ಭಾನುವಾರ, ಏಪ್ರಿಲ್ 9, 2023

 

ಯಕೃತ್ತಿನ ಗಣಿತ

ಡಾ. ಕಿರಣ್ ವಿ.ಎಸ್.

ವೈದ್ಯರು

ಮಾನವ ದೇಹದಲ್ಲಿ ಒಟ್ಟು 78 ವಿವಿಧ ಅಂಗಗಳಿವೆ. ಇವುಗಳಲ್ಲಿ ಮಿದುಳು, ಹೃದಯ, ಶ್ವಾಸಕೋಶಗಳು, ಯಕೃತ್, ಮತ್ತು ಮೂತ್ರಪಿಂಡಗಳೆಂಬ ಐದು ಅಂಗಗಳು ಪ್ರಮುಖವಾದುವು. ಪ್ರಮುಖವೇಕೆಂದರೆ, ಈ ಐದೂ ಅಂಗಗಳ ಪೈಕಿ ಯಾವುದಾದರೂ ಒಂದು ಕೆಲ ನಿಮಿಷಗಳ ಕಾಲ ಸಂಪೂರ್ಣವಾಗಿ ಸ್ತಬ್ಧವಾದರೆ ಜೀವನ ಅಲ್ಲಿಗೆ ಮುಗಿಯುತ್ತದೆ. ಉಳಿದ ಅಂಗಗಳು ಹಾಗಲ್ಲ. ಉದಾಹರಣೆಗೆ ಕಣ್ಣು ಕಾಣದೆ ಹೋದರೆ, ರುಚಿ ತಿಳಿಯದೆ ಹೋದರೆ ಬದುಕು ಕಷ್ಟವಾಗಬಹುದೇ ಹೊರತು, ಪ್ರಾಣಕ್ಕೆ ನೇರವಾಗಿ ಅಪಾಯವಿಲ್ಲ.

ಈ ಐದೂ ಪ್ರಮುಖ ಅಂಗಗಳ ಪೈಕಿ ಯಕೃತ್ ದೊಡ್ದದು. ಇದು ಶರೀರದ ಎರಡನೆಯ ದೊಡ್ಡ ಅಂಗ. ಬೆನ್ನುಮೂಳೆ ಇರುವ ಕಶೇರುಕ ಜೀವಿಗಳಲ್ಲಿ ಮಾತ್ರ ಕಾಣುವ ಯಕೃತ್, ನಮ್ಮ ಶರೀರದ ರಾಸಾಯನಿಕ ಕಾರ್ಖಾನೆ. ಮಾನವ ಯಕೃತ್ತಿನ ತೂಕ ಸುಮಾರು ಒಂದೂವರೆ ಕಿಲೋಗ್ರಾಂ. ಎದೆ ಮತ್ತು ಹೊಟ್ಟೆಯ ಭಾಗವನ್ನು ವಪೆ (diaphragm) ಎನ್ನುವ ಮಾಂಸದ ಪಟ್ಟಿಯೊಂದು ಪ್ರತ್ಯೇಕಿಸುತ್ತದೆ. ವಪೆಗೆ ಆತುಕೊಂಡು ಹೊಟ್ಟೆಯ ಪ್ರದೇಶದ ಬಲಭಾಗದಲ್ಲಿ ಇರುವುದು ಯಕೃತ್. ಸುಮಾರು 500 ವಿವಿಧ ಬಗೆಯ ಕೆಲಸಗಳನ್ನು ಯಕೃತ್ ನಿಭಾಯಿಸುತ್ತದೆ ಎಂದು ತಜ್ಞರ ಅಂದಾಜು. ಇಷ್ಟು ಪರಿಯ ಕೆಲಸಗಳನ್ನು ಮಾಡುವ ಮತ್ತೊಂದು ಅಂಗ ನಮ್ಮ ದೇಹದಲ್ಲಿಲ್ಲ.

