿಣಾಮಗಳನ್ನು ತಜ್ಞರು ಸಾವಿರಾರು ಸಂಶೋಧನೆಗಳ ಮೂಲಕ ಸಾಬೀತು ಪಡಿಸಿದ್ದಾರೆ. ಅಂತೆಯೇ, ಸುಮ್ಮನೆ ಕುಳಿತಿರುವ ಇಲ್ಲದ ದೇಹದ ಮೇಲೆ ಆಗಬಹುದಾದ ಕೆಟ್ಟ ಪರಿಣಾಮಗಳ ಬಗ್ಗೆಯೂ ಅಧ್ಯಯನಗಳಿವೆ. ಮೂವತ್ತು ನಿಮಿಷಗಳ ಕಾಲ ಚಟುವಟಿಕೆ ಇಲ್ಲದೆ ಕುಳಿತಿದ್ದರೆ ದೇಹದ ಚಯಾಪಚಯಗಳು ಶೇಕಡಾ 90 ಕಡಿಮೆಯಾಗುತ್ತವೆ. ಚಲನೆಯ ಕಾರಣದಿಂದ ಬಳಕೆಯಾಗಬೇಕಾದ ಕೊಬ್ಬು ಕರಗದೆ ಶರೀರದೊಳಗೆ ಜಮೆಯಾಗುತ್ತದೆ. ಮಾಂಸಖಂಡಗಳ ರಕ್ತಸಂಚಾರ ಇಳಿದು, ಬಿಗುವು ಕಾಣುತ್ತದೆ. ಶರೀರದ ಕೆಳಭಾಗಗಳಲ್ಲಿ  ಸಂಗ್ರಹವಾದ ರಕ್ತ ಸರಾಗವಾಗಿ ಹರಿಯದೆ ರಕ್ತನಾಳಗಳು ಹಿಗ್ಗುತ್ತವೆ. ಇವುಗಳೊಳಗೆ ಜಮೆಯಾದ ರಕ್ತ ಅಲ್ಲಿಯೇ ಹೆಪ್ಪುಗಟ್ಟಬಹುದು. ಈ ಪ್ರಕ್ರಿಯೆ ಪ್ರತಿದಿನವೂ ಮುಂದುವರೆದರೆ ಮಧುಮೇಹ, ಬೊಜ್ಜು, ಆತಂಕ, ಬೆನ್ನುನೋವು, ಹೃದ್ರೋಗ, ಪಾರ್ಶ್ವವಾಯು, ಶ್ವಾಸಕೋಶಗಳ ಸಮಸ್ಯೆ, ಅಧಿಕ ರಕ್ತದೊತ್ತಡದ ಸಾಧ್ಯತೆಗಳು ಗಣನೀಯವಾಗಿ ಏರುತ್ತವೆ. ಇವೆಲ್ಲದರ ಮೂಲಕ ವೃದ್ಧಾಪ್ಯಕ್ಕೆ ಮುನ್ನವೇ ಮರಣದ ಸಾಧ್ಯತೆ ಹೆಚ್ಚುತ್ತದೆ.

ಹಾಗೆಂದು ಕೂಡದೆ ಇರಲಾದೀತೆ? ಇಲ್ಲಿನ ಸಮಸ್ಯೆ ಆಯಾಸವಾದಾಗ ವಿಶ್ರಾಂತಿಗೆ ಕೂರುವುದಲ್ಲ; ಹಾಗೆ ಕೂತ ಮನುಷ್ಯ ಬಹಳ ಕಾಲ ಅಲ್ಲಿಂದ ಏಳದಿರುವುದು. ಮನರಂಜನೆಗೋ, ಕೆಲಸಕ್ಕೋ, ಓದುವ ಹವ್ಯಾಸದಿಂದಲೋ, ಮತ್ಯಾವುದೋ ಕಾರಣಕ್ಕೆ ಗಂಟೆಗಟ್ಟಲೇ ಒಂದೇ ಸ್ಥಾನದಲ್ಲಿ ಕೂರುವುದು ಆರೋಗ್ಯಕರವಲ್ಲ. ಹೀಗೆ ಕೂರುವಾಗ ನಮಗೆ ಅರಿವಿಲ್ಲದೆಯೇ ಶರೀರ ಸೊಟ್ಟದಾದ ಕೆಟ್ಟ ಭಂಗಿಗೆ ಬಂದಿರುತ್ತದೆ. ಇದು ಮೂಳೆಗಳ ಮೇಲೆ ಅನಗತ್ಯ ಒತ್ತಡಕ್ಕೆ ಕಾರಣವಾಗಿ, ಕೀಲುಗಳು ಘಾಸಿಯಾಗುತ್ತವೆ. ರಕ್ತನಾಳಗಳ ಮೇಲೆ ಅಸಮವಾದ ಒತ್ತಡ ಬಿದ್ದು ರಕ್ತಸಂಚಾರ ಏರುಪೇರಾಗುತ್ತದೆ. ಫಲಿತಾಂಶವಾಗಿ ಮಾಂಸಖಂಡಗಳು ಬಿಗಿದುಕೊಳ್ಳುತ್ತವೆ. ಭಂಗಿಯನ್ನು ಬದಲಿಸುವಾಗ ಈ ಸೆಟವು ನೋವುಂಟುಮಾಡುತ್ತದೆ. ಪರಿಣಾಮ, ಇರುವ ಭಂಗಿಯಲ್ಲೆ ಮತ್ತಷ್ಟು ಕಾಲ ಇರುವಂತೆ ನಮ್ಮ ಸೋಮಾರಿತನ ಉತ್ತೇಜಿಸುತ್ತದೆ. ಹೀಗಾಗಿ, ವಿಶ್ರಾಂತಿಗಾಗಿ ಕೂರುವಾಗ ಸರಿಯಾದ ಭಂಗಿಯನ್ನು ಅನುಸರಿಸುವುದು ಅಗತ್ಯ.

ಕಚೇರಿ ಕೆಲಸವನ್ನು ಕುಳಿತು ಮಾಡುವುದು ಬಹುತೇಕರಿಗೆ ಅವಶ್ಯ. ಇಲ್ಲಿ ಭಿನ್ನತೆಯನ್ನು ಸಾಧಿಸಲಾಗದು. ಇಂತಹ ಸಂದರ್ಭಗಳಲ್ಲಿ ಕನಿಷ್ಟ ಅರ್ಧ ಗಂಟೆಗೊಮ್ಮೆ ಎದ್ದು ಮೈಮುರಿದು, ಮಾಂಸಖಂಡಗಳನ್ನು ಹಿಗ್ಗಿಸಬೇಕು. ತಲೆಯನ್ನು ಒಂದೆರಡು ಬಾರಿ ನಿಧಾನವಾಗಿ ಏರಿಳಿಸಬೇಕು. ಬೆನ್ನನ್ನು ನಿಧಾನವಾಗಿ ಬಾಗಿಸಿ ಪಾದಗಳನ್ನು ಸೋಕಬೇಕು. ಸಾಧ್ಯವಾದರೆ ಸ್ವಲ್ಪ ದೂರ ನಡೆದು ಬರಬೇಕು. ಈ ಕ್ರಿಯೆಗಳ ಮೂಲಕ ಮಾಂಸಖಂಡಗಳು ಸಡಿಲಗೊಂಡು, ರಕ್ತಸಂಚಾರ ಸರಾಗವಾಗುತ್ತದೆ. ಯಾವುದೇ ಕಾರಣಕ್ಕೆ ಬಹಳ ಕಾಲ ಕೂರುವ ಅಗತ್ಯವುಳ್ಳವರು ಇದನ್ನು ಮಾಡುವುದು ಸೂಕ್ತ. ಇದೇ ಅಲ್ಲದೆ, ದಿನನಿತ್ಯದಲ್ಲಿ ಶರೀರದ ಚಲನೆಗೆ ಪ್ರೋತ್ಸಾಹ ನೀಡುವ ಕೆಲಸಗಳನ್ನು ಮಾಡುವುದು ಒಳಿತು. ಬೈಸಿಕಲ್ ಬಳಕೆ; ಕಚೇರಿಯ ವಾಹನ ನಿಲ್ದಾಣದಲ್ಲಿ ಸಾಧ್ಯವಾದಷ್ಟೂ ದೂರದಲ್ಲಿ ವಾಹನ ನಿಲ್ಲಿಸಿ, ಅಲ್ಲಿಂದ ನಡೆಯುವುದು; ಲಿಫ್ಟ್ ಬದಲಿಗೆ ಮೆಟ್ಟಿಲು ಬಳಸುವುದು; ಸಹೋದ್ಯೋಗಿಗಳ ಜೊತೆಯಲ್ಲಿ ಫೋನಿನ ಬದಲಾಗಿ ಅವರ ತಾಣಕ್ಕೆ ಹೋಗಿ ನೇರವಾಗಿ ಮಾತನಾಡುವುದು; ಕಚೇರಿಯಿಂದ ಸ್ವಲ್ಪ ದೂರವಿರುವೆಡೆ ಮಧ್ಯಾಹ್ನದ ಊಟಕ್ಕೆ ಹೋಗುವುದು; ಎಲ್ಲೆಲ್ಲಿ ನಡೆಯುವ ಅವಕಾಶವಿದೆಯೋ ಅಲ್ಲೆಲ್ಲಾ ನಡೆದೇ ಹೋಗುವುದು – ಇವುಗಳನ್ನು ಪಾಲಿಸಬಹುದು. ಇದರ ಜೊತೆಗೆ ಈಜು, ಯೋಗಾಸನ, ನೃತ್ಯ, ಕಸರತ್ತು ಮೊದಲಾದ ಆರೋಗ್ಯಕರ ಭೌತಿಕ ಚಟುವಟಿಕೆಗಳನ್ನು ನಿಯಮಿತವಾಗಿ ಮಾಡುವುದು ಸೂಕ್ತ.   

ಚಟುವಟಿಕೆಯಿಲ್ಲದೆ ಕೂರುವುದು ತಾತ್ಕಾಲಿಕವಾಗಿ ಮುದ ನೀಡುತ್ತದೆ. ಆದರೆ ದೀರ್ಘಕಾಲಿಕವಾಗಿ ಘಾಸಿ ಮಾಡುತ್ತದೆ. ಹೀಗಾಗಿ, ಬಹಳ ಕಾಲ ಒಂದೇ ಸಮನೆ ಕುಳಿತುಕೊಳ್ಳುವುದು ನಮ್ಮ ಜೀವನದ ಭಾಗವಾಗಿಲ್ಲದಿರುವುದೇ ಲೇಸು. ಈ ರೀತಿಯ ಸಂದರ್ಭಗಳನ್ನು ಪ್ರಜ್ಞಾಪೂರ್ವಕವಾಗಿ ಗುರುತಿಸಿ, ಅದನ್ನು ಕಡಿಮೆ ಮಾಡಿಕೊಳ್ಳಬೇಕು. ಆರೋಗ್ಯವೆಂಬುದು ಅನಗತ್ಯ ಆರಾಮದಲ್ಲಿರುವುದಿಲ್ಲ ಎಂಬುದು ನಾವು ಅರಿಯಬೇಕಾದ ಅಂಶ.

--------------------------

ಪ್ರಜಾವಾಣಿ ದಿನಪತ್ರಿಕೆಯ 5/7/2022 ರ ಸಂಚಿಕೆಯ ಕ್ಷೇಮಕುಶಲ ವಿಭಾಗದಲ್ಲಿ ಪ್ರಕಟವಾದ ಲೇಖನ. ಕೊಂಡಿ: https://www.prajavani.net/health/active-lifestyle-tips-for-healthy-life-951369.html

 

ಹೀಗೊಂದು ವಿಷ(ಷಾ)ದ ಕತೆ

ಡಾ. ಕಿರಣ್ ವಿ.ಎಸ್.

“ಸರ್....”

ಗಂಭೀರವಾಗಿ ಬರೆಯುತ್ತಿದ್ದ ಪ್ರೊಫೆಸರರು ಸ್ವಲ್ಪ ಕೋಪದಿಂದಲೇ ತಲೆ ಎತ್ತಿ ನೋಡಿದರು. ಅವರ ವಿದ್ಯಾರ್ಥಿ ಬಾಗಿಲಲ್ಲಿ ನಿಂತಿದ್ದ.

“ಏನು?” ಎನ್ನುವಂತೆ ಹುಬ್ಬೇರಿಸಿದರು. ವಿದ್ಯಾರ್ಥಿ ದಿಗಿಲಿನಿಂದಲೇ ಹೇಳಿದ: “ಒಂದು ಕೇಸ್ ಬಗ್ಗೆ ಚರ್ಚೆ ಮಾಡೋದಿತ್ತು”

ಮಕ್ಕಳ ಕಾಯಿಲೆಗಳ ಅತ್ಯಂತ ದೊಡ್ಡ ತಜ್ಞ ಎಂದು ಹೆಸರಾಗಿದ್ದ ಪ್ರೊಫೆಸರರು ಮುಖ್ಯವಾದ ಪುಸ್ತಕ ಬರೆಯಲು ಕಳೆದ ಮೂರು ತಿಂಗಳಿನಿಂದ ರಜೆಯ ಮೇಲಿದ್ದರು. ಆಸ್ಪತ್ರೆಗೆ ಬಂದು, ತಮ್ಮ ಕೊಠಡಿಯಲ್ಲಿ ಕೂತು ಬರವಣಿಗೆ ಮಾಡುತ್ತಿದ್ದರು. ತಮ್ಮನ್ನು ಯಾರೂ ಡಿಸ್ಟರ್ಬ್ ಮಾಡಬಾರದು ಎಂದು ಅವರ ಕಟ್ಟಾಜ್ಞೆ. ಅದನ್ನು ಮೀರಿ ವಿದ್ಯಾರ್ಥಿಯೊಬ್ಬ ಅವರ ಕೋಣೆಗೆ ಬಂದಿದ್ದಾನೆ ಎಂದರೆ ಪರಿಸ್ಥಿತಿ ಗಂಭೀರವಾಗಿಯೇ ಇದ್ದಿರಬೇಕು.

ಆತನನ್ನು ಒಳಗೆ ಬರುವಂತೆ ಸನ್ನೆ ಮಾಡಿದ ಪ್ರೊಫೆಸರರು ಬರೆಯುತ್ತಿದ್ದ ಹಾಳೆಗಳನ್ನು ಬದಿಗೆ ಸರಿಸಿ ಮತ್ತೊಮ್ಮೆ ಹುಬ್ಬೇರಿಸಿದರು.

“ಆರು ವರ್ಷದ ಹುಡುಗ ಸರ್. ಈಚೆಗೆ ಮೂರ್ನಾಲ್ಕು ತಿಂಗಳ ಹಿಂದೆ ಸರ್ಕಾರಿ ಶಾಲೆಗೆ ಸೇರಿಸಿದ್ದಾರೆ. ವಾರಕ್ಕೆ ಒಂದೋ ಎರಡೋ ದಿನ ಮಾತ್ರ ಶಾಲೆಗೆ ಹೋಗುತ್ತಾನೆ. ಆದರೆ ಸ್ಕೂಲಿನಲ್ಲಿ ಅವನದ್ದು ವಿಪರೀತ ಗಲಾಟೆ; ವೈದ್ಯಕೀಯ ಪರೀಕ್ಷೆ ಮಾಡಿಸಿ ಎಂದು ಶಾಲೆಯ ಶಿಕ್ಷಕಿ ಹೇಳಿ ಕಳಿಸಿದ್ದಾರೆ. ತಂದೆತಾಯಿ ತುಂಬಾ ಬಡವರು. ಹೆದರಿದ್ದಾರೆ. ಎಲ್ಲಾ ಪರೀಕ್ಷೆ ಮಾಡಿದ್ದೇವೆ. ಏನೂ ತಿಳಿಯುತ್ತಿಲ್ಲ. ಅದಕ್ಕೇ...” ವಿದ್ಯಾರ್ಥಿ ತಡವರಿಸಿದ.

“ಡೀಟೈಲಾಗಿ ಹೇಳಿ” ಪ್ರೊಫೆಸರರು ಅಭಯ ನೀಡಿದರು.

“ಮಗುವಿನ ತಂದೆತಾಯಿ ಬೆಳಗ್ಗೆ ಕೆಲಸಕ್ಕೆ ಹೋದರೆ ರಾತ್ರಿ ಹಿಂದಿರುಗುತ್ತಾರೆ. ಮಗುವು ವಯಸ್ಸಾದ ಓರ್ವ ಅಜ್ಜಿಯ ಸುಪರ್ದಿಯಲ್ಲಿ ಇರುತ್ತದೆ. ಅವನ ದಿನನಿತ್ಯದ ಚಟುವಟಿಕೆಗಳ ಬಗ್ಗೆ ತಾಯಿಗೆ ಹೆಚ್ಚು ತಿಳಿದಿಲ್ಲ. ಮೊದಲಿನಿಂದಲೂ ತಂಟೆ ಹೆಚ್ಚು ಅಂತ ಅವನನ್ನು ನೋಡಿಕೊಳ್ಳುವ ಅಜ್ಜಿ ಹೇಳುತ್ತಾರೆ. ಬೆಳಗ್ಗಿನಿಂದ ಎಲ್ಲಿರುತ್ತಾನೆ ಎಂದು ಅಜ್ಜಿಗೆ ತಿಳಿದಿಲ್ಲ. ಹಸಿವಾದಾಗ ಮನೆಗೆ ಬರುತ್ತಾನೆ. ಹಾಗಾಗಿ, ಮನೆಯಿಂದ ಹೆಚ್ಚು ದೂರ ಹೋಗುವುದಿಲ್ಲವೆಂದು ಅನಿಸುತ್ತದೆ ಸರ್. ಈಚೆಗೆ ಅವನ ರಂಪ-ರಗಳೆ ಮತ್ತೂ ಜಾಸ್ತಿಯಾಗಿದೆ ಎನುತ್ತಾರೆ. ಹುಡುಗ ಹೈಪರ್ ಇದ್ದಾನೆ. ಕೂತ ಕಡೆ ಕೂರುವುದಿಲ್ಲ. ಶಾಲೆಯಲ್ಲಿ ತುಂಬಾ ರೆಸ್ಟ್ಲೆಸ್, ಜಗಳಗಂಟ ಎಂದು ಶಿಕ್ಷಕಿ ಹೇಳುತ್ತಾರೆ. ನಾವು ಪರೀಕ್ಷಿಸಿದಂತೆ ಅವನಿಗೆ ಬುದ್ಧಿಮಾಂದ್ಯತೆ ಏನಿಲ್ಲ; ಸ್ವಂತವಾಗಿ ಬಟ್ಟೆ ಧರಿಸಲು ಬರುತ್ತದೆ; ಬಣ್ಣಗಳನ್ನು ಗುರುತಿಸುತ್ತಾನೆ; ದೃಷ್ಟಿ ಚೆನ್ನಾಗಿದೆ; ಕಿವಿ ಸ್ವಲ್ಪ ಮಂದ; ಆದರೆ ಕಿವುಡು ಇಲ್ಲ. ಸ್ವಲ್ಪ ತೊದಲುತ್ತಾನೆ; ಪದಗಳ ಕಲಿಕೆ ವಯಸ್ಸಿಗಿಂತ ಕಡಿಮೆ; ಆಟ ಹೆಚ್ಚು; ಊಟದಲ್ಲಿ ಆಸಕ್ತಿ ಕಡಿಮೆ. ಸ್ವಲ್ಪ ತೂಕ ಕಡಿಮೆ ಇದ್ದಾನೆ. ರಕ್ತದಲ್ಲಿ ಹೀಮೊಗ್ಲೊಬಿನ್ ಕಡಿಮೆಯಿದೆ; ಆದರೆ ಮಲದಲ್ಲಿ, ಮೂತ್ರದಲ್ಲಿ ರಕ್ತ ನಷ್ಟವಾಗುತ್ತಿಲ್ಲ. ಕೆಂಪು ರಕ್ತಕಣಗಳು ಸಣ್ಣ ಇದ್ದವೆಂದು ಎರಡು ತಿಂಗಳು ಕಬ್ಬಿಣ ಅಂಶದ ಸಿರಪ್ ಕೊಟ್ಟೆವು. ಆದರೆ ರಕ್ತ ಕಣಗಳು ಹಾಗೆಯೇ ಇವೆ. ಉಳಿದಂತೆ ಶರೀರ ಪರೀಕ್ಷೆಯಲ್ಲಿ ಏನೂ ವ್ಯತ್ಯಾಸ ಇಲ್ಲ. ನಾರ್ಮಲ್ ಕಾಣುತ್ತಾನೆ”  

“ಕರ್ಕೊಂಬನ್ನಿ” ಪ್ರೊಫೆಸರರು ಆಜ್ಞಾಪಿಸಿದರು.

ವಿದ್ಯಾರ್ಥಿ ಓಡಿ ಹೋಗಿ ಕೆಲಕ್ಷಣಗಳಲ್ಲಿ ಹುಡುಗನ ಜೊತೆ ವಾಪಸ್ಸಾದ. ತುಂಬಾ ಕೊಸರಾಡುತ್ತಿದ್ದ, ಕತ್ತಿನ ಸುತ್ತಲೂ ನಾಲ್ಕು ತಾಯತ್ತುಗಳನ್ನು ಕಟ್ಟಿಸಿಕೊಂಡಿದ್ದ ಹುಡುಗನನ್ನು ಪ್ರೊಫೆಸರರು ತಾಳ್ಮೆಯಿಂದ ಪರೀಕ್ಷಿಸಿದರು. ಆನಂತರ “ಇವನ ಅಪ್ಪ ಅಮ್ಮ ಯಾರಾದರೂ ಇದ್ದರೆ ಕರೆಸಿ” ಎಂದು ಹುಡುಗನನ್ನು ಹೋಗಗೊಟ್ಟರು.

