ಗುರುವಾರ, ಜೂನ್ 28, 2018




ದೇಶದ ಅಂತಿಮ ಪ್ರಜೆ ಕೂಡ ಆರೋಗ್ಯದಿಂದ ವಂಚಿತನಾಗಬಾರದು.
ಡಾ. ಕಿರಣ್ ವಿ. ಎಸ್.
ಸರ್ಕಾರೀ ವ್ಯವಸ್ಥೆ ಪ್ರದರ್ಶಿಸುವ ಉಡಾಫೆ ಮನೋಭಾವ ನಮ್ಮ ದೇಶಕ್ಕೆ ಅಂಟಿದ ಶಾಪ. ಸರ್ಕಾರದ ನಿರ್ಲಕ್ಷ್ಯ ಧೋರಣೆಯಿಂದ ದೇಶದಲ್ಲಿ ಅತ್ಯಂತ ಕಂಗೆಟ್ಟಿರುವ ಎರಡು ಕ್ಷೇತ್ರಗಳೆಂದರೆ ಶಿಕ್ಷಣ ಮತ್ತು ಆರೋಗ್ಯ. ಯಾವುದೇ ದೇಶದ ಅಭಿವೃದ್ಧಿಗೆ ಪ್ರಾಥಮಿಕ ಅವಶ್ಯಕತೆಗಳಾದ ಈ ಎರಡೂ ಕ್ಷೇತ್ರಗಳನ್ನು ಅಭಿವೃದ್ಧಿ ಹೊಂದಿರುವ ದೇಶಗಳ ಸರ್ಕಾರಗಳು ಬಹಳ ಜತನದಿಂದ, ನಿಷ್ಠೆಯಿಂದ ಸ್ವತಃ ನಿಭಾಯಿಸುತ್ತವೆ. ಖಾಸಗಿಯವರ ಭಾಗದಾರಿಕೆ ಅಂತಹ ದೇಶಗಳಲ್ಲಿ ಬಹಳ ಕಡಿಮೆ. ಅದೇ ರೀತಿ, ಈ ಎರಡೂ ಕ್ಷೇತ್ರಗಳನ್ನು ನಿರ್ಲಕ್ಷಿಸುವ ದೇಶಗಳು ಸಂಕಷ್ಟಗಳ ಸರಮಾಲೆಯಿಂದ ಹೊರಬರಲಾರದೇ ತೊಳಲುತ್ತವೆ. ಪ್ರಸ್ತುತ ನಮ್ಮ ದೇಶದ ಪರಿಸ್ಥಿತಿಯೂ ಇದೇ.