ಮಿದುಳು ನಿಷ್ಕ್ರಿಯವಾದರೆ ಜೀವನಕ್ಕೆ ಭವಿಷ್ಯವಿಲ್ಲ. ಆದರೆ, ಅಂತಹವರನ್ನೂ ಕೃತಕ ಉಸಿರಾಟದ ಮೂಲಕ ಉಳಿದ ಅಂಗಗಳು ಸುಸ್ಥಿತಿಯಲ್ಲಿರುವವರೆಗೆ ಜೀವಂತ ಇಡಬಹುದು. ಹೃದಯ ಕೆಟ್ಟರೆ ಸಣ್ಣ ಮೋಟಾರಿನಂತಹ ಸಲಕರಣೆಗಳನ್ನು ದೇಹದಲ್ಲಿ ಅಳವಡಿಸಿ, ಹೃದಯದ ಕಾರ್ಯಕ್ಕೆ ಪರ್ಯಾಯ ಒದಗಿಸುವ ಸೌಲಭ್ಯವಿದೆ. ಮೂತ್ರಪಿಂಡಗಳ ವೈಫಲ್ಯಕ್ಕೆ ಡಯಾಲಿಸಿಸ್ ಮಾಡಿಸಬಹುದು. ಶ್ವಾಸಕೋಶಗಳ ಕೆಲಸವನ್ನು ಉಸಿರಾಟ ನೀಡುವ ಕೃತಕ ಯಂತ್ರಗಳು ಮಾಡಬಲ್ಲವು. ಹೀಗೆ, ಯಂತ್ರಗಳು ಪ್ರಮುಖ ಅಂಗಗಳಿಗೆ ಬದಲಿಯಾಗಿ ಬಳಕೆಯಾಗುತ್ತಿವೆ. ಆದರೆ ಯಕೃತ್ತಿನ ಕೆಲಸಕ್ಕೆ ಯಾವುದೇ ಯಂತ್ರದ ಪರ್ಯಾಯವಿಲ್ಲ. ಅದು ಅಗಾಧ ಸಾಮರ್ಥ್ಯದ, ಅಷ್ಟೇ ಕರಾರುವಾಕ್ಕಾದ ನೂರಾರು ಕೆಲಸಗಳನ್ನು ನಿರ್ವಹಿಸುವ ಅಚ್ಚರಿಯ ಅಂಗ. ಅದು ಮಾಡುವಷ್ಟು ಕೆಲಸಗಳನ್ನು ಮಾಡಲು ಕನಿಷ್ಠ ಐವತ್ತು ವಿವಿಧ ಯಂತ್ರಗಳಾದರೂ ಬೇಕಾದೀತು. ಅಷ್ಟಾದರೂ ಅದರ ನೈಜ ಸಾಮರ್ಥ್ಯಕ್ಕೆ ಈ ಎಲ್ಲ ಯಂತ್ರಗಳು ಸೇರಿಯೂ ಸಾಟಿಯಾಗಲಾರವು. ಯಕೃತ್ ಕೆಟ್ಟರೆ ಸಾಧ್ಯವಾದಷ್ಟೂ ಬೇಗ ದಾನಿಯೊಬ್ಬರಿಂದ ಪಡೆದ ಯಕೃತ್ತಿನ ಕಸಿ ಮಾಡುವುದೊಂದೇ ದಾರಿ.

ಯಕೃತ್ತಿನಲ್ಲಿ ನಾಲ್ಕು ಭಾಗಗಳಿವೆ, ಯಕೃತ್ ತಜ್ಞರು ಇದನ್ನು ಮತ್ತಷ್ಟು ವಿಭಾಗಿಸಿ ಎಂಟು ಭಾಗಗಳನ್ನು ಗುರುತಿಸುತ್ತಾರೆ. ಯಕೃತ್ತಿನ ಸಮಸ್ಯೆಗಳ ನಿರ್ವಹಣೆಯಲ್ಲಿ ಹೀಗೆ ಸಣ್ಣ ಭಾಗಗಳನ್ನು ಗುರುತಿಸುವುದು ಸಹಕಾರಿ. ಸೂಕ್ಷ್ಮದರ್ಶಕ ಯಂತ್ರದ ಮೂಲಕ ನೋಡಿದರೆ ಇಡೀ ಯಕೃತ್ತಿನಲ್ಲಿ ಸುಮಾರು ಹತ್ತು ಲಕ್ಷ ಸಣ್ಣ ಷಡ್ಭುಜಾಕಾರದ (hexagon) ರಚನೆಗಳು ಕಾಣುತ್ತವೆ. ಇಂತಹ ಪ್ರತಿಯೊಂದು ರಚನೆಯಲ್ಲಿಯೂ ಸುಮಾರು 5000 ಕೋಶಗಳಿವೆ. ಇದರ ಜೊತೆಗಿರುವ ಇತರ ಬಗೆಯ ಕೋಶಗಳೂ ಸೇರಿದರೆ ಯಕೃತ್ತಿನಲ್ಲಿರುವ ಒಟ್ಟು ಜೀವಕೋಶಗಳ ಸಂಖ್ಯೆ ಅಂದಾಜು 3000 ಕೋಟಿ!

