ಭಾನುವಾರ, ಏಪ್ರಿಲ್ 9, 2023

 


ಸಾಮಾನ್ಯನ ಗ್ರಹಿಕೆಯಲ್ಲಿ ಆಲ್ಬರ್ಟ್ ಐನ್ಸ್ಟೈನ್

ಡಾ. ಕಿರಣ್ ವಿ.ಎಸ್.

ವೈದ್ಯರು

ವಿಜ್ಞಾನದ ಬಗ್ಗೆ ಆಸಕ್ತಿ ಇರುವ ಸಾವಿರ ಮಂದಿ ಜನಸಾಮಾನ್ಯರನ್ನು “20 ನೆಯ ಶತಮಾನದ ಮೂರು ಪ್ರಮುಖ ವಿಜ್ಞಾನಿಗಳನ್ನು ಹೆಸರಿಸಿ” ಎಂದು ಕೇಳಿದರೆ ಸರಿಸುಮಾರು ಎಲ್ಲರ ಪಟ್ಟಿಯಲ್ಲೂ ಆಲ್ಬರ್ಟ್ ಐನ್ಸ್ಟೈನ್ ಅವರ ಹೆಸರು ಇರುತ್ತದೆ. ಆ ಹೆಸರು ಸೂಚಿಸಿದವರನ್ನು “ಆಲ್ಬರ್ಟ್ ಐನ್ಸ್ಟೈನ್ ಅವರ ಮೂರು ಪ್ರಮುಖ ವೈಜ್ಞಾನಿಕ ಸಾಧನೆಗಳನ್ನು ಹೆಸರಿಸಿ” ಎಂದರೆ, ಬಹುತೇಕ ಮಂದಿ ರಿಲೇಟಿವಿಟಿ/ಸಾಪೇಕ್ಷ ಸಿದ್ಧಾಂತ ಎನ್ನುವ ಹೆಸರಿಗಿಂತಲೂ ಮುಂದೆ ಹೋಗಲಾರರು. “ರಿಲೇಟಿವಿಟಿಯನ್ನು ಸರಳ ವಾಕ್ಯಗಳಲ್ಲಿ ತಿಳಿಸಿ” ಎಂದು ಕೇಳಿದರೆ, ತೀರಾ ಕೆಲವು ಮಂದಿ ಸಫಲರಾಗಬಲ್ಲರು.

ಪ್ರತಿಯೊಂದು ರಂಗದಲ್ಲೂ ಕೆಲವರು ದಂತಕತೆಗಳ ಮಟ್ಟಕ್ಕೆ ಏರುತ್ತಾರೆ. ವಿಜ್ಞಾನವೂ ಇದಕ್ಕೆ ಹೊರತಲ್ಲ. ನಮ್ಮ ಕಾಲಘಟ್ಟದಲ್ಲಿ ಸ್ಟೀಫನ್ ಹಾಕಿಂಗ್, ಅಬ್ದುಲ್ ಕಲಾಮ್, ರಿಚರ್ಡ್ ಫೈನ್ಮನ್ ಮೊದಲಾದ ಹೆಸರುಗಳನ್ನು ಈ ಪಟ್ಟಿಯಲ್ಲಿ ಪರಿಗಣಿಸಬಹುದು. ಇವರುಗಳ ಕಾರ್ಯಕ್ಷೇತ್ರಗಳ ಬಗ್ಗೆ ಏನೇನೂ ತಿಳಿಯದವರಿಗೂ ಅನೇಕಾನೇಕ ಕಾರಣಗಳಿಂದ ಇವರ ಹೆಸರುಗಳ ಪರಿಚಯವಿರುತ್ತದೆ. ಈ ಪ್ರಕ್ರಿಯೆಯ ಅಗ್ರಣಿ ಪ್ರಾಯಶಃ ಆಲ್ಬರ್ಟ್ ಐನ್ಸ್ಟೈನ್ ಅವರು. “ಅವರ ಥಿಯರಿ ತೀರಾ ಕಷ್ಟವಂತೆ; ಅದನ್ನು ಅರ್ಥ ಮಾಡಿಕೊಂಡಿರುವವರು ಇಡೀ ಜಗತ್ತಿನಲ್ಲಿ ಎಂಟೇ ಮಂದಿಯಂತೆ; ಅರ್ಥ ಮಾಡಿಕೊಳ್ಳುವುದು ಅಂತಿರಲಿ, ಅದನ್ನು ಊಹಿಸಿಕೊಳ್ಳುವುದಕ್ಕೂ ಬಹಳ ಬುದ್ಧಿ ಬೇಕಂತೆ; ಅವರ ಮಿದುಳು ಮಾಮೂಲಿ ಜನರ ಮಿದುಳಿಗಿಂತಲೂ ಬಹಳ ಭಿನ್ನವಾಗಿತ್ತಂತೆ; ಅವರ ಮೃತ ದೇಹದಿಂದ ಮಿದುಳನ್ನು ಕದ್ದು ವಿಶೇಷ ಸಂಶೋಧನೆಗೆ ಬಳಸಿದ್ದಾರಂತೆ”, ಹೀಗೆ ಕಲ್ಪನೆ-ವಾಸ್ತವಗಳ ಕಲಸುಮೇಲೋಗರಗಳು ದಶಕಗಳಿಂದ ಜನಮಾನಸದ ನಡುವೆ ಚಾಲ್ತಿಯಲ್ಲಿವೆ.

