ಮಂಗಳವಾರ, ಜೂನ್ 19, 2018




ಭಾರತದಲ್ಲಿ ವೈದ್ಯಕೀಯ ವೆಚ್ಚ ನಿಜಕ್ಕೂ ದುಬಾರಿಯೇ?
ಡಾ. ಕಿರಣ್ ವಿ. ಎಸ್.



ಕುರ್ಚಿ ಪಂಡಿತರು ಎಂಬ ಮಾತೊಂದಿದೆ! ಇಂತಹವರು ಕೂತ ಜಾಗ ಬಿಟ್ಟು ಏಳದೇ ಪ್ರಪಂಚದ ಎಲ್ಲಾ ವಿಷಯಗಳನ್ನೂ ವಿಮರ್ಶಿಸುತ್ತಾರೆ! ಎವರೆಸ್ಟ್ ಶಿಖರ ಹತ್ತುವುದರಿಂದ ಹಿಡಿದು ಸಮುದ್ರದಲ್ಲಿ ನೌಕಾಯಾನ ಮಾಡುವುದರವರೆಗೆ ಎಲ್ಲಾ ಪರಿಣತಿ ಹೊಂದಿದವರಂತೆ ಮಾತನಾಡುತ್ತಾರೆ. ಆದರೆ ಮನೆಯಿಂದ ಮೂರು ದಾರಿ ದೂರ ಇರುವ ಅಂಗಡಿಯಿಂದ ಕೊತ್ತಂಬರಿ ಸೊಪ್ಪು ಕೂಡ ತರಲಾರರು! ಇಂತಹ ಅನೇಕರು ಭಾರತದಲ್ಲಿನ ದುಬಾರಿ ವೈದ್ಯಕೀಯ ವೆಚ್ಚದ ಬಗ್ಗೆ ಬರೆಯುತ್ತಾರೆ. ಆದರೆ ಅವರಿಗೆ ವಾಸ್ತವಗಳ ಅರಿವೇ ಇರುವುದಿಲ್ಲ.

ಭಾರತದಲ್ಲಿ ವೈದ್ಯಕೀಯ ವೆಚ್ಚ ನಿಜವಾಗಿಯೂ ದುಬಾರಿಯೇ? ಎಂಬ ಪ್ರಶ್ನೆಗೆ ಉತ್ತರಿಸಲು ಇತರ ದೇಶಗಳೊಂದಿಗೆ ಹೋಲಿಕೆ ಮಾಡಬೇಕು. ಅದಕ್ಕೆ ಮುನ್ನ ಕೆಲವು ಇತರ ಕ್ಷೇತ್ರಗಳ ಕಡೆ ಗಮನ ಹರಿಸಬೇಕು. ಒಂದು ಒಳ್ಳೆಯ ಪಿಜ್ಜಾಗೆ ಎಷ್ಟು ಬೆಲೆ? ತೆರಿಗೆಗಳೂ ಸೇರಿ ಸುಮಾರು ರೂ.600. ಅಮೆರಿಕದಲ್ಲೂ ಸುಮಾರು 8 ರಿಂದ 10 ಡಾಲರ್ ಗೆ ಇಂತಹದೇ ಪಿಜ್ಜಾ ಸಿಗುತ್ತದೆ. ಟೊಯೋಟಾ ಕಾರುಗಳು ಅಮೆರಿಕಕ್ಕಿಂತಾ ಭಾರತದಲ್ಲಿ ದುಬಾರಿ. ಪೆಟ್ರೋಲ್ ಬೆಲೆಯಂತೂ ಕೇಳುವುದೇ ಬೇಡ. ನಗರದ ಹೃದಯಭಾಗದಲ್ಲಿರುವ ವೈಭವೋಪೇತ ಮನೆಗಳ ಬೆಲೆ ಸರಿಸುಮಾರು ಅಮೆರಿಕದಲ್ಲೂ, ಬೆಂಗಳೂರಿನಲ್ಲೂ ಒಂದೇ ಎಂದು ಹೇಳಲಾಗುತ್ತದೆ. ಬಹುರಾಷ್ಟ್ರೀಯ ಯಾಜಮಾನ್ಯದ ಹೋಟೆಲ್ ಕೋಣೆಯ ವಿಷಯ ಬಂದಾಗ ಬಾಡಿಗೆಗಳು ನಮ್ಮಲ್ಲಿ ಒಂದು ಸುತ್ತು ಅಧಿಕ ಎನ್ನುತ್ತಾರೆ! ಮಾಲ್ ಗಳಲ್ಲಿ ಖರೀದಿಸುವ ಬಟ್ಟೆಗಳ ಬೆಲೆ ಅಮೆರಿಕದಷ್ಟೇ ಇರುವುದು ಸಾಮಾನ್ಯ. ಇದೇ ಮಾತನ್ನು ದೂರದರ್ಶನ, ಮೊಬೈಲ್ ಫೋನು, ಗಣಕ ಯಂತ್ರಗಳ ವಿಷಯದಲ್ಲೂ ಹೇಳಬಹುದು. ಅಂದರೆ, ನಾವು ಯಾವ ಯಾವ ವಿಷಯಗಳಲ್ಲಿ ಸ್ವಲ್ಪ ಐಶಾರಾಮಿ ಗುಣಮಟ್ಟವನ್ನು ಬಯಸುತ್ತೇವೋ ಅಲ್ಲೆಲ್ಲಾ ವಿದೇಶೀ ಬೆಲೆಗೆ ಸಮನಾದ ಮೊತ್ತವನ್ನೇ ತೆರುತ್ತಿದ್ದೇವೆ. 

ಇದೇ ತರ್ಕವನ್ನು ಖಾಸಗೀ ಆಸ್ಪತ್ರೆಗಳಲ್ಲಿ ಅನ್ವಯಿಸಲು ನಮ್ಮ ಮನಸ್ಸು ಒಪ್ಪುವುದೇ ಇಲ್ಲ. “ಆರೋಗ್ಯ ಎನ್ನುವುದು ಐಶಾರಾಮೀ ವಿಷಯವಲ್ಲ; ಅದು ಮೂಲಭೂತ ಆವಶ್ಯಕತೆ” ಎನ್ನುವ ಮಂದಿ ಈ ಮೂಲಭೂತ ಅವಶ್ಯಕತೆಯನ್ನು ಪೂರೈಸಬೇಕಾದ್ದು ಖಾಸಗಿಯವರಲ್ಲ; ಅದು ಸರ್ಕಾರದ ಹೊಣೆ ಎನ್ನುವ ವಿಷಯವನ್ನು ಮರೆತುಬಿಡುತ್ತಾರೆ. ಸರ್ಕಾರ ಮನೆಮನೆಗೆ ತಲುಪಿಸುವ ಕುಡಿಯುವ ನೀರಿನ ಬೆಲೆ ಲೀಟರಿಗೆ ಪೈಸೆಗಳ ಲೆಕ್ಕದಲ್ಲಿ ಬರುತ್ತದೆ. ಅದನ್ನೇ ಖಾಸಗಿಯವರು ಲೀಟರಿಗೆ ಹದಿನೈದು ರೂಪಾಯಿಯಂತೆ ಮಾರುತ್ತಾರೆ. ಅದೇಕೆ ಎಂದು ಯಾರೂ ಪ್ರಶ್ನಿಸುವುದೇ ಇಲ್ಲ. ಕುಡಿಯುವ ನೀರಿಗಿಂತಾ ಪ್ರಾಥಮಿಕ ಅವಶ್ಯಕತೆ ಇನ್ಯಾವುದಿದ್ದೀತು?

