ಭಾನುವಾರ, ಜನವರಿ 29, 2023

 ನಮ್ಮ ಶರೀರವನ್ನು ನಿಯಂತ್ರಿಸುವವರು ಯಾರು?

ಡಾ. ಕಿರಣ್ ವಿ.ಎಸ್.

ವೈದ್ಯರು

“ಜೀವನದಲ್ಲಿ ದಾರಿ ತೋರದಾದಾಗ ಹೃದಯದ ಮಾತು ಕೇಳು. ಅದು ಎಂದಿಗೂ ತಪ್ಪು ದಾರಿ ತೋರುವುದಿಲ್ಲ” ಎನ್ನುವ ಸಿನೀಮಯ ಮಾತುಗಳನ್ನು ಕೇಳಿ “ಆಹಾ; ಓಹೋ” ಎಂದು ಮೆಚ್ಚಿಕೊಂಡಿರುತ್ತೇವೆ. ಅಸಲಿಗೆ ಹೃದಯಕ್ಕೆ ಮಾತುಗಳೂ ಇಲ್ಲ; ಆಲೋಚನೆಗಳೂ ಇಲ್ಲ. ಹುಟ್ಟಿನ ಮೊದಲಿನಿಂದ ಆರಂಭಿಸಿ ಜೀವನದ ಕೊನೆಯ ಕ್ಷಣದವರೆಗೆ ಬಡಿಯುತ್ತಾ, ರಕ್ತವನ್ನು ದೇಹದ ಮೂಲೆಮೂಲೆಗಳಿಗೆ ತಲುಪಿಸುವ ಕೆಲಸ ಹೃದಯದ್ದು. ಇದನ್ನು ಹೊರತುಪಡಿಸಿ ಯೋಚಿಸುವಂತಹ ಸಂಕೀರ್ಣ ಕೆಲಸವನ್ನು ಮಾಡುವ ವ್ಯವಧಾನವಾಗಲೀ, ಸಾಮರ್ಥ್ಯವಾಗಲೀ ಹೃದಯಕ್ಕೆ ಇಲ್ಲ. ಭಾವನೆಗಳು ತೀವ್ರಗೊಂಡಾಗ ಜೋರಾಗಿ ಮಿಡಿಯುವ ಹೃದಯ ನಮಗೆ ಆಯಾ ಸಂದರ್ಭದ ಅರಿವು ಮೂಡಿಸುತ್ತದೆ. ಹೀಗಾಗಿ, “ಭಾವನೆಗಳ ಉಗಮ ಹೃದಯವೇ” ಎಂದು ಪ್ರಾಚೀನರು ಭಾವಿಸಿದ್ದು ಸಹಜ. ಆದರೆ ವಿಜ್ಞಾನ ಮುಂದುವರೆದಂತೆಲ್ಲಾ ಹೃದಯಕ್ಕೂ ಭಾವನೆಗಳಿಗೂ ಸಂಬಂಧವಿಲ್ಲವೆಂದು ಋಜುವಾತಾದರೂ, ಕವಿಗಳು, ಸಿನೆಮಾದವರು ಈ ಸಂಬಂಧವನ್ನು ಜನರ ಮನದಲ್ಲಿ ಬಿತ್ತುತ್ತಲೇ ಇದ್ದಾರೆ!

ನಮ್ಮ ದೇಹ ಸುಮಾರು 78 ವಿವಿಧ ಅಂಗಗಳ ಸಮ್ಮೇಳನ. ಇವುಗಳ ಪೈಕಿ ಮಿದುಳು, ಹೃದಯ, ಮೂತ್ರಪಿಂಡಗಳು, ಯಕೃತ್, ಮತ್ತು ಶ್ವಾಸಕೋಶಗಳು ಪ್ರಮುಖವಾದುವು. ಈ ಐದು ಅಂಗಗಳ ಪೈಕಿ ಯಾವುದಾದರೂ ಒಂದು ಅಂಗ ಕೆಲಕಾಲ ಕೆಲಸ ಮಾಡುವುದನ್ನು ನಿಲ್ಲಿಸಿದರೆ ಜೀವನ ಮುಗಿದಂತೆ. ಸಾಮಾನ್ಯ ಸ್ಥಿತಿಯಲ್ಲಿ ಈ ಅಂಗಗಳು ಸ್ವತಂತ್ರವಾಗಿ ಕೆಲಸ ಮಾಡಬಲ್ಲವಾದರೂ, ಇದರ ಮುಖ್ಯ ನಿಯಂತ್ರಣ ಮಿದುಳಿನಲ್ಲಿರುತ್ತದೆ. ಹೀಗಾಗಿ, ಮಿದುಳನ್ನು ಶರೀರದ ಮುಖ್ಯ ನಿಯಂತ್ರಣಾಧಿಕಾರಿ ಎನ್ನಬಹುದು. ಶರೀರದ ಪ್ರತಿಯೊಂದು ಕ್ರಿಯೆಯ ಹಿಂದೆ ಮಿದುಳು ಮತ್ತು ನರಮಂಡಲದ ಕೈವಾಡವಿದೆ. ಕೆಲವರಂತೂ ಶರೀರ ಇರುವುದೇ ಮಿದುಳನ್ನು ಕಾಪಾಡಲು ಎಂದು ಪ್ರತಿಪಾದಿಸುತ್ತಾರೆ.

“ಎಲ್ಲವನ್ನೂ ಮಿದುಳು ನಿಯಂತ್ರಿಸಿದರೆ, ಮಿದುಳನ್ನು ನಿಯಂತ್ರಿಸುವವರು ಯಾರು?” ಎನ್ನುವ ಪ್ರಶ್ನೆ ಬಹಳ ಕಾಲದಿಂದ ಚಿಂತಕರನ್ನು, ವಿಜ್ಞಾನಿಗಳನ್ನು, ತತ್ತ್ವಶಾಸ್ತ್ರಿಗಳನ್ನು ಬೇರೆ ಬೇರೆ ಬಗೆಯಲ್ಲಿ ಕಾಡಿದೆ. ಇದಕ್ಕೆ ಕೆಲವರು ಶರೀರದ ಹೊರಗಿನ ಪ್ರಭಾವಗಳನ್ನು ಹುಡುಕಿದರೆ, ಕೆಲವರು ಶರೀರದೊಳಗೇ ಇರುವ ನಿಯಂತ್ರಕಗಳನ್ನು ಅರಸುತ್ತಾರೆ. ಮತ್ತೂ ಕೆಲವರು “ಮಿದುಳಿಗೆ ಮಿದುಳೇ ನಿಯಂತ್ರಕ” ಎಂದು ಸಂವಾದವನ್ನು ಕೊನೆಗೊಳಿಸುತ್ತಾರೆ. ಇಲ್ಲಿನ ಪ್ರಶ್ನೆ ಉತ್ತರದ್ದಲ್ಲ; ಉತ್ತರದ ಹಿಂದಿನ ಸಾಕ್ಷ್ಯಗಳದ್ದು. ಯಾವುದೇ ಉತ್ತರ ನೀಡಿದರೂ, ಅದಕ್ಕೆ ಸಮಂಜಸವಾದ ಪುರಾವೆಗಳನ್ನು ನೀಡಬೇಕು; ಹಾರಿಕೆಯ ಉತ್ತರಗಳು, ಚಮತ್ಕಾರದ ಮಾತುಗಳು, ಅರಿವಿನ ಹೊರಗಿನ ನುಡಿಗಟ್ಟುಗಳು ಕೆಲಸಕ್ಕೆ ಬಾರವು.

“ಜೀವನದ ಉದ್ದೇಶವೇನು?” ಎನ್ನುವ ಪ್ರಶ್ನೆಗೆ ನಾಗರಿಕತೆಯ ನಡುವೆ ಇರುವ ಮನುಷ್ಯರ ಉತ್ತರ ಬಹಳಷ್ಟು ಆಯಾಮಗಳನ್ನು ಹೊಂದಿರುತ್ತದೆ. ಆದರೆ ಸೃಷ್ಟಿಯೆಂದರೆ ಕೇವಲ ಮನುಷ್ಯ ಮಾತ್ರವಲ್ಲ. ಮಾನವನನ್ನು ಹೊರತುಪಡಿಸಿ ಈ ಪ್ರಶ್ನೆಯನ್ನು ಇತರ ಜೀವ ಪ್ರಭೇದಗಳ ದೃಷ್ಟಿಯಿಂದ ನೋಡಿದರೆ, ಅವುಗಳ ಅಸ್ತಿತ್ವದ ಮೂಲೋದ್ದೇಶ ಸಂತಾನ ಪ್ರಕ್ರಿಯೆ. ಆ ಉದ್ದೇಶ ಪೂರ್ಣವಾಗುವವರೆಗೆ ಬದುಕಿರಲು ನಡೆಸುವ ಹೋರಾಟ ಅವುಗಳ ಜೀವನದ ಕತೆ. ಸಂತಾನ ಕ್ರಿಯೆ ಪೂರ್ಣವಾದ ಕೂಡಲೇ ತಮ್ಮ ಬದುಕನ್ನು ಕೊನೆಗೊಳಿಸುವ ಕೆಲವು ಗೋಸುಂಬೆಗಳು, ಇಲಿಗಳು, ಕೀಟಗಳು, ಜೇಡಗಳು ಮೊದಲಾದ ಜೀವ ಪ್ರಭೇದಗಳು ಜಗತ್ತಿನಲ್ಲಿವೆ. ಹೀಗೆ ಮರಣಿಸುವಾಗ ಇವುಗಳ ಮಿದುಳು ಸುಸ್ಥಿತಿಯಲ್ಲೇ ಇರುತ್ತದೆ. ಒಂದು ವೇಳೆ ದೇಹವೆಂಬುದು ಮಿದುಳನ್ನು ಸಂರಕ್ಷಿಸಲು ಇರುವ ಸಾಧನ ಎಂಬ ಮಾತಿನಲ್ಲಿ ಹುರುಳಿದ್ದರೆ ಈ ರೀತಿಯ ಮರಣ ಸಂಭವಿಸಬಾರದು. ಹಾಗಾದರೆ, ಇಂತಹ ಸಾವುಗಳು ಏಕಾಗುತ್ತವೆ?

ಮಿದುಳನ್ನು ದೇಹ ಸಂರಕ್ಷಿಸುತ್ತದೆ ಎಂದ ಮೇಲೆ ದೇಹವನ್ನು ಮಿದುಳು ಕಾಪಾಡಬೇಕು. ಆಗಲೇ ಈ ಪರಸ್ಪರ ಅವಲಂಬನೆ ಅರ್ಥಪೂರ್ಣ. ಈ ಮಾತಿಗೆ ಪುಷ್ಠಿ ನೀಡುವಂತೆ ಮಿದುಳು ಇಡೀ ದೇಹದ ಜವಾಬ್ದಾರಿಗಳನ್ನು ನಿಭಾಯಿಸುತ್ತದೆ; ಯಾವುದೇ ಅಂಗದ ಕಷ್ಟಕಾಲಕ್ಕೆ ಸ್ಪಂದಿಸಿ, ದೇಹದ ಇತರೆ ಅಂಗಗಳನ್ನು ಸಜ್ಜುಗೊಳಿಸಿ, ಸಹಾಯಕ್ಕೆ ಧಾವಿಸುವಂತೆ ಪ್ರಚೋದಿಸುತ್ತದೆ. ಈ ಸಹಬಾಳ್ವೆ ಯಾವುದೇ ಕಾರಣಕ್ಕೂ ವಿಚಲಿತವಾಗಬಾರದು. ಒಂದು ವೇಳೆ ದೇಹದ ರಕ್ಷಣೆಯಲ್ಲಿ ಮಿದುಳು ವಿಫಲವಾದರೆ? ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಮಿದುಳೇ ದೇಹದ ನಾಶಕ್ಕೆ ಕಾರಣವಾದರೆ? “ಕಾವ ದೇವ ಸಾವು ತರಲು ಎಲ್ಲಿ ರಕ್ಷಣೆ?” ಎಂದು ಪ್ರಶ್ನಿಸಿದ ಓಹಿಲೇಶ್ವರನ ಆಕ್ರಂದನವಾಯಿತಲ್ಲವೇ? ಹೀಗೆ ಆಗುವುದು ಶಕ್ಯವೇ?

ಇಲಿ ಮತ್ತು ಬೆಕ್ಕುಗಳ ಆಜನ್ಮ ವೈರ ಎಲ್ಲರಿಗೂ ವಿದಿತ. ಈ ವೈರವನ್ನು ಬಗೆಬಗೆಯಾಗಿ ತೋರುವ “ಟಾಮ್ ಅಂಡ್ ಜೆರ್ರಿ”ಯಂತಹ ಕಾರ್ಟೂನ್ ಚಿತ್ರಗಳು ಅದೆಷ್ಟು ಕೋಟಿಗಳ ವ್ಯವಹಾರ ಮಾಡಿವೆಯೋ, ಅದೆಷ್ಟು ಜನರನ್ನು ರಂಜಿಸಿದೆಯೋ ಲೆಕ್ಕವೇ ಇಲ್ಲ. ಟಾಮ್ ಬೆಕ್ಕಿನ ಆಕ್ರಮಣಕ್ಕಿಂತಲೂ ಜೆರ್ರಿ ಇಲಿಯ ಬಚಾವಾಗುವ ಉಪಾಯಗಳು ಗಮನ ಸೆಳೆಯುತ್ತವೆ. ಒಟ್ಟಿನಲ್ಲಿ, ಬೆಕ್ಕಿಗೆ ಸಿಗದಂತೆ ತನ್ನ ಜೀವ ಉಳಿಸಿಕೊಳ್ಳುವುದು ಇಲಿಗಳಿಗೆ ಮುಖ್ಯ. ಬೆಕ್ಕಿನ ವಾಸನೆಯನ್ನು ಗ್ರಹಿಸುವ ವಿಶೇಷ ಭಾಗ ಇಲಿಗಳ ಮಿದುಳಿನಲ್ಲಿದೆ. ಇದರಿಂದ ಬೆಕ್ಕಿನ ನಡಿಗೆಯ ಸಪ್ಪಳ ಕೇಳದಿದ್ದರೂ ಅದರ ಅಸ್ತಿತ್ವವನ್ನು ಗುರುತಿಸಿ ಇಲಿಗಳು ತಪ್ಪಿಸಿಕೊಳ್ಳಬಲ್ಲವು. ಇದನ್ನು “ಅನುಮಾನಕ್ಕೆ ಆಸ್ಪದವಿಲ್ಲದ ಸತ್ಯ” ಎಂದೇ ಭಾವಿಸಿದ್ದ ವಿಜ್ಞಾನಿಗಳನ್ನು ಸೋಜಿಗಕ್ಕೆ ಕೆಡವಿದ್ದು ಒಂದು ಪ್ರಸಂಗ. ನೋಡನೋಡುತ್ತಿದ್ದಂತೆ ಖುದ್ದು ಇಲಿ ತಾನೇತಾನಾಗಿ ಬೆಕ್ಕಿನ ಬಳಿ ಹೋಗಿ ಆಹಾರವಾಗುವ ಅಚ್ಚರಿ ವಿಜ್ಞಾನಿಗಳನ್ನು ಅನುಮಾನಕ್ಕೆ ದೂಡಿತು. ಈ ಅನೂಹ್ಯ ಅಚ್ಚರಿಯ ಹಿಂದೆ ಬಿದ್ದು ಕಾರಣಗಳನ್ನು ಹುಡುಕಿದ ಸಂಶೋಧಕರನ್ನು ನಿಬ್ಬೆರಗಾಗಿಸಿದ್ದು ಒಂದು ಆದಿಮ ಏಕಾಣು ಪರೋಪಜೀವಿ (Protozoan).

ಟೊಕ್ಸೊಪ್ಲಾಸ್ಮ ಗೊಂಡಿ ಎನ್ನುವ ಹೆಸರಿನ ಪರೋಪಜೀವಿ ಮೂಲತಃ ಬೆಕ್ಕಿನ ಹೊಟ್ಟೆಯಲ್ಲಿ ಸಂತಾನೋತ್ಪತ್ತಿ ಮಾಡುತ್ತದೆ. ಆದರೆ ಅದರ ಜೀವನ ಚಕ್ರದ ಮತ್ತೊಂದು ಭಾಗ ಇಲಿಯಂತಹ ಜೀವಿಗಳಲ್ಲಿ ಆಗುತ್ತದೆ. ಅಂದರೆ, ಈ ಪರೋಪಜೀವಿಯ ಇಡೀ ಜೀವನಚಕ್ರ ಪೂರ್ಣವಾಗಲು ಬೆಕ್ಕು ಇಲಿಯನ್ನು ತಿನ್ನಬೇಕು. ಆಗ ಇಲಿಯ ದೇಹದಲ್ಲಿರುವ ಟೊಕ್ಸೊಪ್ಲಾಸ್ಮ ಗೊಂಡಿ ಬೆಕ್ಕಿನ ದೇಹವನ್ನು ಸೇರಿ ತನ್ನ ಸಂತಾನವನ್ನು ಬೆಳಸುತ್ತದೆ. ಇಲಿ ಮತ್ತು ಬೆಕ್ಕುಗಳು ಸಹಜ ಶತ್ರುಗಳಾದ್ದರಿಂದ ಈ ವ್ಯವಸ್ಥೆ ತರ್ಕಬದ್ಧವಾಗಿಯೇ ಇದೆ ಅನಿಸುತ್ತದೆ. ಆದರೆ, ಟೊಕ್ಸೊಪ್ಲಾಸ್ಮ ಗೊಂಡಿ ಪರೋಪಜೀವಿಗೆ ಈ ಸಹಜ ವ್ಯವಸ್ಥೆ ಸಾಲದು. ಇಲಿಯನ್ನು ಹಿಡಿಯಲು ಬೆಕ್ಕು ವಿಫಲವಾದರೆ, ಅಥವಾ ಇಲಿ ತಪ್ಪಿಸಿಕೊಂಡರೆ ಟೊಕ್ಸೊಪ್ಲಾಸ್ಮ ಗೊಂಡಿ ಸಂತಾನ ಕ್ಷೀಣಿಸುತ್ತದೆ. ಹೀಗಾಗಿ ಕೇವಲ ಒಂದು ಕೋಶದ ಈ ಪರೋಪಜೀವಿ ಸೀದಾ ಇಲಿಯ ಮಿದುಳಿಗೇ ಕೈ ಹಾಕುತ್ತದೆ! ಇದು ನುಡಿಗಟ್ಟಿನ ಮಾತಲ್ಲ; ಸತ್ಯ. ಟೊಕ್ಸೊಪ್ಲಾಸ್ಮ ಗೊಂಡಿ ಸೀದಾ ಇಲಿಗಳ ಮಿದುಳನ್ನು ಸೇರಿ, ಬೆಕ್ಕಿನ ವಾಸನೆಯನ್ನು ಗ್ರಹಿಸುವ ಇಲಿಯ ಮಿದುಳಿನ ಭಾಗವನ್ನು ಕೆಡಿಸುತ್ತವೆ. ಇಂತಹ ರೋಗಿಷ್ಠ ಇಲಿಗಳನ್ನು ಬೆಕ್ಕು ಸುಲಭವಾಗಿ ಹಿಡಿಯಬಲ್ಲವು. ಟೊಕ್ಸೊಪ್ಲಾಸ್ಮ ಗೊಂಡಿ ಇಷ್ಟಕ್ಕೇ ತೃಪ್ತಿಗೊಳ್ಳುವುದಿಲ್ಲ. ಮುಂದಿನ ಹೆಜ್ಜೆಯಾಗಿ ಅದು ಇಲಿಗಳ ಮಿದುಳನ್ನು ಮತ್ತಷ್ಟು ಮಾರ್ಪಡಿಸಿ, ಬೆಕ್ಕಿನ ವಾಸನೆಗೆ ಇಲಿ ಖುದ್ದು ಆಕರ್ಷಿತವಾಗುವಂತೆ ಪರಿವರ್ತಿಸುತ್ತದೆ. ಅಂತೆಯೇ, ಇಲಿಗಳ ಮಿದುಳಿನಲ್ಲಿ ಬೆಕ್ಕಿನ ಭಯವನ್ನು ಇಲ್ಲದಂತಾಗಿಸುತ್ತವೆ. ಇದರಿಂದ ಇಲಿಗೆ “ಬೆಕ್ಕು ತನ್ನ ಶತ್ರು” ಎನ್ನುವ ಭಾವ ನಾಶವಾಗಿ, ಅದು ಸೀದಾ ಬೆಕ್ಕಿನೆಡೆಗೆ ಧಾವಿಸಿ, ಆಹಾರವಾಗುತ್ತದೆ. ಹೀಗೆ ಯಃಕಶ್ಚಿತ್ ಏಕಾಣು ಪರೋಪಜೀವಿಯೊಂದು ತನಗಿಂತಲೂ ಕೋಟಿ ಪಟ್ಟು ದೊಡ್ಡದಾದ ಜೀವಿಯೊಂದರ ಮಿದುಳನ್ನು ತನ್ನ ನಿಯಂತ್ರಣಕ್ಕೆ ಪಡೆದು, ಅದನ್ನು ಬಲಿಪೀಠಕ್ಕೆ ಹತ್ತಿಸಿ, ತನ್ನ ಸಂತಾನವನ್ನು ಹೆಚ್ಚಿಸಿಕೊಳ್ಳುತ್ತದೆ!

ಈ ಇಡೀ ಪ್ರಕ್ರಿಯೆಯಲ್ಲಿ ವಿಜ್ಞಾನಿಗಳನ್ನು ಸೋಜಿಗಕ್ಕೆ ಕೆಡವಿದ್ದು “ಮಿದುಳು ಉತ್ತಮಾಂಗ” ಎನ್ನುವ ಅವರ ತರ್ಕ ನಾಶವಾದದ್ದು. ಸಮಗ್ರ ದೇಹವನ್ನು ತನ್ನ ರಕ್ಷಣೆಗೆ ಬಳಸಿಕೊಳ್ಳುತ್ತದೆ ಎಂದು ನಂಬಲಾಗಿದ್ದ ಮಿದುಳು, ಕಡೆಗೆ ಯಾವುದೋ ಇತರ ಪ್ರಭಾವದಿಂದ ದೇಹದೊಡನೆ ತನ್ನನ್ನೂ ಬಲಿಯಾಗಿಸಿದ್ದು. ವಿಕಾಸದ ಹಾದಿಯಲ್ಲಿ ತನಗಿಂತ ಲಕ್ಷಾಂತರ ವರ್ಷಗಳ ನಂತರ ಬಂದ, ತನಗಿಂತ ಕೋಟಿ ಪಟ್ಟು ದೊಡ್ಡದಾದ ಇಲಿಯನ್ನು ಸ್ವಂತ ಅಸ್ತಿತ್ವವಿಲ್ಲದ, ಬೇರಾವುದೋ ಪ್ರಾಣಿಯನ್ನು ಅವಲಂಬಿಸಿ ಬದುಕುವ ಟೊಕ್ಸೊಪ್ಲಾಸ್ಮ ಗೊಂಡಿ ಎಂಬ ಏಕಾಣು ಪರೋಪಜೀವಿ ತನಗೆ ಬೇಕಾದಂತೆ ಬಳಸಿಕೊಂಡು ಅದನ್ನು ಹತ್ಯೆ ಮಾಡಿದ್ದು. ಹೀಗೆ ಇಲಿಯ ಮಿದುಳನ್ನು ಬಳಸಿಕೊಂಡದ್ದು ಟೊಕ್ಸೊಪ್ಲಾಸ್ಮ ಗೊಂಡಿಯ ಸಂತಾನಕ್ರಿಯೆ ನಡೆಯುವಂತಾಗಿ, ಅದರ ಸಂಖ್ಯೆ ಬೆಳೆಯಲು. ಹಾಗಾದರೆ, ಸಂಖ್ಯೆ ಬೆಳೆಯುವುದು ಮಿದುಳಿನ ಪ್ರಭಾವಕ್ಕಿಂತಲೂ ಮಹತ್ವದ್ದು ಎಂದಾಯಿತು. ಮಿದುಳಿಗಾಗಿಯೇ ದೇಹವಿದೆ ಎನ್ನುವ ತತ್ತ್ವ ಪ್ರಶ್ನಾರ್ಹವಾಯಿತು. ಜೀವಿಯ ಸಂಖ್ಯೆ ಬೆಳೆಸಲು ಮಿದುಳು ನೆರವಾಗುತ್ತದೆ ಎನ್ನುವ ಮಾತು ಹೆಚ್ಚು ಸಮಂಜಸ. ಆದರೆ ಜೀವಿಯ ಸಂಖ್ಯೆ ಬೆಳೆಯುವುದು ಎಂದರೇನು? ಸಂಖ್ಯೆ ಬೆಳೆಯುವುದರ ಮೂಲಕ ಮುಖ್ಯವಾಗಿ ಏನು ಬೆಳೆಯುತ್ತಿದೆ?

