ಭಾನುವಾರ, ಜುಲೈ 23, 2023

 ಮಕ್ಕಳ ಸುರಕ್ಷತೆಯಲ್ಲಿ ಪೋಷಕರ ಪಾತ್ರ

ಡಾ. ಕಿರಣ್ ವಿ.ಎಸ್.

ವೈದ್ಯರು

ಇಂದಿನ ಜಗತ್ತು ಕೌಶಲ್ಯವನ್ನು ಆಧರಿಸಿದೆ. ಸ್ವತಂತ್ರವಾಗಿ, ಯಾರ ದಾಕ್ಷಿಣ್ಯಕ್ಕೂ ಒಳಗಾಗದೆ ಬದುಕಲು ವಿದ್ಯೆಯ, ನೈಪುಣ್ಯದ ಬೆಂಬಲ ಅತ್ಯಗತ್ಯ. ಹೆಚ್ಚು ಫೀಸು ಕಟ್ಟಿ ಹೆಸರಾಂತ ಶಾಲೆಗೆ ಸೇರಿಸಿಬಿಟ್ಟರೆ ವಿದ್ಯೆ ತಾನಾಗಿಯೇ ಬಂದುಬಿಡುತ್ತದೆ ಎನ್ನುವ ಭ್ರಮೆ ಈಗ ಉಳಿದಿಲ್ಲ. ಜಗತ್ತು ಹೆಚ್ಚು ಸ್ಪರ್ಧಾತ್ಮಕವಾಗುತ್ತಿದೆ ಎನಿಸಿದಾಗ ಅದಕ್ಕೆ ತಮ್ಮ ಮಗುವನ್ನು ಸಜ್ಜುಗೊಳಿಸಲು ಪೋಷಕರೂ ಉತ್ಸುಕರಾಗಿರುತ್ತಾರೆ. ಅಂತೆಯೇ, ಬದಲಾಗುತ್ತಿರುವ ಪ್ರಪಂಚದಲ್ಲಿ ಮಕ್ಕಳ ಸುರಕ್ಷತೆಯ ಕಡೆಗೂ ಗಮನ ಹರಿಸಬೇಕು. ಇಂತಹ ಹಲವಾರು ವಿಷಯಗಳಲ್ಲಿ ಪೋಷಕರು ಸಮತೋಲನವನ್ನು ಕಾಯ್ದುಕೊಳ್ಳುವುದು ಮುಖ್ಯವಾಗುತ್ತದೆ. ಶಾಲೆಗೆ ಹೋಗಲು ಆರಂಭಿಸಿದ ಮಕ್ಕಳನ್ನು ಸುರಕ್ಷತೆಯ ದೃಷ್ಟಿಯಿಂದ ಪೋಷಕರು ಹೇಗೆ ಸಜ್ಜುಗೊಳಿಸಬಹುದು ಎಂಬುದರ ಬಗ್ಗೆ ಒಂದು ಜಿಜ್ಞಾಸೆ.

 ಶಾಲೆಯಿಂದ ಬರುವ ಮಕ್ಕಳು ಅನುಭವಗಳ ಮೂಟೆ ಹೊತ್ತು ಮರಳುತ್ತಾರೆ. ಅವೆಲ್ಲವೂ ಅವರ ನಿರಂತರ ಮಾತುಗಳಲ್ಲಿ ಹರಿಯುತ್ತವೆ. ಕನಿಷ್ಠ ಒಬ್ಬ ಪೋಷಕರು ಆ ದನಿಗೆ ಬೇಸರವಿಲ್ಲದೆ ಕಿವಿಯಾಗಬೇಕು. ಮಗುವಿನ ಬಹುತೇಕ ಮಾತುಗಳು ನಮಗೆ ಅರ್ಥರಹಿತವಾಗಿರಬಹುದು ಅಥವಾ ಪುನರುಕ್ತಿಯಾಗಬಹುದು. ಆದರೆ ಮಗುವಿನ ಪಾಲಿಗೆ ಅವು ಮನದ ಭಾವಗಳನ್ನು ಹಂಚಿಕೊಳ್ಳುವ ಏಕೈಕ ಆರೋಗ್ಯಕರ ಮಾರ್ಗ. ನಾವು ಆಸಕ್ತಿಯಿಂದ ಅವರ ಮಾತುಗಳನ್ನು ಕೇಳುತ್ತಿದ್ದೇವೆ ಎಂದರೆ ಮಕ್ಕಳು ನಿರ್ಭೀತರಾಗುತ್ತಾರೆ. ಶಾಲೆಯ ಆಗುಹೋಗುಗಳ ಬಗೆಗಿನ ಕೆಲವೊಂದು ಸೂಕ್ಷ್ಮ ವಿಚಾರಗಳು ನಮಗೆ ತಿಳಿಯುವುದು ಹೀಗೆಯೇ. ಮಕ್ಕಳ ಜೊತೆಗೆ ಅನುಚಿತವಾಗಿ ವರ್ತಿಸಬಲ್ಲ ಪುಂಡರು, ನಿರ್ಲಕ್ಷ್ಯ ಧೋರಣೆಯ ಶಿಕ್ಷಕರು, ನೈರ್ಮಲ್ಯದ ಪರಿವೆಯಿಲ್ಲದ ಕೆಲಸಗಾರರು ಮೊದಲಾದವರ ಬಗ್ಗೆ ಮಕ್ಕಳಿಗೆ ನಿರ್ಣಾಯಕವಾಗಿ ಹೇಳಲು ಬಾರದು. ಆದರೆ, ಅವೆಲ್ಲವೂ ಅವರ ಶಕ್ತಿಯುತ ನೆನಪಿನಲ್ಲಿ ದಾಖಲಾಗುತ್ತವೆ. ಅವರ ಮಾತಿನ ನಡುವೆ ಇಂತಹ ಪ್ರಸಂಗಗಳು ಅನುಷಂಗಿಕವಾಗಿ ಹೊರಬರುತ್ತವೆ. ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಅವರ ಮಾತುಗಳನ್ನು ಗಮನವಿಟ್ಟು ಕೇಳಬೇಕು. ಅಪಾಯಕಾರಿಯಾದ ಸಂಗತಿಗಳನ್ನು ಕೂಡಲೇ ಶಾಲೆಯ ಗಮನಕ್ಕೆ ತರಬೇಕು. ಸಣ್ಣವಯಸ್ಸಿನ ಮಕ್ಕಳಿಗೆ ತಮ್ಮ ದೇಹದ ಯಾವ ಅಂಗವನ್ನು ಅಪರಿಚಿತರು ಸ್ಪರ್ಷಿಸಬಹುದು; ಯಾವುದನ್ನು ಮುಟ್ಟಬಾರದು ಎಂಬ ವಿಷಯವನ್ನು ಆಗಾಗ ಜಾಣ್ಮೆಯಿಂದ ಹೇಳುತ್ತಿರಬೇಕು. "ಸುರಕ್ಷಿತ ಸ್ಪರ್ಷ; ಅಸುರಕ್ಷಿತ ಸ್ಪರ್ಷ"ಗಳ ಆಟವನ್ನು ಆಡಿಸುವ ಮೂಲಕ ಅವರಲ್ಲಿ ಇಂತಹ ಅರಿವನ್ನು ಗಟ್ಟಿಗೊಳಿಸಬೇಕು. ಯಾವುದೇ ಸಂದರ್ಭದಲ್ಲೂ ಯಾರಾದರೂ ಅಸುರಕ್ಷಿತ ಸ್ಪರ್ಷ ಮಾಡಿದರೆ ಪೋಷಕರಿಗೆ ತಿಳಿಸಬೇಕು ಎನ್ನುವ ಮಾತನ್ನು ಮಕ್ಕಳಿಗೆ ಮನದಟ್ಟು ಮಾಡಿಸಬೇಕು.  

 ಅಪರಿಚಿತರ ಬಗ್ಗೆ ಮಕ್ಕಳಿಗೆ ಮನವರಿಕೆ ಮಾಡಿಕೊಡುವುದು ಬಹಳ ಮುಖ್ಯ. ಪೋಷಕರ ಫೋನ್ ಸಂಖ್ಯೆ ಮಕ್ಕಳಿಗೆ ಬಾಯಿಪಾಠವಾದರೆ ಒಳಿತು. ಯಾವುದಕ್ಕೂ ಮಕ್ಕಳ ಜೇಬಿನಲ್ಲಿ ಪೋಷಕರ ಹೆಸರು, ಫೋನ್ ಸಂಖ್ಯೆ ಇರುವ ಚೀಟಿಯೊಂದನ್ನು ಪ್ಲಾಸ್ಟಿಕ್ ಹೊದಿಕೆಯಿಂದ ಸುರಕ್ಷಿತಗೊಳಿಸಿ ಸದಾ ಇಟ್ಟಿರಬೇಕು. ಯಾವುದೇ ಅಪರಿಚಿತರ ಜೊತೆಗೂ ಯಾವುದೇ ಕಾರಣಕ್ಕೂ ಹೋಗಬಾರದೆನ್ನುವ ನಿಯಮವನ್ನು ಮಕ್ಕಳ ಮನಸ್ಸಿನಲ್ಲಿ ಬೇರೂರುವಂತೆ ಪದೇ ಪದೇ ಹೇಳುತ್ತಿರಬೇಕು. ಹಿರಿಯರ ದೈನಂದಿನ ವೇಳಾಪಟ್ಟಿಯಲ್ಲಿ ಯಾವುದಾದರೂ ವ್ಯತ್ಯಾಸ ಆಗುವುದಿದ್ದರೆ, ಅದನ್ನು ಮಕ್ಕಳಿಗೆ ನಾಜೂಕಾಗಿ ಮೊದಲೇ ತಿಳಿಸಿರಬೇಕು. ಮಕ್ಕಳ ಸುರಕ್ಷತೆಯನ್ನು ನಮ್ಮ ಜೀವನದ ಭಾಗವಾಗಿ ಪರಿಗಣಿಸುವುದು ಇಂದಿನ ಅಗತ್ಯಗಳಲ್ಲಿ ಒಂದು.

 ಅಹಿತಕರ ಅನುಭವಗಳ ಬಗ್ಗೆ ಮಾತನಾಡಲು ಮಕ್ಕಳು ಹಿಂಜರಿಯುತ್ತಾರೆ. ಆ ರೀತಿಯ ಮಾತುಗಳನ್ನು ಆಡುವಾಗ ಹೆದರಿಕೆಯಿಂದಲೇ ಆರಂಭಿಸುತ್ತಾರೆ. ಮಾತಿನ ಆರಂಭದಲ್ಲಿ ಪರಸ್ಪರ ಸಂಬಂಧವಿಲ್ಲದ ವಾಕ್ಯಗಳನ್ನು ಪೋಣಿಸಬಹುದು. ಹಾಗೆಯೇ ಮುಂದುವರೆದು, ಸ್ವಲ್ಪ ವಿಶ್ವಾಸ ಬೆಳೆದ ನಂತರ ಅವರನ್ನು ಕಾಡುತ್ತಿರುವ ಭಾವಗಳಿಗೆ ಸರಿಯಾದ ಮಾತುಗಳು ಬರಬಹುದು. ಆಗಲೂ ಬಹುತೇಕ ಮಕ್ಕಳ ದನಿ ಕ್ಷೀಣವಾಗಿಯೇ ಇರುತ್ತದೆ. ಹಿರಿಯರು ಇದನ್ನು ಗುರುತಿಸಬೇಕು. ಒಂದು ವೇಳೆ ಸಂಯಮ ತಪ್ಪಿ ಮಕ್ಕಳನ್ನು ಗದರಿದರೆ, ಹೊರಬರಹುದಾದ ಸತ್ಯ ಅಲ್ಲೇ ದಮನವಾಗಬಹುದು. ಮಕ್ಕಳು ಮಾತನಾಡಲು ಬಯಸುವ ಪ್ರತಿಯೊಂದು ಸಂದರ್ಭವನ್ನೂ ಅತ್ಯಂತ ತಾಳ್ಮೆಯಿಂದ ನಿಭಾಯಿಸಬೇಕಾಗುತ್ತದೆ. ಈ ವಿಷಯದಲ್ಲಿ ಹಿರಿಯರು ಎಷ್ಟು ಪ್ರಾಮಾಣಿಕ ಸಹಾನುಭೂತಿ ತೋರುತ್ತಾರೋ, ಮಕ್ಕಳ ಭೀತಿ ಅಷ್ಟು ಕಡಿಮೆಯಾಗಿ, ಅವರು ಮುಕ್ತವಾಗಿ ಮಾತನಾಡುವಂತಾಗುತ್ತದೆ. ನಾವು ಅವರ ಹೆದರಿಕೆಯನ್ನು ಪರಿಹರಿಸಬಲ್ಲವೆಂದು ಮಕ್ಕಳು ನಂಬಿದರೆ ಮಾತ್ರ ನಮ್ಮಲ್ಲಿ ವಿಷಯಗಳನ್ನು ಹಂಚಿಕೊಳ್ಳಬಲ್ಲರು. ಆ ನಂಬಿಕೆಯನ್ನು ಅವರಲ್ಲಿ ತುಂಬುವುದು ಮುಖ್ಯ.

 ಅಹಿತಕರ ಘಟನೆಗಳನ್ನು ಹೇಗೆ ನಿಭಾಯಿಸಬಹುದು ಎನ್ನುವ ಬಗ್ಗೆ ಮಕ್ಕಳಿಗೆ ಪ್ರಾತ್ಯಕ್ಷಿಕೆ ನೀಡುವುದು ಉಪಯುಕ್ತ. ಕೆಲವು ಕಾಲ್ಪನಿಕ ಪ್ರಸಂಗಗಳನ್ನು ಹೇಳಿ "ಇಂತಹ ಸಂದರ್ಭದಲ್ಲಿ ನೀನೇನು ಮಾಡುತ್ತೀಯೆ?" ಎಂದು ಮಕ್ಕಳನ್ನು ನೇರವಾಗಿ ಕೇಳಬೇಕು. ಇಂತಹ ತರಬೇತಿ ಮಕ್ಕಳ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಅಪರಿಚಿತರು ಏನನ್ನಾದರೂ ಕೇಳಿದರೆ ಗಟ್ಟಿಯಾಗಿ "ಇಲ್ಲ" ಎನ್ನುವುದನ್ನು ಹೇಳಿಕೊಡಬೇಕು. ಅಪರಿಚಿತರು ಏಕಾಂತದಲ್ಲಿ ಮಾತನಾಡಲು ಪ್ರಯತ್ನಿಸಿದರೆ ಕೂಡಲೇ ಅಲ್ಲಿಂದ ಓಡಿಹೋಗಿ ಯಾವುದಾದರೂ ಪರಿಚಿತ ವ್ಯಕ್ತಿಗೆ ವಿಷಯ ತಿಳಿಸಬೇಕೆಂಬುದನ್ನು ಮಕ್ಕಳ ಮನಸ್ಸಿನಲ್ಲಿ ನಾಟಿಸಬೇಕು.

