ಮಂಗಳವಾರ, ಜೂನ್ 5, 2018




ಶ್ರೇಣೀಕೃತ ಆರೋಗ್ಯ ವ್ಯವಸ್ಥೆ: ಭಾರತ ದೇಶದ ಅವಶ್ಯಕತೆ

ಈ ದಿನ ನಮ್ಮ ದೇಶದ ಆರೋಗ್ಯ ವ್ಯವಸ್ಥೆಯ ಅಸಮರ್ಪಕತೆಯ ಬಗ್ಗೆ ದೊಡ್ಡ ದೊಡ್ಡ ಚರ್ಚೆಗಳು ನಡೆಯುತ್ತಿವೆ. ಖಾಸಗೀ ಆಸ್ಪತ್ರೆಗಳು ಏರಿಗೆಳೆದರೆ ಸರ್ಕಾರ ನೀರಿಗೆಳೆಯುತ್ತದೆ. ಪರಿಹಾರ ಮಾತ್ರ ಶೂನ್ಯ. ಈ ನಿಟ್ಟಿನಲ್ಲಿ ಒಂದು ಪರಿಹಾರವೆಂದರೆ ಹಲವಾರು ಮುಂದುವರೆದ ದೇಶಗಳಲ್ಲಿ ಇರುವಂತಹಾ ಶ್ರೇಣೀಕೃತ ಆರೋಗ್ಯ ವ್ಯವಸ್ಥೆ. ಹಾಗೆಂದರೇನು?

ತಲೆನೋವಿನಿಂದ ಬಳಲುತ್ತಿರುವ ರೋಗಿಯೊಬ್ಬರ ಉದಾಹರಣೆಯನ್ನೇ ತೆಗೆದುಕೊಳ್ಳೋಣ. ತಲೆನೋವು ಇದೆ ಎಂದು ಆ ರೋಗಿ ಪ್ರಾಥಮಿಕ ನೆಲೆಗಟ್ಟಿನ ವೈದ್ಯರ (primary care physician) ಬಳಿ ಬಂದಿದ್ದಾರೆ. ತಲೆನೋವಿಗೆ ಸೈನಸ್ ಸಮಸ್ಯೆಯಿಂದ ಹಿಡಿದು ಮೆದುಳಿನ ಕ್ಯಾನ್ಸರ್ ವರೆಗೆ ನೂರಾರು ಕಾರಣಗಳು ಇರಬಹುದು. ಈ ಹಂತದ ವೈದ್ಯರು ರೋಗಿಯ ಕಾಯಿಲೆಯ ವಿವರಗಳನ್ನು ಕೇಳಿ ತಿಳಿದು, ದೈಹಿಕ ಪರೀಕ್ಷೆ ಮಾಡಿ ಈ ಕಾರಣಗಳನ್ನು ನೂರರಿಂದ ಹತ್ತಕ್ಕೆ ಇಳಿಸುತ್ತಾರೆ. ಆ ಹತ್ತರಲ್ಲಿ ಯಾವುದು ಅತ್ಯಂತ ಸಾಮಾನ್ಯ ಕಾರಣವೋ ಅಂತಹ ಕಾರಣಕ್ಕೆ ಚಿಕಿತ್ಸೆ ನೀಡುತ್ತಾರೆ. ಗುಣವಾಗದಿದ್ದರೆ ಇನ್ನೊಂದು ಕಾರಣದ ಚಿಕಿತ್ಸೆ ನಡೆಯುತ್ತದೆ. ಪ್ರಾಥಮಿಕ ಹಂತದಲ್ಲಿ ಪ್ರಯೋಗಾಲಯದ ಪರೀಕ್ಷೆಗಳು ತೀರಾ ಕಡಿಮೆ. ಶೇಕಡಾ 80 ರಷ್ಟು ತಲೆನೋವುಗಳು ಈ ಹಂತದಲ್ಲೇ ಗುಣವಾಗುತ್ತವೆ. ಹಾಗೆ ಗುಣ ಆಗದಿದ್ದರೆ ಪ್ರಾಥಮಿಕ ಹಂತದಿಂದ ರೋಗಿ ದ್ವಿತೀಯ ಹಂತಕ್ಕೆ ಏರಬೇಕಾಗುತ್ತದೆ.

