ಸೋಮವಾರ, ನವೆಂಬರ್ 11, 2024


 ಸಂಭ್ರಮಿಸುವ ಗೆಳೆಯರಿದ್ದರೆ ಗೆಲುವಿನ ಆನಂದ ನೂರು ಪಟ್ಟು.

“ಸೆರೆಂಡಿಪಿಟಿ” ಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ. ಇದು ಸಂತಸಕ್ಕಿಂತ ಹೆಚ್ಚಾಗಿ ಅಚ್ಚರಿಯ ವಿಷಯ; ಖಂಡಿತ ಊಹಿಸಿರಲಿಲ್ಲ. ಬಹಳ ಮಂದಿಗೆ ಆಭಾರಿಯಾಗುವುದಿದೆ.
ವಿದ್ಯಾರ್ಥಿ ಹಂತದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನಿಂದ ಬಹುಮಾನ ಪಡೆದಿದ್ದರೂ, ಆನಂತರ ಸುಮಾರು 14 ವರ್ಷಗಳ ಕಾಲ ಬರವಣಿಗೆಯನ್ನು ನಿಲ್ಲಿಸಿದ್ದ ನನ್ನನ್ನು ಮತ್ತೆ ಬರವಣಿಗೆಯತ್ತ ಪ್ರೇರೇಪಿಸಿದ ಮಿತ್ರ ಡಾ. Dayananda Lingegowda ಅವರಿಗೆ.
ಅದೂ, ಇದೂ ಬರೆದುಕೊಂಡು ಕಾಲ ಹಾಕುತ್ತಿದ್ದ ನನ್ನನ್ನು ಶಿಸ್ತಿನಿಂದ ಬರೆಯಲು ಪ್ರೇರೇಪಿಸಿದ, ಮೊದಲ ಬಾರಿಗೆ ನನ್ನಿಂದ ಪುಸ್ತಕವನ್ನು ಬರೆಯಿಸಿ ಪ್ರಕಟಿಸಿದ Nagesh Hegde ಅವರಿಗೆ.
ಬರೆಯುವ ಕಿಡಿ ಆರದಂತೆ ನಿರಂತರವಾಗಿ ವಿಷಯಗಳನ್ನು ನೀಡುತ್ತಾ ಬರೆಯಿಸಿ ಪ್ರೋತ್ಸಾಹಿಸುತ್ತಲೇ ಹೋದ Thalagunda Anantharamu , Srinidhi TG , Suryaprakash Pandit ಅವರಿಗೆ.
ಸರಣಿ ಲೇಖನಗಳಿಗೆ ವಸ್ತುವನ್ನು ಸೂಚಿಸಿ, ಬರೆಯಿಸಿ, ಪ್ರಕಟಿಸಿದ Rohith Chakrathirtha ಅವರಿಗೆ.
ಸೆರೆಂಡಿಪಿಟಿ ಪುಸ್ತಕದ ನಿರ್ಮಾಣಕ್ಕೆ ಮೂಲ ಕಾರಣರಾದ Kollegala Sharma ಅವರಿಗೆ
ಸೆರೆಂಡಿಪಿಟಿ ಪುಸ್ತಕವನ್ನು ಆದ್ಯಂತ ಓದಿ, ಅದನ್ನು ಪರಿಷ್ಕರಿಸಿದ ಮಿತ್ರ Sudhiiyr Prabhu ಅವರಿಗೆ
ಅಂತರ್ಜಾಲದಲ್ಲಿ ಅಡಗಿಕೊಂಡಿದ್ದ ಪುಸ್ತಕವನ್ನು ಗುರುತಿಸಿ, ಅದರ ಬಗ್ಗೆ ಲೇಖನ ಬರೆದು, ಸಾವಿರಾರು ಜನರನ್ನು ತಲುಪುವಂತೆ ಮಾಡಿದ, ಪುಸ್ತಕಕ್ಕೆ ಚಂದದ ಮುನ್ನುಡಿ ಬರೆದುಕೊಟ್ಟ Srivathsa Joshi ಅವರಿಗೆ
ಇ-ಪುಸ್ತಕ ಮಾಡಿ ಸುಮ್ಮನಿದ್ದ ನನ್ನನ್ನು ಹುರಿದುಂಬಿಸಿ, ತಾವೇ ಎಲ್ಲ ಹೊಣೆಗಾರಿಕೆ ವಹಿಸಿಕೊಂಡು ಸೆರೆಂಡಿಪಿಟಿಯನ್ನು ಮುದ್ರಿತ ರೂಪದಲ್ಲಿ ತಂದ Omshivaprakash H L ಅವರಿಗೆ
ಪುಸ್ತಕವನ್ನು ಓದಿ, ಮೆಚ್ಚಿ, ಪ್ರೋತ್ಸಾಹಿಸಿ, ಅನೇಕರಿಗೆ ತಲುಪಿಸಿದ Someswara Narappa , Udaya Shankar Puranika ಅವರಿಗೆ
ಪುಸ್ತಕಕ್ಕೆ ಲಭಿಸಿದ ಮಾನ್ಯತೆಯನ್ನು ತಮ್ಮ ಸ್ವಂತ ಗೆಲುವಿನಷ್ಟು ಸಂಭ್ರಮಿಸಿ ಹರ್ಷ ವ್ಯಕ್ತಪಡಿಸುತ್ತಿರುವ ಅಸಂಖ್ಯಾತ ಮಿತ್ರರಿಗೆ.
ಕೃತಜ್ಞತೆಗಳನ್ನು ಅರ್ಪಿಸುವ ಈ ಪಟ್ಟಿಗೆ ಅಂತ್ಯವೇ ಇಲ್ಲ ಎಂದು ಮನಸ್ಸಿಗೆ ಅನಿಸುವಂತೆ ಮಾಡಿದ ಎಲ್ಲ ಸಹೃದಯರಿಗೆ.
ಸದಾ ಆಭಾರಿ.
ಧನ್ಯವಾದಗಳು.
“ಸೆರೆಂಡಿಪಿಟಿ” ಮುದ್ರಿತ ಪುಸ್ತಕವನ್ನು ಖರೀದಿಸಲು ಈ ಲಿಂಕ್ ಬಳಸಿ: https://amzn.to/3qRSLuN
“ಸೆರೆಂಡಿಪಿಟಿ” ಇ-ಪುಸ್ತಕವನ್ನು ಉಚಿತವಾಗಿ download ಮಾಡಿಕೊಳ್ಳಲು ಈ ಲಿಂಕ್ ಬಳಸಿ: https://play.google.com/store/books/details?id=ji84EAAAQBAJ


 

ಅಮ್ಮನನ್ನು ಬದಲಿಸಿದ ಪಾಪು

ಡಾ. ಕಿರಣ್ ವಿ.ಎಸ್.

ವೈದ್ಯರು

 

ಬಸುರಿಯಾಗುವುದು ಬದುಕಿನ ಮಹತ್ವದ ಘಟ್ಟಗಳಲ್ಲಿ ಒಂದು. ಅನೇಕ ದೈಹಿಕ ಮತ್ತು ಮಾನಸಿಕ ಬದಲಾವಣೆಗಳು ಆಗುವುದು ಈ ಘಟ್ಟದಲ್ಲೇ. ಏಕಕೋಶ ಜೀವಿಯ ಹಂತದಿಂದ ಆರಂಭವಾಗುವ ಭ್ರೂಣ, ಪೂರ್ಣಪ್ರಮಾಣದ ಶಿಶುವಾಗಿ ಜನಿಸುವ ಮುನ್ನ ಗರ್ಭದಲ್ಲಿ ಬೆಳೆಯುವ ಅವಧಿ ಸುಮಾರು ಒಂಬತ್ತು ತಿಂಗಳು. ಈ ಅವಧಿಯನ್ನು ಮೂರು-ಮೂರು ತಿಂಗಳ ಮೂರು ತ್ರೈಮಾಸಿಕಗಳೆನ್ನಬಹುದು. ಕೆಲ ದೇಶಗಳಲ್ಲಿ ಇದರ ಪರಿಗಣನೆ ತಲಾ ಹದಿಮೂರು ವಾರಗಳ ಮೂರು ಹಂತಗಳು. ಮೂವತ್ತೊಂಬತ್ತು ವಾರಗಳು ತುಂಬಿದ ನಂತರ ಹೆರಿಗೆ ಎಂದು ಲೆಕ್ಕ.