ಈ ಪ್ರಶ್ನೆಯನ್ನು ಉತ್ತರಿಸುವ ಮುನ್ನ ಒಂದು ದೃಷ್ಟಿ ಜೀವವಿಕಾಸದೆಡೆಗೆ ಹರಿಸೋಣ. ಜೀವ ಸೃಷ್ಟಿಯಾದದ್ದು ಏಕಕೋಶ ಜೀವಿಗಳಿಂದ. ಇದು ಬಹುಕೋಶ ಜೀವಿಯಾಗಿ ವಿಕಾಸವಾಗಲು ಲಕ್ಷಾಂತರ ವರ್ಷಗಳು ಹಿಡಿದವು. ಮಿದುಳು ಅಂತಿರಲಿ; ನರಕೋಶಗಳು ಕೂಡ ಇಲ್ಲದಿದ್ದ ಏಕಕೋಶ ಜೀವಿಗಳು ಒಂದಾನೊಂದು ಕಾಲದಲ್ಲಿ ಭೂಮಿಯನ್ನು ವ್ಯಾಪಿಸಿದ್ದವು. ಇಂದಿಗೂ ಅವುಗಳ ಅಸ್ತಿತ್ವ ನಿರ್ಬಾಧಿತವಾಗಿ ಉಳಿದಿದೆ. ಅವುಗಳ ಒಂದು ಕೋಶ ವಿದಳನವಾಗಿ ಎರಡಾಗುತ್ತದೆ. ಅಲ್ಲಿಗೆ ಒಂದು ಹಳೆಯ ಏಕಕೋಶ ಜೀವಿಯ ಸ್ಥಾನದಲ್ಲಿ ಎರಡು ಹೊಸ ಏಕಕೋಶ ಜೀವಿಗಳ ಉಗಮವಾಯಿತು. ಸಾವಿನ ಜೊತೆಗೆ ಹೊಸ ಹುಟ್ಟನ್ನು ಕಂಡುಕೊಳ್ಳುತ್ತಾ ಸಂಖ್ಯೆಯಲ್ಲಿ ವೃದ್ಧಿಸುವ ಪ್ರಕ್ರಿಯೆ ಇದು. ಈ ಪ್ರಕ್ರಿಯೆಯ ಸೂತ್ರಧಾರಿ ಜೀನ್ಗಳು. ಜೀನ್ ರಚನೆ ಆಗಿರುವುದು ಆರ್.ಎನ್.ಎ. ಮತ್ತು ಡಿ.ಎನ್.ಎ. ಎನ್ನುವ ರಾಸಾಯನಿಕಗಳಿಂದ. ಹೊಸದಾಗಿ ಹುಟ್ಟಿದ ಕೋಶ ಏನು ಮಾಡಬೇಕು, ಹೇಗೆ ಬೆಳೆಯಬೇಕು, ಯಾವ ಹಂತದಲ್ಲಿ ವಿದಳನವಾಗಬೇಕು ಎನ್ನುವ ಸಮಗ್ರ ಮಾಹಿತಿ ಇರುವುದು ಜೀನ್ ಗಳಲ್ಲಿ. ಸಂತಾನ ಪ್ರಕ್ರಿಯೆಯ ಮೂಲಕ ವೃದ್ಧಿಸುವುದು ಈ ಜೀನ್ಗಳು. ಒಟ್ಟಾರೆ, ತನ್ನ ಸಂತಾನವನ್ನು ಬೆಳೆಸಬಲ್ಲ ಯಾವುದೇ ಜೀವಕೋಶದ ಆದಿ-ಅಂತ್ಯವನ್ನು ನಿರ್ಧರಿಸುವುದು ಅದರೊಳಗೆ ಅಡಕವಾಗಿರುವ ಜೀನ್ಗಳು. ಜೀನ್ ಇಲ್ಲದ ಕೋಶಗಳೂ ಅಸ್ತಿತ್ವದಲ್ಲಿವೆ. ನಮ್ಮ ರಕ್ತದಲ್ಲಿನ ಕೆಂಪು ರಕ್ತಕಣಗಳಲ್ಲಿ ಯಾವುದೇ ಜೀನ್ ಇಲ್ಲ. ಹಾಗಾಗಿ, ಅವುಗಳು ವಿದಳನವಾಗುವುದಿಲ್ಲ. ಆದರೆ, ಕೆಂಪು ರಕ್ತಕಣಗಳ ಹುಟ್ಟಿಗೆ ಕಾರಣವಾಗುವ ಕೋಶಗಳಲ್ಲಿ ಜೀನ್ಗಳಿವೆ. ಒಮ್ಮೆ ಜೀನ್ಗಳನ್ನು ಕಳೆದುಕೊಂಡ ನಂತರ ಕೆಂಪು ರಕ್ತಕಣಗಳ ಚಲನೆಯನ್ನು, ಅಂತ್ಯವನ್ನು ಬೇರೆ ಅಂಗಗಳು ನಿರ್ಧರಿಸುತ್ತವೆ. ಹೀಗಾಗಿ, ಜೀನ್ ಇಲ್ಲದ ಕೋಶಗಳದ್ದು ಪರೋಕ್ಷ ಅಸ್ತಿತ್ವ ಮಾತ್ರ; ಸಾಯುವ ಸ್ವಾತಂತ್ರ್ಯವೂ ಅವಕ್ಕಿಲ್ಲ! ಅಂದರೆ ಕೋಶವೊಂದರ ಜೀವನ್ಮರಣವನ್ನು ನಿರ್ಧರಿಸುವುದು ಜೀನ್ಗಳು ಮತ್ತು ಅವುಗಳು ರಚನೆಯಾಗಿರುವ ಆರ್.ಎನ್.ಎ. ಮತ್ತು ಡಿ.ಎನ್.ಎ. ಎನ್ನುವ ರಾಸಾಯನಿಕಗಳು. 

ಏಕಕೋಶ ಜೀವಿಗಳು ಬಹುಕೋಶ ಜೀವಿಗಳಾಗಿ ವಿಕಾಸ ಹೊಂದಿದಾಗ ಕೆಲವು ಬದಲಾವಣೆಗಳಾದವು. ಹಲವಾರು ಜೀವಕೋಶಗಳು ಒಗ್ಗೂಡಿದರೂ ಅವುಗಳು ಏಕಸೂತ್ರದಲ್ಲಿ ಕೆಲಸ ಮಾಡಬೇಕಷ್ಟೇ? ಹೀಗಾಗಿ, ಇವುಗಳ ಪೈಕಿ ಕೆಲವು ಜೀವಕೋಶಗಳ ಸಣ್ಣ ಗುಂಪು ಒಂದು ನಿಯಮಿತ ಕಾರ್ಯಕ್ಕೆ ಸೀಮಿತವಾಯಿತು. ಇಂತಹ ಹಲವಾರು ಗುಂಪುಗಳು ತಂತಮ್ಮ ಕೆಲಸಗಳನ್ನು ಮಾಡುತ್ತಾ ಬಹುಕೋಶ ಜೀವಿಯ ಸರಾಗ ಕಾರ್ಯ ನಿರ್ವಹಣೆಗೆ ನೆರವಾದವು. ಇದೊಂದು ರೀತಿ ಓರ್ವ ವ್ಯಕ್ತಿ ಆರಂಭಿಸಿ, ನಿರ್ವಹಿಸುತ್ತಿದ್ದ ಸಣ್ಣ ಅಂಗಡಿಯೊಂದು ಬೆಳೆದು ವಹಿವಾಟು ಅಧಿಕವಾದಾಗ ಕೆಲಸವನ್ನು ಹಂಚಿಕೊಳ್ಳಲು ಹೆಚ್ಚಿನ ಜನರ ಅಗತ್ಯ ಬಿದ್ದಂತೆ. ಬಹುಕೋಶ ಜೀವಿಗಳ ವಿಕಾಸ ಪ್ರಕ್ರಿಯೆ ಮುಂದುವರೆದು ಪ್ರತಿಯೊಂದು ಕೋಶಗಳ ಗುಂಪೂ ಒಂದೊಂದು ಅಂಗವಾಗಿ ಬದಲಾಯಿತು. ಒಂದು ರೀತಿಯಲ್ಲಿ ಅಂಗಡಿಯ ವಹಿವಾಟು ಹೆಚ್ಚಾಗಿ ಅದರ ನಾಲ್ಕೈದು ಶಾಖೆಗಳು ವಿವಿಧೆಡೆ ಆರಂಭವಾದಂತೆ. ಬಹುಕೋಶ ಜೀವಿಗಳಲ್ಲಿನ ಅಂಗಗಳ ಸಂಕೀರ್ಣತೆ ಹೆಚ್ಚುತ್ತಾ ಬಂದಂತೆ ಅವುಗಳ ಪರಸ್ಪರ ಸಹಕಾರವನ್ನು ಮೇಲ್ವಿಚಾರಣೆ ಮಾಡಬಲ್ಲ ನಿಯಂತ್ರಕ ಅಂಗವೊಂದರ ಅಗತ್ಯ ಕಂಡು ಬಂದಿತು. ಈ ಅಂಗವೇ ಮಿದುಳು. ಹೋಲಿಕೆಯಲ್ಲಿ ಹೇಳುವುದಾದರೆ, ಅಂಗಡಿಯ ಶಾಖೆಗಳು ಸೂಪರ್ ಮಾರ್ಕೆಟ್ಟುಗಳಾಗಿ ಬದಲಾಗಿ, ಹಲವಾರು ನಗರಗಳಲ್ಲಿ ವ್ಯಾಪಿಸಿದಾಗ ಅವುಗಳ ಸಮಗ್ರ ನಿರ್ವಹಣೆಗೆ ಒಂದೆಡೆ ಕೇಂದ್ರ ಕಛೇರಿ ತೆರೆಯುವಂತೆ. ಅಂದರೆ, ಮಿದುಳು ಎನ್ನುವುದು ವ್ಯವಸ್ಥೆಯ ಮೇಲ್ವಿಚಾರಕನೇ ಹೊರತು ಮಾಲೀಕನಲ್ಲ. ಹೊರನೋಟಕ್ಕೆ ನೋಡುವವರಿಗೆ ಈ ಮೇಲ್ವಿಚಾರಕ ಇಡೀ ವ್ಯವಸ್ಥೆಯ ಹತೋಟಿಯನ್ನು ತನ್ನ ಹಿಡಿತದಲ್ಲಿ ಇಟ್ಟಿದ್ದಾನೆ ಎನ್ನಿಸುತ್ತದೆ. ಆತ ದಿನನಿತ್ಯದ ವ್ಯವಹಾರಗಳ ಮೇಲೆ ತನ್ನ ತೀರ್ಮಾನ ನೀಡುವಾಗ ಆತನೇ ಮಾಲೀಕ ಎನಿಸಿದರೂ ಅಚ್ಚರಿಯಲ್ಲ. ಆದರೆ, ಅದು ನೋಡುಗರ ತಪ್ಪು ಗ್ರಹಿಕೆ ಮಾತ್ರ. ಕಣ್ಣಿಗೆ ಕಾಣದ ಮಾಲೀಕ ವ್ಯವಸ್ಥೆಯ ಪ್ರತಿಯೊಂದು ಅಂಶದಲ್ಲೂ ಅಂತರ್ಗತನಾಗಿರುತ್ತಾನೆ. ಹೀಗೆಯೇ, ಮೇಲ್ನೋಟಕ್ಕೆ ಮಿದುಳಿನ ಸಾರ್ವಭೌಮತ್ವ ಗಣನೀಯವೆನಿಸಿದರೂ, ಇಡೀ ಶರೀರವನ್ನು ನಿಯಂತ್ರಿಸುವುದು ಜೀನ್ಗಳು ಮತ್ತು ಅವುಗಳು ರಚನೆಯಾಗಿರುವ ಆರ್.ಎನ್.ಎ. ಮತ್ತು ಡಿ.ಎನ್.ಎ. ಎನ್ನುವ ರಾಸಾಯನಿಕಗಳು. 

ಯಾರು ನಿಯಂತ್ರಿಸಿದರೆ ಏನು? ಒಟ್ಟಿನಲ್ಲಿ ಇಡೀ ವ್ಯವಸ್ಥೆ ನಿರಾತಂಕವಾಗಿ ಕೆಲಸ ಮಾಡಬೇಕು? ಅದು ಜೀನ್ ಆದರೇನು ಅಥವಾ ಮಿದುಳಾದರೇನು? ಈ ಗ್ರಹಿಕೆ ಕೆಲಸ ಸರಿಯಾಗಿ ನಡೆಯುತ್ತಾ ಇರುವವರೆಗೆ ಸರಿ. ಆದರೆ, ವ್ಯವಸ್ಥೆ ಕೆಟ್ಟಾಗ, ವ್ಯವಸ್ಥೆಯಲ್ಲಿ ಉನ್ನತಿ ಆಗಬೇಕಾದಾಗ, ಆಮೂಲಾಗ್ರ ಬದಲಾವಣೆಗಳ ಅಗತ್ಯ ಕಂಡುಬಂದಾಗ ಅಂತಿಮ ನಿರ್ಧಾರ ಯಾರದ್ದು ಎನ್ನುವ ಬಗ್ಗೆ ಜಿಜ್ಞಾಸೆ ಮೂಡುತ್ತದೆ. ಹೀಗಾಗಿ, ಯಾವುದೇ ವ್ಯವಸ್ಥೆಯ ಮಾಲೀಕತ್ವದ ಪರಿಕಲ್ಪನೆ ಸ್ಪಷ್ಟವಾಗಿರಬೇಕು. ಭವಿಷ್ಯದ ಔಷಧಗಳ ತಯಾರಿಕೆಯಲ್ಲಾಗಲೀ, ಸದ್ಯಕ್ಕೆ ಚಿಕಿತ್ಸೆ ತಿಳಿದಿಲ್ಲದ ಕಾಯಿಲೆಗಳನ್ನು ಗುಣಪಡಿಸುವ ನಿಟ್ಟಿನಲ್ಲಾಗಲೀ, ಅಂಗಗಳ ಕಸಿ ಮಾಡುವ ಪ್ರಕ್ರಿಯೆಯಲ್ಲಾಗಲೀ, ನಿರ್ವಹಣೆಯ ಮಟ್ಟದಲ್ಲಿ ಸೂಕ್ಷ್ಮ ಬದಲಾವಣೆಗಳನ್ನು ನಿರ್ಧರಿಸುವುದರಲ್ಲಾಗಲೀ, ಅಥವಾ ಬೇರ್ಯಾವುದೇ ಕ್ರಾಂತಿಕಾರಕ ಎನ್ನಬಹುದಾದ ಮಾರ್ಪಾಡುಗಳಲ್ಲಾಗಲೀ ವಿಜ್ಞಾನಿಗಳು ಕೇವಲ ಮಿದುಳಿನ ಮೊರೆ ಹೋಗಲಾಗದು. ಅದನ್ನು ಜೀನ್ ಮಟ್ಟದಲ್ಲಿ ನಿರ್ವಹಿಸಬೇಕು.

ಒಟ್ಟಿನಲ್ಲಿ, ನಮ್ಮ ಶರೀರವನ್ನು ನಿಯಂತ್ರಿಸುವುದು ಯಾರು ಎಂಬ ಪ್ರಶ್ನೆಗೆ ಉತ್ತರ ದೊರೆತಂತಾಯಿತು!

---------------------------

ವಿಸ್ತಾರ ಜಾಲತಾಣದಲ್ಲಿ ಪ್ರಕಟವಾಗುತ್ತಿರುವ ನನ್ನ ಮಾಸಿಕ #ವೈದ್ಯ_ದರ್ಪಣ ಅಂಕಣದ ಜನವರಿ 2023 ರ ಸಂಚಿಕೆ. https://vistaranews.com/attribute-210588/2023/01/18/vaidya-darpana-column-on-science-who-controls-our-body/

 ಮಕ್ಕಳಿಗೆ ವ್ಯಾಯಾಮ – ಎಷ್ಟು? ಹೇಗೆ?

ಡಾ. ಕಿರಣ್ ವಿ.ಎಸ್.

ವೈದ್ಯರು

ಕೆಲದಶಕಗಳ ಹಿಂದೆ “ಮಕ್ಕಳಿಗೆ ವ್ಯಾಯಾಮ” ಎಂದರೆ ಅಚ್ಚರಿ ಪಡಬೇಕಿತ್ತು. ಶಾಲೆ ಮುಗಿಸಿ, ಎಷ್ಟೋ ಅಷ್ಟು ಹೋಂವರ್ಕ್ ಮಾಡಿ, ಆಟಕ್ಕೆಂದು ಇಳಿದರೆ ಮತ್ತೆ ಊಟದ ವೇಳೆಗೆ ಮನೆಗೆ ಬನ್ನಿರೆಂದು ಹಿರಿಯರು ಗೋಗರೆಯಬೇಕಿತ್ತು. ಇನ್ನು ಭಾನುವಾರಗಳು, ರಜೆಯ ದಿನಗಳು ಕೇಳುವುದೇ ಬೇಡ. ಹೀಗಿರುವಾಗ ಮಕ್ಕಳ ವಿಶ್ರಾಂತಿಯ ಬಗ್ಗೆ ಹಿರಿಯರು ಆಲೋಚಿಸಬೇಕಿತ್ತೇ ಹೊರತು, ವ್ಯಾಯಮದ ಬಗ್ಗೆ ಅಲ್ಲ. ಆದರೆ ಈಗ ನಗರಗಳ ಪರಿಸ್ಥಿತಿ ಬದಲಾಗಿದೆ. ಮಕ್ಕಳಿಗೆ ಆಡಲು ಸುರಕ್ಷಿತ ತಾಣಗಳು ಕಡಿಮೆಯಾಗಿವೆ. ಸಂಚಾರ ದಟ್ಟಣೆಯ ಕಾರಣದಿಂದ ಮಕ್ಕಳು ಶಾಲೆಯಿಂದ ಮನೆಗೆ ಬರುವುದು ತಡವಾಗುತ್ತಿದೆ. ಅದರ ಮೇಲೆ ಓದಿನ ಒತ್ತಡ, ಶಾಲೆಯಲ್ಲಿ ನೀಡುವ ಪ್ರಾಜೆಕ್ಟ್ಗಳು, ಮನೆಪಾಠ, ಪಠ್ಯೇತರ ಚಟುವಟಿಕೆಗಳು ಮೊದಲಾದುವು ಮಕ್ಕಳ ದೈಹಿಕ ಆಟದ ಸಮಯವನ್ನು ನುಂಗಿಹಾಕುತ್ತಿವೆ. ಇದರ ಸ್ಥಾನವನ್ನು ದೂರದರ್ಶನಗಳು, ಕಂಪ್ಯೂಟರ್ ಆಟಗಳು, ಮೊಬೈಲ್ ಫೋನುಗಳು ಆಕ್ರಮಿಸಿವೆ. ಒಟ್ಟಿನಲ್ಲಿ ಆಟಗಳ ಮೂಲಕ ಹಿಂದೆ ಅನಾಯಾಸವಾಗಿ ಸಿಗುತ್ತಿದ್ದ ದೈಹಿಕ ವ್ಯಾಯಾಮ ಪ್ರಸ್ತುತ ಪೀಳಿಗೆಯ ಮಕ್ಕಳಿಗೆ ಸುಲಭವಾಗಿ ದಕ್ಕುತ್ತಿಲ್ಲ. ಪರಿಣಾಮವಾಗಿ ಮಕ್ಕಳಲ್ಲಿ ಬೊಜ್ಜು ಮತ್ತು ಅದರ ಸಂಬಂಧಿ ಕಾಯಿಲೆಗಳು ಏರುತ್ತಿವೆ.

ಮಕ್ಕಳ ದೈಹಿಕ ಬೆಳವಣಿಗೆಯಲ್ಲಿ ಶರೀರ ಚಟುವಟಿಕೆಯಿಂದ ಇರುವುದು ಅತ್ಯಗತ್ಯ. ಮೂಳೆಗಳ ವಿಕಾಸಕ್ಕೆ, ಸ್ನಾಯುಗಳ ಬಲವರ್ಧನೆಗೆ, ಚರ್ಮದ ಆರೋಗ್ಯಕ್ಕೆ, ತಾರ್ಕಿಕ ಶಕ್ತಿಯ ಅಭಿವೃದ್ಧಿಗೆ, ಕಲ್ಪನೆ ಅರಳುವುದಕ್ಕೆ ಮಕ್ಕಳು ಆಟಗಳಂತಹ ದೈಹಿಕ ಕ್ರಿಯೆಗಳಲ್ಲಿ ಪಾಲುಗೊಳ್ಳಬೇಕು. ಮೂರರಿಂದ ಐದು ವರ್ಷಗಳ ವಯಸ್ಸಿನ ಮಕ್ಕಳು ಎಚ್ಚರವಾಗಿರುವಾಗ ಯಾವುದೋ ಒಂದು ಭೌತಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿರಬೇಕು. ಆಟ, ಕುಣಿತ, ಪಲ್ಟಿ ಹೊಡೆಯುವುದು, ಏನನ್ನಾದರೂ ಹತ್ತಿ ಇಳಿಯುವುದು ಮೊದಲಾದ ಚಟುವಟಿಕೆಗಳು ಮಕ್ಕಳ ದೈಹಿಕ ಮತ್ತು ಮಾನಸಿಕ ವಿಕಾಸಕ್ಕೆ ರಹದಾರಿ. ದಿನವಿಡೀ ಚಟುವಟಿಕೆಯಿಂದ ಇರುವ ಮಕ್ಕಳು ರಾತ್ರಿ ಚೆನ್ನಾಗಿ ನಿದ್ರಿಸುತ್ತಾರೆ. ಇದು ಅವರ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮವನ್ನು ಬೀರುತ್ತದೆ.

ಐದು ವರ್ಷಗಳ ವಯಸ್ಸಿನ ನಂತರ 17 ವರ್ಷಗಳ ವಯಸ್ಸಿನವರೆಗೆ ಮಕ್ಕಳು ಪ್ರತಿದಿನ ಕನಿಷ್ಠ ಒಂದು ಗಂಟೆಯ ಕಾಲ ದೈಹಿಕ ವ್ಯಾಯಾಮ ಮಾಡಬೇಕು. ಇದರಲ್ಲಿ ವಾರಕ್ಕೆ ಕನಿಷ್ಠ ಮೂರು ದಿನ ಹೃದಯದ ಬಡಿತವನ್ನು ಹೆಚ್ಚಿಸುವ, ಉಸಿರಾಟದ ವೇಗವನ್ನು ಮತ್ತು ಆಳವನ್ನು ಅಧಿಕಗೊಳಿಸುವ ವೇಗದ ನಡಿಗೆ ಅಥವಾ ಓಟದಂತಹ ವ್ಯಾಯಾಮಗಳು ಇರಬೇಕು. ಇದರ ಜೊತೆಗೆ ವಾರಕ್ಕೆ ಮೂರು ದಿನ ಮೂಳೆ ಮತ್ತು ಸ್ನಾಯುಗಳ ಬಲವನ್ನು ವೃದ್ಧಿಸುವ ಜಿಗಿತ ಮತ್ತು ಮಾಂಸಖಂಡಗಳ ಮೇಲೆ ಒತ್ತಡ ಹಾಕುವಂತಹ ಚಟುವಟಿಕೆಗಳು ಇರಬೇಕು. ಈ ರೀತಿಯ ವ್ಯಾಯಾಮಗಳನ್ನು ಆಯಾ ವಯಸ್ಸಿಗೆ ತಕ್ಕ ರೀತಿಯಲ್ಲಿ ಮಾಡಬಹುದು. ಪ್ರೌಢಶಾಲೆಯ ಮಕ್ಕಳು ಪ್ರತಿದಿನ ತಮ್ಮ ಶಾಲೆಯ ಚೀಲವನ್ನು ಹೊತ್ತು ಒಂದು ಕಿಲೋಮೀಟರ್ ದೂರದ ಶಾಲೆಗೆ ಹೋಗಿ-ಬರುವ ನಡಿಗೆ ಅವರ ಅಂದಿನ ವ್ಯಾಯಾಮದ ಬಹುತೇಕ ಅಗತ್ಯವನ್ನು ಪೂರ್ಣಗೊಳಿಸುತ್ತದೆ. ಇದರ ಜೊತೆಗೆ ಶಾಲೆಯಲ್ಲಿ ನಡೆಯುವ ಭೌತಿಕ ಚಟುವಟಿಕೆಯ ತರಗತಿಗಳು ಪೂರಕವಾಗುತ್ತವೆ.

ಮಕ್ಕಳ ವ್ಯಾಯಾಮ ಹಲವಾರು ಬಗೆಯದ್ದಾಗಿರಬಹುದು. ಕಾಲ್ಚೆಂಡಿನಾಟದ ತರಬೇತಿ, ಈಜು, ಹಗ್ಗಜಿಗಿತ, ನೃತ್ಯ, ಸ್ಕೇಟಿಂಗ್, ಬೈಸಿಕಲ್ ಸವಾರಿ ಮೊದಲಾದುವು ಅವರ ವ್ಯಾಯಾಮದ ಅಗತ್ಯವನ್ನು ಪೂರೈಸುತ್ತವೆ. ಈ ಬಗ್ಗೆ ಆಸಕ್ತಿಯಿಲ್ಲದ ಮಕ್ಕಳಿಗೆ ದೈನಂದಿನ ಕ್ರಿಯೆಗಳಲ್ಲಿಯೇ ಭೌತಿಕ ಚಟುವಟಿಕೆಗಳನ್ನು ಒಗ್ಗೂಡಿಸಬೇಕಾಗುತ್ತದೆ. ಉದಾಹರಣೆಗೆ ಕಲೆಯಲ್ಲಿ ಉತ್ಸುಕರಾದ ಮಕ್ಕಳಿಗೆ ನಿಸರ್ಗದ ಉದಾಹರಣೆಗಳನ್ನು ತೋರಲು ಮನೆಯಿಂದ ಅನತಿ ದೂರದಲ್ಲಿರುವ ತಾಣಗಳನ್ನು ಭೇಟಿ ನೀಡುವಂತೆ ಉತ್ತೇಜಿಸಬಹುದು. ಪುಸ್ತಕ ಓದುವುದರಲ್ಲಿ ಮೈಮರೆಯುವ ಮಕ್ಕಳಿಗೆ ಮನೆಗೆ ಸ್ವಲ್ಪ ದೂರದಲ್ಲಿರುವ ಗ್ರಂಥಾಲಯಕ್ಕೆ ಚಂದಾದಾರರನ್ನಾಗಿಸಿ, ಪುಸ್ತಕ ಬದಲಾಯಿಸುವಾಗ ಅಲ್ಲಿಗೆ ನಡಿಗೆಯಲ್ಲೋ, ಬೈಸಿಕಲ್ ಬಳಸಿಯೋ ಹೋಗಿಬರುವಂತೆ ಪ್ರೇರೇಪಿಸಬಹುದು. ಗಿಡಗಳ ಮೇಲೆ ಪ್ರೀತಿ ಇರುವ ಮಕ್ಕಳಿಗೆ ಮನೆಯಂಗಳದಲ್ಲಿನ ಗಿಡಗಳ ಜವಾಬ್ದಾರಿ ನೀಡಬಹುದು; ಇಲ್ಲವೇ ಸಮೀಪದ ಉದ್ಯಾನಗಳಲ್ಲಿ ಇರುವ ಗಿಡ-ಮರಗಳ ಬಗ್ಗೆ ಹೆಚ್ಚು ಅರಿಯಲು ತೊಡಗಿಸಬಹುದು. ನರ್ತನದ ಬಗ್ಗೆ ಆಸಕ್ತಿ ಇರುವ ಮಕ್ಕಳಿಗೆ ದಿನವೂ ಯಾವುದಾದರೂ ಸಂಗೀತಕ್ಕೆ ಕುಣಿಯುವಂತಹ ಸಲಹೆ ನೀಡಬಹುದು. ಒಟ್ಟಿನಲ್ಲಿ, ವ್ಯಾಯಾಮದಲ್ಲಿ ಅನಾಸಕ್ತರಾದ ಮಕ್ಕಳಿಗೆ ಅವರವರ ಇತರ ಆಸಕ್ತಿಗಳಿಗೆ ತಕ್ಕಂತೆ ದೈಹಿಕ ಚಟುವಟಿಕೆಗಳನ್ನು ಜಾಣ್ಮೆಯಿಂದ ವಿನ್ಯಾಸ ಮಾಡಲು ಸಾಧ್ಯ.

ಹಿರಿಯರ ಉದಾಹರಣೆಗಿಂತಲೂ ಹೆಚ್ಚಿನ ಉತ್ತೇಜನವನ್ನು ಮಕ್ಕಳಿಗೆ ನೀಡಲು ಸಾಧ್ಯವಿಲ್ಲ. ಮಕ್ಕಳು ಲವಲವಿಕೆಯಿಂದ ಇರಬೇಕೆಂದು ಬಯಸುವ ಹಿರಿಯರು ಮೊದಲು ತಾವೇ ಒಂದು ಉದಾಹರಣೆಯಾಗಿ ನಿಲ್ಲಬೇಕಾಗುತ್ತದೆ. ಮುಂಜಾನೆಯೋ, ಸಂಜೆಯೋ ಮಕ್ಕಳ ಜೊತೆಯಲ್ಲಿ ಓಡಾಟಕ್ಕೆ ಹೋಗಿಬರುವುದು, ಮನೆಯನ್ನು ಶುಚಿಗೊಳಿಸುವ ಪ್ರಕ್ರಿಯೆಯಲ್ಲಿ ಎಲ್ಲರೂ ತೊಡಗಿಕೊಳ್ಳುವುದು, ಸಣ್ಣ-ಪುಟ್ಟ ದುರಸ್ತಿ ಕಾರ್ಯಗಳನ್ನು ಮಾಡುವುದು, ಮನೆಯ ಅಂಗಳದಲ್ಲೋ, ಹಿತ್ತಲಿನಲ್ಲೋ ಸಣ್ಣ ತೋಟವನ್ನು ನಿರ್ಮಿಸುವುದು ಮೊದಲಾದುವು ಮಕ್ಕಳಲ್ಲಿ ದೈಹಿಕ ಚಟುವಟಿಕೆಯ ಬಗ್ಗೆ ಶಿಸ್ತನ್ನು ಬೆಳೆಸುವುದಲ್ಲದೆ, ಹಿರಿಯರ ಬಗೆಗಿನ ಪ್ರೀತಿ, ಆದರಗಳನ್ನು ಹಿಗ್ಗಿಸಬಲ್ಲವು.

ವಸತಿ ಸಮುಚ್ಚಯಗಳಂತಹ ಸಮುದಾಯದಲ್ಲಿ ಒಟ್ಟಾಗಿ ವಾಸಿಸುವ ಕುಟುಂಬಗಳಲ್ಲಿ ಹಲವಾರು ಮಕ್ಕಳ ಗುಂಪು ಇರಬಲ್ಲದು. ಇಂತಹ ಗುಂಪುಗಳಲ್ಲಿ ಮಕ್ಕಳು ಕೂಡಿ ಆಡಬಹುದಾದ ಆಟಗಳನ್ನು ವಿನ್ಯಾಸಗೊಳಿಸುವುದು ಸುಲಭ. ಮಕ್ಕಳು ಬೆಳೆದಂತೆಲ್ಲಾ ನಿಯಮಿತ ವೇಳೆಯಲ್ಲಿ ಮಾಡಬಲ್ಲ ಯೋಗಾಸನದಂತಹ ಚಟುವಟಿಕೆಗಳನ್ನು ನಿಯೋಜಿಸಬಹುದು. ಮಗುವೊಂದು ಒಂಟಿಯಾಗಿ ಮಾಡುವ ಚಟುವಟಿಕೆಗಿಂತಲೂ ಗುಂಪಿನಲ್ಲಿ ಕಲಿಯುವ ಅವಕಾಶಗಳು ಅಧಿಕವಾಗಿರುತ್ತವೆ. ಜೊತೆಗೆ ಇದರ ಪರೋಕ್ಷ ಲಾಭಗಳೂ ಹೆಚ್ಚು. ಸಮುಚ್ಚಯದ ಯಾರಾದರೂ ಹಿರಿಯರು ಆಸಕ್ತಿ ವಹಿಸಿ ಮಕ್ಕಳನ್ನು ಇಂತಹ ಚಟುವಟಿಕೆಗಳಲ್ಲಿ ತೊಡಗಿಸಿದರೆ ಅದಕ್ಕಿಂತ ಹೆಚ್ಚಿನ ಸಮಾಜಸೇವೆ ಇರಲಿಕ್ಕಿಲ್ಲ.

ಮಕ್ಕಳಲ್ಲಿ ಭೌತಿಕ ಚಟುವಟಿಕೆ ಅವರ ಜೀವನಶೈಲಿಯ ಅವಿಭಾಜ್ಯ ಅಂಗವಾಗಿರಬೇಕು. ಆಧುನಿಕ ಜಗತ್ತಿನ ಧಾವಂತದಲ್ಲಿ ನಾವು ಮಕ್ಕಳ ಹಲವಾರು ಅಗತ್ಯಗಳನ್ನು ಪೂರೈಸಲಾಗುತ್ತಿಲ್ಲ. ಅಂತಹ ಪಟ್ಟಿಯಲ್ಲಿ ದೈಹಿಕ ವ್ಯಾಯಾಮ ಇರಬಾರದು. ಜಾಣ್ಮೆಯ ಆಲೋಚನೆಗೆ ಅವಕಾಶ ನೀಡಿದರೆ ಇದನ್ನು ಹಲವಾರು ಕ್ರಿಯಾತ್ಮಕ ರೀತಿಗಳಲ್ಲಿ ರಚಿಸಲು ಸಾಧ್ಯ. ಮಕ್ಕಳ ವ್ಯಾಯಾಮ ಆಯ್ಕೆಯಲ್ಲ; ಕಡ್ಡಾಯ ಆವಶ್ಯಕತೆ ಎಂಬುದು ಪ್ರತಿಯೊಬ್ಬ ಪೋಷಕರ ಗಮನದಲ್ಲಿರಬೇಕು.

-------------------

ದಿನಾಂಕ 17/1/2023 ರಂದು ಪ್ರಜಾವಾಣಿಯ ಕ್ಷೇಮ-ಕುಶಲ ವಿಭಾಗದಲ್ಲಿ  ಪ್ರಕಟವಾದ ಮೂಲ ಲೇಖನದ ಕೊಂಡಿ: https://www.prajavani.net/health/children-needs-physical-exercise-1006746.html


 ಮೂತ್ರಪಿಂಡಗಳ ಗಣಿತ

ನಮ್ಮ ಸೊಂಟದ ಎರಡೂ ಬದಿ ಮುಷ್ಟಿಯ ಗಾತ್ರದ, ಅವರೆಬೇಳೆ ಆಕೃತಿಯ ಮೂತ್ರಪಿಂಡಗಳು ಇವೆ. ತಲಾ ಸುಮಾರು 150 ಗ್ರಾಂ ತೂಗುವ ಇವು ನಮ್ಮ ಶರೀರದ ರಕ್ತವನ್ನು ಸೋಸಿ, ಅದರಲ್ಲಿರುವ ಕಶ್ಮಲಗಳನ್ನು ಮೂತ್ರದ ಮೂಲಕ ಹೊರಹಾಕುತ್ತವೆ. ಅಂದರೆ, ಶರೀರದ ಸರಿಸುಮಾರು ಎಲ್ಲಾ ರಕ್ತವೂ ದಿನಕ್ಕೆ ಹಲವಾರು ಬಾರಿ ಮೂತ್ರಪಿಂಡಗಳ ಮೂಲಕ ಹರಿಯಬೇಕು! ರಕ್ತ ಸೋಸುವ ಕೆಲಸವಷ್ಟೇ ಅಲ್ಲದೇ ಮೂತ್ರಪಿಂಡಗಳಿಗೆ ಇನ್ನಷ್ಟು ಕೆಲಸಗಳಿವೆ. ರಕ್ತದಲ್ಲಿನ ಲವಣದ ಅಂಶಗಳ ನಿಖರತೆಯನ್ನು ಕಾಯ್ದುಕೊಳ್ಳುವುದು; ರಕ್ತದ ಆಮ್ಲ-ಪ್ರತ್ಯಾಮ್ಲ ಮಟ್ಟಗಳ ನಿರ್ವಹಣೆ; ಜೀವಕೋಶಗಳ ಹೊರಭಾಗದಲ್ಲಿನ ದ್ರವದ ಸಂಯೋಜನೆ; ಶರೀರದ ಕ್ರಿಯೆಗಳಿಗೆ ಬೇಕಾದ ಅಯಾನ್ ಗಳ ಸಮೀಕರಣ; ರಕ್ತವನ್ನು ಉತ್ಪಾದಿಸುವ ಹಾರ್ಮೋನ್ ಉತ್ಪಾದನೆ; ಶರೀರದ ಕ್ಯಾಲ್ಸಿಯಮ್ ತೂಗುವಿಕೆ; ಶರೀರದ ರಕ್ತದೊತ್ತಡ ಸಮತೋಲನ – ಇವು ಕೂಡ ಮೂತ್ರಪಿಂಡಗಳ ಕೆಲವು ಕರ್ತವ್ಯಗಳು.

ಮೂತ್ರಪಿಂಡದಲ್ಲಿ ರಕ್ತನಾಳಗಳನ್ನು ಹೊತ್ತ ಹೊರಭಾಗ ಮತ್ತು ರಕ್ತವನ್ನು ಸೋಸುವ ಒಳಭಾಗಗಳಿವೆ. ಒಂದೊಂದು ಮೂತ್ರಪಿಂಡವನ್ನೂ ಶಂಕುವಿನ ಆಕೃತಿಯ ಸರಿಸುಮಾರು 14 ಭಾಗಗಳಾಗಿ ವಿಂಗಡಿಸಬಹುದು. ರಕ್ತವನ್ನು ಸೋಸಿ, ಕಶ್ಮಲವನ್ನು ನಿವಾರಿಸುವ ಸೂಕ್ಷ್ಮವಾದ ಭಾಗವನ್ನು ನೆಫ್ರಾನ್ ಎನ್ನುತ್ತಾರೆ. ಪ್ರತಿಯೊಂದು ಮೂತ್ರಪಿಂಡದಲ್ಲೂ ಇಂತಹ ಹತ್ತು ಲಕ್ಷ ನೆಫ್ರಾನ್ ಗಳು ಇರುತ್ತವೆ. ಈ ಎಲ್ಲಾ ನೆಫ್ರಾನ್ ಗಳನ್ನು ನೇರವಾಗಿಸಿ ಒಂದು ಸಾಲಿನಲ್ಲಿ ಜೋಡಿಸಿದರೆ ಬೆಂಗಳೂರಿನ ವಿಧಾನಸೌಧವನ್ನು ಎಂಟು ಸುತ್ತು ಹಾಕಬಹುದು! ಹೃದಯದಿಂದ ಹೊರಟ ರಕ್ತದ ಪೈಕಿ ಶೇಕಡಾ 25 ಭಾಗ ಮೂತ್ರಪಿಂಡಗಳಿಗೆ ಹಾಯುತ್ತದೆ. ಅಂದರೆ, ಪ್ರತೀ ನಿಮಿಷ ಸುಮಾರು ಒಂದೂಕಾಲು ಲೀಟರ್; ದಿನವೊಂದಕ್ಕೆ ಸುಮಾರು 1800 ಲೀಟರ್ ರಕ್ತ. ಆ ಲೆಕ್ಕದಲ್ಲಿ ಮೆದುಳಿಗಿಂತ ಹೆಚ್ಚು ರಕ್ತವನ್ನು ಮೂತ್ರಪಿಂಡಗಳು ಸೆಳೆಯುತ್ತವೆ ಎಂದಾಯಿತು! ಇದರ ಪೈಕಿ ಸುಮಾರು 180 ಲೀಟರ್ ಮೂತ್ರದ ಮೂಲರೂಪದಲ್ಲಿ ಸೋಸುತ್ತದೆ. ಇದರ ಶೇಕಡಾ 99 ಭಾಗ ಶರೀರಕ್ಕೆ ವಾಪಸ್ ಆಗುತ್ತದೆ. ಉಳಿದ 1 ಪ್ರತಿಶತ ಮೂತ್ರದ ರೂಪದಲ್ಲಿ ಮೂತ್ರಪಿಂಡಗಳಿಂದ ಹೊರಬರುತ್ತದೆ. ದಿನವೊಂದಕ್ಕೆ ಸುಮಾರು ಒಂದೂವರೆಯಿಂದ ಎರಡು ಲೀಟರ್ ಮೂತ್ರ ಉತ್ಪತ್ತಿಯಾಗುತ್ತದೆ. ರಕ್ತದ ಇಷ್ಟು ಭಾಗ ಕಡಿಮೆಯಾಗುವುದರಿಂದ ಅದನ್ನು ತೂಗಿಸಲು ದಿನವೊಂದಕ್ಕೆ ಎಂಟು ಲೋಟಗಳಷ್ಟು ನೀರನ್ನು ಕುಡಿಯಬೇಕು. ಮೂತ್ರಪಿಂಡಗಳ ಇಷ್ಟೆಲ್ಲಾ ಕೆಲಸಗಳಿಗೆ ಸಾಕಷ್ಟು ಆಕ್ಸಿಜನ್ ಅವಶ್ಯಕತೆಯಿದೆ. ಶರೀರದ ತೂಕದ ಶೇಕಡಾ 0.5 ಕೂಡ ಇಲ್ಲದ ಮೂತ್ರಪಿಂಡಗಳು ಶರೀರದ ಸುಮಾರು 7 ಪ್ರತಿಶತ ಆಕ್ಸಿಜನ್ ಉಪಯೋಗಿಸುತ್ತವೆ.

ಮೂತ್ರಪಿಂಡಗಳಲ್ಲಿ ಸೋಸಿದ ಮೂತ್ರ ಎರಡು ನಳಿಕೆಗಳ ಮೂಲಕ ಕಿಬ್ಬೊಟ್ಟೆಯ ಭಾಗದಲ್ಲಿರುವ ಮೂತ್ರಕೋಶವನ್ನು ತಲುಪುತ್ತವೆ. ಈ ಮೂತ್ರಕೋಶಕ್ಕೆ ಸುಮಾರು ಅರ್ಧ ಲೀಟರ್ ಮೂತ್ರವನ್ನು ಹಿಡಿದಿಡುವ ಸಾಮರ್ಥ್ಯ ಇದೆಯಾದರೂ, ಬಹುತೇಕ ಜನರಲ್ಲಿ ಸುಮಾರು 150-200 ಮಿಲಿಲೀಟರ್ ಮೂತ್ರ ಸಂಗ್ರಹ ಆಗುವ ವೇಳೆಗೆ ಇದು ಮೆದುಳಿಗೆ “ಮೂತ್ರ ಸಂಗ್ರಹವಾಗಿದೆ; ವಿಸರ್ಜನೆ ಆಗಬೇಕು” ಎಂಬ ಸಂದೇಶ ಕಳಿಸುತ್ತದೆ. ಯಾವುದೇ ಕಾಯಿಲೆ ಅಥವಾ ಸಮಸ್ಯೆಯಿಂದ ಮೂತ್ರಪಿಂಡಗಳ ಸಾಮರ್ಥ್ಯ ಕುಗ್ಗಿದರೆ ಮೂತ್ರ ಸಂಗ್ರಹದ ಪ್ರಮಾಣದಲ್ಲಿ ವ್ಯತ್ಯಾಸ ಆಗುತ್ತದೆ. ಮಧುಮೇಹದಂತಹ ಕೆಲವು ಕಾಯಿಲೆಗಳಲ್ಲಿ ಮೂತ್ರದ ಪ್ರಮಾಣ ಅಧಿಕವಾಗುತ್ತದೆ. ಮೂತ್ರಕೋಶಗಳ ವೈಫಲ್ಯದಲ್ಲಿ ಮೂತ್ರದ ತಯಾರಿಕೆಯ ಪ್ರಮಾಣ ಇಳಿದುಹೋಗುತ್ತದೆ.

ಮೂತ್ರಪಿಂಡಗಳು ಜರಡಿಯಂತೆ ಕೆಲಸ ಮಾಡುತ್ತವೆ. ರಕ್ತದಲ್ಲಿನ ಪ್ರೊಟೀನ್ ನಂತಹ ದೊಡ್ಡ ದೊಡ್ಡ ಅಂಶಗಳು ಈ ಜರಡಿಯ ಮೇಲೆಯೇ ಉಳಿದು, ಹಾಗೆಯೇ ರಕ್ತಕ್ಕೆ ವಾಪಸ್ ಆಗುತ್ತವೆ. ಸಣ್ಣ ಅಂಶಗಳು ಜರಡಿಯಾದರೂ, ಅವುಗಳು ನೆಫ್ರಾನ್ ನ ಮೊದಲ ಭಾಗದಿಂದ ಹಾಯುವಾಗಲೇ ಮತ್ತೆ ರಕ್ತಕ್ಕೆ ಸೆಳೆಯಲ್ಪಡುತ್ತವೆ. ಈ ರೀತಿ, ಆರಂಭದ ಹಂತದಲ್ಲಿ ಸೋಸಲ್ಪಟ್ಟ ಸಕ್ಕರೆಯ ಅಂಶ ಮತ್ತು ಅಮೈನೋ ಆಮ್ಲಗಳು ಪುನಃ ರಕ್ತಕ್ಕೆ ಹಿಂದಿರುಗತ್ತವೆ. ಅಂತೆಯೇ, ಶರೀರಕ್ಕೆ ಅಗತ್ಯವಾದ ಹಲವಾರು ಲವಣದ ಅಂಶಗಳು ಮತ್ತು ನೀರಿನ ಬಹುಭಾಗ ಮತ್ತೆ ರಕ್ತಕ್ಕೆ ಸೇರುತ್ತವೆ. ಈ ರೀತಿ ವಾಪಸ್ ಸೆಳೆದುಕೊಳ್ಳುವ ಸಾಮರ್ಥ್ಯಕ್ಕೆ ಒಂದು ಮಿತಿ ಇರುತ್ತದೆ. ಅದನ್ನು ಮೀರಿದರೆ ಕೆಲವು ಅಂಶಗಳು ಮೂತ್ರದ ಮೂಲಕ ಹೊರಗೆ ಹೋಗಬಹುದು. ಉದಾಹರಣೆಗೆ, ಶರೀರದಲ್ಲಿ ಗ್ಲುಕೋಸ್ ಅಂಶ ತಲಾ ಎಂ.ಎಲ್. ರಕ್ತದಲ್ಲಿ ಸಾಮಾನ್ಯವಾಗಿ 100-120 ಮಿಲಿಗ್ರಾಂ ಇರುತ್ತದೆ. ಈ ಮಟ್ಟ ಸುಮಾರು 160 ಮಿಲಿಗ್ರಾಂ ಆದರೂ, ಮೂತ್ರಪಿಂಡಗಳು ತಮ್ಮೊಳಗೆ ಬಂದ ಎಲ್ಲಾ ಗ್ಲುಕೋಸ್ ಅನ್ನೂ ವಾಪಸ್ ಹೀರಿಕೊಳ್ಳಬಲ್ಲವು. ಈ ಮಟ್ಟ 160 ಮಿಲಿಗ್ರಾಂ ಅನ್ನು ಮೀರಿದರೆ, ಅದನ್ನು ಸಂಪೂರ್ಣವಾಗಿ ಹೀರಿಕೊಳ್ಳಲಾಗದೇ ಮೂತ್ರದಲ್ಲಿ ಗ್ಲುಕೋಸ್ ಅಂಶ ಕಾಣುತ್ತದೆ. ಮಧುಮೇಹಿಗಳ ರಕ್ತದಲ್ಲಿ ಗ್ಲುಕೋಸ್ ಅಂಶ 160 ಮಿಲಿಗ್ರಾಂ ಮೀರಿದರೆ, ಅದರ ಕೆಲವಂಶ ಮೂತ್ರದಲ್ಲಿ ಹೊರಹೋಗುತ್ತದೆ. ಇದನ್ನು ಪತ್ತೆ ಮಾಡಿದರೆ ಮಧುಮೇಹ ಇರಬಹುದಾದ ಸಾಧ್ಯತೆಗಳು ತಿಳಿಯುತ್ತವೆ. 

ಮೂತ್ರಪಿಂಡದ ಜರಡಿಯ ರಂಧ್ರಗಳು ಕೆಲವು ಕಾಯಿಲೆಗಳಲ್ಲಿ ಅಗಲವಾಗಬಹುದು. ಆಗ ಸಾಮಾನ್ಯಕ್ಕಿಂತ ಹೆಚ್ಚಿನ ಗಾತ್ರದ ಅಂಶಗಳು ಸೋಸಲ್ಪಡುತ್ತವೆ. ಈ ರೀತಿ ಸಣ್ಣ ಪುಟ್ಟ ಪ್ರೊಟೀನ್ ಗಳು, ಪುಟ್ಟ ಗಾತ್ರದ ಜೀವಕೋಶಗಳು ಮೂತ್ರದ ಮೂಲಕ ಹೊರಹೋಗಬಹುದು; ಇಲ್ಲವೇ, ನೆಫ್ರಾನ್ ಗಳ ಯಾವುದೋ ಭಾಗದಲ್ಲಿ ಸಿಲುಕಿಕೊಂಡು, ಅವನ್ನು ಕಾರ್ಯಹೀನವಾಗಿ ಮಾಡಬಹುದು. ಆಗ ಮೂತ್ರಪಿಂಡಗಳ ಒಟ್ಟಾರೆ ಕಾರ್ಯಕ್ಷಮತೆ ಕ್ಷೀಣಿಸುತ್ತದೆ. ಅಲ್ಲದೇ, ಮೂತ್ರದ ಪರೀಕ್ಷೆಯಲ್ಲಿ ಸಾಮಾನ್ಯವಾಗಿ ಕಾಣದ ರಾಸಾಯನಿಕ ಅಂಶಗಳು ಗೋಚರಿಸುತ್ತವೆ. ಮೂತ್ರದ ಬಣ್ಣ ಹಠಾತ್ತಾಗಿ ಬದಲಾಗಬಹುದು. ಈ ರೀತಿಯಲ್ಲಿ, ಮೂತ್ರದ ಬಣ್ಣ ಮತ್ತು ಸರಳ ಪರೀಕ್ಷೆಗಳು ಮೂತ್ರಪಿಂಡಗಳ ಆರೋಗ್ಯದ ಬಗ್ಗೆ ಸಾಕಷ್ಟು ಮಾಹಿತಿ ನೀಡಬಲ್ಲವು.

ಮೂತ್ರಪಿಂಡಗಳ ಸಮಸ್ಯೆಗಳು ಬಹಳ ಸಾಮಾನ್ಯ. ಸಾಕಷ್ಟು ಗಟ್ಟಿ ಸ್ವರೂಪದ ಮೂತ್ರಪಿಂಡಗಳು ತಾವಾಗಿಯೇ ತೊಂದರೆಗೆ ಬೀಳುವುದಕ್ಕಿಂತ ಶರೀರದ ಹಲವಾರು ಕಾಯಿಲೆಗಳ ಪರೋಕ್ಷ ಪರಿಣಾಮದಿಂದ ಘಾಸಿಯಾಗುವುದೇ ಹೆಚ್ಚು. ನಮ್ಮ ಜೀವನಶೈಲಿ, ಆಹಾರ, ಅಧಿಕ ರಕ್ತದೊತ್ತಡ, ಮಧುಮೇಹ ಮುಂತಾದ ಕಾರಣಗಳಿಂದ ಮೂತ್ರಪಿಂಡಗಳ ಸಮಸ್ಯೆ ಉಂಟಾಗುತ್ತದೆ. ಅಭಿವೃದ್ಧಿಶೀಲ ದೇಶಗಳಲ್ಲಿ ಕಾಯಿಲೆಗಳ ನಿಖರ ಸಂಖ್ಯೆ ತಿಳಿಯುವುದು ಕಷ್ಟ. ಆದರೆ, ಆರೋಗ್ಯ ವ್ಯವಸ್ಥೆ ಅಚ್ಚುಕಟ್ಟಾಗಿ ಶ್ರೇಣಿಕೃತವಾಗಿರುವ ಮುಂದುವರೆದ ದೇಶಗಳಲ್ಲಿ ಮೂತ್ರಪಿಂಡಗಳ ಸಮಸ್ಯೆ ಸುಮಾರು ನೂರು ಜನರಲ್ಲಿ ಹದಿನಾಲ್ಕು ಜನಕ್ಕೆ ಇದೆ. ಈ ಲೆಕ್ಕದಲ್ಲಿ ಸುಮಾರು 700 ಕೋಟಿ ಜನಸಂಖ್ಯೆಯ ಪ್ರಪಂಚದಲ್ಲಿ ಸುಮಾರು 100 ಕೋಟಿ ಮಂದಿ ಮೂತ್ರಪಿಂಡಗಳ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದಾಯಿತು. ಇದು ಬಹು ದೊಡ್ಡ ಸಂಖ್ಯೆ. ಇಷ್ಟು ಮಂದಿಗೆ ಸರಿಯಾಗಿ ಚಿಕಿತ್ಸೆ ಮಾಡುವಷ್ಟು ಅನುಕೂಲ ವೈದ್ಯಕೀಯ ಜಗತ್ತಿಗೆ ಇಲ್ಲ. ಹೀಗಾಗಿ, ಕಾಯಿಲೆ ಬಾರದಂತೆ ನಿಗಾ ವಹಿಸುವುದು ಶ್ರೇಯಸ್ಕರ. ಈ ಸಮಸ್ಯೆ ಅಧಿಕವಾಗುತ್ತಾ ಹೋದಂತೆ ಮೂತ್ರಪಿಂಡಗಳು ಕೆಲಸ ಕುಗ್ಗುತ್ತಾ ಹೋಗುತ್ತದೆ. ಆಗ ರಕ್ತದ ಮಾಲಿನ್ಯಗಳು ಶರೀರದಲ್ಲೇ ಉಳಿದು ಬಹಳ ತೊಂದರೆ ಕೊಡುತ್ತವೆ. ಇಂತಹ ಸಂದರ್ಭಗಳಲ್ಲಿ ರಕ್ತವನ್ನು ಸೋಸಿ ಕಶ್ಮಲ ತೆಗೆಯುವ ಕೆಲಸವನ್ನು ಕೃತಕವಾಗಿ ಮಾಡಬೇಕು. ಇದನ್ನು ಮಾಡುವುದು ಡಯಾಲಿಸಿಸ್ ಪ್ರಕ್ರಿಯೆ. ಆದರೆ, ಡಯಾಲಿಸಿಸ್ ತಾತ್ಕಾಲಿಕ ವಿಧಾನ ಮಾತ್ರ. ಮೂತ್ರಪಿಂಡಗಳ ವೈಫಲ್ಯಕ್ಕೆ ಇರುವ ಸರಿಯಾದ ಚಿಕಿತ್ಸೆ ಎಂದರೆ ಮೂತ್ರಪಿಂಡ ಕಸಿ.