ಹೆದರಿ ಮುದ್ದೆಯಾಗಿದ್ದ ಹುಡುಗನ ತಾಯಿ ಪ್ರೊಫೆಸರರ ಮುಂದೆ ನಿಂತರು. ಆಕೆಯ ಕೆಲಸ, ವಾಸ, ಮನೆಯ ವಿಳಾಸ, ಜೀವನ ಶೈಲಿಗಳನ್ನು ವಿಚಾರಿಸಿದರು. ಮಗುವಿನ ತಂದೆಯ ಬಗ್ಗೆ ವಿವರ ತಿಳಿದರು. ಆಕೆಯ ಕೈಬೆರಳು, ಉಗುರು, ಕಣ್ಣುಗಳ ಪರೀಕ್ಷೆ ಮಾಡಿದರು. ನಂತರ ವಿದ್ಯಾರ್ಥಿಯನ್ನು ಕರೆದರು. ಆತನಿಗೆ ಒಂದು ಚೀಟಿ ಕೊಟ್ಟು ಹೇಳಿದರು: “ಮೊದಲು ಮಗುವಿನ ಮತ್ತು ತಾಯಿಗೆ ನಾನು ಬರೆದಿರುವ ರಕ್ತ ಪರೀಕ್ಷೆ ಮಾಡಿಸಿ. ನಂತರ ಈಕೆಯ ಜೊತೆಯಲ್ಲಿ ಇವರ ಮನೆಗೆ ಹೋಗಿ. ಮನೆಯ ಪರಿಸ್ಥಿತಿ, ಗೋಡೆಗಳು, ನೆಲ, ಜಂತಿ, ಛಾವಣಿ, ನೀರಿನ ಪೈಪು ಎಲ್ಲವನ್ನೂ ಪರೀಕ್ಷೆ ಮಾಡಿ. ಬರುವಾಗ ಇವರ ನಲ್ಲಿಯ ನೀರಿನ ಸ್ಯಾಂಪಲ್ ಬೇಕು. ಹಾಗೆಯೇ ಗೋಡೆಯ ಪೈಂಟು, ಮಗು ಆಡುವ ಆಟಿಕೆಗಳು, ಮನೆಯ ಸುತ್ತಮುತ್ತಲ ವಾತಾವರಣ ಎಲ್ಲವನ್ನೂ ಗಮನಿಸಿ ವರದಿ ಮಾಡಬೇಕು. ಅಕ್ಕಪಕ್ಕದವರ ಅನುಮತಿ ಪಡೆದು ಮನೆಯ ಸುತ್ತಮುತ್ತಲಿನ ಫೋಟೊ ತೆಗೆದು ತನ್ನಿ. ಈಕೆಯ ಮನೆಯ ಆಸುಪಾಸಿನಲ್ಲಿ ಇರುವ ಇತರ ಮಕ್ಕಳಲ್ಲೂ ಇಂತಹುದೇ ಲಕ್ಷಣಗಳು ಇವೆಯೇ ಎಂದು ವಿಚಾರಿಸಿ. ಹುಡುಗನ ಜೊತೆಗೆ ಇರುವ ಅಜ್ಜಿಯ ರಕ್ತದ ಸ್ಯಾಂಪಲ್ ಕೂಡ ಬೇಕು. ಅವರ ರಕ್ತ ಪರೀಕ್ಷೆಯ ರಿಪೋರ್ಟ್ ಬಂದ ನಂತರ ಉಳಿದದ್ದನ್ನು ಹೇಳುತ್ತೇನೆ” ಎಂದು ಪ್ರೊಫೆಸರರು ತಮ್ಮ ಬರವಣಿಗೆಯಲ್ಲಿ ಮಜ್ಞರಾದರು.

ತಾಯಿ ಮತ್ತು ಮಗುವಿನ ರಕ್ತ ತೆಗೆದು, ಅದನ್ನು ತನ್ನ ಸಹಪಾಠಿಯ ಕೈಲಿಟ್ಟು. ಪ್ರೊಫೆಸರರು ಹೇಳಿದ ಪರೀಕ್ಷೆ ಮಾಡಿಸಲು ತಿಳಿಸಿದ ವಿದ್ಯಾರ್ಥಿ, ತಾಯಿಯ ಜೊತೆಗೆ ಹೊರಟು ಪ್ರೊಫೆಸರರು ಹೇಳಿದ ರೀತಿಯಲ್ಲಿ ಮಾಹಿತಿ ಸಂಗ್ರಹಿಸಿದ. ಮಗುವಿನ ಅಜ್ಜಿಯ ರಕ್ತವನ್ನು, ಮಗುವಿನ ಮನೆಯ ನೀರಿನ ಸ್ಯಾಂಪಲ್ ಅನ್ನೂ ಪ್ರೊಫೆಸರರು ಹೇಳಿದ ಪರೀಕ್ಷೆಗೆ ಕಳಿಸಿದ. ತನ್ನ ಪರಿವೀಕ್ಷಣೆಯ ವಿವರಗಳನ್ನೆಲ್ಲಾ ನೀಟಾಗಿ ಬರೆದು, ದಾಖಲೆಗಳನ್ನು ಜೊತೆ ಮಾಡಿ, ಮಗುವಿನ ಕೇಸ್ ಫೈಲಿನಲ್ಲಿಟ್ಟು ಪ್ರೊಫೆಸರರ ಬಳಿ ನೀಡಿದ. ಆತ ತಂದ ಚಿತ್ರಗಳನ್ನು ಪ್ರೊಫೆಸರರು ವಿವರವಾಗಿ ಪರಿಶೀಲಿಸಿದರು. ಮಗುವಿನ ವಾಸದ ಮನೆಯ ಗೋಡೆಗಳಿಗೆ ಸುಣ್ಣ ಹೊಡೆದಿದ್ದರು. ಯಾವ ಗೋಡೆಗಳಿಗೂ ಪೈಂಟಿನ ಬಣ್ಣವಿರಲಿಲ್ಲ. ಮಗುವಿನ ಮನೆಯ ಸುತ್ತಮುತ್ತಲ ಮಕ್ಕಳಲ್ಲಿ ಯಾರಿಗೂ ಈ ರೀತಿಯ ಸಮಸ್ಯೆ ಇಲ್ಲವೆಂದು ತಿಳಿಯಿತು. ಅಲ್ಲದೆ, ಈ ಜಗಳಗಂಟ ಮಗುವಿನ ಜೊತೆಯಲ್ಲಿ ಮನೆಯ ಸುತ್ತಮುತ್ತಲ ಬೇರ್ಯಾವ ಮಗುವೂ ಆಡುವುದಿಲ್ಲವೆಂದೂ, ಅಜ್ಜಿಯ ಆರೈಕೆಯಲ್ಲಿ ಬೆಳೆಯುತ್ತಿರುವ ಈ ಮಗು ಬಹುತೇಕ ಸಮಯ ಎಲ್ಲಿರುತ್ತದೆ ಎಂದು ಅಜ್ಜಿಗೆ ತಿಳಿದೇ ಇರುವುದಿಲ್ಲವೆಂದೂ ವಿದ್ಯಾರ್ಥಿ ವರದಿ ಮಾಡಿದ. ಅಷ್ಟು ವೇಳೆಗೆ ಮಗುವಿನ, ತಾಯಿಯ, ಅಜ್ಜಿಯ ರಕ್ತದ ಪರೀಕ್ಷೆ, ಮತ್ತು ನಲ್ಲಿ ನೀರಿನ ಪರೀಕ್ಷೆಗಳ ವರದಿಗಳೂ ಬಂದವು. ಸೀಲು ಮಾಡಿದ ಲಕೋಟೆ ಒಡೆದು ವರದಿಗಳನ್ನು ನೋಡಿ ಗಂಭೀರವದನರಾದ ಪ್ರೊಫೆಸರರು ಎದ್ದು ನಿಂತು “ಮಗುವನ್ನು ಕರೆದು ತಾ. ಹೋಗೋಣ” ಎಂದು ವಿದ್ಯಾರ್ಥಿಗೆ ಹೇಳಿದರು.

ಮಗುವಿನ ವಾಸದ ಸ್ಥಳಕ್ಕೆ ಬಂದ ಪ್ರೊಫೆಸರರು ಮಗುವಿನ ಕೈಗೆ ದೊಡ್ಡ ಚಾಕಲೇಟೊಂದನ್ನು ಕೊಟ್ಟು, “ನೀನು ದಿನವೆಲ್ಲಾ ಎಲ್ಲಿ ಆಡುತ್ತೀಯೆ?” ಎಂದು ಕೇಳಿದರು. ಚಾಕಲೇಟಿನಿಂದ ಖುಷಿಯಾದ ಮಗು, ತಾನು ದಿನವೂ ಆಡುವ ಜಾಗದ ಬಳಿ ಪ್ರೊಫೆಸರನ್ನು ಕರೆದೊಯ್ದಿತು. ಮಗುವಿನ ಮನೆಯಿಂದ ಒಂದೆರಡು ಬ್ಲಾಕ್ ದೂರದಲ್ಲಿದ್ದ ನಿರ್ಜನ ಸ್ಥಳವೊಂದರಲ್ಲಿ ಹಾಳುಗೂಡಿನಂತೆ ನಿರ್ಮಾಣವಾಗಿದ್ದ ಒಂದು ಷೆಡ್ಡಿನ ಬಳಿ ಮಗುವಿನ ಜೊತೆಗೆ ಬಂದ ಪ್ರೊಫೆಸರರು, ಆ ಷೆಡ್ಡಿಗೆ ಜಡಿದಿರುವ ಬೀಗವನ್ನು ನೋಡಿ, “ಇದರೊಳಗೆ ಹೋಗುವುದು ಹೇಗೆ?” ಎಂದರು. ಮಗು ಆ ಷೆಡ್ಡಿನ ಹಿಂಭಾಗದಲ್ಲಿರುವ ಸಣ್ಣ ಕಿಂಡಿಯನ್ನು ತೋರಿಸಿತು. ಅದರೊಳಗೆ ದೊಡ್ಡವರು ಹೋಗುವಷ್ಟು ಸ್ಥಳಾವಕಾಶ ಇರಲಿಲ್ಲ. ಮಗು ಮಾತ್ರ ಅದರಲ್ಲಿ ಆರಾಮವಾಗಿ ತೂರಿಕೊಂಡು ಒಳಗೆ ಹೋಯಿತು. ಆ ಕಿಂಡಿಯ ಬಳಿ ಮಂಡಿಯೂರಿ ಕುಳಿತ ಪ್ರೊಫೆಸರರು ದೀರ್ಘ ಶ್ವಾಸ ಎಳೆದುಕೊಂಡರು. ನಂತರ ಮಗುವನ್ನು ಹೊರಗೆ ಕರೆದು, ಅದರ ಜೊತೆಯಲ್ಲಿ ವಾಪಸ್ ಆಸ್ಪತ್ರೆಗೆ ಹೊರಟರು. ದಾರಿಯುದ್ದಕ್ಕೂ ಯಾರ ಜೊತೆಯಲ್ಲೋ ಫೋನಿನಲ್ಲಿ ಮಾತನಾಡಿದರು.

ಈ ಘಟನೆಯಾದ ಎರಡು ದಿನಗಳಿಗೆ ದಿನಪತ್ರಿಕೆಗಳು ಪ್ರಮುಖ ಕ್ರೈಂ ಸುದ್ಧಿ ಪ್ರಕಟಿಸಿದವು. ಹಳೆಯ ಲೆಡ್-ಆಸಿಡ್ ಬ್ಯಾಟರಿಗಳನ್ನು ಅನಧಿಕೃತವಾಗಿ ನವೀಕರಿಸಿ, ಅವಕ್ಕೆ ದೊಡ್ಡ ಕಂಪನಿಗಳ ಲೇಬಲ್ ಹಚ್ಚಿ, ಆ ಕಳ್ಳ ಮಾಲನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದ ಖದೀಮರ ಗುಂಪೊಂದನ್ನು ಪೋಲೀಸರು ಸೆರೆ ಹಿಡಿದ ಪ್ರಸಂಗ. ಮನೆಗಳಲ್ಲಿನ ಯು.ಪಿ.ಎಸ್ ಬ್ಯಾಟರಿ, ಪಾರ್ಕಿಂಗ್ ಮಾಡಿದ್ದ ಕಾರುಗಳ ಬ್ಯಾಟರಿ, ಸಣ್ಣ-ಪುಟ್ಟ ಕಾರ್ಖಾನೆಗಳಲ್ಲಿ ಬಳಸುತ್ತಿದ್ದ ಬ್ಯಾಟರಿಗಳು, ಗುಜರಿ ಅಂಗಡಿಗಳಿಂದ ಪಡೆದ ಬ್ಯಾಟರಿಗಳು – ಹೀಗೆ ಹಲವಾರು ಲೆಡ್-ಆಸಿಡ್ ಬ್ಯಾಟರಿಗಳನ್ನು ತಮ್ಮ ಷೆಡ್ಡಿಗೆ ತಂದು, ಅಲ್ಲಿ ಹಳೆಯ ಸೀಸದ ಸರಳುಗಳನ್ನು ಅನಧಿಕೃತವಾಗಿ ಸಂಸ್ಕರಿಸಿ, ಹೊಸ ಆಸಿಡ್ ತುಂಬಿ, ಬ್ಯಾಟರಿ ಅಲ್ಪಸ್ವಲ್ಪ ಕೆಲಸ ಮಾಡುವಂತೆ ಮಾಡಿ, ಅವನ್ನು ಹೊಸ ಬ್ಯಾಟರಿಗಳ ಸೋಗಿನಲ್ಲಿ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಿ ವಂಚಿಸುತ್ತಿದ್ದ ಕಳ್ಳರ ದೊಡ್ಡ ಜಾಲವೊಂದು ಪೋಲೀಸರ ಬಲೆಗೆ ಸಿಲುಕಿತ್ತು. ಅನೇಕ ದಿನಗಳಿಂದ ಈ ವಂಚನೆಯ ಜಾಲವನ್ನು ಪತ್ತೆಮಾಡಲು ಪ್ರಯತ್ನಿಸುತ್ತಿದ್ದ ಪೋಲೀಸರಿಗೆ ಅನಿರೀಕ್ಷಿತವಾಗಿ ದೊರೆತ ಮಹತ್ವವ ಸುಳಿವಿನಿಂದ ಈ ಮೋಸಗಾರರ ತಂಡ ಪತ್ತೆಯಾಯಿತು ಎಂದು ವರದಿಯಾಗಿತ್ತು. ಸುಳಿವು ನೀಡಿದ ವ್ಯಕ್ತಿಯ ಹಿನ್ನೆಲೆಯನ್ನು ಗೌಪ್ಯವಾಗಿ ಇರಿಸಿದ ಪೋಲೀಸರು, ಆ ವ್ಯಕ್ತಿಗೆ ನಗದು ಬಹುಮಾನ ಘೋಷಿಸಿದ್ದರು.

ಇತ್ತ ಆಸ್ಪತ್ರೆಯಲ್ಲಿ ಸಂಭ್ರಮದ ವಾತಾವರಣ. ಹುಡುಗನ ತಾಯಿಗೆ ಭಾರಿ ಹಿಗ್ಗು. ಯಾರೋ ಅನಾಮಧೇಯ ವ್ಯಕ್ತಿ ಆಕೆಯ ಮಗನ ಚಿಕಿತ್ಸೆಗೆಂದು ದೊಡ್ಡ ಮೊತ್ತ ನೀಡಿದ್ದರು. ತನ್ನ ಜೀವನದಲ್ಲಿ ಎಂದೂ ಐದು ಅಂಕಿಯ ಮೊತ್ತವನ್ನು ನೋಡಿಲ್ಲದ ಆಕೆ ಬಹಳ ಸಂತಸಗೊಂಡಿದ್ದರು. ಹುಡುಗನ ಚಿಕಿತ್ಸೆಯ ವೆಚ್ಚದ ನಂತರವೂ ಉಳಿಯುವ ಸಾಕಷ್ಟು ಹಣದಲ್ಲಿ ತನ್ನ ಸಾಲಗಳನ್ನು ತೀರಿಸಿ, ಮನೆಗೆ ಬೇಕಾದ ವಸ್ತುಗಳನ್ನು ಖರೀದಿಸುವ ಯೋಜನೆ ಆಕೆಯದ್ದು. ಈ ಹಣ ಎಲ್ಲಿಂದ ಬಂದಿತೆಂಬ ಆಲೋಚನೆ ಆಕೆಯನ್ನು ಹೆಚ್ಚು ಬಾಧಿಸಲಿಲ್ಲ. ಕಷ್ಟಕಾಲಕ್ಕೆ ದೇವರು ನೆರವಾದನೆಂದು ಎಲ್ಲರಲ್ಲೂ ಹೇಳಿಕೊಳ್ಳುತ್ತಿದ್ದರು.

ವಿದ್ಯಾರ್ಥಿ ಮತ್ತೊಮ್ಮೆ ಪ್ರೊಫೆಸರರ ಕೋಣೆಗೆ ಬಂದ. ಯಥಾರೀತಿ ಬರವಣಿಗೆಯಲ್ಲಿ ನಿರತರಾಗಿದ್ದ ಪ್ರೊಫೆಸರರು ಆತನನ್ನು ನೋಡಿ ಕೂರುವಂತೆ ಸೂಚಿಸಿದರು. ತಮ್ಮ ಪೆನ್ನನ್ನು ಬದಿಗಿಟ್ಟು “ಏನು?” ಎನ್ನುವಂತೆ ಆತನನ್ನು ನೋಡಿದರು. ವಿದ್ಯಾರ್ಥಿಯ ಮುಖದಲ್ಲಿ ಹಿಗ್ಗು ಕಾಣುತ್ತಿತ್ತು. “ನೀವು ಹೇಳಿದ ಚಿಕಿತ್ಸೆ ನೀಡಿದೆವು ಸರ್. ಹುಡುಗ ಈಗ ಬಹಳ ಚೇತರಿಸಿಕೊಂಡಿದ್ದಾನೆ. ದೇಹದಲ್ಲಿ ರಕ್ತದ ಅಂಶ ಹೆಚ್ಚಿದೆ. ಮೊದಲಿನ ಹಾಗೆ ತಂಟೆ ಮಾಡುತ್ತಿಲ್ಲ. ಸಾಕಷ್ಟು ಚೂಟಿ ಹುಡುಗ ಸರ್. ಶಾಲೆಯಲ್ಲಿ ಚೆನ್ನಾಗಿ ಓದಿಸಿದರೆ ಒಳ್ಳೆಯ ಭವಿಷ್ಯವಿದೆ. ಆತನ ಕುಟುಂಬದವರು ನಮ್ಮನ್ನು ಬಹುವಾಗಿ ಹೊಗಳುತ್ತಿದ್ದಾರೆ. ಆದರೆ ಇದನ್ನೆಲ್ಲಾ ಮಾಡಿದ್ದು ನೀವು ಎನ್ನುವುದು ಅವರಿಗೆ ತಿಳಿದಿಲ್ಲ. ಪೋಲೀಸರಿಂದ ನಿಮಗೆ ಬಂದ ಬಹುಮಾನದ ಎಲ್ಲ ಹಣವನ್ನೂ ಆ ಕುಟುಂಬಕ್ಕೆ ನೀಡಿದ್ದೀರಿ ಎಂಬುದು ನಿಮಗೆ ಮತ್ತು ನನಗೆ ಮಾತ್ರ ತಿಳಿದಿದೆ. ಅಜಮಾಸು ಏನಾಯಿತು ಎಂಬ ಅಂದಾಜಿದ್ದರೂ, ನಿಖರವಾಗಿ ಈ ಕೇಸನ್ನು ನೀವು ಹೇಗೆ ಪರಿಹರಿಸಿದಿರಿ ಎಂದು ಸ್ಪಷ್ಟವಿಲ್ಲ. ನಿಮಗೆ ಅನುಕೂಲವಾದಾಗ ಹೇಳಿದರೆ ನಮಗೂ ತಿಳಿದಂತಾಗುತ್ತದೆ” ಎಂದ.

ಪ್ರೊಫೆಸರರು ಗಂಭೀರವಾಗಿ ಹೇಳಿದರು: “ಮತ್ತೆ ಮತ್ತೆ ನನ್ನನ್ನು ಡಿಸ್ಟರ್ಬ್ ಮಾಡದಿದ್ದರೆ ಈಗಲೇ ಹೇಳುತ್ತೇನೆ. ಹುಡುಗನ ರೋಗಲಕ್ಷಣಗಳನ್ನು ಕೇಳಿದಾಗಲೇ ಇದು ಸೀಸದ ವಿಷಕಾರಿ ಪರಿಣಾಮ ಇರಬಹುದು ಎಂದು ಅಂದಾಜಾಗಿತ್ತು. ಆತನನ್ನು ಪರೀಕ್ಷೆ ಮಾಡಿದಾಗ ಬೇರೆ ಯಾವ ಸಾಧ್ಯತೆಗಿಂತಲೂ ಸೀಸದ ಪರಿಣಾಮವೇ ಹೆಚ್ಚು ಅನಿಸಿತು. ಅದಕ್ಕಾಗಿಯೇ ಆತನ ಮನೆಗೆ ನಿಮ್ಮನ್ನು ಕಳಿಸಿದ್ದು. ಹುಡುಗನ ರಕ್ತದ ಪರೀಕ್ಷೆ ಸೀಸದ ಅಂಶವನ್ನು ಧೃಡಪಡಿಸಿತು. ಆದರೆ, ಆತನ ತಾಯಿಯ ಮತ್ತು ಅಜ್ಜಿಯ ರಕ್ತದಲ್ಲಿ ಸೀಸದ ಅಂಶ ಹೆಚ್ಚಾಗಿರಲಿಲ್ಲ. ಜೊತೆಗೆ, ಆತನ ಮನೆಯ ನಲ್ಲಿ ನೀರಿನಲ್ಲಿ ಸೀಸದ ಅಂಶವೇನೂ ಇರಲಿಲ್ಲ. ಸೀಸ ಇರಬಲ್ಲ ಬಣ್ಣವಾಗಲೀ, ಆಟಿಕೆಯಾಗಲೀ ಮಗುವಿನ ಬಳಿ ಇಲ್ಲ. ಅಂದರೆ, ಹುಡುಗ ಓಡಾಡುವ ಯಾವುದೋ ಜಾಗದಿಂದ ಸೀಸ ಆತನ ದೇಹವನ್ನು ಸೇರುತ್ತಿರಬೇಕು.”

