ಭಾನುವಾರ, ಡಿಸೆಂಬರ್ 15, 2019



ಇಂದಿನ (15/12/2019) ವಿಶ್ವವಾಣಿ ಕನ್ನಡ ದಿನಪತ್ರಿಕೆಯಲ್ಲಿ ಪ್ರಕಟವಾದ ಲೇಖನ. ಇದು Kollegala Sharma ಅವರ "ಜಾಣಸುದ್ಧಿ" ವಿಜ್ಞಾನ ಧ್ವನಿಪತ್ರಿಕೆಯಲ್ಲಿ ದಿನಾಂಕ 13/12/2019 ರಂದು ಪ್ರಸಾರವಾಗಿತ್ತು. ಈ ಲೇಖನದ ಆಡಿಯೋ ಕೇಳಲು "ಜಾಣಸುದ್ಧಿ"ಯ ಲಿಂಕ್ ಅನ್ನು ಬಳಸಬಹುದು: https://anchor.fm/kollegala/episodes/117--21-e9gn1k

ಭೂಮಿಯಾಳದ ಕಾರ್ಬನ್ ಸಂಶೋಧನೆಯಲ್ಲಿ ಹೊಸ ಕೌತುಕಗಳು

ವೈಜ್ಞಾನಿಕ ಕಾದಂಬರಿಕಾರರಲ್ಲಿ ಪ್ರಮುಖ ಹೆಸರು ಜೂಲ್ಸ್ ವರ್ನ್ ಎಂಬ ಫ್ರೆಂಚ್ ಲೇಖಕ. ಕ್ರಿ ಶ 1864 ರಲ್ಲಿ ಆತ Journey to the Centre of the Earth ಎನ್ನುವ ವೈಜ್ಞಾನಿಕ ಸಾಹಸದ ಕಾದಂಬರಿಯನ್ನು ಬರೆದಿದ್ದ. ಭೂಮಿಯ ಆಂತರ್ಯಕ್ಕೆ ಜ್ವಾಲಾಮುಖಿಗಳ ಮೂಲಕ ಲಗ್ಗೆ ಇಡುವ ಸಾಹಸಿಗರ ಕತೆ ಅದು. ಆದರೆ, ಅಂತಹ ಪಯಣ ಕತೆಗಳಿಗಷ್ಟೇ ಮೀಸಲು. ಭೂಮಿಯ ಒಳಗೆ ನುಗ್ಗುವ ಪ್ರಯತ್ನವನ್ನೇನೂ ವಿಜ್ಞಾನಿಗಳು ಬಿಟ್ಟಿಲ್ಲವಾದರೂ ಆ ಪ್ರಯತ್ನದಲ್ಲಿ ಯಶಸ್ಸು ಕಂಡದ್ದು ಕಡಿಮೆ. ಭೂವಿಜ್ಞಾನದ ಪುಸ್ತಕಗಳಲ್ಲಿ ಭೂಮಿಯ ಒಡಲನ್ನು ಪದರ-ಪದರವಾಗಿ ಬಿಡಿಸಿ ಇಟ್ಟಂತಹ ಚಿತ್ರ ಕೇವಲ ಕಲ್ಪನೆಯ, ಅಂದಾಜಿನ ಚಿತ್ರಣ ಮಾತ್ರ. ಭೂಮಿಯ ಒಡಲು ಹೇಗಿರಬಹುದು ಎಂದು ವಿಜ್ಞಾನಿಗಳು ತರ್ಕ ಮಾಡಿದ್ದಾರೆಯೇ ಹೊರತು, ಅದನ್ನು ನೈಜವಾಗಿ ಕಂಡವರಿಲ್ಲ.

ನಮ್ಮ ಭೂಮಿಯ ರಚನೆ ಹೇಗಿದೆ? ಎಲ್ಲಕ್ಕಿಂತ ಮೇಲೆ ಹಲವಾರು ಅನಿಲಗಳ ಮಿಶ್ರಣವಾದ ನಮ್ಮ ಭೂಮಿಯ ವಾತಾವರಣವಿದೆ. ಭೂಮಿಯ ಗುರುತ್ವ ಬಲ ಈ ಗಾಳಿಗಳ ಪದರವನ್ನು ಹಿಡಿದಿಟ್ಟಿದೆ. ಭೂಮಿಯ ನೆಲಮಟ್ಟದ ಪದರದಲ್ಲಿ ನಮ್ಮ ಕಣ್ಣಿಗೆ ಕಾಣುವ ಜಗತ್ತಿದೆ. ಇದು ನೆಲ-ಜಲಗಳ ಜೋಡಿ. ಪ್ರಾಣಿ-ಸಸ್ಯಗಳ ಪ್ರಪಂಚ ಇಲ್ಲಿನದೇ. ಇದರ ಜೊತೆಗೆ ಸಮುದ್ರ, ಸಾಗರಗಳಿವೆ – ಅಲ್ಲಿನದೇ ವಿಸ್ಮಯಕಾರೀ ಜೀವ ವೈವಿಧ್ಯವಿದೆ. ಆದರೆ, ನಮಗೆ ಕಾಣದ ಮತ್ತೊಂದು ಹಂತವೂ ಭೂಮಿಯಲ್ಲಿದೆ. ಅದೇ ಭೂಮಿಯ ಒಡಲು. ನಾವು ನಿಂತಿರುವ ನೆಲದ ಆಳಕ್ಕೂ ಭೂಮಿ ವ್ಯಾಪಿಸಿದೆ. ನಮ್ಮ ಕಲ್ಪನೆಗೆ ನಿಲುಕದ, ನಾವು ಊಹಿಸಲೂ ಆಗದ ಸೋಜಿಗಗಳು ಭೂಮಿಯ ಆಳದಲ್ಲಿವೆ. ನಾವು ಜಗತ್ತಿನ ಹೊರಗೆ ಆಗಸದ ಕೋಟ್ಯಾಂತರ ಮೈಲಿಗಳಷ್ಟು ವ್ಯಾಪ್ತಿಯನ್ನು ಬಲ್ಲೆವು. ನಮ್ಮ ಭೂಮಿಯ ಒಡಲಿನೊಳಗೆ ಮಾಡಿರುವ ಪಯಣ ಮಾತ್ರ ತೀರಾ ಅತ್ಯಲ್ಪ. ನಾವು ನಿಂತ ನೆಲದಿಂದ ಭೂಮಿಯ ಅತ್ಯಂತ ಆಳದ ಒಡಲು ಸುಮಾರು 6370 ಕಿಲೋ ಮೀಟರ್ ಆಳದಲ್ಲಿದೆ. ಇದುವರೆಗೆ ಭೂಮಿಯ ಅತ್ಯಂತ ಆಳಕ್ಕೆ ತಲುಪಿದವರು ರಷ್ಯಾ ದೇಶದ ಸಾಹಸಿಗರು. ಅವರು ಸುಮಾರು ಹನ್ನೆರಡು ಕಿಲೋ ಮೀಟರ್ ಆಳವನ್ನಷ್ಟೇ ತಲುಪಲು ಸಾಧ್ಯವಾಯಿತು. ಜರ್ಮನ್ ವಿಜ್ಞಾನಿಗಳು ಸುಮಾರು ಒಂಬತ್ತು ಕಿಲೋ ಮೀಟರ್ ಆಳ ತಲುಪಿದ್ದಾರೆ. ಅಂದರೆ, ಭೂಮಿಯ ಆಂತರ್ಯದ ಶೇಕಡಾ 0.2 ರಷ್ಟಕ್ಕೂ ನಾವು ಇಳಿದಿಲ್ಲ ಎಂದು ತಿಳಿದಾಗ ನಾವು ಭೂಮಿಯ ಒಡಲಿನ ಬಗ್ಗೆ ಎಷ್ಟು ಕಡಿಮೆ ಅರಿತಿದ್ದೇವೆ ಎಂಬ ಅಂದಾಜು ಬರಬಹುದು. ಅಷ್ಟಕ್ಕೂ ಭೂಮಿಯ ಆಳದಲ್ಲಿ ಏನಿದೆ?

ಭೂಮಿಯ ಒಡಲಿನ ವಿಷಯ ತಿಳಿಯಲು ನಾವು ಕಾರ್ಬನ್ ಬಗ್ಗೆ ಅರಿಯಬೇಕು. ಪರಮಾಣು ಪಟ್ಟಿಯಲ್ಲಿ ಆರನೆಯ ಸ್ಥಾನದಲ್ಲಿ ಇರುವ ಇಂಗಾಲ ಅಥವಾ ಕಾರ್ಬನ್, ಇಡೀ ಜೀವವಿಜ್ಞಾನಕ್ಕೆ ಆಧಾರ. ಕಾರ್ಬನ್ ಇಲ್ಲದೇ ಜೀವವೇ ಇಲ್ಲ. ಇಡೀ ಪ್ರಪಂಚದ ಜೀವಿಗಳ ಅಸ್ತಿತ್ವ ಕಾರ್ಬನ್. ನಮ್ಮ ಆಹಾರದ ಪ್ರಮುಖ ಭಾಗ ಕಾರ್ಬನ್ ಸಂಯುಕ್ತಗಳು. ಜಗತ್ತಿನ ಹೊಸ ತಂತ್ರಜ್ಞಾನಗಳ ಬೆನ್ನೆಲುಬು ಕಾರ್ಬನ್ ಆಧಾರಿತ ವಸ್ತುಗಳೇ. ವಾಯುಮಾಲಿನ್ಯದ ಪ್ರಮುಖ ಕಾರಣ ಕೂಡ ಕಾರ್ಬನ್-ಡೈ-ಆಕ್ಸೈಡ್ ಅನಿಲ. ಹೀಗೆ, ಕಾರ್ಬನ್ ಇಲ್ಲದ ಪ್ರಸ್ತುತ ಪ್ರಪಂಚ ಊಹೆಗೋ ಕಷ್ಟ. ಕಳೆದ ಹಲವಾರು ದಶಕಗಳಿಂದ ಕಾರ್ಬನ್ ಕುರಿತಾದ ಸಂಶೋಧನೆಗಳು ವಿಜ್ಞಾನದ ಪ್ರಮುಖ ಭಾಗ.