ಯಾವುದೇ ವ್ಯಕ್ತಿಯ ಖ್ಯಾತಿ ಹೆಚ್ಚಿದಷ್ಟೂ ಅವರ ಸುತ್ತಲ ಐತಿಹ್ಯಗಳು ಬೆಳೆಯುತ್ತವೆ. ಪ್ರಖ್ಯಾತರ ಹೆಸರುಗಳನ್ನು ಬಳಸಿಕೊಂಡು, ತಮ್ಮ ವೈಯಕ್ತಿಕ ಸಿದ್ಧಾಂತಗಳ ಸಂಕಥನಗಳನ್ನು ಅವರ ಜೊತೆಗೆ ಜೋಡಿಸಿ ತೇಲಿಸಿಬಿಡುವ ಪ್ರಯತ್ನಗಳು ಆಗುತ್ತಲೇ ಇರುತ್ತವೆ. ಇದು ಕೀರ್ತಿಗೆ ತೆರಬೇಕಾದ ಬೆಲೆಗಳಲ್ಲಿ ಒಂದು. ಅಂತೆಯೇ, ಆ ವ್ಯಕ್ತಿ ಯಾವುದಾದರೂ ತಪ್ಪಿನ ಕಾರಣದಿಂದ ಅಪಖ್ಯಾತಿಗೆ ಒಳಗಾದರೆ, ಕೂಡಲೇ ಆತನನ್ನು ತಮ್ಮ ವಿರೋಧಿ ಪಾಳೆಯದೊಡನೆ ಗುರುತಿಸಿ, ಅವರನ್ನು ಬಗ್ಗುಬಡಿಯುವ ಪ್ರಯತ್ನಗಳು ನಡೆಯುತ್ತವೆ. ಹೆಸರೆಂಬುದು ಎರಡು ಅಲುಗಿನ ಕತ್ತಿ. ತಮ್ಮ ಜೀವನದ ಉದ್ದಕ್ಕೂ ಆಲ್ಬರ್ಟ್ ಐನ್ಸ್ಟೈನ್ ಇದನ್ನು ಅನುಭವಿಸುತ್ತಲೇ ಬಂದರು. ಹಿಟ್ಲರನ ಆಡಳಿತದ ವೇಳೆಯ ಜರ್ಮನಿ ಯಹೂದ್ಯರ ವಿರುದ್ಧ ಮಾಡಿದ ಅನಾಚಾರಗಳು ಅಷ್ಟಿಷ್ಟಲ್ಲ. ಹೀಗೆ ಸಂಕಷ್ಟಕ್ಕೆ ಒಳಗಾದ ಯಹೂದ್ಯರ ರಕ್ಷಣೆಗೆ ಧಾವಿಸಿದ ದೇಶಗಳೂ ಜರ್ಮನಿಯ ಕೆಂಗಣ್ಣಿಗೆ ಒಳಗಾದವು. ಇನ್ನು ಕೆಲವು ದೇಶಗಳು ಜರ್ಮನಿಯನ್ನು ವಿರೋಧಿಸುವ ತಮ್ಮ ಸೂತ್ರದ ಭಾಗವಾಗಿ ಯಹೂದ್ಯರಿಗೆ ಆಶ್ರಯ ಕೊಟ್ಟದ್ದೂ ಉಂಟು. ರಾಜಕೀಯ ಪರ-ವಿರೋಧಗಳ ಭಾಗವಾಗಿ ಯಹೂದ್ಯರ ಬಳಕೆ ಆಗುತ್ತಿದ್ದುದ್ದನ್ನು ಕಂಡು ರೋಸಿಹೋಗಿದ್ದ ಆಲ್ಬರ್ಟ್ ಐನ್ಸ್ಟೈನ್ ಅವರ ಒಂದು ಮಾತಿದೆ “ನನ್ನ ಸಾಪೇಕ್ಷ ಸಿದ್ಧಾಂತ ಸತ್ಯವೆಂದು ಸಾಬೀತಾದರೆ ನಾನು ಮೂಲತಃ ಜರ್ಮನ್ ಎಂದು ಜರ್ಮನಿ ಹೇಳುತ್ತದೆ. ನಾನು ಇಡೀ ಭೂಮಂಡಲಕ್ಕೆ ಸೇರಿದ ವಿಜ್ಞಾನಿ ಎಂದು ಫ್ರಾನ್ಸ್ ಘೋಷಿಸುತ್ತದೆ. ಆದರೆ, ಒಂದು ವೇಳೆ ನನ್ನ ಸಿದ್ಧಾಂತ ತಪ್ಪೆಂದು ಕಂಡುಬಂದರೆ ಕೂಡಲೇ ಫ್ರಾನ್ಸ್ ನನ್ನನ್ನು ಜರ್ಮನ್ ಎಂದು ಗುರುತಿಸುತ್ತದೆ. ಜರ್ಮನಿ ನನ್ನನ್ನು ಯಹೂದ್ಯ ಎಂದು ತಿರಸ್ಕಾರ ತೋರುತ್ತದೆ”. ಕೀರ್ತಿಯ ಶಿಖರವೇರಿದ ಸಾಧಕರು ಅಲ್ಲಿ ಉಳಿದುಕೊಳ್ಳುವ ಪ್ರಯತ್ನವೆಂಬ ಹಗ್ಗ-ಜಗ್ಗಾಟದಲ್ಲಿ ಎಷ್ಟು ನಿಸ್ಸಹಾಯಕನಾಗುತ್ತಾರೆ ಎನ್ನುವುದನ್ನು ಅವರೇ ಬಲ್ಲರು. ಯಾವುದೇ ಹೊಸ ಅನ್ವೇಷಣೆಯನ್ನೂ ಮುಕ್ತ ಮನಸ್ಸಿನಿಂದ ಮಾಡಲು ಅವರಿಗೆ “ಸಾರ್ವಜನಿಕ ಅಭಿಪ್ರಾಯ”ವೆಂಬ ತೊಡಕು ಕಾಡುತ್ತದೆ. ಆಲ್ಬರ್ಟ್ ಐನ್ಸ್ಟೈನ್ ಅವರ ಜೀವನದ ಎರಡನೆಯ ಅರ್ಧದಲ್ಲಿ ಅವರಿಂದ ಮೌಲಿಕವಾದದ್ದೇನೂ ಬಂದಿಲ್ಲ ಎಂದು ಆಕ್ಷೇಪಿಸುವವರಿಗೆ ಈ ಹಿನ್ನೆಲೆ ನೆನಪಿರಬೇಕು.

