ಭಾನುವಾರ, ಜುಲೈ 23, 2023

 ಕರುಳಿನ ಗಣಿತ

ಡಾ. ಕಿರಣ್ ವಿ.ಎಸ್.

ವೈದ್ಯರು

ನಮ್ಮ ದೇಹದ ಅತ್ಯಧಿಕ ತೂಕದ ಅಂಗ, ಅತಿ ಹೆಚ್ಚು ರಕ್ತ ಸಂಚಾರ ಇರುವ ಅಂಗ, ಅತಿ ಹೆಚ್ಚು ಆಕ್ಸಿಜನ್ ಹೀರುವ ಅಂಗಗಳ ಬಗ್ಗೆ ಕೆಲವರಿಗೆ ತಿಳಿಯದಿರಬಹುದು. ಆದರೆ ಅತಿ ಉದ್ದನೆಯ ಅಂಗದ ಬಗ್ಗೆ ಮಾತ್ರ ಎಲ್ಲರಿಗೂ ತಿಳಿದಿರುತ್ತದೆ. ಸುಮಾರು ಏಳೂವರೆ ಮೀಟರ್ (ಸುಮಾರು 25 ಅಡಿಗಳು) ಉದ್ದವಿರುವ ಕರುಳು ಜಠರದ ಅಂತ್ಯದಿಂದ ಮೊದಲಾಗಿ ಮಲದ್ವಾರದವರೆಗೆ ಸಾಗುತ್ತದೆ. ಇದರ ಮೊದಲ ಆರು ಮೀಟರ್ (ಸುಮಾರು 20 ಅಡಿ) ಸಣ್ಣಕರುಳು. ಉಳಿದ ಒಂದೂವರೆ ಮೀಟರ್ (ಸುಮಾರು 5 ಅಡಿಗಳು) ದೊಡ್ಡಕರುಳು. ಸಣ್ಣಕರುಳಿನ ಉದ್ದ ಹೆಚ್ಚಾಗಿದ್ದರೂ ಅದು ಸಣ್ಣಕರುಳು ಏಕೆಂದರೆ, ಅದರ ವ್ಯಾಸ ಸಣ್ಣದು  ಕೇವಲ ಒಂದು ಇಂಚು. ಇದಕ್ಕೆ ಪ್ರತಿಯಾಗಿ ಉದ್ದ ಕಡಿಮೆ ಇದ್ದರೂ ದೊಡ್ಡಕರುಳಿನ ವ್ಯಾಸ ದೊಡ್ಡದು  ಸುಮಾರು ಮೂರು ಇಂಚು.

ಕರುಳಿನ ಹೊರಭಾಗ ನುಣ್ಣಗೆ ಕಂಡರೂ, ಒಳಭಾಗದಲ್ಲಿ ಒತ್ತೊತ್ತಿನ ಮಡಚುಗಳು ಇರುತ್ತವೆ. ಹೀಗೆ ಮಡಿಕೆಯಾದ ಕರುಳಿನ ಒಟ್ಟಾರೆ ಕ್ಷೇತ್ರಫಲ ಬಹಳ ಹೆಚ್ಚಾಗುತ್ತದೆ. ಆಹಾರದಲ್ಲಿನ ಪ್ರತಿಯೊಂದು ಅಗತ್ಯ ಅಂಶವನ್ನೂ ಹೀರಿಕೊಳ್ಳಲು ಇದು ನೆರವಾಗುತ್ತದೆ. 25 ಅಡಿ ಉದ್ದದ ಸಣ್ಣಕರುಳನ್ನು ಪ್ರತ್ಯೇಕವಾಗಿಸಿ, ಪ್ರತಿಯೊಂದು ಮಡಿಕೆಯನ್ನೂ ಬಿಚ್ಚಿ ಸಪಾಟಾಗಿಸಿದರೆ ಅದರ ಹರಹು 200 ಚದರ ಮೀಟರ್ ಆಗುತ್ತದೆ. ಇದು ಸುಮಾರು 50x40 ಅಡಿ ವಿಸ್ತೀರ್ಣದ ನಿವೇಶನಕ್ಕಿಂತಲೂ ಅಗಲ. ಇದು ಒಂದು ಇಡೀ ಟೆನ್ನಿಸ್ ಕೋರ್ಟ್ ನಷ್ಟು ಜಾಗವನ್ನು ಆಕ್ರಮಿಸುತ್ತದೆ ಎಂದರೆ ಅದರ ಅಳತೆಯ ಅಂದಾಜು ಬರಬಹುದು.