ಮೊದಲ ಮೂರು ತಿಂಗಳು ಭ್ರೂಣದ ಅಂಗಗಳ ವಿಕಸನದ ಕಾಲ. ಈ ಸಮಯದಲ್ಲಿ ಗರ್ಭಕೋಶದ ಮೂಲಭೂತ ಗಾತ್ರ ಬದಲಾಗದು. ಆನಂತರ ಆರು ತಿಂಗಳು ಭ್ರೂಣದ ಗಾತ್ರಕ್ಕೆ ಅನುಗುಣವಾಗಿ ಗರ್ಭಕೋಶದ ಗಾತ್ರದ ಬೆಳವಣಿಗೆ. ಬಸುರಿಯಾಗುವ ಮುನ್ನ ಕಿಬ್ಬೊಟ್ಟೆಯಲ್ಲಿ ಆರಾಮವಾಗಿ ಮಲಗಿದ್ದ ಗರ್ಭಕೋಶ, ಹೆರಿಗೆಯ ವೇಳೆಗೆ ಬೇರೆಲ್ಲ ಅಂಗಗಳ ಗಾತ್ರವನ್ನೂ ಮೀರಿಸಿ ಹಿಗ್ಗುವುದು ಎದೆಯ ಪಕ್ಕೆಲುಬುಗಳವರೆಗೆ.

ಮೊದಲ ತ್ರೈಮಾಸಿಕದ ಮೊದಲ ಬದಲಾವಣೆ ಋತುಚಕ್ರದ ನಿಲುಗಡೆ. ಯೋಜಿತ ದಿನಕ್ಕೆ ಮಾಸಿಕ ಋತುಸ್ರಾವ ಆಗದಿರುವುದು ಬಸುರಿನ ಮೊದಲ ಸೂಚನೆ. ಭ್ರೂಣವನ್ನು ಕಾಪಾಡಲು ಶರೀರ ಮಾಡುವ ಯೋಜನೆಗಳು ಒಂದೆರಡಲ್ಲ.  ಕೆಲವು ವಿಶಿಷ್ಟ ಹಾರ್ಮೋನ್ಗಳ ಸ್ರವಿಕೆಯಿಂದ ಸ್ತನಗಳ ಗಾತ್ರ ಹೆಚ್ಚುತ್ತದೆ. ಮನೆಗೆ ಬಂದಿರುವ ವಿಐಪಿ ಅತಿಥಿಯಂತೆ ಭ್ರೂಣದ ಅಗತ್ಯಗಳು ಹತ್ತು ಹಲವಾರು. ಅದನ್ನು ಪೂರೈಸಲು ಮನೆಯ ಮಂದಿಯೆಲ್ಲಾ ಓಡಾಡುವಂತೆ ಗರ್ಭಕೋಶ ಈಗ ಚಟುವಟಿಕೆಗಳ ಆಗರ; ಸುತ್ತಮುತ್ತಲಿನ ನರಗಳು, ರಕ್ತನಾಳಗಳಿಗೂ ಪೂರ್ಣಾವಧಿ ಕೆಲಸ. ಮನೆಯ ಗಲಾಟೆ ಪಕ್ಕದ ಮನೆಗೂ ತಲುಪುವಂತೆ, ಗರ್ಭಕೋಶದ ಮುಂಬದಿಯಲ್ಲೇ ಇರುವ ಮೂತ್ರಕೋಶಕ್ಕೆ ಕಿರಿಕಿರಿಯಾಗಿ, ಹೆಚ್ಚು ಬಾರಿ ಮೂತ್ರ ವಿಸರ್ಜನೆ ಆಗುತ್ತದೆ.

ಈ ಹಂತದಿಂದ ಮೊದಲುಗೊಂಡು ಹೆರಿಗೆಯವರೆಗೆ ಭ್ರೂಣವನ್ನು ಕಾಪಾಡುವುದು ಶರೀರದ ಪ್ರಮುಖ ಕೆಲಸ. ಭ್ರೂಣವೆಂಬ ವಿಐಪಿಗೆ ಬೇಕು-ಬೇಡಗಳನ್ನು ಪೂರೈಸಿ, ಇಡೀ ಶರೀರ ಸುಸ್ತು. “ಯಾಕೋ ಮೈಯಲ್ಲಿ ಸ್ವಸ್ಥವೇ ಇಲ್ಲ” ಎನ್ನುವ ಭಾವ. ಭ್ರೂಣದ ಸ್ವಾಸ್ಥ್ಯಕ್ಕೆ ಶರೀರ ಹಿಂದೆಂದೂ ಕಂಡಿರದ ವಿಶಿಷ್ಟ ಹಾರ್ಮೋನುಗಳ ಆಗಮನದಿಂದ ದೇಹಕ್ಕೂ ಮುಜುಗರ – ಪರಿಣಾಮ ವಾಕರಿಕೆ, ವಾಂತಿ; ತಿಂದದ್ದು ಅರಗುವ ಮುನ್ನ, ಅದು ಬಂದ ದಾರಿಯಲ್ಲೇ ಹೊರಗೆ. ಮೊದಲೇ ಸುಸ್ತು; ಅದರ ಮೇಲೆ ವಾಂತಿ. ಜೊತೆಗೆ ಋತುಸ್ರಾವ ಆಗಿರದೇ ಮೈಯೆಲ್ಲಾ ಭಾರ – ಬಸುರಿ ಎಂದು ಬಹುಮಟ್ಟಿಗೆ ಖಾತ್ರಿಯಾಗಲು ಕುಟುಂಬಕ್ಕೆ ಇಷ್ಟು ಸಾಕು.

ದೇಹಕ್ಕೆ ಸೇರುವ ಆಹಾರದ ಮೊದಲ ನೈವೇದ್ಯ ಭ್ರೂಣಕ್ಕೆ. ಇದರ ಮೇಲೆ ಭ್ರೂಣಕ್ಕೆ ಅಗತ್ಯಗಳ ಮಹಾಮೇಳ; ಅದಕ್ಕಾಗಿ ಮಿದುಳಿಗೆ ತಾಕೀತು. ಅದನ್ನು ಪೂರೈಸಲು ತಾರ್ಕಿಕ-ಅತಾರ್ಕಿಕ ಎನ್ನುವ ವ್ಯತ್ಯಾಸವಿಲ್ಲ. ಉದಾಹರಣೆಗೆ, ಭ್ರೂಣಕ್ಕೆ ಕಬ್ಬಿಣದ ಅಂಶ ಬೇಕು; ಅಮ್ಮನ ಬಳಿ ದಾಸ್ತಾನಿಲ್ಲ. ಆಗ ಭ್ರೂಣದಿಂದ ಸೀದಾ ಮಿದುಳಿಗೆ ಅಹವಾಲು. ವಿಐಪಿ ಡಿಮ್ಯಾಂಡ್ ಎಂದರೆ ಸುಮ್ಮನೆಯೇ? “ಎಲ್ಲಿಂದಾದರೂ ಸರಿ – ಕಬ್ಬಿಣವನ್ನು ತ(ತಿ)ನ್ನಿ” ಎಂದು ಹಳೆಯ ಕಾಲದ ರಾಜರಂತೆ ಮಿದುಳಿನಿಂದ ಆಜ್ಞೆ. ಕೆಮ್ಮಣ್ಣಿನ ಬಣ್ಣಕ್ಕೆ ಕಾರಣವೇ ಕಬ್ಬಿಣದ ಅಂಶವಷ್ಟೇ? ಹೀಗಾಗಿ ತಾಯಿಯಿಂದ ಕೆಮ್ಮಣ್ಣು ಸೇವನೆ. ಅಂತೆಯೇ, ಭ್ರೂಣಕ್ಕೆ ಕ್ಯಾಲ್ಸಿಯಂ ಬೇಕೆನಿಸಿದರೆ ತಾಯಿಯಿಂದ ಸೀಮೆಸುಣ್ಣ ಭಕ್ಷಣೆ. ಶತಮಾನಗಳಿಂದ ನಡೆಯುತ್ತಿದ್ದರೂ, ಬಹುಕಾಲ ಇದರ ಹಿನ್ನೆಲೆ ತಿಳಿಯದವರಿಂದ ಈ ವಿಲಕ್ಷಣ ವರ್ತನೆ “ಬಸುರಿ ಬಯಕೆ” ಎನ್ನುವ ಹೆಸರಿನಲ್ಲಿ ಸಾಮಾನ್ಯೀಕರಣ! ವಿಐಪಿ ಅತಿಥಿಗೆ ಮಾಡಿದ ಅಡುಗೆಯನ್ನೇ ಇತರರೂ ಇಷ್ಟವಿದ್ದರೂ, ಇರದಿದ್ದರೂ ತಿನ್ನಬೇಕಲ್ಲವೇ? ಹೀಗಾಗಿ, ತಾಯಿಗೆ ಹೊಟ್ಟೆ ಸಂಕಟ, ಉಬ್ಬರ, ಹುಳಿತೇಗು, ಅಜೀರ್ಣ, ಮಲಬದ್ಧತೆಗಳ ಸಂಕಟ. ಮೊದಲ ತ್ರೈಮಾಸಿಕದಲ್ಲಿ ಇವೆಲ್ಲ ಸಂದರ್ಭ-ಸನ್ನಿವೇಶ ಅಡ್ಜಸ್ಟ್ ಆದರೆ ಆಕೆಗೆ ಒಂದು ಕೆಜಿ ತೂಕ ಏರಿಕೆ; ಇಲ್ಲವಾದರೆ ಒಂದೆರಡು ಕೆಜಿ ಇಳಿಕೆ.

