ಸೋಮವಾರ, ಏಪ್ರಿಲ್ 19, 2021

ಪ್ರಪಂಚದ ಅತ್ಯಂತ ದುಬಾರಿ ಔಷಧ ಯಾವುದು?

ಡಾ. ಕಿರಣ್ ವಿ. ಎಸ್.

ಮಹಾಭಾರತದ ಯಕ್ಷಪ್ರಶ್ನೆ ಪ್ರಸಂಗದಲ್ಲಿ “ಪ್ರಪಂಚದ ಅತ್ಯಂತ ದುಬಾರಿ ಔಷಧ ಯಾವುದು?” ಎಂದು ಕೇಳಿದ್ದರೆ ಯುಧಿಷ್ಠಿರನ ಉತ್ತರವೇನಿರುತ್ತಿತ್ತೋ ತಿಳಿಯದು. ಇಂದಿನ ವ್ಯಾವಹಾರಿಕ ಪ್ರಪಂಚದಲ್ಲಿ ಔಷಧಗಳು ದಿನನಿತ್ಯದ ಅಗತ್ಯಗಳ ಪಟ್ಟಿ ಸೇರಿವೆ. ಬಹಳಷ್ಟು ಕುಟುಂಬಗಳಲ್ಲಿ ಪ್ರತೀ ತಿಂಗಳೂ ಕೆಲವು ನೂರು ರೂಪಾಯಿಗಳಿಂದ ಹಿಡಿದು ಸಾವಿರಗಳವರೆಗೆ ಔಷಧಗಳ ಖರ್ಚು ಇರುತ್ತದೆ. ಕೆಲವು ಅಗ್ಗ; ಕೆಲವು ದುಬಾರಿ. ಅಗತ್ಯವಾದ ಹಲವಾರು ಔಷಧಗಳ ಬೆಲೆಯನ್ನು ಸರಕಾರ ನಿಯಂತ್ರಣದಲ್ಲಿ ಇಟ್ಟಿದೆ. ದೇಶೀಯ ಉತ್ಪಾದನೆಯಿರುವ ಔಷಧಗಳ ಬೆಲೆ ಇತರ ದೇಶಗಳಿಗಿಂತ ನಮ್ಮ ದೇಶದಲ್ಲಿ ಅಗ್ಗ.

ಔಷಧಗಳ ಬೆಲೆ ಹೇಗೆ ನಿರ್ಧಾರವಾಗುತ್ತದೆ? ಒಂದು ಉದಾಹರಣೆಯನ್ನು ಗಮನಿಸಬಹುದು. ಮಧುಮೇಹ ನಿಯಂತ್ರಣದಲ್ಲಿ ಇನ್ಸುಲಿನ್ ಬಗ್ಗೆ ಎಲ್ಲರಿಗೂ ತಿಳಿದಿದೆ. ಕೆಲ ದಶಕಗಳ ಹಿಂದೆ ನಮ್ಮ ದೇಶದಲ್ಲಿ ಇನ್ಸುಲಿನ್ ಉತ್ಪಾದನೆ ಆಗುತ್ತಿರಲಿಲ್ಲ; ವಿದೇಶಗಳಿಂದ ಇನ್ಸುಲಿನ್ ಆಮದಾಗುತ್ತಿತ್ತು. ಫಲವಾಗಿ, ಅದರ ಬೆಲೆ ಬಹಳ ಹೆಚ್ಚಾಗಿತ್ತು. ನಮ್ಮ ದೇಶದಲ್ಲಿ ಉತ್ಪಾದನೆ ಆರಂಭವಾದ ನಂತರ ಇನ್ಸುಲಿನ್ ಸ್ವಲ್ಪ ಅಗ್ಗವಾಯಿತು. ಮಧುಮೇಹಿಗಳ ಸಂಖ್ಯೆ ಅಧಿಕವಾದಂತೆ ಹೆಚ್ಚು ಸಂಸ್ಥೆಗಳು ಇನ್ಸುಲಿನ್ ಉತ್ಪಾದನೆ ಆರಂಭಿಸಿದವು. ಇದರಿಂದ ಇನ್ಸುಲಿನ್ ಮತ್ತಷ್ಟು ಸೋವಿಯಾಯಿತು. ಅಂದರೆ, ಯಾವುದೇ ಕಾಯಿಲೆಯ ರೋಗಿಗಳ ಸಂಖ್ಯೆ ಹೆಚ್ಚಾದಷ್ಟೂ ಔಷಧದ ಅಗತ್ಯ ಅಧಿಕವಾಗುತ್ತದೆ. ಮಾರುಕಟ್ಟೆ ನಿಯಮಗಳ ರೀತ್ಯಾ ಉತ್ಪಾದನೆ ಹೆಚ್ಚಾದಷ್ಟೂ ಬೆಲೆ ಕಡಿಮೆ. ಅತ್ಯಂತ ಹೆಚ್ಚು ಬಳಕೆಯಲ್ಲಿರುವ ನೋವು-ನಿವಾರಕ ಔಷಧಗಳು ಸೋವಿಯಾಗಿ ಲಭಿಸಲು ಇದೇ ಕಾರಣ. ಸಾಮಾನ್ಯ ಜ್ವರ, ಶೀತ, ಕೆಮ್ಮಿನ ಔಷಧಗಳು ವೈದ್ಯರ ಸಲಹೆಯ ಅಗತ್ಯವಿಲ್ಲದೆ ಮಾರಾಟವಾಗುತ್ತವೆ. ಆ ಕಾರಣಕ್ಕೇ ಹೆಚ್ಚಾಗಿ ಉತ್ಪಾದನೆ ಆಗುವ ಇಂತಹ ಔಷಧಗಳು ಸಾಕಷ್ಟು ಅಗ್ಗವಾಗಿ ಲಭಿಸುತ್ತವೆ. ಲಕ್ಷ ಮಂದಿಯ ಗುಂಪಿನಿಂದ ಯಾವುದೇ ನೂರು ಜನರನ್ನು ಆಯ್ದುಕೊಂಡರೆ, ಅದರಲ್ಲಿ ಕನಿಷ್ಟ ಇಪ್ಪತ್ತು ಮಂದಿಗೆ ರಕ್ತದ ಒತ್ತಡ ಅಧಿಕವಾಗಿರುತ್ತದೆ. ಅಂದರೆ, ಪ್ರತೀ ಲಕ್ಷಕ್ಕೆ ಇಪ್ಪತ್ತು ಸಾವಿರ ರೋಗಿಗಳು ಎಂದಾಯಿತು. ಅಧಿಕ ರಕ್ತದೊತ್ತಡಕ್ಕೆ ಔಷಧ ತಯಾರಿಸಿದರೆ ಅದನ್ನು ಬಳಸುವ ಮಂದಿ ಹೇರಳವಾಗಿ ಇರುತ್ತಾರೆ.

ಈ ಪ್ರಕ್ರಿಯೆಯ ವಿಲೋಮವನ್ನು ಗಮನಿಸೋಣ. ಬಹಳ ವಿರಳವಾಗಿ ಕಂಡು ಬರುವ ಕಾಯಿಲೆಗಳೂ ಇವೆ. ಸ್ನಾಯುಗಳ ಜನ್ಮಜಾತ ದೌರ್ಬಲ್ಯ, ಶರೀರದಲ್ಲಿನ ಕೆಲವು ಕಿಣ್ವಗಳ ಜೆನೆಟಿಕ್ ಮೂಲದ ಕೊರತೆ, ಅಪರೂಪದ ಪ್ರಭೇದಗಳ ಕ್ಯಾನ್ಸರ್, ನರಮಂಡಲದ ಸಂವಾಹಕಗಳ ನ್ಯೂನತೆ – ಹೀಗೆ ತೀರಾ ಅಪರೂಪಕ್ಕೆ ಕಾಣುವ ಕಾಯಿಲೆಗಳಿವೆ. ಲಕ್ಷ ಮಂದಿಯ ಗುಂಪಿನಲ್ಲಿ ಕೇವಲ ಒಬ್ಬರಿಗೆ ಇಂತಹ ಕಾಯಿಲೆ ಇರಬಹುದು. ಇಂತಹ “ಅತೀ ವಿರಳ” ಎನ್ನುವ ಕಾಯಿಲೆಗಳಿಗೆ ಔಷಧಗಳ ಉತ್ಪಾದನೆ ಮಾಡುವವರು ಕೂಡ ಅಪರೂಪ; ಮಾಡಿದರೂ ಬೆಲೆ ವಿಪರೀತ. ಈ ರೀತಿಯ ಅತೀ ವಿರಳವಾಗಿ ಕಾಣುವ ಕಾಯಿಲೆಗಳನ್ನು “ಅನಾಥ ಕಾಯಿಲೆಗಳು” (orphan diseases) ಎಂದೂ, ಅವಕ್ಕೆ ಬಳಕೆಯಾಗುವ ಔಷಧಗಳನ್ನು “ಅನಾಥ ಔಷಧಗಳು” (orphan drugs) ಎಂದೂ ಕರೆಯಲಾಗುತ್ತದೆ.

ಜನಪ್ರಿಯ ಮುನ್ನಾಭಾಯಿ ಚಿತ್ರದಲ್ಲಿ ನಾಯಕನಿಗೆ ಗಾಂಧಿಯವರು ಕಾಣುವ ಪ್ರಸಂಗವನ್ನು ವೈದ್ಯರು “ನಾಯಕನ ಮೆದುಳಿನಲ್ಲಿ ರಾಸಾಯನಿಕಗಳ ಗಲಿಬಿಲಿ” ಎಂದು ತೀರ್ಮಾನ ಮಾಡುತ್ತಾರೆ. ಮೆದುಳಷ್ಟೇ ಅಲ್ಲ; ನಮ್ಮ ಇಡೀ ಶರೀರವೇ ಸಾವಿರಾರು ರಾಸಾಯನಿಕಗಳ ಗೂಡು! ಪ್ರತೀ ಕ್ಷಣವೂ ನಮ್ಮ ಶರೀರದಲ್ಲಿ ಅಗಣಿತ ರಾಸಾಯನಿಕ ಪ್ರಕ್ರಿಯೆಗಳು ನಡೆಯುತ್ತಲೇ ಇರುತ್ತವೆ. ಖುಷಿ-ದುಃಖಗಳ ಭಾವನೆಗಳಿಂದ ಹಿಡಿದು, ಆಹಾರ ಪಚನವಾಗುವ ಕ್ರಿಯೆಯವರೆಗೆ ಬಹುತೇಕ ಎಲ್ಲವೂ ರಾಸಾಯನಿಕಗಳ ಹೂಟ! ರಾಸಾಯನಿಕ ಪ್ರಕ್ರಿಯೆಗಳ ವೇಗೋತ್ಕರ್ಷಕ್ಕೆ ಕಿಣ್ವ (enzyme) ಎಂಬ ಮತ್ತೊಂದು ರಾಸಾಯನಿಕ ನೆರವಾಗುತ್ತದೆ. ಯಾವುದೇ ಕಾರಣದಿಂದ ಒಂದು ಕಿಣ್ವ ಇಲ್ಲದೇ ಹೋದಲ್ಲಿ, ಆ ರಾಸಾಯನಿಕ ಪ್ರಕ್ರಿಯೆ ಅಲ್ಲಿಯೇ ಸ್ಥಗಿತವಾಗುತ್ತದೆ; ಇಲ್ಲವೇ ಶರೀರಕ್ಕೆ ಅಗತ್ಯವಲ್ಲದ ಬೇರೆ ದಾರಿ ಹಿಡಿಯುತ್ತವೆ. ಇದರಿಂದ ಶರೀರದ ಕೆಲಸಕ್ಕೆ ಅಗತ್ಯವಾಗಿ ಬೇಕಾದ ಯಾವುದೋ ಪೋಷಕಾಂಶ ಕಡಿಮೆಯಾಗುತ್ತದೆ; ಮತ್ತು ಶರೀರಕ್ಕೆ ಬೇಕಿಲ್ಲದ ಯಾವುದೋ ಒಂದು ಅಂಶ ಅನಗತ್ಯವಾಗಿ ಶೇಖರವಾಗುತ್ತಾ ಹೋಗುತ್ತದೆ. ನಮ್ಮ ಶರೀರದಲ್ಲಿ ಸಾವಿರಾರು ಕಿಣ್ವಗಳು ರಾಸಾಯನಿಕ ಪ್ರಕ್ರಿಯೆಗಳಲ್ಲಿ ಭಾಗವಹಿಸುತ್ತವೆ. ಪ್ರಮುಖ ಕಿಣ್ವಗಳ ಕೊರತೆ ಗಂಭೀರವಾದ ಕಾಯಿಲೆಗಳಿಗೆ ಕಾರಣವಾಗಬಹುದು. ಇಂತಹ ಕಾಯಿಲೆಗಳು ತೀರಾ ಅಪರೂಪ. ಎರಡು ಸಾವಿರ ಮಂದಿಯಲ್ಲಿ ಒಬ್ಬರಿಂದ ಹಿಡಿದು ಹತ್ತು ಲಕ್ಷ ಜನರಲ್ಲಿ ಒಬ್ಬರಿಗೆ ಬರುವ ಇಂತಹ ಕಾಯಿಲೆಗಳಿವೆ. ಎಷ್ಟೋ ವೈದ್ಯರು ತಮ್ಮ ಇಡೀ ಜೀವಮಾನದಲ್ಲಿ ಇಂತಹ ಕಾಯಿಲೆ ಇರಬಹುದಾದ ಒಬ್ಬ ರೋಗಿಯನ್ನೂ ನೋಡಿರುವುದಿಲ್ಲ! ಇಂತಹ ವಿರಳ ಕಾಯಿಲೆಗಳನ್ನು ಕರಾರುವಾಕ್ಕಾಗಿ ಪತ್ತೆ ಮಾಡುವುದು ಕೂಡ ಬಹಳ ಕ್ಲಿಷ್ಟಕರ ಪ್ರಕ್ರಿಯೆ. ಶತಪ್ರಯತ್ನಗಳ ನಂತರ ಇದನ್ನು ಪತ್ತೆ ಮಾಡಿದರೂ, ಅದಕ್ಕೆ ಚಿಕಿತ್ಸೆ ಸಿಗುವುದು ತ್ರಾಸದ ಸಂಗತಿ.

