ಸೋಮವಾರ, ಏಪ್ರಿಲ್ 19, 2021


 ಕೃತಕ ರೋಗಿಗಳ ವೈದ್ಯಕೀಯ ಕ್ರಾಂತಿ!

ಡಾ. ಕಿರಣ್ ವಿ. ಎಸ್.

“ವೈದ್ಯಕೀಯ ಸಂಶೋಧನೆಗಳು ನಿರೀಕ್ಷಿತ ವೇಗದಲ್ಲಿ ಆಗುತ್ತಿಲ್ಲ. ಹೀಗಾದರೆ ಭವಿಷ್ಯದ ಕಾಯಿಲೆಗಳ ನಿಯಂತ್ರಣ ಕಷ್ಟ” ಎಂದು ಹಿರಿಯ ವೈದ್ಯರೊಬ್ಬರು ಆತಂಕ ವ್ಯಕ್ತಪಡಿಸಿದರು. ಅವರ ಮಾತಿನಲ್ಲಿ ತಥ್ಯವಿತ್ತು. ಹೆಚ್ಚು ಜನರಿಗೆ ಪ್ರಯೋಜನಕಾರಿಯಾಗುವ ವೈದ್ಯಕೀಯ ತಂತ್ರಜ್ಞಾನವೊಂದು ಪ್ರಯೋಗಾಲಯದ ಮಟ್ಟದಿಂದ ಕೈಗೆಟುಕುವ ದರದಲ್ಲಿ ಮಾರುಕಟ್ಟೆ ತಲುಪಲು ಕನಿಷ್ಟ ಎರಡು ದಶಕಗಳು ಹಿಡಿಯುತ್ತವೆ ಎಂದು ಆರ್ಥಿಕ ತಜ್ಞರು ಹೇಳುತ್ತಾರೆ. ನಾವು ಇಂದು ಕಾಣುತ್ತಿರುವ ಬಹುತೇಕ ತಂತ್ರಜ್ಞಾನ 1980-2000 ರ ನಡುವೆ ಅಭಿವೃದ್ಧಿ ಪಡಿಸಿದ್ದು. ಯಾವುದೇ ಬೆಳವಣಿಗೆ ಏಕಾಏಕಿ ಬರುವುದಿಲ್ಲ. ಚಿಂತನೆಯ ಹೊಳಹೊಂದು ಸ್ಪಷ್ಟವಾದ ರೂಪ ಪಡೆದು, ಅನೇಕರ ಅಭಿಪ್ರಾಯಗಳನ್ನು ಮೈಗೂಡಿಸಿಕೊಂಡು, ಸಂಶೋಧನೆ-ವಿಶ್ಲೇಷಣೆಗಳ ನಡುವೆ ಬೆಳೆಯುತ್ತಾ, ಹಲವಾರು ಬಾರಿ ತಿದ್ದಲ್ಪಟ್ಟು, ಕಡೆಗೆ ಒಂದು ಪ್ರಾಯೋಗಿಕ ರೂಪ ಪಡೆಯುತ್ತದೆ. ವೈದ್ಯಕೀಯ ಕ್ಷೇತ್ರದ ಹೊಸ ಚಿಕಿತ್ಸೆ, ರೋಗ ಪತ್ತೆಯ ತಂತ್ರಜ್ಞಾನ, ನವೀನ ಮಾದರಿಯ ಉಪಕರಣ – ಇವೆಲ್ಲವೂ ನಡು ನಾವು ಕಾಣುತ್ತಿರುವ ಮಟ್ಟಕ್ಕೆ ತಲುಪಲು ದಶಕಗಳ ಕಾಲ ತೆಗೆದುಕೊಂಡಿವೆ.     

ವೈದ್ಯ ವಿಜ್ಞಾನದ ಪ್ರಯೋಗಗಳಲ್ಲಿ ಸ್ವಯಂಪ್ರೇರಿತರ ಮತ್ತು ರೋಗಿಗಳ ಆವಶ್ಯಕತೆ ನಿರ್ವಿವಾದ. ಮನುಷ್ಯರ ಮೇಲೆ ನಡೆಯುವ ಪ್ರಯೋಗಗಳನ್ನು ಸುರಕ್ಷಿತಗೊಳಿಸುವ ಉದ್ದೇಶದಿಂದ ಕಳೆದ ಎರಡು ದಶಕಗಳಲ್ಲಿ ಹಲವಾರು ಕಟ್ಟುನಿಟ್ಟಿನ ನಿಯಮಾವಳಿಗಳನ್ನು ರಚಿಸಲಾಗಿದೆ. ಪ್ರಯೋಗಗಳಲ್ಲಿ ಭಾಗವಹಿಸುವ ವ್ಯಕ್ತಿಗಳ ಕ್ಷೇಮದ ದೃಷ್ಟಿಯಿಂದ ಈ ನಿಯಮಗಳು ಸ್ವಾಗತಾರ್ಹವಾದರೂ ಪಾಲನೆಯ ದೃಷ್ಟಿಯಿಂದ ಇದರಲ್ಲಿ ಬಹಳಷ್ಟು ಅಡೆತಡೆಗಳಿವೆ. ಉದಾಹರಣೆಗೆ, ಪ್ರಯೋಗಗಳಿಗೆ ಸೇರ್ಪಡೆ ಆಗುವವರ ಭಾಷೆಯಲ್ಲಿ ಪ್ರಯೋಗದ ವಿವರಗಳು ಲಿಖಿತ ರೂಪದಲ್ಲಿ ಇರಬೇಕು ಎಂಬ ನಿಯಮವಿದೆ. ಇಪ್ಪತ್ತಕ್ಕೂ ಹೆಚ್ಚು ಅಧಿಕೃತ ಭಾಷೆಗಳಿರುವ ನಮ್ಮ ದೇಶದಲ್ಲಿ ಇಷ್ಟೊಂದು ಭಾಷೆಗಳಲ್ಲಿ ವಿವರಗಳನ್ನು ಸರಿಯಾಗಿ ಭಾಷಾಂತರ ಮಾಡಿಸಿ, ಅಚ್ಚು ಹಾಕಿಸುವ ಪ್ರಕ್ರಿಯೆ ತೀರಾ ಕ್ಲಿಷ್ಟಕರ, ದುಬಾರಿ. ಇದೊಂದು ಸಣ್ಣ ದೃಷ್ಟಾಂತ ಮಾತ್ರ. ವೈದ್ಯಕೀಯ ಕ್ಷೇತ್ರದಲ್ಲಿ ಚಿಕ್ಕಪುಟ್ಟ ಸಂಶೋಧನೆಗಳಿಗೂ ತಜ್ಞ ಸಮಿತಿಯಿಂದ ನಿಯಮಾನುಸಾರ ಅನುಮತಿ ಪಡೆಯುವುದು ದಿನೇ ದಿನೇ ಕಠಿಣವಾಗುತ್ತಿದೆ. ಸಣ್ಣ ಕೇಂದ್ರಗಳು ಸಂಶೋಧನೆಗಳನ್ನು ಕೈಬಿಟ್ಟಿವೆ. ಸ್ನಾತಕೋತ್ತರ ವ್ಯಾಸಂಗನಿರತ ವೈದ್ಯಕೀಯ ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಡಬೇಕಾದ ಸಂಶೋಧನೆಗಳಿಗಾಗಿ ಅವರು ಹೆಚ್ಚಿನ ಗೋಜಿಲ್ಲದ ಸರಳ ಪ್ರಯೋಗಗಳನ್ನು ನಿರ್ವಹಿಸಿ ಮುಗಿಸುತ್ತಿದ್ದಾರೆ. ವೈದ್ಯಕೀಯ ಕಾನೂನು ನಿಯಮಗಳ ರೀತ್ಯಾ ಪ್ರತಿಯೊಬ್ಬ ರೋಗಿಯ ವೈದ್ಯಕೀಯ ದಾಖಲೆಗಳ ಅಂಶಗಳನ್ನು ವಿವರವಾಗಿ ನಮೂದಿಸಬೇಕಾಗಿರುವುದರಿಂದ ಎಷ್ಟೋ ಹಿರಿಯ ವೈದ್ಯರಿಗೆ ಸಂಶೋಧನೆಗಳನ್ನು ಮಾಡಲು ಸಮಯವೇ ದೊರೆಯದಂತಾಗಿದೆ.

ಪ್ರಸ್ತುತ ಕೋವಿಡ್ ಕಾಯಿಲೆ ವೈದ್ಯಕೀಯ ಸಂಶೋಧನೆಗಳ ಅಗತ್ಯವನ್ನು ಜಗತ್ತಿಗೆ ಮನಗಾಣಿಸಿವೆ. ಒಂದೆಡೆ ಪ್ರಯೋಗಾರ್ಥಿ ವ್ಯಕ್ತಿಗಳ ಸುರಕ್ಷತೆಯೂ ಇರಬೇಕು; ಮತ್ತೊಂದೆಡೆ ಅಧಿಕ ಗುಣಮಟ್ಟದ ಸಂಶೋಧನೆಗಳೂ ನಡೆಯಬೇಕು. ಇದಕ್ಕೆ ಯಾವುದಾದರೂ ಸುವರ್ಣ-ಮಧ್ಯಮ ಮಾರ್ಗವನ್ನು ಅನುಸರಿಸಬೇಕು. ಕಂಪ್ಯೂಟರ್ ತಂತ್ರಜ್ಞಾನದ ನೆರವಿನಿಂದ ರೋಗ ಪತ್ತೆ ಮಾಡುವ ಪ್ರಕ್ರಿಯೆಯನ್ನು ಯಂತ್ರಗಳು ನಿರ್ವಹಿಸುತ್ತಾ ವೈದ್ಯರ ಕೆಲಸವನ್ನು ಹಗುರವಾಗಿಸುತ್ತಿವೆ. ಒಂದು ವೇಳೆ ಸಂಶೋಧನೆ ಮಾಡಲು ರೋಗಿಗಳ ಬದಲಿಗೆ ಯಂತ್ರಗಳು ಲಭ್ಯವಾದರೆ ಹೇಗೆ? ಆಗ ಸುರಕ್ಷತೆಯ ಹೆದರಿಕೆ ಇಲ್ಲದೆ ಬಹುಪಯೋಗಿ ಸಂಶೋಧನೆಗಳು ಸಾಧ್ಯ. ಉದಾಹರಣೆಗೆ, ಒಂದು ಹೊಸ ಔಷಧವನ್ನೋ, ಲಸಿಕೆಯನ್ನೋ ಮನುಷ್ಯರ ಮೇಲೆ ಪ್ರಯೋಗಿಸಿ ವಿಶ್ಲೇಷಿಸಲು ವಿಪರೀತ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಇದರಿಂದ ಸಮಯ, ಹಣ – ಎರಡೂ ಹೆಚ್ಚಾಗಿ ಹಿಡಿಯುತ್ತವೆ.

ಹೊಸ ಔಷಧವೊಂದನ್ನು ಪತ್ತೆ ಮಾಡಲಾಗಿದೆ ಎಂದಿಟ್ಟುಕೊಳ್ಳಿ. ಆ ಔಷಧ ಪ್ರಯೋಜನಕಾರಿಯೇ? ಅದರ ಸುರಕ್ಷತೆ ಎಷ್ಟು? ಅದರ ಅಡ್ಡ ಪರಿಣಾಮಗಳೇನು? ಇಂತಹ ಪ್ರಶ್ನೆಗಳಿಗೆ ಉತ್ತರಿಸುವದು ವೈದ್ಯಕೀಯ ಸಂಶೋಧನೆಗಳ ಗುರಿ. ಮೊದಲು ಪ್ರಯೋಗಾಲಯದ ಪ್ರಾಣಿಗಳ ಮೇಲೆ ಪ್ರಯೋಗಿಸಿ, ಪ್ರಾಥಮಿಕ ವಿಶ್ಲೇಷಣೆ ನಡೆಸಲಾಗುತ್ತದೆ. ಆ ಹಂತದಲ್ಲಿ ಸುರಕ್ಷಿತ ಎಂದು ಸಾಬೀತಾದ ಔಷಧಗಳನ್ನು ಮೂರು-ನಾಲ್ಕು ಹಂತಗಳಲ್ಲಿ ಮನುಷ್ಯರ ಮೇಲೆ ಪ್ರಯೋಗಿಸುತ್ತಾ ಫಲಿತಾಂಶಗಳನ್ನು ಎಚ್ಚರಿಕೆಯಿಂದ ಅಳೆಯಲಾಗುತ್ತದೆ. ಇದರಲ್ಲಿ ರೋಗಿಗೆ ಪ್ರಯೋಜನಕಾರಿಯಾಗಬಲ್ಲ ಸುರಕ್ಷಿತ ಔಷಧಗಳು ಮಾತ್ರ ತಯಾರಿಕೆಯ ಹಂತಕ್ಕೆ ತಲುಪಿ, ಮಾರುಕಟ್ಟೆ ಪ್ರವೇಶ ಮಾಡುತ್ತವೆ. ಆನಂತರ ಕೂಡ ವಿಶ್ಲೇಷಣೆಗಳು ಮುಂದುವರೆಯುತ್ತವೆ. ಮಾರುಕಟ್ಟೆ ಸಮೀಕ್ಷೆಯಲ್ಲಿ ಸುರಕ್ಷಿತವೆಂದು ಸಾಬೀತಾದ ಔಷಧಗಳು ಮಾತ್ರ ಉಳಿಯುತ್ತವೆ. ಇಡೀ ಪ್ರಕ್ರಿಯೆಯಲ್ಲಿ ಮನುಷ್ಯರ ಮೇಲಿನ ಪ್ರಯೋಗಗಳು ಬಹಳ ಮಹತ್ವದವು. ಒಟ್ಟಾರೆ ಸುರಕ್ಷತೆಯ ದೃಷ್ಟಿಯಿಂದ ಮನುಷ್ಯರ ಮೇಲೆ ನಡೆಸುವ ಎಲ್ಲಾ ಹಂತದ ಪ್ರಯೋಗಗಳನ್ನೂ ಬಹಳ ತಾಳ್ಮೆಯಿಂದ, ಎಚ್ಚರದಿಂದ ಮಾಡಬೇಕು. ಒಂದು ವೇಳೆ ಮನುಷ್ಯರ ಆಂತರ್ಯವನ್ನೇ ಸಮೀಕರಿಸುವ ಯಂತ್ರಗಳನ್ನು ಸೃಜಿಸಿ, ಪರೀಕ್ಷೆಗಳನ್ನು ಅಂತಹ ಯಂತ್ರಗಳ ಮೇಲೆ ಮಾಡಿದರೆ? ಆಗ ಕೇವಲ ಅಂತಿಮ ಹಂತದ ಪರೀಕ್ಷೆಗಳಿಗೆ ಮಾತ್ರ ನೈಜ ಮನುಷ್ಯರ ಅಗತ್ಯ ಬರುತ್ತದೆ. ಇದರಿಂದ ಯಾವುದೇ ಹೊಸ ಪ್ರಗತಿಯನ್ನು ಹೆಚ್ಚಿನ ಅಡೆತಡೆ ಇಲ್ಲದೆ ಮಾರುಕಟ್ಟೆಗೆ ತಂದು ಲಕ್ಷಾಂತರ ಜೀವಗಳನ್ನು ಉಳಿಸಬಹುದು. ಪ್ರಯೋಗಗಳನ್ನು ನಡೆಸಲು ಇಂತಹ ಕೃತಕ ಅಂಗಾಂಶ, ಅಂಗಾಂಗ, ಮತ್ತು ಇಡೀ ಜೀವಿಗಳನ್ನು ನಿರ್ಮಿಸುವತ್ತ ವಿಜ್ಞಾನ ಗಮನ ಹರಿಸುತ್ತಿದೆ.

ಇದು ಹೇಗೆ ಸಾಧ್ಯ? ಪ್ರಸ್ತುತ ತಂತ್ರಜ್ಞಾನ ಸಾಧಿಸಿರುವ ನಿಖರತೆಯೊಡನೆ ಗಣಿತೀಯ ಮಾದರಿಗಳ ಸಂಗಮ ಇಂತಹ ಸಾಹಸಕ್ಕೆ ಇಂಬು ನೀಡಿದೆ. ಯಕೃತ್ತಿನ ಉದಾಹರಣೆ ಗಮನಿಸಬಹುದು. ನಮ್ಮ ಶರೀರದ ರಾಸಾಯನಿಕ ಕಾರ್ಖಾನೆ ಎಂದು ಹೆಸರಾಗಿರುವ ಯಕೃತ್, ನಾವು ತೆಗೆದುಕೊಳ್ಳುವ ಬಹುತೇಕ ಔಷಧಗಳ ಸುರಕ್ಷಿತ ನಿರ್ಮೂಲನೆಯ ಕೆಲಸವನ್ನು ನಿರ್ವಹಿಸುತ್ತದೆ. ಯಕೃತ್ ರಚನೆಯ ವಿವರಗಳನ್ನು ಅತ್ಯುತ್ಕೃಷ್ಟ ಸಿ.ಟಿ., ಎಂ.ಆರ್.ಐ ನಂತಹ ತಂತ್ರಜ್ಞಾನಗಳಿಂದ ಪಡೆದು, ಅದರ ಯಥಾವತ್ ಮಾದರಿಗಳನ್ನು ಪ್ರಯೋಗಾಲಯದಲ್ಲಿ ನಿರ್ಮಿಸಲಾಗುತ್ತದೆ. ಯಾವ ರಾಸಾಯನಿಕ ವಸ್ತುವಿಗೆ ಯಕೃತ್ ಯಾವ ರೀತಿ ಸ್ಪಂದಿಸುತ್ತದೆ ಎಂಬುದನ್ನು ಕಂಪ್ಯೂಟರ್ ತಂತ್ರಾಂಶಗಳನ್ನು ಬಳಸಿ ಗಣಿತೀಯ ಸೂತ್ರಗಳ ಮೂಲಕ ಪತ್ತೆ ಮಾಡಬಹುದು. ಇವೆರಡನ್ನೂ ಒಗ್ಗೂಡಿಸಿ ಪ್ರಯೋಗಗಳಿಗಾಗಿ ಒಂದು ಕೃತಕ ಯಕೃತ್ತಿನ ಮಾದರಿಯನ್ನು ಸಿದ್ಧಪಡಿಸಬಹುದು. ಇದೇ ರೀತಿ ಹೃದಯದ ತಾಂತ್ರಿಕ ಮಾದರಿಯನ್ನು ತಯಾರಿಸಿ, ಅದರಲ್ಲಿ ಕೃತಕ ಪಂಪ್ ಗಳನ್ನು ಕೂರಿಸಿ, ಪರಿಣಾಮಗಳನ್ನು ನಿಖರವಾಗಿ ಅಳೆಯಬಹುದು. ಇದರಿಂದ ಮಾನವ ಹೃದಯ ಯಾವುದೇ ಕಾರಣಕ್ಕೆ ಬಲಹೀನವಾದಾಗ, ಅದಕ್ಕೆ ಕೃತಕ ಪಂಪ್ ಗಳನ್ನು ಅಳವಡಿಸಿ ಹೃದಯಕ್ಕೆ ಪುನಶ್ಚೇತನ ನೀಡುವ ದಿಶೆಯಲ್ಲಿ ಮಹತ್ವದ ಬೆಳವಣಿಗೆಗಳಾಗುತ್ತವೆ. ಸದ್ಯಕ್ಕೆ ನಡೆಯುತ್ತಿರುವ ವಿಧಾನದಲ್ಲಿ ಇಂತಹ ಪ್ರಯೋಗಗಳಿಗೆ ಸಂಶೋಧನೆಯ ಹಂತಗಳಲ್ಲಿ ಸೂಕ್ತವಾದ ಮಾನವ ಪ್ರಯೋಗಾರ್ಥಿಗಳನ್ನು ಪತ್ತೆ ಮಾಡುವುದು ಸುಲಭವಲ್ಲ. ಇದೇ ಕಾರಣಕ್ಕೆ ಈ ರೀತಿಯ ಪ್ರಯೋಗಗಳು ಮಾರುಕಟ್ಟೆ ತಲುಪಲು ದಶಕಗಳೇ ಹಿಡಿಯುತ್ತವೆ. ಮಾನವ ಹೃದಯದ ತಾಂತ್ರಿಕ ಮಾದರಿ ಈ ಅವಧಿಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ.

