ಗುರುವಾರ, ಮೇ 31, 2018




**ಯಾರು ಹಿತವರು ನಿನಗೆ ಈ ಮೂವರೊಳಗೆ?!**


(ಲೇಖಕರು: ಡಾ. ಕಿರಣ್ ವಿ. ಎಸ್.)


ಕೆಲವು ವರ್ಷಗಳ ಹಿಂದೆ ತಮ್ಮ ಭಾನುವಾರದ ಅಂಕಣದಲ್ಲಿ ವಿಶ್ವೇಶ್ವರ ಭಟ್ಟರು ಒಂದು ಸಣ್ಣ ಪ್ರಸಂಗ ದಾಖಲಿಸಿದ್ದರು. ಅದು ಬಹಳ ಮೌಲ್ಯವಿರುವ ಸಂಗತಿ ಎಂದು ಒಂದೆಡೆ ಬರೆದಿಟ್ಟುಕೊಂಡಿದ್ದೆ. ಆ ಪ್ರಸಂಗ ಹೀಗಿತ್ತು: ಹೆಸರಾಂತ ಮುದ್ರಕರೊಬ್ಬರು ತಮ್ಮ ಕಚೇರಿಯಲ್ಲಿ ಈ ರೀತಿ ಸಂದೇಶ ಬರೆಸಿದ್ದರು - “ನಾವು ಗ್ರಾಹಕರಿಗೆ ಹಣ, ಸಮಯ ಮತ್ತು ಗುಣಮಟ್ಟ ಎಂಬ ಮೂರು ಆಯ್ಕೆಗಳನ್ನು ನೀಡುತ್ತೇವೆ. ಇದರಲ್ಲಿ ಯಾವುದೇ ಎರಡನ್ನು ಗ್ರಾಹಕರು ಆಯ್ಕೆ ಮಾಡಿಕೊಳ್ಳಬಹುದು. ಮೂರನೆಯದನ್ನು ನಾವು ನಿರ್ಧರಿಸುತ್ತೇವೆ”.

ಈ ಮಾತು ಗ್ರಾಹಕ ಕ್ಷೇತ್ರದಲ್ಲಿ ಜಾಗತಿಕವಾಗಿ ಸಲ್ಲುವಂತಹದ್ದು. ನಾವು ಕಡಿಮೆ ಬೆಲೆಗೆ ತುರ್ತಾಗಿ ಯಾವುದೇ ವಸ್ತುವನ್ನು ಬಯಸಿದರೆ ಅದರ ಗುಣಮಟ್ಟ ಕ್ಷೀಣವಾಗಿಯೇ ಇರುತ್ತದೆ! ನಮಗೆ ಕೆಲಸ ಬೇಗ ಆಗಬೇಕು ಹಾಗೂ ಅದು ಉತ್ತಮ ಗುಣಮಟ್ಟದ್ದಾಗಿರಬೇಕು ಎಂದರೆ ಅದಕ್ಕೆ ಸರಿದೂಗುವ ಬೆಲೆಯನ್ನು ತೆರಬೇಕು. ಅಂತಹ ವಸ್ತು ಸಸ್ತಾ ಆಗಿ ಸಿಗಲಾರದು. ಒಂದು ವೇಳೆ ನಾವು ಒಳ್ಳೆಯ ಗುಣಮಟ್ಟದ ವಸ್ತುವನ್ನು ಕಡಿಮೆ ಹಣದಲ್ಲಿ ಪಡೆಯಬೇಕು ಎಂದರೆ ಅದಕ್ಕೆ ಕಾಯುವ ತಾಳ್ಮೆ ಇರಬೇಕು. ಅದು ಆತುರದಲ್ಲಿ ಲಭಿಸದು.

