ಭಾನುವಾರ, ಜುಲೈ 15, 2018




ಭಾರತೀಯ ವೈದ್ಯರ “ಅತ್ತ ದರಿ – ಇತ್ತ ಪುಲಿ” ಪರಿಸ್ಥಿತಿ!
ಇಂಗ್ಲೀಶ್ ಮೂಲ: ಡಾ ನೀರಜ್ ನಾಗಪಾಲ್, ಚಂಡೀಘಡ
ಕನ್ನಡ ಭಾವಾನುವಾದ: ಡಾ ಕಿರಣ್ ವಿ ಎಸ್

ಆಧುನಿಕ ವೈದ್ಯ ಪದ್ದತಿಯ (ಜನರು ತಪ್ಪಾಗಿ ಅಲೋಪತಿ ಎಂದು ಕರೆಯುವ) ವೈದ್ಯರ ವಿರುದ್ಧ ಕಳೆದೊಂದು ದಶಕದಲ್ಲಿ ವ್ಯವಸ್ಥಿತ ಮಿಥ್ಯಾರೋಪಗಳು ಬಲವಾಗಿ ಜರುಗುತ್ತಿವೆ. ಈ ಆರೋಪಗಳ ಪ್ರಸರಣದಲ್ಲಿ ಬಹಳಷ್ಟು ಬಾರಿ ಸರ್ಕಾರ ಸ್ವತಃ ಭಾಗಿಯಾಗಿದೆ. ತಾರಕ ಸ್ವರದಲ್ಲಿ ಒಂದೇ ಸಮನೆ ಮಿಥ್ಯಾರೋಪಗಳನ್ನು ಅರಚುತ್ತಿದ್ದರೆ ಒಂದಲ್ಲ ಒಂದು ದಿನ ಸಾಮಾನ್ಯ ಜನರೂ ಅದನ್ನು ನಂಬುವಂತೆ ಆಗುತ್ತದೆ. ಮಿಥ್ಯೆ ಮತ್ತು ವಾಸ್ತವಗಳ ನಡುವಿನ ಅಂತರ ತಿಳಿಯದ ಜನರಿಗೆ ಇಂತಹ ಮಾತುಗಳು ಗೊಂದಲ ಮೂಡಿಸುತ್ತಿವೆ. ಪರಿಣಾಮವಾಗಿ ವೈದ್ಯ ಜಗತ್ತಿನ ಬಗ್ಗೆ ಜನತೆಯಲ್ಲಿ ಋಣಾತ್ಮಕ ಅಭಿಪ್ರಾಯಗಳು ಮನೆಮಾಡುತ್ತಿವೆ. ಮಗಳ ಮದುವೆಗೆ ಹಣ ಕೂಡಿಡಬೇಕು ಎಂಬ ಹಳೆಯ ಸಿದ್ಧಾಂತಕ್ಕೆ ಜೋತು ಬಿದ್ದ ನಮ್ಮ ಜನಕ್ಕೆ ಅದಕ್ಕಿಂತಲೂ ವೃದ್ಧಾಪ್ಯದ ಅವಶ್ಯಕತೆಗಳಿಗೆ ಉಳಿತಾಯ ಮಾಡಬೇಕು ಎಂಬ ತಾರ್ಕಿಕ ಸತ್ಯವನ್ನು ಅರ್ಥ ಮಾಡಿಸುವುದು ಕಷ್ಟ. ಪರಿಣಾಮವಾಗಿ, ವೃದ್ಧಾಪ್ಯದಲ್ಲಿ ಆರೋಗ್ಯ ಸಮಸ್ಯೆಗಳು ಕಾಡಿದಾಗ ಸರಕಾರೀ ಆಸ್ಪತ್ರೆಗಳಿಗೆ ಹೋಗಲೊಲ್ಲರು; ಖಾಸಗೀ ಆಸ್ಪತ್ರೆಗಳ ವೆಚ್ಚ ಭರಿಸಲು ಅಶಕ್ತರು. ಇದು ವೈದ್ಯರ ಮೇಲೆ ಮತ್ತಷ್ಟು ಅಸಮಾಧಾನ ಬೆಳೆಯಲು ಕಾರಣವಾಗುತ್ತದೆ. ಸರ್ಕಾರ ಭಾರತೀಯ ವೈದ್ಯ ಸಮುದಾಯದ ವಿರುದ್ಧ ಮಾಡುವ ಮಿಥ್ಯಾರೋಪಗಳ ಕಡೆಗೆ ಗಮನ ಹರಿಸಿದರೆ ಕೆಲವು ವಿಷಯಗಳು ಸ್ಪಷ್ಟವಾಗುತ್ತವೆ. 

