ಭಾನುವಾರ, ಜನವರಿ 29, 2023


 ಮೂತ್ರಪಿಂಡಗಳ ಗಣಿತ

ನಮ್ಮ ಸೊಂಟದ ಎರಡೂ ಬದಿ ಮುಷ್ಟಿಯ ಗಾತ್ರದ, ಅವರೆಬೇಳೆ ಆಕೃತಿಯ ಮೂತ್ರಪಿಂಡಗಳು ಇವೆ. ತಲಾ ಸುಮಾರು 150 ಗ್ರಾಂ ತೂಗುವ ಇವು ನಮ್ಮ ಶರೀರದ ರಕ್ತವನ್ನು ಸೋಸಿ, ಅದರಲ್ಲಿರುವ ಕಶ್ಮಲಗಳನ್ನು ಮೂತ್ರದ ಮೂಲಕ ಹೊರಹಾಕುತ್ತವೆ. ಅಂದರೆ, ಶರೀರದ ಸರಿಸುಮಾರು ಎಲ್ಲಾ ರಕ್ತವೂ ದಿನಕ್ಕೆ ಹಲವಾರು ಬಾರಿ ಮೂತ್ರಪಿಂಡಗಳ ಮೂಲಕ ಹರಿಯಬೇಕು! ರಕ್ತ ಸೋಸುವ ಕೆಲಸವಷ್ಟೇ ಅಲ್ಲದೇ ಮೂತ್ರಪಿಂಡಗಳಿಗೆ ಇನ್ನಷ್ಟು ಕೆಲಸಗಳಿವೆ. ರಕ್ತದಲ್ಲಿನ ಲವಣದ ಅಂಶಗಳ ನಿಖರತೆಯನ್ನು ಕಾಯ್ದುಕೊಳ್ಳುವುದು; ರಕ್ತದ ಆಮ್ಲ-ಪ್ರತ್ಯಾಮ್ಲ ಮಟ್ಟಗಳ ನಿರ್ವಹಣೆ; ಜೀವಕೋಶಗಳ ಹೊರಭಾಗದಲ್ಲಿನ ದ್ರವದ ಸಂಯೋಜನೆ; ಶರೀರದ ಕ್ರಿಯೆಗಳಿಗೆ ಬೇಕಾದ ಅಯಾನ್ ಗಳ ಸಮೀಕರಣ; ರಕ್ತವನ್ನು ಉತ್ಪಾದಿಸುವ ಹಾರ್ಮೋನ್ ಉತ್ಪಾದನೆ; ಶರೀರದ ಕ್ಯಾಲ್ಸಿಯಮ್ ತೂಗುವಿಕೆ; ಶರೀರದ ರಕ್ತದೊತ್ತಡ ಸಮತೋಲನ – ಇವು ಕೂಡ ಮೂತ್ರಪಿಂಡಗಳ ಕೆಲವು ಕರ್ತವ್ಯಗಳು.