ಇಡೀ ಮಾನವ ಶರೀರದಲ್ಲಿನ ಜೀವಕೋಶಗಳನ್ನು ನಿರ್ವಹಿಸುವ ಸುಮಾರು 20,000 ಜೀನ್ ಗಳನ್ನು ಗುರುತಿಸಲಾಗಿದೆ. ಇವುಗಳ ಪೈಕಿ 12,000 ಜೀನ್ ಗಳು ಕೇವಲ ಯಕೃತ್ತಿನ ನಿರ್ವಹಣೆಗೆ ಮೀಸಲಾಗಿವೆ ಎಂದರೆ ಅದರ ಕಾರ್ಯವೈವಿಧ್ಯವನ್ನು ಊಹಿಸಬಹುದು. ಭ್ರೂಣದ ಹಂತದಲ್ಲಿ ಮೂರನೆಯ ವಾರದ ಸುಮಾರಿಗೆ ಕೆಲಸ ಆರಂಭಿಸುವ ಯಕೃತ್, ಜೀವಮಾನವಿಡೀ ಕೆಲಸ ಮಾಡುತ್ತಲೇ ಇರುತ್ತದೆ. ಗರ್ಭಸ್ಥ ಶಿಶುವಿನಲ್ಲಿ ಯಕೃತ್ ರಕ್ತವನ್ನು ಉತ್ಪಾದಿಸುವ ಕೆಲಸವನ್ನು ಮಾಡುತ್ತದೆ. ನಂತರ ಈ ಕೆಲಸದ ಹೊಣೆ ಎಲುಬಿನ ನೆಣದ (bone marrow) ಪಾಲಾಗುತ್ತದೆ. ಮಗುವಿನ ಜನನದ ನಂತರ ಯಕೃತ್ತಿನ ಅಸಲಿ ಕೆಲಸ ಆರಂಭವಾಗುತ್ತದೆ. ಶರೀರದ ಸುಮಾರು 20 ಪ್ರತಿಶತ ಆಕ್ಸಿಜನ್ ಯಕೃತ್ತಿನ ಕೆಲಸಕ್ಕೆ ಬೇಕಾಗುತ್ತದೆ. ಮಿದುಳನ್ನು ಹೊರತುಪಡಿಸಿದರೆ ಆಕ್ಸಿಜನ್ ಬಳಸಿಕೊಳ್ಳುವ ಅಂಗಗಳ ಪೈಕಿ ಯಕೃತ್ ಮುಂಚೂಣಿಯಲ್ಲಿದೆ.