ದ್ವಿತೀಯ ಹಂತದ ವೈದ್ಯರ ವಿದ್ಯಾರ್ಹತೆ ಹೆಚ್ಚು ಇರುತ್ತದೆ. ಇಂತಹ ರೋಗಿಗಳನ್ನು ಪರೀಕ್ಷಿಸಿದ ಅನುಭವವೂ ಹೆಚ್ಚು ಇರುತ್ತದೆ. ಇದರ ಆಧಾರದ ಮೇಲೆ ಅವರು ಕೆಲವು ಪರೀಕ್ಷೆಗಳನ್ನು ಮಾಡಿ ಚಿಕಿತ್ಸೆ ನೀಡುತ್ತಾರೆ. ರೋಗಿಯ ತಲೆನೋವಿನ ಕಾರಣಗಳು ಈ ಹಂತದಲ್ಲಿ ಇಪ್ಪತ್ತರಿಂದ ಎರಡೋ-ಮೂರೋ ಸಂಖ್ಯೆಗೆ ಇಳಿದಿರುತ್ತವೆ. ನೂರಕ್ಕೆ ತೊಂಭತ್ತೆಂಟು ರೋಗಿಗಳು ಈ ಹಂತದಲ್ಲಿ ಗುಣಪಡುತ್ತಾರೆ.

ಈ ಸ್ತರದ ಚಿಕಿತ್ಸೆಗೂ ಗುಣವಾಗದ ಎರಡು-ಮೂರು ಪ್ರತಿಶತ ರೋಗಿಗಳು ಮೂರನೆಯ ಹಂತದ ಚಿಕಿತ್ಸೆಗೆ ಒಳಪಡಬೇಕಾಗುತ್ತದೆ. ಇಲ್ಲಿ ಆ ವಿಷಯದ ವಿಶೇಷ ತಜ್ಞರು ಇರುತ್ತಾರೆ. ಈ ಹಂತದ ಪ್ರಯೋಗಾಲಯದ ಪರೀಕ್ಷೆಗಳು ಕೂಡ ಅಧಿಕ ಮತ್ತು ದುಬಾರಿ. ತೀರಾ ಅಸಾಮಾನ್ಯ ಕಾಯಿಲೆಗಳಿಗೆ ಮಾತ್ರ ಇವನ್ನು ಬಳಸಬೇಕು. ಇದರ ಸ್ಪಷ್ಟ ಕಲ್ಪನೆ ಆ ತಜ್ಞ ವೈದ್ಯರಿಗೆ ಇರುತ್ತದೆ. ಇಷ್ಟಾಗಿಯೂ ನಾಲ್ಕೈದು ಸಾವಿರಕ್ಕೆ ಒಬ್ಬ ರೋಗಿಗೆ ತಲೆನೋವಿನ ಕಾರಣ ತಿಳಿಯದೆ ಹೋಗಬಹುದು. ವೈದ್ಯಕೀಯ ಸಂಶೋಧನೆ ನಡೆಯುವುದು ಇಂತಹ ಅಪರೂಪದ ರೋಗಿಗಳಲ್ಲಿಯೇ.