ಕಾರ್ಬನ್ ಸಂಶೋಧನೆಯಲ್ಲಿ ಎರಡು ಭಾಗಗಳಿವೆ. ಒಂದು – ಭೂಮಿಯ ಮೇಲಿನ ಸ್ತರಗಳ ಕಾರ್ಬನ್ ಅಧ್ಯಯನ. ಇದರಲ್ಲಿ ನಮ್ಮ ವಾತಾವರಣ, ಸಮುದ್ರ, ಭೂಮಿಯ ಮೇಲಿನ ಕಾರ್ಬನ್ ಮೂಲಗಳನ್ನು ಅಧ್ಯಯನ ಮಾಡುವುದು. ಎರಡನೆಯದು – ಭೂಮಿಯೊಳಗಿನ ಕಾರ್ಬನ್ ಸಂಶೋಧನೆ. ಜಗತ್ತಿನ ಶೇಕಡಾ 90 ಕಾರ್ಬನ್ ಭೂಮಿಯ ಆಳದಲ್ಲಿದೆ. ಈ ಭೂಮಿಯಾಳದ ಕಾರ್ಬನ್ ಹೇಗಿದೆ? ಎಷ್ಟಿದೆ? ಅದರ ಚಲನೆ ಹೇಗೆ? ಅದು ಎಲ್ಲೆಲ್ಲಿ ಖರ್ಚಾಗಿ ಮತ್ತೆ ಎಲ್ಲೆಲ್ಲಿಂದ ಉತ್ಪತ್ತಿ ಆಗುತ್ತದೆ? ಭೂಮಿಯಾಳದ ಒತ್ತಡದಲ್ಲಿ ಹೇಗೆ ರೂಪಾಂತರ ಹೊಂದುತ್ತದೆ? ಅಲ್ಲಿನ ಬೇರೆ ವಸ್ತುಗಳ ಜೊತೆ ಹೇಗೆ ಸೇರುತ್ತದೆ? ಇವುಗಳನ್ನೆಲ್ಲಾ ಅಧ್ಯಯನ ಮಾಡುವುದು ಹಲವು ರೋಮಾಂಚನಕಾರಿ ವಿಷಯಗಳನ್ನು ತಿಳಿಸುತ್ತದೆ. ಈ ಕುರಿತಾಗಿ ದಶಕಗಳಿಂದ ಅಧ್ಯಯನ ಮಾಡಿರುವ ಕೇಂಬ್ರಿಜ್ ವಿಶ್ವವಿದ್ಯಾಲಯದ ಪ್ರೊಫೆಸರ್ ಮೇರಿ ಎಡ್ಮಂಡ್ಸ್ ಮತ್ತು ಅಮೇರಿಕಾದ ಕಾರ್ನೆಗಿ ವಿಜ್ಞಾನ ಸಂಸ್ಥೆಯ ಡಾ. ರಾಬರ್ಟ್ ಹೇಝನ್ ಈ ಬಗ್ಗೆ ಹಲವಾರು ಕುತೂಹಲಕಾರಿ ವಿದ್ಯಮಾನಗಳನ್ನು ಈಚೆಗೆ ನೇಚರ್ ಪತ್ರಿಕೆಯ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.

ಭೂಮಿಯ ಅತ್ಯಂತ ಆಳದಲ್ಲಿ ಕಬ್ಬಿಣ ಸಾಂದ್ರವಾಗಿದೆ ಎಂದು ವಿಜ್ಞಾನಿಗಳು ಈಗಾಗಲೇ ತಿಳಿದಿದ್ದಾರೆ. ಅದರ ಜೊತೆಗೆ, ಜಗತ್ತಿನ ಶೇಕಡಾ 66 ರಷ್ಟು ಕಾರ್ಬನ್ ಕಬ್ಬಿಣದ ಕಾರ್ಬೈಡ್ ರೂಪದಲ್ಲಿ ಭೂಗರ್ಭದಲ್ಲಿದೆ ಎಂದು ಪತ್ತೆಯಾಗಿದೆ. ಹೀಗೆ ಕಾರ್ಬನ್ ಜೊತೆಗೆ ಸೇರಿದ ಕಬ್ಬಿಣ ಉಕ್ಕಿನ ಸ್ವರೂಪವನ್ನು ಪಡೆಯುತ್ತದೆ. ಭೂಮಿಯ ಮೇಲೆ ಘನ ರೂಪದಲ್ಲಿ ಇರುವ ಹಲವಾರು ಖನಿಜಗಳು ಮತ್ತು ಕಾರ್ಬನ್ ಭೂಮಿಯ ಆಳದ ಅಪಾರ ಒತ್ತಡದಿಂದ ದ್ರವರೂಪದಲ್ಲಿ ಕೂಡ ಇರುತ್ತದೆ. ಕಬ್ಬಿಣದಂತಹ ಅನೇಕ ಖನಿಜಗಳು ಆ ಒತ್ತಡದಲ್ಲಿ ಕಾರ್ಬನ್ ಜೊತೆಗೆ ಭಿನ್ನವಾಗಿ ವರ್ತಿಸಿ ವಿಶೇಷ ಮಾದರಿಯ ಕಾರ್ಬನ್ ಸಂಯುಕ್ತಗಳಾಗುತ್ತವೆ. ಇಂತಹ ಹಲವಾರು ಖನಿಜ ಮತ್ತು ಕಾರ್ಬನ್ ದ್ರವಗಳ ಬೆಸುಗೆಯಿಂದ ವಿಶಿಷ್ಟ ಖನಿಜ ಸಂಯುಕ್ತಗಳು ತಯಾರಾಗುತ್ತವೆ. ಕಾರ್ಬನ್ ವಜ್ರವಾಗುವುದು ಕೂಡ ಇಂತಹ ಒತ್ತಡದ ಸ್ಥಿತಿಯಲ್ಲೇ. ಇಂತಹ ವಜ್ರಗಳ ಸೃಷ್ಟಿಯಲ್ಲಿ, ಭೂಪದರಗಳ ಚಲನೆಯಲ್ಲಿ, ಜ್ವಾಲಾಮುಖಿಗಳ ಸ್ಫೋಟಗಳಲ್ಲಿ ಈ ದ್ರವ-ಖನಿಜಗಳ ಪಾತ್ರದ ಬಗ್ಗೆ ವಿಜ್ಞಾನಿಗಳು ಹೊಸ ಹೊಸ ವಿಷಯಗಳನ್ನು ತಿಳಿಯುತ್ತಿದ್ದಾರೆ.

ಸಮುದ್ರದ ಆಳ ಹೆಚ್ಚಾದಂತೆಲ್ಲಾ ಹಲವಾರು ಸ್ಥಳಗಳಲ್ಲಿ ಭೂಗರ್ಭದ ಜೊತೆ ಸಂಪರ್ಕ ಇರುತ್ತದೆ. ಅಂತಹ ಸಮುದ್ರದ ಆಳದಲ್ಲಿ ಬದುಕುವ ಜೀವಿಗಳು ತಯಾರಿಸುವ ಹಲವಾರು ವಿಶಿಷ್ಟ ಕಾರ್ಬನ್ ಸಂಯುಕ್ತಗಳು ಭೂಗರ್ಭ ಸೇರುತ್ತವೆ ಎಂದು ವಿಜ್ಞಾನಿಗಳ ಅಧ್ಯಯನ ತಿಳಿಸಿದೆ. ಭೂಮಿಯ ಆಳದಲ್ಲಿ ನೀರು ಹೇಗೆ ವರ್ತಿಸಬಹುದು ಎಂಬುದು ಕುತೂಹಲಕಾರಿ ಪ್ರಯೋಗ. ಭೂಗರ್ಭದ ಹಲವಾರು ಪ್ರದೇಶಗಳು ಆಳಸಮುದ್ರದ ಜೊತೆ ಸಂಪರ್ಕ ಹೊಂದಿವೆ. ಭೂಮಿಯ ಆಳದಲ್ಲಿನ ದ್ರವ-ಖನಿಜಗಳ ಚಲನೆಯಿಂದ ಸಮುದ್ರದ ಆಳದ ಮಟ್ಟ ಬದಲಾಗುತ್ತಲೇ ಇರುತ್ತದೆ. ಅಷ್ಟು ಆಳದ ಒತ್ತಡದಲ್ಲಿ ವಸ್ತುಗಳ ಸಾಂದ್ರತೆ ಹೆಚ್ಚುತ್ತಲೇ ಹೋಗುತ್ತದೆ. ಅಲ್ಲಿನ ಕೆಲವೇ ಕಿ.ಮೀ ವ್ಯಾಪ್ತಿಯ ಪ್ರದೇಶದ ಒಟ್ಟು ತೂಕ ಭೂಮಿಯ ಮೇಲಿನ ಎಲ್ಲಾ ಮನುಷ್ಯರ ಒಟ್ಟು ತೂಕಕ್ಕಿಂತ 250 ಪಟ್ಟು ಹೆಚ್ಚು ಎಂದರೆ ಆ ಸಾಂದ್ರತೆಯನ್ನು ಕಲ್ಪಿಸಿಕೊಳ್ಳಬಹುದು.

ಆಳ ಸಮುದ್ರದ ಅಧ್ಯಯನದಿಂದ, ಅಲ್ಲಿನ ಕಲ್ಲುಗಳ ಮತ್ತು ದ್ರವದ ವಿಶ್ಲೇಷಣೆಯಲ್ಲಿ ಅನೇಕ ಅಮೈನೋ ಆಮ್ಲಗಳು, ಕಾರ್ಬನ್ ಸಂಯುಕ್ತಗಳು ಪತ್ತೆಯಾಗಿವೆ. ಭೂಮಿಯ ಮೇಲೆ ಜೀವ ಶುರುವಾದದ್ದೇ ಸಾಗರಗಳಲ್ಲಿ ಅಲ್ಲವೇ? ಅಂದ ಮೇಲೆ ಜೀವಿಗಳ ಉಗಮ ಹೇಗೆ ಆಯಿತು ಎಂಬುದರ ಸುಳಿವು ಕೂಡ ಈ ಪ್ರದೇಶಗಳ ಅಧ್ಯಯನದಿಂದಲೇ ತಿಳಿಯಬಹುದು. ಒಟ್ಟಾರೆ, ಭೂಮಿಯಾಳದ ಕಾರ್ಬನ್ ಅಧ್ಯಯನ ಒಂದು ರೀತಿಯಲ್ಲಿ ಭೂವಿಜ್ಞಾನ, ರಸಾಯನ ವಿಜ್ಞಾನ, ಜೀವವಿಜ್ಞಾನಗಳ ಸಂಗಮ. ಸೂರ್ಯನ ಬೆಳಕು ಪ್ರವೇಶಿಸದ ಈ ಪ್ರದೇಶಗಳ ಒತ್ತಡ, ತಾಪಮಾನ ಊಹೆಗೆ ನಿಲುಕದಂತಹದ್ದು. ಇಲ್ಲಿ ಜರುಗುವ ವೈಜ್ಞಾನಿಕ ಪ್ರಕ್ರಿಯೆಗಳನ್ನು ಅರ್ಥ ಮಾಡಿಕೊಳ್ಳುವುದು ನಮ್ಮ ತಿಳಿವಿನ ವಿಸ್ತಾರವನ್ನು ಬಹಳವಾಗಿ ಹೆಚ್ಚಿಸುತ್ತದೆ.