1. ವೈದ್ಯರು ಗ್ರಾಮೀಣ ಭಾಗಗಳಲ್ಲಿ ಸೇವೆ ಸಲ್ಲಿಸುವುದಿಲ್ಲ – ಇದು ಬಹಳ ಪ್ರಬಲವಾಗಿ ಹರಡಿರುವ ಅಸತ್ಯ. 2012 ರ ಸರಕಾರೀ ವರದಿಗಳ ಪ್ರಕಾರ ನಮ್ಮ ದೇಶದಲ್ಲಿ ಇರುವ 28863 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಪೈಕಿ ಕೇವಲ 1750 ಕೇಂದ್ರಗಳಲ್ಲಿ ವೈದ್ಯರ ಅಲಭ್ಯತೆ ಇದೆ. ಏಕೆಂದರೆ ಈ ಕೇಂದ್ರಗಳಲ್ಲಿ ಖಾಲೀ ಇರುವ ಹುದ್ದೆಗಳಿಗೆ ಸರ್ಕಾರ ಯಾವುದೇ ಅರ್ಜಿಯನ್ನು ಆಹ್ವಾನಿಸಿಲ್ಲ! ಭಾರತದಲ್ಲಿ ಪ್ರತೀ ವರ್ಷ ಸುಮಾರು 67000 ವೈದ್ಯರು ತರಬೇತಿ ಹೊಂದಿ ಪ್ರಮಾಣಪತ್ರ ಪಡೆಯುತ್ತಾರೆ. ನಮ್ಮಲ್ಲಿ ವೈದ್ಯರ ಕೊರತೆ ಇಲ್ಲ. ಇರುವುದು ಸರ್ಕಾರದ ಇಚ್ಚಾಶಕ್ತಿಯ ಕೊರತೆ. 130 ಕೋಟಿ ಜನಸಂಖ್ಯೆಗೆ ಕೇವಲ 29000 ಪ್ರಾಥಮಿಕ ಆರೋಗ್ಯ ಘಟಕಗಳು ಸಾಕೇ? ಜನಸಂಖ್ಯೆಯ ಪ್ರಮಾಣಕ್ಕೆ ಅನುಗುಣವಾಗಿ ಕಳೆದ ಮೂವತ್ತು ವರ್ಷಗಳಿಂದ ಈ ಸಂಖ್ಯೆ ಗಣನೀಯವಾಗಿ ಏಕೆ ಏರಿಕೆ ಕಂಡಿಲ್ಲ? ಎಂದು ಯಾರೂ ಪ್ರಶ್ನಿಸುವುದಿಲ್ಲ. ಈ ಕೇಂದ್ರಗಳನ್ನು ಹೆಚ್ಚಿಸಿ, ಅಲ್ಲಿ ಕೆಲಸ ಮಾಡುವ ವೈದ್ಯರಿಗೆ ಅಗತ್ಯ ಸೌಲಭ್ಯ ಮತ್ತು ಸ್ವಾಯತ್ತತೆಯನ್ನ್ನು ಕಲ್ಪಿಸಿದರೆ ಪರಿಸ್ಥಿತಿ ಬಹಳಷ್ಟು ಸುಧಾರಿಸುತ್ತದೆ. ಇಲ್ಲಿ ಏನಾದರೂ ಮಾಡಬೇಕಾದ್ದು ಸರ್ವಶಕ್ತ ಸರ್ಕಾರವೇ ಹೊರತು ಯಾವುದೇ ಅಧಿಕಾರವಿಲ್ಲದ ವೈದ್ಯರಲ್ಲ.

