ಭಾನುವಾರ, ಜುಲೈ 23, 2023

 ಸ್ನಾಯುಗಳ ಗಣಿತ

ಡಾ. ಕಿರಣ್ ವಿ.ಎಸ್.

ವೈದ್ಯರು

ಚಲನೆ ಜೀವದ ಸಂಕೇತ ಎಂದು ನಂಬಿದ್ದ ಕಾಲವೊಂದಿತ್ತು. ಚಲಿಸುವ ಪ್ರಾಣಿಗಳಿಗೆ ಜೀವ ಇರುತ್ತದೆ; ಚಲಿಸಲಾಗದ ಮರ-ಗಿಡಗಳಿಗೆ ಜೀವ ಇರುವುದಿಲ್ಲಎಂದು ಪ್ರಾಚೀನರು ನಂಬಿದ್ದರು. ಪ್ರಾಣಿಗಳ ಚಲನೆಗೆ ಮೂಲ ಕಾರಣ ಸ್ನಾಯುಗಳು. ಜೀವವಿಕಾಸದ ಕೆಳಹಂತಗಳಲ್ಲಿ ಸ್ನಾಯುಗಳಿಗೆ ಗಟ್ಟಿಯಾದ ಆಸರೆ ಇರುವುದಿಲ್ಲ. ಆದರೆ, ವಿಕಾಸ ಮುಂದುವರೆದಂತೆಲ್ಲ ಮೂಳೆಗಳು ಸ್ನಾಯುಗಳಿಗೆ ಬಲವಾದ ಆಸರೆ ನೀಡಿ ಚಲನೆಗೆ ಸ್ಥಿರತೆಯನ್ನೂ, ಹೆಚ್ಚಿನ ಆಯಾಮಗಳನ್ನೂ ಒದಗಿಸುತ್ತವೆ. ಮಾನವ ದೇಹದ ಸ್ನಾಯುಮಂಡಲ ದೈಹಿಕ ಅಗತ್ಯಗಳಿಗೆ ತಕ್ಕಂತೆ ಮಾರ್ಪಾಡಾಗಿದೆ.

ಮಾಂಸಖಂಡಗಳಲ್ಲಿ ಮೂರು ವಿಧಗಳಿವೆ. ಚಲನೆಗೆ, ಸ್ಥಿರತೆಗೆ, ಭಾವಗಳ ಅಭಿವ್ಯಕ್ತಿಗೆ ಕಾರಣವಾಗುವ ಬಹುತೇಕ ಮಾಂಸಖಂಡಗಳು ಮೂಳೆಗಳ ಬೆಂಬಲ ಪಡೆದಿರುತ್ತವೆ. ಇಂತಹ ಸ್ನಾಯುಗಳು ನಮ್ಮ ಐಚ್ಛಿಕ ನಿಯಂತ್ರಣದಲ್ಲಿವೆ. ಎರಡನೆಯದು ಶರೀರದ ಕೊಳವೆಯಂತಹ ರಚನೆಯನ್ನು ಆವರಿಸಿರುವ ನಯವಾದ ಸ್ನಾಯುಗಳು. ಜೀರ್ಣಾಂಗ ವ್ಯವಸ್ಥೆಯನ್ನು ಈ ರೀತಿಯ ಮಾಂಸದ ಪಟ್ಟಿಗಳು ಸುತ್ತುವರೆದಿರುತ್ತವೆ. ಆಹಾರವನ್ನು ಜೀರ್ಣಾಂಗಗಳಲ್ಲಿ ಮುಂದಕ್ಕೆ ತಳ್ಳಲು ಇವು ಕಾರ್ಯ ನಿರ್ವಹಿಸುತ್ತವೆ. ಇಂತಹ ಸ್ನಾಯುಗಳು ರಕ್ತನಾಳಗಳಲ್ಲಿ ಮತ್ತು ಶ್ವಾಸನಾಳಗಳಲ್ಲಿಯೂ ಕಾಣುತ್ತವೆ. ಇವುಗಳ ಮೇಲೆ ಐಚ್ಛಿಕ ನಿಯಂತ್ರಣ ತೀರಾ ಕಡಿಮೆ. ಮೂರನೆಯದು ಹೃದಯದ ಅಹರ್ನಿಶಿ ಬಡಿತಕ್ಕೆ ಕಾರಣವಾದ ಅತ್ಯಂತ ಬಲಶಾಲಿ ಸ್ನಾಯುಗಳು. ಇವುಗಳ ಮೇಲೆ ಐಚ್ಛಿಕ ನಿಯಂತ್ರಣವಿಲ್ಲ. ಸದ್ಯದ ಲೇಖನ ಐಚ್ಛಿಕ ಸ್ನಾಯುಗಳ ಬಗ್ಗೆ.