ನೂರ ಮೂವತ್ತು ಕೋಟಿ ಜನರ ನಮ್ಮ ದೇಶದ ಆರೋಗ್ಯ ವ್ಯವಸ್ಥೆಯಲ್ಲಿ ಸರ್ಕಾರದ ಪಾಲುದಾರಿಕೆ ಎಷ್ಟು ಗೊತ್ತೇ? ಹೊರರೋಗಿಗಳಲ್ಲಿ ನೂರಕ್ಕೆ ಹದಿನೆಂಟು ಮಂದಿ ಮಾತ್ರ ಸರ್ಕಾರೀ ಆಸ್ಪತ್ರೆಗೆ ಹೋಗುತ್ತಾರೆ. ಇವರಲ್ಲಿ ಬಹಳಷ್ಟು ಜನ ಅಲ್ಲಿಗೆ ಬೇರೆ ವಿಧಿ ಇಲ್ಲದೆ ಹೋಗುತ್ತಾರೆ. ಅದಕ್ಕೆ ಕಾರಣ ಬಡತನವೋ ಅಥವಾ ಖಾಸಗೀ ಆಸ್ಪತ್ರೆಗಳ ಅನುಪಸ್ಥಿತಿಯೋ ಆಗಿರುತ್ತದೆ. ಅಂದರೆ, ಎಂಭತ್ತೆರಡು ಪ್ರತಿಶತ ಹೊರರೋಗಿಗಳ ಚಿಕಿತ್ಸೆ ಖಾಸಗೀ ಆಸ್ಪತ್ರೆ ಅಥವಾ ಕ್ಲಿನಿಕ್ ಗಳಲ್ಲಿ ನಡೆಯುತ್ತದೆ. ಶೇಕಡಾ ಎಪ್ಪತ್ತಕ್ಕಿಂತ ಹೆಚ್ಚು ಮಂದಿ ಒಳರೋಗಿ ಚಿಕಿತ್ಸೆ ಪಡೆಯಲೂ ಕೂಡ ಖಾಸಗೀ ಆಸ್ಪತ್ರೆಗಳನ್ನೇ ಅವಲಂಬಿಸಿದ್ದಾರೆ. ಇವರಲ್ಲಿ ಬಹಳಷ್ಟು ಜನ ಸಾಲ-ಸೋಲ ಮಾಡಿಯಾದರೂ ಖಾಸಗೀ ಆಸ್ಪತ್ರೆಗಳಿಗೆ ಹೋಗುತ್ತಾರೆ. ಆದರೆ ಕೈಗೆಟಕುವ ಖರ್ಚಿನ ಸರಕಾರೀ ಚಿಕಿತ್ಸಾಲಯಕ್ಕೆ ಮಾತ್ರ ಹೋಗಲಾರರು. ಅನೇಕ ಅಧ್ಯಯನಗಳಲ್ಲಿ ಈ ಮನೋಭಾವಕ್ಕೆ ಕಾರಣಗಳನ್ನು ಹುಡುಕಲಾಗಿವೆ. ಮುಖ್ಯವಾಗಿ ಸರ್ಕಾರೀ ಆಸ್ಪತ್ರೆಗಳ ಅವ್ಯವಸ್ಥೆ, ವಿಪರೀತ ಜನಸಂದಣಿ, ಅನುಕೂಲಗಳ ಕೊರತೆ, ಗಲೀಜು, ಅಶುಚಿತ್ವ, ಲಂಚಕೋರತನ, ಪ್ರತಿಯೊಂದು ಕೆಲಸಕ್ಕೂ ತಗಲುವ ವಿಪರೀತ ಸಮಯ, ಬೇರೆಬೇರೆ ವಿಭಾಗಗಳಲ್ಲಿ ಸಮನ್ವಯದ ಕೊರತೆ, ಸಿಬ್ಬಂದಿಯ ಅಮಾನವೀಯ ವರ್ತನೆ, ಸೌಕರ್ಯಗಳ ಅಲಭ್ಯತೆ ಹೀಗೆ ಹಲವಾರು ಕಾರಣಗಳನ್ನು ಪಟ್ಟಿ ಮಾಡಲಾಗಿದೆ. ಸರ್ಕಾರ ಮಾತ್ರ ಇದ್ಯಾವುದನ್ನೂ ಲೆಕ್ಕಿಸದೆ ತನ್ನ ಜಡತೆಯನ್ನು ಪ್ರದರ್ಶಿಸುತ್ತಲೇ ಇರುತ್ತದೆ.