ಮೇಜಿನ ಮೇಲಿದ್ದ ಪುಸ್ತಕಗಳನ್ನು ಮುಚ್ಚಿ ಪ್ರೊಫೆಸರರು ಮುಂದುವರೆಸಿದರು: “ಈ ಸೀಸ ಎನ್ನುವುದು ಮನುಷ್ಯನ ದೇಹದಲ್ಲಿ ಸಹಜವಾಗಿ ಇರುವ ಲೋಹವಲ್ಲ. ನಮ್ಮ ದೇಹದಲ್ಲಿ ಸೀಸದ ಅಂಶವಿದೆ ಎಂದರೆ ಅದು ಹೊರಗಿನಿಂದಲೇ ಬಂದಿದೆ ಎಂದರ್ಥ. ಈಗ ಹುಡುಗನ ಮನೆಯವರಿಗೆ ಇಲ್ಲದ ಸೀಸದ ಅಂಶ ಹುಡುಗನ ರಕ್ತದಲ್ಲಿದೆ ಎಂದರೆ, ದಿನವಿಡೀ ಮನೆಯಿಂದ ಹೊರಗೆ ಇರುವ ಹುಡುಗ ಆ ಸಮಯದಲ್ಲಿ ಎಲ್ಲೋ ಸೀಸದ ವಾತಾವರಣದಲ್ಲಿ ಕಾಲ ಕಳೆಯುತ್ತಿದ್ದಾನೆ ಎಂದೇ ತಿಳಿಯುತ್ತದೆ. ತಾನು ಎಲ್ಲಿಗೆ ಹೋಗುತ್ತಿದ್ದೇನೆ ಎಂಬುದನ್ನು ವಿವರಿಸಲು ಬಾರದ ಹುಡುಗನನ್ನು ಸುಮ್ಮನೆ ಕೇಳಿ ಪ್ರಯೋಜನವಿಲ್ಲ. ಅದಕ್ಕೇ ಆತನನ್ನು ಕರೆದುಕೊಂಡು ಆತನ ಮನೆಯ ಬಳಿ ಹೋದದ್ದು. ತಾನು ದಿನವಿಡೀ ಆಟವಾಡುತ್ತಿದ್ದ ಷೆಡ್ಡನ್ನು ಆ ಹುಡುಗ ತೋರಿಸಿದ. ತಾವು ಮಾಡುವ ಅಪಮಾರ್ಗದ ಕೆಲಸ ಯಾರಿಗೂ ತಿಳಿಯಬಾರದೆಂದು ಹಗಲು ವೇಳೆ ಬೀಗ ಹಾಕುತ್ತಿದ್ದ ಷೆಡ್ಡಿನ ಕೆಲಸ ಆರಂಭವಾಗುತ್ತಿದ್ದೇ ಸಂಜೆಯ ನಂತರ. ಷೆಡ್ಡಿನ ಹಿಂಬದಿಯಲ್ಲಿ ಮಕ್ಕಳು ತೂರಿ ಬರಬಹುದಾದ ಕಿಂಡಿ ಇದೆಯೆಂದು ಪ್ರಾಯಶಃ ಆ ಷೆಡ್ಡಿನಲ್ಲಿ ಕೆಲಸ ಮಾಡುವವರಿಗೂ ತಿಳಿದಿಲ್ಲ. ಯಾರ ಸಮಸ್ಯೆಯೂ ಇಲ್ಲದೇ ಆಡುವಷ್ಟು ದೊಡ್ಡದಾದ ಜಾಗದಲ್ಲಿ ಆ ಮಗು ತನ್ನ ಮನಸ್ಸಿಗೆ ಬೇಕಾದಂತೆ ಇರುತ್ತಿತ್ತು. ಹಸಿವಾದಾಗ, ಕತ್ತಲೆಯಾದಾಗ ಅಲ್ಲಿಂದ ಹೋಗುತ್ತಿತ್ತು. ಸೀಸವನ್ನು ಕಾಯಿಸುತ್ತಿದ್ದ ಆ ಷೆಡ್ಡಿನ ವಾತಾವರಣದಲ್ಲಿ ದಿನದ ಬಹುಭಾಗ ಆಡುತ್ತಿದ್ದ ಮಗುವಿನ ದೇಹಕ್ಕೆ ಅನಾಯಾಸವಾಗಿ ವಿಫುಲ ಸೀಸದ ಅಂಶ ಸೇರಿ ಹೋಗಿತ್ತು. ಇವನ್ನೆಲ್ಲಾ ಒಂದಕ್ಕೊಂದು ತಾಳೆ ಮಾಡಿದ ನಂತರ ನಾನು ಪೋಲೀಸರಿಗೆ ಇದರ ಬಗ್ಗೆ ತನಿಖೆ ಮಾಡಲು ಸೂಚಿಸಿದೆ. ಹುಡುಗನ ಮೂಲದಿಂದ ದೊರೆತ ಬಹುಮಾನದ ಹಣವನ್ನು ಅವನಿಗೇ ನೀಡಿದೆ” ಎಂದು ಪ್ರೊಫೆಸರರು ಮಾತು ಮುಗಿಸಿದರು.

ವಿದ್ಯಾರ್ಥಿ ಕಣ್ಣರಳಿಸಿ ಕೇಳುತ್ತಿದ್ದ. ಆತನ ಮುಂದೆ ವೈದ್ಯಕೀಯ ಪತ್ತೆದಾರಿಕೆಯ ಹೊಸದೊಂದು ಅಧ್ಯಾಯವೇ ತೆರೆದು ಇಟ್ಟಂತಾಗಿತ್ತು. ಸಾರ್ವಜನಿಕ ಸಾರಿಗೆ ಸಾಕಷ್ಟಿಲ್ಲದ ನಮ್ಮ ದೇಶದಲ್ಲಿ ಕಾರು, ಬೈಕುಗಳ ಮೇಲೆ ನಮಗಿರುವ ಅವಲಂಬನೆ; ಯಾವುದೇ ಪೂರ್ವಸೂಚನೆಯಿಲ್ಲದೆ ವಿದ್ಯುತ್ ಕಡಿತ ಮಾಡುವ ನಿಗಮಗಳ ಬೇಜವಾಬ್ದಾರಿಗೆ ಪರಿಹಾರವಾಗಿ, ಮಾಡುವ ಕೆಲಸ ಕೆಡದಂತೆ ಯು.ಪಿ.ಎಸ್. ಹಾಕಿಸಿಕೊಳ್ಳಬೇಕಾದ ಅನಿವಾರ್ಯತೆ; ಇದಕ್ಕೆಲ್ಲ ಮೂಲವಾದ ಬ್ಯಾಟರಿಗಳ ಮೇಲಿನ ನಿರ್ಭರತೆ; ಜನರ ಈ ಅಸಹಾಯಕತೆಯನ್ನು ದುರುಪಯೋಗಪಡಿಸಿಕೊಂಡು ಬ್ಯಾಟರಿ ವ್ಯವಹಾರದಲ್ಲಿ ಅವ್ಯವಹಾರ ಮಾಡುವ ದುರುಳರ ಕಾರ್ಯಯೋಜನೆ ಮೊದಲಾದುವು ಆತನ ಚಿತ್ತದಲ್ಲಿ ಸುಳಿದವು. ಯಾರದ್ದೋ ಅವ್ಯವಹಾರದಲ್ಲಿ ಇನ್ಯಾರೋ ಬಲಿಯಾಗುವ ವಿಪರ್ಯಾಸ ಆತನ ಕಣ್ಣನ್ನು ಮಂಜಾಗಿಸಿತು. ಒಂದು ದಿನ ತಾನೂ ತನ್ನ ಪ್ರೊಫೆಸರರಂತೆ ತಾರ್ಕಿಕವಾಗಿ ಆಲೋಚಿಸಿ, ಮತ್ತೊಬ್ಬರ ಯೋಗಕ್ಷೇಮಕ್ಕೆ ಕಾರಣವಾಗಬೇಕೆಂಬ ಹೆಬ್ಬಾಸೆಯೊಂದಿಗೆ ವಿದ್ಯಾರ್ಥಿ ಪ್ರೊಫೆಸರರಿಗೆ ನಮಿಸಿ ಹೊರನಡೆದ.  

-----------------------------

ಜುಲೈ 2022 ಮಾಹೆಯ ಕುತೂಹಲಿ ವಿಜ್ಞಾನ ಮಾಸಪತ್ರಿಕೆಯಲ್ಲಿ ಪ್ರಕಟವಾದ ವೈಜ್ಞಾನಿಕ ಕತೆ. ಈ ಕತೆ ಬರೆಯಲು ಕಾರಣ ಶ್ರೀಯುತ ಕೊಳ್ಳೆಗಾಲ ಶರ್ಮಾ ಅವರು. 



 ಡಿಜಿಟಲ್ ಯುಗದಲ್ಲಿ ಆರೋಗ್ಯ ಮತ್ತು ಸಂಬಂಧಗಳ ಮಹತ್ವ

ಡಾ. ಕಿರಣ್ ವಿ.ಎಸ್.

ವೈದ್ಯರು

ಪ್ರತಿಯೊಂದು ಜೀವಿಯೂ ತನ್ನ ಸುತ್ತಮುತ್ತಲಿನ ಪ್ರಕೃತಿಯ ಜೊತೆಗೆ ಸಾಮರಸ್ಯ ಸಾಧಿಸಲು ಪ್ರಯತ್ನಿಸುತ್ತದೆ. ಈ ಹೊಂದಾಣಿಕೆ ಸಫಲವಾದಷ್ಟೂ ಅದರ ಜೀವಿತಾವಧಿ, ಬದುಕಿನ ಗುಣಮಟ್ಟ ಏರುತ್ತದೆ. ಬಹಳ ಕಾಲದಿಂದಲೂ ಜಗತ್ತಿನ ಪ್ರತಿಯೊಂದು ನಾಗರಿಕತೆಯೂ ಮನುಷ್ಯ-ಮನುಷ್ಯ, ಮನುಷ್ಯ-ಸಮಾಜ, ಮತ್ತು ಮನುಷ್ಯ-ಪ್ರಕೃತಿಗಳ ನಡುವಿನ ಸಹಯೋಗಗಳು ಒಳ್ಳೆಯ ಜೀವನಕ್ಕೆ ಕಾರಣವಾಗುತ್ತದೆ ಎಂದು ನಂಬಿದೆ. ಈ ಸಂಬಂಧಗಳ ಹರಹು ಕಾಲಕಾಲಕ್ಕೆ ವಿಸ್ತಾರವಾಗುತ್ತಾ ಮುಂದುವರೆಯುತ್ತದೆ. ಜಗತ್ತಿನ ಧರ್ಮಗಳು, ರಿಲಿಜನ್ ಗಳು, ಧಾರ್ಮಿಕ ಶ್ರದ್ಧಾಕೇಂದ್ರಗಳು ಬೆಳೆದದ್ದು ಇಂತಹ ಸಹಯೋಗವನ್ನು ಗಟ್ಟಿಗೊಳಿಸಲು ಎಂದು ಸಮಾಜವಿಜ್ಞಾನಿಗಳ ಅಭಿಪ್ರಾಯ. ದೈಹಿಕ ಮತ್ತು ಮಾನಸಿಕ ಆರೋಗ್ಯಗಳ ಪರಸ್ಪರ ಅವಲಂಬನೆಯನ್ನು ಬಹಳ ಕಾಲದಿಂದಲೂ ವಿಜ್ಞಾನಿಗಳು ಪ್ರತಿಪಾದಿಸುತ್ತಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ “ಆರೋಗ್ಯವೆಂಬುದು ಸಂಪೂರ್ಣ ದೈಹಿಕ, ಮಾನಸಿಕ, ಮತ್ತು ಸಾಮಾಜಿಕ ಯೋಗಕ್ಷೇಮದ ಸ್ಥಿತಿ; ಅದು ಕೇವಲ ಕಾಯಿಲೆಯ ಅಥವಾ ಶರೀರ ದೌರ್ಬಲ್ಯದ ಅನುಪಸ್ಥಿತಿ ಅಲ್ಲ” ಎಂದು ವ್ಯಾಖ್ಯಾನ ಮಾಡಿದೆ. ಈ ಪಟ್ಟಿಗೆ ಆಧ್ಯಾತ್ಮಿಕ ಆರೋಗ್ಯವನ್ನೂ ಸೇರಿಸಬೇಕೆಂದು ಹಲವು ತಜ್ಞರ ಅಭಿಪ್ರಾಯ.

ಪ್ರಸ್ತುತ ಡಿಜಿಟಲ್ ಯುಗದಲ್ಲಿ ಆರೋಗ್ಯದ ಕುರಿತಾದ ಈ ಮೊದಲಿನ ತತ್ತ್ವಗಳೆಲ್ಲವೂ ಮತ್ತೊಮ್ಮೆ ಪ್ರಶ್ನಾರ್ಹವಾಗುತ್ತಿವೆ. ಸಂಬಂಧಗಳ ಚೌಕಟ್ಟುಗಳು ಬದಲಾಗುತ್ತಿದ್ದಂತೆ ಸಮಾಜದ ಪರಸ್ಪರ ಅವಲಂಬನೆಯ ಸಿದ್ಧಾಂತಗಳು ಹೊಸ ಆಯಾಮಗಳನ್ನು ಹುಡುಕುತ್ತಿವೆ. ಈ ಮುನ್ನ ಸಂವಹನಕ್ಕೆ ಸೀಮಿತವಾಗಿದ್ದ ಮಾಹಿತಿ ತಂತ್ರಜ್ಞಾನ ಇಂದು ಬದುಕಿನ ಅವಿಭಾಜ್ಯ ಅಂಗವಾಗಿ ಮಾರ್ಪಾಡುಗುತ್ತಿದೆ. ನೈಜ ಸಂಬಂಧಗಳಿಗಿಂತಲೂ ನಾವು ಎಂದೂ ಭೇಟಿಯೇ ಮಾಡದ ಡಿಜಿಟಲ್ ಸಂಬಂಧಗಳು ಹೆಚ್ಚು ಆಪ್ತವಾಗುತ್ತಿವೆ. ಹೀಗೆ ಸ್ಥಿತ್ಯಂತರಗೊಳ್ಳುತ್ತಿರುವ ಸಾಮಾಜಿಕ ಸಂಬಂಧಗಳ ಕಾಲದಲ್ಲಿ, ಸಾಮಾಜಿಕ ಸ್ವಾಸ್ಥ್ಯವನ್ನೂ ಒಂದು ಭಾಗವಾಗಿ ಪರಿಗಣಿಸಿರುವ ಆರೋಗ್ಯದ ವ್ಯಾಖ್ಯೆಯೂ ಬದಲಾಗುತ್ತದೆ.

ಡಿಜಿಟಲ್ ಯುಗದಲ್ಲಿ ಮಾಹಿತಿ ಸಂಗ್ರಹಣೆ ಸುಲಭ. ಉದಾಹರಣೆಗೆ ಹೇಳುವುದಾದರೆ, ಅಪರಿಚಿತ ಸ್ಥಳವೊಂದಕ್ಕೆ ಹೋಗಲು ಈ ಮುನ್ನ ಮೊದಲು ಆ ದಾರಿಯ ಬಗ್ಗೆ ತಿಳಿದಿರುವವರನ್ನು ಸಂಪರ್ಕಿಸಿ, ಸ್ಥೂಲವಾಗಿ ಮಾಹಿತಿ ಅರಿತು, ಆನಂತರ ದಾರಿಯುದ್ದಕ್ಕೂ ಹಲವಾರು ಮಂದಿಯಿಂದ ಮಾರ್ಗದರ್ಶನ ಪಡೆದು ಗಮ್ಯವನ್ನು ತಲುಪಬೇಕಿತ್ತು. ಇದು ಸಂವಹನ ಕಲೆಯನ್ನು ಬೆಳೆಸುವ ದಾರಿಯೂ ಆಗುತ್ತಿತ್ತು. ಅಂತೆಯೇ, ಒಳ್ಳೆಯ ಹೋಟಲೋ, ಸಿನೆಮಾವೋ, ಅಂಗಡಿಯೋ, ವೈದ್ಯರೋ, ಆಸ್ಪತ್ರೆಯೋ, ವಾಹನವೋ ಮತ್ತೊಬ್ಬರ ನೇರ ಅಭಿಪ್ರಾಯವನ್ನು ಆಧರಿಸಿತ್ತು. ಈಗ ಅವೆಲ್ಲವನ್ನೂ ಮಾಹಿತಿ ತಂತ್ರಜ್ಞಾನ ಆಕ್ರಮಿಸಿದೆ. ಬೆರಳ ತುದಿಯಲ್ಲಿ ಲಭ್ಯವಾಗುವ ಮಾಹಿತಿಯನ್ನು ಮತ್ತೊಬ್ಬರ ಮುಖೇನ ಕೇಳಿ ತಿಳಿಯುವ ಅಗತ್ಯವೇ ಇಲ್ಲ.

ಮಾಹಿತಿಯ ಮಹಾಪೂರದಲ್ಲಿ ಜೊಳ್ಳು ಯಾವುದು; ಕಾಳು ಯಾವುದು ಎಂಬುದನ್ನು ನಿರ್ಧರಿಸುವ ಚಾತುರ್ಯ ಅಗತ್ಯ. ಅದರಲ್ಲೂ ಆರೋಗ್ಯ ಕುರಿತಾದ ಮಾಹಿತಿ ಹೆಕ್ಕುವಾಗ ಬಹಳಷ್ಟು ಅಪದ್ಧಗಳ ಮೂಲಕ ಕ್ರಮಿಸಬೇಕಾಗುತ್ತದೆ. ಇದರಲ್ಲಿ ಕೆಲವು ಆರೋಗ್ಯವನ್ನು ತೀವ್ರವಾಗಿ ಹಾನಿಮಾಡಬಲ್ಲವು. ಅಜೆಂಡಾ ಆಧಾರಿತ ಸುದ್ಧಿಗಳು, ವೈಯಕ್ತಿಕ ಪೂರ್ವಗ್ರಹಗಳು, ಜಾಹೀರಾತು ಮಾದರಿಯ ಸಂಗತಿಗಳು, ಏಕಾಏಕಿ ತೂಕ ಇಳಿಸುವ ಯಾ ಮಧುಮೇಹದಿಂದ ಮುಕ್ತಿ ಪಡೆಯುವ ಪ್ರಲೋಭನೆಗಳು ಮುಂತಾದುವು ಓದುಗರನ್ನು ಆಕರ್ಷಿಸಬಲ್ಲ ನಿರೂಪಣೆಯಲ್ಲಿರುತ್ತವೆ. ಇವಕ್ಕೆ ಮರುಳಾಗಿ ತಮ್ಮ ಆರೋಗ್ಯವನ್ನು ಕೆಡಿಸಿಕೊಂಡವರಿದ್ದಾರೆ. ಈ ಬಗ್ಗೆ ಎಚ್ಚರವಹಿಸುವ ಮನೋಭಾವವನ್ನು ಬೆಳೆಸಿಕೊಳ್ಳುವುದು ಮುಖ್ಯ.

ಅನಾರೋಗ್ಯವನ್ನು ಅಳೆಯಲು ಮಾಪನಗಳಿವೆ. ಆದರೆ, ಆರೋಗ್ಯವನ್ನು ಅಳೆಯುವ ನಿರ್ದಿಷ್ಟ ಮಾಪನಗಳು ಕಡಿಮೆ. ಹೀಗಾಗಿ, ಅನೇಕ ವೇಳೆ ಅನಾರೋಗ್ಯ ಒಂದು ಹಂತ ತಲುಪುವವರೆಗೆ ಪತ್ತೆಯಾಗದೆ ಉಳಿಯಬಹುದು. ನೈಜ ಪರಿಸ್ಥಿತಿಯೇ ಇಷ್ಟು ಕಠಿಣವಾಗಿರುವಾಗ ಡಿಜಿಟಲ್ ಪ್ರಪಂಚದ ಛಾಯಾವಾಸ್ತವ ಇನ್ನೆಷ್ಟು ಅಸಹಜವಾಗಬಹುದೆಂಬುದು ಅವರವರ ಊಹೆ. ಈ ಬಗ್ಗೆ ಅಧ್ಯಯನ ನಡೆಸಿದ ವಿಜ್ಞಾನಿಗಳು ಆರೋಗ್ಯವನ್ನು ಕಾಪಿಡುವ ಆರು ಸಂಗತಿಗಳನ್ನು ಪತ್ತೆಮಾಡಿದ್ದಾರೆ: ಸೌಖ್ಯ, ಕಾರ್ಯಕೌಶಲ್ಯ, ಸ್ವಭಾವ, ಹಾಸ್ಯಪ್ರವೃತ್ತಿ, ಸಹನೆ, ಮತ್ತು ಸಾಮರ್ಥ್ಯ. ಈ ಆರೂ ಸಂಗತಿಗಳನ್ನೂ ಸಾಮಾಜಿಕ ಸಂಬಂಧಗಳು ವೃದ್ಧಿಸುತ್ತವೆ. ಸಮಾಜದಿಂದ ದೂರಾದಷ್ಟೂ ದೀರ್ಘಕಾಲಿಕವಾಗಿ ಆರೋಗ್ಯ ನಿರ್ವಹಣೆ ತ್ರಾಸದಾಯಕವಾಗುತ್ತದೆ.

ಸಾಮಾಜಿಕ ಸಂಬಂಧಗಳು ಎಂದರೇನು? ಸಮಾಜವಿಜ್ಞಾನಿಗಳು ಇದನ್ನು ಮೂರು ಹಂತಗಳಲ್ಲಿ ವಿವರಿಸುತ್ತಾರೆ. ಮೊದಲ ಹಂತದ ಸಾಮಾಜಿಕ ಸಂಬಂಧ ಜೋಡಣೆಯಲ್ಲಿ ಪರಿಚಯವಿಲ್ಲದ ವ್ಯಕ್ತಿಗಳ ನಡುವೆ ಒಂದು ಸಂಪರ್ಕ ಏರ್ಪಡುತ್ತದೆ. ಇದು ಪರಿಚಿತರ ಮೂಲಕವೋ, ಇಲ್ಲವೇ ಧಾರ್ಮಿಕ ಸಂಸ್ಥೆಗಳ ಯಾ ಸಾಮಾಜಿಕ ಕಾರ್ಯಾಗಾರಗಳ ಮೂಲಕವೋ ಆಗಬಹುದು. ಎರದನೆಯ ಹಂತದಲ್ಲಿ ಇದು ಬೆಳೆದು ಹಲವರೊಡನೆ ಗುಣಮಟ್ಟದ ಬಂಧಗಳು ಉಂಟಾಗುತ್ತವೆ. ಇದು ಭಾವನಾತ್ಮಕ ಮಟ್ಟದಲ್ಲಿ ಇಲ್ಲವೇ ವ್ಯಾವಹಾರಿಕ ನೆಲೆಯಲ್ಲಿ ಆಗಬಹುದು. ಇವು ಗಟ್ಟಿಗೊಳ್ಳುತ್ತಾ ಮೂರನೆಯ ಹಂತಕ್ಕೆ ಹೋದಂತೆ ಸಾಮಾಜಿಕ ಜಾಲ ಹರಡುತ್ತದೆ. ಒಂದೊಂದು ಹಂತದಲ್ಲಿಯೂ ಆಯಾ ವ್ಯಕ್ತಿಯ ನಡವಳಿಕೆಯ, ವ್ಯಕ್ತಿತ್ವದ, ಪ್ರಾಮಾಣಿಕತೆಯ ಹಿನ್ನೆಲೆಯಲ್ಲಿ ಈ ಸಂಪರ್ಕ ಜಾಲ ವಿಸ್ತರಿಸುತ್ತದೆ. ಪ್ರತಿಯೊಂದು ಹಂತದ ಪ್ರಗತಿಯಾದಾಗಲೂ ವೈಯಕ್ತಿಕ, ಸಾಮಾಜಿಕ, ಮತ್ತು ಮಾನಸಿಕ ಆರೋಗ್ಯ ಅಭಿವೃದ್ಧಿಯಾಗುತ್ತದೆ ಎನ್ನುವುದನ್ನು ಹಲವಾರು ಅಧ್ಯಯನಗಳು ತಿಳಿಸಿವೆ.       