ಇಂದಿನ ವೈದ್ಯಕೀಯ ಕ್ಷೇತ್ರದಲ್ಲೂ ಈ ಸಂಗತಿ ಅತ್ಯಂತ ಪ್ರಸ್ತುತ. ವಿಪರೀತ ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಗುಣಮಟ್ಟದ ಚಿಕಿತ್ಸೆಯನ್ನು ಯಾವುದೇ ರೀತಿಯ ಕಾಲವಿಳಂಬವಿಲ್ಲದೆ ನೀಡಲು ಯಾವುದೇ ಆಸ್ಪತ್ರೆಗೂ ಸಾಧ್ಯವಿಲ್ಲ. ಇಲ್ಲಿ ರೋಗಿಗಳು ಮೂರರಲ್ಲಿ ಎರಡು ಆಯ್ಕೆಗಳನ್ನು ಮಾತ್ರ ಮಾಡಬಹುದು. ಯಾವ ಎರಡು ಆಯ್ಕೆಗಳು ಎಂಬುದು ಅವರಿಗೆ ಬಿಟ್ಟದ್ದು. ಮೂರನೆಯದರ ಆಯ್ಕೆ ಆಸ್ಪತ್ರೆಗೆ, ವೈದ್ಯರಿಗೆ ಬಿಡಲೇಬೇಕಾಗುತ್ತದೆ.

ಉದಾಹರಣೆಗಳೊಂದಿಗೆ ಈ ವಿಷಯವನ್ನು ಸ್ಪಷ್ಟಪಡಿಸಬಹುದು. ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ರೋಗಿಯೊಬ್ಬರು ತುಂಬಾ ನಿತ್ರಾಣರಾಗಿದ್ದಾರೆ. ಮಂಪರು ಕವಿದಿದೆ. ಆಸ್ಪತ್ರೆಗೆ ಒಯ್ದು ಚಿಕಿತ್ಸೆ ನೀಡುವುದಲ್ಲದೇ ಬೇರೆ ದಾರಿಯೇ ಇಲ್ಲ. ಆ ರೋಗಿಯ ಕುಟುಂಬಕ್ಕೆ ಮೂರು ಆಯ್ಕೆಗಳಿವೆ. ಸರಕಾರೀ ಆಸ್ಪತ್ರೆ, ಸಮೀಪದ ಸಣ್ಣ ಖಾಸಗೀ ಆಸ್ಪತ್ರೆ ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ.

ಸರಕಾರೀ ಆಸ್ಪತ್ರೆಯಲ್ಲಿ ಖರ್ಚು ಕಡಿಮೆ. ವೈದ್ಯಕೀಯ ಸಿಬ್ಬಂದಿಯ ಗುಣಮಟ್ಟ ಉತ್ತಮವಾಗಿದ್ದರೂ ಸರಕಾರದಿಂದ ಲಭಿಸುವ ಉಪಕರಣಗಳು, ಸವಲತ್ತುಗಳು ಕಡಿಮೆ. ಜನಸಂದಣಿ ವಿಪರೀತ. ಒಟ್ಟಾರೆ ವೈದ್ಯರ, ದಾದಿಯರ, ಸಹಾಯಕರ ಸಂಖ್ಯೆ ಆ ಜನಸಾಗರಕ್ಕೆ ಏನೇನೂ ಸಾಲದು.

ಸಣ್ಣ ಖಾಸಗೀ ಆಸ್ಪತ್ರೆ ಅಥವಾ ನರ್ಸಿಂಗ್ ಹೋಂಗಳಲ್ಲಿ ಒಳ್ಳೆಯ ಗುಣಮಟ್ಟದ ಆರೈಕೆ ಸಿಗುತ್ತದೆ. ಜನಸಂದಣಿ ಹೆಚ್ಚು ಇಲ್ಲದ ಕಾರಣ ರೋಗಿಗೆ ವೈಯುಕ್ತಿಕ ನಿಗಾ ಸಾಧ್ಯ. ಖರ್ಚು ಸ್ವಲ್ಪ ಇರುತ್ತದೆ. ಚಿಕಿತ್ಸೆಗೆ ಅಗತ್ಯವಿರುವ ತಜ್ಞ ವೈದ್ಯರು ಸದಾ ಕಾಲ ಸಿಗಲಾರರು. ಅವರ ಬರುವಿಕೆಗೆ ಕಾಯಬೇಕು. ಒಟ್ಟಾರೆ ಒಳ್ಳೆಯ ಚಿಕಿತ್ಸೆ ದೊರಕಿದರೂ ಕಾಯುವಿಕೆ ಅಗತ್ಯ.