೨. ಸರ್ಕಾರ ವೈದ್ಯರ ತರಬೇತಿಯ ಮೇಲೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡುತ್ತದೆ – ಪ್ರಾಯಶಃ ಭಾರತ ದೇಶ ಕಂಡ ಅತೀ ದೊಡ್ಡ ಸುಳ್ಳುಗಳಲ್ಲಿ ಇದೂ ಒಂದು! ನಮ್ಮ ದೇಶದ ಅತೀ ದೊಡ್ಡ ಸರಕಾರೀ ವೈದ್ಯಕೀಯ ಸಂಸ್ಥೆಯಾದ ಚಂಡೀಘಡದ ಸ್ನಾತಕೋತ್ತರ ವೈದ್ಯಕೀಯ ಮಹಾವಿದ್ಯಾಲಯದ ಉದಾಹರಣೆ ನೀಡಬಹುದು. ಈ ಸಂಸ್ಥೆಗೆ ಪ್ರತೀವರ್ಷ ಸರ್ಕಾರ 1200 ಕೋಟಿ ರೂಪಾಯಿ ಅನುದಾನ ನೀಡುತ್ತದೆ. ಇಲ್ಲಿ ಪ್ರತೀವರ್ಷ 25 ಲಕ್ಷ ರೋಗಿಗಳು ಚಿಕಿತ್ಸೆ ಪಡೆಯುತ್ತಾರೆ. ಅಂದರೆ ಅತ್ಯಂತ ಕಠಿಣ ಕಾಯಿಲೆಗಳಿಗೆ ಉನ್ನತ ಮಟ್ಟದ ಚಿಕಿತ್ಸೆ ಪಡೆಯುವ ಪ್ರತೀ ರೋಗಿಯ ಚಿಕಿತ್ಸೆಗೆ ಸರಾಸರಿ ರೂ 4800/- ವ್ಯಯವಾಗುತ್ತದೆ. ಈ ಮೊತ್ತವೇ ತೀರಾ ನಗಣ್ಯ! ಇನ್ನು ವೈದ್ಯರ ತರಬೇತಿಗೆ ಸರ್ಕಾರ ಯಾವ ಹಣ ಖರ್ಚು ಮಾಡಿದೆ? ಇಲ್ಲಿ ತರಬೇತಿ ಪಡೆಯುವ ವೈದ್ಯರನ್ನು ಜೀತದಾಳಿನಂತೆ ವಾರಕ್ಕೆ ಕನಿಷ್ಠ 90 ಗಂಟೆಗಳ ಕಾಲ ಕೆಲಸ ಮಾಡಿಸಲಾಗುತ್ತದೆ. ಆ ವೈದ್ಯರು ಪಡೆಯುವ ಅಲ್ಪ ಶಿಷ್ಯವೇತನಕ್ಕೆ ಇಷ್ಟು ಕೆಲಸವನ್ನು ಪ್ರಪಂಚದ ಯಾವ ನಾಗರಿಕ ಸಮಾಜವೂ ಮಾಡಿಸುವುದಿಲ್ಲ. ಒಂದು ಲೆಕ್ಕದಲ್ಲಿ ಈ ವೈದ್ಯರೇ ತಾವು ಪಡೆಯುವ ಸಂಬಳಕ್ಕಿಂತ ಅಧಿಕವಾಗಿ ದುಡಿದು ಸರ್ಕಾರಕ್ಕೆ ಕೋಟಿಗಳಷ್ಟು ಹಣ ಮಿಗಿಸುತ್ತಾರೆ! ದೇಶದ ಯಾವುದೇ ಸರಕಾರೀ ಮಹಾವಿದ್ಯಾಲಯವನ್ನು ಪರಿಗಣಿಸಿದರೂ ಇದೇ ಮಾತು ಸತ್ಯವಾಗುತ್ತದೆ. ಇದನ್ನು