ಈಗಾಗಲೇ ಖಾಸಗಿಯವರ ಅಧೀನದಲ್ಲಿರುವ ನಮ್ಮ ದೇಶದ ಆರೋಗ್ಯ ವ್ಯವಸ್ಥೆಯ ಭವಿಷ್ಯ ಜನರ ಹಿತದೃಷ್ಟಿಯಿಂದ ಅಷ್ಟೇನೂ ಆಶಾದಾಯಕವಾಗಿಲ್ಲ. ಸರ್ಕಾರದ ದಶಕಗಳ ನಿಷ್ಕ್ರಿಯತೆ, ಆರೋಗ್ಯ ಕ್ಷೇತ್ರಕ್ಕೆ ಹಣ ನೀಡುವಲ್ಲಿ ಮಾಡಿದ ಕಂಜೂಸಿತನ, ಜನರ ಅವಶ್ಯಕತೆಗಳಿಗೆ ಸ್ಪಂದಿಸದೇ ಕೇವಲ ಇನ್ನೊಬ್ಬರನ್ನು ದೂರುವದರಲ್ಲಿಯೇ ಕಳೆದ ಕಾಲ, ವಿಪರೀತ ಅಹಂಕಾರದ ದರ್ಪದಲ್ಲಿ ವ್ಯವಹರಿಸುವ ಅಧಿಕಾರಶಾಹಿ, ಯಾವುದೇ ಮುಂದಾಲೋಚನೆ ಇಲ್ಲದೆ ಕೆಲಸ ಮಾಡುವ ಇಲಾಖೆ - ಇವೆಲ್ಲಾ ಸರ್ಕಾರೀ ಆರೋಗ್ಯ ವ್ಯವಸ್ಥೆಯನ್ನು ಸಿಕ್ಕಾಪಟ್ಟೆ ಹಾಳುಗೆಡವಿವೆ. ತಿಂಗಳುಗಳು ಅಂತಿರಲಿ; ವರ್ಷಗಳು, ದಶಕಗಳು ಕಳೆದರೂ ಜಡ್ಡು ಹಿಡಿದ ಈ ವ್ಯವಸ್ಥೆ ಸುಧಾರಿಸುವುದು ಕಷ್ಟ. ಈ ಮಧ್ಯೆ ಖಾಸಗಿಯವರ ಹಿಡಿತ ಇನ್ನೂ ಬಲವಾಗುತ್ತಾ ಹೋಗುತ್ತವೆ. ಈಗಂತೂ ಬೃಹತ್ ಹಣ ಹೂಡಿಕೆ ಮಾಡಬಲ್ಲ ಬಹುರಾಷ್ಟ್ರೀಯ ಕಂಪೆನಿಗಳು ಕೂಡ ಈ ಕ್ಷೇತ್ರಕ್ಕೆ ಇಳಿಯುತ್ತಿವೆ. ಕಾರ್ಪೊರೇಟ್ ಆಸ್ಪತ್ರೆಗಳ ಸಂಖ್ಯೆ ದಿನೇದಿನೇ ಏರುತ್ತಿದೆ. ಸರ್ಕಾರದ ನಿರ್ಲಕ್ಷ್ಯ ಒಂದೆಡೆಯಾದರೆ ಬೃಹತ್ ಖಾಸಗೀ ಸಂಸ್ಥೆಗಳ ಮಾರುಕಟ್ಟೆ ವಿಸ್ತರಣಾ ತಂತ್ರಗಾರಿಕೆ ಇನ್ನೊಂದೆಡೆ. ಒಟ್ಟಿನಲ್ಲಿ ಜನರ ಕಷ್ಟದ ಉಳಿತಾಯವೆಲ್ಲ ಇಂಗಿ ಹೋಗುವುದೇ ಭವಿಷ್ಯ!

ಈ ನಿಟ್ಟಿನಲ್ಲಿ ಸರ್ಕಾರ ಏನು ಮಾಡಬಹುದು? ಸರ್ಕಾರೀ ಆಸ್ಪತ್ರೆಗಳನ್ನು ಉನ್ನತ ಮಟ್ಟಕ್ಕೆ ಏರಿಸಿ ಖಾಸಗಿಯವರ ಜೊತೆ ಪೈಪೋಟಿಗೆ ಇಳಿಯುವಂತೆ ಮಾಡುವುದು ದೂರದ ಮಾತು. ಪ್ರಾಮಾಣಿಕ ಪ್ರಯತ್ನ ನಡೆದರೂ ಇದಕ್ಕೆ ವರ್ಷಗಳೇ ಬೇಕಾಗಬಹುದು. ಗೋಸುಂಬೆಗಳನ್ನೂ ಮೀರಿಸುವ ನಮ್ಮ ವ್ಯವಸ್ಥೆಯ ಪರಿಪಾಠಗಳು ಇದಕ್ಕೆ ಆಸ್ಪದ ನೀಡುವುದು ಕೂಡ ಕಷ್ಟ.

