ಸೋಮವಾರ, ಜೂನ್ 23, 2025


 

ಹೃದ್ರೋಗ ತಪಾಸಣೆ ಮತ್ತು ಚಿಕಿತ್ಸೆ– ಭಾಗ 3 – ಹೃದಯಾಘಾತದ ಚಿಕಿತ್ಸೆಗಳು

 

ಡಾ. ಶ್ರೀಕಾಂತ್ ಕೆ. ವಿ.

ಹೃದ್ರೋಗ ಮತ್ತು ಹೃದಯ ಕಸಿ ತಜ್ಞರು

 

ರೋನರಿ ಅಥಿರೋಸ್ಕ್ಲಿರೋಸಿಸ್ ಚಿಕಿತ್ಸೆಯ ಪ್ರಮುಖ ಉದ್ದೇಶಗಳು – ಹೃದಯದ ಮಾಂಸಖಂಡಗಳಿಗೆ ರಕ್ತದ ಹರಿವಿನ ಕೊರತೆಯನ್ನು ನೀಗಿಸುವುದು ಮತ್ತು ಹೃದಯಾಘಾತದಿಂದ ಆಗಬಹುದಾದ ಸಾವು-ನೋವು ತಡೆಗಟ್ಟುವುದು. ಇದಕ್ಕೆ ಔಷಧಗಳು, ಆಂಜಿಯೋಪ್ಲಾಸ್ಟಿ ಮೂಲಕ ಸ್ಟೆಂಟ್ ಸೇರ್ಪಡಿಕೆ, ಹಾಗೂ ಶಸ್ತ್ರಚಿಕಿತ್ಸೆ ಎಂಬ ಮೂರು ಮಾರ್ಗಗಳಿವೆ. ರೋಗಿಗೆ ಯಾವ ಚಿಕಿತ್ಸಾಮಾರ್ಗ ಸೂಕ್ತ ಎನ್ನುವುದನ್ನು ಹೃದ್ರೋಗತಜ್ಞರು ನಿರ್ಧರಿಸುತ್ತಾರೆ.

 

ಔಷಧಗಳು ಕರೋನರಿ ಅಥಿರೋಸ್ಕ್ಲಿರೋಸಿಸ್ ಕಾಯಿಲೆಯನ್ನು ನೇರವಾಗಿ ನಿವಾರಿಸುವುದಿಲ್ಲ; ಆದರೆ ಪರೋಕ್ಷವಾಗಿ ಸಹಕರಿಸುತ್ತವೆ. ರಕ್ತನಾಳಗಳಲ್ಲಿನ ಜಿಡ್ಡಿನ ಅಂಶ ಆಂತರಿಕ ವ್ಯಾಸವನ್ನು ಕಿರಿದಾಗಿಸುತ್ತವಷ್ಟೇ? ರಕ್ತದಲ್ಲಿನ ಕೊಲೆಸ್ಟ್ರಾಲ್ ಹತೋಟಿಯಲ್ಲಿ ಇಡುವ ಔಷಧಗಳನ್ನು ನೀಡುವುದರಿಂದ ಮತ್ತಷ್ಟು ಜಿಡ್ಡಿನ ಅಂಶ ಸೇರದಂತೆ ತಡೆಯಬಹುದು. ಕಿರಿದಾದ ರಕ್ತನಾಳಗಳಲ್ಲೂ ಸರಾಗವಾಗಿ ಸಂಚರಿಸುವಂತೆ ರಕ್ತವನ್ನು ತೆಳುವಾಗಿ ಮಾಡಬಲ್ಲ ಔಷಧಗಳನ್ನು ಬಳಸಬಹುದು. ನೈಟ್ರೇಟ್ ಅಂಶ ಇರುವ ಮಾತ್ರೆಗಳು ಹೃದಯದ ರಕ್ತನಾಳಗಳನ್ನು ತಾತ್ಕಾಲಿಕವಾಗಿ ಹಿಗ್ಗಿಸಿ, ರಕ್ತದ ಹರಿವನ್ನು ಹೆಚ್ಚಿಸಿ, ಸ್ವಲ್ಪ ಸಮಯದವರೆಗೆ ಪ್ರಯೋಜನಕಾರಿಯಾಗುತ್ತವೆ. ಕೆಲವು ಔಷಧಗಳು ಹೃದಯದ ಆಕ್ಸಿಜನ್ನಿನ ಅವಶ್ಯಕತೆಯನ್ನು ಕಡಿಮೆಯಾಗಿಸಿ ಪರಿಹಾರ ನೀಡುತ್ತವೆ. ಆರಂಭಿಕ ಮಟ್ಟದ ಕರೋನರಿ ಅಥಿರೋಸ್ಕ್ಲಿರೋಸಿಸ್ ಇರುವವರು ನಿಯಮಿತ ಔಷಧ ಬಳಕೆ, ಪೋಷಕಾಂಶಯುಕ್ತ ಆಹಾರ ಸೇವನೆ, ದೈಹಿಕ ವ್ಯಾಯಾಮ, ತಂಬಾಕು ತ್ಯಜಿಸುವಿಕೆ, ಅಧಿಕ-ರಕ್ತದೊತ್ತಡ ಹಾಗೂ ಮಧುಮೇಹಗಳ ಹತೋಟಿಯಲ್ಲಿಡುವಿಕೆ, ಮತ್ತು ಸಕಾಲಿಕ ವೈದ್ಯಕೀಯ ತಪಾಸಣೆಗಳನ್ನು ಜೀವನಪರ್ಯಂತ ತಪ್ಪದೇ ಪಾಲಿಸಿದಲ್ಲಿ, ಹೃದಯ-ಸಂಬಂಧಿ ಸಾವು-ನೋವುಗಳನ್ನು ತಡೆಗಟ್ಟಬಹುದು. ಒಂದು ವೇಳೆ ಔಷಧ ಮತ್ತು ಜೀವನಶೈಲಿಯ ಬದಲಾವಣೆಗಳಿಂದ ಪರಿಹಾರ ಕಂಡುಬಾರದಿದ್ದಲ್ಲಿ, ಮುಂದಿನ ಹಂತಗಳ ಚಿಕಿತ್ಸೆ ಬೇಕಾಗುತ್ತದೆ.

 