ಅಂಗಗಳ ಕಸಿ ಸಂಖ್ಯೆಗಳನ್ನು ಪರಿಗಣಿಸಿದರೆ, ಪ್ರಪಂಚದಾದ್ಯಂತ ಮೂತ್ರಪಿಂಡಗಳ ಕಸಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಆಗುತ್ತದೆ. ಯಕೃತ್, ಹೃದಯ,ಶ್ವಾಸಕೋಶ,ಮೇದೋಜೀರಕ, ಕರುಳು ಮುಂತಾದ ಎಲ್ಲಾ ಅಂಗ ಕಸಿಗಳ ಒಟ್ಟಾರೆ ಸಂಖ್ಯೆಗಿಂತ ಮೂತ್ರಪಿಂಡಗಳ ಕಸಿಯ ಸಂಖ್ಯೆ ಅಧಿಕ. ಪ್ರತಿಯೊಬ್ಬರಿಗೆ ಎರಡು ಮೂತ್ರಪಿಂಡಗಳು ಇದ್ದರೂ, ಸಾಮಾನ್ಯ ಬದುಕಿಗೆ ಒಂದು ಆರೋಗ್ಯವಂತ ಮೂತ್ರಪಿಂಡವೂ ಸಾಕು. ಹೀಗಾಗಿ, ಬದುಕಿರುವಾಗಲೇ ಒಂದು ಮೂತ್ರಪಿಂಡವನ್ನು ದಾನ ಮಾಡಲು ಸಾಧ್ಯ. ಒಂದೆಡೆ ಅಧಿಕ ಸಂಖ್ಯೆಯ ರೋಗಿಗಳು, ಮತ್ತೊಂದೆಡೆ ಸ್ವಲ್ಪ ಹೆಚ್ಚಿನ ಲಭ್ಯತೆ – ಈ ಕಾರಣಗಳಿಂದ ಮೂತ್ರಪಿಂಡ ಕಸಿಯ ಸಂಖ್ಯೆ ಹೆಚ್ಚು. ಆದರೆ, ರೋಗಿಗಳ ಒಟ್ಟಾರೆ ಸಂಖ್ಯೆಗೆ ಹೋಲಿಸಿದರೆ, ಕಸಿಗಳ ಸಂಖ್ಯೆ ಏನೇನೂ ಸಾಲದು. ಅಮೆರಿಕದ ಲೆಕ್ಕಾಚಾರದಂತೆ ಪ್ರತೀ 9 ನಿಮಿಷಗಳಿಗೆ ಒಂದು ರೋಗಿ ಮೂತ್ರಪಿಂಡ ಕಸಿಗಾಗಿ ನೋಂದಾವಣೆಯಾಗುತ್ತಾರೆ. ಪ್ರಸ್ತುತ ಅಮೆರಿಕದಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ರೋಗಿಗಳು ಮೂತ್ರಪಿಂಡ ಕಸಿಗಾಗಿ ನೋಂದಾಯಿಸಿಕೊಂಡು ಕಾಯುತ್ತಿದ್ದಾರೆ. ಆದರೆ, ಅಲ್ಲಿ ಒಂದು ವರ್ಷಕ್ಕೆ ಸುಮಾರು 20,000 ಮೂತ್ರಪಿಂಡ ಕಸಿ ಮಾತ್ರ ಆಗುತ್ತಿವೆ. ಹೀಗಾಗಿ, ಪ್ರತಿದಿನ ಸುಮಾರು 17 ರೋಗಿಗಳು ಮೂತ್ರಪಿಂಡದ ಲಭ್ಯತೆ ಇಲ್ಲದೆ ಮರಣಿಸುತ್ತಾರೆ. ಮೆದುಳು ಮರಣ ಹೊಂದಿದವರ ಮೂತ್ರಪಿಂಡಗಳನ್ನು ದಾನ ಮಾಡಲು ಕಾನೂನು ರೀತ್ಯಾ ಅನುಕೂಲ ಇದೆಯಾದರೂ, ಆ ರೀತಿ ಮರಣಿಸುವವರ ಸಂಖ್ಯೆ ಸಾವಿರಕ್ಕೆ 3 ಮಾತ್ರ. ಅಂಗಾಂಗ ಕಸಿಗೆ ಆಯಾ ದೇಶಗಳ ಸರ್ಕಾರದ, ಕಾನೂನಿನ ಬೆಂಬಲ ಬಹಳ ಮುಖ್ಯ. ಅದಿಲ್ಲದೇ ಹೆಚ್ಚಿನ ಪ್ರಗತಿ ನಿರೀಕ್ಷಿಸುವುದು ಕಷ್ಟ.

ಮೂತ್ರಪಿಂಡಗಳು ನಿರ್ವಹಿಸುವ ಕರ್ತವ್ಯಗಳು ಅನೇಕ. ಅವುಗಳ ಕೆಲಸಕ್ಕೆ ಪೂರಕವಾಗುವಂತೆ ನಮ್ಮ ಆರೋಗ್ಯದ ಬಗ್ಗೆ ಕಾಳಜಿ ಇರಬೇಕು. ಪ್ರತಿಯೊಂದು ಕಾಯಿಲೆಯೂ ಅನೇಕ ಅಂಗಗಳನ್ನು ಘಾಸಿ ಮಾಡಬಲ್ಲವು ಎಂಬ ಎಚ್ಚರಿಕೆ ಇರಬೇಕು.

­­­­­­­­­­­­­­­­­­-------------------------

ಜನವರಿ 2023 ರ ಕುತೂಹಲಿ ವಿಜ್ಞಾನ ಮಾಸಪತ್ರಿಕೆಯಲ್ಲಿ ಪ್ರಕಟವಾದ ಲೇಖನ. ಕುತೂಹಲಿ ಜನವರಿ 2023ರ ಸಂಪೂರ್ಣ ಸಂಚಿಕೆಯನ್ನು ಓದಲು ಕೊಂಡಿ: http://bit.ly/3Clreua

 ಅರಿವಿನ ವಿಸ್ತಾರ

ಡಾ. ಕಿರಣ್ ವಿ.ಎಸ್.

ವೈದ್ಯರು

“ಜಗತ್ತು ಎಷ್ಟು ವೇಗವಾಗಿ ಮುಂದುವರೆಯುತ್ತೆಂದರೆ, ಇದ್ದ ಜಾಗದಲ್ಲೇ ಉಳಿಯಬೇಕೆಂದರೂ ಒಂದೇ ಸಮನೆ ಓಡುತ್ತಲೇ ಇರಬೇಕು” ಎನ್ನುವ ಮಾತಿದೆ. ಬಹುತೇಕ ಕ್ಷೇತ್ರಗಳಲ್ಲಿ ಪರಮ ಸತ್ಯ ಎನ್ನುವುದು ಇರುವುದೇ ಇಲ್ಲ. ಇಂದಿನ ಗ್ರಹಿಕೆ ನಾಳೆ ಬದಲಾಗಬಹುದು. ಉನ್ನತ ವಿಜ್ಞಾನದಂತಹ ವಿಷಯದಲ್ಲಂತೂ ಹತ್ತು ವರ್ಷಗಳ ಹಿಂದಿನ ಪಠ್ಯಪುಸ್ತಕ ಇಂದಿಗೆ ಹೆಚ್ಚು ಕೆಲಸಕ್ಕೆ ಬಾರದು. ಅವಕಾಶಗಳಿದ್ದರೂ ಕೆಲವೊಮ್ಮೆ ಪೂರ್ವಗ್ರಹಗಳ ಹಿಡಿತದಲ್ಲಿ ಬಂಧಿಯಾಗಿ, ಚಿಂತನೆಯನ್ನು ಬೆಳೆಸಲು ಹಿಂಜರಿಯುತ್ತೇವೆ. ಆಧುನಿಕ ಯುಗದಲ್ಲಿ ಅರಿವಿನ ವಿಸ್ತಾರಕ್ಕೆ ನಮ್ಮ ಮನಸ್ಸನ್ನು ತೆರೆದಿಟ್ಟುಕೊಳ್ಳದ ಹೊರತು ವ್ಯವಹಾರದಲ್ಲಾಗಲೀ, ವೃತ್ತಿಯಲ್ಲಾಗಲೀ ಪ್ರಗತಿ ಕಷ್ಟಸಾಧ್ಯ.

ಓದು-ಬರಹದ ಹವ್ಯಾಸಗಳು ಮನಸ್ಸನ್ನು, ಮನೋಭಾವಗಳನ್ನು ಹಿಗ್ಗಿಸುತ್ತವೆ. ಓದುವುದಕ್ಕೆ ವಸ್ತು, ಪಂಥಗಳ ಮಿತಿಗಳನ್ನು ಹೇರಿಕೊಳ್ಳಬಾರದು. ಕತೆ, ಕವನ, ಕಾದಂಬರಿ, ಆತ್ಮಕಥನ, ವೈಚಾರಿಕ ಸಾಹಿತ್ಯ, ವಿಜ್ಞಾನ ಲೇಖನ, ರಾಜಕೀಯ ಕಥಾನಕ, ಪ್ರವಾಸ ಕಥನ ಹೀಗೆ ಪ್ರತಿಯೊಂದು ಪ್ರಕಾರಕ್ಕೂ ಅದರದ್ದೇ ಆದ ಸೊಗಸು, ಸೊಗಡುಗಳಿವೆ. ಓದುವಿಕೆ ಚಿಂತನೆಯ ಹರಹನ್ನು ಬೆಳೆಸುತ್ತದೆ. “ದೇಶ ಸುತ್ತು; ಕೋಶ ಓದು” ಎನ್ನುವ ಸಲಹೆ ಅರಿವಿನ ವಿಸ್ತಾರದಲ್ಲಿ ಸಾರ್ವಕಾಲಿಕ.

ಬರವಣಿಗೆ ನಮ್ಮ ಅರಿವಿನ ಸಾಂದ್ರತೆಯನ್ನು ವೃದ್ಧಿಸುತ್ತದೆ. ಬರವಣಿಗೆ ಯಾವುದೇ ಹಂತದ್ದಾಗಿರಬಹುದು – ದಿನನಿತ್ಯದ ಕೆಲಸಗಳ ಪಟ್ಟಿ, ಆಯಾ ದಿನದ ಅನುಭವಗಳ ಡೈರಿ, ಕಾಡುವ ಸಮಸ್ಯೆಗಳಿಗೆ ಅಕ್ಷರರೂಪ ನೀಡುವುದು, ಮೂಡುತ್ತಿರುವ ಆಲೋಚನೆ, ಅಕಸ್ಮಾತ್ತಾಗಿ ಮಿಂಚಿದ ಹೊಳಹು, ಅಮೂರ್ತವಾಗಿ ಎಂದೋ ನೆಲೆ ನಿಂತಿದ್ದ ಚಿಂತನೆ, ಮನದೊಳಗೆ ಹಿಂದೆಂದೋ ಸುಳಿದಿದ್ದ ಕತೆಯ ಕಲ್ಪನೆ – ಹೀಗೆ ಯಾವುದನ್ನಾದರೂ ಬರಹದ ನೆಲೆಗಟ್ಟಿಗೆ ಇಳಿಸುವುದು ತಿಳಿವಿಗೆ ಸ್ಪಷ್ಟತೆಯನ್ನು ನೀಡುವುದರ ಜೊತೆಗೆ ಆಲೋಚನೆಯ ತುಣುಕುಗಳ ನಡುವೆ ಇರಬಹುದಾದ ಖಾಲಿ ಜಾಗಗಳನ್ನು ತಗ್ಗಿಸುತ್ತದೆ; ಚಿಂತನೆಯ ವ್ಯಾಪ್ತಿಯನ್ನು ಹಿಗ್ಗಿಸಲು ನೆರವಾಗುತ್ತದೆ.

ಪ್ರಶ್ನಿಸುವ ಪ್ರಕ್ರಿಯೆ ಅರಿವಿನ ವಿಸ್ತಾರಕ್ಕೆ ಒಳ್ಳೆಯ ವಿಧಾನ. ಕಂಡದ್ದನ್ನೆಲ್ಲಾ ಪ್ರಶ್ನಿಸುವುದು ಅನುಮಾನದ ಲಕ್ಷಣ; ಬೇರೆಯವರನ್ನು ಹೀಗೆಳೆಯಲು ಪ್ರಶ್ನಿಸುವುದು ಕೀಳರಿಮೆಯ ಸಂಕೇತ. ಯಾವುದೇ ವಿಷಯದ ಬಗ್ಗೆ ಆಸಕ್ತಿ ಮೂಡಿದಾಗ ಅದನ್ನು ಮತ್ತಷ್ಟು ಅರಿಯುವ ಸಲುವಾಗಿ ಪ್ರಶ್ನಿಸುವುದು ಸಮಂಜಸ ಮಾರ್ಗ. ನಮ್ಮ ಪ್ರಶ್ನೆಗೆ ಇತರರು ಮಾತ್ರ ಉತ್ತರಿಸಬೇಕೆಂದೇನೂ ಇಲ್ಲ. ಉತ್ತರ ಕೊಡುವವರು ಸೂಟಿಯಾಗಿ, ಆ ಅಂಶಕ್ಕೆ ಮಾತ್ರ ಸಮಾಧಾನ ಹೇಳಬಲ್ಲರು. ಪ್ರಶ್ನೆಯ ಸೆಲೆಯನ್ನು ಹಿಡಿದು, ಅದಕ್ಕೆ ನಾವೇ ಉತ್ತರ ಕಂಡುಕೊಳ್ಳುವುದು ಮಾಹಿತಿಯ ಮಹಾಪೂರವಾದ ಆಧುನಿಕ ಯುಗದಲ್ಲಿ ಕಷ್ಟವಲ್ಲ. ಹೀಗೆ ಮಾಡುವಾಗ ಅನೇಕ ಹೊಸ ವಿಷಯಗಳು, ಹೊಳಹುಗಳು ಗೋಚರಿಸುತ್ತವೆ. ಯಾವುದೇ ವಿಷಯವನ್ನು ಪ್ರಮಾಣಬದ್ಧವಾಗಿ ಅರಿಯುವುದು ನಮ್ಮ ಆಲೋಚನೆಗಳನ್ನು, ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹಿಗ್ಗಿಸುತ್ತದೆ.

ಮಿದುಳು ಅಗಾಧ ಸಾಮರ್ಥ್ಯದ ಗಣಿ. ಅದನ್ನು ಸಂಕುಚಿತವಾಗಿಟ್ಟರೆ ನಷ್ಟ ನಮಗೇ. ಮಿದುಳಿನ ತರ್ಕದ ಭಾಗವನ್ನು ಚೂಟಿಯಾಗಿ ಇರಿಸಿಕೊಂಡರೆ ಕಲಿಕೆಯ ಸಾಮರ್ಥ್ಯ ಹೆಚ್ಚುತ್ತದೆ ಎನ್ನಲಾಗಿದೆ. ಹೀಗಾಗಿ, ಮಿದುಳಿಗೆ ತರ್ಕದ ಕಸರತ್ತನ್ನು ನೀಡುವ ಆಟಗಳು ವಿಶ್ವದಾದ್ಯಂತ ಜನಪ್ರಿಯ. ಪದಬಂಧ, ಸುಡೊಕು, ಗಣಿತೀಯ ಸಮಸ್ಯೆಗಳು, ತಾರ್ಕಿಕ ಒಗಟುಗಳು ಆಲೋಚನಾ ಶಕ್ತಿಯನ್ನು ಹರಿತಗೊಳಿಸುತ್ತವೆ. ಇದೇ ಕಾರಣಕ್ಕಾಗಿ ಬಹುತೇಕ ದಿನಪತ್ರಿಕೆಗಳು ಇಂತಹ ಆಟಗಳಿಗೆಂದು ಪತ್ರಿಕೆಯ ಅರ್ಧ ಪುಟವನ್ನಾದರೂ ಮೀಸಲಿಡುತ್ತವೆ. ಅಂತರ್ಜಾಲದಲ್ಲಿ ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಇಂತಹ ಲಕ್ಷಾಂತರ ತಾಣಗಳಿವೆ; ಮೊಬೈಲ್ ಆಪ್ಗಳಿವೆ. ಚುರುಕುಗೊಂಡ ತಾರ್ಕಿಕ ಮಿದುಳು ಯಾವುದೇ ಸಂದರ್ಭವನ್ನೂ ಶೀಘ್ರವಾಗಿ ಗ್ರಹಿಸಬಲ್ಲದು. ಮಕ್ಕಳ ಜೊತೆಯಲ್ಲಿ ಕೂಡಿ ಸರಳ ವೈಜ್ಞಾನಿಕ ಪ್ರಯೋಗಗಳನ್ನು ಮಾಡಿ, ಅವುಗಳ ಹಿನ್ನೆಲೆಯನ್ನು ವಿವರಿಸುವುದು ಕೂಡ ಇಂತಹುದೇ ಪರಿಣಾಮವನ್ನು ಉಂಟುಮಾಡುತ್ತದೆ.

ನಮ್ಮ ಪೂರ್ವಗ್ರಹಗಳು ಮಾನಸಿಕ ಬೆಳವಣಿಗೆಯನ್ನು ಮೊಟಕುಗೊಳಿಸುತ್ತವೆ. ಅವನ್ನು ಮೀರುವುದು ಸುಲಭವಲ್ಲ. ಗೆದ್ದಾಗ ನಮ್ಮನ್ನು ಹೊಗಳಿಕೊಳ್ಳುವುದು, ಸೋತಾಗ ಇತರರನ್ನು ಜರಿಯುವುದು ನಮ್ಮನ್ನು ಒಳಗಿನಿಂದ ದುರ್ಬಲರನ್ನಾಗಿಸುತ್ತದೆ. ಸೋಲಿನ ಬಗ್ಗೆ ಪ್ರಾಮಾಣಿಕ ವಿಶ್ಲೇಷಣೆ ಮಾಡಿದಾಗ ದೌರ್ಬಲ್ಯಗಳು ಗೋಚರವಾಗುತ್ತವೆ. ಆಗ ಮಾತ್ರ ಸುಧಾರಣೆ ಸಾಧ್ಯ. ಇದನ್ನು ಮಾಡಿದ ಹೊರತು ಗೆಲುವಿನ ಸಾಧ್ಯತೆಗಳು ಹೆಚ್ಚುವುದಿಲ್ಲ. ಯಾವುದೇ ಕ್ಷೇತ್ರದಲ್ಲೂ ಎದುರಾಳಿಗಳ ಬಗ್ಗೆ ಆರೋಗ್ಯಕರ ಗೌರವ ಇರುವುದು ಒಳ್ಳೆಯದು. ನಮ್ಮ ಬಲ-ದೌರ್ಬಲ್ಯಗಳ ಪರಿಚಯ ಎಷ್ಟು ಮುಖ್ಯವೋ, ಎದುರಾಳಿಯ ಬಗ್ಗೆ ಅರಿವು ಇರುವುದೂ ಅಷ್ಟೇ ಮುಖ್ಯ. ಗೆಲುವೆಂಬುದು ಅದೃಷ್ಟದ ಆಟವಾಗಬಾರದು. ಅಂತೆಯೇ, ಅಂತಿಮ ಪರಿಣಾಮ “ನಾವು ಮಾಡಿದ್ದೆಲ್ಲವೂ ಸರಿ” ಎನ್ನುವಂತೆಯೂ ಇರಬಾರದು. ಯಾವಾಗಲೋ ಒಮ್ಮೆ ಲಾಟರಿಯಲ್ಲಿ ಗೆಲ್ಲುವುದು ನಾವು ಹುಟ್ಟಾ ಅದೃಷ್ಟವಂತರು ಎನ್ನುವ ಭಾವ ಮೂಡಿಸಬಾರದು. ಈ ರೀತಿಯ ಸೀಮಿತ ಆಲೋಚನೆಗಳು ನಮ್ಮ ಚಿಂತನೆಯನ್ನು ಬಂಧಿಯಾಗಿಸುತ್ತವೆ.

ಜೀವನದಲ್ಲಿ ಬದಲಾವಣೆ ಬಹಳ ಮುಖ್ಯ. ಅದರಲ್ಲೂ ಪ್ರಸ್ತುತ ಪ್ರಪಂಚದಲ್ಲಿ ಸರಾಸರಿ ಹತ್ತು ವರ್ಷಗಳಿಗೊಮ್ಮೆ ವ್ಯಾವಹಾರಿಕ ಪ್ರಪಂಚದ ವಾಸ್ತವ ಬದಲಾಗುತ್ತಿದೆ. ದಶಕದ ಹಿಂದೆ ಊಹೆಗೂ ಸಿಗದಿದ್ದ ನೌಕರಿಗಳು ಇಂದು ಮಾರುಕಟ್ಟೆಯನ್ನು ಆಕ್ರಮಿಸಿವೆ. ಹೀಗಾಗಿ, ನಮ್ಮ ಅರಿವನ್ನು ಬೆಳೆಯಲು ಬಿಡದಿದ್ದರೆ ಅವಕಾಶವಂಚಿತರಾಗುತ್ತೇವೆ. ಬಹಳ ಬಾರಿ “ನನಗಿಷ್ಟು ಸಾಕು; ನಾನು ಬದಲಾಗುವುದು ಬೇಕಿಲ್ಲ” ಎನಿಸಬಹುದು. ಆದರೆ, ನಾವು ಯಾವುದನ್ನು ಇಂದು ಸಂಪೂರ್ಣವಾಗಿ ಅವಲಂಬಿಸಿದ್ದೇವೋ ಅದು ನಾಳೆ ಇಲ್ಲವಾದರೆ ನಮ ಅಸ್ತಿತ್ವಕ್ಕೇ ಸಂಚಕಾರ ಮೂಡಿದಂತಾಯಿತು. ಒಂದು ಕಾಲದಲ್ಲಿ ರಾರಾಜಿಸುತ್ತಿದ್ದ ಟೈಪ್ ರೈಟರ್ ಯಂತ್ರಗಳು ಇಂದು ಸಂಗ್ರಹಾಲಯದ ವಸ್ತುಗಳಾಗಿವೆ. ಮೊಬೈಲ್ ಫೋನುಗಳು ಬಂದ ಮೇಲೆ ಪೇಜರ್ ಅಗತ್ಯ ಇಲ್ಲದೇ ಹೋಗಿದೆ. ಆದ್ದರಿಂದ ನಮ್ಮ ವೃತ್ತಿ ಇಂದು ಎಷ್ಟೇ ಸುರಕ್ಷಿತ ಎನಿಸಿದರೂ ಪರಿಸ್ಥಿತಿ ಧಿಡೀರನೆ ಬದಲಾಗಬಹುದು. ಅರಿವನ್ನು ವಿಸ್ತರಿಸದೆ ಹೋದರೆ ನಮ್ಮ ಅಸ್ತಿತ್ವವೇ ಉಳಿಯದಿರಬಹುದು.  

ವ್ಯಾಯಾಮ, ಧ್ಯಾನ, ಧನಾತ್ಮಕ ಚಿಂತನೆಗಳು, ಹೊಸಬರೊಡನೆ ಬೆರೆಯುವ ಮನಸ್ಥಿತಿ, ಹೊಸದನ್ನು ಕಲಿಯುವ ಬಯಕೆ, ಪ್ರವಾಸ, ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುವಿಕೆ, ಸೋಮಾರಿತನ ಬಿಟ್ಟು ಯಾವುದೋ ಉತ್ಪಾದಕ ಕೆಲಸದಲ್ಲಿ ತೊಡಗಿಕೊಳ್ಳುವಿಕೆ, ಆರೋಗ್ಯಕರ ಆಹಾರ, ಒಳ್ಳೆಯ ನಿದ್ರೆ, ಸಾಮಾಜಿಕ ಸಂಬಂಧಗಳು, ಮೊದಲಾದವು ನಮ್ಮ ಅರಿವನ್ನು ಬೆಳೆಸುತ್ತವೆ. ನಮ್ಮ ನಿಯಮಿತ ಜೀವನಾವಧಿಯನ್ನು ಉತ್ತಮ ರೀತಿಯಿಂದ ಕಳೆಯಲು ಮನಸ್ಸನ್ನು ಚಿಂತನೆಗಳ ವಿಸ್ತರಣೆಗೆ ಸಜ್ಜುಗೊಳಿಸುವುದು ಒಳ್ಳೆಯ ವಿಧಾನ.   

