ಭಾನುವಾರ, ಏಪ್ರಿಲ್ 9, 2023

 ನೆತ್ತಿಯೊಳಗಿನ ವಿದ್ಯುತ್ ಮತ್ತು ಮಾನಸಿಕ ಸಂತೃಪ್ತಿ

ಡಾ. ಕಿರಣ್ ವಿ.ಎಸ್.

ವೈದ್ಯರು

ಮಾನಸಿಕ ಸಂತೃಪ್ತಿಯ ಸಂಶೋಧಕರಲ್ಲಿ ಒಂದು ನಗೆಯ ಮಾತಿದೆ. “ನೀವು ನಿಮ್ಮ ಗಂಡ/ಹೆಂಡತಿಯನ್ನು ಪ್ರೀತಿಸುತ್ತೀರಾ?” ಮತ್ತು “ನೀವು ನಿಮ್ಮ ವೃತ್ತಿಯನ್ನು ಪ್ರೀತಿಸುತ್ತೀರಾ?” ಎನ್ನುವ ಪ್ರಶ್ನೆಗಳ ಪೈಕಿ ಯಾವುದಕ್ಕೆ ಹೆಚ್ಚು “ಹೌದು” ಎನ್ನುವ ಉತ್ತರ ಬರುತ್ತದೆ ಎಂದು ಯಾರಿಗೂ ತಿಳಿಯದು. ಜೊತೆಗೆ ಈ ಎರಡೂ ಪ್ರಶ್ನೆಗಳು ಸಾಪೇಕ್ಷವಾಗಿ ವಿಲೋಮವಂತೆ! ಅಂದರೆ, ಮೊದಲ ಪ್ರಶ್ನೆಗೆ ಹೌದು/ಇಲ್ಲ ಎಂದವರು ಎರಡನೆಯ ಪ್ರಶ್ನೆಗೆ ಇಲ್ಲ/ಹೌದು ಎನ್ನುವರಂತೆ! “ನೀವು ಸೋಮವಾರದ ಮುಂಜಾನೆಗೆ ಕಾಯುತ್ತಿದ್ದೀರಿ ಎಂದರೆ, ಒಂದೋ ನೀವು ನಿಮ್ಮ ಕೆಲಸವನ್ನು ಹೆಚ್ಚು ಪ್ರೀತಿಸುತ್ತೀರಿ ಅಥವಾ ನಿಮ್ಮ ಮನೆಯಾಕೆ/ಮನೆಯಾತನನ್ನು ಹೆಚ್ಚು ದ್ವೇಷಿಸುತ್ತೀರಿ ಎಂದರ್ಥ” ಎನ್ನುವ ಚಮತ್ಕಾರದ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುತ್ತವೆ. ಒಟ್ಟಿನಲ್ಲಿ, ವೃತ್ತಿಯ ಮೇಲಿನ ಪ್ರೀತಿ ಎನ್ನುವುದು ಸುಲಭವಾಗಿ ಪರಿಹಾರವಾಗುವಂಥದ್ದಲ್ಲ.

ಕೆಲವೊಮ್ಮೆ ಇಷ್ಟವಿಲ್ಲದೆ ಮಾಡುವ ಕೆಲಸಗಳನ್ನು ಬಹಳ ಕಾಲ ಮಾಡುತ್ತಿದ್ದರೆ ಒಂದು ರೀತಿಯ ಆತ್ಮೀಯತೆ ಬಂದುಬಿಡುತ್ತದೆ. ಇದೇ ತತ್ತ್ವವನ್ನು ಆಧರಿಸಿ ಬಲವಂತದ ಮದುವೆಗಳನ್ನು ಮಾಡಿಸುತ್ತಿದ್ದ ಕಾಲವೂ ಇತ್ತು! “ಮಾಡುವ ವೃತ್ತಿಯ ಬಗ್ಗೆ ಪ್ರೀತಿ ಇದೆಯೇ?” ಎನ್ನುವ ಪ್ರಶ್ನೆಯನ್ನು “ನಿಮ್ಮ ವೃತ್ತಿಯ ಬಗ್ಗೆ ಸಂತೃಪ್ತಿ ಇದೆಯೇ?” ಎಂದು ಬದಲಾಯಿಸಿದರೆ ಧನಾತ್ಮಕ ಉತ್ತರಗಳ ಪರಿಮಾಣ ಮತ್ತಷ್ಟು ಕಡಿಮೆಯಾಗಬಹುದು. ಕೆಲಸದಲ್ಲಿ ಸಂತೃಪ್ತಿ ಎಂದರೇನು? ಅದು ಯಾವಾಗ ಬರುತ್ತದೆ? ಎನ್ನುವುದರ ಬಗ್ಗೆ ಸಂಶೋಧಕರು ಬಹಳ ಕಾಲದಿಂದ ಗಮನ ಹರಿಸಿದ್ದಾರೆ. ಇದರಲ್ಲಿ ಎರಡು ಮಾಪನಗಳಿವೆ. (ಚಿತ್ರ) ಒಂದು: ಮಾಡುವ ಕೆಲಸದಲ್ಲಿ ನಮ್ಮ ಪರಿಣತಿ. ಎರಡು: ಆ ಕೆಲಸ ಒಡ್ಡುವ ಸವಾಲುಗಳು. ಕೆಲಸದಲ್ಲಿ ಪರಿಣತಿ ಇರದಿದ್ದರೆ ಸವಾಲಿನ ಮಟ್ಟ ಹೆಚ್ಚಿದಂತೆ ಆತಂಕ ಹೆಚ್ಚುತ್ತದೆ. “ಇದನ್ನು ನಾನು ಮಾಡಲಾರೆ. ಆದರೆ, ಇದು ಮೇಲ್ವಿಚಾರಕರಿಗೆ ತಿಳಿದುಹೋದರೆ ಕೆಲಸ ಹೋಗಬಹುದು. ಹೀಗಾಗಿ, ನಾನು ಕೆಲಸದಿಂದ ತಪ್ಪಿಸಿಕೊಳ್ಳುವ ಉಪಾಯಗಳನ್ನು ಹುಡುಕಬೇಕು” ಎನ್ನುವ ಮನಸ್ಥಿತಿ ಬೆಳೆಯುತ್ತದೆ. ಅಂತೆಯೇ. ನಮ್ಮ ಪರಿಣತಿ ಬಹಳ ಚೆನ್ನಾಗಿದ್ದು, ನಾವು ಮಾಡಬೇಕಾದ ಕೆಲಸದಲ್ಲಿ ಸವಾಲುಗಳೇ ಇಲ್ಲವಾದರೆ ಒಂದು ರೀತಿಯ ಆಲಸ್ಯ ಬೆಳೆಯುತ್ತದೆ. ಹತ್ತು ಫೈಲುಗಳನ್ನು ಒಂದೇ ದಿನಕ್ಕೆ ವಿಲೇವಾರಿ ಮಾಡುವ ಸಾಮರ್ಥ್ಯದ ನೌಕರನಿಗೆ ದಿನಕ್ಕೊಂದೇ ಫೈಲು ನೀಡಿದರೆ ಆತ ಹತ್ತನೆಯ ದಿನದವರಗೆ ಸೋಮಾರಿಯಾಗಿ ಕಳೆದು, ಹತ್ತನೆಯ ದಿನ ಚಕಚಕನೆ ಹತ್ತೂ ಫೈಲುಗಳನ್ನು ಮುಗಿಸಿ ಒಗೆಯುತ್ತಾನೆ. ಇದು ಕೆಲಸಗಾರನ ಸಾಮರ್ಥ್ಯವನ್ನು ಸರಿಯಾಗಿ ಗ್ರಹಿಸಬಲ್ಲ ನಾಯಕರ ಅಭಾವದಿಂದ ಆಗುವ ಪ್ರಕ್ರಿಯೆ. ಈ ಎರಡೂ ಸಾಧ್ಯತೆಗಳ ಪರಮೋಚ್ಚ ಉದಾಹರಣೆಗಳು ನಮ್ಮ ದೇಶದಲ್ಲಿ ಒಂದೇ ಕಡೆ ಲಭಿಸುತ್ತವೆ. ಅದನ್ನು ನಾವೆಲ್ಲರೂ ಕಂಡಿರುತ್ತೇವೆ.

ಇದರ ಮತ್ತಷ್ಟು ಆಯಾಮಗಳನ್ನು ಗಮನಿಸಬಹುದು: ಕಡಿಮೆ ಸಾಮರ್ಥ್ಯದ ಕೆಲಸಗಾರನಿಗೆ ಕಡಿಮೆ ಸವಾಲಿನ ಕೆಲಸ ನೀಡಿದರೆ ಆತನಿಗೆ ನಿರ್ಲಕ್ಷ್ಯ ಧೋರಣೆ ಬೆಳೆಯುತ್ತದೆ. ಸವಾಲಿನ ಮಟ್ಟ ಒಂದೆರಡು ಇಂಚು ಬೆಳೆದರೂ ಆತ ಚಿಂತೆಗೊಳಗಾಗುತ್ತಾನೆ; ಇತರರ ಸಹಾಯಕ್ಕೆ ಹಂಬಲಿಸುತ್ತಾನೆ. ತಕ್ಕಮಟ್ಟಿನ ಸಾಮರ್ಥ್ಯದ ವ್ಯಕ್ತಿಗೆ ಕಡಿಮೆ ಸವಾಲಿನ ಕೆಲಸ ಬೋರು ಹೊಡೆಸುತ್ತದೆ. ಆದರೆ, ಅದೇ ವ್ಯಕ್ತಿಗೆ ಹೆಚ್ಚು ಸವಾಲಿನ ಕೆಲಸ ನೀಡಿದರೆ ಆತನ ಮನಸ್ಥಿತಿಯನ್ನು ಉತ್ತೇಜಿಸಿದಂತಾಗುತ್ತದೆ. ಉನ್ನತ ಸಾಮರ್ಥ್ಯದ ವ್ಯಕ್ತಿ ಮಧ್ಯಮ ಸವಾಲಿನ ಕೆಲಸವನ್ನು ಬಹುಬೇಗ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಾನೆ.

ಈ ಸಮೀಕರಣದ ಅಂತಿಮ ಆಯಾಮ ಉನ್ನತ ಸಾಮರ್ಥ್ಯದ ವ್ಯಕ್ತಿಗೆ ಹೆಚ್ಚಿನ ಸವಾಲಿನ ಕೆಲಸ ನೀಡುವುದು. ಜಗತ್ತಿನ ಸಾಧಕರು ಇದೇ ಗುಂಪಿಗೆ ಸೇರಿದವರು. ತನ್ನ ಸಾಮರ್ಥ್ಯವನ್ನು ಸಮರ್ಥವಾಗಿ ಬಳಸಿಕೊಳ್ಳಬಲ್ಲ ಸವಾಲಿಗೆ ಆತ ಯಾವಾಗಲೂ ಹಾತೊರೆಯುತ್ತಾನೆ. ಅದನ್ನು ಸಶಕ್ತವಾಗಿ ನಿರ್ವಹಿಸಲು ತನ್ನ ಶಕ್ತಿಯನ್ನು ಪಣಕ್ಕಿಡುತ್ತಾನೆ. ಸಮಯದ ಪರಿವೆಯಿಲ್ಲದೆ ಆ ಕೆಲಸದಲ್ಲಿ ನೈಪುಣ್ಯ ಸಾಧಿಸುತ್ತಾನೆ. ಒಂದು ವಿಧದಲ್ಲಿ ಆತನ ಮಾನಸಿಕತೆ ಕಠಿಣ ಕೆಲಸದ ಜೊತೆ ಸಮನ್ವಯವಾಗುತ್ತದೆ. ಅದನ್ನು ಮಾಡುತ್ತಾ ಹೋದಂತೆ ಅಸಾಧಾರಣ ಸಂತೃಪ್ತಿ ಆವರಿಸುತ್ತದೆ. ಮನಃಶಾಸ್ತ್ರಜ್ಞರು ಇಂತಹ ಮನಸ್ಥಿತಿಯನ್ನು “ಫ್ಲೋ” (Flow) ಎಂದು ಕರೆಯುತ್ತಾರೆ. ತನ್ನ ಕೆಲಸವನ್ನು ಪ್ರೀತಿಸುವ, ಅದರಲ್ಲಿ ಸಂತೃಪ್ತಿ ಕಾಣುವ ಇಂತಹ ಮನಸ್ಥಿತಿ ಪ್ರತಿಯೊಬ್ಬ ಸಾಮರ್ಥ್ಯಶಾಲಿಯ ಕನಸಾದರೂ, ಅದನ್ನು ಸಾಧಿಸಬಲ್ಲ ಅವಕಾಶ, ಅನುಕೂಲ, ಅದೃಷ್ಟ ಇರುವವರು ಕಡಿಮೆಯೇ. ಪ್ರಪಂಚದ ದಿಕ್ಕನ್ನು ಬದಲಿಸಿದ ಬಹುತೇಕ ಮಂದಿ ಈ ಗುಂಪಿನವರು.

ಆದರೆ ಈ ಗುಂಪಿಗೆ ಸೇರುವುದು ಸುಲಭವಲ್ಲ. ಇದೊಂದು ರೀತಿಯ ತಪಸ್ಸಿನಂತೆ. ಜಗದ್ವಿಖ್ಯಾತ ಸಂಗೀತಕಾರ ಬಿಥೋವನ್ ಕುರಿತಾದ ಒಂದು ಪ್ರಸಂಗವಿದೆ. ಇಳಿವಯಸ್ಸಿನಲ್ಲಿ ಆತನಿಗೆ ಕಿವಿ ಕೇಳುತ್ತಿರಲಿಲ್ಲ. ಅದು ಆತನ ಸಂಗೀತ ಸಾಧನೆಗೆ ಅಡ್ಡಿಯಾಗಲಿಲ್ಲ. ಒಮ್ಮೆ ಆತನ ಕಛೇರಿಯ ನಂತರ ತುಸು ವಯಸ್ಸಾದ ಹೆಂಗಸೊಬ್ಬರು ಆತನನ್ನು ಅಭಿನಂದಿಸುತ್ತಾ “ನಿಮ್ಮಷ್ಟು ನೈಪುಣ್ಯವನ್ನು ಆ ಭಗವಂತ ನನಗೆ ಕೊಟ್ಟಿದ್ದರೆ...” ಎಂದರಂತೆ. ತನ್ನ ಸಹಾಯಕನಿಂದ ಸನ್ನೆಗಳ ಮೂಲಕ ಆಕೆಯ ಮಾತನ್ನು ಅರಿತ ಬಿಥೋವನ್ ಆಕೆಗೆ ಉತ್ತರಿಸಿದರಂತೆ: “ಅಂತಹ ಸಾಮರ್ಥ್ಯವನ್ನು ಭಗವಂತನಿಂದ ನೀವು ಕೂಡ ಪಡೆಯಬಹುದು. ಹೆಚ್ಚೇನಿಲ್ಲ – ದಿನಕ್ಕೆ ಹದಿನಾಲ್ಕು ಗಂಟೆಗಳಂತೆ ಒಂದು ದಿನವೂ ಬಿಡದೆ ಮೂವತ್ತು ವರ್ಷಗಳ ಕಾಲ ಅಭ್ಯಾಸ ಮಾಡಿದರೆ ಸಾಕು; ಭಗವಂತ ಇಷ್ಟು ನೈಪುಣ್ಯವನ್ನು ಮುಲಾಜಿಲ್ಲದೆ ಪ್ರಸಾದಿಸುತ್ತಾನೆ”. ಸಾಧಕರ ಅಂತಿಮ ಪ್ರದರ್ಶನವನ್ನು ನೋಡುವವರಿಗೆ ಅದರ ಹಿಂದಿನ ನಿರಂತರ ಅಭ್ಯಾಸದ ಅಂದಾಜು ಮೂಡುವುದಿಲ್ಲ. “ಯಾವುದೇ ಕೆಲಸ ನೋಡುಗರಿಗೆ ಸುಲಭ ಎನಿಸಿದರೆ ಆ ಕೆಲಸ ಸುಲಭ ಎಂತಲ್ಲ. ಬದಲಿಗೆ ಅದನ್ನು ಮಾಡುತ್ತಿರುವ ವ್ಯಕ್ತಿ ಅತ್ಯಂತ ಸಮರ್ಥ ಎಂದರ್ಥ” ಎನ್ನುವ ಮಾತಿದೆ. ಶಿಲ್ಪಕಲೆಯೋ, ಶಸ್ತ್ರಚಿಕಿತ್ಸೆಯೋ, ರೇಸ್ ವಾಹನ ಚಾಲನೆಯೋ, ಚಿತ್ರಕಲೆಯೋ, ಪ್ರಯೋಗವೋ – ಯಾವುದನ್ನಾದರೂ ದಣಿವರಿಯದೆ, ಅತೀವ ಆನಂದದಿಂದ ಮಾಡುವ ವ್ಯಕ್ತಿ ಅದರಲ್ಲಿ ತನ್ನ “ಫ್ಲೋ” ಎನ್ನುವ ಸಂತೃಪ್ತಿಯನ್ನು ಕಂಡುಕೊಂಡಿರುತ್ತಾನೆ.

ಈಗ ಸ್ವಲ್ಪ ಕಾಲದ ಮಟ್ಟಿಗೆ ಬೇರೊಂದು ಪ್ರದೇಶಕ್ಕೆ ಹೋಗೋಣ. ಉಸುಕಿನಿಂದ ತುಂಬಿದ ಇಪ್ಪತ್ತು ಗೋಣಿಚೀಲಗಳು. ಅದರ ಹಿಂದೆ ನಿಂತಿರುವ, ಹುಲ್ಲೆಯಂತೆ ನಡುಗುತ್ತಿರುವ ಮೂವತ್ತರ ಹರೆಯದ ಓರ್ವ ಹೆಣ್ಣುಮಗಳು. ಆಕೆಯ ಕೈಲೊಂದು ಆಟೊಮ್ಯಾಟಿಕ್ ಬಂದೂಕು. ಚೀಲಗಳ ಮತ್ತೊಂದು ಬದಿ ಜೋರಾಗಿ ಚೀರುತ್ತಾ ಈಕೆಯೆಡೆಗೆ ಮುನ್ನುಗ್ಗುತ್ತಿರುವ ಇಪ್ಪತ್ತು ಮಂದಿ ಮುಸುಕುಧಾರಿ ಆತ್ಮಾಹುತಿ ಭಯೋತ್ಪಾದಕರು. ಅವರ ಸೊಂಟದಲ್ಲೊಂದು ಬಾಂಬ್; ಕೈಯಲ್ಲಿ ಬಂದೂಕು. ಇವರಲ್ಲಿ ಒಬ್ಬರನ್ನು ಆಕೆ ಗುಂಡು ಹೊಡೆದು ಬೀಳಿಸಿದರೆ ಮೂವರು ಮುನ್ನುಗ್ಗುವರು. ಆಕೆಯ ಹಣೆಯಲ್ಲಿ ಬೆವರ ಸಾಲು; ಕೈಲಿ ನಡುಕ. ಈ ಆತಂಕದಿಂದ ಆಗಾಗ ಜ್ಯಾಮ್ ಆಗುತ್ತಿರುವ ಬಂದೂಕಿನ ಟ್ರಿಗ್ಗರ್. ಬಂದೂಕು ಚಲಾಯಿಸುವ ತನ್ನ ವೇಗ ಸಾಲದಾಗಿದೆ ಎನ್ನುವ ಭೀತಿ ಆಕೆಯದ್ದು; ನೀಡಿದ ಕೆಲಸ ನಿಭಾಯಿಸಲು ತಾನು ಅಸಮರ್ಥಳು ಎನ್ನುವ ಭಾವ .ಎಲ್ಲ ಮುಗಿದುಹೋಯಿತು ಎನ್ನುವ ಮನಸ್ಥಿತಿ.

ಈ ವಿಷಮ ಪರಿಸ್ಥಿತಿಯಲ್ಲಿ ಇದ್ದ ಒಂದೇ ಒಂದು ಸಮಾಧಾನ ಎಂದರೆ ಇದೊಂದು ವಿಡಿಯೋ ಆಟ ಎನ್ನುವುದು ಮಾತ್ರ. ಆಕೆ ಉಸುಕಿನ ಚೀಲಗಳ ಹಿಂದೆ ಇದ್ದದ್ದು ನಿಜ. ಆದರೆ ಆಕೆಯ ಕೈಲಿದ್ದದ್ದು ಆಟಿಕೆಯ ಬಂದೂಕು. ಉಳಿದೆಲ್ಲವೂ ಆ ಚೀಲಗಳ ಮತ್ತೊಂದು ಬದಿ ಇದ್ದ ದೊಡ್ಡ ಪರದೆಯ ಮೇಲೆ ನೈಜತೆಗೆ ಸವಾಲೊಡ್ಡುವಂತೆ ಮೂಡುತ್ತಿದ್ದ ಬಿಂಬಗಳು. ಇದು ನಡೆಯುತ್ತಿದ್ದುದು ಕ್ಯಾಲಿಫೋರ್ನಿಯಾದ ಸೈನಿಕ ತರಬೇತಿ ಕೇಂದ್ರದ ಮಿಲಿಟರಿ ಪ್ರಯೋಗಾಲಯದಲ್ಲಿ. ಶಾರ್ಪ್ ಶೂಟರ್ ಗಳ ತರಬೇತಿಗೆ ಬಳಸುವ ಪ್ರಯೋಗದ ಒಂದು ಭಾಗವಾಗಿ ಜನಪ್ರಿಯ ವಿಜ್ಞಾನದ ಲೇಖಕಿಯಾದ ಆಕೆ ಪ್ರಯೋಗಾಲಯಕ್ಕೆ ಭೇಟಿ ನೀಡಿದ್ದರು. ಇಪ್ಪತ್ತು ನಿಮಿಷಗಳ ಕಾಲ ನಡೆದ ಪ್ರಯೋಗದ ಭಾಗವಾಗಿ ಆಕೆ ಉಸುಕಿನ ಚೀಲಗಳ ಹಿಂದೆ ಬಂದೂಕು ಹಿಡಿದು ನಿಂತಿದ್ದರು. ಆ ಇಪ್ಪತ್ತು ನಿಮಿಷಗಳ ಉಸಿರುಗಟ್ಟಿಸುವ ಅವಧಿಯ ನಂತರ ಆಕೆ ಸಾಗಿದ್ದು ತನ್ನ ಜೀವನದಲ್ಲಿ ಮರೆಯಲಾಗದ ಒಂದು ಅನುಭವದ ಮೂಲಕ.