ಮುಂದುವರೆದ ದೇಶಗಳಲ್ಲಿ ಯಾವ ರೋಗಿಯೂ ಸೀದಾ ಮೂರನೇ ಹಂತದ ತಜ್ಞ ವೈದ್ಯರನ್ನು ಸಂಪರ್ಕಿಸಲು ಸಾಧ್ಯವಿಲ್ಲ. ಮೊದಲ ಶ್ರೇಣಿಯಿಂದ ಎರಡನೇ ಶ್ರೇಣಿಗೆ, ಆನಂತರವೇ ಮೂರನೆಯ ಶ್ರೇಣಿಗೆ ಅಧಿಕೃತವಾಗಿ ವರ್ಗಾವಣೆ ಆಗಬೇಕು. ವ್ಯವಸ್ಥೆಯ ಶಿಸ್ತು ಹಾಗಿದೆ. ಈಗ ಕೆಳಹಂತದ ಪ್ರಾಥಮಿಕ ವೈದ್ಯರು ರೋಗಿಗೆ ಚಿಕಿತ್ಸೆ ನೀಡಿ, ತನ್ನ ಕೈಮೀರಿದ ರೋಗಿಯನ್ನು ಮೇಲಿನ ಹಂತಕ್ಕೆ ವರ್ಗಾಯಿಸಿದರೆ ಅದು ನ್ಯೂನತೆವಾಗಲೀ, ಅಲಕ್ಷ್ಯವಾಗಲೀ ಆಗುವುದಿಲ್ಲ. ಹೀಗೆ ಎರಡನೇ ಹಂತದಲ್ಲೂ ಸಹ. ಮೂರನೇ ಹಂತದ ತಜ್ಞರು ಇಂತಹ ರೋಗಿಗಳಿಗೆ ಸರಿಯಾಗಿ ಪರೀಕ್ಷಿಸದೇ ಇದ್ದರೆ ಮಾತ್ರ ಅದು ಅವಘಡ. ಒಂದು ವೇಳೆ ತನ್ನ ಬಳಿ ಸರಿಯಾಗಿ ಚಿಕಿತ್ಸೆಯಾಗದ ರೋಗಿಯನ್ನು ಮೇಲಿನ ವಿಶೇಷಜ್ಞರ ಬಳಿ ವರ್ಗಾಯಿಸದೆ ಇದ್ದರೆ ಅದು ಪ್ರಾಥಮಿಕ ವೈದ್ಯರ ಅಲಕ್ಷ್ಯ. ಎಷ್ಟು ರೋಗಿಗಳನ್ನು ಹೀಗೆ ಒಬ್ಬ ಪ್ರಾಥಮಿಕ ವೈದ್ಯ ಮೇಲಿನ ಸ್ತರಕ್ಕೆ ವರ್ಗಾಯಿಸಿದ್ದಾನೆ? ಹಾಗೆ ವರ್ಗಾಯಿಸಿದ ಪ್ರಕ್ರಿಯೆ ಸರಿಯೇ ತಪ್ಪೇ? ಇಂತಹ ಪರಿಮಾಣಗಳು ಮುಂದುವರೆದ ದೇಶಗಳಲ್ಲಿ ಇವೆ. ಇದರಿಂದ ಒಬ್ಬ ಪ್ರಾಥಮಿಕ ವೈದ್ಯನ ಗುಣಮಟ್ಟದ ನಿರ್ಧಾರ ಆಗುತ್ತದೆ. ತಜ್ಞರ ಅವಶ್ಯಕತೆ ಇರುವ ರೋಗಿಯನ್ನು ವರ್ಗಾಯಿಸದೆ ಇರುವುದೂ ತಪ್ಪು; ತಜ್ಞರ ಅವಶ್ಯಕತೆ ಇಲ್ಲದ ರೋಗಿಯನ್ನು ಅವರ ಬಳಿ ಕಳಿಸುವುದೂ ತಪ್ಪು. Act of ommission ಮತ್ತು act of commission ಎಂದು ಕರೆಯಲಾಗುವ ಈ ಪ್ರಕ್ರಿಯೆ ಮುಂದುವರೆದ ದೇಶಗಳಲ್ಲಿ ಚೆನ್ನಾಗಿ ರೂಪುಗೊಂಡಿದೆ.