ತಂತ್ರಜ್ಞಾನವು ಸಾಮಾಜಿಕ ಸಂಬಂಧಗಳನ್ನು ಬೆಸೆಯಬೇಕು. ಆದರೆ ಇದಕ್ಕೆ ಪೂರಕವಾದ ವಾತಾವರಣ ನಿರ್ಮಾಣವಾಗುತ್ತಿಲ್ಲ. ವಿಲೋಮವಾಗಿ ತಂತ್ರಜ್ಞಾನದ ಬಳಕೆ ವ್ಯಕ್ತಿಗಳನ್ನು ಪರಸ್ಪರ ದೂರ ಮಾಡುತ್ತಿದೆ. ಈ ಮುನ್ನ ಇದ್ದಷ್ಟು ವೈಯಕ್ತಿಕ ಭೇಟಿಗಳ ಅಗತ್ಯ ಈಗಿಲ್ಲ. ಅದರಿಂದ ಮಧುರ ಬಾಂಧವ್ಯಗಳು ವೃದ್ಧಿಯಾಗುವ ಅವಕಾಶಗಳು ಕಡಿಮಯಾಗುತ್ತಿವೆ. ಸಾಮಾಜಿಕ ಜಾಲತಾಣಗಳ ಮೂಲಕ ಅಪರಿಚಿತ ವ್ಯಕ್ತಿಗಳ ಸಂಪರ್ಕ ಲಭಿಸುತ್ತದಾದರೂ, ಅದರ ಮಿತಿಗಳು ಅನೇಕ. ಬಹಳ ಮಟ್ಟಿಗೆ ಈ ಸಂಪರ್ಕಗಳು ತಾತ್ತ್ವಿಕ ಮಟ್ಟಕ್ಕೆ ಸೀಮಿತವಾಗುತ್ತವೆ. ಯಾವುದೇ ವ್ಯಕ್ತಿಯ ಗುಣಾವಗುಣಗಳ ಪರಿಚಯ ಕೇವಲ ಡಿಜಿಟಲ್ ಸಂಪರ್ಕದಿಂದ ಮಾತ್ರವೇ ಆಗಲಾರದು. ಹೀಗಾಗಿ, ಸಾಮಾಜಿಕ ಸಂಬಂಧಗಳಿಂದ ಲಭಿಸಬಹುದಾದ ಆರೋಗ್ಯ ಲಾಭಗಳು ಡಿಜಿಟಲ್ ಸಂಪರ್ಕ ಮಾತ್ರದಿಂದಲೇ ಆಗಲಾರವು.

ಇಂದಿನ ಸಮಾಜ ಬಹಳ ಸಂಕೀರ್ಣವಾಗಿದೆ. ಡಿಜಿಟಲ್ ಜಗತ್ತಿನಲ್ಲಿ ನಿರಂತರ ಕಲಿಗೆ ಅಗತ್ಯ. ಒಂದೆಡೆ ಸಮಾಜದ ಸಂಪರ್ಕಗಳು ಕಡಿತಗೊಳ್ಳುತ್ತಾ, ವೈಯಕ್ತಿಕ ಸಂಬಂಧಗಳು ಬಲಹೀನವಾಗುತ್ತಿದ್ದರೆ, ಮತ್ತೊಂದೆಡೆ ಡಿಜಿಟಲ್ ಹೆದ್ದಾರಿಯ ಮಹಾಪೂರದಲ್ಲಿ ಹರಿಯುವ ಅಪಾಯಕಾರಿ ಮಾಹಿತಿಗಳು ಜನಮಾನಸದೊಳಗೆ ಸರಾಗವಾಗಿ ಪ್ರವೇಶಿಸುತ್ತಿವೆ. ಇವೆರಡೂ ಭವಿಷ್ಯದಲ್ಲಿ ಬೃಹತ್ ಸಮಸ್ಯೆ ಉಂಟುಮಾಡಬಲ್ಲವು. ಒಂದು ಆಯಾಮದಲ್ಲಿ ನಮ್ಮತನವನ್ನು ಕಳೆದುಕೊಳ್ಳುತ್ತಿದ್ದರೆ, ಮತ್ತೊಂದು ಆಯಾಮದಲ್ಲಿ ಹೊಸದೊಂದು ಜೀವನಶೈಲಿಗೆ ಪೂರ್ಣವಾಗಿ ಒಗ್ಗಿಕೊಳ್ಳಲು ಸಾಧ್ಯವಾಗದೆ ಹೆಣಗುತ್ತಿರುವ ಕಾಲಘಟ್ಟದಲ್ಲಿ ನಾವು ಬದುಕುತ್ತಿದ್ದೇವೆ. ಈ ನಿಟ್ಟಿನಲ್ಲಿ ಆಳುವ ವ್ಯವಸ್ಥೆ ಏನು ಮಾದಬೇಕು ಎನ್ನುವುದಕ್ಕಿಂತಲೂ ನಮ್ಮ ನಮ್ಮ ವೈಯಕ್ತಿಕ ಶಿಸ್ತಿನ ನೆಲೆಯಲ್ಲಿ ನಾವೇನು ಮಾಡಬಹುದು ಎಂಬುದೇ ಮುಖ್ಯ. ಅಸಾಧ್ಯ ವೇಗದಲ್ಲಿ ಸಾಗುತ್ತಿರುವ ಪ್ರಗತಿಯನ್ನು ನಿಲ್ಲಿಸಲು ಸಾಧ್ಯವಿಲ್ಲ. ಆದರೆ, ಯಾವುದನ್ನು ನಂಬಬೇಕು; ಯಾವುದನ್ನು ನಂಬಬಹುದು; ಯಾವುದನ್ನು ನಂಬಬಾರದು ಎಂಬ ಯುಕ್ತಾಯುಕ್ತ ವಿವೇಚನೆ ಇರಲೇಬೇಕು. ಭೌತಿಕ, ಮಾನಸಿಕ, ಮತ್ತು ಸಾಮಾಜಿಕ ಸ್ವಾಸ್ಥ್ಯದ ಆವಶ್ಯಕತೆಯಲ್ಲಿ ಈ ವಿವೇಚನೆ ಬಹಳ ಮುಖ್ಯ.

--------------------------

 ಜುಲೈ 2022 ಮಾಹೆಯ ಸೂತ್ರ ವಿಜ್ಞಾನ ಮಾಸಪತ್ರಿಕೆಯಲ್ಲಿ ಪ್ರಕಟವಾದ ಲೇಖನ 

 ಒತ್ತಡಗಳ ನಿರ್ವಹಣೆ ಮತ್ತು ಆರೋಗ್ಯ

ಡಾ. ಕಿರಣ್ ವಿ.ಎಸ್.

ವೈದ್ಯರು

ಒತ್ತಡವೆಂಬುದು ಸಾರ್ವತ್ರಿಕ. ಪ್ರತಿಯೊಬ್ಬರೂ ತಂತಮ್ಮ ಮಟ್ಟದಲ್ಲಿ ಒತ್ತಡವನ್ನು ಅನುಭವಿಸುತ್ತಲೇ ಇರುತ್ತಾರೆ. ಒತ್ತಡಗಳನ್ನು ಸಹಿಸಬಲ್ಲ ಸಾಮರ್ಥ್ಯ ಎಲ್ಲರಲ್ಲೂ ಇರುವುದಿಲ್ಲ. ಒತ್ತಡಗಳು ಆರೋಗ್ಯದ ಮೇಲೆ ಹಲವಾರು ಪ್ರತಿಕೂಲ ಪರಿಣಾಮಗಳನ್ನು ಬೀರಬಲ್ಲವು. ಇಂದಿನ ಬದುಕಿನ ಧಾವಂತದಲ್ಲಿ ಒತ್ತಡವೆಂಬುದು ಕಡ್ಡಾಯವಾಗಿಹೋಗಿದೆ. ಹೀಗಾಗಿ, ಒತ್ತಡವನ್ನು ನಿರ್ವಹಿಸುವ ಮಾರ್ಗಗಳನ್ನು ಕಂಡುಕೊಂಡು, ಆರೋಗ್ಯವನ್ನು ಕಾಪಾಡಿಕೊಳ್ಳಬೇಕು.

ಹಲವಾರು ಸಂಗತಿಗಳು ಒತ್ತಡಕ್ಕೆ ಕಾರಣವಾಗಬಹುದು. ನಮ್ಮ ಮನಸ್ಸು ಬದಲಾವಣೆಗಳನ್ನು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ; ಆತಂಕ ಪಡುತ್ತದೆ. ಕೆಲವೊಮ್ಮೆ ನಮ್ಮ ಆತ್ಮಾಭಿಮಾನಕ್ಕೆ ಧಕ್ಕೆಯಾಗುವ ಸಂಧರ್ಭಗಳಲ್ಲಿ ಜೀವನದ ಮೇಲೆ ನಮ್ಮ ನಿಯಂತ್ರಣ ತಪ್ಪಿಹೋದಂತೆ ಅನಿಸುತ್ತದೆ. ಆಗಲೂ ತೀವ್ರ ಒತ್ತಡದ ಭಾವನೆ ಇರುತ್ತದೆ. ಪ್ರಸ್ತುತ ಸಮಾಜದಲ್ಲಿ ವೃತ್ತಿಗೆ ಸಂಬಂಧಿಸಿದ ಒತ್ತಡಗಳು ಅತ್ಯಂತ ಹೆಚ್ಚು. ಇಂತಹ ಒತ್ತಡಗಳನ್ನು ನಿರ್ವಹಿಸುವ ವಿಧಾನಗಳು ಪ್ರತಿಯೊಬ್ಬರಿಗೂ ವಿಭಿನ್ನ. ನಮ್ಮ ಜೆನೆಟಿಕ್ ರಚನೆ, ಜೀವನದಲ್ಲಿ ಹಿಂದೆ ನಡೆದ ಘಟನೆಗಳು, ವ್ಯಕ್ತಿತ್ವ, ಸಾಮಾಜಿಕ ಪರಿಸರ, ಆರ್ಥಿಕ ಪರಿಸ್ಥಿತಿಗಳು, ಮನಸ್ಥಿತಿ, ಮೊದಲಾದುವು ಒತ್ತಡ ನಿರ್ವಹಣೆಯಲ್ಲಿ ಪಾತ್ರ ವಹಿಸುತ್ತವೆ.

ಒತ್ತಡದ ವೇಳೆ ಶರೀರದ ಹಾರ್ಮೋನುಗಳ ಮಟ್ಟದಲ್ಲಿ ಏರುಪೇರಾಗುತ್ತದೆ. ಇದು ಶರೀರದ ರಕ್ಷಕ ವ್ಯವಸ್ಥೆಯ ಮೇಲೆ ಋಣಾತ್ಮಕ ಪರಿಣಾಮ ತೋರುತ್ತದೆ. ಇದರಿಂದ ಹಲವಾರು ಕಾಯಿಲೆಗಳಿಗೆ ಶರೀರ ನೆಲೆಯಾಗಬಹುದು. ಅಲ್ಲದೇ, ಮಧುಮೇಹದಂತಹ ದೀರ್ಘಕಾಲಿಕ ಕಾಯಿಲೆಗಳ ನಿಯಂತ್ರಣ ತಪ್ಪುತ್ತದೆ. ಆತಂಕ, ಭೀತಿ, ದುಃಖ, ಕಿರಿಕಿರಿ, ಖಿನ್ನತೆ, ಹತಾಶೆ, ಅನಗತ್ಯ ಕೋಪ, ತಾಳ್ಮೆ ಕಳೆದುಕೊಳ್ಳುವುದು  ಮೊದಲಾದುವು ಒತ್ತಡದ ಪರಿಣಾಮಗಳು. ಒಟ್ಟಾರೆ, ಸತತ ಒತ್ತಡದ ಪರಿಸ್ಥಿತಿ ಆರೋಗ್ಯಕ್ಕೆ ಹಿತಕರವಲ್ಲ. ತಲೆನೋವು, ಅಜೀರ್ಣ, ಉಸಿರಾಟದ ಏರುಪೇರು, ಹೃದಯದ ಏರುಬಡಿತ, ಮೈ-ಕೈ ನೋವು, ಸಂಕಟ ಮೊದಲಾದುವು ಒತ್ತಡದ ಕಾರಣದಿಂದ ಭೌತಿಕ ಶರೀರದ ಆಗುವ ಬದಲಾವಣೆಗಳು. ಒತ್ತಡದ ಕಾರಣದಿಂದ ಉಂಟಾಗುವ ಅನಾರೋಗ್ಯಗಳಿಂದ ವರ್ಷಕ್ಕೆ ಸರಾಸರಿ ಇಪ್ಪತ್ತನಾಲ್ಕು ದಿನಗಳು ಕೆಲಸದಿಂದ ವಿಮುಖರಾಗುತ್ತಾರೆ ಎಂದು ಅಧ್ಯಯನಗಳು ತಿಳಿಸಿವೆ. 

ಒತ್ತಡ ಮೇಲ್ನೋಟಕ್ಕೆ ಕಾಣುವಂತಹದಲ್ಲ. ಒತ್ತಡದಿಂದ ಬಳಲುವವರು ಇತರರಿಂದ ಅಂತರ ಕಾಯ್ದುಕೊಳ್ಳುತ್ತಾರೆ; ನಿರ್ಧಾರಗಳನ್ನು ಸುಲಭವಾಗಿ ಮಾಡಲಾರರು; ಮಾಡಿದ ತಪ್ಪು ನಿರ್ಧಾರಗಳನ್ನು ತಿದ್ದಿಕೊಳ್ಳಲಾರರು; ಭಾವನಾತ್ಮಕವಾಗಿ ಸೂಕ್ಷ್ಮವಾಗುತ್ತಾರೆ; ಸಣ್ಣ ವಿಷಯಗಳಿಗೂ ತೀವ್ರವಾಗಿ ದುಃಖಿಸುತ್ತಾರೆ; ನಿದ್ರಾಹೀನತೆಯಿಂದ ಬಳಲುತ್ತಾರೆ; ಸಂಸಾರದಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾರೆ; ಮದ್ಯಪಾನ, ಸಿಗರೇಟುಗಳಂತಹ ಚಟಗಳಿಗೆ ಮೊರೆ ಹೋಗುತ್ತಾರೆ; ಜೀವನೋತ್ಸಾಹ ಕಡಿಮೆಯಾಗುತ್ತದೆ; ಹೊಟ್ಟೆಯ ಹುಣ್ಣುಗಳು, ಜೀರ್ಣಶಕ್ತಿಯಲ್ಲಿ ದೋಷಗಳು, ನೆನಪಿನ ಶಕ್ತಿ ಕುಂದುವಿಕೆ, ಹೃದ್ರೋಗ ಮೊದಲಾದ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ವಿಲೋಮವಾಗಿ, ಒತ್ತಡದ ಸಮರ್ಥ ನಿರ್ವಹಣೆ ಆರೋಗ್ಯದ ಸುಧಾರಣೆಗೆ ದಾರಿಯಾಗುತ್ತದೆ. ಇದನ್ನು ಸಾಧಿಸಲು ತಜ್ಞರು ಕೆಲವು ಮಾರ್ಗಗಳನ್ನು ಸೂಚಿಸುತ್ತಾರೆ.

1.      ಬದುಕಿನಲ್ಲಿ ಅಧಿಕ ಒತ್ತಡದ ಅಸ್ತಿತ್ವವನ್ನು ಮನಗಾಣಬೇಕು; ಒತ್ತಡವನ್ನು ಹೇರುತ್ತಿರುವ ಪರಿಸ್ಥಿತಿಗಳನ್ನು ವಿಶ್ಲೇಷಿಸಬೇಕು. ಕೆಲವೊಮ್ಮೆ ಇದು ಸುಲಭಸಾಧ್ಯವಲ್ಲ. ನಮಗೇ ಅರಿವಿಲ್ಲದ ಯಾವುದೋ ಬದಲಾವಣೆ, ಹೊಂದಾಣಿಕೆಯಾಗದ ಸಂಬಂಧಗಳು ಒತ್ತಡದ ಮೂಲಗಳಾಗಿರಬಹುದು. ಬಹುತೇಕ ಸಂದರ್ಭಗಳಲ್ಲಿ ನಮ್ಮ ಆಲೋಚನೆಗಳು, ವರ್ತನೆಗಳು, ಭಾವನೆಗಳ ಮೇಲೆ ನಿಗಾ ಇರುವುದಿಲ್ಲ. ಹೀಗಾಗಿ ಆತ್ಮಾವಲೋಕನ ಕಷ್ಟವಾಗುತ್ತದೆ. ಇದರ ಪರಿಹಾರಕ್ಕಾಗಿ ನಮ್ಮ ವರ್ತನೆಗಳನ್ನು ಪ್ರಯತ್ನಪೂರ್ವಕವಾಗಿ ದಾಖಲಿಸಬೇಕು. ಯಾವುದಾದರೂ ಸಂದರ್ಭದಲ್ಲಿ ನಮ್ಮ ವರ್ತನೆ ಅನಪೇಕ್ಷಿತವಾಗಿತ್ತೇ? ಹಾಗೆ ವರ್ತಿಸಿದ ನಂತರ ಮೂಡಿದ ಭಾವನೆಗಳೇನು? ಇದನ್ನು ಬದಲಾಯಿಸಲು ಸಾಧ್ಯವೇ? ಎಂಬ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು,. ಇದರಿಂದ ಒತ್ತಡದ ಮೂಲಗಳನ್ನು ತಿಳಿಯಬಹುದು.

2.     ಕೆಲವು ಒತ್ತಡಗಳನ್ನು ನಿವಾರಿಸಿಕೊಳ್ಳಬಹುದು; ಕೆಲವನ್ನು ಬದಲಾಯಿಸಬಹುದು; ಕೆಲವದರ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳಬಹುದು; ಕೆಲವನ್ನು ಮಾತ್ರ ಒಪ್ಪಿಕೊಂಡೇ ಮುಂದುವರೆಯಬೇಕು. ಈ ನಾಲ್ಕು ಆಯ್ಕೆಗಳ ನಡುವೆ ಯಾವುದನ್ನು ಹೇಗೆ ಮಾಡಬೇಕು ಎಂಬುದು ಅವರವರ ವಿವೇಚನೆಗೆ ಬಿಟ್ಟದ್ದು. ಈ ಸಂದರ್ಭದಲ್ಲಿ ಆತ್ಮೀಯರು, ಮಾನಸಿಕ ತಜ್ಞರು, ಆಪ್ತಸಲಹೆಗಾರರು ನೆರವಾಗಬಲ್ಲರು. ನಮ್ಮ ಒತ್ತಡವನ್ನು ಎಲ್ಲರಲ್ಲೂ ಜಾಹೀರು ಮಾಡಿಕೊಳ್ಳುವುದು ಒಳ್ಳೆಯದಲ್ಲ. ತೀರಾ ಆಪ್ತರಾದ, ಸರಿಯಾದ ಪರಿಹಾರ ಸೂಚಿಸಬಲ್ಲ ಗೆಳೆಯರ, ಸಂಬಂಧಿಗಳ ಜೊತೆಗೆ ಮುಕ್ತವಾಗಿ ಮಾತನಾಡುವುದರಿಂದ ಸಮಸ್ಯೆಗಳು ಹಗುರವಾಗಬಲ್ಲವು. ನಮ್ಮ ಮಿತಿಯನ್ನು ಮೀರಿದ ಕೆಲಸಗಳನ್ನು ಒಲ್ಲೆನೆನ್ನುವ ಮನಸ್ಥಿತಿ ಬೆಳೆಯಬೇಕು. ಎಲ್ಲರಿಗೂ ಒಳ್ಳೆಯವರಾಗುವ ಪ್ರಯತ್ನದಲ್ಲಿ ನಮ್ಮನ್ನು ನಾವು ದಹಿಸಿಕೊಳ್ಳಬಾರದು. ಒತ್ತಡವನ್ನು ಹೆಚ್ಚಿಸುವ ಜನರಿಂದ, ಸುದ್ಧಿಮೂಲಗಳಿಂದ ದೂರವಿರುವುದು ಸೂಕ್ತ. ನಮ್ಮ ನಿಯಂತ್ರಣದಲ್ಲಿ ಇಲ್ಲದಿರುವ ಸಂಚಾರ ದಟ್ಟಣೆಯಂತಹ ಪ್ರಸಂಗಗಳು ನಮ್ಮ ಒತ್ತಡದ ಮಟ್ಟವನ್ನು ಏರಿಸಲು ಬಿಡಬಾರದು. ನಮ್ಮ ದೈನಂದಿನ ಕೆಲಸಗಳ ಪಟ್ಟಿಯನ್ನು ಸಾಧ್ಯವಾದಷ್ಟೂ ಹಗುರವಾಗಿಸಬೇಕು; ನಡುನಡುವೆ ವಿಶ್ರಾಂತಿಗೆ, ಆತ್ಮಾವಲೋಕನಕ್ಕೆ, ವಿಶ್ಲೇಷಣೆಗೆ ಸ್ಥಳಾವಕಾಶ ದೊರೆಯಬೇಕು. ಕೆಲವೊಮ್ಮೆ ಪರಿಸ್ಥಿತಿಯ ಜೊತೆಗೆ ರಾಜಿಗೆ ಸಿದ್ಧವಿರಬೇಕಾಗುತ್ತದೆ. ಸಮತೋಲಿತ ಚಿಂತನೆಗಳು ಮನಸ್ಸನ್ನು ನಿರಾಳವಾಗಿಸುತ್ತವೆ.  

3.     ಸಮಸ್ಯೆಗಳ ಪರಿಭಾಷೆಯನ್ನು ಅರ್ಥಮಾಡಿಕೊಳ್ಳಬೇಕು. ಕೆಲವೊಂದು ಸಮಸ್ಯೆಗಳು ನಾವು ಊಹಿಸಿಕೊಂಡಷ್ಟು ಗಾಢವಾಗಿರುವುದಿಲ್ಲ. ಸಮಸ್ಯೆಯನ್ನು ಒಮ್ಮೆ ಸರಿಯಾದ ನೆಲೆಗಟ್ಟಿನಲ್ಲಿ ಅರ್ಥ ಮಾಡಿಕೊಂಡರೆ, ಅದರ ಪರಿಹಾರ ಸುಲಭವಾಗುತ್ತದೆ. ಎಲ್ಲ ಸಮಸ್ಯೆಗಳಿಗೂ ಪರಿಹಾರವೇ ಬೇಕೆಂದಿಲ್ಲ; ಕೆಲವೊಂದನ್ನು ಸಮಯಾನುಸಾರ ತಹಬಂದಿಗೆ ತಂದರೂ ಸಾಕು. ಕೆಲವು ಸಂದರ್ಭಗಳು ಮೂಲತಃ ಸಮಸ್ಯೆ ಎನಿಸಿದರೂ, ಕಾಲಕ್ರಮದಲ್ಲಿ ಸೂಕ್ತವಾಗಿ ವಿಶ್ಲೇಷಿಸಿದಾಗ ಅವು ಅವಕಾಶಗಳ ರೂಪ ಪಡೆಯುತ್ತವೆ.