ಮಿಲಿಟರಿ ತರಬೇತಿ ಕೇಂದ್ರದ ಸಂಶೋಧಕರು ಆಕೆಯ ತಲೆಗೆ ಕೆಲವು ವಿದ್ಯುತ್ ವಾಹಕಗಳನ್ನು ಒಳಗೊಂಡ ಹೆಲ್ಮೆಟ್ ಮಾದರಿಯ ತಲೆಗವಚವನ್ನು ಜೋಡಿಸಿದರು. ಇದಕ್ಕೆ 9 ವೋಲ್ಟಿನ ಪುಟ್ಟ ಬ್ಯಾಟರಿ ಸಂಪರ್ಕ ನೀಡಿದರು. ಇದರಿಂದ ಅಲ್ಪ ಪ್ರಮಾಣದ ವಿದ್ಯುತ್ ನೇರವಾಗಿ ಆಕೆಯ ಮಿದುಳಿನ ಕೆಲವು ನಿರ್ದಿಷ್ಟವಾದ ಭಾಗಗಳನ್ನು ಪ್ರಚೋದಿಸುತ್ತಿತ್ತು. ಮತ್ತೊಮ್ಮೆ ಬಂದೂಕು ಹಿಡಿದ ಆಕೆ ಉಸುಕಿನ ಚೀಲಗಳ ಹಿಂದೆ ನಿಂತರು. ಮುಂದಿನ ಇಪ್ಪತ್ತು ನಿಮಿಷಗಳ ಕಾಲ ಆಕೆ ಬೇರೆಯೇ ವ್ಯಕ್ತಿಯಾದರು. ಆಕೆಯ ಬಂದೂಕಿನ ಗುರಿ ಒಮ್ಮೆಯೂ ತಪ್ಪಲಿಲ್ಲ. ಸರಣಿಯಲ್ಲಿ ಆತ್ಮಾಹುತಿ ಭಯೋತ್ಪಾದಕರು ಆಕೆಯೆಡೆಗೆ ನುಗ್ಗಿ ಬರುತ್ತಿದ್ದರೂ ಆಕೆ ಒಂದಿನಿತೂ ಅಳುಕಲಿಲ್ಲ. ಭೀತಿ ಎಂಬುದು ಆಕೆಯ ಅನುಭವಕ್ಕೂ ಬರಲಿಲ್ಲ. ಭಯವಿಲ್ಲ; ಆತ್ಮಶಂಕೆಯಿಲ್ಲ; ಗೊಂದಲವಿಲ್ಲ. ಆಕೆಯ ಬಂದೂಕಿನ ಪ್ರತಿಯೊಂದು ನಿಶಾನೆಯೂ ನಿಶಿತ, ನಿಖರ. ದಶಕಗಳ ನಿರಂತರ ಪ್ರಯತ್ನಗಳಿಂದ ಪಳಗಿದ ಗುರಿಕಾರನ ರೀತಿಯಲ್ಲಿ ಸಂದರ್ಭವನ್ನು ಶಾಂತವಾಗಿ, ಸಂಪೂರ್ಣ ನಿಯಂತ್ರಣದಿಂದ ನಿಭಾಯಿಸಿದರು. ಇಪ್ಪತ್ತು ನಿಮಿಷಗಳ ಅವಧಿ ಮುಗಿದಾಗ ಆಕೆಯ ಎದುರು ಒಬ್ಬ ಭಯೋತ್ಪಾದಕನೂ ಉಳಿದಿರಲಿಲ್ಲ. ತಾನು ಮಾಡುತ್ತಿರುವ ಕೆಲಸದಲ್ಲಿ ಬಹಳ ಉನ್ನತ ಮಟ್ಟದ ಸಾಮರ್ಥ್ಯ ಆ ಇಪ್ಪತ್ತು ನಿಮಿಷಗಳ ಕಾಲ ಆಕೆಯದಾಗಿತ್ತು. ಅಷ್ಟೂ ವೇಳೆಯೂ ಅತ್ಯಂತ ಕಠಿಣವಾದ ಕೆಲಸವನ್ನು ಆಕೆ ನಿಷ್ಪ್ರಯಾಸದಿಂದ ಮಾಡಿ ಸಂತೃಪ್ತಿಯ “ಫ್ಲೋ” ಅನುಭವಿಸಿದರು. ಆಕೆಯ ತಲೆಯಿಂದ ವಿದ್ಯುತ್ ವಾಹಕಗಳನ್ನು ತೆಗೆದುಹಾಕಿದ ಕೂಡಲೇ ಮೊದಲಿನ ಬೆದರಿದ ಹುಲ್ಲೆಯಾದರು.

ತನ್ನ ಈ ಅನುಭವವನ್ನು ಆಕೆ ನ್ಯೂ ಸೈಂಟಿಸ್ಟ್ ಪತ್ರಿಕೆಯಲ್ಲಿ ಪ್ರಕಟಿಸಿದಾಗ ಒಂದು ಸಂಚಲನವೇ ಮೂಡಿತು. ಯುವಲ್ ನೋಹ್ ಹರಾರಿಯಂತಹ ಪ್ರಸಿದ್ಧ ಲೇಖಕರು ಆಕೆಯ ಅನುಭವದ ಬಗ್ಗೆ ತಮ್ಮ ಪುಸ್ತಕದಲ್ಲಿ ಬರೆದರು. ತನ್ನ ಈ ಅನುಭವವನ್ನು ಆಕೆ The nine-volt Nirvana (9 ವೋಲ್ಟ್ ನಿರ್ವಾಣ) ಎಂದು ಬಣ್ಣಿಸಿದರು. ಯಾವ ಸಂತೃಪ್ತಿಯ ಸಾಧನೆಗಾಗಿ ದಶಕಗಳ ನಿರಂತರ ಶ್ರಮ ಹಿಡಿಯುತ್ತದೆಯೋ ಅದನ್ನು ತಲೆಗೆ ಹಚ್ಚಿದ ವಿದ್ಯುತ್ ವಾಹಕಗಳ ಹೆಲ್ಮೆಟ್ ಮತ್ತು ಪುಟ್ಟ ಬ್ಯಾಟರಿಗಳು ಮಾಡಿದ್ದವು. ಆ ಸಮಯದಲ್ಲಿ ಆಕೆಗೆ ಯಾವ ಅಡ್ಡ ಪರಿಣಾಮಗಳೂ ಆಗಲಿಲ್ಲ. ಆ ಸಂತೃಪ್ತಿಯ ಗುಂಗಿನಿಂದ ಹೊರಬರಲು ಆಕೆಗೆ ಮೂರು ದಿನಗಳು ಹಿಡಿದವು. “ಈ ಅನುಭವ ಮತ್ತೊಮ್ಮೆ ಆಗಲಿ” ಎಂದು ಆಕೆಯ ಮನಸ್ಸು ಹಾತೊರೆಯಹತ್ತಿತು. ವಿದ್ಯುತ್ ವಾಹಕಗಳ ಹೆಲ್ಮೆಟ್ ಧರಿಸಿದ ಆ ಇಪ್ಪತ್ತು ನಿಮಿಷಗಳ ಕಾಲ ಆಕೆಗೆ ಆದದ್ದೇನು? ಆಕೆಯ ಮನದಲ್ಲಿ ಈ ಮೊದಲೇ ಮನೆಮಾಡಿದ್ದ ಸೋಲಿನ ಭೀತಿ, ಆತ್ಮಶಂಕೆಗಳಂತಹ ಹಿಂಜರಿತಗಳು ಇಲ್ಲವಾದವೇ? ಅಥವಾ ಆಕೆಯ ಮಿದುಳು ಈ ಮೊದಲು ಎಂದೂ ಅರಿಯದ ಹೊಸ ಬಗೆಯ ಕಲಿಕೆಯನ್ನು ಅನುಭವಿಸಿತೇ? ಈ ಅನುಭವ ಆಕೆಯಿಂದ ಹಳೆಯ ಏನನ್ನಾದರೂ ಕಳೆಯಿತೇ ಅಥವಾ ಹೊಸದಾದ ಏನನ್ನಾದರೂ ನೀಡಿತೇ?

ಈ ಪ್ರಶ್ನೆಗಳ ಉತ್ತರ ಸುಲಭವಲ್ಲ. ಪರಿಣತಿ ಎಂದರೇನು? ನಿರಂತರ ಪ್ರಯತ್ನಗಳಿಂದ ನಾವು ನಮ್ಮ ಮಿದುಳಿನಲ್ಲಿ ವಿವಿಧ ನರಕೋಶಗಳ ನಡುವೆ ಶಕ್ತಿಶಾಲಿಯಾದ ಸಂಪರ್ಕಗಳನ್ನು ನಿರ್ಮಿಸಿಕೊಳ್ಳುತ್ತೇವೆ. ಅದು ಸಂಗೀತಗಾರನೊಬ್ಬನ ಹಾಡುಗಾರಿಕೆಯಿರಬಹುದು; ವಾದ್ಯವೊಂದರ ಮೇಲಿನ ನೈಪುಣ್ಯವಿರಬಹುದು; ವಾಹನದ ಕ್ಲಿಷ್ಟಕರ ರಿಪೇರಿಯ ಸೂಕ್ಷ್ಮ ಹಂತಗಳಿರಬಹುದು; ಕಠಿಣವಾದ ಶಸ್ತ್ರಚಿಕಿತ್ಸೆಯ ಹತ್ತಾರು ಅಂಶಗಳಿರಬಹುದು; ಕುಸುರಿ ಕೆಲಸ ಮಾಡುವ ಅಕ್ಕಸಾಲಿಯ ಪರಿಶ್ರಮವಿರಬಹುದು – ಪ್ರತಿಬಾರಿಯ ಸಾಧನೆ, ಅನುಭವದ ಕಲಿಕೆ, ತಪ್ಪುಗಳನ್ನು ಒಪ್ಪಗೊಳಿಸುವುದು, ಹಿಂದಿನ ಬಾರಿಯ ಸಾಫಲ್ಯವನ್ನು ಮತ್ತಷ್ಟು ಚಂದಗೊಳಿಸುವುದು, ಒಂದು ಹಂತದ ಪ್ರಾವೀಣ್ಯ ಪಡೆದ ಮೇಲೆ ಆ ಕೆಲಸಕ್ಕೆ ಮತ್ತೊಂದು ನವೀನ ಆಯಾಮವನ್ನು ಜೋಡಿಸುವುದು – ಹೀಗೆ ಪ್ರತಿಬಾರಿಯೂ ಆ ಕೆಲಸ ಮಾಡುವಾಗ ಮಿದುಳು ಹೊಸಹೊಸ ನರಕೋಶಗಳನ್ನು ಜೋಡಿಸುತ್ತಾ, ಹಿಂದೆಂದೂ ಆಗಿಲ್ಲದ ಸಂಪರ್ಕಗಳನ್ನು ನಿರ್ಮಿಸುತ್ತದೆ. ಪ್ರತಿ ಬಾರಿ ಈ ಸಾಧನೆಯಲ್ಲಿ ಯಶಸ್ಸು ಕಂಡಾಗ ಆಗುವ ಆನಂದದ ಭಾವ, ನಮಗೆ ಸಂತಸವನ್ನು ಉಂಟುಮಾಡುವ ಮಿದುಳಿನ ಭಾಗದ ಜೊತೆಗೆ ಈ ಬಲಶಾಲಿ  ಸಂಪರ್ಕಗಳನ್ನು ಸಮನ್ವಯಗೊಳಿಸಿ ಬೆಸೆಯುತ್ತದೆ. ಸಾಧನೆ ಕಠಿಣವಾದಷ್ಟೂ ಸಂತಸದ ಪ್ರಮಾಣ ಹೆಚ್ಚುತ್ತದೆ. ಇದು ಒಂದು ಹಂತವನ್ನು ಮೀರಿದಾಗ ಆನಂದದ ಭಾವ ಸ್ಥಾಯಿಯಾಗುತ್ತದೆ. ಇದನ್ನೇ ಸಂತೃಪ್ತಿಯ “ಫ್ಲೋ” ಎಂದು ಬಣ್ಣಿಸುತ್ತಾರೆ. ಅಸಲಿಗೆ ಈ ಫ್ಲೋ ಎನ್ನುವುದು ಮಿದುಳಿನ ವಿವಿಧ ನರಕೋಶಗಳ ನಡುವಿನ ಸಂಪರ್ಕಗಳ ಮೂಲಕ ಹರಿಯುವ ಸಣ್ಣ ಪ್ರಮಾಣದ ವಿದ್ಯುದಾವೇಶ. ತಲೆಯ ಮೇಲ್ಭಾಗದಲ್ಲಿ ಅಂಟಿಸಿದ ವಿದ್ಯುತ್ ವಾಹಕಗಳ ಹೆಲ್ಮೆಟ್ ಮೂಲಕ ಮಿದುಳಿನ ನರಗಳಿಗೆ ಕೃತಕ ಸಂಪರ್ಕ ಕಲ್ಪಿಸಿ ನೀಡಿದ ವಿದ್ಯುದಾವೇಶವೂ ಸಾಧಿಸಿದ್ದು ಇದನ್ನೇ.

ಇದರ ದೂರಗಾಮಿ ಪರಿಣಾಮಗಳೇನು? ಪ್ರಯತ್ನದ ಲವಲೇಶವೂ ಇಲ್ಲದೆ ಪರಿಣತ ಸಾಧಕರಾಗುವ ಭಾಗ್ಯವನ್ನು ಯಾರು ತಾನೇ ನಿರಾಕರಿಸಬಲ್ಲರು? ಆಧುನಿಕ ತಂತ್ರಜ್ಞಾನಗಳನ್ನು ಬಳಸಿ, ಮಿದುಳಿನ ಕೆಲಸಗಳನ್ನು ಚೆನ್ನಾಗಿ ಅರಿತುಕೊಂಡು, ಸರಿಯಾದ ಹಾದಿಯಲ್ಲಿ ವಿದ್ಯುದಾವೇಶ ಕಲ್ಪಿಸಿ, ಹಾದಿಬದಿಯ ಯಾರನ್ನು ಬೇಕಾದರೂ ಸೂಪರ್ ಮ್ಯಾನ್ ಮಾಡಬಲ್ಲ ವಿಧಾನಗಳು ಮನುಕುಲವನ್ನು ಸರಿಯಾದ ಹಾದಿಯಲ್ಲಿ ಒಯ್ಯಲು ಸಾಧ್ಯವೇ? ಇಂತಹ ಪ್ರಯೋಗಗಳು ಅಸಾಧುವಲ್ಲವೇ? ಇದು ಹೀಗೆಯೇ ಮುಂದುವರೆದರೆ ನಾಳೆ ಇಂತಹ ತಂತ್ರಜ್ಞಾನದ ಲಭ್ಯತೆ ಇಲ್ಲದ ಸಾಮಾನ್ಯರ ಪಾಡೇನು?

ಈ ಪ್ರಶ್ನೆಗಳಿಗೆ ಉತ್ತರಿಸುವ ಅಗತ್ಯ ಸದ್ಯಕ್ಕಂತೂ ಕಂಡುಬಂದಿಲ್ಲ. ಆದರೆ ಎಂದಾದರೊಂದು ದಿನ ಇವು ನಮ್ಮ ಮುಂದೆ ರಾಕ್ಷಸಾಕಾರವಾಗಿ ನಿಲ್ಲುತ್ತವೆ. ಅಷ್ಟರೊಳಗೆ ಇದರ ಸಮ್ಯಕ್ ಉತ್ತರಗಳನ್ನು ನಾವು ಆಲೋಚಿಸಲೇಬೇಕು. ಪ್ರಗತಿಯ ನಾಗಾಲೋಟವನ್ನು ತಡೆಯುವುದು ಅಸಾಧ್ಯ. ಆದರೆ ಅದನ್ನು ಒಳ್ಳೆಯ ಹಾದಿಯಲ್ಲಿ ಬಳಸಿಕೊಳ್ಳಲು ಸರಿಯಾದ ನಿಯಮಗಳನ್ನು ರೂಪಿಸುವುದರಲ್ಲಿ ಮನುಕುಲದ ಭವಿಷ್ಯ ಅಡಗಿದೆ.

-----------------------

ಸಂತೃಪ್ತಿಯ ಫ್ಲೋ ತತ್ತ್ವವನ್ನು ವಿವರಿಸುವ ನಕ್ಷೆ. https://upload.wikimedia.org/wikipedia/commons/f/f6/Challenge_vs_skill.svg Oliverbeatson, Public domain, via Wikimedia Commons

ವಿಸ್ತಾರ ಜಾಲತಾಣದಲ್ಲಿ ಪ್ರಕಟವಾ #ವೈದ್ಯ_ದರ್ಪಣ ಅಂಕಣದ ಮಾರ್ಚ್ 2023 ರ ಸಂಚಿಕೆ. ವಿಸ್ತಾರ ಜಾಲತಾಣದಲ್ಲಿನ ಮೂಲ ಲೇಖನದ ಕೊಂಡಿ: https://vistaranews.com/columns/vaidya-darpana-column-on-fulfilment-and-nine-volts-nirvana-and-ethics-of-it/273508.html

 

 ಜ್ವರ, ನೆಗಡಿ, ಕೆಮ್ಮು – ಏನು ಮಾಡುವುದು?

ಡಾ. ಕಿರಣ್ ವಿ.ಎಸ್.

ವೈದ್ಯರು

ಸದ್ಯದ ಋತುವಿನಲ್ಲಿ ಸರಿಸುಮಾರು ಪ್ರತಿಯೊಬ್ಬರನ್ನೂ ಕಾಡುವ ಸಮಸ್ಯೆ ಜ್ವರ, ಕೆಮ್ಮು ನೆಗಡಿ. ಕೆಲವರನ್ನು ಸೋಕಿಯೂ ಸೋಕದಂತೆ ಹಾದುಹೋಗುವ ಈ ಸಮಸ್ಯೆಗಳು ಹಲವರನ್ನು ಜರ್ಬಾಗಿ ಕಾಡಿ ಹೈರಾಣು ಮಾಡುತ್ತವೆ. ನೂರು ಡಿಗ್ರಿ ಫ್ಯಾರನ್ಹೀಟ್ ಆಸುಪಾಸಿನ ಜ್ವರ, ಆಲಸಿತನ, ಮೈ-ಕೈ ನೋವು, ತಲೆಶೂಲೆ, ರುಚಿಯಲ್ಲಿ ವ್ಯತ್ಯಾಸ, ನೆಗಡಿ, ಮೂಗು ಕಟ್ಟುವಿಕೆ, ಒಣಕೆಮ್ಮು, ಗಂಟಲು ಒಣಗುವಿಕೆ, ಘ್ರಾಣ ಸಾಮರ್ಥ್ಯ ಕುಂದುವಿಕೆ, ತಲೆಸುತ್ತು ಮೊದಲಾದ ಲಕ್ಷಣಗಳು ಕಂಡ ಹಲವರಿಗೆ ಅನೇಕ ವೈದ್ಯರು “ಒಮ್ಮೆ ಕೋವಿಡ್-19 ಪರೀಕ್ಷೆ ಮಾಡಿಸಿ” ಎಂದು ಹೇಳಿದಾಗ “ಮತ್ತೆ ಕೋವಿಡ್ ಸಮಸ್ಯೆ ಮರುಕಳಿಸುತ್ತಿದೆಯೇ?” ಎನ್ನುವ ಅನುಮಾನವೂ ಕಾಡುತ್ತದೆ.

ಪ್ರತಿಯೊಂದು ಋತುವಿನ ಬದಲಾವಣೆಯ ವೇಳೆಯೂ ಕೆಲವು ಆರೋಗ್ಯ ಸಮಸ್ಯೆಗಳು ವಾತಾವರಣದಲ್ಲಿ ಹರಡುತ್ತವೆ. ಚಳಿಗಾಲ ಮುಗಿದು ಬೇಸಿಗೆ ಆರಂಭವಾಗುವ ವೇಳೆ ಕೆಮ್ಮು, ನೆಗಡಿಯುಕ್ತ ಜ್ವರಗಳು ಬಹಳಷ್ಟು ಜನರಲ್ಲಿ ಕಾಣುತ್ತವೆ. ಇದು ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಸಾಂಕ್ರಾಮಿಕ ಸೋಂಕು. ಸೋಂಕಿತ ವ್ಯಕ್ತಿ ಸೀನಿದಾಗ ಅಥವಾ ಕೆಮ್ಮಿದಾಗ ಹೊರಬರುವ ಸಣ್ಣ ಹನಿಗಳು ಸುತ್ತಮುತ್ತಲಿನ ಆರು ಅಡಿ ಪರಿಧಿಯಲ್ಲಿ ಕೆಲಕಾಲ ಗಾಳಿಯಲ್ಲಿ ತೇಲುತ್ತವೆ. ಇಂತಹ ಹನಿಗಳಲ್ಲಿ ರೋಗಕಾರಕ ಕ್ರಿಮಿಗಳು ಮನೆ ಮಾಡಿರುತ್ತದೆ. ಸೋಂಕಿತ ವ್ಯಕ್ತಿಯ ಸುತ್ತಮುತ್ತಲಿರುವ ನಿರೋಗಿ ವ್ಯಕ್ತಿಯ ಶ್ವಾಸನಾಳಗಳನ್ನು ಉಸಿರಿನ ಮೂಲಕ ಪ್ರವೇಶಿಸುವ ಈ ಹನಿಗಳಲ್ಲಿನ ಕೀಟಾಣುಗಳು ಅವರಲ್ಲೂ ಸೋಂಕಿಗೆ ಕಾರಣವಾಗುತ್ತದೆ. ಅಲ್ಲದೆ, ಸೋಂಕಿತ ವ್ಯಕ್ತಿಯ ಶ್ವಾಸದ್ರವಗಳನ್ನು ಹೊಂದಿದ ಬಟ್ಟೆಗಳು, ವಸ್ತುಗಳನ್ನು ಮುಟ್ಟಿದ ನಿರೋಗಿಗಳು ಹಾಗೆಯೇ ತಮ್ಮ ಮೂಗು, ಬಾಯಿಗಳನ್ನು ಸ್ಪರ್ಷಿಸಿದರೆ, ಅದರ ಮೂಲಕವೂ ಕೀಟಾಣುಗಳು ಹರಡಬಹುದು. ನಗರ ಪ್ರದೇಶಗಳ ಸಣ್ಣ ಜಾಗಗಳಲ್ಲಿ ಬಹಳ ಮಂದಿ ಅಡಕವಾಗುವ ಸಂದರ್ಭಗಳಲ್ಲಿ ಒಬ್ಬರಿಂದ ಮತ್ತೊಬ್ಬರಿಗೆ ಬಹುಬೇಗನೆ ಸೋಂಕು ಹರಡುವುದು ಸಾಮಾನ್ಯ.