ಬೃಹತ್ ಸ್ಪೆಷಾಲಿಟಿ ಆಸ್ಪತ್ರೆಗಳ ಕತೆಯೇ ಬೇರೆ. ಇಲ್ಲಿ ಸದಾ ಕಾಲ ತಜ್ಞ ವೈದ್ಯರ ಸೌಲಭ್ಯ ಇರುತ್ತದೆ. ರೋಗದ ಚಿಕಿತ್ಸೆಗೆ ಅವಶ್ಯಕವಾದ ಪರೀಕ್ಷೆಗಳು, ಪರಿಕರಗಳು ಕೂಡಲೇ ಲಭಿಸುತ್ತವೆ. ಸಾಕಷ್ಟು ಸಂಖ್ಯೆಯಲ್ಲಿ ವೈದ್ಯರು, ದಾದಿಯರು, ಸಹಾಯಕರು ಇರುತ್ತಾರೆ. ಯಾವುದೇ ಕ್ಲಿಷ್ಟಕರ ಖಾಯಿಲೆಯನ್ನೂ ಸೂಕ್ತವಾಗಿ ಪತ್ತೆಮಾಡಿ ಪರಿಹರಿಸಬಲ್ಲ ವ್ಯವಸ್ಥೆ ಇರುತ್ತದೆ. ಈಗಂತೂ ಇಂತಹ ದೊಡ್ಡ ಆಸ್ಪತ್ರೆಗಳು ಸರಣಿ ರೂಪದಲ್ಲಿ ದೇಶದ ಹಲವಾರು ನಗರಗಳಲ್ಲಿ ಶಾಖೆಗಳನ್ನು ಹೊಂದಿರುತ್ತವೆ. ಯಾವುದೇ ಶಾಖೆಯ ತಜ್ಞ ವೈದ್ಯರನ್ನೂ ಅಂತರ್ಜಾಲದ ಮೂಲಕ ಸಂಪರ್ಕಿಸಲು ಸಾಧ್ಯ. ವಿಷಮ ಸನ್ನಿವೇಶಗಳಲ್ಲಿ ಇತರ ತಜ್ಞರನ್ನು ಸಂಪರ್ಕಿಸಿ ಸಲಹೆ ಪಡೆಯಲಾಗುತ್ತದೆ. ವಿದೇಶಗಳಲ್ಲಿ ತರಬೇತಿ ಪಡೆದು ಬಂದಿರುವ ಹಲವಾರು ವೈದ್ಯರು ತಮ್ಮ ವೈಯುಕ್ತಿಕ ವರ್ಚಸ್ಸಿನಿಂದ ವಿದೇಶೀ ತಜ್ಞರ ಸಲಹೆಯನ್ನೂ ಪಡೆಯಬಲ್ಲರು. ಇವೆಲ್ಲಾ ರೋಗಿಯ ಚಿಕಿತ್ಸೆಗೆ ಬಹಳ ಅನುಕೂಲಕಾರಿ.

ಅಂದರೆ ಆಯ್ಕೆಗಳು ಸ್ಪಷ್ಟವಾದವು. ಚಿಕಿತ್ಸೆ ಕಡಿಮೆ ಖರ್ಚಿನಲ್ಲಿ ಸುಮಾರು ವೇಗದಲ್ಲಿ ಆಗಬೇಕು ಎಂದರೆ ಸರಕಾರೀ ಆಸ್ಪತ್ರೆಯಲ್ಲಿ ಸಾಧ್ಯ. ಆದರೆ ಇಲ್ಲಿ ಅತ್ಯುತ್ಕೃಷ್ಟ ಗುಣಮಟ್ಟದ ಪರಿವೆ ಇರಬಾರದು. ಯಾವುದೇ ಕೆಲಸವೂ ಝಟಾಪಟ್ ಆಗುವ ಸಾಧ್ಯತೆ ನಗಣ್ಯವಾದರೂ ವೇಗವಾಗಿ ಕೆಲಸ ಸಾಗುತ್ತಲೇ ಇರುತ್ತದೆ. ಇಲ್ಲವಾದರೆ ಆ ವ್ಯವಸ್ಥೆಗೆ ಮುಂದಿನ ದಿನ ಬರಬಹುದಾದ ರೋಗಿಗಳ ಪಟ್ಟಿಯನ್ನು ನಿರ್ವಹಿಸಲು ಸಾಧ್ಯವಿಲ್ಲ! ರೋಗಿಗಳ ಸಂಖ್ಯೆ ಹೆಚ್ಚಾದಷ್ಟೂ ಸೀಮಿತ ಸವಲತ್ತುಗಳ ಕಾರಣದಿಂದ ಚಿಕಿತ್ಸೆಯ ಗುಣಮಟ್ಟ ಕುಗ್ಗುತ್ತಲೇ ಹೋಗುತ್ತದೆ.