4.    ಜಿದ್ದಿನ ಮನಸ್ಥಿತಿ ಒಳ್ಳೆಯದಲ್ಲ. ಜೀವನದಲ್ಲಿ ಕೆಲವನ್ನು ಕ್ಷಮಿಸಿ ಮುಂದೆ ಸಾಗಬೇಕು. ಸೇಡನ್ನು ಗುರಿಯಾಗಿಸಿ ಚಿಂತಿಸುವುದು ಋಣಾತ್ಮಕ ಆಲೋಚನೆಗಳನ್ನೇ ಹುಟ್ಟುಹಾಕುತ್ತವೆ. ಇದು ಆರೋಗ್ಯಕ್ಕೆ ಹಾನಿಕರ. ಕ್ರಮಬದ್ಧ ವ್ಯಾಯಾಮ, ಪ್ರಾಣಾಯಾಮ, ಧ್ಯಾನಗಳು ನಮ್ಮ ಸೈರಣೆಯನ್ನು ಹಿಗ್ಗಿಸುತ್ತವೆ. ಇದು ದೈಹಿಕ ಹಾಗೂ ಮಾನಸಿಕ ಒತ್ತಡಗಳನ್ನು ಕಳೆಯಲು ಸಹಕಾರಿ. ಇದರ ಜೊತೆಗೆ ಮನಸ್ಸಿಗೆ ಆಹ್ಲಾದ ನೀಡುವ ಹವ್ಯಾಸಗಳಲ್ಲಿ ತೊಡಗಿಕೊಳ್ಳುವುದು, ಆರೋಗ್ಯಕರ ಆಹಾರ, ಚಟಗಳಿಂದ ದೂರವಿರುವುದು, ಸಾಕಷ್ಟು ವಿಶ್ರಾಂತಿ, ನಿದ್ರೆಗಳು ಒತ್ತಡ ನಿರ್ವಹಣೆಯನ್ನು ಸುಲಭವಾಗಿಸುತ್ತವೆ.      

5.     ವೈಯಕ್ತಿಕ ಸಂಬಂಧಗಳ ಅಭಿವೃದ್ಧಿ ಹಲವಾರು ಹಂತಗಳಲ್ಲಿ ಒತ್ತಡ ನಿರ್ಮೂಲನೆಗೆ ದಾರಿಯಾಗುತ್ತದೆ. ಕೌಟುಂಬಿಕ ಸಂಬಂಧಗಳು, ಸ್ನೇಹಿತರು, ವೃತ್ತಿಜೀವನದ ಒಡನಾಡಿಗಳು, ಪರಿಚಿತರ ಜೊತೆಯಲ್ಲಿ ಪ್ರಾಮಾಣಿಕ ಆತ್ಮೀಯತೆಯಿಂದ ವ್ಯವಹರಿಸುವುದು ದೀರ್ಘಕಾಲಿಕ ನೆಲೆಗಟ್ಟಿನಲ್ಲಿ ಪರಸ್ಪರರ ಒತ್ತಡವನ್ನು ತಗ್ಗಿಸುತ್ತದೆ. ನಮಗೇ ಅರಿವಿಲ್ಲದಂತೆ ಮತ್ತೊಬ್ಬರ ಒತ್ತಡಗಳ ನಿವಾರಣೆಯಲ್ಲಿ ನೆರವಾಗಿರುತ್ತೇವೆ.

ಕೆಲಸ ಮತ್ತು ಒತ್ತಡಗಳ ಸಮರ್ಥ ನಿರ್ವಹಣೆ ಆರೋಗ್ಯದ ದೃಷ್ಟಿಯಿಂದ ಪ್ರಮುಖ ಪಾತ್ರ ವಹಿಸುತ್ತವೆ. ದಾರಿಗಳು ಬೇರೆಬೇರೆಯಾದರೂ, ಒತ್ತಡ ನಿರ್ವಹಣೆಯ ಮೂಲತತ್ತ್ವಗಳು ಒಂದೇ. ಆಧುನಿಕ ಸ್ಪರ್ಧಾತ್ಮಕ ಯುಗದಲ್ಲಿ ಒತ್ತಡರಹಿತವಾಗಿ ಬದುಕುವ ಪ್ರಯತ್ನಗಳಿಗಿಂತಲೂ, ಒತ್ತಡವನ್ನು ವಿಶ್ಲೇಷಿಸಿ, ಅವುಗಳನ್ನು ನಿರ್ವಹಿಸುವ ಕಲೆಗಾರಿಕೆಯನ್ನು ಕಲಿಯುವುದು ದೈಹಿಕ ಮತ್ತು ಮಾನಸಿಕ ಆರೋಗ್ಯಗಳನ್ನು ಕಾಪಿಟ್ಟುಕೊಳ್ಳುವ ಯಶಸ್ವಿ ವಿಧಾನ.  

----------------------------

ದಿನಾಂಕ 21/6/2022 ರ ಪ್ರಜಾವಾಣಿಯಲ್ಲಿ ಪ್ರಕಟವಾದ ಲೇಖನ. ಕೊಂಡಿ: https://www.prajavani.net/health/stress-management-and-health-yoga-meditation-947301.html

 ಮಂಕಿಪಾಕ್ಸ್ – ಎಚ್ಚರವಿರಲಿ; ಆತಂಕ ಬೇಕಿಲ್ಲ

ಡಾ. ಕಿರಣ್ ವಿ.ಎಸ್.

ವೈದ್ಯರು

ಕೋವಿಡ್-19 ರ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳುವಷ್ಟರಲ್ಲಿ ಮಂಕಿಪಾಕ್ಸ್ ಆತಂಕ ಎದುರಾಗಿದೆ. ಮೂಲತಃ ಆಫ್ರಿಕಾ ಖಂಡದ ಮಳೆಗಾಡುಗಳ ದೇಶಗಳಿಗೆ ಸೀಮಿತವಾಗಿದ್ದ ಮಂಕಿಪಾಕ್ಸ್ ಈಗ ಜಾಗತಿಕವಾಗಿ ಹಬ್ಬುತ್ತಿದೆ. ಈ ಕಾಯಿಲೆಗೆ ಕಾರಣ ಮಂಕಿಪಾಕ್ಸ್ ಎನ್ನುವ ವೈರಸ್. 1958 ರಲ್ಲಿ ಪ್ರಯೋಗಾಲದಲ್ಲಿ ಸಂಶೋಧನೆಗೆಂದು ಇಟ್ಟುಕೊಂಡಿದ್ದ ಕೆಲವು ಮಂಗಗಳಲ್ಲಿ ಇದು ಮೊದಲ ಬಾರಿಗೆ ಕಂಡಿದ್ದರಿಂದ ಇದನ್ನು ಮಂಗನ ಸಿಡುಬು ಅಥವಾ ಮಂಕಿಪಾಕ್ಸ್ ಎಂದು ಕರೆಯಲಾಗಿತ್ತು. 1970 ರಲ್ಲಿ ಇದು ಮನುಷ್ಯರಲ್ಲೂ ಕಾಣುತ್ತದೆ ಎಂದು ತಿಳಿದುಬಂದಿತು. ಪ್ರಾಣಿಗಳಿಂದ ಮನುಷ್ಯರಿಗೆ ಹಬ್ಬುವ ಈ ವೈರಸ್, ಓರ್ವ ಕಾಯಿಲೆಪೀಡಿತರಿಂದ ಮತ್ತೊಬ್ಬರಿಗೆ ಹರಡಬಹುದು.

ಮಂಕಿಪಾಕ್ಸ್ ಕೂಡ ಸಿಡುಬಿನ ಒಂದು ಪ್ರಭೇದ. ಇತರ ಸಿಡುಬುಗಳಲ್ಲಿ ಬರುವಂತೆ ಇದರಲ್ಲೂ ಜ್ವರ, ತಲೆನೋವು, ಬೆನ್ನುನೋವು, ಮೈ-ಕೈ ನೋವು, ಸುಸ್ತು ಕಾಡುತ್ತವೆ. ಗದ್ದದ ಬಳಿ, ಕಂಕುಳಿನಲ್ಲಿ ಸಣ್ಣ ಉಂಡೆಗಳಂತಹ ದುಗ್ಧಗ್ರಂಥಿಗಳು ಕಾಣುತ್ತವೆ. ದುಗ್ಧಗ್ರಂಥಿಗಳು ನಮ್ಮ ಶರೀರದ ರಕ್ಷಕ ವ್ಯವಸ್ಥೆಯ ಭಾಗಗಳು. ಸಾಮಾನ್ಯವಾಗಿ ಸಣ್ಣ ಗಾತ್ರದಲ್ಲಿ ಇರುವ ಇವು, ಶರೀರಕ್ಕೆ ರೋಗ ಬಂದಾಗ ಹಿರಿದಾಗುತ್ತವೆ. ಜ್ವರ ಆರಂಭವಾದ ಮೂರು ದಿನಗಳ ಒಳಗೆ ಚರ್ಮ ಕೆಂಪಾಗಿ, ಸಬ್ಬಕ್ಕಿ ಕಾಳಿನ ಗಾತ್ರದ ಬೊಕ್ಕೆಗಳು ಏಳುತ್ತವೆ. ಈ ಬೊಕ್ಕೆಗಳ ಒಳಗೆ ನೀರಿನಂತಹ ದ್ರಾವಣ ಇರುತ್ತದೆ. ಕೆಲವೊಮ್ಮೆ ಈ ದ್ರಾವಣದ ಬಣ್ಣ ತುಸು ಹಳದಿ ಇರಬಹುದು. ಒಬ್ಬ ವ್ಯಕ್ತಿಯ ಮೈ ಮೇಲೆ ಬೆರಳೆಣಿಕೆಯಷ್ಟು ಸಂಖ್ಯೆಯಿಂದ ಹಿಡಿದು ಸಾವಿರಾರು ಬೊಕ್ಕೆಗಳು ಕಾಣಬಹುದು. ಇವು ಮುಖ್ಯವಾಗಿ ಮುಖ, ಅಂಗೈ ಮತ್ತು ಅಂಗಾಲುಗಳ ಮೇಲೆ ಇರುತ್ತದಾದರೂ, ತೀವ್ರವಾದ ಸೋಂಕಿನಲ್ಲಿ ಬಾಯಿ, ಕಣ್ಣು ಸೇರಿ ಶರೀರದ ಎಲ್ಲೆಡೆ ಬರಬಹುದು.

ಈ ಲಕ್ಷಣಗಳು ಸುಮಾರು 2 ರಿಂದ 4 ವಾರಗಳ ಕಾಲ ಇರುತ್ತವೆ. ಆನಂತರ ಯಾವುದೇ ಚಿಕಿತ್ಸೆ ಇಲ್ಲದೆಯೂ ತಂತಾನೇ ಸರಿಹೋಗುತ್ತವೆ. ಆದರೆ, ನವಜಾತ ಶಿಶುಗಳಲ್ಲಿ, ಕ್ಯಾನ್ಸರ್ ರೋಗಿಗಳಲ್ಲಿ, ಸ್ಟೀರಾಯ್ಡ್ ಔಷಧದ ಚಿಕಿತ್ಸೆ ಪಡೆಯುವವರಲ್ಲಿ, ಅನಿಯಂತ್ರಿತ ಮಧುಮೇಹಿಗಳಲ್ಲಿ, ಶರೀರದ ರಕ್ಷಕ ವ್ಯವಸ್ಥೆ ದುರ್ಬಲವಾಗಿರುವವರಲ್ಲಿ ಮಂಕಿಪಾಕ್ಸ್ ಪ್ರಾಣಾಂತಕವಾಗಬಹುದು. ಇಂತಹವರಲ್ಲಿ ಬೊಕ್ಕೆಗಳು ಒಡೆದು, ಆ ಜಾಗಗಳಲ್ಲಿ ವ್ರಣವಾಗಬಹುದು; ಶ್ವಾಸಕೋಶವನ್ನು ಸೇರಿದ ವೈರಸ್ ತೀವ್ರ ನ್ಯುಮೋನಿಯಾ ಉಂಟುಮಾಡಬಹುದು; ಕಣ್ಣಿನಲ್ಲಿ ಕಾಣುವ ಬೊಕ್ಕೆಗಳು ಕಣ್ಣಿನ ಸೋಂಕು ಉಂಟುಮಾಡಿ, ಅಂಧತ್ವಕ್ಕೆ ಕಾರಣವಾಗಬಹುದು. ನೂರು ಮಂದಿ ಮಂಕಿಪಾಕ್ಸ್ ರೋಗಿಗಳಲ್ಲಿ ಸುಮಾರು ಐದು ಜನರಿಗೆ ಈ ರೀತಿಯ ಸಮಸ್ಯೆಗಳು ಕಾಣಬಹುದು ಎಂದು ಅಂದಾಜು.

ಮಂಕಿಪಾಕ್ಸ್ ವೈರಸ್ ಶರೀರದ ಪರಸ್ಪರ ಸಂಪರ್ಕದಿಂದ ಹರಡುತ್ತದೆ. ಇಲಿ, ಹೆಗ್ಗಣ, ಮಂಗ ಮೊದಲಾದ ಪ್ರಾಣಿಗಳು ಈ ವೈರಸ್ ವಾಹಕಗಳು. ಮಂಕಿಪಾಕ್ಸ್ ಕಾಯಿಲೆಯಿಂದ ಬಳಲುವ ಪ್ರಾಣಿಗಳ ಮೃತದೇಹದಿಂದಲೂ ವೈರಸ್ ಹರಡಬಲ್ಲವು ಎಂದು ಸಾಬೀತಾಗಿದೆ. ಇಂತಹ ಪ್ರಾಣಿಗಳ ಜೊತೆಗೆ ಸಂಪರ್ಕಕ್ಕೆ ಬರುವ ವ್ಯಕ್ತಿಗಳು ಮಂಕಿಪಾಕ್ಸ್ ವೈರಸ್ ಅನ್ನು ತಮ್ಮ ಸಂಪರ್ಕಕ್ಕೆ ಬರುವ ಇತರರಿಗೆ ಹರಡಿಸುತ್ತಾರೆ. ಈ ರೀತಿ ಮನುಷ್ಯರಲ್ಲಿ ಮಂಕಿಪಾಕ್ಸ್ ಸೋಂಕು ಹಬ್ಬುತ್ತದೆ. ರೋಗದಿಂದ ಬಳಲುವ ಯಾವುದೇ ವ್ಯಕ್ತಿ ಸುಮಾರು ಎರಡರಿಂದ ನಾಲ್ಕು ವಾರಗಳ ಕಾಲ ಮಂಕಿಪಾಕ್ಸ್ ವೈರಸ್ ಅನ್ನು ಹರಡಬಲ್ಲರು. ಬೊಕ್ಕೆಗಳು, ಅದರ ಒಳಗಿನ ದ್ರವ, ಬೊಕ್ಕೆಗಳು ಒಡೆದಾಗ ಬರಬಹುದಾದ ರಕ್ತ, ಮೊದಲಾದುವು ವೈರಸ್ ಹರಡುವಿಕೆಗೆ ದಾರಿಯಾಗುತ್ತವೆ. ರೋಗಿಯ ಬಟ್ಟೆ, ಹಾಸಿಗೆ, ಟವೆಲ್, ಅವರು ಊಟ ಮಾಡಿದ ತಟ್ಟೆ, ಬಟ್ಟಲುಗಳ ಮೇಲೆಯೂ ಮಂಕಿಪಾಕ್ಸ್ ವೈರಸ್ ಕೆಲಕಾಲ ಜೀವಂತ ಇರುತ್ತದೆ. ಈ ಸಂದರ್ಭದಲ್ಲಿ ಇವುಗಳ ಜೊತೆಗೆ ಸಂಪರ್ಕಕ್ಕೆ ಬರುವ ವ್ಯಕ್ತಿಗಳಿಗೆ ವೈರಸ್ ಸೋಂಕು ಹತ್ತಬಹುದು. ಬಾಯಿಯ ಒಳಗೆ ಬೊಕ್ಕೆಗಳು ಎದ್ದಿರುವ ರೋಗಿಗಳಲ್ಲಿ ಎಂಜಲಿನ ಮೂಲಕವೂ ವೈರಸ್ ಹರಡುತ್ತದೆ. ಗರ್ಭಿಣಿಯರಲ್ಲಿ ಮಂಕಿಪಾಕ್ಸ್ ಉಂಟಾದರೆ ಗರ್ಭಸ್ಥ ಶಿಶುವಿಗೂ ಕಾಯಿಲೆ ಆಗುತ್ತದೆ ಎಂದು ಪತ್ತೆಯಾಗಿದೆ. ಹೀಗಾಗಿ, ಗರ್ಭಿಣಿಯರು ಅಧಿಕ ಎಚ್ಚರದಲ್ಲಿರಬೇಕು.

ಪ್ರಪಂಚವನ್ನು ಸಾವಿರಾರು ವರ್ಷಗಳ ಕಾಲ ಇನ್ನಿಲ್ಲದಂತೆ ಕಾಡಿದ್ದ ಸಿಡುಬು ಕಾಯಿಲೆ (smallpox) ಜಾಗತಿಕವಾಗಿ ನಿರ್ಮೂಲನವಾದದ್ದು 1980 ನೆಯ ಇಸವಿಯಲ್ಲಿ. ಆನಂತರ ಜನಿಸಿದವರಿಗೆ ಸಿಡುಬಿನ ಲಸಿಕೆ ಹಾಕಲಾಗಿಲ್ಲ. ಭಾರತದಲ್ಲಿ ಸಿಡುಬಿನ ಲಸಿಕೆ ಕೊನೆಯಾದದ್ದು 1979 ರಲ್ಲಿ. ಅದಕ್ಕೆ ಮುನ್ನ ಜನಿಸಿದವರ ಎಡತೋಳಿನ ಮೇಲೆ ಕಾಣುವ ನಾಲ್ಕಾಣೆ ಗಾತ್ರದ ಗುರುತು ಸಿಡುಬಿನ ಮೈಲಿಯದ್ದು. ಸಿಡುಬಿನ ವಿರುದ್ಧದ ಲಸಿಕೆ ಮಂಕಿಪಾಕ್ಸ್ ಅನ್ನು ಕೂಡ ಸ್ವಲ್ಪಮಟ್ಟಿಗೆ ನಿಯಂತ್ರಿಸುತ್ತದೆ ಎಂದು ತಜ್ಞರ ಅಭಿಪ್ರಾಯ. ಆದರೆ, ಇದನ್ನು ಅವಲಂಬಿಸಿ ಎಚ್ಚರ ತಪ್ಪುವುದು ಶಕ್ಯವಲ್ಲ. ಒಂದು ವೇಳೆ ಸಿಡುಬಿನ ಲಸಿಕೆ ಹಾಕಿಸಿಕೊಂಡವರಿಗೆ ಮಂಕಿಪಾಕ್ಸ್ ಆದರೆ, ಅದರ ತೀವ್ರತೆ ಕಡಿಮೆಯಾಗಿರುತ್ತದೆ ಎಂದಷ್ಟೇ ನಂಬಬಹುದು.

ಮಂಕಿಪಾಕ್ಸ್ ಸೋಂಕಿನ ಸಮಯದಲ್ಲಿ ಕೆಲವು ಜಾಗ್ರತೆ ವಹಿಸಬೇಕು. ಅನಗತ್ಯವಾಗಿ ಯಾರ ಸಂಪರ್ಕಕ್ಕೂ ಬರಬಾರದು. ರೋಗದಿಂದ ಬಳಲುವವರನ್ನು ಪ್ರತ್ಯೇಕವಾಗಿ ಚೇತರಿಸಿಕೊಳ್ಳಲು ಬಿಡಬೇಕೇ ಹೊರತು, ಅವರ ಸಾಮಾಜಿಕ ಭೇಟಿಗೆ ಹೋಗಬಾರದು. ರೋಗಿಗಳು ತಮ್ಮನ್ನು ತಾವು ಇತರರಿಂದ ದೂರವಿರಿಸಬೇಕು. ಇತರರಿಂದ ಪ್ರತ್ಯೇಕಗೊಳ್ಳುವ ತರಬೇತಿಯನ್ನು ಕೋವಿಡ್-19 ಕಾಯಿಲೆ ಈಗಾಗಲೇ ಎಲ್ಲರಿಗೂ ನೀಡಿದೆ. ಅದೇ ಮಾಪನಗಳನ್ನು ಇಲ್ಲಿಯೂ ಅನುಸರಿಸಬೇಕು. ಚರ್ಮದ ಮೇಲಿನ ಬೊಕ್ಕೆಗಳನ್ನು ವಾತಾವರಣಕ್ಕೆ ತೆರೆದಿಡಬಾರದು; ಅವು ಮುಚ್ಚುವಂತೆ ಬಟ್ಟೆ ಧರಿಸಬೇಕು. ಬಾಯಿಯ ಒಳಗೆ ಬೊಕ್ಕೆ, ವ್ರಣ ಆದವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಯಾವುದೇ ರೋಗಿಯ ಚರ್ಮದ ಜೊತೆಗೂ ನೇರ ಸಂಪರ್ಕಕ್ಕೆ ಬರಬಾರದು. ಕೋವಿಡ್-19 ಸೊಂಕಿನ ಕಾಲದಲ್ಲಿ ಅನುಸರಿಸಿದಂತೆ ನಿಯಮಿತವಾಗಿ ಸಾಬೂನು ಬಳಸಿ ಕೈತೊಳೆಯಬೇಕು. ಸಾಬೂನು ಇಲ್ಲದಿದ್ದಲ್ಲಿ ಸ್ಯಾನಿಟೈಸರ್ ಬಳಸಬಹುದು. ಮಂಕಿಪಾಕ್ಸ್ ರೋಗಿಗಳ ಆರೈಕೆ ಮಾಡುವವರು ಈ ವಿಷಯದಲ್ಲಿ ಕಟ್ಟೆಚ್ಚರ ವಹಿಸಬೇಕು. ರೋಗಿ ಬಳಸಿರುವ ಬಟ್ಟೆಗಳನ್ನು ಪ್ರತ್ಯೇಕವಾಗಿ ಬಿಸಿನೀರಿನಲ್ಲಿ ನೆನೆಸಿ, ಸಾಬೂನು ಬಳಸಿ ಒಗೆಯಬೇಕು. ಅವನ್ನು ಇತರರ ಬಟ್ಟೆಗಳ ಜೊತೆಗೆ ಸೇರಿಸಬಾರದು. ಅಂತೆಯೇ, ರೋಗಿ ಆಹಾರ ಸೇವಿಸುವ ತಟ್ಟೆ, ಬಟ್ಟಲುಗಳನ್ನೂ ಪ್ರತ್ಯೇಕವಾಗಿಯೇ ತೊಳೆಯಬೇಕು. ಅವರ ಬೊಕ್ಕೆಗಳ ಚಿಕಿತ್ಸೆಯಲ್ಲಿ ಬರುವ ವೈದ್ಯಕೀಯ ತ್ಯಾಜ್ಯವನ್ನು ತಜ್ಞರ ಸಲಹೆಯಂತೆ ನಿರ್ವಹಿಸಬೇಕು.