ಋತು ಬದಲಾವಣೆಯ ಕಾಲದ ಶೀತ, ಕೆಮ್ಮು, ಜ್ವರದ ಲಕ್ಷಣಗಳು ಬಹುಮಟ್ಟಿಗೆ ತಂತಾನೇ ಗುಣವಾಗುವ ಆರೋಗ್ಯ ಸಮಸ್ಯೆಗಳು. ಕೆಲವರಲ್ಲಿ ಈ ಸೋಂಕು ಬ್ಯಾಕ್ಟೀರಿಯಾಗಳಿಗೆ ಆಹ್ವಾನ ನೀಡುತ್ತದೆ. ಅಂತಹವರಲ್ಲಿ ಆಂಟಿಬಯೋಟಿಕ್ ಔಷಧಗಳ ಅಗತ್ಯ ಕಾಣಬಹುದು. ಇದನ್ನು ವೈದ್ಯರು ನಿರ್ಧರಿಸಬೇಕೆ ಹೊರತು, ರೋಗಿಗಳು ತಾವಾಗಿಯೇ ಅನಗತ್ಯ ಚಿಕಿತ್ಸೆ ಮಾಡಿಕೊಳ್ಳಬಾರದು. ಆಂಟಿಬಯೋಟಿಕ್ ಔಷಧಗಳ ಅಡ್ಡಪರಿಣಾಮಗಳು ಹಲವಾರು. ಜೊತೆಗೆ, ಅಗತ್ಯವಿಲ್ಲದೆಡೆ ಆಂಟಿಬಯೋಟಿಕ್ ಔಷಧಗಳನ್ನು ಬಳಸಿದರೆ ಅವುಗಳಿಗೆ ಪ್ರತಿರೋಧ ಬೆಳೆಯುತ್ತದೆ. ಮುಂದೊಂದು ದಿನ ಅಗತ್ಯ ಬಿದ್ದಾಗ ಅಂತಹ ಆಂಟಿಬಯೋಟಿಕ್ ಔಷಧ ಬಳಸಿದರೂ ಅದರ ಪರಿಣಾಮ ಆಗುವುದಿಲ್ಲ. ಈ ಬಗ್ಗೆ ಕಟ್ಟೆಚ್ಚರ ಅಗತ್ಯ. ಇದರ ಹೊರತಾಗಿ ಈ ಲಕ್ಷಣಗಳಿಗೆ ತೀವ್ರತರ ಚಿಕಿತ್ಸೆಯ ಅಗತ್ಯವಿಲ್ಲ.

ಆದರೆ, ಈ ಮೊದಲೇ ಆರೋಗ್ಯ ಪರಿಸ್ಥಿತಿ ನಾಜೂಕಾಗಿರುವ ಕೆಲವರಲ್ಲಿ ಶೀತ, ಕೆಮ್ಮು, ಜ್ವರದ ಲಕ್ಷಣಗಳು ತೀವ್ರ ಕಾಯಿಲೆಗೆ ಕಾರಣವಾಗಬಹುದು. ಉದಾಹರಣೆಗೆ, ಹೃದಯ ವೈಫಲ್ಯದ ರೋಗಿಗಳು, ಅಸ್ಥಮಾ ಪೀಡಿತರು, ಮಧುಮೇಹಿಗಳು, ಶ್ವಾಸಕೋಶದ ಸಮಸ್ಯೆಗಳಿಂದ ಬಳಲುವವರು, ಕ್ಯಾನ್ಸರ್ ಚಿಕಿತ್ಸೆ ಪಡೆಯುವವರು, ಯಕೃತ್ತಿನ ಅಥವಾ ಮೂತ್ರಪಿಂಡಗಳ ದೀರ್ಘಕಾಲಿಕ ಸಮಸ್ಯೆ ಉಳ್ಳವರು – ಹೀಗೆ ಕೆಲವರಲ್ಲಿ ಶೀತ, ನೆಗಡಿ, ಜ್ವರಗಳ ಕಾರಣದಿಂದ ಇಳಿಮುಖವಾಗುವ ಆಂತರಿಕ ರೋಗನಿರೋಧಕ ಶಕ್ತಿ ಇತರ ಕಾಯಿಲೆಗಳನ್ನು ತಂದು ಪರಿಸ್ಥಿತಿಯ ಉಲ್ಬಣಕ್ಕೆ ಕಾರಣವಾಗಬಹುದು. ಪ್ರಸ್ತುತ ಇಂತಹ ಲಕ್ಷಣಗಳು ಕೋವಿಡ್-19 ಸೋಂಕನ್ನು ಬಹಳ ಮಟ್ಟಿಗೆ ಹೋಲುವುದರಿಂದ ವೈದ್ಯರು ಕೋವಿಡ್ ಪರೀಕ್ಷೆಯನ್ನು ಮಾಡುವಂತೆ ಸೂಚಿಸಬಹುದು. ಇದು ರೋಗಿಗಳ ಆತಂಕಕ್ಕೆ ಕಾರಣವಾಗುತ್ತದೆ.

ಶೀತ, ಕೆಮ್ಮು ಜ್ವರದ ಕಾರಣದಿಂದ ಉಂಟಾಗುವ ಕಾಯಿಲೆ ತ್ರಾಸವೆನಿಸಿದರೂ, ದೀರ್ಘಕಾಲಿಕ ಕಾಯಿಲೆಗಳಿಲ್ಲದ ಆರೋಗ್ಯವಂತರಲ್ಲಿ ಇದರ ಚಿಕಿತ್ಸೆ ಸರಳ. ಬಹುತೇಕ ಮಂದಿಯ ಆಂತರಿಕ ರೋಗನಿರೋಧಕ ಶಕ್ತಿಯೇ ಈ ಕಾಯಿಲೆಯನ್ನು ತಹಬಂದಿಯಲ್ಲಿ ಇಡುತ್ತದೆ. ಮುಖ್ಯವಾಗಿ ವಿಶ್ರಾಂತಿ, ಸಾಕಷ್ಟು ದ್ರವಾಹಾರ, ಕುಡಿಯಲು ಬೆಚ್ಚಗಿನ ನೀರಿನ ಬಳಕೆ, ಜ್ವರ ನಿವಾರಕ ಗುಳಿಗೆಗಳ ಮಿತವಾದ ಸೇವನೆ, ಉಪ್ಪುನೀರಿನಲ್ಲಿ ಗಂಟಲನ್ನು ಮುಕ್ಕಳಿಸುವುದು, ಒಳ್ಳೆಯ ನಿದ್ರೆ ಮೊದಲಾದುವುಗಳು ಸಾಕಾಗುತ್ತವೆ. ಇದು ಸಾಂಕ್ರಾಮಿಕ ಕಾಯಿಲೆಯಾದ್ದರಿಂದ ಸೋಂಕಿತರು ಸಾಧ್ಯವಾದಷ್ಟೂ ಇತರರಿಂದ ಅಂತರ ಕಾಯ್ದುಕೊಳ್ಳಬೇಕು; ಕೆಮ್ಮುವಾಗ ಮತ್ತು ಸೀನುವಾಗ ತಮ್ಮ ಮೂಗು-ಬಾಯಿಗಳನ್ನು ಬಟ್ಟೆ ಅಥವಾ ಟಿಶ್ಯೂ ಕಾಗದದಿಂದ ಮುಚ್ಚಿಕೊಳ್ಳಬೇಕು. ಶೀತ, ಕೆಮ್ಮು, ಜ್ವರದ ಲಕ್ಷಣಗಳು ಒಂದೆರಡು ದಿನಗಳಲ್ಲಿ ಇಳಿಮುಖವಾಗುವ ಸೂಚನೆಗಳು ಕಾಣದಿದ್ದರೆ ವೈದ್ಯರನ್ನು ಕಂಡು ಸೂಕ್ತ ಚಿಕಿತ್ಸೆ ಪಡೆಯಬೇಕು.

ಪರೀಕ್ಷೆಯ ಕಾಲದಲ್ಲಿ ಆತಂಕದ ಕಾರಣದಿಂದಲೇ ಹಲವಾರು ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಿರುತ್ತದೆ. ತರಗತಿಯಲ್ಲಿ ಮಕ್ಕಳು ಒಟ್ಟಾಗಿ ಕೂರುವುದರಿಂದ ಅವರಲ್ಲಿ ಶೀತ, ಕೆಮ್ಮು, ಜ್ವರಗಳ ಪರಸ್ಪರ ವಿನಿಮಯ ಏರುತ್ತದೆ. ಇದರಿಂದ ಸಂಭವಿಸುವ ಮಕ್ಕಳ ಗೈರುಹಾಜರಿ ಪರೀಕ್ಷೆಗಳ ಕಾಲದ ಶಾಲೆಯ ಕೆಲಸಗಳ ಹೊಂದಾಣಿಕೆಯನ್ನು ಸಡಿಲವಾಗಿಸುತ್ತದೆ. ಇದು ಪೋಷಕರಲ್ಲಿ ಇನ್ನಿಲ್ಲದ ಆತಂಕಕ್ಕೆ ಕಾರಣವಾಗುತ್ತದೆ. ಪರೀಕ್ಷೆಗಳ ಆಸುಪಾಸಿನಲ್ಲಿ ಶೀತ, ಕೆಮ್ಮು, ಜ್ವರ ಕಂಡಾಗ ಕಾಯಿಲೆಯ ಲಕ್ಷಣಗಳನ್ನು ನಿರ್ಲಕ್ಷಿಸದೆ ಶೀಘ್ರವಾಗಿ ಮಕ್ಕಳ ವೈದ್ಯರನ್ನು ಕಾಣುವುದು ಸೂಕ್ತ.

ಋತು-ಸಂಬಂಧಿ ಶೀತ, ಕೆಮ್ಮು, ಜ್ವರ ಇತರ ಕಾಯಿಲೆಗಳ ಲಕ್ಷಣವನ್ನು ಬಹುವಾಗಿ ಹೋಲುವುದರಿಂದ ಆತಂಕದ ಅಗತ್ಯವಿಲ್ಲದಿದ್ದರೂ ಎಚ್ಚರಿಕೆ ಅಗತ್ಯ. ಸರಳ ಚಿಕಿತ್ಸೆಯಿಂದ ಕಾಯಿಲೆಯ ಲಕ್ಷಣಗಳು ಗುಣವಾಗದವರು, ರೋಗನಿರೋಧಕ ಶಕ್ತಿ ಕುಂಠಿತರಾದವರು, ಒಂದು ವರ್ಷದೊಳಗಿನ ಮಕ್ಕಳು, 65 ವರ್ಷ ದಾಟಿದವರು, ಗರ್ಭಿಣಿಯರು, ಬಾಣಂತಿಯರು, ನಿಯಮಿತ ಆಸ್ಪಿರಿನ್ ಗುಳಿಗೆ ಸೇವಿಸುವವರು, ಮುಂತಾದವರು ಈ ಋತು-ಸಂಬಂಧಿ ಕಾಯಿಲೆ ಕಂಡಾಗ ತಡಮಾಡದೆ ವೈದ್ಯರನ್ನು ಕಾಣಬೇಕು. 

----------------------------

ದಿನಾಂಕ 14/3/2023 ರಂದು ಪ್ರಜಾವಾಣಿಯ ಕ್ಷೇಮ-ಕುಶಲ ವಿಭಾಗದಲ್ಲಿ ಪ್ರಕಟವಾದ ಮೂಲ ಲೇಖನದ ಕೊಂಡಿ: https://www.prajavani.net/health/what-to-do-with-fever-cold-cough-1023245.html

 

  

 


ಸಾಮಾನ್ಯನ ಗ್ರಹಿಕೆಯಲ್ಲಿ ಆಲ್ಬರ್ಟ್ ಐನ್ಸ್ಟೈನ್

ಡಾ. ಕಿರಣ್ ವಿ.ಎಸ್.

ವೈದ್ಯರು

ವಿಜ್ಞಾನದ ಬಗ್ಗೆ ಆಸಕ್ತಿ ಇರುವ ಸಾವಿರ ಮಂದಿ ಜನಸಾಮಾನ್ಯರನ್ನು “20 ನೆಯ ಶತಮಾನದ ಮೂರು ಪ್ರಮುಖ ವಿಜ್ಞಾನಿಗಳನ್ನು ಹೆಸರಿಸಿ” ಎಂದು ಕೇಳಿದರೆ ಸರಿಸುಮಾರು ಎಲ್ಲರ ಪಟ್ಟಿಯಲ್ಲೂ ಆಲ್ಬರ್ಟ್ ಐನ್ಸ್ಟೈನ್ ಅವರ ಹೆಸರು ಇರುತ್ತದೆ. ಆ ಹೆಸರು ಸೂಚಿಸಿದವರನ್ನು “ಆಲ್ಬರ್ಟ್ ಐನ್ಸ್ಟೈನ್ ಅವರ ಮೂರು ಪ್ರಮುಖ ವೈಜ್ಞಾನಿಕ ಸಾಧನೆಗಳನ್ನು ಹೆಸರಿಸಿ” ಎಂದರೆ, ಬಹುತೇಕ ಮಂದಿ ರಿಲೇಟಿವಿಟಿ/ಸಾಪೇಕ್ಷ ಸಿದ್ಧಾಂತ ಎನ್ನುವ ಹೆಸರಿಗಿಂತಲೂ ಮುಂದೆ ಹೋಗಲಾರರು. “ರಿಲೇಟಿವಿಟಿಯನ್ನು ಸರಳ ವಾಕ್ಯಗಳಲ್ಲಿ ತಿಳಿಸಿ” ಎಂದು ಕೇಳಿದರೆ, ತೀರಾ ಕೆಲವು ಮಂದಿ ಸಫಲರಾಗಬಲ್ಲರು.

ಪ್ರತಿಯೊಂದು ರಂಗದಲ್ಲೂ ಕೆಲವರು ದಂತಕತೆಗಳ ಮಟ್ಟಕ್ಕೆ ಏರುತ್ತಾರೆ. ವಿಜ್ಞಾನವೂ ಇದಕ್ಕೆ ಹೊರತಲ್ಲ. ನಮ್ಮ ಕಾಲಘಟ್ಟದಲ್ಲಿ ಸ್ಟೀಫನ್ ಹಾಕಿಂಗ್, ಅಬ್ದುಲ್ ಕಲಾಮ್, ರಿಚರ್ಡ್ ಫೈನ್ಮನ್ ಮೊದಲಾದ ಹೆಸರುಗಳನ್ನು ಈ ಪಟ್ಟಿಯಲ್ಲಿ ಪರಿಗಣಿಸಬಹುದು. ಇವರುಗಳ ಕಾರ್ಯಕ್ಷೇತ್ರಗಳ ಬಗ್ಗೆ ಏನೇನೂ ತಿಳಿಯದವರಿಗೂ ಅನೇಕಾನೇಕ ಕಾರಣಗಳಿಂದ ಇವರ ಹೆಸರುಗಳ ಪರಿಚಯವಿರುತ್ತದೆ. ಈ ಪ್ರಕ್ರಿಯೆಯ ಅಗ್ರಣಿ ಪ್ರಾಯಶಃ ಆಲ್ಬರ್ಟ್ ಐನ್ಸ್ಟೈನ್ ಅವರು. “ಅವರ ಥಿಯರಿ ತೀರಾ ಕಷ್ಟವಂತೆ; ಅದನ್ನು ಅರ್ಥ ಮಾಡಿಕೊಂಡಿರುವವರು ಇಡೀ ಜಗತ್ತಿನಲ್ಲಿ ಎಂಟೇ ಮಂದಿಯಂತೆ; ಅರ್ಥ ಮಾಡಿಕೊಳ್ಳುವುದು ಅಂತಿರಲಿ, ಅದನ್ನು ಊಹಿಸಿಕೊಳ್ಳುವುದಕ್ಕೂ ಬಹಳ ಬುದ್ಧಿ ಬೇಕಂತೆ; ಅವರ ಮಿದುಳು ಮಾಮೂಲಿ ಜನರ ಮಿದುಳಿಗಿಂತಲೂ ಬಹಳ ಭಿನ್ನವಾಗಿತ್ತಂತೆ; ಅವರ ಮೃತ ದೇಹದಿಂದ ಮಿದುಳನ್ನು ಕದ್ದು ವಿಶೇಷ ಸಂಶೋಧನೆಗೆ ಬಳಸಿದ್ದಾರಂತೆ”, ಹೀಗೆ ಕಲ್ಪನೆ-ವಾಸ್ತವಗಳ ಕಲಸುಮೇಲೋಗರಗಳು ದಶಕಗಳಿಂದ ಜನಮಾನಸದ ನಡುವೆ ಚಾಲ್ತಿಯಲ್ಲಿವೆ.

ಯಾವುದೇ ವ್ಯಕ್ತಿಯ ಖ್ಯಾತಿ ಹೆಚ್ಚಿದಷ್ಟೂ ಅವರ ಸುತ್ತಲ ಐತಿಹ್ಯಗಳು ಬೆಳೆಯುತ್ತವೆ. ಪ್ರಖ್ಯಾತರ ಹೆಸರುಗಳನ್ನು ಬಳಸಿಕೊಂಡು, ತಮ್ಮ ವೈಯಕ್ತಿಕ ಸಿದ್ಧಾಂತಗಳ ಸಂಕಥನಗಳನ್ನು ಅವರ ಜೊತೆಗೆ ಜೋಡಿಸಿ ತೇಲಿಸಿಬಿಡುವ ಪ್ರಯತ್ನಗಳು ಆಗುತ್ತಲೇ ಇರುತ್ತವೆ. ಇದು ಕೀರ್ತಿಗೆ ತೆರಬೇಕಾದ ಬೆಲೆಗಳಲ್ಲಿ ಒಂದು. ಅಂತೆಯೇ, ಆ ವ್ಯಕ್ತಿ ಯಾವುದಾದರೂ ತಪ್ಪಿನ ಕಾರಣದಿಂದ ಅಪಖ್ಯಾತಿಗೆ ಒಳಗಾದರೆ, ಕೂಡಲೇ ಆತನನ್ನು ತಮ್ಮ ವಿರೋಧಿ ಪಾಳೆಯದೊಡನೆ ಗುರುತಿಸಿ, ಅವರನ್ನು ಬಗ್ಗುಬಡಿಯುವ ಪ್ರಯತ್ನಗಳು ನಡೆಯುತ್ತವೆ. ಹೆಸರೆಂಬುದು ಎರಡು ಅಲುಗಿನ ಕತ್ತಿ. ತಮ್ಮ ಜೀವನದ ಉದ್ದಕ್ಕೂ ಆಲ್ಬರ್ಟ್ ಐನ್ಸ್ಟೈನ್ ಇದನ್ನು ಅನುಭವಿಸುತ್ತಲೇ ಬಂದರು. ಹಿಟ್ಲರನ ಆಡಳಿತದ ವೇಳೆಯ ಜರ್ಮನಿ ಯಹೂದ್ಯರ ವಿರುದ್ಧ ಮಾಡಿದ ಅನಾಚಾರಗಳು ಅಷ್ಟಿಷ್ಟಲ್ಲ. ಹೀಗೆ ಸಂಕಷ್ಟಕ್ಕೆ ಒಳಗಾದ ಯಹೂದ್ಯರ ರಕ್ಷಣೆಗೆ ಧಾವಿಸಿದ ದೇಶಗಳೂ ಜರ್ಮನಿಯ ಕೆಂಗಣ್ಣಿಗೆ ಒಳಗಾದವು. ಇನ್ನು ಕೆಲವು ದೇಶಗಳು ಜರ್ಮನಿಯನ್ನು ವಿರೋಧಿಸುವ ತಮ್ಮ ಸೂತ್ರದ ಭಾಗವಾಗಿ ಯಹೂದ್ಯರಿಗೆ ಆಶ್ರಯ ಕೊಟ್ಟದ್ದೂ ಉಂಟು. ರಾಜಕೀಯ ಪರ-ವಿರೋಧಗಳ ಭಾಗವಾಗಿ ಯಹೂದ್ಯರ ಬಳಕೆ ಆಗುತ್ತಿದ್ದುದ್ದನ್ನು ಕಂಡು ರೋಸಿಹೋಗಿದ್ದ ಆಲ್ಬರ್ಟ್ ಐನ್ಸ್ಟೈನ್ ಅವರ ಒಂದು ಮಾತಿದೆ “ನನ್ನ ಸಾಪೇಕ್ಷ ಸಿದ್ಧಾಂತ ಸತ್ಯವೆಂದು ಸಾಬೀತಾದರೆ ನಾನು ಮೂಲತಃ ಜರ್ಮನ್ ಎಂದು ಜರ್ಮನಿ ಹೇಳುತ್ತದೆ. ನಾನು ಇಡೀ ಭೂಮಂಡಲಕ್ಕೆ ಸೇರಿದ ವಿಜ್ಞಾನಿ ಎಂದು ಫ್ರಾನ್ಸ್ ಘೋಷಿಸುತ್ತದೆ. ಆದರೆ, ಒಂದು ವೇಳೆ ನನ್ನ ಸಿದ್ಧಾಂತ ತಪ್ಪೆಂದು ಕಂಡುಬಂದರೆ ಕೂಡಲೇ ಫ್ರಾನ್ಸ್ ನನ್ನನ್ನು ಜರ್ಮನ್ ಎಂದು ಗುರುತಿಸುತ್ತದೆ. ಜರ್ಮನಿ ನನ್ನನ್ನು ಯಹೂದ್ಯ ಎಂದು ತಿರಸ್ಕಾರ ತೋರುತ್ತದೆ”. ಕೀರ್ತಿಯ ಶಿಖರವೇರಿದ ಸಾಧಕರು ಅಲ್ಲಿ ಉಳಿದುಕೊಳ್ಳುವ ಪ್ರಯತ್ನವೆಂಬ ಹಗ್ಗ-ಜಗ್ಗಾಟದಲ್ಲಿ ಎಷ್ಟು ನಿಸ್ಸಹಾಯಕನಾಗುತ್ತಾರೆ ಎನ್ನುವುದನ್ನು ಅವರೇ ಬಲ್ಲರು. ಯಾವುದೇ ಹೊಸ ಅನ್ವೇಷಣೆಯನ್ನೂ ಮುಕ್ತ ಮನಸ್ಸಿನಿಂದ ಮಾಡಲು ಅವರಿಗೆ “ಸಾರ್ವಜನಿಕ ಅಭಿಪ್ರಾಯ”ವೆಂಬ ತೊಡಕು ಕಾಡುತ್ತದೆ. ಆಲ್ಬರ್ಟ್ ಐನ್ಸ್ಟೈನ್ ಅವರ ಜೀವನದ ಎರಡನೆಯ ಅರ್ಧದಲ್ಲಿ ಅವರಿಂದ ಮೌಲಿಕವಾದದ್ದೇನೂ ಬಂದಿಲ್ಲ ಎಂದು ಆಕ್ಷೇಪಿಸುವವರಿಗೆ ಈ ಹಿನ್ನೆಲೆ ನೆನಪಿರಬೇಕು.