ಆಳಕ್ಕೆ ಇಳಿದಷ್ಟೂ ಕುತೂಹಲಗಳನ್ನೇ ನೀಡುವ ಭೂಮಿಯ ಆಂತರ್ಯ ಮುಂದಿನ ದಶಕಗಳಲ್ಲಿ ಕಾರ್ಬನ್ ಅಧ್ಯಯನದಿಂದ ಮತ್ತಷ್ಟು ಸಂಕೀರ್ಣವಾಗಲಿದೆ. ಭವಿಷ್ಯದಲ್ಲಿ ಭೂಮಿಯ ಮತ್ತು ಸಮುದ್ರದ ಆಳಗಳಿಗೆ ಇಳಿಯಬಲ್ಲ ಹೊಸ ಉಪಕರಣಗಳು, ತಂತ್ರಜ್ಞಾನ, ಕಂಪ್ಯೂಟರ್ ಆಧಾರಿತ ವಿಶ್ಲೇಷಣೆ ಬರಲಿವೆ. ಭೂವಿಜ್ಞಾನಿಗಳು, ಲೋಹತಜ್ಞರು, ಜೀವವಿಜ್ಞಾನಿಗಳು ಸೇರಿ ಅಧ್ಯಯನ ನಡೆಸಲಿದ್ದಾರೆ. ತೀವ್ರ ಒತ್ತಡದಲ್ಲಿ ಕಾರ್ಬನ್ ಸಂಯುಕ್ತಗಳು ಯಾವ ರೀತಿ ವರ್ತಿಸುತ್ತೇವೆ ಎಂಬುದರ ಮೇಲೆ ನಮ್ಮ ಭವಿಷ್ಯದ ಹಲವಾರು ಅವಿಷ್ಕಾರಗಳು ಬೆಳೆಯಲಿವೆ. ಜೊತೆಗೆ, ಬೇರೆ ಗ್ರಹಗಳಲ್ಲಿ ಯಾವ ಮಾದರಿಯ ಸಂಯುಕ್ತಗಳು ಇರಬಹುದೆಂಬ ಅಂದಾಜು ಕೂಡ ನಿಖರವಾಗಲಿದೆ. ತೀವ್ರ ಒತ್ತಡದ ಪರಿಸ್ಥಿತಿಗಳಲ್ಲಿ ಸಾಂದ್ರತೆ ಹೆಚ್ಚಾಗುವುದರಿಂದ ಕಡಿಮೆ ಜಾಗದಲ್ಲಿ ಹೆಚ್ಚಿನ ವಸ್ತುಗಳನ್ನು ಹೇಗೆ ಅಡಕಗೊಳಿಸಬಹುದು ಎಂಬ ತಂತ್ರಜ್ಞಾನ ಬೆಳೆಯಲಿದೆ. ಇದರಿಂದ ಯಂತ್ರಗಳ ಗಾತ್ರ ಕಿರಿದಾಗಿ, ಅವನ್ನು ಡ್ರೋನ್ ಗಳಲ್ಲಿ ಅಳವಡಿಸಿ ಅದರ ಸಾಮರ್ಥ್ಯ ಹೆಚ್ಚಿಸಬಹುದು. ನೆಲದಾಳದ ದ್ರವಗಳ ಚಲನೆಯನ್ನು ತಿಳಿಯುವುದರಿಂದ ಜ್ವಾಲಾಮುಖಿಗಳ ವರ್ತನೆಯನ್ನು, ಸಮುದ್ರ ತಳಮಟ್ಟದ ಏರಿಳಿತವನ್ನು ಊಹಿಸಬಹುದು. ಬೆಳಕುರಹಿತ ಒತ್ತಡದ ಪರಿಸ್ಥಿತಿಗಳಲ್ಲಿ ಜೀವರಸಾಯನಗಳು ಹೇಗೆ ವರ್ತಿಸುತ್ತವೆ ಎಂದು ತಿಳಿಯಬಹುದು. ಜಗತ್ತಿನಲ್ಲಿ ಜೀವ ಹೇಗೆ ಹುಟ್ಟಿತು ಎನ್ನುವುದರಿಂದ ಹಿಡಿದು ಜೀವವಿಜ್ಞಾನದ ಹಲವಾರು ರಹಸ್ಯಗಳು ಬಯಲಾಗಬಹುದು. ಭೂಮಿಯಾಳದ ಕಾರ್ಬನ್ ಸಂಯುಕ್ತಗಳ ಅಧ್ಯಯನ ನಮ್ಮ ಭವಿಷ್ಯವನ್ನು ತೋರುವ ಬೆಳಕಿನ ಕಿಂಡಿ; ನಮ್ಮ ಭವಿಷ್ಯದ ಹಲವಾರು ಅವಶ್ಯಕತೆಗಳಿಗೆ ಉತ್ತರ ಕೂಡ.

ವಿಶ್ವವಾಣಿ ಪತ್ರಿಕೆಯಲ್ಲಿನ ಲೇಖನದ ಲಿಂಕ್: http://epaper.vishwavani.news/bng/e/bng/15-12-2019/7


ಶನಿವಾರ, ಡಿಸೆಂಬರ್ 7, 2019








ಕಾರ್ಬನ್-ಡೈ-ಆಕ್ಸೈಡ್ ನುಂಗುವ ಬ್ಯಾಕ್ಟೀರಿಯಾಗಳು!
ಲೇಖಕ: ಡಾ. ಕಿರಣ್ ವಿ. ಎಸ್.

ಎಸ್-ಚೇ-ರಿ-ಷಿ-ಯಾ ಕೋಲೈ ಎಂಬ ನಾಲಿಗೆಗೆ ಕಸರತ್ತು ಕೊಡುವ ಹೆಸರಿನ ಬ್ಯಾಕ್ಟೀರಿಯಾ ಇದೆ. ಸುಲಭದಲ್ಲಿ ಇದನ್ನು ಇ-ಕೋಲೈ ಎನ್ನುತ್ತಾರೆ. ಪುರಾತನ ಕಾಲದಿಂದ ಮಾನವನ ಕರುಳಿಗೂ, ಈ ಬ್ಯಾಕ್ಟೀರಿಯಾಗೂ ಬಿಡಿಸಲಾಗದ ನಂಟು. ಅನೇಕ ಪ್ರಬೇಧಗಳಲ್ಲಿ ಕಾಣುವ ಇ-ಕೋಲೈ ಬ್ಯಾಕ್ಟೀರಿಯಾ ಮಾನವರಲ್ಲಿ ಕರುಳು ಬೇನೆ ಕಾಯಿಲೆ ತರುವುದಕ್ಕೆ ಹೆಸರುವಾಸಿ. ಆ ಕಾಯಿಲೆಯನ್ನು ವಿವರವಾಗಿ ಅಧ್ಯಯನ ಮಾಡುವ ನಿಟ್ಟಿನಲ್ಲಿ ಇ-ಕೋಲೈ ಬಗ್ಗೆ ಕೂಡ ತುಂಬಾ ವಿವರವಾಗಿ, ಅದರ ಅತ್ಯಂತ ಸೋಜಿಗದ ಸೂಕ್ಷ್ಮಗಳನ್ನೂ ವಿಜ್ಞಾನಿಗಳು ಅರಿತರು. ಒಂದು ರೀತಿಯಲ್ಲಿ ಇ-ಕೋಲೈ ಬ್ಯಾಕ್ಟೀರಿಯಾ ವಿಜ್ಞಾನಿಗಳ ಜೊತೆ ಗಾಢ ಸ್ನೇಹ ಬೆಳೆಸಿಕೊಂಡಿದೆ! ಒಂದು ಇ-ಕೋಲೈ ಬ್ಯಾಕ್ಟೀರಿಯಾ 20 ನಿಮಿಷಗಳಲ್ಲಿ ವಿದಳನಗೊಂಡು ಎರಡು ಆಗುತ್ತವೆ. ಅಂದರೆ, ಸಾಕಷ್ಟು ಆಹಾರ, ಸ್ಥಳ, ಉಷ್ಣತೆಗಳು ದೊರೆತರೆ ಒಂದೇ ಒಂದು ಇ-ಕೋಲೈ ಬ್ಯಾಕ್ಟೀರಿಯಾ ಕೇವಲ 4 ತಾಸುಗಳಲ್ಲಿ 1024 ಆಗುತ್ತದೆ. ಹೀಗೆಯೇ ಮುಂದುವರೆದರೆ 24 ತಾಸುಗಳಲ್ಲಿ ಭೂಮಿಯ ಮೇಲಿರುವ ಎಲ್ಲಾ ಮನುಷ್ಯರ ಸಂಖ್ಯೆಗಿಂತ ಇದರ ಸಂಖ್ಯೆ ಹೆಚ್ಚಾಗಿರುತ್ತದೆ! ಈ ತೀಕ್ಷ್ಣ ವೇಗದ ಕಾರಣದಿಂದ ಅನೇಕ ಪ್ರಯೋಗಗಳಲ್ಲಿ ಇ-ಕೋಲೈ ಬ್ಯಾಕ್ಟೀರಿಯಾ ಬಳಕೆ ಆಗುತ್ತದೆ. ಜೆನೆಟಿಕ್ ತಂತ್ರಜ್ಞಾನಿಗಳಿಗಂತೂ ಇದು ಬಹಳ ಅಚ್ಚುಮೆಚ್ಚು. ವಿಜ್ಞಾನಿಗಳ ಕೈವಾಡದಿಂದ ವಿಧವಿಧವಾದ ಜೆನೆಟಿಕ್ ರೂಪಾಂತರ ಹೊಂದಿದ ಇ-ಕೋಲೈಗಳು ಈಗಾಗಲೇ ನಮಗೆ ಇನ್ಸುಲಿನ್, ಗ್ರೋಥ್ ಹಾರ್ಮೋನ್ ಮೊದಲಾದ ಜೀವರಕ್ಷಕ ಸಂಯುಕ್ತಗಳನ್ನು ಸೃಷ್ಟಿ ಮಾಡಿಕೊಡುತ್ತಿದೆ. ಪ್ರಪಂಚದ ಕೋಟ್ಯಾಂತರ ಮಧುಮೇಹಿಗಳು ಇ-ಕೋಲೈ ನೆರವಿನಿಂದ ತಮ್ಮ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವಂತಾಗಿದೆ.

ಕಳೆದ ವಾರವಷ್ಟೇ ಇಸ್ರೇಲಿನ ವೀಝ್ಮನ್ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ಸೀದಾ ಕಾರ್ಬನ್-ಡೈ-ಆಕ್ಸೈಡ್ ಭಕ್ಷಿಸುವ ಇ-ಕೋಲೈ ಪ್ರಬೇಧವನ್ನು ಸಫಲವಾಗಿ ಸೃಷ್ಟಿಸಿದ ಸುದ್ಧಿ ತಿಳಿಸಿದ್ದಾರೆ. ಇದೊಂದು ಮಹತ್ವದ ವೈಜ್ಞಾನಿಕ ಬೆಳವಣಿಗೆ. ಈ ಮಹತ್ವವನ್ನು ತಿಳಿಯಲು ಮೊದಲು ಕೆಲವು ಮೂಲಭೂತ ಅಂಶಗಳ ಕಡೆಗೆ ಗಮನ ನೀಡಬೇಕು.