ಆಲ್ಬರ್ಟ್ ಐನ್ಸ್ಟೈನ್ ಅವರ ಜೀವನವನ್ನು ಇತರರಿಗೆ ನೀಡುವ ಸ್ಫೂರ್ತಿಯ ರೂಪದಲ್ಲಿ ಬಳಸಿಕೊಳ್ಳುವವರು “ಆತ ಬಾಲದಲ್ಲಿ ತೀರಾ ಪೆದ್ದನಾಗಿದ್ದನಂತೆ; ಲೆಕ್ಕದಲ್ಲಿ ಫೇಲಂತೆ; ಶಾಲೆಯಲ್ಲಿ ಉತ್ತರ ಹೇಳಲಾಗದೇ ತತ್ತರಿಸಿದ್ದನಂತೆ; ಆತನನ್ನು ಶಾಲೆಯಿಂದ ಹೊರಹಾಕಿದ್ದರಂತೆ. ಇಂತಹವನೇ ಲೋಕವಿಖ್ಯಾತನಾದ ಎಂದರೆ, ಪ್ರತಿಯೊಬ್ಬ ಫೇಲು ವಿದ್ಯಾರ್ಥಿಗೂ ಭವಿಷ್ಯ ಇದೆ ಎಂದಾಯಿತು” ಎನ್ನುವ ಷರಾ ಬರೆದುಬಿಡುತ್ತಾರೆ. ಇದೊಂದು ರೀತಿ, ಗಣಿತದಲ್ಲಿ ನಪಾಸಾದವರಿಗೆಲ್ಲಾ ನೊಬೆಲ್ ಬಹುಮಾನ ಬರುತ್ತದೆ ಎನ್ನುವ ಮಟ್ಟದ ಸಮೀಕರಣ. ಈ ರೀತಿಯ ಕತೆಗಳು ಯಾರು ಕಟ್ಟಿದರೋ ಏನೋ; ಇವುಗಳು ಲೋಕಪ್ರಿಯ ಅಸತ್ಯಗಳಾದದ್ದು ವಿಪರ್ಯಾಸ. ಈ ಕತೆಗಳಿಂದ ಐನ್ಸ್ಟೈನ್ ಅವರಿಗೆ ವೈಯಕ್ತಿಕ ಲಾಭ-ನಷ್ಟಗಳಿಲ್ಲ. ಆದರೆ, ಇವನ್ನು ನಂಬಿ ಅವೆಷ್ಟು ಜನ ಉದ್ಧಾರವಾದರೋ ತಿಳಿಯದು. ಭ್ರಮಾಪೂರಕ ಸುಳ್ಳುಗಳನ್ನು ನಂಬುವುದು ವೈಜ್ಞಾನಿಕ ಮನೋಧರ್ಮಕ್ಕೆ ಪೂರಕವಲ್ಲ.