ಆಂಜಿಯೋಗ್ರಾಮ್ ಮೊದಲಾದ ಪರೀಕ್ಷೆಗಳು ಕರೋನರಿ ರಕ್ತನಾಳಗಳ ಯಾವ ಭಾಗದಲ್ಲಿ ರಕ್ತದ ಹರಿವಿನ ಕೊರತೆಯಿದೆ ಮತ್ತು ಅದು ಎಷ್ಟು ತೀವ್ರವಾಗಿದೆ ಎಂಬ ಮಾಹಿತಿ ನೀಡುತ್ತವೆ. ಒಂದು ವೇಳೆ ರಕ್ತನಾಳಗಳು ಇಡಿಯಾಗಿ ಮುಚ್ಚಿಹೋಗಿದ್ದರೆ ರಕ್ತದ ಹರಿವು ಸಂಪೂರ್ಣವಾಗಿ ನಿಂತುಹೋಗಿ ಹೃದಯದ ಸ್ನಾಯುಗಳಿಗೆ ಶಾಶ್ವತ ಹಾನಿಯಾಗಿರುತ್ತದೆ. ಇಂತಹ ಸಂದರ್ಭಗಳಲ್ಲಿ ಯಾವ ಚಿಕಿತ್ಸೆಯೂ ಫಲಕಾರಿಯಾಗುವುದಿಲ್ಲ. ಆದರೆ ರಕ್ತನಾಳಗಳಲ್ಲಿ ರಕ್ತದ ಹರಿವು ಅಲ್ಪ-ಸ್ವಲ್ಪ ಆಗುತ್ತಿದೆ; ಹೃದಯದ ಸ್ನಾಯುಗಳಿಗೆ ಶಾಶ್ವತ ಹಾನಿ ಆಗಿಲ್ಲ ಎಂದಾದರೆ ಕೊರೋನರಿ ಆಂಜಿಯೋಪ್ಲಾಸ್ಟಿ ಚಿಕಿತ್ಸೆ ಮಾಡಬಹುದು. ಈ ಪ್ರಕ್ರಿಯೆಗೆ ಮುನ್ನ ರಕ್ತವನ್ನು ತೆಳುವಾಗಿಸುವ ಮಾತ್ರೆಗಳನ್ನು ನೀಡಬೇಕು. ಆಂಜಿಯೋಗ್ರಾಮ್ ಪರೀಕ್ಷೆಯಲ್ಲಿ ರಕ್ತದ ಹರಿವಿನ ಅಡ್ಡಿ ರಕ್ತನಾಳದ ಯಾವ ಭಾಗದಲ್ಲಿ, ಶೇಕಡಾವಾರು ಎಷ್ಟು ಪ್ರಮಾಣದಲ್ಲಿ, ಎಷ್ಟು ಉದ್ದವಿದೆ; ಅದರೊಳಗಿನ ಕ್ಯಾಲ್ಸಿಯಂ ಪ್ರಮಾಣವೇನು ಎನ್ನುವ ವಿವರಗಳನ್ನು ಪಡೆಯಲಾಗುತ್ತದೆ. ರಕ್ತನಾಳದ ಮೂಲಕ ಹಾಯಿಸಿರುವ ತೂರ್ನಳಿಕೆಯ ಒಳಗೆ ಸಪೂರವಾದ, ನವಿರಾದ ತಂತಿಯನ್ನು ಅಥಿರೋಸ್ಕ್ಲಿರೋಸಿಸ್ ಆಗಿರುವ ಭಾಗದ ಮೂಲಕ ತೂರಿಸಲಾಗುತ್ತದೆ. ರಕ್ತದ ಹರಿವಿಗೆ ಅಡ್ಡಿಯಾಗಿರುವ ಭಾಗದ ಉದ್ದ ಮತ್ತು ಅಗಲಗಳಿಗೆ ಅನುಗುಣವಾಗಿ ಸರಿಯಾದ ಗಾತ್ರದ ಬಲೂನ್ ಒಂದನ್ನು ತಂತಿಯ ಮೇಲೆ ಹಾಯಿಸಿ, ಅಥಿರೋಸ್ಕ್ಲಿರೋಸಿಸ್ ಆಗಿರುವ ಭಾಗದಲ್ಲಿ ಇರಿಸಿ, ಬಲೂನನ್ನು ಹಿಗ್ಗಿಸಲಾಗುತ್ತದೆ. ಇದರಿಂದ ರಕ್ತನಾಳದಲ್ಲಿ ಕಟ್ಟಿಕೊಂಡಿದ್ದ ಕೊಬ್ಬಿನ ಅಂಶ ಚದುರಿಹೋಗಿ, ಒಳವ್ಯಾಸ ಹೆಚ್ಚಾಗಿ, ರಕ್ತದ ಹರಿವು ಉತ್ತಮಗೊಳ್ಳುತ್ತದೆ. ಆದರೆ ಬಲೂನನ್ನು ತೆಗೆದ ನಂತರ ರಕ್ತನಾಳ ಮತ್ತೊಮ್ಮೆ ಸಂಕುಚಿಸಬಹುದು. ಇದನ್ನು ತಡೆಯಲು ಆ ಭಾಗದಲ್ಲಿ ನವಿರಾದ ಲೋಹದ ಜಾಲರಿಯನ್ನು ಬಲೂನಿನ ಸಹಾಯದಿಂದ ಕೂರಿಸಬಹುದು. ಇದನ್ನು ಸ್ಟೆಂಟ್ ಎನ್ನುತ್ತಾರೆ. ಅಥಿರೋಸ್ಕ್ಲಿರೋಸಿಸ್ ಭಾಗದಲ್ಲಿರುವ ಅಧಿಕ ಕ್ಯಾಲ್ಸಿಯಂ ಮತ್ತು ಹೆಪ್ಪುಗಟ್ಟಿದ ರಕ್ತವನ್ನು ಈಗ ಲಭ್ಯವಿರುವ ಅತ್ಯಾಧುನಿಕ ಸಲಕರಣೆಗಳ ನೆರವಿನಿಂದ ನಿವಾರಿಸಿ, ಸ್ಟೆಂಟ್ ಕೂರಿಸಬಹುದು. ಆಂಜಿಯೋಪ್ಲಾಸ್ಟಿ ಚಿಕಿತ್ಸೆಗೆ ಪ್ರಜ್ಞೆ ತಪ್ಪಿಸುವಂತಹ ಅರಿವಳಿಕೆ ಬೇಕಿಲ್ಲ; ಚಿಕಿತ್ಸೆಯ ಮರುದಿನ ರೋಗಿಯನ್ನು ಮನೆಗೆ ಕಳುಹಿಸಲಾಗುತ್ತದೆ; ವಾರದೊಳಗೆ ರೋಗಿಯು ತನ್ನ ದೈನಂದಿನ ಕಾರ್ಯಗಳಲ್ಲಿ ತೊಡಗಬಹುದು.

 

ರೋನರಿ ರಕ್ತನಾಳಗಳ ಕೆಲವು ನಾಜೂಕಾದ ಭಾಗಗಳಲ್ಲಿ ಇರಬಹುದಾದ ಅಥಿರೋಸ್ಕ್ಲಿರೋಸಿಸ್ಗೆ ಆಂಜಿಯೋಪ್ಲಾಸ್ಟಿ ಚಿಕಿತ್ಸೆ ಸಾಧ್ಯವಾಗುವುದಿಲ್ಲ. ಆಗ ಪ್ರಜ್ಞೆ ತಪ್ಪಿಸುವಂತಹ ಅರಿವಳಿಕೆ ಬಳಸಿ ಮಾಡುವ ಬೈಪಾಸ್ ಶಸ್ತ್ರಚಿಕಿತ್ಸೆ ಬೇಕಾಗುತ್ತದೆ. ರಕ್ತನಾಳದಲ್ಲಿ ಅಡ್ಡಿ ಇರುವ ಭಾಗದ ಹಿಂದೆ ಮತ್ತು ಮುಂದೆ ಇರುವ ಆರೋಗ್ಯಕರ ಭಾಗಗಳನ್ನು ಬೇರೊಂದು ರಕ್ತನಾಳ ಬಳಸಿ ಪರಸ್ಪರ ಜೋಡಿಸಬಹುದು. ಹೀಗೆ ಜೋಡಿಸಲು ರಕ್ತನಾಳದ ಗಾತ್ರದ ಆವಶ್ಯಕತೆಗೆ ಅನುಗುಣವಾಗಿ ಎದೆಯಲ್ಲಿ, ಕೈಯಲ್ಲಿ, ಅಥವಾ ಕಾಲಿನಲ್ಲಿರುವ ಕೆಲವು ಆರೋಗ್ಯವಂತ ಧಮನಿಗಳನ್ನು ಬಳಸಬಹುದು. ಈ ಶಸ್ತ್ರಚಿಕಿತ್ಸೆಯ ವೇಳೆ ಹೃದಯದಲ್ಲಿ ಬೇರಾವುದೇ ಸಮಸ್ಯೆ ಇದ್ದರೂ ಸರಿಪಡಿಸಬಹುದು; ಐದರಿಂದ ಏಳು ದಿನಗಳ ನಂತರ ರೋಗಿಯ ಬಿಡುಗಡೆ; ನಾಲ್ಕಾರು ವಾರಗಳಲ್ಲಿ ತಮ್ಮ ಕೆಲಸಗಳಲ್ಲಿ ತೊಡಗಬಹುದು. ಇತ್ತೀಚೆಗೆ ವಿಶೇಷ ದುರ್ಬೀನುಗಳನ್ನು ಬಳಸಿ ರೊಬೊಟಿಕ್ ಯಂತ್ರಗಳ ನೆರವಿನಿಂದ ಮಾಡುವ ಬೈಪಾಸ್ ಶಸ್ತ್ರಚಿಕಿತ್ಸೆಯಿಂದ ರೋಗಿಗಳು ಮತ್ತೂ ಶೀಘ್ರವಾಗಿ ಗುಣಮುಖರಾಗುತ್ತಿದ್ದಾರೆ.

 

ಆಂಜಿಯೋಪ್ಲಾಸ್ಟಿ ಮತ್ತು ಬೈಪಾಸ್ ಶಸ್ತ್ರಚಿಕಿತ್ಸೆಗಳು ಎಷ್ಟೇ ಸುರಕ್ಷಿತ ಹಾಗೂ ಸುಲಭ ಲಭ್ಯವಿದ್ದರೂ, ರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಂಡು ಹೃದಯಾಘಾತವಾಗದಂತೆ ತಡೆಗಟ್ಟುವುದೇ ಜಾಣತನ.