ಮೂತ್ರಪಿಂಡದಲ್ಲಿ ರಕ್ತನಾಳಗಳನ್ನು ಹೊತ್ತ ಹೊರಭಾಗ ಮತ್ತು ರಕ್ತವನ್ನು ಸೋಸುವ ಒಳಭಾಗಗಳಿವೆ. ಒಂದೊಂದು ಮೂತ್ರಪಿಂಡವನ್ನೂ ಶಂಕುವಿನ ಆಕೃತಿಯ ಸರಿಸುಮಾರು 14 ಭಾಗಗಳಾಗಿ ವಿಂಗಡಿಸಬಹುದು. ರಕ್ತವನ್ನು ಸೋಸಿ, ಕಶ್ಮಲವನ್ನು ನಿವಾರಿಸುವ ಸೂಕ್ಷ್ಮವಾದ ಭಾಗವನ್ನು ನೆಫ್ರಾನ್ ಎನ್ನುತ್ತಾರೆ. ಪ್ರತಿಯೊಂದು ಮೂತ್ರಪಿಂಡದಲ್ಲೂ ಇಂತಹ ಹತ್ತು ಲಕ್ಷ ನೆಫ್ರಾನ್ ಗಳು ಇರುತ್ತವೆ. ಈ ಎಲ್ಲಾ ನೆಫ್ರಾನ್ ಗಳನ್ನು ನೇರವಾಗಿಸಿ ಒಂದು ಸಾಲಿನಲ್ಲಿ ಜೋಡಿಸಿದರೆ ಬೆಂಗಳೂರಿನ ವಿಧಾನಸೌಧವನ್ನು ಎಂಟು ಸುತ್ತು ಹಾಕಬಹುದು! ಹೃದಯದಿಂದ ಹೊರಟ ರಕ್ತದ ಪೈಕಿ ಶೇಕಡಾ 25 ಭಾಗ ಮೂತ್ರಪಿಂಡಗಳಿಗೆ ಹಾಯುತ್ತದೆ. ಅಂದರೆ, ಪ್ರತೀ ನಿಮಿಷ ಸುಮಾರು ಒಂದೂಕಾಲು ಲೀಟರ್; ದಿನವೊಂದಕ್ಕೆ ಸುಮಾರು 1800 ಲೀಟರ್ ರಕ್ತ. ಆ ಲೆಕ್ಕದಲ್ಲಿ ಮೆದುಳಿಗಿಂತ ಹೆಚ್ಚು ರಕ್ತವನ್ನು ಮೂತ್ರಪಿಂಡಗಳು ಸೆಳೆಯುತ್ತವೆ ಎಂದಾಯಿತು! ಇದರ ಪೈಕಿ ಸುಮಾರು 180 ಲೀಟರ್ ಮೂತ್ರದ ಮೂಲರೂಪದಲ್ಲಿ ಸೋಸುತ್ತದೆ. ಇದರ ಶೇಕಡಾ 99 ಭಾಗ ಶರೀರಕ್ಕೆ ವಾಪಸ್ ಆಗುತ್ತದೆ. ಉಳಿದ 1 ಪ್ರತಿಶತ ಮೂತ್ರದ ರೂಪದಲ್ಲಿ ಮೂತ್ರಪಿಂಡಗಳಿಂದ ಹೊರಬರುತ್ತದೆ. ದಿನವೊಂದಕ್ಕೆ ಸುಮಾರು ಒಂದೂವರೆಯಿಂದ ಎರಡು ಲೀಟರ್ ಮೂತ್ರ ಉತ್ಪತ್ತಿಯಾಗುತ್ತದೆ. ರಕ್ತದ ಇಷ್ಟು ಭಾಗ ಕಡಿಮೆಯಾಗುವುದರಿಂದ ಅದನ್ನು ತೂಗಿಸಲು ದಿನವೊಂದಕ್ಕೆ ಎಂಟು ಲೋಟಗಳಷ್ಟು ನೀರನ್ನು ಕುಡಿಯಬೇಕು. ಮೂತ್ರಪಿಂಡಗಳ ಇಷ್ಟೆಲ್ಲಾ ಕೆಲಸಗಳಿಗೆ ಸಾಕಷ್ಟು ಆಕ್ಸಿಜನ್ ಅವಶ್ಯಕತೆಯಿದೆ. ಶರೀರದ ತೂಕದ ಶೇಕಡಾ 0.5 ಕೂಡ ಇಲ್ಲದ ಮೂತ್ರಪಿಂಡಗಳು ಶರೀರದ ಸುಮಾರು 7 ಪ್ರತಿಶತ ಆಕ್ಸಿಜನ್ ಉಪಯೋಗಿಸುತ್ತವೆ.