ನಮ್ಮ ದೇಶದಲ್ಲಿ ಈ ರೀತಿಯ ಶಿಸ್ತನ್ನು ಅವಶ್ಯಕತೆ ಎಂದು ಪರಿಗಣಿಸಿಯೇ ಇಲ್ಲ. ಎಲ್ಲಾ ಝಟ್-ಪಟ್ ವೇಗದಿಂದ ಆಗಬೇಕು. ವ್ಯವಸ್ಥೆಯಲ್ಲಿ ಬಿಗಿ ಇಲ್ಲ; ಅಧಿಕೃತ ವರ್ಗಾವಣೆ ಬೇಕಿಲ್ಲ; ರೋಗನಿದಾನದ ಪ್ರಕ್ರಿಯೆಯ ಹಂತಗಳ ಅರಿವಿಲ್ಲ. ಔಷಧ ತೆಗೆದುಕೊಂಡ ಹತ್ತು ನಿಮಿಷಗಳಲ್ಲಿ ಎಲ್ಲಾ ಸರಿಹೋಗದಿದ್ದರೆ ನಮಗೆ ಚಡಪಡಿಕೆ! ಮೊದಲೆನೆಯ ಭೇಟಿಗೆ ಸಮಸ್ಯೆ ಗುಣವಾಗದಿದ್ದರೆ ಆ ವೈದ್ಯನೇ ಅಸಮರ್ಥ; ಅವನ ಕೈಗುಣ ಸರಿಯಿಲ್ಲ! ತಲೆನೋವು ಎಂದಾಕ್ಷಣ ಏಕ್ದಂ ನರರೋಗ ತಜ್ಞರನ್ನು ಭೇಟಿ ಆಗಬಹುದು. ತಲೆನೋವಿನ ನೂರಾರು ಕಾರಣಗಳನ್ನೂ ಆ ತಜ್ಞರೇ ಪರಿಷ್ಕರಿಸಬೇಕು. ಸಮಯದ, ಒತ್ತಡದ ರೀತ್ಯಾ ಇದು ಬಹಳ ತ್ರಾಸದ ಕೆಲಸ. ಯಾವ ಕೆಲಸವನ್ನು ಮುಂದುವರೆದ ದೇಶಗಳಲ್ಲಿ ಮೂರು ವೈದ್ಯರು ಸಾಕಷ್ಟು ಸಮಯ ತೆಗೆದುಕೊಂಡು ಮಾಡುತ್ತಾರೋ, ಅದೇ ಕೆಲಸವನ್ನು ಇಲ್ಲಿ ಮೇಲಿನ ಸ್ತರದ ಒಬ್ಬ ತಜ್ಞ ಕೆಲವೇ ನಿಮಿಷಗಳಲ್ಲಿ ಮಾಡುವುದು ಅಸಮಂಜಸ. ನಮ್ಮ ದೇಶದ ರೋಗಿಗಳ ಸಂಖ್ಯಾಬಾಹುಳ್ಯ ಈ ಒತ್ತಡವನ್ನು ಅಧಿಕಗೊಳಿಸುತ್ತದೆ. ಅಲ್ಲದೇ, ಮೂರನೆಯ ಸ್ತರದ ತಜ್ಞ ವೈದ್ಯನ ಮಾತು ಅಂತಿಮ ಎನಿಸಿಕೊಳ್ಳುವುದರಿಂದ, ಆತ ಅವಕಾಶಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ತನ್ನ ಬಳಿ ಬಂದ ಪ್ರತೀ ರೋಗಿಗೂ ಎಲ್ಲಾ ರೀತಿಯ ಪರೀಕ್ಷೆಗಳನ್ನು ನಡೆಸಿ ತನ್ನ ತೀರ್ಪು ನೀಡಬೇಕಾಗುತ್ತದೆ. ಹೀಗಾಗಿ ಪ್ರಯೋಗಾಲಗಳಿಗೆ ಸುಗ್ಗಿ! ಇಂತಹ ಸಂದರ್ಭದಲ್ಲಿ ಅವರ ಮಧ್ಯೆ ಅನೈತಿಕ ಒಪ್ಪಂದಗಳೂ ಏರ್ಪಡುವುದು ಅಸಹಜವಲ್ಲ.

ನಮ್ಮ ದೇಶದ ಯಾವುದೇ ಸರ್ಕಾರವೂ ವೈದ್ಯಕೀಯ ಶ್ರೇಣೀಕೃತ ವ್ಯವಸ್ಥೆಯನ್ನು ನಿರ್ಮಿಸಿಯೇ ಇಲ್ಲ. ಕನಿಷ್ಠ ಅದರ ಬಗ್ಗೆ ಕಾಳಜಿಯನ್ನೂ ತೆಗೆದುಕೊಂಡಿಲ್ಲ! ಈ ವ್ಯವಸ್ಥೆಯ ಪ್ರಾಥಮಿಕ ಹಂತದಲ್ಲಿ ಶೇಕಡಾ 80 ವೈದ್ಯರು ಇರಬೇಕು. ಹದಿನೈದು ಪ್ರತಿಶತ ಮುಂದಿನ ಹಂತದ ತಜ್ಞರು ಇರಬೇಕು. ಅಂತಿಮ ಹಂತದ ವಿಶೇಷ ತಜ್ಞರ ಸಂಖ್ಯೆ ಶೇಕಡಾ ಐದು ಇದ್ದರೆ ಸಾಕು. ಆದರೆ ನಮ್ಮ ದೇಶದಲ್ಲಿ ಈ ಸಂಖ್ಯೆಗಳು ಬೆಚ್ಚಿಬೀಳಿಸುವಷ್ಟು ಏರುಪೇರಾಗಿವೆ.

ನಮ್ಮ ದೇಶದಲ್ಲಿ ಕೇವಲ ಎಂ ಬಿ ಬಿ ಎಸ್ ವ್ಯಾಸಂಗ ಮಾಡಿದವರಿಗೆ ಸಾಮಾಜಿಕ ಮನ್ನಣೆ ಹೆಚ್ಚು ಇಲ್ಲದ ಕಾರಣ ಅವರು ತಜ್ಞ ವ್ಯಾಸಂಗ ಮಾಡಲು ಮುಂದಾಗುತ್ತಿದ್ದಾರೆಯೇ ವಿನಃ ಪ್ರಾಥಮಿಕ ಶ್ರೇಣಿಯಲ್ಲಿ ಕೆಲಸ ಮಾಡಲು ಸಿದ್ಧರಿಲ್ಲ. ಇದರಿಂದ ಉಂಟಾದ ನಿರ್ವಾತದ ಪರಿಣಾಮ ಪ್ರಾಥಮಿಕ ಹಂತದಲ್ಲಿ ಖೊಟ್ಟಿ ವೈದ್ಯರು ತುಂಬಿದ್ದಾರೆ. ಈ ಮೋಸಗಾರರು ವೈದ್ಯಕೀಯ ವ್ಯಾಸಂಗವನ್ನೇ ಮಾಡದ ಖೂಳರು ಆಗಿರಬಹುದು; ಇಲ್ಲವೇ ಯಾವುದೋ ಬೇರೆ ವಿಧಾನದ ವೈದ್ಯಕೀಯ ಪದ್ಧತಿಯ ವ್ಯಾಸಂಗ ಮಾಡಿ, ತಾವು ಎಂದಿಗೂ ಓದದೇ ಇರುವ ಆಧುನಿಕ ವೈದ್ಯ ಪದ್ದತಿಯ ಔಷಧಗಳನ್ನು ಬೇಕಾಬಿಟ್ಟಿ ಬರೆಯುವ ಪಾಖಂಡಿಗಳಿರಬಹುದು. ಒಟ್ಟಿನಲ್ಲಿ ನಮ್ಮ ಪ್ರಾಥಮಿಕ ಶ್ರೇಣಿಯ ವೈದ್ಯಕೀಯ ಚಿಕಿತ್ಸೆ ಗಬ್ಬೆದ್ದು ಹೋಗಿದೆ. ಇದರಲ್ಲಿ ಸರ್ಕಾರದ ಪಾತ್ರ ಎಷ್ಟೋ ಸಮಾಜದ ಪಾತ್ರವೂ ಅಷ್ಟೇ ಇದೆ. ಈ ಹಳ್ಳವನ್ನು ಕೆಣಕಿ ಕಣಿವೆ ಮಾಡಲು ರಾಜಕಾರಣ, ಮಾಧ್ಯಮ, ವೈದ್ಯಕೀಯ ಉದ್ಯಮ ನಡೆಸುವ ಪಟ್ಟಭದ್ರರು ಇದ್ದಾರೆ. ಯಾರಿಗೂ ವ್ಯವಸ್ಥೆಯ ಹೀನಾಯ ಸ್ಥಿತಿಗತಿಯ ಅರಿವೂ ಇಲ್ಲ; ಪರಿಹಾರವಂತೂ ಬೇಕಾಗಿಯೇ ಇಲ್ಲ. ಇದರ ಬಗ್ಗೆ ಹೊರಡುವ ಪರಿಹಾರದ ಕೆಲವು ಕ್ಷೀಣ ಸ್ವರಗಳು ಆಳುಗರನ್ನು ತಲುಪುವುದೇ ಇಲ್ಲ. ಇದು ನಮ್ಮ ವ್ಯವಸ್ಥೆಯ ವಿಪರ್ಯಾಸ.