ಬೇರೆ ಪದವಿಗಳಿಗೆ ಹೋಲಿಸಿ ನೋಡಬಹುದು. ಪ್ರತಿಯೊಂದು ಐ ಐ ಟಿ ಯಾ ಐ ಐ ಎಂ ಸಂಸ್ಥೆಗಳಿಗೆ ಸರ್ಕಾರ ಸುಮಾರು 400 ಕೋಟಿ ರೂಪಾಯಿ ವಾರ್ಷಿಕ ಅನುದಾನ ನೀಡುತ್ತದೆ. ಆದರೆ ಅಲ್ಲಿಂದ ಸರ್ಕಾರಕ್ಕೆ ಬರುವ ವರಮಾನ ಶೂನ್ಯ! ಈ ಸಂಸ್ಥೆಗಳಲ್ಲಿ ಸರ್ಕಾರದ ಅನುದಾನದಿಂದ ಪದವಿ ಪಡೆದ ಸ್ನಾತಕರಲ್ಲಿ ಶೇಕಡಾ 90 ಜನ ವಿದೇಶಗಳಿಗೆ ಹಾರುತ್ತಾರೆ. ಆದರೆ ಕೆಟ್ಟ ಹೆಸರು ದೇಶದಲ್ಲೇ ಉಳಿದು ಕೆಲಸ ಮಾಡುವ ವೈದ್ಯರಿಗೆ! ಇದು ನಮ್ಮ ದೇಶದ ಸರಕಾರೀ ನೀತಿ! 

೩. ವೈದ್ಯರು ದುಬಾರೀ ಬೆಲೆಯ ಔಷಧಗಳನ್ನು ಬರೆದು ಕಮಿಷನ್ ಹೊಡೆಯುತ್ತಾರೆ – ಭಾರತದ ದೊಡ್ಡ ಉದ್ಯಮಗಳಾದ ಬಟ್ಟೆ ಮತ್ತು ಸೌಂದರ್ಯ ಸಾಧನಗಳ ಸಂಸ್ಥೆಗಳ ಮೇಲೆ ಸರ್ಕಾರದ ಯಾವ ನಿಯಂತ್ರಣವೂ ಇಲ್ಲ. ಅಂದರೆ ಯಾವುದೇ ಅಂಗಿಯನ್ನಾಗಲೀ, ಮುಖಕ್ಕೆ ಹಾಕುವ ಕ್ರೀಮ್ ಆಗಲೀ, ಅದನ್ನು ಯಾವುದೇ ಬೆಲೆಗೆ ಮಾರಲು ಅವರು ಸ್ವತಂತ್ರರು. ಆದರೆ ಔಷಧೋದ್ಯಮ ಹಾಗಲ್ಲ. ಔಷಧಗಳ ತಯಾರಿಕೆ ಹಾಗೂ ಬೆಲೆ ನಿಯಂತ್ರಣ ಸಂಪೂರ್ಣವಾಗಿ ಸರ್ಕಾರದ ಹತೋಟಿಯಲ್ಲಿದೆ. ಯಾವುದೋ ಒಂದು ಕಂಪೆನಿ ತನ್ನ ಔಷಧವನ್ನು ಹೆಚ್ಚು ಬೆಲೆಗೆ ಮಾರುತ್ತದೆ ಎಂದರೆ ಅದು ಸರ್ಕಾರದ ಸಂಪೂರ್ಣ ಅನುಮತಿಯ ನಂತರ ಮಾತ್ರ ಸಾಧ್ಯ. ಒಂದೇ ಔಷಧಕ್ಕೆ ಬೇರೆ ಬೇರೆ ಕಂಪೆನಿಗಳಿಗೆ ಬೇರೆ ಬೇರೆ ಬೆಲೆಗಳನ್ನು ನಿಗದಿ ಪಡಿಸಲು ಅನುಮತಿ ನೀಡುವ ಸರ್ಕಾರ ಕಡೆಗೆ ಔಷಧಗಳ ಬೆಲೆಯ ಬಗ್ಗೆ ದೂಷಿಸುವುದು ಮಾತ್ರ ವೈದ್ಯರನ್ನು! ಹೀಗೇಕೆ ಎಂದು ಕೇಳುವಂತಿಲ್ಲ. ವೈದ್ಯರು ತಮ್ಮ ಅನುಭವದಲ್ಲಿ ಒಳ್ಳೆಯದು ಎನಿಸಿದ ಒಂದೆರಡು ಕಂಪೆನಿಗಳ ಔಷಧಗಳನ್ನು ಮಾತ್ರ ತಿಳಿದುಕೊಂಡಿರುತ್ತಾರೆ. ಹೀಗಾಗಿ ಔಷಧದ ಬೆಲೆಗಳ ಬಗ್ಗೆ ನಿಯಂತ್ರಣ ವಹಿಸಬೇಕಾದ್ದು ಸರ್ಕಾರವೇ ಹೊರತು ವೈದ್ಯರಲ್ಲ. ಯಾವುದೇ ಕಂಪೆನಿ ತಯಾರಿಸಿದರೂ ಸರಿ; ಒಂದು ಔಷಧಕ್ಕೆ ಏಕರೂಪದ ಬೆಲೆಯನ್ನು ಸರ್ಕಾರ ನಿಗದಿ ಪಡಿಸಿದರೆ ವೈದ್ಯರನ್ನು ಹೀಗೆಳೆಯುವ ಪರಿಸ್ಥಿತಿಯೇ ಇಲ್ಲ. ಆದರೆ ಸರ್ಕಾರಕ್ಕೆ ಇದು ಬೇಕಿಲ್ಲ!

೪. ವೈದ್ಯರು ಕಿಡ್ನಿ ಕದಿಯುತ್ತಾರೆ – ಇದಂತೂ ಸಂಪೂರ್ಣ ಸಿನೀಮಯ ಮಾತು! ಕಿಡ್ನಿ ಪಿಕ್ ಪಾಕೆಟ್ ಮಾಡಿ ಎಗರಿಸುವಂತಹ ಅಂಗವಲ್ಲ. ಅಂಗ ಕಸಿ ವ್ಯವಸ್ಥೆಯಿಲ್ಲದ ಸರಕಾರೀ ಆಸ್ಪತ್ರೆ, ಸಣ್ಣ ನರ್ಸಿಂಗ್ ಹೋಂ ಗಳಲ್ಲಿ ಯಾರಿಂದಲೋ ಕಿಡ್ನಿ ತೆಗೆದು ಇನ್ಯಾರಿಗೋ ಹಾಕಲು ಸಾಧ್ಯವೇ ಇಲ್ಲ. ಅದನ್ನು ಕದ್ದು ಮುಚ್ಚಿ ಬೇರೆಡೆಗೆ ಸಾಗಿಸುವುದೂ ಸುಲಭವಾಗಿ ಆಗದ ಮಾತು. ನಮ್ಮಲ್ಲಿ ಅಂಗ-ಕಸಿಗೆ ಗಟ್ಟಿಯಾದ ಸರಕಾರೀ ನೀತಿ ಇಲ್ಲ. ಈ ಕಾರಣಕ್ಕೆ ಸುಮಾರು ಒಂದು ಲಕ್ಷ ರೋಗಿಗಳು ಕಿಡ್ನಿ ವೈಫಲ್ಯದಿಂದ ಪ್ರತೀ ವರ್ಷ ಪ್ರಾಣ ಕಳೆದುಕೊಳ್ಳುತ್ತಾರೆ. ಆದರೆ ಕೇಂದ್ರ ಸಚಿವರಿಗೆ ಈ ಕಷ್ಟಗಳು ಅನ್ವಯವಾಗುವುದಿಲ್ಲ. ಸಾಮಾನ್ಯ ರೋಗಿಗಳು ಹತ್ತು ವರ್ಷ ಹೆಣಗಿದರೂ ಸಿಗದ ಕಿಡ್ನಿ ಭಾಗ್ಯ ಸಚಿವರಿಗೆ ಒಂದು ವಾರದೊಳಗೆ ಲಭ್ಯವಾಗುತ್ತದೆ! ರೋಗಿಗಳಿಗೆ ಕಿಡ್ನಿಯ ಲಭ್ಯತೆಯನ್ನು ಅತ್ಯಂತ ತ್ರಾಸದಾಯಕ ಮಾಡಿರುವುದೇ ಸರ್ಕಾರದ ಹೆಗ್ಗಳಿಕೆ. ಈ ಕಾರಣಕ್ಕೆ ಕಿಡ್ನಿ ಹಗರಣದ ಜಾಲ ತಯಾರಾಗಿದೆ. ಯಾರೋ ಅಮಾಯಕರನ್ನು ಓಲೈಸಿ ಕಿಡ್ನಿ ಮಾರುವಂತೆ ಮಾಡುವ ದಲ್ಲಾಳಿಗಳು ಪ್ರತೀ ನಗರದಲ್ಲೂ ಸಿಗುತ್ತಾರೆ. ಅವರ ವ್ಯವಹಾರವೆಲ್ಲಾ ಕುದುರಿದ ಮೇಲೆ ವೈದ್ಯರ ಪ್ರವೇಶ ಆಗಬೇಕು. ಕಾನೂನಿನ ಪ್ರಕಾರ ವೈದ್ಯರಿಗೆ ಕಿಡ್ನಿಯ ದಾನಿ ಯಾರು ಎಂಬುದು ಅಪ್ರಸ್ತುತ. ಅವರ ಕೆಲಸ ಕಾಗದ ಪತ್ರಗಳು ಕಾನೂನುಬದ್ಧವಾಗಿ ಇವೆಯೇ ಎಂದು ಪರೀಕ್ಷಿಸಿ ಕಿಡ್ನಿ ಕಸಿ ಮಾಡುವುದು ಅಷ್ಟೇ. ಈ ಕಿಡ್ನಿ ದಾನಿ-ದಲ್ಲಾಳಿಗಳ ಮಧ್ಯೆ ಹಣಕಾಸಿನ ಸಮಸ್ಯೆ ಆದರೆ ಇಡೀ ಪ್ರಸಂಗ ಬೇರೆಯೇ ದಿಕ್ಕು ಪಡೆಯುತ್ತದೆ. ಸುಖಾಸುಮ್ಮನೆ ವೈದ್ಯರು ಈ ಹಗರಣಕ್ಕೆ ಬಲಿಯಾಗುತ್ತಾರೆ. ಒಮ್ಮೆ ಹೀಗೆ ಹೆಸರು ಕೆಡಿಸಿಕೊಂಡರೆ ಅವರ ವೃತ್ತಿಜೀವನವೇ ಕೊನೆಯಾದಂತೆ. ಇದೇ ಕಾರಣಕ್ಕೆ ಅಂಗ ಕಸಿ ಮಾಡುವ ಪರಿಣತ ವೈದ್ಯರು ದೇಶ ಬಿಟ್ಟು ಹೋಗುತ್ತಿದ್ದಾರೆ. ಈ ನಷ್ಟ ನಮ್ಮ ದೇಶಕ್ಕೆ ಮುಂಬರುವ ದಿನಗಳಲ್ಲಿ ಬಹಳ ದುಬಾರಿಯಾಗಲಿದೆ. ಸರ್ಕಾರ ಮನಸ್ಸು ಮಾಡಿದರೆ ಅಂಗ ಕಸಿ ವ್ಯವಸ್ಥೆಯನ್ನು ಸರಳಗೊಳಿಸಿ ರೋಗಿಗಳಿಗೆ ಮಹೋಪಕಾರ ಮಾಡಬಹುದು. ಈ ವ್ಯವಸ್ಥಿತ ಕಳ್ಳ ಮಾರುಕಟ್ಟೆಯನ್ನೂ ನಿರ್ನಾಮಗೊಳಿಸಬಹುದು. ಇದನ್ನು ಬಿಟ್ಟು ವೈದ್ಯರನ್ನು ವಿಲನ್ ಮಾಡಿ ಗಳಿಸುವುದೇನೋ ತಿಳಿಯದು.