ಐಚ್ಛಿಕ ಸ್ನಾಯುಗಳಿಗೆ ಆಸರೆ ಬೇಕು. ಸಾಮಾನ್ಯವಾಗಿ ಇಂತಹ ಆಸರೆ ಒದಗಿಸುವುದು ಮೂಳೆಗಳು ಹಾಗೂ ಮೃದ್ವಸ್ಥಿಗಳು (cartilage). ಮಾನವ ಶರೀರದಲ್ಲಿ ಸುಮಾರು 639 ಐಚ್ಛಿಕ ಸ್ನಾಯುಗಳಿಗೆ ಎಂದು ಗುರುತಿಸಲಾಗಿದೆ. ಸ್ನಾಯುಗಳ ಮುಖ್ಯ ಭಾಗ ಅವುಗಳಲ್ಲಿನ ಸ್ನಾಯುತಂತುಗಳು. ಸ್ನಾಯುವಿನ ಗಾತ್ರವನ್ನು ಅನುಸರಿಸಿ ಇಂತಹ ತಂತುಗಳು ಸಂಖ್ಯೆಯಲ್ಲಿ ಬದಲಾಗುತ್ತವೆ. ಗಾತ್ರದಲ್ಲಿ ಅತಿ ದೊಡ್ಡದಾದ ಸ್ನಾಯು ಪೃಷ್ಠ ಭಾಗದಲ್ಲಿದೆ. ಅತ್ಯಂತ ಸಣ್ಣ ಗಾತ್ರದ ಸ್ನಾಯುಗಳು ಕಿವಿಯಲ್ಲಿವೆ. ಅತ್ಯಂತ ಉದ್ದನೆಯ ಸ್ನಾಯು ಸೊಂಟದಿಂದ ಆರಂಭವಾಗಿ ತೊಡೆಯನ್ನು ಹಾಯ್ದು ಮಂಡಿಯನ್ನು ಸೇರುತ್ತದೆ. ಒಂದು ಚದರ ಸೆಂಟಿಮೀಟರ್ ವಿಸ್ತೀರ್ಣದಲ್ಲಿ ಅತ್ಯಂತ ಹೆಚ್ಚು ಒತ್ತಡವನ್ನು ನಿರ್ಮಿಸಬಲ್ಲ ಶಕ್ತಿಶಾಲಿ ಐಚ್ಛಿಕ ಸ್ನಾಯು ದವಡೆಯಲ್ಲಿದೆ. ಅತಿ ಹೆಚ್ಚು ನೂಕುಬಲಕ್ಕೆ ಕಾರಣವಾಗಬಲ್ಲ ಸ್ನಾಯು ಕಾಲಿನ ಮೀನಖಂಡದಲ್ಲಿದೆ. ಐಚ್ಛಿಕ ಸ್ನಾಯುಗಳ ಪೈಕಿ ಅತಿ ಹೆಚ್ಚು ಕೆಲಸ ಮಾಡುವ ಸ್ನಾಯುಗಳು ನಾಲಿಗೆಯಲ್ಲಿವೆ. ಸದಾ ಚುರುಕಾಗಿರುವ ಸ್ನಾಯುಗಳು ಕಣ್ಣಿನಲ್ಲಿವೆ. ಜೀವನದುದ್ದಕ್ಕೂ ಒಂದೇ ಸಮನೆ ಕೆಲಸ ಮಾಡುತ್ತಲೇ ಇರುವುದು ಉಸಿರಾಟದ ಅತ್ಯಂತ ಮುಖ್ಯ ಐಚ್ಛಿಕ ಸ್ನಾಯುವಾದ ವಪೆ. ಇದು ಮೂಲತಃ ಎದೆ ಮತ್ತು ಹೊಟ್ಟೆಯ ಭಾಗವನ್ನು ವಿಭಜಿಸುವ ಸ್ನಾಯುವಿನ ಹಾಳೆ.