 ಇಂದಿನ ಡಿಜಿಟಲ್ ಪ್ರಪಂಚದಲ್ಲಿ ಮಕ್ಕಳು ಕೇವಲ ದೈಹಿಕವಾಗಿ ಅಲ್ಲದೆ ಮಾನಸಿಕವಾಗಿಯೂ ಅಸುರಕ್ಷಿತರಾಗಬಲ್ಲರು. ಪ್ರಸ್ತುತ ವಿದ್ಯಾಭ್ಯಾಸದಲ್ಲಿ ಕಂಪ್ಯೂಟರ್ ಮತ್ತು ಅಂತರ್ಜಾಲ ಅತ್ಯಗತ್ಯವಾಗಿದೆ. ಮಕ್ಕಳಿಗೆ ಡಿಜಿಟಲ್ ಜಗತ್ತಿನಲ್ಲಿ ಮುಕ್ತವಾಗಿ ವ್ಯವಹರಿಸುವುದು ಕಡ್ಡಾಯವಾಗುತ್ತಿದೆ. ಇದರಿಂದ ಆಗಬಹುದಾದ ದುಷ್ಪರಿಣಾಮಗಳ ಸಾಧ್ಯತೆಗಳು ಕೆಲವೊಮ್ಮೆ ನಮ್ಮ ಊಹೆಗೂ ಮೀರಿದವು. ಹೀಗಾಗಿ, ಮಕ್ಕಳ ಆನ್'ಲೈನ್ ಪ್ರಪಂಚದತ್ತ ನಿಗಾ ಇಟ್ಟಿರುವುದು ಪೋಷಕರ ಜವಾಬ್ದಾರಿ. ಮಕ್ಕಳು ಕದ್ದು-ಮುಚ್ಚಿ ಕಂಪ್ಯೂಟರ್ ಬಳಸುವ ಬದಲಿಗೆ ಹಿರಿಯರ ಅನುಮತಿಯೊಡನೆ, ಅವರ ದೇಖಾರೇಖಿಯಲ್ಲಿ ಉಪಯೋಗಿಸುವುದನ್ನು ಪ್ರೋತ್ಸಾಹಿಸಬೇಕು. ಸಾಧ್ಯವಾದರೆ ಮಕ್ಕಳಿಗೆ ಪ್ರತ್ಯೇಕ ಕಂಪ್ಯೂಟರಿನ ಅನುಕೂಲ ಆಗಬೇಕು. ಅದು ಆಗದಿದ್ದರೆ, ಹಿರಿಯ ಕಂಪ್ಯೂಟರಿನಲ್ಲಿ ಮಕ್ಕಳಿಗಾಗಿಯೇ ಪ್ರತ್ಯೇಕ ಖಾತೆ ಮಾಡಿಕೊಡಬೇಕು. ಹಿರಿಯರು ಬಳಸಬಹುದಾದ ಜಾಲತಾಣಗಳಿಗೆ ಮಕ್ಕಳು ಸೇರಲು ಆಸ್ಪದ ಇರಬಾರದು. ಮಕ್ಕಳಿಗೆ ಸುರಕ್ಷಿತ ಎನಿಸುವ ಜಾಲತಾಣಗಳನ್ನು ಮಾತ್ರ ಬಳಸುವಂತಹ ವ್ಯವಸ್ಥೆಯಾಗಬೇಕು.

 ಮಕ್ಕಳ ಸುರಕ್ಷತೆ ಒಂದು ನಿರಂತರ ಪಯಣ. ಅದನ್ನು ಮಕ್ಕಳ ಜೊತೆಗಿನ ಪರ್ಯಾಪ್ತ ಸಂವಹನದ ಮೂಲಕ ಸದಾ ಚಾಲ್ತಿಯಲ್ಲಿ ಇಟ್ಟಿರಬೇಕು. ಸಣ್ಣ ವಯಸ್ಸಿನಲ್ಲಿ ಆರಂಭವಾಗುವ ಈ ಪ್ರಯತ್ನ ಮಕ್ಕಳ ಬೆಳವಣಿಗೆಯ ಆಯಾ ಹಂತಗಳಲ್ಲಿ ವಿಕಸನವಾಗುತ್ತಾ ಪಕ್ವವಾಗುವುದು ಮುಖ್ಯ.

-----------------

ದಿನಾಂಕ 18/7/2023 ರಂದು ಪ್ರಜಾವಾಣಿಯ ಬದುಕು ಬನಿ ವಿಭಾಗದಲ್ಲಿ ಪ್ರಕಟವಾದ ಲೇಖನ. ಕೊಂಡಿ:

https://www.prajavani.net/specials/baduku-bani/parents-role-in-child-protection-2392490 

 ಮಕ್ಕಳ ಆತಂಕಗಳ ನಿರ್ವಹಣೆಯಲ್ಲಿ ಪೋಷಕರ ಪಾತ್ರ

 ಡಾ. ಕಿರಣ್ ವಿ.ಎಸ್.

ವೈದ್ಯರು

 ಧಾವಂತದ ಆಧುನಿಕ ಬದುಕು ಯಾರನ್ನೂ ಮಾನಸಿಕ ಆತಂಕಕ್ಕೆ ದೂಡದೆ ಬಿಟ್ಟಿಲ್ಲ. ಮನೆಯಲ್ಲಿ, ಕಚೇರಿಯಲ್ಲಿ, ರಸ್ತೆಯಲ್ಲಿ - ಹೀಗೆ ಪ್ರತಿಯೊಂದು ಕಡೆಯೂ ಮನಸ್ಸಿಗೆ ಒಂದಲ್ಲ ಒಂದು ಆತಂಕ ಕಾಡುತ್ತಲೇ ಇರುತ್ತದೆ. ಯಾವುದೋ ಒಂದು ರೀತಿಯಲ್ಲಿ  ಆತಂಕವನ್ನು ಶಮನಗೊಳಿಸಲು ಪ್ರಯತ್ನಗಳು ನಡೆಯುತ್ತಲೇ ಇರುತ್ತವೆ. ಆದರೆ ಮಕ್ಕಳ ಕತೆ ಏನು? ಇಂದಿನ ಮಕ್ಕಳಿಗೆ ಆತಂಕ ಇರುವುದಿಲ್ಲವೇ? ತಮ್ಮ ಮನಸ್ಸಿನಲ್ಲಿ ಮನೆ ಮಾಡಿರುವ ಆತಂಕದ ಭಾವನೆಗಳನ್ನು ಮಾತಿನಲ್ಲಿ ವ್ಯಕ್ತಪಡಿಸಲಾಗದ ಮಕ್ಕಳು ಅದನ್ನು ಯಾವ ರೀತಿಗಳಲ್ಲಿ ಸೂಚಿಸುತ್ತಾರೆ? ಹಿರಿಯರಾಗಿ ನಾವು ಅವರ ಆತಂಕವನ್ನು ಗ್ರಹಿಸುವುದು ಹೇಗೆ? ಮಕ್ಕಳ  ಆತಂಕವನ್ನು ದೂರ ಮಾಡುವ ಯಾವ ವಿಧಾನಗಳನ್ನು ನಾವು ಪಾಲಿಸಬಹುದು?  ನಿಟ್ಟಿನಲ್ಲಿ ಕೆಲವು ನೋಟಗಳು.

 ಪ್ರತಿಯೊಂದು ಕಾಲದಲ್ಲೂ ಆಯಾ ಕಾಲಘಟ್ಟಕ್ಕೆ ಸಂಬಂಧಿಸಿದ ವಿಶಿಷ್ಟ ಸಮಸ್ಯೆಗಳು ಇದ್ದೇ ಇರುತ್ತವೆ. ಎರಡು-ಮೂರು ದಶಕಗಳ ಹಿಂದಿನ ಸಮಸ್ಯೆಗಳು ಇಂದಿಗೆ ಪ್ರಾಯಶಃ ಪ್ರಸ್ತುತವಾಗಲಾರವು. ಹೀಗಾಗಿ, ಇಂದಿನ ಪೋಷಕರು "ನಾವು ಎದುರಿಸಿದ ಸಮಸ್ಯೆಗಳನ್ನು ನಮ್ಮ ಮಕ್ಕಳು ಎದುರಿಸಬಾರದು" ಎನ್ನುವಷ್ಟು ಎಚ್ಚರಿಕೆ ತೆಗೆದುಕೊಳ್ಳುತ್ತಾರೆ. ಆದರೆ, ಮಕ್ಕಳಿಗೆ ಒದಗಬಹುದಾದ ಇಂದಿನ ಕಾಲದ ಸಮಸ್ಯೆಗಳತ್ತಲೂ ಅರಿವು ಮೂಡಿಸಿಕೊಳ್ಳುವುದು ಹಿರಿಯರ ಜವಾಬ್ದಾರಿಯೇ ಆಗಿರುತ್ತದೆ. ವರ್ತಮಾನದ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳ ಆತಂಕದ ಆಯಾಮಗಳು ಬೇರೆಯೇ ಇದ್ದಾವು. ನಮಗಿಂತಲೂ ಭಿನ್ನವಾದ ವಾತಾವರಣದಲ್ಲಿ ಬೆಳೆದಿರುವ ಮಕ್ಕಳಿಗೆ ತಮ್ಮ ಆತಂಕಗಳನ್ನು ವ್ಯಕ್ತಪಡಿಸುವ ವಿಧಾನಗಳೂ ವಿಭಿನ್ನವಾಗಿಯೇ ಇರುತ್ತವೆ.

 ಮಕ್ಕಳ ಬೆಳವಣಿಗೆಯ ಪ್ರತಿಯೊಂದು ಹಂತದಲ್ಲಿಯೂ ಕೆಲವು ವಯೋಸಹಜ ಆತಂಕಗಳು ಸಾಮಾನ್ಯ. ಸಣ್ಣ ಮಕ್ಕಳು ಪೋಷಕರಿಂದ ದೂರಾಗುವ ಆತಂಕವನ್ನು ಅನುಭವಿಸುತ್ತಾರೆ. ಬೆಳವಣಿಗೆಯ ಹಂತಗಳಲ್ಲಿ ಕತ್ತಲೆಯ ಆತಂಕ, ಅಪರಿಚಿತರ ಆತಂಕ, ಪ್ರಾಣಿಗಳ, ಕೀಟಗಳ ಆತಂಕವನ್ನು ಆರೋಗ್ಯವಂತ ಮಕ್ಕಳೂ ಅನುಭವಿಸುತ್ತಾರೆ. ಇವು ತಾತ್ಕಾಲಿಕ ಆತಂಕಗಳು. ಇದನ್ನು ಮೀರಿದ ಆತಂಕಗಳು ಕೂಡ ಮಕ್ಕಳನ್ನು ಕಾಡಬಹುದು. ತನ್ನ ದೇಹದ ಬಗ್ಗೆ, ಚರ್ಮದ ಬಣ್ಣದ ಬಗ್ಗೆ, ಶಾಲೆಗೆ ಹೋಗುವ ಹಾದಿಯಲ್ಲಿ ವೇಗವಾಗಿ ಚಲಿಸುವ ವಾಹನಗಳಿಗೆ ಸಿಲುಕುವ ಸಾಧ್ಯತೆಗಳ ಬಗ್ಗೆ, ಶಾಲೆಯ ಶಿಕ್ಷಕರ ಅಭಿಪ್ರಾಯದ ಬಗ್ಗೆ, ಸ್ನೇಹಿತರು ತನ್ನನ್ನು ಸ್ವೀಕರಿಸುವ ಬಗ್ಗೆ, ತನ್ನ ಜೊತೆಯಲ್ಲಿ ಕೆಟ್ಟದ್ದಾಗಿ ವರ್ತಿಸುವವರ ಬಗ್ಗೆ ಮಕ್ಕಳಿಗೆ ಆತಂಕವಿರುವ ಸಾಧ್ಯತೆಗಳು ಇಂದಿನ ದಿನಗಳಲ್ಲಿ ದಟ್ಟವಾಗಿವೆ. ಇದನ್ನು ಪೋಷಕರು ತಿರಸ್ಕರಿಸದೆ, ಹಾಸ್ಯ ಮಾಡದೆ, ನಿರ್ಲಕ್ಷ್ಯ ಮಾಡದೆ, ಉಪೇಕ್ಷಿಸದೆ, ಗಮನಿಸಿ, ಪರಿಹರಿಸಬೇಕಾಗುತ್ತದೆ.

 ಆತಂಕಗಳನ್ನು ಮಾತುಗಳ ಮೂಲಕ ವ್ಯಕ್ತಪಡಿಸುವುದರಲ್ಲಿ ಬಹಳ ಮಕ್ಕಳು ಸೋಲುತ್ತಾರೆ. ಬಹುತೇಕ ಮಕ್ಕಳಲ್ಲಿ ಆತಂಕ ಅವರ ವರ್ತನೆಗಳಲ್ಲಿ ಕಾಣುತ್ತದೆ. ಮಗು ಅಕಾರಣವಾಗಿ ಸಹನೆ ಕಳೆದುಕೊಳ್ಳಬಹುದು; ಕೋಪ ಪ್ರದರ್ಶಿಸಬಲ್ಲದು; ಹಿರಿಯರ ಮೇಲೆ ಸಿಡುಕಬಲ್ಲದು; ನಿದ್ರಾಹೀನತೆ ಇಲ್ಲವೆ ಅತಿನಿದ್ರೆಯಿಂದ ಬಳಲಬಹುದು; ಹಾಸಿಗೆಯಲ್ಲಿಯೇ ಮೂತ್ರ ಮಾಡಬಹುದು; ಕೆಟ್ಟ ಕನಸುಗಳಿಂದ ಭೀತಿಗೊಳ್ಳಬಹುದು; ಶಾಲೆಯ ಪರೀಕ್ಷೆಗಳಲ್ಲಿ ಅಂಕಗಳು ಇಳಿಮುಖವಾಗಬಲ್ಲವು; ಓದು, ಹೋಂವರ್ಕ್'ಗಳಲ್ಲಿ ಹಿಂದುಳಿಯಬಲ್ಲದು; ಅನ್ಯಮನಸ್ಕವಾಗಬಲ್ಲದು; ಓರಗೆಯ ಮಕ್ಕಳ ಜೊತೆಗೆ ಆಟವಾಡಲು ನಿರಾಕರಿಸಬಲ್ಲದು; ಆಗಾಗ ಸುಸ್ತು, ತಲೆನೋವು, ಹೊಟ್ಟೆನೋವು, ಮೈ-ಕೈ ನೋವುಗಳೆಂದು ದೂರಬಹುದು. ಕೆಲವೊಮ್ಮೆ ಇಂತಹ ಮಕ್ಕಳಲ್ಲಿ ಕಾಣುವ ಉಸಿರಾಟದ ಸಮಸ್ಯೆ, ತಲೆಸುತ್ತು, ಎದೆಬಡಿತದ ಅನುಭವ, ಶರೀರ ಕಂಪನ, ಅಧಿಕ ಬೆವರುವಿಕೆಯಂತಹ ಚಿಹ್ನೆಗಳು ಪೋಷಕರ ಭಯಕ್ಕೆ ಕಾರಣವಾಗಬಲ್ಲವು. ಕೆಲವು ಮಕ್ಕಳು ಯಾವುದಾದರೂ ಕಾರಣದಿಂದ ತಮ್ಮ ಆತಂಕಗಳನ್ನು ಹೊರಗೆ ತೋರದೆ ಮನದೊಳಗೇ ಉಳಿಸಿಕೊಂಡು ಮಾನಸಿಕ ಖಿನ್ನತೆಗೆ ಜಾರಬಹುದು.

 ಕಾರಣಗಳು ಸ್ಪಷ್ಟವಾಗಿ ಪತ್ತೆಯಾಗುವ ಆತಂಕಗಳನ್ನು ನಿವಾರಿಸಬಹುದು. ಇಂತಹವುಗಳ ಸಂಖ್ಯೆ ಕಡಿಮೆ. ಮಕ್ಕಳು ಅನುಭವಿಸುವುದಕ್ಕಿಂತ ಊಹಿಸಿಕೊಂಡು ಆತಂಕಕ್ಕೆ ಒಳಗಾಗುವ ಸಾಧ್ಯತೆಗಳು ಹೆಚ್ಚು.  ಇಂತಹ ಬಹುತೇಕ ಆತಂಕಗಳನ್ನು ನಿರ್ವಹಿಸುವ ವಿಧಾನಗಳನ್ನು, ಕಲೆಯನ್ನು ಮಕ್ಕಳಿಗೆ ತಿಳಿಸಿಕೊಡಬೇಕಾಗುತ್ತದೆ. ಇದನ್ನು ಸಾಧಿಸಲು ಬೇಕಾದ ಅತ್ಯಂತ ಮುಖ್ಯ ಆವಶ್ಯಕತೆ ಮಕ್ಕಳೊಡನೆ ಪ್ರಾಮಾಣಿಕ ಸಂವಹನ. ನಮ್ಮ ತುರ್ತುಗಳು ಏನೇ ಇದ್ದರೂ ಕನಿಷ್ಠ ಒಬ್ಬ ಪೋಷಕರಾದರೂ ಮಕ್ಕಳೊಡನೆ ದಿನವೂ ಕೆಲನಿಮಿಷಗಳ ಕಾಲ ಅನೌಪಚಾರಿಕವಾಗಿ ಸಂವಹನ ನಡೆಸಬೇಕು. ಈ ಪ್ರಕ್ರಿಯೆಯಲ್ಲಿ ಮಕ್ಕಳಿಗೆ ಮಾತನಾಡಲು ಅವಕಾಶ ನೀಡಬೇಕು. ಅವರ ಮಾತುಗಳನ್ನು ಮಧ್ಯದಲ್ಲಿ ತುಂಡರಿಸಬಾರದು. ಅನಗತ್ಯ ಮುಖಭಾವಗಳನ್ನು ಪ್ರದರ್ಶಿಸಬಾರದು. ಅವರ ಮಾತಿನ ಮಧ್ಯದಲ್ಲಿ ಬಾಯಿ ಹಾಕಿ ಪರಿಹಾರಗಳನ್ನು ಸೂಚಿಸುವತ್ತ ಸಂಭಾಷಣೆಯನ್ನು ಒಯ್ಯಬಾರದು. ಅವರು ಪರಿಹಾರಗಳನ್ನು ಬೇಡಿದರೆ ಅವರ ಆತ್ಮವಿಶ್ವಾಸವನ್ನು ಕುಗ್ಗಿಸುವಂತಹ ಮಾತುಗಳನ್ನು ಆಡಬಾರದು. ಎಲ್ಲಿ ಸರಿಯಾದ ಸಲಹೆಗಳನ್ನು ನೀಡುವಲ್ಲಿ ನಮ್ಮ ಜ್ಞಾನ, ಅನುಭವಗಳು ಸಾಲುವುದಿಲ್ಲವೋ, ಅಲ್ಲಿ ಮಕ್ಕಳಿಗೆ ಸಾಂತ್ವನದ ಮಾತುಗಳನ್ನು ಹೇಳಿ, ತಜ್ಞರ ಸಲಹೆ ಪಡೆಯುವುದು ಸೂಕ್ತ. ಒಟ್ಟಿನಲ್ಲಿ ಮಕ್ಕಳ ವರ್ತನೆಗೆ ಕಣ್ಣಾಗಬೇಕು; ಅವರ ಅಗತ್ಯಗಳಿಗೆ ಕಿವಿಯಾಗಬೇಕು. ಈ ನಿಟ್ಟಿನಲ್ಲಿ ತೀರ್ಪುದಾರರ ವರ್ತನೆ ಸಲ್ಲದು; ಸಮಾನ ಸ್ತರದ ವ್ಯವಹಾರ ಮುಖ್ಯವಾಗುತ್ತದೆ.