ಅದೇ ರೀತಿ, ಸ್ವಲ್ಪ ಖರ್ಚಾದರೂ ಒಳ್ಳೆಯ ಗುಣಮಟ್ಟದ ಚಿಕಿತ್ಸೆ ಬಯಸುವವರು ಸಣ್ಣ ಖಾಸಗೀ ಆಸ್ಪತ್ರೆಗಳಿಗೆ ಹೋಗಬೇಕು. ಆದರೆ ಅಲ್ಲಿ ಕಾಯುವಿಕೆ ತಪ್ಪಿದ್ದಲ್ಲ! ಸಣ್ಣ ಖಾಯಿಲೆಗಳಾದರೆ ಚಿಂತೆಯಿಲ್ಲ. ಆದರೆ ಸ್ವಲ್ಪ ವಿಷಮವಾದ ರೋಗಗಳು, ಒಂದಕ್ಕಿಂತ ಹೆಚ್ಚು ಅಂಗಗಳನ್ನು ಆವರಿಸಿರುವ ಖಾಯಿಲೆಗಳಿಗೆ ಪರೀಕ್ಷೆಗಳಿಂದ ಹಿಡಿದು ತಜ್ಞರ ಸಲಹೆಯವರೆಗೆ ಕಾಯುವಿಕೆ ಅಗತ್ಯ. ಜೇಬಿನ ಮೇಲೆ ಒತ್ತಡ ತೀರಾ ಹೆಚ್ಚು ಆಗದಿದ್ದರೂ ತಾಳ್ಮೆ ಬಹಳ ಇರಬೇಕು! ಎಲ್ಲವನ್ನೂ ಅರ್ಜೆಂಟ್ ಆಗಿ ಬಯಸುವವರಿಗೆ ಈ ಆಯ್ಕೆ ಸಮಂಜಸವಲ್ಲ!

ಇಂದಿನ ಪರಿಸ್ಥಿತಿಯಲ್ಲಿ ಅತ್ಯುತ್ತಮ ಚಿಕಿತ್ಸೆ ಕ್ಷಿಪ್ರವಾಗಿ ಆಗಬೇಕು ಎನ್ನುವವರಿಗೆ ಒಂದೇ ಆಯ್ಕೆ: ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು. ಆದರೆ ಇದನ್ನು ನಿಭಾಯಿಸಲು ಮಾತ್ರ ಹಣದ ಮುಖ ನೋಡುವಂತಿಲ್ಲ! ಒಂದು ವಾರ ವಿದೇಶ ಪ್ರವಾಸಕ್ಕೆ ತಗಲುವ ಖರ್ಚು ನಾಲ್ಕು ದಿನ ಇಂತಹ ಆಸ್ಪತ್ರೆಗಳಲ್ಲಿ ಇದ್ದರೆ ಇಂಗಿಹೋಗುತ್ತದೆ! ಚಿಕಿತ್ಸೆಯ ಕೊನೆಯಲ್ಲಿ ಬಿಲ್ಲನ್ನು ನೋಡುವುದು ಅಳ್ಳೆದೆಯವರಿಗೆ ಸಾಧ್ಯವಿಲ್ಲ! ಒಟ್ಟಿನಲ್ಲಿ ಮಧ್ಯಮವರ್ಗದ ಬಹುಕಾಲದ ಉಳಿತಾಯವನ್ನು ಒಂದೇ ಏಟಿನಲ್ಲಿ ನಿವಾಳಿಸಬಲ್ಲ ಶಕ್ತಿ ಈ ಆಸ್ಪತ್ರೆಗಳಿಗೆ ಇದೆ!

