ಭಾನುವಾರ, ಜುಲೈ 23, 2023

 ನಿಮ್ಮ ಕುಟುಂಬವನ್ನು ಡೆಂಘಿ ಜ್ವರದಿಂದ ಕಾಪಾಡಿರಿ

ಡಾ. ಕಿರಣ್ ವಿ.ಎಸ್.

ವೈದ್ಯರು

ಕೋವಿಡ್-19 ಹಾವಳಿಗೆ ಮುನ್ನ ಜನರ ಮನಸ್ಸಿನಲ್ಲಿ ಬಹಳ ಭೀತಿ ಹುಟ್ಟಿಸುತ್ತಿದ್ದ ವೈರಸ್ ಡೆಂಘಿ ಜ್ವರದ್ದು. ಕೋವಿಡ್-19 ವೈರಸ್ ಭೀತಿ ಬಹುಮಟ್ಟಿಗೆ ನಿರ್ನಾಮವಾದರೂ ಡೆಂಘಿ ಜ್ವರದ ಅಪಾಯ ಮುಂದುವರೆದಿದೆ. ಸೊಳ್ಳೆಗಳ ಮೂಲಕ ಹರಡುವ ಡೆಂಘಿ ವೈರಸ್ ತೀವ್ರ ಜ್ವರ, ಕೀಲುಗಳ ನೋವು, ಚರ್ಮ ಕೆಂಪಾಗುವುದು ಮೊದಲಾದ ಲಕ್ಷಣಗಳನ್ನು ತೋರುತ್ತದೆ. ಡೆಂಘಿ ಜ್ವರದ ಬಹುತೇಕ ರೋಗಿಗಳು ಪ್ರಾಥಮಿಕ ಚಿಕಿತ್ಸೆ, ಸಾಕಷ್ಟು ದ್ರವಾಹಾರ, ಮತ್ತು ವಿಶ್ರಾಂತಿಯಿಂದ ಚೇತರಿಸಿಕೊಳ್ಳುತ್ತಾರೆ. ಆದರೆ, ಕೆಲವರಲ್ಲಿ ಕಾಯಿಲೆ ತೀವ್ರ ಸ್ವರೂಪ ಪಡೆದು ರಕ್ತಸ್ರಾವ ಮತ್ತು ಅಂಗವೈಫಲ್ಯಗಳಂತಹ ಪ್ರಾಣಾಂತಕ ಸಮಸ್ಯೆಗಳು ಉಂಟಾಗಬಹುದು. ಸಮಸ್ಯೆ ಯಾರಲ್ಲಿ ತೀವ್ರ ಸ್ವರೂಪ ಪಡೆಯುತ್ತದೆ ಎಂದು ಮೊದಲೇ ತಿಳಿಯಲು ಸಾಧ್ಯವಿಲ್ಲದ ಕಾರಣ ಪ್ರತಿಯೊಂದು ರೋಗಿಯ ವಿಷಯದಲ್ಲೂ ಎಚ್ಚರಿಕೆ ವಹಿಸುವುದು ಅಗತ್ಯವಾಗುತ್ತದೆ. ಡೆಂಘಿ ಜ್ವರದ ರೋಗಿಗಳಿಗೂ, ಅವರ ಮನೆಯವರಿಗೂ, ಅವರ ವೈದ್ಯರಿಗೂ ಇಂತಹ ಎಚ್ಚರದ ಆವಶ್ಯಕತೆ ತಪ್ಪಿದ್ದಲ್ಲ. ಮಕ್ಕಳ ವಿಷಯದಲ್ಲಂತೂ ಪೋಷಕರು ಮೈಯೆಲ್ಲ ಕಣ್ಣಾಗಿರಬೇಕು.

ಬ್ಯಾಕ್ಟೀರಿಯಾಗಳಿಂದ ಬರುವ ರೋಗಗಳನ್ನು ಆಂಟಿಬಯಾಟಿಕ್ ಔಷಗಳ ಬಳಕೆಯಿಂದ ತಕ್ಕ ಮಟ್ಟಿಗೆ ನಿಗ್ರಹಿಸಬಹುದು. ಆದರೆ ಆಂಟಿಬಯಾಟಿಕ್ ಔಷಧಗಳು ವೈರಸ್ ಕಾಯಿಲೆಗಳ ಮೇಲೆ ಕೆಲಸ ಮಾಡುವುದಿಲ್ಲ. ಬಹುತೇಕ ವೈರಸ್ ಕಾಯಿಲೆಗಳಿಗೆ ಪಕ್ಕಾ ಚಿಕಿತ್ಸೆ ಇಲ್ಲ. ಹೀಗಾಗಿ, ನಮ್ಮ ಶರೀರದ ರಕ್ಷಕ ವ್ಯವಸ್ಥಯೇ ವೈರಸ್ ವಿರುದ್ಧ ಹೊಡೆದಾಡಬೇಕು; ಈ ಕಾದಾಟಕ್ಕೆ ಪೂರಕವಾಗುವಂತೆ ನಾವು ಶರೀರವನ್ನು ನೋಡಿಕೊಳ್ಳಬೇಕು. ವೈರಸ್ ಕಾಯಿಲೆಗಳು ಬಂದ ನಂತರ ಅವಕ್ಕೆ ಚಿಕಿತ್ಸೆ ನೀಡುವುದರ ಬದಲಿಗೆ, ಅವುಗಳು ಬಾರದಂತೆ ಕಾಪಾಡಿಕೊಳ್ಳುವುದು ಸೂಕ್ತ ನಡೆ. ಇದನ್ನು ಮಾಡಲು ರೋಗಗಳ ಬಗ್ಗೆ ಅರಿವು ಮೂಡುವುದು ಮುಖ್ಯ.

ಡೆಂಘಿ ಜ್ವರ ಒಂದು ಸಾಂಕ್ರಾಮಿಕ ಕಾಯಿಲೆ. ಅಂದರೆ, ಅದು ಓರ್ವ ರೋಗಿಯಿಂದ ಮತ್ತೋರ್ವ ಆರೋಗ್ಯವಂತ ವ್ಯಕ್ತಿಗೆ ಹರಡುತ್ತದೆ. ಅಧಿಕತರ ಸಾಂಕ್ರಾಮಿಕ ಕಾಯಿಲೆಗಳಲ್ಲಿ ಮೂರು ಅಂಶಗಳಿರುತ್ತವೆ  ರೋಗಕಾರಕ ಸೂಕ್ಷ್ಮಾಣುಜೀವಿ, ರೋಗವನ್ನು ಹರಡುವ ವಾಹಕ, ಮತ್ತು ಇವೆರಡರ ಬೆಳವಣಿಗೆಗೆ ಪೂರಕವಾಗುವ ವಾತಾವರಣ. ಈ ಮೂರನ್ನೂ ಕೂಡಿಸಿದರೆ ಸೋಂಕಿನ ತ್ರಿಕೋಣವಾಗುತ್ತದೆ. ಕಾಯಿಲೆಯನ್ನು ಹರಡದಂತೆ ತಡೆಗಟ್ಟಬೇಕಾದರೆ ಸೋಂಕಿನ ತ್ರಿಕೋಣದ ಯಾವುದಾದರೂ ಒಂದು ಬಾಹುವನ್ನಾದರೂ ಮುರಿಯಬೇಕು.