----------------------

ದಿನಾಂಕ 20/12/2022 ರಂದು ಪ್ರಜಾವಾಣಿಯ ಕ್ಷೇಮ ಕುಶಲ ವಿಭಾಗದಲ್ಲಿ ಪ್ರಕ್ಟವಾದ ಲೇಖನ. ಈ ಲೇಖನದ ಕೊಂಡಿ: https://www.prajavani.net/health/mental-health-and-awareness-and-knowledge-gain-process-is-important-for-human-life-998739.html


 ಮಿದುಳಿನ ಗಣಿತ

“ಜಗತ್ತಿನಲ್ಲಿ ಅತ್ಯಂತ ಕಡಿಮೆ ಬಳಕೆಯಾಗುವ, ಆದರೆ ಅತೀ ಹೆಚ್ಚು ಸಂಶೋಧನೆಗೆ ಒಳಪಟ್ಟ ಅಂಗ” ಎಂದು ವಿಜ್ಞಾನಿಗಳು ಮಿದುಳಿನ ಬಗ್ಗೆ ಕೀಟಲೆ ಮಾಡುತ್ತಾರೆ! ಇಡೀ ಶರೀರದ ಬೆರಗು ಒಂದೆಡೆಯಾದರೆ, ಮಿದುಳಿನ ಸೋಜಿಗವೇ ಮತ್ತೊಂದೆಡೆ. ಮಿದುಳಿನಲ್ಲಿ ಎಡ ಮತ್ತು ಬಲ ಎಂಬ ಎರಡು ಅರೆಗೋಳಗಳಿವೆ. ಪ್ರತಿಯೊಂದು ಅರೆಗೋಳವನ್ನು ನಾಲ್ಕು ಭಾಗಗಳಲ್ಲಿ ವಿಂಗಡಿಸಲಾಗಿದೆ. ಅರೆಗೋಳಗಳ ತಳಭಾಗದ ಹಿಂಬದಿಯಲ್ಲಿ cerebellum ಎಂಬ ಹೆಸರಿನ ಸಣ್ಣ ಮಿದುಳು ಇದೆ. ಮಿದುಳಿನ ಸಮಗ್ರ ನರಮಂಡಲದಲ್ಲಿ ಸುಮಾರು ಹತ್ತುಸಾವಿರ ಕೋಟಿ (ಒಂದರ ಮುಂದೆ ಹನ್ನೊಂದು ಸೊನ್ನೆಗಳು) ನರಕೋಶಗಳಿವೆ ಎಂದು ಅಂದಾಜು. ಜೊತೆಗೆ, ಇದರ ಹತ್ತರಷ್ಟು ಸಂಖ್ಯೆಯ ಸಹಾಯಕ glial ಕೋಶಗಳಿವೆ ಎಂದು ಹೇಳಲಾಗಿದೆ. ಈ ಬೃಹತ್ ಸಂಖ್ಯೆಯ ನರಕೋಶಗಳು ತಂತಮ್ಮ ನಡುವೆ ಸುಮಾರು ಎರಡು ಕೋಟಿ ಕೋಟಿ (ಎರಡರ ಮುಂದೆ ಹದಿನಾಲ್ಕು ಸೊನ್ನೆಗಳು) ಸಂಪರ್ಕಗಳನ್ನು ಸಾಧಿಸುತ್ತವೆ ಎಂಬ ಊಹೆಯಿದೆ. ಇವನ್ನು ಬಳಸಿ ಮಿದುಳು ಸೆಕೆಂಡಿಗೆ 100 ಕೋಟಿ ಲೆಕ್ಕಾಚಾರಗಳನ್ನು ಮಾಡಬಲ್ಲದು. ಇಷ್ಟು ಸಂಕೀರ್ಣ ಸಂಖ್ಯೆಗಳು ಕಾಣುವುದು ಅತ್ಯಂತ ವ್ಯವಸ್ಥಿತ ಸೂಪರ್ ಕಂಪ್ಯೂಟರ್ ಗಳಲ್ಲಿ ಮಾತ್ರವೇ. ಈ ಕಾರಣಕ್ಕೇ ನಮ್ಮ ಮಿದುಳನ್ನು ಆಗಾಗ್ಗೆ ಸೂಪರ್ ಕಂಪ್ಯೂಟರ್ ಗಳಿಗೆ ಹೋಲಿಕೆ ಮಾಡುತ್ತಾರೆ.

ಆಯಾ ಗುಂಪಿನ ಪ್ರಾಣಿವರ್ಗದಲ್ಲಿ ಮಿದುಳಿನ ಗಾತ್ರ ಮತ್ತು ದೇಹದ ಅನುಪಾತ ಒಂದು ನಿರ್ದಿಷ್ಟ ಮಟ್ಟದಲ್ಲಿ ಇರುತ್ತದೆ. ಸಸ್ತನಿಗಳ ಗುಂಪಿನಲ್ಲಿ ಇರುವ ಮನುಷ್ಯರ ವಿಷಯದಲ್ಲಿ ಇದು ಭಿನ್ನ. ದೇಹದ ಗಾತ್ರಕ್ಕೆ ಹೋಲಿಸಿದರೆ ನಮ್ಮ ಮಿದುಳಿನ ಗಾತ್ರ ಬೇರೆ ಪ್ರಾಣಿಗಳ ಮಿದುಳಿನ ಗಾತ್ರದ ಅನುಪಾತಕ್ಕಿಂತ ಸಾಕಷ್ಟು ದೊಡ್ಡದು. ನಮ್ಮ ದೇಹದ ತೂಕ 60 ಕಿಲೋಗ್ರಾಂ ಎಂದು ಭಾವಿಸಿದರೆ, ಮಿದುಳಿನ ತೂಕ ಸುಮಾರು 1.5 ಕಿಲೋಗ್ರಾಂ ಇರುತ್ತದೆ. ದೇಹ/ಮಿದುಳು ಅನುಪಾತ ಸುಮಾರು 40. ಎಂಟು ಕಿಲೋಗ್ರಾಂ ತೂಗುವ ಬೆಕ್ಕಿನ ಮಿದುಳಿನ ತೂಕ ಸುಮಾರು 80 ಗ್ರಾಂ; ಅನುಪಾತ ಸುಮಾರು 100. ಆನೆ, ಸಿಂಹಗಳ ಅನುಪಾತ ಸುಮಾರು 550 ಇರುತ್ತದೆ. ಅಂದರೆ, ಮನುಷ್ಯನ ದೊಡ್ಡ ಗಾತ್ರದ ಮಿದುಳು ವಿಕಾಸದ ಹಾದಿಯಲ್ಲಿ ಮುನ್ನಡೆಯಲು ಅನುಕೂಲವಾಯಿತು ಎಂದು ಭಾವಿಸಬಹುದು.

ಮಿದುಳಿನ ದೊಡ್ಡ ಗಾತ್ರದ ಬೆಳವಣಿಗೆಯ ಹಿನ್ನೆಲೆಗೆ ಅನೇಕ ಕಾರಣಗಳನ್ನು ಹೇಳಲಾಗಿದೆ. ಶರೀರದಲ್ಲಿ ದೊಡ್ಡ ಮಿದುಳನ್ನು ಸಾಕಲು ಇತರ ಅಂಗಗಳು ಯಾವ ರೀತಿ ಕುಂಠಿತವಾದವು ಎಂಬ ವಿವರಣೆಗಳಿವೆ. ವಿಕಾಸದ ಹಾದಿಯಲ್ಲಿ ಏನೇ ಆಗಿದ್ದರೂ, ಮಿದುಳು ಯದ್ವಾತದ್ವಾ ಪೆಟ್ರೋಲು ಹೀರುವ ದುಬಾರಿ ವಿಲಾಸಿ ಕಾರಿನಂತಹದ್ದು! ಶರೀರದ ತೂಕಕ್ಕೆ ಹೋಲಿಸಿದರೆ ಕೇವಲ 2.5 ಪ್ರತಿಶತ ಇರುವ ಮಿದುಳು ಶರೀರದ ಶೇಕಡಾ 20 ಆಕ್ಸಿಜನ್ ಬಳಸಿಕೊಳ್ಳುತ್ತದೆ. ಅಂದರೆ, ಇಡೀ ಶರೀರಕ್ಕೆ ಪ್ರತೀ ನಿಮಿಷ ಹರಿಯುವ 5 ಲೀಟರ್ ರಕ್ತದ ಪೈಕಿ ಒಂದೇ ಲೀಟರ್ ಕೇವಲ ಮಿದುಳಿಗೇ ಬೇಕು. ಶರೀರದ ಬೇರೆ ಯಾವ ಅಂಗವೂ ಈ ಪ್ರಮಾಣದ ಶಕ್ತಿಯನ್ನು ಹೀರುವುದಿಲ್ಲ. ಯಾವುದೇ ಸಮಯದಲ್ಲಾದರೂ ಮಿದುಳಿನಲ್ಲಿ ಸುಮಾರು 150 ಮಿಲಿಲೀಟರ್ ರಕ್ತ ಇದ್ದೇ ಇರುತ್ತದೆ. ಇನ್ಯಾವ ಅಂಗಕ್ಕೆ ರಕ್ತ ಸಂಚಾರ ಕಡಿಮೆಯಾದರೂ ಮಿದುಳು ಮಾತ್ರ ತನಗೆ ಬರಬೇಕಾದ ರಕ್ತವನ್ನು ಕಡಿಮೆ ಮಾಡಿಕೊಳ್ಳದಂತೆ ವ್ಯವಸ್ಥೆ ಮಾಡಿಕೊಂಡಿದೆ.

ಮಿದುಳು ತನ್ನ ಶಕ್ತಿಯ ಅಗತ್ಯಗಳನ್ನು ಗ್ಲುಕೊಸ್ ಮೂಲಕ ಮಾತ್ರ ಪಡೆಯುತ್ತದೆ. ತೀರಾ ಅವಶ್ಯಕ ಸ್ಥಿತಿಯಲ್ಲಿ ಗ್ಲುಕೋಸ್ ಸಿಕ್ಕದೆ ಹೋದರೆ ಇರಲಿ ಎಂದು ಕೀಟೊನ್ ಎಂಬ ಇನ್ನೊಂದು ಶಕ್ತಿಸ್ರೋತವನ್ನು ಬಳಸಿಕೊಳ್ಳುವ ಅನುಕೂಲ ಮಿದುಳಿಗೆ ಇದೆ. ವಿಶ್ರಾಂತ ಸ್ಥಿತಿಯಲ್ಲಿ ಶರೀರದ ಒಟ್ಟು ಬಳಕೆಯಲ್ಲಿನ ಶೇಕಡಾ 60 ಗ್ಲುಕೋಸ್ ಕೇವಲ ಮಿದುಳಿನ ಕೆಲಸಕ್ಕಾಗಿಯೇ ಉಪಯೋಗ ಆಗುತ್ತದೆ. ಅಲ್ಲದೇ, ಮಿದುಳು ತನ್ನೊಳಗೆ ಗ್ಲುಕೋಸ್ ಅನ್ನು ಸಂಗ್ರಹಿಸಿ ಇಡುವುದಿಲ್ಲ. ಹೀಗಾಗಿ, ಒಂದೇ ಸಮನೆ ಕೆಲಸ ಮಾಡುವ ಮಿದುಳಿಗೆ ಗ್ಲುಕೋಸ್ ಪೂರೈಕೆ ನಿರಂತರವಾಗಿ ಆಗುತ್ತಲೇ ಇರಬೇಕು. ಒಂದು ವೇಳೆ ಯಾವುದೇ ಕಾರಣಕ್ಕೆ ಈ ಸರಬರಾಜಿನಲ್ಲಿ ವ್ಯತ್ಯಾಸವಾದರೆ ಮಿದುಳಿಗೆ ಚಡಪಡಿಕೆ ಉಂಟಾಗುತ್ತದೆ; ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಕುಂಠಿತವಾಗುತ್ತದೆ. ಆ ಸಮಯದಲ್ಲಿ ಮಿದುಳು ‘ತನಗೆ ಗ್ಲುಕೋಸ್ ಅಗತ್ಯವಿದೆ’ ಎಂದು ಹೊಟ್ಟೆಗೆ ಸಂಕೇತ ಕಳಿಸಿ, ಹಸಿವಿನ ಭಾವನೆಯನ್ನು ಉಂಟುಮಾಡುತ್ತದೆ. ಹೀಗಾಗಿ, ‘ಹಸಿವಿನ ಸಮಯದಲ್ಲಿ ಮುಖ್ಯ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು’ ಎನ್ನುವ ಮಾತನ್ನು ಹಿರಿಯರು ಹೇಳುತ್ತಾರೆ. ದಿನವೊಂದಕ್ಕೆ ಮಿದುಳಿಗೇ ಸುಮಾರು 120 ಗ್ರಾಂ ಗ್ಲುಕೋಸ್ ಅಗತ್ಯವಿದೆ. ಇಷ್ಟು ಕ್ಯಾಲೊರಿ ಶಕ್ತಿ ಪೂರೈಸಲು ಪ್ರತೀ ದಿನ ಸುಮಾರು 350-400 ಗ್ರಾಂ ಧಾನ್ಯಗಳು ಬೇಕಾಗುತ್ತವೆ!

ಮಿದುಳು ಒಂದೆಡೆಯಾದರೆ, ಅದರಿಂದ ಹೊರಟಿರುವ ನರಮಂಡಲ ಮತ್ತೊಂದೆಡೆ. ಪ್ರಾಣಿಗಳ ವಿಕಾಸದ ಹಾದಿಯಲ್ಲಿ ಮಿದುಳಿನ ಎರಡು ಅರೆಗೋಳಗಳು ಬೆಳೆದದ್ದು ಬಹಳ ತಡವಾಗಿ. ಅರೆಗೋಳಗಳಿಂದ ಮೊದಲಾಗಿ ಮಿದುಳಿನ ಕೆಳಗೆ ಇಳಿಯುತ್ತಾ ಹೋದಂತೆ ಪಾನ್ಸ್, ಮೆಡುಲ್ಲ, ಮತ್ತು ಮಿದುಳುಬಳ್ಳಿ ಇರುತ್ತವೆ. ಈ ಮಿದುಳುಬಳ್ಳಿ ಬೆನ್ನುಮೂಳೆಯ ಒಳಗಿನ ರಂಧ್ರದ ಮೂಲಕ ಬೆನ್ನಿನಲ್ಲಿ ಇಳಿಯುತ್ತದೆ. ಬೆನ್ನುಮೂಳೆ ಎಂದರೆ ಸುಮಾರು ಮೂವತ್ತು ಪ್ರತ್ಯೇಕ ಮೂಳೆಗಳ ಸರಪಣಿ. ಇದರ ಎರಡು ಅನುಕ್ರಮ ಮೂಳೆಗಳ ಇಕ್ಕೆಲಗಳಲ್ಲಿ ಕಿಂಡಿಗಳಿವೆ. ಈ ಕಿಂಡಿಗಳ ಮೂಲಕ ನರಗಳು ಹೊರಟು ದೇಹದ ಅಂಗಗಳಿಗೆ ತಲುಪುತ್ತವೆ. ಇವೆಲ್ಲವೂ ನರವ್ಯೂಹದ ಭಾಗಗಳು. ಇವೆಲ್ಲದರ ಜೊತೆಗೆ ಹನ್ನೆರಡು ಜೊತೆ ನರಗಳು ತಲೆಬುರುಡೆಯ ಹಲವಾರು ರಂಧ್ರಗಳ ಮೂಲಕ ಮುಖದ ಮತ್ತು ಶರೀರದ ಹಲವಾರು ಭಾಗಗಳಿಗೆ ಇಳಿಯುತ್ತವೆ. ಈ ಹನ್ನೆರಡು ಜೊತೆ ನರಗಳನ್ನು cranial ನರಗಳು ಎನ್ನುತ್ತಾರೆ. ಮುಖದ ಇಂದ್ರಿಯಗಳ ಬಹುತೇಕ ಕೆಲಸಗಳು ಈ cranial ನರಗಳ ಮೂಲಕವೇ ಆಗುತ್ತದೆ.

ಮಿದುಳಿಗೆ ರಕ್ಷಣೆ ನೀಡುವ ಸಲುವಾಗಿ ಗಟ್ಟಿಯಾದ ತಲೆಬುರುಡೆ ಬಹಳ ಮುಖ್ಯ. ಆದರೆ, ತಲೆ ಅಲುಗಾಡುವಾಗ ಒಳಗಿನ ಮಿದುಳು ಬುರುಡೆಯ ಒಳಭಾಗಕ್ಕೆ ತಾಕುತ್ತಾ ಘಾಸಿಯಾಗಬಾರದು. ಈ ಕಾರಣಕ್ಕೆ ಮಿದುಳಿನ ಸುತ್ತಾ ಇರುವ ಒಂದು ಪದರದಲ್ಲಿ ಸುಮಾರು 150 ಮಿಲಿಲೀಟರ್ ನಷ್ಟು ವಿಶಿಷ್ಟ ದ್ರವ ಆವರಿಸಿದೆ. ಇದು shock-absorber ಮಾದರಿಯ ಆಘಾತ-ನಿರೋಧಕವಾಗಿ ಕೆಲಸ ಮಾಡುತ್ತದೆ. ಅಲ್ಲದೇ, ಮಿದುಳಿಗೆ ಕೆಲವು ಪೋಷಕಾಂಶಗಳನ್ನು ಒದಗಿಸಿ, ಅದರ ತ್ಯಾಜ್ಯವನ್ನೂ ತೆಗೆಯುತ್ತದೆ. ನೀರಿನಲ್ಲಿ ಇರುವ ವಸ್ತು ಹಗುರವಾಗಿ ಭಾಸವಾಗುವಂತೆ, ಈ ದ್ರವದಲ್ಲಿ ತೇಲುವ ಮಿದುಳಿನ ತೂಕ ತಲೆಯಲ್ಲಿ ಹಗುರವಾಗಿ ಇರುವಂತಾಗುತ್ತದೆ. ಈ ದ್ರವ ಇರುವ ಪದರ ಕೇವಲ ಮಿದುಳಿನ ಸುತ್ತ ಮಾತ್ರವಲ್ಲದೇ, ಮಿದುಳುಬಳ್ಳಿಯ ಸುತ್ತಲೂ ಹರಡಿದೆ. ಹೀಗಾಗಿ, ಮಿದುಳಿನ ಕೆಲವು ಸಮಸ್ಯೆಗಳ ಪತ್ತೆಗೆ ಬೆನ್ನುಮೂಳೆಯ ಸಮೀಪದಿಂದ ಈ ದ್ರವದ ಕೆಲವು ಹನಿಗಳನ್ನು ಸೂಜಿಯ ಮೂಲಕ ತೆಗೆದು, ಪರೀಕ್ಷಿಸಿ, ಅಮೂಲ್ಯ ಮಾಹಿತಿ ಪಡೆಯಬಹುದು. ಶರೀರದ ಯಾವುದಾದರೂ ನಿಶ್ಚಿತ ಭಾಗಕ್ಕೆ ಅರಿವಳಿಕೆ ನೀಡುವಾಗಲೂ ಇದರ ಪ್ರಯೋಜನವಿದೆ. ಇದನ್ನು spinal ಅರಿವಳಿಕೆ ಎನ್ನುತ್ತಾರೆ.

ಪ್ರತಿಯೊಂದು ನರಕ್ಕೂ ಕೋಶದ ಭಾಗ ಮತ್ತು ಬಳ್ಳಿಯ ಭಾಗ ಇರುತ್ತದೆ. ಈ ಬಳ್ಳಿಯ ಭಾಗದ ಮೇಲೆ ವಿಶಿಷ್ಟ ಪದರದ ಲೇಪನವಿದೆ. ಈ ಪದರ ನರಬಳ್ಳಿಗೆ ಬಿಳಿಯ ಬಣ್ಣ ನೀಡುತ್ತದೆ. ಈ ಪದರವಿಲ್ಲದ ನರಕೋಶದ ಭಾಗ ಬೂದುಬಣ್ಣದಲ್ಲಿದೆ. ಹೀಗಾಗಿ, ನರಕೋಶಗಳಿರುವ ಮಿದುಳಿನ ಮೇಲಿನ ಭಾಗವನ್ನು grey matter ಎಂದೂ, ನರಬಳ್ಳಿಗಳ ಕೆಳಗಿನ ಭಾಗವನ್ನು white matter ಎಂದೂ ಕರೆಯುತ್ತಾರೆ. ಒಂದೂವರೆ ಕಿಲೋಗ್ರಾಂ ತೂಕದ ಮಿದುಳಿನ ಸುಮಾರು 850 ಗ್ರಾಂ grey matter ಆದರೆ, ಉಳಿದ 650 ಗ್ರಾಂ white matter. ಮಿದುಳಿನಲ್ಲಿ ಬಳಕೆಯಾಗುವ ಆಕ್ಸಿಜನ್ ನ ಶೇಕಡಾ 90 ಕ್ಕಿಂತ ಹೆಚ್ಚಿನ ಸಿಂಹಪಾಲನ್ನು ಕಬಳಿಸುವುದು grey matter ನರಕೋಶಗಳು. ಅಳಿದುಳಿದ ಪಾಲು white matter ನದ್ದು. ನರಬಳ್ಳಿಗೆ ಬಿಳಿಯ ಬಣ್ಣ ನೀಡುವ ವಿಶಿಷ್ಟ ಪದರ ಬಹುತೇಕ ಎಲ್ಲಾ ನರಗಳ ಮೇಲೆಯೂ ಮುಂದುವರೆಯುತ್ತದೆ. ಮಿದುಳಿನಿಂದ ಹೊರಟ ನರಮಂಡಲದ ಎಲ್ಲಾ ನರಗಳನ್ನೂ ಸರಳರೇಖೆಯಲ್ಲಿ ಜೋಡಿಸಿದರೆ ಅದು 15000 ಕಿಲೋಮೀಟರ್ ದಾಟುತ್ತದೆ. ಇವನ್ನು ಬಳಸಿ ಇಡೀ ಭಾರತ ದೇಶದ ಹೊರ ಆವರಣವನ್ನು (perimeter) ಸುತ್ತುಹಾಕಬಹುದು!

ಕೋಟಿಗಳ ಸಂಖ್ಯೆಯಲ್ಲಿ ಇರುವ ನಮ್ಮ ನರಕೋಶಗಳು ಶಾಶ್ವತವಲ್ಲ. ಸೆಕೆಂಡಿಗೆ ಒಂದು ನರಕೋಶ ಮಿದುಳಿನಲ್ಲಿ ತಂತಾನೇ ನಾಶವಾಗುತ್ತದೆ. ಈ ಲೆಕ್ಕಕ್ಕೆ ಪ್ರತಿದಿನ ಸುಮಾರು 85,000 ನರಕೋಶಗಳು ಇಲ್ಲವಾಗುತ್ತವೆ. ವಯಸ್ಸಾಗುತ್ತಾ ಈ ಸಂಖ್ಯೆ ಒಟ್ಟಾರೆ ಲೆಕ್ಕದಲ್ಲಿ ಒಂದು ನಿರ್ಣಾಯಕ ಹಂತ ತಲುಪಿದಾಗ ಅನೇಕ ಸಮಸ್ಯೆಗಳು ಉಲ್ಬಣಿಸುತ್ತವೆ. ವೃದ್ಧರಾದಂತೆ ಮರೆವಿನ ಸಮಸ್ಯೆಗಳು ಉಂಟಾಗುವುದಕ್ಕೆ ಇದೂ ಒಂದು ಕಾರಣ.

ಮಿದುಳಿನ 60 ಪ್ರತಿಶತ ಮೇದಸ್ಸು (ಕೊಬ್ಬು). ಶರೀರದ ಅಂಗಗಳ ಪೈಕಿ ಅತ್ಯಂತ ಹೆಚ್ಚಿನ ಪ್ರತಿಶತ ಮೇದಸ್ಸು ಇರುವ ಅಂಗ ಮಿದುಳು. ತೂಕದ ಲೆಕ್ಕದಲ್ಲಿ, ಮಿದುಳಿನ ಶೇಕಡಾ 75 ನೀರಿನ ಅಂಶವಾದರೆ, ಶೇಕಡಾ 12 ಮೇದಸ್ಸು, ಶೇಕಡಾ 8 ಪ್ರೊಟೀನ್. ಪಿಷ್ಟದ ಅಂಶ ಶೇಕಡಾ 1 ಕ್ಕಿಂತ ಕಡಿಮೆ. ಹೀಗಾಗಿ, ಮಿದುಳಿನ ಕೆಲಸಕ್ಕೆ ನಿರಂತರವಾಗಿ ಗ್ಲುಕೋಸ್ ಪೂರೈಕೆ ಆಗುತ್ತಿರಲೇಬೇಕು.  

ಮಿದುಳಿನ ಗಣಿತ ಮಿದುಳಿನ ಲೆಕ್ಕಾಚಾರಗಳಷ್ಟೇ ಸಂಕೀರ್ಣ ಮತ್ತು ಕುತೂಹಲಕಾರಿ!

-------------------

ಡಿಸೆಂಬರ್ 2022 ರ ಕುತೂಹಲಿ ವಿಜ್ಞಾನ ಮಾಸಪತ್ರಿಕೆಯಲ್ಲಿ ಪ್ರಕಟವಾದ ಲೇಖನ. ಸಂಚಿಕೆಯನ್ನು ಓದಲು ಕೊಂಡಿ: https://flipbookpdf.net/web/site/5b8a82bc5d5ac22343980d7fda4a52a1b9a7d7fe202212.pdf.html

 


 ಮನುಷ್ಯನ ಆಯಸ್ಸು ಎಷ್ಟು?

ಡಾ. ಕಿರಣ್ ವಿ.ಎಸ್.