-------------------

ದಿನಾಂಕ 01/04/2025 ರ ಪ್ರಜಾವಾಣಿಯ ಕ್ಷೇಮ-ಕುಶಲ ವಿಭಾಗದಲ್ಲಿ ಪ್ರಕಟವಾದ ಲೇಖನ. ಮೂಲ ಲೇಖನದ ಕೊಂಡಿ: https://www.prajavani.net/health/stent-for-heart-coronary-angioplasty-and-stents-3226467


 

ಹೃದ್ರೋಗ ತಪಾಸಣೆ – ಭಾಗ 2 – ಹೃದಯದ ಆರೋಗ್ಯ ಪತ್ತೆ ಮಾಡುವ ಪರೀಕ್ಷೆಗಳು

 

ಡಾ. ಶ್ರೀಕಾಂತ್ ಕೆ. ವಿ.

ಹೃದ್ರೋಗ ಮತ್ತು ಹೃದಯ ಕಸಿ ತಜ್ಞರು

 

ಹೃದಯಾಘಾತಕ್ಕೆ ಅತಿ ಮುಖ್ಯ ಕಾರಣ ರೋನರಿ ಅಥೆರೋಸ್ಲ್ಕೀರೋಸಿಸ್. ಇದನ್ನು ಗುರುತಿಸಲು ವೈದ್ಯರು ಮೊದಲು ಕೆಲವು ಆರೋಗ್ಯ-ಸಂಬಂಧಿ ಪ್ರಶ್ನೆಗಳನ್ನು ಕೇಳುತ್ತಾರೆ. ನಂತರ ವ್ಯಕ್ತಿಯ ತೂಕ, ಎತ್ತರ, ನಾಡಿ ಪರೀಕ್ಷೆ, ರಕ್ತದೊತ್ತಡದ ಮಾಪನ ಮತ್ತು ದೈಹಿಕ ಲಕ್ಷಣಗಳ ಭೌತಿಕ ಪರೀಕ್ಷೆ ಮಾಡುತ್ತಾರೆ. ಆಯಾ ವ್ಯಕ್ತಿಯ ಹೃದಯಾಘಾತದ ಸಾಧ್ಯತೆಯ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಆರಂಭಿಕ ಹಂತದ ಪರೀಕ್ಷೆಗಳನ್ನು ಸೂಚಿಸುತ್ತಾರೆ. ಇವುಗಳಲ್ಲಿ ಮುಖ್ಯವಾದುವು ಇಸಿಜಿ, ಎದೆಯ ಕ್ಷ-ಕಿರಣ, ಇಕೋಕಾರ್ಡಿಯೋಗ್ರಾಫಿ, ಮತ್ತು ರಕ್ತ ಪರೀಕ್ಷೆಗಳು.

 

ಹೃದಯದ ವಿದ್ಯುತ್ ಸಂಕೇತಗಳನ್ನು ನಕ್ಷೆಯ ರೂಪದಲ್ಲಿ ಮೂಡಿಸುವ ಇಸಿಜಿ ಪರೀಕ್ಷೆಯಿಂದ ಹೃದಯದ ಲಯ, ಹೃದಯದ ಸ್ನಾಯುಗಳ ಗಾತ್ರ, ಈಗ ಆಗುತ್ತಿರಬಹುದಾದ ಮತ್ತು ಹಿಂದೆ ಆಗಿರಬಹುದಾದ ಹೃದಯಘಾತದ ಚಿಹ್ನೆಗಳನ್ನು ಪತ್ತೆಹಚ್ಚಬಹುದು. ಎದೆಯ ಕ್ಷ-ಕಿರಣ ಪರೀಕ್ಷೆಯಿಂದ ಹೃದಯದ ಗಾತ್ರ ಮತ್ತು ಶ್ವಾಸಕೋಶಗಳ ಆರೋಗ್ಯ ತಿಳಿಯುತ್ತದೆ. ಇಕೋಕಾರ್ಡಿಯೋಗ್ರಫಿ ಹೃದಯದ ಬಗ್ಗೆ ಅತಿ ಕಡಿಮೆ ವೆಚ್ಚದಲ್ಲಿ ಅತ್ಯಂತ ಹೆಚ್ಚು ಮಾಹಿತಿ ನೀಡಬಲ್ಲ ಪರೀಕ್ಷೆ. ಹೃದಯದ ಕಾರ್ಯಕ್ಷಮತೆ, ಕವಾಟಗಳ ಚಲನೆ, ಹೃದಯಾಘಾತದಲ್ಲಿ ಉಂಟಾಗುವ ಸ್ನಾಯುಗಳ ದೌರ್ಬಲ್ಯ, ಹಾಗೂ ಜನ್ಮಜಾತ ಹೃದ್ರೋಗಗಳನ್ನು ಇಕೋಕಾರ್ಡಿಯೋಗ್ರಫಿ ಗುರುತಿಸುತ್ತದೆ. ಈ ಅಂಶಗಳ ಬಗ್ಗೆ ಹೆಚ್ಚಿನ ಮತ್ತು ನಿಖರ ಮಾಹಿತಿಯನ್ನು ಹೃದಯದ ಎಂಆರ್ ನೀಡಬಲ್ಲದು. ರಕ್ತದಲ್ಲಿನ ಅಧಿಕ ಸಕ್ಕರೆಯ ಅಂಶ ಮತ್ತು ಕೊಬ್ಬಿನ ಅಂಶಗಳು ಹೃದಯಘಾತ ಉಂಟಾಗಬಹುದಾದ ಸಾಧ್ಯತೆಗಳನ್ನು ಸೂಚಿಸುತ್ತವೆ. ಹೃದಯಘಾತವಾದ 10-14 ದಿನಗಳವರೆಗೆ ರಕ್ತದಲ್ಲಿ ಟ್ರೋಪೋನಿನ್ ಎಂಬ ರಾಸಾಯನಿಕ ಕಂಡುಬರುತ್ತದೆ.

 

ಕರೋನರಿ  ಅಥೆರೋಸ್ಲ್ಕೀರೋಸಿಸ್ ಕಾರಣದಿಂದ ಹೃದಯದ ರಕ್ತನಾಳಗಳ ಒಳಭಾಗದಲ್ಲಿ ಕೊಬ್ಬಿನಂಶದ ಜೊತೆಗೆ ಕ್ಯಾಲ್ಸಿಯಂ ಕೂಡ ಇರುತ್ತದೆ. ಸಿಟಿ ಸ್ಕ್ಯಾನ್ ಮೂಲಕ ಕೊರೊನರಿ ಕ್ಯಾಲ್ಸಿಯಂ ಸ್ಕೋರ್ ಕಂಡುಹಿಡಿಯಬಹುದು. ಸ್ಕೋರ್ ಸೊನ್ನೆ ಇದ್ದರೆ ರಕ್ತನಾಳದಲ್ಲಿ ಕೊಬ್ಬಿನಂಶ ಶೇಖರವಾಗಿರುವ ಸಾಧ್ಯತೆ ಅತಿ ಡಿಮೆ. ಹೃದಯದ ರಕ್ತನಾಳಗಳ ಆಂತರಿಕ ವ್ಯಾಸ ಎಷ್ಟು ಕಿರಿದಾಗಿದೆ ಎನ್ನುವ ಪ್ರಮಾಣಕ್ಕೆ ಅನುಗುಣವಾಗಿ ವೈದ್ಯರು ಮುಂದಿನ ಚಿಕಿತ್ಸಾವಿಧಾನವನ್ನು ನಿರ್ಧರಿಸುತ್ತಾರೆ. ಆಂತರಿಕ ವ್ಯಾಸದ ಕಿರಿದಾಗುವಿಕೆ ಶೇಕಡಾ 70ಕ್ಕಿಂತ ಕಡಿಮೆ ಇರುವವರೆಗೂ ಕರೋನರಿ ರಕ್ತನಾಳಗಳಲ್ಲಿ ಹರಿವಿನ ಕೊರತೆ ಬಹುತೇಕ ಇರುವುದಿಲ್ಲ. ಇದು ಶೇಕಡಾ 70ನ್ನು ಮೀರಿದರೆ, ವಿಶ್ರಾಂತ ಸ್ಥಿತಿಯಲ್ಲಿ ಸಮಸ್ಯೆ ಇಲ್ಲದಿದ್ದರೂ, ಒತ್ತಡದ ಪರಿಸ್ಥಿತಿಯಲ್ಲಿ ಕರೋನರಿ ರಕ್ತದ ಹರಿವಿನ ಕೊರತೆ ಉಂಟಾಗುತ್ತದೆ. ಟ್ರೆಡ್ಮಿಲ್ ಯಂತ್ರದ ಮೇಲೆ ವ್ಯಕ್ತಿಯನ್ನು ನಡೆಸಿ, ಸ್ಥಿರವಾಗಿರುವ ಬೈಸಿಕಲ್ ತುಳಿಸಿ, ಅಥವಾ ಹೃದಯದ ಬಡಿತವನ್ನು ಹೆಚ್ಚಿಸುವ ಔಷಧಿಗಳನ್ನು ನೀಡಿ ಒತ್ತಡದ ಪರಿಸ್ಥಿತಿಯನ್ನು ಕೃತಕವಾಗಿ ಸೃಷ್ಟಿಸಬಹುದು. ತಜ್ಞರ ಸುಪರ್ದಿಯಲ್ಲಿ ನಡೆಯುವ ಇಂಥ ಪರೀಕ್ಷೆಗಳ ವೇಳೆ ಜೊತೆಜೊತೆಗೆ ಇಸಿಜಿ, ಇಕೋಕಾರ್ಡಿಯೋಗ್ರಾಫಿ, ಎಂಆರ್, ನ್ಯೂಕ್ಲಿಯರ್ ಸ್ಕ್ಯಾನ್ ಮೊದಲಾದುವುಗಳನ್ನು ಬಳಸಿ, ಒತ್ತಡದ ಸಮಯದಲ್ಲಿ ಹೃದಯಕ್ಕೆ ರಕ್ತದ ಕೊರತೆ ಆಗುತ್ತಿದೆಯೇ ಎನ್ನುವುದನ್ನು ಬಹುತೇಕ ಖಚಿತವಾಗಿ ತಿಳಿಯಬಹುದು.