ಕೇವಲ ಸಂಶೋಧನೆಗೆ ಮಾತ್ರವೇ ಅಲ್ಲದೇ, ಈ ನವೀನ ತಂತ್ರಜ್ಞಾನದಿಂದ ಪ್ರಸ್ತುತ ಲಭ್ಯವಿರುವ ವೈದ್ಯಕೀಯ ಪರೀಕ್ಷೆಗಳನ್ನು  ಕೂಡ ಉನ್ನತೀಕರಿಸಬಲ್ಲ ಸಾಧ್ಯತೆಗಳಿವೆ. ಉದಾಹರಣೆಗೆ, ಹೃದಯಾಘಾತ ಆದಾಗ ಹೃದಯದ ರಕ್ತನಾಳಗಳಿಗೆ ತೂರ್ನಳಿಕೆ ಮೂಲಕ ಆಂಜಿಯೊಗ್ರಾಮ್ ಪರೀಕ್ಷೆ ಮಾಡಿ, ರಕ್ತನಾಳಗಳ ಪರಿಸ್ಥಿತಿಯನ್ನು ವಿಶ್ಲೇಷಿಸಿ, ಅವನ್ನು ಬಲೂನ್ ಮೂಲಕ ಹಿಗ್ಗಿಸಬೇಕೇ; ಹಾಗೆ ಹಿಗ್ಗಿಸಿ ಸ್ಟೆಂಟ್ ಕೂರಿಸಬೇಕೇ; ಅಥವಾ ಶಸ್ತ್ರಚಿಕಿತ್ಸೆ ಮಾಡಬೇಕೆ ಎಂಬುದನ್ನು ನಿರ್ಧರಿಸಲಾಗುತ್ತದೆ. ಆಂಜಿಯೊಗ್ರಾಮ್ ಪರೀಕ್ಷೆಯ ವಿವರಗಳನ್ನು ಗ್ರಹಿಸಲು ಹೃದ್ರೋಗ ತಜ್ಞರ ಅಗತ್ಯವಿದೆ. ಬೇರೆ ಬೇರೆ ಹೃದ್ರೋಗ ತಜ್ಞರ ಅಭಿಮತ ಅವರವರ ಅನುಭವ, ಜ್ಞಾನದ ಆಧಾರದ ಮೇಲೆ ಭಿನ್ನವಾಗಬಹುದು. ಆದರೆ, ನವೀನ ತಂತ್ರಜ್ಞಾನಗಳು ಈ ಮಿತಿಗಳನ್ನು ಸುಲಭವಾಗಿ ಮೀರುತ್ತವೆ. ಹೃದಯದ ರಕ್ತನಾಳಗಳ ಸಿ.ಟಿ. ಸ್ಕ್ಯಾನ್ ಮಾಡಿಸಿ, ಆ ಚಿತ್ರಗಳನ್ನು ವಿಶಿಷ್ಟ ಕಂಪ್ಯೂಟರ್ ತಂತ್ರಾಂಶದ ನೆರವಿನಿಂದ ವಿಶ್ಲೇಷಿಸಿ, ಅವುಗಳ ಮೇಲೆ ಗಣಿತೀಯ ಮಾದರಿಗಳನ್ನು ಬಳಸಿ, ರಕ್ತನಾಳಗಳ ಒಳಗೆ ಹರಿಯುವ ರಕ್ತದ ಪರಿಚಲನೆಯ ಸಂಪೂರ್ಣ ಚಿತ್ರವನ್ನು ನಕ್ಷೆಗಳ ಸಮೇತ ಪಡೆಯಬಹುದು. ಈ ವಿವರಗಳು ವಸ್ತುನಿಷ್ಟವಾಗಿರುವುದರಿಂದ ರೋಗಿಯ ಚಿಕಿತ್ಸೆ ಹೆಚ್ಚು ನಿಖರವಾಗುತ್ತದೆ. ಇದೇ ರೀತಿಯಲ್ಲಿ ಮಧುಮೇಹಿಗಳ ಕಾಲಿನ  ರಕ್ತಪರಿಚಲನೆಯನ್ನು ಗುರುತಿಸಿ, ಶೀಘ್ರವಾಗಿ ಕ್ಲುಪ್ತ ಚಿಕಿತ್ಸೆ ನೀಡುವ ಪ್ರಕ್ರಿಯೆಗಳು ರೂಪುಗೊಳ್ಳುತ್ತಿವೆ. ಮಧುಮೇಹಿಗಳ ಕಾಲಿನ ಆರೈಕೆಯನ್ನು ಜೋಪಾನವಾಗಿ ಮಾಡಬೇಕು. ಆ ಕ್ಲಿಷ್ಟಕರ ಕೆಲಸದ ಸರಿಯಾದ ನಿರ್ಧಾರಗಳನ್ನು ತಂತ್ರಾಂಶಗಳು ಸಮರ್ಥವಾಗಿ ಮಾಡಲು ಸಾಧ್ಯ.

ಇವೆಲ್ಲಾ ಭವಿಷ್ಯದ ಅಭಿವೃದ್ಧಿಯ ಪ್ರಾಥಮಿಕ ಹಂತಗಳು. ಪ್ರತಿಯೊಂದು ವ್ಯಕ್ತಿಯ ಜೆನೆಟಿಕ್ ಹಿನ್ನೆಲೆ ಮತ್ತು ಪರಿಸರದ ಪ್ರಭಾವಗಳು ವಿಭಿನ್ನವಾಗಿರುತ್ತವೆ. ಪ್ರಯೋಗದ ಸಲುವಾಗಿ ಯಾಂತ್ರಿಕ ಅಂಗಾಂಗಗಳನ್ನು ತಯಾರಿಸುವಾಗ ಈ ಅಂಶಗಳನ್ನೂ ನೆನಪಿಡಬೇಕು. ಅದಕ್ಕೆ ತಕ್ಕಂತೆ ಗಣಿತೀಯ ತಂತ್ರಾಂಶಗಳು ಬದಲಾಗಬೇಕು. ಭವಿಷ್ಯದಲ್ಲಿ ಅಭಿವೃದ್ಧಿಯಾಗಲಿರುವ ತಂತ್ರಜ್ಞಾನಕ್ಕೆ ಹೊಂದಿಕೊಳ್ಳಲು ಅನುಗುಣವಾಗಿ ಇರುವಂತೆ ಇವನ್ನು ರೂಪಿಸಬೇಕು. ಹೀಗಾಗಿ, ಹಲವಾರು ಪ್ರಮುಖ ಉದ್ಯಮಗಳು ಜೊತೆಗೂಡಿ ಈ ತಂತ್ರಜ್ಞಾನವನ್ನು ಅಭಿವೃದ್ಧಿಗೊಳಿಸುತ್ತಿವೆ. ಮಾನವ ಶರೀರವೇ ಅಚ್ಚರಿಗಳ ಆಗರ; ಶರೀರದ ಎಷ್ಟೋ ಕ್ರಿಯೆಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಇನ್ನೂ ಆಗಿಲ್ಲ. ಹೀಗಿರುವಾಗ ಆ ಕ್ರಿಯೆಗಳ ತಂತ್ರಾಂಶ ಅಭಿವೃದ್ಧಿ ಕೂಡ ಪಕ್ಕಾ ಆಗಿರಲು ಸಾಧ್ಯವಿಲ್ಲ. ಶರೀರ ಕ್ರಿಯೆಗಳ ಯಥಾವತ್ ನಕಲನ್ನು ರೂಪಿಸುವುದು ಇನ್ನೂ ಬಹುದೂರದ ಕನಸು. ಆದರೆ, ಈ ನಿಟ್ಟಿನಲ್ಲಿ ಇಡುವ ಪ್ರತಿಯೊಂದು ಹೆಜ್ಜೆಯೂ ಬಹಳ ಮಹತ್ವದ್ದು. “ಹೊಸ ಸಮಸ್ಯೆಗಳಿಗೆ ಹೊಸ ಪರಿಹಾರಗಳೇ ಬೇಕಾಗುತ್ತವೆ” ಎನ್ನುವಂತೆ, ಹಳೆಯ ಸಮಸ್ಯೆಗಳಿಗೂ ಹೊಸ ಪರಿಹಾರಗಳನ್ನು ಹುಡುಕುತ್ತಲೇ ಇರುವುದು ಮಾನವ ಪ್ರಗತಿಯ ಬಹುದೊಡ್ಡ ಹೆಜ್ಜೆ.

-------------------

09/ಮಾರ್ಚ್/2021 ರ ವಿಶ್ವವಾಣಿ ದಿನಪತ್ರಿಕೆಯಲ್ಲಿ ಪ್ರಕಟವಾದ ಲೇಖನ 

 


ಕೋವಿಡ್ ಲಸಿಕೆ: ಸಂದೇಹಗಳಿಗೆ ಉತ್ತರ

ಡಾ. ಕಿರಣ್ ವಿ. ಎಸ್.

ಭಾರತದಲ್ಲಿ ಕೋವಿಡ್ ಲಸಿಕೆಗಳ ಶಕೆ ಆರಂಭವಾಗಿದೆ. ಆರೋಗ್ಯ ಕಾರ್ಯಕರ್ತರ ಲಸಿಕಾಕರಣ ಒಂದು ಹಂತಕ್ಕೆ ಬಂದಿದೆ. ಈಗ ಸಾರ್ವಜನಿಕರಿಗೆ ಲಸಿಕೆ ನೀಡುವಿಕೆಯ ಪ್ರಕ್ರಿಯೆ ಆರಂಭವಾಗಿದೆ. ಇಡೀ ದೇಶಕ್ಕೆ ಕೋವಿಡ್ ಲಸಿಕೆ ನೀಡುವ ಮಹತ್ವಾಕಾಂಕ್ಷಿ ಯೋಜನೆ ಹಮ್ಮಿಕೊಳ್ಳಲಾಗಿದೆ. ಲಸಿಕೆಗಳ ಬಗ್ಗೆ ಹಲವಾರು ಪ್ರಶ್ನೆಗಳು ಸಹಜವಾಗಿಯೇ ಉದ್ಭವಿಸುತ್ತವೆ. ಅಂತಹ ಕೆಲವು ಪ್ರಶ್ನೆಗಳಿಗೆ ಉತ್ತರ ನೀಡುವ ಪ್ರಯತ್ನ ಇಲ್ಲಿದೆ.

·         ಲಸಿಕೆ ತೆಗೆದುಕೊಳ್ಳುವುದು ಅಗತ್ಯವೇ?

ಹೌದು! ಲಸಿಕೆಗಳು ಕೋವಿಡ್ ವಿರುದ್ಧ ಸೆಣಸಾಡಲು ಶರೀರದ ರಕ್ಷಕ ವ್ಯವಸ್ಥೆಯನ್ನು ಪ್ರಚೋದಿಸಿ, ಸನ್ನದ್ಧವಾಗಿಡುತ್ತವೆ. ಲಸಿಕೆ ತೆಗೆದುಕೊಂಡ ನಂತರವೂ ಕೋವಿಡ್ ಸೋಂಕು ತಗುಲಿದರೆ, ಅದರ ತೀವ್ರತೆ ಕಡಿಮೆ ಇರುತ್ತದೆ; ಆಸ್ಪತ್ರೆಗೆ ದಾಖಲಾಗುವ ಅಥವಾ ಕೋವಿಡ್ ಸಂಬಂಧಿ ಮರಣದ ಪ್ರಮಾಣ ತೀರಾ ಕಡಿಮೆ. ಪ್ರಸ್ತುತ ಕೋವಿಡ್ ಕಾಯಿಲೆಯಿಂದ ಮರಣ ಹೊಂದುವ ಸಾಧ್ಯತೆಗಳು ಶೇಕಡಾ 2-3 ಎನ್ನಲಾಗಿದೆ. ಲಸಿಕೆ ತೆಗೆದುಕೊಂಡವರಲ್ಲಿ ಇದು ನಗಣ್ಯ ಎನ್ನುವ ಪ್ರಮಾಣಕ್ಕೆ ಇಳಿಯುತ್ತದೆ. ಲಸಿಕೆಗೆ ಸಂಬಂಧಿಸಿದ ಅಡ್ಡ ಪರಿಣಾಮಗಳು ಅತ್ಯಲ್ಪ. ಒಟ್ಟಾರೆ, ಲಸಿಕೆಯಿಂದ ಆಗುವ ಲಾಭಗಳು ಸಾಕಷ್ಟು ಹೆಚ್ಚು; ನಷ್ಟ ಬಹಳ ಕಡಿಮೆ.

·         ಕೋವಿಡ್ ಲಸಿಕೆ ಶೇಕಡಾ 95 ಪರಿಣಾಮಕಾರಿ ಎಂದರೇನು?

ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವರು “ಕೋವಿಡ್ ಬಂದವರಲ್ಲಿ ಶೇಕಡಾ 2 ಮಂದಿ ಮರಣಿಸುತ್ತಾರೆ. ಅಂದರೆ ಕೋವಿಡ್ ಶೇಕಡಾ 98 ಅಪಾಯಕಾರಿ ಅಲ್ಲ. ಲಸಿಕೆ ಶೇಕಡಾ 95 ಪರಿಣಾಮಕಾರಿ. ಲಸಿಗೆಗಿಂತ ಕಾಯಿಲೆಯೇ ವಾಸಿ” ಎಂದು ಬರೆದುಕೊಳ್ಳುತ್ತಾರೆ. ಇದು ಸಂಪೂರ್ಣ ತಪ್ಪು ವಿವರಣೆ. ಲಸಿಕೆಯ ಪರಿಣಾಮವನ್ನು ಅಳೆಯುವಾಗ ಎಚ್ಚರಿಕೆಯಿಂದ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಉದಾಹರಣೆಗೆ – ಕೋವಿಡ್ ಕಾಯಿಲೆ ಈವರೆಗೆ ಬಂದಿಲ್ಲದ 200 ಆರೋಗ್ಯವಂತ ವ್ಯಕ್ತಿಗಳಿಗೆ ತಲಾ ಒಂದೊಂದು ವಿಶಿಷ್ಟ ಗುರುತಿನ ಸಂಖ್ಯೆ ನೀಡಿ, ಎರಡು ಸಮಾನ ಗುಂಪುಗಳಲ್ಲಿ ವಿಂಗಡಿಸಲಾಗುತ್ತದೆ. ಒಂದು ಗುಂಪಿಗೆ ಲಸಿಕೆಯನ್ನು ನೀಡುತ್ತಾರೆ. ಮತ್ತೊಂದು ಗುಂಪಿಗೆ ಲಸಿಕೆಯಲ್ಲದ ಯಾವುದೋ ಚುಚ್ಚುಮದ್ದು ನೀಡುತ್ತಾರೆ. ಯಾರಿಗೆ ಲಸಿಕೆ ನೀಡಲಾಗಿದೆ; ಯಾರಿಗೆ ನೀಡಲಾಗಿಲ್ಲ ಎಂಬ ಮಾಹಿತಿ ಸ್ವತಃ ಚುಚ್ಚುಮದ್ದು ನೀಡುವವರಿಗೂ ತಿಳಿದಿರುವುದಿಲ್ಲ. ಲಸಿಕೆಯ ಪರಿಣಾಮದ ವಿಶ್ಲೇಷಣೆ ಮಾಡುವವರಿಗೆ ಇಂತಿಂಥ ಸಂಖ್ಯೆಯ ವ್ಯಕ್ತಿಗಳಿಗೆ ಲಸಿಕೆ ನೀಡಲಾಗಿದೆ ಎಂದು ಮಾತ್ರ ತಿಳಿದಿರುತ್ತದೆ; ಆ ಸಂಖ್ಯೆ ಯಾವ ವ್ಯಕ್ತಿಯದ್ದು ಎಂದು ತಿಳಿದಿರುವುದಿಲ್ಲ. ಹೀಗೆ, ಯಾವುದೇ ಅಂದಾಜುಗಳಿಗೆ, ಊಹೆಗಳಿಗೆ ಆಸ್ಪದವಿಲ್ಲದಂತೆ ವಿಶ್ಲೇಷಣೆ ನಡೆಯುತ್ತದೆ. ನಿಶ್ಚಿತ ಅವಧಿಯ ನಂತರ ಗುಂಪುಗಳ ಪ್ರತಿಯೊಬ್ಬರ ರಕ್ತವನ್ನೂ ಪರೀಕ್ಷಿಸಿ, ಅವರಲ್ಲಿ ರೋಗನಿರೋಧಕ ಶಕ್ತಿ ನೀಡುವ ಪ್ರತಿಕಾಯಗಳ ಪ್ರಮಾಣವನ್ನು ಅಳೆಯಲಾಗುತ್ತದೆ. ಪ್ರತಿಕಾಯಗಳ ಮಟ್ಟ ಒಂದು ನಿಶ್ಚಿತ ಹಂತಕ್ಕಿಂತ ಹೆಚ್ಚಾಗಿದ್ದರೆ, ಅವರಲ್ಲಿ ರೋಗನಿರೋಧಕ ಶಕ್ತಿ ಬಂದಿದೆ ಎಂದರ್ಥ. ಕೋವಿಡ್ ಲಸಿಕೆಯೊಂದು ಶೇಕಡಾ 95 ಪರಿಣಾಮಕಾರಿ ಎಂದರೆ, ಅದನ್ನು ತೆಗೆದುಕೊಂಡವರ ಪೈಕಿ ನೂರಕ್ಕೆ 95 ಮಂದಿಗೆ ರೋಗನಿರೋಧಕ ಶಕ್ತಿ ಲಭಿಸಿದೆ. ಇನ್ನುಳಿದ ಐದು ಮಂದಿಯಲ್ಲಿ ಕೂಡ ತಕ್ಕಮಟ್ಟಿನ ಪ್ರತಿಕಾಯಗಳ ಉತ್ಪತ್ತಿಯಾಗುತ್ತಾದಾದರೂ, ಅದು ನಿಶ್ಚಿತ ಹಂತವನ್ನು ಮುಟ್ಟಿಲ್ಲ ಎಂದರ್ಥ. ಲಸಿಕೆಯ ಪರಿಣಾಮ ಎನ್ನುವ ಸಂಖ್ಯೆ ಒಂದು ವ್ಯಕ್ತಿಗೆ ಬರುವ ರೋಗನಿರೋಧಕ ಶಕ್ತಿಗೆ ಸಂಬಂಧ ಪಟ್ಟಿದ್ದಲ್ಲ. ಇದು ಸಮಷ್ಟಿಯ ಲೆಕ್ಕಾಚಾರ. ಶೇಕಡಾ 95 ಪರಿಣಾಮಕಾರಿ ಎನ್ನುವ ಕೋವಿಡ್ ಲಸಿಕೆ ತೆಗೆದುಕೊಂಡರೆ ಉನ್ನತ ಮಟ್ಟದ ರೋಗನಿರೋಧಕ ಶಕ್ತಿ ಲಭಿಸುವ ಸಾಧ್ಯತೆ ಶೇಕಡಾ 95 ಎಂದು ಭಾವಿಸಬೇಕು.

·         ಈಗಾಗಲೇ ಕೋವಿಡ್ ಕಾಯಿಲೆ ಬಂದಿರುವವರೂ ಲಸಿಕೆ ತೆಗೆದುಕೊಳ್ಳಬೇಕೆ?

ಕೆಲವು ವೈರಸ್ ಕಾಯಿಲೆಗಳಿಗೆ ಶರೀರ ದೀರ್ಘಕಾಲಿಕ ರಕ್ಷಣೆಯ ಶಕ್ತಿಯನ್ನು ಬೆಳೆಸಿಕೊಳ್ಳುತ್ತದೆ. ಕೆಲವು ಕಾಯಿಲೆಗಳಲ್ಲಿ ಇಂತಹ ರಕ್ಷಣೆ ಅಲ್ಪಕಾಲಿಕ. ಅಂತಹ ಕಾಯಿಲೆಗಳು ಪುನಃ ತಾಗುವ ಸಂಭವ ಇರುತ್ತವೆ. ಕೋವಿಡ್ ಕಾಯಿಲೆ ನಮ್ಮ ಪಾಲಿಗೆ ಹೊಸತು; ರಕ್ಷಣೆ ದೀರ್ಘಕಾಲಿಕವೋ ಅಥವಾ ಅಲ್ಪಕಾಲಿಕವೋ ಎಂಬುದು ತಿಳಿಯದು. ಆದ್ದರಿಂದ ಈಗಾಗಲೇ ಕೋವಿಡ್ ಕಾಯಿಲೆ ಬಂದವರು ಕೂಡ ನಾಲ್ಕಾರು ವಾರಗಳ ನಂತರ ಲಸಿಕೆ ಹಾಕಿಸಿಕೊಳ್ಳುವುದು ಲಾಭದಾಯಕ. ಕಾಯಿಲೆಯ ವೇಳೆ ಪ್ಲಾಸ್ಮಾ ಚಿಕಿತ್ಸೆ ಪಡೆದವರು ಸುಮಾರು 90 ದಿನಗಳ ನಂತರ ಲಸಿಕೆ ಪಡೆಯಬೇಕು ಎಂದು ಕೆಲವು ತಜ್ಞರ ಅಭಿಪ್ರಾಯ.