ಸಣ್ಣಕರುಳಿನಲ್ಲಿ ಮೂರು ಭಾಗಗಳಿವೆ. ಜಠರಕ್ಕೆ ಸಮೀಪವಾದ ಭಾಗ ಡುಯೊಡೆನಮ್. ಇದು ಸುಮಾರು 25 ಸೆಂಟಿಮೀಟರ್ ಉದ್ದದ (10 ಇಂಚು) ನಳಿಕೆ. ಜಠರದಿಂದ ಬರುವ ಆಮ್ಲೀಯ ಆಹಾರವನ್ನು ಶಮನಗೊಳಿಸುವ ಪ್ರತ್ಯಾಮ್ಲ ಇಲ್ಲಿ ಉತ್ಪತ್ತಿಯಾಗುತ್ತದೆ. ಜೊತೆಗೆ, ಯಕೃತ್ತಿನಿಂದ ಬಿಡುಗಡೆ ಆಗುವ ಪಿತ್ತರಸ ಮತ್ತು ಮೇದೋಜೀರಕದಿಂದ ಬರುವ ಆಹಾರದ ಜಿಡ್ಡಿನ ಅಂಶವನ್ನು ಜೀರ್ಣಗೊಳಿಸುವ ಸ್ರವಿಕೆಗಳು ಇದೇ ಭಾಗದಲ್ಲಿ ಬಿಡುಗಡೆ ಆಗುತ್ತವೆ. ಸಣ್ಣಕರುಳಿನ ಮಧ್ಯದ ಭಾಗ ಜೆಜುನಮ್. ಇದು ಸುಮಾರು ಎರಡೂವರೆ ಮೀಟರ್ (8 ಅಡಿ) ಉದ್ದದ ನಳಿಕೆ. ಆಹಾರದಲ್ಲಿ ಪಿಷ್ಟ, ಪ್ರೋಟೀನ್, ಮತ್ತು ಮೇದಸ್ಸಿನ ಅಂಶಗಳು ಬಹುತೇಕ ಜೀರ್ಣವಾಗಿ ರಕ್ತವನ್ನು ಸೇರುವುದು ಇಲ್ಲಿಂದಲೇ. ಕೊನೆಯ ಭಾಗದ ಹೆಸರು ಐಲಿಯಮ್. ಇದು ಸುಮಾರು ಮೂರು ಮೀಟರ್ (ಒಂಬತ್ತೂವರೆ ಅಡಿ) ಉದ್ದವಿದೆ. ಈ ಭಾಗ ಕೆಲವು ವಿಟಮಿನ್ಗಳು ಮತ್ತು ಪಿತ್ತ ಲವಣಗಳನ್ನು ಸೆಳೆದುಕೊಳ್ಳುತ್ತದೆ. ಈ ಭಾಗ ಮುಂದುವರೆದು ದೊಡ್ಡಕರುಳು ಸೇರುತ್ತದೆ. ಸಣ್ಣಕರುಳಿಗೆ ಎರಡು ಪ್ರಮುಖ ರಕ್ತನಾಳಗಳು ರಕ್ತವನ್ನು ಪ್ರವಹಿಸುತ್ತವೆ.