 

ಕರೋನರಿ ರಕ್ತನಾಳಗಳ ಆಂತರಿಕ ವ್ಯಾಸದ ಕಿರಿದಾಗುವಿಕೆ ಶೇಕಡ 85-90ನ್ನು ದಾಟಿದರೆ ವಿಶ್ರಾಂತಿಯ ಸ್ಥಿತಿಯಲ್ಲಿಯೂ ರಕ್ತದ ಹರಿವಿನ ಕೊರತೆಯಾಗಿ, ಹೃದಯಾಘಾತ ಉಂಟಾಗಬಹುದು. ಪರೀಕ್ಷೆಗಳ ಮೂಲಕ ಹೃದಯಕ್ಕೆ ರಕ್ತದ ಹರಿವಿನ ಕೊರತೆ ಇರುವುದು ಖಾತ್ರಿಯಾದಲ್ಲಿ, ಮೂರು ರೊನರಿ ರಕ್ತನಾಳಗಳ ಪೈಕಿ ಯಾವುದರಲ್ಲಿ, ಯಾವ ಮಟ್ಟಲ್ಲಿ , ರಕ್ತನಾಳಗಳ ಯಾವ ನಿಖರವಾದ ಸ್ಥಳದಲ್ಲಿ, ಶೇಕಡಾವಾರು ಎಷ್ಟು ಸಮಸ್ಯೆ ಇದೆ ಎಂಬುದನ್ನು ತಿಳಿಯಲು, ವಿಶೇಷವಾದ ಕ್ಷ-ಕಿರಣ ಸಜ್ಜಿತ ಥಿಯೇಟರ್ನಲ್ಲಿ ಆಂಜಿಯೋಗ್ರಾಮ್ ಪರೀಕ್ಷೆ ಮಾಡಲಾಗುತ್ತದೆ. ಮಣಿಕಟ್ಟು ಅಥವಾ ತೊಡೆಯ ಅಪಧಮನಿಯ ಒಳಗೆ ವಿಶೇಷವಾಗಿ ನಿರ್ಮಿಸಲಾದ ಸೂಕ್ಷ್ಮ ನಳಿಕೆಗಳನ್ನು ಹಾಯಿಸಿ, ಅವನ್ನು ಧಮನಿಯ ಹಾದಿಯಲ್ಲಿ ಮುನ್ನಡೆಸುತ್ತಾ ಹೃದಯದತ್ತ ಸಾಗಿ, ಕರೋನರಿ ರಕ್ತನಾಳದ ಮೂಲದಲ್ಲಿ ಇರಿಸಿ, ವಿಶಿಷ್ಟ ಅಪಾರದರ್ಶಕ ರಾಸಾಯನಿಕವನ್ನು ಕರೋನರಿ ರಕ್ತನಾಳಕ್ಕೆ ಹರಿಸಲಾಗುತ್ತದೆ. ರಕ್ತ ಹರಿಯುವಿಕೆಯ ಕ್ಷಕಿರಣದ ಚಲನಚಿತ್ರವನ್ನು ವಿವಿಧ ಕೋನಗಳಲ್ಲಿ ಸೆರೆ ಹಿಡಿದು ವಿಶ್ಲೇಷಿಸಲಾಗುತ್ತದೆ. ರಕ್ತದೊತ್ತಡ, ರಕ್ತದಲ್ಲಿನ ಆಮ್ಲಜನಕದ ಪ್ರಮಾಣ, ಹೃದಯದ ಕೋಣೆಗಳಲ್ಲಿನ ಒತ್ತಡಗಳನ್ನು ದಾಖಲಿಸಲಾಗುತ್ತದೆ. ಆಂಜಿಯೋಗ್ರಾಮ್ ವೇಳೆ ಅಥೆರೋಸ್ಲ್ಕೀರೋಸಿಸ್ಗೆ ಸಂಬಂಧಿಸಿದ ಕತ್ತಿನ ಮತ್ತು ಮೂತ್ರಪಿಂಡಗಳ ರಕ್ತನಾಳಗಳ ಪರೀಕ್ಷೆಯನ್ನೂ ಮಾಡಬಹುದು. ಪರೀಕ್ಷೆಯ ನಂತರ ನಾಲ್ಕರಿಂದ ಆರು ತಾಸು ಆಸ್ಪತ್ರೆಯಲ್ಲಿ ಕಡ್ಡಾಯವಾಗಿ ತಂಗಬೇಕು. ಆಂಜಿಯೋಗ್ರಾಮ್ ಬಹುತೇಕ ಸುರಕ್ಷಿತ ಪರೀಕ್ಷೆಯಾದರೂ, ಅಪರೂಪವಾಗಿ ರಕ್ತಸ್ರಾವ, ನೋವು, ಅಲರ್ಜಿ, ಮೂತ್ರಪಿಂಡದ ತಾತ್ಕಾಲಿಕ ದೋಷಗಳು ಕಂಡು ಬರಬಹುದು.

 

ಸಿಟಿ ಕರೋನರಿ ಆಂಜಿಯೋಗ್ರಾಮ್ನಲ್ಲಿ ಕೂಡ ಮಾಹಿತಿ ಲಭಿಸುತ್ತದಾದರೂ ನಿಖರತೆಯ ಪ್ರಮಾಣ ಕಡಿಮೆ. ಆದರೆ ಇದಕ್ಕಾಗಿ ಆಸ್ಪತ್ರೆಯಲ್ಲಿ ದಾಖಲಾಗುವ ಅಗತ್ಯವಿಲ್ಲ; ಪರೀಕ್ಷೆಯ ನಂತರ ತಂಗಬೇಕಿಲ್ಲ. ಕರೋನರಿ ಅಥೆರೋಸ್ಲ್ಕೀರೋಸಿಸ್ ಸಾಧ್ಯತೆ ಕಡಿಮೆ ಇರುವವರಿಗೆ ಸಿಟಿ ಕೊರೋನರಿ ಆಂಜಿಯೋಗ್ರಾಮ್ ಉಪಯುಕ್ತವಾದರೂ, ಇದರ ಮೂಲಕ ಮುಂದಿನ ಚಿಕಿತ್ಸೆ ಸಾಧ್ಯವಿಲ್ಲ; ಅದಕ್ಕಾಗಿ ಸಾಂಪ್ರದಾಯಿಕ ಆಂಜಿಯೋಗ್ರಾಮ್ ಪುನಃ ಮಾಡಬೇಕಾಗುತ್ತದೆ.

 

(ಮುಂದಿನ ಭಾಗ: ಹೃದಯಾಘಾತಕ್ಕೆ ವಿವಿಧ ಚಿಕಿತ್ಸೆಗಳು)

------------------------

ದಿನಾಂಕ 25/03/2025 ರ ಪ್ರಜಾವಾಣಿಯ ಕ್ಷೇಮ-ಕುಶಲ ವಿಭಾಗದಲ್ಲಿ ಪ್ರಕಟವಾದ ಲೇಖನ. ಮೂಲ ಲೇಖನದ ಕೊಂಡಿ https://www.prajavani.net/health/heart-health-and-clinical-tests-what-are-the-tests-for-heart-health-3217955


 

ಹೃದ್ರೋಗ ತಪಾಸಣೆ ಮತ್ತು ಚಿಕಿತ್ಸೆ - ಭಾಗ 1 – ಹೃದಯಾಘಾತ ಹೇಗೆ ಆಗುತ್ತದೆ?