ಇಷ್ಟಾಗಿಯೂ, ನಮ್ಮ ದೇಶದ ಖಾಸಗೀ ಆಸ್ಪತ್ರೆಗಳ ವೆಚ್ಚ ನಿಜಕ್ಕೂ ದುಬಾರಿಯೇ? ಐಶಾರಾಮಿ ಎನ್ನಬಹುದಾದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ವೆಚ್ಚವನ್ನು ಬೇರೆ ದೇಶದ ಖಾಸಗೀ ಆಸ್ಪತ್ರೆಗಳ ಜೊತೆ ಹೋಲಿಸಿದರೆ ಕೆಲವು ಸತ್ಯಗಳು ತಿಳಿಯುತ್ತವೆ. ಹೃದಯದ ಶಸ್ತ್ರಚಿಕಿತ್ಸೆಯಾಗಲೀ, ಮಂಡಿ ಬದಲಿಕೆಯಾಗಲೀ, ಮೆದುಳಿನ ಚಿಕಿತ್ಸೆಯಾಗಲೀ, ಕ್ಯಾನ್ಸರ್ ಚಿಕಿತ್ಸೆಯಾಗಲೀ – ಬೇರೆ ಯಾವುದೇ ದೇಶದ ಜೊತೆ ಹೋಲಿಸಿದರೆ ನಮ್ಮ ದೇಶದ ಆಸ್ಪತ್ರೆಗಳಲ್ಲಿ ತಗಲುವ ವೆಚ್ಚ ಬಹಳ ಕಡಿಮೆ. ಅಮೇರಿಕಾ ಅಂತಿರಲಿ, ನಮ್ಮ ನಾಯಕರು ಟುಸ್ ಪುಸ್ ಎಂದು ಚಿಕಿತ್ಸೆಗೆ ಹೋಗುವ ಸಿಂಗಪುರಕ್ಕೆ ಹೋಲಿಸಿದರೆ ನಮ್ಮ ಚಿಕಿತ್ಸೆಯ ವೆಚ್ಚ ಅದರಲ್ಲಿ ಶೇಕಡಾ 50 ಕೂಡ ಇಲ್ಲ! ಇದು ಐಶಾರಮಿ ಆಸ್ಪತ್ರೆಗಳ ಮಾತು. ನಮ್ಮ ದೇಶದ ಸಣ್ಣ ಆಸ್ಪತ್ರೆಗಳಲ್ಲಿ ಚಿಕಿತ್ಸೆಯ ಖರ್ಚು ಇನ್ನೂ ಕಡಿಮೆ. ಬೇರೆ ವಿಷಯಗಳ ಖರ್ಚಿನಲ್ಲಿ ಅಮೆರಿಕಕ್ಕೆ ಸರಿದೂಗುವ ನಾವು ಆರೋಗ್ಯದ ವಿಷಯದಲ್ಲಿ ಉನ್ನತ ಗುಣಮಟ್ಟದ ಚಿಕಿತ್ಸೆಯನ್ನು ಬಹಳ ಅಗ್ಗವಾಗಿ ಪಡೆಯುತ್ತಿದ್ದೇವೆ ಎನ್ನುವುದು ನಂಬಲಾಗದ ಸತ್ಯ!

ವೈದ್ಯಕೀಯ ಪ್ರವಾಸೋದ್ಯಮದ ವಿಷಯದಲ್ಲಿ ಭಾರತದ ಕೆಲವು ಖಾಸಗೀ ಆಸ್ಪತ್ರೆಗಳು ವಿಶ್ವದಾದ್ಯಂತ ಮಾನ್ಯತೆ ಗಳಿಸಿವೆ. ಮಧ್ಯಪ್ರಾಚ್ಯ ರಾಷ್ಟ್ರಗಳ, ಯೂರೋಪಿನ ಕೆಲವು ದೇಶಗಳ, ಆಫ್ರಿಕನ್ ದೇಶಗಳ ಬಹಳಷ್ಟು ಪ್ರಜೆಗಳು ಈಗ ಭಾರತಕ್ಕೆ ಬಂದು ಚಿಕಿತ್ಸೆ ಮಾಡಿಸಿಕೊಳ್ಳುತ್ತಾರೆ. ಇಂತಹ ಕೆಲವು ರಾಷ್ಟ್ರಗಳ ಸರ್ಕಾರಗಳು ನಮ್ಮ ದೇಶದ ಖಾಸಗೀ ಆಸ್ಪತ್ರೆಗಳ ಜೊತೆ ಒಪ್ಪಂದ ಮಾಡಿಕೊಂಡು ತಮ್ಮ ದೇಶದ ಪ್ರಜೆಗಳನ್ನು ಚಿಕಿತ್ಸೆಗೆ ಇಲ್ಲಿಗೆ ಕಳಿಸುತ್ತವೆ. ಇದಕ್ಕೆಲ್ಲ ಕಾರಣ ನಮ್ಮ ಖಾಸಗೀ ಆಸ್ಪತ್ರೆಗಳು ಅಂತಾರಾಷ್ಟ್ರೀಯ ಗುಣಮಟ್ಟದ ಚಿಕಿತ್ಸೆಯನ್ನು ಬೇರೆಲ್ಲಾ ದೇಶಗಳಿಗಿಂತ ಅಗ್ಗವಾಗಿ ನೀಡುತ್ತವೆ. ಯಾವುದೇ ಚಿಕಿತ್ಸೆಗೆ ನಮ್ಮ ದೇಶದ ಪ್ರಜೆಗಳು ನೀಡುವುದಕ್ಕಿಂತ ಕನಿಷ್ಠ ಐವತ್ತು ಪ್ರತಿಶತ ಹೆಚ್ಚಿನ ದರ ಇಂತಹ ರೋಗಿಗಳು ನೀಡುತ್ತಾರೆ. ಹಾಗಾಗಿಯೂ ಅವರಿಗೆ ನಮ್ಮ ದೇಶದ ಚಿಕಿತ್ಸೆ ಇತರ ದೇಶಗಳಿಗಿಂತ ಅಗ್ಗ!

ಇಷ್ಟಾಗಿಯೂ ಖಾಸಗೀ ಆಸ್ಪತ್ರೆಗಳು ಭಾರತದಲ್ಲಿ ಹೆಚ್ಚ್ಹು ಲಾಭವನ್ನೇನೂ ಮಾಡಿಕೊಳ್ಳುತ್ತಿಲ್ಲ. ಶೇರು ಮಾರುಕಟ್ಟೆಯಲ್ಲಿ ದಾಖಲಾಗಿರುವ ಸೂಪರ್ ಸ್ಪೆಷಾಲಿಟಿ ಖಾಸಗೀ ಆಸ್ಪತ್ರೆಗಳ ಆಯವ್ಯಯ ಪಟ್ಟಿ ಜಾಲತಾಣಗಳಲ್ಲಿ ದೊರಕುತ್ತದೆ. ಅದನ್ನು ಅವಲೋಕಿಸಿದರೆ ಖಾಸಗೀ ಆಸ್ಪತ್ರೆಗಳ ಲಾಭಾಂಶ ಒಂದಂಕಿ ಪ್ರತಿಶತವನ್ನು ಮೀರುವುದೇ ಕಷ್ಟ! ವಾರ್ಷಿಕ 6 ರಿಂದ 8 ಪ್ರತಿಶತ ಲಾಭಾಂಶ ಇರುವ ಸಾಧ್ಯತೆಯೇ ಹೆಚ್ಚು. ಇದಕ್ಕೆ ಕಾರಣಗಳಿವೆ. ಜನ ಹೆಚ್ಚು ಬರಬೇಕೆಂದರೆ ಆಸ್ಪತ್ರೆಗಳು ಇರುವ ಸ್ಥಳ ಸಾರಿಗೆ ವ್ಯವಸ್ಥೆಗೆ ಸಮೀಪವಾಗಿರಬೇಕು. ಕನಿಷ್ಠ ನಗರದ ಹೊರವಲಯದ ಆಸುಪಾಸಿನಲ್ಲಿ ಇರಬೇಕು. ಇಂತಹ ಸ್ಥಳಗಳ ಖರೀದಿಯಾಗಲೀ, ಬಾಡಿಗೆಯಾಗಲೀ ಬಹಳ ಅಧಿಕ. “ಆಸ್ಪತ್ರೆಗಳು ಸೇವೆ ಮಾಡಬೇಕು” ಎಂದು ಕೂಗುವ ಸರ್ಕಾರ ಅದೇ ಆಸ್ಪತ್ರೆಗಳನ್ನು ಉದ್ಯಮಎಂದು ಪರಿಗಣಿಸಿ ವಾಣಿಜ್ಯ ತೆರಿಗೆ ವಿಧಿಸುತ್ತದೆ! ನೀರು, ವಿದ್ಯುತ್, ಒಳಚರಂಡಿ, ಮೂಲ ಸೌಕರ್ಯ ಎಲ್ಲದಕ್ಕೂ ಅತ್ಯಂತ ಮೇಲಿನ ಸ್ತರದ ವಾಣಿಜ್ಯ ಮಟ್ಟದ ದರವನ್ನು ಖಾಸಗೀ ಆಸ್ಪತ್ರೆಗಳಿಂದ ವಸೂಲಿ ಮಾಡಲಾಗುತ್ತದೆ. ನಮ್ಮ ದೇಶದಲ್ಲಿ ಉನ್ನತ ಮಟ್ಟದ ಆರೋಗ್ಯ ಯಂತ್ರೋಪಕರಣಗಳು ತಯಾರಾಗುವುದೇ ಇಲ್ಲ. ಬೇರೆ ವಿಧಿ ಇಲ್ಲದೆ ಆಸ್ಪತ್ರೆಗಳು ಅಂತಹ ಎಲ್ಲಾ ಉಪಕರಣಗಳನ್ನೂ ವಿದೇಶಗಳಿಂದ ಆಮದು ಮಾಡಿಕೊಳ್ಳಬೇಕು. ಸರ್ಕಾರ ಅಂತಹ ಉಪಕರಣಗಳ ಮೇಲೆ ಅತೀ ಹೆಚ್ಚಿನ ಆಮದು ಸುಂಕ ವಿಧಿಸುತ್ತದೆ. ಇದರಿಂದ ಉಪಕರಣಗಳ ಬೆಲೆ ವಿಪರೀತ ಏರುತ್ತದೆ. ಅಲ್ಲದೇ, ಖಾಸಗೀ ಆಸ್ಪತ್ರೆಗಳು ಹೆಸರು ಮಾಡುವುದೇ ಉತ್ತಮ ವೈದ್ಯರಿಂದ. ಇಂತಹ ಕೌಶಲವಿರುವ ವೈದ್ಯರು ಅಗ್ಗವಾಗಿ ಸಿಗುವುದಿಲ್ಲ! ಅಂತಹ ವೈದ್ಯರಿಗೆ ಹೆಚ್ಚು ಸಂಬಳ ನೀಡಿ ಉಳಿಸಿಕೊಳ್ಳುವುದು ಆಸ್ಪತ್ರೆಗಳಿಗೆ ಅನಿವಾರ್ಯ. ಇದಲ್ಲದೇ, ಆಸ್ಪತ್ರೆ ಬೆಳೆದಷ್ಟೂ ಅದನ್ನು ಕಾರ್ಪೋರೆಟ್ ರೂಪದಲ್ಲಿ ನಿರ್ವಹಿಸಲು ಕುಶಲ ನಿರ್ವಾಹಕರೂ ಬೇಕು. ಈಚೆಗೆ ರೋಗಿಗಳ ಸಂಬಂಧಿಗಳ ಹೆಸರಿನಲ್ಲಿ ಯಾರ್ಯಾರೋ ಮಾಡುವ ಬೇಕಾಬಿಟ್ಟಿ ಗೂಂಡಾಗಿರಿ ಹಲ್ಲೆಗಳನ್ನು ನಿಯಂತ್ರಿಸಲು ಬಲಿಷ್ಟವಾದ ಭದ್ರತಾ ಸಿಬ್ಬಂದಿ ಬೇಕು. ಸ್ಪರ್ಧಾತ್ಮಕ ಪೈಪೋಟಿಯ ಯುಗದಲ್ಲಿ ಯಾವ ಚಿಕಿತ್ಸೆಗೂ ಯದ್ವಾ ತದ್ವಾ ಬೆಲೆ ಇಡಲು ಸಾಧ್ಯವಿಲ್ಲ. ಹಾಗೆಂದು ಆಸ್ಪತ್ರೆಗಳ ಜೀವಾಳವಾಗಿರುವ ಗುಣಮಟ್ಟವನ್ನೂ ತಗ್ಗಿಸಲಾಗದು. ಹೀಗಾಗಿ ಖಾಸಗೀ ಆಸ್ಪತ್ರೆಗಳ ಒಟ್ಟಾರೆ ಲಾಭಾಂಶ ಕಡಿಮೆ. ಚಿಕಿತ್ಸೆಗೆ ಬರುವ ರೋಗಿಗಳ ಸಂಖ್ಯೆಯನ್ನು ಅಧಿಕಗೊಳಿಸಿದರೆ ಮಾತ್ರ ಖಾಸಗೀ ಆಸ್ಪತ್ರೆಗಳು ಲಾಭದಲ್ಲಿ ನಡೆಯಬಹುದು. ಇಲ್ಲವಾದರೆ ಹಾಕಿದ ಬೃಹತ್ ಬಂಡವಾಳ ಮುಳುಗುವ ಸಾಧ್ಯತೆ ಇರುತ್ತದೆ.