ಎರಡನೆಯ ತ್ರೈಮಾಸಿಕದ ಆರಂಭಕ್ಕೆ ತಾಯಿ ಮತ್ತು ಭ್ರೂಣದ ನಡುವೆ “ನೀ ನನಗಾದರೆ ನಾ ನಿನಗೆ” ಎಂಬ ಕದನವಿರಾಮ ಸಂಧಾನ. ತಾಯಿಗೆ ವಾಂತಿ, ಸುಸ್ತುಗಳಿಂದ ಮುಕ್ತಿಯಾದರೆ, ಭ್ರೂಣಕ್ಕೆ ಭರಪೂರ ಪೋಷಕಾಂಶಗಳ ರವಾನೆ. ಪರಿಣಾಮ – ಇಬ್ಬರ ತೂಕವೂ ಏರಿಕೆ. ಕಿಬ್ಬೊಟ್ಟೆಯಿಂದ ಹೊಟ್ಟೆಯ ತುಸು ಮೇಲ್ಭಾಗಕ್ಕೆ ಗರ್ಭಕೋಶದ ವಿಕಸನ – ನೋಡುಗರಿಗೆ “ಈಕೆ ಬಸುರಿ” ಎನ್ನುವ ಅನುಮಾನ. ಭ್ರೂಣದ ಕೈ-ಕಾಲುಗಳು ಗಟ್ಟಿಯಾದಂತೆ ಢಿಷುಂ-ಢಿಷುಂ ಆರಂಭ. ಮೊದಮೊದಲು ಗಾಬರಿಯಾದರೂ, ನಂತರ ಪ್ರತಿ ಬಾರಿ ತಾಯಿಗೆ ಇದರಿಂದ ರೋಮಾಂಚನ. ಗರ್ಭಕೋಶಕ್ಕೇನೋ ಬೆಳೆಯುವ ಹಪಹಪಿ; ಆದರೆ ಆ ವೇಗಕ್ಕೆ ಸರಿಯಾಗಿ ಹಿಗ್ಗಲು ಹೊಟ್ಟೆಯ ಚರ್ಮಕ್ಕೆ ವ್ಯವಧಾನ ಸಾಲದು. ಪರಿಣಾಮ – ಹೊಟ್ಟೆಯ ಚರ್ಮದ ಮೇಲೆ ಅಸಹಜವಾಗಿ ಹಿಗ್ಗಿದ ಗೆರೆಗಳು. ನೋಡುಗರಿಗೆ “ಪಕ್ಕಾ ಬಸುರಿ” ಎನ್ನುವ ಖಾತ್ರಿ; “ಎಷ್ಟು ತಿಂಗಳು?” ಎನ್ನುವ ಕುತೂಹಲ. ಗರ್ಭಕೋಶ ಹಿಗ್ಗುತ್ತಾ ಹೋದಂತೆ ದಿನದಿನವೂ ಸ್ವಲ್ಪ ನೋವು, ಸ್ವಲ್ಪ ಸಂಕಟ, ಒಂದಷ್ಟು ಹೆಚ್ಚು ಭಾರ. ಹಾರ್ಮೋನುಗಳ ಪ್ರಭಾವದಿಂದ ಮುಖದ ಮೇಲೆ ಕಂದು ಚುಕ್ಕೆಗಳು. ಅದನ್ನು ಎಣಿಸಿ, ಗುಣಿಸಿ “ಮಗು ಗಂಡೋ, ಹೆಣ್ಣೋ” ಎಂದು ಹೇಳಬಲ್ಲ ಫೇಸ್ಬುಕ್ ಪರಿಣತರು! ಅವರು ಹೇಳುವ ಭವಿಷ್ಯ ಎಷ್ಟು ನಿಜ ಎನ್ನುವುದಕ್ಕೆ ವೈಜ್ಞಾನಿಕ ಅಧ್ಯಯನಗಳು ನಾಸ್ತಿ; ಅಧ್ಯಯನದ ಬಗ್ಗೆ ಯಾರಿಗೂ ಆಸ್ಥೆಯೂ ನಾಸ್ತಿ.