ಎಳೆಯ ವಯಸ್ಸಿನಲ್ಲಿ ಅಪಾರ ಪ್ರತಿಭೆ ತೋರಿದ್ದ ಕಾರ್ಲ್ ಫ್ರೆಡ್ರಿಕ್ ಗಾಸ್, ವಾನ್ ನ್ಯೂಮನ್, ಬ್ಲೈಸ್ ಪ್ಯಾಸ್ಕಲ್, ಎನ್ರಿಕೋ ಫರ್ಮಿ ಮೊದಲಾದವರಂತೆ ಆಲ್ಬರ್ಟ್ ಐನ್ಸ್ಟೈನ್ ಅವರು ತಮ್ಮ ಚಿಕ್ಕಂದಿನಲ್ಲೇ ಅಸಾಧಾರಣ ಜ್ಞಾನಿಯಾಗಿದ್ದ ಕುರುಹುಗಳು ಇರಲಿಲ್ಲವಾದರೂ, ಅವರೆಂದೂ ಪೆದ್ದು ವಿದ್ಯಾರ್ಥಿಯಾಗಿರಲಿಲ್ಲ. ಹತ್ತನೆಯ ವಯಸ್ಸಿಗೆ ಯೂಕ್ಲಿಡ್ ಮತ್ತು ಎಮ್ಯಾನುಯಲ್ ಕ್ಯಾಂಟ್ ಅವರನ್ನು ಐನ್ಸ್ಟೈನ್ ಓದಿಕೊಂಡಿದ್ದರು. ತಮ್ಮ ಹದಿನಾರನೆಯ ವಯಸ್ಸಿನಲ್ಲಿ ಶಿಕ್ಷಣದ ಬಗ್ಗೆ ಶಾಲೆಯ ಬೊಧಕರಿಗೆ ಇದ್ದ ಧೋರಣೆಯನ್ನು ವಿರೋಧಿಸಿ ತಮ್ಮ ಶಾಲೆಯನ್ನು ಬದಲಾಯಿಸಿದ್ದರೇ ಹೊರತು, ದಡ್ಡನೆನ್ನುವ ಕಾರಣಕ್ಕೆ ಯಾರೂ ಶಾಲೆಯಿಂದ ಅವರನ್ನು ಹೊರಹಾಕಲಿಲ್ಲ. ಗಣಿತ ಮತ್ತು ಭೌತಶಾಸ್ತ್ರಗಳಲ್ಲಿ ಅವರು ಮೊದಲಿನಿಂದಲೂ ಅಸಾಧಾರಣ ಮಟ್ಟವನ್ನೇ ಕಾಯ್ದುಕೊಂಡವರು. ಈ ಎರಡೂ ವಿಷಯಗಳಿಗೆ ತಮ್ಮ ಅಧ್ಯಯನದ ಹೆಚ್ಚು ಸಮಯ ನೀಡುತ್ತಿದ್ದ ಕಾರಣದಿಂದ ಉಳಿದ ವಿಷಯಗಳಲ್ಲಿ ಅವರ ಪರಿಣತಿ ಕಡಿಮೆ ಆಗಿದ್ದಿರಬಹುದು. ಪಾಲಿಟೆಕ್ನಿಕ್ ಸಂಸ್ಥೆಯ ಪ್ರವೇಶ ಪರೀಕ್ಷೆಯಲ್ಲಿ ಗಣಿತ ಮತ್ತು ಭೌತಶಾಸ್ತ್ರಗಳಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದರೂ, ಉಳಿದ ವಿಷಯಗಳಲ್ಲಿ ಕಡಿಮೆ ಅಂಕಗಳು ಬಂದ ಕಾರಣ ಆ ವರ್ಷ ಅಧ್ಯಯನಕ್ಕೆ ಆಯ್ಕೆಯಾಗಲಿಲ್ಲ. ಅದನ್ನು ಹೊರತುಪಡಿಸಿ, ಅವರು ಲೆಕ್ಕದಲ್ಲಿ ಫೇಲಾದದ್ದು ಎಂದೂ ಇಲ್ಲ. ಇತರ ವಿಷಯಗಳಲ್ಲಿ ಪರಿಣತಿ ಸಾಧಿಸಿ, ಪ್ರವೇಶ ಪರೀಕ್ಷೆಯಲ್ಲಿ ಮುಂದಿನ ಬಾರಿ ತೇರ್ಗಡೆಯಾಗಿ, ಅದೇ ಪಾಲಿಟೆಕ್ನಿಕ್ ಕೇಂದ್ರದಲ್ಲಿ ವ್ಯಾಸಂಗ ಮಾಡಿದ ಗೆಲುವಿನ ಕತೆ ಅವರದ್ದು.  