ಅತ್ಯಂತ ಜರೂರಾಗಿ ನಮ್ಮ ಸರ್ಕಾರಕ್ಕೆ ಒಂದು ಆರೋಗ್ಯ ನೀತಿ ಬೇಕು. ಅಮೇರಿಕಾದಲ್ಲಿ ರೂಪಿಸುವ ನೀತಿಗಳ ಕಾಪಿ-ಪೇಸ್ಟ್ ಆಗುವ ಪರಿಸ್ಥಿತಿಯಲ್ಲಿ ನಮ್ಮ ದೇಶ ಇಲ್ಲ. ಅಲ್ಲಿ ಕುಣಿದಂತೆ ನಾವು ಇಲ್ಲಿ ಕುಣಿಯಲಾಗದು. ನಮಗೆ ನಮ್ಮದೇ ಆದ ಸಮಸ್ಯೆಗಳು, ವ್ಯಕ್ತಿವಿಶೇಷಗಳು, ವಿಚಿತ್ರ ಸಂದರ್ಭಗಳು, ತರಹೇವಾರಿ ರೋಗಿಗಳೂ, ಊಹಿಸಲೂ ಆಗದ ಪರಿಸ್ಥಿತಿಗಳೂ ಇದ್ದಾವೆ. ಇದಕ್ಕೆ ನಮ್ಮದೇ ಆದ ನವನವೀನ ಪರಿಹಾರಗಳು ಬೇಕು. ಸರ್ಕಾರ ಎಲ್ಲಾ ಸರಕಾರೀ ಹಾಗೂ ಖಾಸಗೀ ಆರೋಗ್ಯ ಸಂಸ್ಥೆಗಳಿಗೆ ವರ್ಗೀಕೃತ ಶ್ರೇಣಿ ನೀಡಬೇಕು. ಅವುಗಳಲ್ಲಿ ಇರುವ ಅನುಕೂಲಕ್ಕೆ ತಕ್ಕಂತೆ ಅವುಗಳು ಮಾಡಬಹುದಾದ ಚಿಕಿತ್ಸೆಯನ್ನು ನಿಯಂತ್ರಿಸಬೇಕು. ಹೆರಿಗೆ ಮಾಡಿಸಲೂ ಸೌಕರ್ಯ ಇಲ್ಲದ ಆಸ್ಪತ್ರೆಯು ಶಸ್ತ್ರಚಿಕಿತ್ಸೆ ಮಾಡಲು ಅವಕಾಶ ಕೊಡಬಾರದು. ಇದಕ್ಕೆ ತಜ್ಞ ಸಮಿತಿ ಏರ್ಪಾಡಾಗಿ ಒಂದು ನಿಯಮಿತ ಕಾಲದಲ್ಲಿ ವರದಿ ನೀಡುವಂತೆ ಮಾಡಬೇಕು. ಆ ವರದಿಯನ್ನು ಸಾರ್ವಜನಿಕವಾಗಿ ವೈದ್ಯರ ಮುಂದಿಟ್ಟು ಪರಿಷ್ಕರಣೆ ಮಾಡಿಸಬೇಕು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರೆಯಬೇಕು. ಸರ್ಕಾರದಿಂದಲೇ ಆರೋಗ್ಯವಿಮೆಯನ್ನು ವಿಸ್ತರಿಸಬೇಕು. ಅದಕ್ಕೆ ಸ್ತರಗಳನ್ನು ನಿಗದಿ ಮಾಡಬೇಕು. ಆ ವಿಮಾ ಸೌಲಭ್ಯಕ್ಕೆ ಖಾಸಗಿ ಆಸ್ಪತ್ರೆಗಳನ್ನು ಸೇರಿಸಬೇಕು. ಆರೋಗ್ಯ ನಿರ್ವಹಣೆಯಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳುವಂತೆ ಸ್ವಾಯತ್ತ ಸಮಿತಿಗಳ ಏರ್ಪಾಡು ಆಗಬೇಕು. ಇದನ್ನೆಲ್ಲಾ ಬೇರುಮಟ್ಟದಿಂದ ಪರಿಹರಿಸದೇ ಆಸ್ಪತ್ರೆಗಳನ್ನು ನಿಯಂತ್ರಣದಲ್ಲಿ ಇಡುವ, ವೈದ್ಯರ ಹೆಡೆಮುರಿ ಕಟ್ಟುವ ಕಾನೂನುಗಳನ್ನು ಸರ್ಕಾರ ಜಾರಿಗೆ ತಂದು ಪರಿಸ್ಥಿತಿಯನ್ನು ಇನ್ನೂ ಡೋಲಾಯಮಾನ ಮಾಡುವುದು ದೊಡ್ಡ ವಿಪರ್ಯಾಸ.

(9 ಜೂನ್ 2018 ರ ವಿಶ್ವವಾಣಿ ದಿನಪತ್ರಿಕೆಯಲ್ಲಿ ಪ್ರಕಟವಾದ ಲೇಖನ. 
ಯುನಿಕೋಡ್ ಕೊಂಡಿ: https://www.vishwavani.news/health/)
----------------


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