ಇದೇ ಕಾಲಕ್ಕೆ ಸ್ತನಗಳ ಗಾತ್ರದಲ್ಲಿ ಮತ್ತಷ್ಟು ಹೆಚ್ಚಳ; ಸ್ತನಗಳ ತೊಟ್ಟುಗಳ ಮತ್ತು ಅದರ ಸುತ್ತಲ ಭಾಗದ ಬಣ್ಣದಲ್ಲಿ ಶಾಶ್ವತ ಬದಲಾವಣೆ. ಒಂದೇ ಸಮನೆ ಹಿಗ್ಗುತ್ತಿರುವ ಗರ್ಭಕೋಶದ ಭಾರ ಹೊಟ್ಟೆಯಲ್ಲಿ ಹರಿಯುವ ಧಮನಿಗಳ ಮೇಲೆ. ಇದರಿಂದ ಧಮನಿಗಳ ಹರಿವಿನಲ್ಲಿ ಏರುಪೇರು. ಪರಿಣಾಮ – ಕಾಲಿನಿಂದ ರಕ್ತ ಒಯ್ಯಬೇಕಾದ ಧಮನಿಯ ಕಾರ್ಯಕ್ಷಮತೆ ಕುಸಿತ – ಪಾದಗಳು, ಕಣಕಾಲು, ಕೆಲವೊಮ್ಮೆ ಮಂಡಿಯವರೆಗೆ ಊತ. “ರಾತ್ರಿ ವೇಳೆ ಮಗ್ಗುಲು ಬದಲಿಸುತ್ತಾ ಎಡಗಡೆ ಹೊರಳಿ ಮಲಗಬೇಕಮ್ಮಾ; ಅಂಗಾತ ಬೇಡ” ಎನ್ನುವ ಸಲಹೆ ಮನೆಯವರಿಂದ ಮತ್ತು ವೈದ್ಯರಿಂದ. ಬಸುರಿ ಅದನ್ನು ಮರೆತು, ಪಾದದ ಊತ ಇಳಿಯದಿದ್ದರೆ “ಸರಿಯಾಗಿ ನೋಡಿಕೊಳ್ಳಲು ಏನು ಧಾಡಿ” ಎಂದು ಬಡಪಾಯಿ ಗಂಡನಿಗೆ ಬೈಗುಳ. 

ಮೂರನೆಯ ತ್ರೈಮಾಸಿಕ ಆರಂಭವಾದಂತೆ ಎಲ್ಲರಿಗೂ “ಸಮಯಕ್ಕೆ ಮುನ್ನ ಮಗು ಜನಿಸಿದರೆ ಏನು ಗತಿ” ಎನ್ನುವ ಭಯಮಿಶ್ರಿತ ಆತಂಕ. ತೂಕ ಏರುತ್ತಿದ್ದಂತೆ ತಾಯಿಯ ಹೊಟ್ಟೆಯ ಜೊತೆಗೆ ಭ್ರೂಣದ ಫೈಟಿಂಗ್ ಮತ್ತಷ್ಟು ಹೆಚ್ಚಳ. ಗರ್ಭಕೋಶದ ಮೇಲ್ಭಾಗ ವಪೆಗೆ ಒತ್ತಿ, ತಾಯಿಯ ಉಸಿರಾಟದಲ್ಲೂ ಏರುಪೇರು; ಸ್ವಲ್ಪ ಶ್ರಮದ ಕೆಲಸ ಮಾಡಿದರೂ ಏದುಸಿರು. ಅಲ್ಲಿಯವರೆಗೆ ತಾಯಿಯ ಗರ್ಭಕೋಶದಲ್ಲಿ ತಿರುತಿರುಗಿ ಗಾಲಿ ಹೊಡೆಯುತ್ತಿದ್ದ ಭ್ರೂಣ, ಈಗ ಚೆನ್ನಾಗಿ ಬೆಳೆದು, ರಿಯಲ್ ಎಸ್ಟೇಟ್ ಅಭಾವ. ಹೀಗಾಗಿ, “ತಾನೂ ಸೆಟಲ್ ಆಗುವ” ಎನ್ನುವ ಭಾವದಿಂದ ಭ್ರೂಣದ ತಲೆಯ ಭಾಗ ಗರ್ಭಕೋಶದ ಕಿಬ್ಬೊಟ್ಟೆಗೆ ಇಳಿಕೆ. ಅದರ ದುಂಡು ನೆತ್ತಿಯ ಮೂಳೆಗಳಿಂದ ತಾಯಿಯ ಮೂತ್ರಕೋಶದ ಮೇಲೆ ಒತ್ತಡ. ಪರಿಣಾಮ – ಆಕೆಯ ಮೂತ್ರ ವಿಸರ್ಜನೆ ಅಪೂರ್ಣ; ಬಾರಿ ಬಾರಿ ಮೂತ್ರಕ್ಕೆ ಹೋಗುವ ಹಂಬಲ.  