·         ಕೋವಿಡ್ ಕಾಯಿಲೆಯ ಹೊಸ ಮಾದರಿಗಳು ಬರುತ್ತಿವೆ ಎಂದು ಸುದ್ಧಿಯಿದೆ. ಈ ಲಸಿಕೆಯಿಂದ ಪ್ರಯೋಜನವೇನು?

ಕೋವಿಡ್ ನ ಭಿನ್ನ ಮಾದರಿಗಳು ಪ್ರಪಂಚದ ಕೆಲವೆಡೆ ಕಂಡಿವೆ. ಆದರೆ ಅವು ಸಾರಾಸಗಟಾಗಿ ಮಾರ್ಪಾಡು ಹೊಂದಿರುವ ವೈರಸ್ ಪ್ರಭೇದಗಳಲ್ಲ. ಹೀಗಾಗಿ, ಪ್ರಸ್ತುತ ಕೋವಿಡ್ ಲಸಿಕೆಗಳು ಇತರ ಮಾದರಿಗಳ ಮೇಲೂ ತಕ್ಕಮಟ್ಟಿನ ಪರಿಣಾಮಗಳನ್ನು ತೋರುವ ಸಾಧ್ಯತೆ ಪ್ರಬಲವಾಗಿದೆ. ಹೊಸ ಪ್ರಭೇದಗಳು ಏಕಾಏಕಿ ಎಲ್ಲೆಡೆಯೂ ವ್ಯಾಪಿಸುವುದಿಲ್ಲ. ಮೂಲ ಕೋವಿಡ್ ಕಾಯಿಲೆಯ ವೈರಸ್ ಈಗಲೂ ಬಹುತೇಕ ಚಾಲ್ತಿಯಲ್ಲಿದೆ. ಪ್ರಸ್ತುತ ಲಸಿಕಾಕರಣ ವೇಗವನ್ನು ಪಡೆದುಕೊಂಡರೆ ಹೆಚ್ಚಿನ ಮಂದಿಗೆ ರೋಗ ತಗುಲುವುದಿಲ್ಲದ ಕಾರಣ ವೈರಸ್ ನ ಹೊಸ ಪ್ರಭೇದಗಳ ಬೆಳವಣಿಗೆ ತಂತಾನೇ ನಿಂತುಹೋಗಬಹುದು ಎಂದು ತಜ್ಞರ ಅಂದಾಜು.

·         ಯಾವ ಲಸಿಕೆ ಉತ್ತಮ?

ಲಸಿಕೆಯ ಪರಿಣಾಮದ ವಿಷಯದಲ್ಲಿ ನೀಡುವ ಸಂಖ್ಯೆಗಳು ಆಯಾ ಗುಂಪುಗಳಲ್ಲಿ ಮಾಡಿದ ಪರೀಕ್ಷೆಗಳ ಫಲಿತಾಂಶ. ಅದನ್ನು ಬೃಹತ್ ಪ್ರಮಾಣದ ಜನರಿಗೆ ಯಥಾವತ್ತಾಗಿ ಸಮೀಕರಿಸಲಾಗದು. ಆದ್ದರಿಂದ, “ಇಂತಹ ಲಸಿಕೆ ಒಳ್ಳೆಯದು; ಇಂತಹ ಲಸಿಕೆ ಒಳ್ಳೆಯದಲ್ಲ” ಎನ್ನಲಾಗದು. ಲಸಿಕಾಕರಣ ಒಂದು ಹಂತ ದಾಟಿದ ನಂತರ “ಯಾವ ರೀತಿಯ ಸಮಸ್ಯೆ ಇರುವವರರಲ್ಲಿ ಯಾವ ಲಸಿಕೆ ಹೆಚ್ಚು ಪರಿಣಾಮಕಾರಿ” ಎಂಬುದರ ಮಾಹಿತಿ ಹೊರಬರಬಹುದು. ಆದರೆ, ಇಲ್ಲಿಯವರೆಗೆ ಆ ರೀತಿಯ ಮಾಹಿತಿ ಇಲ್ಲ. ಸದ್ಯಕ್ಕೆ ಲಭ್ಯವಿರುವ ಪ್ರತಿಯೊಂದು ಲಸಿಕೆಯೂ ಅನೇಕ ಪರೀಕ್ಷೆಗಳನ್ನು ಸಫಲವಾಗಿ ಗೆದ್ದಿವೆ. ಹೀಗಾಗಿ, ಯಾವ ಪ್ರಭೇದದ ಲಸಿಕೆ ಎಂಬ ಜಿಜ್ಞಾಸೆ ಬೇಕಿಲ್ಲ. ಲಭ್ಯವಿರುವ ಯಾವುದೇ ಲಸಿಕೆಯನ್ನಾದರೂ ನಿಶ್ಚಿಂತೆಯಿಂದ ಪಡೆಯಬಹುದು. 

·         ಎಲ್ಲರೂ ಲಸಿಕೆ ಹಾಕಿಸಿಕೊಂಡ ಮೇಲೆ ನಾನೇಕೆ ಹಾಕಿಸಬೇಕು?

ಕೋವಿಡ್ ಲಸಿಕೆ ದೇಹದ ಒಳಗಿನ ರಕ್ಷಕ ವ್ಯವಸ್ಥೆಯನ್ನು ಉತ್ತೀಜಿಸುತ್ತದೆ. ಲಸಿಕೆ ಪಡೆದವರ ಶ್ವಾಸನಾಳಗಳಲ್ಲಿ ಕುಳಿತಿರುವ ಕೋವಿಡ್ ವೈರಸ್ ಗಳು ಅಂಥವರಿಗೆ ಹಾನಿ ಮಾಡದೇ ಸುಮ್ಮನೆ ಕೂತಿರುತ್ತವೆ. ಅವುಗಳನ್ನು ಶರೀರ ನಿಷ್ಕ್ರಿಯಗೊಳಿಸುವ ಬಗ್ಗೆ ಮಾಹಿತಿಯಿಲ್ಲ. ಇಂತಹ ವೈರಸ್ ಗಳು ಲಸಿಕೆ ಪಡೆಯದ ವ್ಯಕ್ತಿಗೆ ಹರಡಿ, ಕಾಯಿಲೆ ತರುವ ಸಾಧ್ಯತೆಗಳಿವೆ. ಲಸಿಕೆ ಹಾಕಿಸಿಕೊಂಡವರು ಮಾತ್ರ ತಂತಮ್ಮ ಮಟ್ಟದಲ್ಲಿ ಸುರಕ್ಷಿತರಾಗುತ್ತಾರೆ. ಆದರೆ, ಅವರಿಂದ ಹರಡಿದ ವೈರಸ್ ಅಪಾಯಕಾರಿಯಾಗಿಯೇ ಇರುತ್ತವೆ. ಮತ್ತೊಬ್ಬರ ಲಸಿಕೆಯಿಂದ ನಾವು ಸುರಕ್ಷಿತರಾಗುವ ಸಂಭವನೀಯತೆ ಕಡಿಮೆ. ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಳ್ಳುವುದೇ ಉತ್ತಮ. ಭವಿಷ್ಯದಲ್ಲಿ ಮೂಗಿಗೆ ಹಾಕುವ ಕೋವಿಡ್ ಲಸಿಕೆಗಳು ಬರಲಿವೆ. ಅಂತಹ ಲಸಿಕೆ ಪಡೆದವರು ರೋಗವನ್ನು ಹರಡುವ ಸಾಧ್ಯತೆಗಳು ಕಡಿಮೆ ಆಗುತ್ತವೆ ಎಂದು ಭಾವಿಸಲಾಗಿದೆ.

·         ಲಸಿಕೆಯ ಪರಿಣಾಮ ಎಷ್ಟು ಕಾಲ ಇರಬಹುದು?

ಸದ್ಯಕ್ಕೆ ಇದರ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ಪರೀಕ್ಷೆಗಳು ನಡೆದು, ಮಾಹಿತಿಯ ವಿಶ್ಲೇಷಣೆ ಆದ ನಂತರ ಪಕ್ಕಾ ಮಾರ್ಗಸೂಚಿಗಳನ್ನು ನೀಡಲು ಸಾಧ್ಯ. ಆದರೆ, ಒಂದು ತಿಂಗಳ ಅಂತರದಲ್ಲಿ ಎರಡು ಬಾರಿ ಲಸಿಕೆ ಹಾಕಿಸಿದರೆ ಸಾಕಷ್ಟು ಕಾಲ ರೋಗನಿರೋಧಕ ಶಕ್ತಿ ಬರುವುದಂತೂ ಖಚಿತ. ಮುಂದೆ ಈ ಶಕ್ತಿ ಹಾಗೆಯೇ ಉಳಿಯಲು ಬೂಸ್ಟರ್ ಡೋಸುಗಳ ಅಗತ್ಯವೂ ಬರಬಹುದು. ಕಾದು ನೋಡುವುದೊಂದೇ ದಾರಿ. 

·         ಗರ್ಭಿಣಿಯರು ಲಸಿಕೆ ಪಡೆಯಬಹುದೇ?

ಸುಮಾರು 10,000 ಗರ್ಭಿಣಿಯರಲ್ಲಿ ಈವರೆಗೆ ಕೋವಿಡ್ ಲಸಿಕೆಗಳನ್ನು ನೀಡಿ, ಮೂರು ತಿಂಗಳ ಕಾಲ ಅವರನ್ನು ನಿಗಾ ಇಡಲಾಗಿದೆ. ಗರ್ಭಿಣಿಯರಿಗಾಗಲೀ ಅಥವಾ ಗರ್ಭಸ್ಥ ಶಿಶುವಿಗಾಗಲೀ ಕೋವಿಡ್ ಲಸಿಕೆಗಳಿಂದ ಯಾವುದೇ ಅಪಾಯ ಸಂಭವಿಸಿಲ್ಲ. ಗರ್ಭದ ಮೊದಲ ಮೂರು ತಿಂಗಳ ನಂತರ ಕೋವಿಡ್ ಲಸಿಕೆ ಪಡೆಯುವುದು ಗರ್ಭಿಣಿಯರಲ್ಲಿ ಪ್ರಯೋಜನಕಾರಿ ಎಂದು ಸದ್ಯಕ್ಕೆ ತಿಳಿದುಬಂದಿದೆ. ಹೆಚ್ಚಿನ ವಿವರಗಳು ಭವಿಷ್ಯದಲ್ಲಿ ತಿಳಿಯಲಿವೆ.

·         ಯಾವುದೋ ಕಾಯಿಲೆಯ ಚಿಕಿತ್ಸೆಯ ಅಂಗವಾಗಿ ನಿಯಮಿತ ಸ್ಟೀರಾಯ್ಡ್ ಔಷಧ ಪಡೆಯುತ್ತಿರುವವರಿಗೆ ಲಸಿಕೆ ನೀಡಬಹುದೇ?

ಸ್ಟೀರಾಯ್ಡ್ ಔಷಧಗಳು ಶರೀರದ ರಕ್ಷಕ ವ್ಯವಸ್ಥೆಯ ಸಾಮರ್ಥ್ಯವನ್ನು ಕುಗ್ಗಿಸುತ್ತವೆ. ಆದ್ದರಿಂದ ಸ್ಟೀರಾಯ್ಡ್ ಔಷಧ ಪಡೆಯುವವರಲ್ಲಿ ಅದರ ಪ್ರಮಾಣವನ್ನು ಕಡಿಮೆ ಮಾಡಬೇಕು. ಇದು ವೈದ್ಯರು ಬಹಳ ಜತನದಿಂದ ಮಾಡಬೇಕಾದ ಕೆಲಸ. ಸ್ಟೀರಾಯ್ಡ್ ಔಷಧ ಪಡೆಯುತ್ತಿರುವವರು ಲಸಿಕೆ ತೆಗೆದುಕೊಳ್ಳುವ ಮುನ್ನ ತಮ್ಮ ವೈದ್ಯರನ್ನು ಸಂಪರ್ಕಿಸಬೇಕು. ಯಾವುದೇ ಬಗೆಯ ನಿಯಮಿತ ಔಷಧ ಸೇವಿಸುತ್ತಿರುವ ಯಾರೊಬ್ಬರೂ ಲಸಿಕೆ ಪಡೆಯುವ ಮುನ್ನ ತಂತಮ್ಮ ವೈದ್ಯರ ಸಲಹೆ ಪಡೆಯುವುದು ಸೂಕ್ತ.

ಕೋವಿಡ್ ಕಾಯಿಲೆ ನಮ್ಮ ಕಾಲದ ಅಚ್ಚರಿ; ಮನುಕುಲದ ಸಾಂಘಿಕ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿ. ಹೀಗೊಂದು ಕಾಲವನ್ನು ನಾವು ನೋಡಿ, ಅನುಭವಿಸಿ, ಗೆಲ್ಲುತ್ತಿದ್ದೇವೆ ಎಂಬುದು ಬದುಕಿನ ಬಗ್ಗೆ ನಮ್ಮ ದಿಟ್ಟತನವನ್ನು ನಿರೂಪಿಸಿದ ಗಾಥೆ! ಕೋವಿಡ್ ಲಸಿಕಾಕರಣ ಈ ನಿಟ್ಟಿನಲ್ಲಿ ಒಂದು ಪ್ರಮುಖ ಹಂತ. ಇದನ್ನು ಯಾರೂ ನಿರಾಕರಿಸಬಾರದು. ಯಾವುದೇ ಪ್ರಶ್ನೆಗಳಿದ್ದಲ್ಲಿ ನಿಸ್ಸಂಕೋಚವಾಗಿ ನಿಮ್ಮ ವೈದ್ಯರ ಸಲಹೆ ಪಡೆಯಿರಿ.

-----------------------

 6/ಮಾರ್ಚ್/2021 ರ ವಿಶ್ವವಾಣಿ ದಿನಪತ್ರಿಕೆಯಲ್ಲಿ ಪ್ರಕಟವಾದ ಲೇಖನ 

 

  


 


ಭವಿಷ್ಯದ ವೈದ್ಯಕೀಯ ತಂತ್ರಜ್ಞಾನ

ಡಾ. ಕಿರಣ್ ವಿ ಎಸ್

ಬೇರೆ ಯಾವುದೇ ಜೀವಿಗಿಂತಲೂ ಮನುಷ್ಯ ಭಿನ್ನವಾಗಿರುವುದೇ ಅಸಾಧಾರಣ ಚಿಂತನೆಯ ಶಕ್ತಿಯಿಂದ. ಪ್ರಶ್ನೆಗಳನ್ನು ಕೇಳುವುದು; ಆಧಾರಗಳನ್ನು ಹುಡುಕುವುದು; ಅದರಿಂದ ಉತ್ತರಗಳನ್ನು ಪಡೆಯುವುದು – ಈ ಪ್ರಕ್ರಿಯೆಗಳು ನಮ್ಮನ್ನು ಬೇರೆಲ್ಲಾ ಜೀವಿಗಳಿಗಿಂತಲೂ ಅನನ್ಯವನ್ನಾಗಿ ಮಾಡಿವೆ. ತಂತ್ರಜ್ಞಾನದ ಅಭಿವೃದ್ಧಿಗೂ ಈ ಪ್ರಕ್ರಿಯೆಯೇ ಕಾರಣ. ಆಧುನಿಕ ತಂತ್ರಜ್ಞಾನದ ಕೆಲವು ಮಹತ್ವದ ಹೆಜ್ಜೆಗಳನ್ನು ವೈದ್ಯಕೀಯ ಕ್ಷೇತ್ರದಲ್ಲಿ ಹೇಗೆ ಬಳಸಿಕೊಳ್ಳಲಾಗುತ್ತಿದೆ?

ನ್ಯಾನೋ ತಂತ್ರಜ್ಞಾನ: ನ್ಯಾನೋಮೀಟರ್ ಎನ್ನುವುದು ಅತ್ಯಂತ ಸಣ್ಣ ಗಾತ್ರದ ಅಳತೆ. ಒಂದು ಕೂದಲ ತುದಿಯನ್ನು ಎರಡೆರಡು ಸಮಾನ ಭಾಗಗಳಂತೆ ಹದಿನೈದು ಬಾರಿ ಸೀಳಿದರೆ, ಕೊನೆಯಲ್ಲಿ ದೊರಕುವ ಅಂತಹ ಪ್ರತಿಯೊಂದು ಭಾಗವೂ ಗಾತ್ರದಲ್ಲಿ ಒಂದು ನ್ಯಾನೋ ಕೊಳವೆಗೆ ಸಮಾನ. ಸಾಮಾನ್ಯ ಜನರ ಊಹೆಗೆ ನಿಲುಕದ ಇಂತಹ ಸಣ್ಣ ಗಾತ್ರಗಳ ನ್ಯಾನೋ ತಂತ್ರಜ್ಞಾನವನ್ನು ವಿಜ್ಞಾನಿಗಳು ಈಗಾಗಲೇ ಅಭಿವೃದ್ಧಿಗೊಳಿಸಿದ್ದಾರೆ. ಭವಿಷ್ಯದ ಅತ್ಯಂತ ಪ್ರಮುಖ ವೈದ್ಯಕೀಯ ಬೆಳವಣಿಗೆ ಯಾವುದು ಎಂಬ ಪ್ರಶ್ನೆಗೆ “ವೈದ್ಯಕೀಯ ಕ್ಷೇತ್ರದಲ್ಲಿ ನ್ಯಾನೋ ತಂತ್ರಜ್ಞಾನದ ಬಳಕೆ” ಎನ್ನುವುದೇ ಉತ್ತರ. ನಮ್ಮ ಶರೀರದಲ್ಲಿ ಸುಮಾರು 5 ಲೀಟರ್ ರಕ್ತ ಇರುತ್ತದೆ. ಅಂದರೆ, ಸುಮಾರು 5000 ಮಿಲಿಲೀಟರ್. ಇಂತಹ ಪ್ರತಿಯೊಂದು ಮಿಲಿಲೀಟರ್ ರಕ್ತದಲ್ಲೂ ಸುಮಾರು 50 ಲಕ್ಷ ಕೆಂಪು ರಕ್ತ ಕಣಗಳು ಇರುತ್ತವೆ! ಅಂದರೆ ನಮ್ಮ ದೇಹದಲ್ಲಿ ಒಟ್ಟಾರೆ ಸುಮಾರು 2500 ಕೋಟಿ ಕೆಂಪು ರಕ್ತ ಕಣಗಳಿವೆ! ಪ್ರತಿಯೊಂದು ಕೆಂಪು ರಕ್ತ ಕಣದ ಅಗಲ ಸುಮಾರು 7 ಮೈಕ್ರೋಮೀಟರ್ ಅಥವಾ 7000 ನ್ಯಾನೋಮೀಟರ್. ಎಂತಹ ಸಣ್ಣ ರಕ್ತನಾಳಗಳಲ್ಲೂ ನುಗ್ಗಬಲ್ಲ ಕೆಂಪು ರಕ್ತ ಕಣಗಳು ಶರೀರದ ಬಹುತೇಕ ಎಲ್ಲಾ ಅಂಗಗಳಿಗೂ ಆಹಾರ ಒಯ್ಯುವ ಮತ್ತು ಕೋಶಗಳ ಕಶ್ಮಲಗಳನ್ನು ಹೊರಹಾಕುವ ಮುಖ್ಯ ಸಾಧನ. ನ್ಯಾನೋ ತಂತ್ರಜ್ಞಾನದ ಮೂಲಕ ನ್ಯಾನೋಮೀಟರ್ ಗಾತ್ರದ ಔಷಧಗಳನ್ನು ತಯಾರಿಸಿ, ಔಷಧದ ಸಾವಿರಾರು ಭಾಗಗಳನ್ನು ಒಂದು ಕೆಂಪು ರಕ್ತಕಣದ ಮೇಲೆ ಸವಾರಿ ಕೂರಿಸಿ ಶರೀರದ ಯಾವುದೇ ಭಾಗಕ್ಕೂ ಒಯ್ಯಬಹುದು! ಕ್ಯಾನ್ಸರ್ ನಿಂದ ಬಳಲುತ್ತಿರುವ ಅಂಗಕ್ಕೆ ರಕ್ತ ಸರಬರಾಜು ಮಾಡುವ ಧಮನಿಯನ್ನು ಗುರುತಿಸಿ, ಒಂದು ತೂರ್ನಳಿಕೆಯಿಂದ ಆ ಧಮನಿಯನ್ನು ಪ್ರವೇಶಿಸಿ, ನ್ಯಾನೋ ತಂತ್ರಜ್ಞಾನದಿಂದ ಅಭಿವೃದ್ಧಿ ಪಡಿಸಿರುವ ಔಷಧಗಳನ್ನು ಅಲ್ಲಿ ಹರಿಯುವ ಕೆಂಪು ರಕ್ತಕಣಗಳ ಮೇಲೆ ಕೂರಿಸಿ ಒಯ್ದರೆ, ಆ ಔಷಧದ ಪರಿಣಾಮ ಅಂತಹ ಕ್ಯಾನ್ಸರ್ ಕೋಶದ ಮೇಲೆ ಮಾತ್ರ ಆಗುತ್ತದೆ. ಇದರಿಂದ, ಬೇರೆ ಬೇರೆ ಅಂಗಗಳು ಕ್ಯಾನ್ಸರ್ ನಿರೋಧಕ ಔಷಧಗಳ ಅಡ್ಡ ಪರಿಣಾಮಕ್ಕೆ ಸಿಲುಕುವುದು ತಪ್ಪುತ್ತದೆ. ಅಂತೆಯೇ, ಹೃದಯಾಘಾತ ಆದಾಗ, ಹೃದಯದ ಯಾವ ರಕ್ತನಾಳದಲ್ಲಿ ರಕ್ತಸಂಚಾರಕ್ಕೆ ಅಡ್ಡಿ ಇದೆಯೋ, ಅದರಲ್ಲಿ ಆ ಅಡ್ಡಿಯನ್ನು ನಿವಾರಿಸಬಲ್ಲ ರಾಸಾಯನಿಕವನ್ನು ಕೆಂಪು ರಕ್ತಕಣಗಳ ಮೇಲೆ ಕೂರಿಸಿ ಪ್ರಯೋಗಿಸಿದರೆ, ರಕ್ತ ಸಂಚಾರ ಸರಾಗವಾಗುತ್ತದೆ. ಅದರ ನಂತರ, ಜಖಂ ಆಗಿರುವ ರಕ್ತನಾಳವನ್ನು ಕೂಡಲೇ ತೇಪೆ ಹಾಕಿ ಬಲಪಡಿಸಬಲ್ಲ ನ್ಯಾನೋ ಕೊಳವೆಗಳನ್ನು ಅಳವಡಿಸಿ ದೀರ್ಘಕಾಲಿಕ ಪರಿಣಾಮಗಳನ್ನು ಪಡೆಯಬಹುದು. ಹೀಗೆ ವೈದ್ಯಕೀಯ ಚಿಕಿತ್ಸೆಯನ್ನು ಬಹಳ ಸುರಕ್ಷಿತವನ್ನಾಗಿ ಮಾಡುವಲ್ಲಿ ನ್ಯಾನೋ ತಂತ್ರಜ್ಞಾನ ಭವಿಷ್ಯದಲ್ಲಿ ಪ್ರಮುಖ ಪಾತ್ರ ವಹಿಸಲಿದೆ.