ಆಲ್ಬರ್ಟ್ ಐನ್ಸ್ಟೈನ್ ಅವರನ್ನು ಐಸಾಕ್ ನ್ಯೂಟನ್ ಅವರ ನಂತರದ ಅತ್ಯಂತ ಪ್ರಭಾವಶಾಲಿ ವಿಜ್ಞಾನಿ ಎಂದೇ ಗುರುತಿಸಲಾಗುತ್ತದೆ. ಕಾಕತಾಳೀಯವೆಂದರೆ, ನ್ಯೂಟನ್ ಅವರ ಜೀವನದಲ್ಲಿ 1666 ಆನ್ಯುಸ್-ಮಿರಾಬಲಿಸ್ ಎನ್ನುವ ಪರ್ವ-ವರ್ಷ ಎಂದು ಪರಿಗಣನೆಯಾಗುತ್ತದೆ. ಆ ವರ್ಷದಲ್ಲಿ ನ್ಯೂಟನ್ ಅವರ ನಾಲ್ಕು ಪ್ರಮುಖ ಸಿದ್ಧಾಂತಗಳಾದ ಚಲನೆಯ ನಿಯಮಗಳು, ಗುರುತ್ವಾಕರ್ಷಣೆ, ಕಲನ ಶಾಸ್ತ್ರ, ಮತ್ತು ಬೆಳಕಿನ ಮೂಲ ತತ್ತ್ವಗಳು ನಿರೂಪಿತವಾದವು. ಇದಾದ 239 ವರ್ಷಗಳ ನಂತರ 1905 ರಲ್ಲಿ ಐನ್ಸ್ಟೈನ್ ಅವರ ನಾಲ್ಕು ಪ್ರಮುಖ ವೈಜ್ಞಾನಿಕ ಸಿದ್ಧಾಂತಗಳು ಪ್ರಕಟವಾದವು. 20ನೆಯ ಶತಮಾನದ ಭೌತಶಾಸ್ತ್ರದ ದಿಕ್ಕನ್ನು ಬದಲಾಯಿಸಿದ ಫೋಟೋ-ಎಲೆಕ್ಟ್ರಿಕ್ ಸಿದ್ಧಾಂತ, ಬ್ರೌನಿಯನ್ ಚಲನೆ, ವಿಶೇಷ ಸಾಪೇಕ್ಷ ಸಿದ್ಧಾಂತ, ಮತ್ತು ವಸ್ತು-ಶಕ್ತಿಗಳ ಸಮೀಕರಣಕ್ಕೆ ಸಂಬಂಧಿಸಿದ ಆಲೇಖ್ಯಗಳು ಐನ್ಸ್ಟೈನ್ ಅವರ ಆನ್ಯುಸ್-ಮಿರಾಬಿಲಿಸ್ ಅನ್ನು ಸ್ಥಾಪಿಸಿದವು. ಅದೇ ವರ್ಷದಲ್ಲಿ ಅವರಿಗೆ ಭೌತಶಾಸ್ತ್ರದ ಡಾಕ್ಟರೇಟ್ ಕೂಡ ಲಭ್ಯವಾಯಿತು. ಆಗ ಐನ್ಸ್ಟೈನ್ ಅವರ ವಯಸ್ಸು ಕೇವಲ 26 ವರ್ಷಗಳು. ಸೈದ್ಧಾಂತಿಕ ಭೌತಶಾಸ್ತ್ರದ ಮುಂಚೂಣಿಯ ವಿಜ್ಞಾನಿಗಳ ಪೈಕಿ ಗಮನ ಸೆಳೆದಿದ್ದ ಐನ್ಸ್ಟೈನ್ ತಮ್ಮ ಯಾವುದೇ ಸಿದ್ಧಾಂತಕ್ಕೂ ಪ್ರಯೋಗಾತ್ಮಕ ಆಯಾಮವನ್ನು ನೀಡಿರಲಿಲ್ಲ. ಅವನ್ನು ನಂತರ ಪ್ರಯೋಗಗಳ ಮೂಲಕ ಸಾಧಿಸಿ ತೋರಿದ್ದು ಆರ್ಥರ್ ಎಡ್ಡಿಂಗ್ಟನ್ ಮೊದಲಾದ ಇತರ ವಿಜ್ಞಾನಿಗಳು. ಇವುಗಳ ಪೈಕಿ ಫೋಟೋ-ಎಲೆಕ್ಟ್ರಿಕ್ ಸಿದ್ಧಾಂತ 1921 ರ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಗೆ ಭಾಜನವಾಯಿತು.