 ನೈಜ ಆತಂಕಗಳಿಂದ ಪಲಾಯನ ಮಾಡುವುದು ತಾತ್ಕಾಲಿಕ ಪರಿಹಾರವನ್ನು ನೀಡಬಹುದು. ಆದರೆ ಭವಿಷ್ಯದಲ್ಲಿ ಅಂತಹುದೇ ಪ್ರಸಂಗಗಳು ಮತ್ತೆ ಎದುರಾದಾಗ ಹೇಗೆ ನಿಭಾಯಿಸಬೇಕು ಎಂದು ಹೇಳಿಕೊಡುವುದಿಲ್ಲ. ಈಚಿನ ದಿನಗಳಲ್ಲಿ ಪೋಷಕರು ಮಕ್ಕಳನ್ನು ಪ್ರತಿಯೊಂದು ಅಹಿತಕರ ಅನುಭವದಿಂದ ದೂರವಿಡಬೇಕೆಂದು ಬಯಸುತ್ತಾರೆ. ಆಟವಾಡುವ ಮಕ್ಕಳ ಮಾತುಕತೆಯಂತಹ ತೀರಾ ಸಣ್ಣ ವಿಷಯಗಳಲ್ಲೂ ತಾವೇ ಮಧ್ಯೆ ಪ್ರವೇಶಿಸಿ, ತಮ್ಮ ಮಗುವಿನ ಪರವಾಗಿ ವಕಾಲತ್ತು ಮಾಡುತ್ತಾ, ಮಗುವಿನ ಮಾನಸಿಕ ಬೆಳವಣಿಗೆಯನ್ನು ಕುಂಠಿಸುತ್ತಾರೆ. ಇದರ ದೀರ್ಘಕಾಲಿಕ ಪರಿಣಾಮಗಳನ್ನು ಅವರು ಅರಿಯುವುದೇ ಇಲ್ಲ. ಇಂತಹ ಮಕ್ಕಳು ಸ್ವಭಾವತಃ ಅಂಜುಬುರುಕರಾಗಿ, ಪ್ರತಿಯೊಂದಕ್ಕೂ ಪೋಷಕರನ್ನೇ ಆಶ್ರಯಿಸುತ್ತಾ ಬೆಳೆಯುತ್ತಾರೆ. ಇದು ಭವಿಷ್ಯದಲ್ಲಿ ಅಪಾಯಕಾರಿ ಪರಿಣಾಮಗಳಿಗೆ ದಾರಿಯಾಗಬಹುದು. ಅವರ ಆತಂಕಗಳನ್ನು ಏನಕೇನ ಪ್ರಕಾರಗಳಿಂದ ಕಳೆಯುವುದಕ್ಕಿಂತಲೂ ಮಕ್ಕಳಿಗೆ ಪರಿಹಾರಗಳನ್ನು ಕಂಡುಕೊಳ್ಳಲು ನೀಡುವ ಶಿಕ್ಷಣ ಮುಖ್ಯ. ಬಹುತೇಕ ಆತಂಕಗಳ ನಿರ್ವಹಣೆಯಲ್ಲಿ ಮಕ್ಕಳ ಜೊತೆ ಮಾನಸಿಕವಾಗಿ ನಿಂತು ಆತ್ಮವಿಶ್ವಾಸ ಹೆಚ್ಚಿಸುವುದು ಭೌತಿಕವಾಗಿ ನಿಂತು ರಕ್ಷಣೆ ನೀಡುವುದಕ್ಕಿಂತಲೂ ಸೂಕ್ತ.

 ಬದಲಾಗುತ್ತಿರುವ ಜೀವನ ವಿಧಾನಗಳಲ್ಲಿ ಮಕ್ಕಳ ಕಲಿಕೆಯ ಜೊತೆಗೆ ಹಿರಿಯರ ಕಲಿಕೆಯೂ ನಿರಂತರವಾಗಿ ಆಗುತ್ತಿರಬೇಕು. ಆತಂಕಗಳ ನಿರ್ವಹಣೆ ಇದಕ್ಕೊಂದು ಪ್ರಬಲ ಉದಾಹರಣೆ.

 ------------------------

ದಿನಾಂಕ 11/7/2023 ರ ಪ್ರಜಾವಾಣಿಯ ಕ್ಷೇಮ ಕುಶಲ ವಿಭಾಗದಲ್ಲಿ ಪ್ರಕಟವಾದ ಲೇಖನ. ಮೂಲ ಲೇಖನದ ಕೊಂಡಿ: https://www.prajavani.net/health/childrens-anxiety-and-parents-role-2379675 

 ನಿಮ್ಮ ಕುಟುಂಬವನ್ನು ಡೆಂಘಿ ಜ್ವರದಿಂದ ಕಾಪಾಡಿರಿ

ಡಾ. ಕಿರಣ್ ವಿ.ಎಸ್.

ವೈದ್ಯರು

ಕೋವಿಡ್-19 ಹಾವಳಿಗೆ ಮುನ್ನ ಜನರ ಮನಸ್ಸಿನಲ್ಲಿ ಬಹಳ ಭೀತಿ ಹುಟ್ಟಿಸುತ್ತಿದ್ದ ವೈರಸ್ ಡೆಂಘಿ ಜ್ವರದ್ದು. ಕೋವಿಡ್-19 ವೈರಸ್ ಭೀತಿ ಬಹುಮಟ್ಟಿಗೆ ನಿರ್ನಾಮವಾದರೂ ಡೆಂಘಿ ಜ್ವರದ ಅಪಾಯ ಮುಂದುವರೆದಿದೆ. ಸೊಳ್ಳೆಗಳ ಮೂಲಕ ಹರಡುವ ಡೆಂಘಿ ವೈರಸ್ ತೀವ್ರ ಜ್ವರ, ಕೀಲುಗಳ ನೋವು, ಚರ್ಮ ಕೆಂಪಾಗುವುದು ಮೊದಲಾದ ಲಕ್ಷಣಗಳನ್ನು ತೋರುತ್ತದೆ. ಡೆಂಘಿ ಜ್ವರದ ಬಹುತೇಕ ರೋಗಿಗಳು ಪ್ರಾಥಮಿಕ ಚಿಕಿತ್ಸೆ, ಸಾಕಷ್ಟು ದ್ರವಾಹಾರ, ಮತ್ತು ವಿಶ್ರಾಂತಿಯಿಂದ ಚೇತರಿಸಿಕೊಳ್ಳುತ್ತಾರೆ. ಆದರೆ, ಕೆಲವರಲ್ಲಿ ಕಾಯಿಲೆ ತೀವ್ರ ಸ್ವರೂಪ ಪಡೆದು ರಕ್ತಸ್ರಾವ ಮತ್ತು ಅಂಗವೈಫಲ್ಯಗಳಂತಹ ಪ್ರಾಣಾಂತಕ ಸಮಸ್ಯೆಗಳು ಉಂಟಾಗಬಹುದು. ಸಮಸ್ಯೆ ಯಾರಲ್ಲಿ ತೀವ್ರ ಸ್ವರೂಪ ಪಡೆಯುತ್ತದೆ ಎಂದು ಮೊದಲೇ ತಿಳಿಯಲು ಸಾಧ್ಯವಿಲ್ಲದ ಕಾರಣ ಪ್ರತಿಯೊಂದು ರೋಗಿಯ ವಿಷಯದಲ್ಲೂ ಎಚ್ಚರಿಕೆ ವಹಿಸುವುದು ಅಗತ್ಯವಾಗುತ್ತದೆ. ಡೆಂಘಿ ಜ್ವರದ ರೋಗಿಗಳಿಗೂ, ಅವರ ಮನೆಯವರಿಗೂ, ಅವರ ವೈದ್ಯರಿಗೂ ಇಂತಹ ಎಚ್ಚರದ ಆವಶ್ಯಕತೆ ತಪ್ಪಿದ್ದಲ್ಲ. ಮಕ್ಕಳ ವಿಷಯದಲ್ಲಂತೂ ಪೋಷಕರು ಮೈಯೆಲ್ಲ ಕಣ್ಣಾಗಿರಬೇಕು.

ಬ್ಯಾಕ್ಟೀರಿಯಾಗಳಿಂದ ಬರುವ ರೋಗಗಳನ್ನು ಆಂಟಿಬಯಾಟಿಕ್ ಔಷಗಳ ಬಳಕೆಯಿಂದ ತಕ್ಕ ಮಟ್ಟಿಗೆ ನಿಗ್ರಹಿಸಬಹುದು. ಆದರೆ ಆಂಟಿಬಯಾಟಿಕ್ ಔಷಧಗಳು ವೈರಸ್ ಕಾಯಿಲೆಗಳ ಮೇಲೆ ಕೆಲಸ ಮಾಡುವುದಿಲ್ಲ. ಬಹುತೇಕ ವೈರಸ್ ಕಾಯಿಲೆಗಳಿಗೆ ಪಕ್ಕಾ ಚಿಕಿತ್ಸೆ ಇಲ್ಲ. ಹೀಗಾಗಿ, ನಮ್ಮ ಶರೀರದ ರಕ್ಷಕ ವ್ಯವಸ್ಥಯೇ ವೈರಸ್ ವಿರುದ್ಧ ಹೊಡೆದಾಡಬೇಕು; ಈ ಕಾದಾಟಕ್ಕೆ ಪೂರಕವಾಗುವಂತೆ ನಾವು ಶರೀರವನ್ನು ನೋಡಿಕೊಳ್ಳಬೇಕು. ವೈರಸ್ ಕಾಯಿಲೆಗಳು ಬಂದ ನಂತರ ಅವಕ್ಕೆ ಚಿಕಿತ್ಸೆ ನೀಡುವುದರ ಬದಲಿಗೆ, ಅವುಗಳು ಬಾರದಂತೆ ಕಾಪಾಡಿಕೊಳ್ಳುವುದು ಸೂಕ್ತ ನಡೆ. ಇದನ್ನು ಮಾಡಲು ರೋಗಗಳ ಬಗ್ಗೆ ಅರಿವು ಮೂಡುವುದು ಮುಖ್ಯ.

ಡೆಂಘಿ ಜ್ವರ ಒಂದು ಸಾಂಕ್ರಾಮಿಕ ಕಾಯಿಲೆ. ಅಂದರೆ, ಅದು ಓರ್ವ ರೋಗಿಯಿಂದ ಮತ್ತೋರ್ವ ಆರೋಗ್ಯವಂತ ವ್ಯಕ್ತಿಗೆ ಹರಡುತ್ತದೆ. ಅಧಿಕತರ ಸಾಂಕ್ರಾಮಿಕ ಕಾಯಿಲೆಗಳಲ್ಲಿ ಮೂರು ಅಂಶಗಳಿರುತ್ತವೆ  ರೋಗಕಾರಕ ಸೂಕ್ಷ್ಮಾಣುಜೀವಿ, ರೋಗವನ್ನು ಹರಡುವ ವಾಹಕ, ಮತ್ತು ಇವೆರಡರ ಬೆಳವಣಿಗೆಗೆ ಪೂರಕವಾಗುವ ವಾತಾವರಣ. ಈ ಮೂರನ್ನೂ ಕೂಡಿಸಿದರೆ ಸೋಂಕಿನ ತ್ರಿಕೋಣವಾಗುತ್ತದೆ. ಕಾಯಿಲೆಯನ್ನು ಹರಡದಂತೆ ತಡೆಗಟ್ಟಬೇಕಾದರೆ ಸೋಂಕಿನ ತ್ರಿಕೋಣದ ಯಾವುದಾದರೂ ಒಂದು ಬಾಹುವನ್ನಾದರೂ ಮುರಿಯಬೇಕು.

ಈ ಮಾಹಿತಿಯನ್ನು ಡೆಂಘಿ ಜ್ವರಕ್ಕೆ ಅನ್ವಯಿಸಿದರೆ, ರೋಗಕಾರಕ ಸೂಕ್ಷ್ಮಾಣುಜೀವಿ ವೈರಸ್. ಪ್ರಸ್ತುತ ಈ ವೈರಸ್ ಅನ್ನು ಸಮರ್ಥವಾಗಿ ಕೊಲ್ಲುವ ಔಷಧ, ಅಥವಾ ದೇಹದೊಳಗೆ ವೈರಸ್ ಬೆಳೆಯದಂತೆ ವಿರೋಧಿಸುವ ಲಸಿಕೆಯ ಲಭ್ಯತೆಯಿಲ್ಲ. ಆದ್ದರಿಂದ, ವೈರಸ್ ಮಟ್ಟದಲ್ಲಿ ಇದನ್ನು ನಿಗ್ರಹಿಸುವುದು ಕಷ್ಟ. ಡೆಂಗಿ ವೈರಸ್ ಹರಡುವುದು ಈಡಿಸ್ ಇಜಿಪ್ಟೈ ಎನ್ನುವ ಹೆಣ್ಣು ಸೊಳ್ಳೆಗಳಿಂದ. ಈ ಪ್ರಭೇದದ ಸೊಳ್ಳೆಗಳನ್ನು ವಿಜ್ಞಾನಿಗಳು ಅಧ್ಯಯನ ಮಾಡಿದ್ದಾರೆ. ಇದು ನಿಂತ ನೀರಿನಲ್ಲಿ ಮೊಟ್ಟೆಯಿಟ್ಟು ಸಂತಾನ ಬೆಳೆಸುತ್ತದೆ. ಹಗಲಿನ ವೇಳೆ ಸಕ್ರಿಯವಾಗಿರುವ ಈ ಸೊಳ್ಳೆ ಸಂಜೆಯ ನಂತರ ತನ್ನ ಕೆಲಸವನ್ನು ಕಡಿಮೆ ಮಾಡುತ್ತದೆ. ಡೆಂಘಿ ಜ್ವರದ ರೋಗಿಯನ್ನು ಇಂತಹ ಸೊಳ್ಳೆಗಳು ಕಡಿದಾಗ ಅವುಗಳ ಒಳಗೆ ವೈರಸ್ ಸೇರಿಕೊಳ್ಳುತ್ತದೆ. ಅದೇ ಸೊಳ್ಳೆ ಮತ್ತೋರ್ವ ನಿರೋಗಿಯನ್ನು ಕಡಿದಾಗ ಡೆಂಘಿ ವೈರಸ್ ಆ ವ್ಯಕ್ತಿಯ ರಕ್ತವನ್ನು ಸೇರಿ ಕಾಯಿಲೆ ತರುತ್ತದೆ. ಡೆಂಗಿ ಜ್ವರ ಒಬ್ಬರಿಂದ ಮತ್ತೊಬ್ಬರಿಗೆ ನೇರವಾಗಿ ಹರಡುವುದಿಲ್ಲ. ಅದೇನಿದ್ದರೂ ಈಡಿಸ್ ಇಜಿಪ್ಟೈ ಎಂಬ ಹೆಣ್ಣು ಸೊಳ್ಳೆಯ ಕಡಿತದಿಂದ ಮಾತ್ರ ಹರಡಬಲ್ಲದು. ಅಂದರೆ, ಸೊಳ್ಳೆಗಳನ್ನು ನಿಗ್ರಹಿಸಿದರೆ ಡೆಂಘಿ ಜ್ವರದಿಂದ ರಕ್ಷಣೆ ಸಾಧ್ಯ.