ಕೆಲವು ಪರಿಹಾರಗಳನ್ನು ಸೂಚಿಸಬಹುದು. ಮೊದಲನೆಯದು – ಈಗ ಇರುವ ವ್ಯವಸ್ಥೆಯನ್ನು ಬಲಪಡಿಸುವುದು. ಆರೋಗ್ಯ ಕ್ಷೇತ್ರಕ್ಕೆ ಸರ್ಕಾರ ಈಗ ನೀಡುತ್ತಿರುವ ಅನುದಾನ ಶೇಕಡಾ 1 ಕ್ಕಿಂತಾ ಕಡಿಮೆ. ಇದು ಕನಿಷ್ಠ ಶೇಕಡಾ 2.5 ಕ್ಕೆ ಏರಬೇಕು. ಈ ರೀತಿ ಬರುವ ಅಧಿಕ ಹಣ ವ್ಯವಸ್ಥೆಯೊಳಗಿನ ದಗಾಕೋರರ ಪಾಲಾಗದಂತೆ ತಡೆಯಬೇಕು. ತಜ್ಞರ ಸಲಹೆ ಪಡೆದು ಈ ಹಣ ಜನರ ಒಳಿತಿಗೆ ಹೇಗೆ ಬಳಕೆ ಆಗಬಹುದೆಂದು ನಿರ್ಧರಿಸಿ, ಹಣ ವ್ಯವಹಾದ ನಿಯಂತ್ರಣವವನ್ನು ಕೇಂದ್ರೀಕರಿಸಬೇಕು. ದುಷ್ಟರ ಕೈಲಿ ಹಣ ಪೋಲಾಗದಂತೆ ತಡೆಯಬೇಕು.

ಎರಡನೆಯದು – ಖಾಸಗಿಯವರ ಮೇಲೆ ಸಮನ್ವಯವನ್ನು ಹೆಚ್ಚಿಸಬೇಕು. ಸರ್ಕಾರ ಅರ್ಥಹೀನ ಕಾಯಿದೆಗಳನ್ನು ಹೇರುತ್ತಾ ಹೋದರೆ ಖಾಸಗಿಯವರ ಜೊತೆ ಅಂತರ ಹೆಚ್ಚುತ್ತಲೇ ಹೋಗುತ್ತದೆ. ತನ್ನ ಗುರುತರ ಜವಾಬ್ದಾರಿಯನ್ನು ಖಾಸಗೀ ಆಸ್ಪತ್ರೆಗಳು, ವೈದ್ಯರು ನಿರ್ವಹಿಸುತ್ತಿದ್ದಾರೆ ಎಂಬ ಪ್ರಜ್ಞೆ ಸರ್ಕಾರಕ್ಕೆ ಇರಬೇಕು. ಅದಕ್ಕೆ ಸರ್ಕಾರ ಸ್ವಲ್ಪ ಕೃತಜ್ಞತೆಯನ್ನೂ ತೋರಬಹುದು! ಈ ನಿಟ್ಟಿನಲ್ಲಿ ಎರಡೂ ಪಕ್ಷದವರೂ ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಟ್ಟಿಗೆ ಕೆಲಸ ಮಾಡಬೇಕು. ಖಾಸಗಿ ಆಸ್ಪತ್ರೆಯವರಿಗೆ ವಿಧಿಸುವ ಅಧಿಕ ಸುಂಕ, ಮೇಲ್ಸ್ತರದ ವ್ಯಾಪಾರೀ ದರಗಳು, ಕಟ್ಟುನಿಟ್ಟಿನ ವ್ಯಾಪಾರೀ ಕಾಯಿದೆಗಳು, ವೈದ್ಯಕೀಯ ಉಪಕರಣಗಳ ಮೇಲಿನ ಆಮದು ಸುಂಕ ಇವನ್ನು ಸರ್ಕಾರ ಸಡಿಲಗೊಳಿಸಬೇಕು. ಇದಕ್ಕೆ ಪ್ರತಿಯಾಗಿ ಹೊರರೋಗಿಗಳು, ಸಾಮಾನ್ಯ ವಾರ್ಡ್ ನ ರೋಗಿಗಳಿಗೆ ರಿಯಾಯತಿ ದರದಲ್ಲಿ ಚಿಕಿತ್ಸೆ ಮಾಡುವಂತೆ ಒಡಂಬಡಿಕೆ ಮಾಡಿಕೊಳ್ಳಬೇಕು. ಆಸ್ಪತ್ರೆಗಳ ಲಾಭಾಂಶ ತೀರಾ ಕಡಿಮೆ ಆಗದಂತೆ ಹಣಕಾಸು ತಜ್ಞರ ಸಲಹೆ ಪಡೆದು ಇದನ್ನು ನಿಭಾಯಿಸಬೇಕು. ಖಾಸಗೀ ಆಸ್ಪತ್ರೆಗಳನ್ನು ತಮ್ಮ ವೈರಿಯಂತೆ ಕಾಣದೇ, ದೇಶದ ಆರೋಗ್ಯ ನಿರ್ವಹಣೆಯಲ್ಲಿ ಸರ್ಕಾರದ ಪಾಲುದಾರನಂತೆ ಮಾನ್ಯತೆ ನೀಡಬೇಕು. ಉತ್ತಮ ಕಾರ್ಯಸಂಬಂಧದ ನಿರ್ಮಾಣ ಆಗಬೇಕು.

ಮೂರನೆಯದು – ಎಂ ಬಿ ಬಿ ಎಸ್ ವ್ಯಾಸಂಗದ ವಿಧಾನವನ್ನು ಬದಲಾಯಿಸಬೇಕು. ಸೈದ್ಧಾಂತಿಕ ವ್ಯಾಸಂಗವನ್ನು ಮಿತಿಗೊಳಿಸಿ ಪ್ರಾಯೋಗಿಕ ಅಂಶಗಳ ಕಡೆ ಹೆಚ್ಚು ಒತ್ತು ನೀಡುವ ಪಠ್ಯಕ್ರಮ ಜಾರಿಗೆ ಬರಬೇಕು. ಎಂ ಬಿ ಬಿ ಎಸ್ ಅಂತಿಮ ಪರೀಕ್ಷೆಯ ನಂತರದ ತರಬೇತಿ ಅವಧಿಯನ್ನು ಜಿಲ್ಲಾಸ್ಪತ್ರೆ ಅಥವಾ ತಾಲೂಕು ಆಸ್ಪತ್ರೆಗಳಲ್ಲಿ ಮಾಡಿಸಬೇಕು. ವಿದ್ಯಾರ್ಥಿಗಳಿಗೆ ಅಲ್ಲಿ ಕೈಯಾರೆ ಕಲಿಯಲು ಅವಕಾಶಗಳು ದೊರೆಯುತ್ತವೆ. ಅಲ್ಲದೇ ಅಂತಹ ಆಸ್ಪತ್ರೆಗಳ ಹಿರಿಯ ವೈದ್ಯರಿಗೆ ಅಗತ್ಯವಾಗಿ ಬೇಕಾದ ನುರಿತ ಸಹಾಯಕರೂ ದೊರೆತಂತಾಗುತ್ತದೆ. ಇದರ ಜೊತೆ, ವ್ಯಾಸಂಗದ ನಂತರ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಸೇವೆ ಒದಗಿಸುವ ನವವೈದ್ಯರಿಗೆ ಹಣ ಸಹಾಯ ಒದಗಿಸಿ ಐದು ವರ್ಷಗಳ ಕರಾರು ಪತ್ರವನ್ನೂ ಮಾಡಬಹದು. ಆರೋಗ್ಯ ಸೇವೆಗಳು ನಗರದಿಂದ ವಿಕೇಂದ್ರಿತಗೊಂಡು ಗ್ರಾಮೀಣ ಪ್ರದೇಶಗಳನ್ನೂ ತಲುಪಬೇಕು. 