ಮೂತ್ರಪಿಂಡಗಳಲ್ಲಿ ಸೋಸಿದ ಮೂತ್ರ ಎರಡು ನಳಿಕೆಗಳ ಮೂಲಕ ಕಿಬ್ಬೊಟ್ಟೆಯ ಭಾಗದಲ್ಲಿರುವ ಮೂತ್ರಕೋಶವನ್ನು ತಲುಪುತ್ತವೆ. ಈ ಮೂತ್ರಕೋಶಕ್ಕೆ ಸುಮಾರು ಅರ್ಧ ಲೀಟರ್ ಮೂತ್ರವನ್ನು ಹಿಡಿದಿಡುವ ಸಾಮರ್ಥ್ಯ ಇದೆಯಾದರೂ, ಬಹುತೇಕ ಜನರಲ್ಲಿ ಸುಮಾರು 150-200 ಮಿಲಿಲೀಟರ್ ಮೂತ್ರ ಸಂಗ್ರಹ ಆಗುವ ವೇಳೆಗೆ ಇದು ಮೆದುಳಿಗೆ “ಮೂತ್ರ ಸಂಗ್ರಹವಾಗಿದೆ; ವಿಸರ್ಜನೆ ಆಗಬೇಕು” ಎಂಬ ಸಂದೇಶ ಕಳಿಸುತ್ತದೆ. ಯಾವುದೇ ಕಾಯಿಲೆ ಅಥವಾ ಸಮಸ್ಯೆಯಿಂದ ಮೂತ್ರಪಿಂಡಗಳ ಸಾಮರ್ಥ್ಯ ಕುಗ್ಗಿದರೆ ಮೂತ್ರ ಸಂಗ್ರಹದ ಪ್ರಮಾಣದಲ್ಲಿ ವ್ಯತ್ಯಾಸ ಆಗುತ್ತದೆ. ಮಧುಮೇಹದಂತಹ ಕೆಲವು ಕಾಯಿಲೆಗಳಲ್ಲಿ ಮೂತ್ರದ ಪ್ರಮಾಣ ಅಧಿಕವಾಗುತ್ತದೆ. ಮೂತ್ರಕೋಶಗಳ ವೈಫಲ್ಯದಲ್ಲಿ ಮೂತ್ರದ ತಯಾರಿಕೆಯ ಪ್ರಮಾಣ ಇಳಿದುಹೋಗುತ್ತದೆ.

ಮೂತ್ರಪಿಂಡಗಳು ಜರಡಿಯಂತೆ ಕೆಲಸ ಮಾಡುತ್ತವೆ. ರಕ್ತದಲ್ಲಿನ ಪ್ರೊಟೀನ್ ನಂತಹ ದೊಡ್ಡ ದೊಡ್ಡ ಅಂಶಗಳು ಈ ಜರಡಿಯ ಮೇಲೆಯೇ ಉಳಿದು, ಹಾಗೆಯೇ ರಕ್ತಕ್ಕೆ ವಾಪಸ್ ಆಗುತ್ತವೆ. ಸಣ್ಣ ಅಂಶಗಳು ಜರಡಿಯಾದರೂ, ಅವುಗಳು ನೆಫ್ರಾನ್ ನ ಮೊದಲ ಭಾಗದಿಂದ ಹಾಯುವಾಗಲೇ ಮತ್ತೆ ರಕ್ತಕ್ಕೆ ಸೆಳೆಯಲ್ಪಡುತ್ತವೆ. ಈ ರೀತಿ, ಆರಂಭದ ಹಂತದಲ್ಲಿ ಸೋಸಲ್ಪಟ್ಟ ಸಕ್ಕರೆಯ ಅಂಶ ಮತ್ತು ಅಮೈನೋ ಆಮ್ಲಗಳು ಪುನಃ ರಕ್ತಕ್ಕೆ ಹಿಂದಿರುಗತ್ತವೆ. ಅಂತೆಯೇ, ಶರೀರಕ್ಕೆ ಅಗತ್ಯವಾದ ಹಲವಾರು ಲವಣದ ಅಂಶಗಳು ಮತ್ತು ನೀರಿನ ಬಹುಭಾಗ ಮತ್ತೆ ರಕ್ತಕ್ಕೆ ಸೇರುತ್ತವೆ. ಈ ರೀತಿ ವಾಪಸ್ ಸೆಳೆದುಕೊಳ್ಳುವ ಸಾಮರ್ಥ್ಯಕ್ಕೆ ಒಂದು ಮಿತಿ ಇರುತ್ತದೆ. ಅದನ್ನು ಮೀರಿದರೆ ಕೆಲವು ಅಂಶಗಳು ಮೂತ್ರದ ಮೂಲಕ ಹೊರಗೆ ಹೋಗಬಹುದು. ಉದಾಹರಣೆಗೆ, ಶರೀರದಲ್ಲಿ ಗ್ಲುಕೋಸ್ ಅಂಶ ತಲಾ ಎಂ.