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ಸರ್ಕಾರವೇ ಗುರುತಿಸಿರುವ ಉದ್ಯಮ. ದೊಡ್ಡ ದೊಡ್ಡ ಬಂಡವಾಳ ಹಾಕಬಲ್ಲ ಉದ್ಯಮಪತಿಗಳ ಮತ್ತೊಂದು ಹೂಡಿಕೆ. ಇಲ್ಲಿ ವ್ಯಾಪಾರ ವ್ಯವಹಾರಕ್ಕೆ ಮೊದಲ ಆದ್ಯತೆ. ಆನಂತರ ಅವಕಾಶ ಇದ್ದರೆ ಸೇವೆ! ಇಂತಹ ಆಸ್ಪತ್ರೆಗಳು ಜಾಹೀರಾತಿಗಾಗಿ ಬೇರೆ ಏನನ್ನು ಬರೆದರೂ, ಅವುಗಳ ಅಸ್ತಿತ್ವ ನಿಂತಿರುವುದೇ ವಾಣಿಜ್ಯ ವ್ಯವಹಾರದಲ್ಲಿ. ಪರಸ್ಪರ ಸ್ಪರ್ಧೆಯಿಂದ ಎಷ್ಟೇ ಕಡಿಮೆ ಲಾಭಕ್ಕಾಗಿ ಕೆಲಸ ಮಾಡಿದರೂ ಯಾವ ಖಾಸಗೀ ಆಸ್ಪತ್ರೆಯೂ ನಷ್ಟ ಮಾಡಿಕೊಳ್ಳಲು ಇಚ್ಚಿಸುವುದಿಲ್ಲ. ಒಂದೇ ಸಮನೆ ನಷ್ಟ ಆದರೆ ಕೆಲವು ವರ್ಷಗಳ ಬಳಿಕ ಆಸ್ಪತ್ರೆಯನ್ನು ಮುಚ್ಚುತ್ತರೆಯೇ ವಿನಃ ಸೇವೆಯ ಹೆಸರಿನಲ್ಲಿ ಮುಂದುವರೆಸುವುದಿಲ್ಲ. ಇಲ್ಯಾರೂ ಸಂತರಲ್ಲ!

ಇದು ಖಾಸಗೀ ಆಸ್ಪತ್ರೆಗಳ ವಸ್ತುಸ್ಥಿತಿಯ ಮಾತಾಯಿತು. ಆದರೆ ನಮ್ಮ ದೇಶದ ಮಧ್ಯಮವರ್ಗದ ಜನತೆಯ ಕತೆ ಏನು? ಇಂತಹ ಆಸ್ಪತ್ರೆಯಲ್ಲಿ ಆಗುವ ಒಂದು ದಾಖಲಾತಿ ಅವರ ಹೆಡೆಮುರಿ ಕಟ್ಟುವುದು ಸುಳ್ಳೇ? ಒಂದು ವಾರದ ಚಿಕಿತ್ಸೆಗೆ ಹಣ ಹೊಂದಿಸುವುದಕ್ಕೆ ಅವರು ಹೈರಾಣಾಗುವುದು ಸುಳ್ಳೇ? ಒಬ್ಬರ ಚಿಕಿತ್ಸೆಗೆ ಮನೆಮಂದಿಯೆಲ್ಲ ಟೊಂಕ ಕಟ್ಟಿ ಅದುವರೆಗೆ ಉಳಿಸಿದ್ದನ್ನೆಲ್ಲ ಕಳೆದುಕೊಳ್ಳುವುದು ಸುಳ್ಳೇ? ಚಿಕಿತ್ಸೆಯ ವೆಚ್ಚ ತೂಗಿಸಲು ಆಸ್ತಿ ಪಾಸ್ತಿ ಮಾರಿ ಹಣ ಹೊಂದಿಸುವುದು ಸುಳ್ಳೇ? ನಮ್ಮ ಕಣ್ಣ ಮುಂದೆ ಇಂತಹ ಹಲ;ಅವಾರು ಉದಾಹರಣೆಗಳು ಇರುವಾಗ ಯಾವುದನ್ನು ನಂಬಬೇಕು?

ಇಲ್ಲಿ ಸಮಸ್ಯೆ ಇರುವುದು ನಮ್ಮ ವಿವೇಚನೆಯಲ್ಲಿ. ವಾಹನ ದಟ್ಟಣೆ ಇರುವ ರಸ್ತೆಯಲ್ಲಿ ದೊಡ್ಡ ಹೊಂಡವಿದೆ. ಅದನ್ನು ತಪ್ಪಿಸಲು ಕಡೇ ಕ್ಷಣದಲ್ಲಿ ವಾಹನವನ್ನು ತಿರುಗಿಸುತ್ತೇವೆ. ಅದು ಪಕ್ಕದಲ್ಲಿ ಬರುತ್ತಿರುವ ವಾಹನಕ್ಕೆ ಬಡಿಯುತ್ತದೆ. ಅಪಘಾತ ಆಗುತ್ತದೆ. ಆಗ ಇಬ್ಬರೂ ವಾಹನದ ಚಾಲಕರು ಬೀದಿಗಿಳಿದು ಲಟಾಪಟಿ ಮಾಡಿ ಒಬ್ಬರನ್ನೊಬ್ಬರು ಬೈದು ಬಡಿದು ಮಾಡುತ್ತಾರೆಯೇ ಹೊರತು, ಆ ಅಪಘಾತಕ್ಕೆ ಮೂಲ ಕಾರಣವಾದ ರಸ್ತೆಹೊಂಡದ ಬಗ್ಗೆ ಕ್ರಮ ತೆಗೆದುಕೊಳ್ಳುವುದೇ ಇಲ್ಲ. ವಾಹನಗಳು ನಿಬಿಡವಾಗಿ ಚಲಿಸುವ ಆ ರಸ್ತೆಯಲ್ಲಿ ಆ ಹೊಂಡ ಇರಲೇಬಾರದು. ಆ ಹೊಂಡಕ್ಕೆ ಕಾರಣವಾದ ರಸ್ತೆ ಗುತ್ತಿಗೆದಾರ, ಆ ಹೊಂಡವನ್ನು ಮುಚ್ಚದ ನಗರ ಪಾಲಿಕೆ ವ್ಯವಸ್ಥಾಪಕ, ರಸ್ತೆಗಳ ಮೇಲುಸ್ತುವಾರಿ ವಹಿಸಿರುವ ಅಧಿಕಾರಿ, ಆ ಸ್ಥಾನದ ಚುನಾಯಿತ ಪ್ರತಿನಿಧಿ – ಇವರೆಲ್ಲರ ಅಸಮರ್ಥತೆಯಿಂದ ಆದ ಅಪಘಾತ ಅದು. ಆದರೆ ಆ ವಿಷಯವಾಗಿ ಏಟು ತಿನ್ನುವವರು ಇನ್ಯಾರೋ! ಇದು ನಮ್ಮ ದೇಶದ ವಾಸ್ತವ. ಆರೋಗ್ಯ ಕ್ಷೇತ್ರವೂ ಇದಕ್ಕೆ ಹೊರತಲ್ಲ.