ಈ ನಿಟ್ಟಿನಲ್ಲಿ ಕೆಲಸಕ್ಕೆ ಬರುವುದು ಪರಿಸರದ ಬಗೆಗಿನ ನಮ್ಮ ಅರಿವು. ಸೊಳ್ಳೆಗಳು ಬೆಳೆಯಲು ಪೂರಕವಾಗುವ ಗಲೀಜು ಪರಿಸರವನ್ನು ಚೊಕ್ಕಟಗೊಳಿಸುವುದು ನಮ್ಮ ಆದ್ಯತೆಯಾಗಬೇಕು. ನಿಂತ ನೀರಿನಲ್ಲಿ ಈಡಿಸ್ ಇಜಿಪ್ಟೈ ಸೊಳ್ಳೆಗಳು ಬೆಳೆಯುತ್ತವೆ ಎಂದು ತಿಳಿದಾಗ, ಎಲ್ಲೂ ನೀರು ನಿಲ್ಲದಂತೆ ನಿಗಾ ವಹಿಸುವುದು; ಹೀಗೆ ನಿಂತ ನೀರನ್ನು ಶುಚಿಗೊಳಿಸುವುದು ಮುಖ್ಯ. ಆದರೆ ಧಾವಂತದ ಆಧುನಿಕ ಬದುಕಿನಲ್ಲಿ ಈ ರೀತಿ ಗಮನಿಸುವುದು ಸುಲಭದ ಮಾತಲ್ಲ. ನಮ್ಮ ಅರಿವಿನ ಪರಿಧಿಗೆ ಬರದಂತಹ ಎಡೆಗಳಲ್ಲಿ ನೀರು ನಿಂತು ಸೊಳ್ಳೆಗಳ ಬೆಳವಣಿಗೆ ಆಗಬಹುದು. ಅಲಂಕಾರಿಕವಾಗಿ ಮನೆಯೊಳಗೆ ಬೆಳೆಯುವ ಸಸ್ಯಗಳ ಕುಂಡಗಳು; ಮನೆಯ ಹಿತ್ತಲಲ್ಲಿ ಎಸೆದಿರುವ ಹಳೆಯ ಪಾತ್ರೆ, ಮಡಕೆ, ಟೈರು, ಆಟಿಕೆ, ಬಕೆಟ್ ಮೊದಲಾದುವಗಳಲ್ಲಿ ಸೇರಿರುವ ನೀರು ನಮ್ಮ ಕಣ್ಣಿಗೆ ಬಿದ್ದಿರುವುದಿಲ್ಲ. ನೀರು ಹೊತ್ತು ತರುವ ಅಥವಾ ಹೊರಹಾಕುವ ಪೈಪುಗಳಲ್ಲಿ ಎಂದೋ ಆಗಿರಬಹುದಾದ ಸಣ್ಣ ಬಿರುಕಿನಿಂದ ಹರಿದ ನೀರು ಮನೆಯ ಆಸುಪಾಸಿನ ಸ್ವಲ್ಪ ತಗ್ಗು ಪ್ರದೇಶದಲ್ಲಿ ಅನಾಯಾಸವಾಗಿ ನಿಲ್ಲುತ್ತದೆ. ಇವುಗಳಲ್ಲಿ ಸೊಳ್ಳೆಗಳು ಹುಲುಸಾಗಿ ಬೆಳೆಯುತ್ತವೆ. ನಮ್ಮ ಮನೆಯನ್ನು ನಾವು ಚೊಕ್ಕಟವಾಗಿ ಇಟ್ಟುಕೊಂಡರೂ, ನೆರೆಹೊರೆಯವರ ನಿರ್ಲಕ್ಷ್ಯದಿಂದ ನಿಲ್ಲುವ ನೀರಿನಲ್ಲಿ ಬೆಳೆಯುವ ಸೊಳ್ಳೆಗಳು ಆಯಾ ಪ್ರದೇಶದ ಪ್ರತಿಯೊಬ್ಬರಿಗೂ ಹಾನಿಮಾಡಬಲ್ಲವು. ಹೀಗಾಗಿ, ಈ ವಿಷಯದ ಬಗ್ಗೆ ಸಾಂಘಿಕ ಅರಿವು ಮೂಡಿಸಿ, ಕಾಯಿಲೆಯ ವಿರುದ್ಧದ ಹೋರಾಟದಲ್ಲಿ ಪ್ರತಿಯೊಬ್ಬರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಮುಖ್ಯವಾಗುತ್ತದೆ.

ಗತ್ಯಂತರವಿಲ್ಲದೆ ನೀರನ್ನು ಹಿಡಿದಿಡಬೇಕಾದ ಸಂದರ್ಭದಲ್ಲಿ ಬಳಕೆಗೆ ಸಂಗ್ರಹಿಸಿರುವ ನೀರಿನಲ್ಲಿ ಸೊಳ್ಳೆಗಳ ಗೊದಮೊಟ್ಟೆಗಳನ್ನು ತಿನ್ನುವ ಮೀನುಗಳ ಪೋಷಣೆ; ನಿಂತ ನೀರಿನ ಮೇಲೆ ಬೇವಿನ ಎಣ್ಣೆಯ ಸಿಂಪಡಿಕೆ ಮೊದಲಾದ ಪರಿಸರಕ್ಕೆ ಹಾನಿ ಮಾಡದ ವಿಧಾನಗಳಿಂದ ಸೊಳ್ಳೆಗಳ ಬೆಳವಣಿಗೆ ತಪ್ಪಿಸುವಂತಹ ಕೆಲಸಗಳನ್ನು ಮಾಡಬಹುದು. ಮನೆಯೊಳಗೆ ಸೊಳ್ಳೆಗಳು ಬಾರದಂತೆ ಕಿಟಕಿ ಬಾಗಿಲುಗಳಿಗೆ ಜಾಲರಿಗಳ ಅಳವಡಿಕೆ, ಮನೆಯನ್ನು ಅನಗತ್ಯ ಕಸದಿಂದ ತುಂಬದೆ ಚೊಕ್ಕಟ ಮಾಡುವುದು, ಮನೆಯಿಂದ ಹೊರಹೋಗುವಾಗ ಮೈತುಂಬುವ ಬಟ್ಟೆಗಳ ಬಳಕೆ, ಸೊಳ್ಳೆನಿರೋಧಕ ಮುಲಾಮುಗಳನ್ನು ಹಚ್ಚುವಿಕೆ ಮೊದಲಾದುವು ಮಕ್ಕಳಾದಿಯಾಗಿ ಎಲ್ಲರನ್ನೂ ಸೊಳ್ಳೆಕಡಿತದಿಂದ ಕಾಪಾಡಬಲ್ಲವು. ಕಾಯಿಲೆಯ ಗಹನತೆಯನ್ನು ಅರಿಯಲಾಗದ ಮಕ್ಕಳನ್ನು ಮನೆಯ ಹಿರಿಯರು ಬಹಳ ಜತನದಿಂದ ನೋಡಿಕೊಂಡು ಅಪಾಯದಿಂದ ರಕ್ಷಿಸಬೇಕು.

ಇಷ್ಟಾಗಿಯೂ ಡೆಂಘಿ ಜ್ವರ ಬಾರದಂತೆ ತಡೆಯುವುದು ಸಾಧ್ಯವಾಗದಿರಬಹುದು. ಕಾಯಿಲೆಯ ಪ್ರಾಥಮಿಕ ಲಕ್ಷಣಗಳು ಕಂಡಾಗ ಕೂಡಲೇ ಕುಟುಂಬವೈದ್ಯರನ್ನು ಕಾಣುವುದು ಒಳ್ಳೆಯದು. ಈ ವಿಷಯದಲ್ಲಿ ನಿರ್ಲಕ್ಷ್ಯ ಕೂಡದು.  

-------------------------------

ದಿನಾಂಕ 4/7/2023 ರ ಪ್ರಜಾವಾಣಿಯ ಕ್ಷೇಮ ಕುಶಲ ವಿಭಾಗದಲ್ಲಿ ಪ್ರಕಟವಾದ ಲೇಖನ. ಮೂಲ ಲೇಖನದ ಕೊಂಡಿ:

https://www.prajavani.net/health/effective-tips-to-avoid-dengue-during-monsoon-2367115 

 ಸ್ನಾಯುಗಳ ಗಣಿತ

ಡಾ. ಕಿರಣ್ ವಿ.ಎಸ್.

ವೈದ್ಯರು

ಚಲನೆ ಜೀವದ ಸಂಕೇತ ಎಂದು ನಂಬಿದ್ದ ಕಾಲವೊಂದಿತ್ತು. ಚಲಿಸುವ ಪ್ರಾಣಿಗಳಿಗೆ ಜೀವ ಇರುತ್ತದೆ; ಚಲಿಸಲಾಗದ ಮರ-ಗಿಡಗಳಿಗೆ ಜೀವ ಇರುವುದಿಲ್ಲಎಂದು ಪ್ರಾಚೀನರು ನಂಬಿದ್ದರು. ಪ್ರಾಣಿಗಳ ಚಲನೆಗೆ ಮೂಲ ಕಾರಣ ಸ್ನಾಯುಗಳು. ಜೀವವಿಕಾಸದ ಕೆಳಹಂತಗಳಲ್ಲಿ ಸ್ನಾಯುಗಳಿಗೆ ಗಟ್ಟಿಯಾದ ಆಸರೆ ಇರುವುದಿಲ್ಲ. ಆದರೆ, ವಿಕಾಸ ಮುಂದುವರೆದಂತೆಲ್ಲ ಮೂಳೆಗಳು ಸ್ನಾಯುಗಳಿಗೆ ಬಲವಾದ ಆಸರೆ ನೀಡಿ ಚಲನೆಗೆ ಸ್ಥಿರತೆಯನ್ನೂ, ಹೆಚ್ಚಿನ ಆಯಾಮಗಳನ್ನೂ ಒದಗಿಸುತ್ತವೆ. ಮಾನವ ದೇಹದ ಸ್ನಾಯುಮಂಡಲ ದೈಹಿಕ ಅಗತ್ಯಗಳಿಗೆ ತಕ್ಕಂತೆ ಮಾರ್ಪಾಡಾಗಿದೆ.

ಮಾಂಸಖಂಡಗಳಲ್ಲಿ ಮೂರು ವಿಧಗಳಿವೆ. ಚಲನೆಗೆ, ಸ್ಥಿರತೆಗೆ, ಭಾವಗಳ ಅಭಿವ್ಯಕ್ತಿಗೆ ಕಾರಣವಾಗುವ ಬಹುತೇಕ ಮಾಂಸಖಂಡಗಳು ಮೂಳೆಗಳ ಬೆಂಬಲ ಪಡೆದಿರುತ್ತವೆ. ಇಂತಹ ಸ್ನಾಯುಗಳು ನಮ್ಮ ಐಚ್ಛಿಕ ನಿಯಂತ್ರಣದಲ್ಲಿವೆ. ಎರಡನೆಯದು ಶರೀರದ ಕೊಳವೆಯಂತಹ ರಚನೆಯನ್ನು ಆವರಿಸಿರುವ ನಯವಾದ ಸ್ನಾಯುಗಳು. ಜೀರ್ಣಾಂಗ ವ್ಯವಸ್ಥೆಯನ್ನು ಈ ರೀತಿಯ ಮಾಂಸದ ಪಟ್ಟಿಗಳು ಸುತ್ತುವರೆದಿರುತ್ತವೆ. ಆಹಾರವನ್ನು ಜೀರ್ಣಾಂಗಗಳಲ್ಲಿ ಮುಂದಕ್ಕೆ ತಳ್ಳಲು ಇವು ಕಾರ್ಯ ನಿರ್ವಹಿಸುತ್ತವೆ. ಇಂತಹ ಸ್ನಾಯುಗಳು ರಕ್ತನಾಳಗಳಲ್ಲಿ ಮತ್ತು ಶ್ವಾಸನಾಳಗಳಲ್ಲಿಯೂ ಕಾಣುತ್ತವೆ. ಇವುಗಳ ಮೇಲೆ ಐಚ್ಛಿಕ ನಿಯಂತ್ರಣ ತೀರಾ ಕಡಿಮೆ. ಮೂರನೆಯದು ಹೃದಯದ ಅಹರ್ನಿಶಿ ಬಡಿತಕ್ಕೆ ಕಾರಣವಾದ ಅತ್ಯಂತ ಬಲಶಾಲಿ ಸ್ನಾಯುಗಳು. ಇವುಗಳ ಮೇಲೆ ಐಚ್ಛಿಕ ನಿಯಂತ್ರಣವಿಲ್ಲ. ಸದ್ಯದ ಲೇಖನ ಐಚ್ಛಿಕ ಸ್ನಾಯುಗಳ ಬಗ್ಗೆ.

ಐಚ್ಛಿಕ ಸ್ನಾಯುಗಳಿಗೆ ಆಸರೆ ಬೇಕು. ಸಾಮಾನ್ಯವಾಗಿ ಇಂತಹ ಆಸರೆ ಒದಗಿಸುವುದು ಮೂಳೆಗಳು ಹಾಗೂ ಮೃದ್ವಸ್ಥಿಗಳು (cartilage). ಮಾನವ ಶರೀರದಲ್ಲಿ ಸುಮಾರು 639 ಐಚ್ಛಿಕ ಸ್ನಾಯುಗಳಿಗೆ ಎಂದು ಗುರುತಿಸಲಾಗಿದೆ. ಸ್ನಾಯುಗಳ ಮುಖ್ಯ ಭಾಗ ಅವುಗಳಲ್ಲಿನ ಸ್ನಾಯುತಂತುಗಳು. ಸ್ನಾಯುವಿನ ಗಾತ್ರವನ್ನು ಅನುಸರಿಸಿ ಇಂತಹ ತಂತುಗಳು ಸಂಖ್ಯೆಯಲ್ಲಿ ಬದಲಾಗುತ್ತವೆ. ಗಾತ್ರದಲ್ಲಿ ಅತಿ ದೊಡ್ಡದಾದ ಸ್ನಾಯು ಪೃಷ್ಠ ಭಾಗದಲ್ಲಿದೆ. ಅತ್ಯಂತ ಸಣ್ಣ ಗಾತ್ರದ ಸ್ನಾಯುಗಳು ಕಿವಿಯಲ್ಲಿವೆ. ಅತ್ಯಂತ ಉದ್ದನೆಯ ಸ್ನಾಯು ಸೊಂಟದಿಂದ ಆರಂಭವಾಗಿ ತೊಡೆಯನ್ನು ಹಾಯ್ದು ಮಂಡಿಯನ್ನು ಸೇರುತ್ತದೆ. ಒಂದು ಚದರ ಸೆಂಟಿಮೀಟರ್ ವಿಸ್ತೀರ್ಣದಲ್ಲಿ ಅತ್ಯಂತ ಹೆಚ್ಚು ಒತ್ತಡವನ್ನು ನಿರ್ಮಿಸಬಲ್ಲ ಶಕ್ತಿಶಾಲಿ ಐಚ್ಛಿಕ ಸ್ನಾಯು ದವಡೆಯಲ್ಲಿದೆ. ಅತಿ ಹೆಚ್ಚು ನೂಕುಬಲಕ್ಕೆ ಕಾರಣವಾಗಬಲ್ಲ ಸ್ನಾಯು ಕಾಲಿನ ಮೀನಖಂಡದಲ್ಲಿದೆ. ಐಚ್ಛಿಕ ಸ್ನಾಯುಗಳ ಪೈಕಿ ಅತಿ ಹೆಚ್ಚು ಕೆಲಸ ಮಾಡುವ ಸ್ನಾಯುಗಳು ನಾಲಿಗೆಯಲ್ಲಿವೆ. ಸದಾ ಚುರುಕಾಗಿರುವ ಸ್ನಾಯುಗಳು ಕಣ್ಣಿನಲ್ಲಿವೆ. ಜೀವನದುದ್ದಕ್ಕೂ ಒಂದೇ ಸಮನೆ ಕೆಲಸ ಮಾಡುತ್ತಲೇ ಇರುವುದು ಉಸಿರಾಟದ ಅತ್ಯಂತ ಮುಖ್ಯ ಐಚ್ಛಿಕ ಸ್ನಾಯುವಾದ ವಪೆ. ಇದು ಮೂಲತಃ ಎದೆ ಮತ್ತು ಹೊಟ್ಟೆಯ ಭಾಗವನ್ನು ವಿಭಜಿಸುವ ಸ್ನಾಯುವಿನ ಹಾಳೆ.