ಆಲ್ಬರ್ಟ್ ಐನ್ಸ್ಟೈನ್ ಅವರ ಜೀವನವನ್ನು ಇತರರಿಗೆ ನೀಡುವ ಸ್ಫೂರ್ತಿಯ ರೂಪದಲ್ಲಿ ಬಳಸಿಕೊಳ್ಳುವವರು “ಆತ ಬಾಲದಲ್ಲಿ ತೀರಾ ಪೆದ್ದನಾಗಿದ್ದನಂತೆ; ಲೆಕ್ಕದಲ್ಲಿ ಫೇಲಂತೆ; ಶಾಲೆಯಲ್ಲಿ ಉತ್ತರ ಹೇಳಲಾಗದೇ ತತ್ತರಿಸಿದ್ದನಂತೆ; ಆತನನ್ನು ಶಾಲೆಯಿಂದ ಹೊರಹಾಕಿದ್ದರಂತೆ. ಇಂತಹವನೇ ಲೋಕವಿಖ್ಯಾತನಾದ ಎಂದರೆ, ಪ್ರತಿಯೊಬ್ಬ ಫೇಲು ವಿದ್ಯಾರ್ಥಿಗೂ ಭವಿಷ್ಯ ಇದೆ ಎಂದಾಯಿತು” ಎನ್ನುವ ಷರಾ ಬರೆದುಬಿಡುತ್ತಾರೆ. ಇದೊಂದು ರೀತಿ, ಗಣಿತದಲ್ಲಿ ನಪಾಸಾದವರಿಗೆಲ್ಲಾ ನೊಬೆಲ್ ಬಹುಮಾನ ಬರುತ್ತದೆ ಎನ್ನುವ ಮಟ್ಟದ ಸಮೀಕರಣ. ಈ ರೀತಿಯ ಕತೆಗಳು ಯಾರು ಕಟ್ಟಿದರೋ ಏನೋ; ಇವುಗಳು ಲೋಕಪ್ರಿಯ ಅಸತ್ಯಗಳಾದದ್ದು ವಿಪರ್ಯಾಸ. ಈ ಕತೆಗಳಿಂದ ಐನ್ಸ್ಟೈನ್ ಅವರಿಗೆ ವೈಯಕ್ತಿಕ ಲಾಭ-ನಷ್ಟಗಳಿಲ್ಲ. ಆದರೆ, ಇವನ್ನು ನಂಬಿ ಅವೆಷ್ಟು ಜನ ಉದ್ಧಾರವಾದರೋ ತಿಳಿಯದು. ಭ್ರಮಾಪೂರಕ ಸುಳ್ಳುಗಳನ್ನು ನಂಬುವುದು ವೈಜ್ಞಾನಿಕ ಮನೋಧರ್ಮಕ್ಕೆ ಪೂರಕವಲ್ಲ.

ಎಳೆಯ ವಯಸ್ಸಿನಲ್ಲಿ ಅಪಾರ ಪ್ರತಿಭೆ ತೋರಿದ್ದ ಕಾರ್ಲ್ ಫ್ರೆಡ್ರಿಕ್ ಗಾಸ್, ವಾನ್ ನ್ಯೂಮನ್, ಬ್ಲೈಸ್ ಪ್ಯಾಸ್ಕಲ್, ಎನ್ರಿಕೋ ಫರ್ಮಿ ಮೊದಲಾದವರಂತೆ ಆಲ್ಬರ್ಟ್ ಐನ್ಸ್ಟೈನ್ ಅವರು ತಮ್ಮ ಚಿಕ್ಕಂದಿನಲ್ಲೇ ಅಸಾಧಾರಣ ಜ್ಞಾನಿಯಾಗಿದ್ದ ಕುರುಹುಗಳು ಇರಲಿಲ್ಲವಾದರೂ, ಅವರೆಂದೂ ಪೆದ್ದು ವಿದ್ಯಾರ್ಥಿಯಾಗಿರಲಿಲ್ಲ. ಹತ್ತನೆಯ ವಯಸ್ಸಿಗೆ ಯೂಕ್ಲಿಡ್ ಮತ್ತು ಎಮ್ಯಾನುಯಲ್ ಕ್ಯಾಂಟ್ ಅವರನ್ನು ಐನ್ಸ್ಟೈನ್ ಓದಿಕೊಂಡಿದ್ದರು. ತಮ್ಮ ಹದಿನಾರನೆಯ ವಯಸ್ಸಿನಲ್ಲಿ ಶಿಕ್ಷಣದ ಬಗ್ಗೆ ಶಾಲೆಯ ಬೊಧಕರಿಗೆ ಇದ್ದ ಧೋರಣೆಯನ್ನು ವಿರೋಧಿಸಿ ತಮ್ಮ ಶಾಲೆಯನ್ನು ಬದಲಾಯಿಸಿದ್ದರೇ ಹೊರತು, ದಡ್ಡನೆನ್ನುವ ಕಾರಣಕ್ಕೆ ಯಾರೂ ಶಾಲೆಯಿಂದ ಅವರನ್ನು ಹೊರಹಾಕಲಿಲ್ಲ. ಗಣಿತ ಮತ್ತು ಭೌತಶಾಸ್ತ್ರಗಳಲ್ಲಿ ಅವರು ಮೊದಲಿನಿಂದಲೂ ಅಸಾಧಾರಣ ಮಟ್ಟವನ್ನೇ ಕಾಯ್ದುಕೊಂಡವರು. ಈ ಎರಡೂ ವಿಷಯಗಳಿಗೆ ತಮ್ಮ ಅಧ್ಯಯನದ ಹೆಚ್ಚು ಸಮಯ ನೀಡುತ್ತಿದ್ದ ಕಾರಣದಿಂದ ಉಳಿದ ವಿಷಯಗಳಲ್ಲಿ ಅವರ ಪರಿಣತಿ ಕಡಿಮೆ ಆಗಿದ್ದಿರಬಹುದು. ಪಾಲಿಟೆಕ್ನಿಕ್ ಸಂಸ್ಥೆಯ ಪ್ರವೇಶ ಪರೀಕ್ಷೆಯಲ್ಲಿ ಗಣಿತ ಮತ್ತು ಭೌತಶಾಸ್ತ್ರಗಳಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದರೂ, ಉಳಿದ ವಿಷಯಗಳಲ್ಲಿ ಕಡಿಮೆ ಅಂಕಗಳು ಬಂದ ಕಾರಣ ಆ ವರ್ಷ ಅಧ್ಯಯನಕ್ಕೆ ಆಯ್ಕೆಯಾಗಲಿಲ್ಲ. ಅದನ್ನು ಹೊರತುಪಡಿಸಿ, ಅವರು ಲೆಕ್ಕದಲ್ಲಿ ಫೇಲಾದದ್ದು ಎಂದೂ ಇಲ್ಲ. ಇತರ ವಿಷಯಗಳಲ್ಲಿ ಪರಿಣತಿ ಸಾಧಿಸಿ, ಪ್ರವೇಶ ಪರೀಕ್ಷೆಯಲ್ಲಿ ಮುಂದಿನ ಬಾರಿ ತೇರ್ಗಡೆಯಾಗಿ, ಅದೇ ಪಾಲಿಟೆಕ್ನಿಕ್ ಕೇಂದ್ರದಲ್ಲಿ ವ್ಯಾಸಂಗ ಮಾಡಿದ ಗೆಲುವಿನ ಕತೆ ಅವರದ್ದು.  

ಆಲ್ಬರ್ಟ್ ಐನ್ಸ್ಟೈನ್ ಅವರನ್ನು ಐಸಾಕ್ ನ್ಯೂಟನ್ ಅವರ ನಂತರದ ಅತ್ಯಂತ ಪ್ರಭಾವಶಾಲಿ ವಿಜ್ಞಾನಿ ಎಂದೇ ಗುರುತಿಸಲಾಗುತ್ತದೆ. ಕಾಕತಾಳೀಯವೆಂದರೆ, ನ್ಯೂಟನ್ ಅವರ ಜೀವನದಲ್ಲಿ 1666 ಆನ್ಯುಸ್-ಮಿರಾಬಲಿಸ್ ಎನ್ನುವ ಪರ್ವ-ವರ್ಷ ಎಂದು ಪರಿಗಣನೆಯಾಗುತ್ತದೆ. ಆ ವರ್ಷದಲ್ಲಿ ನ್ಯೂಟನ್ ಅವರ ನಾಲ್ಕು ಪ್ರಮುಖ ಸಿದ್ಧಾಂತಗಳಾದ ಚಲನೆಯ ನಿಯಮಗಳು, ಗುರುತ್ವಾಕರ್ಷಣೆ, ಕಲನ ಶಾಸ್ತ್ರ, ಮತ್ತು ಬೆಳಕಿನ ಮೂಲ ತತ್ತ್ವಗಳು ನಿರೂಪಿತವಾದವು. ಇದಾದ 239 ವರ್ಷಗಳ ನಂತರ 1905 ರಲ್ಲಿ ಐನ್ಸ್ಟೈನ್ ಅವರ ನಾಲ್ಕು ಪ್ರಮುಖ ವೈಜ್ಞಾನಿಕ ಸಿದ್ಧಾಂತಗಳು ಪ್ರಕಟವಾದವು. 20ನೆಯ ಶತಮಾನದ ಭೌತಶಾಸ್ತ್ರದ ದಿಕ್ಕನ್ನು ಬದಲಾಯಿಸಿದ ಫೋಟೋ-ಎಲೆಕ್ಟ್ರಿಕ್ ಸಿದ್ಧಾಂತ, ಬ್ರೌನಿಯನ್ ಚಲನೆ, ವಿಶೇಷ ಸಾಪೇಕ್ಷ ಸಿದ್ಧಾಂತ, ಮತ್ತು ವಸ್ತು-ಶಕ್ತಿಗಳ ಸಮೀಕರಣಕ್ಕೆ ಸಂಬಂಧಿಸಿದ ಆಲೇಖ್ಯಗಳು ಐನ್ಸ್ಟೈನ್ ಅವರ ಆನ್ಯುಸ್-ಮಿರಾಬಿಲಿಸ್ ಅನ್ನು ಸ್ಥಾಪಿಸಿದವು. ಅದೇ ವರ್ಷದಲ್ಲಿ ಅವರಿಗೆ ಭೌತಶಾಸ್ತ್ರದ ಡಾಕ್ಟರೇಟ್ ಕೂಡ ಲಭ್ಯವಾಯಿತು. ಆಗ ಐನ್ಸ್ಟೈನ್ ಅವರ ವಯಸ್ಸು ಕೇವಲ 26 ವರ್ಷಗಳು. ಸೈದ್ಧಾಂತಿಕ ಭೌತಶಾಸ್ತ್ರದ ಮುಂಚೂಣಿಯ ವಿಜ್ಞಾನಿಗಳ ಪೈಕಿ ಗಮನ ಸೆಳೆದಿದ್ದ ಐನ್ಸ್ಟೈನ್ ತಮ್ಮ ಯಾವುದೇ ಸಿದ್ಧಾಂತಕ್ಕೂ ಪ್ರಯೋಗಾತ್ಮಕ ಆಯಾಮವನ್ನು ನೀಡಿರಲಿಲ್ಲ. ಅವನ್ನು ನಂತರ ಪ್ರಯೋಗಗಳ ಮೂಲಕ ಸಾಧಿಸಿ ತೋರಿದ್ದು ಆರ್ಥರ್ ಎಡ್ಡಿಂಗ್ಟನ್ ಮೊದಲಾದ ಇತರ ವಿಜ್ಞಾನಿಗಳು. ಇವುಗಳ ಪೈಕಿ ಫೋಟೋ-ಎಲೆಕ್ಟ್ರಿಕ್ ಸಿದ್ಧಾಂತ 1921 ರ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಗೆ ಭಾಜನವಾಯಿತು.

ಪ್ರವರ್ತಕವೆನಿಸುವ ವೈಜ್ಞಾನಿಕ ಸಂಚಲನಗಳ ಹೊರತಾಗಿಯೂ ಪಾಠ ಹೇಳುವ ಅಕಡೆಮಿಕ್ ಹುದ್ದೆ ಐನ್ಸ್ಟೈನ್ ಅವರಿಗೆ ದೊರೆತದ್ದು ತಡವಾಗಿಯೇ. ಆದರೆ ಐನ್ಸ್ಟೈನ್ ಆಕರ್ಷಕವಾಗಿ ಪಾಠ ಮಾಡಬಲ್ಲ ವ್ಯಕ್ತಿತ್ವದವರಲ್ಲ. ವಿಜ್ಞಾನದ ನವೀನ ಪರಿಭಾಷೆಯೊಂದನ್ನು ಹಂತಹಂತವಾಗಿ ಕೇಳುಗರ ಬುದ್ಧಿಯ ಆಳಕ್ಕೆ ಇಳಿಸಬಲ್ಲ ಆಕರ್ಷಕ ಮಾತಿನ ಕಲೆಗಾರಿಕೆ ಐನ್ಸ್ಟೈನ್ ಅವರಿಗೆ ಒಲಿದಿರಲಿಲ್ಲ. ಅವರದ್ದೇನಿದ್ದರೂ ಒಂದು ವಿಷಯದಿಂದ ಮತ್ತೊಂದಕೆ ಅನಾಮತ್ತಾಗಿ ಜಿಗಿಯುವ ವಿಧಾನ. ಅವರ ತೀರಾ ಆಪ್ತವಲಯದ ವಿಜ್ಞಾನಿಗಳನ್ನು ಹೊರತುಪಡಿಸಿ ಉಳಿದವರಿಗೆ ಐನ್ಸ್ಟೈನ್ ಅವರ ಪ್ರಜ್ಞಾಪ್ರವಾಹ ನಿಲುಕುತ್ತಿರಲಿಲ್ಲ. ವಿಜ್ಞಾನ ಬೋಧನೆಯ ವಿಷಯದಲ್ಲಿ ಅಪ್ರತಿಮ ಕಲೆಗಾರನೆಂದು ಹೆಸರಾದ ರಿಚರ್ಡ್ ಫೈನ್ಮನ್ ಅವರ ಜೊತೆಯಲ್ಲಿ ಐನ್ಸ್ಟೈನ್ ಅವರ ಪಾಠಕ್ರಮವನ್ನು ಹೋಲಿಕೆ ಮಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಎನ್ರಿಕೋ ಫರ್ಮಿ, ಸುಬ್ರಮಣ್ಯಮ್ ಚಂದ್ರಶೇಖರ್, ಅರ್ನೆಸ್ಟ್ ರುಥರ್ಫೋರ್ಡ್ ಮೊದಲಾದವರಂತೆ ಗುರುವಿನ ಹೆಸರನ್ನು ಎತ್ತಿ ಹಿಡಿಯುವ ಶಿಷ್ಯಗಣ ಐನ್ಸ್ಟೈನ್ ಅವರ ಪಾಲಿಗೆ ಬರಲಿಲ್ಲ.

ವೈಯಕ್ತಿಕ ಸಂಗತಿಗಳ ಹೊರತಾಗಿ ಐನ್ಸ್ಟೈನ್ ಅವರ ಹೆಸರು ಸಾರ್ವಜನಿಕ ವಿವಾದಕ್ಕೆ ಸಿಲುಕಿದ್ದು ಪರಮಾಣು ಬಾಂಬ್ ತಯಾರಿಕೆಯಲ್ಲಿ ಅವರ ಪಾತ್ರದ ಕುರಿತಾಗಿ. ಎರಡನೆಯ ವಿಶ್ವಯುದ್ಧದ ಇತಿಹಾಸಕಾರರು ಈ ಬಗ್ಗೆ ಕೂಲಂಕಶವಾಗಿ ವಿಶ್ಲೇಷಣೆ ಮಾಡಿದ್ದಾರೆ. ತಮ್ಮ ಬಹುಕಾಲದ ಶಿಷ್ಯ ಮತ್ತು ಸಹೋದ್ಯೋಗಿ ಲಿಯೋ ಝಿಲಾರ್ಡ್ ಅವರ ಒತ್ತಾಯಕ್ಕೆ ಮಣಿದು ಐನ್ಸ್ಟೈನ್ ಅಂದಿನ ಅಮೆರಿಕೆಯ ಅಧ್ಯಕ್ಷ ಫ್ರಾಂಕ್ಲಿನ್ ರೂಸೆವೆಲ್ಟ್ ಅವರಿಗೆ ಪತ್ರ ಬರೆದು, “ಜರ್ಮನಿ ಪರಮಾಣು ಬಾಂಬ್ ಹೊಂದುವುದಕ್ಕೆ ಮುನ್ನ ಅದು ಮಿತ್ರ ರಾಷ್ಟ್ರಗಳ ಬಳಿ ಇರುವಂತಾಗಬೇಕು” ಎನ್ನುವಂತೆ ಒತ್ತಾಯಿಸಿದರು. ಅಲ್ಲಿಯವರೆಗೆ ಈ ಬಗ್ಗೆ ಸ್ಪಷ್ಟ ನಿಲುವು ತಳೆಯದಿದ್ದ ಅಮೆರಿಕೆಯ ಸರ್ಕಾರಕ್ಕೆ ಈ ಪತ್ರ ಪರಮಾಣು ಬಾಂಬಿನ ಅಗತ್ಯವನ್ನು ವಿಶದಪಡಿಸಿದಂತಾಯಿತು. ಮ್ಯಾನ್ಹಟ್ಟನ್ ಯೋಜನೆಯ ಜನ್ಮಕ್ಕೆ ಐನ್ಸ್ಟೈನ್ ಅವರ ಪತ್ರವೇ ಕಾರಣ ಎಂದು ಇಂದಿಗೂ ನಂಬಿಕೆ. ಪರಮಾಣು ಬಾಂಬ್ ಅನ್ನು ಬಳಸುವುದಕ್ಕೆ ಐನ್ಸ್ಟೈನ್ ಅವರ ವಿರೋಧವಿತ್ತು. ಅಸ್ತಿತ್ವಮಾತ್ರದಿಂದಲೇ ವೈರಿಯ ಶರಣಾಗತಿಗೆ ಕಾರಣವಾಗಬಲ್ಲ ಅಸ್ತ್ರವನ್ನಾಗಿ ಮಾತ್ರ ಇದು ಬಳಕೆಯಾಗಬೇಕು ಎನ್ನುವುದು ಅವರ ಆಲೋಚನೆ. ರೂಸವೆಲ್ಟ್ ಮತ್ತು ಐನ್ಸ್ಟೈನ್ ಅವರ ನಡುವಣ ಈ ಬಗ್ಗೆ ಏನು ಒಪ್ಪಂದವಾಗಿತ್ತೋ ಯಾರಿಗೂ ತಿಳಿಯದು. ಆದರೆ, ಯುದ್ಧದ ಕಡೆಯ ಹಂತದಲ್ಲಿ ರೂಸವೆಲ್ಟ್ ಮರಣಿಸಿದರು. ಅವರ ಸ್ಥಾನಕ್ಕೆ ಬಂದ ಉಪಾಧ್ಯಕ್ಷ ಟ್ರೂಮನ್ ಅವರಿಗೆ ಅಧಿಕಾರ ಪಡೆದ ದಿನದವರೆಗೆ ಪರಮಾಣು ಬಾಂಬ್ ಯೋಜನೆಯ ಬಗ್ಗೆ ಏನೇನೂ ತಿಳಿದಿರಲಿಲ್ಲ; ವಿಷಯ ಅಷ್ಟು ರಹಸ್ಯವಾಗಿತ್ತು. ಯುದ್ಧವನ್ನು ಬೇಗ ಕೊನೆಗಾಣಿಸುವ ಒತ್ತಡದಲ್ಲಿದ್ದ ಟ್ರೂಮನ್ ಅವರಿಗೆ ಪರಮಾಣು ಬಾಂಬ್ ವರದಾನವಾಯಿತು. ಅಮೆರಿಕೆಯ ನಿರ್ಧಾರದಿಂದ ಕಡೆಗೆ ಜರ್ಜರಿತವಾದದ್ದು ಐನ್ಸ್ಟೈನ್ ಅವರ ಮನಶ್ಶಾಂತಿ. ಆನಂತರ ಐನ್ಸ್ಟೈನ್ ರಾಜಕೀಯದಿಂದ ಬಹಳ ದೂರ ನಿಂತರು. 1952 ರಲ್ಲಿ ಹೊಸದಾಗಿ ರಚನೆಯಾದ ಇಸ್ರೇಲ್ ರಾಷ್ಟ್ರಕ್ಕೆ ಅಧ್ಯಕ್ಷರಾಗುವ ಅವಕಾಶವನ್ನು ಒಂದೇ ಮಾತಿಗೆ ನಿರಾಕರಿಸಿದರು.