ಮಂಕಿಪಾಕ್ಸ್ ಸೋಂಕು ತಗುಲಿದ ಅನುಮಾನವಿದ್ದರೆ ಕೂಡಲೇ ಕುಟುಂಬದ ಇತರ ಸದಸ್ಯರಿಂದ ಪ್ರತ್ಯೇಕಗೊಳ್ಳಬೇಕು ಹಾಗೂ ವೈದ್ಯರನ್ನು ಸಂಪರ್ಕಿಸಬೇಕು. ಮಂಕಿಪಾಕ್ಸ್ ಅನ್ನು ನಿರ್ವಹಿಸುವ ನಿರ್ದಿಷ್ಟ ಕಾರ್ಯಸೂಚಿ ಲಭ್ಯವಿದೆ. ಆಯಾ ವ್ಯಕ್ತಿಯ ವೈಯಕ್ತಿಕ ಅಪಾಯದ ಅಂಶಗಳನ್ನು ಗಮನಿಸಿ ವೈದ್ಯರು ಸೂಕ್ತ ಮಾರ್ಗದರ್ಶನ ನೀಡುತ್ತಾರೆ. ತೀವ್ರವಾದ ಕಾಯಿಲೆಗೆ ಔಷಧಗಳೂ ಲಭ್ಯವಿವೆ. ಇಂತಹ ವೈಜ್ಞಾನಿಕ ಚಿಕಿತ್ಸೆ ಬಹಳ ಪರಿಣಾಮಕಾರಿಯಾಗಿದೆ; ಯಾವುದೇ ಆತಂಕಕ್ಕೆ ಕಾರಣವಿಲ್ಲ. ಸದ್ಯಕ್ಕೆ ಮಂಕಿಪಾಕ್ಸ್ ವಿರುದ್ಧ ಪರಿಣಾಮಕಾರಿಯದ ಲಸಿಕೆ ವ್ಯಾಪಕವಾಗಿ ಲಭ್ಯವಿಲ್ಲ; ಎಚ್ಚರವಾಗಿರುವುದೊಂದೇ ದಾರಿ.

ಮಂಕಿಪಾಕ್ಸ್ ಹೊಸ ಕಾಯಿಲೆಯೇನಲ್ಲ. ಆಫ್ರಿಕದ ಹಲವಾರು ದೇಶಗಳಲ್ಲಿ ಇದು ಸಾಮಾನ್ಯ ಸಮಸ್ಯೆ. 1970 ರಲ್ಲೂ ಮಂಕಿಪಾಕ್ಸ್ ಇದೇ ರೀತಿಯಲ್ಲಿ ಹಲವಾರು ದೇಶಗಳಲ್ಲಿ ತನ್ನ ಆರ್ಭಟ ತೋರಿತ್ತು. ಅದೇ ಮಾದರಿ 2022ರಲ್ಲೂ ಕಂಡುಬರುತ್ತಿದೆ. ಆಫ್ರಿಕಾ ಹೊರತುಪಡಿಸಿ, ಸುಮಾರು 22 ದೇಶಗಳಲ್ಲಿ ಈವರೆಗೆ ಸುಮಾರು 260 ಮಂದಿ ಸೋಂಕಿತರಿದ್ದಾರೆ.  ಇದರ ಬಗ್ಗೆ ವೈದ್ಯವಿಜ್ಞಾನಿಗಳಿಗೆ ಸ್ಪಷ್ಟವಾದ ತಿಳುವಳಿಕೆಯಿದೆ. ಹೀಗಾಗಿ ಇದು ತೀರಾ ಸಮಸ್ಯಾತ್ಮಕ ಹಂತಕ್ಕೆ ಹೋಗುವ ಸಾಧ್ಯತೆಗಳು ಬಹಳ ಕಡಿಮೆ. ಈ ಕುರಿತಾಗಿ ಸರಿಯಾದ ಮಾಹಿತಿಯನ್ನು ತಿಳಿದಿರುವುದು ಅತ್ಯಗತ್ಯ.

---------------------------

ದಿನಾಂಕ 7/ಜೂನ್/2022 ರಂದು ಪ್ರಜಾವಾಣಿಯ ಕ್ಷೇಮ-ಕುಶಲ ವಿಭಾಗದಲ್ಲಿ ಪ್ರಕಟವಾದ ಲೇಖನ. ಕೊಂಡಿ: https://www.prajavani.net/health/monkeypox-preventive-measures-to-stop-human-to-human-transmission-942953.html

 

ಜೀವನಶೈಲಿ ಮತ್ತು ಆರೋಗ್ಯ

ಡಾ. ಕಿರಣ್ ವಿ.ಎಸ್.

ವೈದ್ಯರು

ಆರೋಗ್ಯವೆಂದರೆ ಕೇವಲ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುವುದಲ್ಲ! ವಿಶ್ವ ಆರೋಗ್ಯ ಸಂಸ್ಥೆ “ಆರೋಗ್ಯವೆಂಬುದು ಸಂಪೂರ್ಣ ದೈಹಿಕ, ಮಾನಸಿಕ, ಮತ್ತು ಸಾಮಾಜಿಕ ಯೋಗಕ್ಷೇಮದ ಸ್ಥಿತಿ; ಅದು ಕೇವಲ ಕಾಯಿಲೆಯ ಅಥವಾ ಶರೀರ ದೌರ್ಬಲ್ಯದ ಅನುಪಸ್ಥಿತಿ ಅಲ್ಲ” ಎಂದು ವ್ಯಾಖ್ಯಾನ ಮಾಡಿದೆ. ಆರೋಗ್ಯವಂತ ವ್ಯಕ್ತಿ ತನಗಷ್ಟೇ ಅಲ್ಲದೆ, ತನ್ನ ಕುಟುಂಬಕ್ಕೆ ಮತ್ತು ತಾನು ವಾಸಿಸುವ ಸಮಾಜಕ್ಕೂ ಆಸ್ತಿ. ಅಲ್ಪಾವಧಿ ಮತ್ತು ದೀರ್ಘಾವಧಿ ಆರೋಗ್ಯ ನಿರ್ವಹಣೆಯಲ್ಲಿ ಜೀವನಶೈಲಿಯ ಪಾತ್ರದ ಬಗ್ಗೆ ಮಹತ್ವದ ಅಧ್ಯಯನಗಳು ನಡೆಯುತ್ತಿವೆ.

ಜೀವನಶೈಲಿಯ ಪರಿಣಾಮ ಆರೋಗ್ಯದ ಮೇಲೆ ಪೂರಕವಾಗಿಯೂ ಆಗಬಹುದು; ವ್ಯತಿರಿಕ್ತವಾಗಿಯೂ ಆಗಬಹುದು. ಸಾವಿರಾರು ಅಧ್ಯಯನಗಳಲ್ಲಿ ಲಕ್ಷಾಂತರ ಜನರ ಜೀವನಶೈಲಿಯನ್ನು ವಿವೇಚಿಸಿದ ನಂತರ ವಿಜ್ಞಾನಿಗಳು ಉತ್ತಮ ಆರೋಗ್ಯ ನಿರ್ವಹಣೆಗೆ ಆರು ಸೂತ್ರಗಳನ್ನು ಸೂಚಿಸಿದ್ದಾರೆ. ಇವನ್ನು ನಮ್ಮ ಜೀವನಶೈಲಿಯಲ್ಲಿ ಅಳವಡಿಸಿಕೊಳ್ಳುವುದು ಆರೋಗ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

1.      ನಿಯಮಿತ ವ್ಯಾಯಾಮ: ಜೀವಿಗಳ ದೇಹವೆಂಬುದು ನಿಸರ್ಗ ವಿನ್ಯಾಸಗೊಳಿಸಿದ ಯಂತ್ರ. ಕೃತಕ ಯಂತ್ರಗಳ ಸಮಯಾನುಸಾರ ನಿರ್ವಹಣೆ ಹೇಗೆ ಮುಖ್ಯವೋ, ಶರೀರವೆಂಬ ಸಹಜ ಯಂತ್ರದ ನಿರ್ವಹಣೆಯೂ ಅಷ್ಟೇ ಮುಖ್ಯ. ಈ ನಿಟ್ಟಿನಲ್ಲಿ ವ್ಯಾಯಾಮದ ಪಾತ್ರ ಪ್ರಮುಖವಾದದ್ದು. ನಿಯಮಿತ ವ್ಯಾಯಾಮವೆಂಬುದು ಆಯ್ಕೆಯಲ್ಲ; ಶರೀರದ ನಿರ್ವಹಣೆಯ ಕಡ್ಡಾಯ ಅಂಶ. “ಎಂತಹ ವ್ಯಾಯಾಮ ಮಾಡಬೇಕು” ಎಂಬುದು ಮಾತ್ರ ವೈಯಕ್ತಿಕ ಆಯ್ಕೆ. ವ್ಯಾಯಾಮ ಆರೋಗ್ಯದ ಸಮಗ್ರ ನಿರ್ವಹಣೆಗೆ ನೆರವಾಗುತ್ತದೆ. ಮೂಳೆಗಳ, ಕೀಲುಗಳ, ಸ್ನಾಯುಗಳ ಸರಾಗ ಚಲನೆಗೆ, ಅವುಗಳಿಗೆ ಹಾನಿಯಾಗದಂತೆ ಕಾಪಾಡುವುದಕ್ಕೆ ನಿಯಮಿತ ವ್ಯಾಯಾಮ ಸಹಾಯಕಾರಿ. ವ್ಯಾಯಾಮದಿಂದ ದೀರ್ಘಕಾಲೀನ ಪ್ರಯೋಜನಗಳಿವೆ. ವೃದ್ಧಾಪ್ಯದಲ್ಲಿ ಕಾಡುವ ಕೀಲು ನೋವುಗಳು, ಬೆನ್ನು ನೋವು, ಬೊಜ್ಜು, ನಿಶ್ಶಕ್ತಿ, ಮೂಳೆಗಳ ಸವೆತ, ನಿದ್ರಾಹೀನತೆ, ಮುಂತಾದುವು ಬಹಳ ಕಾಲದಿಂದ ನಿಯಮಿತ ವ್ಯಾಯಾಮ ಮಾಡುವವರಲ್ಲಿ ಕಾಣುವ ಸಂಭವ ಕಡಿಮೆ. ಅಲ್ಲದೇ, ಹೃದ್ರೋಗ, ಮಧುಮೇಹ, ರಕ್ಷಕ ಶಕ್ತಿಯ ನ್ಯೂನತೆ, ಕೆಲವು ಬಗೆಯ ಕ್ಯಾನ್ಸರ್ ಗಳು, ಖಿನ್ನತೆ ಮುಂತಾದ ಕೆಲವು ಅಸೌಖ್ಯಗಳು ಬಾರದಂತೆ ನಿಯಮಿತ ವ್ಯಾಯಾಮ ತಡೆಯಬಲ್ಲದು.

2.     ಆಹಾರ: “ನಾವು ಏನನ್ನು ತಿನ್ನುತ್ತೇವೆಯೋ, ಅದೇ ಆಗುತ್ತೇವೆ” ಎನ್ನುವ ಮಾತಿದೆ. ಆಯುರ್ವೇದದಲ್ಲಿ ಸಾತ್ವಿಕ, ರಾಜಸಿಕ, ಮತ್ತು ತಾಮಸಿಕ ಆಹಾರಗಳ ವಿಂಗಡಣೆಯಿದೆ. ಶರೀರಕ್ಕೆ ಅಗತ್ಯವಾದ ಎಲ್ಲ ಪೋಷಕಾಂಶಗಳನ್ನು ಸರಿಯಾದ ಪ್ರಮಾಣದಲ್ಲಿ ಉಳ್ಳ ತಾಜಾ ಆಹಾರ ಆರೋಗ್ಯದ ದೃಷ್ಟಿಯಿಂದ ಬಹಳ ಒಳ್ಳೆಯದು. ಈಚೆಗೆ ಜೀವನಶೈಲಿಯ ಕಾಯಿಲೆಗಳು ಎಂದು ಕರೆಯಲಾಗುವ ಹೃದ್ರೋಗ, ಮಧುಮೇಹ, ಪಾರ್ಶ್ವವಾಯು, ಕೆಲಬಗೆಯ ಕ್ಯಾನ್ಸರ್, ಬೊಜ್ಜು ಇತ್ಯಾದಿ ಸಮಸ್ಯೆಗಳ ಮೂಲ ಆಹಾರ ಮತ್ತು ಆಹಾರಸೇವನೆಯ ದೋಷಗಳು ಎಂದು ಪರಿಗಣಿಸಲಾಗಿದೆ. ತಾಜಾ ಹಣ್ಣು, ತರಕಾರಿ, ನಾರಿನ ಅಂಶ ಅಧಿಕವಾಗಿರುವ ಸಂಪೂರ್ಣಧಾನ್ಯಗಳು, ಜಿಡ್ಡಿನ ಅಂಶ ಕಡಿಮೆ ಇರುವ ಡೇರಿ ಉತ್ಪನ್ನಗಳು, ಮೀನು, ಕಾಳು ಮೊದಲಾದುವು ಆರೋಗ್ಯರಕ್ಷಣೆಯ ಭಾಗಗಳಾಗುತ್ತಿವೆ. ಸಂಸ್ಕರಿತ ಆಹಾರಗಳನ್ನು ದೂರಮಾಡಿದಷ್ಟೂ ಆರೋಗ್ಯ ವೃದ್ಧಿಸುತ್ತದೆ ಎನ್ನುವ ಸೂತ್ರ ಮನೆಮಾತಾಗುತ್ತಿದೆ. ಕಳೆದ ಎರಡು ದಶಕಗಳಿಂದ ಆಹಾರದ ಪ್ರಮಾಣ, ಘಟಕಗಳ ಜೊತೆಯಲ್ಲಿ ಆಹಾರ ಸೇವನೆಯ ಪದ್ದತಿಗಳು, ಕ್ಲುಪ್ತ ಸಮಯಗಳ ಅರಿವು ಮೂಡುತ್ತಿದೆ; ಸಸ್ಯಾಹಾರದ ಬಗ್ಗೆ ಒಲವು ಹೆಚ್ಚುತ್ತಿದೆ. ನೈಸರ್ಗಿಕ ಜೀವನ ವಿಧಾನಗಳು ಮತ್ತು ನೈಸರ್ಗಿಕ ಆಹಾರ ಸೇವನೆ ಆರೋಗ್ಯ ರಕ್ಷಣೆಯ ಮುಖ್ಯ ಭಾಗಗಳಾಗಿವೆ.

3.     ಶರೀರತೂಕದ ನಿರ್ವಹಣೆ: ಜೀವನಶೈಲಿ ಕಾಯಿಲೆಗಳ ಪ್ರತಿನಿಧಿ ಎಂದು ಬೊಜ್ಜು ಮತ್ತು ಅಧಿಕ ಶರೀರತೂಕಗಳನ್ನು ತೋರಲಾಗುತ್ತದೆ. ಮಧ್ಯಮ ಮತ್ತು ಸಿರಿವಂತ ದೇಶಗಳಲ್ಲಿ ಅತಿ-ಪೌಷ್ಟಿಕತೆಯ ಸಮಸ್ಯೆ ತೀವ್ರವಾಗುತ್ತಿದೆ. ಅಧಿಕ ಕ್ಯಾಲೊರಿಯುಕ್ತ ಸಂಸ್ಕರಿತ ಆಹಾರ ಸೇವನೆಯಿಂದ ಬೊಜ್ಜು ರೋಗಿಗಳು ಹೆಚ್ಚುತ್ತಿದ್ದಾರೆ. ಆಹಾರದ ವಿಷಯದಲ್ಲಿ ಅಶಿಸ್ತಿನ ಕಾರಣದಿಂದ, ತಿನ್ನುವ ಆಹಾರವನ್ನು ಯಾವ ಹಂತದಲ್ಲಿ ನಿಲ್ಲಿಸಬೇಕು ಎಂದು ತಿಳಿಯದ ಕಾರಣ ಜನರು ವಿವಿಧ ಆರೋಗ್ಯ ಸಮಸ್ಯೆಗಳಿಗೆ ಒಳಗಾಗುತ್ತಿದ್ದಾರೆ. ಬೊಜ್ಜಿನ ಚಿಕಿತ್ಸೆಯಲ್ಲಿ ಯಾವುದೇ ಜಾದೂ ಮಾದರಿಯ ಪರಿಹಾರವಿಲ್ಲ ಎಂಬುದು ಪ್ರತಿಯೊಬ್ಬರಿಗೂ ನೆನಪಿರಬೇಕು. ಬೊಜ್ಜಿನ ಚಿಕಿತ್ಸೆ ಮೂಲತಃ ಜೀವನಶೈಲಿಯ ಸರಿಯಾದ ನಿರ್ವಹಣೆ. ದೀರ್ಘಕಾಲಿಕ ಸಮತೋಲನ ಆಹಾರಸೇವನೆ ಮತ್ತು ನಿಯಮಿತ ವ್ಯಾಯಾಮಗಳು ಬೊಜ್ಜಿನ ಚಿಕಿತ್ಸೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

4.    ತಂಬಾಕು ಸೇವನೆಯನ್ನು ನಿಲ್ಲಿಸುವಿಕೆ: ಕೆಟ್ಟ ಚಟಗಳಿಗೆ ಪ್ರಮುಖ ಉದಾಹರಣೆಯಾಗಿ ನಿಲ್ಲುವ ಧೂಮಪಾನ ಹಲವಾರು ಕಾಯಿಲೆಗಳಿಗೆ ಕಾರಣವಾಗಿದೆ. ಯಾವುದೇ ರೀತಿಯ ತಂಬಾಕು ಸೇವನೆಯೂ ಆರೋಗ್ಯಕ್ಕೆ ಒಳ್ಳೆಯದಲ್ಲ. ಜೀವನಶೈಲಿಗೆ ಸಂಬಂಧಿಸಿದ ಪ್ರತಿಯೊಂದು ಕಾಯಿಲೆಯೂ ತಂಬಾಕು ಸೇವನೆಯಿಂದ ಹೆಚ್ಚಾಗುತ್ತದೆ. ಅಂತೆಯೇ, ತಂಬಾಕು ಸೇವನೆ ನಿಲ್ಲಿಸಿದಲ್ಲಿ ಈ ಕಾಯಿಲೆಗಳ ಸಾಧ್ಯತೆ ಕಡಿಮೆಯಾಗುತ್ತದೆ. ಈ ಕುರಿತಾದ ಸಾಮಾಜಿಕ ಕಾಳಜಿ ಹೆಚ್ಚುತ್ತಿದ್ದರೂ ಪ್ರಪಂಚದ ಶೇಕಡಾ ಹದಿನೈದು ಮಂದಿ ಈಗಲೂ ತಂಬಾಕು ಸೇವನೆ ಮಾಡುತ್ತಾರೆ. ಇವರ ಕಾರಣದಿಂದ ಉಂಟಾಗುವ ಪರೋಕ್ಷ ಧೂಮಪಾನದಿಂದಲೂ ಜೀವನಶೈಲಿಯ ಸಮಸ್ಯೆಗಳು ಕಾಣುತ್ತವೆ. ಈ ಕಾರಣಕ್ಕೆ ಮನೆಯಲ್ಲಿ ಒಬ್ಬ ಧೂಮಪಾನಿಯಿದ್ದರೂ ಇಡೀ ಕುಟುಂಬ ಸಮಸ್ಯೆಗೆ ಒಳಗಾಗುತ್ತದೆ.

5.     ಮಾನಸಿಕ ಸಮಸ್ಯೆಗಳ ನಿರ್ವಹಣೆ: ಒತ್ತಡ, ಖಿನ್ನತೆ, ಮತ್ತು ಆತಂಕಗಳು ಪ್ರಸ್ತುತ ಜೀವನಶೈಲಿಯ ಕಾರಣದಿಂದ ಹೆಚ್ಚಾಗುತ್ತಿವೆ. ಜೀವನಶೈಲಿಯ ನಿರ್ವಹಣೆ ಮಾನಸಿಕ ಸಮಸ್ಯೆಗಳನ್ನು ತಡೆಗಟ್ಟುವಲ್ಲಿ ಮತ್ತು ನಿಯಂತ್ರಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಧನಾತ್ಮಕ ಆಲೋಚನೆಗಳು, ಕೃತಜ್ಞತೆಯ ಭಾವ, ಕ್ಷಮಾಗುಣ ಮೊದಲಾದುವು ಮಾನಸಿಕ ಸಂತುಲತೆಯನ್ನು ಹೆಚ್ಚಿಸುತ್ತವೆ.

6.     ನಿದ್ರೆ ಮತ್ತು ವಿಶ್ರಾಂತಿ: ನಿದ್ರೆ ದೈಹಿಕ ಮತ್ತು ಮಾನಸಿಕ ಆರೋಗ್ಯದ ಭಾಗ. ನಿದ್ರಾಹೀನತೆ ಮತ್ತು ವಿಶ್ರಾಂತಿಯ ಕೊರತೆಯಿಂದ ಆರೋಗ್ಯ ಕೆಡುತ್ತದೆ; ಹಾಗೂ, ಅದರಿಂದ ಪುನಃ ನಿದ್ರಾಹೀನತೆ ಕಾಡುತ್ತದೆ. ಈ ವಿಷಮಚಕ್ರ ಬಾರದಂತೆ ಜೀವನಶೈಲಿಯನ್ನು ಸರಿಯಾಗಿ ನಿರ್ವಹಿಸುವುದು ಆರೋಗ್ಯ ರಕ್ಷಣೆಯ ದೃಷ್ಟಿಯಿಂದ ಬಹಳ ಮುಖ್ಯ. ನಿಸರ್ಗದ ಸಂಪರ್ಕವನ್ನು ಅಧಿಕಗೊಳಿಸುವುದು, ಮಾಡುವ ಕೆಲಸಗಳನ್ನು ಉದ್ವೇಗವಿಲ್ಲದೆ ಮಾಡುವುದು, ಸಾಕಷ್ಟು ನಿದ್ರಿಸುವುದು, ಕಾಫಿಯಂತಹ ಉತ್ತೇಜಕ ಪೇಯಗಳನ್ನು ಕಡಿಮೆ ಸೇವಿಸುವುದು, ಆರೋಗ್ಯಕರ ದಿನಚರಿಗೆ ಬದ್ಧರಾಗುವುದು, ಸ್ನೇಹಿತರ ಜೊತೆಗಿನ ಒಡನಾಟ, ಕುಟುಂಬದ ಜೊತೆಗೆ ಕಾಲ ಕಳೆಯುವುದು – ಇವೆಲ್ಲವೂ ಮನಸ್ಸಿಗೆ ಆರಾಮ ನೀಡಿ, ನಿದ್ರಾಹೀನತೆಗೆ ಪರಿಹಾರವಾಗುತ್ತವೆ.