ವೈದ್ಯರು

ಪುರಾಣಗಳು ಸಾವಿರಾರು ವರ್ಷಗಳ ಕಾಲ ಬದುಕಿದವರ ಕತೆಗಳನ್ನು ಹೇಳುತ್ತವೆ. ಆದರೆ ವೇದಗಳು ಶತಾಯುಷ್ಯವನ್ನು “ಭರ್ತಿ ಆಯಸ್ಸು” ಎಂದು ತೋರುತ್ತವೆ. ಯಜುರ್ವೇದದ “ಪಶ್ಯೇಮ ಶರದಃ ಶತಂ”; ತೈತ್ತರೀಯ ಬ್ರಾಹ್ಮಣದ “ಶತಮಾನಂ ಭವತಿ” ಮೊದಲಾದವು ನೂರು ವರ್ಷಗಳ ಕಾಲ ಜೀವಿಸುವುದನ್ನು ಬದುಕಿನ ಭಾಗ್ಯಗಳಲ್ಲಿ ಒಂದೆಂದು ಸೂಚಿಸುತ್ತವೆ. ಜೀವನದಲ್ಲಿ ಅರವತ್ತು ವರ್ಷಗಳನ್ನು ಪೂರೈಸುವುದು ಒಂದು ಸಾಧನೆಯಾಗಿದ್ದ ಕಾಲವಿತ್ತು. ಸಂವತ್ಸರ ಚಕ್ರದ ಅರವತ್ತು ವರ್ಷಗಳನ್ನು ಪೂರೈಸಿ, ಮತ್ತೊಮ್ಮೆ ಹುಟ್ಟಿದ ಸಂವತ್ಸರದ ಹೆಸರಿಗೆ ಮರಳುವ ಪ್ರಕ್ರಿಯೆಯನ್ನು ಎರಡನೆಯ ಆಯಸ್ಸು ಎಂದು ಪರಿಗಣಿಸಿ ಮಾಡುವ ಸಮಾರಂಭಕ್ಕೆ ಷಷ್ಠಿಪೂರ್ತಿ ಎನ್ನುವ ಹೆಸರಿದೆ. ಶಕ 1800 ರಲ್ಲಿ ಭಾರತದಲ್ಲಿ ಹುಟ್ಟಿದ ವ್ಯಕ್ತಿಯ ಸರಾಸರಿ ಆಯಸ್ಸು ಕೇವಲ 25 ವರ್ಷಗಳು. ಶಕ 1900 ಕ್ಕೆ ಇದು 47 ವರ್ಷಗಳಿಗೆ ಏರಿತ್ತು. ಇಸವಿ 2000 ಕ್ಕೆ ಈ ಸಂಖ್ಯೆ 62 ವರ್ಷಗಳಿಗೆ ತಲುಪಿ, ಪ್ರಸ್ತುತ 70 ವರ್ಷಗಳನ್ನು ಮೀರಿದೆ. ಅಂದರೆ, 1800 ನೆಯ ಇಸವಿಯಲ್ಲಿ ಷಷ್ಠಿಪೂರ್ತಿ ಮಾಡಿಕೊಳ್ಳುವುದು ನಿಜದ ಸಾಧನೆ ಎನಿಸಿದರೆ, 2000 ಇಸವಿಯಲ್ಲಿ ಅದು ಕೇವಲ ಸಾಂಕೇತಿಕ ಅನಿಸಬಹುದು.

ಆಯಸ್ಸಿನ ಏರಿಕೆಗೆ ಕಾರಣವೇನು? ಇದಕ್ಕೆ ಮನುಷ್ಯರ ಸಾವಿಗೆ ಪ್ರಮುಖ ಕಾರಣಗಳೇನು ಎನ್ನುವುದರ ಜಿಜ್ಞಾಸೆ ಬೇಕು. ಶಕ 1800 ಸುಮಾರಿನಲ್ಲಿ ಸಾವಿಗೆ ಮುಖ್ಯ ಕಾರಣ ಸಾಂಕ್ರಾಮಿಕ ಕಾಯಿಲೆಗಳು. ಶಕ 1900 ಸುಮಾರಿಗೆ ಸಾಂಕ್ರಾಮಿಕ ಕಾಯಿಲೆಗಳ ಜೊತೆಗೆ ಮಧುಮೇಹ, ಅಧಿಕ ರಕ್ತದೊತ್ತಡ, ಹೃದ್ರೋಗದಂತಹ ಕಾಯಿಲೆಗಳು, ಅಪಘಾತಗಳು, ಅಪೌಷ್ಟಿಕತೆ ಈ ಪಟ್ಟಿಗೆ ಸೇರಿದವು. ಶಕ 2000 ದ ಹೊತ್ತಿಗೆ ಲಸಿಕೆಗಳ, ಪ್ರತಿಜೀವಕಗಳ ಕೃಪೆಯಿಂದ ಸಾಂಕ್ರಾಮಿಕ ಕಾಯಿಲೆಗಳ ತೀವ್ರತೆ ಇಳಿದು, ಪರಿಸ್ಥಿತಿ ಬಹಳಷ್ಟು ಸುಧಾರಿಸಿತ್ತು. ಜೀವನಶೈಲಿಯ ಕಾಯಿಲೆಗಳು, ಕ್ಯಾನ್ಸರ್, ತಂಬಾಕು ಬಳಕೆ, ಮದ್ಯಪಾನದ ಚಟ, ಅಪಘಾತಗಳು, ಬೊಜ್ಜು, ಅತಿ-ಪೌಷ್ಟಿಕತೆ, ಆತ್ಮಹತ್ಯೆ ಇಂತಹ ಅನೇಕ ಕಾರಣಗಳು ಪೂರ್ಣಾಯಸ್ಸಿಗೆ ಅಡ್ಡಿಯಾದವು. ಇಷ್ಟಾಗಿಯೂ ಸರಾಸರಿ ಆಯಸ್ಸು ಏರಿಕೆಯಾದದ್ದರ ಮುಖ್ಯ ಕಾರಣ 1900 ರಲ್ಲಿ ಸಾವಿಗೆ ಕಾರಣವಾಗುತ್ತಿದ್ದ ಅಂಶಗಳನ್ನು ಬಹುತೇಕ ನಿವಾರಿಸಿಕೊಂಡದ್ದು.

ಒಂದು ವೇಳೆ ಸಾವಿಗೆ ಕಾರಣವಾಗಬಲ್ಲ ಯಾವುದೇ ಬಾಹ್ಯ ಸಮಸ್ಯೆ ಸಂಭವಿಸಲಿಲ್ಲವೆನ್ನೋಣ. ಆಗ ಪೂರ್ಣಾಯುಷ್ಯ ಎಂದರೆ ಎಷ್ಟು? ಈಗ ನಾವು ಸಾಕಷ್ಟು ಶತಾಯುಷಿಗಳನ್ನು ಕಾಣುತ್ತಿದ್ದೇವೆಯಾದರೂ, ಆ ಆಯಸ್ಸನ್ನು ಪ್ರತಿಯೊಬ್ಬರೂ ಸಾಧಿಸಬಲ್ಲರು ಎಂಬುದಿಲ್ಲ. ವೃದ್ಧಾಪ್ಯದ ಏಕೈಕ ಕಾರಣದಿಂದ ಆಗುವ ಸಾವುಗಳು ಸಾಕಷ್ಟಿವೆ. ಅಂದರೆ, ಯಾವುದೇ ಬಾಹ್ಯ ಕಾರಣಗಳು ಇಲ್ಲದಿದ್ದರೂ, ಶರೀರ ತಾನೇ ತಾನಾಗಿ, ಸಹಜವಾಗಿ, ವಯೋಸಂಬಂಧಿ ಕಾರಣಗಳಿಂದ ಜರ್ಜರಿತವಾಗುತ್ತಾ ಕಡೆಗೆ ಸಾವಿಗೆ ಶರಣಾಗುತ್ತದೆ. ಸದ್ಯಕ್ಕೆ ಈ ರೀತಿ ಸಾವಿಗೆ ಗುರಿಯಾಗುವವರ ಸರಾಸರಿ ಆಯಸ್ಸು 80-90 ವರ್ಷಗಳ ಆಸುಪಾಸಿನಲ್ಲಿದೆ. ಬಾಹ್ಯ ಕಾರಣಗಳಿಂದ ಆಗುತ್ತಿದ್ದ ಸಾವುಗಳನ್ನು ಚಿಕಿತ್ಸೆಗಳ ಮೂಲಕ ತಡೆಗಟ್ಟಿ, ಸರಾಸರಿ ಆಯಸ್ಸನ್ನು ಬೆಳೆಸಿದಂತೆ, ವೃದ್ಧಾಪ್ಯ ಸಂಬಂಧಿ ವಯೋಸಹಜ ಸಮಸ್ಯೆಗಳನ್ನು ತಡೆಗಟ್ಟಿ, ಬದುಕಿನ ಅವಧಿಯನ್ನು ಮತ್ತಷ್ಟು ಹೆಚ್ಚಿಸಿ, ಆಯಸ್ಸನ್ನು ವಿಸ್ತರಿಸಲು ಸಾಧ್ಯವೇ? ಒಂದು ವೇಳೆ ಸಾಧ್ಯವೆಂದರೆ, ಆಗ ಆಯಸ್ಸು ಎಷ್ಟು ವರ್ಷಗಳಿಗೆ ತಲುಪಬಹುದು?  

ವಿಜ್ಞಾನಿಗಳು ಬಹಳ ಕಾಲದಿಂದ ಈ ಸಾದ್ಯತೆಯ ಹಿಂದೆ ಬಿದ್ದಿದ್ದಾರೆ. ವೃದ್ಧಾಪ್ಯ ಎಂದರೇನು?; ಅದು ಹೇಗೆ ಸಂಭವಿಸುತ್ತದೆ?; ಅದನ್ನು ಸಮರ್ಪಕವಾಗಿ, ವಸ್ತುನಿಷ್ಠವಾಗಿ ಅಳೆಯುವ ಬಗೆ ಹೇಗೆ?: ಯಾವ ರೀತಿ ವೃದ್ಧಾಪ್ಯಕ್ಕೆ ಕಾರಣವಾಗುವ ಸಂಗತಿಗಳನ್ನು ನಿಯಂತ್ರಿಸಬಹುದು? – ಈ ಮೊದಲಾದ ಪ್ರಶ್ನೆಗಳ ಬಗ್ಗೆ ವಿಜ್ಞಾನಿಗಳಿಗೆ ತೀವ್ರ ಕುತೂಹಲವಿದೆಯಾದರೂ, ಅದಕ್ಕೆ ಸಮಾಧಾನಕರ ಉತ್ತರಗಳಿಲ್ಲ. ಈವರೆಗೆ ಮಾಡಿರುವ ಅನೇಕ ಅಂದಾಜುಗಳ ಪೈಕಿ ಯಾವುದೇ ಒಂದು ಅಂಶವೂ ಪಕ್ಕಾ ಎನ್ನಬಹುದಾದ ಉತ್ತರಗಳನ್ನು ನೀಡಿಲ್ಲ. ಆದರೆ, ಒಂದು ಮಾತನ್ನು ಬಹುತೇಕ ಎಲ್ಲ ಸಂಶೋಧಕರೂ ಒಪ್ಪುತ್ತಾರೆ: ಪ್ರತಿಯೊಂದು ಕ್ಷಣವೂ ನಮ್ಮ ದೇಹ ಸಾವಿರಾರು ರಾಸಾಯನಿಕ ಪ್ರಕ್ರಿಯೆಗಳ ಮೂಲಕ ಹಾದುಹೋಗುತ್ತದೆ. ನಾವು ಚಯಾಪಚಯ (metabolism) ಎಂದು ಕರೆಯುವ ಈ ಪ್ರಕ್ರಿಯೆಗೆ ಬಹಳಷ್ಟು ಶಕ್ತಿ ಖರ್ಚಾಗುತ್ತದೆ. ಈ ಶಕ್ತಿ ನಮಗೆ ದೊರೆಯುವುದು ಆಹಾರದ ಮೂಲಕ. ಶಕ್ತಿಯ ಎಷ್ಟು ಪ್ರಮಾಣ ಚಯಾಪಚಯಕ್ಕೆ ಖರ್ಚಾಗುತ್ತದೆ ಮತ್ತು ಎಷ್ಟು ಭಾಗ ಶರೀರದ ಅಂಗಾಂಶಗಳ ತಯಾರಿಕೆಗೆ ದೊರೆಯುತ್ತದೆ ಎನ್ನುವುದು ಮುಖ್ಯ. ಸಣ್ಣ ವಯಸ್ಸಿನಲ್ಲಿ ಶರೀರದ ಗಾತ್ರ ಕಡಿಮೆ. ಹೀಗಾಗಿ  ಶರೀರದ ನಿರ್ವಹಣೆಗೆ ಹೆಚ್ಚು ಶಕ್ತಿ ಬೇಕಿಲ್ಲ. ಪರಿಣಾಮವಾಗಿ, ಶಕ್ತಿಯ ಖರ್ಚು ಶರೀರವನ್ನು ಬೆಳೆಸಲು ನೆರವಾಗುತ್ತದೆ. ಆದರೆ ಶರೀರ ಗಾತ್ರದಲ್ಲಿ ಬೆಳೆಯುತ್ತಾ ಹೋದಂತೆ ನಿರ್ವಹಣೆಯ ಅಗತ್ಯ ಹೆಚ್ಚುತ್ತದೆ; ಶರೀರದ ಅಂಗಾಂಶಗಳ ತಯಾರಿಕೆಗೆ ದೊರೆಯುವ ಶಕ್ತಿಯ ಪ್ರಮಾಣ ಕುಗ್ಗುತ್ತದೆ. ಬದುಕಿನ ಒಂದು ಹಂತದಲ್ಲಿ ಇವೆರಡೂ ಸಮಸ್ಥಿತಿಯನ್ನು ತಲುಪುತ್ತವೆ. ಈ ಸ್ಥಿತಿಯನ್ನು ಕಾಯ್ದಿಟ್ಟುಕೊಳ್ಳಲು ಶರೀರ ಸಜ್ಜಾಗುತ್ತದೆ. ಸಮಸ್ಥಿತಿಯಲ್ಲಿ ತಾತ್ಕಾಲಿಕವಾಗಿ ಏರುಪೇರಾದಾಗ ಶರೀರ ಅದನ್ನು ಮತ್ತೆ ಯಥಾಸ್ಥಿತಿಗೆ ತರಲು ಸಾಕಷ್ಟು ಹೆಣಗುತ್ತದೆ. ಒಂದು ವೇಳೆ ಈ ಹೆಣಗಾಟವನ್ನು ಅಳೆಯಲು ಸಾಧ್ಯವಾದರೆ, ಆಗ ಸಮಸ್ಥಿತಿಯನ್ನು ಕಾಯ್ದುಕೊಳ್ಳಲು ಶರೀರ ಎಷ್ಟು ಸಮರ್ಥವಾಗಿದೆ ಎಂಬುದನ್ನು ಲೆಕ್ಕಾಚಾರ ಹಾಕಿದಂತೆ. ಕಾಲಕಾಲಕ್ಕೆ ಈ ರೀತಿಯ ಮಾಪನವನ್ನು ಬಳಸಿದರೆ, ಅದು ವೃದ್ಧಾಪ್ಯದ ಅಳತೆಗೋಲಿನಂತೆ ಕೆಲಸ ಮಾಡಬಲ್ಲದು. ಇದು ಸಾಧ್ಯವೇ?

ಸಾಧ್ಯ ಎನ್ನುತ್ತಾರೆ ವಿಜ್ಞಾನಿಗಳು! ಶರೀರವಾಗಲೀ, ಯಂತ್ರವಾಗಲಿ ಬಳಸುತ್ತಾ ಹೋದಂತೆ ಅಲ್ಪಸ್ವಲ್ಪ ಜಖಂ ಆಗುತ್ತಲೇ ಇರುತ್ತದೆ. ಶರೀರದ ವ್ಯವಸ್ಥೆ ಈ ಜಖಂಗಳನ್ನು ಅಲ್ಲಲ್ಲೇ ರಿಪೇರಿ ಮಾಡುತ್ತಾ ಹೋಗುತ್ತದೆ. ಆದರೆ, ಈ ರಿಪೇರಿ ಮಾಡುವ ಸಾಮರ್ಥ್ಯ ವಯಸ್ಸಾಗುತ್ತಾ ಕುಂದುತ್ತದೆ. ಜೀವನದ ಒಂದು ಹಂತದಲ್ಲಿ ಹೀಗೆ ಜಖಂಗೊಂಡಿರುವ ಕೋಶಗಳ ಸಂಖ್ಯೆ ಒಂದು ಹಂತವನ್ನು ಮೀರುತ್ತದೆ. ಅಲ್ಲಿಂದ ಮುಂದೆ ಶರೀರದ ಅಂಗಗಳ ಕಾರ್ಯಕ್ಷಮತೆ ಕಡಿಮೆಯಾಗುತ್ತಾ ಹೋಗುತ್ತದೆ. ಇದರೊಂದಿಗೆ ಮರಣದ ಸಾಧ್ಯತೆಯೂ ಏರುತ್ತದೆ. ಈ ಸಮೀಕರಣವನ್ನು ಗಣಿತೀಯವಾಗಿ ವಿವರಿಸುವ ಪ್ರಯತ್ನಗಳು 19ನೆಯ ಶತಮಾನದ ಆರಂಭದಿಂದಲೇ ನಡೆದಿವೆ. 1825ರಲ್ಲಿ ಬ್ರಿಟನ್ನಿನ ಬೆಂಜಮಿನ್ ಗೊಂಪರ್ಟ್ಜ್ ಎಂಬಾತ ಮರಣದ ಸಾಧ್ಯತೆಗಳ ಬಗ್ಗೆ ಒಂದು ಸಮೀಕರಣ ನೀಡಿ, ನಕ್ಷೆಗಳನ್ನು ತಯಾರಿಸಿದರು. 30 ರಿಂದ 80 ವರ್ಷಗಳ ವಯಸ್ಸಿನ ಜನರಲ್ಲಿ ಇದು ಮರಣದ ಅಂದಾಜನ್ನು ಸಾಕಷ್ಟು ನಿಖರವಾಗಿ ನೀಡುತ್ತಿತ್ತು. ಇದರ ಪ್ರಯೋಜನ ಪಡೆದದ್ದು ಜೀವವಿಮೆಯ ಸಂಸ್ಥೆಗಳು! ಯಾವ ವಯಸ್ಸಿನಲ್ಲಿ ಜೀವವಿಮೆ ಮಾಡಿಸಿದರೆ ಎಷ್ಟು ಪ್ರೀಮಿಯಂ ಹಣ ಪಾವತಿಸಬೇಕೆನ್ನುವ ಲೆಕ್ಕಾಚಾರಕ್ಕೆ ಈ ನಕ್ಷೆ ಆಧಾರವಾಯಿತು. ಈ ನಕ್ಷೆಯನ್ನು ಕಾಲಕಾಲಕ್ಕೆ ಮಾರ್ಪಾಡು ಮಾಡುತ್ತಾ ಇಂದಿಗೂ ಬಳಸಬಹುದೆಂದು ಗಣಿತಜ್ಞರ ಅಭಿಮತ. ಹುಟ್ಟಿದ ಮೊದಲ ವರ್ಷವನ್ನು ಹೊರತುಪಡಿಸಿದರೆ, ಸುಮಾರು ಮೂವತ್ತು ವರ್ಷ ವಯಸ್ಸಿನ ನಂತರ ಪ್ರತಿ 8 ವರ್ಷಗಳಿಗೆ ಸಾವಿನ ಸಾಧ್ಯತೆಗಳು ದುಪ್ಪಟ್ಟಾಗುತ್ತವೆ ಎನ್ನುವ ಲೆಕ್ಕಾಚಾರವಿದೆ. ಇದರ ಮೇಲೆ ತಂಬಾಕು ಬಳಕೆ, ಮದ್ಯಪಾನದ ಚಟ, ಅಪಘಾತಗಳಿಗೆ ಪೂರಕವಾಗಬಲ್ಲ ವೃತ್ತಿ, ಬೊಜ್ಜು ಮೊದಲಾದುವು ಸಾವಿನ ಸಾಧ್ಯತೆಗಳನ್ನು ಮತ್ತಷ್ಟು ಹಿಗ್ಗಿಸುತ್ತವೆ. ಈ ಕಾರಣಕ್ಕಾಗಿಯೇ ವಿಮೆ ಮಾಡಿಸುವ ಸಂಸ್ಥೆಗೆ ಇವೆಲ್ಲವನ್ನೂ ತಿಳಿಸುವುದು ಕಡ್ಡಾಯ.

ಇದು ಗಣಿತದ ಮಾತಾಯಿತು. ಇದನ್ನು ಶರೀರದ ಕೆಲಸ-ಕಾರ್ಯಗಳ ಜೊತೆಗೆ ಹೋಲಿಕೆ ಮಾಡಿದರೆ ಮತ್ತಷ್ಟು ನಿಖರವಾದ ಮಾಹಿತಿ ದಕ್ಕಲು ಸಾಧ್ಯವೇ? ರಕ್ತಕೋಶಗಳ ಸಂಖ್ಯೆ ಮತ್ತು ಮಿದುಳಿನ ಸಾಮರ್ಥ್ಯಗಳನ್ನು ಅಳೆಯುವ ಸರಳ ಪರೀಕ್ಷೆಗಳನ್ನು ಮಾಡಿ, ಅದನ್ನು ಸುಮಾರು ಐದೂವರೆ ಲಕ್ಷ ಜನರಲ್ಲಿ ಅನ್ವಯಗೊಳಿಸಿ, ಆಯುಸ್ಸಿನ ಪ್ರಮಾಣವನ್ನು ಸೂಚಿಸಬಲ್ಲ ನಕ್ಷೆಗಳನ್ನು ಸಂಶೋಧಕರು ತಯಾರಿಸಿದ್ದಾರೆ. ಈ ಬೃಹತ್ ಪ್ರಮಾಣದ ಅಧ್ಯಯನವನ್ನು ಬಳಸಿಕೊಂಡು ಆಯಾ ವ್ಯಕ್ತಿಯ ಅನಾರೋಗ್ಯದ ಆಧಾರದ ಮೇಲೆ ಅವರ ಜೀವಿತಾವಧಿ ಎಷ್ಟೆಂದು ಅಂದಾಜಿಸಬಹುದು; ತೀವ್ರ ಮಟ್ಟದ ಯಾವುದೇ ಆರೋಗ್ಯ ಸಮಸ್ಯೆ ಇಲ್ಲದವರ ಒಟ್ಟು ಆಯಸ್ಸು ಎಷ್ಟಿರಬಹುದೆಂದೂ ಲೆಕ್ಕ ಹಾಕಬಹುದು. ಇದರ ಪ್ರಕಾರ ನಮ್ಮ ದೇಹದ ಜಖಂ-ರಿಪೇರಿ ವ್ಯವಸ್ಥೆ ಕಾಯಿಲೆಯಂತಹ ಯಾವುದೇ ಬಾಹ್ಯ ಪ್ರಚೋದನೆ ಇಲ್ಲದಿದ್ದರೂ ಒಂದು ಹಂತಕ್ಕೆ ಸ್ಥಗಿತವಾಗುತ್ತದೆ. ಹೀಗೆ ವ್ಯವಸ್ಥೆ ಕೊನೆಗೊಳ್ಳುವ ಬಿಂದುವನ್ನು ನಮ್ಮ ಆಯುಸ್ಸಿನ ಪರಮಾವಧಿ ಎಂದು ಭಾವಿಸಬಹುದು. ಈ ಲೆಕ್ಕಾಚಾರದ ಪ್ರಕಾರ ಸದ್ಯಕ್ಕೆ ಮಾನವರ ಆಯಸ್ಸಿನ ಗರಿಷ್ಠ ಸಾಧ್ಯತೆ 138 ರಿಂದ 150 ವರ್ಷಗಳು. ಆದರೆ, ಪ್ರಸ್ತುತ ಶತಾಯುಷಿಗಳ ಸಂಖ್ಯೆ ಹೆಚ್ಚಿಲ್ಲದಿರುವುದರಿಂದ, ಒಂದು ಹಂತದ ನಂತರ ಅವರಿಗೆ ಯಾವ ಕಾಯಿಲೆಗಳು ಬರಬಹುದು ಎಂದು ಅರಿಯುವುದು ಕಷ್ಟ. ಹೀಗಾಗಿ, ತೀವ್ರ ಆರೋಗ್ಯ ಸಮಸ್ಯೆಯ ಅನುಪಸ್ಥಿತಿ ಎಷ್ಟು ಕಾಲ ಮುಂದುವರೆಯಬಲ್ಲದು ಎಂದು ತಿಳಿಯಲಾಗದು. ಅಂತೆಯೇ, ಯಾರಾದರೂ ಈ 150 ವರ್ಷಗಳ ಮಿತಿಯನ್ನು ಮುಟ್ಟಿಯಾರೆ ಎಂದು ಅಂದಾಜಿಸುವುದೂ ಕಠಿಣವೇ.

ಇದು ಇಂದಿನ ಮಾತಾಯಿತು. ಈ ದಿನಕ್ಕೆ ನಾವೇನಿದ್ದರೂ ಕಾಯಿಲೆಗಳಿಗೆ ಚಿಕಿತ್ಸೆ ನೀಡಬಹುದು; ಕ್ಯಾನ್ಸರ್ ಕೋಶಗಳನ್ನು ಪತ್ತೆ ಹಚ್ಚಿ ಅವನ್ನು ನಿಖರವಾಗಿ ನಿರ್ನಾಮ ಮಾಡುವ ನವೀನ ತಂತ್ರಗಳನ್ನು ಬಳಸಬಹುದು; ಅಪಘಾತಗಳ ವಿರುದ್ಧ ಸಾಧ್ಯವಾದಷ್ಟೂ ಎಚ್ಚರ ವಹಿಸಬಹುದು; ತಂಬಾಕು, ಮದ್ಯಗಳಿಂದ ದೂರ ಉಳಿಯಬಹುದು; ಸಾತ್ವಿಕ ಆಹಾರ ಸೇವನೆ ಮಾಡಬಹುದು; ಆಯಾ ವಯಸ್ಸು ಅನುಮತಿಸುವ ಕ್ಲುಪ್ತ ವ್ಯಾಯಾಮ ಮಾಡಬಹುದು. ಇದ್ಯಾವುದೂ ದೇಹದ ಜಖಂ-ರಿಪೇರಿ ವ್ಯವಸ್ಥೆಯ ಮಿತಿಯನ್ನು ಹೆಚ್ಚಿಸಲಾರವು; ಇದನ್ನು ಉತ್ತೇಜಿಸಬಲ್ಲ ಪಕ್ಕಾ ವಿಧಾನಗಳೂ ಸದ್ಯಕ್ಕೆ ನಮ್ಮಲ್ಲಿಲ್ಲ. ಆದ್ದರಿಂದ, ನಮ್ಮ ಮಿತಿಯನ್ನೇ ನಿಸರ್ಗದ ಮಿತಿ ಎಂದು ಭಾವಿಸಬೇಕಾಗುತ್ತದೆ. ಆದರೆ, ನಾಳೆ?