ಚರ್ಮದ ಮೂಲಕ ಶರೀರದ ಪ್ರಕ್ರಿಯೆಗಳ ಗ್ರಹಿಕೆ: ಮಾರುಕಟ್ಟೆಯಲ್ಲಿ ದೊರೆಯುವ ಸ್ಮಾರ್ಟ್ ಕೈಗಡಿಯಾರಗಳು ಅದನ್ನು ಧರಿಸಿದ ವ್ಯಕ್ತಿಯ ಹೃದಯದ ಬಡಿತ, ಲಯಗಳನ್ನು ಗ್ರಹಿಸಿ, ಅದರಲ್ಲಿ ಏರುಪೇರು ಕಂಡುಬಂದರೆ ಕೂಡಲೇ ಸಂಬಂಧಪಟ್ಟವರಿಗೆ ಆ ಮಾಹಿತಿ ರವಾನಿಸಬಲ್ಲದು. ಇದು ಮುಂದುವರೆದು ಭವಿಷ್ಯದಲ್ಲಿ ಚರ್ಮದ ಮೇಲೆ ಹಚ್ಚಬಲ್ಲ ಸಣ್ಣ ಅಂಟುಪಟ್ಟಿಯಿಂದ ಶರೀರದ ತಾಪಮಾನ, ದೇಹದಲ್ಲಿನ ನೀರಿನ ಅಂಶ, ರಕ್ತದಲ್ಲಿನ ಸಕ್ಕರೆಯ ಪ್ರಮಾಣ, ರಕ್ತದ ಆಕ್ಸಿಜನ್ ಮಟ್ಟ – ಇಂತಹ ಮೂಲಭೂತ ಮಾಹಿತಿಗಳು ತಿಳಿಯಲಿವೆ. ಹಲವಾರು ಕಾಯಿಲೆಗಳು ಆರಂಭದ ಹಂತದಲ್ಲೇ ಕೆಲವು ವಿಶಿಷ್ಟ ರಾಸಾಯನಿಕಗಳನ್ನು ಅಲ್ಪ ಪ್ರಮಾಣದಲ್ಲಿ ಶರೀರದೊಳಗೆ ಸೃಜಿಸುತ್ತವೆ. ಇಂತಹ ರಾಸಾಯನಿಕಗಳನ್ನು ಪತ್ತೆ ಮಾಡಬಲ್ಲ ಮಾದರಿಗಳು ಸಿದ್ಧವಾದರೆ, ಹಲವಾರು ರೋಗಗಳನ್ನು ಚಿಗುರಿನಲ್ಲೇ ಪತ್ತೆ ಹಚ್ಚಿ, ಅವು ಉಲ್ಬಣವಾಗುವುದಕ್ಕೆ ಮೊದಲೇ ಚಿಕಿತ್ಸೆ ನೀಡಿ ಗುಣಪಡಿಸಬಹುದು. ಈ ಅಂಟುಪಟ್ಟಿಗಳು ತೆಳುವಾಗಿ, ಶರೀರದ ಮೇಲೆ ಮೂಡಿಸಿಕೊಳ್ಳುವ ಹಚ್ಚೆಯಂತೆ ಕಾಣಬಲ್ಲವು! ಈ ರೀತಿ ಪತ್ತೆ ಮಾಡಿದ ಸಂಕೇತಗಳನ್ನು ಸ್ಮಾರ್ಟ್ ಫೋನಿಗೆ ರವಾನಿಸಿ, ಅದರಲ್ಲಿನ ವಿಶೇಷವಾಗಿ ವಿನ್ಯಾಸ ಮಾಡಿದ ಆಪ್ ಗಳ ಮೂಲಕ ಮಾಹಿತಿ ವಿಶ್ಲೇಷಣೆ  ಮಾಡಿ ಅದನ್ನು ಸಂಬಂಧಿಸಿದ ತಜ್ಞರಿಗೆ ಕೂಡಲೇ ತಲುಪಿಸುವುದು ಸಾಧ್ಯ. ಹೃದಯದ ಬಡಿತವನ್ನು ನಿಯಂತ್ರಿಸುವ ಪೇಸ್-ಮೇಕರ್ ಯಂತ್ರಗಳ ವಿಷಯದಲ್ಲಿ ಈ ಮಾದರಿಯ ಸಂವಹನ ಈಗಾಗಲೇ ಸಾಕಷ್ಟು ಪ್ರಗತಿ ಪಡೆದಿದೆ.

ರೋಬೋಟಿಕ್ ತಂತ್ರಜ್ಞಾನ: ಜನ್ಮಜಾತ ಸಮಸ್ಯೆಯಿಂದಲೋ, ಪಾರ್ಶ್ವವಾಯು ಕಾಯಿಲೆಯಿಂದಲೋ ಸ್ನಾಯುಮಂಡಲ ದುರ್ಬಲವಾದಾಗ, ಮೆದುಳಿನ ನಿರ್ದೇಶಗಳನ್ನು ಪಾಲಿಸಲು ಸ್ನಾಯುಗಳಿಗೆ ಸಾಧ್ಯವಾಗದು. ಇದರಿಂದ ಶರೀರ ನಿತ್ರಾಣವಾಗುತ್ತದೆ. ನ್ಯಾನೋ ತಂತ್ರಜ್ಞಾನ ಮತ್ತು ರೋಬೋಟಿಕ್ ತಂತ್ರಜ್ಞಾನದ ನೆರವಿನಿಂದ ಕೈಗಳಿಗೆ, ಕಾಲುಗಳಿಗೆ ಮತ್ತು ಬೆನ್ನಿಗೆ ಕವಚದಂತಹ ಹೊದಿಕೆ ಅಳವಡಿಸಿ, ಮಾಂಸಖಂಡಗಳ ಸಂಕೋಚನ-ವಿಕಸನಕ್ಕೆ ಅನುವಾಗುವ ಸೂಕ್ಷ್ಮ ಮೋಟರ್ ಗಳನ್ನು ಸೇರಿಸಲಾಗುತ್ತದೆ. ಮೆದುಳಿನ ಸಂಕೇತಗಳನ್ನು ಗ್ರಹಿಸಲು ಕೆಲವು ಸೂಕ್ಷ್ಮ ಸಂಕೇತ-ಗ್ರಾಹಿಗಳನ್ನು (sensor) ನೆತ್ತಿಯ ಮೇಲೆ ಹೊಂದಿಸಲಾಗುತ್ತದೆ. ಇವು ಮೆದುಳಿನ ನಿರ್ದೇಶನಗಳನ್ನು ಕವಚದ ಸೂಕ್ಷ್ಮ ಮೋಟರ್ ಗಳಿಗೆ ರವಾನಿಸಿ ಚಲನೆಯನ್ನು ಉಂಟುಮಾಡುತ್ತವೆ.

ಕೃತಕ ಅಂಗಾಂಗಗಳಲ್ಲಿ ಮೈಕ್ರೋ ಎಲೆಕ್ಟ್ರಾನಿಕ್ಸ್ ಬಳಕೆ: ಕಣ್ಣುಗಳ ಕೆಲಸ ಬಹಳ ಸಂಕೀರ್ಣ. ಬೆಳಕು ಕಣ್ಣಿನೊಳಗೆ ಪ್ರವೇಶಿಸಿ ಕಣ್ಣಿನ ಹಿಂಬದಿಯ ರೆಟಿನಾ ಪರದೆಯ ಮೇಲೆ ಬಿದ್ದಾಗ, ಅದರೊಳಗೆ ಸಮನ್ವಯಗೊಂಡಿರುವ ಸೂಕ್ಷ್ಮ ನರತಂತುಗಳ ಪ್ರಚೋದನೆಯಿಂದ ಮೆದುಳಿಗೆ ಸಂಕೇತಗಳು ರವಾನೆ ಆಗುತ್ತವೆ. ಅಂದರೆ, ಕಣ್ಣಿನ ಮುಂಭಾಗ ಕ್ಯಾಮೆರಾ ರೀತಿಯಲ್ಲೂ, ಕಣ್ಣಿನ ಹಿಂಭಾಗ ಸಂಕೇತವಾಹಕದಂತೆಯೂ ಕೆಲಸ ಮಾಡುತ್ತದೆ. ನಾವು ನೋಡುವ ದೃಶ್ಯ ಮಾತ್ರ ಮೆದುಳಿನಲ್ಲಿ ಸಂಸ್ಕರಣಗೊಳ್ಳುತ್ತದೆ. ಕಣ್ಣು ಇಲ್ಲದವರಿಗೆ, ಅಥವಾ ಕಣ್ಣು ಕಳೆದುಕೊಂಡವರಿಗೆ ಬಯಾನಿಕ್ ಕಣ್ಣು ಎಂದು ಕರೆಯಲ್ಪಡುವ ಮಾದರಿಯನ್ನು ಪರೀಕ್ಷಾರ್ಥವಾಗಿ ತಯಾರಿಸಲಾಗಿದೆ. ಗಾಜಿನ ಪರದೆಯ ಮೇಲೆ ಬೆಳ್ಳಿಯ ಲೇಪನ ಹಚ್ಚಿ, ಅದರ ಮೇಲೆ ಬೀಳುವ ಬೆಳಕಿನ ಕಿರಣಗಳನ್ನು ವಿದ್ಯುತ್ ಕಾಂತೀಯ ಸಂಕೇತಗಳನ್ನಾಗಿ ಪರಿವರ್ತಿಸಿ, ಅವನ್ನು ಮೆದುಳಿಗೆ ರವಾನಿಸುವ ನರತಂತುಗಳಿಗೆ ಜೋಡಿಸಲಾಗಿದೆ. ನೈಸರ್ಗಿಕ ಕಣ್ಣಿನ ಸಾಮರ್ಥ್ಯಕ್ಕೆ ಹೋಲಿಸಿದರೆ ಬಯೋನಿಕ್ ಕಣ್ಣಿನ ಶಕ್ತಿ ತೀರಾ ಕಡಿಮೆ. ಭವಿಷ್ಯದ ತಂತ್ರಜ್ಞಾನದ ಅಭಿವೃದ್ಧಿ ಈ ಅಂತರವನ್ನು ಕಡಿಮೆ ಮಾಡಬಲ್ಲದು.

ಮೂರು ಆಯಾಮದ ಮುದ್ರಣ: ಕಾಗದದ ಉದ್ದ ಮತ್ತು ಅಗಲದ ಮೇಲೆ ಮುದ್ರಿಸುವ ಎರಡು ಆಯಾಮದ ಪ್ರಿಂಟರ್ ಗಳ ಬಗ್ಗೆ ಎಲ್ಲರಿಗೂ ತಿಳಿದಿದೆ. ಇದಕ್ಕೆ “ಆಳ” ಎನ್ನುವ ಮತ್ತೊಂದು ಆಯಾಮ ಸೇರಿದರೆ ಅನೇಕ ಆಕೃತಿಗಳ ವಸ್ತುಗಳನ್ನು ಮುದ್ರಿಸಬಹುದು. ಈಗಾಗಲೇ ಮೂರು ಆಯಾಮದ ಮುದ್ರಣ ಯಂತ್ರಗಳು ಲಭ್ಯವಿವೆ. ವೈದ್ಯಕೀಯದಲ್ಲಿ ಈ ಮೂರು ಆಯಾಮದ ಮುದ್ರಣ ಭವಿಷ್ಯದಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಗಾಯಕ್ಕೆ ಹಚ್ಚುವ ಪಟ್ಟಿಗಳಿಂದ ಹಿಡಿದು ಕೃತಕ ಅಂಗಾಂಗಗಳವರೆಗೆ ಇದರ ಪ್ರಯೋಜನವಿದೆ. ಹೃದಯದ ಸಮಸ್ಯೆ ಇರುವ ರೋಗಿಯ ಕವಾಟವನ್ನು ಬದಲಾಯಿಸಬೇಕೆಂದರೆ ಪ್ರಸ್ತುತ, ಲೋಹದ ಕವಾಟಗಳೋ ಇಲ್ಲವೇ, ಲೋಳೆ ಪದರದ ಕವಾಟಗಳೋ ಉಪಲಬ್ಧವಿವೆ. ಇವು ವಿಭಿನ್ನ ಗಾತ್ರಗಳಲ್ಲಿ ದೊರಕುತ್ತವೆ. ರೋಗಿಯ ಹೃದಯದ ಸ್ವಂತ ಕವಾಟದ ಸರಿಸುಮಾರು ಗಾತ್ರಕ್ಕೆ ಅನುಗುಣವಾದ ಕೃತಕ ಕವಾಟವನ್ನು ಹೊಂದಿಸಿ ಬದಲಾವಣೆ ಮಾಡಬೇಕಾಗುತ್ತದೆ. ಆದರೆ, ಮೂರು ಆಯಾಮದ ಮುದ್ರಣ ದೊರೆತರೆ, ರೋಗಿಯ ಸ್ವಂತ ಕವಾಟದ ಎಂ.ಆರ್.ಐ ಸ್ಕ್ಯಾನ್ ಮಾಡಿ, ಅದರ ಮಾಹಿತಿಯನ್ನು ಇಂತಹ ಮುದ್ರಣ ಯಂತ್ರಕ್ಕೆ ಉಣಿಸಿದರೆ, ಯಥಾವತ್ ಅದೇ ಮಾದರಿಯ, ಅಷ್ಟೇ ನಿಶ್ಚಿತ ಉದ್ದ-ಅಗಲ-ಆಳ ಉಳ್ಳ, ಪ್ರತಿಯೊಂದು ವಿವರದಲ್ಲೂ ರೋಗಿಯ ಸ್ವಂತ ಕವಾಟದ ರಚನೆಯನ್ನೇ ಹೋಲುವ ಕೃತಕ ಕವಾಟ ತಯಾರಾಗುತ್ತದೆ! ಜೊತೆಗೆ, ಹೃದಯದ ಕಾಯಿಲೆಯ ಸ್ವರೂಪದ ಮೇರೆಗೆ ಅಂತಹ ಮುದ್ರಿತ ಕವಾಟ ಯಾವ ವಸ್ತುವಿನದ್ದು ಆಗಿರಬೇಕು ಎಂದು ಕೂಡ ನಿರ್ಧರಿಸಬಹುದು. ಇದು ಶಸ್ತ್ರಚಿಕಿತ್ಸಕರಿಗೆ ವರದಾನ. ರೋಗಿಗೆ ತನ್ನದೇ ಸ್ವಂತ ಕವಾಟದ ಪ್ರತಿರೂಪ ದೊರೆತಂತೆ! ಜೊತೆಗೆ, ಇನ್ನೆಂದಾದರೂ ಮೂರು ಆಯಾಮದ ಮುದ್ರಣಕ್ಕೆ ನಮ್ಮ ಅಂಗಾಂಶಗಳನ್ನು ಮುದ್ರಿಸುವ ಸೌಲಭ್ಯ ಬಂದರೆ, ಕೆಟ್ಟು ಹೋದ ಇಡೀ ಅಂಗವನ್ನೇ ಪ್ರತಿರೂಪಿ ಮುದ್ರಣ ಮಾಡಿ ಅಂಗಾಂಗ ಕಸಿ ಮಾಡಬಹುದು. ಕೃತಕ ಚರ್ಮ, ಕೃತಕ ಕವಾಟ, ಕೃತಕ ಮೂಳೆಗಳು – ಹೀಗೆ ಮೂರು ಆಯಾಮದ ಮುದ್ರಣ ವೈದ್ಯಕೀಯ ರಂಗದಲ್ಲಿ ಕ್ರಾಂತಿಯನ್ನು ತರಲಿದೆ.

ಬೆರಗು ಹುಟ್ಟಿಸುವ ಇಂದಿನ ತಂತ್ರಜ್ಞಾನದ ವಿಸ್ತಾರವನ್ನು ಜಗತ್ತಿನ ಕಲ್ಯಾಣಕ್ಕೆ ಬಳಸಿಕೊಳ್ಳುವುದರಲ್ಲೇ ಮನುಷ್ಯನ ವಿವೇಚನೆಯ ಗೆಲುವು. ತಂತ್ರಜ್ಞಾನ ಯಾವುದೇ ನಿಟ್ಟಿನಲ್ಲಿ ಮುಂದುವರೆದರೂ, ಎಲ್ಲರಿಗೂ ಒಳಿತನ್ನು ಮಾಡುವುದು ನಮ್ಮ ಅಂತಿಮ ಧ್ಯೇಯವಾಗಿರಬೇಕು. ಈ ನಿಟ್ಟಿನಲ್ಲಿ ತಂತ್ರಜ್ಞಾನವನ್ನು ವೈದ್ಯಕೀಯ ಕ್ಷೇತ್ರದಲ್ಲಿ ಅಭಿವೃದ್ಧಿಗೆ ಹಾಗೂ ಸುರಕ್ಷತೆಗೆ ಬಳಸಿಕೊಳ್ಳುವುದು ಮಹತ್ವದ ಹೆಜ್ಜೆ.    

-------------------------

 25/02/2021 ರ ವಿಶ್ವವಾಣಿ ದಿನಪತ್ರಿಕೆಯಲ್ಲಿ ಪ್ರಕಟವಾದ ಲೇಖನ 

 

 

 

 

 

 


 ಆರೋಗ್ಯಕ್ಕಾಗಿ ವ್ಯಾಯಾಮ

ಡಾ. ಕಿರಣ್ ವಿ. ಎಸ್.

ಆರೋಗ್ಯದ ಪರಿಕಲ್ಪನೆ ನಮ್ಮೆಲ್ಲರಲ್ಲೂ ವಿಭಿನ್ನವಾಗಿ ಇದ್ದೀತು. ವಿಶ್ವ ಆರೋಗ್ಯ ಸಂಸ್ಥೆ “ಆರೋಗ್ಯವೆಂಬುದು ಸಂಪೂರ್ಣ ದೈಹಿಕ, ಮಾನಸಿಕ, ಮತ್ತು ಸಾಮಾಜಿಕ ಯೋಗಕ್ಷೇಮದ ಸ್ಥಿತಿ; ಅದು ಕೇವಲ ಕಾಯಿಲೆಯ ಅಥವಾ ಶರೀರ ದೌರ್ಬಲ್ಯದ ಅನುಪಸ್ಥಿತಿ ಅಲ್ಲ” ಎಂದು ವ್ಯಾಖ್ಯಾನ ಮಾಡಿದೆ. ಕಾಯಿಲೆಗಳ ನಿರ್ವಹಣೆ ಮಾಡುವ ಆಸ್ಪತ್ರೆಗಳು ನಮ್ಮನ್ನು ಆರೋಗ್ಯದತ್ತ ಒಂದು ಹೆಜ್ಜೆ ಮುನ್ನಡೆಸಬಲ್ಲವೇ ಹೊರತು, ಸಮಗ್ರ ಆರೋಗ್ಯವನ್ನು ನೀಡಲಾರವು. ಪರಿಪೂರ್ಣ ಆರೋಗ್ಯ ವೈಯಕ್ತಿಕ ಮತ್ತು ಸಾಮಾಜಿಕ ಜವಾಬ್ದಾರಿ. ಪ್ರಜೆಗಳ ಆರೋಗ್ಯ ನಿರ್ವಹಣೆಯ ಹೆಸರಿನಲ್ಲಿ ವೆಚ್ಚ ಮಾಡುವ ಪ್ರಪಂಚದ ಬಹುತೇಕ ದೇಶಗಳು ಆರೋಗ್ಯದ ಅಧಿಕೃತ ವ್ಯಾಖ್ಯಾನದತ್ತ ಗಮನ ಹರಿಸಿದಂತಿಲ್ಲ.

ದೈಹಿಕ ಆರೋಗ್ಯ ವೈಯಕ್ತಿಕ ಹೊಣೆಗಾರಿಕೆ. ಜೀವಿಗಳ ದೇಹವೆಂಬುದು ನಿಸರ್ಗ ವಿನ್ಯಾಸಗೊಳಿಸಿದ ಯಂತ್ರ. ಪ್ರಪಂಚದ ಬಹುತೇಕ ಮಾನವ-ನಿರ್ಮಿತ ಯಂತ್ರಗಳು ಪ್ರಾಣಿಗಳ ವಿವಿಧ ಅಂಗಗಳ ಕಾರ್ಯದ ವಿಸ್ತರಣೆಯ ಮೂಲತತ್ತ್ವವನ್ನೇ ಹೊಂದಿವೆ. ಕೃತಕ ಯಂತ್ರಗಳ ಸಮಯಾನುಸಾರ ನಿರ್ವಹಣೆ ಹೇಗೆ ಮುಖ್ಯವೋ, ಶರೀರವೆಂಬ ಸಹಜ ಯಂತ್ರದ ನಿರ್ವಹಣೆಯೂ ಅಷ್ಟೇ ಮುಖ್ಯ. ಈ ನಿಟ್ಟಿನಲ್ಲಿ ವ್ಯಾಯಾಮದ ಪಾತ್ರ ಪ್ರಮುಖವಾದದ್ದು.

ವ್ಯಾಯಾಮದ ಬಗ್ಗೆ ಸಾಕಷ್ಟು ತಪ್ಪು ಕಲ್ಪನೆಗಳಿವೆ. ನಿಶ್ಚಿತ ಉದ್ದೇಶಗಳಿಗಾಗಿ ಹಲವರು ವ್ಯಾಯಾಮ ಮಾಡಲು ಆರಂಭಿಸುತ್ತಾರೆ. ಅಂತಹ ಉದ್ದೇಶ ಫಲಿಸದಿದ್ದರೆ ವ್ಯಾಯಾಮವನ್ನು ಹಳಿಯುತ್ತಾರೆ! ನಿಯಮಿತ ವ್ಯಾಯಾಮವೆಂಬುದು ಆಯ್ಕೆಯಲ್ಲ; ಶರೀರದ ನಿರ್ವಹಣೆಯ ಕಡ್ಡಾಯ ಅಂಶ. “ಎಂತಹ ವ್ಯಾಯಾಮ ಮಾಡಬೇಕು” ಎಂಬುದು ಮಾತ್ರ ವೈಯಕ್ತಿಕ ಆಯ್ಕೆ. ಆಧುನಿಕ ಬದುಕು ಯಂತ್ರಗಳ ಮೇಲೆ ಅವಲಂಬಿತವಾದಷ್ಟೂ ಶರೀರದ ಪಾಲಿಗೆ ವ್ಯಾಯಾಮದ ಮಹತ್ವ ಅಧಿಕವಾಗುತ್ತಿದೆ.

ವ್ಯಾಯಾಮ ಆರೋಗ್ಯದ ಸಮಗ್ರ ನಿರ್ವಹಣೆಗೆ ನೆರವಾಗುತ್ತದೆ. ಮೂಳೆಗಳ, ಕೀಲುಗಳ, ಸ್ನಾಯುಗಳ ಸರಾಗ ಚಲನೆಗೆ, ಅವುಗಳಿಗೆ ಹಾನಿಯಾಗದಂತೆ ಕಾಪಾಡುವುದಕ್ಕೆ ನಿಯಮಿತ ವ್ಯಾಯಾಮ ಸಹಾಯಕಾರಿ. ವ್ಯಾಯಾಮದಿಂದ ದೀರ್ಘಕಾಲೀನ ಪ್ರಯೋಜನಗಳಿವೆ. ವೃದ್ಧಾಪ್ಯದಲ್ಲಿ ಕಾಡುವ ಕೀಲು ನೋವುಗಳು, ಬೆನ್ನು ನೋವು, ಬೊಜ್ಜು, ನಿಶ್ಶಕ್ತಿ, ಮೂಳೆಗಳ ಸವೆತ, ನಿದ್ರಾಹೀನತೆ, ಮುಂತಾದುವು ಬಹಳ ಕಾಲದಿಂದ ನಿಯಮಿತ ವ್ಯಾಯಾಮ ಮಾಡುವವರಲ್ಲಿ ಕಾಣುವ ಸಂಭವ ಕಡಿಮೆ. ಅಲ್ಲದೇ, ಹೃದ್ರೋಗ, ಮಧುಮೇಹ, ರಕ್ಷಕ ಶಕ್ತಿಯ ನ್ಯೂನತೆ, ಕೆಲವು ಬಗೆಯ ಕ್ಯಾನ್ಸರ್ ಗಳು, ಖಿನ್ನತೆ ಮುಂತಾದ ಕೆಲವು ಅಸೌಖ್ಯಗಳು ಬಾರದಂತೆ ನಿಯಮಿತ ವ್ಯಾಯಾಮ ತಡೆಯಬಲ್ಲದು.

ವ್ಯಾಯಾಮ ಹೇಗಿರಬೇಕು? ಸಲಕರಣೆಗಳನ್ನು ಉಪಯೋಗಿಸಿ, ಜಿಮ್ ಗಳಿಗೆ ನೋಂದಾಯಿಸಿ ವ್ಯಾಯಾಮ ಮಾಡಬೇಕೆನ್ನುವುದು ಕಡ್ಡಾಯವಲ್ಲ. ಶರೀರಕ್ಕೆ ವಿಪರೀತ ತ್ರಾಸ ನೀಡಿ, ಬೆವರು ಬಸಿದು ಮಾಡುವ ವ್ಯಾಯಾಮ ಮಾತ್ರ ಫಲಕಾರಿಯೆಂದೂ ಇಲ್ಲ. ವ್ಯಾಯಾಮದ ಪ್ರಕ್ರಿಯೆಯಲ್ಲಿ ಮುಖ್ಯವಾದದ್ದು ಎಷ್ಟು ನಿಯಮಿತವಾಗಿ, ರೂಢಿ ತಪ್ಪದಂತೆ, ನಿಧಾನವಾಗಿ ಪ್ರಮಾಣವನ್ನು ವೃದ್ಧಿಸುತ್ತಾ ಮಾಡುತ್ತೇವೆ ಎಂಬುದು. ಸರಳವಾದ ದೀರ್ಘ ಶ್ವಾಸದೊಡನೆ ಮಾಡುವ ಚುರುಕು ನಡಿಗೆ; ಯೋಗ ಮತ್ತು ಪ್ರಾಣಾಯಾಮ; ಈಜು; ಬೈಸಿಕಲ್ ಸವಾರಿ; ಸೂರ್ಯ ನಮಸ್ಕಾರ; ಶಾಸ್ತ್ರೀಯ ನೃತ್ಯ – ಇಂತಹ ಯಾವುದಾದರೂ ಆಗಬಹುದು. ಆಗಾಗ್ಗೆ ಬದಲಿಸುತ್ತಾ ವಿವಿಧ ಬಗೆಯ ವ್ಯಾಯಾಮ ಶೈಲಿಗಳನ್ನು ರೂಢಿಸಿಕೊಳ್ಳುಬಹುದು. ನಿಯಮಿತ ವ್ಯಾಯಾಮ ಸಾಧ್ಯವಿಲ್ಲ ಎನ್ನುವವರು ದಿನನಿತ್ಯದ ಜೀವನ ಶೈಲಿಯನ್ನೇ ಮಾರ್ಪಾಡು ಮಾಡಿಕೊಳ್ಳಬಹುದು. ಬಸ್ಸಿನ ಪಯಣಿಗರು ಒಂದೆರಡು ಹಂತ ಮುನ್ನವೇ ಇಳಿದು ಅಲ್ಲಿಂದ ಗಮ್ಯಕ್ಕೆ ನಡೆಯುವುದು; ಸ್ವಂತ ವಾಹನ ಸಂಚಾರಿಗಳು ಹದಿನೈದು ನಿಮಿಷ ಮೊದಲೇ ಕಚೇರಿಗೆ ತಲುಪಿ, ಸ್ವಲ್ಪ ಬಳಸು ಮಾರ್ಗದಲ್ಲಿ ನಡೆದು ಕೆಲಸಕ್ಕೆ ತಲುಪುವುದು; ಲಿಫ್ಟ್ ಬದಲಿಗೆ ಮೆಟ್ಟಿಲನ್ನೋ, ಇಳಿಜಾರನ್ನೋ ಬಳಸುವುದು; ಕಚೇರಿಯಲ್ಲಿ ಸಮಯ ದೊರೆತಾಗ ಒಂದು ಸುತ್ತು ನಡೆದು ಬರುವುದು; ಮನೆಯ ಸುತ್ತಮುತ್ತಲ ಅಂಗಡಿಗಳಿಂದ ಅವಶ್ಯಕ ವಸ್ತುಗಳನ್ನು ತರಲು ವಾಹನದ ಬದಲಿಗೆ ನಡೆದು ಹೋಗುವುದು – ಈ ರೀತಿಯ ಪ್ರಯತ್ನಗಳನ್ನೂ ಮಾಡಬಹುದು. ಇವೆಲ್ಲಾ ನಿಯಮಿತ ಸಮಯಕ್ಕೆ ಮಾಡುವ ಕ್ಲುಪ್ತ ವ್ಯಾಯಾಮದಷ್ಟು ಪ್ರಯೋಜನಕಾರಿ ಅಲ್ಲದಿದ್ದರೂ, ನಿಷ್ಕ್ರಿಯತೆಗಿಂತ ಹಲವಾರು ಪಟ್ಟು ಉತ್ತಮ. ಮುಂದೆ ವ್ಯಾಯಾಮ ಪದ್ದತಿಯನ್ನು ಬಳಸಿಕೊಳ್ಳುವ ಸ್ಪೂರ್ತಿ ಕೂಡ ಆಗಬಲ್ಲವು.

ಶರೀರದ ವ್ಯಾಯಾಮಕ್ಕೆ ಮನಸ್ಸನ್ನು ಸಿದ್ಧಗೊಳಿಸುವುದು ಎಲ್ಲದಕ್ಕಿಂತ ಮುಖ್ಯ! ನಮ್ಮ ದೀರ್ಘಕಾಲಿಕ ಒಳಿತನ್ನು ಬಲವಾಗಿ ಪ್ರತಿಪಾದಿಸುವ ಮನಸ್ಸು ನಮ್ಮ ಗುರುವಾದಾಗ ಬಾಹ್ಯ ಸ್ಪೂರ್ತಿಯ ಆಗತ್ಯವಿರುವುದಿಲ್ಲ.

-------------------------

 16/02/2021 ರಂದು ಪ್ರಜಾವಾಣಿ ದಿನಪತ್ರಿಕೆಯಲ್ಲಿ ಪ್ರಕಟವಾದ ಲೇಖನ 


 ಆತಂಕ ಬೇಡ; ಭರವಸೆಯ ಬೆಳಕಿರಲಿ!

ಡಾ. ಕಿರಣ್ ವಿ ಎಸ್.

ಇಪ್ಪತ್ತೊಂದನೆಯ ಶತಮಾನವನ್ನು ಜಗತ್ತಿನ “ಶಾಂತಿ ಪರ್ವ” ಎನ್ನಬಹುದು. ಇತಿಹಾಸದ ಯಾವುದೇ ಶತಮಾನಕ್ಕಿಂತ ಆತಂಕರಹಿತ ಜೀವನವನ್ನು ನಾವಿಂದು ನಡೆಸುತ್ತಿದ್ದೇವೆ. ಜಗತ್ತಿನ ಬಹಳಷ್ಟು ದೇಶಗಳು ಪ್ರಜಾಪ್ರಭುತ್ವದಲ್ಲಿವೆ; ಹಣಕಾಸಿನ ಸಮೃದ್ಧಿಯಿದೆ; ಬಡತನದ ಬಗ್ಗೆ ಬಹುತೇಕ ದೇಶಗಳಲ್ಲಿ ಕಾಳಜಿಯಿದೆ; ಆರೋಗ್ಯದ ವಿಷಯದಲ್ಲಿ ಅಪೂರ್ವವಾದ ಪ್ರಗತಿಯಾಗಿದೆ; ವಿಜ್ಞಾನ ಮತ್ತು ತಂತ್ರಜ್ಞಾನಗಳು ಪವಾಡವೆನಿಸುವ ಸವಲತ್ತುಗಳನ್ನು ನಮ್ಮ ಅಂಗೈಯಲ್ಲಿಟ್ಟಿವೆ. ಒಟ್ಟಿನಲ್ಲಿ ಮನುಕುಲ ಹಿಂದೆಂದೂ ಇಲ್ಲದಷ್ಟು ಶಾಂತಿಯಿಂದ ಇಂದು ಬದುಕುತ್ತಿದೆ.
ಈ ಶಾಂತಿಯನ್ನು ಸ್ವಲ್ಪ ಮಟ್ಟಿಗೆ ಕದಡುವ ಪ್ರಸಂಗಗಳು ಬರುತ್ತಲೇ ಇರುತ್ತವೆ. ಅದು ಜಗತ್ತಿನ ಯಾವುದೋ ಭಾಗದಲ್ಲಿ ನಡೆಯುವ ಕದನದಿಂದ ನಮಗೆ ಬರಬೇಕಾದ ಇಂಧನದ ವರ್ಗಾವಣೆಯಲ್ಲಿ ಆಗುವ ಅಡೆತಡೆ ಇರಬಹುದು; ದೂರದ ದೇಶದಲ್ಲಿ ಆದ ಹಣಕಾಸಿನ ಅವ್ಯವಹಾರದಿಂದ ನಮ್ಮ ದೇಶದಲ್ಲಿ ಕುಸಿದ ಷೇರು ಮಾರುಕಟ್ಟೆ ಇರಬಹುದು; ಎಂಥದೋ ಸಾಗರದಾಳದಲ್ಲಿ ಆದ ಭೂಕಂಪ ನಮ್ಮ ದೇಶದ ಕಡಲ ತೀರಗಳಿಗೆ ಅಪ್ಪಳಿಸುವ ಸುನಾಮಿ ಆಗಬಹುದು; ಯಾವುದೋ ದೇಶದಲ್ಲಿ ಉದ್ಭವಿಸಿದ ಕಾಯಿಲೆಯೊಂದು ನಮ್ಮ ದೇಶದ ವ್ಯವಸ್ಥೆಯನ್ನು ಏರುಪೇರು ಮಾಡುವುದು – ಹೀಗೆ “ವಸುಧೈವ ಕುಟುಂಬಕಂ” ಎನ್ನುವ ಭಾವವನ್ನು ಸುಖಗಳಿಗಿಂತ ಕಷ್ಟಗಳು ಮನದಟ್ಟಾಗಿಸುತ್ತವೆ. ನಿಶ್ಚಿತ ವಿನ್ಯಾಸದ ಜೀವನಕ್ರಮಕ್ಕೆ ಒಗ್ಗಿಕೊಂಡಿರುವ ಮಾನವ ಬದುಕು ಏಕಾಏಕಿ ಬದಲಾವಣೆಗಳನ್ನು ಕಂಡರೆ ಗಾಬರಿಗೊಳ್ಳುವುದು ಸಹಜ. ಆತಂಕದ ಕಾರಣಗಳು ತಮ್ಮ ನಿಯಂತ್ರಣದಲ್ಲಿ ಇಲ್ಲದವು ಎಂದು ತಿಳಿದರೂ ಅದರಿಂದ ಮಾನಸಿಕ ತುಮುಲಕ್ಕೆ ಒಳಗಾಗುವವರು ಲಕ್ಷಾಂತರ ಮಂದಿ. ಆದರೆ, ಈ ತುಮುಲ ಅಗತ್ಯವೇ?

ಆತಂಕಗಳ ಬಗ್ಗೆ ಮನೋವಿಜ್ಞಾನಿಗಳು, ವೈದ್ಯರು ಒಂದು ಸಲಹೆಯನ್ನು ಹೇಳುತ್ತಲೇ ಬಂದಿದ್ದಾರೆ: “ಬದುಕಿನ ಬಗ್ಗೆ ಎಚ್ಚರವಿರಲಿ; ಆದರೆ ಭೀತಿ ಬೇಡ”. ಜೀವನದ ಪ್ರತಿಯೊಂದು ಸಮಸ್ಯೆಗೂ ಉತ್ತರ ಇದ್ದೇ ಇರುತ್ತದೆ. ಸಮರ್ಥ ಪರಿಹಾರ ದೊರೆಯುವವರೆಗೆ ಅದು ನಮ್ಮ ಭರವಸೆಯನ್ನು ಅಲುಗಾಡಿಸದಂತೆ ಎಚ್ಚರ ವಹಿಸಬೇಕು; ಒಂದು ವೇಳೆ ಸಮಸ್ಯೆಗಳು ನಮ್ಮನ್ನು ನೇರವಾಗಿ ಕಾಡಿದರೂ, ನಮ್ಮ ಮಿತಿಗಳಲ್ಲಿ ಅದಕ್ಕೆ ಸಾಧ್ಯವಿರಬಹುದಾದ ಪರ್ಯಾಯಗಳ ಬಗ್ಗೆ ಆಲೋಚಿಸಬೇಕೇ ವಿನಾ ಆತಂಕ ಪಡಬಾರದು. ಆಡಳಿತದಲ್ಲಿ ಸಮಸ್ಯೆಗಳು ಎದುರಾದಾಗ ಸರ್ ಎಂ.ವಿಶ್ವೇಶ್ವರಯ್ಯನವರು “What is the worst?” ಎಂದು ಕೇಳುತ್ತಿದ್ದರಂತೆ. ಅದೇಕೆ ಎಂದು ಯಾರೋ ಪ್ರಶ್ನಿಸಿದಾಗ “ನಮ್ಮ ಮನಸ್ಸನ್ನು ಅತೀ ದೊಡ್ಡ ನಷ್ಟಕ್ಕೆ ಒಪ್ಪಿಸಿದಾಗ ಪರಿಹಾರಗಳನ್ನು ಯೋಜಿಸುವುದು ಸರಾಗ. ಇಲ್ಲವಾದರೆ ಪ್ರತಿಯೊಂದು ಹಂತದಲ್ಲಿಯೂ ಸರಿ-ತಪ್ಪುಗಳ ಜಿಜ್ಞಾಸೆ ಮಾಡಲಾಗದು” ಎಂದು ಅವರ ಚಿಂತನೆ. ಇದು ಸಾಧಕರು ಕಲಿಸುವ ಜೀವನಪಾಠ. ಇದೇ ಮಾತನ್ನು ಜಗತ್ತಿನ ಪ್ರಸಿದ್ಧ ಮನಶಾಸ್ತ್ರಜ್ಞರೂ ಕೂಡ ಹೇಳಿದ್ದಾರೆ.