    ಶಿಸ್ತುಬದ್ಧ ಜೀವನ, ಮಾನಸಿಕ ನೆಮ್ಮದಿ, ಆತಂಕರಹಿತ ಬದುಕಿಗೆ ನಮ್ಮ ಹಿರಿಯರು ಬಹಳ ಒತ್ತಾಸೆ ನೀಡಿದ್ದಾರೆ. ಆಧುನಿಕ ಯುಗದಲ್ಲಿ ಆ ಹಿಂದಿನ ಪದ್ದತಿಗಳ ಮೌಲ್ಯವನ್ನು ನಾವು ವೈಜ್ಞಾನಿಕವಾಗಿ ಮತ್ತೊಮ್ಮೆ ಕಲಿಯುತ್ತಿದ್ದೇವೆ.

----------------------

2022 ಜೂನ್ ಮಾಹೆಯ "ಸೂತ್ರ" ವಿಜ್ಞಾನ ಮಾಸಪತ್ರಿಕೆಯಲ್ಲಿ ಪ್ರಕಟವಾದ ಲೇಖನ  


 ಗುಣಮಟ್ಟದ ಜೀವನಕ್ಕೆ ಹತ್ತು ಆಧಾರ ಸ್ತಂಭಗಳು

ಡಾ. ಕಿರಣ್ ವಿ.ಎಸ್.

ವೈದ್ಯರು

“ಜೀವನ ದೊಡ್ಡದಾಗಿರಬೇಕು; ಉದ್ದವಾಗಿಯಲ್ಲ” ಎಂದೋ, ಅಥವಾ “ಜೀವನದಲ್ಲಿ ಎಷ್ಟು ಕ್ಷಣಗಳಿವೆ ಎಂಬುದು ಮುಖ್ಯವಲ್ಲ; ಬದುಕಿರುವ ಪ್ರತಿಯೊಂದು ಕ್ಷಣದಲ್ಲೂ ಎಷ್ಟು ಜೀವನವಿದೆ ಎಂಬುದು ಮುಖ್ಯ” ಎನ್ನುವ ಕಾವ್ಯಾತ್ಮಕ ಮಾತುಗಳನ್ನು ಕೇಳಿರುತ್ತೇವೆ. ಜೀವನದ ಗುಣಮಟ್ಟ ಎಂದರೇನು; ಅದನ್ನು ನಿರ್ಧರಿಸುವ ಅಂಶಗಳು ಯಾವುವು ಎಂದು ಸಂತರಿಂದ ಹಿಡಿದು ವಿಜ್ಞಾನಿಗಳವರೆಗೆ ಪ್ರತಿಯೊಬ್ಬರೂ ಆಲೋಚಿಸಿರುತ್ತಾರೆ. ಈ ನಿಟ್ಟಿನಲ್ಲಿ ವೈಜ್ಞಾನಿಕ ಅಧ್ಯಯನಗಳು ಏನನ್ನು ಹೇಳುತ್ತವೆ?

1970ರ ದಶಕದಲ್ಲಿ “ಜೀವನ ಗುಣಮಟ್ಟದ ಭೌತಿಕ ಸೂಚ್ಯಂಕ” ಎನ್ನುವ ಮಾಪನ ಚಾಲ್ತಿಗೆ ಬಂದಿತು. ಅಭಿವೃದ್ದಿಯನ್ನು ಅಳೆಯಲು ಅಲ್ಲಿಯವರೆಗೆ ಆಯಾ ದೇಶದ ಉತ್ಪಾದಕತೆಯನ್ನು ಬಳಸಲಾಗುತ್ತಿತ್ತು. ಆದರೆ, ದೇಶದ ಉತ್ಪಾದಕತೆಗೂ, ಅಲ್ಲಿನ ಜನರ ಜೀವನ ಗುಣಮಟ್ಟಕ್ಕೂ ನೇರ ಸಂಬಂಧವಿಲ್ಲ ಎಂದು ಸಮಾಜವಿಜ್ಞಾನಿಗಳು ಆಗ್ರಹಿಸಿದರು. ಹೀಗಾಗಿ, ಜನರ ಜೀವನಮಟ್ಟದ ಮಾಪನಗಳಾದ ಸಾಕ್ಷರತೆ, ಜೀವಿತಾವಧಿ, ಮತ್ತು ಜನಿಸಿದವರ ಪೈಕಿ ಎಷ್ಟು ಮಕ್ಕಳು ಒಂದು ವರ್ಷದ ನಂತರವೂ ಜೀವಂತ ಇರುತ್ತಾರೆ ಎನ್ನುವ ಲೆಕ್ಕಾಚಾರಗಳ ಸರಾಸರಿಯ “ಜೀವನ ಗುಣಮಟ್ಟದ ಭೌತಿಕ ಸೂಚ್ಯಂಕ”ವನ್ನು ಮೋರಿಸ್ ಡೇವಿಡ್ ಅಭಿವೃದ್ಧಿಗೊಳಿಸಿದರು. ಇದರಲ್ಲಿ ಜನರ ಆದಾಯದ ನೇರ ಪ್ರಸ್ತಾಪ ಇಲ್ಲವೆನ್ನುವುದು ಮಹತ್ವದ ವಿಷಯ. ದೇಶದ ಆದಾಯ ಹೆಚ್ಚಿದಂತೆ ಈ ಮೂರೂ ಮಾಪನಗಳೂ ಹೆಚ್ಚಬೇಕು. ಆಗ ಮಾತ್ರ ದೇಶದ ಆದಾಯ ಸಾಮಾನ್ಯ ಜನರ ಅಭಿವೃದ್ಧಿಗೆ ಬಳಕೆ ಆಗುತ್ತಿದೆ ಎಂದರ್ಥ. ಹೀಗಾಗಿ, “ಜೀವನ ಗುಣಮಟ್ಟದ ಭೌತಿಕ ಸೂಚ್ಯಂಕ” ದೇಶದ ಒಟ್ಟಾರೆ ಪ್ರಗತಿಯ ಪರೋಕ್ಷ ಮಾಪನ ಎಂದಾಯಿತು. 2010 ರಲ್ಲಿ ವಿಶ್ವಸಂಸ್ಥೆ “ಜೀವನ ಗುಣಮಟ್ಟದ ಭೌತಿಕ ಸೂಚ್ಯಂಕ”ವನ್ನು ಬದಲಾಯಿಸಿ, “ಮಾನವ ಅಭಿವೃದ್ಧಿಯ ಸೂಚ್ಯಂಕ”ವನ್ನು ತಂದಿತು. ಇದರಲ್ಲಿ ಒಂದು ವರ್ಷದ ಮಕ್ಕಳ ಜೀವಂತತೆಯ ಸಂಖ್ಯೆಯನ್ನು ಕೈಬಿಟ್ಟು, ದೇಶದ ಜನರ ಸರಾಸರಿ ಆದಾಯವನ್ನು ಸೇರಿಸಲಾಯಿತು. ಇದಕ್ಕೆ ಎಷ್ಟೇ ವಿರೋಧಗಳೂ, ವಿಮರ್ಶೆಗಳೂ ಇದ್ದರೂ, ಬೇರೊಂದು ಪ್ರಮಾಣವತ್ತಾದ ಸೂಚ್ಯಂಕ ಬರುವವರೆಗೆ ಯಾವುದೇ ದೇಶದ ಅಭಿವೃದ್ಧಿಯ ಸಂಕೇತವಾಗಿ ಇದನ್ನೇ ಬಳಸಲಾಗುತ್ತಿದೆ.

ದೇಶ ಎನ್ನುವುದು ಪ್ರಜೆಗಳ ಸಂಘ. ಇಡೀ ದೇಶದ ಪ್ರಗತಿಯ ಸಂಕೇತವಾಗಿ ನೀಡುವ ಒಂದು ಸೂಚ್ಯಂಕ ಅಪಾರ ವೈವಿಧ್ಯದ ಪ್ರಜೆಗಳ ಬಗ್ಗೆ ವೈಯಕ್ತಿಕ ನೆಲೆಗಟ್ಟಿನಲ್ಲಿ ಹೆಚ್ಚಿನದೇನನ್ನೂ ಸೂಚಿಸುವುದಿಲ್ಲ. ಹೀಗಾಗಿ, ಪ್ರತಿಯೊಬ್ಬ ವ್ಯಕ್ತಿಯ ಮಟ್ಟದಲ್ಲಿ ಜೀವನದ ಗುಣಮಟ್ಟವನ್ನು ಸುಧಾರಿಸಬಲ್ಲ ಮಾಪನಗಳನ್ನು ತಜ್ಞರು ಸೂಚಿಸಿದ್ದಾರೆ. ಈ ಹತ್ತು ಮಾಪನಗಳನ್ನು ಪ್ರತಿಯೊಬ್ಬರೂ ತಂತಮ್ಮ ಪ್ರಯತ್ನಗಳಿಂದ, ವ್ಯವಸ್ಥೆಯ ನೆರವಿಲ್ಲದೆಯೇ ಅಭಿವೃದ್ಧಿಗೊಳಿಸಬಹುದು.

1.      ವೈಯಕ್ತಿಕ ಸಂಬಂಧಗಳು: ಜೀವನದ ಗುಣಮಟ್ಟವನ್ನು ಹೆಚ್ಚಿಸುವ ಅತ್ಯಂತ ಮಹತ್ವದ ಅಂಶ ಸಂಬಂಧಗಳು. ಇದು ಕೌಟುಂಬಿಕ, ವೃತ್ತಿಸಂಬಂಧಿ, ಸ್ನೇಹ, ಪರಿಚಯ ಯಾವುದಾದರೂ ಆಗಬಹುದು. ಸಂಬಂಧಗಳ ಸೂಕ್ಷ್ಮತೆಯನ್ನು ಗುರುತಿಸಿ, ಅದಕ್ಕೆ ತಕ್ಕಂತೆ ನಡೆದುಕೊಳ್ಳಬಲ್ಲ ಸಾಮರ್ಥ್ಯ ಇರುವವರು ತಂತಮ್ಮ ಜೀವನದ ಗುಣಮಟ್ಟವನ್ನು ಬಹುವಾಗಿ ಹೆಚ್ಚಿಸಬಲ್ಲರು. ತಮ್ಮ ಜೀವನದಲ್ಲಿ ಒಂದೇ ಒಂದು ಬದಲಾವಣೆಯನ್ನು ಮಾಡಿಕೊಳ್ಳಲು ಇಚ್ಚಿಸುವವರು ವೈಯಕ್ತಿಕ ಸಂಬಂಧಗಳನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂಬುದನ್ನು ಅಧ್ಯಯನಗಳು ಕಾಣಿಸಿವೆ. ಸಾಕಷ್ಟು ಏರಿರುವ ವೈಯಕ್ತಿಕ ಆದಾಯ, ಬೇಕಬೇಕಾದ ವಸ್ತುಗಳು ಮನೆಬಾಗಿಲಿಗೆ ಬರುವ ಸೌಲಭ್ಯಗಳ ಇಂದಿನ ದಿನಗಳಲ್ಲಿ “ನನಗೆ ಬದುಕಲು ಯಾರ ಆವಶ್ಯಕತೆಯೂ ಇಲ್ಲ” ಎನ್ನುವ ಹುಂಬತನ ಬೆಳೆಯುತ್ತಿದೆ. ಈ ಮನೋಭಾವ ದೀರ್ಘಕಾಲಿಕ ನೆಲೆಯಲ್ಲಿ ಅನೇಕ ಸಮಸ್ಯೆಗಳನ್ನು ತರುತ್ತದೆ. ಅವಲಂಬನೆಯ ಹೊರತಾಗಿಯೂ ಮಧುರವಾದ ಸಾಮಾಜಿಕ ಸಂಬಂಧಗಳನ್ನು ಬೆಳೆಸಿಕೊಳ್ಳುವುದು ಜೀವನದ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳುವ ಅತ್ಯಂತ ಸಮಂಜಸ ವಿಧಾನ.

2.     ಕೆಲಸ ಮತ್ತು ವೃತ್ತಿ: ಕೆಲಸವಿಲ್ಲದ ಮಿದುಳು ಸೈತಾನನ ಕಾರ್ಯಾಗಾರ ಎನ್ನುವ ಮಾತಿದೆ! ಕೆಲಸವೆನ್ನುವುದು ಯಾಂತ್ರಿಕವಲ್ಲ; ಅದು ನಮ್ಮ ದೇಹ, ಮನಸ್ಸು, ಬುದ್ಧಿ, ಮತ್ತು ಚಿಂತನೆಗಳನ್ನು ಏಕತ್ರಗೊಳಿಸುವ ಸಾಧನ. ಸಫಲವಾಗಿ ಮಾಡಿದ ಕೆಲಸ ಈ ನಾಲ್ಕೂ ವಿಭಾಗಗಳಿಗೆ ಸಮಾಧಾನ ನೀಡುತ್ತದೆ. ಇದರಿಂದ ಆರೋಗ್ಯ ಸುಧಾರಿಸಿ, ಜೀವನದ ಗುಣಮಟ್ಟ ವೃದ್ಧಿಸುತ್ತದೆ.

3.     ಹಣಕಾಸು: ಜೀವನದಲ್ಲಿ ಹಣಕಾಸಿನ ಸ್ಥಿರತೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಉತ್ತಮ ಗುಣಮಟ್ಟಕ್ಕೆ ಕಾರಣವಾಗುತ್ತದೆ. ಯಾವುದೇ ರೀತಿಯಿಂದ ಹಣ ಮಾಡುವ ಗೀಳು ಹಾನಿಕಾರಕವಾಗಬಲ್ಲದು. ಆದರೆ, ಮಾಡಿದ ಕೆಲಸಕ್ಕೆ ಪಡೆಯುವ ಸೂಕ್ತ ಸಂಭಾವನೆ ನೆಮ್ಮದಿಗೆ ಕಾರಣವಾಗುತ್ತದೆ. ಜೀವನದ ಅವಶ್ಯಕತೆಗಳನ್ನು ಪೂರೈಸುವ ಹಂತದವರೆಗೆ ಹಣ ಸಂಪಾದನೆ ಮಾಡುವುದು ಒಳ್ಳೆಯ ಬದುಕಿಗೆ ಆಧಾರ.

4.    ಆರೋಗ್ಯ: ಸಕ್ಷಮವಾದ ದೈಹಿಕ ಮತ್ತು ಮಾನಸಿಕ ಆರೋಗ್ಯಗಳು ಸಂತೃಪ್ತ ಬದುಕಿಗೆ ಪ್ರಮುಖ ಒತ್ತಾಸೆಗಳು. ಒಳ್ಳೆಯ ಆರೋಗ್ಯ ಜೀವನದ ಗುಣಮಟ್ಟವನ್ನು ಬೆಳೆಸಿದರೆ, ಅನಾರೋಗ್ಯದ ಸ್ಥಿತಿ ಅದನ್ನು ಇಳಿಸಬಲ್ಲದು. ಹೀಗೆ, ಆರೋಗ್ಯಕ್ಕೂ, ಜೀವನದ ಗುಣಮಟ್ಟಕ್ಕೂ ನೇರವಾದ ಸಂಬಂಧವಿದೆ.  

5.     ವಿರಾಮ: ಜಡವಾಗಿ ಬಿದ್ದುಕೊಳ್ಳುವದು ವಿರಾಮವಲ್ಲ! ದೇಹಕ್ಕೆ ಮತ್ತು ಮನಸ್ಸನ್ನು ನಿರಾಳಗೊಳಿಸುವ ಚಟುವಟಿಕೆಗಳು ವಿರಾಮ ಎನಿಸಿಕೊಳ್ಳುತ್ತವೆ. ಹಿತವೆನಿಸುವ ಹವ್ಯಾಸಗಳಲ್ಲಿ ತೊಡಗಿಕೊಳ್ಳುವುದು, ಸಂಗೀತ ಕೇಳುವುದು, ವಿಶೇಷ ಅಡುಗೆ ಮಾಡುವುದು, ಕುಟುಂಬದ ಸದಸ್ಯರ, ಸ್ನೇಹಿತರ ಜೊತೆಯಲ್ಲಿ ಯಾವುದಾದರೂ ಸಾಮಾಜಿಕ ಕೆಲಸಗಳಲ್ಲಿ ತೊಡಗಿಕೊಳ್ಳುವುದು, ಮೊದಲಾದುವು ಜೀವನದ ಗುಣಮಟ್ಟವನ್ನು ಬೆಳೆಸಲು ಕಾರಣವಾಗುತ್ತವೆ. 

6.     ಮಾನಸಿಕ ನೆಮ್ಮದಿ: ಏಕಾಗ್ರತೆ, ಧ್ಯಾನ, ಪ್ರಾಣಾಯಾಮ, ವ್ಯಾಯಾಮ ಮೊದಲಾದುವುಗಳು ಮಾನಸಿಕ ನೆಮ್ಮದಿಗೆ, ಆತ್ಮಾವಲೋಕನಕ್ಕೆ, ಸ್ವ-ನಿಯಂತ್ರಣಗಳಿಗೆ, ತನ್ಮೂಲಕ ದೈಹಿಕ ಆರೋಗ್ಯಕ್ಕೆ ಮತ್ತು ಗುಣಮಟ್ಟದ ಜೀವನಕ್ಕೆ ರಹದಾರಿ.

7.     ಆತ್ಮಗೌರವ: ಒಳ್ಳೆಯ ನಡವಳಿಕೆ, ಧನಾತ್ಮಕ ಮನೋಭಾವಗಳು, ಸಂತೃಪ್ತ ಜೀವನಶೈಲಿ ನೀಡುವ ಆತ್ಮಗೌರವದ ಭಾವ ಜೀವನದ ಗುಣಮಟ್ಟಕ್ಕೆ ಕಾರಣವಾಗುತ್ತದೆ. ಬೇರೆಲ್ಲವೂ ಇದ್ದೂ ಆತ್ಮಗೌರವದ ಭಾವ ಇಲ್ಲದಿದ್ದರೆ ಖಿನ್ನತೆಯೇ ಮೊದಲಾದ ಮಾನಸಿಕ ಅನಾರೋಗ್ಯಗಳಿಗೆ ತುತ್ತಾಗಬಹುದು ಎಂದು ಹಲವಾರು ಅಧ್ಯಯನಗಳು ತೋರಿವೆ. 

8.     ಗತಿಸಿದ ಘಟನೆಗಳ ಬಗೆಗಿನ ಮನೋಧರ್ಮ: ಜೀವನವೆನ್ನುವುದು ಸರಳರೇಖೆಯಲ್ಲ. ಅದು ಹಲವಾರು ಬೆಟ್ಟ-ಇಳಿಜಾರುಗಳ ಮೂಲಕ ಕ್ರಮಿಸುವ ಪಯಣ. ಜೀವನದ ವಾಸ್ತವಗಳ ಜೊತೆಗೆ ಎಷ್ಟು ಬೇಗ ಹೊಂದಾಣಿಕೆ ಮಾಡಿಕೊಳ್ಳುತ್ತೇವೆ ಎಂಬುದು ನಮ್ಮ ಸ್ಥಿಮಿತವನ್ನು ನಿರ್ಧರಿಸುತ್ತದೆ. ಸಂಗಾತಿಯ ಅಗಲಿಕೆ, ಕೆಲಸ ಕಳೆದುಕೊಳ್ಳುವುದು, ಆರ್ಥಿಕ ನಷ್ಟ ಮೊದಲಾದ ಸಂದರ್ಭಗಳಲ್ಲಿ ಮಾನಸಿಕ ಸಂತುಲನ ಉಳಿಸಿಕೊಳ್ಳುವವರ ಜೀವನದ ಗುಣಮಟ್ಟ ಅಧಿಕವಾಗಿರುತ್ತದೆ ಎಂದು ಮಾನಸಿಕ ತಜ್ಞರ ಅಭಿಪ್ರಾಯ.   

9.     ಮಾನಸಿಕತೆ: ಸಂತಸ ಎನ್ನುವುದು ಮಾನಸಿಕ ಸ್ಥಿತಿ. ಎಲ್ಲವೂ ಇದ್ದೂ ಏನೂ ಇಲ್ಲವೆಂದು ಕೊರಗುವವರಿಗಿಂತ ಇದ್ದ ಸ್ವಲ್ಪದಲ್ಲೇ ನೆಮ್ಮದಿ ಕಾಣುವವರ ಜೀವನದ ಗುಣಮಟ್ಟ ಹೆಚ್ಚು. ಜೀವನಪ್ರೀತಿ ಬೆಳೆಸುವ ಮಾನಸಿಕತೆಗಳು ಬದುಕಿನ ಸ್ತರವನ್ನು ಏರಿಸುತ್ತವೆ.  

10.   ಜೀವನ ನಿರ್ವಹಣೆಯ ಕೌಶಲ್ಯಗಳು: ಬದುಕು ಸಾಗಿದಂತೆಲ್ಲಾ ಅನಿವಾರ್ಯವಾಗುವ ಬದಲಾವಣೆಗಳಿಗೆ ಯಾವ ರೀತಿ ಸ್ಪಂದಿಸುತ್ತಾ ಜೀವನವನ್ನು ಸುಖಮಯವಾಗಿಸುತ್ತೇವೆ ಎಂಬುದು ಗುಣಮಟ್ಟದ ಮಾಪನ. ಬದುಕಿನ ಗಮ್ಯಗಳ ನಿರ್ಧಾರ, ಅವುಗಳ ಸಾಧನೆ, ವೃತ್ತಿಜೀವನದ ಹೊಸತುಗಳ ಕಲಿಕೆ, ಪ್ರಪಂಚದ ನಾವೀನ್ಯಗಳಿಗೆ ತೆರೆದುಕೊಳ್ಳುವಿಕೆಗಳು ಸಂತಸದಾಯಕ ಅನುಭವಗಳು.

ವಿಜ್ಞಾನಿಗಳು ಸಾಕಷ್ಟು ಅಧ್ಯಯನಗಳ ಮೂಲಕ ಕಂಡುಕೊಂಡ ಈ ಪಟ್ಟಿಯನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ, ತಲೆತಲಾಂತರಗಳಿಂದ ಇದರಂತೆಯೇ ಬಾಳಿ ಬದುಕಿದ ನಮ್ಮ ಹಿರಿಯರ ಜೀವನ ನಮ್ಮಲ್ಲಿ ಬೆರಗು ಮೂಡಿಸುತ್ತದೆ. ಸಾಂಘಿಕ ಬದುಕಿಗೆ ಬಹಳ ಮಹತ್ವ ನೀಡಿದ ತಲೆಮಾರುಗಳು ನಮ್ಮ ದೇಶದ ಸಾಮಾಜಿಕ ಐಕ್ಯತೆಗೆ ಕಾರಣವಾಗಿದ್ದವು. ಆಧುನಿಕ ಕಾಲದಲ್ಲೂ ಇದು ಜೀವನದ ಗುಣಮಟ್ಟವನ್ನು ಎತ್ತರಿಸಬಲ್ಲವು ಎಂದು ಸಿದ್ಧವಾಗಿದೆ.

