ಭಾನುವಾರ, ಜನವರಿ 29, 2023

 ಮಕ್ಕಳಿಗೆ ವ್ಯಾಯಾಮ – ಎಷ್ಟು? ಹೇಗೆ?

ಡಾ. ಕಿರಣ್ ವಿ.ಎಸ್.

ವೈದ್ಯರು

ಕೆಲದಶಕಗಳ ಹಿಂದೆ “ಮಕ್ಕಳಿಗೆ ವ್ಯಾಯಾಮ” ಎಂದರೆ ಅಚ್ಚರಿ ಪಡಬೇಕಿತ್ತು. ಶಾಲೆ ಮುಗಿಸಿ, ಎಷ್ಟೋ ಅಷ್ಟು ಹೋಂವರ್ಕ್ ಮಾಡಿ, ಆಟಕ್ಕೆಂದು ಇಳಿದರೆ ಮತ್ತೆ ಊಟದ ವೇಳೆಗೆ ಮನೆಗೆ ಬನ್ನಿರೆಂದು ಹಿರಿಯರು ಗೋಗರೆಯಬೇಕಿತ್ತು. ಇನ್ನು ಭಾನುವಾರಗಳು, ರಜೆಯ ದಿನಗಳು ಕೇಳುವುದೇ ಬೇಡ. ಹೀಗಿರುವಾಗ ಮಕ್ಕಳ ವಿಶ್ರಾಂತಿಯ ಬಗ್ಗೆ ಹಿರಿಯರು ಆಲೋಚಿಸಬೇಕಿತ್ತೇ ಹೊರತು, ವ್ಯಾಯಮದ ಬಗ್ಗೆ ಅಲ್ಲ. ಆದರೆ ಈಗ ನಗರಗಳ ಪರಿಸ್ಥಿತಿ ಬದಲಾಗಿದೆ. ಮಕ್ಕಳಿಗೆ ಆಡಲು ಸುರಕ್ಷಿತ ತಾಣಗಳು ಕಡಿಮೆಯಾಗಿವೆ. ಸಂಚಾರ ದಟ್ಟಣೆಯ ಕಾರಣದಿಂದ ಮಕ್ಕಳು ಶಾಲೆಯಿಂದ ಮನೆಗೆ ಬರುವುದು ತಡವಾಗುತ್ತಿದೆ. ಅದರ ಮೇಲೆ ಓದಿನ ಒತ್ತಡ, ಶಾಲೆಯಲ್ಲಿ ನೀಡುವ ಪ್ರಾಜೆಕ್ಟ್ಗಳು, ಮನೆಪಾಠ, ಪಠ್ಯೇತರ ಚಟುವಟಿಕೆಗಳು ಮೊದಲಾದುವು ಮಕ್ಕಳ ದೈಹಿಕ ಆಟದ ಸಮಯವನ್ನು ನುಂಗಿಹಾಕುತ್ತಿವೆ. ಇದರ ಸ್ಥಾನವನ್ನು ದೂರದರ್ಶನಗಳು, ಕಂಪ್ಯೂಟರ್ ಆಟಗಳು, ಮೊಬೈಲ್ ಫೋನುಗಳು ಆಕ್ರಮಿಸಿವೆ. ಒಟ್ಟಿನಲ್ಲಿ ಆಟಗಳ ಮೂಲಕ ಹಿಂದೆ ಅನಾಯಾಸವಾಗಿ ಸಿಗುತ್ತಿದ್ದ ದೈಹಿಕ ವ್ಯಾಯಾಮ ಪ್ರಸ್ತುತ ಪೀಳಿಗೆಯ ಮಕ್ಕಳಿಗೆ ಸುಲಭವಾಗಿ ದಕ್ಕುತ್ತಿಲ್ಲ. ಪರಿಣಾಮವಾಗಿ ಮಕ್ಕಳಲ್ಲಿ ಬೊಜ್ಜು ಮತ್ತು ಅದರ ಸಂಬಂಧಿ ಕಾಯಿಲೆಗಳು ಏರುತ್ತಿವೆ.

ಮಕ್ಕಳ ದೈಹಿಕ ಬೆಳವಣಿಗೆಯಲ್ಲಿ ಶರೀರ ಚಟುವಟಿಕೆಯಿಂದ ಇರುವುದು ಅತ್ಯಗತ್ಯ. ಮೂಳೆಗಳ ವಿಕಾಸಕ್ಕೆ, ಸ್ನಾಯುಗಳ ಬಲವರ್ಧನೆಗೆ, ಚರ್ಮದ ಆರೋಗ್ಯಕ್ಕೆ, ತಾರ್ಕಿಕ ಶಕ್ತಿಯ ಅಭಿವೃದ್ಧಿಗೆ, ಕಲ್ಪನೆ ಅರಳುವುದಕ್ಕೆ ಮಕ್ಕಳು ಆಟಗಳಂತಹ ದೈಹಿಕ ಕ್ರಿಯೆಗಳಲ್ಲಿ ಪಾಲುಗೊಳ್ಳಬೇಕು. ಮೂರರಿಂದ ಐದು ವರ್ಷಗಳ ವಯಸ್ಸಿನ ಮಕ್ಕಳು ಎಚ್ಚರವಾಗಿರುವಾಗ ಯಾವುದೋ ಒಂದು ಭೌತಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿರಬೇಕು. ಆಟ, ಕುಣಿತ, ಪಲ್ಟಿ ಹೊಡೆಯುವುದು, ಏನನ್ನಾದರೂ ಹತ್ತಿ ಇಳಿಯುವುದು ಮೊದಲಾದ ಚಟುವಟಿಕೆಗಳು ಮಕ್ಕಳ ದೈಹಿಕ ಮತ್ತು ಮಾನಸಿಕ ವಿಕಾಸಕ್ಕೆ ರಹದಾರಿ. ದಿನವಿಡೀ ಚಟುವಟಿಕೆಯಿಂದ ಇರುವ ಮಕ್ಕಳು ರಾತ್ರಿ ಚೆನ್ನಾಗಿ ನಿದ್ರಿಸುತ್ತಾರೆ. ಇದು ಅವರ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮವನ್ನು ಬೀರುತ್ತದೆ.

ಐದು ವರ್ಷಗಳ ವಯಸ್ಸಿನ ನಂತರ 17 ವರ್ಷಗಳ ವಯಸ್ಸಿನವರೆಗೆ ಮಕ್ಕಳು ಪ್ರತಿದಿನ ಕನಿಷ್ಠ ಒಂದು ಗಂಟೆಯ ಕಾಲ ದೈಹಿಕ ವ್ಯಾಯಾಮ ಮಾಡಬೇಕು. ಇದರಲ್ಲಿ ವಾರಕ್ಕೆ ಕನಿಷ್ಠ ಮೂರು ದಿನ ಹೃದಯದ ಬಡಿತವನ್ನು ಹೆಚ್ಚಿಸುವ, ಉಸಿರಾಟದ ವೇಗವನ್ನು ಮತ್ತು ಆಳವನ್ನು ಅಧಿಕಗೊಳಿಸುವ ವೇಗದ ನಡಿಗೆ ಅಥವಾ ಓಟದಂತಹ ವ್ಯಾಯಾಮಗಳು ಇರಬೇಕು. ಇದರ ಜೊತೆಗೆ ವಾರಕ್ಕೆ ಮೂರು ದಿನ ಮೂಳೆ ಮತ್ತು ಸ್ನಾಯುಗಳ ಬಲವನ್ನು ವೃದ್ಧಿಸುವ ಜಿಗಿತ ಮತ್ತು ಮಾಂಸಖಂಡಗಳ ಮೇಲೆ ಒತ್ತಡ ಹಾಕುವಂತಹ ಚಟುವಟಿಕೆಗಳು ಇರಬೇಕು. ಈ ರೀತಿಯ ವ್ಯಾಯಾಮಗಳನ್ನು ಆಯಾ ವಯಸ್ಸಿಗೆ ತಕ್ಕ ರೀತಿಯಲ್ಲಿ ಮಾಡಬಹುದು. ಪ್ರೌಢಶಾಲೆಯ ಮಕ್ಕಳು ಪ್ರತಿದಿನ ತಮ್ಮ ಶಾಲೆಯ ಚೀಲವನ್ನು ಹೊತ್ತು ಒಂದು ಕಿಲೋಮೀಟರ್ ದೂರದ ಶಾಲೆಗೆ ಹೋಗಿ-ಬರುವ ನಡಿಗೆ ಅವರ ಅಂದಿನ ವ್ಯಾಯಾಮದ ಬಹುತೇಕ ಅಗತ್ಯವನ್ನು ಪೂರ್ಣಗೊಳಿಸುತ್ತದೆ. ಇದರ ಜೊತೆಗೆ ಶಾಲೆಯಲ್ಲಿ ನಡೆಯುವ ಭೌತಿಕ ಚಟುವಟಿಕೆಯ ತರಗತಿಗಳು ಪೂರಕವಾಗುತ್ತವೆ.

ಮಕ್ಕಳ ವ್ಯಾಯಾಮ ಹಲವಾರು ಬಗೆಯದ್ದಾಗಿರಬಹುದು. ಕಾಲ್ಚೆಂಡಿನಾಟದ ತರಬೇತಿ, ಈಜು, ಹಗ್ಗಜಿಗಿತ, ನೃತ್ಯ, ಸ್ಕೇಟಿಂಗ್, ಬೈಸಿಕಲ್ ಸವಾರಿ ಮೊದಲಾದುವು ಅವರ ವ್ಯಾಯಾಮದ ಅಗತ್ಯವನ್ನು ಪೂರೈಸುತ್ತವೆ. ಈ ಬಗ್ಗೆ ಆಸಕ್ತಿಯಿಲ್ಲದ ಮಕ್ಕಳಿಗೆ ದೈನಂದಿನ ಕ್ರಿಯೆಗಳಲ್ಲಿಯೇ ಭೌತಿಕ ಚಟುವಟಿಕೆಗಳನ್ನು ಒಗ್ಗೂಡಿಸಬೇಕಾಗುತ್ತದೆ. ಉದಾಹರಣೆಗೆ ಕಲೆಯಲ್ಲಿ ಉತ್ಸುಕರಾದ ಮಕ್ಕಳಿಗೆ ನಿಸರ್ಗದ ಉದಾಹರಣೆಗಳನ್ನು ತೋರಲು ಮನೆಯಿಂದ ಅನತಿ ದೂರದಲ್ಲಿರುವ ತಾಣಗಳನ್ನು ಭೇಟಿ ನೀಡುವಂತೆ ಉತ್ತೇಜಿಸಬಹುದು. ಪುಸ್ತಕ ಓದುವುದರಲ್ಲಿ ಮೈಮರೆಯುವ ಮಕ್ಕಳಿಗೆ ಮನೆಗೆ ಸ್ವಲ್ಪ ದೂರದಲ್ಲಿರುವ ಗ್ರಂಥಾಲಯಕ್ಕೆ ಚಂದಾದಾರರನ್ನಾಗಿಸಿ, ಪುಸ್ತಕ ಬದಲಾಯಿಸುವಾಗ ಅಲ್ಲಿಗೆ ನಡಿಗೆಯಲ್ಲೋ, ಬೈಸಿಕಲ್ ಬಳಸಿಯೋ ಹೋಗಿಬರುವಂತೆ ಪ್ರೇರೇಪಿಸಬಹುದು. ಗಿಡಗಳ ಮೇಲೆ ಪ್ರೀತಿ ಇರುವ ಮಕ್ಕಳಿಗೆ ಮನೆಯಂಗಳದಲ್ಲಿನ ಗಿಡಗಳ ಜವಾಬ್ದಾರಿ ನೀಡಬಹುದು; ಇಲ್ಲವೇ ಸಮೀಪದ ಉದ್ಯಾನಗಳಲ್ಲಿ ಇರುವ ಗಿಡ-ಮರಗಳ ಬಗ್ಗೆ ಹೆಚ್ಚು ಅರಿಯಲು ತೊಡಗಿಸಬಹುದು. ನರ್ತನದ ಬಗ್ಗೆ ಆಸಕ್ತಿ ಇರುವ ಮಕ್ಕಳಿಗೆ ದಿನವೂ ಯಾವುದಾದರೂ ಸಂಗೀತಕ್ಕೆ ಕುಣಿಯುವಂತಹ ಸಲಹೆ ನೀಡಬಹುದು. ಒಟ್ಟಿನಲ್ಲಿ, ವ್ಯಾಯಾಮದಲ್ಲಿ ಅನಾಸಕ್ತರಾದ ಮಕ್ಕಳಿಗೆ ಅವರವರ ಇತರ ಆಸಕ್ತಿಗಳಿಗೆ ತಕ್ಕಂತೆ ದೈಹಿಕ ಚಟುವಟಿಕೆಗಳನ್ನು ಜಾಣ್ಮೆಯಿಂದ ವಿನ್ಯಾಸ ಮಾಡಲು ಸಾಧ್ಯ.

ಹಿರಿಯರ ಉದಾಹರಣೆಗಿಂತಲೂ ಹೆಚ್ಚಿನ ಉತ್ತೇಜನವನ್ನು ಮಕ್ಕಳಿಗೆ ನೀಡಲು ಸಾಧ್ಯವಿಲ್ಲ. ಮಕ್ಕಳು ಲವಲವಿಕೆಯಿಂದ ಇರಬೇಕೆಂದು ಬಯಸುವ ಹಿರಿಯರು ಮೊದಲು ತಾವೇ ಒಂದು ಉದಾಹರಣೆಯಾಗಿ ನಿಲ್ಲಬೇಕಾಗುತ್ತದೆ. ಮುಂಜಾನೆಯೋ, ಸಂಜೆಯೋ ಮಕ್ಕಳ ಜೊತೆಯಲ್ಲಿ ಓಡಾಟಕ್ಕೆ ಹೋಗಿಬರುವುದು, ಮನೆಯನ್ನು ಶುಚಿಗೊಳಿಸುವ ಪ್ರಕ್ರಿಯೆಯಲ್ಲಿ ಎಲ್ಲರೂ ತೊಡಗಿಕೊಳ್ಳುವುದು, ಸಣ್ಣ-ಪುಟ್ಟ ದುರಸ್ತಿ ಕಾರ್ಯಗಳನ್ನು ಮಾಡುವುದು, ಮನೆಯ ಅಂಗಳದಲ್ಲೋ, ಹಿತ್ತಲಿನಲ್ಲೋ ಸಣ್ಣ ತೋಟವನ್ನು ನಿರ್ಮಿಸುವುದು ಮೊದಲಾದುವು ಮಕ್ಕಳಲ್ಲಿ ದೈಹಿಕ ಚಟುವಟಿಕೆಯ ಬಗ್ಗೆ ಶಿಸ್ತನ್ನು ಬೆಳೆಸುವುದಲ್ಲದೆ, ಹಿರಿಯರ ಬಗೆಗಿನ ಪ್ರೀತಿ, ಆದರಗಳನ್ನು ಹಿಗ್ಗಿಸಬಲ್ಲವು.

ವಸತಿ ಸಮುಚ್ಚಯಗಳಂತಹ ಸಮುದಾಯದಲ್ಲಿ ಒಟ್ಟಾಗಿ ವಾಸಿಸುವ ಕುಟುಂಬಗಳಲ್ಲಿ ಹಲವಾರು ಮಕ್ಕಳ ಗುಂಪು ಇರಬಲ್ಲದು. ಇಂತಹ ಗುಂಪುಗಳಲ್ಲಿ ಮಕ್ಕಳು ಕೂಡಿ ಆಡಬಹುದಾದ ಆಟಗಳನ್ನು ವಿನ್ಯಾಸಗೊಳಿಸುವುದು ಸುಲಭ. ಮಕ್ಕಳು ಬೆಳೆದಂತೆಲ್ಲಾ ನಿಯಮಿತ ವೇಳೆಯಲ್ಲಿ ಮಾಡಬಲ್ಲ ಯೋಗಾಸನದಂತಹ ಚಟುವಟಿಕೆಗಳನ್ನು ನಿಯೋಜಿಸಬಹುದು. ಮಗುವೊಂದು ಒಂಟಿಯಾಗಿ ಮಾಡುವ ಚಟುವಟಿಕೆಗಿಂತಲೂ ಗುಂಪಿನಲ್ಲಿ ಕಲಿಯುವ ಅವಕಾಶಗಳು ಅಧಿಕವಾಗಿರುತ್ತವೆ. ಜೊತೆಗೆ ಇದರ ಪರೋಕ್ಷ ಲಾಭಗಳೂ ಹೆಚ್ಚು. ಸಮುಚ್ಚಯದ ಯಾರಾದರೂ ಹಿರಿಯರು ಆಸಕ್ತಿ ವಹಿಸಿ ಮಕ್ಕಳನ್ನು ಇಂತಹ ಚಟುವಟಿಕೆಗಳಲ್ಲಿ ತೊಡಗಿಸಿದರೆ ಅದಕ್ಕಿಂತ ಹೆಚ್ಚಿನ ಸಮಾಜಸೇವೆ ಇರಲಿಕ್ಕಿಲ್ಲ.

ಮಕ್ಕಳಲ್ಲಿ ಭೌತಿಕ ಚಟುವಟಿಕೆ ಅವರ ಜೀವನಶೈಲಿಯ ಅವಿಭಾಜ್ಯ ಅಂಗವಾಗಿರಬೇಕು. ಆಧುನಿಕ ಜಗತ್ತಿನ ಧಾವಂತದಲ್ಲಿ ನಾವು ಮಕ್ಕಳ ಹಲವಾರು ಅಗತ್ಯಗಳನ್ನು ಪೂರೈಸಲಾಗುತ್ತಿಲ್ಲ. ಅಂತಹ ಪಟ್ಟಿಯಲ್ಲಿ ದೈಹಿಕ ವ್ಯಾಯಾಮ ಇರಬಾರದು. ಜಾಣ್ಮೆಯ ಆಲೋಚನೆಗೆ ಅವಕಾಶ ನೀಡಿದರೆ ಇದನ್ನು ಹಲವಾರು ಕ್ರಿಯಾತ್ಮಕ ರೀತಿಗಳಲ್ಲಿ ರಚಿಸಲು ಸಾಧ್ಯ. ಮಕ್ಕಳ ವ್ಯಾಯಾಮ ಆಯ್ಕೆಯಲ್ಲ; ಕಡ್ಡಾಯ ಆವಶ್ಯಕತೆ ಎಂಬುದು ಪ್ರತಿಯೊಬ್ಬ ಪೋಷಕರ ಗಮನದಲ್ಲಿರಬೇಕು.

-------------------

ದಿನಾಂಕ 17/1/2023 ರಂದು ಪ್ರಜಾವಾಣಿಯ ಕ್ಷೇಮ-ಕುಶಲ ವಿಭಾಗದಲ್ಲಿ  ಪ್ರಕಟವಾದ ಮೂಲ ಲೇಖನದ ಕೊಂಡಿ: https://www.prajavani.net/health/children-needs-physical-exercise-1006746.html

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