ಭಾರತದ ಅದ್ಭುತ ವಿಜ್ಞಾನಿ ಸತ್ಯೇಂದ್ರನಾಥ ಬೋಸರ ಜೊತೆಗೆ ಐನ್ಸ್ಟೈನ್ ಅವರ ಒಡನಾಡ ಹೃದ್ಯವಾದದ್ದು. ಪರಮಶೂನ್ಯ ವಾತಾವರಣದಲ್ಲಿ ದೊರೆಯುವ ವಸ್ತುವಿನ ಐದನೆಯ ಸ್ಥಿತಿಯಾದ ಬೋಸ್-ಐನ್ಸ್ಟೈನ್ ಕಾಂಡನ್ಸೇಟ್ ಬಗ್ಗೆ ಇಬ್ಬರೂ ಅಪಾರ ಕೆಲಸ ಮಾಡಿದ್ದರು. ಐನ್ಸ್ಟೈನ್ ಅವರಿಗೆ ಭಾರತದ ಬಗ್ಗೆ ಇದ್ದ ಗೌರವಕ್ಕೆ ಸತ್ಯೇಂದ್ರನಾಥ ಬೋಸರ ಕೊಡುಗೆ ಬಹಳ ದೊಡ್ಡದು.

ಐನ್ಸ್ಟೈನ್ ಅವರನ್ನು ಮೆಚ್ಚುವ ಪ್ರತಿಯೊಬ್ಬರೂ ಅವರ ಬಗ್ಗೆ ಚೆನ್ನಾಗಿ ಅರಿತರೆ, ಅವರ ಬಗೆಗಿನ ಗೌರವ ಮತ್ತಷ್ಟು ಹಿಗ್ಗುತ್ತದೆ.   

------------------------

ಕುತೂಹಲಿ ವಿಜ್ಞಾನ ಮಾಸಪತ್ರಿಕೆಯ ಮಾರ್ಚ್ 2023ರ ಸಂಚಿಕೆಯಲ್ಲಿ ಪ್ರಕಟವಾದ ಲೇಖನ.  ಮಾರ್ಚ್ 2023ರ ಸಂಚಿಕೆಯನ್ನು ಉಚಿತವಾಗಿ ಓದಲು ಕೊಂಡಿ: http://bit.ly/3kNy1aq

 

 

 

ಚರ್ಮದ ಗಣಿತ

ಡಾ. ಕಿರಣ್ ವಿ.ಎಸ್.

ವೈದ್ಯರು

ನಮ್ಮ ಶರೀರದ ಅತ್ಯಂತ ತೂಕದ ಅಂಗ ಯಾವುದು ಎಂದು ಪ್ರಶ್ನಿಸಿದರೆ ಮೊದಲ ಆಲೋಚನೆ ಹೋಗುವುದು ಯಕೃತ್, ಮಿದುಳು ಬಗ್ಗೆ. ಆದರೆ ಸರಿಯಾದ ಉತ್ತರ ಅವೆರಡೂ ಅಲ್ಲ. ನಮ್ಮ ಅಂಗಗಳನ್ನು ತೂಕದ ಅನುಸಾರ ಪಟ್ಟಿ ಮಾಡುತ್ತಾ ಹೋದರೆ ಎರಡರಿಂದ ಹತ್ತನೆಯ ಸ್ಥಾನದಲ್ಲಿನ ಎಲ್ಲ ಅಂಗಗಳ ಒಟ್ಟು ತೂಕಕ್ಕಿಂತಲೂ ಮೊದಲ ಸ್ಥಾನದಲ್ಲಿರುವ ಅಂಗದ ತೂಕ ಹೆಚ್ಚು. ಇಷ್ಟು ಭಾರಿ ಅಂಗದ ಬಗ್ಗೆ ಎಲ್ಲರಿಗೂ ತಿಳಿದಿದೆಯಾದರೂ, ಅದನ್ನು ಅಂಗ ಅನ್ನುವ ಪರಿಗಣನೆಗೆ ಹೆಚ್ಚು ಮಂದಿ ತಂದಿರಲಾರರು. ನಾವು ಚರ್ಚಿಸುತ್ತಿರುವುದು ದೇಹದ ಹೊರ ಆವರಣವಾದ ಚರ್ಮದ ಬಗ್ಗೆ.

ದೇಹ ತೂಕದ ಹದಿನೈದು ಪ್ರತಿಶತ ತೂಕ ಚರ್ಮದ್ದು. ಅಂದರೆ, ಸುಮಾರು 70 ಕಿಲೋಗ್ರಾಂ ತೂಗುವ ವ್ಯಕ್ತಿಯ ಚರ್ಮದ ತೂಕ ಸುಮಾರು ಹತ್ತೂವರೆ ಕಿಲೋಗ್ರಾಂ. ಮೂಳೆಗಳು, ಸ್ನಾಯುಗಳು, ಮತ್ತು ರಕ್ತದ ತೂಕ ಮಾತ್ರ ಇದಕ್ಕಿಂತ ಹೆಚ್ಚಿದ್ದರೂ, ಒಂದು ನಿರಂತರತೆಯಿಲ್ಲದೆ ಬಿಡಿಬಿಡಿಯಾಗಿ ದೇಹದಲ್ಲಿ ಹರಡಿಕೊಂಡಿರುವ ಕಾರಣದಿಂದ ಅವುಗಳು “ಅಂಗ”ಗಳ ಪರಿಭಾಷೆಗೆ ಬರುವುದಿಲ್ಲ. ಹೀಗಾಗಿ, ಚರ್ಮ ದೇಹದ ಅತ್ಯಂತ ತೂಕದ ಅಂಗ.

ದೇಹದ ಎಲ್ಲ ತಿರುವುಗಳನ್ನೂ ಚರ್ಮ ಆಕ್ರಮಿಸಿದೆ. ಚರ್ಮವನ್ನು ಸಪಾಟಾಗಿ ಹರಡಿದರೆ ಸುಮಾರು 22 ಚದರ-ಅಡಿ (2.1 ಚದರ ಮೀಟರ್) ವಿಸ್ತೀರ್ಣವಾಗುತ್ತದೆ. ತನ್ನ ಅಡಿಯಲ್ಲಿರುವ ಆಯಾ ಅಂಗಗಳ ಅಗತ್ಯಕ್ಕೆ ತಕ್ಕಂತೆ ಚರ್ಮದ ರಚನೆ ಸ್ಪಂದಿಸುತದೆ. ಕಣ್ಣುಗಳ ಮೇಲಿನ ಚರ್ಮ ಅತ್ಯಂತ ತೆಳು – ಕೇವಲ 0.02 ಮಿಲಿಮೀಟರ್. ಅದಕ್ಕೆ ಪ್ರತಿಯಾಗಿ ಕಾಲುಗಳ ಪಾದದಡಿಯ ಚರ್ಮ ಅತ್ಯಂತ ದಪ್ಪ – ಸುಮಾರು ಒಂದೂವರೆ ಮಿಲಿಮೀಟರ್. ಚಲನೆಗೆ ಕಾರಣವಾಗುವ ಕೀಲುಗಳ ಸುತ್ತಲಿನ ಚರ್ಮ ಹೆಚ್ಚಾಗಿ ಹಿಗ್ಗಬಲ್ಲದು. ಆದರೆ, ಚಲನೆ ಬೇಕಿಲ್ಲದ ಭಾಗಗಳ ಮೇಲಿನ ಚರ್ಮ ಹೆಚ್ಚು ಹಿಗ್ಗದಂತೆ ಬಿಗಿಯಾಗಿರುತ್ತದೆ.

ಚರ್ಮದಲ್ಲಿ ಮೂರು ಪದರಗಳಿವೆ. ಮೇಲ್ಭಾಗದ ಚರ್ಮವನ್ನು ಎಪಿಡೆರ್ಮಿಸ್ ಎನ್ನುತ್ತಾರೆ. ಇದರ ಬಹುತೇಕ ಕೋಶಗಳು ಜೀವಂತವಿರುವುದಿಲ್ಲ. ಈ ಪದರ ಸುಲಭವಾಗಿ ನೀರನ್ನು ತನ್ನೊಳಗೆ ಹೋಗಗೊಡಲಾರದು. ಮಧ್ಯದ ಪದರ ಡರ್ಮಿಸ್. ಇದರಲ್ಲಿ ಕೂದಲಿನ ಬುಡ, ಸ್ವೇದ ಗ್ರಂಥಿಗಳು ಇರುತ್ತವೆ. ಅದರ ಅಡಿಯಲ್ಲಿ ಚರ್ಮದ ಪೋಷಣೆಗೆ ಬೇಕಾಗುವ ರಕ್ತನಾಳಗಳು, ಚರ್ಮದ ಅಡಿಯ ಕೊಬ್ಬಿನ ಭಾಗ ಇರುತ್ತವೆ.

ಒಂದು ಚದರ ಇಂಚು (ಸುಮಾರು 6.5 ಚದರ ಸೆಂಟಿಮೀಟರ್) ಚರ್ಮದಲ್ಲಿ ಏನಿಲ್ಲವೆಂದರೂ ಎರಡು ಕೋಟಿ ಜೀವಕೋಶಗಳಿರುತ್ತವೆ. ಇದರಲ್ಲಿ ಚರ್ಮಕ್ಕೆ ಬಣ್ಣ ನೀಡುವ 60,000 ಮೆಲನಿನ್ ಕೋಶಗಳು; 1000 ನರಗಳು; 20 ರಕ್ತನಾಳಗಳು, ಬೆವರನ್ನು ಉತ್ಪಾದಿಸುವ 650 ಸ್ವೇದ ಗ್ರಂಥಿಗಳು ಸೇರಿವೆ. ಚರ್ಮದ ವಿಸ್ತೀರ್ಣ ಸುಮಾರು 3200 ಚದರ ಇಂಚುಗಳು ಎಂದಾದಲ್ಲಿ ಚರ್ಮದ ಜೀವಕೋಶಗಳೇ 6000 ಕೋಟಿಗೂ ಹೆಚ್ಚು. ಹೊರಜಗತ್ತಿನ ಪ್ರತಿಯೊಂದು ಹೊಡೆತಕ್ಕೂ ಮೊಟ್ಟಮೊದಲು ಗುರಿಯಾಗುವ ಚರ್ಮದ ಕೋಶಗಳು ಹೆಚ್ಚಾಗಿ ಸವೆಯುತ್ತವೆ. ಹೀಗಾಗಿ ಅವುಗಳ ಪುನರುತ್ಪಾದನೆಯೂ ಅಷ್ಟೇ ಕ್ಷಿಪ್ರವಾಗಿ ನಡೆಯಬೇಕು. ಸರಾಸರಿ 28 ದಿನಗಳಿಗೊಮ್ಮೆ ಚರ್ಮದ ಬಹುತೇಕ ಜೀವಕೋಶಗಳು ನಶಿಸಿ, ಹೊಸ ಕೋಶಗಳಿಂದ ಭರ್ತಿಯಾಗುತ್ತವೆ. ಈ ಲೆಕ್ಕಾಚಾರದಂತೆ ಪ್ರತಿ ನಿಮಿಷ 30,000 ಜೀವಕೋಶಗಳು ಸತ್ತು, ಆ ಜಾಗದಲ್ಲಿ ಹೊಸ ಜೀವಕೋಶಗಳು ಉತ್ಪತ್ತಿಯಾಗುತ್ತವೆ. ಹೀಗೆ ಮರಣಿಸಿದ ಜೀವಕೋಶಗಳು ಧೂಳಿನಲ್ಲಿ ಸೇರಿಹೋಗುತ್ತವೆ. ಮನೆಯಲ್ಲಿ ಗುಡಿಸಿದ ಕಸದಲ್ಲಿನ ಧೂಳಿನಲ್ಲಿ ಅರ್ಧದಷ್ಟು ಭಾಗ ಹೀಗೆ ಮರಣಿಸಿರುವ ಚರ್ಮದ ಜೀವಕೋಶಗಳು.

ವ್ಯಕ್ತಿಯ ಶ್ರಮಕ್ಕೆ ತಕ್ಕಂತೆ ಚರ್ಮದಲ್ಲಿ ಉತ್ಪತ್ತಿಯಾಗುವ ಬೆವರಿನ ಪ್ರಮಾಣ ಬದಲಾಗುತ್ತದೆ. ತೀರಾ ಕಡಿಮೆ ಶರೀರ ಶ್ರಮ ಇರುವವರಲ್ಲಿಯೂ ದಿನವೊಂದಕ್ಕೆ ಸುಮಾರು 3-4 ಲೀಟರ್ ಬೆವರು ಬಿಡುಗಡೆಯಾಗುತ್ತದೆ. ಶ್ರಮಜೀವಿಗಳಲ್ಲಿ ಇದು ದಿನವೊಂದಕ್ಕೆ 10 ಲೀಟರ್ ಪ್ರಮಾಣ ತಲುಪಬಹುದು. ಬೆವರಿನ ಮೂಲ ಉದ್ದೇಶ ಶರೀರವನ್ನು ತಂಪಾಗಿಡುವುದು. ಮಾನವರಂತೆ ಬೆವರಬಲ್ಲ ಪ್ರಾಣಿಗಳು ಹೆಚ್ಚಿಲ್ಲ. ಹೀಗೆ ಬೆವರುವ ಕಾರಣದಿಂದಲೇ ದೇಹಗಾತ್ರಕ್ಕೆ ಹೋಲಿಸಿದರೆ ಇತರ ಅನೇಕ ಪ್ರಾಣಿಗಳಿಗಿಂತಲೂ ಮಾನವನ ಕಾರ್ಯಸಾಮರ್ಥ್ಯ ಅಧಿಕ. ಜೀವವಿಕಾಸದಲ್ಲಿ ಬೆವರಬಲ್ಲ ಜೀವಿಗಳು ಬೆವರದಿರುವ ಪ್ರಾಣಿಗಳಿಗಿಂತಲೂ ಹೆಚ್ಚು ಸಮರ್ಥವಾಗುತ್ತವೆ.

ಚರ್ಮ ಬ್ಯಾಕ್ಟೀರಿಯಾದಂತಹ ಜೀವಿಗಳ ಆಗರ. 19 ಬೇರೆಬೇರೆ ಗುಂಪುಗಳ ಸುಮಾರು 1000ಕ್ಕೂ ಅಧಿಕ ಬಗೆಯ ಬ್ಯಾಕ್ಟೀರಿಯಾಗಳು ಚರ್ಮದಲ್ಲಿ ಕಾಣುತ್ತವೆ. ಒಂದು ಚದರ ಇಂಚು ವಿಸ್ತೀರ್ಣದ ಚರ್ಮದಲ್ಲಿ ಎರಡು ಕೋಟಿ ಜೀವಕೋಶಗಳಿರುತ್ತವಷ್ಟೇ? ಅಷ್ಟು ವಿಸ್ತೀರ್ಣದ ಚರ್ಮದಲ್ಲಿ ವಾಸಿಸುವ ಬ್ಯಾಕ್ಟೀರಿಯಾಗಳ ಸಂಖ್ಯೆ ಐದು ಕೋಟಿಗೂ ಅಧಿಕ. ಅಂದರೆ, ಜೀವಕೋಶಗಳ ಸಂಖ್ಯೆಗಿಂತಲೂ ಬ್ಯಾಕ್ಟೀರಿಯಾಗಳೇ ಹೆಚ್ಚು ಎಂದಾಯಿತು. ಕಾಲಿನ ಬೆರಳುಗಳ ಸಂದುಗಳಲ್ಲಿ 14 ಬಗೆಯ ಶಿಲೀಂಧ್ರಗಳಿವೆ. ಬೆವರಿನ ಗ್ರಂಥಿಗಳು ಉತ್ಪಾದಿಸುವ ಬೆವರಿಗೆ ವಾಸನೆ ಇರುವುದಿಲ್ಲ. ಆದರೆ, ಬೆವರು ಚರ್ಮವನ್ನು ತಲುಪಿದ ಕೂಡಲೇ ಅದರ ಮೇಲೆ ಈ ಪರೋಪಜೀವಿಗಳು ಧಾಂಗುಡಿಯಿಡುತ್ತವೆ. ಆಗ ಜರಗುವ ರಾಸಾಯನಿಕ ಪ್ರಕ್ರಿಯೆಗಳಲ್ಲಿ ಬಿಡುಗಡೆಯಾಗುವ ವಸ್ತುಗಳು ವಿಶಿಷ್ಟ ವಾಸನೆಯನ್ನು ಸೂಸುತ್ತವೆ. ವ್ಯಕ್ತಿಯ ದೇಹದ ವಾಸನೆಗೆ ಈ ಪ್ರಕ್ರಿಯೆ ಕಾರಣ.

ಚರ್ಮದ ವಿಸ್ತಾರಕ್ಕೆ ತಕ್ಕಂತೆ ಅದರೊಳಗಿನ ಪ್ರೋಟೀನುಗಳನ್ನು ಉತ್ಪಾದಿಸುವ ಜೀನ್ಗಳೂ ಹೆಚ್ಚು. ದೇಹದಲ್ಲಿ ಪ್ರೋಟೀನ್ ಉತ್ಪತ್ತಿಗೆ ಕಾರಣವಾಗಿರುವ ಜೀನ್ಗಳ ಪೈಕಿ ಶೇಕಡಾ 70 ಚರ್ಮಕ್ಕೇ ಮೀಸಲು. ಆಯಾ ಚರ್ಮದ ಪ್ರಕಾರವನ್ನು ನಿರ್ಧರಿಸುವ 500 ವಿಶಿಷ್ಟ ಜೀನ್ಗಳು ಚರ್ಮದಲ್ಲಿವೆ. ಚರ್ಮದ ಬಣ್ಣಕ್ಕೆ ಕಾರಣವಾಗುವ ಮೆಲನಿನ್ ಮೊದಲಾದ ಐದು ಬಗೆಯ ವರ್ಣದ್ರವ್ಯ ರಾಸಾಯನಿಕಗಳೂ ಈ ಜೀನ್ಗಳ ಕೈವಾಡವೇ. ಆಯಾ ಭೌಗೋಳಿಕ ಪ್ರಾಂತ್ಯದ ಬಿಸಿಲಿನ ಮಟ್ಟಕ್ಕೆ, ಊದಾತೀತ ಕಿರಣಗಳ ಸಾಂದ್ರತೆಗೆ ಚರ್ಮದ ಬಣ್ಣ ಅನುಗುಣವಾಗಿರುತ್ತದೆ. ಭೂಮಿಯ ಸಮಭಾಜಕ ವೃತ್ತದ ಸುತ್ತಮುತ್ತಲಿನ ಉಷ್ಣವಲಯದ ವಾಸಿಗಳಲ್ಲಿ ಚರ್ಮದ ಬಣ್ಣ ಗಾಢವಾಗಿದ್ದರೆ, ಅಲ್ಲಿಂದ ಧ್ರುವಗಳತ್ತ ಚಲಿಸಿದಂತೆಲ್ಲಾ ಈ ಬಣ್ಣದ ಸಾಂದ್ರತೆ ಕಡಿಮೆಯಾಗುತ್ತದೆ. ಇದನ್ನು ಆಧರಿಸಿ ಚರ್ಮದ ಬಣ್ಣವನ್ನು ಗುರುತಿಸಲು ಆರು ಸ್ತರಗಳ ಫಿಟ್ಜ್ಪ್ಯಾಟ್ರಿಕ್ ಮಾಪನವಿದೆ.

ಒಂದು ಪ್ರಾಂತ್ಯದ ಹೆಂಗಸರ ಚರ್ಮದ ಬಣ್ಣ ಅದೇ ಪ್ರಾಂತ್ಯದ ಗಂಡಸರ ಚರ್ಮದ ಬಣ್ಣಕ್ಕಿಂತ ತೆಳುವಾಗಿರುತ್ತದೆ. ಗರ್ಭದ ವೇಳೆ ಮತ್ತು ಹೆರಿಗೆಯ ನಂತರ ಮಗುವಿಗೆ ಹಾಲೂಡಿಸುವ ಅಗತ್ಯಗಳಿಗೆ ಅನುಸಾರವಾಗಿ ಸ್ತ್ರೀಯರ ಕ್ಯಾಲ್ಸಿಯಂ ಆವಶ್ಯಕತೆ ಹೆಚ್ಚು. ಕ್ಯಾಲ್ಸಿಯಂ ಪ್ರಮಾಣವನ್ನು ಶರೀರದಲ್ಲಿ ನಿಯಂತ್ರಿಸುವ ವಿಟಮಿನ್ ಡಿ ತಯಾರಿಕೆಗೆ ಸೂರ್ಯ ರಶ್ಮಿಯಲ್ಲಿರುವ ಊದಾತೀತ ಕಿರಣಗಳ ಅಗತ್ಯವಿದೆ. ಕಪ್ಪು ಚರ್ಮದಲ್ಲಿ ಊದಾತೀತ ಕಿರಣಗಳ ಪ್ರವೇಶ ಕಡಿಮೆ. ಹೀಗಾಗಿ, ಹೆಚ್ಚು ಊದಾತೀತ ಕಿರಣಗಳು ಪ್ರವೇಶಿಸುವಂತೆ ನಿಸರ್ಗ ಹೆಂಗಸರ ಚರ್ಮವನ್ನು ತೆಳುವಾಗಿಸಿ, ಅದರ ಛಾಯೆಯ ಗಾಢತೆಯನ್ನು ಕಡಿಮೆಯಿಟ್ಟಿದೆ. ವೃದ್ಧರಲ್ಲಿಯೂ ಚರ್ಮ ತೆಳುವಾಗುತ್ತದೆ ಮತ್ತು ವಯಸ್ಸಿಗೆ ಅನುಸಾರವಾಗಿ ತನ್ನ ಸಹಜ ಬಿಗುವನ್ನು ಕಳೆದುಕೊಳ್ಳುತ್ತದೆ.