ಯಕೃತ್ತಿನ ಮುಖ್ಯ ಕಾರ್ಯ ನಾವು ಸೇವಿಸುವ ಆಹಾರದ ಚಯಾಪಚಯ (metabolism). ಆಹಾರದ ಪಿಷ್ಠದ ಭಾಗ, ಜಿಡ್ಡಿನ ಭಾಗ, ಪ್ರೋಟೀನಿನ ಭಾಗಗಳ ನಿರ್ವಹಣೆಯಲ್ಲಿ ಮಹತ್ವದ ಪ್ರಮಾಣ ಯಕೃತ್ತಿನದ್ದು. ದೇಹದ ಬಹುತೇಕ ಅಂಗಗಳು ತಮ್ಮ ಶಕ್ತಿಗಾಗಿ ಗ್ಲುಕೋಸ್ ಎನ್ನುವ ಸಕ್ಕರೆಯ ಮೇಲೆ ಅವಲಂಬಿತವಾಗಿವೆ. ಶರೀರಕ್ಕೆ ಅಧಿಕ ಪ್ರಮಾಣದ ಗ್ಲುಕೋಸ್ ಲಭ್ಯವಾದಾಗ ಅದನ್ನು ಯಕೃತ್ ಗ್ಲೈಕೋಜನ್ ಎನ್ನುವ ಸಂಕೀರ್ಣ ರಾಸಾಯನಿಕಕ್ಕೆ ಬದಲಾಯಿಸಿ, ತನ್ನೊಳಗೆ ಸಂಗ್ರಹಿಸುತ್ತದೆ. ದೇಹದ ಅಂಗಗಳಿಗೆ ಗ್ಲುಕೋಸಿನ ಅಗತ್ಯ ಬಂದಾಗ ಈ ಗ್ಲೈಕೋಜನ್ ಮತ್ತೆ ಗ್ಲುಕೋಸ್ ಆಗಿ ರೂಪಾಂತರಗೊಂಡು ಕೆಲಸಕ್ಕೆ ಬರುತ್ತದೆ. ಸುಮಾರು 100 ಗ್ರಾಂ ಗ್ಲೈಕೋಜನ್ ಸಂಗ್ರಹದ ಸಾಮರ್ಥ್ಯ ಯಕೃತ್ತಿಗಿದೆ. ಪ್ರೋಟೀನ್ ಉತ್ಪಾದನೆಯಲ್ಲಿ ಯಕೃತ್ತಿನ ಪಾತ್ರ ಹಿರಿದು. ರಕ್ತದಲ್ಲಿ ಕಾಣುವ ಬಹುತೇಕ ಪ್ರೋಟೀನುಗಳು, ಅಮೈನೊ ಆಮ್ಲಗಳ ತಯಾರಿಕೆ ಯಕೃತ್ತಿನಲ್ಲಿಯೇ ಆಗುತ್ತದೆ. ರಕ್ತ ಹೆಪ್ಪುಗಟ್ಟಲು ಮತ್ತು ಪುನಃ ಹೆಪ್ಪು ಕರಗಲು ನೆರವಾಗುವ ಅಂಶಗಳು ಯಕೃತ್ತಿನಲ್ಲಿ ರೂಪುಗೊಳ್ಳುತ್ತವೆ. ದೇಹಕ್ಕೆ ಅಗತ್ಯವಾದ ಕೊಲೆಸ್ಟ್ರಾಲ್ ಮತ್ತಿತರ ಜಿಡ್ಡಿನ ಅಂಶಗಳು ಯಕೃತ್ತಿನ ಕೊಡುಗೆ. ಇವೇ ಅಲ್ಲದೆ ಕೆಲವು ಹಾರ್ಮೋನುಗಳು ಕೂಡ ಯಕೃತ್ತಿನಲ್ಲಿ ಉತ್ಪತ್ತಿಯಾಗುತ್ತವೆ. ಯಾವುದೇ ಕಾಲದಲ್ಲೂ ಶರೀರದ ಶೇಕಡಾ 10 ರಷ್ಟು ರಕ್ತ ಯಕೃತ್ತಿನಲ್ಲಿ ಇರುತ್ತದೆ. ಇದಲ್ಲದೇ, ಇನ್ನಷ್ಟು 5-10 ಪ್ರತಿಶತ ರಕ್ತವನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಯಕೃತ್ತಿಗಿದೆ. ಸಾಲದ್ದಕ್ಕೆ ಶರೀರಕ್ಕೆ ಅಗತ್ಯವಾದ ಅನೇಕ ಬಗೆಯ ವಿಟಮಿನ್ ಮತ್ತು ಲೋಹಗಳ ಸಂಗ್ರಹಾಗಾರ ಯಕೃತ್. ಜೊತೆಗೆ ಜಿಡ್ಡಿನ ಅಂಶವನ್ನು ಪಚನ ಮಾಡುವ ಪಿತ್ತವನ್ನು ಯಕೃತ್ ತಯಾರಿಸುತ್ತದೆ. ಒಂದು ದಿನದಲ್ಲಿ ಸುಮಾರು ಮುಕ್ಕಾಲು ಲೀಟರ್ ಪಿತ್ತರಸವನ್ನು ಯಕೃತ್ ಉತ್ಪಾದಿಸುತ್ತದೆ. ಮಲಕ್ಕೆ ಅದರ ಬಣ್ಣವನ್ನು ನೀಡುವುದೂ ಯಕೃತ್ತಿನ ಕೆಲಸವೇ. ಒಂದು ವೇಳೆ ಯಕೃತ್ತಿನ ಕೆಲಸದಲ್ಲಿ ಏರುಪೇರಾದರೆ ಮಲದ ಬಣ್ಣವೂ ಬದಲಾಗುತ್ತದೆ.