ಸಣ್ಣಕರುಳಿನ ಉದ್ದಕ್ಕೂ ಮಡಚುಗಳು ಇರುತ್ತವಷ್ಟೇ? ಈ ಮಡಚುಗಳ ತುದಿಗಳಲ್ಲಿ ಬೆರಳಿನಾಕಾರದ ಉಬ್ಬುಗಳಿವೆ. ಇವನ್ನು ವಿಲ್ಲಸ್ ಎಂದು ಕರೆಯುತ್ತಾರೆ. ಇಂತಹ ಸುಮಾರು ಮೂವತ್ತು ಲಕ್ಷ ವಿಲ್ಲಸ್ ಗಳು ಸಣ್ಣಕರುಳಿನಲ್ಲಿವೆ. ಆಹಾರ ಜೀರ್ಣವಾಗುವ ಪ್ರಕ್ರಿಯೆಯಲ್ಲಿ ಇವುಗಳದ್ದು ಮಹತ್ತರ ಪಾತ್ರ. ಇಂತಹ ಪ್ರತಿಯೊಂದು ವಿಲ್ಲಸ್ ಪುನಃ ಬೆರಳಿನಾಕಾರದ ಅಸಂಖ್ಯಾತ ಸಣ್ಣ ಉಬ್ಬುಗಳನ್ನು ಹೊಂದಿದೆ. ಇವನ್ನು ಮೈಕ್ರೊವಿಲ್ಲಸ್ ಎನ್ನುತ್ತಾರೆ. ಈ ಮೈಕ್ರೊವಿಲ್ಲಸ್ ಗಳ ಒಟ್ಟು ಸಂಖ್ಯೆ ಸುಮಾರು ಇಪ್ಪತೈದು ಲಕ್ಷ ಕೋಟಿ! ಅಂದರೆ 25ರ ನಂತರ ಹನ್ನೆರಡು ಸೊನ್ನೆಗಳು! ನಾವು ಬೇಕಾಬಿಟ್ಟಿ ತಿನ್ನುವ ಆಹಾರವನ್ನು ಪಚಿಸಿ, ರಕ್ತದಲ್ಲಿ ಸೇರಿಸಲು ನಡೆಯುವ ಹರಸಾಹಸ ಸಾಮಾನ್ಯದ್ದಲ್ಲ. ಈ ಎಲ್ಲಾ ಮೈಕ್ರೊವಿಲ್ಲಸ್ ಸೇರಿ ದಿನವೊಂದಕ್ಕೆ ಸುಮಾರು ಏಳೂವರೆ ಲೀಟರ್ ದ್ರವವನ್ನು ಸೆಳೆದುಕೊಳ್ಳಬಲ್ಲ ಸಾಮರ್ಥ್ಯ ಹೊಂದಿವೆ. ಇದು ನಾವು ಸೇವಿಸುವ ದ್ರವಾಹಾರ, ನೀರು, ಶರೀರದಲ್ಲಿ ಉತ್ಪತ್ತಿಯಾಗುವ ಅನೇಕಾನೇಕ ಸ್ರವಿಕೆಗಳು ಮೊದಲಾದುವುಗಳ ಒಟ್ಟು ಮೊತ್ತ.

ಪ್ರತಿದಿನವೂ ಸಣ್ಣಕರುಳು ಸುಮಾರು ಒಂದೂವರೆ ಲೀಟರ್ ನಷ್ಟು ಪ್ರತ್ಯಾಮ್ಲಯುಕ್ತ ರಸವನ್ನು ಸ್ರವಿಸುತ್ತದೆ. ಇದರಿಂದ ಕರುಳಿನ ಆಮ್ಲೀಯ ವಾತಾವರಣ ಶಮನವಾಗುತ್ತದೆ. ಈ ಪ್ರಮಾಣ ಕಡಿಮೆಯಾದರೆ ಹೊಟ್ಟೆ ಉಬ್ಬರವಾದ ಅನುಭವವಾಗುತ್ತದೆ. ಅನೇಕರು ದೂರುವ ಗ್ಯಾಸ್ಸಮಸ್ಯೆಗೆ ಇದೂ ಒಂದು ಕಾರಣ.

ಆಹಾರ ಪಚನದ ಸಮಯದಲ್ಲಿ ಸಣ್ಣಕರುಳು ನಿರಂತರವಾಗಿ ಜೀರ್ಣವಾದ ಆಹಾರವನ್ನು ಅಲೆಯ ಮಾದರಿಯ ಸಂಕೋಚನ-ವಿಕಚನ ಪ್ರಕ್ರಿಯೆ ಬಳಸಿ ಮುಂದೆ ದೂಡುತ್ತದೆ. ಅಗತ್ಯಕ್ಕೆ ತಕ್ಕಂತೆ ಈ ಅಲೆಗಳು ನಿಮಿಷಕ್ಕೆ 8 ರಿಂದ 12 ಬಾರಿ ಸಂಭವಿಸುತ್ತವೆ. ಜಠರದಿಂದ ಸಣ್ಣಕರುಳಿನ ಆರಂಭಕ್ಕೆ ಇಳಿದ ಆಹಾರ ಸುಮಾರು 90 ರಿಂದ 120 ನಿಮಿಷಗಳ ಅವಧಿಯಲ್ಲಿ ಸಣ್ಣಕರುಳಿನ ಕೊನೆಯ ಭಾಗದಿಂದ ದೊಡ್ಡಕರುಳಿಗೆ ನಿರ್ಗಮಿಸುತ್ತದೆ.