ಗರ್ಭದ ಅವಧಿ ಪೂರ್ಣಗೊಳ್ಳುವ ಸೂಚನೆ ತಲುಪುತ್ತಿದ್ದಂತೆ ಮಿದುಳಿಗೆ ತವಕ. ವಿಐಪಿಯನ್ನು ತನ್ನ ಪರಿಧಿಯಿಂದ ಹೊರಗೆ ಕಳಿಸಿಬಿಟ್ಟರೆ ತನಗೆ ಸ್ವಲ್ಪ ನಿರಾಳ ಎನ್ನುವ ಭಾವ ಅದರದ್ದು. ಆದರೆ ವಿಐಪಿ ಡ್ಯೂಟಿ ಎಲ್ಲಿ ಮುಗಿಯಬೇಕು? ಆ ಮಹನೀಯರನ್ನು ಮುಂದಿನ ಗಡಿ ದಾಟಿಸುವವರೆಗೆ ಉಸ್ತುವಾರಿಗಳದ್ದೇ ಕರ್ತವ್ಯ ಅಲ್ಲವೇ? ಹೀಗಾಗಿ, ವಿಐಪಿಗಳ ಪ್ರಯಾಣಕ್ಕೆ ಬೇಕಾದ ಸಕಲ ಸಿದ್ಧತೆಗಳ ತಯಾರಿ. ಅವರ ನಿರ್ಗಮನದಿಂದ ಹಿಡಿದು, ಅವರ ದಾರಿಯ ಆಹಾರದ ವ್ಯವಸ್ಥೆಯವರೆಗೆ ಬಸುರಿಯ ಮಿದುಳಿಗೆ ತ್ರಾಸ. ಹೀಗಾಗಿ, “ವ್ಯವಸ್ಥೆ ಸರಿಯಾಗಿ ಕೆಲಸ ಮಾಡುತ್ತಿದೆಯೇ?” ಎಂದು ಪರೀಕ್ಷಿಸಲು ಗರ್ಭಿಣಿಯ ಸ್ತನಗಳಿಂದ ಆಗಾಗ್ಗೆ ಸ್ವಲ್ಪ ಹಾಲು ಚಿಮ್ಮಿಸುವ ಪ್ರಕ್ರಿಯೆ.