ಪ್ರವರ್ತಕವೆನಿಸುವ ವೈಜ್ಞಾನಿಕ ಸಂಚಲನಗಳ ಹೊರತಾಗಿಯೂ ಪಾಠ ಹೇಳುವ ಅಕಡೆಮಿಕ್ ಹುದ್ದೆ ಐನ್ಸ್ಟೈನ್ ಅವರಿಗೆ ದೊರೆತದ್ದು ತಡವಾಗಿಯೇ. ಆದರೆ ಐನ್ಸ್ಟೈನ್ ಆಕರ್ಷಕವಾಗಿ ಪಾಠ ಮಾಡಬಲ್ಲ ವ್ಯಕ್ತಿತ್ವದವರಲ್ಲ. ವಿಜ್ಞಾನದ ನವೀನ ಪರಿಭಾಷೆಯೊಂದನ್ನು ಹಂತಹಂತವಾಗಿ ಕೇಳುಗರ ಬುದ್ಧಿಯ ಆಳಕ್ಕೆ ಇಳಿಸಬಲ್ಲ ಆಕರ್ಷಕ ಮಾತಿನ ಕಲೆಗಾರಿಕೆ ಐನ್ಸ್ಟೈನ್ ಅವರಿಗೆ ಒಲಿದಿರಲಿಲ್ಲ. ಅವರದ್ದೇನಿದ್ದರೂ ಒಂದು ವಿಷಯದಿಂದ ಮತ್ತೊಂದಕೆ ಅನಾಮತ್ತಾಗಿ ಜಿಗಿಯುವ ವಿಧಾನ. ಅವರ ತೀರಾ ಆಪ್ತವಲಯದ ವಿಜ್ಞಾನಿಗಳನ್ನು ಹೊರತುಪಡಿಸಿ ಉಳಿದವರಿಗೆ ಐನ್ಸ್ಟೈನ್ ಅವರ ಪ್ರಜ್ಞಾಪ್ರವಾಹ ನಿಲುಕುತ್ತಿರಲಿಲ್ಲ. ವಿಜ್ಞಾನ ಬೋಧನೆಯ ವಿಷಯದಲ್ಲಿ ಅಪ್ರತಿಮ ಕಲೆಗಾರನೆಂದು ಹೆಸರಾದ ರಿಚರ್ಡ್ ಫೈನ್ಮನ್ ಅವರ ಜೊತೆಯಲ್ಲಿ ಐನ್ಸ್ಟೈನ್ ಅವರ ಪಾಠಕ್ರಮವನ್ನು ಹೋಲಿಕೆ ಮಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಎನ್ರಿಕೋ ಫರ್ಮಿ, ಸುಬ್ರಮಣ್ಯಮ್ ಚಂದ್ರಶೇಖರ್, ಅರ್ನೆಸ್ಟ್ ರುಥರ್ಫೋರ್ಡ್ ಮೊದಲಾದವರಂತೆ ಗುರುವಿನ ಹೆಸರನ್ನು ಎತ್ತಿ ಹಿಡಿಯುವ ಶಿಷ್ಯಗಣ ಐನ್ಸ್ಟೈನ್ ಅವರ ಪಾಲಿಗೆ ಬರಲಿಲ್ಲ.