ಇದೇ ರೀತಿ ಸ್ಟೆಂಟ್ ಗಳ ವಿಷಯ, ಅನಾವಶ್ಯಕ ಸಿಜೆರಿಯನ್ ಶಸ್ತ್ರಚಿಕಿತ್ಸೆಯ ವಿಷಯ, ರೋಗಿಯ ಮರಣದ ನಂತರವೂ ವೆಂಟಿಲೇಟರ್ ನಲ್ಲಿ ರೋಗಿಗಳನ್ನು ಉಳಿಸಿಕೊಳ್ಳುವ ವಿಷಯವಾಗಿ ಸಾಕಷ್ಟು ಮಿಥ್ಯಾರೋಪಗಳನ್ನು ವೈದ್ಯರು ನಿತ್ಯವೂ ಎದುರಿಸಬೇಕಾಗಿದೆ. ಸರ್ಕಾರಕ್ಕೆ ಬೇಕಾದ್ದು ಜನರಿಗೆ ಕೈಗೆಟುಕುವ ದರದಲ್ಲಿ ಆರೋಗ್ಯ ವ್ಯವಸ್ಥೆಯೂ ಅಥವಾ ತನ್ನ ಅಸಾಮರ್ಥ್ಯಕ್ಕೆ ವೈದ್ಯರನ್ನು ಬಲಿಪಶು ಮಾಡುವುದೋ ಎನ್ನುವುದೇ ಪ್ರಶ್ನೆ. ವೈದ್ಯವೃತ್ತಿಯನ್ನು ವ್ಯವಸ್ಥಿತವಾಗಿ ಹಣಿಯುವ ತನ್ನ ಹುನ್ನಾರದ ದೂರಗಾಮಿ ಪರಿಣಾಮಗಳು ಸರ್ಕಾರದ ಅರಿವಿಗೆ ಬಂದಂತಿಲ್ಲ. ಪ್ರಜೆಗಳ ಆರೋಗ್ಯದ ವಿಷಯದಲ್ಲಿ ಸರ್ಕಾರ ಸ್ಪಷ್ಟ ನೀತಿಯನ್ನು ತುರ್ತಾಗಿ ತಂದು ಅನುಸರಿಸುವ ಅವಶ್ಯಕತೆ ಇದೆ. ಇದು ತಡವಾದಷ್ಟೂ ದೇಶದ ಆರೋಗ್ಯ ವ್ಯವಸ್ಥೆಗೆ ಮಾರಕ ಎಂಬುದನ್ನು ನಮ್ಮ ಆಳುಗರು ಅರಿಯಬೇಕು.
------------
ದಿನಾಂಕ 17/7/2018 ರ ವಿಶ್ವವಾಣಿ ದಿನಪತ್ರಿಕೆಯಲ್ಲಿ ಪ್ರಕಟವಾದ ನನ್ನ ಅನುವಾದಿತ ಲೇಖನ. ಮೂಲ ಲೇಖಕ ಡಾ ನೀರಜ್ ನಾಗಪಾಲ್. 
ಯುನಿಕೋಡ್ ಕೊಂಡಿ: https://www.vishwavani.news/the-situation-of-indian-doctors/
 ಮೂಲ ಲೇಖಕರಾದ ಡಾ ನೀರಜ್ ನಾಗಪಾಲ್ ಅವರು ಚಂಡಿಘಡದಲ್ಲಿ ಜಠರ-ಕರುಳಿನ ತಜ್ಞ ಶಸ್ತ್ರಚಿಕಿತ್ಸಕರು. ವೈದ್ಯಕೀಯ ಕಾನೂನಿನ ವಿಷಯದ ತಜ್ಞರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