ಗ್ರೀಕ್ ಮಿಥಕಗಳಲ್ಲಿ ಪ್ರೊಮಿಥಿಯಸ್ ನ ಕತೆಯಿದೆ. ದೇವತೆಗಳಿಂದ ಬೆಂಕಿಯನ್ನು ಕದ್ದು ಮಾನವರಿಗೆ ನೀಡಿದ ಕಾರಣಕ್ಕೆ ಝ್ಯೂಸ್ ದೇವನ ಶಾಪಕ್ಕೆ ಆತ ಒಳಗಾಗುತ್ತಾನೆ. ಕಾಕಸಸ್ ಪರ್ವತದ ಮೇಲೆ ಸರಪಣಿಗಳಿಂದ ಬಂಧಿತನಾದ ಆತನ ಯಕೃತ್ತನ್ನು ದಿನವೂ ಒಂದು ಹದ್ದು ಕುಟುಕಿ ತಿನ್ನುತ್ತದೆ. ಮರುದಿನದ ವೇಳೆಗೆ ಆತನ ಯಕೃತ್ ಬೆಳೆದು ಸಹಜ ಸ್ಥಿತಿಗೆ ಬರುತ್ತದೆ. ಮತ್ತೊಮ್ಮೆ ಹದ್ದು ಬಂದು ಅದೇ ಕೆಲಸ ಮಾಡುತ್ತದೆ. ಈ ಕತೆ ಯಕೃತ್ತಿನ ಪುನರ್ನಿರ್ಮಾಣದ ಅಗಾಧ ಸಾಮರ್ಥ್ಯಕ್ಕೆ ನಿದರ್ಶನ. ವೈಜ್ಞಾನಿಕವಾಗಿ ಯಕೃತ್ತಿನ ಶೇಕಡಾ 25 ರಷ್ಟು ಭಾಗ ಉಳಿದಿದ್ದರೂ ಅದು ಕೋಶಗಳ ಸಾಮರ್ಥ್ಯವನ್ನು ವೃದ್ಧಿಸುತ್ತಾ ಕೆಲಸದ ದೃಷ್ಟಿಯಿಂದ ಇಡೀ ಯಕೃತ್ತಿನ ಪಾತ್ರವನ್ನು ನಿರ್ವಹಿಸಬಲ್ಲದು.

ನಮ್ಮ ಶರೀರವನ್ನು ಹೊರಗಿನಿಂದ ಸೇರುವ ಮತ್ತು ಶರೀರದೊಳಗೆ ಉತ್ಪತ್ತಿಯಾಗುವ ಹಲವಾರು ವಿಷಯುಕ್ತ ವಸ್ತುಗಳನ್ನು ರಾಸಾಯನಿಕ ಪ್ರಕ್ರಿಯೆಗಳ ಮೂಲಕ ವಿಷಮುಕ್ತವಾಗಿಸುವ ಪ್ರಮುಖ ಹೊಣೆ ಯಕೃತ್ತಿನದ್ದು. ಯಾವುದೇ ಕಾರಣಕ್ಕೂ ಯಕೃತ್ತಿನ ಈ ಸಾಮರ್ಥ್ಯಕ್ಕೆ ಕುಂದು ಉಂಟಾದರೆ ಆ ವಿಷಗಳು ರಕ್ತವನ್ನು ಸೇರಿ ಮಿದುಳನ್ನು ಪ್ರವೇಶಿಸಿ ಮಾನಸಿಕ ವಿಕಾರಗಳನ್ನು ಉಂಟುಮಾಡಬಲ್ಲವು. ಹೀಗಾಗಿ ಮಾನಸಿಕ ಚಿಕಿತ್ಸೆಯ ಮುನ್ನ ಯಕೃತ್ತಿನ ಪರಿಸ್ಥಿತಿಯನ್ನು ತಜ್ಞರು ಪರೀಕ್ಷಿಸುತ್ತಾರೆ. ಯಾವುದೇ ಅನಾರೋಗ್ಯದ ವೇಳೆ ಪ್ರಯೋಗಾಲಯಗಳಲ್ಲಿ ಪರೀಕ್ಷಿಸುವ ರಕ್ತ, ಮೂತ್ರ ಮೊದಲಾವುಗಳ ತಪಾಸಣೆಯ ಪ್ರಮುಖ ಅಂಶಗಳ ಹಿಂದೆ ಯಕೃತ್ತಿನ ಆರೋಗ್ಯದ ಹಿನ್ನೆಲೆಯಿರುತ್ತದೆ.