ಜೀವಿಗಳಲ್ಲಿ ಎರಡು ಪ್ರಬೇಧ – ಮೊದಲನೆಯದು, ಆರ್ಗಾನಿಕ್ ಸಂಯುಕ್ತಗಳ ಜೊತೆ ಆಕ್ಸಿಜನ್ ಸೇವಿಸಿ ಕಾರ್ಬನ್-ಡೈ-ಆಕ್ಸೈಡ್ ಹೊರಹಾಕುವ ಜೀವಿಗಳು. ಮನುಷ್ಯನಿಂದ ಹಿಡಿದು ಸರಿಸುಮಾರು ಎಲ್ಲಾ ಪ್ರಾಣಿಗಳೂ ಹೀಗೆಯೇ ಮಾಡುತ್ತವೆ. ಎರಡನೆಯ ಪ್ರಬೇಧವೆಂದರೆ ವಾತಾವರಣದ ಕಾರ್ಬನ್-ಡೈ-ಆಕ್ಸೈಡ್ ಅನ್ನು ಹೀರಿಕೊಂಡು ಆರ್ಗಾನಿಕ್ ಸಂಯುಕ್ತಗಳನ್ನು ತಯಾರು ಮಾಡುವ ಜೀವಿಗಳು. ಬಹುತೇಕ ಮರಗಳು, ಹಲವಾರು ಬಗೆಯ ಪಾಚಿಗಳು, ನೀಲಿ-ಬ್ಯಾಕ್ಟೀರಿಯಾಗಳು ಈ ಕೆಲಸ ಮಾಡುತ್ತವೆ. ಈಗಂತೂ ನಮ್ಮ ಉದ್ಯಮೀಕರಣ, ಜೀವನಶೈಲಿ, ಕಾರ್ಖಾನೆಗಳ ಅಭಿವೃದ್ಧಿಯಿಂದ ಜಗತ್ತಿನ ವಾತಾವರಣಲ್ಲಿ ಕಾರ್ಬನ್-ಡೈ-ಆಕ್ಸೈಡ್ ಅಂಶ ಏರುತ್ತಲೇ ಇದೆ. ಹಸಿರು-ಮನೆ ಗಾಳಿಯಾದ ಇದು ವಾತಾವರಣದ ತಾಪಮಾನವನ್ನೂ, ವಾಯುಮಾಲಿನ್ಯವನ್ನೂ ಹೆಚ್ಚಿಸುತ್ತದೆ. ಮಾಲಿನ್ಯ ನಿಯಂತ್ರಣಗೊಳ್ಳಬೇಕು ಎಂದಾದರೆ ಒಂದೆಡೆ ಕಾರ್ಬನ್-ಡೈ-ಆಕ್ಸೈಡ್ ಉತ್ಪಾದನೆ ತಗ್ಗಿಸಬೇಕು; ಮತ್ತೊಂದೆಡೆ ನಿರಂತರವಾಗಿ ವಾತಾವರಣಕ್ಕೆ ಸೇರುತ್ತಲೇ ಇರುವ ಕಾರ್ಬನ್-ಡೈ-ಆಕ್ಸೈಡ್  ಅನ್ನು ಹೀರಿಕೊಳ್ಳುವ ವಿಧಾನಗಳನ್ನು ಹೆಚ್ಚಿಸಬೇಕು. ಅದಕ್ಕಾಗಿಯೇ, “ಮರಗಳನ್ನು ಬೆಳೆಸಬೇಕು; ಕಾಡುಗಳನ್ನು ಕಡಿಯಬಾರದು” ಎಂಬ ಕೋರಿಕೆ. ಕೆಲವು ಪಾಚಿಗಳು, ನೀಲಿ-ಬ್ಯಾಕ್ಟೀರಿಯಾಗಳು ಕೂಡ ಈ ಕೆಲಸ ಸ್ವಲ್ಪ ಮಟ್ಟಿಗೆ ಮಾಡಬಲ್ಲವಾದರೂ ಸಾಮಾನ್ಯ ವಾತಾವರಣದಲ್ಲಿ ಅವು ನಮ್ಮ ಇಚ್ಛೆಗೆ ತಕ್ಕಂತೆ ಬೆಳೆಯಲಾರವು.

ಹೀಗಿರುವಾಗ ವಿಜ್ಞಾನಿಗಳು ಸುಮ್ಮನೆ ಇರಲಾಗುತ್ತದೆಯೇ? ವಾತಾವರಣದಲ್ಲಿ ಕಾರ್ಬನ್-ಡೈ-ಆಕ್ಸೈಡ್ ಕಡಿಮೆ ಆಗುವ ಸೂಚನೆಗಳಂತೂ ಸದ್ಯದ ವೈಜ್ಞಾನಿಕ ಕ್ರಾಂತಿಯ, ಕೊಳ್ಳುಬಾಕ ಸಂಸ್ಕೃತಿಯ ಯುಗದಲ್ಲಿ ಇಲ್ಲ! ಹೀಗಾಗಿ ವಾತಾವರಣದ ಕಾರ್ಬನ್-ಡೈ-ಆಕ್ಸೈಡ್ ಅನ್ನು ಹೀರಿಕೊಳ್ಳಬಲ್ಲ ಬೇರೆ ಬೇರೆ ವಿಧಾನಗಳನ್ನು ಪತ್ತೆ ಮಾಡಲೇಬೇಕು. ಇದನ್ನು ಸಾಧಿಸಲು ವಿಜ್ಞಾನಿಗಳು ಮೊರೆ ಹೋದದ್ದು ತಮ್ಮ ಹಳೆಯ ಗೆಳೆಯ ಇ-ಕೋಲೈಗೆ. ಕ್ಷಿಪ್ರವಾಗಿ ಬೆಳೆಯುವ ಇ-ಕೋಲೈ ಒಂದು ವೇಳೆ ಕಾರ್ಬನ್-ಡೈ-ಆಕ್ಸೈಡ್ ಅನ್ನೇ ಆಹಾರವಾಗಿ ಉಣಲು ಆರಂಭಿಸಿದರೆ? ಆಗ ವಾತಾವರಣದ ಕಾರ್ಬನ್-ಡೈ-ಆಕ್ಸೈಡ್ ಪ್ರಮಾಣವೂ ಕಡಿಮೆ ಆಗುತ್ತದೆ; ಜೊತೆಗೆ ಇ-ಕೋಲೈ ತಾನು ನುಂಗಿದ ಕಾರ್ಬನ್-ಡೈ-ಆಕ್ಸೈಡ್ ನಿಂದ ಬೇರೆ ಉಪಯುಕ್ತ ಕಾರ್ಬಾನಿಕ್ ಸಂಯುಕ್ತವನ್ನೂ ತಯಾರಿಸುತ್ತದೆ ಎಂದು ವಿಜ್ಞಾನಿಗಳ ಲೆಕ್ಕಾಚಾರ. ಸುಮಾರು ಮೂರು ವರ್ಷಗಳ ಹಿಂದೆಯೇ ಇ-ಕೋಲೈಗೆ ಕಾರ್ಬನ್-ಡೈ-ಆಕ್ಸೈಡ್ ಉಣಿಸಿ ಸಕ್ಕರೆ ತಯಾರಿಸಲು ವಿಫಲ ಪ್ರಯತ್ನ ಮಾಡಿದ್ದ ವಿಜ್ಞಾನಿಗಳು ಈ ಬಾರಿ “ನಾವು ಸುಮ್ಮನೆ ಕಾರ್ಬನ್-ಡೈ-ಆಕ್ಸೈಡ್  ಉಣಿಸುತ್ತೇವೆ; ಅದನ್ನು ಹೇಗೆ ಬೇಕೋ ನಿಭಾಯಿಸು” ಎಂಬಂತೆ ಬ್ಯಾಕ್ಟೀರಿಯಾದ ಮನ ಒಲಿಸಿದರು!

ಇ-ಕೋಲೈಗೆ ಕಾರ್ಬನ್-ಡೈ-ಆಕ್ಸೈಡ್  ಉಣಿಸುವುದು ಸುಲಭದ ತುತ್ತೇನೂ ಆಗಿರಲಿಲ್ಲ! ನಾವು ಹೇಳಿದಂತೆಲ್ಲಾ ಕೇಳಲು ಇ-ಕೋಲೈ ನಮ್ಮ ಅಂಕೆಯಲ್ಲಿ ಇರುವ ಜೀವಿಯಲ್ಲ. ಅದು ಕೂಡ ನಮ್ಮಂತೆಯೇ ಸಕ್ಕರೆ ತಿಂದು ಕಾರ್ಬನ್-ಡೈ-ಆಕ್ಸೈಡ್ ಹೊರಹಾಕುವ ಪ್ರಬೇಧಕ್ಕೆ ಸೇರಿದ ಜೀವಿ. ಜೊತೆಗೆ, ಇ-ಕೋಲೈನಲ್ಲಿ ಕಾರ್ಬನ್-ಡೈ-ಆಕ್ಸೈಡ್ ಹೀರಿಕೊಲ್ಲಬಲ್ಲ ಯಾವ ನೈಸರ್ಗಿಕ ಶಕ್ತಿಯೂ ಇಲ್ಲ. ಅದಕ್ಕೇ ವಿಜ್ಞಾನಿಗಳು ಮೊದಲು ಜೆನೆಟಿಕ್ ತಂತ್ರಜ್ಞಾನದ ಮೂಲಕ ಎರಡು ಜೀನ್ ಗಳನ್ನು ಇ-ಕೋಲೈ ಒಳಗೆ ಸೇರಿಸಿದರು. ಈ ಜೀನ್ ಗಳು ಕಾರ್ಬನ್-ಡೈ-ಆಕ್ಸೈಡ್ ಅನ್ನು ಸಂಸ್ಕರಿಸಬಲ್ಲ ಕಿಣ್ವಗಳನ್ನು ಇ-ಕೋಲೈಗೆ ನೀಡಿದವು.

ಎರಡು ಹೆಚ್ಚಿನ ಕಿಣ್ವಗಳು ದೊರೆತ ಮಾತ್ರಕ್ಕೆ ಇ-ಕೋಲೈಯೇನೂ ಸರಾಗವಾಗಿ ಕಾರ್ಬನ್-ಡೈ-ಆಕ್ಸೈಡ್  ನುಂಗಲು ಆರಂಭಿಸಲಿಲ್ಲ. ವಿಜ್ಞಾನಿಗಳು ಈ ಹೊಸ ಜೀನ್ ಅಳವಡಿಸಿದ ಇ-ಕೋಲೈಗಳಿಗೆ ಅಲ್ಪಪ್ರಮಾಣದಲ್ಲಿ ಸಕ್ಕರೆಯನ್ನೂ ಉಣಿಸಿ, ಅದರ ಜೊತೆಗೆ ಕಾರ್ಬನ್-ಡೈ-ಆಕ್ಸೈಡ್ ಅನ್ನೂ ಸೇರಿಸುತ್ತಿದ್ದರು. ವಾತಾವರಣದಲ್ಲಿ ಸಾಮಾನ್ಯವಾಗಿ ಸಿಗುವ ಕಾರ್ಬನ್-ಡೈ-ಆಕ್ಸೈಡ್ ಪ್ರಮಾಣಕ್ಕಿಂತ ಸುಮಾರು 250 ಪಟ್ಟು ಹೆಚ್ಚು ಸಾಂದ್ರತೆಯಲ್ಲಿ ಕಾರ್ಬನ್-ಡೈ-ಆಕ್ಸೈಡ್ ಅನ್ನು ಇ-ಕೋಲೈಗೆ ನೀಡಿದಾಗ ಸ್ವಲ್ಪ ಬದಲಾವಣೆ ಕಂಡಿತು. ಅಂತಹ ಇ-ಕೋಲೈಗಳು ತಮ್ಮೊಳಗೇ ಮತ್ತಷ್ಟು ಜೆನೆಟಿಕ್ ವ್ಯತ್ಯಾಸಗಳನ್ನು ನಿರ್ಮಿಸಿಕೊಂಡು ಸ್ವಲ್ಪ ಸ್ವಲ್ಪವಾಗಿ ಕಾರ್ಬನ್-ಡೈ-ಆಕ್ಸೈಡ್  ಹೀರಿಕೊಳ್ಳಲು ಆರಂಭಿಸಿದವು. ಸುಮಾರು 200 ದಿನಗಳ ಸತತ ಪ್ರಯತ್ನದ ನಂತರ ಅವಕ್ಕೆ ನೀಡುತ್ತಿದ್ದ ಸಕ್ಕರೆ ಪ್ರಮಾಣವನ್ನು ಇಳಿಸುತ್ತಾ ಕೊನೆಗೆ ಸಂಪೂರ್ಣವಾಗಿ ನಿಲ್ಲಿಸಲಾಯಿತು. ಆ ಹಂತದಲ್ಲಿ ಕೇವಲ ಕಾರ್ಬನ್-ಡೈ-ಆಕ್ಸೈಡ್  ಮಾತ್ರ ಬಳಸಿಕೊಂಡು ಜೀವಿಸಬಲ್ಲ ಇ-ಕೋಲೈ ಪ್ರಬೇಧ ತಯಾರಾಯಿತು. ಅದನ್ನು ಇನ್ನೂ 300 ದಿನಗಳ ಕಾಲ ಪೋಷಿಸಿದ ಮೇಲೆ ಈ ವಿಶಿಷ್ಟ ಪ್ರಬೇಧದ ಇ-ಕೋಲೈಗಳು ನಿಧಾನವಾಗಿ ವಿದಳನಗೊಳ್ಳಲು ಆರಂಭಿಸಿದವು. ಅಂದರೆ, ಸುಮಾರು ಎರಡು ವರ್ಷಗಳ ಕಠಿಣ ಪ್ರಯತ್ನದ ನಂತರ ಕೇವಲ ಕಾರ್ಬನ್-ಡೈ-ಆಕ್ಸೈಡ್ ಅನ್ನು ನುಂಗಿ ಬೆಳೆಯಬಲ್ಲ ಇ-ಕೋಲೈ ಸೃಷ್ಟಿಸಲು ಸಾಧ್ಯವಾಯಿತು.