ಸ್ನಾಯುಗಳ ಕಾರ್ಯದ ದೃಷ್ಟಿಯಿಂದ ನಮ್ಮ ಶರೀರಕ್ಕೆ ಎರಡು ಅಗತ್ಯಗಳಿವೆ. ಒಂದು: ಚಲನೆಯಲ್ಲಿ ಇಲ್ಲದಾಗಲೂ ನಮ್ಮ ಶರೀರದ ಸ್ಥಿರತೆಯನ್ನು ಕಾಯ್ದುಕೊಳ್ಳಬೇಕು. ಅಂದರೆ, ನಿಶ್ಚಲವಾಗಿ ನಿಂತಿದ್ದರೂ ನಮ್ಮ ಶರೀರ ಆಯ ತಪ್ಪದಂತೆ ಉಳಿಯಬೇಕಷ್ಟೇ? ಇದನ್ನು ಸಾಧಿಸಲು ದೇಹದ ಮಧ್ಯಭಾಗದಲ್ಲಿರುವ, ಬಹುತೇಕ ನಮ್ಮ ಬೆನ್ನುಮೂಳೆಯ ಆಸರೆ ಪಡೆದಿರುವ ಸ್ನಾಯುಗಳು ನೆರವಾಗುತ್ತವೆ. ಎರಡು: ಚಲನೆಗೆ ಅನುಕೂಲವಾದ ಸ್ನಾಯುಗಳು. ಇವುಗಳು ಮುಖ್ಯವಾಗಿ ಕೈಗಳಲ್ಲಿ ಮತ್ತು ಕಾಲುಗಳಲ್ಲಿ ಇರುತ್ತವೆ. ಇದರ ಜೊತೆಗೆ, ಇವೆರಡೂ ಕೆಲಸಗಳನ್ನು ಜೋಡಿಸುವ ಕೆಲವು ಸ್ನಾಯುಗಳೂ ಇವೆ.  

ಶರೀರ ತೂಕದ ಶೇಕಡಾ 35-40 ಸ್ನಾಯುಗಳದ್ದು. ಅಂದರೆ, ಸುಮಾರು 70 ಕಿಲೋಗ್ರಾಂ ತೂಗುವ ವ್ಯಕ್ತಿಯ ಶರೀರದಲ್ಲಿ ಸುಮಾರು 25-28 ಕಿಲೋಗ್ರಾಂ ತೂಕ ಸ್ನಾಯುಗಳಿಂದ ಆಗಿದೆ. ಜೀವಕೋಶಗಳ ದೃಷ್ಟಿಯಿಂದ ನೋಡಿದರೆ ಇದು ಮತ್ತೂ ಹೆಚ್ಚು. ಶರೀರದ ಸ್ಥಿರ ಜೀವಕೋಶಗಳ ಪೈಕಿ ಶೇಕಡಾ 75 ಸ್ನಾಯುಗಳಲ್ಲಿವೆ. ನಮ್ಮ ದೇಹ ಉತ್ಪಾದಿಸುವ ಪ್ರೋಟೀನುಗಳ ಶೇಕಡಾ 25 ಪ್ರಮಾಣ ಸ್ನಾಯುಗಳ ಪಾಲಿಗೆ ಹೋಗುತ್ತವೆ. ವೃದ್ಧಾಪ್ಯದ ವೇಳೆ ಶರೀರದ ಪ್ರೋಟೀನ್ ಉತ್ಪಾದನೆ ಕಡಿಮೆಯಾಗುತ್ತದೆ. ಆಗ ಸಹಜವಾಗಿ ಸ್ನಾಯುಗಳ ಪಾಲಿಗೆ ದಕ್ಕಬೇಕಾದ ಪ್ರೋಟೀನುಗಳು ಸಿಗುವುದಿಲ್ಲ. ಪರಿಣಾಮವಾಗಿ, ಶರೀರದ ಕೆಲಸ ಮಾಡುವ ಸಾಮರ್ಥ್ಯ ಕಡಿಮೆಯಾಗುತ್ತದೆ.

ಬಹುತೇಕ ಸ್ನಾಯುಗಳು ಮೂಳೆಗಳಿಗೆ ನೇರವಾಗಿ ಜೋಡುವುದಿಲ್ಲ. ಮೂಳೆಗಳತ್ತ ಜೋಡಿಸಿಕೊಳ್ಳುವ ಸ್ನಾಯುಗಳ ಅಂತಿಮ ಭಾಗ ಬಿಳಿಯ ಬಣ್ಣದ ತಂತುಗಳ ರೂಪ ಪಡೆಯುತ್ತದೆ. ಇದನ್ನು ಸ್ನಾಯುರಜ್ಜು (tendon) ಎನ್ನಲಾಗುತ್ತದೆ. ಸ್ನಾಯುವೊಂದು ಎರಡು (ಕೆಲವೊಮ್ಮೆ ಮೂರು) ಬೇರೆ-ಬೇರೆ ಮೂಳೆಗಳನ್ನು ಬೆಸೆಯುತ್ತಾ ಕನಿಷ್ಠ ಒಂದು ಕೀಲನ್ನು ಹಾಯುತ್ತದೆ. ಇಂತಹ ಸ್ನಾಯು ಸಂಕುಚಿಸಿದಾಗ ಆಯಾ ಕೀಲು ಚಲಿಸುತ್ತದೆ. ಇದು ಚಲನೆಯ ಒಂದು ಆಯಾಮ. ಬೇರೆ ಬೇರೆ ಗುಂಪಿನ ಸ್ನಾಯುಗಳು ಒಂದು ನಿಶ್ಚಿತ ವಿನ್ಯಾಸದಲ್ಲಿ ಸಂಕೋಚನ-ವಿಕೋಚನ (contraction-relaxation) ಪ್ರಕ್ರಿಯೆಗಳಿಗೆ ಒಳಗಾಗಿ ವಿಶಿಷ್ಟ ಚಲನೆಯನ್ನು ಉಂಟುಮಾಡುತ್ತವೆ. ನಾವು ನಡೆಯುವುದು, ಬರೆಯುವುದು, ನೃತ್ಯ ಮಾಡುವುದು, ಇತ್ಯಾದಿ ಚಲನೆಗಳು ಇಂತಹ ವಿನ್ಯಾಸದ ಪ್ರಕ್ರಿಯೆಗಳು. ಇಂತಹ ಕ್ಲಿಷ್ಟಕರ ಚಲನೆಗಳಿಗೆ ಸಾಕಷ್ಟು ಶಕ್ತಿಯ ಅಗತ್ಯವಿದೆ. ಸ್ನಾಯುಗಳು ಚಲಿಸಿದಾಗ ಅದರೊಳಗೆ ಶಾಖ ಉತ್ಪತ್ತಿಯಾಗುತ್ತದೆ. ಸ್ನಾಯುಗಳ ಒಳಗಿನ ರಕ್ತನಾಳಗಳ ಮೂಲಕ ಇಂತಹ ಶಾಖ ಚರ್ಮಕ್ಕೆ ತಲುಪಿ, ಶರೀರದ ತಾಪಮಾನ ನಿಯಂತ್ರಣಕ್ಕೆ ಸಹಕಾರಿಯಾಗುತ್ತದೆ. ಚಳಿಗಾಲದಲ್ಲಿ ವಾತಾವರಣದ ತಾಪಮಾನ ಕಡಿಮೆಯಾದಾಗ ಶರೀರದಲ್ಲಿ ನಡುಕದ ಅನುಭವವಾಗುತ್ತದೆ. ನಡುಕ ಮೂಲತಃ ಸ್ನಾಯುಗಳ ವೇಗದ ಚಲನೆ. ಇದರಿಂದ ಉತ್ಪತ್ತಿಯಾದ ಶಾಖ ದೇಹವನ್ನು ಬೆಚ್ಚಗೆ ಮಾಡುತ್ತದೆ.

ಅತ್ಯಂತ ಸೂಕ್ಷ್ಮರೂಪದಲ್ಲಿ ಸ್ನಾಯುಗಳು ಎರಡು ಬಗೆಯ ವಿಶಿಷ್ಟ ಪ್ರೋಟೀನ್ಗಳಿಂದ ರಚನೆಯಾಗಿವೆ. ಆಕ್ಟಿನ್ ಮತ್ತು ಮಯೋಸಿನ್ ಎಂಬ ಪ್ರೋಟೀನ್ ಸಂಯುಕ್ತಗಳು ಸಾವಿರಾರು ಸಂಖ್ಯೆಯಲ್ಲಿ ಬೆಸೆದುಕೊಂಡು ಅತಿಸಣ್ಣ ಗಾತ್ರದ ನಾರಿನ ಸ್ವರೂಪ ಪಡೆಯುತ್ತದೆ. ಇಂತಹ ನೂರಾರು ನಾರುಗಳು ಒಡಗೂಡಿ ಸ್ನಾಯುಗಳ ಎಳೆಗಳಾಗುತ್ತವೆ. ಇಂತಹ ಎಳೆಗಳ ಒಕ್ಕೂಟವೇ ಸೂಕ್ಷ್ಮರೂಪದ ಸ್ನಾಯುತಂತುಗಳು. ಪ್ರತಿಯೊಂದು ಸ್ನಾಯುತಂತುವೂ  ಸುಮಾರು ಒಂದು ಇಂಚು (2.5 ಸೆಂಟಿಮೀಟರ್) ಉದ್ದವಿದ್ದು, ಕೇವಲ 50 ಮೈಕ್ರೋಮೀಟರ್ (ಒಂದು ಮಿಲಿಮೀಟರನ್ನು ಇಪ್ಪತ್ತು ಭಾಗಗಳಾಗಿ ವಿಂಗಡಿಸಿದರೆ ಅದರಲ್ಲಿ ಒಂದು ಭಾಗ) ದಪ್ಪ ಇರುತ್ತದೆ. ಪ್ರತಿಯೊಂದು ಸ್ನಾಯುವಿನಲ್ಲಿ ಸಾವಿರಾರು ಸ್ನಾಯುತಂತುಗಳು ಇರುತ್ತವೆ. ಸ್ನಾಯುಗಳು ಸಂಕುಚಿಸಿದಾಗ ಈ ತಂತುಗಳು ಸುಮಾರು ಶೇಕಡಾ 30 ರಷ್ಟು ಗಾತ್ರದಲ್ಲಿ ಚಿಕ್ಕದಾಗುತ್ತವೆ. ಇದರಿಂದ, ಅಷ್ಟು ಪ್ರಮಾಣದಲ್ಲಿ ಆಯಾ ಸ್ನಾಯುವಿಗೆ ಸಂಬಂಧಿಸಿದ ಕೀಲು ಬಾಗುತ್ತದೆ.  

ಸ್ನಾಯುಗಳ ಚಲನೆಗೆ ಮಿದುಳು ಮತ್ತು ಮಿದುಳುಬಳ್ಳಿಯಿಂದ ನರಗಳ ಮೂಲಕ ಸಂದೇಶ ಬರಬೇಕು. ಒಂದು ಸ್ನಾಯುವಿಗೆ ಕನಿಷ್ಠ ಒಂದು ನರಜಾಲದ ಸಂಪರ್ಕ ಇರಲೇಬೇಕು. ಕೆಲವು ಮುಖ್ಯ ಸ್ನಾಯುಗಳಿಗೆ ಎರಡು ವಿವಿಧ ನರಗಳ ಸಂಪರ್ಕವೂ ಇರಬಹುದು. ಯಾವ ಚಲನೆ ಬೇಕೆಂದು ನರಮಂಡಲ ನಿರ್ಧರಿಸುತ್ತದೆ. ಅಂತಹ ಚಲನೆಗೆ ಅಗತ್ಯವಾದ ಸಂದೇಶಗಳು ಸ್ನಾಯುಗಳಿಗೆ ನರಗಳ ಮೂಲಕ ತಲುಪಿ, ಸ್ನಾಯುಗಳು ಸಂಕುಚಿಸುತ್ತವೆ. ಇವೆಲ್ಲವೂ ವಿಪರೀತ ವೇಗದಲ್ಲಿ ನಡೆಯುವ ಪ್ರಕ್ರಿಯೆಗಳು. ಸ್ನಾಯುವಿಗೆ ಸಂಬಂಧಿಸಿದ ನರ ಅಥವಾ ಅದನ್ನು ನಿಯಂತ್ರಿಸುವ ನರವ್ಯೂಹದ ಭಾಗ ನಿಷ್ಕ್ರಿಯವಾದರೆ ಚಲನೆಯ ಸಂದೇಶಗಳು ಲಭಿಸದೆ ಸ್ನಾಯುವೂ ನಿಷ್ಕ್ರಿಯವಾಗುತ್ತದೆ. ಪಾರ್ಶ್ವವಾಯು ಪೀಡಿತರು, ಪೋಲಿಯೋ ಕಾಯಿಲೆಯಿಂದ ಬಳಲುವವರ ಸ್ನಾಯುಗಳ ನಿಷ್ಕ್ರಿಯತೆಗೆ ನರವ್ಯೂಹ ಕಾರಣ. ಇದರ ಜೊತೆಗೆ ನರವ್ಯೂಹ ಸಮರ್ಪಕವಾಗಿದ್ದರೂ ಸ್ನಾಯುಗಳ ಆಂತರಿಕ ಸ್ವರೂಪದಲ್ಲಿ ಆಗುವ ದೋಷಗಳಿಂದಲೂ ಸ್ನಾಯುಗಳು ನಿಷ್ಕ್ರಿಯವಾಗಬಲ್ಲವು. ಇಂತಹ ಸಮಸ್ಯೆಗಳಿಗೆ ಬಹುತೇಕ ಜೆನೆಟಿಕ್ ಹಿನ್ನೆಲೆ ಇರುತ್ತದೆ.  

ಭೌತಶಾಸ್ತ್ರದ ಮೂರು ಬಗೆಯ ಸನ್ನೆಗಳ (lever) ಪ್ರಯೋಗವೂ ಸ್ನಾಯುಗಳ ಕೆಲಸದಲ್ಲಿ ಆಗುತ್ತದೆ. ಒತ್ತಡದ ಬಿಂದು ಮತ್ತು ತೂಕದ ಬಿಂದುಗಳ ನಡುವೆ ಆಸರೆ (fulcrum) ಇರುವುದು ಮೊದಲ ವರ್ಗದ ಸನ್ನೆ. ನಮ್ಮ ಕತ್ತಿನ ಹಿಂಭಾಗದ ಸ್ನಾಯುಗಳು ಈ ತತ್ತ್ವವನ್ನು ಅನುಸರಿಸುತ್ತವೆ. ಇದರಲ್ಲಿ ಒತ್ತಡದ ಪ್ರಮಾಣಕ್ಕೆ ಸಮನಾಗಿ ಚಲನೆಯಾಗುತ್ತದೆ. ಆಸರೆಯ ಒಂದೇ ಬದಿಯಲ್ಲಿ ಕ್ರಮವಾಗಿ ತೂಕದ ಮತ್ತು ಒತ್ತಡದ ಬಿಂದುಗಳು ಇದ್ದರೆ ಅದು ಎರಡನೆಯ ವರ್ಗದ ಸನ್ನೆ. ನಮ್ಮ ಮೀನಖಂಡಗಳು ಮತ್ತು ಪಾದದ ಸ್ನಾಯುಗಳು ಈ ಪ್ರವರ್ಗದವು. ಇದರಲ್ಲಿ ಒತ್ತಡದ ಪ್ರಮಾಣಕ್ಕಿಂತಲೂ ಅಧಿಕ ಚಲನೆ ಲಭಿಸುತ್ತದೆ. ಇದರ ಬದಲಿಗೆ ಮೂರನೆಯ ವರ್ಗದ ಸನ್ನೆಯಲ್ಲಿ ತೂಕ ಮತ್ತು ಒತ್ತಡದ ಬಿಂದುಗಳು ಪರಸ್ಪರ ಬದಲಾಗುತ್ತವೆ. ಇದರಿಂದ ಒತ್ತಡದ ಪ್ರಮಾಣಕ್ಕಿಂತ ಚಲನೆಯ ಪ್ರಮಾಣ ಕಡಿಮೆ ಇರುತ್ತದೆ. ಮೊಣಕೈ ಸ್ನಾಯುಗಳು ಇದಕ್ಕೆ ಉದಾಹರಣೆ.

ಆಟಗಾರರ ಸಾಮರ್ಥ್ಯ ಪ್ರದರ್ಶನದಿಂದ ಹಿಡಿದು ನಟ-ನಟಿಯರ ಆಂಗಿಕ ಅಭಿವ್ಯಕ್ತಿಯ ಹಿಂದಿನ ರಹಸ್ಯ ಸ್ನಾಯುಮಂಡಲ. ತೂಕ ಎತ್ತುವ ಸ್ಪರ್ಧೆಯ ವಿಜೇತರಿಂದ ಮೊದಲಾಗಿ ಅದ್ಭುತ ಪಿಯಾನೋ ವಾದಕರ ಹಿನ್ನೆಲೆಯಲ್ಲಿರುವುದೂ ಸ್ನಾಯುಗಳೇ. ಇವುಗಳ ಹಿಂದಿನ ಭೌತವಿಜ್ಞಾನ ಮತ್ತು ಗಣಿತಗಳು ಸದಾ ಬೆರಗು ಮೂಡಿಸುತ್ತಲೇ ಇರುತ್ತವೆ.

----------------------

ಜೂನ್ 2023 ರ ಕುತೂಹಲಿ ವಿಜ್ಞಾನ ಮಾಸಪತ್ರಿಕೆಯ ಸಂಪೂರ್ಣ ಸಂಚಿಕೆಯನ್ನು ಓದಲು ಕೊಂಡಿ: https://flipbookpdf.net/web/site/1352031830376815b6babc87a4ca40ec81512ca2202306.pdf.html 

 

 ನಿಮಗೆ ನೀವೇ ವೈದ್ಯರಾಗಬೇಡಿ

ಡಾ. ಕಿರಣ್ ವಿ.ಎಸ್.

ವೈದ್ಯರು

ಈಚೆಗೆ ಸ್ವಯಂವೈದ್ಯ ಹೆಚ್ಚು ಬಳಕೆಯಾಗುತ್ತಿದೆ. ಸ್ವಯಂವೈದ್ಯ ಅಥವಾ ಸ್ವಚಿಕಿತ್ಸೆ ಎನ್ನುವುದು ತಮ್ಮ ಆರೋಗ್ಯ ಸಮಸ್ಯೆಗಳಿಗೆ ತಾವೇ ಚಿಕಿತ್ಸೆ ಮಾಡಿಕೊಳ್ಳುವುದು. ಸ್ವಯಂವೈದ್ಯದ ಪ್ರವೃತ್ತಿ ಈ ಮೊದಲೂ ಇತ್ತು. ಆಗ ಪುಸ್ತಕಗಳನ್ನು ಓದಿಯೋ, ಅಥವಾ ಹಳೆಯ ರೋಗಿಗಳನ್ನು ಕೇಳಿಯೋ ತಾವೇ ಚಿಕಿತ್ಸೆ ಮಾಡಿಕೊಳ್ಳುತ್ತಿದ್ದ ಜನರಿದ್ದರು. ವರ್ತಮಾನದಲ್ಲಿ ತಂತ್ರಜ್ಞಾನದ ನೆರವಿನಿಂದ ಅದೇ ಕೆಲಸವನ್ನು ಗೂಗಲ್, ಯೂಟ್ಯೂಬ್, ಚಾಟ್-ಜಿಪಿಟಿ ಮೊದಲಾದ ಅನುಕೂಲಗಳನ್ನು ಬಳಸಿ ಮಾಡುತ್ತಿದ್ದಾರೆ. ಸಾಧನಗಳು ಬದಲಾದರೂ ಪರಿಣಾಮ ಬದಲಾಗುವುದಿಲ್ಲ.

ಆರೋಗ್ಯ ಸಮಸ್ಯೆಗಳು ಎಂದಷ್ಟೇ ಅಲ್ಲ; ಯಾವುದೇ ಸಮಸ್ಯೆಯನ್ನು ಬಗೆಹರಿಸಲು ಹಲವಾರು ದಾರಿಗಳಿವೆ. ಅವುಗಳ ಪೈಕಿ ಅತ್ಯಂತ ವೈಜ್ಞಾನಿಕ ವಿಧಾನವೆಂದರೆ ಸಮಸ್ಯೆಯ ಕಾರಣವನ್ನು ಪತ್ತೆ ಮಾಡಿ, ಅದರ ಪರಿಣಾಮಗಳನ್ನು ವಿಶ್ಲೇಷಣೆಗೈದು, ಅದಕ್ಕೆ ತಕ್ಕಂತಹ ಸಮರ್ಥ ಪರಿಹಾರಗಳನ್ನು ನಿಯೋಜಿಸುವುದು. ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಈ ಪ್ರಕ್ರಿಯೆ ಅತ್ಯಗತ್ಯ. ಅಧ್ಯಯನ ಮತ್ತು ಅನುಭವಗಳಿಲ್ಲದೆ ಇದನ್ನು ಮಾಡಲಾಗದು. ಚಿಕಿತ್ಸೆ ನೀಡುವ ಮುನ್ನ ಕಾಯಿಲೆ ಏನೆಂದು ಅರಿಯುವುದು ಮುಖ್ಯವಾದ ಮಜಲು. ಅಂದಾಜಿನ ಚಿಕಿತ್ಸೆಗಳು ಪರಿಣಾಮಕಾರಿಯಾಗುವುದು ಅಪರೂಪ; ಅಪಾಯಕಾರಿಯಾಗುವುದು ಹೆಚ್ಚು.

ಮೂಲತಃ ಕಾಯಿಲೆ ಎಂದರೇನು? ಹತ್ತಾರು ಅಂಗಗಳಿರುವ ನಮ್ಮ ಶರೀರದಲ್ಲಿ ಪ್ರತಿ ಕ್ಷಣವೂ ಸಾವಿರಾರು ಸಂಕೀರ್ಣ ಭೌತಿಕ ಮತ್ತು ರಾಸಾಯನಿಕ ಪ್ರಕ್ರಿಯೆಗಳು ಘಟಿಸುತ್ತಲೇ ಇರುತ್ತವೆ. ಬಹುತೇಕ ಅಂಗಗಳು ಮತ್ತೊಂದರ ನೆರವಿನಿಂದ ಕೆಲಸ ಮಾಡುತ್ತವೆ. ಯಾವುದೋ ಒಂದು ಅಂಗದ ತಾತ್ಕಾಲಿಕ ಇಲ್ಲವೇ ದೀರ್ಘಕಾಲಿಕ ವೈಫಲ್ಯದಿಂದ ಅದಕ್ಕೆ ಹೊಂದಿಕೊಂಡು ಕಾರ್ಯ ನಿರ್ವಹಿಸುವ ಮತ್ತೊಂದು ಅಂಗದ ಕೆಲಸದಲ್ಲಿ ಸಹಜವಾಗಿಯೇ ಏರುಪೇರಾಗುತ್ತದೆ. ಉದಾಹರಣೆಗೆ, ಹೃದಯದ ಕೆಲಸದಲ್ಲಿ ಸಮಸ್ಯೆ ಬಂದಾಗ, ಮಿದುಳಿಗೆ ಸರಿಯಾದ ಪ್ರಮಾಣದಲ್ಲಿ ರಕ್ತ ತಲುಪದೆ ಅದರ ಕೆಲಸದ ಮೇಲೆ ಪ್ರತಿಕೂಲ ಪರಿಣಾಮವಾಗಬಹುದು. ಮಿದುಳು, ಹೃದಯ, ಶ್ವಾಸಕೋಶಗಳು, ಯಕೃತ್, ಮತ್ತು ಮೂತ್ರಪಿಂಡಗಳು ನಮ್ಮ ದೇಹದ ಪ್ರಮುಖ ಅಂಗಗಳು. ಇಂತಹ ಯಾವುದೇ ಪ್ರಮುಖ ಅಂಗದ ವೈಫಲ್ಯದ ವೇಳೆ ಇವುಗಳ ಮೇಲೆ ಅವಲಂಬಿತವಾಗಿರುವ ಹಲವಾರು ಅಂಗಗಳು ಒಂದಕ್ಕೊಂದು ಪೂರಕವಾಗಿ ಕೆಲಸ ಮಾಡಲಾಗದೇ ಅನತಿಕಾಲದಲ್ಲೇ ಶರೀರ ಅಸೌಖ್ಯಕ್ಕೆ ಒಳಗಾಗುತ್ತದೆ. ಪ್ರಮುಖ ಅಂಗಗಳ ಕಾರ್ಯ ನಿರ್ವಹಣೆಯ ಅಡಚಣೆಗೆ ರೋಗಕಾರಕ ಕ್ರಿಮಿಗಳು ಕಾರಣ ಆಗಿರಬಹುದು; ಅಂಗಗಳ ವಯೋಸಹಜ ವೈಫಲ್ಯ ಆಗಿರಬಹುದು; ರಕ್ತನಾಳಗಳ ಸಮಸ್ಯೆಯಿಂದ ಆಯಾ ಅಂಗಕ್ಕೆ ರಕ್ತ ಪೂರೈಸುವಲ್ಲಿ ಅಡೆತಡೆ ಆಗಿರಬಹುದು; ಅಂಗಗಳ ಕ್ಯಾನ್ಸರ್ ಗಂತಿಗಳು ಆಗಿರಬಹುದು. ಹೀಗೆ, ಸಮಸ್ಯೆಗಳ ಮೂಲಕ್ಕೆ ಹಲವಾರು ಕಾರಣಗಳಿರುತ್ತವೆ.

ಮೇಲ್ನೋಟಕ್ಕೆ ಶರೀರದಲ್ಲಿನ ಅಸೌಖ್ಯದ ಬಾಹ್ಯ ಚಿಹ್ನೆಗಳು ಕಾಣುತ್ತವೆಯೇ ಹೊರತು, ಅದಕ್ಕೆ ಕಾರಣವಾದ ಮೂಲ ಸಮಸ್ಯೆ ನೇರವಾಗಿ ಕಾಣುವುದು ಅಪರೂಪ. ಕಾಯಿಲೆಯನ್ನು ಗುಣಪಡಿಸುವವರು ಈ ಚಿಹ್ನೆಗಳ ಜಾಡನ್ನು ಹಿಡಿದು ಮೂಲದೆಡೆಗೆ ಸಾಗಬೇಕು. ಅದರ ಬದಲಿಗೆ ಸ್ವಯಂವೈದ್ಯ ಮಾಡಿಕೊಂಡು ಕಾಯಿಲೆ-ಸೂಚಕ ಚಿಹ್ನೆಗಳನ್ನೇ ಅಳಿಸಿಹಾಕಿದರೆ ಬಹಳಷ್ಟು ನಷ್ಟ ಅನುಭವಿಸಬೇಕಾಗುತ್ತದೆ. ಸಮಸ್ಯೆಯ ಬೇರುಮಟ್ಟಕ್ಕೆ ತಲುಪಿ, ಶರೀರಕ್ಕೆ ಆಗಿರುವ ಘಾಸಿಯನ್ನು ಗುರುತಿಸಿ, ಅದಕ್ಕೆ ಕಾರಣವಾದ ತೊಂದರೆಯನ್ನು ನಿವಾರಿಸಿದರೆ ಮಾತ್ರ ಕಾಯಿಲೆ ಗುಣವಾದಂತೆ. ಕೆಲವೊಮ್ಮೆ ಹತ್ತು ರೂಪಾಯಿ ಬೆಲೆಯ ಔಷಧ ನೀಡಲು ಸಾವಿರ ರೂಪಾಯಿ ಮೌಲ್ಯದ ಪರೀಕ್ಷೆಗಳನ್ನು ಮಾಡಬೇಕಾದ ಸಂದರ್ಭ ಒದಗುತ್ತದೆ.

ಇಂತಹ ವೈಜ್ಞಾನಿಕ ಪ್ರಕ್ರಿಯೆಯನ್ನು ಅನುಸರಿಸದೇ ಇರುವ ಯಾವುದೇ ವಿಧಾನವೂ ಸರಿಯಾದ ಫಲಿತಾಂಶವನ್ನು ನೀಡಲಾರದು. ಸಮಸ್ಯೆಯ ಮೂಲವನ್ನು ತಿಳಿಯಲು ಕೇವಲ ಪ್ರಯೋಗಾಲಯದ ಪರೀಕ್ಷೆಗಳು ಮಾತ್ರವೇ ಬೇಕೆಂದೇನಿಲ್ಲ. ಬಹುತೇಕ ಕಾಯಿಲೆಗಳ ಕಾರಣವನ್ನು ಬಗೆಹರಿಸಲು ವೈದ್ಯರು ತಮ್ಮ ಅನುಭವಗಳ ಆಧಾರದ ಮೇಲೆ ಮಾಡುವ ರೋಗಲಕ್ಷಣಗಳ ವಿಶ್ಲೇಷಣೆ ಮತ್ತು ಕೂಲಂಕಶ ಭೌತಿಕ ಪರೀಕ್ಷೆಗಳು ಸಾಕಾಗುತ್ತವೆ. ಉದಾಹರಣೆಗೆ, ಹೊಟ್ಟೆನೋವಿನಿಂದ ಬಳಲುವ ರೋಗಿಯ ಸಮಸ್ಯೆಯನ್ನು ವಿಶ್ಲೇಷಿಸಲು ಅವರ ಇತರ ರೋಗಲಕ್ಷಣಗಳು; ಆಹಾರ ಪದ್ದತಿ; ನೀರಿನ ಸೇವನೆ; ಮಲಮೂತ್ರ ವಿಸರ್ಜನೆಯ ವಿವರಗಳು; ಹೊಟ್ಟೆಯ ಯಾವ ಭಾಗದಲ್ಲಿ ನೋವು ಅಧಿಕವಾಗಿದೆ ಎಂಬ ಭೌತಿಕ ಪರೀಕ್ಷೆ  ಇಂತಹ ಕೆಲವು ಅಂಶಗಳಿಂದ ನುರಿತ ವೈದ್ಯರು ಇದು ಆಮ್ಲೀಯ ಹೆಚ್ಚಳವೇ; ಮೂತ್ರಪಿಂಡಗಳ ಸಮಸ್ಯೆಯೇ; ಅಜೀರ್ಣವೇ; ಮಲಬದ್ಧತೆಯೇ; ಅಪೆಂಡಿಕ್ಸ್ ಸೋಂಕೇ ಎಂಬುದನ್ನು ಸಾಕಷ್ಟು ನಿಖರವಾಗಿ ಪತ್ತೆ ಮಾಡಬಲ್ಲರು.