ಶರೀರದಲ್ಲಿ ಒಂದು ಮಹತ್ವದ ಕಿಣ್ವದ ಅನುಪಸ್ಥಿತಿ ಇದೆಯೆಂದರೆ, ಅದಕ್ಕೆ ಒಂದೇ ಚಿಕಿತ್ಸೆ – ಆ ಕಿಣ್ವವನ್ನು ಕೃತಕವಾಗಿ ಒದಗಿಸುವುದು! ಇದು ಸುಲಭದ ಮಾತಲ್ಲ. ಮೊದಲು ಇಂತಹ ಕಿಣ್ವಗಳ ರಾಸಾಯನಿಕ ರಚನೆ ಅರಿಯಬೇಕು. ಅದನ್ನು ಕೃತಕವಾಗಿ ಪ್ರಯೋಗಾಲಯದಲ್ಲಿ ತಯಾರಿಸಬೇಕು. ಅದನ್ನು ಹಲವಾರು ಹಂತಗಳಲ್ಲಿ ಪರೀಕ್ಷೆ ಮಾಡಿ, ಸಾಮರ್ಥ್ಯವನ್ನು ಓರೆ ಹಚ್ಚಬೇಕು. ತಜ್ಞವೈದ್ಯರ ಸುಪರ್ದಿಯಲ್ಲಿ ಅಂತಹ ಔಷಧವನ್ನು ರೋಗಿಗೆ ನೀಡಿ ಪರಿಣಾಮವನ್ನು ಜಾಗರೂಕವಾಗಿ ನಮೂದಿಸಬೇಕು. ಈ ರೀತಿ ಪರೀಕ್ಷಿಸಿದ ಔಷಧ ಸುರಕ್ಷಿತ ಮತ್ತು ಫಲಕಾರಿ ಎಂದಾದರೆ ಮಾತ್ರ ಅದನ್ನು ಮಾರುಕಟ್ಟೆಗೆ ತರಬಹುದು. ಇವೆಲ್ಲಾ ಅಪಾರ ಆರ್ಥಿಕತೆಯನ್ನು ಬೇಡುವ ವಿಧಾನಗಳು. ಒಂದು ಉದಾಹರಣೆ ಇದನ್ನು ಸರಳವಾಗಿಸುತ್ತದೆ. ಹೊಸದೊಂದು ಔಷಧ ತಯಾರಿಸಲು ಒಂದು ಕೋಟಿ ರೂಪಾಯಿ ವೆಚ್ಚ ಆಯಿತೆನ್ನಿ. ಆ ಔಷಧ ವರ್ಷಾವಧಿ ಒಂದು ಲಕ್ಷ ಜನರಿಗೆ ಪ್ರಯೋಜನ ಆಗುವುದಾದರೆ, ಹತ್ತು ವರ್ಷಗಳ ಅವಧಿಯಲ್ಲಿ ಈ ಔಷಧದ ಸಂಶೋಧನೆಯ ವೆಚ್ಚಕ್ಕೆಂದು ಪ್ರತಿಯೊಬ್ಬ ರೋಗಿಯಿಂದ ತಲಾ ಹತ್ತು ರೂಪಾಯಿ ಅಧಿಕ ಮೊತ್ತ ಸಂಗ್ರಹಿಸಿದರೆ, ತಯಾರಿಕಾ ವೆಚ್ಚ ಹಿಂದಿರುಗಿ ಬಂದಂತಾಯಿತು. ಆದರೆ, ಅದೇ ಔಷಧ ಪ್ರತೀ ವರ್ಷ ಕೇವಲ 25,000 ರೋಗಿಗಳಿಗೆ ಮಾತ್ರ ಕೆಲಸಕ್ಕೆ ಬಂದರೆ, ಆಗ ಸಂಶೋಧನೆಯ ವೆಚ್ಚಕ್ಕಾಗಿ ಪ್ರತೀ ರೋಗಿಯಿಂದ ಸಂಗ್ರಹಿಸಬೇಕಾದ ಹೆಚ್ಚುವರಿ ಮೊತ್ತ ನಾಲ್ಕು ಪಟ್ಟು ಹೆಚ್ಚಾಗುತ್ತದೆ. ಅಂದರೆ, ಔಷಧ ನಾಲ್ಕು ಪಟ್ಟು ದುಬಾರಿಯಾಯಿತು. ಹೀಗೆ, ಫಲಾನುಭವಿಗಳ ಸಂಖ್ಯೆ ಕಡಿಮೆ ಆದಂತೆಲ್ಲಾ ಔಷಧದ ಬೆಲೆ ಹೆಚ್ಚಾಗುತ್ತದೆ. ಈಗ ಅದೇ ಅನುಪಾತದಲ್ಲಿ ಒಂದು ಲಕ್ಷ ಮಂದಿಯ ಪೈಕಿ ಒಬ್ಬರಲ್ಲಿ ಮಾತ್ರ ಕಾಣುವ ಕಾಯಿಲೆಯನ್ನು ಗಮನಿಸಿ. ಒಂದು ಕೋಟಿ ಜನಸಂಖ್ಯೆಯ ಮಹಾನಗರದಲ್ಲಿ ಅಂತಹ ಕಾಯಿಲೆ ಇರುವ ನೂರು ಮಂದಿ ಮಾತ್ರ ಇರುತ್ತಾರೆ ಎಂದಾಯಿತು. ತಯಾರಿಕಾ ವೆಚ್ಚವಾದ ಒಂದು ಕೋಟಿ ರೂಪಾಯಿಗಳನ್ನು ಈ ನೂರು ಮಂದಿ ಮಾತ್ರ ಹಂಚಿಕೊಳ್ಳಬೇಕು. ಅಂದರೆ, ಕೇವಲ ತಯಾರಿಕೆಯ ವೆಚ್ಚ ಭರಿಸಲು ಒಬ್ಬೊಬ್ಬ ರೋಗಿಯೂ ತಲಾ ಒಂದು ಲಕ್ಷ ರೂಪಾಯಿಗಳನ್ನು ತೆರಬೇಕು! ಇದು ಅಪ್ರಾಯೋಗಿಕ ಅನಿಸಿದರೂ, ಬೇರೆ ಪರ್ಯಾಯವಿಲ್ಲ.

ಈಚೆಗೆ ಮಾಧ್ಯಮಗಳಲ್ಲಿ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ರೋಗಿಯೊಬ್ಬರ ಚಿಕಿತ್ಸೆಗೆ ರೂ.16 ಕೋಟಿ ಅಗತ್ಯವಿದೆ ಎಂದು ಸುದ್ಧಿಯಾಗಿತ್ತು. Spinal Muscular Atrophy ಎಂಬ ನರವ್ಯೂಹ-ಸ್ನಾಯುಮಂಡಲದ ಈ ಸಮಸ್ಯೆಗೆ 2019 ರಲ್ಲಿ Zolgensma ಎಂಬ ಹೆಸರಿನ ಜೀನ್ ಚಿಕಿತ್ಸೆ ಲಭ್ಯವಾಯಿತು. ಒಮ್ಮೆ ಮಾತ್ರ ನೀಡಬೇಕಾದ ಈ ಔಷಧದ ಬೆಲೆ 21.25 ಲಕ್ಷ ಅಮೆರಿಕನ್ ಡಾಲರ್ ಗಳು! ಅಂದರೆ, ರೂಪಾಯಿಗಳ ಲೆಕ್ಕದಲ್ಲಿ ಸುಮಾರು 16 ಕೋಟಿ. ಈ ಔಷಧ ತಯಾರಿಸಿರುವ ಸ್ವಿಜರ್ಲ್ಯಾಂಡ್ ಮೂಲದ ನೊವಾರ್ಟಿಸ್ ಸಂಸ್ಥೆ ಇದನ್ನು ತನ್ನ ತಯಾರಿಕೆಯ ವೆಚ್ಚಕ್ಕಿಂತ ಅರ್ಧ ಬೆಲೆಗೆ ನೀಡುತ್ತಿದೆ. ಇಲ್ಲವಾದರೆ ಇದರ ಬೆಲೆ ರೂ.30 ಕೋಟಿ ದಾಟುತ್ತಿತ್ತು! ಇದು ಕೇವಲ ಒಂದು ಉದಾಹರಣೆ ಮಾತ್ರ. ನೂರಾರು ಬಗೆಯ “ಅನಾಥ ಕಾಯಿಲೆ”ಗಳಿಗೆ ಈಗ ಚಿಕಿತ್ಸೆ ಲಭ್ಯವಿದೆ. ಕೆಲವು ಒಮ್ಮೆ ಮಾತ್ರ ನೀಡುವಂಥವಾದರೆ, ಕೆಲವು ಜೀವನವಿಡೀ ತೆಗೆದುಕೊಳ್ಳಬೇಕಾದ್ದವು. ಆದರೆ ಪ್ರತಿಯೊಂದು ಡೋಸ್ ಔಷಧದ ಬೆಲೆ ಕೆಲವು ಸಾವಿರಗಳಿಂದ ಹಿಡಿದು ಲಕ್ಷಾಂತರ ರೂಪಾಯಿಗಳವರೆಗೆ ಇದೆ. ಇವೆಲ್ಲಾ ಸಾಮಾನ್ಯ ಜನಕ್ಕಿರಲಿ, ಆಗರ್ಭ ಶ್ರೀಮಂತರಿಗೂ ತೂಗಿಸುವುದು ಕಷ್ಟವಾಗಬಹುದು!