ಡಾ. ಶ್ರೀಕಾಂತ್ ಕೆ.ವಿ.

ಹೃದ್ರೋಗ ಮತ್ತು ಕೃದಯ ಕಸಿ ತಜ್ಞರು

 

ನಮ್ಮ ದೇಹದಲ್ಲಿ ಹಲವಾರು ಅಂಗಗಳಿವೆ. ಪ್ರತಿಯೊಂದು ಅಂಗವೂ ತನ್ನ ಕೆಲಸವನ್ನು ಇತರ ಅಂಗಗಳ ಕೆಲಸಕ್ಕೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತದೆ. ಆರೋಗ್ಯವಂತ ಶರೀರದ ಪ್ರತಿಯೊಂದು ಅಂಗವ್ಯವಸ್ಥೆಯೂ, ಅವುಗಳ ಜೀವಕೋಶಗಳೂ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರಬೇಕು. ಇದಕ್ಕಾಗಿ ಜೀವಕೋಶಗಳಿಗೆ ನಿರಂತರವಾಗಿ ಆಕ್ಸಿಜನ್ ಮತ್ತು ಪೋಷಕಾಂಶಗಳ ಪೂರೈಕೆ ಆಗುತ್ತಲೇ ಇರಬೇಕು. ಜೀವಕೋಶಗಳ ಚಯಾಪಚಯಗಳ ಕಾಲದಲ್ಲಿ ಉತ್ಪತ್ತಿ ಆಗುವ ಕಾರ್ಬನ್ ಡೈಆಕ್ಸೈಡ್ನಂತಹ ಮಾಲಿನ್ಯಗಳ ತೆರವು ಸಾಧ್ಯವಾಗಬೇಕು. ಈ ಪ್ರಕ್ರಿಯೆಗಳನ್ನು ನಿರ್ವಹಿಸುವ ರಕ್ತಪರಿಚಲನಾ ವ್ಯವಸ್ಥೆಯ ಕೇಂದ್ರಬಿಂದುವಾಗಿರುವ ಹೃದಯ, ಸದಾ ರಕ್ತವನ್ನು ಪಂಪ್ ಮಾಡುತ್ತಾ, ರಕ್ತನಾಳಗಳ ಬೃಹತ್ ಜಾಲದ ಮೂಲಕ ಎಲ್ಲ ಜೀವಕೋಶಗಳಿಗೂ ರಕ್ತವನ್ನು ಪೂರೈಸುತ್ತದೆ.

 

ಹೃದಯದೊಳಗೆ ರಕ್ತದ ಮಡುವಿದ್ದರೂ, ಅದನ್ನು ತನ್ನ ಸ್ವಂತ ಕೆಲಸಕ್ಕೆ ಬಳಸಿಕೊಳ್ಳಲಾಗದು. ಹೀಗಾಗಿ, ಸ್ವಂತ ಜೀವಕೋಶಗಳ ಕಾರ್ಯನಿರ್ವಹಣೆಗಾಗಿ ಹೃದಯ ಕರೊನರಿ ರಕ್ತನಾಳಗಳೆನ್ನುವ ಮೂರು ಪ್ರತ್ಯೇಕ ರಕ್ತನಾಳಗಳನ್ನು ಹೊಂದಿದೆ. ಕ್ಷಣದ ಬಿಡುವೂ ಇಲ್ಲದಂತೆ ಕೆಲಸ ಮಾಡುವ ಹೃದಯಕ್ಕೆ, ನಿಮಿಷದ ಗಡುವೂ ಇಲ್ಲದಂತೆ ನಿರಂತರವಾಗಿ ರಕ್ತದ ಪೂರೈಕೆ ಆಗುತ್ತಲೇ ಇರಬೇಕು. ಕರೊನರಿ ರಕ್ತನಾಳಗಳ ರಕ್ತದ ಪ್ರವಹನಕ್ಕೆ  ಅಡೆತಡೆಗಳು ಉಂಟಾದರೆ ಹೃದಯ ಕೆಲಸ ಮಾಡಲಾಗದು. ಆಗ ಇಡೀ ಶರೀರದ ವ್ಯವಸ್ಥೆ ಕುಸಿದು, ಜೀವಕ್ಕೆ ಮಾರಕವಾಗಬಹುದು.

 

ಆರೋಗ್ಯವಂತ ವ್ಯಕ್ತಿಯ ನೂರು ಮಿಲಿಲೀಟರ್ ಶುದ್ಧ ರಕ್ತದಲ್ಲಿ, ಸುಮಾರು 20 ಮಿಲಿಲೀಟರ್ ಆಕ್ಸಿಜನ್ ಇರುತ್ತದೆ. ಬಹುತೇಕ ಅಂಗಾಂಗಗಳು ಇದರಲ್ಲಿ 5 ಮಿಲಿಲೀಟರ್ ಆಕ್ಸಿಜನನ್ನು ಮಾತ್ರ ಹೀರಿ, 15 ಮಿಲಿಲೀಟರ್ ಆಕ್ಸಿಜನ್ ಉಳಿಸಿರುತ್ತವೆ. ಅಂಗಗಳಿಗೆ ಹೆಚ್ಚಿನ ಆಕ್ಸಿಜನ್ ಅವಶ್ಯಕತೆ ಇರುವಾಗ, 5 ಮಿಲಿಲೀಟರ್ಗಿಂತ ಹೆಚ್ಚು ಪ್ರಮಾಣದ ಆಕ್ಸಿಜನ್ ಅನ್ನು ಸೆಳೆದುಕೊಳ್ಳಬೇಕು. ಜೊತೆಗೆ, ರಕ್ತದ ಹರಿವಿನ ಪ್ರಮಾಣ ಹೆಚ್ಚಿಸಿಕೊಳ್ಳುತ್ತಾ, ಬೇಕಿರುವಷ್ಟು ಆಕ್ಸಿಜನ್ ಪಡೆದುಕೊಳ್ಳಬೇಕು. ಉಳಿದ ಅಂಗಗಳಿಗೆ ಹೋಲಿಸಿದರೆ, ಹೃದಯ ಹೆಚ್ಚಿನ ಪ್ರಮಾಣದಲ್ಲಿ ಆಕ್ಸಿಜನ್ ಹೀರುತ್ತದೆ. ಸಾಮಾನ್ಯ ಕೆಲಸದ ವೇಳೆ ಹೃದಯವು 100 ಮಿಲಿಲೀಟರ್ ರಕ್ತದಿಂದ 15 ಮಿಲಿಲೀಟರ್ ಆಕ್ಸಿಜನ್  ಸೆಳೆಯುತ್ತದೆ. ಹೀಗಾಗಿ, ಹೃದಯಕ್ಕೆ ಆಕ್ಸಿಜನ್ ಅಗತ್ಯ ಅಧಿಕವಾದಾಗ, ರಕ್ತನಾಳಗಳು ಹಿಗ್ಗಿ, ರಕ್ತದ ಹರಿವನ್ನು ಹೆಚ್ಚಿಸಿಕೊಳ್ಳುವ ಮೂಲಕ ಬೇಡಿಕೆಯನ್ನು ಪೂರೈಸಿಕೊಳ್ಳುತ್ತದೆ. ಅತಿಶ್ರಮದ ಕೆಲಸ ಮಾಡುವಾಗ ಆರೋಗ್ಯವಂತ ವ್ಯಕ್ತಿಯ ಹೃದಯವು ರಕ್ತ ಹರಿಯುವ ಪ್ರಮಾಣವನ್ನು ಐದರಿಂದ ಆರು ಪಟ್ಟು ಹೆಚ್ಚಾಗಿಸಿ, ಆಕ್ಸಿಜನ್ನಿನ ಬೇಡಿಕೆಯನ್ನು ಈಡೇರಿಸಿಕೊಳ್ಳುತ್ತದೆ.