ಸ್ನಾಯುಗಳ ಕಾರ್ಯದ ದೃಷ್ಟಿಯಿಂದ ನಮ್ಮ ಶರೀರಕ್ಕೆ ಎರಡು ಅಗತ್ಯಗಳಿವೆ. ಒಂದು: ಚಲನೆಯಲ್ಲಿ ಇಲ್ಲದಾಗಲೂ ನಮ್ಮ ಶರೀರದ ಸ್ಥಿರತೆಯನ್ನು ಕಾಯ್ದುಕೊಳ್ಳಬೇಕು. ಅಂದರೆ, ನಿಶ್ಚಲವಾಗಿ ನಿಂತಿದ್ದರೂ ನಮ್ಮ ಶರೀರ ಆಯ ತಪ್ಪದಂತೆ ಉಳಿಯಬೇಕಷ್ಟೇ? ಇದನ್ನು ಸಾಧಿಸಲು ದೇಹದ ಮಧ್ಯಭಾಗದಲ್ಲಿರುವ, ಬಹುತೇಕ ನಮ್ಮ ಬೆನ್ನುಮೂಳೆಯ ಆಸರೆ ಪಡೆದಿರುವ ಸ್ನಾಯುಗಳು ನೆರವಾಗುತ್ತವೆ. ಎರಡು: ಚಲನೆಗೆ ಅನುಕೂಲವಾದ ಸ್ನಾಯುಗಳು. ಇವುಗಳು ಮುಖ್ಯವಾಗಿ ಕೈಗಳಲ್ಲಿ ಮತ್ತು ಕಾಲುಗಳಲ್ಲಿ ಇರುತ್ತವೆ. ಇದರ ಜೊತೆಗೆ, ಇವೆರಡೂ ಕೆಲಸಗಳನ್ನು ಜೋಡಿಸುವ ಕೆಲವು ಸ್ನಾಯುಗಳೂ ಇವೆ.  

ಶರೀರ ತೂಕದ ಶೇಕಡಾ 35-40 ಸ್ನಾಯುಗಳದ್ದು. ಅಂದರೆ, ಸುಮಾರು 70 ಕಿಲೋಗ್ರಾಂ ತೂಗುವ ವ್ಯಕ್ತಿಯ ಶರೀರದಲ್ಲಿ ಸುಮಾರು 25-28 ಕಿಲೋಗ್ರಾಂ ತೂಕ ಸ್ನಾಯುಗಳಿಂದ ಆಗಿದೆ. ಜೀವಕೋಶಗಳ ದೃಷ್ಟಿಯಿಂದ ನೋಡಿದರೆ ಇದು ಮತ್ತೂ ಹೆಚ್ಚು. ಶರೀರದ ಸ್ಥಿರ ಜೀವಕೋಶಗಳ ಪೈಕಿ ಶೇಕಡಾ 75 ಸ್ನಾಯುಗಳಲ್ಲಿವೆ. ನಮ್ಮ ದೇಹ ಉತ್ಪಾದಿಸುವ ಪ್ರೋಟೀನುಗಳ ಶೇಕಡಾ 25 ಪ್ರಮಾಣ ಸ್ನಾಯುಗಳ ಪಾಲಿಗೆ ಹೋಗುತ್ತವೆ. ವೃದ್ಧಾಪ್ಯದ ವೇಳೆ ಶರೀರದ ಪ್ರೋಟೀನ್ ಉತ್ಪಾದನೆ ಕಡಿಮೆಯಾಗುತ್ತದೆ. ಆಗ ಸಹಜವಾಗಿ ಸ್ನಾಯುಗಳ ಪಾಲಿಗೆ ದಕ್ಕಬೇಕಾದ ಪ್ರೋಟೀನುಗಳು ಸಿಗುವುದಿಲ್ಲ. ಪರಿಣಾಮವಾಗಿ, ಶರೀರದ ಕೆಲಸ ಮಾಡುವ ಸಾಮರ್ಥ್ಯ ಕಡಿಮೆಯಾಗುತ್ತದೆ.

ಬಹುತೇಕ ಸ್ನಾಯುಗಳು ಮೂಳೆಗಳಿಗೆ ನೇರವಾಗಿ ಜೋಡುವುದಿಲ್ಲ. ಮೂಳೆಗಳತ್ತ ಜೋಡಿಸಿಕೊಳ್ಳುವ ಸ್ನಾಯುಗಳ ಅಂತಿಮ ಭಾಗ ಬಿಳಿಯ ಬಣ್ಣದ ತಂತುಗಳ ರೂಪ ಪಡೆಯುತ್ತದೆ. ಇದನ್ನು ಸ್ನಾಯುರಜ್ಜು (tendon) ಎನ್ನಲಾಗುತ್ತದೆ. ಸ್ನಾಯುವೊಂದು ಎರಡು (ಕೆಲವೊಮ್ಮೆ ಮೂರು) ಬೇರೆ-ಬೇರೆ ಮೂಳೆಗಳನ್ನು ಬೆಸೆಯುತ್ತಾ ಕನಿಷ್ಠ ಒಂದು ಕೀಲನ್ನು ಹಾಯುತ್ತದೆ. ಇಂತಹ ಸ್ನಾಯು ಸಂಕುಚಿಸಿದಾಗ ಆಯಾ ಕೀಲು ಚಲಿಸುತ್ತದೆ. ಇದು ಚಲನೆಯ ಒಂದು ಆಯಾಮ. ಬೇರೆ ಬೇರೆ ಗುಂಪಿನ ಸ್ನಾಯುಗಳು ಒಂದು ನಿಶ್ಚಿತ ವಿನ್ಯಾಸದಲ್ಲಿ ಸಂಕೋಚನ-ವಿಕೋಚನ (contraction-relaxation) ಪ್ರಕ್ರಿಯೆಗಳಿಗೆ ಒಳಗಾಗಿ ವಿಶಿಷ್ಟ ಚಲನೆಯನ್ನು ಉಂಟುಮಾಡುತ್ತವೆ. ನಾವು ನಡೆಯುವುದು, ಬರೆಯುವುದು, ನೃತ್ಯ ಮಾಡುವುದು, ಇತ್ಯಾದಿ ಚಲನೆಗಳು ಇಂತಹ ವಿನ್ಯಾಸದ ಪ್ರಕ್ರಿಯೆಗಳು. ಇಂತಹ ಕ್ಲಿಷ್ಟಕರ ಚಲನೆಗಳಿಗೆ ಸಾಕಷ್ಟು ಶಕ್ತಿಯ ಅಗತ್ಯವಿದೆ. ಸ್ನಾಯುಗಳು ಚಲಿಸಿದಾಗ ಅದರೊಳಗೆ ಶಾಖ ಉತ್ಪತ್ತಿಯಾಗುತ್ತದೆ. ಸ್ನಾಯುಗಳ ಒಳಗಿನ ರಕ್ತನಾಳಗಳ ಮೂಲಕ ಇಂತಹ ಶಾಖ ಚರ್ಮಕ್ಕೆ ತಲುಪಿ, ಶರೀರದ ತಾಪಮಾನ ನಿಯಂತ್ರಣಕ್ಕೆ ಸಹಕಾರಿಯಾಗುತ್ತದೆ. ಚಳಿಗಾಲದಲ್ಲಿ ವಾತಾವರಣದ ತಾಪಮಾನ ಕಡಿಮೆಯಾದಾಗ ಶರೀರದಲ್ಲಿ ನಡುಕದ ಅನುಭವವಾಗುತ್ತದೆ. ನಡುಕ ಮೂಲತಃ ಸ್ನಾಯುಗಳ ವೇಗದ ಚಲನೆ. ಇದರಿಂದ ಉತ್ಪತ್ತಿಯಾದ ಶಾಖ ದೇಹವನ್ನು ಬೆಚ್ಚಗೆ ಮಾಡುತ್ತದೆ.

ಅತ್ಯಂತ ಸೂಕ್ಷ್ಮರೂಪದಲ್ಲಿ ಸ್ನಾಯುಗಳು ಎರಡು ಬಗೆಯ ವಿಶಿಷ್ಟ ಪ್ರೋಟೀನ್ಗಳಿಂದ ರಚನೆಯಾಗಿವೆ. ಆಕ್ಟಿನ್ ಮತ್ತು ಮಯೋಸಿನ್ ಎಂಬ ಪ್ರೋಟೀನ್ ಸಂಯುಕ್ತಗಳು ಸಾವಿರಾರು ಸಂಖ್ಯೆಯಲ್ಲಿ ಬೆಸೆದುಕೊಂಡು ಅತಿಸಣ್ಣ ಗಾತ್ರದ ನಾರಿನ ಸ್ವರೂಪ ಪಡೆಯುತ್ತದೆ. ಇಂತಹ ನೂರಾರು ನಾರುಗಳು ಒಡಗೂಡಿ ಸ್ನಾಯುಗಳ ಎಳೆಗಳಾಗುತ್ತವೆ. ಇಂತಹ ಎಳೆಗಳ ಒಕ್ಕೂಟವೇ ಸೂಕ್ಷ್ಮರೂಪದ ಸ್ನಾಯುತಂತುಗಳು. ಪ್ರತಿಯೊಂದು ಸ್ನಾಯುತಂತುವೂ  ಸುಮಾರು ಒಂದು ಇಂಚು (2.5 ಸೆಂಟಿಮೀಟರ್) ಉದ್ದವಿದ್ದು, ಕೇವಲ 50 ಮೈಕ್ರೋಮೀಟರ್ (ಒಂದು ಮಿಲಿಮೀಟರನ್ನು ಇಪ್ಪತ್ತು ಭಾಗಗಳಾಗಿ ವಿಂಗಡಿಸಿದರೆ ಅದರಲ್ಲಿ ಒಂದು ಭಾಗ) ದಪ್ಪ ಇರುತ್ತದೆ. ಪ್ರತಿಯೊಂದು ಸ್ನಾಯುವಿನಲ್ಲಿ ಸಾವಿರಾರು ಸ್ನಾಯುತಂತುಗಳು ಇರುತ್ತವೆ. ಸ್ನಾಯುಗಳು ಸಂಕುಚಿಸಿದಾಗ ಈ ತಂತುಗಳು ಸುಮಾರು ಶೇಕಡಾ 30 ರಷ್ಟು ಗಾತ್ರದಲ್ಲಿ ಚಿಕ್ಕದಾಗುತ್ತವೆ. ಇದರಿಂದ, ಅಷ್ಟು ಪ್ರಮಾಣದಲ್ಲಿ ಆಯಾ ಸ್ನಾಯುವಿಗೆ ಸಂಬಂಧಿಸಿದ ಕೀಲು ಬಾಗುತ್ತದೆ.  

ಸ್ನಾಯುಗಳ ಚಲನೆಗೆ ಮಿದುಳು ಮತ್ತು ಮಿದುಳುಬಳ್ಳಿಯಿಂದ ನರಗಳ ಮೂಲಕ ಸಂದೇಶ ಬರಬೇಕು. ಒಂದು ಸ್ನಾಯುವಿಗೆ ಕನಿಷ್ಠ ಒಂದು ನರಜಾಲದ ಸಂಪರ್ಕ ಇರಲೇಬೇಕು. ಕೆಲವು ಮುಖ್ಯ ಸ್ನಾಯುಗಳಿಗೆ ಎರಡು ವಿವಿಧ ನರಗಳ ಸಂಪರ್ಕವೂ ಇರಬಹುದು. ಯಾವ ಚಲನೆ ಬೇಕೆಂದು ನರಮಂಡಲ ನಿರ್ಧರಿಸುತ್ತದೆ. ಅಂತಹ ಚಲನೆಗೆ ಅಗತ್ಯವಾದ ಸಂದೇಶಗಳು ಸ್ನಾಯುಗಳಿಗೆ ನರಗಳ ಮೂಲಕ ತಲುಪಿ, ಸ್ನಾಯುಗಳು ಸಂಕುಚಿಸುತ್ತವೆ. ಇವೆಲ್ಲವೂ ವಿಪರೀತ ವೇಗದಲ್ಲಿ ನಡೆಯುವ ಪ್ರಕ್ರಿಯೆಗಳು. ಸ್ನಾಯುವಿಗೆ ಸಂಬಂಧಿಸಿದ ನರ ಅಥವಾ ಅದನ್ನು ನಿಯಂತ್ರಿಸುವ ನರವ್ಯೂಹದ ಭಾಗ ನಿಷ್ಕ್ರಿಯವಾದರೆ ಚಲನೆಯ ಸಂದೇಶಗಳು ಲಭಿಸದೆ ಸ್ನಾಯುವೂ ನಿಷ್ಕ್ರಿಯವಾಗುತ್ತದೆ. ಪಾರ್ಶ್ವವಾಯು ಪೀಡಿತರು, ಪೋಲಿಯೋ ಕಾಯಿಲೆಯಿಂದ ಬಳಲುವವರ ಸ್ನಾಯುಗಳ ನಿಷ್ಕ್ರಿಯತೆಗೆ ನರವ್ಯೂಹ ಕಾರಣ. ಇದರ ಜೊತೆಗೆ ನರವ್ಯೂಹ ಸಮರ್ಪಕವಾಗಿದ್ದರೂ ಸ್ನಾಯುಗಳ ಆಂತರಿಕ ಸ್ವರೂಪದಲ್ಲಿ ಆಗುವ ದೋಷಗಳಿಂದಲೂ ಸ್ನಾಯುಗಳು ನಿಷ್ಕ್ರಿಯವಾಗಬಲ್ಲವು. ಇಂತಹ ಸಮಸ್ಯೆಗಳಿಗೆ ಬಹುತೇಕ ಜೆನೆಟಿಕ್ ಹಿನ್ನೆಲೆ ಇರುತ್ತದೆ.  