ಗ್ರಾಹಕರ ದೃಷ್ಟಿಯಿಂದ ಇದು ಪ್ರಸ್ತುತ ಪರಿಸ್ಥಿತಿ. ವೈದ್ಯಕೀಯ ಚಿಕಿತ್ಸೆಯನ್ನು “ಸೇವೆ” ಎಂದು ಪರಿಗಣಿಸುವ ಕಾಲ ಎಂದೋ ಮುಗಿದುಹೋಗಿದೆ. ರೋಗಿಗಳ-ವೈದ್ಯರ ನಡುವಿನ ಸಂಬಂಧವನ್ನು ಗ್ರಾಹಕ ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು ಎಂದು ನಿರ್ಧರಿಸಿದ ಮೇಲೆ “ಸೇವೆ” ಎನ್ನುವ ಪದ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿದೆ. ಕೇವಲ ಅನುಕೂಲಸಿಂಧು ಪರಿಸ್ಥಿತಿಗಳಲ್ಲಿ “ಸೇವೆ” ಎಂಬ ಪದ ಇನ್ನೂ ಬಳಕೆ ಆಗುತ್ತಿದೆ. ವಾಸ್ತವದಲ್ಲಿ ಯಾವ ಸೇವೆಯೂ ಇಲ್ಲ. ಕಾಳಜಿ, ವೃತ್ತಿಪರತೆ, ಸಹಾನುಭೂತಿ ಇವೆಲ್ಲಾ ಈ ಸಂಬಂಧಗಳಲ್ಲಿ ಇನ್ನೂ ಉಳಿದಿವೆಯಾದರೂ ಸೇವೆ ಎಂಬ ಪದದ ಅರ್ಥವ್ಯಾಪ್ತಿ ಇದರಲ್ಲಿ ಇಲ್ಲ.

ಇಂತಹ ಕಾಲಮಾನದಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ಬೇರೇನು ಸಾಧ್ಯತೆಗಳಿವೆ? ಸರ್ಕಾರ ಜನರ ಆರೋಗ್ಯಕ್ಕೆ ಮೀಸಲಿಟ್ಟಿರುವ ಹಣ ತೀರಾ ತೀರಾ ಅಲ್ಪ. ಬಡತನದ ರೇಖೆಯಲ್ಲಿ ನಮ್ಮ ದೇಶಕ್ಕಿಂತಾ ಕೆಳಗೆ ಇರುವ ದೇಶಗಳು ನಮಗಿಂತಾ ಹೆಚ್ಚಿನ ಪ್ರಮಾಣದ ಪ್ರತಿಶತ ಹಣವನ್ನು ಪ್ರಜೆಗಳ ಆರೋಗ್ಯಕ್ಕೆ ಮೀಸಲಾಗಿ ಇಟ್ಟಿವೆ. ಇದರ ಮೇಲೆ ನಮ್ಮ ದೇಶದ ಆಡಳಿತ ವ್ಯವಸ್ಥೆಯ ತುಂಬಾ ರಾರಾಜಿಸುತ್ತಿರುವ ಭ್ರಷ್ಟಾಚಾರವೆಂಬ ಭೂತ ಆ ಅಲ್ಪ ಹಣದ ಅಧಿಕ ಪ್ರಮಾಣವನ್ನು ನುಂಗಿಬಿಡುತ್ತದೆ. ಇದನ್ನೆಲ್ಲಾ ಬಿಗಿಯಾಗಿ ನಿಯಂತ್ರಿಸಬೇಕು.