ಎಲ್. ರಕ್ತದಲ್ಲಿ ಸಾಮಾನ್ಯವಾಗಿ 100-120 ಮಿಲಿಗ್ರಾಂ ಇರುತ್ತದೆ. ಈ ಮಟ್ಟ ಸುಮಾರು 160 ಮಿಲಿಗ್ರಾಂ ಆದರೂ, ಮೂತ್ರಪಿಂಡಗಳು ತಮ್ಮೊಳಗೆ ಬಂದ ಎಲ್ಲಾ ಗ್ಲುಕೋಸ್ ಅನ್ನೂ ವಾಪಸ್ ಹೀರಿಕೊಳ್ಳಬಲ್ಲವು. ಈ ಮಟ್ಟ 160 ಮಿಲಿಗ್ರಾಂ ಅನ್ನು ಮೀರಿದರೆ, ಅದನ್ನು ಸಂಪೂರ್ಣವಾಗಿ ಹೀರಿಕೊಳ್ಳಲಾಗದೇ ಮೂತ್ರದಲ್ಲಿ ಗ್ಲುಕೋಸ್ ಅಂಶ ಕಾಣುತ್ತದೆ. ಮಧುಮೇಹಿಗಳ ರಕ್ತದಲ್ಲಿ ಗ್ಲುಕೋಸ್ ಅಂಶ 160 ಮಿಲಿಗ್ರಾಂ ಮೀರಿದರೆ, ಅದರ ಕೆಲವಂಶ ಮೂತ್ರದಲ್ಲಿ ಹೊರಹೋಗುತ್ತದೆ. ಇದನ್ನು ಪತ್ತೆ ಮಾಡಿದರೆ ಮಧುಮೇಹ ಇರಬಹುದಾದ ಸಾಧ್ಯತೆಗಳು ತಿಳಿಯುತ್ತವೆ. 

ಮೂತ್ರಪಿಂಡದ ಜರಡಿಯ ರಂಧ್ರಗಳು ಕೆಲವು ಕಾಯಿಲೆಗಳಲ್ಲಿ ಅಗಲವಾಗಬಹುದು. ಆಗ ಸಾಮಾನ್ಯಕ್ಕಿಂತ ಹೆಚ್ಚಿನ ಗಾತ್ರದ ಅಂಶಗಳು ಸೋಸಲ್ಪಡುತ್ತವೆ. ಈ ರೀತಿ ಸಣ್ಣ ಪುಟ್ಟ ಪ್ರೊಟೀನ್ ಗಳು, ಪುಟ್ಟ ಗಾತ್ರದ ಜೀವಕೋಶಗಳು ಮೂತ್ರದ ಮೂಲಕ ಹೊರಹೋಗಬಹುದು; ಇಲ್ಲವೇ, ನೆಫ್ರಾನ್ ಗಳ ಯಾವುದೋ ಭಾಗದಲ್ಲಿ ಸಿಲುಕಿಕೊಂಡು, ಅವನ್ನು ಕಾರ್ಯಹೀನವಾಗಿ ಮಾಡಬಹುದು. ಆಗ ಮೂತ್ರಪಿಂಡಗಳ ಒಟ್ಟಾರೆ ಕಾರ್ಯಕ್ಷಮತೆ ಕ್ಷೀಣಿಸುತ್ತದೆ. ಅಲ್ಲದೇ, ಮೂತ್ರದ ಪರೀಕ್ಷೆಯಲ್ಲಿ ಸಾಮಾನ್ಯವಾಗಿ ಕಾಣದ ರಾಸಾಯನಿಕ ಅಂಶಗಳು ಗೋಚರಿಸುತ್ತವೆ. ಮೂತ್ರದ ಬಣ್ಣ ಹಠಾತ್ತಾಗಿ ಬದಲಾಗಬಹುದು. ಈ ರೀತಿಯಲ್ಲಿ, ಮೂತ್ರದ ಬಣ್ಣ ಮತ್ತು ಸರಳ ಪರೀಕ್ಷೆಗಳು ಮೂತ್ರಪಿಂಡಗಳ ಆರೋಗ್ಯದ ಬಗ್ಗೆ ಸಾಕಷ್ಟು ಮಾಹಿತಿ ನೀಡಬಲ್ಲವು.