ಆಹಾರದ ಅಂಶಗಳಾದ ಪಿಷ್ಟ, ಪ್ರೋಟೀನು, ಮತ್ತು ಮೇದಸ್ಸಿನ ಪಚನಕ್ಕಾಗಿ ಮೂರು ಮುಖ್ಯ ಗುಂಪುಗಳ ಕಿಣ್ವಗಳು (enzymes) ಸಣ್ಣಕರುಳಿನಲ್ಲಿ ಪಾತ್ರ ವಹಿಸುತ್ತವೆ. ಪಿಷ್ಟದ ಪಚನಕ್ಕೆ ನಾಲ್ಕು ಗುಂಪಿನ ಕಿಣ್ವಗಳಿದ್ದರೆ, ಮೇದಸ್ಸು ಮತ್ತು ಪ್ರೋಟೀನುಗಳಿಗೆ ತಲಾ ಒಂದು ಗುಂಪಿನ ಕಿಣ್ವಗಳಿವೆ. ಇದರಲ್ಲಿ ಯಾವುದೇ ಒಂದು ಕಿಣ್ವದ ಕೊರತೆಯಾದರೂ ಅಂತಹ ಆಹಾರವನ್ನು ಶರೀರ ಸರಿಯಾಗಿ ಜೀರ್ಣಿಸಿಕೊಳ್ಳಲಾಗದು. ಉದಾಹರಣೆಗೆ, ಹಾಲಿನಲ್ಲಿ ಇರುವ ಲ್ಯಾಕ್ಟೋಸ್ ಎನ್ನುವ ಸಕ್ಕರೆಯ ಅಂಶವನ್ನು ಲ್ಯಾಕ್ಟೇಸ್ ಎನ್ನುವ ಕಿಣ್ವ ನಿಭಾಯಿಸುತ್ತದೆ. ಒಂದು ವೇಳೆ ಈ ಕಿಣ್ವ ಶರೀರದಲ್ಲಿ ಉತ್ಪತ್ತಿ ಆಗದಿದ್ದರೆ, ಅಂತಹವರು ಲ್ಯಾಕ್ಟೋಸ್ ಸಕ್ಕರೆಯನ್ನು ಜೀರ್ಣಿಸಿಕೊಳ್ಳಲಾರರು. ಅಜೀರ್ಣಕ್ಕೆ ಸಿಲುಕಿದ ಲ್ಯಾಕ್ಟೋಸ್ ಸಕ್ಕರೆ ಕರುಳಿನ ಬ್ಯಾಕ್ಟೀರಿಯಾ ಹೊಡೆತಕ್ಕೆ ಸಿಲುಕಿ ದೊಡ್ಡ ಪ್ರಮಾಣದ ಅತಿಸಾರ ಸಂಭವಿಸುತ್ತದೆ ಮತ್ತು ಗ್ಯಾಸ್ ಉತ್ಪತ್ತಿಯಾಗುತ್ತದೆ. ಹೀಗಾಗಿ, ಇಂತಹ ಕಾಯಿಲೆ ಇರುವವರು ಹಾಲಿನ ಉತ್ಪನ್ನಗಳನ್ನೂ ಸೇವಿಸುವಂತಿಲ್ಲ.