-------------------

24/5/2022 ಪ್ರಜಾವಾಣಿಯ ಕ್ಷೇಮ-ಕುಶಲ ವಿಭಾಗದಲ್ಲಿ ಪ್ರಕಟವಾದ ಈ ಲೇಖನದ ಕೊಂಡಿ: https://www.prajavani.net/health/ten-tips-for-healthy-lifestyle-939086.html

 ಆರೋಗ್ಯ ಮತ್ತು ಆನಂದ

ಡಾ. ಕಿರಣ್ ವಿ.ಎಸ್.

ವೈದ್ಯರು

ಆನಂದವಾಗಿ ಬದುಕುವುದು ಪ್ರತಿಯೊಬ್ಬರ ಕನಸು. ನಾಳಿನ ಸಂತಸಕ್ಕಾಗಿ ಇಂದು ಕಷ್ಟ ಪಡಬೇಕು ಎನ್ನುವ ಧ್ಯೇಯ ಪ್ರಪಂಚದ ಬಹುತೇಕರದ್ದು. ಅಂತೆಯೇ, ಒಳ್ಳೆಯ ಆರೋಗ್ಯ ಕೂಡ. ಕಡೆಗಾಲದವರೆಗೆ ಆರೋಗ್ಯವಾಗಿ ಇರಬೇಕೆನ್ನುವ ಅಭಿಲಾಷೆ ಎಲ್ಲರದ್ದೂ ಆಗಿರುತ್ತದೆ. ಆರೋಗ್ಯಕ್ಕೂ ಆನಂದಕ್ಕೂ ಪರಸ್ಪರ ಸಂಬಂಧವಿದೆಯೇ? ಒಂದು ಮತ್ತೊಂದನ್ನು ಪ್ರಚೋದಿಸುತ್ತದೆಯೇ?

ಬಹುಕಾಲದ ದುಃಖ, ಖಿನ್ನತೆಗಳು ದೈಹಿಕ ಮತ್ತು ಮಾನಸಿಕ ಆರೋಗ್ಯಗಳನ್ನು ದುರ್ಬಲಗೊಳಿಸುತ್ತವೆ ಎಂಬುದು ಸಿದ್ಧವಾಗಿದೆ. ಇದಕ್ಕೆ ವಿಲೋಮವಾಗಿ, ಆನಂದದ ಭಾವ ಒಳ್ಳೆಯ ಆರೋಗ್ಯಕ್ಕೆ ಕಾರಣವಾಗಬಹುದು ಎಂಬ ಊಹೆ ತರ್ಕಬದ್ಧವಾದದ್ದು. ಆನಂದಕ್ಕೆ ಅನೇಕ ಆಯಾಮಗಳಿವೆ. ಸಂತಸದ ಭಾವ, ಸ್ವಾತಂತ್ರ್ಯ, ಜೀವನದ ಅರ್ಥೋದ್ದೇಶಗಳನ್ನು ಕಂಡುಕೊಳ್ಳುವಿಕೆ, ಏಳಿಗೆ, ಸಮಾಧಾನದ ಬದುಕು, ವೈಯಕ್ತಿಕ ವಿಕಸನ – ಮುಂತಾದುವು ಆನಂದದ ಪರಿಭಾಷೆಗಳು. ಉತ್ತಮ ಜೀವನಶೈಲಿ, ನಿಯಮಿತ ವ್ಯಾಯಾಮ, ಕ್ರಮಬದ್ಧ ಆಹಾರ ಮೊದಲಾದ ಪದ್ದತಿಗಳು ದೀರ್ಘಕಾಲಿಕ ಆನಂದಕ್ಕೆ ಕಾರಣವಾಗಬಲ್ಲವು. ಇವು ಸ್ವತಂತ್ರವಾಗಿಯೇ ಉತ್ತಮ ಆರೋಗ್ಯ ನೀಡಬಲ್ಲವು. ಆನಂದಕರ ಮನಸ್ಸು ಶರೀರದ ಹಾರ್ಮೋನ್ ಗಳನ್ನು ಸಮಸ್ಥಿತಿಯಲ್ಲಿ ಇಡುತ್ತದೆ; ರೋಗನಿರೋಧಕ ಶಕ್ತಿಯನ್ನು ಬೆಳೆಸುತ್ತದೆ; ಚಯಾಪಚಗಳನ್ನು ನಿಯಂತ್ರಣದಲ್ಲಿ ಇಡುತ್ತದೆ. ಇವೆಲ್ಲವೂ ಆರೋಗ್ಯದ ವಿಷಯದಲ್ಲಿ ಧನಾತ್ಮಕ ಅಂಶಗಳು.  

ಕಳೆದ ಶತಮಾನದ ದ್ವಿತೀಯಾರ್ಧದಲ್ಲಿ ಪಾಶ್ಚಾತ್ಯ ದೇಶಗಳಲ್ಲಿನ ಜೀವನ ದರ್ಶನ ಸಾಕಷ್ಟು ಬದಲಾವಣೆ ಹೊಂದಿತು. ಇಪ್ಪತ್ತನೆಯ ಶತಮಾನದ ಮೊದಲಾರ್ಧ ಎರಡು ಭೀಕರ ಮಹಾಯುದ್ಧಗಳನ್ನು ಕಂಡಿತ್ತು. ಜನಸಾಮಾನ್ಯರ ಜೀವನದ ಮೇಲೆ ಅಪಾರ ಪ್ರಭಾವ ಬೀರಿದ ಈ ಘೋರ ಯುದ್ಧಗಳು ಬದುಕಿನ ಅರ್ಥವನ್ನು ಅಲುಗಾಡಿಸಿದ್ದವು. 1954ರಲ್ಲಿ ಅಮೆರಿಕೆಯ ಪ್ರಸಿದ್ಧ ಮನೋತಜ್ಞ ಅಬ್ರಹಾಮ್ ಮಾಸ್ಲೊ “ಪ್ರತಿಯೊಂದು ಪ್ರಗತಿಯೂ ಜೀವವನ್ನು ಉಳಿಸಲು ಹೆಣಗುತ್ತಿದೆಯೇ ಹೊರತು ಬದುಕಿನ ಮೌಲ್ಯಾಭಿವೃದ್ಧಿಗೆ ಆಗುತ್ತಿಲ್ಲ” ಎಂದು ಅಭಿಪ್ರಾಯ ಪಟ್ಟಿದ್ದರು. ಆನಂತರದ ದಶಕಗಳಲ್ಲಿ ಬದುಕನ್ನು ಹೆಚ್ಚು ಒಳಿತುಗೊಳಿಸುವುದು ಹೇಗೆಂಬ ಚಿಂತನೆಗಳು, ಅಧ್ಯಯನಗಳು ನಡೆದವು.

ಜೀವನ ಸರಳ ರೇಖೆಯ ಪಯಣವಲ್ಲ; ಅದು ಹಲವಾರು ಏಳು-ಬೀಳುಗಳ ಮೂಲಕ ಹಾದುಹೋಗುವ ಕಸರತ್ತು. ಬದುಕಿನಲ್ಲಿ ಸಂತಸ ಹೊಂದಲು ಏಳುಬೀಳುಗಳನ್ನು ಸಮಾನವಾಗಿ ಗುರುತಿಸಬೇಕು; ಬೀಳುಗಳನ್ನು ನಿರಾಕರಿಸಬಾರದು ಎನ್ನುವುದು ಮನೋವೈದ್ಯರ ಅಭಿಪ್ರಾಯ. ಬದುಕನ್ನು ಸಹ್ಯವಾಗಿಸುವ ಮೂರು ಆಧಾರಗಳನ್ನು ತಜ್ಞರು ಗುರುತಿಸುತ್ತಾರೆ: ವೈಯಕ್ತಿಕ ಧನಾತ್ಮಕ ಅನುಭವಗಳು (ಆನಂದ, ತೃಪ್ತಿ); ವ್ಯಕ್ತಿ-ವಿಶೇಷ ಲಕ್ಷಣಗಳು (ಒಳ್ಳೆಯ ನಡತೆ, ಸಮಾಜದ ಅಂಗೀಕಾರ); ವ್ಯಕ್ತಿಯು ತೊಡಗಿಸಿಕೊಂಡ ಸಂಘಗಳು (ಕುಟುಂಬ, ಕೆಲಸದ ತಾಣ, ಸಾಮಾಜಿಕ ಚಟುವಟಿಕೆಗಳ ಕೇಂದ್ರಗಳು). ಈ ಎಲ್ಲೆಡೆ ಉತ್ತಮ ಫಲಿತಾಂಶಗಳು ದೊರೆಯುತ್ತಿದ್ದರೆ ವ್ಯಕ್ತಿಯ ಆನಂದದ ಮಟ್ಟ ಏರುತ್ತದೆ. ಅಂತೆಯೇ, ಜೀವನದ ಪಯಣ ಇಳಿಮುಖವಾದಾಗ ಈ ಎಡೆಗಳಲ್ಲಿನ ಉತ್ತಮ ಸಂಬಂಧಗಳು ವ್ಯಕ್ತಿಯ ಆಧಾರಕ್ಕೆ ನಿಲ್ಲುತ್ತವೆ; ಕಷ್ಟಗಳನ್ನು ಸಹ್ಯವಾಗಿಸುತ್ತವೆ. ಈ ರೀತಿಯಲ್ಲಿ ಕೌಟುಂಬಿಕ ಮತ್ತು ಸಾಮಾಜಿಕ ಬೆಂಬಲವಿರುವ ವ್ಯಕ್ತಿಗಳು ದೈಹಿಕ ಮತ್ತು ಮಾನಸಿಕ ಅನಾರೋಗ್ಯಗಳಿಂದ ಬೇಗನೆ ಚೇತರಿಸಿಕೊಳ್ಳುತ್ತಾರೆ ಎಂದು ಹಲವಾರು ಸಂಶೋಧನೆಗಳು ತಿಳಿಸಿವೆ.

ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯವೂ ಮುಖ್ಯ. ವಿಶ್ವ ಆರೋಗ್ಯ ಸಂಸ್ಥೆ ಮಾನಸಿಕ ಆರೋಗ್ಯವನ್ನು “ವ್ಯಕ್ತಿಯು ತನ್ನ ಸ್ವಂತ ಸಾಮರ್ಥ್ಯವನ್ನು ಅರ್ಥಮಾಡಿಕೊಳ್ಳಬಲ್ಲ, ಜೀವನದ ಸಾಮಾನ್ಯ ಒತ್ತಡಗಳನ್ನು ನಿರ್ವಹಿಸಬಲ್ಲ, ತನಗೆ, ತನ್ನ ಕುಟುಂಬಕ್ಕೆ, ತನ್ನ ಸಮಾಜಕ್ಕೆ ಫಲದಾಯಕವಾಗುವಂತಹ ಕೆಲಸಗಳನ್ನು ಮಾಡಬಲ್ಲ, ಒಟ್ಟಾರೆ ತಾನು ವಾಸಿಸುವ ವ್ಯವಸ್ಥೆಗೆ ಧನಾತ್ಮಕ ಕಾಣಿಕೆಯನ್ನು ನೀಡಬಲ್ಲ ಸ್ಥಿತಿ” ಎಂದು ವ್ಯಾಖ್ಯಾನಿಸಿದೆ. ಅಂದರೆ, ವೈಯಕ್ತಿಕ ಮತ್ತು ಸಾಂಘಿಕ ಜೀವನಕ್ಕೆ ನೆರವಾಗಬಲ್ಲ ಆರೋಗ್ಯಕರ ಮನಸ್ಥಿತಿಯನ್ನು ಮಾನಸಿಕ ಆರೋಗ್ಯ ಎನ್ನಬಹುದು.

ಸಂತಸದ ಮೂಲಗಳು ಯಾವುವು? ಯಾವುದೇ ವ್ಯಕ್ತಿ ಮೂರು ವಿಧಗಳಿಂದ ಆನಂದ ಪಡೆಯಬಹುದು: ಇತರರಿಗೆ ಒಳಿತನ್ನು ಮಾಡುವುದರಿಂದ; ತನಗೆ ನೈಪುಣ್ಯವಿರುವ ಕೆಲಸಗಳನ್ನು ಮಾಡುವುದರಿಂದ; ಮತ್ತು ತನ್ನ ಸ್ವಂತಕ್ಕೆ ಮತ್ತು ಕುಟುಂಬಕ್ಕೆ ಒಳಿತನ್ನು ಮಾಡುವುದರಿಂದ. ಈ ಮೂರೂ ರೀತಿಯ ಕೆಲಸಗಳು ದೈಹಿಕ ಮತ್ತು ಮಾನಸಿಕ ಸಂತುಲನಗಳಿಗೆ ಕಾರಣವಾಗುತ್ತವೆ. ಇದು ಉತ್ತಮ ಆರೋಗ್ಯಕ್ಕೂ, ಅನಾರೋಗ್ಯದಿಂದ ಶೀಘ್ರವಾಗಿ ಚೇತರಿಸಿಕೊಳ್ಳುವುದಕ್ಕೂ ನೆರವಾಗುತ್ತವೆ. ದೀರ್ಘಕಾಲಿಕ ಕಾಯಿಲೆಗಳಿಂದ ಬಳಲುವವರೂ ತಮ್ಮ ನೆಚ್ಚಿನ ಕೆಲಸಗಳನ್ನು ಮಾಡುವಾಗ ನೋವನ್ನು ಮರೆಯುತ್ತಾರೆ. ಅಂತಹ ಸಂದರ್ಭಗಳಲ್ಲಿ ಅವರ ಔಷಧಗಳು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ ಎಂದು ಸಿದ್ಧವಾಗಿದೆ. ಶರೀರದ ಸಹಜ ರೋಗನಿರೋಧಕ ವ್ಯವಸ್ಥೆ ಇಂತಹ ಸಂಧರ್ಭಗಳಲ್ಲಿ ಹೆಚ್ಚು ಚುರುಕಾಗಿರುತ್ತದೆ.

2005 ರಲ್ಲಿ ಪ್ರಕಟವಾದ ಅಧ್ಯಯನವೊಂದರಲ್ಲಿ ಬ್ರಿಟನ್ನಿನ ಸಂಶೋಧಕರು ಶರೀರದ ಜೈವಿಕ ಕ್ರಿಯೆಗಳ ಮೇಲೆ ಸಂತಸದ ಮನಸ್ಥಿತಿಯ ಪರಿಣಾಮಗಳನ್ನು ಅಳೆದರು. ಸತತ ಮೂರು ವರ್ಷಗಳ ಕಾಲ ನಡೆಸಿದ ಈ ಸಂಶೋಧನೆಯಲ್ಲಿ ಮಧ್ಯವಯಸ್ಕ ವ್ಯಕ್ತಿಗಳ ಮೇಲೆ ಆಯಾ ದಿನದ ಕೆಲಸದ ಕೊನೆಯಲ್ಲಿ ಅವರ ಆನಂದದ ಸ್ಥಿತಿಯನ್ನು ಶರೀರದ ಸಹಜ ಸ್ಟೀರಾಯ್ಡ್ ಹಾರ್ಮೋನುಗಳ ಮಟ್ಟ; ಒತ್ತಡದ ಸಮಯದಲ್ಲಿ ಬಿಡುಗಡೆಯಾಗುವ ರಾಸಾಯನಿಕಗಳ ಮಟ್ಟ; ಹೃದಯ ಬಡಿತದ ಗತಿ; ರಕ್ತದ ಒತ್ತಡ ಮೊದಲಾದುವುಗಳ ಜೊತೆಯಲ್ಲಿ ಹೋಲಿಕೆ ಮಾಡಿದರು. ಒಂದೇ ರೀತಿಯ ಕೆಲಸ ಮಾಡುವ, ಸರಿಸುಮಾರು ಒಂದೇ ವಯಸ್ಸಿನ, ಒಂದೇ ರೀತಿಯ ಸಾಮಾಜಿಕ ಹಿನ್ನೆಲೆಯ ವ್ಯಕ್ತಿಗಳ ಮಧ್ಯೆ ಸಂತಸದ ಮನಸ್ಥಿತಿ ಉಳ್ಳವರು ಹೆಚ್ಚು ಆರೋಗ್ಯಶಾಲಿಗಳೂ, ಕಡಿಮೆ ಕಾಯಿಲೆ ಬೀಳುವವರೂ, ಅನಾರೋಗ್ಯಗಳಿಂದ ಬೇಗನೇ ಚೇತರಿಸಿಕೊಳ್ಳುವವರೂ ಆಗಿದ್ದರು. ಈ ರೀತಿಯ ಪರಿಣಾಮಗಳು ವೃದ್ಧಾಪ್ಯಕ್ಕೂ ವಿಸ್ತರಿಸುತ್ತವೆ ಎಂದು ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ. ಅಂದರೆ, ಸಂತಸದ ಮನಸ್ಥಿತಿ ಉಳ್ಳವರ ವೃದ್ಧಾಪ್ಯ ಹೆಚ್ಚು ಆರೋಗ್ಯಕರವೂ, ಫಲಕಾರಿಯೂ, ಮತ್ತು ಧನಾತ್ಮಕವೂ ಆಗಿರುತ್ತದೆಂದು ಅವರ ಅಭಿಮತ. ಆನಂತರ ನಡೆದಿರುವ ಹಲವಾರು ಅಧ್ಯಯನಗಳು ಈ ಮಾತನ್ನು ಪುಷ್ಟೀಕರಿಸಿವೆ.

ಈ ಮಾತಿಗೆ ವಿರುದ್ಧವಾಗಿ ಋಣಾತ್ಮಕ ಯೋಚನೆಗಳ, ಸಣ್ಣಪುಟ್ಟ ವಿಷಯಗಳಿಗೂ ಆತಂಕಿತರಾಗಿ ದುಃಖಪಡುವ ವ್ಯಕ್ತಿಗಳ ಅಧ್ಯಯನಗಳೂ ನಡೆದಿವೆ. 2006 ರಲ್ಲಿ ಅಮೆರಿಕೆಯಲ್ಲಿ ನಡೆಸಿದ ಸಂಶೋಧನೆಯಲ್ಲಿ ಸರಿಸುಮಾರು ಒಂದೇ ವಯಸ್ಸಿನ, ಅಜಮಾಸು ಒಂದೇ ರೀತಿಯ ಸಾಮಾಜಿಕ ಹಿನ್ನೆಲೆಯ 334 ಜನರಿಗೆ ಒಂದು ವಿಧದ ಲಸಿಕೆಯನ್ನು ನೀಡಲಾಯಿತು. ಸಂತಸದ ಮನಸ್ಥಿತಿಯ ಮಂದಿಯಲ್ಲಿ ಈ ಲಸಿಕೆಗೆ ಉತ್ತಮ ರೋಗನಿರೋಧಕ ಪ್ರತಿಕಾಯಗಳು ಉತ್ಪತ್ತಿಯಾದವು. ಇದಕ್ಕೆ ಪ್ರತಿಯಾಗಿ, ದುಃಖದ ಮನಸ್ಥಿತಿಯವರಲ್ಲಿ ಉತ್ಪತ್ತಿಯಾದ ಪ್ರತಿಕಾಯಗಳ ಮಟ್ಟ ಕಡಿಮೆಯಾಗಿತ್ತು.

ಆನಂದದ ಅನುಭೂತಿ ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ; ಶಾರೀರಿಕ ನೋವುಗಳ ಮಟ್ಟವನ್ನು ಇಳಿಸುತ್ತದೆ; ದೀರ್ಘಕಾಲಿಕ ಕಾಯಿಲೆಗಳನ್ನು ಸಹಿಸಿಕೊಳ್ಳಲು ನೆರವಾಗುತ್ತದೆ; ಒಟ್ಟಾರೆ, ಜೀವಿತದ ಅವಧಿಯನ್ನು ಮತ್ತು ಗುಣಮಟ್ಟವನ್ನು ಬೆಳೆಸುತ್ತದೆ. 2010 ರಲ್ಲಿ ಪ್ರಕಟವಾದ ಸಂಶೋಧನೆಯಲ್ಲಿ 6856 ಜನರನ್ನು ಸುಮಾರು ಮೂವತ್ತು ವರ್ಷಗಳ ಕಾಲ ಅಧ್ಯಯನ ಮಾಡಿದಾಗ, ಸಂತಸದ ಮನಸ್ಥಿತಿ ಉಳ್ಳವರು ದೀರ್ಘಕಾಲ ಆರೋಗ್ಯವಾಗಿ ಬದುಕುತ್ತಾರೆ ಎಂದು ಪತ್ತೆಯಾಯಿತು. ಅಂತೆಯೇ, ಋಣಾತ್ಮಕ ಮನಸ್ಥಿತಿಯ ಜನರ ಆಯಸ್ಸು ಮತ್ತು ಆರೋಗ್ಯದ ಮಟ್ಟ ಕಡಿಮೆ ಇರುತ್ತದೆ ಎಂದು ತಿಳಿಯಿತು.

ಜೀವನದ ಏಳು-ಬೀಳುಗಳನ್ನು ಸಮನಾಗಿ ನೋಡುವ ಯೋಗಿಯ ಮನಸ್ಥಿತಿ ಸಾಮಾನ್ಯರಿಗೆ ಸಾಧ್ಯವಾಗದೆ ಇರಬಹುದು. ಆದರೆ, ಸುಖದಲ್ಲಿ ತೀರಾ ಹಿಗ್ಗದೆ, ದುಃಖದಲ್ಲಿ ತೀರಾ ಕುಗ್ಗದೆ ಇರುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವುದು ಸಾಧ್ಯ. ಆನಂದವೆನ್ನುವುದು ಜೀವನದ ಒಂದು ಆಯ್ಕೆ. ಅದನ್ನು ಸರಿಯಾಗಿ ರೂಢಿಸಿಕೊಳ್ಳುವುದು, ರೂಪಿಸಿಕೊಳ್ಳುವುದು ನಮ್ಮ ಕೈಲಿದೆ. ಸಂತಸದ ಮನಸ್ಥಿತಿ ಆರೋಗ್ಯಕರ ಬದುಕಿಗೆ ರಹದಾರಿಯಾಗುತ್ತದೆ ಎನ್ನುವುದು ವೈಜ್ಞಾನಿಕವಾಗಿ ರೂಪಿತವಾದ ಸತ್ಯ.

------------------------------

ದಿನಾಂಕ 17/5/2022 ರಂದು ಪ್ರಜಾವಾಣಿಯ ಕ್ಷೇಮ-ಕುಶಲ ವಿಭಾಗದಲ್ಲಿ ಪ್ರಕಟವಾದ ಲೇಖನ. ಕೊಂಡಿ: https://www.prajavani.net/health/health-is-happiness-happiness-is-health-937247.html