1900 ರಲ್ಲಿ ಇದ್ದ ವೈದ್ಯಕೀಯ ತಂತ್ರಜ್ಞಾನ ಬೆಳೆದು ದುಪ್ಪಟ್ಟಾಗಲು 50 ವರ್ಷಗಳು ಹಿಡಿದಿದ್ದವು. ಅಲ್ಲಿಂದ ಮುಂದೆ ವೇಗವನ್ನು ಪಡೆದುಕೊಂಡ ಈ ಕ್ಷೇತ್ರ ಈಗ ದಾಪುಗಾಲಿಡುತ್ತಿದೆ. ಪ್ರಸ್ತುತ ವೈದ್ಯಕೀಯ ವಿಜ್ಞಾನ ಪ್ರತಿ ವರ್ಷ ಶೇಕಡಾ 14 ರಿಂದ 17 ರಷ್ಟು ವೇಗವಾಗಿ ಬೆಳೆಯುತ್ತಿದೆ ಎಂದು ಸಂಶೋಧಕರ ಮತ್ತು ಅರ್ಥಶಾಸ್ತ್ರಜ್ಞರ ಅಭಿಮತ. ಈ ಲೆಕ್ಕದಲ್ಲಿ ಇಂದಿನ ನವೀನ ವೈದ್ಯಕೀಯ ವಿಧಾನ 6-7 ವರ್ಷಗಳ ನಂತರ ಹಳತಾಗುತ್ತದೆ ಮತ್ತು ಹೊಸ ವಿಧಾನವೊಂದು ಅದರ ಸ್ಥಾನ ಗಿಟ್ಟಿಸುತ್ತದೆ. ಅಂದರೆ, ಇಂದು ನಮಗಿರುವ ಸಾಧ್ಯತೆಗಳಿಗೂ, ಇನ್ನು ಐವತ್ತು ವರ್ಷಗಳ ನಂತರ ಜನಿಸುವ ಮಗುವೊಂದರ ಸಾಧ್ಯತೆಗಳಿಗೂ ನಾವು ಊಹಿಸಲಾರದಷ್ಟು ಅಂತರವಿದೆ. 1900 ನೆಯ ಇಸವಿಯಲ್ಲಿ, ಶತಮಾನಗಳಿಂದ ಮನುಷ್ಯರ ಆಯಸ್ಸನ್ನು ಕುಂಠಿತಗೊಳಿಸುತ್ತಿದ್ದ ಸಾಂಕ್ರಾಮಿಕ ಕಾಯಿಲೆಗಳನ್ನು ಯಶಸ್ವಿಯಾಗಿ ಗೆಲ್ಲಬಹುದೆಂಬ ಅಂದಾಜೂ ಇರಲಿಲ್ಲ. 1950 ರ ವೇಳೆಗೆ ಈ ಕುರಿತಾದ ದಿಟ್ಟ ಹೆಜ್ಜೆಗಳಿಂದ ಇದರ ಸಾಧ್ಯತೆಗಳು ಸ್ಪಷ್ಟವಾದವು. 2000 ದ ವೇಳೆಗೆ ಸಾಂಕ್ರಾಮಿಕ ಕಾಯಿಲೆಗಳು ಪ್ರಾಣ ತೆಗೆಯುತ್ತವೆ ಎಂಬುದು ಮುಖ್ಯವಾಗಿ ಬಡದೇಶಗಳಿಗೆ ಸೀಮಿತವಾಗಿದ್ದವು. 1900 ರಲ್ಲಿ ಅನೂಹ್ಯವಾಗಿದ್ದ ಸಂಗತಿಯೊಂದು 2000 ದ ವೇಳೆಗೆ ಅತಿ ದೊಡ್ಡ ಸಮಸ್ಯೆಯಾಗಿ ಉಳಿದಿರಲಿಲ್ಲ. ಅಂತೆಯೇ, 2000 ದ ವೇಳೆಗೆ ಅತಿ ದೊಡ್ಡ ಆರೋಗ್ಯ ಸಮಸ್ಯೆ ಎನಿಸಿದ ಸಂಗತಿ 2050ರ ವೇಳೆಗೆ ನಗಣ್ಯವಾಗಬಹುದು.

ಸರಿ; 150 ವರ್ಷಗಳ ಕಾಲ ಬದುಕುವ ಕನಸು ನನಸಾಯಿತು ಎಂದೇ ಭಾವಿಸೋಣ. ಆದರೆ ಗುಣಮಟ್ಟ? ಕಾಯಿಲೆಗಳಿಂದ ನರಳುತ್ತಾ, ಮತ್ತೊಬ್ಬರ ಹಂಗಿನಲ್ಲಿ ಬದುಕುವ ಇಚ್ಛೆ ಯಾರಿಗೂ ಇರುವುದಿಲ್ಲ. ಜೀವನದ ಉದ್ದವನ್ನು ಹೆಚ್ಚಿಸಿಕೊಳ್ಳುವುದಷ್ಟೆ ಅಲ್ಲ, ಅದರ ವಿಸ್ತಾರವನ್ನೂ ಹೆಚ್ಚಿಸಿಕೊಂಡು, ಬದುಕಿನ ಪ್ರತಿಯೊಂದು ಕ್ಷಣದಲ್ಲೂ ಭರ್ತಿ ಜೀವನವನ್ನು ತುಂಬಿಸಿಕೊಳ್ಳುವ ಕನಸು ಪ್ರತಿಯೊಬ್ಬರದ್ದೂ ಆಗಿರುತ್ತದೆ. ಇದು ಸಾಧ್ಯವಾಗುವುದು ಹೇಗೆ? ವಿಜ್ಞಾನ ನಮ್ಮ ಜೀವನದ ಉದ್ದವನ್ನು ಹೆಚ್ಚಿಸಿದರೆ ಸಾಲದು; ನಮ್ಮ ಅನಾರೋಗ್ಯದ ಮಿತಿಗಳನ್ನೂ ಮೀರಬೇಕು. ಇದಕ್ಕೆ ನಮ್ಮ ಜಖಂ-ರಿಪೇರಿ ವ್ಯವಸ್ಥೆ ಸುಧಾರಿಸಬೇಕು. ಪ್ರಸ್ತುತ ವಿಜ್ಞಾನಿಗಳ ಗಮನ ಇರುವುದು ಅಲ್ಲೇ. ವೃದ್ಧಾಪ್ಯದ ವೈಜ್ಞಾನಿಕ ಸಂಶೋಧನೆಗಳು ಈಗ ಖಚಿತ ರೂಪ ಪಡೆಯುತ್ತಿವೆ. ನಮ್ಮ ಜಖಂ-ರಿಪೇರಿಯ ಒಳಸುಳಿಗಳ ಅಧ್ಯಯನ ನಡೆಯುತ್ತಿದೆ. ಮುಕ್ತ-ಆಕ್ಸಿಜನ್ ಸಂಯುಕ್ತಗಳಿಂದ ಹಿಡಿದು ನಮ್ಮ ವರ್ಣತಂತುವಿನ ತುದಿಯ ಟೆಲೊಮೆರ್ ಎನ್ನುವ ಭಾಗದವರೆಗೆ, ಜೀವಕೋಶದ ರಾಸಾಯನಿಕಗಳಿಂದ ಮೊದಲಾಗಿ ಮೈಟೊಕಾಂಡ್ರಿಯಾ ರಚನೆಯವರೆಗೆ ಇದರ ಹುಡುಕಾಟ ನಡೆಯುತ್ತಿದೆ. ಅನಾದಿ ಕಾಲದ “ದೀರ್ಘಾಯುಷ್ಮಾನ್ ಭವ” ಎನ್ನುವ ಹಿರಿಯರ ಹಾರೈಕೆ ಇಂದು “ಸುದೀರ್ಘ ನಿರಾಮಯ ಸಂತೃಪ್ತ ಆಯುಷ್ಮಾನ್ ಭವ” ಎಂದು ಬದಲಾಗುವತ್ತ ಮುನ್ನಡೆಯುತ್ತಿದೆ. ಮನುಕುಲದ ಭವಿಷ್ಯ ಮತ್ತಷ್ಟು ರೋಚಕವಾಗಲಿದೆ! 

---------------------

ವಿಸ್ತಾರ ಜಾಲತಾಣದಲ್ಲಿ ಪ್ರಕಟವಾದ ಡಿಸೆಂಬರ್ 2022 ರ ವೈದ್ಯ ದರ್ಪಣ ಅಂಕಣ. ಕೊಂಡಿ: https://vistaranews.com/attribute-170851/2022/12/09/vaidya-darpana-column-how-human-ageing-writes-kiran/ 

 


ಸರಿಯಾದ ನಿರ್ಧಾರಗಳನ್ನು ಮಾಡುವುದು ಹೇಗೆ?

ಡಾ. ಕಿರಣ್ ವಿ.ಎಸ್.

ವೈದ್ಯರು 

ನಿರ್ಧಾರಗಳು ಬದುಕಿನ ಅವಿಭಾಜ್ಯ ಅಂಗ.ಹಲವಾರು ಸಣ್ಣ-ದೊಡ್ಡ ನಿರ್ಧಾರಗಳನ್ನು ದಿನವೂ ಮಾಡುತ್ತಿರುತ್ತೇವೆ. ಯಾವುದು “ಸರಿಯಾದ ನಿರ್ಧಾರ” ಎನ್ನುವುದು ಭವಿಷ್ಯದಲ್ಲಿ ಆಯಾ ಕೆಲಸದ ಪರಿಣಾಮಗಳಿಂದ ತಿಳಿಯುತ್ತದೆ. ಕೆಲಸಕ್ಕೆ ಮುನ್ನವೇ “ಸರಿಯಾದ ನಿರ್ಧಾರ” ಕೈಗೊಳ್ಳಲು ಯಾವ ಸಿದ್ಧಸೂತ್ರವೂ ಇಲ್ಲ. ನಿರ್ಧಾರ ಕೈಗೊಳ್ಳುವ ಮುನ್ನ ಅನೇಕ ಆಯಾಮಗಳನ್ನು ವಿವೇಚಿಸಿ, ಪರಿಣಾಮಗಳನ್ನು ಆಲೋಚಿಸಿ, ಅತ್ಯಂತ ಸೂಕ್ತವೆನಿಸುವ ಆಯ್ಕೆಯನ್ನು ಪಾಲಿಸಬೇಕಾಗುತ್ತದೆ. ನಿರ್ಧಾರಗಳು ಬದುಕಿನ ಹಾದಿಯನ್ನು ಬದಲಿಸಬಲ್ಲವು. ನಿರ್ಧಾರದ ಪ್ರಕ್ರಿಯೆಯನ್ನು ತರ್ಕಬದ್ಧವಾಗಿ ಮಾಡುವುದು “ಸರಿಯಾದ ನಿರ್ಧಾರ”ದ ಹಾದಿಯಲ್ಲಿ ಮಹತ್ವದ ಹೆಜ್ಜೆ.

“ಯಾವುದೇ ನಿರ್ಧಾರದಿಂದ ಆಗಬಹುದಾದ ಅತ್ಯಂತ ದೊಡ್ಡ ಸಮಸ್ಯೆಗೆ ಮನಸ್ಸನ್ನು ಸಜ್ಜುಗೊಳಿಸಬೇಕು” ಎಂದು ಮನಃಶಾಸ್ತ್ರಜ್ಞರು ಹೇಳುತ್ತಾರೆ. ವಿಶ್ವೇಶ್ವರಯ್ಯನವಂತಹ ಮುತ್ಸದ್ದಿಗಳು ಅಧಿಕಾರಿಗಳೊಂದಿಗಿನ ಸಮಾಲೋಚನೆಗಳಲ್ಲಿ “What is the worst?” ಎಂದು ಕೇಳುತ್ತಿದ್ದರು. ನಿರ್ಧಾರದ ಬಗೆಗಿನ ಭೀತಿಗಳನ್ನು ಬರೆದಿಟ್ಟುಕೊಳ್ಳುವುದು ಉತ್ತಮ. ಹಲವು ಭೀತಿಗಳಿಗೆ ಯಾವ ಆಧಾರವೂ ಇರುವುದಿಲ್ಲ. ಭೀತಿಗಳನ್ನು ಬರವಣಿಗೆಯ ಮೂಲಕ ಸ್ಪಷ್ಟಪಡಿಸುವುದು ಪರಿಣಾಮಗಳ ಕುರಿತಾಗಿ ಆಲೋಚಿಸಲು ಸಹಾಯಕ.

ನಿರ್ಧಾರಗಳನ್ನು ಮಾಡುವ ಮುನ್ನ ಮಾಹಿತಿ ಸಂಗ್ರಹಿಸುವುದು ಸೂಕ್ತ. ವಿಚಾರ ಸ್ಪಷ್ಟತೆ ಸಮಂಜಸ ನಿರ್ಧಾರಗಳಿಗೆ ಸಹಕಾರಿ. ಪ್ರಸ್ತುತ ಜಾಲತಾಣಗಳು ಮಾಹಿತಿಯ ಮಹಾಪೂರವನ್ನೇ ಹರಿಸಬಲ್ಲವು. ಇದರಲ್ಲಿ ಕಾಳು-ಜೊಳ್ಳುಗಳ ವಿವೇಚನೆ ಇರಬೇಕು. ತಜ್ಞರ ಸೋಗು ಹಾಕಿ ದಾರಿ ತಪ್ಪಿಸಬಲ್ಲ ವ್ಯಕ್ತಿಗಳು ಜಾಲತಾಣಗಳಲ್ಲಿ ದೊರೆಯುತ್ತಾರೆ. ಹೀಗಾಗಿ, ಯಾವುದೇ ಮಾಹಿತಿ ಹುಡುಕುವಾಗ ಅಧಿಕೃತ ಸ್ರೋತಗಳ ತಿಳುವಳಿಕೆ ಮುಖ್ಯ. ಕೋರಾ, ರೆಡಿಟ್ ಮೊದಲಾದ ಜಾಲತಾಣಗಳು ಜನರ ವೈಯಕ್ತಿಕ ಅನುಭವಗಳನ್ನು ದಾಖಲಿಸುತ್ತವೆ. ನಮ್ಮನ್ನು ಸದ್ಯಕ್ಕೆ ಕಾಡುತ್ತಿರುವ ಸಮಸ್ಯೆಯನ್ನು ಈಗಾಗಲೇ ಸಫಲವಾಗಿ ಪರಿಹರಿಸಿಕೊಂಡವರ ಅನುಭವಗಳು ಹೊಸ ಹೊಳಹುಗಳನ್ನು ನೀಡಬಲ್ಲವು. ಇಂತಹ ಸಲಹೆಗಳನ್ನು ಯಥಾವತ್ತಾಗಿ ಪಾಲಿಸುವುದಕ್ಕಿಂತಲೂ, ನಮ್ಮ ಸಂದರ್ಭಗಳಿಗೆ ಅವುಗಳನ್ನು ಹೊಂದಿಸಿಕೊಳ್ಳುವುದು ಸಮಂಜಸ.

ನಿರ್ಧಾರಗಳನ್ನು ಕೈಗೊಳ್ಳುವಾಗ ಸಂಬಂಧಿಸಿದ ವ್ಯಕ್ತಿಗಳ ಜೊತೆಗೆ ಚರ್ಚಿಸುವುದು ಸಮಸ್ಯೆಯನ್ನು ಹಗುರವಾಗಿಸುತ್ತದೆ. ಚರ್ಚೆಗೆ ಮುನ್ನ ನಿರ್ಧಾರದ ಆಯಾಮಗಳ ತಿಳುವಳಿಕೆ ಇರಬೇಕು. ಚರ್ಚೆಯ ನಂತರ ಅಂತಿಮ ನಿರ್ಧಾರಕ್ಕೆ ಸ್ವಲ್ಪ ಸಮಯ ನೀಡಬೇಕು. ತೀರಾ ಆಪ್ತರಾದ, ನಂಬಿಕೆಗೆ ಅರ್ಹರಾದ, ವಿಷಯದ ಅನುಭವವಿರುವ ಬೆರಳೆಣಿಕೆಯ ಮಂದಿಯ ಜೊತೆಗೆ ಮಾತ್ರ ಚರ್ಚಿಸುವುದು ಸೂಕ್ತ. ಇಂತಹ ಚರ್ಚೆಗಳಿಂದಲೂ ನಿರ್ಧಾರ ಆಗಲಿಲ್ಲವೆನಿಸಿದರೆ, ಮೂರನೆಯ ವ್ಯಕ್ತಿಯ ದೃಷ್ಟಿಯಿಂದ ವಿವೇಚಿಸಬಲ್ಲ ತಜ್ಞರ ಸಲಹೆ ಪಡೆಯಬಹುದು. ಉದಾಹರಣೆಗೆ, ಆಸ್ತಿ ಖರೀದಿ ವಿಚಾರದಲ್ಲಿ “ನಮ್ಮ ಆದಾಯದ ಮಟ್ಟವನ್ನು ಅನುಸರಿಸಿ ಅದಕ್ಕೆ ಕೈ ಹಾಕಬಹುದೇ” ಎನ್ನುವ ನಿರ್ಧಾರವನ್ನು ತೆಗೆದುಕೊಳ್ಳುವುದು ಸುಲಭವಲ್ಲ. ಇಂತಹ ಸಂದರ್ಭದಲ್ಲಿ ಹಣಕಾಸು ತಜ್ಞರ ಸಲಹೆ ನೆರವಾಗಬಲ್ಲದು. 

ಯಾವುದಾದರೂ ನಿರ್ಧಾರ ಕೈಗೊಂಡರೆ, ಅದನ್ನು ಬದಲಿಸಬಹುದಾದ ಸಾಧ್ಯತೆಗಳ ಬಗ್ಗೆಯೂ ತಿಳಿದಿರಬೇಕು. ಉದಾಹರಣೆಗೆ, ಹೆಚ್ಚಿನ ಆದಾಯದ ಆಲೋಚನೆಯಿಂದ ಸಂಜೆಯ ವೇಳೆ ಅರೆಕಾಲಿಕ ನೌಕರಿಗೆ ಸೇರಬಹುದು. ಇದರಿಂದ ಆದಾಯ ಹೆಚ್ಚುತ್ತದೆಯಾದರೂ, ಕುಟುಂಬದ ಜೊತೆ ಕಳೆಯುವ ಸಮಯ ಕಡಿಮೆಯಾಗುತ್ತದೆ. ಇದು ಕೌಟುಂಬಿಕ ಸಂಬಂಧಗಳ ಮೇಲೆ ಪರಿಣಾಮ ಬೀರಬಹುದು. ಈಗ ಎರಡೂ ಪರಿಣಾಮಗಳು ಸ್ಪಷ್ಟವಾಗಿರುವುದರಿಂದ, ಈ ವಿಷಯದ ಕುರಿತಾಗಿ ಮತ್ತೊಮ್ಮೆ ಆಲೋಚಿಸಿ, ಸೂಕ್ತವೆನಿಸುವ ನಿರ್ಧಾರ ಮಾಡಬಹುದು.

“ಹಸಿವು, ಕೋಪ, ಮತ್ತು ದುಃಖದ ಸಂದರ್ಭಗಳಲ್ಲಿ ನಿರ್ಧಾರಗಳನ್ನು ಮಾಡಬಾರದು” ಎನ್ನುವ ಮಾತಿದೆ. ತರ್ಕಬದ್ಧವಾಗಿ ನಿರ್ಧರಿಸಬೇಕಾದ ವಿಷಯವನ್ನು ಭಾವನಾತ್ಮಕವಾಗಿ ಆಲೋಚಿಸಿ ಪೇಚಿಗೆ ಈಡಾದವರಿದ್ದಾರೆ. ಸಣ್ಣದಾಗಲಿ, ದೊಡ್ಡದಾಗಲಿ ನಿರ್ಧಾರಗಳನ್ನು ಕೈಗೊಳ್ಳುವಾಗ ಶಾಂತ ಮನಸ್ಥಿತಿಯಲ್ಲಿ ಇರಬೇಕಾದ್ದು ಮುಖ್ಯ. ಉದ್ವಿಗ್ನ ಮನಸ್ಸು ಹಲವಾರು ಸೂಕ್ಷ್ಮಗಳಿಗೆ ಕುರುಡಾಗಿರುತ್ತದೆ. ಶಾಂತ ವಾತಾವರಣದಲ್ಲಿ, ಕೆಲನಿಮಿಷಗಳ ದೀರ್ಘವಾಗಿ ಉಸಿರಾಡಿದರೆ ಮನಸ್ಸು ನಿರಾಳವಾಗಿ, ಆಲೋಚನೆಗಳು ಸ್ಪಷ್ಟವಾಗುತ್ತವೆ. ಉತ್ತಮ ನಿರ್ಧಾರಗಳನ್ನು ಕೈಗೊಳ್ಳುವ ಹಲವಾರು ಮಂದಿ ಇಂತಹ ಪದ್ದತಿಗಳನ್ನು ಅನುಸರಿಸುತ್ತಾರೆ.

ನಿರ್ಧಾರಗಳಿಗೆ ಮುನ್ನ “ಇದನ್ನು ಏಕೆ ಮಾಡುತ್ತಿದ್ದೇನೆ” ಎನ್ನುವ ಪ್ರಶ್ನೆಯನ್ನು ನಾಲ್ಕೈದು ಬಾರಿ ಮನನ ಮಾಡಿದರೆ ಸರಿಯಾದ ಹಿನ್ನೆಲೆ ಒದಗುತ್ತದೆ. ಪರಸ್ಪರ ಸಂಬಂಧವಿಲ್ಲದ ವಿಷಯಗಳು ತಲೆಯಲ್ಲಿ ಮೂಡಿ ಗೌಜಿ ಎಬ್ಬಿಸಬಹುದು. ಇವುಗಳಲ್ಲಿ ನಿರ್ಧಾರಗಳಿಗೆ ಪೂರಕವಲ್ಲದ ಆಲೋಚನೆಗಳೂ ಇರುತ್ತವೆ. ಅವು ನಿರ್ಧಾರದ ದಾರಿಯನ್ನು ಮಬ್ಬಾಗಿಸಬಹುದು. ಕ್ರಮಬದ್ಧ ವಿಧಾನದಲ್ಲಿ ಆಲೋಚಿಸಿದಾಗ ಅಪ್ರಸ್ತುತವಾದ ವಿಷಯಗಳು ಚಿಂತನೆಯ ಹಾದಿಯಿಂದ ದೂರಾಗುತ್ತವೆ. ಸರಿಯಾದ ದಿಶೆಯಲ್ಲಿ ಗಮನ ಹರಿದಾಗ ನಿರ್ಧಾರಗಳು ಸುಲಭವಾಗುತ್ತವೆ.

ನಿರ್ಧಾರಗಳ ವೇಳೆ ನಮ್ಮ ಆಯ್ಕೆಗಳನ್ನು ಬರೆದಿಟ್ಟುಕೊಳ್ಳುವುದು ಸೂಕ್ತ. ಕೆಲವೊಮ್ಮೆ ಪ್ರಬಲವೆನಿಸಿದ ಆಯ್ಕೆಗಿಂತಲೂ ಪಟ್ಟಿಯಲ್ಲಿನ ಮತ್ತೊಂದು ಉತ್ತಮ ಅನಿಸಬಹುದು. ಆಯ್ಕೆಗಳು ಒಂದೆಡೆ ಮೂಡಿದಾಗ ಪ್ರಾಬಲ್ಯ-ದೌರ್ಬಲ್ಯಗಳ ವಿವೇಚನೆ ಬರುತ್ತದೆ. ಸಮಂಜಸವಲ್ಲವೆನಿಸಿದ ಆಯ್ಕೆಯನ್ನು ತೆಗೆದುಹಾಕುವ ಕೆಲಸವನ್ನು ಮನಸ್ಸಿನಲ್ಲಿ ಮಾಡುವುದು ಕಷ್ಟ. ಚಿಂತನೆಯ ಅವಗಾಹನೆಗೆ ಬಾರದಿದ್ದ ಆಯ್ಕೆಗಳು ಪಟ್ಟಿಯನ್ನು ನೋಡುವಾಗ ತೋಚಬಹುದು. ಆರಂಭಿಕ ಪಟ್ಟಿ ದೊಡ್ಡದಿದ್ದರೆ, ಅನಗತ್ಯ ಆಯ್ಕೆಗಳನ್ನು ತ್ವರಿತವಾಗಿ ನಿವಾರಿಸಿಕೊಂಡು, ಪ್ರಾಯೋಗಿಕವಾದುದ್ದನ್ನು ಮಾತ್ರ ಉಳಿಸಿಕೊಳ್ಳಬೇಕು.

ಎರಡು-ಮೂರು ಆಯ್ಕೆಗಳ ಪೈಕಿ ಯಾವೊಂದನ್ನೂ ನಿರ್ಧರಿಸಲು ಸಾಧ್ಯವಾಗುತ್ತಿಲ್ಲವೆನಿಸಿದಾಗ, ಒಂದೊಂದು ಆಯ್ಕೆಯ ಲಾಭ-ನಷ್ಟಗಳನ್ನು ಪಟ್ಟಿ ಮಾಡಬೇಕು. ಲಾಭವೆನಿಸಿದ ಅಂಶಕ್ಕೆ ಅಂಕಗಳನ್ನು ನೀಡಬಹುದು; ನಷ್ಟವೆನಿಸಿದ ಅಂಶಕ್ಕೆ ಋಣ-ಅಂಕಗಳನ್ನು ನೀಡಬಹುದು. ಅಂಕಗಳನ್ನು ನೀಡುವಾಗ ಮುಕ್ತ-ಮನಸ್ಸಿನಿಂದ ಪ್ರಾಮಾಣಿಕವಾಗಿ ವರ್ತಿಸುವುದು ಮುಖ್ಯ. ಅಂತಿಮವಾಗಿ ಯಾವ ಆಯ್ಕೆಯ ಅಂಕಗಳು ಅಧಿಕವೋ, ಅದನ್ನು ಪರಿಗಣಿಸಬಹುದು. ಪ್ರಮುಖ ನಿರ್ಧಾರಗಳಿಗೆ ಸಾಕಷ್ಟು ಕಾಲಾವಕಾಶ ನೀಡಬೇಕು. ಹಠಾತ್ ನಿರ್ಧಾರಗಳು ಅಪರೂಪಕ್ಕೆ ಮಾತ್ರ ಸರಿಯಾಗಿರುತ್ತವೆ. ತಾರ್ಕಿಕ ಆಲೋಚನೆಯಿಂದ ಮೂಡಿದ ನಿರ್ಧಾರಗಳು ಸಮಂಜಸವಾಗಿರುವ ಸಾಧ್ಯತೆಗಳು ಅಧಿಕ.

