ಭಾನುವಾರ, ಜನವರಿ 29, 2023


 ಮಿದುಳಿನ ಗಣಿತ

“ಜಗತ್ತಿನಲ್ಲಿ ಅತ್ಯಂತ ಕಡಿಮೆ ಬಳಕೆಯಾಗುವ, ಆದರೆ ಅತೀ ಹೆಚ್ಚು ಸಂಶೋಧನೆಗೆ ಒಳಪಟ್ಟ ಅಂಗ” ಎಂದು ವಿಜ್ಞಾನಿಗಳು ಮಿದುಳಿನ ಬಗ್ಗೆ ಕೀಟಲೆ ಮಾಡುತ್ತಾರೆ! ಇಡೀ ಶರೀರದ ಬೆರಗು ಒಂದೆಡೆಯಾದರೆ, ಮಿದುಳಿನ ಸೋಜಿಗವೇ ಮತ್ತೊಂದೆಡೆ. ಮಿದುಳಿನಲ್ಲಿ ಎಡ ಮತ್ತು ಬಲ ಎಂಬ ಎರಡು ಅರೆಗೋಳಗಳಿವೆ. ಪ್ರತಿಯೊಂದು ಅರೆಗೋಳವನ್ನು ನಾಲ್ಕು ಭಾಗಗಳಲ್ಲಿ ವಿಂಗಡಿಸಲಾಗಿದೆ. ಅರೆಗೋಳಗಳ ತಳಭಾಗದ ಹಿಂಬದಿಯಲ್ಲಿ cerebellum ಎಂಬ ಹೆಸರಿನ ಸಣ್ಣ ಮಿದುಳು ಇದೆ. ಮಿದುಳಿನ ಸಮಗ್ರ ನರಮಂಡಲದಲ್ಲಿ ಸುಮಾರು ಹತ್ತುಸಾವಿರ ಕೋಟಿ (ಒಂದರ ಮುಂದೆ ಹನ್ನೊಂದು ಸೊನ್ನೆಗಳು) ನರಕೋಶಗಳಿವೆ ಎಂದು ಅಂದಾಜು. ಜೊತೆಗೆ, ಇದರ ಹತ್ತರಷ್ಟು ಸಂಖ್ಯೆಯ ಸಹಾಯಕ glial ಕೋಶಗಳಿವೆ ಎಂದು ಹೇಳಲಾಗಿದೆ. ಈ ಬೃಹತ್ ಸಂಖ್ಯೆಯ ನರಕೋಶಗಳು ತಂತಮ್ಮ ನಡುವೆ ಸುಮಾರು ಎರಡು ಕೋಟಿ ಕೋಟಿ (ಎರಡರ ಮುಂದೆ ಹದಿನಾಲ್ಕು ಸೊನ್ನೆಗಳು) ಸಂಪರ್ಕಗಳನ್ನು ಸಾಧಿಸುತ್ತವೆ ಎಂಬ ಊಹೆಯಿದೆ. ಇವನ್ನು ಬಳಸಿ ಮಿದುಳು ಸೆಕೆಂಡಿಗೆ 100 ಕೋಟಿ ಲೆಕ್ಕಾಚಾರಗಳನ್ನು ಮಾಡಬಲ್ಲದು. ಇಷ್ಟು ಸಂಕೀರ್ಣ ಸಂಖ್ಯೆಗಳು ಕಾಣುವುದು ಅತ್ಯಂತ ವ್ಯವಸ್ಥಿತ ಸೂಪರ್ ಕಂಪ್ಯೂಟರ್ ಗಳಲ್ಲಿ ಮಾತ್ರವೇ. ಈ ಕಾರಣಕ್ಕೇ ನಮ್ಮ ಮಿದುಳನ್ನು ಆಗಾಗ್ಗೆ ಸೂಪರ್ ಕಂಪ್ಯೂಟರ್ ಗಳಿಗೆ ಹೋಲಿಕೆ ಮಾಡುತ್ತಾರೆ.