ಚರ್ಮಕ್ಕೆ ಪೋಷಕಾಂಶಗಳು ದೊರೆಯುವುದು ಅದರಡಿಯಲ್ಲಿನ ರಕ್ತನಾಳಗಳಿಂದ. ಚರ್ಮದ ತೀರಾ ಹೊರಭಾಗದ ಕೆಲವಂಶ ಮಾತ್ರ ವಾತಾವರಣದ ಆಕ್ಸಿಜನ್ ಬಳಸಿ ತನ್ನ ಕೆಲಸ ಸಾಧಿಸಬಲ್ಲದು. ಆದರೆ ಈ ಪ್ರಮಾಣ ತೀರಾ ಗೌಣ. ಕೆಲವು ಔಷಧಗಳನ್ನು ಸಾಕಷ್ಟು ಸಾಂದ್ರತೆಯಲ್ಲಿ ಸೇರಿಸಿ ಚರ್ಮದ ಮೇಲೆ ಪಟ್ಟಿಯಂತೆ ಅಂಟಿಸಿದರೆ, ಅದರ ಅಲ್ಪ ಭಾಗವನ್ನು ಚರ್ಮ ನಿಧಾನವಾಗಿ ರಕ್ತಕ್ಕೆ ಸೇರಿಸಬಲ್ಲದು. ಹೀಗಾಗಿ, ತೀರಾ ಅಲ್ಪ ಪ್ರಮಾಣದ ಅಗತ್ಯ ಮಾತ್ರವಿರುವ ಕೆಲವು ಔಷಧಗಳನ್ನು ಈ ದಾರಿಯಲ್ಲಿ ಶರೀರಕ್ಕೆ ನೀಡಬಲ್ಲ ಅಂಟುಪಟ್ಟಿಗಳು ಚಾಲ್ತಿಯಲ್ಲಿವೆ. ಈಚೆಗೆ ಸುಧಾರಿತ ನ್ಯಾನೋ ತಂತ್ರಜ್ಞಾನವನ್ನು ಬಳಸಿ ನಡೆಸಿದ ಪ್ರಯೋಗಗಳಲ್ಲಿ 40 ನ್ಯಾನೋಮೀಟರ್ಗಿಂತ ದೊಡ್ಡ ಗಾತ್ರದ ಕಣಗಳು ಚರ್ಮದ ಹೊರ ಆವರಣವನ್ನು ದಾಟಲಾರವು ಎಂದು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಈ ಮಾಹಿತಿಯನ್ನು ಬಳಸಿಕೊಂಡು ಚರ್ಮದ ಮೂಲಕ ಔಷಧಗಳನ್ನು ರವಾನಿಸುವ ಪ್ರಯತ್ನಗಳು ನಡೆದಿವೆ. 40 ನ್ಯಾನೋಮೀಟರ್ಗಿಂತಲೂ ಸಣ್ಣಕಣಗಳ ಬಳಕೆ; ಚರ್ಮದಿಂದ ರೋಮಗಳು ಹೊರಬರುವ ಸ್ಥಾನದಲ್ಲಿ ಇರಬಹುದಾದ ಹೆಚ್ಚು ಜಾಗವನ್ನು ಬಳಸಿಕೊಂಡು ದೊಡ್ಡ ಗಾತ್ರದ ನ್ಯಾನೋಕಣಗಳನ್ನು ನುಗ್ಗಿಸುವ ಪ್ರಯತ್ನ; ಕೆಲ ರಾಸಾಯನಿಕಗಳ ಬಳಕೆಯಿಂದ ಚರ್ಮದ ಮೇಲ್ಪದರವನ್ನು ತಾತ್ಕಾಲಿಕವಾಗಿ ಹಿಗ್ಗಿಸಿ, ಆ ಮೂಲಕ ಹೆಚ್ಚು ಪ್ರಮಾಣದ ನ್ಯಾನೋಕಣಗಳನ್ನು ದಾಟಿಸುವ ಸಾಧ್ಯತೆಗಳನ್ನು ಪರಿಶೀಲಿಸಲಾಗುತ್ತಿದೆ. ಚರ್ಮದ ಕ್ಯಾನ್ಸರ್ನಂತಹ ಕಾಯಿಲೆಗಳಲ್ಲಿ ಅದರೊಳಗೆ ಸರಿಯಾದ ಪ್ರಮಾಣದಲ್ಲಿನ ಔಷಧ ನುಗ್ಗಿಸುವುದು ಸವಾಲಿನ ಸಂಗತಿ. ಗಂತಿಯ ಮೇಲಿನ ಚರ್ಮದ ಮೂಲಕವೇ ಔಷಧ ನುಗ್ಗಿಸುವ ಪ್ರಯತ್ನಗಳಲ್ಲಿ ಸಾಫಲ್ಯ ಹೆಚ್ಚಬಹುದು ಎನ್ನುವ ಆಶಯವಿದೆ.

ದೇಹ ಸೌಂದರ್ಯವನ್ನು ಮೊದಲ ನೋಟದಲ್ಲಿ ಬಿಂಬಿಸುವ ಚರ್ಮ ಅಚ್ಚರಿಗಳ ಆಗರವೂ ಹೌದು. ನಮ್ಮ ದೇಹದ ಬಹುದೊಡ್ಡ ಅಂಗದ ಗಣಿತ ಅದರಷ್ಟೇ ವಿಸ್ಮಯಕಾರಿ.

------------------

ಮಾರ್ಚ್ 2023 ರ ಕುತೂಹಲಿ ವಿಜ್ಞಾನ ಮಾಸಪತ್ರಿಕೆಯಲ್ಲಿ ಪ್ರಕಟವಾದ ಲೇಖನ. ಕುತೂಹಲಿಯ ಮಾರ್ಚ್ 2023 ರ ಸಂಚಿಕೆಯನ್ನು ಓದಲು ಕೊಂಡಿ: http://bit.ly/3kNy1aq

 ನಿದ್ರಾಹೀನತೆಗೆ ಪರಿಹಾರ

ಡಾ. ಕಿರಣ್ ವಿ.ಎಸ್.

ವೈದ್ಯರು

“ನಿದ್ರಿಸುವಾಗ ಕಾಣುವುದು ಕನಸಲ್ಲ; ಸಾಧನೆಯ ಬೆಂಬತ್ತುವಂತೆ ಮಾಡಿ ನಿದ್ರಿಸಲು ಬಿಡದಿರುವುದು ನಿಜವಾದ ಕನಸು” ಎನ್ನುವ ಸ್ಫೂರ್ತಿದಾಯಕ ಮಾತುಗಳನ್ನು ಕೇಳಿರುತ್ತೇವೆ. ಈ ಮಾತುಗಳ ಹಿಂದಿನ ಭಾವಾರ್ಥದ ಬದಲಿಗೆ ಪದಶಃ ಅರ್ಥದಲ್ಲಿ ಗ್ರಹಿಸಿ ಸತತವಾಗಿ ನಿದ್ರೆಗೆಡುವುದರಿಂದ ಸಾಧನೆಗಿಂತಲೂ ಅನಾರೋಗ್ಯವಾಗುವುದು ಹೆಚ್ಚು ಖಚಿತ. ನಮ್ಮ ದೇಹಕ್ಕೆ ಪ್ರತಿದಿನ ಸುಮಾರು ಏಳರಿಂದ ಎಂಟು ಗಂಟೆಗಳ ನಿದ್ರೆಯ ಅಗತ್ಯವಿದೆ. ಹೀಗಾಗಿ ನಮ್ಮ ಜೀವನದ ಬೇರೆ ಯಾವುದೇ ಪ್ರಕ್ರಿಯೆಗಿಂತಲೂ ಅಧಿಕ ಕಾಲವನ್ನು ನಾವು ನಿದ್ರೆಯಲ್ಲಿ ಕಳೆಯುತ್ತೇವೆ. ನಿದ್ರೆ ಕಡಿಮೆಯಾದಾಗ ಇಡೀ ದಿನ ಕಿರಿಕಿರಿಯ ಮನಸ್ಥಿತಿ ಇರುತ್ತದೆ. ನಾವು ಎಷ್ಟು ಸುಖವಾಗಿ ನಿದ್ರಿಸುತ್ತೇವೆ ಎಂಬುದರ ಮೇಲೆ ದೇಹದ ಮತ್ತು ಮನಸ್ಸಿನ ಆರೋಗ್ಯ ನಿರ್ಧಾರವಾಗುತ್ತದೆ. 

ಆಳವಾದ ನಿದ್ರೆ ಮತ್ತು ಕನಸುಗಳ ನಿದ್ರೆ ಎಂದು ವಿಜ್ಞಾನಿಗಳು ನಿದ್ರೆಯ ಅವಧಿಯನ್ನು ವಿಭಾಗಿಸುತ್ತಾರೆ. ಇದರ ಹೆಚ್ಚಿನ ಭಾಗ ಆಳವಾದ ನಿದ್ರೆಯದ್ದು. ಈ ವೇಳೆಯಲ್ಲಿ ದೇಹದ ಸ್ನಾಯುಗಳು ಸಡಿಲವಾಗುತ್ತವೆ; ಉಸಿರಾಟ ಆಳವಾಗಿ, ನಿಧಾನವಾಗಿ ಆಗುತ್ತದೆ; ದಿನವಿಡೀ ಕ್ರಿಯಾಶೀಲವಾಗಿದ್ದು ದಣಿದಿರುವ ದೇಹ ಮತ್ತು ಮಿದುಳಿಗೆ ಆಳ ನಿದ್ರೆಯ ವೇಳೆ ಮರುಚೈತನ್ಯ ದೊರೆಯುತ್ತದೆ. ಇದಕ್ಕಿಂತ ಭಿನ್ನವಾದದ್ದು ಕನಸುಗಳ ನಿದ್ರೆ. ಈ ವೇಳೆಯಲ್ಲಿ ಮಿದುಳಿನ ಚಟುವಟಿಕೆ ಹೆಚ್ಚುತ್ತದೆ; ಸ್ನಾಯುಗಳು ನಿಶ್ಚೇಷ್ಟವಾಗುತ್ತವೆ; ಉಸಿರಾಟ ಮತ್ತು ಎದೆಬಡಿತದಲ್ಲಿ ಏರುಪೇರಾಗುತ್ತದೆ. ಒಂದು ರಾತ್ರಿಯಲ್ಲಿ ಆಳನಿದ್ರೆ ಮತ್ತು ಕನಸುಗಳ ನಿದ್ರೆಗಳ ನಾಲ್ಕೈದು ಆವರ್ತನಗಳು ಜರುಗುತ್ತವೆ. ಹಲವಾರು ಮಾಹಿತಿಗಳನ್ನು ಸಂಸ್ಕರಿಸುವಾಗ ಉಳಿದುಹೋದ ಅನೇಕಾನೇಕ ಸಂಗತಿಗಳು ಮಿದುಳಿನ ಕೋಶಗಳಲ್ಲಿ ಜೇಡರಬಲೆಗಳನ್ನು ನಿರ್ಮಿಸಿರುತ್ತವೆ. ಇದನ್ನು ಮಿದುಳು ಚೊಕ್ಕ ಮಾಡಲು ನಿದ್ರೆಯ ಅವಧಿ ಬಳಕೆಯಾಗುತ್ತದೆ. ಹೀಗೆ ಅನಗತ್ಯ ವಿಷಯಗಳು ತೊಡೆದುಹೋದರೆ, ನಿರ್ಧಾರಗಳನು ಕೈಗೊಳ್ಳುವ ಮಿದುಳಿನ ಸಾಮರ್ಥ್ಯ ವೃದ್ಧಿಸುತ್ತದೆ. ನಮ್ಮನ್ನು ಕಾಡುತ್ತಿರುವ ಪ್ರಶ್ನೆಗಳಿಗೆ ಒಂದು ಒಳ್ಳೆಯ ನಿದ್ರೆಯ ನಂತರ ಅಕಸ್ಮಾತ್ತಾಗಿ ಉತ್ತರ ದೊರೆಯುವುದರ ಚಮತ್ಕಾರದ ಹಿನ್ನೆಲೆ ಇದೇ. ಒಂದು ವೇಳೆ ಯಾವುದೇ ಕಾರಣಕ್ಕೆ ನಿದ್ರೆಯ ಪ್ರಮಾಣ ಕಡಿಮೆಯಾದರೆ ಅನಗತ್ಯ ಮಾಹಿತಿಯನ್ನು ತೊಡೆದುಹಾಕಲು ಮಿದುಳಿಗೆ ಸಮಯ ಸಿಗುವುದಿಲ್ಲ; ಅದರ ಚೇತರಿಕೆ ಪೂರ್ಣವಾಗುವುದಿಲ್ಲ. ಇದರಿಂದ ಮಿದುಳಿನ ಕಾರ್ಯಕ್ಷಮತೆ ಕುಂಠಿತವಾಗುತ್ತದೆ; ನೆನಪಿನಲ್ಲಿ ಇಟ್ಟಿರುವ ಮಾಹಿತಿ ಬೇಕಾದ ಸಮಯಕ್ಕೆ ಹೊರಬರುವುದಿಲ್ಲ. ಪರಿಸ್ಥಿತಿ ಮಹಾಭಾರತದ ಕರ್ಣನ ಕತೆಯಾಗುತ್ತದೆ. ಈ ಕಾರಣಕ್ಕೇ ಪರೀಕ್ಷೆಯಂತಹ ಮುಖ್ಯವಾದ ಕೆಲಸಗಳ ಹಿಂದಿನ ರಾತ್ರಿ ನಿದ್ರೆಗೆಡೆವುದು ಸರಿಯಲ್ಲ.

ಹಲವಾರು ದೈಹಿಕ ಮತ್ತು ಮಾನಸಿಕ ಸಮಸ್ಯೆಗಳ ಕಾರಣದಿಂದ ನಿದ್ರೆಯ ವ್ಯವಸ್ಥೆಯಲ್ಲಿ ಏರಿಳಿತವಾಗಬಹುದು. ಶ್ವಾಸದ ಸಮಸ್ಯೆಗಳು ಇರುವವರು ಅಂಗಾತ ಮಲಗಿದಾಗ ಉಸಿರಾಟದ ಮೇಲಿನ ಒತ್ತಡ ಹೆಚ್ಚುತ್ತದೆ. ದೀರ್ಘಕಾಲಿಕ ರಾತ್ರಿ-ಪಾಳಿ ಕೆಲಸ ಇರುವವರ ನಿದ್ರೆಯ ಆವರ್ತನ ಚಕ್ರ ವಿಲೋಮವಾಗುತ್ತದೆ. ರಾತ್ರಿಯಿಡೀ ಮೋಜು ಮಾಡಿ, ಹಗಲಿನಲ್ಲಿ ಕೆಲಗಂಟೆಗಳ ಕಾಲ ಮಾತ್ರ ಮಲಗುವ “ಪಾರ್ಟಿ-ಪ್ರಾಣಿಗಳು” ದೀರ್ಘಕಾಲಿಕ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಾರೆ. ಯಾವುದೋ ಕೆಲಸ ಇಲ್ಲವೇ ಹವ್ಯಾಸಕ್ಕೆ ಸಿಲುಕಿ, ನಿದ್ರೆಯ ಸಮಯವನ್ನು ಕಡಿಮೆ ಮಾಡಿಕೊಳ್ಳುವುದು ನಿದ್ರಾಹೀನತೆಗೆ ಸಮಾನವಾದದ್ದು. ಇಂತಹ ಬಾಹ್ಯಕಾರಣಗಳ ಹೊರತಾಗಿಯೂ ನಿದ್ರಾಹೀನತೆಯಿಂದ ಬಳಲುವವರು, ಎಷ್ಟೋ ಪ್ರಯತ್ನ ಮಾಡಿದರೂ ನಿದ್ರೆ ಬಾರದವರು ಇದ್ದಾರೆ. ನಿದ್ರಾಹೀನತೆಗೆ ಔಷಧಗಳನ್ನು ಬಳಸುವ ಬದಲಿಗೆ ಇಂತಹವರು ತಮ್ಮ ಜೀವನಶೈಲಿಯಲ್ಲಿ, ಆಹಾರ ವಿಧಾನಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಒಂದು ನಿಶ್ಚಿತ ಸಮಯಕ್ಕೆ ಮಲಗುವ ಮತ್ತು ಏಳುವ ಪದ್ಧತಿ ಒಳಿತು. ಈ ಪದ್ದತಿಯನ್ನು ಯಾವ ಕಾರಣಕ್ಕೂ ಬದಲಾಯಿಸದಂತೆ ಕಟ್ಟುನಿಟ್ಟಾಗಿ ಪಾಲಿಸಬೇಕು. ವಾರಾಂತ್ಯಕ್ಕಾಗಲೀ, “ಚೀಟ್-ಡೆ” ಎನ್ನುವ ನೆಪಗಳಿಗಾಗಲೀ ಮಲಗೇಳುವ ಸಮಯಗಳನ್ನು ಮಾರ್ಪಾಡು ಮಾಡಬಾರದು. ಅಧಿಕ ಬೆಳಕಿನಲ್ಲಿ ಕಾಲ ಕಳೆಯುವುದು ನಿದ್ರೆಯ ಶತ್ರು. ಹೀಗಾಗಿ, ಮಲಗುವ ಸಮಯಕ್ಕೆ ಒಂದು ತಾಸು ಮುನ್ನವೇ ಬೆಳಕಿನ ಪ್ರಮಾಣವನ್ನು ತಗ್ಗಿಸಿ, ಮಂದ ಬೆಳಕಿಗೆ ದೃಷ್ಟಿಯನ್ನು ಹೊಂದಿಸಿಕೊಳ್ಳಬೇಕು. ಮಲಗುವ ಸಮಯಕ್ಕೆ ಮೊದಲು ದೂರದರ್ಶನ, ಕಂಪ್ಯೂಟರ್, ಮೊಬೈಲ್ ಪರದೆಗಳಂತಹ ಬೆಳಕನ್ನು ಸೂಸುವ ಆಕರಗಳಿಂದ ದೂರವಿರಬೇಕು. ಇದರ ಬದಲಿಗೆ ನಿದ್ರೆಯ ವೇಳೆಗೆ ಮುನ್ನ ಮನಸ್ಸಿಗೆ ಆಪ್ತವಾದ ಪುಸ್ತಕವನ್ನು ಓದುವುದು ಒಳಿತು. ನಿದ್ರೆಯ ಸಮಯದಲ್ಲಿ ಸಾಮಾನ್ಯ ಆಹಾರ ಸೇವನೆ ಸೂಕ್ತ. ರಾತ್ರಿಯ ವೇಳೆ ಭೂರಿಭೋಜನ, ಮದ್ಯಪಾನ, ಧೂಮಪಾನ, ಕಾಫಿ-ಟೀಗಳನ್ನು ದೂರವಿರಬೇಕು. ಪ್ರತಿದಿನವೂ ಶರೀರಕ್ಕೆ ಸಹ್ಯವಾಗುವಷ್ಟು ವ್ಯಾಯಾಮ, ವೇಗದ ನಡಿಗೆ, ತೋಟದ ಕೆಲಸದಂತಹ ಚಟುವಟಿಕೆಗಳಿಗೆ ಸಮಯವನ್ನು ಹೊಂದಿಸಿಕೊಳ್ಳಬೇಕು. ನಿದ್ರೆಯ ಕೋಣೆ ತಂಪಾಗಿ, ಸಾಧ್ಯವಾದಷ್ಟೂ ನಿಶ್ಶಬ್ದವಾಗಿ, ಮಂದಬೆಳಕಿನಿಂದಿರುವುದು ಅಗತ್ಯ. ಈ ರೀತಿಯ ಪ್ರಯತ್ನಗಳು ಫಲಕಾರಿಯಾಗದಿದ್ದರೆ ನಿದ್ರೆಗೆ ಮುನ್ನ ಬಿಸಿನೀರಿನಲ್ಲಿ ಸ್ನಾನ ಮಾಡಿ, ಧ್ಯಾನ ಮಾಡುವುದರಿಂದ ನಿದ್ರಾಹೀನತೆ ಕಡಿಮೆಯಾಗುತ್ತದೆ. ಹಗಲುವೇಳೆಯಲ್ಲಿ ಮಲಗುವ ಅಭ್ಯಾಸ ಕೂಡ ರಾತ್ರಿ ನಿದ್ರೆ ಬಾರದಿರುವುದಕ್ಕೆ ಪ್ರಮುಖ ಕಾರಣ. ನಿದ್ರಾಹೀನತೆಯಿಂದ ಬಳಲುವವರು ಹಗಲಿನ ವೇಳೆ ಸಾಧ್ಯವಾದಷ್ಟೂ ಯಾವುದಾದರೂ ಒಂದು ಚಟುವಟಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಆಗ ರಾತ್ರಿಯ ವೇಳೆ ನಿದ್ರೆ ಹತ್ತುವ ಸಾಧ್ಯತೆಗಳು ಹೆಚ್ಚುತ್ತವೆ.

ನಿದ್ರಾಹೀನತೆಯ ಚಿಕಿತ್ಸೆಯ ಭಾಗವಾಗಿ ಜೀವನಶೈಲಿಯ ಬದಲಾವಣೆಗಳನ್ನು ವಿಜ್ಞಾನಿಗಳು ಕ್ಲುಪ್ತವಾಗಿ ಹೀಗೆ ಹೇಳುತ್ತಾರೆ: “ನಿಮ್ಮ ಹಗಲನ್ನು ಮತ್ತಷ್ಟು ಬೆಳಗಾಗಿಸಿ; ನಿಮ್ಮ ರಾತ್ರಿಯನ್ನು ಇನ್ನಷ್ಟು ಕತ್ತಲಾಗಿಸಿ; ಸೂರ್ಯರಶ್ಮಿಗೆ ಮೈ ಒಡ್ಡುವಂತೆ ನಿಮ್ಮ ಕೆಲಸಕ್ಕೆ ನಡೆದೋ ಅಥವಾ ಬೈಸಿಕಲ್ ಸವಾರಿ ಮಾಡುತ್ತಲೋ ಹೋಗಿ; ಸಂಜೆ ಆಗುತ್ತಿದ್ದಂತೆ ನಿಮ್ಮ ಎಲೆಕ್ಟ್ರಾನಿಕ್ ಸಲಕರಣೆಗಳ ಬೆಳಕನ್ನು ಮಂದವಾಗಿಸಿ”. ಸಾವಿರಾರು ವರ್ಷಗಳಿಂದ ನಮ್ಮ ಅನೂಚಾನ ಸಂಸ್ಕೃತಿ ಇದನ್ನು ಮತ್ತಷ್ಟು ಸಾಂದ್ರವಾಗಿ “ಬ್ರಾಹ್ಮಿ ಮುಹೂರ್ತಕ್ಕೆ ಎದ್ದು, ಪೂರ್ವದಲ್ಲಿ ಮೇಲೇಳುತ್ತಿರುವ ಸೂರ್ಯನಿಗೆ ನಮನ ಸಲ್ಲಿಸಿ, ದಿನವಿಡೀ ನಿಷ್ಠೆಯಿಂದ ಕೆಲಸ ಮಾಡಿ, ಸಂಜೆಯ ನಂತರ ಮಲಗಿ ಸಾಕಷ್ಟು ಕಾಲ ನಿದ್ರಿಸಿರಿ” ಎಂದು ಹೇಳಿದೆ.