ಅಪಾಯ ಮತ್ತು ಆತಂಕಗಳ ವ್ಯತ್ಯಾಸದ ಬಗ್ಗೆ ಬಹಳ ಜನ ಗೊಂದಲಗೊಳ್ಳುತ್ತಾರೆ. “ನೀವು ಕಾಡಿನಲ್ಲಿ ನಡೆಯುತ್ತಿದ್ದೀರಿ ಎಂದು ಭಾವಿಸಿ. ನಿಮ್ಮ ಕಣ್ಣ ಮುಂದೆ ಹುಲಿ ನಿಂತಿದ್ದರೆ ಅದು ಅಪಾಯ; ಕಣ್ಣ ಮುಂದೆ ಇಲ್ಲದ ಹುಲಿಯನ್ನು ಮನಸ್ಸು ಭ್ರಮಿಸುತ್ತಿದ್ದರೆ ಅದು ಆತಂಕ” ಎಂದು ತಜ್ಞರ ವಿವರಣೆ. ಅಪಾಯಕ್ಕೆ ತತ್’ಕ್ಷಣದ ಪರಿಹಾರ ಬೇಕು. ಆತಂಕಕ್ಕೆ ಅಂತಹ ಪರಿಹಾರವಿಲ್ಲ. ಕಾಡಿನ ಪಯಣ ನಮ್ಮ ಜೀವನ. ಹುಲಿಗಳು ನಮ್ಮ ಕಷ್ಟಗಳು. ಪಯಣವಾಗಲೀ, ಹುಲಿಗಳಾಗಲೀ ತಪ್ಪಿದ್ದಲ್ಲ. ನಮ್ಮೊಟ್ಟಿಗೆ ಸದಾ ಇರಬೇಕಾದ್ದು ಧೈರ್ಯ, ಆತ್ಮವಿಶ್ವಾಸ, ಅಪಾಯವನ್ನು ನಿರ್ವಹಿಸಬಲ್ಲ ಸಮರ್ಥ ಯೋಜನೆಯ ಕಾರ್ಯಸೂಚಿ, ಮತ್ತು ಭರವಸೆಯ ಆಶಾವಾದ. ಈ ಪಟ್ಟಿಯಲ್ಲಿ ಆತಂಕಕ್ಕೆ ಎಡೆಯಿಲ್ಲ!

ಜನಪ್ರಿಯ ಹ್ಯಾರಿ ಪಾಟರ್ ಸರಣಿಯಲ್ಲಿ ಡಂಬಲ್’ಡೋರ್ ಮಹಾಶಯ “It is the unknown we fear when we look upon death and darkness ಎನ್ನುತ್ತಾನೆ. ಇಲ್ಲಿ darkness ಎನ್ನುವುದು ಅಜ್ಞಾತವೂ ಆಗಬಹುದು; ಅಜ್ಞಾನವೂ ಆಗಬಹುದು! ಅವುಗಳ ಸಂಗಮ ಭೀತಿದಾಯಕ ಎಂಬುದರಲ್ಲಿ ಅನುಮಾನವಿಲ್ಲ. ಪ್ರಸ್ತುತ ಜಾಗತಿಕ ವಿಪತ್ತೆಂಬ ಕೋವಿಡ್-19 ಉದಾಹರಣೆಯನ್ನೇ ಗಮನಿಸಿ. ಆರಂಭದಲ್ಲಿ ಕೋವಿಡ್-19 ನಮಗೆ ಅಜ್ಞಾತವೂ ಆಗಿತ್ತು; ಅದರ ಜ್ಞಾನವೂ ಮಿತವಾಗಿತ್ತು. ಇಂದು ಸಂದರ್ಭ ನಮ್ಮ ನಿಯಂತ್ರಣಕ್ಕೆ ದಕ್ಕುತ್ತಿದೆ. ಯಾವುದೇ ಅಶಾಂತಿಯ ಬಗ್ಗೆ ಜನರು ಸಮ್ಯಕ್ ಜ್ಞಾನವನ್ನು ಬೆಳೆಸಿಕೊಂಡಾಗ ಸಮಾಜದ ಆತಂಕ ತಾನೇತಾನಾಗಿ ಕಡಿಮೆಯಾಗುತ್ತದೆ. ವಿದ್ಯೆಯ ಮೂಲೋದ್ದೇಶವೇ ಅಜ್ಞಾನದಿಂದ, ಆತಂಕದಿಂದ ವಿಮುಕ್ತಿ. ಅದನ್ನು ಸಾಧಿಸುವ ಒಳ್ಳೆಯ ಅವಕಾಶ ಕೋವಿಡ್-19 ಕಾರಣದಿಂದ ಅನುಷಂಗಿಕವಾಗಿ ಒದಗಿದೆ. ಕೋವಿಡ್-19 ಮಾನವತೆಯ ಬಗ್ಗೆ, ಸಮಷ್ಟಿಯ ಒಗ್ಗಟ್ಟಿನ ಬಗ್ಗೆ, ಸಾಂಘಿಕ ಕತೃತ್ವ ಶಕ್ತಿಯ ಬಗ್ಗೆ ಆತ್ಮವಿಶ್ವಾಸವನ್ನು ತುಂಬುವ ಬಹು ದೊಡ್ಡ ಉದಾಹರಣೆಯಾಗಬೇಕು. 

--------------

ಜನವರಿ 2021 ರಲ್ಲಿ "ಪ್ರಜಾವಾಣಿ" ದಿನಪತ್ರಿಕೆಯಲ್ಲಿ ಪ್ರಕಟವಾದ ಲೇಖನ 

 

ಪ್ರಪಂಚದ ಅತ್ಯಂತ ದುಬಾರಿ ಔಷಧ ಯಾವುದು?

ಡಾ. ಕಿರಣ್ ವಿ. ಎಸ್.

ಮಹಾಭಾರತದ ಯಕ್ಷಪ್ರಶ್ನೆ ಪ್ರಸಂಗದಲ್ಲಿ “ಪ್ರಪಂಚದ ಅತ್ಯಂತ ದುಬಾರಿ ಔಷಧ ಯಾವುದು?” ಎಂದು ಕೇಳಿದ್ದರೆ ಯುಧಿಷ್ಠಿರನ ಉತ್ತರವೇನಿರುತ್ತಿತ್ತೋ ತಿಳಿಯದು. ಇಂದಿನ ವ್ಯಾವಹಾರಿಕ ಪ್ರಪಂಚದಲ್ಲಿ ಔಷಧಗಳು ದಿನನಿತ್ಯದ ಅಗತ್ಯಗಳ ಪಟ್ಟಿ ಸೇರಿವೆ. ಬಹಳಷ್ಟು ಕುಟುಂಬಗಳಲ್ಲಿ ಪ್ರತೀ ತಿಂಗಳೂ ಕೆಲವು ನೂರು ರೂಪಾಯಿಗಳಿಂದ ಹಿಡಿದು ಸಾವಿರಗಳವರೆಗೆ ಔಷಧಗಳ ಖರ್ಚು ಇರುತ್ತದೆ. ಕೆಲವು ಅಗ್ಗ; ಕೆಲವು ದುಬಾರಿ. ಅಗತ್ಯವಾದ ಹಲವಾರು ಔಷಧಗಳ ಬೆಲೆಯನ್ನು ಸರಕಾರ ನಿಯಂತ್ರಣದಲ್ಲಿ ಇಟ್ಟಿದೆ. ದೇಶೀಯ ಉತ್ಪಾದನೆಯಿರುವ ಔಷಧಗಳ ಬೆಲೆ ಇತರ ದೇಶಗಳಿಗಿಂತ ನಮ್ಮ ದೇಶದಲ್ಲಿ ಅಗ್ಗ.

ಔಷಧಗಳ ಬೆಲೆ ಹೇಗೆ ನಿರ್ಧಾರವಾಗುತ್ತದೆ? ಒಂದು ಉದಾಹರಣೆಯನ್ನು ಗಮನಿಸಬಹುದು. ಮಧುಮೇಹ ನಿಯಂತ್ರಣದಲ್ಲಿ ಇನ್ಸುಲಿನ್ ಬಗ್ಗೆ ಎಲ್ಲರಿಗೂ ತಿಳಿದಿದೆ. ಕೆಲ ದಶಕಗಳ ಹಿಂದೆ ನಮ್ಮ ದೇಶದಲ್ಲಿ ಇನ್ಸುಲಿನ್ ಉತ್ಪಾದನೆ ಆಗುತ್ತಿರಲಿಲ್ಲ; ವಿದೇಶಗಳಿಂದ ಇನ್ಸುಲಿನ್ ಆಮದಾಗುತ್ತಿತ್ತು. ಫಲವಾಗಿ, ಅದರ ಬೆಲೆ ಬಹಳ ಹೆಚ್ಚಾಗಿತ್ತು. ನಮ್ಮ ದೇಶದಲ್ಲಿ ಉತ್ಪಾದನೆ ಆರಂಭವಾದ ನಂತರ ಇನ್ಸುಲಿನ್ ಸ್ವಲ್ಪ ಅಗ್ಗವಾಯಿತು. ಮಧುಮೇಹಿಗಳ ಸಂಖ್ಯೆ ಅಧಿಕವಾದಂತೆ ಹೆಚ್ಚು ಸಂಸ್ಥೆಗಳು ಇನ್ಸುಲಿನ್ ಉತ್ಪಾದನೆ ಆರಂಭಿಸಿದವು. ಇದರಿಂದ ಇನ್ಸುಲಿನ್ ಮತ್ತಷ್ಟು ಸೋವಿಯಾಯಿತು. ಅಂದರೆ, ಯಾವುದೇ ಕಾಯಿಲೆಯ ರೋಗಿಗಳ ಸಂಖ್ಯೆ ಹೆಚ್ಚಾದಷ್ಟೂ ಔಷಧದ ಅಗತ್ಯ ಅಧಿಕವಾಗುತ್ತದೆ. ಮಾರುಕಟ್ಟೆ ನಿಯಮಗಳ ರೀತ್ಯಾ ಉತ್ಪಾದನೆ ಹೆಚ್ಚಾದಷ್ಟೂ ಬೆಲೆ ಕಡಿಮೆ. ಅತ್ಯಂತ ಹೆಚ್ಚು ಬಳಕೆಯಲ್ಲಿರುವ ನೋವು-ನಿವಾರಕ ಔಷಧಗಳು ಸೋವಿಯಾಗಿ ಲಭಿಸಲು ಇದೇ ಕಾರಣ. ಸಾಮಾನ್ಯ ಜ್ವರ, ಶೀತ, ಕೆಮ್ಮಿನ ಔಷಧಗಳು ವೈದ್ಯರ ಸಲಹೆಯ ಅಗತ್ಯವಿಲ್ಲದೆ ಮಾರಾಟವಾಗುತ್ತವೆ. ಆ ಕಾರಣಕ್ಕೇ ಹೆಚ್ಚಾಗಿ ಉತ್ಪಾದನೆ ಆಗುವ ಇಂತಹ ಔಷಧಗಳು ಸಾಕಷ್ಟು ಅಗ್ಗವಾಗಿ ಲಭಿಸುತ್ತವೆ. ಲಕ್ಷ ಮಂದಿಯ ಗುಂಪಿನಿಂದ ಯಾವುದೇ ನೂರು ಜನರನ್ನು ಆಯ್ದುಕೊಂಡರೆ, ಅದರಲ್ಲಿ ಕನಿಷ್ಟ ಇಪ್ಪತ್ತು ಮಂದಿಗೆ ರಕ್ತದ ಒತ್ತಡ ಅಧಿಕವಾಗಿರುತ್ತದೆ. ಅಂದರೆ, ಪ್ರತೀ ಲಕ್ಷಕ್ಕೆ ಇಪ್ಪತ್ತು ಸಾವಿರ ರೋಗಿಗಳು ಎಂದಾಯಿತು. ಅಧಿಕ ರಕ್ತದೊತ್ತಡಕ್ಕೆ ಔಷಧ ತಯಾರಿಸಿದರೆ ಅದನ್ನು ಬಳಸುವ ಮಂದಿ ಹೇರಳವಾಗಿ ಇರುತ್ತಾರೆ.

ಈ ಪ್ರಕ್ರಿಯೆಯ ವಿಲೋಮವನ್ನು ಗಮನಿಸೋಣ. ಬಹಳ ವಿರಳವಾಗಿ ಕಂಡು ಬರುವ ಕಾಯಿಲೆಗಳೂ ಇವೆ. ಸ್ನಾಯುಗಳ ಜನ್ಮಜಾತ ದೌರ್ಬಲ್ಯ, ಶರೀರದಲ್ಲಿನ ಕೆಲವು ಕಿಣ್ವಗಳ ಜೆನೆಟಿಕ್ ಮೂಲದ ಕೊರತೆ, ಅಪರೂಪದ ಪ್ರಭೇದಗಳ ಕ್ಯಾನ್ಸರ್, ನರಮಂಡಲದ ಸಂವಾಹಕಗಳ ನ್ಯೂನತೆ – ಹೀಗೆ ತೀರಾ ಅಪರೂಪಕ್ಕೆ ಕಾಣುವ ಕಾಯಿಲೆಗಳಿವೆ. ಲಕ್ಷ ಮಂದಿಯ ಗುಂಪಿನಲ್ಲಿ ಕೇವಲ ಒಬ್ಬರಿಗೆ ಇಂತಹ ಕಾಯಿಲೆ ಇರಬಹುದು. ಇಂತಹ “ಅತೀ ವಿರಳ” ಎನ್ನುವ ಕಾಯಿಲೆಗಳಿಗೆ ಔಷಧಗಳ ಉತ್ಪಾದನೆ ಮಾಡುವವರು ಕೂಡ ಅಪರೂಪ; ಮಾಡಿದರೂ ಬೆಲೆ ವಿಪರೀತ. ಈ ರೀತಿಯ ಅತೀ ವಿರಳವಾಗಿ ಕಾಣುವ ಕಾಯಿಲೆಗಳನ್ನು “ಅನಾಥ ಕಾಯಿಲೆಗಳು” (orphan diseases) ಎಂದೂ, ಅವಕ್ಕೆ ಬಳಕೆಯಾಗುವ ಔಷಧಗಳನ್ನು “ಅನಾಥ ಔಷಧಗಳು” (orphan drugs) ಎಂದೂ ಕರೆಯಲಾಗುತ್ತದೆ.

ಜನಪ್ರಿಯ ಮುನ್ನಾಭಾಯಿ ಚಿತ್ರದಲ್ಲಿ ನಾಯಕನಿಗೆ ಗಾಂಧಿಯವರು ಕಾಣುವ ಪ್ರಸಂಗವನ್ನು ವೈದ್ಯರು “ನಾಯಕನ ಮೆದುಳಿನಲ್ಲಿ ರಾಸಾಯನಿಕಗಳ ಗಲಿಬಿಲಿ” ಎಂದು ತೀರ್ಮಾನ ಮಾಡುತ್ತಾರೆ. ಮೆದುಳಷ್ಟೇ ಅಲ್ಲ; ನಮ್ಮ ಇಡೀ ಶರೀರವೇ ಸಾವಿರಾರು ರಾಸಾಯನಿಕಗಳ ಗೂಡು! ಪ್ರತೀ ಕ್ಷಣವೂ ನಮ್ಮ ಶರೀರದಲ್ಲಿ ಅಗಣಿತ ರಾಸಾಯನಿಕ ಪ್ರಕ್ರಿಯೆಗಳು ನಡೆಯುತ್ತಲೇ ಇರುತ್ತವೆ. ಖುಷಿ-ದುಃಖಗಳ ಭಾವನೆಗಳಿಂದ ಹಿಡಿದು, ಆಹಾರ ಪಚನವಾಗುವ ಕ್ರಿಯೆಯವರೆಗೆ ಬಹುತೇಕ ಎಲ್ಲವೂ ರಾಸಾಯನಿಕಗಳ ಹೂಟ! ರಾಸಾಯನಿಕ ಪ್ರಕ್ರಿಯೆಗಳ ವೇಗೋತ್ಕರ್ಷಕ್ಕೆ ಕಿಣ್ವ (enzyme) ಎಂಬ ಮತ್ತೊಂದು ರಾಸಾಯನಿಕ ನೆರವಾಗುತ್ತದೆ. ಯಾವುದೇ ಕಾರಣದಿಂದ ಒಂದು ಕಿಣ್ವ ಇಲ್ಲದೇ ಹೋದಲ್ಲಿ, ಆ ರಾಸಾಯನಿಕ ಪ್ರಕ್ರಿಯೆ ಅಲ್ಲಿಯೇ ಸ್ಥಗಿತವಾಗುತ್ತದೆ; ಇಲ್ಲವೇ ಶರೀರಕ್ಕೆ ಅಗತ್ಯವಲ್ಲದ ಬೇರೆ ದಾರಿ ಹಿಡಿಯುತ್ತವೆ. ಇದರಿಂದ ಶರೀರದ ಕೆಲಸಕ್ಕೆ ಅಗತ್ಯವಾಗಿ ಬೇಕಾದ ಯಾವುದೋ ಪೋಷಕಾಂಶ ಕಡಿಮೆಯಾಗುತ್ತದೆ; ಮತ್ತು ಶರೀರಕ್ಕೆ ಬೇಕಿಲ್ಲದ ಯಾವುದೋ ಒಂದು ಅಂಶ ಅನಗತ್ಯವಾಗಿ ಶೇಖರವಾಗುತ್ತಾ ಹೋಗುತ್ತದೆ. ನಮ್ಮ ಶರೀರದಲ್ಲಿ ಸಾವಿರಾರು ಕಿಣ್ವಗಳು ರಾಸಾಯನಿಕ ಪ್ರಕ್ರಿಯೆಗಳಲ್ಲಿ ಭಾಗವಹಿಸುತ್ತವೆ. ಪ್ರಮುಖ ಕಿಣ್ವಗಳ ಕೊರತೆ ಗಂಭೀರವಾದ ಕಾಯಿಲೆಗಳಿಗೆ ಕಾರಣವಾಗಬಹುದು. ಇಂತಹ ಕಾಯಿಲೆಗಳು ತೀರಾ ಅಪರೂಪ. ಎರಡು ಸಾವಿರ ಮಂದಿಯಲ್ಲಿ ಒಬ್ಬರಿಂದ ಹಿಡಿದು ಹತ್ತು ಲಕ್ಷ ಜನರಲ್ಲಿ ಒಬ್ಬರಿಗೆ ಬರುವ ಇಂತಹ ಕಾಯಿಲೆಗಳಿವೆ. ಎಷ್ಟೋ ವೈದ್ಯರು ತಮ್ಮ ಇಡೀ ಜೀವಮಾನದಲ್ಲಿ ಇಂತಹ ಕಾಯಿಲೆ ಇರಬಹುದಾದ ಒಬ್ಬ ರೋಗಿಯನ್ನೂ ನೋಡಿರುವುದಿಲ್ಲ! ಇಂತಹ ವಿರಳ ಕಾಯಿಲೆಗಳನ್ನು ಕರಾರುವಾಕ್ಕಾಗಿ ಪತ್ತೆ ಮಾಡುವುದು ಕೂಡ ಬಹಳ ಕ್ಲಿಷ್ಟಕರ ಪ್ರಕ್ರಿಯೆ. ಶತಪ್ರಯತ್ನಗಳ ನಂತರ ಇದನ್ನು ಪತ್ತೆ ಮಾಡಿದರೂ, ಅದಕ್ಕೆ ಚಿಕಿತ್ಸೆ ಸಿಗುವುದು ತ್ರಾಸದ ಸಂಗತಿ.