ಆಯಾ ಗುಂಪಿನ ಪ್ರಾಣಿವರ್ಗದಲ್ಲಿ ಮಿದುಳಿನ ಗಾತ್ರ ಮತ್ತು ದೇಹದ ಅನುಪಾತ ಒಂದು ನಿರ್ದಿಷ್ಟ ಮಟ್ಟದಲ್ಲಿ ಇರುತ್ತದೆ. ಸಸ್ತನಿಗಳ ಗುಂಪಿನಲ್ಲಿ ಇರುವ ಮನುಷ್ಯರ ವಿಷಯದಲ್ಲಿ ಇದು ಭಿನ್ನ. ದೇಹದ ಗಾತ್ರಕ್ಕೆ ಹೋಲಿಸಿದರೆ ನಮ್ಮ ಮಿದುಳಿನ ಗಾತ್ರ ಬೇರೆ ಪ್ರಾಣಿಗಳ ಮಿದುಳಿನ ಗಾತ್ರದ ಅನುಪಾತಕ್ಕಿಂತ ಸಾಕಷ್ಟು ದೊಡ್ಡದು. ನಮ್ಮ ದೇಹದ ತೂಕ 60 ಕಿಲೋಗ್ರಾಂ ಎಂದು ಭಾವಿಸಿದರೆ, ಮಿದುಳಿನ ತೂಕ ಸುಮಾರು 1.5 ಕಿಲೋಗ್ರಾಂ ಇರುತ್ತದೆ. ದೇಹ/ಮಿದುಳು ಅನುಪಾತ ಸುಮಾರು 40. ಎಂಟು ಕಿಲೋಗ್ರಾಂ ತೂಗುವ ಬೆಕ್ಕಿನ ಮಿದುಳಿನ ತೂಕ ಸುಮಾರು 80 ಗ್ರಾಂ; ಅನುಪಾತ ಸುಮಾರು 100. ಆನೆ, ಸಿಂಹಗಳ ಅನುಪಾತ ಸುಮಾರು 550 ಇರುತ್ತದೆ. ಅಂದರೆ, ಮನುಷ್ಯನ ದೊಡ್ಡ ಗಾತ್ರದ ಮಿದುಳು ವಿಕಾಸದ ಹಾದಿಯಲ್ಲಿ ಮುನ್ನಡೆಯಲು ಅನುಕೂಲವಾಯಿತು ಎಂದು ಭಾವಿಸಬಹುದು.

ಮಿದುಳಿನ ದೊಡ್ಡ ಗಾತ್ರದ ಬೆಳವಣಿಗೆಯ ಹಿನ್ನೆಲೆಗೆ ಅನೇಕ ಕಾರಣಗಳನ್ನು ಹೇಳಲಾಗಿದೆ. ಶರೀರದಲ್ಲಿ ದೊಡ್ಡ ಮಿದುಳನ್ನು ಸಾಕಲು ಇತರ ಅಂಗಗಳು ಯಾವ ರೀತಿ ಕುಂಠಿತವಾದವು ಎಂಬ ವಿವರಣೆಗಳಿವೆ. ವಿಕಾಸದ ಹಾದಿಯಲ್ಲಿ ಏನೇ ಆಗಿದ್ದರೂ, ಮಿದುಳು ಯದ್ವಾತದ್ವಾ ಪೆಟ್ರೋಲು ಹೀರುವ ದುಬಾರಿ ವಿಲಾಸಿ ಕಾರಿನಂತಹದ್ದು! ಶರೀರದ ತೂಕಕ್ಕೆ ಹೋಲಿಸಿದರೆ ಕೇವಲ 2.5 ಪ್ರತಿಶತ ಇರುವ ಮಿದುಳು ಶರೀರದ ಶೇಕಡಾ 20 ಆಕ್ಸಿಜನ್ ಬಳಸಿಕೊಳ್ಳುತ್ತದೆ. ಅಂದರೆ, ಇಡೀ ಶರೀರಕ್ಕೆ ಪ್ರತೀ ನಿಮಿಷ ಹರಿಯುವ 5 ಲೀಟರ್ ರಕ್ತದ ಪೈಕಿ ಒಂದೇ ಲೀಟರ್ ಕೇವಲ ಮಿದುಳಿಗೇ ಬೇಕು. ಶರೀರದ ಬೇರೆ ಯಾವ ಅಂಗವೂ ಈ ಪ್ರಮಾಣದ ಶಕ್ತಿಯನ್ನು ಹೀರುವುದಿಲ್ಲ. ಯಾವುದೇ ಸಮಯದಲ್ಲಾದರೂ ಮಿದುಳಿನಲ್ಲಿ ಸುಮಾರು 150 ಮಿಲಿಲೀಟರ್ ರಕ್ತ ಇದ್ದೇ ಇರುತ್ತದೆ. ಇನ್ಯಾವ ಅಂಗಕ್ಕೆ ರಕ್ತ ಸಂಚಾರ ಕಡಿಮೆಯಾದರೂ ಮಿದುಳು ಮಾತ್ರ ತನಗೆ ಬರಬೇಕಾದ ರಕ್ತವನ್ನು ಕಡಿಮೆ ಮಾಡಿಕೊಳ್ಳದಂತೆ ವ್ಯವಸ್ಥೆ ಮಾಡಿಕೊಂಡಿದೆ.