ನಾಲ್ಕನೆಯದು – ಕಾರ್ಪೊರೇಟ್ ಕಂಪೆನಿಗಳಿಗೆ ಸಾಮಾಜಿಕ ಜವಾಬ್ದಾರಿಯ ಹೆಸರಿನಲ್ಲಿ ಅವರ ಲಾಭಾಂಶದ ಶೇಕಡಾ ಎರಡನ್ನು ಸಮಾಜಮುಖಿ ಕಾರ್ಯಗಳಿಗೆ ವಿನಿಯೋಗಿಸಲು ಪ್ರೇರೆಪಿಸಲಾಗಿದೆ. ಅಂತೆಯೇ, ಇಂತಹ ಹಲವು ಕಂಪೆನಿಗಳಿಗೆ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಸೇವೆಗಳನ್ನು ಒದಗಿಸುವ ಜವಾಬ್ದಾರಿ ನೀಡಬೇಕು. ಒಂದು ಹೋಬಳಿ ಅಥವಾ ಸಣ್ಣ ತಾಲೂಕು ಕೇಂದ್ರದಲ್ಲಿ ಹೊರರೋಗಿ ವಿಭಾಗ ಅಥವಾ ಸಣ್ಣ ಆಸ್ಪತ್ರೆಯನ್ನು ಸ್ಥಾಪಿಸಿ ಸಂಪೂರ್ಣವಾಗಿ ಆ ಕಂಪನಿಯೇ ಉಚಿತವಾಗಿಯೋ ಇಲ್ಲವೇ ಸಾಂಕೇತಿಕವಾದ ಶುಲ್ಕಕ್ಕೋ ನಡೆಸಬೇಕು. ಇದರಲ್ಲಿ ಕೆಲಸ ಮಾಡುವ ವೈದ್ಯರಿಗೆ ಆಯಾ ಕಂಪೆನಿ ಉದ್ಯೋಗಿಗಳ ಭತ್ಯೆ ಮತ್ತು ಇತರ ಪ್ರಯೋಜನಗಳನ್ನು ನೀಡಬೇಕು. ಆಗ ಇಂತಹ ಸ್ಥಳಗಳಲ್ಲಿ ಕೆಲಸ ಮಾಡಲು ಹಲವಾರು ವೈದ್ಯರು ಮುಂದಾಗುತ್ತಾರೆ. ಹೀಗೆ ಸೌಲಭ್ಯ ವಂಚಿತ ಪ್ರದೇಶಗಳೂ ಆರೋಗ್ಯ ಕ್ಷೇತ್ರದ ವ್ಯಾಪ್ತಿಗೆ ಬರಬೇಕು.

ಐದನೆಯದು – ಸರ್ಕಾರ ಆರೋಗ್ಯ ವಿಮೆಯ ಸಂಪೂರ್ಣ ಉಸ್ತುವಾರಿ ವಹಿಸಬೇಕು. ತೀರಾ ಕಡಿಮೆ ಬೆಲೆಯಲ್ಲಿ ವಾರ್ಷಿಕ ಎರಡು ಲಕ್ಷ ರೂಪಾಯಿವರೆಗಿನ ಕುಟುಂಬ ಆರೋಗ್ಯ ವಿಮೆ ಎಲ್ಲರಿಗೂ ನೀಡುವಂತೆ ಮಾಡಬೇಕು. ನಂತರ ಪ್ರತಿಯೊಂದು ಲಕ್ಷದ ಸ್ತರಕ್ಕೂ ಈ ಬೆಲೆಯನ್ನು ಘಾತ ರೂಪದಲ್ಲಿ ಏರಿಸುತ್ತಾ ಹೋಗಬಹುದು. ದೇಶದಲ್ಲಿನ ಅರ್ಧದಷ್ಟು ಕುಟುಂಬಗಳು ಈ ವಿಮೆಯ ಅಡಿಯಲ್ಲಿ ಬಂದರೂ ಕೆಲವೇ ವರ್ಷಗಳಲ್ಲಿ ದೇಶದ ಆರೋಗ್ಯ ಕ್ಷೇತ್ರದ ನಕ್ಷೆಯೇ ಬದಲಾಗಿ ಹೋಗುತ್ತದೆ. ಸರ್ಕಾರೀ ಆಸ್ಪತ್ರೆಗಳಲ್ಲಿನ ಜನಸಂದಣಿ ಇಳಿದು ಅಲ್ಲಿನ ಸೇವೆಗಳು ಉತ್ತಮಗೊಳ್ಳುತ್ತವೆ. ಖಾಸಗೀ ವಲಯ ಇನ್ನೂ ಸ್ಪರ್ಧಾತ್ಮಕವಾಗುತ್ತದೆ. ಆದರೆ, ವಿಮೆಯ ಹಣದಲ್ಲಿ ಯಾವುದೇ ಆವ್ಯವಹಾರ ಆಗದಂತೆ ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ತಂತ್ರಜ್ಞಾನದ ಸಂಪೂರ್ಣ ಸಹಕಾರ ಪಡೆಯಬೇಕು. ಯಾವುದೇ ಆಸ್ಪತ್ರೆ ಅವ್ಯವಹಾರದಲ್ಲಿ ಭಾಗಿಯಾಗಿರುವುದು ಧೃಡಪಟ್ಟರೆ ಕಟ್ಟುನಿಟ್ಟಾದ ಕ್ರಮ ಜರುಗಿಸಬೇಕು.

ಆರನೆಯದು – ವೈದ್ಯಕೀಯ ಕ್ಷೇತ್ರವನ್ನು ಸ್ವಾಯತ್ತಗೊಳಿಸಬೇಕು. ಸರ್ಕಾರ ಕೇವಲ ಮೇಲ್ವಿಚಾರಕನಂತೆ, ಮಾರ್ಗದರ್ಶಕನಂತೆ ಇರಬೇಕೇ ಹೊರತು ಜಿಗುಟಿನ ಯಜಮಾನನಂತೆ ಇರಬಾರದು! ಇದಕ್ಕೆ ಮುಖ್ಯವಾಗಿ ಭಾರತೀಯ ಆಡಳಿತ ಸೇವೆ, ಪೋಲೀಸ್ ಸೇವೆ ಇರುವಂತೆ ಭಾರತೀಯ ಆರೋಗ್ಯ ಸೇವೆ ಕೂಡ ಇರಬೇಕು. ಯೋಜನೆಗಳ ನಿರ್ಧಾರ, ಕಾರ್ಯಗತಗೊಳಿಸುವಿಕೆ, ಹಣಕಾಸು ನಿಯಂತ್ರಣ, ಸುಪರ್ದಿ, ಅಪರಾಧ ಪ್ರಕರಣಗಳ ವಿಚಾರಣೆ ಮತ್ತು ಶಿಕ್ಷೆ – ಇವೆಲ್ಲಾ ಈ ಸ್ವಾಯತ್ತ ಸಂಸ್ಥೆಯ ಅಧೀನದಲ್ಲಿ ಇರಬೇಕು. ಪ್ರಾಮಾಣಿಕರು ಬೆಳೆಯುವಂತಹ ಪ್ರೋತ್ಸಾಹ, ಉತ್ತೇಜನದ ವಾತಾವರಣ ಇರಬೇಕು.

ಈ ಪಟ್ಟಿಗೆ ಇನ್ನೂ ಹಲವು ಸಲಹೆಗಳನ್ನು ಸೇರಿಸಬಹುದು. ಆದರೆ ಒಂದು ಆರಂಭ ಎಲ್ಲಕ್ಕಿಂತ ಮುಖ್ಯ. ಇದಕ್ಕೆ ರಾಜಕೀಯ ಇಚ್ಚಾಶಕ್ತಿ ಬೇಕು. ನ್ಯಾಯಾಂಗ ಸ್ವಯಂಪ್ರೇರಿತವಾಗಿ ಸರ್ಕಾರಕ್ಕೆ ಈ ನಿಟ್ಟಿನಲ್ಲಿ ಆದೇಶ ನೀಡಬೇಕು. ದೇಶದ ಅಂತಿಮ ಪ್ರಜೆ ಕೂಡ ಆರೋಗ್ಯದಿಂದ ವಂಚಿತನಾಗಬಾರದು. 

8/ಜುಲೈ/2018 ರಂದು ವಿಶ್ವವಾಣಿ ದಿನಪತ್ರಿಕೆಯಲ್ಲಿ ಪ್ರಕಟವಾದ ಲೇಖನ. 
ಯುನಿಕೋಡ್ ಕೊಂಡಿ: https://www.vishwavani.news/govt-duty-towards-public-health/
--------



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