ವೈಯಕ್ತಿಕ ಸಂಗತಿಗಳ ಹೊರತಾಗಿ ಐನ್ಸ್ಟೈನ್ ಅವರ ಹೆಸರು ಸಾರ್ವಜನಿಕ ವಿವಾದಕ್ಕೆ ಸಿಲುಕಿದ್ದು ಪರಮಾಣು ಬಾಂಬ್ ತಯಾರಿಕೆಯಲ್ಲಿ ಅವರ ಪಾತ್ರದ ಕುರಿತಾಗಿ. ಎರಡನೆಯ ವಿಶ್ವಯುದ್ಧದ ಇತಿಹಾಸಕಾರರು ಈ ಬಗ್ಗೆ ಕೂಲಂಕಶವಾಗಿ ವಿಶ್ಲೇಷಣೆ ಮಾಡಿದ್ದಾರೆ. ತಮ್ಮ ಬಹುಕಾಲದ ಶಿಷ್ಯ ಮತ್ತು ಸಹೋದ್ಯೋಗಿ ಲಿಯೋ ಝಿಲಾರ್ಡ್ ಅವರ ಒತ್ತಾಯಕ್ಕೆ ಮಣಿದು ಐನ್ಸ್ಟೈನ್ ಅಂದಿನ ಅಮೆರಿಕೆಯ ಅಧ್ಯಕ್ಷ ಫ್ರಾಂಕ್ಲಿನ್ ರೂಸೆವೆಲ್ಟ್ ಅವರಿಗೆ ಪತ್ರ ಬರೆದು, “ಜರ್ಮನಿ ಪರಮಾಣು ಬಾಂಬ್ ಹೊಂದುವುದಕ್ಕೆ ಮುನ್ನ ಅದು ಮಿತ್ರ ರಾಷ್ಟ್ರಗಳ ಬಳಿ ಇರುವಂತಾಗಬೇಕು” ಎನ್ನುವಂತೆ ಒತ್ತಾಯಿಸಿದರು. ಅಲ್ಲಿಯವರೆಗೆ ಈ ಬಗ್ಗೆ ಸ್ಪಷ್ಟ ನಿಲುವು ತಳೆಯದಿದ್ದ ಅಮೆರಿಕೆಯ ಸರ್ಕಾರಕ್ಕೆ ಈ ಪತ್ರ ಪರಮಾಣು ಬಾಂಬಿನ ಅಗತ್ಯವನ್ನು ವಿಶದಪಡಿಸಿದಂತಾಯಿತು. ಮ್ಯಾನ್ಹಟ್ಟನ್ ಯೋಜನೆಯ ಜನ್ಮಕ್ಕೆ ಐನ್ಸ್ಟೈನ್ ಅವರ ಪತ್ರವೇ ಕಾರಣ ಎಂದು ಇಂದಿಗೂ ನಂಬಿಕೆ. ಪರಮಾಣು ಬಾಂಬ್ ಅನ್ನು ಬಳಸುವುದಕ್ಕೆ ಐನ್ಸ್ಟೈನ್ ಅವರ ವಿರೋಧವಿತ್ತು. ಅಸ್ತಿತ್ವಮಾತ್ರದಿಂದಲೇ ವೈರಿಯ ಶರಣಾಗತಿಗೆ ಕಾರಣವಾಗಬಲ್ಲ ಅಸ್ತ್ರವನ್ನಾಗಿ ಮಾತ್ರ ಇದು ಬಳಕೆಯಾಗಬೇಕು ಎನ್ನುವುದು ಅವರ ಆಲೋಚನೆ. ರೂಸವೆಲ್ಟ್ ಮತ್ತು ಐನ್ಸ್ಟೈನ್ ಅವರ ನಡುವಣ ಈ ಬಗ್ಗೆ ಏನು ಒಪ್ಪಂದವಾಗಿತ್ತೋ ಯಾರಿಗೂ ತಿಳಿಯದು. ಆದರೆ, ಯುದ್ಧದ ಕಡೆಯ ಹಂತದಲ್ಲಿ ರೂಸವೆಲ್ಟ್ ಮರಣಿಸಿದರು. ಅವರ ಸ್ಥಾನಕ್ಕೆ ಬಂದ ಉಪಾಧ್ಯಕ್ಷ ಟ್ರೂಮನ್ ಅವರಿಗೆ ಅಧಿಕಾರ ಪಡೆದ ದಿನದವರೆಗೆ ಪರಮಾಣು ಬಾಂಬ್ ಯೋಜನೆಯ ಬಗ್ಗೆ ಏನೇನೂ ತಿಳಿದಿರಲಿಲ್ಲ; ವಿಷಯ ಅಷ್ಟು ರಹಸ್ಯವಾಗಿತ್ತು. ಯುದ್ಧವನ್ನು ಬೇಗ ಕೊನೆಗಾಣಿಸುವ ಒತ್ತಡದಲ್ಲಿದ್ದ ಟ್ರೂಮನ್ ಅವರಿಗೆ ಪರಮಾಣು ಬಾಂಬ್ ವರದಾನವಾಯಿತು. ಅಮೆರಿಕೆಯ ನಿರ್ಧಾರದಿಂದ ಕಡೆಗೆ ಜರ್ಜರಿತವಾದದ್ದು ಐನ್ಸ್ಟೈನ್ ಅವರ ಮನಶ್ಶಾಂತಿ. ಆನಂತರ ಐನ್ಸ್ಟೈನ್ ರಾಜಕೀಯದಿಂದ ಬಹಳ ದೂರ ನಿಂತರು. 1952 ರಲ್ಲಿ ಹೊಸದಾಗಿ ರಚನೆಯಾದ ಇಸ್ರೇಲ್ ರಾಷ್ಟ್ರಕ್ಕೆ ಅಧ್ಯಕ್ಷರಾಗುವ ಅವಕಾಶವನ್ನು ಒಂದೇ ಮಾತಿಗೆ ನಿರಾಕರಿಸಿದರು.