ನಿರ್ಧಾರ ಮಾಡಿ ಮುನ್ನಡೆದಾಗ ಯಾವುದಾದರೂ ಕಾರಣಕ್ಕೆ ಕೆಲಸ ಕೈಗೂಡದಿದ್ದರೆ, ನಂತರದ ಒಳ್ಳೆಯ ಆಯ್ಕೆ ಯಾವುದು ಎಂಬ ಆಲೋಚನೆ ಒಳಿತು. ನಿಯಂತ್ರಣದಲ್ಲಿ ಇಲ್ಲದಿರುವ ಪ್ರಭಾವಗಳು ಕೆಲಸ ಕೆಡಿಸಬಹುದು. ಆಗ  ಹಿನ್ನಡೆಯುವುದಕ್ಕಿಂತಲೂ, ಸ್ವಲ್ಪ ಕಡಿಮೆ ಪರಿಣಾಮದ ಆಯ್ಕೆಯನ್ನು ಒಪ್ಪಿಕೊಳ್ಳುವುದು ಕೆಲಸದ ದೃಷ್ಟಿಯಿಂದ ಸೂಕ್ತ. ನಿರ್ಧಾರ ಮಾಡಿದ ಅದರ ಯಾವುದೇ ಪರಿಣಾಮವನ್ನೂ ಒಗ್ಗಿಸಿಕೊಳ್ಳುವ ಮನಸ್ಥಿತಿ ಬೆಳೆಯಬೇಕು. ಪ್ರತಿಯೊಂದು ಒಳ್ಳೆಯ ನಿರ್ಧಾರವೂ ನಮ್ಮ ಆತ್ಮವಿಶ್ವಾಸವನ್ನು ವೃದ್ಧಿಸಿದರೆ, ಪ್ರತಿಯೊಂದು ತಪ್ಪು ನಿರ್ಧಾರವೂ ನಮ್ಮ ಜೀವನಕ್ಕೆ ಒಳಿತಿನ ಪಾಠ ಕಲಿಸುತ್ತದೆ ಎನ್ನುವ ಸತ್ಯವನ್ನು ಮನಗಾಣುವುದೇ ಅರಿವಿನ ವಿಸ್ತಾರ.

--------------------

ದಿನಾಂಕ 6/12/2022 ರ ಪ್ರಜಾವಾಣಿ ದಿನಪತ್ರಿಕೆಯ ಕ್ಷೇಮ-ಕುಶಲ ವಿಭಾಗದಲ್ಲಿ ಪ್ರಕಟವಾದ ಲೇಖನ


 ಹೆಚ್ಚುತ್ತಿರುವ ಹಿಂಸಾತ್ಮಕ ಪ್ರವೃತ್ತಿ ಮತ್ತು ಪರಿಹಾರಗಳು

ಡಾ. ಕಿರಣ್ ವಿ.ಎಸ್.

ವೈದ್ಯರು

ಕಳೆದ ಕೆಲ ದಶಕಗಳಿಂದ ಜಗತ್ತಿನ ಎಲ್ಲೆಡೆ ಹಿಂಸಾತ್ಮಕ ಮತ್ತು ಆಕ್ರಮಣಕಾರಿ ಪ್ರವೃತ್ತಿಗಳು ಹೆಚ್ಚುತ್ತಿರುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಕಳವಳಗೊಂಡಿದೆ. “ಹಿಂಸೆಯೆನ್ನುವುದು ಆಕ್ರಮಣಕಾರಿ ಪ್ರವೃತ್ತಿಯ ತೀವ್ರ ಸ್ವರೂಪ” ಎಂದು ಮಾನಸಿಕ ತಜ್ಞರ ಅಭಿಮತ. ಇಂತಹ ಪ್ರವೃತ್ತಿಗೆ ಹಲವಾರು ಕಾರಣಗಳನ್ನು ಗುರುತಿಸಲಾಗಿದೆ. ಕೋಪ, ದುಃಖ, ಹತಾಶೆಗಳನ್ನು ಸರಿಯಾದ ದಾರಿಯಲ್ಲಿ ಅಭಿವ್ಯಕ್ತಗೊಳಿಸಲು ಸಾಧ್ಯವಾಗದ ಮಂದಿ ಹಿಂಸೆಗೆ ಇಳಿಯುತ್ತಾರೆ. ದೃಶ್ಯ ಮಾಧ್ಯಮಗಳಲ್ಲಿ ವೈಭವೀಕರಿಸುವ ಹಿಂಸೆ ಯುವಜನರಲ್ಲಿ ತಪ್ಪು ಸಂದೇಶಗಳನ್ನು ಹರಡುತ್ತದೆ. ಮನೆಯ, ನೆರೆಹೊರೆಯ ವಾತಾವರಣದಲ್ಲಿ ಪ್ರೀತಿ-ವಿಶ್ವಾಸಗಳಿಗೆ ಪ್ರತಿಯಾಗಿ ದ್ವೇಷ, ಅಸೂಯೆ, ಪ್ರತೀಕಾರಗಳ ಮನೋಭಾವಗಳು ತುಂಬಿದ್ದರೆ ಬೆಳೆಯುವ ಮಕ್ಕಳಿಗೆ ಹಿಂಸೆ ಸಹಜವೆನ್ನುವ ಭಾವನೆ ಮೂಡುತ್ತದೆ. ಋಣಾತ್ಮಕ ಆಲೋಚನೆಗಳು ಕಾಡುವವರಿಗೆ ಪ್ರತಿಯೊಂದು ಸಂಗತಿಯಲ್ಲೂ ತಪ್ಪೇ ಎದ್ದು ಕಾಣುತ್ತದೆ. ಇಂತಹವರಲ್ಲಿ ಹಿಂಸಾತ್ಮಕ ಪ್ರವೃತ್ತಿ ಹೆಚ್ಚು. ಇದರ ಜೊತೆಗೆ ಮದ್ಯಪಾನ, ಮಾದಕ ವಸ್ತುಗಳ ಸೇವನೆಗಳು ಮಾನಸಿಕ ನಿಯಂತ್ರಣವನ್ನು ತಗ್ಗಿಸಿ ಹಿಂಸೆಗೆ ಆಸ್ಪದವೀಯುತ್ತವೆ.

ಉದ್ದೇಶಪೂರ್ವಕವಾಗಿ ವ್ಯಕ್ತಿಗಳಿಗೆ ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ಮಾಡುವುದು ಹಿಂಸೆಯ ಒಂದು ಪರಿಭಾಷೆ. ಇದು ಈಚಿನ ದಿನಗಳಲ್ಲಿ ಅಧಿಕವಾಗುತ್ತಿದೆ. ಹಿಂಸೆಯ ಮಾರ್ಗದಿಂದ ತಮಗೆ ಬೇಕಾದ್ದನ್ನು ದಕ್ಕಿಸಿಕೊಳ್ಳುವ ಪ್ರಸಂಗಗಳು ವೈಯಕ್ತಿಕ ಮತ್ತು ಸಾಂಘಿಕ ಮಟ್ಟದಲ್ಲಿ ಕಾಣುತ್ತಿವೆ. ಹುನ್ನಾರ ಮಾಡಿ, ತಮಗೆ ವಿರುದ್ಧವಾಗಿರುವವರ ಜೊತೆ ಸೇಡು ತೀರಿಸಿಕೊಳ್ಳುವ ನಿಟ್ಟಿನಲ್ಲೂ ಹಿಂಸೆ ಬಳಕೆಯಾಗುತ್ತಿದೆ. ಹಿಂಸೆಯ ಬಳಕೆಯಿಂದ ತಾತ್ಕಾಲಿಕವಾಗಿ ಮೇಲುಗೈ ಸಾಧಿಸುವುದು; ಹಿಂಸೆಗೆ ಪ್ರತಿಯಾಗಿ ತಕ್ಕ ಶೀಘ್ರ ಶಿಕ್ಷೆಯಾಗದಿರುವುದು; ಸಾತ್ತ್ವಿಕ ಜನರು ಹಿಂಸೆಯನ್ನು ಪ್ರತಿಭಟಿಸಲಾಗದೆ ಸೋಲುವುದು; ವ್ಯವಸ್ಥೆಯು ಸಜ್ಜನರ ರಕ್ಷಣೆಗೆ ಬಾರದಿರುವುದು; ಇತರರ ಮೇಲಿನ ಹಿಂಸೆಯ ಫಲಾನುಭವಿಗಳು ದುರ್ಜನರ ಕ್ರೌರ್ಯಕ್ಕೆ ಬೆಂಬಲವಾಗಿ ನಿಲ್ಲುವುದು, ಮೊದಲಾದುವು ದಿನದಿನವೂ ಹಿಂಸೆಯ ಬಳಕೆಯನ್ನು ಹೆಚ್ಚಿಸುತ್ತಿವೆ. ಇದರ ಕಾರಣದಿಂದ ಭ್ರಮನಿರಸನಗೊಳ್ಳುವ ಸಜ್ಜನರ ಹತಾಶೆ ಸಮಾಜದ ಒಟ್ಟಾರೆ ಅಶಾಂತಿಗೆ ಕಾರಣವಾಗುತ್ತದೆ.

ಹಿಂಸಾಮಾರ್ಗವನ್ನು ಅನುಸರಿಸುವ ಅನೇಕ ಮಂದಿಗೆ ಪರ್ಯಾಯಗಳ ಅರಿವು ಇರುವುದಿಲ್ಲ. ಕ್ರೋಧ ಮಾನವಸಹಜ ಭಾವಗಳಲ್ಲಿ ಒಂದು. ಅದನ್ನು ವ್ಯಕ್ತಪಡಿಸುವ ಹಲವಾರು ಸುರಕ್ಷಿತ ವಿಧಾನಗಳಿವೆ. ಆದರೆ, ಎಷ್ಟೋ ಮಂದಿಗೆ ಇಂತಹ ಮಾರ್ಗಗಳ ಪರಿಚಯ ಇರುವುದಿಲ್ಲ. ಬಹುತೇಕ ಒಳ್ಳೆಯ ಜನರು ತುಂಬಿರುವ ಸಮಾಜಗಳಲ್ಲಿ ಹಿಂಸಾತ್ಮಕ ಮಾರ್ಗ ಅನುಸರಿಸುವ ಬೆರಳೆಣಿಕೆಯ ಮಂದಿ ಇತರರಲ್ಲಿ ಭೀತಿಯನ್ನು ಹುಟ್ಟಿಸಿ, ಅದನು ತಮ್ಮ ಕಾರ್ಯಸಾಧನೆಗೆ ಬಳಸಿಕೊಳ್ಳಬಲ್ಲರು. ಇದು ಕೂಡ ಹಿಂಸೆಯ ಪ್ರಚೋದನೆಗೆ ಸಾಧನವಾಗುತ್ತದೆ. ಈ ರೀತಿಯ ವರ್ತನೆ ಯಾವುದೇ ಪ್ರತಿರೋಧವಿಲ್ಲದೆ ಎಗ್ಗಿಲ್ಲದೆ ನಡೆದರೆ, ಅದು ಹಲವಾರು ಕಿರಿಯರಿಗೆ ಸ್ಫೂರ್ತಿಯಾಗಿ ನಿಲ್ಲುವ ಅಪಾಯವಿದೆ.

ಸಾಧಕರನ್ನು, ಹಿರಿಯರನ್ನು, ಜ್ಞಾನಿಗಳನ್ನು ಗೌರವಿಸುವ ಪರಂಪರೆ ಒಂದು ಸಮಾಜದಲ್ಲಿ ಸತತವಾಗಿ ಹರಿದು ಬರುವುದು ಒಟ್ಟಾರೆ ಸಮಷ್ಠಿಯ ಶ್ರೇಯಸ್ಸಿಗೆ ಕಾರಣವಾಗುತ್ತದೆ. ಇಂತಹ ಮೌಲ್ಯಗಳು ಯಾವುದಾದರೂ ಕಾರಣದಿಂದ ನಿಂತುಹೋದರೆ, ಆಯಾ ಸಮಾಜದಲ್ಲಿ ಹಿಂಸಾತ್ಮಕ ಪ್ರವೃತ್ತಿಗಳು ಹೆಚ್ಚುವುದನ್ನು ಸಾಮಾಜಿಕ ವಿಜ್ಞಾನಿಗಳು ಗುರುತಿಸಿದ್ದಾರೆ. ಮೌಲ್ಯಗಳು ಕುಸಿಯುವುದನ್ನು ತಡೆಯುವುದು ಸಮಾಜದ ಹಿರಿಯರ, ಬಲಾಢ್ಯರ, ನಾಯಕರ ಸಾಮಾಜಿಕ ಜವಾಬ್ದಾರಿ. ಆಧುನಿಕ ಕಾಲದಲ್ಲಿ ಹಿಂಸೆಯ ಮೂಲಕವೇ ಉನ್ನತ ಸ್ಥಾನಗಳನ್ನು ಆಕ್ರಮಿಸುತ್ತಿರುವ ಪ್ರಸಂಗಗಳು ಅಧಿಕವಾಗುತ್ತಿವೆ. ಇಂತಹ ಸಮಾಜಗಳು ಸಹಜವಾಗಿಯೇ ಹಿಂಸಾತ್ಮಕ ಪ್ರವೃತ್ತಿಯನ್ನು ಅನುಸರಿಸುತ್ತವೆ. ಮೌಲ್ಯಗಳನ್ನು ಮತ್ತೆ ಸ್ಥಾಪಿಸಬಲ್ಲ ನಿಯಂತ್ರಕ ಶಕ್ತಿಗಳ ಅಭಾವ ಹೆಚ್ಚಿದಂತೆಲ್ಲ ಈ ಪ್ರವೃತ್ತಿ ಬೆಳೆಯುತ್ತಲೇ ಹೋಗುತ್ತದೆ. “ಕೆಟ್ಟದು ಕೆಟ್ಟದ್ದನ್ನು ಬೆಳೆಸುತ್ತದೆ” ಎನ್ನುವ ಮಾತಿಗೆ ಪುಷ್ಟಿ ನೀಡಿದಂತಾಗುತ್ತದೆ.

ಹಿಂಸೆಯ ಪೋಷಣೆಗೆ ಕೀಳರಿಮೆಯೂ ಮತ್ತೊಂದು ಕಾರಣ. ತನ್ನ ಅರ್ಹತೆಗೆ ಸಹಜವಾಗಿ ಲಭಿಸಬೇಕಾದ ಗೌರವ, ಮರ್ಯಾದೆಗಳು ಲಭಿಸದಿದ್ದರೆ ಉದ್ಭವಿಸುವ ಕೀಳರಿಮೆ ಸಮಾಜದ ಪ್ರತಿಯಾಗಿ ಹಿಂಸಾತ್ಮಕ ಸ್ವರೂಪ ಪಡೆಯಬಹುದು. ಅಂತೆಯೇ, ಬೆಳೆಯುವ ವಯಸ್ಸಿನಲ್ಲಿ ಅನುಭವಿಸಿದ ಶೋಷಣೆ, ನಿರ್ಲಕ್ಷ್ಯಗಳು ಹಿಂಸಾತ್ಮಕ ಪ್ರವೃತ್ತಿಗೆ ದಾರಿಯಾಗಬಹುದು. ಕೆಲವು ಮುಂದುವರೆದ ದೇಶಗಳಲ್ಲಿ ಬಂದೂಕಿನಂತಹ ಶಸ್ತ್ರಗಳನ್ನು ಸರಾಗವಾಗಿ ಹೊಂದಬಹುದು. ಈ ರೀತಿಯ ಅವಕಾಶಗಳು ಹಿಂಸೆಯ ಅಭಿವ್ಯಕ್ತಿಗೆ ಸುಲಭ ದಾರಿಯಾಗುತ್ತವೆ.

ಒಮ್ಮೆ ಹಿಂಸೆಯ ಹಾದಿ ಹಿಡಿದವರಿಗೆ ನಂತರದ ಬದುಕಿನಲ್ಲಿ ತಮ್ಮ ಭಾವನೆಗಳ ಮೇಲೆ ನಿಯಂತ್ರಣ ಹೊಂದುವುದು ಬಹಳ ಕಷ್ಟವಾಗುತ್ತದೆ. ಸಮಾಜದಿಂದ ಇದಕ್ಕೆ ಯಾವುದೇ ಪ್ರತಿರೋಧ ಬಾರದಿದ್ದರೆ ಹಿಂಸೆಯ ಪ್ರವೃತ್ತಿ ತೀವ್ರಗೊಳ್ಳುತ್ತಾ ಹೋಗುತ್ತದೆ. ಹೀಗಾಗಿ, ಈ ಮಾರ್ಗ ಹಿಡಿಯದಿರುವುದೇ ವ್ಯಕ್ತಿಗೆ ಮತ್ತು ಸಮಾಜಕ್ಕೆ ಶ್ರೇಯಸ್ಕರ. ಹಿಂಸೆಯ ದಾರಿ ಹಿಡಿದವವರನ್ನು ಶೀಘ್ರವಾಗಿ ಗುರುತಿಸಿ, ಮತ್ತೊಮ್ಮೆ ಅವರನ್ನು ಸರಿಯಾದ ಮಾರ್ಗಕ್ಕೆ ಕರೆತರುವುದು ಸಮಾಜದ ಎಲ್ಲರ ಗುರುತರ ಜವಾಬ್ದಾರಿ. ಇಂತಹವರನ್ನು ಗುರುತಿಸುವುದು ಸಮಸ್ಯಾತ್ಮಕವೇ ಆದರೂ, ಕೆಲವು ಸೂಚನೆಗಳು ಉಪಯುಕ್ತವಾಗುತ್ತವೆ.

ಹಿಂಸೆಗೆ ಇಳಿದ ಬಹುತೇಕರು ಆಯುಧಗಳನ್ನು ಹುಡುಕುತ್ತಾರೆ. ಇತರರನ್ನು ನೋಯಿಸಬಲ್ಲ ಆಯುಧಗಳ ಬಗ್ಗೆ ಹೆಚ್ಚಿನ ಆಸಕ್ತಿ ತೋರುವವರ ಬಗ್ಗೆ ನಿಗಾ ಇರಬೇಕು. ಪ್ರಾಣಿಗಳ ಬೇಟೆಯ ಬಗ್ಗೆ ಏಕಾಏಕಿ ಆಸಕ್ತಿ ತೋರುವವರ ಬಗ್ಗೆಯೂ ಸಂಶಯಪಡುವುದು ಸೂಕ್ತ. ಮಾತಿನ ವೇಳೆ ತೀವ್ರ ಬೆದರಿಕೆ ಹಾಕುವವರು, ಇತರರನ್ನು ಹಿಂಸಿಸುವ ಯೋಜನೆಗಳನ್ನು ಚರ್ಚಿಸುವವರು ಹಿಂಸೆಗೆ ಇಳಿಯುವ ಸಾಧ್ಯತೆಗಳು ಅಧಿಕ. ಸಣ್ಣ ಪುಟ್ಟ ಸೇಡುಗಳಿಗೂ ಅಧಿಕ ಮಟ್ಟದ ಕ್ರೌರ್ಯವನ್ನು ತೋರುವವರು, ಚಿಕ್ಕ ಪ್ರತೀಕಾರಕ್ಕೆ ಕೂಡ ಅಪಾಯಕಾರಿ ಮಾರ್ಗಗಳನ್ನು ಅನುಸರಿಸುವವರಲ್ಲಿ ಹಿಂಸಾತ್ಮಕ ಪ್ರವೃತ್ತಿ ಮನೆಯಾಗಿರಬಹುದು. ಕೋಪವನ್ನು ನಿಯಂತ್ರಿಸಲಾಗದೆ ಬೆಲೆಬಾಳುವ ವಸ್ತುಗಳನ್ನು ನಾಶಮಾಡುವವರು, ತನ್ನದೋ ಪರರದ್ದೋ ಎನ್ನುವ ವಿವೇಚನೆಯಿಲ್ಲದೆ ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾಗುವವರು, ಸಿಟ್ಟಿನ ಭಾವಗಳನ್ನು ಸಮರ್ಥವಾಗಿ ನಿಯಂತ್ರಿಸಲು ಶಕ್ಯವಿಲ್ಲದವರು ಹಿಂಸೆಯ ಮಾರ್ಗಕ್ಕೆ ಇಳಿಯುತ್ತಾರೆ. ಇಂತಹವರ ಬಗ್ಗೆ ಮನೆಯವರು, ಬಂಧುಗಳು, ಗೆಳೆಯರು ಹೆಚ್ಚಿನ ಗಮನ ವಹಿಸುವುದು ಮುಖ್ಯವಾಗುತ್ತದೆ.

ಈ ಹಿಂದೆ ಹಿಂಸಾತ್ಮಕ ಕೃತ್ಯಗಳಲ್ಲಿ ತೊಡಗಿಕೊಂಡವರಿಗೆ ಪುನಃ ಅದೇ ಮಾರ್ಗಕ್ಕೆ ಹಿಂದಿರುಗಲು ಹೆಚ್ಚಿನ ಉತ್ತೇಜನ ಬೇಕಿಲ್ಲ. ಅಂತಹವರನ್ನು ಬಹಳ ಎಚ್ಚರದಿಂದ ಕಾಯಬೇಕಾಗುತ್ತದೆ. ಅವರಿಗೆ ಸುಲಭವಾಗಿ ಆಯುಧಗಳು ಲಭ್ಯವಾಗದಂತೆ ನೋಡಿಕೊಳ್ಳಬೇಕು. ಏಕಾಂಗಿತನ ಅವರಲ್ಲಿ ಮತ್ತೊಮ್ಮೆ ಹಿಂಸೆಯ ಬಗ್ಗೆ ಆಲೋಚಿಸಲು ಆಸ್ಪದವೀಯುತ್ತದೆ. ಹೀಗಾಗಿ, ಅಂತಹವರನ್ನು ಯಾವುದೋ ಕೆಲಸದಲ್ಲಿ ವ್ಯಸ್ಥವಾಗಿರುವಂತೆ, ಸಾಧ್ಯವಾದಷ್ಟೂ ಅತ್ಮೀಯರೊಡನೆ ಸುತ್ತುವರೆದಿರುವಂತೆ ನೋಡಿಕೊಳ್ಳುವುದು ಸೂಕ್ತ. ಅವರ ಭೂತಕಾಲದ ಬಗ್ಗೆ ಲಘುವಾಗಿ ಮಾತನಾಡುವುದು, ಅವರ ನ್ಯೂನತೆಗಳನ್ನು ಎತ್ತಿ ತೋರುವುದು, ಅವರ ಬಗ್ಗೆ ತಿರಸ್ಕಾರ ಪ್ರದರ್ಶಿಸುವುದು ಸಲ್ಲದು.

ನಮ್ಮ ಆತ್ಮೀಯರಲ್ಲಿ ಯಾರಾದರೂ ಹಿಂಸಾತ್ಮಕ ಪ್ರವೃತ್ತಿಗೆ ಬಲಿಯಾಗುತ್ತಿದ್ದಾರೆ ಎಂದರೆ ಅದರ ಜವಾಬ್ದಾರಿ ನಮ್ಮದೇ ಆಗಬೇಕು. ಈ ಸಮಸ್ಯೆಯನ್ನು ಹೊರಗಿನಿಂದ ಯಾರೋ ಬಂದು ನಿವಾರಿಸಲಾರರು. ಇದರ ಪರಿಹಾರೋಪಾಯಗಳನ್ನು ನಾವೇ ಕಂಡುಕೊಳ್ಳಬೇಕು. ತಡ ಮಾಡಿದಷ್ಟೂ ಪರಿಸ್ಥಿತಿ ಗಂಭೀರವಾಗಬಹುದು. ಹೀಗಾಗಿ, ಪರಿಹಾರಗಳ ಚಿಂತನೆ ಮತ್ತು ಅವನ್ನು ಕಾರ್ಯಗತಗೊಳಿಸುವ ಪ್ರಕ್ರಿಯೆಗಳು ಶೀಘ್ರವಾಗಿಯೂ ಸಮರ್ಥವಾಗಿಯೂ ಆಗಬೇಕು. ಈ ನಿಟ್ಟಿನಲ್ಲಿ ನಮ್ಮ ಸುರಕ್ಷತೆಯೂ ಮುಖ್ಯ. ಹಿಂಸೆಯ ನಶೆಯಲ್ಲಿರುವವರಿಗೆ ವಿವೇಚನೆ ಕಡಿಮೆ. ಅಂತಹವರು ಕೋಪದ ಭರದಲ್ಲಿ ಅಸಾಧುವಾದ ಕೆಲಸಗಳನ್ನು ಮಾಡಬಲ್ಲರು. ಈ ಎಚ್ಚರ ಎಲ್ಲರಲ್ಲೂ ಇರಬೇಕು. ಇಂತಹ ನಿರ್ವಹಣೆಯಲ್ಲಿ ಹೆಚ್ಚಿನ ಸಮಾನಮನಸ್ಕರು ಇರುವುದು ಕ್ಷೇಮಕರ. ಅಪಾಯಕಾರಿ ಆಯುಧಗಳು ಇರಬಹುದಾದ ಸನ್ನಿವೇಶದಲ್ಲಿ ಕಾನೂನುಪಾಲಕರ ಬೆಂಬಲ ಪಡೆಯಬೇಕು. ಹಿಂಸಾತ್ಮಕ ಪ್ರವೃತ್ತಿಯ ನಿರ್ವಹಣೆ ಮತ್ತು ನಿಗ್ರಹಕ್ಕೆ ಮಾನಸಿಕ ತಜ್ಞರು ನೆರವಾಗುತ್ತಾರೆ. ಅಂತಹ ಸಂದರ್ಭಗಳಲ್ಲಿ ಮುಚ್ಚುಮರೆಯಿಲ್ಲದೆ ಅವರ ಸಹಾಯ ಪಡೆಯಬೇಕು. ಸ್ವಸ್ಥ ಸಮಾಜ ನಮ್ಮೆಲ್ಲರ ಜವಾಬ್ದಾರಿ.

--------------------

ದಿನಾಂಕ 29-11-2022 ರ ಪ್ರಜಾವಾಣಿ ದಿನಪತ್ರಿಕೆಯ ಕ್ಷೇಮ ಕುಶಲ ವಿಭಾಗದಲ್ಲಿ ಪ್ರಕಟವಾದ ಲೇಖನ. ಕೊಂಡಿ: https://www.prajavani.net/health/well-being-manipulation-a-disease-called-violence-992606.html