ಭೌತಶಾಸ್ತ್ರದ ಮೂರು ಬಗೆಯ ಸನ್ನೆಗಳ (lever) ಪ್ರಯೋಗವೂ ಸ್ನಾಯುಗಳ ಕೆಲಸದಲ್ಲಿ ಆಗುತ್ತದೆ. ಒತ್ತಡದ ಬಿಂದು ಮತ್ತು ತೂಕದ ಬಿಂದುಗಳ ನಡುವೆ ಆಸರೆ (fulcrum) ಇರುವುದು ಮೊದಲ ವರ್ಗದ ಸನ್ನೆ. ನಮ್ಮ ಕತ್ತಿನ ಹಿಂಭಾಗದ ಸ್ನಾಯುಗಳು ಈ ತತ್ತ್ವವನ್ನು ಅನುಸರಿಸುತ್ತವೆ. ಇದರಲ್ಲಿ ಒತ್ತಡದ ಪ್ರಮಾಣಕ್ಕೆ ಸಮನಾಗಿ ಚಲನೆಯಾಗುತ್ತದೆ. ಆಸರೆಯ ಒಂದೇ ಬದಿಯಲ್ಲಿ ಕ್ರಮವಾಗಿ ತೂಕದ ಮತ್ತು ಒತ್ತಡದ ಬಿಂದುಗಳು ಇದ್ದರೆ ಅದು ಎರಡನೆಯ ವರ್ಗದ ಸನ್ನೆ. ನಮ್ಮ ಮೀನಖಂಡಗಳು ಮತ್ತು ಪಾದದ ಸ್ನಾಯುಗಳು ಈ ಪ್ರವರ್ಗದವು. ಇದರಲ್ಲಿ ಒತ್ತಡದ ಪ್ರಮಾಣಕ್ಕಿಂತಲೂ ಅಧಿಕ ಚಲನೆ ಲಭಿಸುತ್ತದೆ. ಇದರ ಬದಲಿಗೆ ಮೂರನೆಯ ವರ್ಗದ ಸನ್ನೆಯಲ್ಲಿ ತೂಕ ಮತ್ತು ಒತ್ತಡದ ಬಿಂದುಗಳು ಪರಸ್ಪರ ಬದಲಾಗುತ್ತವೆ. ಇದರಿಂದ ಒತ್ತಡದ ಪ್ರಮಾಣಕ್ಕಿಂತ ಚಲನೆಯ ಪ್ರಮಾಣ ಕಡಿಮೆ ಇರುತ್ತದೆ. ಮೊಣಕೈ ಸ್ನಾಯುಗಳು ಇದಕ್ಕೆ ಉದಾಹರಣೆ.

ಆಟಗಾರರ ಸಾಮರ್ಥ್ಯ ಪ್ರದರ್ಶನದಿಂದ ಹಿಡಿದು ನಟ-ನಟಿಯರ ಆಂಗಿಕ ಅಭಿವ್ಯಕ್ತಿಯ ಹಿಂದಿನ ರಹಸ್ಯ ಸ್ನಾಯುಮಂಡಲ. ತೂಕ ಎತ್ತುವ ಸ್ಪರ್ಧೆಯ ವಿಜೇತರಿಂದ ಮೊದಲಾಗಿ ಅದ್ಭುತ ಪಿಯಾನೋ ವಾದಕರ ಹಿನ್ನೆಲೆಯಲ್ಲಿರುವುದೂ ಸ್ನಾಯುಗಳೇ. ಇವುಗಳ ಹಿಂದಿನ ಭೌತವಿಜ್ಞಾನ ಮತ್ತು ಗಣಿತಗಳು ಸದಾ ಬೆರಗು ಮೂಡಿಸುತ್ತಲೇ ಇರುತ್ತವೆ.

----------------------

ಜೂನ್ 2023 ರ ಕುತೂಹಲಿ ವಿಜ್ಞಾನ ಮಾಸಪತ್ರಿಕೆಯ ಸಂಪೂರ್ಣ ಸಂಚಿಕೆಯನ್ನು ಓದಲು ಕೊಂಡಿ: https://flipbookpdf.net/web/site/1352031830376815b6babc87a4ca40ec81512ca2202306.pdf.html 

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