ಶರೀರದಲ್ಲಿ ಒಂದು ಮಹತ್ವದ ಕಿಣ್ವದ ಅನುಪಸ್ಥಿತಿ ಇದೆಯೆಂದರೆ, ಅದಕ್ಕೆ ಒಂದೇ ಚಿಕಿತ್ಸೆ – ಆ ಕಿಣ್ವವನ್ನು ಕೃತಕವಾಗಿ ಒದಗಿಸುವುದು! ಇದು ಸುಲಭದ ಮಾತಲ್ಲ. ಮೊದಲು ಇಂತಹ ಕಿಣ್ವಗಳ ರಾಸಾಯನಿಕ ರಚನೆ ಅರಿಯಬೇಕು. ಅದನ್ನು ಕೃತಕವಾಗಿ ಪ್ರಯೋಗಾಲಯದಲ್ಲಿ ತಯಾರಿಸಬೇಕು. ಅದನ್ನು ಹಲವಾರು ಹಂತಗಳಲ್ಲಿ ಪರೀಕ್ಷೆ ಮಾಡಿ, ಸಾಮರ್ಥ್ಯವನ್ನು ಓರೆ ಹಚ್ಚಬೇಕು. ತಜ್ಞವೈದ್ಯರ ಸುಪರ್ದಿಯಲ್ಲಿ ಅಂತಹ ಔಷಧವನ್ನು ರೋಗಿಗೆ ನೀಡಿ ಪರಿಣಾಮವನ್ನು ಜಾಗರೂಕವಾಗಿ ನಮೂದಿಸಬೇಕು. ಈ ರೀತಿ ಪರೀಕ್ಷಿಸಿದ ಔಷಧ ಸುರಕ್ಷಿತ ಮತ್ತು ಫಲಕಾರಿ ಎಂದಾದರೆ ಮಾತ್ರ ಅದನ್ನು ಮಾರುಕಟ್ಟೆಗೆ ತರಬಹುದು. ಇವೆಲ್ಲಾ ಅಪಾರ ಆರ್ಥಿಕತೆಯನ್ನು ಬೇಡುವ ವಿಧಾನಗಳು. ಒಂದು ಉದಾಹರಣೆ ಇದನ್ನು ಸರಳವಾಗಿಸುತ್ತದೆ. ಹೊಸದೊಂದು ಔಷಧ ತಯಾರಿಸಲು ಒಂದು ಕೋಟಿ ರೂಪಾಯಿ ವೆಚ್ಚ ಆಯಿತೆನ್ನಿ. ಆ ಔಷಧ ವರ್ಷಾವಧಿ ಒಂದು ಲಕ್ಷ ಜನರಿಗೆ ಪ್ರಯೋಜನ ಆಗುವುದಾದರೆ, ಹತ್ತು ವರ್ಷಗಳ ಅವಧಿಯಲ್ಲಿ ಈ ಔಷಧದ ಸಂಶೋಧನೆಯ ವೆಚ್ಚಕ್ಕೆಂದು ಪ್ರತಿಯೊಬ್ಬ ರೋಗಿಯಿಂದ ತಲಾ ಹತ್ತು ರೂಪಾಯಿ ಅಧಿಕ ಮೊತ್ತ ಸಂಗ್ರಹಿಸಿದರೆ, ತಯಾರಿಕಾ ವೆಚ್ಚ ಹಿಂದಿರುಗಿ ಬಂದಂತಾಯಿತು. ಆದರೆ, ಅದೇ ಔಷಧ ಪ್ರತೀ ವರ್ಷ ಕೇವಲ 25,000 ರೋಗಿಗಳಿಗೆ ಮಾತ್ರ ಕೆಲಸಕ್ಕೆ ಬಂದರೆ, ಆಗ ಸಂಶೋಧನೆಯ ವೆಚ್ಚಕ್ಕಾಗಿ ಪ್ರತೀ ರೋಗಿಯಿಂದ ಸಂಗ್ರಹಿಸಬೇಕಾದ ಹೆಚ್ಚುವರಿ ಮೊತ್ತ ನಾಲ್ಕು ಪಟ್ಟು ಹೆಚ್ಚಾಗುತ್ತದೆ. ಅಂದರೆ, ಔಷಧ ನಾಲ್ಕು ಪಟ್ಟು ದುಬಾರಿಯಾಯಿತು. ಹೀಗೆ, ಫಲಾನುಭವಿಗಳ ಸಂಖ್ಯೆ ಕಡಿಮೆ ಆದಂತೆಲ್ಲಾ ಔಷಧದ ಬೆಲೆ ಹೆಚ್ಚಾಗುತ್ತದೆ. ಈಗ ಅದೇ ಅನುಪಾತದಲ್ಲಿ ಒಂದು ಲಕ್ಷ ಮಂದಿಯ ಪೈಕಿ ಒಬ್ಬರಲ್ಲಿ ಮಾತ್ರ ಕಾಣುವ ಕಾಯಿಲೆಯನ್ನು ಗಮನಿಸಿ. ಒಂದು ಕೋಟಿ ಜನಸಂಖ್ಯೆಯ ಮಹಾನಗರದಲ್ಲಿ ಅಂತಹ ಕಾಯಿಲೆ ಇರುವ ನೂರು ಮಂದಿ ಮಾತ್ರ ಇರುತ್ತಾರೆ ಎಂದಾಯಿತು. ತಯಾರಿಕಾ ವೆಚ್ಚವಾದ ಒಂದು ಕೋಟಿ ರೂಪಾಯಿಗಳನ್ನು ಈ ನೂರು ಮಂದಿ ಮಾತ್ರ ಹಂಚಿಕೊಳ್ಳಬೇಕು. ಅಂದರೆ, ಕೇವಲ ತಯಾರಿಕೆಯ ವೆಚ್ಚ ಭರಿಸಲು ಒಬ್ಬೊಬ್ಬ ರೋಗಿಯೂ ತಲಾ ಒಂದು ಲಕ್ಷ ರೂಪಾಯಿಗಳನ್ನು ತೆರಬೇಕು! ಇದು ಅಪ್ರಾಯೋಗಿಕ ಅನಿಸಿದರೂ, ಬೇರೆ ಪರ್ಯಾಯವಿಲ್ಲ.

ಈಚೆಗೆ ಮಾಧ್ಯಮಗಳಲ್ಲಿ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ರೋಗಿಯೊಬ್ಬರ ಚಿಕಿತ್ಸೆಗೆ ರೂ.16 ಕೋಟಿ ಅಗತ್ಯವಿದೆ ಎಂದು ಸುದ್ಧಿಯಾಗಿತ್ತು. Spinal Muscular Atrophy ಎಂಬ ನರವ್ಯೂಹ-ಸ್ನಾಯುಮಂಡಲದ ಈ ಸಮಸ್ಯೆಗೆ 2019 ರಲ್ಲಿ Zolgensma ಎಂಬ ಹೆಸರಿನ ಜೀನ್ ಚಿಕಿತ್ಸೆ ಲಭ್ಯವಾಯಿತು. ಒಮ್ಮೆ ಮಾತ್ರ ನೀಡಬೇಕಾದ ಈ ಔಷಧದ ಬೆಲೆ 21.25 ಲಕ್ಷ ಅಮೆರಿಕನ್ ಡಾಲರ್ ಗಳು! ಅಂದರೆ, ರೂಪಾಯಿಗಳ ಲೆಕ್ಕದಲ್ಲಿ ಸುಮಾರು 16 ಕೋಟಿ. ಈ ಔಷಧ ತಯಾರಿಸಿರುವ ಸ್ವಿಜರ್ಲ್ಯಾಂಡ್ ಮೂಲದ ನೊವಾರ್ಟಿಸ್ ಸಂಸ್ಥೆ ಇದನ್ನು ತನ್ನ ತಯಾರಿಕೆಯ ವೆಚ್ಚಕ್ಕಿಂತ ಅರ್ಧ ಬೆಲೆಗೆ ನೀಡುತ್ತಿದೆ. ಇಲ್ಲವಾದರೆ ಇದರ ಬೆಲೆ ರೂ.30 ಕೋಟಿ ದಾಟುತ್ತಿತ್ತು! ಇದು ಕೇವಲ ಒಂದು ಉದಾಹರಣೆ ಮಾತ್ರ. ನೂರಾರು ಬಗೆಯ “ಅನಾಥ ಕಾಯಿಲೆ”ಗಳಿಗೆ ಈಗ ಚಿಕಿತ್ಸೆ ಲಭ್ಯವಿದೆ. ಕೆಲವು ಒಮ್ಮೆ ಮಾತ್ರ ನೀಡುವಂಥವಾದರೆ, ಕೆಲವು ಜೀವನವಿಡೀ ತೆಗೆದುಕೊಳ್ಳಬೇಕಾದ್ದವು. ಆದರೆ ಪ್ರತಿಯೊಂದು ಡೋಸ್ ಔಷಧದ ಬೆಲೆ ಕೆಲವು ಸಾವಿರಗಳಿಂದ ಹಿಡಿದು ಲಕ್ಷಾಂತರ ರೂಪಾಯಿಗಳವರೆಗೆ ಇದೆ. ಇವೆಲ್ಲಾ ಸಾಮಾನ್ಯ ಜನಕ್ಕಿರಲಿ, ಆಗರ್ಭ ಶ್ರೀಮಂತರಿಗೂ ತೂಗಿಸುವುದು ಕಷ್ಟವಾಗಬಹುದು!

“ಪ್ರತಿಯೊಂದು ಜೀವವೂ ಅಮೂಲ್ಯ” ಎನ್ನುವ ಮಾತು ಸತ್ಯ. ಅಪರೂಪದ ಕಾಯಿಲೆಗಳಿಗೆ ಸರ್ಕಾರಗಳ ನೆರವಿಲ್ಲದೇ ಚಿಕಿತ್ಸೆ ಸಾಧ್ಯವಿಲ್ಲ. ದೇಶದ ಪ್ರಾಥಮಿಕ ಆರೋಗ್ಯವನ್ನು ಕೂಡ ಸರಿಯಾಗಿ ನಿರ್ಮಿಸಿಲ್ಲದ, ಪ್ರತಿಯೊಂದಕ್ಕೂ ಖಾಸಗಿಯವರ ಮೇಲೆ ಅವಲಂಬಿತವಾಗಿರುವ ಸರ್ಕಾರಗಳು ಪ್ರಪಂಚದಲ್ಲಿ ಬಹಳಷ್ಟಿವೆ. ಇಂತಹ ವ್ಯವಸ್ಥೆಗಳು “ಅನಾಥ ಕಾಯಿಲೆ”ಗಳ ಚಿಕಿತ್ಸೆಗೆ ಎಷ್ಟು ಸಂಪನ್ಮೂಲಗಳನ್ನು ನೀಡಬಲ್ಲವು? ಸರ್ಕಾರದ ಅಧೀನದಲ್ಲಿರುವ ಸಂಶೋಧನಾ ಕೇಂದ್ರಗಳು ಈ ರೀತಿಯ ನವೀನ ಸಂಶೋಧನೆಗಳನ್ನು ಮಾಡಿ, ದೇಶದ ಜನತೆಗೆ ನೆರವಾಗಬೇಕು. ಅದಕ್ಕೆ ರಾಜಕೀಯ ಮತ್ತು ಮಾನಸಿಕ ಇಚ್ಛಾಶಕ್ತಿ ಬೇಕು. ವ್ಯವಸ್ಥೆ ತಾನೇ ನಿರ್ಮಿಸಿಕೊಂಡಿರುವ ಹಲವಾರು ಅಡೆತಡೆಗಳನ್ನು ತೊಲಗಿಸಿಕೊಳ್ಳಬೇಕು. ಇವೆಲ್ಲಾ ಒಂದು ದಿನ ಆಗುತ್ತದೆ ಎಂಬ ಆಶಾಭಾವದಲ್ಲಿ ಸಾಮಾನ್ಯ ಜನತೆ ಬದುಕಬೇಕು. 

----------------

 9 ಫೆಬ್ರವರಿ 2021 ರಂದು ವಿಶ್ವವಾಣಿ ಕನ್ನಡ ದಿನಪತ್ರಿಕೆಯಲ್ಲಿ ಪ್ರಕಟವಾದ ಲೇಖನ 

 ಈಗ ಎಲ್ಲೆಡೆ ಕೋವಿಡ್-19 ಲಸಿಕೆ ಚರ್ಚೆಯಲ್ಲಿದೆ! ಇದಕ್ಕೆ ಸಂಬಂಧಿಸಿದಂತೆ ವಿವಿಧ ರೀತಿಯ ಲಸಿಕೆಗಳ ಕಿರುಪರಿಚಯವನ್ನು ಈ ಲೇಖನ ಮಾಡಿಕೊಡಲಿದೆ. ಈ ಬಗ್ಗೆ ಇರಬಹುದಾದ ಸಾಕಷ್ಟು ಸಂದೇಹ, ಸಂಶಯಗಳನ್ನು ಈ ಲೇಖನ ನಿವಾರಿಸಲಿದೆ. ಹೆಚ್ಚಿನ ಪ್ರಶ್ನೆಗಳು ಇದ್ದರೆ ಕಮೆಂಟ್ ನಲ್ಲಿ ಕೇಳಬಹುದು.

2021 ರಲ್ಲಿ ಕೋವಿಡ್-19 ರ ಅಂತ್ಯ ಕಾಣಬಹುದೇ?

ಮಾನವ ಇತಿಹಾಸದಲ್ಲಿ 2020 ನೆಯ ವರ್ಷ “ಕೋವಿಡ್” ವರ್ಷವೆಂದೇ ಹೆಸರಾಗಲಿದೆ. ಜಗತ್ತಿನ ಸಂಕೀರ್ಣ ರಚನೆಯನ್ನು ಅಲುಗಾಡಿಸಿದ, ಆರೋಗ್ಯ ವ್ಯವಸ್ಥೆಯ ಶೈಥಿಲ್ಯಗಳನ್ನು ಅನಾವರಣಗೊಳಿಸಿದ, ಮಾನವ ಸಂಬಂಧಗಳ ಸೂಕ್ಷ್ಮಗಳನ್ನು ಓರೆಗೆ ಹಚ್ಚಿದ ಕೀರ್ತಿ ಈ ವರ್ಷದ್ದು! “ಈ ವರ್ಷ ಎಂದು ಮುಗಿದೀತು?” ಎನ್ನುವ ಭಾವದ ಹಿಂದೆ “ಕೋವಿಡ್ ಎಂದು ಕೊನೆಗೊಂಡೀತು?” ಎನ್ನುವ ಪ್ರಶ್ನೆಯ ಛಾಯೆಯಿದೆ. ಇದಕ್ಕೆ ಉತ್ತರ ಹುಡುಕುವ ಮುನ್ನ ಒಂದಷ್ಟು ಹಿನ್ನೆಲೆ ಅರಿಯಬೇಕು.

ಸಾಂಕ್ರಾಮಿಕ ಕಾಯಿಲೆ ಹರಡುವ ಸೂಕ್ಷ್ಮಜೀವಿಯೊಂದು ದೇಹವನ್ನು ಪ್ರವೇಶಿಸಿದಾಗ ಏನಾಗುತ್ತದೆ? ದೇಹದಲ್ಲಿ ರೋಗದ ವಿರುದ್ಧ ಬಡಿದಾಡುವ ರಕ್ಷಕ ವ್ಯವಸ್ಥೆಯಿದೆ. ಅದು ಚುರುಕಾಗಿದ್ದರೆ, ರೋಗಕಾರಕ ಸೂಕ್ಷ್ಮಜೀವಿಯ ವಿರುದ್ಧ ಕೂಡಲೇ ಧಾಳಿ ಆರಂಭಿಸುತ್ತದೆ. ಈ ಸಂಗ್ರಾಮದಲ್ಲಿ ರಕ್ಷಕ ವ್ಯವಸ್ಥೆಯದ್ಡು ಮೇಲುಗೈಯಾದರೆ, ಕಾಯಿಲೆ ನಮ್ಮನ್ನು ಹೆಚ್ಚು ಕಾಡುವುದಿಲ್ಲ; ಚೂರು-ಪಾರು ತೊಂದರೆ ಮಾಡಿ, ಇಲ್ಲವಾಗುತ್ತದೆ! ಸಂಘರ್ಷದಲ್ಲಿ ರೋಗಕಾರಕ ಸೂಕ್ಷ್ಮಜೀವಿ ಗೆದ್ದರೆ, ಕಾಯಿಲೆ ಶರೀರವನ್ನು ಸಾಕಷ್ಟು ಘಾಸಿ ಮಾಡುತ್ತದೆ. ಆಗ, ಶರೀರಕ್ಕೆ ಹೊರಗಿನಿಂದ ರಕ್ಷಣೆ ಒದಗಿಸಬೇಕು. ಇಂತಹ ರಕ್ಷಣೆಯೆಂದರೆ ಸೂಕ್ಷ್ಮಜೀವಿಯನ್ನು ಕೊಲ್ಲಬಲ್ಲ ಔಷಧ, ರಕ್ಷಕ ವ್ಯವಸ್ಥೆಯನ್ನು ಚೇತರಿಸುವ ಪೂರಕ ಚಿಕಿತ್ಸೆ, ಮತ್ತು ಶರೀರಕ್ಕೆ ಈಗಾಗಲೇ ಆಗಿರುವ ಘಾಸಿಯ ನಿಯಂತ್ರಣ. ರೋಗದ ಆರಂಭದಲ್ಲಿ ಹಾನಿಯ ಪ್ರಮಾಣ ಮಿತವಾಗಿರುವಾಗಲೇ ಚಿಕಿತ್ಸೆ ಪಡೆದಷ್ಟೂ ಚೇತರಿಸಿಕೊಳ್ಳುವ ಸಾಧ್ಯತೆಗಳು ಅಧಿಕ. ಕೋವಿಡ್-19 ಎಂದೇ ಅಲ್ಲ; ಯಾವುದೇ ಕಾಯಿಲೆಯ ಚಿಕಿತ್ಸೆಯ ಆಧಾರ ಇದೇ.

ಕೋವಿಡ್-19 ರ ಪರಿಸ್ಥಿತಿ ವಿಭಿನ್ನ. ಇದು ಹಳೆಯ ಕರೊನಾವೈರಸ್ಸಿನ ಹೊಸ ಸ್ವರೂಪ; ಜಗತ್ತಿಗೆ ಹಿಂದೆ ಪರಿಚಯವಿಲ್ಲದ ಕಾಯಿಲೆ. ದುರದೃಷ್ಟವಶಾತ್, ಕೋವಿಡ್-19 ವೈರಸ್ಸನ್ನು ಕೊಲ್ಲಬಲ್ಲ ನಿಷ್ಕೃಷ್ಟ ಔಷಧ ಇನ್ನೂ ಪತ್ತೆಯಾಗಿಲ್ಲ. ರಕ್ಷಕ ವ್ಯವಸ್ಥೆ ಸಮರ್ಥವಾಗಿರುವವರು ಕೋವಿಡ್-19 ಕಾಯಿಲೆ ತಗುಲಿದರೂ ಹೆಚ್ಚು ಘಾಸಿಯಿಲ್ಲದೆ ಗುಣವಾಗುತ್ತಾರೆ. ಆದರೆ, “ಇಂತಹುದೇ ನಿರ್ದಿಷ್ಟ ಮಂದಿಗೆ ಅಪಾಯವಿಲ್ಲ” ಎಂದು ಪ್ರತ್ಯೇಕಿಸುವುದು ಅಸಾಧ್ಯ. ಹೀಗಾಗಿ, ಔಷಧವಿಲ್ಲದ ಕೋವಿಡ್-19 ಕಾಯಿಲೆ ಬಾರದಂತೆ ಎಚ್ಚರವಹಿಸುವುದೇ ಅತ್ಯಂತ ಸುರಕ್ಷಿತ. ಮಾಸ್ಕ್ ಧರಿಸುವ, ಸಾಮಾಜಿಕ ಅಂತರ ಕಾಯ್ದುಕೊಳ್ಳುವ, ವೈಯಕ್ತಿಕ ಶುಚಿತ್ವದ ನಿಗಾ ಇಡುವ ವಿಧಾನಗಳು ಪಾಲನೆಯಾಗುತ್ತಿವೆ. ಅವೆಲ್ಲಾ ಆಯಾ ಕ್ಷಣದ ರಕ್ಷಣೆಗಳು. ಕೋವಿಡ್-19 ವಿರುದ್ಧ ಶರೀರದಲ್ಲಿ ವ್ಯವಸ್ಥಿತ ರಕ್ಷಣೆ ಬೆಳೆಸಿಕೊಳ್ಳುವುದು ದೀರ್ಘಾವಧಿ ವಿಧಾನ. ಇದನ್ನು ಸಾಧಿಸಲು ಲಸಿಕೆಗಳು ಬೇಕು.