ಮೂತ್ರಪಿಂಡಗಳ ಸಮಸ್ಯೆಗಳು ಬಹಳ ಸಾಮಾನ್ಯ. ಸಾಕಷ್ಟು ಗಟ್ಟಿ ಸ್ವರೂಪದ ಮೂತ್ರಪಿಂಡಗಳು ತಾವಾಗಿಯೇ ತೊಂದರೆಗೆ ಬೀಳುವುದಕ್ಕಿಂತ ಶರೀರದ ಹಲವಾರು ಕಾಯಿಲೆಗಳ ಪರೋಕ್ಷ ಪರಿಣಾಮದಿಂದ ಘಾಸಿಯಾಗುವುದೇ ಹೆಚ್ಚು. ನಮ್ಮ ಜೀವನಶೈಲಿ, ಆಹಾರ, ಅಧಿಕ ರಕ್ತದೊತ್ತಡ, ಮಧುಮೇಹ ಮುಂತಾದ ಕಾರಣಗಳಿಂದ ಮೂತ್ರಪಿಂಡಗಳ ಸಮಸ್ಯೆ ಉಂಟಾಗುತ್ತದೆ. ಅಭಿವೃದ್ಧಿಶೀಲ ದೇಶಗಳಲ್ಲಿ ಕಾಯಿಲೆಗಳ ನಿಖರ ಸಂಖ್ಯೆ ತಿಳಿಯುವುದು ಕಷ್ಟ. ಆದರೆ, ಆರೋಗ್ಯ ವ್ಯವಸ್ಥೆ ಅಚ್ಚುಕಟ್ಟಾಗಿ ಶ್ರೇಣಿಕೃತವಾಗಿರುವ ಮುಂದುವರೆದ ದೇಶಗಳಲ್ಲಿ ಮೂತ್ರಪಿಂಡಗಳ ಸಮಸ್ಯೆ ಸುಮಾರು ನೂರು ಜನರಲ್ಲಿ ಹದಿನಾಲ್ಕು ಜನಕ್ಕೆ ಇದೆ. ಈ ಲೆಕ್ಕದಲ್ಲಿ ಸುಮಾರು 700 ಕೋಟಿ ಜನಸಂಖ್ಯೆಯ ಪ್ರಪಂಚದಲ್ಲಿ ಸುಮಾರು 100 ಕೋಟಿ ಮಂದಿ ಮೂತ್ರಪಿಂಡಗಳ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದಾಯಿತು. ಇದು ಬಹು ದೊಡ್ಡ ಸಂಖ್ಯೆ. ಇಷ್ಟು ಮಂದಿಗೆ ಸರಿಯಾಗಿ ಚಿಕಿತ್ಸೆ ಮಾಡುವಷ್ಟು ಅನುಕೂಲ ವೈದ್ಯಕೀಯ ಜಗತ್ತಿಗೆ ಇಲ್ಲ. ಹೀಗಾಗಿ, ಕಾಯಿಲೆ ಬಾರದಂತೆ ನಿಗಾ ವಹಿಸುವುದು ಶ್ರೇಯಸ್ಕರ. ಈ ಸಮಸ್ಯೆ ಅಧಿಕವಾಗುತ್ತಾ ಹೋದಂತೆ ಮೂತ್ರಪಿಂಡಗಳು ಕೆಲಸ ಕುಗ್ಗುತ್ತಾ ಹೋಗುತ್ತದೆ. ಆಗ ರಕ್ತದ ಮಾಲಿನ್ಯಗಳು ಶರೀರದಲ್ಲೇ ಉಳಿದು ಬಹಳ ತೊಂದರೆ ಕೊಡುತ್ತವೆ. ಇಂತಹ ಸಂದರ್ಭಗಳಲ್ಲಿ ರಕ್ತವನ್ನು ಸೋಸಿ ಕಶ್ಮಲ ತೆಗೆಯುವ ಕೆಲಸವನ್ನು ಕೃತಕವಾಗಿ ಮಾಡಬೇಕು. ಇದನ್ನು ಮಾಡುವುದು ಡಯಾಲಿಸಿಸ್ ಪ್ರಕ್ರಿಯೆ. ಆದರೆ, ಡಯಾಲಿಸಿಸ್ ತಾತ್ಕಾಲಿಕ ವಿಧಾನ ಮಾತ್ರ. ಮೂತ್ರಪಿಂಡಗಳ ವೈಫಲ್ಯಕ್ಕೆ ಇರುವ ಸರಿಯಾದ ಚಿಕಿತ್ಸೆ ಎಂದರೆ ಮೂತ್ರಪಿಂಡ ಕಸಿ.

ಅಂಗಗಳ ಕಸಿ ಸಂಖ್ಯೆಗಳನ್ನು ಪರಿಗಣಿಸಿದರೆ, ಪ್ರಪಂಚದಾದ್ಯಂತ ಮೂತ್ರಪಿಂಡಗಳ ಕಸಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಆಗುತ್ತದೆ. ಯಕೃತ್, ಹೃದಯ,ಶ್ವಾಸಕೋಶ,ಮೇದೋಜೀರಕ, ಕರುಳು ಮುಂತಾದ ಎಲ್ಲಾ ಅಂಗ ಕಸಿಗಳ ಒಟ್ಟಾರೆ ಸಂಖ್ಯೆಗಿಂತ ಮೂತ್ರಪಿಂಡಗಳ ಕಸಿಯ ಸಂಖ್ಯೆ ಅಧಿಕ. ಪ್ರತಿಯೊಬ್ಬರಿಗೆ ಎರಡು ಮೂತ್ರಪಿಂಡಗಳು ಇದ್ದರೂ, ಸಾಮಾನ್ಯ ಬದುಕಿಗೆ ಒಂದು ಆರೋಗ್ಯವಂತ ಮೂತ್ರಪಿಂಡವೂ ಸಾಕು. ಹೀಗಾಗಿ, ಬದುಕಿರುವಾಗಲೇ ಒಂದು ಮೂತ್ರಪಿಂಡವನ್ನು ದಾನ ಮಾಡಲು ಸಾಧ್ಯ. ಒಂದೆಡೆ ಅಧಿಕ ಸಂಖ್ಯೆಯ ರೋಗಿಗಳು, ಮತ್ತೊಂದೆಡೆ ಸ್ವಲ್ಪ ಹೆಚ್ಚಿನ ಲಭ್ಯತೆ – ಈ ಕಾರಣಗಳಿಂದ ಮೂತ್ರಪಿಂಡ ಕಸಿಯ ಸಂಖ್ಯೆ ಹೆಚ್ಚು. ಆದರೆ, ರೋಗಿಗಳ ಒಟ್ಟಾರೆ ಸಂಖ್ಯೆಗೆ ಹೋಲಿಸಿದರೆ, ಕಸಿಗಳ ಸಂಖ್ಯೆ ಏನೇನೂ ಸಾಲದು. ಅಮೆರಿಕದ ಲೆಕ್ಕಾಚಾರದಂತೆ ಪ್ರತೀ 9 ನಿಮಿಷಗಳಿಗೆ ಒಂದು ರೋಗಿ ಮೂತ್ರಪಿಂಡ ಕಸಿಗಾಗಿ ನೋಂದಾವಣೆಯಾಗುತ್ತಾರೆ. ಪ್ರಸ್ತುತ ಅಮೆರಿಕದಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ರೋಗಿಗಳು ಮೂತ್ರಪಿಂಡ ಕಸಿಗಾಗಿ ನೋಂದಾಯಿಸಿಕೊಂಡು ಕಾಯುತ್ತಿದ್ದಾರೆ. ಆದರೆ, ಅಲ್ಲಿ ಒಂದು ವರ್ಷಕ್ಕೆ ಸುಮಾರು 20,000 ಮೂತ್ರಪಿಂಡ ಕಸಿ ಮಾತ್ರ ಆಗುತ್ತಿವೆ. ಹೀಗಾಗಿ, ಪ್ರತಿದಿನ ಸುಮಾರು 17 ರೋಗಿಗಳು ಮೂತ್ರಪಿಂಡದ ಲಭ್ಯತೆ ಇಲ್ಲದೆ ಮರಣಿಸುತ್ತಾರೆ. ಮೆದುಳು ಮರಣ ಹೊಂದಿದವರ ಮೂತ್ರಪಿಂಡಗಳನ್ನು ದಾನ ಮಾಡಲು ಕಾನೂನು ರೀತ್ಯಾ ಅನುಕೂಲ ಇದೆಯಾದರೂ, ಆ ರೀತಿ ಮರಣಿಸುವವರ ಸಂಖ್ಯೆ ಸಾವಿರಕ್ಕೆ 3 ಮಾತ್ರ. ಅಂಗಾಂಗ ಕಸಿಗೆ ಆಯಾ ದೇಶಗಳ ಸರ್ಕಾರದ, ಕಾನೂನಿನ ಬೆಂಬಲ ಬಹಳ ಮುಖ್ಯ. ಅದಿಲ್ಲದೇ ಹೆಚ್ಚಿನ ಪ್ರಗತಿ ನಿರೀಕ್ಷಿಸುವುದು ಕಷ್ಟ.

ಮೂತ್ರಪಿಂಡಗಳು ನಿರ್ವಹಿಸುವ ಕರ್ತವ್ಯಗಳು ಅನೇಕ. ಅವುಗಳ ಕೆಲಸಕ್ಕೆ ಪೂರಕವಾಗುವಂತೆ ನಮ್ಮ ಆರೋಗ್ಯದ ಬಗ್ಗೆ ಕಾಳಜಿ ಇರಬೇಕು. ಪ್ರತಿಯೊಂದು ಕಾಯಿಲೆಯೂ ಅನೇಕ ಅಂಗಗಳನ್ನು ಘಾಸಿ ಮಾಡಬಲ್ಲವು ಎಂಬ ಎಚ್ಚರಿಕೆ ಇರಬೇಕು.

­­­­­­­­­­­­­­­­­­-------------------------

ಜನವರಿ 2023 ರ ಕುತೂಹಲಿ ವಿಜ್ಞಾನ ಮಾಸಪತ್ರಿಕೆಯಲ್ಲಿ ಪ್ರಕಟವಾದ ಲೇಖನ. ಕುತೂಹಲಿ ಜನವರಿ 2023ರ ಸಂಪೂರ್ಣ ಸಂಚಿಕೆಯನ್ನು ಓದಲು ಕೊಂಡಿ: http://bit.ly/3Clreua

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