ದೊಡ್ಡಕರುಳಿನ ಮುಖ್ಯ ಕಾರ್ಯ ಈಗಾಗಲೇ ಪಚನವಾದ ಆಹಾರದಲ್ಲಿ ಅಳಿದುಳಿದ ಪೋಷಕಾಂಶಗಳು ಹಾಗೂ ನೀರಿನ ಅಂಶವನ್ನು ಹೀರಿಕೊಳ್ಳುವುದು ಮತ್ತು ತ್ಯಾಜ್ಯವನ್ನು ಸುರಕ್ಷಿತವಾಗಿ ದೇಹದಿಂದ ಹೊರಹಾಕುವುದು. ಇದರಲ್ಲಿ ನಾಲ್ಕು ಭಾಗಗಳಿವೆ. ಸಣ್ಣಕರುಳಿಗೆ ಹೊಂದಿಕೊಂಡಿರುವ ಎರಡೂವರೆ ಇಂಚು ಗಾತ್ರದ ಸೀಕಮ್; ಸಣ್ಣಕರುಳನ್ನು ಮಾಲೆಯಂತೆ ಸುತ್ತುವರೆದಿರುವ ನಾಲ್ಕು ಅಡಿ ಉದ್ದದ ಕೋಲನ್; ಮಲದ ಭಾಗವನ್ನು ನಿಯಂತ್ರಿಸುವ ಎಂಟು ಇಂಚು ಉದ್ದದ ರೆಕ್ಟಮ್ ಮತ್ತು ಒಂದೂವರೆ ಇಂಚು ಉದ್ದದ ಮಲದ್ವಾರ. ಈ ಅಂತಿಮ ಭಾಗದಲ್ಲಿ ಎರಡು ನಿಯಂತ್ರಕ ಸ್ನಾಯುಗಳಿವೆ. ಮಲವಿಸರ್ಜನೆಯನ್ನು ನಿಯಂತ್ರಿಸುವಲ್ಲಿ ಇವು ನೆರವಾಗುತ್ತವೆ. ಈ ಎಲ್ಲ ಕೆಲಸಗಳಿಗಾಗಿ ಮೂರು ಬಗೆಯ ಸಂಕೋಚನ-ವಿಕಚನ ಅಲೆಗಳು ದೊಡ್ಡಕರುಳಿನಲ್ಲಿವೆ. ಸಣ್ಣಕರುಳಿನಿಂದ ಬರುವ ಆಹಾರದ ಶೇಕಡಾ 80 ಭಾಗವನ್ನು ದೊಡ್ಡಕರುಳು ಸೆಳೆದುಕೊಳ್ಳುತ್ತದೆ. ಉಳಿದ ಶೇಕಡಾ 20 ಮಲವಾಗಿ ಹೊರಬೀಳುತ್ತದೆ.