 

ದೈಹಿಕ ಚಟುವಟಿಕೆ, ವ್ಯಾಯಾಮ, ಮಾನಸಿಕ ಒತ್ತಡದ, ಸೋಂಕು, ಹಾಗೂ ಅನಾರೋಗ್ಯದ ಸಮಯಗಳಲ್ಲಿ ನಮ್ಮ ರಕ್ತದ ಪರಿಚಲನೆಯು ಹೆಚ್ಚಾಗಿ, ಹೃದಯವು ಹೆಚ್ಚಿನ ಕಾರ್ಯನಿರ್ವಹಿಸಬೇಕಾಗುತ್ತದೆ. ಆರೋಗ್ಯವಂತ ಹೃದಯ ಇಂಥಹ ಪರಿಸ್ಥಿತಿಯನ್ನು ಸುಸೂತ್ರವಾಗಿ ನಿಭಾಯಿಸಬಲ್ಲದು. ವಿಶ್ರಾಂತಿ ಪಡೆದ ಕೂಡಲೇ ಪರಿಸ್ಥಿತಿ ಸಾಮಾನ್ಯ ಹಂತಕ್ಕೆ ಬರುತ್ತದೆ. ರಕ್ತದಲ್ಲಿ ಹಿಮೊಗ್ಲೊಬಿನ್ ಅಂಶ ಕಡಿಮೆಯಾದಾಗ ಅಥವಾ ಶ್ವಾಸಕೋಶಗಳ ಸಮಸ್ಯೆ ಇದ್ದಾಗ ಆಕ್ಸಿಜನ್ ಕೊಂಡೊಯ್ಯುವ ಶಕ್ತಿ ಇಳಿಮುಖವಾಗುತ್ತದೆ. ಅಧಿಕ ರಕ್ತದೊತ್ತಡ, ಹೃದಯ ಬಡಿತದ ಅಸಹಜ ಏರುವಿಕೆ, ಹೃದಯದ ಕವಾಟಗಳ ಕಾಯಿಲೆ, ಹೃದಯದ ಸ್ನಾಯುಗಳ ಹಿಗ್ಗುವಿಕೆಯ ಸಂದರ್ಭಗಳಲ್ಲಿ ಆಕ್ಸಿಜನ್ನಿನ ಅವಶ್ಯಕತೆಯೂ ಹೆಚ್ಚಾಗುತ್ತದೆ.

 

ಹೃದಯ ರಕ್ತನಾಳಗಳ ಒಳಭಾಗದಲ್ಲಿ ಕೊಬ್ಬಿನ ಅಂಶ ಸೇರಿದಾಗ ಆಂತರಿಕ ವ್ಯಾಸ ಕಿರಿದಾಗಿ, ರಕ್ತದ ಒಳಹರಿವು ಕಡಿಮೆಯಾಗುತ್ತದೆ. ವಿಶ್ರಾಂತಿಯ ಸ್ಥಿತಿಯಲ್ಲಿ ಅಗತ್ಯ ಆಕ್ಸಿಜನ್ ಪೂರೈಕೆ ಆಗುತ್ತದಾದರೂ, ದೈಹಿಕ/ಮಾನಸಿಕ ಶ್ರಮದ ವೇಳೆ ರಕ್ತನಾಳಗಳ ವ್ಯಾಸ ಹಿಗ್ಗಲಾರದೆ, ಹೃದಯದ ರಕ್ತ ಪೂರೈಕೆ ಕುಂಠಿತಗೊಳ್ಳುತ್ತದೆ.  ಅಥೆರೊಸ್ಕ್ಲೀರೊಸಿಸ್ ಎನ್ನಲಾಗುವ ಇದು ಅತ್ಯಂತ ಸಾಮಾನ್ಯವಾಗಿ ಕಂಡು ಬರುವ ಹೃದ್ರೋಗ. ಹೀಗೆ, ಆಕ್ಸಿಜನ್ನಿನ ಬೇಡಿಕೆ-ಪೂರೈಕೆಗಳ ಅಸಮತೋಲನದಿಂದ ಹೃದಯಾಘಾತ ಉಂಟಾಗುತ್ತದೆ; ಎದೆ ನೋವು, ಉಸಿರಾಟದ ತೊಂದರೆ, ಗಂಟಲು ಉರಿ, ಬೆನ್ನಿನ ನೋವು, ಆತಂಕ ಕಾಣಿಸಿಕೊಳ್ಳುತ್ತದೆ.

 

ರಕ್ತನಾಳಗಳ ಸಮಸ್ಯೆಯಿಂದ ಹೃದಯಕ್ಕೆ ಉಂಟಾಗುವ ತಾತ್ಕಾಲಿಕ ಆಕ್ಸಿಜನ್ ಕೊರತೆಯು ವಿಶ್ರಾಂತಿ ತೆಗೆದುಕೊಂಡ ಕೂಡಲೇ ನಿವಾರಣೆಯಾಗಬೇಕು; ಇಲ್ಲವಾದರೆ ರೋಗವು ತೀವ್ರವಾಗಿದೆ ಎಂದರ್ಥ. ಅಗತ್ಯ ಪ್ರಮಾಣದ ರಕ್ತಪೂರೈಕೆ ಆಗದೆ ಹೃದಯದ ಜೀವಕೋಶಗಳು ಸಾವನ್ನಪ್ಪಿದರೆ, ಟ್ರೋಪೋನಿನ್ ಎಂಬ ಪ್ರೋಟಿನ್ ಬಿಡುಗಡೆಯಾಗುತ್ತದೆ. ಹೃದಯಾಘಾತದ ವೇಳೆ ಏರುಪ್ರಮಾಣದ ಟ್ರೋಪೋನಿನ್ ರಕ್ತದಲ್ಲಿ ಕಂಡುಬರುತ್ತದೆ. ಅಂತಹ ರೋಗಿಗೆ ತೀವ್ರ-ನಿಗಾ ಘಟಕಗಳಲ್ಲಿ ತುರ್ತುಚಿಕಿತ್ಸೆ ನೀಡಬೇಕು.

 

ಕರೊನರಿ ಅಥಿರೋಸ್ಕ್ಲಿರೋಸಿಸ್ಗೆ ಪ್ರಮುಖ ಕಾರಣಗಳು ಅತಿಯಾದ ರಕ್ತದೊತ್ತಡ, ಮಧುಮೇಹ, ಅಧಿಕ ಕೊಬ್ಬಿನ ಪ್ರಮಾಣ, ತಂಬಾಕು ಸೇವನೆ, ಅನಾರೋಗ್ಯಕರ ಆಹಾರ, ಮಾನಸಿಕ ಒತ್ತಡ, ಬೊಜ್ಜು, ಸೋಮಾರಿತನದ ಜೀವನಶೈಲಿ, ಆನುವಂಶೀಯತೆ. ಇಂತಹವರಲ್ಲಿ ಹೆಚ್ಚಿನ ಶ್ರಮಪಟ್ಟು ಕೆಲಸ ಮಾಡಿದಾಗ ಅಥವಾ ಮಾನಸಿಕ ಒತ್ತಡವಾದಾಗ ಎದೆನೋವಾಗುತ್ತದೆ. ಹೃದಯದ ಬಡಿತದಲ್ಲಿ ಏರುಪೇರು, ಅಸಹಜ ಎದೆಬಡಿತ, ಪ್ರಜ್ಞೆ ಕಳೆದುಕೊಳ್ಳುವುದು, ರಕ್ತಚಲನೆ ನಿಂತು, ಸಾವನ್ನಪ್ಪಬಹುದು. ರಕ್ತದ ಕೊರತೆಯ ಕಾರಣ ಹೃದಯದ ಸ್ನಾಯುಗಳು ಶಕ್ತಿಗುಂದಿ, ಹೃದಯವೈಫಲ್ಯವಾಗಬಹುದು.

 

(ಕರೋನರಿ ಅಥಿರೋಸ್ಕ್ಲಿರೋಸಿಸ್ ಗುರುತಿಸುವುದು ಮತ್ತು ಚಿಕಿತ್ಸಾ ವಿಧಾನಗಳು ಮುಂದಿನ ಸಂಚಿಕೆಯಲ್ಲಿ)

-----------------------

18/3/2025 ರಂದು ಪ್ರಜಾವಾಣಿಯ ಕ್ಷೇಮ-ಕುಶಲ ವಿಭಾಗದಲ್ಲಿ ಪ್ರಕಟವಾದ ಲೇಖನ. https://www.prajavani.net/health/heart-and-its-problems-health-article-3208983  


 

ಪ್ಲಾಸ್ಟಿಕ್ ಸರ್ಜರಿ ಎಂಬ ಸುರೂಪಿ ಚಿಕಿತ್ಸೆ

ಡಾ. ಕಿರಣ್ ವಿ.ಎಸ್.