ಹಲವಾರು ಕಾಯಿಲೆಗಳನ್ನು ಸ್ವಲ್ಪ ವಿಶ್ರಾಂತಿ, ಸರಿಯಾದ ಆಹಾರಗಳ ನೆರವಿನಿಂದ ಯಾವುದೇ ಔಷಧೋಪಚಾರವಿಲ್ಲದೆಯೇ ಶರೀರ ತಂತಾನೇ ಗುಣಪಡಿಸಿಕೊಳ್ಳುತ್ತದೆ. ತಾನಾಗಿಯೇ ಸರಿಹೋಗಬಹುದಾದ ಇಂತಹ ಕಾಯಿಲೆಗಳಿಗೆ ಚಿಕಿತ್ಸೆಯೇ ಬೇಕಾಗುವುದಿಲ್ಲ. ಅವುಗಳಿಗೆ ಸ್ವಯಂವೈದ್ಯವಾದರೂ ಸರಿಯೇ; ಬೇರೆ ಯಾವುದೇ ಚಿಕಿತ್ಸೆಯಾದರೂ ಒಂದೇ. ಆದರೆ ಈ ರೀತಿಯಲ್ಲಿ ಗುಣವಾಗಲಾರದ ಕಾಯಿಲೆಗಳಿಗೆ ನಿಖರವಾದ ಕಾರಣವನ್ನು ಹುಡುಕುವುದು ಕಡ್ಡಾಯ. ಇಂತಹ ಕಾಯಿಲೆಗಳಿಗೆ ಕೇವಲ ರೋಗಲಕ್ಷಣಗಳನ್ನು ಆಧರಿಸಿ ಸ್ವಯಂವೈದ್ಯ ಮಾಡಿಕೊಳ್ಳುವುದು ಅಪಾಯಕಾರಿ. ಕೆಲವೊಮ್ಮೆ ಸ್ವಯಂವೈದ್ಯದ ಚಿಕಿತ್ಸೆಗಳು ಕಾಯಿಲೆಯ ಲಕ್ಷಣಗಳನ್ನು ನಿವಾರಿಸಿ ಇಡೀ ರೋಗನಿರ್ಣಯ ಪ್ರಕ್ರಿಯೆಯ ದಾರಿ ತಪ್ಪಿಸುತ್ತವೆ. ಉದಾಹರಣೆಗೆ, ಬ್ಯಾಕ್ಟೀರಿಯಾ ಸೋಂಕು ಉಂಟಾದಾಗ ವೈದ್ಯರ ಸಲಹೆ ಇಲ್ಲದೆ ಯಾವುದೋ ಆಂಟಿಬಯಾಟಿಕ್ ಔಷಧವನ್ನು ಅರೆಬರೆ ಪ್ರಮಾಣದಲ್ಲಿ ಕಡಿಮೆ ಅವಧಿಗೆ ಸೇವಿಸಿದಾಗ, ರೋಗಕಾರಕಗಳ ವರ್ತನೆ ಏರುಪೇರಾಗಿ, ಇಡೀ ರೋಗದ ಲಕ್ಷಣಗಳು ಬೇರೆಯೇ ಸ್ವರೂಪ ಪಡೆಯುತ್ತವೆ. ಆಗ ಒಂದು ಸರಳ ಪರೀಕ್ಷೆ ಮಾಡುವ ಬದಲಿಗೆ ನಾಲ್ಕು ದುಬಾರಿ ಪರೀಕ್ಷೆಗಳು ಬೇಕಾಗುತ್ತವೆ. 

ಹೊಸ ವೈದ್ಯನಿಗಿಂತ ಹಳೆಯ ರೋಗಿ ಮೇಲುಎನ್ನುವ ಗಾದೆಯಿದೆ. ಇದು ರೋಗಪತ್ತೆಯ ವಿಷಯದಲ್ಲಿ ಅನುಭವದ ಮಹತ್ವವನ್ನು ತಿಳಿಸುತ್ತದೆಯೇ ಹೊರತು, ಸ್ವಯಂವೈದ್ಯವನ್ನು ಪುರಸ್ಕರಿಸುವುದಿಲ್ಲ. ಪ್ರಸ್ತುತ ವೈದ್ಯಕೀಯ ವಿಜ್ಞಾನ ದಿನದಿನವೂ ಮಹತ್ತರವಾಗಿ ಪ್ರಗತಿ ಹೊಂದುತ್ತಿದೆ. ಒಂದೆರಡು ದಶಕಗಳ ಹಿಂದೆ ಇದ್ದ ರೋಗಪತ್ತೆ ತಂತ್ರಜ್ಞಾನ, ಔಷಧಗಳು, ರೋಗಿಯ ಆರೈಕೆಯ ಮಾರ್ಗಸೂಚಿಗಳು ಇಂದು ಸಾಕಷ್ಟು ಬದಲಾಗುವುದು ವೈದ್ಯಕೀಯ ರಂಗದಲ್ಲಿ ಸಾಮಾನ್ಯ ಸಂಗತಿ. ಹೀಗಾಗಿ, ಯಾವುದೋ ಹಳೆಯ ರೋಗಿ ಹಿಂದೆಂದೋ ಪಡೆದ ಚಿಕಿತ್ಸೆ ವರ್ತಮಾನದಲ್ಲಿ ಅಪ್ರಸ್ತುತವಾಗಬಹುದು. ಸ್ವಯಂವೈದ್ಯದ  ಅತೀ ದೊಡ್ಡ ದೌರ್ಬಲ್ಯ ಮತ್ತು ಅಪಾಯ ಇದೇ. ಇಂದಿನ ವೈದ್ಯಕೀಯ ಸೇವೆಗಳು ದುಬಾರಿ ಎಂಬ ಮಾತು ನಿಜ. ಆದರೆ, ಆರೋಗ್ಯಕ್ಕಿಂತ ಹೆಚ್ಚಿನ ಮೌಲ್ಯ ಜೀವನದಲ್ಲಿ ಇನ್ಯಾವುದಕ್ಕೂ ಇಲ್ಲ ಎನ್ನುವುದೂ ಸತ್ಯ. ಪ್ರತಿಯೊಂದು ಸಮಸ್ಯೆಗೂ ತಜ್ಞ ವೈದ್ಯರೇ ಬೇಕೆಂದಿಲ್ಲ. ಒಳ್ಳೆಯ ಕುಟುಂಬ-ವೈದ್ಯರನ್ನು ಗುರುತಿಸಿ, ನಮ್ಮ ಆರೋಗ್ಯದ ಹೊಣೆಯನ್ನು ಅವರಿಗೆ ಒಪ್ಪಿಸಿದರೆ, ಎಂಭತ್ತು ಪ್ರತಿಶತ ಕಾಯಿಲೆಗಳನ್ನು ಅವರು ಸಮರ್ಥವಾಗಿ ನಿಭಾಯಿಸಬಲ್ಲರು. ಅಗತ್ಯ ಬಿದ್ದಾಗ ಸರಿಯಾದ ತಜ್ಞವೈದ್ಯರನ್ನೂ ಅವರೇ ಸೂಚಿಸಬಲ್ಲರು.

ಸ್ವಯಂವೈದ್ಯ ಸೂಕ್ತವಲ್ಲ. ಇದರಿಂದ ಹಲವಾರು ತೊಂದರೆಗಳಿಗೆ, ಅಂಗವೈಫಲ್ಯಗಳಿಗೆ ಒಳಗಾದವರಿದ್ದಾರೆ; ಅಪಾಯಕಾರಿ ಮಾತ್ರೆಗಳನ್ನು ಸೇವಿಸಿ ಮರಣಿಸಿದವರಿದ್ದಾರೆ. ಆರೋಗ್ಯ ಸಮಸ್ಯೆಗಳ ನಿರ್ವಹಣೆ ವೈದ್ಯರಿಗಿರಲಿ. ಶರೀರವನ್ನು ಸ್ವಯಂವೈದ್ಯದ ಅಪಾಯಗಳಿಗೆ ಒಡ್ಡಿಕೊಳ್ಳದಿರುವುದು ಜಾಣತನ.

----------------------

ದಿನಾಂಕ 30/5/2023 ರ ಪ್ರಜಾವಾಣಿಯಲ್ಲಿನ ಮೂಲ ಲೇಖನದ ಕೊಂಡಿ: https://www.prajavani.net/health/health-care-and-health-awareness-the-dangers-of-self-medication-2298576  

   

 ಕರುಳಿನ ಗಣಿತ

ಡಾ. ಕಿರಣ್ ವಿ.ಎಸ್.

ವೈದ್ಯರು

ನಮ್ಮ ದೇಹದ ಅತ್ಯಧಿಕ ತೂಕದ ಅಂಗ, ಅತಿ ಹೆಚ್ಚು ರಕ್ತ ಸಂಚಾರ ಇರುವ ಅಂಗ, ಅತಿ ಹೆಚ್ಚು ಆಕ್ಸಿಜನ್ ಹೀರುವ ಅಂಗಗಳ ಬಗ್ಗೆ ಕೆಲವರಿಗೆ ತಿಳಿಯದಿರಬಹುದು. ಆದರೆ ಅತಿ ಉದ್ದನೆಯ ಅಂಗದ ಬಗ್ಗೆ ಮಾತ್ರ ಎಲ್ಲರಿಗೂ ತಿಳಿದಿರುತ್ತದೆ. ಸುಮಾರು ಏಳೂವರೆ ಮೀಟರ್ (ಸುಮಾರು 25 ಅಡಿಗಳು) ಉದ್ದವಿರುವ ಕರುಳು ಜಠರದ ಅಂತ್ಯದಿಂದ ಮೊದಲಾಗಿ ಮಲದ್ವಾರದವರೆಗೆ ಸಾಗುತ್ತದೆ. ಇದರ ಮೊದಲ ಆರು ಮೀಟರ್ (ಸುಮಾರು 20 ಅಡಿ) ಸಣ್ಣಕರುಳು. ಉಳಿದ ಒಂದೂವರೆ ಮೀಟರ್ (ಸುಮಾರು 5 ಅಡಿಗಳು) ದೊಡ್ಡಕರುಳು. ಸಣ್ಣಕರುಳಿನ ಉದ್ದ ಹೆಚ್ಚಾಗಿದ್ದರೂ ಅದು ಸಣ್ಣಕರುಳು ಏಕೆಂದರೆ, ಅದರ ವ್ಯಾಸ ಸಣ್ಣದು  ಕೇವಲ ಒಂದು ಇಂಚು. ಇದಕ್ಕೆ ಪ್ರತಿಯಾಗಿ ಉದ್ದ ಕಡಿಮೆ ಇದ್ದರೂ ದೊಡ್ಡಕರುಳಿನ ವ್ಯಾಸ ದೊಡ್ಡದು  ಸುಮಾರು ಮೂರು ಇಂಚು.

ಕರುಳಿನ ಹೊರಭಾಗ ನುಣ್ಣಗೆ ಕಂಡರೂ, ಒಳಭಾಗದಲ್ಲಿ ಒತ್ತೊತ್ತಿನ ಮಡಚುಗಳು ಇರುತ್ತವೆ. ಹೀಗೆ ಮಡಿಕೆಯಾದ ಕರುಳಿನ ಒಟ್ಟಾರೆ ಕ್ಷೇತ್ರಫಲ ಬಹಳ ಹೆಚ್ಚಾಗುತ್ತದೆ. ಆಹಾರದಲ್ಲಿನ ಪ್ರತಿಯೊಂದು ಅಗತ್ಯ ಅಂಶವನ್ನೂ ಹೀರಿಕೊಳ್ಳಲು ಇದು ನೆರವಾಗುತ್ತದೆ. 25 ಅಡಿ ಉದ್ದದ ಸಣ್ಣಕರುಳನ್ನು ಪ್ರತ್ಯೇಕವಾಗಿಸಿ, ಪ್ರತಿಯೊಂದು ಮಡಿಕೆಯನ್ನೂ ಬಿಚ್ಚಿ ಸಪಾಟಾಗಿಸಿದರೆ ಅದರ ಹರಹು 200 ಚದರ ಮೀಟರ್ ಆಗುತ್ತದೆ. ಇದು ಸುಮಾರು 50x40 ಅಡಿ ವಿಸ್ತೀರ್ಣದ ನಿವೇಶನಕ್ಕಿಂತಲೂ ಅಗಲ. ಇದು ಒಂದು ಇಡೀ ಟೆನ್ನಿಸ್ ಕೋರ್ಟ್ ನಷ್ಟು ಜಾಗವನ್ನು ಆಕ್ರಮಿಸುತ್ತದೆ ಎಂದರೆ ಅದರ ಅಳತೆಯ ಅಂದಾಜು ಬರಬಹುದು.

ಸಣ್ಣಕರುಳಿನಲ್ಲಿ ಮೂರು ಭಾಗಗಳಿವೆ. ಜಠರಕ್ಕೆ ಸಮೀಪವಾದ ಭಾಗ ಡುಯೊಡೆನಮ್. ಇದು ಸುಮಾರು 25 ಸೆಂಟಿಮೀಟರ್ ಉದ್ದದ (10 ಇಂಚು) ನಳಿಕೆ. ಜಠರದಿಂದ ಬರುವ ಆಮ್ಲೀಯ ಆಹಾರವನ್ನು ಶಮನಗೊಳಿಸುವ ಪ್ರತ್ಯಾಮ್ಲ ಇಲ್ಲಿ ಉತ್ಪತ್ತಿಯಾಗುತ್ತದೆ. ಜೊತೆಗೆ, ಯಕೃತ್ತಿನಿಂದ ಬಿಡುಗಡೆ ಆಗುವ ಪಿತ್ತರಸ ಮತ್ತು ಮೇದೋಜೀರಕದಿಂದ ಬರುವ ಆಹಾರದ ಜಿಡ್ಡಿನ ಅಂಶವನ್ನು ಜೀರ್ಣಗೊಳಿಸುವ ಸ್ರವಿಕೆಗಳು ಇದೇ ಭಾಗದಲ್ಲಿ ಬಿಡುಗಡೆ ಆಗುತ್ತವೆ. ಸಣ್ಣಕರುಳಿನ ಮಧ್ಯದ ಭಾಗ ಜೆಜುನಮ್. ಇದು ಸುಮಾರು ಎರಡೂವರೆ ಮೀಟರ್ (8 ಅಡಿ) ಉದ್ದದ ನಳಿಕೆ. ಆಹಾರದಲ್ಲಿ ಪಿಷ್ಟ, ಪ್ರೋಟೀನ್, ಮತ್ತು ಮೇದಸ್ಸಿನ ಅಂಶಗಳು ಬಹುತೇಕ ಜೀರ್ಣವಾಗಿ ರಕ್ತವನ್ನು ಸೇರುವುದು ಇಲ್ಲಿಂದಲೇ. ಕೊನೆಯ ಭಾಗದ ಹೆಸರು ಐಲಿಯಮ್. ಇದು ಸುಮಾರು ಮೂರು ಮೀಟರ್ (ಒಂಬತ್ತೂವರೆ ಅಡಿ) ಉದ್ದವಿದೆ. ಈ ಭಾಗ ಕೆಲವು ವಿಟಮಿನ್ಗಳು ಮತ್ತು ಪಿತ್ತ ಲವಣಗಳನ್ನು ಸೆಳೆದುಕೊಳ್ಳುತ್ತದೆ. ಈ ಭಾಗ ಮುಂದುವರೆದು ದೊಡ್ಡಕರುಳು ಸೇರುತ್ತದೆ. ಸಣ್ಣಕರುಳಿಗೆ ಎರಡು ಪ್ರಮುಖ ರಕ್ತನಾಳಗಳು ರಕ್ತವನ್ನು ಪ್ರವಹಿಸುತ್ತವೆ.