ಆದರೆ, ಕಾರ್ಬನ್-ಡೈ-ಆಕ್ಸೈಡ್ ತಿಂದು ಇವು ಇನ್ನೇನನ್ನು ಕೊಡುತ್ತವೆ? ವಿಜ್ಞಾನಿಗಳು ಚಕಿತರಾಗುವಂತೆ ಇವು ಕಾರ್ಬನ್-ಡೈ-ಆಕ್ಸೈಡ್ ಅನ್ನು ಜೀರ್ಣಿಸಿಕೊಂಡು ಮತ್ತೆ ಕಾರ್ಬನ್-ಡೈ-ಆಕ್ಸೈಡ್ ಅನ್ನೇ ಉತ್ಪತ್ತಿ ಮಾಡಿದವು! ಆದರೆ, ಅದರಿಂದ ನಿರಾಶರಾಗುವ ಅಗತ್ಯವಿಲ್ಲ. ಈ ಹಂತದಲ್ಲಿ ಇ-ಕೋಲೈಗಳಿಗೆ ಕಾರ್ಬನ್-ಡೈ-ಆಕ್ಸೈಡ್ ಅನ್ನು ಉಣಿಸಿದ್ದೇ ಬಹಳ ಮಹತ್ವದ ಸಾಧನೆ. ಹೀಗೆ ಜೀರ್ಣಿಸಿಕೊಂಡ ಕಾರ್ಬನ್-ಡೈ-ಆಕ್ಸೈಡ್ ನಿಂದ ನಿಧಾನವಾಗಿ ಬೇರೆ ಆರ್ಗಾನಿಕ್ ಸಂಯುಕ್ತವನ್ನು ತಯಾರಿಸಲು ಅವನ್ನು ಮಾರ್ಪಾಡು ಮಾಡಬಹುದು ಎಂಬ ಖಚಿತ ವಿಶ್ವಾಸ ವಿಜ್ಞಾನಿಗಳಿಗಿದೆ.

ಅಂದರೆ ಇನ್ನು ಮುಂದೆ ನಾವು ಕಾರ್ಬನ್-ಡೈ-ಆಕ್ಸೈಡ್ ಮಾಲಿನ್ಯದ ಬಗ್ಗೆ ತಲೆ ಕೆಡಿಸಿಕೊಳ್ಳದೇ ಸರಭರ ಕಾರುಗಳನ್ನು ಹತ್ತಿ ಹೊಗೆ ಉಗುಳಬಹುದೇ? ಆ ಮಾಲಿನ್ಯವನ್ನೆಲ್ಲಾ ಹೀರಿ ಇ-ಕೋಲೈಗಳು ಪಿಜ್ಜಾ ತಯಾರಿಸುತ್ತವೆಯೇ?! ಇನ್ನೂ ಇಲ್ಲ. ಈಗ ವಾತಾವರಣದಲ್ಲಿ ಇರುವ ಕಾರ್ಬನ್-ಡೈ-ಆಕ್ಸೈಡ್ ಪ್ರಮಾಣ ಶೇಕಡಾ 0.041 ಮಾತ್ರ. ಆದರೆ ವಿಜ್ಞಾನಿಗಳು ಈ ಪ್ರಯೋಗದಲ್ಲಿ ನೀಡಿದ್ದು ಶೇಕಡಾ 10 ಪ್ರಮಾಣದ ಕಾರ್ಬನ್-ಡೈ-ಆಕ್ಸೈಡ್. ಇದು ಸಾಮಾನ್ಯ ಮಟ್ಟಕ್ಕಿಂತ 250 ಪಟ್ಟು ಹೆಚ್ಚು. ಅಷ್ಟು ಮಟ್ಟದ ಕಾರ್ಬನ್-ಡೈ-ಆಕ್ಸೈಡ್ ವಾತಾವರಣದಲ್ಲಿ ಬರಲು ನೈಸರ್ಗಿಕವಾಗಿ ಸಾಧ್ಯವೇ ಇಲ್ಲ. ಅಷ್ಟೊಂದು ಹೆಚ್ಚಿನ ಸಾಂದ್ರತೆಯ ಕಾರ್ಬನ್-ಡೈ-ಆಕ್ಸೈಡ್ ನೀಡಿದರೂ ಈ ವಿಶಿಷ್ಟ ಪ್ರಬೇಧದ ಇ-ಕೋಲೈ ವಿದಳನ ಆಗುವುದಕ್ಕೆ 18 ಗಂಟೆ ಕಾಲ ತೆಗೆದುಕೊಳ್ಳುತ್ತಿದೆ. ಅಂದರೆ, ಸದ್ಯಕ್ಕೆ ಕಾರ್ಬನ್-ಡೈ-ಆಕ್ಸೈಡ್  ತಲೆನೋವನ್ನು ಇ-ಕೋಲೈ ಪಾಲಿಗೆ ವರ್ಗಾಯಿಸಲು ಸಾಧ್ಯವಿಲ್ಲ ಎಂದಾಯಿತು. ನಾವೇ ಮರ ಬೆಳೆಸಿ ನಮ್ಮನ್ನು ಕಾಪಾಡಿಕೊಳ್ಳಬೇಕು!

ಹೀಗೆ ಕಾರ್ಬನ್-ಡೈ-ಆಕ್ಸೈಡ್  ನುಂಗಿ ಬಾಳುವ ಇ-ಕೋಲೈ ತನ್ನೊಳಗೆ ಯಾವ್ಯಾವ ಜೆನೆಟಿಕ್ ಬದಲಾವಣೆ ಮಾಡಿಕೊಂಡಿದೆ ಎಂದು ವಿಜ್ಞಾನಿಗಳು ನೋಡಿದ್ದಾರೆ. ಅವರಿಗೆ ಒಟ್ಟು 11 ಬೇರೆ ಮಾದರಿಯ ಹೊಸ ಜೀನ್ ಗಳು ಗೋಚರವಾಗಿವೆ. ಈ ಜೀನ್ ಗಳನ್ನೇ ಕೀಲಿಯಾಗಿ ಹಿಡಿದು ಇಂತಹ ಇ-ಕೋಲೈಗಳನ್ನು ಮತ್ತೂ ಕಾರ್ಯಕುಶಲಿಯನ್ನಾಗಿ ಮಾಡುವ ಹುನ್ನಾರ ವಿಜ್ಞಾನಿಗಳದ್ದು.
ಆಕ್ಸಿಜನ್ ಮತ್ತು ಕಾರ್ಬಾನಿಕ್ ಸಂಯುಕ್ತ ನುಂಗಿ ಬದುಕುವ ಒಂದು ಜೀವಿಪ್ರಬೇಧವನ್ನು ಕಾರ್ಬನ್-ಡೈ-ಆಕ್ಸೈಡ್ ತಿಂದು ಬದುಕುವಂತೆ ಮಾಡಿದ ಈ ಪ್ರಯೋಗ ಜೀವವಿಜ್ಞಾನದ ಒಂದು ಮೈಲುಗಲ್ಲು. ಭವಿಷ್ಯದಲ್ಲಿ ಇವು ಗಾಳಿಯಲ್ಲಿನ ಕಾರ್ಬನ್-ಡೈ-ಆಕ್ಸೈಡ್ ನುಂಗಿ ಚಪಾತಿ-ಪಲ್ಯ ತಯಾರಿಸಿಕೊಟ್ಟರೆ ಮತ್ತಿನ್ನೇನು ಬೇಕು? ಬೆಚ್ಚನ ಮನೆ, ವೆಚ್ಚಕ್ಕೆ ಹೊನ್ನು, ಊಟಕ್ಕೆ ಇ-ಕೋಲೈ ಇಟ್ಟುಕೊಂಡು ಸರ್ವಜ್ಞ ಹೇಳುವಂತೆ ಸ್ವರ್ಗಕ್ಕೆ ಕಿಚ್ಚು ಹಚ್ಚಬಹುದು!


Published in Vishwavani Newspaper on 7/December/2019. Link:

http://epaper.vishwavani.news/bng/e/bng/07-12-2019/7

ಗುರುವಾರ, ನವೆಂಬರ್ 7, 2019








Vijayavani - 6/November/2019



ವೈದ್ಯಕೀಯ ಕ್ಷೇತ್ರದಲ್ಲಿ ಬ್ಲಾಕ್-ಚೈನ್ ತಂತ್ರಜ್ಞಾನದ ಪ್ರಯೋಜನಗಳು


ಭಾರತದಲ್ಲಿ ವೈದ್ಯಕೀಯ ಸೇವೆಗಳನ್ನು ಕಾಡುತ್ತಿರುವ ಸಮಸ್ಯೆಗಳು ಬಹಳಷ್ಟಿವೆ. ನಕಲಿ ವೈದ್ಯರಿಂದ ಹಿಡಿದು ನಕಲಿ ಔಷಧಗಳು, ನಕಲಿ ಇಂಪ್ಲಾಂಟ್ / ಸ್ಟೆಂಟ್ ಗಳು, ವೈದ್ಯಕೀಯ ವಿಮೆಗಳ ದುರುಪಯೋಗಗಳು, ಸರಕಾರೀ ಸವಲತ್ತುಗಳನ್ನು ಮೋಸದಿಂದ ಪಡೆಯುವ ವಂಚಕರು – ಹೀಗೆ ಹಲವಾರು ರೀತಿಗಳಲ್ಲಿ ನಮ್ಮ ಆರೋಗ್ಯ ಕ್ಷೇತ್ರ ಸೊರಗುತ್ತಿದೆ. ವ್ಯವಸ್ಥೆಯನ್ನು ಸುಧಾರಿಸಲು ದಶಕಗಳಿಂದ ಮಾಡಿರುವ ಯಾವ ಪ್ರಯತ್ನಗಳೂ ಈವರೆಗೆ ಹೆಚ್ಚು ಸಫಲವಾಗಿಲ್ಲ. ಈ ನಿಟ್ಟಿನಲ್ಲಿ ಬ್ಲಾಕ್-ಚೈನ್ ನಂತಹ ನವೀನ ತಂತ್ರಜ್ಞಾನದ ನೆರವು ಪರಿಸ್ಥಿತಿಯನ್ನು ಸುಧಾರಿಸಬಲ್ಲದು ಎಂದು ತಜ್ಞರ ಅಭಿಪ್ರಾಯ. 
ಬ್ಲಾಕ್-ಚೈನ್ ತಂತ್ರಜ್ಞಾನ ಎಂದರೇನು? ಬಿಟ್-ಕಾಯಿನ್ ಎಂಬ ಮಾಯಾವಿ ಹಣದ ಕಾರಣದಿಂದ ಬ್ಲಾಕ್-ಚೈನ್ ಜನಸಾಮಾನ್ಯರಲ್ಲೂ ಆಸಕ್ತಿ ಮೂಡಿದೆ. ಆದರೆ ಬ್ಲಾಕ್-ಚೈನ್ ಪ್ರಯೋಜನ ಕೇವಲ ಬಿಟ್-ಕಾಯಿನ್ ಗಷ್ಟೇ ಸೀಮಿತವಲ್ಲ; ವೈದ್ಯಕೀಯ ಕ್ಷೇತ್ರದಲ್ಲಿಯೂ ಇದೆ. ಸಾವಿರಾರು ರೂಪಾಯಿ ಬೆಲೆಯ ಅಸಲೀ ಔಷಧದ ತಲೆಯ ಮೇಲೆ ಹೊಡೆದಷ್ಟು ನಿಖರವಾಗಿ ನಕಲೀಮಾಲು ತಯಾರಿಸಬಲ್ಲ ಫಟಿಂಗರು ನಮ್ಮಲ್ಲಿದ್ದಾರೆ.  ಪ್ರಾಣಕ್ಕೇ ಎರವಾಗಬಲ್ಲದು ಇಂತಹ ನಕಲೀಮಾಲನ್ನು ನಿಷ್ಕೃಷ್ಟವಾಗಿ ಪತ್ತೆಮಾಡುವುದು ಹೇಗೆ? ಔಷಧದ ಪಟ್ಟಿಗಳ ಮೇಲೆ ಬ್ಯಾಚ್-ಸಂಖ್ಯೆ ಇರುತ್ತದ್ದಾದರೂ ಅದರಿಂದ ಗ್ರಾಹಕನಿಗೆ ಹೆಚ್ಚೇನೂ ತಿಳಿಯಲಾಗದು. ಜೊತೆಗೆ ನಕಲೀಮಾಲು ತಯಾರಕರು ಅದೇ ಬ್ಯಾಚ್-ಸಂಖ್ಯೆಯನ್ನು ನಮೂದಿಸಿದರೆ ಮುಗಿದೇಹೋಯಿತು. ಇದೇ ರೀತಿಯ ಸಮಸ್ಯೆಗಳು ರೋಗಿಯ ದೇಹದಲ್ಲಿ ಅಳವಡಿಸುವ ಸ್ಟೆಂಟ್ಗಳು, ಇಂಪ್ಲಾಂಟ್ಗಳ ವಿಷಯದಲ್ಲೂ ಆಗುತ್ತವೆ. ಶತಮಾನಗಳಿಂದ ರೋಗಿ-ವೈದ್ಯರ ಸಂಬಂಧ ಕೇವಲ ನಂಬಿಕೆಯ ಮೇಲೆ ನಡೆಯುತ್ತಿತ್ತು. ಆದರೆ ಪ್ರಸ್ತುತ ವಾಣಿಜ್ಯ-ಯುಗದಲ್ಲಿ ನಂಬಿಕೆಯ ಜೊತೆ ಎಲ್ಲರಿಗೂ ಒಪ್ಪಿಗೆಯಾಗುವಂತಹ ಋಜುವಾತು ನೀಡುವುದು ಹೇಗೆ?
ಔಷಧದ ತಯಾರಿಯಲ್ಲಿ ಇರುವ ವಿಭಾಗಗಳೇನು? ಔಷಧಕಾರ್ಖಾನೆಗೆ ಬರುವ ಕಚ್ಚಾವಸ್ತು ಶುದ್ಧೀಕರಣಗೊಂಡು ಸರಿಯಾದ ಪ್ರಮಾಣದಲ್ಲಿ ಮಿಶ್ರವಾಗಬೇಕು. ಆ ಮಿಶ್ರಣ ಗುಣಮಟ್ಟದ ಪರೀಕ್ಷೆಯಲ್ಲಿ ತೇರ್ಗಡೆಯಾದ ಮೇಲೆ ಔಷಧ ಹೆಚ್ಚಿನ ಪ್ರಮಾಣದಲ್ಲಿ ತಯಾರಾಗಿ ಪ್ಯಾಕಿಂಗ್ ಆದ ಮೇಲೆ ಮತ್ತೊಮ್ಮೆ ಲಾಟರಿ ಮಾದರಿಯಲ್ಲಿ ಯಾವುದಾದರೊಂದು ಡಬ್ಬಿ ಔಷಧವನ್ನು ತೆಗೆದು ಪುನಃ ಗುಣಮಟ್ಟ ಪರೀಕ್ಷೆ ಮಾಡಿ ತೇರ್ಗಡೆಯಾದ ಘಟಕವನ್ನು ಮಾತ್ರ ಸಗಟು ಮಾರಾಟಗಾರರಿಗೆ ಕಳಿಸಬೇಕು. ಅಲ್ಲಿಂದ ಚಿಲ್ಲರೆ ಮಾರಾಟಗಾರರ ಮೂಲಕ ರೋಗಿಯನ್ನು ತಲುಪಬೇಕು. ಇಷ್ಟೂ ಪ್ರಕ್ರಿಯೆ ಆಯಾ ಹಂತದ ಕಂಪ್ಯೂಟರ್ಗಳಲ್ಲಿ ದಾಖಲಾಗಬೇಕು. ಜೊತೆಗೆ ಈ ಸಮಗ್ರ ಸರಣಿ ಔಷಧ ಕಾರ್ಖಾನೆಯ ಕೇಂದ್ರೀಯ ಸರ್ವರ್ ನಲ್ಲಿ ನಮೂದಾಗಬೇಕು.
ಈ ಪ್ರಕ್ರಿಯೆಯಲ್ಲಿ ಸಾಕಷ್ಟು ದುರ್ಬಲಕೊಂಡಿಗಳಿವೆ. ಔಷಧಕಾರ್ಖಾನೆಯಿಂದ ಹಿಡಿದು ಚಿಲ್ಲರೆ ಮಾರಾಟಗಾರರ ಕಪಾಟಿನವರೆಗೆ ಯಾವುದೇ ಹಂತದಲ್ಲಾದರೂ ನಕಲಿ ಔಷಧ ಸ್ಥಳಾಂತರಗೊಳ್ಳುವುದು ಸುಲಭ. ಕಾರ್ಖಾನೆಯ ಕೇಂದ್ರೀಯ ಸರ್ವರ್ ನಲ್ಲಿ ಕಂಪ್ಯೂಟರ್ ಪ್ರವೀಣರು ಪ್ರವೇಶಿಸಿ ಮಾಹಿತಿಯನ್ನು ಏರು-ಪೇರು ಮಾಡಿದರೆ ಇಡೀ ಘಟಕದ ಔಷಧಿ ಪರಿಷ್ಕರಿಸಲಾಗದಂತೆ ವ್ಯರ್ಥವಾಗುತ್ತದೆ. ಒಟ್ಟಾರೆ, ನಮ್ಮ ಆರೋಗ್ಯಕ್ಕೆ, ಹಣಕ್ಕೆ ಖೋತಾ ಆಗುವ ಸಾಕಷ್ಟು ಸಾಧ್ಯತೆಗಳು ಇಂದಿನ ವ್ಯವಸ್ಥೆಯಲ್ಲಿವೆ. ಇದನ್ನು ಮೀರಬಹುದಾದ ವ್ಯವಸ್ಥೆ ಎಂದರೆ ಬ್ಲಾಕ್-ಚೈನ್ ತಂತ್ರಜ್ಞಾನ. ಇದರಲ್ಲಿ ಕೇಂದ್ರೀಯ ಸರ್ವರ್ ಅಗತ್ಯವಿಲ್ಲ. ಒಮ್ಮೆ ಒಂದು ವ್ಯವಹಾರ ಮಾಡಿದರೆ ಅದು ಸಾವಿರಾರು ಕಂಪ್ಯೂಟರ್ ಗಳಲ್ಲಿ ಏಕಕಾಲಕ್ಕೆ ನಮೂದಾಗುತ್ತದೆ. ಈ ವ್ಯವಹಾರವನ್ನು ಆ ಎಲ್ಲಾ ಕಂಪ್ಯೂಟರ್ ಗಳೂ ಒಂದು ಘಟಕ(block)ದಂತೆ ನಮೂದು ಮಾಡುತ್ತವೆ. ವ್ಯವಹಾರ ಮಾಡಿದವರ ಗೌಪ್ಯತೆಯ ಸಲುವಾಗಿ ಒಂದು ಖಾಸಗೀ ಕೀಲಿ-ಕೈನಂತಹ ಪಾಸ್ವರ್ಡ್ ಅನ್ನು ಅವರಿಗೆ ನೀಡಲಾಗುತ್ತದೆ. ಈ ಕೀಲಿ-ಕೈ ಇಲ್ಲದೆ ವ್ಯವಹಾರವನ್ನು ಮುಂದುವರಿಸುವುದು ಸಾಧ್ಯವಾಗುವುದಿಲ್ಲ. ವ್ಯವಹಾರದ ಪ್ರತಿಯೊಂದು ಭಾಗವೂ ಒಂದೊಂದು ಘಟಕ(block)ದಂತೆ ನಮೂದಾಗುತ್ತಾ ಹಿಂದಿನ ವ್ಯವಹಾರ ತನ್ನ ಮುಂದಿನ ವ್ಯವಹಾರಕ್ಕೆ ಸರಪಣಿ(chain)ಯಂತೆ ಜೋಡಿಸಿಕೊಳ್ಳುತ್ತದೆ. ಅಂದರೆ, ಕಾರ್ಖಾನೆಯಲ್ಲಿ ತಯಾರಾಗುವ ಔಷಧದ ಕಚ್ಚಾವಸ್ತು ಸರಬರಾಜಾದದ್ದು ಒಂದು ಘಟಕ; ಅದು ಕಾರ್ಖಾನೆಯಲ್ಲಿ ಔಷಧ ಆದದ್ದು ಇನ್ನೊಂದು ಘಟಕ; ಆ ಔಷಧ ಪ್ಯಾಕ್ ಆದದ್ದು ಮುಂದಿನ ಘಟಕ; ಪ್ಯಾಕ್ ಆದ ಔಷಧ ಸಾಗಣೆ ಆದದ್ದು ಮುಂದಿನ ಘಟಕ; ಅದು ಸಗಟು ಮಾರಾಟಗಾರರನ್ನು ತಲುಪಿದ್ದು ಮುಂದಿನ ಘಟಕ; ಅಲ್ಲಿಂದ ಚಿಲ್ಲರೆ ಮಾರಾಟಗಾರರನ್ನು ತಲುಪುವುದು ಮತ್ತೊಂದು ಘಟಕ; ಅದು ಕಡೆಗೆ ರೋಗಿಯನ್ನು ತಲುಪುವುದು ಅಂತಿಮ ಘಟಕ. ಯಾವುದೊಂದು ಘಟಕವನ್ನೂ ಮುಂದುವರಿಸಬಹುದೇ ವಿನಾ ಹಿಂದಿನ ಘಟಕವನ್ನು ಮಾರ್ಪಾಡು ಮಾಡುವುದು ಸಾಧ್ಯವಿಲ್ಲ. ಒಂದುವೇಳೆ ಯಾವುದೇ ಕಂಪ್ಯೂಟರ್ನಲ್ಲಿ ಯಾರಾದರೂ ಯಾವುದೇ ಘಟಕದ ಪರಿಭಾಷೆಯನ್ನು ಬದಲಾಯಿಸಿದರೂ ಮಿಕ್ಕೆಲ್ಲಾ  ಕಂಪ್ಯೂಟರ್ಗಳೂ ಅದನ್ನು ಪ್ರಶ್ನಿಸಿ ಇಡೀ ಸರಪಳಿ ಮುರಿದುಬೀಳುತ್ತದೆ. ಘಟಕದ ಸರಪಳಿ ಭಿನ್ನವಾಗಿಲ್ಲ ಎಂದರೆ ಔಷಧಕಾರ್ಖಾನೆಯಲ್ಲಿ ಗುಣಮಟ್ಟ ಪರೀಕ್ಷೆಯಾಗಿ ಬಂದ ನೈಜ ಔಷಧವೇ ರೋಗಿಯನ್ನು ತಲುಪಿದೆ ಎಂದು ಖಾತ್ರಿ. ಇದೇ ರೀತಿ ಇಂಪ್ಲಾಂಟ್ ಗಳು, ಸ್ಟೆಂಟ್ ಗಳ ನೈಜತೆಯನ್ನೂ ಖಾತ್ರಿಪಡಿಸಬಹುದು.
ವೈದ್ಯಕೀಯ ಕ್ಷೇತ್ರದಲ್ಲಿ ಬ್ಲಾಕ್-ಚೈನ್ ತಂತ್ರಜ್ಞಾನದ ಕೆಲವು ಪ್ರಯೋಜನಗಳು:
೧. ರೋಗಿಗಳ ಆರೋಗ್ಯ ಸ್ಥಿತಿಗತಿಯ ವಿವರಗಳು: ಆಸ್ಪತ್ರೆಗೆ ದಾಖಲಾದ ರೋಗಿಯ ಸಮಗ್ರ ವಿವರಗಳು ಆಸ್ಪತ್ರೆಯ ವೈದ್ಯಕೀಯ ದಾಖಲೆಗಳ ವಿಭಾಗದಲ್ಲಿ ಶೇಖರಣೆಯಾಗಿರುತ್ತವೆ. ಅದರಲ್ಲಿನ ಪ್ರಮುಖ ಮಾಹಿತಿಯನ್ನು ಮಾತ್ರ ರೋಗಿಗೆ ಆಸ್ಪತ್ರೆಯಿಂದ ಬಿಡುಗಡೆಯಾಗುವ ವೇಳೆಯಲ್ಲಿ ನೀಡಲಾಗುತ್ತದೆ. ಒಂದು ವೇಳೆ ಅದೇ ರೋಗಿ ಬೇರೊಂದು ಆಸ್ಪತ್ರೆಯಲ್ಲೋ ಅಥವಾ ಬೇರೆ ನಗರದ/ದೇಶದ ಆಸ್ಪತ್ರೆಯಲ್ಲೋ ದಾಖಲಾದಾಗ ಈ ಮಹತ್ವದ ಮಾಹಿತಿಗಳನ್ನು ಪಡೆದುಕೊಳ್ಳುವುದು ಕಷ್ಟವಾಗುತ್ತದೆ. ಕೆಲವೊಮ್ಮೆ ವೈದ್ಯಕೀಯ ವಿಮೆಯ ಕಾರಣಕ್ಕೆ ವಿವರಗಳಲ್ಲಿ ಮೋಸ ನುಸುಳುವುದೂ ಕಂಡುಬರುತ್ತದೆ. ಮತ್ತೂ ಹಲವೊಮ್ಮೆ, ರೋಗಿಯ ಅನುಮತಿ ಇಲ್ಲದೆ ಇಂತಹ ಮಾಹಿತಿ ಸೋರಿಹೋಗುವ ಸಂಭವನೀಯತೆ ಕೂಡ ಇರಬಹುದು. ಬ್ಲಾಕ್-ಚೈನ್ ತಂತ್ರಜ್ಞಾನದ ಅಳವಡಿಕೆಯಿಂದ ಇಂತಹ ಎಲ್ಲಾ ಸಂಭವನೀಯತೆಗಳನ್ನೂ ನಿಯಂತ್ರಿಸಬಹುದು. ಒಂದು ಆಸ್ಪತ್ರೆಯಿಂದ ಜಗತ್ತಿನ ಯಾವುದೇ ಮೂಲೆಯಲ್ಲಿರುವ ಇನ್ನೊಂದು ಆಸ್ಪತ್ರೆಗೆ ರೋಗಿಯ ಆರೋಗ್ಯದ ಎಲ್ಲಾ ಮಹತ್ವದ ದಾಖಲೆಗಳನ್ನೂ ಆರಂಭದಿಂದ ಹಿಡಿದು ಇತ್ತೀಚಿನ ಬೆಳವಣಿಗೆಗಳವರೆಗೆ ಕ್ಷಣಾರ್ಧದಲ್ಲಿ ಪಡೆಯಬಹುದು. ಆರೋಗ್ಯ ವಿಮೆಯ ಕಂಪನಿಗಳಿಗೆ ರೋಗಿಯ ನೈಜ, ನಿಷ್ಕೃಷ್ಟ ಮಾಹಿತಿ ಲಭಿಸಿದಾಗ ವಿಮೆಯ ಪ್ರಕ್ರಿಯೆಗೆ ವೇಗ ದೊರೆತು ಇಡೀ ಪ್ರಕ್ರಿಯೆ ಸರಾಗವಾಗುತ್ತದೆ. ಒಟ್ಟಾರೆ, ರೋಗಿಯ ಆರೋಗ್ಯ ಸ್ಥಿತಿಗತಿಯ ನೈಜವಿವರಗಳ ವರ್ಗಾವಣೆಗೆ ಸದ್ಯದ ಪರಿಸ್ಥಿತಿಯಲ್ಲಿ ಆಗುತ್ತಿರುವ ತೊಡಕುಗಳನ್ನೆಲ್ಲಾ ಬ್ಲಾಕ್-ಚೈನ್ ನೆರವಿನಿಂದ ಪರಿಹರಿಸಬಹುದಾಗಿದೆ. ಈ ರೀತಿಯ ಯೋಜನೆಗಳಿಗೆ ವೈದ್ಯಕೀಯ ರಂಗದಲ್ಲಿ ಹೆಚ್ಚು ಸಂಶೋಧನೆಯಾಗುತ್ತಿದೆ.
೨. ಮಾಹಿತಿ ಭದ್ರತೆ: ರೋಗಿಗಳ ಆರೋಗ್ಯ ಮಾಹಿತಿಯಲ್ಲಿ ಅನಪೇಕ್ಷಿತ ವಿವರಗಳನ್ನು ಕದ್ದುಮುಚ್ಚಿ ಸೇರಿಸುವ ಹಲವಾರು ಮೊಕದ್ದಮೆಗಳು ವಿಶ್ವದಾದ್ಯಂತ ನಡೆಯುತ್ತವೆ. ರೋಗಿಯ ಆರೋಗ್ಯ ವಿವರಗಳನ್ನು ಆಸ್ಪತ್ರೆಗಳು ವಿದ್ಯುನ್ಮಾನ ಪದ್ದತಿಯಲ್ಲಿ ಶೇಖರಿಸಿ ಇಡುತ್ತಾರಾದರೂ, ಆ ವಿವರಗಳನ್ನು ಆಸ್ಪತ್ರೆಯ ಸಿಬ್ಬಂದಿಯೇ ಬದಲಾಯಿಸಬಹುದಾದ ಸಾಧ್ಯತೆ ಇದ್ದೇ ಇರುತ್ತದೆ. ಬ್ಲಾಕ್-ಚೈನ್ ಬಳಕೆಯಲ್ಲಿ ರೋಗಿಯ ಬಳಿ ತನ್ನ ಮಾಹಿತಿ ಭದ್ರತೆಗೆ ಬೇಕಾದ ಕೀಲಿ-ಕೈ ಇರುತ್ತದೆ. ಅದಿಲ್ಲದೆ ಯಾವ ಮಾಹಿತಿಯನ್ನೂ ಸೇರಿಸಲಾಗದು. ಈ ರೀತಿ ಸುಳ್ಳು ಮಾಹಿತಿ ಸೇರ್ಪಡೆಗೆ ಇತಿಶ್ರೀ ಹಾಡಬಹುದು.
೩.  ಆರೋಗ್ಯವಿಮೆ ಕಂಪೆನಿಗಳಿಂದ ವಿಮೆಯ ಹಣ ವಸೂಲು ಮಾಡುವುದು ಆಸ್ಪತ್ರೆಗಳಿಗಾಗಲೀ, ರೋಗಿಗಳಿಗಾಗಲೀ ಒಂದು ಸವಾಲೇ ಸರಿ! ವಿಮಾ ಕಂಪೆನಿಗಳ ದೃಷ್ಟಿಯಿಂದ ನೋಡಿದರೆ, ಆರೋಗ್ಯವಿಮೆಯ ಮೋಸದ ಪ್ರಕರಣಗಳನ್ನು ತಡೆಯುವ ಆವಶ್ಯಕತೆ ಅವುಗಳಿಗೆ ಬಹಳ ಹೆಚ್ಚು. ಹೀಗೆ ಒಂದೆಡೆ ವಿಮಾಕಂಪೆನಿಗಳಿಗೆ ನಂಬಿಕೆಯ ಪ್ರಶ್ನೆ; ಆಸ್ಪತ್ರೆಗಳಿಗೆ ಮತ್ತು ರೋಗಿಗಳಿಗೆ ತಮ್ಮ ಸಾಚಾತನವನ್ನು ಸಾಬೀತುಪಡಿಸುವ ಪೀಡನೆ! ಬ್ಲಾಕ್-ಚೈನ್ ಬಳಕೆಯಿಂದ ಈ ಇಡೀ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಿರ್ವಹಿಸಬಹುದು. ಜೊತೆಗೆ ತನ್ನ ಪ್ರತಿಯೊಂದು ನಡೆಯೂ ದಾಖಲಾಗಿ, ಪ್ರಕರಣದ ಸರಣಿಗೆ ಪುನಃ ಮಾರ್ಪಾಡು ಮಾಡಲು ಆಸ್ಪದ ನೀಡದಂತೆ ಸೇರ್ಪಡೆಯಾಗುತ್ತದೆ ಎಂಬ ಸಂಗತಿ ವೈದ್ಯರಿಗೆ ತಿಳಿದಿರುವುದರಿಂದ ಅವರು ತಪ್ಪುಗಳಿಗೆ ಅವಕಾಶ ನೀಡದಂತೆ ನಾಜೂಕಾಗಿ ಕೆಲಸ ಮಾಡಬೇಕಾಗುತ್ತದೆ. ಇದರಿಂದ ಚಿಕಿತ್ಸೆಯ ಗುಣಮಟ್ಟ ತಾನೇತಾನಾಗಿ ಏರುತ್ತದೆ.
೪. ಆರೋಗ್ಯದ ಬಗ್ಗೆ ಸುಳ್ಳುಮಾಹಿತಿ ನೀಡುವವರು, ಆದಾಯದ ಬಗ್ಗೆ ತಪ್ಪುಮಾಹಿತಿ ನೀಡಿ ಬಡವರಿಗೆಂದು ಮಾಡಿರುವ ಆರೋಗ್ಯ ಯೋಜನೆಗಳ ದುರ್ಲಾಭ ಪಡೆಯುವವರು, ಬೇರೊಬ್ಬರ ಹೆಸರಿನಲ್ಲಿ ದಾಖಲಾಗಿ ತಮ್ಮ ಚಿಕಿತ್ಸೆಗೆ ಅವರ ವಿಮೆಯನ್ನು ಮೋಸದಿಂದ ಪಡೆಯುವವರು – ಹೀಗೆ ನಮ್ಮಂತಹ ದೇಶಗಳಲ್ಲಿ ಆರೋಗ್ಯ ವ್ಯವಸ್ಥೆಯನ್ನು ವಂಚಿಸುವವರಿಗೆ ಕೊರತೆಯೇ ಇಲ್ಲ. ಪ್ರಸ್ತುತ ಪರಿಸ್ಥಿತಿಯಲ್ಲಿ ಇಂತಹವರನ್ನು ನಿರ್ದಿಷ್ಟವಾಗಿ ಪತ್ತೆ ಮಾಡಲೂ ವ್ಯವಸ್ಥೆಗೆ ಸಾಧ್ಯವಿಲ್ಲ. ಅದರಲ್ಲೂ ಆಸ್ಪತ್ರೆ ಸಿಬ್ಬಂದಿಯ ಜೊತೆ ಷಾರೀಕಾಗಿ ಮೋಸ ಎಸಗುವವರನ್ನು ಪತ್ತೆ ಮಾಡುವುದು ತೀರಾ ಕಷ್ಟದ ವಿಷಯ. ಬ್ಲಾಕ್-ಚೈನ್ ನೆರವಿನಿಂದ ಇಂತಹ ಮೋಸಗಳನ್ನು ಚಿಗುರಿನಲ್ಲೇ ಚಿವುಟಬಹುದು. ರೋಗಿಯ ಆರೋಗ್ಯ ವಿವರಗಳನ್ನು ಅವರ ಅಧಿಕೃತ ಸರಕಾರೀ ದಾಖಲೆಗಳೊಡನೆ ಪರಿಶೀಲಿಸಿದರೆ ಕೆಲವೇ ನಿಮಿಷಗಳಲ್ಲಿ ಇಂತಹ ಮೋಸದ ದಾಖಲೆ ಹೊಂದಿರುವ ರೋಗಿಯ ನೈಜತೆ ಬಯಲಾಗುತ್ತದೆ. ಅಷ್ಟೇ ಅಲ್ಲದೇ, ವೈದ್ಯರ ವಿಷಯದಲ್ಲೂ ಈ ತಂತ್ರಜ್ಞಾನ ಸಹಾಯಕಾರಿ. ಖೊಟ್ಟಿ ವೈದ್ಯರ ಹಾವಳಿ ಹೆಚ್ಚಾಗಿರುವ ನಮ್ಮಂತಹ ದೇಶಗಳಲ್ಲಿ ಆಸ್ಪತ್ರೆಗಳ ನಿರ್ವಾಹಕರಿಗೆ ಮತ್ತು ಖುದ್ದು ರೋಗಿಗಳಿಗೆ ಅವರನ್ನು ಚಿಕಿತ್ಸೆ ಮಾಡುವ ವೈದ್ಯರ ವಿದ್ಯಾರ್ಹತೆಯ ಪ್ರತಿಯೊಂದೂ ನೈಜವಿವರ ತಿಳಿಯುತ್ತದೆ. ಹೀಗೆ ಜೊಳ್ಳಿನಿಂದ ಕಾಳನ್ನು ಬೇರ್ಪಡಿಸಲು ಬ್ಲಾಕ್-ಚೈನ್ ತಂತ್ರಜ್ಞಾನ ಮಹತ್ವದ ಪಾತ್ರ ನಿರ್ವಹಿಸಬಲ್ಲದು.
೫. ವೈದ್ಯಕೀಯ ಕ್ಷೇತ್ರದಲ್ಲಿ ಸಂಶೋಧನೆಗಳ ಮಹತ್ವ ಬಹಳ ಹೆಚ್ಚು. ಹೊಸ ಔಷಧಗಳ ತಯಾರಿಯಲ್ಲಿ, ರೋಗ ಪತ್ತೆ ಮಾಡುವ ನವೀನ ವಿಧಾನಗಳ ಆವಿಷ್ಕಾರದಲ್ಲಿ, ಅಪರೂಪದ ರೋಗಗಳ ಬಗ್ಗೆ ಹೆಚ್ಚು ತಿಳಿಯುವಲ್ಲಿ – ಹೀಗೆ ಹಲವಾರು ಎಡೆಗಳಲ್ಲಿ ಸಂಶೋಧನೆ ನಡೆಯುತ್ತಲೇ ಇರುತ್ತದೆ. ಸದ್ಯಕ್ಕೆ ಇಂತಹ ಸಂಶೋಧನೆ ಒಂದು ಆಸ್ಪತ್ರೆಯಲ್ಲೋ ಅಥವಾ ಹೆಚ್ಚೆಂದರೆ ಹತ್ತಾರು ಆಸ್ಪತ್ರೆಗಳ ನಡುವೆ ನಡೆಯುವ ಒಪ್ಪಂದದ ಮೇರೆಗೋ ನಡೆಯುತ್ತಿವೆ. ಇಂತಹ ಸಂದರ್ಭಗಳಲ್ಲಿ ರೋಗಿಗಳ ಒಟ್ಟಾರೆ ಸಂಖ್ಯೆ ಸೀಮಿತವಾಗಿರುತ್ತದೆ. ಬ್ಲಾಕ್-ಚೈನ್ ತಂತ್ರಜ್ಞಾನದ ವಿಶಾಲ ಅಳವಡಿಕೆಯಿಂದ ಮಾಹಿತಿ ಕ್ರೋಢಿಕರಣ ಸರಾಗವಾಗಿ ಪ್ರತಿಯೊಂದು ಸಂಶೋಧನೆಗೂ ಸಾಕಷ್ಟು ಸಂಖ್ಯೆಯ ರೋಗಿಗಳು ಲಭಿಸುವಂತಾಗುತ್ತದೆ. ಇದರಿಂದ ವೈದ್ಯಕೀಯ ಸಂಶೋಧನೆಗಳಲ್ಲಿ ಒಂದು ಉತ್ಕ್ರಾಂತಿಯೇ ಆಗುವ ಸಾಧ್ಯತೆ ಇದೆ.
ಹಾಗೆಂದ ಮಾತ್ರಕ್ಕೆ ಬ್ಲಾಕ್-ಚೈನ್ ತಂತ್ರಜ್ಞಾನ ಆರೋಗ್ಯಕ್ಷೇತ್ರದ ಎಲ್ಲಾ ಸಮಸ್ಯೆಗಳಿಗೂ ಪರಿಹಾರವೇನಲ್ಲ! ಎಲ್ಲಾ ಖಾಸಗೀ ಮಾಹಿತಿ ಎಲ್ಲರಿಗೂ ಮುಕ್ತವಾಗಿ ದೊರೆಯುವುದು ಉತ್ತಮ ಬೆಳವಣಿಗೆಯಲ್ಲ! ಒಂದು ಸರಣಿ ಪ್ರಕ್ರಿಯೆಯಲ್ಲಿ ಪ್ರತಿಯೊಂದೂ ಮಾಹಿತಿಯನ್ನೂ ಬದಲಾಯಿಸಲು ಆಸ್ಪದವಿಲ್ಲದಂತೆ ನಮೂದಿಸಲು ಬ್ಲಾಕ್-ಚೈನ್ ತಂತ್ರಜ್ಞಾನ ಸಹಕಾರಿ. ರೋಗಿಯ ಬಳಿ ಇರುವ ಖಾಸಗೀ ಕೀಲಿ-ಕೈನಿಂದ ಮಾಹಿತಿ ಪಡೆಯಲು ಸಾಧ್ಯ. ಅಂತಹ ರೋಗಿ ವೃದ್ಧರೋ, ಆಶಕ್ತರೋ, ತಂತ್ರಜ್ಞಾನದ ಬಗ್ಗೆ ಅರಿವಿಲ್ಲದವರೋ ಆದರೆ ಖಾಸಗೀ ಕೀಲಿ-ಕೈ ಅವರಿಗೆ ಅಪಾಯಕಾರಿಯಾಗಬಹುದು. ಜೊತೆಗೆ, ಬ್ಲಾಕ್-ಚೈನ್ ತಂತ್ರಜ್ಞಾನದ ಸೇರ್ಪಡೆಗೆ ಮತ್ತು ನಿರ್ವಹಣೆಗೆ ಆಗುವ ವೆಚ್ಚಗಳನ್ನು ಸಣ್ಣ ಖಾಸಗೀ ಆಸ್ಪತ್ರೆಗಳು ನಿರ್ವಹಿಸಲು ಸಾಧ್ಯವಾಗದೇ ಇರಬಹುದು. ಬ್ಲಾಕ್-ಚೈನ್ ತಂತ್ರಜ್ಞಾನದ ನಿರ್ವಹಣೆಗೆ ಬೇಕಾದ ಉತ್ಕೃಷ್ಟ ಕಂಪ್ಯೂಟರ್ ಸೌಲಭ್ಯ, ಅದನ್ನು ಕಾಲಕಾಲಕ್ಕೂ ಮಾರ್ಪಾಡು ಮಾಡಿ ಮೇಲ್ಸ್ತರಕ್ಕೆ ಏರಿಸಬೇಕಾದ ಅವಶ್ಯಕತೆ – ಇವುಗಳಿಗೆ ತಗಲುವ ದುಬಾರಿವೆಚ್ಚವನ್ನು ಆಸ್ಪತ್ರೆಗಳು ರೋಗಿಗಳಿಂದಲೇ ವಸೂಲು ಮಾಡಬೇಕು. ಇದರಿಂದ ಚಿಕಿತ್ಸೆಯ ವೆಚ್ಚ ಸಾಕಷ್ಟು ಹೆಚ್ಚಬಹುದು. ಇಷ್ಟೇ ಅಲ್ಲದೇ, ಬ್ಲಾಕ್-ಚೈನ್ ತಂತ್ರಜ್ಞಾನದ ಅಳವಡಿಕೆಯಿಂದ ಸಂಗ್ರಹಣೆಯಾಗುವ ಅಪಾರ ಮಾಹಿತಿಯನ್ನು ಕೇವಲ ಸಂಶೋಧನೆಗೆ ಮಾತ್ರವೇ ಬಳಸದೇ, ಅದನ್ನು ಮಾಹಿತಿ-ಮಾರಾಟಕ್ಕೋ, ದುಷ್ಕರ್ಮಿಗಳ ಒಡೆತನಕ್ಕೋ ದಕ್ಕುವಂತಾದರೆ ದೊಡ್ಡದಾದ ಅನೂಹ್ಯ ಅಪಾಯ ತಪ್ಪಿದ್ದಲ್ಲ.
ಒಟ್ಟಿನಲ್ಲಿ ಪ್ರಸ್ತುತ ಪರಿಸ್ಥಿತಿಯಲ್ಲೂ ನಮಗೆ ಬೇಕಾದ್ದು ಎಲ್ಲರಿಗೂ ಒಪ್ಪಿಗೆಯಾಗಬಲ್ಲ “ಸುವರ್ಣ-ಮಧ್ಯಮ-ಮಾರ್ಗ”. ಬ್ಲಾಕ್-ಚೈನ್ ತಂತ್ರಜ್ಞಾನವನ್ನು ಬಳಸಿದ ನಂತರವೂ ಕೂಡ ಬೇಕಾದ್ದು ಅದೇ ಮಾರ್ಗ! 

(Vishwavani - 29/10/2019)
-----------------