ಮಿದುಳು ತನ್ನ ಶಕ್ತಿಯ ಅಗತ್ಯಗಳನ್ನು ಗ್ಲುಕೊಸ್ ಮೂಲಕ ಮಾತ್ರ ಪಡೆಯುತ್ತದೆ. ತೀರಾ ಅವಶ್ಯಕ ಸ್ಥಿತಿಯಲ್ಲಿ ಗ್ಲುಕೋಸ್ ಸಿಕ್ಕದೆ ಹೋದರೆ ಇರಲಿ ಎಂದು ಕೀಟೊನ್ ಎಂಬ ಇನ್ನೊಂದು ಶಕ್ತಿಸ್ರೋತವನ್ನು ಬಳಸಿಕೊಳ್ಳುವ ಅನುಕೂಲ ಮಿದುಳಿಗೆ ಇದೆ. ವಿಶ್ರಾಂತ ಸ್ಥಿತಿಯಲ್ಲಿ ಶರೀರದ ಒಟ್ಟು ಬಳಕೆಯಲ್ಲಿನ ಶೇಕಡಾ 60 ಗ್ಲುಕೋಸ್ ಕೇವಲ ಮಿದುಳಿನ ಕೆಲಸಕ್ಕಾಗಿಯೇ ಉಪಯೋಗ ಆಗುತ್ತದೆ. ಅಲ್ಲದೇ, ಮಿದುಳು ತನ್ನೊಳಗೆ ಗ್ಲುಕೋಸ್ ಅನ್ನು ಸಂಗ್ರಹಿಸಿ ಇಡುವುದಿಲ್ಲ. ಹೀಗಾಗಿ, ಒಂದೇ ಸಮನೆ ಕೆಲಸ ಮಾಡುವ ಮಿದುಳಿಗೆ ಗ್ಲುಕೋಸ್ ಪೂರೈಕೆ ನಿರಂತರವಾಗಿ ಆಗುತ್ತಲೇ ಇರಬೇಕು. ಒಂದು ವೇಳೆ ಯಾವುದೇ ಕಾರಣಕ್ಕೆ ಈ ಸರಬರಾಜಿನಲ್ಲಿ ವ್ಯತ್ಯಾಸವಾದರೆ ಮಿದುಳಿಗೆ ಚಡಪಡಿಕೆ ಉಂಟಾಗುತ್ತದೆ; ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಕುಂಠಿತವಾಗುತ್ತದೆ. ಆ ಸಮಯದಲ್ಲಿ ಮಿದುಳು ‘ತನಗೆ ಗ್ಲುಕೋಸ್ ಅಗತ್ಯವಿದೆ’ ಎಂದು ಹೊಟ್ಟೆಗೆ ಸಂಕೇತ ಕಳಿಸಿ, ಹಸಿವಿನ ಭಾವನೆಯನ್ನು ಉಂಟುಮಾಡುತ್ತದೆ. ಹೀಗಾಗಿ, ‘ಹಸಿವಿನ ಸಮಯದಲ್ಲಿ ಮುಖ್ಯ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು’ ಎನ್ನುವ ಮಾತನ್ನು ಹಿರಿಯರು ಹೇಳುತ್ತಾರೆ. ದಿನವೊಂದಕ್ಕೆ ಮಿದುಳಿಗೇ ಸುಮಾರು 120 ಗ್ರಾಂ ಗ್ಲುಕೋಸ್ ಅಗತ್ಯವಿದೆ. ಇಷ್ಟು ಕ್ಯಾಲೊರಿ ಶಕ್ತಿ ಪೂರೈಸಲು ಪ್ರತೀ ದಿನ ಸುಮಾರು 350-400 ಗ್ರಾಂ ಧಾನ್ಯಗಳು ಬೇಕಾಗುತ್ತವೆ!