ಕರುಳಿನಲ್ಲಿ ಶರೀರಕ್ಕೆ ಅಗತ್ಯವಾದ ಬ್ಯಾಕ್ಟೀರಿಯಾಗಳ ಮತ್ತೊಂದು ಪ್ರಪಂಚವಿದೆ. ಒಂದು ವ್ಯಕ್ತಿಯ ಕರುಳಿನಲ್ಲಿ ಇರಬಹುದಾದ ಒಟ್ಟು ಬ್ಯಾಕ್ಟೀರಿಯಾಗಳ ಪ್ರಭೇದಗಳು ಸುಮಾರು 700; ಎಲ್ಲ ಬಗೆಯ ಬ್ಯಾಕ್ಟೀರಿಯಾಗಳ ಒಟ್ಟಾರೆ ಸಂಖ್ಯೆ ಸುಮಾರು ನೂರು ಲಕ್ಷ ಕೋಟಿ! ಅಂದರೆ, 1 ರ ನಂತರ 14 ಸೊನ್ನೆಗಳು! ಇಡೀ ಮಾನವ ದೇಹದಲ್ಲಿರುವ ಎಲ್ಲ ಜೀವಕೋಶಗಳ ಸಂಖ್ಯೆಗಿಂತಲೂ ಕರುಳಿನಲ್ಲಿರುವ ಬ್ಯಾಕ್ಟೀರಿಯಾಗಳ ಸಂಖ್ಯೆ ಹತ್ತು ಪಟ್ಟು ಹೆಚ್ಚು. ನಮ್ಮ ಇಡೀ ಶರೀರವನ್ನು ನಿರ್ಧರಿಸುವುದು ಸುಮಾರು 20,000 ಜೀನ್ಗಳಾದರೆ, ಈ ಕೋಟ್ಯನುಕೋಟಿ ಬ್ಯಾಕ್ಟೀರಿಯಾಗಳಲ್ಲಿನ ಒಟ್ಟಾರೆ ಜೀನ್ಗಳ ಸಂಖ್ಯೆ ಸುಮಾರು ಇಪ್ಪತ್ತು ಕೋಟಿ. ನೀನು ಮಾಯೆಯೊಳಗೊ; ನಿನ್ನೊಳು ಮಾಯೆಯೋಎನ್ನುವ ಕನಕದಾಸರ ರಚನೆಯಂತೆ, ನಾವು ಬ್ಯಾಕ್ಟೀರಿಯಾದೊಳಗೊ; ನಮ್ಮೊಳು ಬ್ಯಾಕ್ಟೀರಿಯಾವೋಎನ್ನುವ ಜಿಜ್ಞಾಸೆ ಕಾಡುತ್ತದೆ. ಡುಯೊಡೆನಮ್ನಿಂದ ಆರಂಭಿಸಿ ಕರುಳಿನ ಉದ್ದಕ್ಕೂ ಮುಂದೆ ಸಾಗಿದಂತೆಲ್ಲಾ ಬ್ಯಾಕ್ಟೀರಿಯಾಗಳ ಸಂಖ್ಯೆ ಹೆಚ್ಚುತ್ತಾ ಹೋಗುತ್ತದೆ. ಸಣ್ಣಕರುಳಿನಲ್ಲಿ ಕಡಿಮೆ ಸಂಖ್ಯೆಯಲ್ಲಿರುವ ಬ್ಯಾಕ್ಟೀರಿಯಾಗಳು ದೊಡ್ಡಕರುಳಿನಲ್ಲಿ ಅಗಾಧ ಪ್ರಮಾಣಕ್ಕೆ ಏರುತ್ತವೆ. ಇಡೀ ಕರುಳು ಮತ್ತು ತಕ್ಕ ಮಟ್ಟಿಗೆ ನಮ್ಮ ದೇಹದ ಕೆಲಸಗಳ ಜೊತೆಗೆ ಈ ಬ್ಯಾಕ್ಟೀರಿಯಾಗಳ ಪರಸ್ಪರ ಅವಲಂಬನೆಯಿದೆ. ಮಗುವಿನ ಜನನದ ವೇಳೆ ಕರುಳಿನ ಬ್ಯಾಕ್ಟೀರಿಯಾಗಳ ಸಂಖ್ಯೆ ನಗಣ್ಯ. ಆದರೆ, ಮಗು ಎರಡೂವರೆ ವರ್ಷಗಳ ವಯಸ್ಸಾಗುವುದರೊಳಗೆ ವಯಸ್ಕರ ಶರೀರದಲ್ಲಿ ಇರುವ ಪ್ರಮಾಣದ ಬ್ಯಾಕ್ಟೀರಿಯಾಗಳು ಮಗುವಿನ ಕರುಳಿನಲ್ಲೂ ತುಂಬಿಕೊಳ್ಳುತ್ತವೆ. ಈ ಬ್ಯಾಕ್ಟೀರಿಯಾಗಳು ಜೀವನದುದ್ದಕ್ಕೂ ನೋವು-ನಲಿವುಗಳಲ್ಲಿ ನಮ್ಮ ಸಹಭಾಗಿ. ಈಚೆಗೆ ನಮ್ಮ ನೋವು-ನಲಿವುಗಳಿಗೆ ಈ ಬ್ಯಾಕ್ಟೀರಿಯಾಗಳೆ ಕಾರಣವಿರಬಹುದು ಎನ್ನುವ ತರ್ಕವೂ ಇದೆ. ಕರುಳಿನಲ್ಲಿ ಇವೆಲ್ಲದರ ಜೊತೆಗೆ ಅದರದ್ದೇ ಆದ ನರವ್ಯೂಹವೂ ಇದೆ. ಅದು ಮತ್ತೊಂದು ಲೇಖನದ ವಸ್ತು.

ಕರುಳಿನ ಗಣಿತ ಅದರ ವಿಸ್ತೀರ್ಣದಷ್ಟೇ ಅಗಾಧವಾದದ್ದು. ಒಂದು ಲೇಖನದಲ್ಲಿ ಅದರ ಹರಹನ್ನು ಕಾಣಿಸುವುದು ಸಾಹಸದ ಮಾತೇ ಸರಿ.      

-----------------------------

ಕುತೂಹಲಿ ವಿಜ್ಞಾನ ಮಾಸಪತ್ರಿಕೆಯ ಮೇ 2023 ರ ಸಂಚಿಕೆಯಲ್ಲಿ ಪ್ರಕಟವಾದ ಲೇಖನ. ಕುತೂಹಲಿಯ ಮೇ 2023 ರ ಸಂಚಿಕೆಯನ್ನು ಓದಲು ಕೊಂಡಿ: https://flipbookpdf.net/web/site/afda93b6fc08a1715fc03464c3eb21c90cd44337202305.pdf.html 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