ವೈದ್ಯರು

ಎಲ್ಲ ಪ್ರಾಚೀನ ನಾಗರಿಕತೆಗಳಲ್ಲೂ ಮೂಗು ಎನ್ನುವುದು ಪ್ರತಿಷ್ಠೆಯ ಸಂಕೇತವಾಗಿತ್ತು. ತಪ್ಪು ಮಾಡಿದವರ ಮೂಗು ಕತ್ತರಿಸುವ ಪದ್ಧತಿ ಭಾರತ, ಇಜಿಪ್ಟ್, ಮೆಸೆಪೆಟೊಮಿಯಾ ನಾಗರಿಕತೆಗಳಲ್ಲಿ ನಾಲ್ಕು ಸಾವಿರ ವರ್ಷಗಳಿಂದ ದಾಖಲಾಗಿದೆ. ತಮ್ಮ ಪ್ರತಿಷ್ಠೆ ಭಂಗವಾದಾಗ ಸಿರಿವಂತರು ಏನಾದರೂ ಪರಿಹಾರ ಹುಡುಕುವುದು ಸಾಮಾನ್ಯ. ಈ ನಿಟ್ಟಿನಲ್ಲಿ ಬೆಳೆದದ್ದು ಕತ್ತರಿಸಿದ ಮೂಗನ್ನು ಸರಿಪಡಿಸುವ ಸುರೂಪಿ ಚಿಕಿತ್ಸೆ. ಸುಮಾರು ನಾಲ್ಕು ಸಾವಿರ ವರ್ಷಗಳ ಹಿಂದೆಯೇ ಭಾರತದಲ್ಲಿ ಕುಂಬಾರರು ಮಣ್ಣಿನಿಂದ ಮಾಡಿದ ಆಕೃತಿಗಳನ್ನು ಬಳಸಿ ಕತ್ತರಿಸಿದ ಮೂಗನ್ನು ಸಾಮಾನ್ಯವಾಗಿ ಕಾಣುವಂತೆ ಮಾಡುತ್ತಿದ್ದರು ಎನ್ನುವ ದಾಖಲೆಗಳಿವೆ. ಇದು ಮುಂದೆ ಅಭಿವೃದ್ಧಿಯಾಗಿ ಹಣೆಯ ಮೇಲಿನ ಚರ್ಮವನ್ನು ಹೆರೆದು, ಅದನ್ನು ಕತ್ತರಿಸಿದ ಮೂಗಿನ ಭಾಗಕ್ಕೆ ಜೋಡಿಸುವ ಕಲೆಯಾಗಿ ಮಾರ್ಪಾಡಾಯಿತು. ಇದನ್ನು ಸಾಧಿಸಿದವರು ಸಣ್ಣ ಚಾಕುಗಳ ಬಳಕೆ, ನಿಖರವಾದ ಕೈಚಲನೆಯಲ್ಲಿ ಪಳಗಿದ್ದ ಕ್ಷೌರಿಕರು. 11ನೆಯ ಶತಮಾನದ ಕಾಶ್ಮೀರದ ಕವಿ ಕ್ಷೇಮೇಂದ್ರ ತನ್ನ ಸಮಯಮಾತೃಕಾ ಎನ್ನುವ ಕೃತಿಯಲ್ಲಿ ಕತ್ತರಿಸಿದ ಮೂಗನ್ನು ಸರಿಪಡಿಸುತ್ತಿದ್ದ ಕ್ಷೌರಿಕನ ಪ್ರಸ್ತಾಪ ಮಾಡಿದ್ದಾನೆ. ಶತಮಾನಗಳ ಕಾಲ ಜಗತ್ತಿನ ಗಮನಕ್ಕೆ ಬಾರದಂತೆ ಈ ಪದ್ಧತಿ ಭಾರತದಲ್ಲಿ ನಡೆಯುತ್ತಲೇ ಇತ್ತು. 1794 ರಲ್ಲಿ ಮಿ.ಅರ್ಬನ್ ಮತ್ತು ಜನರಲ್ ಲ್ಯುಕಸ್ ಎಂಬ ಬ್ರಿಟಿಷ್ ಅಧಿಕಾರಿಗಳು ಇಂಗ್ಲೆಂಡಿನ ಪತ್ರಿಕೆಯೊಂದರಲ್ಲಿ ಮೈಸೂರು ಸಂಸ್ಥಾನದಲ್ಲಿ ಕಂಡು ಬಂದ ಕತ್ತರಿಸಿದ ಮೂಗಿನ ಸುರೂಪಿ ಶಸ್ತ್ರಚಿಕಿತ್ಸೆಯ ಪ್ರಸಂಗವೊಂದನ್ನು ವರದಿ ಮಾಡಿ, ಜಗತ್ತಿಗೆ ಅಚ್ಚರಿ ಮೂಡಿಸಿದ್ದರು.

ಇಂದು ಪ್ಲಾಸ್ಟಿಕ್ ಸರ್ಜರಿ ಎಂದು ಕರೆಯಲ್ಪಡುವ ಸುರೂಪಿ ಶಸ್ತ್ರಚಿಕಿತ್ಸೆ ಬಹಳ ಪ್ರಗತಿ ಸಾಧಿಸಿದೆ. ಊನವಾದ ಅಂಗಗಳನ್ನು ಮೊದಲಿನಂತೆ ಸರಿಪಡಿಸುವುದು, ಬೇರೆ ವಿಧಾನಗಳಿಂದ ಅವುಗಳನ್ನು ಮತ್ತೆ ನಿರ್ಮಿಸುವುದು, ವಕ್ರವಾಗಿ ಬೆಳೆದಿರುವ ಅಂಗಗಳನ್ನು ಚಂದವಾಗಿ ಕಾಣುವಂತೆ ಸರಿಪಡಿಸುವುದು ಪ್ಲಾಸ್ಟಿಕ್ ಸರ್ಜರಿಯ ಧ್ಯೇಯಗಳು. ಇದರಲ್ಲಿ ಪ್ಲಾಸ್ಟಿಕ್ ಎನ್ನುವ ಪದ ಗ್ರೀಕ್ ಮೂಲದ್ದು. ಅದರ ಅರ್ಥ “ಬೇಕಾದಂತಹ ಆಕೃತಿಗೆ ತರುವುದು”. ಶಸ್ತ್ರಚಿಕಿತ್ಸೆಯಲ್ಲಿ ಈ ಪದದ ಬಳಕೆ ಬಂದದ್ದು 1816 ರಲ್ಲಿ. ನಾವು ಇಂದು ಬಳಸುವ ಪೆಟ್ರೋಲಿಯಂ ಮೂಲದ ಪ್ಲಾಸ್ಟಿಕ್ ಎನ್ನುವ ವಸ್ತು ಆವಿಷ್ಕಾರವಾದದ್ದು 1908ರಲ್ಲಿ. ಪ್ಲಾಸ್ಟಿಕ್ ಸರ್ಜರಿಗೂ, ಸಾಮಾನ್ಯ ಬಳಕೆಯ ಪ್ಲಾಸ್ಟಿಕ್ಕಿಗೂ ಯಾವ ಸಂಬಂಧವೂ ಇಲ್ಲ.