ಒಳಿತು ಕಾಲಾಂತರದಲ್ಲಿ ಬದಲಾಗುವುದಿಲ್ಲ ಎನ್ನುವುದಕ್ಕೆ ನಿದ್ರಾಹೀನತೆಯ ಚಿಕಿತ್ಸೆಯಲ್ಲಿ ಜೀವನಶೈಲಿಯ ಪದ್ದತಿಗಳು ಸಾಕ್ಷಿಯಾಗಿವೆ.

----------------------

ದಿನಾಂಕ 21/2/2023 ರಂದು ಪ್ರಜಾವಾಣಿಯ ಕ್ಷೇಮ ಕುಶಲ ವಿಭಾಗದಲ್ಲಿ ಪ್ರಕಟವಾದ ಲೇಖನ. ಕೊಂಡಿ: https://www.prajavani.net/health/health-secret-in-good-sleep-1017066.html

 

ಯಕೃತ್ತಿನ ಗಣಿತ

ಡಾ. ಕಿರಣ್ ವಿ.ಎಸ್.

ವೈದ್ಯರು

ಮಾನವ ದೇಹದಲ್ಲಿ ಒಟ್ಟು 78 ವಿವಿಧ ಅಂಗಗಳಿವೆ. ಇವುಗಳಲ್ಲಿ ಮಿದುಳು, ಹೃದಯ, ಶ್ವಾಸಕೋಶಗಳು, ಯಕೃತ್, ಮತ್ತು ಮೂತ್ರಪಿಂಡಗಳೆಂಬ ಐದು ಅಂಗಗಳು ಪ್ರಮುಖವಾದುವು. ಪ್ರಮುಖವೇಕೆಂದರೆ, ಈ ಐದೂ ಅಂಗಗಳ ಪೈಕಿ ಯಾವುದಾದರೂ ಒಂದು ಕೆಲ ನಿಮಿಷಗಳ ಕಾಲ ಸಂಪೂರ್ಣವಾಗಿ ಸ್ತಬ್ಧವಾದರೆ ಜೀವನ ಅಲ್ಲಿಗೆ ಮುಗಿಯುತ್ತದೆ. ಉಳಿದ ಅಂಗಗಳು ಹಾಗಲ್ಲ. ಉದಾಹರಣೆಗೆ ಕಣ್ಣು ಕಾಣದೆ ಹೋದರೆ, ರುಚಿ ತಿಳಿಯದೆ ಹೋದರೆ ಬದುಕು ಕಷ್ಟವಾಗಬಹುದೇ ಹೊರತು, ಪ್ರಾಣಕ್ಕೆ ನೇರವಾಗಿ ಅಪಾಯವಿಲ್ಲ.

ಈ ಐದೂ ಪ್ರಮುಖ ಅಂಗಗಳ ಪೈಕಿ ಯಕೃತ್ ದೊಡ್ದದು. ಇದು ಶರೀರದ ಎರಡನೆಯ ದೊಡ್ಡ ಅಂಗ. ಬೆನ್ನುಮೂಳೆ ಇರುವ ಕಶೇರುಕ ಜೀವಿಗಳಲ್ಲಿ ಮಾತ್ರ ಕಾಣುವ ಯಕೃತ್, ನಮ್ಮ ಶರೀರದ ರಾಸಾಯನಿಕ ಕಾರ್ಖಾನೆ. ಮಾನವ ಯಕೃತ್ತಿನ ತೂಕ ಸುಮಾರು ಒಂದೂವರೆ ಕಿಲೋಗ್ರಾಂ. ಎದೆ ಮತ್ತು ಹೊಟ್ಟೆಯ ಭಾಗವನ್ನು ವಪೆ (diaphragm) ಎನ್ನುವ ಮಾಂಸದ ಪಟ್ಟಿಯೊಂದು ಪ್ರತ್ಯೇಕಿಸುತ್ತದೆ. ವಪೆಗೆ ಆತುಕೊಂಡು ಹೊಟ್ಟೆಯ ಪ್ರದೇಶದ ಬಲಭಾಗದಲ್ಲಿ ಇರುವುದು ಯಕೃತ್. ಸುಮಾರು 500 ವಿವಿಧ ಬಗೆಯ ಕೆಲಸಗಳನ್ನು ಯಕೃತ್ ನಿಭಾಯಿಸುತ್ತದೆ ಎಂದು ತಜ್ಞರ ಅಂದಾಜು. ಇಷ್ಟು ಪರಿಯ ಕೆಲಸಗಳನ್ನು ಮಾಡುವ ಮತ್ತೊಂದು ಅಂಗ ನಮ್ಮ ದೇಹದಲ್ಲಿಲ್ಲ.

ಮಿದುಳು ನಿಷ್ಕ್ರಿಯವಾದರೆ ಜೀವನಕ್ಕೆ ಭವಿಷ್ಯವಿಲ್ಲ. ಆದರೆ, ಅಂತಹವರನ್ನೂ ಕೃತಕ ಉಸಿರಾಟದ ಮೂಲಕ ಉಳಿದ ಅಂಗಗಳು ಸುಸ್ಥಿತಿಯಲ್ಲಿರುವವರೆಗೆ ಜೀವಂತ ಇಡಬಹುದು. ಹೃದಯ ಕೆಟ್ಟರೆ ಸಣ್ಣ ಮೋಟಾರಿನಂತಹ ಸಲಕರಣೆಗಳನ್ನು ದೇಹದಲ್ಲಿ ಅಳವಡಿಸಿ, ಹೃದಯದ ಕಾರ್ಯಕ್ಕೆ ಪರ್ಯಾಯ ಒದಗಿಸುವ ಸೌಲಭ್ಯವಿದೆ. ಮೂತ್ರಪಿಂಡಗಳ ವೈಫಲ್ಯಕ್ಕೆ ಡಯಾಲಿಸಿಸ್ ಮಾಡಿಸಬಹುದು. ಶ್ವಾಸಕೋಶಗಳ ಕೆಲಸವನ್ನು ಉಸಿರಾಟ ನೀಡುವ ಕೃತಕ ಯಂತ್ರಗಳು ಮಾಡಬಲ್ಲವು. ಹೀಗೆ, ಯಂತ್ರಗಳು ಪ್ರಮುಖ ಅಂಗಗಳಿಗೆ ಬದಲಿಯಾಗಿ ಬಳಕೆಯಾಗುತ್ತಿವೆ. ಆದರೆ ಯಕೃತ್ತಿನ ಕೆಲಸಕ್ಕೆ ಯಾವುದೇ ಯಂತ್ರದ ಪರ್ಯಾಯವಿಲ್ಲ. ಅದು ಅಗಾಧ ಸಾಮರ್ಥ್ಯದ, ಅಷ್ಟೇ ಕರಾರುವಾಕ್ಕಾದ ನೂರಾರು ಕೆಲಸಗಳನ್ನು ನಿರ್ವಹಿಸುವ ಅಚ್ಚರಿಯ ಅಂಗ. ಅದು ಮಾಡುವಷ್ಟು ಕೆಲಸಗಳನ್ನು ಮಾಡಲು ಕನಿಷ್ಠ ಐವತ್ತು ವಿವಿಧ ಯಂತ್ರಗಳಾದರೂ ಬೇಕಾದೀತು. ಅಷ್ಟಾದರೂ ಅದರ ನೈಜ ಸಾಮರ್ಥ್ಯಕ್ಕೆ ಈ ಎಲ್ಲ ಯಂತ್ರಗಳು ಸೇರಿಯೂ ಸಾಟಿಯಾಗಲಾರವು. ಯಕೃತ್ ಕೆಟ್ಟರೆ ಸಾಧ್ಯವಾದಷ್ಟೂ ಬೇಗ ದಾನಿಯೊಬ್ಬರಿಂದ ಪಡೆದ ಯಕೃತ್ತಿನ ಕಸಿ ಮಾಡುವುದೊಂದೇ ದಾರಿ.

ಯಕೃತ್ತಿನಲ್ಲಿ ನಾಲ್ಕು ಭಾಗಗಳಿವೆ, ಯಕೃತ್ ತಜ್ಞರು ಇದನ್ನು ಮತ್ತಷ್ಟು ವಿಭಾಗಿಸಿ ಎಂಟು ಭಾಗಗಳನ್ನು ಗುರುತಿಸುತ್ತಾರೆ. ಯಕೃತ್ತಿನ ಸಮಸ್ಯೆಗಳ ನಿರ್ವಹಣೆಯಲ್ಲಿ ಹೀಗೆ ಸಣ್ಣ ಭಾಗಗಳನ್ನು ಗುರುತಿಸುವುದು ಸಹಕಾರಿ. ಸೂಕ್ಷ್ಮದರ್ಶಕ ಯಂತ್ರದ ಮೂಲಕ ನೋಡಿದರೆ ಇಡೀ ಯಕೃತ್ತಿನಲ್ಲಿ ಸುಮಾರು ಹತ್ತು ಲಕ್ಷ ಸಣ್ಣ ಷಡ್ಭುಜಾಕಾರದ (hexagon) ರಚನೆಗಳು ಕಾಣುತ್ತವೆ. ಇಂತಹ ಪ್ರತಿಯೊಂದು ರಚನೆಯಲ್ಲಿಯೂ ಸುಮಾರು 5000 ಕೋಶಗಳಿವೆ. ಇದರ ಜೊತೆಗಿರುವ ಇತರ ಬಗೆಯ ಕೋಶಗಳೂ ಸೇರಿದರೆ ಯಕೃತ್ತಿನಲ್ಲಿರುವ ಒಟ್ಟು ಜೀವಕೋಶಗಳ ಸಂಖ್ಯೆ ಅಂದಾಜು 3000 ಕೋಟಿ!

ಇಡೀ ಮಾನವ ಶರೀರದಲ್ಲಿನ ಜೀವಕೋಶಗಳನ್ನು ನಿರ್ವಹಿಸುವ ಸುಮಾರು 20,000 ಜೀನ್ ಗಳನ್ನು ಗುರುತಿಸಲಾಗಿದೆ. ಇವುಗಳ ಪೈಕಿ 12,000 ಜೀನ್ ಗಳು ಕೇವಲ ಯಕೃತ್ತಿನ ನಿರ್ವಹಣೆಗೆ ಮೀಸಲಾಗಿವೆ ಎಂದರೆ ಅದರ ಕಾರ್ಯವೈವಿಧ್ಯವನ್ನು ಊಹಿಸಬಹುದು. ಭ್ರೂಣದ ಹಂತದಲ್ಲಿ ಮೂರನೆಯ ವಾರದ ಸುಮಾರಿಗೆ ಕೆಲಸ ಆರಂಭಿಸುವ ಯಕೃತ್, ಜೀವಮಾನವಿಡೀ ಕೆಲಸ ಮಾಡುತ್ತಲೇ ಇರುತ್ತದೆ. ಗರ್ಭಸ್ಥ ಶಿಶುವಿನಲ್ಲಿ ಯಕೃತ್ ರಕ್ತವನ್ನು ಉತ್ಪಾದಿಸುವ ಕೆಲಸವನ್ನು ಮಾಡುತ್ತದೆ. ನಂತರ ಈ ಕೆಲಸದ ಹೊಣೆ ಎಲುಬಿನ ನೆಣದ (bone marrow) ಪಾಲಾಗುತ್ತದೆ. ಮಗುವಿನ ಜನನದ ನಂತರ ಯಕೃತ್ತಿನ ಅಸಲಿ ಕೆಲಸ ಆರಂಭವಾಗುತ್ತದೆ. ಶರೀರದ ಸುಮಾರು 20 ಪ್ರತಿಶತ ಆಕ್ಸಿಜನ್ ಯಕೃತ್ತಿನ ಕೆಲಸಕ್ಕೆ ಬೇಕಾಗುತ್ತದೆ. ಮಿದುಳನ್ನು ಹೊರತುಪಡಿಸಿದರೆ ಆಕ್ಸಿಜನ್ ಬಳಸಿಕೊಳ್ಳುವ ಅಂಗಗಳ ಪೈಕಿ ಯಕೃತ್ ಮುಂಚೂಣಿಯಲ್ಲಿದೆ.

ಯಕೃತ್ತಿನ ಮುಖ್ಯ ಕಾರ್ಯ ನಾವು ಸೇವಿಸುವ ಆಹಾರದ ಚಯಾಪಚಯ (metabolism). ಆಹಾರದ ಪಿಷ್ಠದ ಭಾಗ, ಜಿಡ್ಡಿನ ಭಾಗ, ಪ್ರೋಟೀನಿನ ಭಾಗಗಳ ನಿರ್ವಹಣೆಯಲ್ಲಿ ಮಹತ್ವದ ಪ್ರಮಾಣ ಯಕೃತ್ತಿನದ್ದು. ದೇಹದ ಬಹುತೇಕ ಅಂಗಗಳು ತಮ್ಮ ಶಕ್ತಿಗಾಗಿ ಗ್ಲುಕೋಸ್ ಎನ್ನುವ ಸಕ್ಕರೆಯ ಮೇಲೆ ಅವಲಂಬಿತವಾಗಿವೆ. ಶರೀರಕ್ಕೆ ಅಧಿಕ ಪ್ರಮಾಣದ ಗ್ಲುಕೋಸ್ ಲಭ್ಯವಾದಾಗ ಅದನ್ನು ಯಕೃತ್ ಗ್ಲೈಕೋಜನ್ ಎನ್ನುವ ಸಂಕೀರ್ಣ ರಾಸಾಯನಿಕಕ್ಕೆ ಬದಲಾಯಿಸಿ, ತನ್ನೊಳಗೆ ಸಂಗ್ರಹಿಸುತ್ತದೆ. ದೇಹದ ಅಂಗಗಳಿಗೆ ಗ್ಲುಕೋಸಿನ ಅಗತ್ಯ ಬಂದಾಗ ಈ ಗ್ಲೈಕೋಜನ್ ಮತ್ತೆ ಗ್ಲುಕೋಸ್ ಆಗಿ ರೂಪಾಂತರಗೊಂಡು ಕೆಲಸಕ್ಕೆ ಬರುತ್ತದೆ. ಸುಮಾರು 100 ಗ್ರಾಂ ಗ್ಲೈಕೋಜನ್ ಸಂಗ್ರಹದ ಸಾಮರ್ಥ್ಯ ಯಕೃತ್ತಿಗಿದೆ. ಪ್ರೋಟೀನ್ ಉತ್ಪಾದನೆಯಲ್ಲಿ ಯಕೃತ್ತಿನ ಪಾತ್ರ ಹಿರಿದು. ರಕ್ತದಲ್ಲಿ ಕಾಣುವ ಬಹುತೇಕ ಪ್ರೋಟೀನುಗಳು, ಅಮೈನೊ ಆಮ್ಲಗಳ ತಯಾರಿಕೆ ಯಕೃತ್ತಿನಲ್ಲಿಯೇ ಆಗುತ್ತದೆ. ರಕ್ತ ಹೆಪ್ಪುಗಟ್ಟಲು ಮತ್ತು ಪುನಃ ಹೆಪ್ಪು ಕರಗಲು ನೆರವಾಗುವ ಅಂಶಗಳು ಯಕೃತ್ತಿನಲ್ಲಿ ರೂಪುಗೊಳ್ಳುತ್ತವೆ. ದೇಹಕ್ಕೆ ಅಗತ್ಯವಾದ ಕೊಲೆಸ್ಟ್ರಾಲ್ ಮತ್ತಿತರ ಜಿಡ್ಡಿನ ಅಂಶಗಳು ಯಕೃತ್ತಿನ ಕೊಡುಗೆ. ಇವೇ ಅಲ್ಲದೆ ಕೆಲವು ಹಾರ್ಮೋನುಗಳು ಕೂಡ ಯಕೃತ್ತಿನಲ್ಲಿ ಉತ್ಪತ್ತಿಯಾಗುತ್ತವೆ. ಯಾವುದೇ ಕಾಲದಲ್ಲೂ ಶರೀರದ ಶೇಕಡಾ 10 ರಷ್ಟು ರಕ್ತ ಯಕೃತ್ತಿನಲ್ಲಿ ಇರುತ್ತದೆ. ಇದಲ್ಲದೇ, ಇನ್ನಷ್ಟು 5-10 ಪ್ರತಿಶತ ರಕ್ತವನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಯಕೃತ್ತಿಗಿದೆ. ಸಾಲದ್ದಕ್ಕೆ ಶರೀರಕ್ಕೆ ಅಗತ್ಯವಾದ ಅನೇಕ ಬಗೆಯ ವಿಟಮಿನ್ ಮತ್ತು ಲೋಹಗಳ ಸಂಗ್ರಹಾಗಾರ ಯಕೃತ್. ಜೊತೆಗೆ ಜಿಡ್ಡಿನ ಅಂಶವನ್ನು ಪಚನ ಮಾಡುವ ಪಿತ್ತವನ್ನು ಯಕೃತ್ ತಯಾರಿಸುತ್ತದೆ. ಒಂದು ದಿನದಲ್ಲಿ ಸುಮಾರು ಮುಕ್ಕಾಲು ಲೀಟರ್ ಪಿತ್ತರಸವನ್ನು ಯಕೃತ್ ಉತ್ಪಾದಿಸುತ್ತದೆ. ಮಲಕ್ಕೆ ಅದರ ಬಣ್ಣವನ್ನು ನೀಡುವುದೂ ಯಕೃತ್ತಿನ ಕೆಲಸವೇ. ಒಂದು ವೇಳೆ ಯಕೃತ್ತಿನ ಕೆಲಸದಲ್ಲಿ ಏರುಪೇರಾದರೆ ಮಲದ ಬಣ್ಣವೂ ಬದಲಾಗುತ್ತದೆ.

ಗ್ರೀಕ್ ಮಿಥಕಗಳಲ್ಲಿ ಪ್ರೊಮಿಥಿಯಸ್ ನ ಕತೆಯಿದೆ. ದೇವತೆಗಳಿಂದ ಬೆಂಕಿಯನ್ನು ಕದ್ದು ಮಾನವರಿಗೆ ನೀಡಿದ ಕಾರಣಕ್ಕೆ ಝ್ಯೂಸ್ ದೇವನ ಶಾಪಕ್ಕೆ ಆತ ಒಳಗಾಗುತ್ತಾನೆ. ಕಾಕಸಸ್ ಪರ್ವತದ ಮೇಲೆ ಸರಪಣಿಗಳಿಂದ ಬಂಧಿತನಾದ ಆತನ ಯಕೃತ್ತನ್ನು ದಿನವೂ ಒಂದು ಹದ್ದು ಕುಟುಕಿ ತಿನ್ನುತ್ತದೆ. ಮರುದಿನದ ವೇಳೆಗೆ ಆತನ ಯಕೃತ್ ಬೆಳೆದು ಸಹಜ ಸ್ಥಿತಿಗೆ ಬರುತ್ತದೆ. ಮತ್ತೊಮ್ಮೆ ಹದ್ದು ಬಂದು ಅದೇ ಕೆಲಸ ಮಾಡುತ್ತದೆ. ಈ ಕತೆ ಯಕೃತ್ತಿನ ಪುನರ್ನಿರ್ಮಾಣದ ಅಗಾಧ ಸಾಮರ್ಥ್ಯಕ್ಕೆ ನಿದರ್ಶನ. ವೈಜ್ಞಾನಿಕವಾಗಿ ಯಕೃತ್ತಿನ ಶೇಕಡಾ 25 ರಷ್ಟು ಭಾಗ ಉಳಿದಿದ್ದರೂ ಅದು ಕೋಶಗಳ ಸಾಮರ್ಥ್ಯವನ್ನು ವೃದ್ಧಿಸುತ್ತಾ ಕೆಲಸದ ದೃಷ್ಟಿಯಿಂದ ಇಡೀ ಯಕೃತ್ತಿನ ಪಾತ್ರವನ್ನು ನಿರ್ವಹಿಸಬಲ್ಲದು.

ನಮ್ಮ ಶರೀರವನ್ನು ಹೊರಗಿನಿಂದ ಸೇರುವ ಮತ್ತು ಶರೀರದೊಳಗೆ ಉತ್ಪತ್ತಿಯಾಗುವ ಹಲವಾರು ವಿಷಯುಕ್ತ ವಸ್ತುಗಳನ್ನು ರಾಸಾಯನಿಕ ಪ್ರಕ್ರಿಯೆಗಳ ಮೂಲಕ ವಿಷಮುಕ್ತವಾಗಿಸುವ ಪ್ರಮುಖ ಹೊಣೆ ಯಕೃತ್ತಿನದ್ದು. ಯಾವುದೇ ಕಾರಣಕ್ಕೂ ಯಕೃತ್ತಿನ ಈ ಸಾಮರ್ಥ್ಯಕ್ಕೆ ಕುಂದು ಉಂಟಾದರೆ ಆ ವಿಷಗಳು ರಕ್ತವನ್ನು ಸೇರಿ ಮಿದುಳನ್ನು ಪ್ರವೇಶಿಸಿ ಮಾನಸಿಕ ವಿಕಾರಗಳನ್ನು ಉಂಟುಮಾಡಬಲ್ಲವು. ಹೀಗಾಗಿ ಮಾನಸಿಕ ಚಿಕಿತ್ಸೆಯ ಮುನ್ನ ಯಕೃತ್ತಿನ ಪರಿಸ್ಥಿತಿಯನ್ನು ತಜ್ಞರು ಪರೀಕ್ಷಿಸುತ್ತಾರೆ. ಯಾವುದೇ ಅನಾರೋಗ್ಯದ ವೇಳೆ ಪ್ರಯೋಗಾಲಯಗಳಲ್ಲಿ ಪರೀಕ್ಷಿಸುವ ರಕ್ತ, ಮೂತ್ರ ಮೊದಲಾವುಗಳ ತಪಾಸಣೆಯ ಪ್ರಮುಖ ಅಂಶಗಳ ಹಿಂದೆ ಯಕೃತ್ತಿನ ಆರೋಗ್ಯದ ಹಿನ್ನೆಲೆಯಿರುತ್ತದೆ.