ಮಿದುಳು ಒಂದೆಡೆಯಾದರೆ, ಅದರಿಂದ ಹೊರಟಿರುವ ನರಮಂಡಲ ಮತ್ತೊಂದೆಡೆ. ಪ್ರಾಣಿಗಳ ವಿಕಾಸದ ಹಾದಿಯಲ್ಲಿ ಮಿದುಳಿನ ಎರಡು ಅರೆಗೋಳಗಳು ಬೆಳೆದದ್ದು ಬಹಳ ತಡವಾಗಿ. ಅರೆಗೋಳಗಳಿಂದ ಮೊದಲಾಗಿ ಮಿದುಳಿನ ಕೆಳಗೆ ಇಳಿಯುತ್ತಾ ಹೋದಂತೆ ಪಾನ್ಸ್, ಮೆಡುಲ್ಲ, ಮತ್ತು ಮಿದುಳುಬಳ್ಳಿ ಇರುತ್ತವೆ. ಈ ಮಿದುಳುಬಳ್ಳಿ ಬೆನ್ನುಮೂಳೆಯ ಒಳಗಿನ ರಂಧ್ರದ ಮೂಲಕ ಬೆನ್ನಿನಲ್ಲಿ ಇಳಿಯುತ್ತದೆ. ಬೆನ್ನುಮೂಳೆ ಎಂದರೆ ಸುಮಾರು ಮೂವತ್ತು ಪ್ರತ್ಯೇಕ ಮೂಳೆಗಳ ಸರಪಣಿ. ಇದರ ಎರಡು ಅನುಕ್ರಮ ಮೂಳೆಗಳ ಇಕ್ಕೆಲಗಳಲ್ಲಿ ಕಿಂಡಿಗಳಿವೆ. ಈ ಕಿಂಡಿಗಳ ಮೂಲಕ ನರಗಳು ಹೊರಟು ದೇಹದ ಅಂಗಗಳಿಗೆ ತಲುಪುತ್ತವೆ. ಇವೆಲ್ಲವೂ ನರವ್ಯೂಹದ ಭಾಗಗಳು. ಇವೆಲ್ಲದರ ಜೊತೆಗೆ ಹನ್ನೆರಡು ಜೊತೆ ನರಗಳು ತಲೆಬುರುಡೆಯ ಹಲವಾರು ರಂಧ್ರಗಳ ಮೂಲಕ ಮುಖದ ಮತ್ತು ಶರೀರದ ಹಲವಾರು ಭಾಗಗಳಿಗೆ ಇಳಿಯುತ್ತವೆ. ಈ ಹನ್ನೆರಡು ಜೊತೆ ನರಗಳನ್ನು cranial ನರಗಳು ಎನ್ನುತ್ತಾರೆ. ಮುಖದ ಇಂದ್ರಿಯಗಳ ಬಹುತೇಕ ಕೆಲಸಗಳು ಈ cranial ನರಗಳ ಮೂಲಕವೇ ಆಗುತ್ತದೆ.

ಮಿದುಳಿಗೆ ರಕ್ಷಣೆ ನೀಡುವ ಸಲುವಾಗಿ ಗಟ್ಟಿಯಾದ ತಲೆಬುರುಡೆ ಬಹಳ ಮುಖ್ಯ. ಆದರೆ, ತಲೆ ಅಲುಗಾಡುವಾಗ ಒಳಗಿನ ಮಿದುಳು ಬುರುಡೆಯ ಒಳಭಾಗಕ್ಕೆ ತಾಕುತ್ತಾ ಘಾಸಿಯಾಗಬಾರದು. ಈ ಕಾರಣಕ್ಕೆ ಮಿದುಳಿನ ಸುತ್ತಾ ಇರುವ ಒಂದು ಪದರದಲ್ಲಿ ಸುಮಾರು 150 ಮಿಲಿಲೀಟರ್ ನಷ್ಟು ವಿಶಿಷ್ಟ ದ್ರವ ಆವರಿಸಿದೆ. ಇದು shock-absorber ಮಾದರಿಯ ಆಘಾತ-ನಿರೋಧಕವಾಗಿ ಕೆಲಸ ಮಾಡುತ್ತದೆ. ಅಲ್ಲದೇ, ಮಿದುಳಿಗೆ ಕೆಲವು ಪೋಷಕಾಂಶಗಳನ್ನು ಒದಗಿಸಿ, ಅದರ ತ್ಯಾಜ್ಯವನ್ನೂ ತೆಗೆಯುತ್ತದೆ. ನೀರಿನಲ್ಲಿ ಇರುವ ವಸ್ತು ಹಗುರವಾಗಿ ಭಾಸವಾಗುವಂತೆ, ಈ ದ್ರವದಲ್ಲಿ ತೇಲುವ ಮಿದುಳಿನ ತೂಕ ತಲೆಯಲ್ಲಿ ಹಗುರವಾಗಿ ಇರುವಂತಾಗುತ್ತದೆ. ಈ ದ್ರವ ಇರುವ ಪದರ ಕೇವಲ ಮಿದುಳಿನ ಸುತ್ತ ಮಾತ್ರವಲ್ಲದೇ, ಮಿದುಳುಬಳ್ಳಿಯ ಸುತ್ತಲೂ ಹರಡಿದೆ. ಹೀಗಾಗಿ, ಮಿದುಳಿನ ಕೆಲವು ಸಮಸ್ಯೆಗಳ ಪತ್ತೆಗೆ ಬೆನ್ನುಮೂಳೆಯ ಸಮೀಪದಿಂದ ಈ ದ್ರವದ ಕೆಲವು ಹನಿಗಳನ್ನು ಸೂಜಿಯ ಮೂಲಕ ತೆಗೆದು, ಪರೀಕ್ಷಿಸಿ, ಅಮೂಲ್ಯ ಮಾಹಿತಿ ಪಡೆಯಬಹುದು. ಶರೀರದ ಯಾವುದಾದರೂ ನಿಶ್ಚಿತ ಭಾಗಕ್ಕೆ ಅರಿವಳಿಕೆ ನೀಡುವಾಗಲೂ ಇದರ ಪ್ರಯೋಜನವಿದೆ. ಇದನ್ನು spinal ಅರಿವಳಿಕೆ ಎನ್ನುತ್ತಾರೆ.

ಪ್ರತಿಯೊಂದು ನರಕ್ಕೂ ಕೋಶದ ಭಾಗ ಮತ್ತು ಬಳ್ಳಿಯ ಭಾಗ ಇರುತ್ತದೆ. ಈ ಬಳ್ಳಿಯ ಭಾಗದ ಮೇಲೆ ವಿಶಿಷ್ಟ ಪದರದ ಲೇಪನವಿದೆ. ಈ ಪದರ ನರಬಳ್ಳಿಗೆ ಬಿಳಿಯ ಬಣ್ಣ ನೀಡುತ್ತದೆ. ಈ ಪದರವಿಲ್ಲದ ನರಕೋಶದ ಭಾಗ ಬೂದುಬಣ್ಣದಲ್ಲಿದೆ. ಹೀಗಾಗಿ, ನರಕೋಶಗಳಿರುವ ಮಿದುಳಿನ ಮೇಲಿನ ಭಾಗವನ್ನು grey matter ಎಂದೂ, ನರಬಳ್ಳಿಗಳ ಕೆಳಗಿನ ಭಾಗವನ್ನು white matter ಎಂದೂ ಕರೆಯುತ್ತಾರೆ. ಒಂದೂವರೆ ಕಿಲೋಗ್ರಾಂ ತೂಕದ ಮಿದುಳಿನ ಸುಮಾರು 850 ಗ್ರಾಂ grey matter ಆದರೆ, ಉಳಿದ 650 ಗ್ರಾಂ white matter. ಮಿದುಳಿನಲ್ಲಿ ಬಳಕೆಯಾಗುವ ಆಕ್ಸಿಜನ್ ನ ಶೇಕಡಾ 90 ಕ್ಕಿಂತ ಹೆಚ್ಚಿನ ಸಿಂಹಪಾಲನ್ನು ಕಬಳಿಸುವುದು grey matter ನರಕೋಶಗಳು. ಅಳಿದುಳಿದ ಪಾಲು white matter ನದ್ದು. ನರಬಳ್ಳಿಗೆ ಬಿಳಿಯ ಬಣ್ಣ ನೀಡುವ ವಿಶಿಷ್ಟ ಪದರ ಬಹುತೇಕ ಎಲ್ಲಾ ನರಗಳ ಮೇಲೆಯೂ ಮುಂದುವರೆಯುತ್ತದೆ. ಮಿದುಳಿನಿಂದ ಹೊರಟ ನರಮಂಡಲದ ಎಲ್ಲಾ ನರಗಳನ್ನೂ ಸರಳರೇಖೆಯಲ್ಲಿ ಜೋಡಿಸಿದರೆ ಅದು 15000 ಕಿಲೋಮೀಟರ್ ದಾಟುತ್ತದೆ. ಇವನ್ನು ಬಳಸಿ ಇಡೀ ಭಾರತ ದೇಶದ ಹೊರ ಆವರಣವನ್ನು (perimeter) ಸುತ್ತುಹಾಕಬಹುದು!

ಕೋಟಿಗಳ ಸಂಖ್ಯೆಯಲ್ಲಿ ಇರುವ ನಮ್ಮ ನರಕೋಶಗಳು ಶಾಶ್ವತವಲ್ಲ. ಸೆಕೆಂಡಿಗೆ ಒಂದು ನರಕೋಶ ಮಿದುಳಿನಲ್ಲಿ ತಂತಾನೇ ನಾಶವಾಗುತ್ತದೆ. ಈ ಲೆಕ್ಕಕ್ಕೆ ಪ್ರತಿದಿನ ಸುಮಾರು 85,000 ನರಕೋಶಗಳು ಇಲ್ಲವಾಗುತ್ತವೆ. ವಯಸ್ಸಾಗುತ್ತಾ ಈ ಸಂಖ್ಯೆ ಒಟ್ಟಾರೆ ಲೆಕ್ಕದಲ್ಲಿ ಒಂದು ನಿರ್ಣಾಯಕ ಹಂತ ತಲುಪಿದಾಗ ಅನೇಕ ಸಮಸ್ಯೆಗಳು ಉಲ್ಬಣಿಸುತ್ತವೆ. ವೃದ್ಧರಾದಂತೆ ಮರೆವಿನ ಸಮಸ್ಯೆಗಳು ಉಂಟಾಗುವುದಕ್ಕೆ ಇದೂ ಒಂದು ಕಾರಣ.

ಮಿದುಳಿನ 60 ಪ್ರತಿಶತ ಮೇದಸ್ಸು (ಕೊಬ್ಬು). ಶರೀರದ ಅಂಗಗಳ ಪೈಕಿ ಅತ್ಯಂತ ಹೆಚ್ಚಿನ ಪ್ರತಿಶತ ಮೇದಸ್ಸು ಇರುವ ಅಂಗ ಮಿದುಳು. ತೂಕದ ಲೆಕ್ಕದಲ್ಲಿ, ಮಿದುಳಿನ ಶೇಕಡಾ 75 ನೀರಿನ ಅಂಶವಾದರೆ, ಶೇಕಡಾ 12 ಮೇದಸ್ಸು, ಶೇಕಡಾ 8 ಪ್ರೊಟೀನ್. ಪಿಷ್ಟದ ಅಂಶ ಶೇಕಡಾ 1 ಕ್ಕಿಂತ ಕಡಿಮೆ. ಹೀಗಾಗಿ, ಮಿದುಳಿನ ಕೆಲಸಕ್ಕೆ ನಿರಂತರವಾಗಿ ಗ್ಲುಕೋಸ್ ಪೂರೈಕೆ ಆಗುತ್ತಿರಲೇಬೇಕು.  

ಮಿದುಳಿನ ಗಣಿತ ಮಿದುಳಿನ ಲೆಕ್ಕಾಚಾರಗಳಷ್ಟೇ ಸಂಕೀರ್ಣ ಮತ್ತು ಕುತೂಹಲಕಾರಿ!

-------------------

ಡಿಸೆಂಬರ್ 2022 ರ ಕುತೂಹಲಿ ವಿಜ್ಞಾನ ಮಾಸಪತ್ರಿಕೆಯಲ್ಲಿ ಪ್ರಕಟವಾದ ಲೇಖನ. ಸಂಚಿಕೆಯನ್ನು ಓದಲು ಕೊಂಡಿ: https://flipbookpdf.net/web/site/5b8a82bc5d5ac22343980d7fda4a52a1b9a7d7fe202212.pdf.html

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