ಸಣ್ಣಕರುಳಿನ ಉದ್ದಕ್ಕೂ ಮಡಚುಗಳು ಇರುತ್ತವಷ್ಟೇ? ಈ ಮಡಚುಗಳ ತುದಿಗಳಲ್ಲಿ ಬೆರಳಿನಾಕಾರದ ಉಬ್ಬುಗಳಿವೆ. ಇವನ್ನು ವಿಲ್ಲಸ್ ಎಂದು ಕರೆಯುತ್ತಾರೆ. ಇಂತಹ ಸುಮಾರು ಮೂವತ್ತು ಲಕ್ಷ ವಿಲ್ಲಸ್ ಗಳು ಸಣ್ಣಕರುಳಿನಲ್ಲಿವೆ. ಆಹಾರ ಜೀರ್ಣವಾಗುವ ಪ್ರಕ್ರಿಯೆಯಲ್ಲಿ ಇವುಗಳದ್ದು ಮಹತ್ತರ ಪಾತ್ರ. ಇಂತಹ ಪ್ರತಿಯೊಂದು ವಿಲ್ಲಸ್ ಪುನಃ ಬೆರಳಿನಾಕಾರದ ಅಸಂಖ್ಯಾತ ಸಣ್ಣ ಉಬ್ಬುಗಳನ್ನು ಹೊಂದಿದೆ. ಇವನ್ನು ಮೈಕ್ರೊವಿಲ್ಲಸ್ ಎನ್ನುತ್ತಾರೆ. ಈ ಮೈಕ್ರೊವಿಲ್ಲಸ್ ಗಳ ಒಟ್ಟು ಸಂಖ್ಯೆ ಸುಮಾರು ಇಪ್ಪತೈದು ಲಕ್ಷ ಕೋಟಿ! ಅಂದರೆ 25ರ ನಂತರ ಹನ್ನೆರಡು ಸೊನ್ನೆಗಳು! ನಾವು ಬೇಕಾಬಿಟ್ಟಿ ತಿನ್ನುವ ಆಹಾರವನ್ನು ಪಚಿಸಿ, ರಕ್ತದಲ್ಲಿ ಸೇರಿಸಲು ನಡೆಯುವ ಹರಸಾಹಸ ಸಾಮಾನ್ಯದ್ದಲ್ಲ. ಈ ಎಲ್ಲಾ ಮೈಕ್ರೊವಿಲ್ಲಸ್ ಸೇರಿ ದಿನವೊಂದಕ್ಕೆ ಸುಮಾರು ಏಳೂವರೆ ಲೀಟರ್ ದ್ರವವನ್ನು ಸೆಳೆದುಕೊಳ್ಳಬಲ್ಲ ಸಾಮರ್ಥ್ಯ ಹೊಂದಿವೆ. ಇದು ನಾವು ಸೇವಿಸುವ ದ್ರವಾಹಾರ, ನೀರು, ಶರೀರದಲ್ಲಿ ಉತ್ಪತ್ತಿಯಾಗುವ ಅನೇಕಾನೇಕ ಸ್ರವಿಕೆಗಳು ಮೊದಲಾದುವುಗಳ ಒಟ್ಟು ಮೊತ್ತ.

ಪ್ರತಿದಿನವೂ ಸಣ್ಣಕರುಳು ಸುಮಾರು ಒಂದೂವರೆ ಲೀಟರ್ ನಷ್ಟು ಪ್ರತ್ಯಾಮ್ಲಯುಕ್ತ ರಸವನ್ನು ಸ್ರವಿಸುತ್ತದೆ. ಇದರಿಂದ ಕರುಳಿನ ಆಮ್ಲೀಯ ವಾತಾವರಣ ಶಮನವಾಗುತ್ತದೆ. ಈ ಪ್ರಮಾಣ ಕಡಿಮೆಯಾದರೆ ಹೊಟ್ಟೆ ಉಬ್ಬರವಾದ ಅನುಭವವಾಗುತ್ತದೆ. ಅನೇಕರು ದೂರುವ ಗ್ಯಾಸ್ಸಮಸ್ಯೆಗೆ ಇದೂ ಒಂದು ಕಾರಣ.

ಆಹಾರ ಪಚನದ ಸಮಯದಲ್ಲಿ ಸಣ್ಣಕರುಳು ನಿರಂತರವಾಗಿ ಜೀರ್ಣವಾದ ಆಹಾರವನ್ನು ಅಲೆಯ ಮಾದರಿಯ ಸಂಕೋಚನ-ವಿಕಚನ ಪ್ರಕ್ರಿಯೆ ಬಳಸಿ ಮುಂದೆ ದೂಡುತ್ತದೆ. ಅಗತ್ಯಕ್ಕೆ ತಕ್ಕಂತೆ ಈ ಅಲೆಗಳು ನಿಮಿಷಕ್ಕೆ 8 ರಿಂದ 12 ಬಾರಿ ಸಂಭವಿಸುತ್ತವೆ. ಜಠರದಿಂದ ಸಣ್ಣಕರುಳಿನ ಆರಂಭಕ್ಕೆ ಇಳಿದ ಆಹಾರ ಸುಮಾರು 90 ರಿಂದ 120 ನಿಮಿಷಗಳ ಅವಧಿಯಲ್ಲಿ ಸಣ್ಣಕರುಳಿನ ಕೊನೆಯ ಭಾಗದಿಂದ ದೊಡ್ಡಕರುಳಿಗೆ ನಿರ್ಗಮಿಸುತ್ತದೆ.

ಆಹಾರದ ಅಂಶಗಳಾದ ಪಿಷ್ಟ, ಪ್ರೋಟೀನು, ಮತ್ತು ಮೇದಸ್ಸಿನ ಪಚನಕ್ಕಾಗಿ ಮೂರು ಮುಖ್ಯ ಗುಂಪುಗಳ ಕಿಣ್ವಗಳು (enzymes) ಸಣ್ಣಕರುಳಿನಲ್ಲಿ ಪಾತ್ರ ವಹಿಸುತ್ತವೆ. ಪಿಷ್ಟದ ಪಚನಕ್ಕೆ ನಾಲ್ಕು ಗುಂಪಿನ ಕಿಣ್ವಗಳಿದ್ದರೆ, ಮೇದಸ್ಸು ಮತ್ತು ಪ್ರೋಟೀನುಗಳಿಗೆ ತಲಾ ಒಂದು ಗುಂಪಿನ ಕಿಣ್ವಗಳಿವೆ. ಇದರಲ್ಲಿ ಯಾವುದೇ ಒಂದು ಕಿಣ್ವದ ಕೊರತೆಯಾದರೂ ಅಂತಹ ಆಹಾರವನ್ನು ಶರೀರ ಸರಿಯಾಗಿ ಜೀರ್ಣಿಸಿಕೊಳ್ಳಲಾಗದು. ಉದಾಹರಣೆಗೆ, ಹಾಲಿನಲ್ಲಿ ಇರುವ ಲ್ಯಾಕ್ಟೋಸ್ ಎನ್ನುವ ಸಕ್ಕರೆಯ ಅಂಶವನ್ನು ಲ್ಯಾಕ್ಟೇಸ್ ಎನ್ನುವ ಕಿಣ್ವ ನಿಭಾಯಿಸುತ್ತದೆ. ಒಂದು ವೇಳೆ ಈ ಕಿಣ್ವ ಶರೀರದಲ್ಲಿ ಉತ್ಪತ್ತಿ ಆಗದಿದ್ದರೆ, ಅಂತಹವರು ಲ್ಯಾಕ್ಟೋಸ್ ಸಕ್ಕರೆಯನ್ನು ಜೀರ್ಣಿಸಿಕೊಳ್ಳಲಾರರು. ಅಜೀರ್ಣಕ್ಕೆ ಸಿಲುಕಿದ ಲ್ಯಾಕ್ಟೋಸ್ ಸಕ್ಕರೆ ಕರುಳಿನ ಬ್ಯಾಕ್ಟೀರಿಯಾ ಹೊಡೆತಕ್ಕೆ ಸಿಲುಕಿ ದೊಡ್ಡ ಪ್ರಮಾಣದ ಅತಿಸಾರ ಸಂಭವಿಸುತ್ತದೆ ಮತ್ತು ಗ್ಯಾಸ್ ಉತ್ಪತ್ತಿಯಾಗುತ್ತದೆ. ಹೀಗಾಗಿ, ಇಂತಹ ಕಾಯಿಲೆ ಇರುವವರು ಹಾಲಿನ ಉತ್ಪನ್ನಗಳನ್ನೂ ಸೇವಿಸುವಂತಿಲ್ಲ.

ದೊಡ್ಡಕರುಳಿನ ಮುಖ್ಯ ಕಾರ್ಯ ಈಗಾಗಲೇ ಪಚನವಾದ ಆಹಾರದಲ್ಲಿ ಅಳಿದುಳಿದ ಪೋಷಕಾಂಶಗಳು ಹಾಗೂ ನೀರಿನ ಅಂಶವನ್ನು ಹೀರಿಕೊಳ್ಳುವುದು ಮತ್ತು ತ್ಯಾಜ್ಯವನ್ನು ಸುರಕ್ಷಿತವಾಗಿ ದೇಹದಿಂದ ಹೊರಹಾಕುವುದು. ಇದರಲ್ಲಿ ನಾಲ್ಕು ಭಾಗಗಳಿವೆ. ಸಣ್ಣಕರುಳಿಗೆ ಹೊಂದಿಕೊಂಡಿರುವ ಎರಡೂವರೆ ಇಂಚು ಗಾತ್ರದ ಸೀಕಮ್; ಸಣ್ಣಕರುಳನ್ನು ಮಾಲೆಯಂತೆ ಸುತ್ತುವರೆದಿರುವ ನಾಲ್ಕು ಅಡಿ ಉದ್ದದ ಕೋಲನ್; ಮಲದ ಭಾಗವನ್ನು ನಿಯಂತ್ರಿಸುವ ಎಂಟು ಇಂಚು ಉದ್ದದ ರೆಕ್ಟಮ್ ಮತ್ತು ಒಂದೂವರೆ ಇಂಚು ಉದ್ದದ ಮಲದ್ವಾರ. ಈ ಅಂತಿಮ ಭಾಗದಲ್ಲಿ ಎರಡು ನಿಯಂತ್ರಕ ಸ್ನಾಯುಗಳಿವೆ. ಮಲವಿಸರ್ಜನೆಯನ್ನು ನಿಯಂತ್ರಿಸುವಲ್ಲಿ ಇವು ನೆರವಾಗುತ್ತವೆ. ಈ ಎಲ್ಲ ಕೆಲಸಗಳಿಗಾಗಿ ಮೂರು ಬಗೆಯ ಸಂಕೋಚನ-ವಿಕಚನ ಅಲೆಗಳು ದೊಡ್ಡಕರುಳಿನಲ್ಲಿವೆ. ಸಣ್ಣಕರುಳಿನಿಂದ ಬರುವ ಆಹಾರದ ಶೇಕಡಾ 80 ಭಾಗವನ್ನು ದೊಡ್ಡಕರುಳು ಸೆಳೆದುಕೊಳ್ಳುತ್ತದೆ. ಉಳಿದ ಶೇಕಡಾ 20 ಮಲವಾಗಿ ಹೊರಬೀಳುತ್ತದೆ.

ಕರುಳಿನಲ್ಲಿ ಶರೀರಕ್ಕೆ ಅಗತ್ಯವಾದ ಬ್ಯಾಕ್ಟೀರಿಯಾಗಳ ಮತ್ತೊಂದು ಪ್ರಪಂಚವಿದೆ. ಒಂದು ವ್ಯಕ್ತಿಯ ಕರುಳಿನಲ್ಲಿ ಇರಬಹುದಾದ ಒಟ್ಟು ಬ್ಯಾಕ್ಟೀರಿಯಾಗಳ ಪ್ರಭೇದಗಳು ಸುಮಾರು 700; ಎಲ್ಲ ಬಗೆಯ ಬ್ಯಾಕ್ಟೀರಿಯಾಗಳ ಒಟ್ಟಾರೆ ಸಂಖ್ಯೆ ಸುಮಾರು ನೂರು ಲಕ್ಷ ಕೋಟಿ! ಅಂದರೆ, 1 ರ ನಂತರ 14 ಸೊನ್ನೆಗಳು! ಇಡೀ ಮಾನವ ದೇಹದಲ್ಲಿರುವ ಎಲ್ಲ ಜೀವಕೋಶಗಳ ಸಂಖ್ಯೆಗಿಂತಲೂ ಕರುಳಿನಲ್ಲಿರುವ ಬ್ಯಾಕ್ಟೀರಿಯಾಗಳ ಸಂಖ್ಯೆ ಹತ್ತು ಪಟ್ಟು ಹೆಚ್ಚು. ನಮ್ಮ ಇಡೀ ಶರೀರವನ್ನು ನಿರ್ಧರಿಸುವುದು ಸುಮಾರು 20,000 ಜೀನ್ಗಳಾದರೆ, ಈ ಕೋಟ್ಯನುಕೋಟಿ ಬ್ಯಾಕ್ಟೀರಿಯಾಗಳಲ್ಲಿನ ಒಟ್ಟಾರೆ ಜೀನ್ಗಳ ಸಂಖ್ಯೆ ಸುಮಾರು ಇಪ್ಪತ್ತು ಕೋಟಿ. ನೀನು ಮಾಯೆಯೊಳಗೊ; ನಿನ್ನೊಳು ಮಾಯೆಯೋಎನ್ನುವ ಕನಕದಾಸರ ರಚನೆಯಂತೆ, ನಾವು ಬ್ಯಾಕ್ಟೀರಿಯಾದೊಳಗೊ; ನಮ್ಮೊಳು ಬ್ಯಾಕ್ಟೀರಿಯಾವೋಎನ್ನುವ ಜಿಜ್ಞಾಸೆ ಕಾಡುತ್ತದೆ. ಡುಯೊಡೆನಮ್ನಿಂದ ಆರಂಭಿಸಿ ಕರುಳಿನ ಉದ್ದಕ್ಕೂ ಮುಂದೆ ಸಾಗಿದಂತೆಲ್ಲಾ ಬ್ಯಾಕ್ಟೀರಿಯಾಗಳ ಸಂಖ್ಯೆ ಹೆಚ್ಚುತ್ತಾ ಹೋಗುತ್ತದೆ. ಸಣ್ಣಕರುಳಿನಲ್ಲಿ ಕಡಿಮೆ ಸಂಖ್ಯೆಯಲ್ಲಿರುವ ಬ್ಯಾಕ್ಟೀರಿಯಾಗಳು ದೊಡ್ಡಕರುಳಿನಲ್ಲಿ ಅಗಾಧ ಪ್ರಮಾಣಕ್ಕೆ ಏರುತ್ತವೆ. ಇಡೀ ಕರುಳು ಮತ್ತು ತಕ್ಕ ಮಟ್ಟಿಗೆ ನಮ್ಮ ದೇಹದ ಕೆಲಸಗಳ ಜೊತೆಗೆ ಈ ಬ್ಯಾಕ್ಟೀರಿಯಾಗಳ ಪರಸ್ಪರ ಅವಲಂಬನೆಯಿದೆ. ಮಗುವಿನ ಜನನದ ವೇಳೆ ಕರುಳಿನ ಬ್ಯಾಕ್ಟೀರಿಯಾಗಳ ಸಂಖ್ಯೆ ನಗಣ್ಯ. ಆದರೆ, ಮಗು ಎರಡೂವರೆ ವರ್ಷಗಳ ವಯಸ್ಸಾಗುವುದರೊಳಗೆ ವಯಸ್ಕರ ಶರೀರದಲ್ಲಿ ಇರುವ ಪ್ರಮಾಣದ ಬ್ಯಾಕ್ಟೀರಿಯಾಗಳು ಮಗುವಿನ ಕರುಳಿನಲ್ಲೂ ತುಂಬಿಕೊಳ್ಳುತ್ತವೆ. ಈ ಬ್ಯಾಕ್ಟೀರಿಯಾಗಳು ಜೀವನದುದ್ದಕ್ಕೂ ನೋವು-ನಲಿವುಗಳಲ್ಲಿ ನಮ್ಮ ಸಹಭಾಗಿ. ಈಚೆಗೆ ನಮ್ಮ ನೋವು-ನಲಿವುಗಳಿಗೆ ಈ ಬ್ಯಾಕ್ಟೀರಿಯಾಗಳೆ ಕಾರಣವಿರಬಹುದು ಎನ್ನುವ ತರ್ಕವೂ ಇದೆ. ಕರುಳಿನಲ್ಲಿ ಇವೆಲ್ಲದರ ಜೊತೆಗೆ ಅದರದ್ದೇ ಆದ ನರವ್ಯೂಹವೂ ಇದೆ. ಅದು ಮತ್ತೊಂದು ಲೇಖನದ ವಸ್ತು.

ಕರುಳಿನ ಗಣಿತ ಅದರ ವಿಸ್ತೀರ್ಣದಷ್ಟೇ ಅಗಾಧವಾದದ್ದು. ಒಂದು ಲೇಖನದಲ್ಲಿ ಅದರ ಹರಹನ್ನು ಕಾಣಿಸುವುದು ಸಾಹಸದ ಮಾತೇ ಸರಿ.      

-----------------------------

ಕುತೂಹಲಿ ವಿಜ್ಞಾನ ಮಾಸಪತ್ರಿಕೆಯ ಮೇ 2023 ರ ಸಂಚಿಕೆಯಲ್ಲಿ ಪ್ರಕಟವಾದ ಲೇಖನ. ಕುತೂಹಲಿಯ ಮೇ 2023 ರ ಸಂಚಿಕೆಯನ್ನು ಓದಲು ಕೊಂಡಿ: https://flipbookpdf.net/web/site/afda93b6fc08a1715fc03464c3eb21c90cd44337202305.pdf.html