ಪ್ರಜೆಗಳ ಆರೋಗ್ಯ ರಕ್ಷಣೆ ಸರ್ಕಾರದ ಹೊಣೆ ಎಂಬುದನ್ನು ನಾವು ಅತ್ಯಂತ ಮುಖ್ಯವಾಗಿ ಅರಿಯಬೇಕು. ಪ್ರಜೆಗಳ ಹಣಕಾಸಿನ ಪರಿಸ್ಥಿತಿ ಮುಕ್ಕಾಗದಂತೆ ಅವರಿಗೆ ಎಲ್ಲಾ ಸ್ತರಗಳಲ್ಲೂ ಆರೋಗ್ಯ ರಕ್ಷಣೆ ಒದಗಿಸುವುದು ಸರ್ಕಾರದ ಮೂಲ ಧ್ಯೇಯವಾಗಿರಬೇಕು. ಸರ್ಕಾರಿ ಆಸ್ಪತ್ರೆಗಳ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸದ ಹೊರತು ಇದು ಸಾಧ್ಯವಿಲ್ಲ. ಪ್ರಪಂಚದ ಯಾವ ರಾಷ್ಟ್ರವೂ ತನ್ನ ಪ್ರಜೆಗಳ ಆರೋಗ್ಯ ನಿರ್ವಹಣೆಗೆ ಖಾಸಗಿಯವರನ್ನು ಹೊಣೆ ಮಾಡಲು ಸಾಧ್ಯವಿಲ್ಲ. ಆದರೆ ನಮ್ಮ ದೇಶದ ಸ್ಥಿತಿ ಡೋಲಾಯಮಾನವಾಗಿದೆ. ಸರ್ಕಾರ ತಾನು ಗಟ್ಟಿಯಾಗಿ ಏನನ್ನೂ ಮಾಡುವುದಿಲ್ಲ. ಮಾಡಲು ಯಾರಾದರೂ ಮುಂದೆ ಬಂದರೆ ಅವರಿಗೆ ನೂರಾರು ಕಾಯಿದೆ ನಿಯಮ ಹಾಕಿ ಅವರನ್ನು ಹಿಮ್ಮೆಟ್ಟಿಸುತ್ತದೆ. ತನ್ನ ಕೈಲಿ ಆಗದ ಕೆಲಸವನ್ನು ಖಾಸಗಿಯವರು ಮಾಡಿದರೆ ಅದಕ್ಕೆ ಸಹಕಾರ ನೀಡಿ ಪ್ರಜೆಗಳಿಗೆ ಒಳಿತು ಮಾಡಬಲ್ಲ ಒಪ್ಪಂದಗಳನ್ನು ಅವರೊಂದಿಗೆ ಮಾಡಿಕೊಳ್ಳುವ ವಿಧಾನಗಳನ್ನು ಬಿಟ್ಟು ಅವುಗಳ ನಡು ಮುರಿಯುವಂತೆ ತೆರಿಗೆ ಹಾಕಿ ಹೈರಾಣು ಮಾಡುತ್ತದೆ. ಇದಲ್ಲದೇ ಖಾಸಗೀ ಆಸ್ಪತ್ರೆಗಳಿಗೆ ಅಧಿಕಾರಶಾಹಿಯ ಆಟಾಟೋಪ, ಲಂಚಕೋರ ಅಧಿಕಾರಿಗಳ ವಿಕೃತಿಗಳ ಸಂಕಟ, ರಾಜಕಾರಣದ ಅಹಮಿಕೆಗೆ ತರುವ ಅಯೋಮಯ ಕಾಯಿದೆಗಳ ಸಂಕಷ್ಟಗಳು ಬೇರೆ. “ತಾನು ಮಾಡಲ್ಲ; ನೀವು ಮಾಡಲು ಬಿಡಲ್ಲ” ಎಂಬ ಸರ್ಕಾರಿ ನೀತಿಯಲ್ಲಿ ಪ್ರಜೆಗಳು ಬಡವಾಗುವುದು ಯಾರ ಅರಿವಿಗೂ ಬರುವಂತಿಲ್ಲ.

(22/6/2018 ರ ವಿಶ್ವವಾಣಿ ದಿನಪತ್ರಿಕೆಯಲ್ಲಿ ಪ್ರಕಟವಾದ ಲೇಖನ.)
ಯುನಿಕೋಡ್ ಲಿಂಕ್: https://www.vishwavani.news/poor-for-govt-policy/
.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