ಈ ಹಂತಗಳೆಲ್ಲಾ ಸಫಲವಾಗಿ ಮುಗಿದರೆ ವಿಐಪಿ ನಿರ್ಗಮನದ ಕಾಲ ಪ್ರಾಪ್ತವಾಯಿತು ಎಂದು ಅರ್ಥ. ಇದೊಂದು ಕಠಿಣ, ಆತಂಕದಾಯಕ, ಸೂಕ್ಷ್ಮ ಹಂತ. ಆ ವಿಐಪಿಯೋ ತುಂಬಾ ನಾಜೂಕು. ಹೀಗಾಗಿ, ಅವರ ನಿರ್ಗಮನದ ವೇಳೆ ಆಸ್ಪತ್ರೆಯೆಂಬ ವೇದಿಕೆ, ವೈದ್ಯ-ದಾದಿಯರ ಮಿಲಿಟರಿ ಪಡೆಯ ಉಸ್ತುವಾರಿ. “ವಿಐಪಿ ಅವರು ಈಗ ಹೊರಡುತ್ತಾರೆ; ಆಗ ಹೊರಡುತ್ತಾರೆ” ಎನ್ನುವ ಸುಳ್ಳು ಸಂದೇಶಗಳನ್ನು ನೀಡುವ ಮೂಲಕ ಇಡೀ ವ್ಯವಸ್ಥೆಯನ್ನು ತುದಿಗಾಲ ಮೇಲೆ ನಿಲ್ಲಿಸುವ ಹುನ್ನಾರಗಳಂತೆ ಅರೆಬರೆ ಒತ್ತಡಗಳ ಅಲೆಗಳನ್ನು ಸೃಜಿಸುವ ಗರ್ಭಕೋಶ. ಎಲ್ಲ ಸೂಚನೆಗಳೂ ಪಕ್ವವಾಗಿದೆ ಎನಿಸಿದಾಗ ಮಾತ್ರ ವಿಐಪಿ ಮಹಾಶಯರ ನಿರ್ಗಮನ. ಆ ಸಮಯದಲ್ಲಿ ಎಲ್ಲೆಡೆ ತೀವ್ರ ಒತ್ತಡ. ತಾಯಿಯ ಗರ್ಭಕೋಶ, ಆಕೆಯ ಹೊಟ್ಟೆಯ ಮಾಂಸಖಂಡಗಳು, ಹೃದಯ, ಸ್ನಾಯುಗಳು, ಶ್ವಾಸಕೋಶ ಎಲ್ಲದರ ಮೇಲೆ ಮಿದುಳಿನ ಒಂದೇ ಒತ್ತಡ. ಪರಿಣಾಮ – ನವಜಾತ ಶಿಶುವಿನ ಜನನ. ವಿಐಪಿ ಮಹನೀಯರು ತಮ್ಮ ಅಳುವಿನ ಮೂಲಕ ಶಭಾಷ್ಗಿರಿ ನೀಡಿದಾಗ ಎಲ್ಲರಿಗೂ ಏನನ್ನೋ ಸಾಧಿಸಿದ ಸಂತೃಪ್ತಿ. ತಾಯಿಯ ಸ್ತನಗಳಲ್ಲಿ ಆನಂದದ ಬುಗ್ಗೆ. ಒಂಬತ್ತು ತಿಂಗಳ ಕಾಲ ತಮ್ಮೊಡನೆ ಇದ್ದ ವಿಐಪಿ ಜೊತೆಗಿನ ಬೆಸುಗೆ ಹೊಕ್ಕುಳಬಳ್ಳಿಯ ಛೇದದ ಮೂಲಕ ಮುಕ್ತಾಯ. ಇಷ್ಟೂ ದಿನ ಅವರು ಅಗತ್ಯ ವಸ್ತುಗಳಿಗಾಗಿ ಅವಲಂಬಿಸಿದ್ದ ಮಾಸು ಎನ್ನುವ ಗಂಟು ಇನ್ನು ಬೇಕಿಲ್ಲ. ಹೀಗೆ ಈಗ ಬೇಡದ ವಸ್ತುಗಳೆಲ್ಲವೂ ಹೊರಕ್ಕೆ ರವಾನೆ.

ಅಮ್ಮನ ಮಿದುಳಿಗೆ ಮಾತ್ರ ಈಗಲೂ ಜವಾಬ್ದಾರಿ ಕಡಿಮೆ ಆಗಿಲ್ಲ. ಒಂದು ಕಾಲದಲ್ಲಿ ಭೂಕಂಪವಾದರೂ ಎಚ್ಚರವಾಗದೇ ಜೋರಾಗಿ ಮಲಗುತ್ತಿದ್ದಾಕೆ ಈಗ ಪಾಪು ಕಿಸಕ್ ಎಂದರೆ ಸಾಕು ಎಚ್ಚರಾಗುವಳು. ಮಗುವಿಗೆ ಹಸಿವಾಗಿದೆ ಎಂದು ಆಕೆಗೆ ಅದು ಹೇಗೋ ತಿಳಿದುಹೋಗುವುದು. “ಬೇಜವಾಬ್ದಾರಿ ಹುಡುಗಿ” ಎಂದು ತನ್ನ ಅಮ್ಮನ ಕೈಲಿ ಬೈಸಿಕೊಳ್ಳುತ್ತಿದ್ದ ಬಾಲೆ ಈಗ ಜಗತ್ತಿನ ಅತ್ಯಂತ ಜವಾಬ್ದಾರಿಯುತ ಅಮ್ಮ. ನಿಸರ್ಗದ ಅಚ್ಚರಿಗಳು ಅತ್ಯಂತ ದರ್ಶನೀಯವಾಗುವುದು ಈ ತಾಯಿ-ಪಾಪು ಬಾಂಧ್ಯವದಲ್ಲೇ.

----------------------

ಕುತೂಹಲಿಯ ನವೆಂಬರ್ ಸಂಚಿಕೆಯನ್ನು ಉಚಿತವಾಗಿ ಓದಲು ಕೊಂಡಿ: https://www.flipbookpdf.net/web/site/7b8ec96869a459e5d7f9e99521eb2036e6907f4dFBP32051436.pdf.html?fbclid=IwY2xjawGaXslleHRuA2FlbQIxMAABHdgiuYMYcoQQHchIW_QrbNzVgQJDjkhqXFvkYnEYGcfBw9isRJNAMX7XjA_aem_w4HL4_VztdrlLQFY3XoazA