ರಕ್ತ ನಮ್ಮ ದೇಹದ ಜೀವದ್ರವ. ಗಾಯಗಳಿಂದ, ಘಾಸಿಗಳಿಂದ ಹೆಚ್ಚು ರಕ್ತ ಪೋಲಾಗದಂತೆ ತಡೆಯಲು ಅದನ್ನು ಕೂಡಲೇ ಹೆಪ್ಪುಗಟ್ಟಿಸುವ ವ್ಯವಸ್ಥೆ ನಮ್ಮ ಶರೀರದಲ್ಲಿದೆ. ಹೀಗೆ ರಕ್ತ ಹೆಪ್ಪುಗಟ್ಟಲು ಸುಮಾರು 13 ವಿವಿಧ ರಾಸಾಯನಿಕಗಳು ಪಾತ್ರ ವಹಿಸುತ್ತವೆ. ಈ 13 ರ ಪೈಕಿ ಒಂಬತ್ತು ರಾಸಾಯನಿಕಗಳ ಜನಕ ಯಕೃತ್. ಜೊತೆಗೆ, ಹೆಪ್ಪುಗಟ್ಟಿದ ರಕ್ತವನ್ನು ಕರಗಿಸುವ ರಾಸಾಯನಿಕಗಳು ಕೂಡ ಯಕೃತ್ತಿನಲ್ಲಿಯೇ ಉತ್ಪತ್ತಿಯಾಗುತ್ತವೆ. ಯಕೃತ್ತಿನ ಸಮಸ್ಯೆಗಳಲ್ಲಿ ರಕ್ತ ಹೆಪ್ಪುಗಟ್ಟುವುದು ಏರುಪೇರಾಗಿ ಅನೇಕ ಸಂಕಷ್ಟಗಳಿಗೆ ದಾರಿಯಾಗುತ್ತದೆ.

ಯಕೃತ್ತಿನಂತಹ ಸಂಕೀರ್ಣ ಅಂಗ ನಮ್ಮ ದೇಹದಲ್ಲಿ ಬೇರೊಂದಿಲ್ಲ. ಅದನ್ನು ಕೆಡೆಸಿಕೊಂಡರೆ ಉಳಿಗಾಲವಿಲ್ಲ. ಮದ್ಯಪಾನ, ವೈರಸ್ ಸೋಂಕು, ಮಾದಕ ವಸ್ತುಗಳ ಚಟ ಮೊದಲಾದುವು ಯಕೃತ್ತಿನ ಆರೋಗ್ಯದ ಶತ್ರುಗಳು. ದಿನವೊಂದಕ್ಕೆ 30 ಮಿಲಿ ಲೀಟರ್ ಗಿಂತ ಹೆಚ್ಚಿನ ಆಲ್ಕೊಹಾಲ್ ಸೇವನೆ ಯಕೃತ್ತಿಗೆ ಹಾನಿ ಮಾಡುತ್ತದೆ. ಮದ್ಯಪಾನಿಗಳು ಈ ಪ್ರಮಾಣವನ್ನು ಅನುಸರಿಸಿ ಎಚ್ಚರ ವಹಿಸಬೇಕು. ಯಕೃತ್ತಿಗೆ ಯಾವುದೇ ಕೃತಕ ಪರ್ಯಾಯ ಇಲ್ಲವೆಂಬುದು ಸದಾ ಗಮನದಲ್ಲಿರಬೇಕು.

----------------------

ಫೆಬ್ರವರಿ 2023 ರ ಕುತೂಹಲಿ ವಿಜ್ಞಾನ ಮಾಸಪತ್ರಿಕೆಯಲ್ಲಿ ಪ್ರಕಟವಾದ ಲೇಖನ. ಕೊಂಡಿ: http://bit.ly/3XexVWi     

 ಶರೀರದ ಸಹಜ ಭಂಗಿಯ ಮಹತ್ವ

ಡಾ. ಕಿರಣ್ ವಿ.ಎಸ್.

ವೈದ್ಯರು

ಪ್ರತಿಯೊಂದು ಪ್ರಾಣಿಗೂ ಅದರ ಸಹಜ ಭಂಗಿಗಳಿವೆ. ವಿಶ್ರಾಂತಿಯ ಮತ್ತು ಚಲನೆಯ ಸ್ಥಿತಿಗಳಲ್ಲಿ ಶರೀರ ನಿರ್ದಿಷ್ಟ ಭಂಗಿಗೆ ಹೊಂದಿಕೊಂಡಿರುತ್ತದೆ. ಭಂಗಿಯ ಸಮಸ್ಯೆ ಮಾನವರಲ್ಲಿ ವಿಶಿಷ್ಟ. ಜೀವವಿಕಾಸದಲ್ಲಿ ಮನುಷ್ಯಪ್ರಾಣಿ ಮೂಲತಃ ಚತುಷ್ಪಾದಿ. ಇದು ಕಾಲಾಂತರದಲ್ಲಿ ದ್ವಿಪಾದಿಯಾಗಿ ಬದಲಾಯಿತು. ಎರಡು ಕಾಲಿನ ಮೇಲೆ ನಿಲ್ಲಬಲ್ಲ, ನಡೆಯಬಲ್ಲ. ಓಡಬಲ್ಲ ಭಂಗಿ ಮಾನವಜೀವಿಯ ಅಸಾಧಾರಣ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರೂ, ವೈಯಕ್ತಿಕವಾಗಿ ಶರೀರದ ಮೇಲೆ ಹಲವಾರು ಕೆಟ್ಟ-ಪರಿಣಾಮಗಳಿಗೂ ಕಾರಣವಾಯಿತು. ನಾಲ್ಕು-ಕಾಲುಗಳ ಮೇಲೆ ಹರಡುತ್ತಿದ್ದ ತೂಕ ಎರಡು-ಕಾಲುಗಳ ಮೇಲೆ ಅವಲಂಬಿತವಾಯಿತು. ಭೂಮಿಗೆ ಸಮಾನಾಂತವಾಗಿ ಇರಬೇಕಾದ ಬೆನ್ನುಮೂಳೆ ನೆಲಕ್ಕೆ ಲಂಬವಾಗಿ ಇರುವಂತಾಗಿ, ಶರೀರದ ಮೇಲ್ಭಾಗದ ತೂಕ ಬೆನ್ನಿನ ಆಧಾರದ ಮೇಲೆ ಬೀಳುವಂತಾಯಿತು. ಸೊಂಟದ ಕೆಳಭಾಗದ ಮೂಳೆಗಳು, ಕೀಲುಗಳು, ಮತ್ತು ಮಾಂಸಖಂಡಗಳ ಮೇಲಿನ ಒತ್ತಡ ಮತ್ತಷ್ಟು ಹೆಚ್ಚಿ, ಹಲವಾರು ಕಾಯಿಲೆಗಳಿಗೆ ದಾರಿಯಾಯಿತು. ಪ್ರಸ್ತುತ ಜೀವನಶೈಲಿ ನಮ್ಮ ದೇಹದ ಭಂಗಿಯನ್ನು ಇನ್ನಷ್ಟು ಘಾಸಿಗೆ ಒಳಪಡಿಸಿದೆ. ದೇಹದ ಸಹಜ ಭಂಗಿ ಏನು? ಅದನ್ನು ಸರಿಯಾಗಿ ಅನುಸರಿಸುವುದು ಹೇಗೆ? ಈ ಪ್ರಕ್ರಿಯೆಯಿಂದ ಶರೀರಕ್ಕೆ ಆಗುವ ಲಾಭಗಳು ಏನೆಂಬುದನ್ನು ಎಲ್ಲರೂ ಅರಿತಿರಬೇಕು.

ದೇಹದ ಭಂಗಿ ವಿಶ್ರಾಮದ ಸ್ಥಿತಿಯಲ್ಲಿ ಮತ್ತು ಚಲನೆಯಲ್ಲಿ ಭಿನ್ನವಾಗಿರುತ್ತದೆ. ವಿಶ್ರಾಂತಿಯ ಸ್ಥಿತಿ ಎಂದರೆ ಬೇರೇನೂ ಮಾಡದೆ ಕುಳಿತಾಗ, ನಿಂತಾಗ, ಮತ್ತು ಮಲಗಿರುವಾಗ ಶರೀರ ಇರುವ ರೀತಿ. ಚಲನೆ ಎಂಬುದು ಓಡುವುದು, ನಡೆಯುವುದು, ಬಗ್ಗುವುದು ಮೊದಲಾದ ಯಾಂತ್ರಿಕ ಕೆಲಸಗಳನ್ನು ಒಳಗೊಂಡಿದೆ. ಇವೆರಡೂ ಸ್ಥಿತಿಗಳಲ್ಲಿ ನಮ್ಮ ಶರೀರ ಸರಿಯಾದ ಭಂಗಿಗಳನ್ನು ಅನುಸರಿಸಬೇಕು. ಈ ಪ್ರಕ್ರಿಯೆಯ ಅತಿ ಮುಖ್ಯ ಅಂಗ ಬೆನ್ನುಮೂಳೆ. ತಲೆಯ ಭಾಗವನ್ನು ಕಾಲುಗಳಿಗೆ ಸಂಪರ್ಕಿಸುವ ಬೆನ್ನುಮೂಳೆಯ ಕತ್ತಿನ ಮತ್ತು ಕೆಳ-ಬೆನ್ನಿನ ಭಾಗಗಳು ಹಿಂಬದಿಗೆ ಹಾಗೂ ಮಧ್ಯ-ಬೆನ್ನಿನ ಭಾಗ ಮುಂಬದಿಗೆ ನಯವಾಗಿ ಬಾಗಿದೆ. ಈ ಬಾಗುಗಳನ್ನು ಸಹಜ ಸ್ಥಿತಿಯಲ್ಲಿ ಇರಿಸಿಕೊಳ್ಳುವುದು ಆಯಾ ಭಂಗಿಯ ಮೂಲ ಉದ್ದೇಶ. ಆದರೆ ಪ್ರಸ್ತುತ ಜೀವನಶೈಲಿಯ ಬಹುತೇಕ ಕೆಲಸಗಳ ವೇಳೆ ಸಹಜ ಭಂಗಿಗಳ ಸ್ವರೂಪ ಬದಲಾಗುತ್ತದೆ. ಉದಾಹರಣೆಗೆ, ಬಹಳಷ್ಟು ಮಂದಿ ದಿನದ ಹಲವಾರು ಗಂಟೆಗಳ ಕಾಲ ಕತ್ತು ಬಗ್ಗಿಸಿ ತಮ್ಮ ಮೊಬೈಲ್ ಫೋನಿನ ಪರದೆಯ ಮೇಲೆ ಗಮನ ಹರಿಸುತ್ತಾರೆ. ಅಂದರೆ, ನೇರವಾಗಿ ಕತ್ತಿನ ಮೇಲೆ ಇರಬೇಕಾದ ತಲೆಯ ಭಾಗ ಹಲವಾರು ಗಂಟೆಗಳ ಕಾಲ ಕೆಳಗೆ ಬಾಗಿದ ಕೋನದಲ್ಲಿ ಇರುತ್ತದೆ. ಇತರ ಚತುಷ್ಪಾದಿ ಪ್ರಾಣಿಗಳಿಗೆ ಹೋಲಿಸಿದರೆ ಮನುಷ್ಯರ ಮಿದುಳಿನ ತೂಕ ಹೆಚ್ಚು. ಹೀಗಾಗಿ, ನಮ್ಮ ತಲೆಯ ತೂಕವೂ ಹೆಚ್ಚು. ಆದರೆ ಭಾರವಾದ ತಲೆಯನ್ನು ಹೊತ್ತಿರುವ ಕತ್ತಿನ ಭಾಗದ ಬೆನ್ನುಮೂಳೆ ವಿಕಾಸದ ಹಾದಿಯಲ್ಲಿ ಇನ್ನೂ ನಾಜೂಕಾಗಿಯೇ ಮುಂದುವರೆದಿದೆ. ದಶಕಗಳ ಕಾಲ ಭಾರವಾದ ತಲೆಯನ್ನು ನೇರವಾಗಿ ಹೊರುವುದೇ ಈ ನಾಜೂಕು ಮೂಳೆಗೆ ಕಷ್ಟದ ಸಂಗತಿ. ಪರದೆಯುಕ್ತ ಮೊಬೈಲ್ ಫೋನುಗಳ ಕಾರಣದಿಂದ ಕಳೆದ ಒಂದು ದಶಕದಲ್ಲಿ ಗಂಟೆಗಟ್ಟಲೆ ಬಗ್ಗಿರುವ ಕತ್ತಿನ ಕಾರಣದಿಂದ ಇದರ ಮೇಲೆ ಅಗಾಧ ಒತ್ತಡ ಬೀಳುತ್ತಿದೆ. ಕತ್ತುನೋವು, ತಲೆಸುತ್ತುವಿಕೆ, ಕೈಗಳ ನೋವು, ಬೆನ್ನಿನ ಮೇಲ್ಭಾಗದ ನೋವು ಮೊದಲಾದ ಸಮಸ್ಯೆಗಳು ಮೊಬೈಲ್ ಫೋನುಗಳ ಬಳಕೆದಾರರಲ್ಲಿ ಹೆಚ್ಚುತ್ತಿವೆ.

ಅಂತೆಯೇ, ಕಂಪ್ಯೂಟರ್ ಮತ್ತು ದೂರದರ್ಶನ ಪರದೆಗಳೂ ಬೆನ್ನಿನ ಮೇಲೆ ಒತ್ತಡಕ್ಕೆ ಕಾರಣವಾಗಿವೆ. ಬಹಳ ಕಾಲ ಕುಳಿತಾಗ ನಮಗೆ ಅರಿವಿಲ್ಲದಂತೆ ಬೆನ್ನು ಬಾಗುತ್ತದೆ. ಭುಜಗಳು ಸಡಿಲವಾಗಿ, ಕೆಳಗೆ ಜೋತು ಬೀಳುತ್ತವೆ. ಆಗ ಬೆನ್ನುಮೂಳೆಯ ಮಧ್ಯಭಾಗ ಮತ್ತಷ್ಟು ಹಿಂದಕ್ಕೆ ಓರೆಯಾಗುತ್ತದೆ. ಕೆಲವೊಮ್ಮೆ ದೇಹದ ತೂಕವನ್ನು ನಾವು ಎಡಗಡೆಗೋ ಇಲ್ಲವೇ ಬಲಗಡೆಗೋ ಹೆಚ್ಚು ವರ್ಗಾಯಿಸುತ್ತೇವೆ. ನೋಡುವ ನೋಟದಲ್ಲಿ ಮತ್ತು ಮಾಡುವ ಕೆಲಸದಲ್ಲಿ ನಮ್ಮ ನಿಗಾ ಇರುವುದರಿಂದ ಶರೀರದ ಆಯಾ ಭಾಗ ನೀಡುವ ನೋವಿನ ಸೂಚನೆಗಳು ನಮ್ಮ ಗಮನಕ್ಕೆ ಬಾರದೆ ಹೋಗುತ್ತವೆ. ಇದರಿಂದ ನೋವು ಒಂದು ನಿರ್ದಿಷ್ಟ ಹಂತವನ್ನು ದಾಟುವವರೆಗೆ ನಾವು ಅದನ್ನು ಲಕ್ಷಿಸುವುದೇ ಇಲ್ಲ. ನೋವು ನಮ್ಮ ಅರಿವಿಗೆ ಬರುವಷ್ಟರಲ್ಲಿ ಮೂಳೆಗಳು ಮತ್ತು ಸ್ನಾಯುಗಳು ಸಾಕಷ್ಟು ಘಾಸಿಗೊಂಡಿರುತ್ತವೆ. ಇದು ಬಹುತೇಕ ಪ್ರತಿದಿನವೂ ನಡೆಯುತ್ತಲೇ ಹೋಗುವ ಪ್ರಕ್ರಿಯೆ. ಸಮಸ್ಯೆ ಹೆಚ್ಚಾದಾಗ ಶರೀರ ಅದನ್ನು ಮತ್ತಷ್ಟು ಸಹಿಸಲು ಸಾಧ್ಯವಿಲ್ಲದೆ ವೈದ್ಯರ ಮೊರೆ ಹೋಗಬೇಕಾಗುತ್ತದೆ. ಹಲವಾರು ಪುಸ್ತಕಗಳನ್ನು ಒಟ್ಟಿರುವ ಭಾರವಾದ ಬೆನ್ನಿನ ಚೀಲ ಹೊತ್ತು ನಡೆಯುವ ಶಾಲಾಮಕ್ಕಳಿಗೂ ಈ ಸಮಸ್ಯೆ ಹೊರತಲ್ಲ.

ನಮ್ಮ ಭಂಗಿಯನ್ನು ಸುಧಾರಿಸಿಕೊಳ್ಳುವ ಮೂಲಕ ಹಲವಾರು ಸಮಸ್ಯೆಗಳನ್ನು ತಡೆಯಬಹುದು. ಕತ್ತು ಮತ್ತು ಬೆನ್ನಿನ ಸ್ನಾಯುಗಳನ್ನು ಬಲಗೊಳಿಸುವ ಸರಳ ವ್ಯಾಯಾಮಗಳನ್ನು ಪ್ರತಿಯೊಬ್ಬರೂ ಮಾಡಬೇಕು. ಹೆಚ್ಚಿನ ಕಾಲ ಮೊಬೈಲ್ ಫೋನ್ ಬಳಸಬೇಕಾದವರು ಮೇಜಿನ ಮೇಲೆ ಮೊಬೈಲ್ ಫೋನನ್ನು ಲಂಬವಾದ ಆಸರೆಯಲ್ಲಿ ಇರಿಸಿ, ಬೆನ್ನನ್ನು ಒರಗಿಸಬಲ್ಲ ಹಿಂಬದಿಯಿರುವ ಅನುಕೂಲಕರ ಎತ್ತರದ ಕುರ್ಚಿಯಲ್ಲಿ ಕೂತು ಕತ್ತನ್ನು ಹೆಚ್ಚು ಬಗ್ಗಿಸದೆ ನೋಡುವುದು ಸೂಕ್ತ. ಮೊಬೈಲ್ ಫೋನಿನಲ್ಲಿ ಅಕ್ಷರಗಳನ್ನು ಟೈಪು ಮಾಡುವ ಬದಲಿಗೆ ಸಾಧ್ಯವಾದಷ್ಟೂ ಧ್ವನಿಯ ಮೂಲಕ ಪದಗಳನ್ನು ಮೂಡಿಸಬಲ್ಲ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬಹುದು.

ಹೆಚ್ಚುಕಾಲ ಕುಳಿತುಕೊಳ್ಳಬೇಕಾದಾಗ ಬೆನ್ನಿಗೆ ದೃಢವಾದ ಮತ್ತು ಹಿತವಾದ ಆಸರೆಯಿರುವ ಕುರ್ಚಿಯನ್ನು ಬಳಸಬೇಕು. ಕುಳಿತಾಗ ತೊಡೆಗಳು ಭೂಮಿಗೆ ಸಮಾನಾಂತರವಾಗಿರಬೇಕು. ಆಗ ಸೊಂಟ ಮತ್ತು ಮಂಡಿಗಳು ಒಂದೇ ಸರಳರೇಖೆಯಲ್ಲಿ ಇರುತ್ತವೆ. ಕಂಪ್ಯೂಟರಿನಲ್ಲಿ ಟೈಪು ಮಾಡುವಾಗ ಕೀಬೋರ್ಡ್ ಮೊಣಕೈ  ಮಟ್ಟದಲ್ಲಿ, ಪರದೆ ಕಣ್ಣುಗಳ ಮಟ್ಟದಲ್ಲಿ, ಮತ್ತು ಭುಜಗಳು ಮುಂದಕ್ಕೆ ಬಾಗದೆ ನೇರವಾಗಿ ಇರಬೇಕು. ದೇಹದ ಭಂಗಿಯ ಬಗ್ಗೆ ಪ್ರಜ್ಞಾಪೂರ್ವಕವಾಗಿ ಆಗಾಗ ಆಲೋಚಿಸಿ, ಸರಿಪಡಿಸಿಕೊಳ್ಳಬೇಕು. ಕನಿಷ್ಠ ಅರ್ಧಗಂಟೆಗೆ ಒಮ್ಮೆ ಕುರ್ಚಿಯಿಂದ ಎದ್ದು ಸುಮಾರು ನೂರಿನ್ನೂರು ಹೆಜ್ಜೆ ನಡೆದು ಬರಬೇಕು.

ಸರಿಯಾದ ಭಂಗಿ ಜೀವನದ ಅಗತ್ಯ. ಅದು ಹಲವಾರು ಸಮಸ್ಯೆಗಳನ್ನು ಬಾರದಂತೆ ತಡೆಯಬಲ್ಲದು. ಧಾವಂತದ ಆಧುನಿಕ ಬದುಕಿನಲ್ಲಿ ಸಮಸ್ಯೆಗಳನ್ನು ಸರಿಪಡಿಸುವುದಕ್ಕಿಂತ ಅವು ಬಾರದಂತೆ ತಡೆಯುವುದರಲ್ಲಿ ನಮ್ಮ ವಿವೇಕವಿದೆ.

---------------------------

ದಿನಾಂಕ 31/1/2023 ರಂದು ಪ್ರಜಾವಾಣಿಯಲ್ಲಿ ಪ್ರಕಟವಾದ ಮೂಲ ಲೇಖನದ ಕೊಂಡಿ: https://www.prajavani.net/health/types-of-posture-how-to-correct-bad-posture-dr-advise-1011060.html