ರಕ್ತ ನಮ್ಮ ದೇಹದ ಜೀವದ್ರವ. ಗಾಯಗಳಿಂದ, ಘಾಸಿಗಳಿಂದ ಹೆಚ್ಚು ರಕ್ತ ಪೋಲಾಗದಂತೆ ತಡೆಯಲು ಅದನ್ನು ಕೂಡಲೇ ಹೆಪ್ಪುಗಟ್ಟಿಸುವ ವ್ಯವಸ್ಥೆ ನಮ್ಮ ಶರೀರದಲ್ಲಿದೆ. ಹೀಗೆ ರಕ್ತ ಹೆಪ್ಪುಗಟ್ಟಲು ಸುಮಾರು 13 ವಿವಿಧ ರಾಸಾಯನಿಕಗಳು ಪಾತ್ರ ವಹಿಸುತ್ತವೆ. ಈ 13 ರ ಪೈಕಿ ಒಂಬತ್ತು ರಾಸಾಯನಿಕಗಳ ಜನಕ ಯಕೃತ್. ಜೊತೆಗೆ, ಹೆಪ್ಪುಗಟ್ಟಿದ ರಕ್ತವನ್ನು ಕರಗಿಸುವ ರಾಸಾಯನಿಕಗಳು ಕೂಡ ಯಕೃತ್ತಿನಲ್ಲಿಯೇ ಉತ್ಪತ್ತಿಯಾಗುತ್ತವೆ. ಯಕೃತ್ತಿನ ಸಮಸ್ಯೆಗಳಲ್ಲಿ ರಕ್ತ ಹೆಪ್ಪುಗಟ್ಟುವುದು ಏರುಪೇರಾಗಿ ಅನೇಕ ಸಂಕಷ್ಟಗಳಿಗೆ ದಾರಿಯಾಗುತ್ತದೆ.

ಯಕೃತ್ತಿನಂತಹ ಸಂಕೀರ್ಣ ಅಂಗ ನಮ್ಮ ದೇಹದಲ್ಲಿ ಬೇರೊಂದಿಲ್ಲ. ಅದನ್ನು ಕೆಡೆಸಿಕೊಂಡರೆ ಉಳಿಗಾಲವಿಲ್ಲ. ಮದ್ಯಪಾನ, ವೈರಸ್ ಸೋಂಕು, ಮಾದಕ ವಸ್ತುಗಳ ಚಟ ಮೊದಲಾದುವು ಯಕೃತ್ತಿನ ಆರೋಗ್ಯದ ಶತ್ರುಗಳು. ದಿನವೊಂದಕ್ಕೆ 30 ಮಿಲಿ ಲೀಟರ್ ಗಿಂತ ಹೆಚ್ಚಿನ ಆಲ್ಕೊಹಾಲ್ ಸೇವನೆ ಯಕೃತ್ತಿಗೆ ಹಾನಿ ಮಾಡುತ್ತದೆ. ಮದ್ಯಪಾನಿಗಳು ಈ ಪ್ರಮಾಣವನ್ನು ಅನುಸರಿಸಿ ಎಚ್ಚರ ವಹಿಸಬೇಕು. ಯಕೃತ್ತಿಗೆ ಯಾವುದೇ ಕೃತಕ ಪರ್ಯಾಯ ಇಲ್ಲವೆಂಬುದು ಸದಾ ಗಮನದಲ್ಲಿರಬೇಕು.

----------------------

ಫೆಬ್ರವರಿ 2023 ರ ಕುತೂಹಲಿ ವಿಜ್ಞಾನ ಮಾಸಪತ್ರಿಕೆಯಲ್ಲಿ ಪ್ರಕಟವಾದ ಲೇಖನ. ಕೊಂಡಿ: http://bit.ly/3XexVWi     

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