ಭಾರತದ ಅದ್ಭುತ ವಿಜ್ಞಾನಿ ಸತ್ಯೇಂದ್ರನಾಥ ಬೋಸರ ಜೊತೆಗೆ ಐನ್ಸ್ಟೈನ್ ಅವರ ಒಡನಾಡ ಹೃದ್ಯವಾದದ್ದು. ಪರಮಶೂನ್ಯ ವಾತಾವರಣದಲ್ಲಿ ದೊರೆಯುವ ವಸ್ತುವಿನ ಐದನೆಯ ಸ್ಥಿತಿಯಾದ ಬೋಸ್-ಐನ್ಸ್ಟೈನ್ ಕಾಂಡನ್ಸೇಟ್ ಬಗ್ಗೆ ಇಬ್ಬರೂ ಅಪಾರ ಕೆಲಸ ಮಾಡಿದ್ದರು. ಐನ್ಸ್ಟೈನ್ ಅವರಿಗೆ ಭಾರತದ ಬಗ್ಗೆ ಇದ್ದ ಗೌರವಕ್ಕೆ ಸತ್ಯೇಂದ್ರನಾಥ ಬೋಸರ ಕೊಡುಗೆ ಬಹಳ ದೊಡ್ಡದು.

ಐನ್ಸ್ಟೈನ್ ಅವರನ್ನು ಮೆಚ್ಚುವ ಪ್ರತಿಯೊಬ್ಬರೂ ಅವರ ಬಗ್ಗೆ ಚೆನ್ನಾಗಿ ಅರಿತರೆ, ಅವರ ಬಗೆಗಿನ ಗೌರವ ಮತ್ತಷ್ಟು ಹಿಗ್ಗುತ್ತದೆ.   

------------------------

ಕುತೂಹಲಿ ವಿಜ್ಞಾನ ಮಾಸಪತ್ರಿಕೆಯ ಮಾರ್ಚ್ 2023ರ ಸಂಚಿಕೆಯಲ್ಲಿ ಪ್ರಕಟವಾದ ಲೇಖನ.  ಮಾರ್ಚ್ 2023ರ ಸಂಚಿಕೆಯನ್ನು ಉಚಿತವಾಗಿ ಓದಲು ಕೊಂಡಿ: http://bit.ly/3kNy1aq

 

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