“ಪ್ರತಿಯೊಂದು ಜೀವವೂ ಅಮೂಲ್ಯ” ಎನ್ನುವ ಮಾತು ಸತ್ಯ. ಅಪರೂಪದ ಕಾಯಿಲೆಗಳಿಗೆ ಸರ್ಕಾರಗಳ ನೆರವಿಲ್ಲದೇ ಚಿಕಿತ್ಸೆ ಸಾಧ್ಯವಿಲ್ಲ. ದೇಶದ ಪ್ರಾಥಮಿಕ ಆರೋಗ್ಯವನ್ನು ಕೂಡ ಸರಿಯಾಗಿ ನಿರ್ಮಿಸಿಲ್ಲದ, ಪ್ರತಿಯೊಂದಕ್ಕೂ ಖಾಸಗಿಯವರ ಮೇಲೆ ಅವಲಂಬಿತವಾಗಿರುವ ಸರ್ಕಾರಗಳು ಪ್ರಪಂಚದಲ್ಲಿ ಬಹಳಷ್ಟಿವೆ. ಇಂತಹ ವ್ಯವಸ್ಥೆಗಳು “ಅನಾಥ ಕಾಯಿಲೆ”ಗಳ ಚಿಕಿತ್ಸೆಗೆ ಎಷ್ಟು ಸಂಪನ್ಮೂಲಗಳನ್ನು ನೀಡಬಲ್ಲವು? ಸರ್ಕಾರದ ಅಧೀನದಲ್ಲಿರುವ ಸಂಶೋಧನಾ ಕೇಂದ್ರಗಳು ಈ ರೀತಿಯ ನವೀನ ಸಂಶೋಧನೆಗಳನ್ನು ಮಾಡಿ, ದೇಶದ ಜನತೆಗೆ ನೆರವಾಗಬೇಕು. ಅದಕ್ಕೆ ರಾಜಕೀಯ ಮತ್ತು ಮಾನಸಿಕ ಇಚ್ಛಾಶಕ್ತಿ ಬೇಕು. ವ್ಯವಸ್ಥೆ ತಾನೇ ನಿರ್ಮಿಸಿಕೊಂಡಿರುವ ಹಲವಾರು ಅಡೆತಡೆಗಳನ್ನು ತೊಲಗಿಸಿಕೊಳ್ಳಬೇಕು. ಇವೆಲ್ಲಾ ಒಂದು ದಿನ ಆಗುತ್ತದೆ ಎಂಬ ಆಶಾಭಾವದಲ್ಲಿ ಸಾಮಾನ್ಯ ಜನತೆ ಬದುಕಬೇಕು. 

----------------

 9 ಫೆಬ್ರವರಿ 2021 ರಂದು ವಿಶ್ವವಾಣಿ ಕನ್ನಡ ದಿನಪತ್ರಿಕೆಯಲ್ಲಿ ಪ್ರಕಟವಾದ ಲೇಖನ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