ಈ ಮಾಹಿತಿಯನ್ನು ಡೆಂಘಿ ಜ್ವರಕ್ಕೆ ಅನ್ವಯಿಸಿದರೆ, ರೋಗಕಾರಕ ಸೂಕ್ಷ್ಮಾಣುಜೀವಿ ವೈರಸ್. ಪ್ರಸ್ತುತ ಈ ವೈರಸ್ ಅನ್ನು ಸಮರ್ಥವಾಗಿ ಕೊಲ್ಲುವ ಔಷಧ, ಅಥವಾ ದೇಹದೊಳಗೆ ವೈರಸ್ ಬೆಳೆಯದಂತೆ ವಿರೋಧಿಸುವ ಲಸಿಕೆಯ ಲಭ್ಯತೆಯಿಲ್ಲ. ಆದ್ದರಿಂದ, ವೈರಸ್ ಮಟ್ಟದಲ್ಲಿ ಇದನ್ನು ನಿಗ್ರಹಿಸುವುದು ಕಷ್ಟ. ಡೆಂಗಿ ವೈರಸ್ ಹರಡುವುದು ಈಡಿಸ್ ಇಜಿಪ್ಟೈ ಎನ್ನುವ ಹೆಣ್ಣು ಸೊಳ್ಳೆಗಳಿಂದ. ಈ ಪ್ರಭೇದದ ಸೊಳ್ಳೆಗಳನ್ನು ವಿಜ್ಞಾನಿಗಳು ಅಧ್ಯಯನ ಮಾಡಿದ್ದಾರೆ. ಇದು ನಿಂತ ನೀರಿನಲ್ಲಿ ಮೊಟ್ಟೆಯಿಟ್ಟು ಸಂತಾನ ಬೆಳೆಸುತ್ತದೆ. ಹಗಲಿನ ವೇಳೆ ಸಕ್ರಿಯವಾಗಿರುವ ಈ ಸೊಳ್ಳೆ ಸಂಜೆಯ ನಂತರ ತನ್ನ ಕೆಲಸವನ್ನು ಕಡಿಮೆ ಮಾಡುತ್ತದೆ. ಡೆಂಘಿ ಜ್ವರದ ರೋಗಿಯನ್ನು ಇಂತಹ ಸೊಳ್ಳೆಗಳು ಕಡಿದಾಗ ಅವುಗಳ ಒಳಗೆ ವೈರಸ್ ಸೇರಿಕೊಳ್ಳುತ್ತದೆ. ಅದೇ ಸೊಳ್ಳೆ ಮತ್ತೋರ್ವ ನಿರೋಗಿಯನ್ನು ಕಡಿದಾಗ ಡೆಂಘಿ ವೈರಸ್ ಆ ವ್ಯಕ್ತಿಯ ರಕ್ತವನ್ನು ಸೇರಿ ಕಾಯಿಲೆ ತರುತ್ತದೆ. ಡೆಂಗಿ ಜ್ವರ ಒಬ್ಬರಿಂದ ಮತ್ತೊಬ್ಬರಿಗೆ ನೇರವಾಗಿ ಹರಡುವುದಿಲ್ಲ. ಅದೇನಿದ್ದರೂ ಈಡಿಸ್ ಇಜಿಪ್ಟೈ ಎಂಬ ಹೆಣ್ಣು ಸೊಳ್ಳೆಯ ಕಡಿತದಿಂದ ಮಾತ್ರ ಹರಡಬಲ್ಲದು. ಅಂದರೆ, ಸೊಳ್ಳೆಗಳನ್ನು ನಿಗ್ರಹಿಸಿದರೆ ಡೆಂಘಿ ಜ್ವರದಿಂದ ರಕ್ಷಣೆ ಸಾಧ್ಯ.