ಮೊದಲನೆಯ ಮಹಾಯುದ್ಧದ ವೇಳೆ ಅಂಗಚ್ಛೇದಗಳಿಗೆ ಒಳಗಾಗಿದ್ದ ಸೈನಿಕರ ವಿಕೃತವಾದ ಅಂಗಗಳನ್ನು ಶಸ್ತ್ರಚಿಕಿತ್ಸೆಯ ಮೂಲಕ ಸರಿಪಡಿಸಿದ ನ್ಯೂಜಿಲ್ಯಾಂಡಿನ ವೈದ್ಯ ಸರ್ ಹೆರಾಲ್ಡ್ ಗಿಲ್ಲೆಸ್ ಆಧುನಿಕ ಪ್ಲಾಸ್ಟಿಕ್ ಸರ್ಜರಿಯ ಜನಕ ಎನಿಸಿಕೊಂಡಿದ್ದಾರೆ. ಇಂದು ಪ್ಲಾಸ್ಟಿಕ್ ಸರ್ಜರಿ ಅಗಾಧವಾಗಿ ಬೆಳೆದಿದೆ. ನಟರ ಸೊಟ್ಟ ಮೂಗುಗಳನ್ನು ನೆಟ್ಟಗಾಗಿಸುವ, ನಟಿಯರ ಸ್ತನಗಳ ಗಾತ್ರಗಳನ್ನು ಹಿಗ್ಗಿಸುವ ವಿಧಾನಗಳು ಇದರ ಅಲ್ಪಭಾಗ ಮಾತ್ರ. ಸುಟ್ಟ ಗಾಯಗಳ ಚರ್ಮದ ಪುನರ್ನಿರ್ಮಾಣ; ಮಕ್ಕಳ ಸೀಳು-ತುಟಿ, ಸೀಳು-ಅಂಗಳಗಳನ್ನು ಕೂಡಿಸುವಿಕೆ; ಕ್ಯಾನ್ಸರ್ ಮೂಲಕ ಘಾಸಿಗೊಂಡಿರುವ ಮುಖದ ಮೂಳೆಗಳ ಮರುನಿರ್ಮಾಣ; ಜನ್ಮಜಾತವಾಗಿಯೋ ಅಥವಾ ಅವಘಡಗಳ ಮೂಲಕವೋ ಸಂಭವಿಸಿದ ಕೈಬೆರಳುಗಳ ವಿಕೃತಿಗಳನ್ನು ತಿದ್ದುವಿಕೆ; ಕ್ಯಾನ್ಸರ್ ಮೂಲಕ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಸ್ತನಗಳ ಕೃತಕ ನಿರ್ಮಿತಿ; ತೀರಾ ಸಣ್ಣಗಾತ್ರದ, ಆದರೆ ಬಹಳ ಮಹತ್ವದ ಕಾರ್ಯ ನಿರ್ವಹಿಸುವ ರಕ್ತನಾಳಗಳು ಮತ್ತು ನರಗಳ ಜೋಡಣೆ ಮೊದಲಾದುವುಗಳು ಪ್ಲಾಸ್ಟಿಕ್ ಸರ್ಜರಿಯ ದಾಯರೆಗೆ ಬರುತ್ತವೆ.

ಸುರೂಪಿ ಚಿಕಿತ್ಸೆಯ ಅತ್ಯಂತ ಮಹತ್ವದ ಅಂಶ ಚರ್ಮದ ರಕ್ಷಣೆ. ರೂಪ ಎನ್ನುವುದು ಮುಖ್ಯವಾಗಿ ಚರ್ಮದ ಆರೋಗ್ಯ ಮತ್ತು ಕಾಂತಿಯನ್ನು ಆಧರಿಸುತ್ತದೆ. ಹೀಗಾಗಿ, ಸಫಲ ಪ್ಲಾಸ್ಟಿಕ್ ಸರ್ಜರಿಯಲ್ಲಿ ಆಯಾ ಅಂಗದ ಮೇಲಿನ ಚರ್ಮವನ್ನು ಸಹಜವಾಗಿ ಕಾಣುವಂತೆ ಮಾಡುವುದು ಬಹಳ ಮುಖ್ಯ. ಬಹುತೇಕ ಸುಟ್ಟ ಗಾಯಗಳ ಚಿಕಿತ್ಸೆಯಲ್ಲಿ ಚರ್ಮದ ಶಸ್ತ್ರಚಿಕಿತ್ಸೆಯೇ ಪ್ರಮುಖ ಭಾಗ. ಒಂದು ಭಾಗದ ಚರ್ಮವನ್ನು ಮತ್ತೊಂದು ಭಾಗಕ್ಕೆ ಜೋಡಿಸುವ ಪ್ರಕ್ರಿಯೆ ಸುರೂಪಿ ಶಸ್ತ್ರಚಿಕಿತ್ಸೆಯ ಅಂಗಭಾಗ. ಇದು ಆಯಾ ರೋಗಿಯ ಚರ್ಮವನ್ನೇ ಬಳಸಿ ಮಾಡಬಹುದು. ರೋಗಿಯ ತೊಡೆಯ ಚರ್ಮವು ಮುಖದ ಶಸ್ತ್ರಚಿಕಿತ್ಸೆಯಲ್ಲಿ ನೆರವಾಗುತ್ತದೆ. ಕೆಲವೊಮ್ಮೆ ಇತರ ದಾನಿಗಳ ಚರ್ಮದ ಬಳಕೆಯೂ ಆಗುತ್ತದೆ. ಈಚೆಗೆ ಮೃತ ದೇಹಗಳಿಂದ ಚರ್ಮವನ್ನು ತೆಗೆದು ಸಂರಕ್ಷಿಸಿ, ರೋಗಿಗಳಿಗೆ ಬಳಕೆ ಮಾಡುವ ಚರ್ಮದ ಬ್ಯಾಂಕ್ ನಿರ್ಮಾಣವಾಗಿದೆ. ಇದು ರೋಗಿಗಳ ಪಾಲಿಗೆ, ಅದರಲ್ಲೂ ಸುಟ್ಟ ಗಾಯಗಳ ಸಂತ್ರಸ್ತರಿಗೆ ವರದಾನವಾಗಿದೆ. ಕೆಲವು ವಿಶೇಷ ಸಂದರ್ಭಗಳಲ್ಲಿ ಪ್ರಾಣಿಗಳ ಚರ್ಮದ ಬಳಕೆಯೂ ಆಗುತ್ತದೆ.

ಚರ್ಮದ ಮೇಲೆ ಕಲೆಗಳು ಕಾಣದಂತೆ ನಡೆಸುವ ಶಸ್ತ್ರಚಿಕಿತ್ಸೆಗಳಿಗೆ ಮಹತ್ವವಿದೆ. ಇದಕ್ಕಾಗಿ ಶಸ್ತ್ರಚಿಕಿತ್ಸೆಯ ವೇಳೆ ಚರ್ಮವನ್ನು ಯಾವ ರೀತಿಯಲ್ಲಿ, ಯಾವ ಕೋನದಲ್ಲಿ, ಯಾವ ಹಾದಿಯಲ್ಲಿ ವಿಂಗಡಿಸಬೇಕು ಎನ್ನುವ ಕರಾರುವಾಕ್ ಅಧ್ಯಯನಗಳಿವೆ. ಚರ್ಮದ ಸಹಜ ಅಂಗಾಂಶಗಳ ನಿರ್ಮಿತಿಯ ದಾರಿಯನ್ನು ಅನುಸರಿಸುವ ಈ ವಿಧಾನದಲ್ಲಿ ಶಸ್ತ್ರಚಿಕಿತ್ಸೆಯ ನಂತರ ಚರ್ಮ ಬಹಳ ಸಹಜವಾಗಿ ಕೂಡಿಕೊಳ್ಳುತ್ತದೆ. ಇದಕ್ಕೆ ಪೂರಕವಾಗುವಂತೆ ಅತ್ಯಂತ ಸಪೂರ ಹೊಲಿಗೆ ದಾರಗಳ ಬಳಕೆ, ಚರ್ಮದ ಆಂತರ್ಯದಲ್ಲೇ ಹಾಕುವ ಸೂಕ್ಷ್ಮ ಹೊಲಿಗೆಗಳು, ಬಹಳ ನಾಜೂಕಾಗಿ ಚರ್ಮದ ಪದರಗಳನ್ನು ಒಟ್ಟುಗೂಡಿಸುವ ವಿಧಾನ, ಚರ್ಮದ ಸಹಜ ಬಣ್ಣವನ್ನು ಏರುಪೇರು ಮಾಡದ ವಿಶಿಷ್ಟ ಔಷಧಗಳ ಬಳಕೆ ಮೊದಲಾದುವುಗಳು ಸಹಕಾರಿ.

ಸುರೂಪಿ ಶಸ್ತ್ರಚಿಕಿತ್ಸೆ ಎಷ್ಟು ಪ್ರಾಚೀನವೋ ಅಷ್ಟೇ ನವೀನ. ಸಾಮಾನ್ಯ ಜೀವನ ಸಹಜವಾಗಿಯೂ, ಸುಂದರವಾಗಿಯೂ ಇರಬೇಕೆನ್ನುವುದು ಎಲ್ಲರ ಬಯಕೆ. ಸುರೂಪಿ ಶಸ್ತ್ರಚಿಕಿತ್ಸೆಯ ಧ್ಯೇಯವೂ ಜೀವನದ ಈ ಆಶಯವನ್ನೇ ಬಿಂಬಿಸುವ ಪ್ರಯತ್ನ.

-----------------------

ದಿನಾಂಕ 18/02/2025 ರ ಪ್ರಜಾವಾಣಿ ದಿನಪತ್ರಿಕೆಯ ಕ್ಷೇಮ-ಕುಶಲ ವಿಭಾಗದಲ್ಲಿ ಪ್ರಕಟವಾದ ಬರಹ. ಮೂಲ ಲೇಖನದ ಕೊಂಡಿ: https://www.prajavani.net/health/plastic-surgery-beauty-treatment-3172279