ಮುಖ್ಯವಾಗಿ ಜನರ ಆರೋಗ್ಯವನ್ನು ಸರ್ಕಾರ ಮೂಲಭೂತ ಹಕ್ಕು ಎಂದು ಘೋಷಿಸಿ, ಆರೋಗ್ಯ ರಕ್ಷಣೆಯ ಪೂರ್ಣ ಜವಾಬ್ದಾರಿಯನ್ನು ವಹಿಸಬೇಕು. ಉಳ್ಳವರು ಕೂಡ ಸರ್ಕಾರಿ ಆಸ್ಪತ್ರೆಗೆ ಬರುವಂತೆ ವ್ಯವಸ್ಥೆಯನ್ನು ಉತ್ತಮಗೊಳಿಸಬೇಕು. ರೈಲುಗಳಲ್ಲಿ ಮೊದಲ ದರ್ಜೆ, ವಾತಾನುಕೂಲಿ ದರ್ಜೆ ಇರುವ ಹಾಗೆ ಸರಕಾರೀ ಆಸ್ಪತ್ರೆಗಳಲ್ಲೂ ಮೇಲಿನ ದರ್ಜೆಗಳನ್ನು ನಿರ್ಮಿಸಿ ಅದಕ್ಕೆ ತಕ್ಕಂತೆ ಹೆಚ್ಚಿನ ದರಗಳನ್ನು ನಿಗದಿಪಡಿಸಬೇಕು. ಆ ರೀತಿ ಬರುವ ಅಧಿಕ ಆದಾಯದಿಂದ ಸಾಮಾನ್ಯ ವಾರ್ಡ್ ಗಳ ಖರ್ಚನ್ನು ತೂಗಿಸಿ ಆರೋಗ್ಯ ವ್ಯವಸ್ಥೆಯನ್ನು ಸ್ವಾಯತ್ತಗೊಳಿಸುವ ದಾರಿಯನ್ನು ನಿರ್ಮಿಸಬೇಕು. ಸರಕಾರೀ ಆಸ್ಪತ್ರೆಗಳನ್ನು ನಿರ್ವಹಿಸುವ ಪ್ರತ್ಯೇಕ ಮಂಡಳಿ ನಿರ್ಮಿಸಿ ಇಡೀ ವ್ಯವಸ್ಥೆಯ ಉಸ್ತುವಾರಿಯನ್ನು ಅದಕ್ಕೆ ನೀಡಬೇಕು. ಸರಕಾರೀ ಆಸ್ಪತ್ರೆಯ ಯಾವುದೇ ದೋಷಗಳಿಗೆ ಆ ಮಂಡಳಿಯನ್ನು ಜವಾಬ್ದಾರರನ್ನಾಗಿ ಮಾಡಬೇಕು. ವೈದ್ಯರು ತಮ್ಮ ಮೇಲೆ ನಡೆಯಬಹುದಾದ ಹಲ್ಲೆಯ ಭಯ ಇಲ್ಲದೆ, ನ್ಯಾಯಾಂಗದ ಬಗ್ಗೆ ಅನಗತ್ಯ ಅಂಜಿಕೆ ಇಲ್ಲದೆ ನಿರ್ಭಯವಾಗಿ ಕೆಲಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಬೇಕು. ಸರ್ಕಾರ ತನ್ನ ಸುಪರ್ದಿಯಲ್ಲಿರುವ ಆಸ್ಪತ್ರೆಗಳನ್ನು ಶಿಥಿಲಾವಸ್ಥೆಯಲ್ಲಿ ಇಟ್ಟು ಖಾಸಗೀ ಆಸ್ಪತ್ರೆಗಳ ಏಳಿಗೆಯನ್ನು ನೋಡಿ ಕರುಬುವ, ಅಂತಹ ಆಸ್ಪತ್ರೆಗಳನ್ನು ಏನಕೇನಪ್ರಕಾರೇಣ ಮಣಿಸುವ ಬದಲಿಗೆ, ಸರಕಾರೀ ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸಿ, ಸ್ವಯಂ ಖಾಸಗೀ ಆಸ್ಪತ್ರೆಗಳೇ ಅವುಗಳ ಮುಂದೆ ಮಂಡಿಯೂರುವ ಹಾಗೆ ಬೆಳೆಸಬೇಕು. ಆಗ ಮಾತ್ರ ಈ ದೇಶ ಆರೋಗ್ಯದ ವಿಷಯದಲ್ಲಿ ಒಂದು ಸಮತೋಲನ ಸಾಧಿಸಲು ಸಾಧ್ಯ. ಸರ್ಕಾರ ಮತ್ತು ಖಾಸಗೀ ಆರೋಗ್ಯ ಸಂಸ್ಥೆಗಳ, ವೈದ್ಯರ ನಡುವೆ ನಾನಾ ನೀನಾ ಎಂಬ ಜಟಾಪಟಿಯಲ್ಲಿ ಸೋಲುವುದು ಮಾತ್ರ ದೇಶದ ಬಡ ಪ್ರಜೆಗಳು ಎಂಬುದನ್ನು ಸರ್ಕಾರ ಎಂದಿಗೂ ಮರೆಯಬಾರದು. 


(2/ಜೂನ್/2018 ರ ವಿಶ್ವವಾಣಿ ದಿನಪತ್ರಿಕೆಯ ಅಂಕಣ)
ಯುನಿಕೋಡ್ ಕೊಂಡಿ: https://www.vishwavani.news/viparyasa-3/

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