ಈ ನಿಟ್ಟಿನಲ್ಲಿ ಕೆಲಸಕ್ಕೆ ಬರುವುದು ಪರಿಸರದ ಬಗೆಗಿನ ನಮ್ಮ ಅರಿವು. ಸೊಳ್ಳೆಗಳು ಬೆಳೆಯಲು ಪೂರಕವಾಗುವ ಗಲೀಜು ಪರಿಸರವನ್ನು ಚೊಕ್ಕಟಗೊಳಿಸುವುದು ನಮ್ಮ ಆದ್ಯತೆಯಾಗಬೇಕು. ನಿಂತ ನೀರಿನಲ್ಲಿ ಈಡಿಸ್ ಇಜಿಪ್ಟೈ ಸೊಳ್ಳೆಗಳು ಬೆಳೆಯುತ್ತವೆ ಎಂದು ತಿಳಿದಾಗ, ಎಲ್ಲೂ ನೀರು ನಿಲ್ಲದಂತೆ ನಿಗಾ ವಹಿಸುವುದು; ಹೀಗೆ ನಿಂತ ನೀರನ್ನು ಶುಚಿಗೊಳಿಸುವುದು ಮುಖ್ಯ. ಆದರೆ ಧಾವಂತದ ಆಧುನಿಕ ಬದುಕಿನಲ್ಲಿ ಈ ರೀತಿ ಗಮನಿಸುವುದು ಸುಲಭದ ಮಾತಲ್ಲ. ನಮ್ಮ ಅರಿವಿನ ಪರಿಧಿಗೆ ಬರದಂತಹ ಎಡೆಗಳಲ್ಲಿ ನೀರು ನಿಂತು ಸೊಳ್ಳೆಗಳ ಬೆಳವಣಿಗೆ ಆಗಬಹುದು. ಅಲಂಕಾರಿಕವಾಗಿ ಮನೆಯೊಳಗೆ ಬೆಳೆಯುವ ಸಸ್ಯಗಳ ಕುಂಡಗಳು; ಮನೆಯ ಹಿತ್ತಲಲ್ಲಿ ಎಸೆದಿರುವ ಹಳೆಯ ಪಾತ್ರೆ, ಮಡಕೆ, ಟೈರು, ಆಟಿಕೆ, ಬಕೆಟ್ ಮೊದಲಾದುವಗಳಲ್ಲಿ ಸೇರಿರುವ ನೀರು ನಮ್ಮ ಕಣ್ಣಿಗೆ ಬಿದ್ದಿರುವುದಿಲ್ಲ. ನೀರು ಹೊತ್ತು ತರುವ ಅಥವಾ ಹೊರಹಾಕುವ ಪೈಪುಗಳಲ್ಲಿ ಎಂದೋ ಆಗಿರಬಹುದಾದ ಸಣ್ಣ ಬಿರುಕಿನಿಂದ ಹರಿದ ನೀರು ಮನೆಯ ಆಸುಪಾಸಿನ ಸ್ವಲ್ಪ ತಗ್ಗು ಪ್ರದೇಶದಲ್ಲಿ ಅನಾಯಾಸವಾಗಿ ನಿಲ್ಲುತ್ತದೆ. ಇವುಗಳಲ್ಲಿ ಸೊಳ್ಳೆಗಳು ಹುಲುಸಾಗಿ ಬೆಳೆಯುತ್ತವೆ. ನಮ್ಮ ಮನೆಯನ್ನು ನಾವು ಚೊಕ್ಕಟವಾಗಿ ಇಟ್ಟುಕೊಂಡರೂ, ನೆರೆಹೊರೆಯವರ ನಿರ್ಲಕ್ಷ್ಯದಿಂದ ನಿಲ್ಲುವ ನೀರಿನಲ್ಲಿ ಬೆಳೆಯುವ ಸೊಳ್ಳೆಗಳು ಆಯಾ ಪ್ರದೇಶದ ಪ್ರತಿಯೊಬ್ಬರಿಗೂ ಹಾನಿಮಾಡಬಲ್ಲವು. ಹೀಗಾಗಿ, ಈ ವಿಷಯದ ಬಗ್ಗೆ ಸಾಂಘಿಕ ಅರಿವು ಮೂಡಿಸಿ, ಕಾಯಿಲೆಯ ವಿರುದ್ಧದ ಹೋರಾಟದಲ್ಲಿ ಪ್ರತಿಯೊಬ್ಬರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಮುಖ್ಯವಾಗುತ್ತದೆ.

ಗತ್ಯಂತರವಿಲ್ಲದೆ ನೀರನ್ನು ಹಿಡಿದಿಡಬೇಕಾದ ಸಂದರ್ಭದಲ್ಲಿ ಬಳಕೆಗೆ ಸಂಗ್ರಹಿಸಿರುವ ನೀರಿನಲ್ಲಿ ಸೊಳ್ಳೆಗಳ ಗೊದಮೊಟ್ಟೆಗಳನ್ನು ತಿನ್ನುವ ಮೀನುಗಳ ಪೋಷಣೆ; ನಿಂತ ನೀರಿನ ಮೇಲೆ ಬೇವಿನ ಎಣ್ಣೆಯ ಸಿಂಪಡಿಕೆ ಮೊದಲಾದ ಪರಿಸರಕ್ಕೆ ಹಾನಿ ಮಾಡದ ವಿಧಾನಗಳಿಂದ ಸೊಳ್ಳೆಗಳ ಬೆಳವಣಿಗೆ ತಪ್ಪಿಸುವಂತಹ ಕೆಲಸಗಳನ್ನು ಮಾಡಬಹುದು. ಮನೆಯೊಳಗೆ ಸೊಳ್ಳೆಗಳು ಬಾರದಂತೆ ಕಿಟಕಿ ಬಾಗಿಲುಗಳಿಗೆ ಜಾಲರಿಗಳ ಅಳವಡಿಕೆ, ಮನೆಯನ್ನು ಅನಗತ್ಯ ಕಸದಿಂದ ತುಂಬದೆ ಚೊಕ್ಕಟ ಮಾಡುವುದು, ಮನೆಯಿಂದ ಹೊರಹೋಗುವಾಗ ಮೈತುಂಬುವ ಬಟ್ಟೆಗಳ ಬಳಕೆ, ಸೊಳ್ಳೆನಿರೋಧಕ ಮುಲಾಮುಗಳನ್ನು ಹಚ್ಚುವಿಕೆ ಮೊದಲಾದುವು ಮಕ್ಕಳಾದಿಯಾಗಿ ಎಲ್ಲರನ್ನೂ ಸೊಳ್ಳೆಕಡಿತದಿಂದ ಕಾಪಾಡಬಲ್ಲವು. ಕಾಯಿಲೆಯ ಗಹನತೆಯನ್ನು ಅರಿಯಲಾಗದ ಮಕ್ಕಳನ್ನು ಮನೆಯ ಹಿರಿಯರು ಬಹಳ ಜತನದಿಂದ ನೋಡಿಕೊಂಡು ಅಪಾಯದಿಂದ ರಕ್ಷಿಸಬೇಕು.

ಇಷ್ಟಾಗಿಯೂ ಡೆಂಘಿ ಜ್ವರ ಬಾರದಂತೆ ತಡೆಯುವುದು ಸಾಧ್ಯವಾಗದಿರಬಹುದು. ಕಾಯಿಲೆಯ ಪ್ರಾಥಮಿಕ ಲಕ್ಷಣಗಳು ಕಂಡಾಗ ಕೂಡಲೇ ಕುಟುಂಬವೈದ್ಯರನ್ನು ಕಾಣುವುದು ಒಳ್ಳೆಯದು. ಈ ವಿಷಯದಲ್ಲಿ ನಿರ್ಲಕ್ಷ್ಯ ಕೂಡದು.  

-------------------------------

ದಿನಾಂಕ 4/7/2023 ರ ಪ್ರಜಾವಾಣಿಯ ಕ್ಷೇಮ ಕುಶಲ ವಿಭಾಗದಲ್ಲಿ ಪ್ರಕಟವಾದ ಲೇಖನ. ಮೂಲ ಲೇಖನದ ಕೊಂಡಿ:

https://www.prajavani.net/health/effective-tips-to-avoid-dengue-during-monsoon-2367115 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