ಕೋವಿಡ್-19 ಲಸಿಕೆಗಳ ಬೆಳವಣಿಗೆ ತೀವ್ರಗತಿಯಲ್ಲಿದೆ; ಸಂಬಂಧಿಸಿದ ಪರೀಕ್ಷೆಗಳು ಬಹುತೇಕ ಪೂರ್ಣಗೊಂಡು, ಮಾರುಕಟ್ಟೆಗೆ ಧಾಂಗುಡಿಯಿಡಲಿವೆ. ಕೆಲವು ಪ್ರಮುಖ ಲಸಿಕೆಗಳನ್ನು ಪರಿಶೀಲಿಸಬಹುದು.

ಅಸ್ಟ್ರಾ-ಝೆನಕ ಕಂಪನಿಯ ಆಕ್ಸ್’ಫರ್ಡ್ ವಿಶ್ವವಿದ್ಯಾಲಯದ ChAdOx1-S- nCoV-19 ಲಸಿಕೆ, ಚಿಂಪಾಂಜಿಗಳಲ್ಲಿ ಶೀತ ಉಂಟುಮಾಡುವ ಒಂದು ವೈರಸ್ಸಿನ ದುರ್ಬಲ ರೂಪ. ಜೆನೆಟಿಕ್ ರೂಪಾಂತರ ತಂತ್ರಜ್ಞಾನವನ್ನು ಉಪಯೋಗಿಸಿ, ಮನುಷ್ಯರಲ್ಲಿ ಕಾಯಿಲೆ ತಾರದಂತೆ ಇದನ್ನು ಬದಲಾಯಿಸಲಾಗಿದೆ. ಕರೊನಾವೈರಸ್ ಮೇಲ್ಮೈನ ಮುಳ್ಳಿನಂತಹ ರಚನೆಗೆ (ಚಿತ್ರ-1) ಕಾರಣವಾಗುವ ಜೆನೆಟಿಕ್ ಮಾಹಿತಿಯನ್ನು ಈ ರೂಪಾಂತರಿತ ವೈರಸ್ಸಿಗೆ ಉಣಿಸಲಾಗಿದೆ. ಇದು ಶರೀರದ ಜೀವಕೋಶಗಳನ್ನು ಸೇರಿದಾಗ, ಕರೊನಾವೈರಸ್ ಮೇಲ್ಮೈನ ಮಾದರಿಯ ಮುಳ್ಳುಗಳನ್ನು ಕೋಶಗಳ ಮೇಲೆ ಉತ್ಪಾದಿಸುತ್ತದೆ. ಅದರಿಂದ ರಕ್ಷಕ ವ್ಯವಸ್ಥೆ ಪ್ರಚೋದನೆಗೊಂಡು ಕರೊನಾವೈರಸ್ ವಿರುದ್ಧ ಸೆಣಸಾಡುವ ಶಕ್ತಿಯನ್ನು ಗಳಿಸಿಕೊಳ್ಳುತ್ತದೆ. ಮುಂದೊಮ್ಮೆ ಕೋವಿಡ್-19 ಸೋಂಕು ತಗುಲಿದರೆ, ಅದನ್ನು ಎದುರಿಸಲು ಶರೀರ ಮೊದಲೇ ಸನ್ನದ್ಧವಾಗಿರುತ್ತದೆ. ಹೀಗಾಗಿ, ಕೋವಿಡ್-19 ಸೋಂಕು ತೀವ್ರವಾಗುವ ಮುನ್ನವೇ ರಕ್ಷಕ ವ್ಯವಸ್ಥೆ ಅದನ್ನು ನಿಗ್ರಹಿಸುತ್ತದೆ. ಇಂತಹ ರೂಪಾಂತರಿತ ಲಸಿಕೆ ಈಗಾಗಲೇ ಝಿಕಾ ವೈರಸ್ ನಿಯಂತ್ರಣದಲ್ಲಿ ಪ್ರಯೋಗವಾಗಿದೆ. ನಾಲ್ಕು ವಾರಗಳ ಅಂತರದಲ್ಲಿ ಎರಡು ಬಾರಿ ಚುಚ್ಚಿಸಿಕೊಂಡರೆ, ಲಸಿಕೆಯ ಪರಿಣಾಮ ಶೇಕಡಾ 90 ಎಂದು ಅಂದಾಜು. ಲಭ್ಯವಿರುವ ತಂತ್ರಜ್ಞಾನ ಬಳಸಿರುವುದರಿಂದ ಬೆಲೆ ಅಗ್ಗ. ಇದನ್ನು ಶೇಖರಿಸುವ ವ್ಯವಸ್ಥೆ ಸರಳ. ಈಗಾಗಲೇ ಇರುವ ಲಸಿಕೆ ಶೇಖರಣೆಯ ವ್ಯವಸ್ಥೆಯೇ ಸಾಕು.


ಕೋವಿಡ್-19 ಮೇಲ್ಮೈ ಮುಳ್ಳುಗಳು (iSO-FORM LLC-CC-BY- 4.0)

ಈಗ ಪ್ರಚಾರದಲ್ಲಿ ಇರುವ ಫೈಝರ್ ಕಂಪನಿಯ BioNTech ಲಸಿಕೆ ಮತ್ತು ಅಮೆರಿಕನ್ ಬಯೊಟೆಕ್ ಕಂಪನಿಯ ಮೊಡೆರ್ನ ಲಸಿಕೆಗಳು ಆರ್.ಎನ್.ಎ ಆಧಾರಿತವಾದ್ದವು (ಚಿತ್ರ-2).


ಆರ್.ಎನ್.ಎ ಆಧಾರಿತ ಲಸಿಕೆಗಳ ಕಾರ್ಯಸೂಚಿ (Kuon.Haku, CC BY 4.0 Wikimedia Commons)

ನಮ್ಮ ದೇಶದ ಭಾರತ್ ಬಯೊಟೆಕ್ ಕೂಡ ಲಸಿಕೆಗಳ ಅಭಿವೃದ್ಧಿಯಲ್ಲಿದೆ. ರೆಬೀಸ್ ನಂತಹ ವೈರಸ್ ಕಾಯಿಲೆಗಳಿಗೆ, ಕಾಯಿಲೆಕಾರಕ ವೈರಸ್ಸನ್ನು ನಿಷ್ಕ್ರಿಯಗೊಳಿಸಿ, ಅದರ ರೋಗಕಾರಕ ಸಾಮರ್ಥ್ಯವನ್ನು ತೆಗೆದುಹಾಕಲಾಗುತ್ತದೆ. ಇಂತಹ ನಿಷ್ಕ್ರಿಯ ವೈರಸ್ ಶರೀರದ ಒಳಗೆ ತನ್ನ ಸಂಖ್ಯೆಯನ್ನು ವೃದ್ಧಿಸಲಾರದು. ಇವು ಕಾಯಿಲೆ ತರಲಾರವಾದರೂ, ಶರೀರದಲ್ಲಿ ಕಾಯಿಲೆಯ ವಿರುದ್ಧ ನಿರೋಧಕ ಸಾಮರ್ಥ್ಯವನ್ನು ಉದ್ದೀಪನಗೊಳಿಸಬಲ್ಲವು. ಕೋವಿಡ್-19 ಕಾಯಿಲೆಗೆ ಕೂಡ ಇಂತಹುದೇ ಲಸಿಕೆಯನ್ನು ಭಾರತ್ ಬಯೊಟೆಕ್ ಪರೀಕ್ಷೆ ಮಾಡುತ್ತಿದೆ. ಈ ಲಸಿಕೆಗಳ ಸಂಗ್ರಹಣೆ ಸರಳ; ಪ್ರಸ್ತುತ ಲಭ್ಯವಿರುವ ವ್ಯವಸ್ಥೆಯೇ ಸಾಕು. ಇದು ಸಫಲವಾದರೆ ಕೋವಿಡ್-19 ರ ವಿರುದ್ಧ ಹೋರಾಡಲು ನಮ್ಮ ದೇಶದಲ್ಲೇ ತಯಾರಾದ ದೊಡ್ಡ ಅಸ್ತ್ರ ಸಿಕ್ಕಂತೆ.

ರಷ್ಯಾ ದೇಶದ ಸ್ಪುತ್ನಿಕ್ ಲಸಿಕೆ ಮತ್ತು ನಮ್ಮ ದೇಶದ ಸೀರಮ್ ಇನ್ಸ್ಟಿಟ್ಯೂಟ್ ಸಂಸ್ಥೆ ತಯಾರಿಸಿರುವ ಕೋವಿಶೀಲ್ಡ್ ಲಸಿಕೆ ಕೂಡ ಆಕ್ಸ್’ಫರ್ಡ್ ವಿಶ್ವವಿದ್ಯಾಲಯದ ಕೋವಿಡ್-19 ಲಸಿಕೆಯಂತಹ ತಂತ್ರಜ್ಞಾನವನ್ನು ಅವಲಂಬಿಸಿದೆ. ರಷ್ಯಾದ ಲಸಿಕೆ ಅಡೆನೊವೈರಸ್ ಎಂಬ ವೈರಸ್ಸಿನ ಒಳಗೆ ಕೋವಿಡ್-19 ರ ಆರ್.ಎನ್.ಎ ಜೀವದ್ರವ್ಯದ ಭಾಗಶಃ ಅಂಶವನ್ನು ಸೇರಿಸಿ ಬಳಸಿದರೆ, ಸೀರಮ್ ಸಂಸ್ಥೆ ಇದಕ್ಕೆ ಹೆಪಟೈಟಿಸ್-ಬಿ ಎಂಬ ಯಕೃತ್ತಿನ ಸೋಂಕು ಉಂಟುಮಾಡುವ ವೈರಸ್ ಕೋಶವನ್ನು ಬಳಸುತ್ತಿದೆ. ಈ ರೀತಿಯ ವೈರಸ್ಸುಗಳು ಶರೀರದ ಒಳಗೆ ಸೇರಿದಾಗ ತಮ್ಮ ಸಂಖ್ಯೆಯನ್ನು ವೃದ್ಧಿಸಲಾರದಂತೆ ನಿರ್ಮಿಸಲಾಗಿವೆ. ಅಂದರೆ, ಲಸಿಕೆಯ ಡೋಸ್ ನಲ್ಲಿ ಎಷ್ಟು ಸಂಖ್ಯೆಯ ವೈರಸ್ ನೀಡಲಾಗುತ್ತದೆಯೋ, ಅಷ್ಟೇ ಸಂಖ್ಯೆಯ ವೈರಸ್ ಮಾತ್ರ ಕೆಲಸ ಮಾಡಬಲ್ಲವು. ಆ ಸಂಖ್ಯೆ ಶರೀರದ ಒಳಗೆ ವೃದ್ಧಿಯಾಗುವುದಿಲ್ಲ. ಇದಕ್ಕೆ ಪ್ರತಿಯಾಗಿ, ಇಸ್ರೇಲ್ ದೇಶದ ಬಯಲಾಜಿಕಲ್ ರಿಸರ್ಚ್ ಸಂಸ್ಥೆ ಶರೀರದ ಒಳಗೆ ಸಂಖ್ಯೆಯಲ್ಲಿ ವೃದ್ಧಿಸಬಲ್ಲ ವೈರಸ್ ಕೋಶಗಳನ್ನು ಹೊಂದಿರುವ ಲಸಿಕೆಯನ್ನು ತಯಾರಿಸುತ್ತಿದೆ.

ನಮ್ಮ ದೇಶದ ಬಯಾಲಾಜಿಕಲ್-ಇ ಸಂಸ್ಥೆ ಮತ್ತೊಂದು ರೀತಿಯ ತಂತ್ರಜ್ಞಾನದ ಬಳಕೆ ಮಾಡಿದೆ. ಕೋವಿಡ್-19 ವೈರಸ್ಸಿನ  ಆರ್.ಎನ್.ಎ ಜೀವದ್ರವ್ಯವನ್ನು ಕಾಪಾಡಲು ಅದರ ಸುತ್ತಾ ಒಂದು ಪ್ರೊಟೀನ್ ಗೋಡೆಯಿದೆ. ಗೋಡೆಯ ಮೇಲೆ ತೆಳ್ಳನೆಯ ಜಿಡ್ಡಿನ ಪದರವಿದೆ. ಇವೆಲ್ಲವೂ ಸೇರಿ ಕೋವಿಡ್-19 ವೈರಸ್ ಆಗುತ್ತದೆ. ಈ ಪ್ರೊಟೀನ್ ಗೋಡೆಯ ಭಾಗಶಃ ಅಂಶವನ್ನು ಪ್ರತ್ಯೇಕಿಸಿ, ಅದು ಶರೀರದಲ್ಲಿ ಎಷ್ಟರ ಮಟ್ಟಿಗೆ ರಕ್ಷಕ ವ್ಯವಸ್ಥೆಯನ್ನು ಉದ್ದೀಪನಗೊಳಿಸುತ್ತದೆ ಎಂದು ಮೊದಲು ಪರೀಕ್ಷಿಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಕೋವಿಡ್-19 ವೈರಸ್ ನ ಯಾವ ಪ್ರೊಟೀನ್ ತುಣುಕು ಅತ್ಯಂತ ಸಫಲವಾಗಿ ಕೆಲಸ ಮಾಡುತ್ತದೋ, ಅದರ ರಚನೆಯನ್ನು ಪ್ರಯೋಗಾಲಯದಲ್ಲಿ ನಿಷ್ಕರ್ಷೆ ಮಾಡಲಾಗುತ್ತದೆ. ಈಗ, ಜೆನೆಟಿಕ್ ತಂತ್ರಜ್ಞಾನದ ಮೂಲಕ ಅಂತಹುದೇ ಪ್ರೊಟೀನ್ ತುಣುಕನ್ನು ತಯಾರಿಸುವಂತೆ ಬೇರೆ ಸೂಕ್ಷ್ಮಾಣುಜೀವಿಗಳನ್ನು ನಿರ್ದೇಶಿಸಲಾಗುತ್ತದೆ. ಇದರಿಂದ ರಕ್ಷಕ ವ್ಯವಸ್ಥೆಯನ್ನು ಪ್ರಚೋದಿಸಬಲ್ಲ ವೈರಸ್ ಕವಚದ ಪ್ರೊಟೀನ್ ತುಣುಕು ದೊಡ್ಡ ಸಂಖ್ಯೆಯಲ್ಲಿ ತಯಾರಾಗುತ್ತದೆ. ಇದನ್ನು ಬಳಸಿ ಲಸಿಕೆ ತಯಾರಿಸಿ ಚುಚ್ಚಿದರೆ, ಶರೀರದ ರಕ್ಷಕ ವ್ಯವಸ್ಥೆ ಅಸಲೀ ಕೋವಿಡ್-19 ವೈರಸ್ ವಿರುದ್ದ ಹೊಡೆದಾಡಲು ಸನ್ನದ್ಧವಾಗುತ್ತದೆ. ಇಂತಹ ಲಸಿಕೆಗಳನ್ನು ಬಹಳ ಜಾಗರೂಕವಾಗಿ, ಕಶ್ಮಲರಹಿತ ವಾತಾವರಣದಲ್ಲಿ ತಯಾರಿಸಬೇಕು. ಆದರೆ, ಈ ರೀತಿ ತಯಾರಿಸಬಲ್ಲ ತಂತ್ರಜ್ಞಾನ ಈಗಾಗಲೇ ಲಭ್ಯವಿದೆ.

ಒಟ್ಟಿನಲ್ಲಿ, ಕೋವಿಡ್-19 ರ ವಿರುದ್ಧ ಸಾಲು-ಸಾಲು ಲಸಿಕೆಗಳು 2021 ರಲ್ಲಿ ದೊರೆಯಲಿದೆ. ಜೊತೆಗೆ, ಕೋವಿಡ್-19 ಸೋಂಕಿನ ವಿರುದ್ಧ ಪರಿಣಾಮಕಾರಿ ಔಷಧವೂ ಲಭ್ಯವಾಗಬಹುದು. ಆ ನಿಟ್ಟಿನಲ್ಲೂ ಸಾಕಷ್ಟು ಕೆಲಸಗಳು ನಡೆಯುತ್ತಿವೆ. ವೈದ್ಯ ಜಗತ್ತು ಈಗ ಕೋವಿಡ್-19 ಚಿಕಿತ್ಸೆಯ ಬಗ್ಗೆ ಗಣನೀಯ ಅನುಭವ ಗಳಿಸಿದೆ. ಕೋವಿಡ್-19 ರ ತೀವ್ರವಾದ ಸೋಂಕನ್ನೂ ಪರಿಣಾಮಕಾರಿಯಾಗಿ ನಿಯಂತ್ರಿಸಬಲ್ಲ ವ್ಯವಸ್ಥಿತ ವಿಧಾನಗಳು ತಯಾರಾಗಿವೆ. ಜನಸಾಮಾನ್ಯರೂ ಈ ಬಗ್ಗೆ ಸಾಕಷ್ಟು ಮಾಹಿತಿ ತಿಳಿದಿರುವುದರಿಂದ, ಕಾಯಿಲೆಯ ಆರಂಭದ ಹಂತದಲ್ಲೇ ವೈದ್ಯಕೀಯ ನೆರವು ಪಡೆಯುತ್ತಿದ್ದಾರೆ. ಇವೆಲ್ಲ ಪರಿಣಾಮಗಳಿಂದ ಕೋವಿಡ್-19 ಸೋಂಕಿನ ಮರಣದ ಪ್ರಮಾಣ ಇಳಿದಿದೆ. ಮಾಸ್ಕ್ ಧರಿಸುವುದರ ಬಗ್ಗೆ ಸರ್ಕಾರ ಕಟ್ಟುನಿಟ್ಟಿನ ನಿರ್ಧಾರ ತಳೆದಿದೆ. ಅನೇಕ ದೇಶಗಳಲ್ಲಿ 2021 ನೆಯ ವರ್ಷ ಕೋವಿಡ್-19 ಕಾಯಿಲೆಯ ಅಂತ್ಯವನ್ನು ಕಾಣಬಹುದು ಎಂಬ ಆಶಾಭಾವ ಜಾಗೃತವಾಗಿದೆ. ಅಂತಹ ದೇಶಗಳ ಪಟ್ಟಿಯಲ್ಲಿ ನಮ್ಮ ದೇಶದ ಹೆಸರು ಕೂಡ ಇರುವುದೇ ನಮ್ಮ ಧ್ಯೇಯವಾಗಬೇಕು. ಅದಕ್ಕೆ ಪ್ರತಿಯೊಬ್ಬರ ಸಂಘಟಿತ ಪ್ರಯತ್ನ ಅತ್ಯಗತ್ಯ. 2021 ರಲ್ಲಿ ಕೋವಿಡ್-19 ಸೋಂಕನ್ನು ನಾವೆಲ್ಲರೂ ಸಾಂಘಿಕವಾಗಿ ಗೆಲ್ಲುವಂತಾಗಲಿ ಎಂಬ ಹಾರೈಕೆಯಿದೆ.

-----------------------

(ಜನವರಿ 2021 ರ ಚಿಂತನಶೀಲ ಸಮಾಜಮುಖಿ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ)