ಗುರುವಾರ, ನವೆಂಬರ್ 7, 2019


ವೈದ್ಯಕೀಯ ಕ್ಷೇತ್ರದಲ್ಲಿ ಬ್ಲಾಕ್-ಚೈನ್ ತಂತ್ರಜ್ಞಾನದ ಪ್ರಯೋಜನಗಳು


ಭಾರತದಲ್ಲಿ ವೈದ್ಯಕೀಯ ಸೇವೆಗಳನ್ನು ಕಾಡುತ್ತಿರುವ ಸಮಸ್ಯೆಗಳು ಬಹಳಷ್ಟಿವೆ. ನಕಲಿ ವೈದ್ಯರಿಂದ ಹಿಡಿದು ನಕಲಿ ಔಷಧಗಳು, ನಕಲಿ ಇಂಪ್ಲಾಂಟ್ / ಸ್ಟೆಂಟ್ ಗಳು, ವೈದ್ಯಕೀಯ ವಿಮೆಗಳ ದುರುಪಯೋಗಗಳು, ಸರಕಾರೀ ಸವಲತ್ತುಗಳನ್ನು ಮೋಸದಿಂದ ಪಡೆಯುವ ವಂಚಕರು – ಹೀಗೆ ಹಲವಾರು ರೀತಿಗಳಲ್ಲಿ ನಮ್ಮ ಆರೋಗ್ಯ ಕ್ಷೇತ್ರ ಸೊರಗುತ್ತಿದೆ. ವ್ಯವಸ್ಥೆಯನ್ನು ಸುಧಾರಿಸಲು ದಶಕಗಳಿಂದ ಮಾಡಿರುವ ಯಾವ ಪ್ರಯತ್ನಗಳೂ ಈವರೆಗೆ ಹೆಚ್ಚು ಸಫಲವಾಗಿಲ್ಲ. ಈ ನಿಟ್ಟಿನಲ್ಲಿ ಬ್ಲಾಕ್-ಚೈನ್ ನಂತಹ ನವೀನ ತಂತ್ರಜ್ಞಾನದ ನೆರವು ಪರಿಸ್ಥಿತಿಯನ್ನು ಸುಧಾರಿಸಬಲ್ಲದು ಎಂದು ತಜ್ಞರ ಅಭಿಪ್ರಾಯ. 
ಬ್ಲಾಕ್-ಚೈನ್ ತಂತ್ರಜ್ಞಾನ ಎಂದರೇನು? ಬಿಟ್-ಕಾಯಿನ್ ಎಂಬ ಮಾಯಾವಿ ಹಣದ ಕಾರಣದಿಂದ ಬ್ಲಾಕ್-ಚೈನ್ ಜನಸಾಮಾನ್ಯರಲ್ಲೂ ಆಸಕ್ತಿ ಮೂಡಿದೆ. ಆದರೆ ಬ್ಲಾಕ್-ಚೈನ್ ಪ್ರಯೋಜನ ಕೇವಲ ಬಿಟ್-ಕಾಯಿನ್ ಗಷ್ಟೇ ಸೀಮಿತವಲ್ಲ; ವೈದ್ಯಕೀಯ ಕ್ಷೇತ್ರದಲ್ಲಿಯೂ ಇದೆ. ಸಾವಿರಾರು ರೂಪಾಯಿ ಬೆಲೆಯ ಅಸಲೀ ಔಷಧದ ತಲೆಯ ಮೇಲೆ ಹೊಡೆದಷ್ಟು ನಿಖರವಾಗಿ ನಕಲೀಮಾಲು ತಯಾರಿಸಬಲ್ಲ ಫಟಿಂಗರು ನಮ್ಮಲ್ಲಿದ್ದಾರೆ.  ಪ್ರಾಣಕ್ಕೇ ಎರವಾಗಬಲ್ಲದು ಇಂತಹ ನಕಲೀಮಾಲನ್ನು ನಿಷ್ಕೃಷ್ಟವಾಗಿ ಪತ್ತೆಮಾಡುವುದು ಹೇಗೆ? ಔಷಧದ ಪಟ್ಟಿಗಳ ಮೇಲೆ ಬ್ಯಾಚ್-ಸಂಖ್ಯೆ ಇರುತ್ತದ್ದಾದರೂ ಅದರಿಂದ ಗ್ರಾಹಕನಿಗೆ ಹೆಚ್ಚೇನೂ ತಿಳಿಯಲಾಗದು. ಜೊತೆಗೆ ನಕಲೀಮಾಲು ತಯಾರಕರು ಅದೇ ಬ್ಯಾಚ್-ಸಂಖ್ಯೆಯನ್ನು ನಮೂದಿಸಿದರೆ ಮುಗಿದೇಹೋಯಿತು. ಇದೇ ರೀತಿಯ ಸಮಸ್ಯೆಗಳು ರೋಗಿಯ ದೇಹದಲ್ಲಿ ಅಳವಡಿಸುವ ಸ್ಟೆಂಟ್ಗಳು, ಇಂಪ್ಲಾಂಟ್ಗಳ ವಿಷಯದಲ್ಲೂ ಆಗುತ್ತವೆ. ಶತಮಾನಗಳಿಂದ ರೋಗಿ-ವೈದ್ಯರ ಸಂಬಂಧ ಕೇವಲ ನಂಬಿಕೆಯ ಮೇಲೆ ನಡೆಯುತ್ತಿತ್ತು. ಆದರೆ ಪ್ರಸ್ತುತ ವಾಣಿಜ್ಯ-ಯುಗದಲ್ಲಿ ನಂಬಿಕೆಯ ಜೊತೆ ಎಲ್ಲರಿಗೂ ಒಪ್ಪಿಗೆಯಾಗುವಂತಹ ಋಜುವಾತು ನೀಡುವುದು ಹೇಗೆ?
ಔಷಧದ ತಯಾರಿಯಲ್ಲಿ ಇರುವ ವಿಭಾಗಗಳೇನು? ಔಷಧಕಾರ್ಖಾನೆಗೆ ಬರುವ ಕಚ್ಚಾವಸ್ತು ಶುದ್ಧೀಕರಣಗೊಂಡು ಸರಿಯಾದ ಪ್ರಮಾಣದಲ್ಲಿ ಮಿಶ್ರವಾಗಬೇಕು. ಆ ಮಿಶ್ರಣ ಗುಣಮಟ್ಟದ ಪರೀಕ್ಷೆಯಲ್ಲಿ ತೇರ್ಗಡೆಯಾದ ಮೇಲೆ ಔಷಧ ಹೆಚ್ಚಿನ ಪ್ರಮಾಣದಲ್ಲಿ ತಯಾರಾಗಿ ಪ್ಯಾಕಿಂಗ್ ಆದ ಮೇಲೆ ಮತ್ತೊಮ್ಮೆ ಲಾಟರಿ ಮಾದರಿಯಲ್ಲಿ ಯಾವುದಾದರೊಂದು ಡಬ್ಬಿ ಔಷಧವನ್ನು ತೆಗೆದು ಪುನಃ ಗುಣಮಟ್ಟ ಪರೀಕ್ಷೆ ಮಾಡಿ ತೇರ್ಗಡೆಯಾದ ಘಟಕವನ್ನು ಮಾತ್ರ ಸಗಟು ಮಾರಾಟಗಾರರಿಗೆ ಕಳಿಸಬೇಕು. ಅಲ್ಲಿಂದ ಚಿಲ್ಲರೆ ಮಾರಾಟಗಾರರ ಮೂಲಕ ರೋಗಿಯನ್ನು ತಲುಪಬೇಕು. ಇಷ್ಟೂ ಪ್ರಕ್ರಿಯೆ ಆಯಾ ಹಂತದ ಕಂಪ್ಯೂಟರ್ಗಳಲ್ಲಿ ದಾಖಲಾಗಬೇಕು. ಜೊತೆಗೆ ಈ ಸಮಗ್ರ ಸರಣಿ ಔಷಧ ಕಾರ್ಖಾನೆಯ ಕೇಂದ್ರೀಯ ಸರ್ವರ್ ನಲ್ಲಿ ನಮೂದಾಗಬೇಕು.
ಈ ಪ್ರಕ್ರಿಯೆಯಲ್ಲಿ ಸಾಕಷ್ಟು ದುರ್ಬಲಕೊಂಡಿಗಳಿವೆ. ಔಷಧಕಾರ್ಖಾನೆಯಿಂದ ಹಿಡಿದು ಚಿಲ್ಲರೆ ಮಾರಾಟಗಾರರ ಕಪಾಟಿನವರೆಗೆ ಯಾವುದೇ ಹಂತದಲ್ಲಾದರೂ ನಕಲಿ ಔಷಧ ಸ್ಥಳಾಂತರಗೊಳ್ಳುವುದು ಸುಲಭ. ಕಾರ್ಖಾನೆಯ ಕೇಂದ್ರೀಯ ಸರ್ವರ್ ನಲ್ಲಿ ಕಂಪ್ಯೂಟರ್ ಪ್ರವೀಣರು ಪ್ರವೇಶಿಸಿ ಮಾಹಿತಿಯನ್ನು ಏರು-ಪೇರು ಮಾಡಿದರೆ ಇಡೀ ಘಟಕದ ಔಷಧಿ ಪರಿಷ್ಕರಿಸಲಾಗದಂತೆ ವ್ಯರ್ಥವಾಗುತ್ತದೆ. ಒಟ್ಟಾರೆ, ನಮ್ಮ ಆರೋಗ್ಯಕ್ಕೆ, ಹಣಕ್ಕೆ ಖೋತಾ ಆಗುವ ಸಾಕಷ್ಟು ಸಾಧ್ಯತೆಗಳು ಇಂದಿನ ವ್ಯವಸ್ಥೆಯಲ್ಲಿವೆ. ಇದನ್ನು ಮೀರಬಹುದಾದ ವ್ಯವಸ್ಥೆ ಎಂದರೆ ಬ್ಲಾಕ್-ಚೈನ್ ತಂತ್ರಜ್ಞಾನ. ಇದರಲ್ಲಿ ಕೇಂದ್ರೀಯ ಸರ್ವರ್ ಅಗತ್ಯವಿಲ್ಲ. ಒಮ್ಮೆ ಒಂದು ವ್ಯವಹಾರ ಮಾಡಿದರೆ ಅದು ಸಾವಿರಾರು ಕಂಪ್ಯೂಟರ್ ಗಳಲ್ಲಿ ಏಕಕಾಲಕ್ಕೆ ನಮೂದಾಗುತ್ತದೆ. ಈ ವ್ಯವಹಾರವನ್ನು ಆ ಎಲ್ಲಾ ಕಂಪ್ಯೂಟರ್ ಗಳೂ ಒಂದು ಘಟಕ(block)ದಂತೆ ನಮೂದು ಮಾಡುತ್ತವೆ. ವ್ಯವಹಾರ ಮಾಡಿದವರ ಗೌಪ್ಯತೆಯ ಸಲುವಾಗಿ ಒಂದು ಖಾಸಗೀ ಕೀಲಿ-ಕೈನಂತಹ ಪಾಸ್ವರ್ಡ್ ಅನ್ನು ಅವರಿಗೆ ನೀಡಲಾಗುತ್ತದೆ. ಈ ಕೀಲಿ-ಕೈ ಇಲ್ಲದೆ ವ್ಯವಹಾರವನ್ನು ಮುಂದುವರಿಸುವುದು ಸಾಧ್ಯವಾಗುವುದಿಲ್ಲ. ವ್ಯವಹಾರದ ಪ್ರತಿಯೊಂದು ಭಾಗವೂ ಒಂದೊಂದು ಘಟಕ(block)ದಂತೆ ನಮೂದಾಗುತ್ತಾ ಹಿಂದಿನ ವ್ಯವಹಾರ ತನ್ನ ಮುಂದಿನ ವ್ಯವಹಾರಕ್ಕೆ ಸರಪಣಿ(chain)ಯಂತೆ ಜೋಡಿಸಿಕೊಳ್ಳುತ್ತದೆ. ಅಂದರೆ, ಕಾರ್ಖಾನೆಯಲ್ಲಿ ತಯಾರಾಗುವ ಔಷಧದ ಕಚ್ಚಾವಸ್ತು ಸರಬರಾಜಾದದ್ದು ಒಂದು ಘಟಕ; ಅದು ಕಾರ್ಖಾನೆಯಲ್ಲಿ ಔಷಧ ಆದದ್ದು ಇನ್ನೊಂದು ಘಟಕ; ಆ ಔಷಧ ಪ್ಯಾಕ್ ಆದದ್ದು ಮುಂದಿನ ಘಟಕ; ಪ್ಯಾಕ್ ಆದ ಔಷಧ ಸಾಗಣೆ ಆದದ್ದು ಮುಂದಿನ ಘಟಕ; ಅದು ಸಗಟು ಮಾರಾಟಗಾರರನ್ನು ತಲುಪಿದ್ದು ಮುಂದಿನ ಘಟಕ; ಅಲ್ಲಿಂದ ಚಿಲ್ಲರೆ ಮಾರಾಟಗಾರರನ್ನು ತಲುಪುವುದು ಮತ್ತೊಂದು ಘಟಕ; ಅದು ಕಡೆಗೆ ರೋಗಿಯನ್ನು ತಲುಪುವುದು ಅಂತಿಮ ಘಟಕ. ಯಾವುದೊಂದು ಘಟಕವನ್ನೂ ಮುಂದುವರಿಸಬಹುದೇ ವಿನಾ ಹಿಂದಿನ ಘಟಕವನ್ನು ಮಾರ್ಪಾಡು ಮಾಡುವುದು ಸಾಧ್ಯವಿಲ್ಲ. ಒಂದುವೇಳೆ ಯಾವುದೇ ಕಂಪ್ಯೂಟರ್ನಲ್ಲಿ ಯಾರಾದರೂ ಯಾವುದೇ ಘಟಕದ ಪರಿಭಾಷೆಯನ್ನು ಬದಲಾಯಿಸಿದರೂ ಮಿಕ್ಕೆಲ್ಲಾ  ಕಂಪ್ಯೂಟರ್ಗಳೂ ಅದನ್ನು ಪ್ರಶ್ನಿಸಿ ಇಡೀ ಸರಪಳಿ ಮುರಿದುಬೀಳುತ್ತದೆ. ಘಟಕದ ಸರಪಳಿ ಭಿನ್ನವಾಗಿಲ್ಲ ಎಂದರೆ ಔಷಧಕಾರ್ಖಾನೆಯಲ್ಲಿ ಗುಣಮಟ್ಟ ಪರೀಕ್ಷೆಯಾಗಿ ಬಂದ ನೈಜ ಔಷಧವೇ ರೋಗಿಯನ್ನು ತಲುಪಿದೆ ಎಂದು ಖಾತ್ರಿ. ಇದೇ ರೀತಿ ಇಂಪ್ಲಾಂಟ್ ಗಳು, ಸ್ಟೆಂಟ್ ಗಳ ನೈಜತೆಯನ್ನೂ ಖಾತ್ರಿಪಡಿಸಬಹುದು.
ವೈದ್ಯಕೀಯ ಕ್ಷೇತ್ರದಲ್ಲಿ ಬ್ಲಾಕ್-ಚೈನ್ ತಂತ್ರಜ್ಞಾನದ ಕೆಲವು ಪ್ರಯೋಜನಗಳು:
೧. ರೋಗಿಗಳ ಆರೋಗ್ಯ ಸ್ಥಿತಿಗತಿಯ ವಿವರಗಳು: ಆಸ್ಪತ್ರೆಗೆ ದಾಖಲಾದ ರೋಗಿಯ ಸಮಗ್ರ ವಿವರಗಳು ಆಸ್ಪತ್ರೆಯ ವೈದ್ಯಕೀಯ ದಾಖಲೆಗಳ ವಿಭಾಗದಲ್ಲಿ ಶೇಖರಣೆಯಾಗಿರುತ್ತವೆ. ಅದರಲ್ಲಿನ ಪ್ರಮುಖ ಮಾಹಿತಿಯನ್ನು ಮಾತ್ರ ರೋಗಿಗೆ ಆಸ್ಪತ್ರೆಯಿಂದ ಬಿಡುಗಡೆಯಾಗುವ ವೇಳೆಯಲ್ಲಿ ನೀಡಲಾಗುತ್ತದೆ. ಒಂದು ವೇಳೆ ಅದೇ ರೋಗಿ ಬೇರೊಂದು ಆಸ್ಪತ್ರೆಯಲ್ಲೋ ಅಥವಾ ಬೇರೆ ನಗರದ/ದೇಶದ ಆಸ್ಪತ್ರೆಯಲ್ಲೋ ದಾಖಲಾದಾಗ ಈ ಮಹತ್ವದ ಮಾಹಿತಿಗಳನ್ನು ಪಡೆದುಕೊಳ್ಳುವುದು ಕಷ್ಟವಾಗುತ್ತದೆ. ಕೆಲವೊಮ್ಮೆ ವೈದ್ಯಕೀಯ ವಿಮೆಯ ಕಾರಣಕ್ಕೆ ವಿವರಗಳಲ್ಲಿ ಮೋಸ ನುಸುಳುವುದೂ ಕಂಡುಬರುತ್ತದೆ. ಮತ್ತೂ ಹಲವೊಮ್ಮೆ, ರೋಗಿಯ ಅನುಮತಿ ಇಲ್ಲದೆ ಇಂತಹ ಮಾಹಿತಿ ಸೋರಿಹೋಗುವ ಸಂಭವನೀಯತೆ ಕೂಡ ಇರಬಹುದು. ಬ್ಲಾಕ್-ಚೈನ್ ತಂತ್ರಜ್ಞಾನದ ಅಳವಡಿಕೆಯಿಂದ ಇಂತಹ ಎಲ್ಲಾ ಸಂಭವನೀಯತೆಗಳನ್ನೂ ನಿಯಂತ್ರಿಸಬಹುದು. ಒಂದು ಆಸ್ಪತ್ರೆಯಿಂದ ಜಗತ್ತಿನ ಯಾವುದೇ ಮೂಲೆಯಲ್ಲಿರುವ ಇನ್ನೊಂದು ಆಸ್ಪತ್ರೆಗೆ ರೋಗಿಯ ಆರೋಗ್ಯದ ಎಲ್ಲಾ ಮಹತ್ವದ ದಾಖಲೆಗಳನ್ನೂ ಆರಂಭದಿಂದ ಹಿಡಿದು ಇತ್ತೀಚಿನ ಬೆಳವಣಿಗೆಗಳವರೆಗೆ ಕ್ಷಣಾರ್ಧದಲ್ಲಿ ಪಡೆಯಬಹುದು. ಆರೋಗ್ಯ ವಿಮೆಯ ಕಂಪನಿಗಳಿಗೆ ರೋಗಿಯ ನೈಜ, ನಿಷ್ಕೃಷ್ಟ ಮಾಹಿತಿ ಲಭಿಸಿದಾಗ ವಿಮೆಯ ಪ್ರಕ್ರಿಯೆಗೆ ವೇಗ ದೊರೆತು ಇಡೀ ಪ್ರಕ್ರಿಯೆ ಸರಾಗವಾಗುತ್ತದೆ. ಒಟ್ಟಾರೆ, ರೋಗಿಯ ಆರೋಗ್ಯ ಸ್ಥಿತಿಗತಿಯ ನೈಜವಿವರಗಳ ವರ್ಗಾವಣೆಗೆ ಸದ್ಯದ ಪರಿಸ್ಥಿತಿಯಲ್ಲಿ ಆಗುತ್ತಿರುವ ತೊಡಕುಗಳನ್ನೆಲ್ಲಾ ಬ್ಲಾಕ್-ಚೈನ್ ನೆರವಿನಿಂದ ಪರಿಹರಿಸಬಹುದಾಗಿದೆ. ಈ ರೀತಿಯ ಯೋಜನೆಗಳಿಗೆ ವೈದ್ಯಕೀಯ ರಂಗದಲ್ಲಿ ಹೆಚ್ಚು ಸಂಶೋಧನೆಯಾಗುತ್ತಿದೆ.
೨. ಮಾಹಿತಿ ಭದ್ರತೆ: ರೋಗಿಗಳ ಆರೋಗ್ಯ ಮಾಹಿತಿಯಲ್ಲಿ ಅನಪೇಕ್ಷಿತ ವಿವರಗಳನ್ನು ಕದ್ದುಮುಚ್ಚಿ ಸೇರಿಸುವ ಹಲವಾರು ಮೊಕದ್ದಮೆಗಳು ವಿಶ್ವದಾದ್ಯಂತ ನಡೆಯುತ್ತವೆ. ರೋಗಿಯ ಆರೋಗ್ಯ ವಿವರಗಳನ್ನು ಆಸ್ಪತ್ರೆಗಳು ವಿದ್ಯುನ್ಮಾನ ಪದ್ದತಿಯಲ್ಲಿ ಶೇಖರಿಸಿ ಇಡುತ್ತಾರಾದರೂ, ಆ ವಿವರಗಳನ್ನು ಆಸ್ಪತ್ರೆಯ ಸಿಬ್ಬಂದಿಯೇ ಬದಲಾಯಿಸಬಹುದಾದ ಸಾಧ್ಯತೆ ಇದ್ದೇ ಇರುತ್ತದೆ. ಬ್ಲಾಕ್-ಚೈನ್ ಬಳಕೆಯಲ್ಲಿ ರೋಗಿಯ ಬಳಿ ತನ್ನ ಮಾಹಿತಿ ಭದ್ರತೆಗೆ ಬೇಕಾದ ಕೀಲಿ-ಕೈ ಇರುತ್ತದೆ. ಅದಿಲ್ಲದೆ ಯಾವ ಮಾಹಿತಿಯನ್ನೂ ಸೇರಿಸಲಾಗದು. ಈ ರೀತಿ ಸುಳ್ಳು ಮಾಹಿತಿ ಸೇರ್ಪಡೆಗೆ ಇತಿಶ್ರೀ ಹಾಡಬಹುದು.
೩.  ಆರೋಗ್ಯವಿಮೆ ಕಂಪೆನಿಗಳಿಂದ ವಿಮೆಯ ಹಣ ವಸೂಲು ಮಾಡುವುದು ಆಸ್ಪತ್ರೆಗಳಿಗಾಗಲೀ, ರೋಗಿಗಳಿಗಾಗಲೀ ಒಂದು ಸವಾಲೇ ಸರಿ! ವಿಮಾ ಕಂಪೆನಿಗಳ ದೃಷ್ಟಿಯಿಂದ ನೋಡಿದರೆ, ಆರೋಗ್ಯವಿಮೆಯ ಮೋಸದ ಪ್ರಕರಣಗಳನ್ನು ತಡೆಯುವ ಆವಶ್ಯಕತೆ ಅವುಗಳಿಗೆ ಬಹಳ ಹೆಚ್ಚು. ಹೀಗೆ ಒಂದೆಡೆ ವಿಮಾಕಂಪೆನಿಗಳಿಗೆ ನಂಬಿಕೆಯ ಪ್ರಶ್ನೆ; ಆಸ್ಪತ್ರೆಗಳಿಗೆ ಮತ್ತು ರೋಗಿಗಳಿಗೆ ತಮ್ಮ ಸಾಚಾತನವನ್ನು ಸಾಬೀತುಪಡಿಸುವ ಪೀಡನೆ! ಬ್ಲಾಕ್-ಚೈನ್ ಬಳಕೆಯಿಂದ ಈ ಇಡೀ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಿರ್ವಹಿಸಬಹುದು. ಜೊತೆಗೆ ತನ್ನ ಪ್ರತಿಯೊಂದು ನಡೆಯೂ ದಾಖಲಾಗಿ, ಪ್ರಕರಣದ ಸರಣಿಗೆ ಪುನಃ ಮಾರ್ಪಾಡು ಮಾಡಲು ಆಸ್ಪದ ನೀಡದಂತೆ ಸೇರ್ಪಡೆಯಾಗುತ್ತದೆ ಎಂಬ ಸಂಗತಿ ವೈದ್ಯರಿಗೆ ತಿಳಿದಿರುವುದರಿಂದ ಅವರು ತಪ್ಪುಗಳಿಗೆ ಅವಕಾಶ ನೀಡದಂತೆ ನಾಜೂಕಾಗಿ ಕೆಲಸ ಮಾಡಬೇಕಾಗುತ್ತದೆ. ಇದರಿಂದ ಚಿಕಿತ್ಸೆಯ ಗುಣಮಟ್ಟ ತಾನೇತಾನಾಗಿ ಏರುತ್ತದೆ.
೪. ಆರೋಗ್ಯದ ಬಗ್ಗೆ ಸುಳ್ಳುಮಾಹಿತಿ ನೀಡುವವರು, ಆದಾಯದ ಬಗ್ಗೆ ತಪ್ಪುಮಾಹಿತಿ ನೀಡಿ ಬಡವರಿಗೆಂದು ಮಾಡಿರುವ ಆರೋಗ್ಯ ಯೋಜನೆಗಳ ದುರ್ಲಾಭ ಪಡೆಯುವವರು, ಬೇರೊಬ್ಬರ ಹೆಸರಿನಲ್ಲಿ ದಾಖಲಾಗಿ ತಮ್ಮ ಚಿಕಿತ್ಸೆಗೆ ಅವರ ವಿಮೆಯನ್ನು ಮೋಸದಿಂದ ಪಡೆಯುವವರು – ಹೀಗೆ ನಮ್ಮಂತಹ ದೇಶಗಳಲ್ಲಿ ಆರೋಗ್ಯ ವ್ಯವಸ್ಥೆಯನ್ನು ವಂಚಿಸುವವರಿಗೆ ಕೊರತೆಯೇ ಇಲ್ಲ. ಪ್ರಸ್ತುತ ಪರಿಸ್ಥಿತಿಯಲ್ಲಿ ಇಂತಹವರನ್ನು ನಿರ್ದಿಷ್ಟವಾಗಿ ಪತ್ತೆ ಮಾಡಲೂ ವ್ಯವಸ್ಥೆಗೆ ಸಾಧ್ಯವಿಲ್ಲ. ಅದರಲ್ಲೂ ಆಸ್ಪತ್ರೆ ಸಿಬ್ಬಂದಿಯ ಜೊತೆ ಷಾರೀಕಾಗಿ ಮೋಸ ಎಸಗುವವರನ್ನು ಪತ್ತೆ ಮಾಡುವುದು ತೀರಾ ಕಷ್ಟದ ವಿಷಯ. ಬ್ಲಾಕ್-ಚೈನ್ ನೆರವಿನಿಂದ ಇಂತಹ ಮೋಸಗಳನ್ನು ಚಿಗುರಿನಲ್ಲೇ ಚಿವುಟಬಹುದು. ರೋಗಿಯ ಆರೋಗ್ಯ ವಿವರಗಳನ್ನು ಅವರ ಅಧಿಕೃತ ಸರಕಾರೀ ದಾಖಲೆಗಳೊಡನೆ ಪರಿಶೀಲಿಸಿದರೆ ಕೆಲವೇ ನಿಮಿಷಗಳಲ್ಲಿ ಇಂತಹ ಮೋಸದ ದಾಖಲೆ ಹೊಂದಿರುವ ರೋಗಿಯ ನೈಜತೆ ಬಯಲಾಗುತ್ತದೆ. ಅಷ್ಟೇ ಅಲ್ಲದೇ, ವೈದ್ಯರ ವಿಷಯದಲ್ಲೂ ಈ ತಂತ್ರಜ್ಞಾನ ಸಹಾಯಕಾರಿ. ಖೊಟ್ಟಿ ವೈದ್ಯರ ಹಾವಳಿ ಹೆಚ್ಚಾಗಿರುವ ನಮ್ಮಂತಹ ದೇಶಗಳಲ್ಲಿ ಆಸ್ಪತ್ರೆಗಳ ನಿರ್ವಾಹಕರಿಗೆ ಮತ್ತು ಖುದ್ದು ರೋಗಿಗಳಿಗೆ ಅವರನ್ನು ಚಿಕಿತ್ಸೆ ಮಾಡುವ ವೈದ್ಯರ ವಿದ್ಯಾರ್ಹತೆಯ ಪ್ರತಿಯೊಂದೂ ನೈಜವಿವರ ತಿಳಿಯುತ್ತದೆ. ಹೀಗೆ ಜೊಳ್ಳಿನಿಂದ ಕಾಳನ್ನು ಬೇರ್ಪಡಿಸಲು ಬ್ಲಾಕ್-ಚೈನ್ ತಂತ್ರಜ್ಞಾನ ಮಹತ್ವದ ಪಾತ್ರ ನಿರ್ವಹಿಸಬಲ್ಲದು.
೫. ವೈದ್ಯಕೀಯ ಕ್ಷೇತ್ರದಲ್ಲಿ ಸಂಶೋಧನೆಗಳ ಮಹತ್ವ ಬಹಳ ಹೆಚ್ಚು. ಹೊಸ ಔಷಧಗಳ ತಯಾರಿಯಲ್ಲಿ, ರೋಗ ಪತ್ತೆ ಮಾಡುವ ನವೀನ ವಿಧಾನಗಳ ಆವಿಷ್ಕಾರದಲ್ಲಿ, ಅಪರೂಪದ ರೋಗಗಳ ಬಗ್ಗೆ ಹೆಚ್ಚು ತಿಳಿಯುವಲ್ಲಿ – ಹೀಗೆ ಹಲವಾರು ಎಡೆಗಳಲ್ಲಿ ಸಂಶೋಧನೆ ನಡೆಯುತ್ತಲೇ ಇರುತ್ತದೆ. ಸದ್ಯಕ್ಕೆ ಇಂತಹ ಸಂಶೋಧನೆ ಒಂದು ಆಸ್ಪತ್ರೆಯಲ್ಲೋ ಅಥವಾ ಹೆಚ್ಚೆಂದರೆ ಹತ್ತಾರು ಆಸ್ಪತ್ರೆಗಳ ನಡುವೆ ನಡೆಯುವ ಒಪ್ಪಂದದ ಮೇರೆಗೋ ನಡೆಯುತ್ತಿವೆ. ಇಂತಹ ಸಂದರ್ಭಗಳಲ್ಲಿ ರೋಗಿಗಳ ಒಟ್ಟಾರೆ ಸಂಖ್ಯೆ ಸೀಮಿತವಾಗಿರುತ್ತದೆ. ಬ್ಲಾಕ್-ಚೈನ್ ತಂತ್ರಜ್ಞಾನದ ವಿಶಾಲ ಅಳವಡಿಕೆಯಿಂದ ಮಾಹಿತಿ ಕ್ರೋಢಿಕರಣ ಸರಾಗವಾಗಿ ಪ್ರತಿಯೊಂದು ಸಂಶೋಧನೆಗೂ ಸಾಕಷ್ಟು ಸಂಖ್ಯೆಯ ರೋಗಿಗಳು ಲಭಿಸುವಂತಾಗುತ್ತದೆ. ಇದರಿಂದ ವೈದ್ಯಕೀಯ ಸಂಶೋಧನೆಗಳಲ್ಲಿ ಒಂದು ಉತ್ಕ್ರಾಂತಿಯೇ ಆಗುವ ಸಾಧ್ಯತೆ ಇದೆ.
ಹಾಗೆಂದ ಮಾತ್ರಕ್ಕೆ ಬ್ಲಾಕ್-ಚೈನ್ ತಂತ್ರಜ್ಞಾನ ಆರೋಗ್ಯಕ್ಷೇತ್ರದ ಎಲ್ಲಾ ಸಮಸ್ಯೆಗಳಿಗೂ ಪರಿಹಾರವೇನಲ್ಲ! ಎಲ್ಲಾ ಖಾಸಗೀ ಮಾಹಿತಿ ಎಲ್ಲರಿಗೂ ಮುಕ್ತವಾಗಿ ದೊರೆಯುವುದು ಉತ್ತಮ ಬೆಳವಣಿಗೆಯಲ್ಲ! ಒಂದು ಸರಣಿ ಪ್ರಕ್ರಿಯೆಯಲ್ಲಿ ಪ್ರತಿಯೊಂದೂ ಮಾಹಿತಿಯನ್ನೂ ಬದಲಾಯಿಸಲು ಆಸ್ಪದವಿಲ್ಲದಂತೆ ನಮೂದಿಸಲು ಬ್ಲಾಕ್-ಚೈನ್ ತಂತ್ರಜ್ಞಾನ ಸಹಕಾರಿ. ರೋಗಿಯ ಬಳಿ ಇರುವ ಖಾಸಗೀ ಕೀಲಿ-ಕೈನಿಂದ ಮಾಹಿತಿ ಪಡೆಯಲು ಸಾಧ್ಯ. ಅಂತಹ ರೋಗಿ ವೃದ್ಧರೋ, ಆಶಕ್ತರೋ, ತಂತ್ರಜ್ಞಾನದ ಬಗ್ಗೆ ಅರಿವಿಲ್ಲದವರೋ ಆದರೆ ಖಾಸಗೀ ಕೀಲಿ-ಕೈ ಅವರಿಗೆ ಅಪಾಯಕಾರಿಯಾಗಬಹುದು. ಜೊತೆಗೆ, ಬ್ಲಾಕ್-ಚೈನ್ ತಂತ್ರಜ್ಞಾನದ ಸೇರ್ಪಡೆಗೆ ಮತ್ತು ನಿರ್ವಹಣೆಗೆ ಆಗುವ ವೆಚ್ಚಗಳನ್ನು ಸಣ್ಣ ಖಾಸಗೀ ಆಸ್ಪತ್ರೆಗಳು ನಿರ್ವಹಿಸಲು ಸಾಧ್ಯವಾಗದೇ ಇರಬಹುದು. ಬ್ಲಾಕ್-ಚೈನ್ ತಂತ್ರಜ್ಞಾನದ ನಿರ್ವಹಣೆಗೆ ಬೇಕಾದ ಉತ್ಕೃಷ್ಟ ಕಂಪ್ಯೂಟರ್ ಸೌಲಭ್ಯ, ಅದನ್ನು ಕಾಲಕಾಲಕ್ಕೂ ಮಾರ್ಪಾಡು ಮಾಡಿ ಮೇಲ್ಸ್ತರಕ್ಕೆ ಏರಿಸಬೇಕಾದ ಅವಶ್ಯಕತೆ – ಇವುಗಳಿಗೆ ತಗಲುವ ದುಬಾರಿವೆಚ್ಚವನ್ನು ಆಸ್ಪತ್ರೆಗಳು ರೋಗಿಗಳಿಂದಲೇ ವಸೂಲು ಮಾಡಬೇಕು. ಇದರಿಂದ ಚಿಕಿತ್ಸೆಯ ವೆಚ್ಚ ಸಾಕಷ್ಟು ಹೆಚ್ಚಬಹುದು. ಇಷ್ಟೇ ಅಲ್ಲದೇ, ಬ್ಲಾಕ್-ಚೈನ್ ತಂತ್ರಜ್ಞಾನದ ಅಳವಡಿಕೆಯಿಂದ ಸಂಗ್ರಹಣೆಯಾಗುವ ಅಪಾರ ಮಾಹಿತಿಯನ್ನು ಕೇವಲ ಸಂಶೋಧನೆಗೆ ಮಾತ್ರವೇ ಬಳಸದೇ, ಅದನ್ನು ಮಾಹಿತಿ-ಮಾರಾಟಕ್ಕೋ, ದುಷ್ಕರ್ಮಿಗಳ ಒಡೆತನಕ್ಕೋ ದಕ್ಕುವಂತಾದರೆ ದೊಡ್ಡದಾದ ಅನೂಹ್ಯ ಅಪಾಯ ತಪ್ಪಿದ್ದಲ್ಲ.
ಒಟ್ಟಿನಲ್ಲಿ ಪ್ರಸ್ತುತ ಪರಿಸ್ಥಿತಿಯಲ್ಲೂ ನಮಗೆ ಬೇಕಾದ್ದು ಎಲ್ಲರಿಗೂ ಒಪ್ಪಿಗೆಯಾಗಬಲ್ಲ “ಸುವರ್ಣ-ಮಧ್ಯಮ-ಮಾರ್ಗ”. ಬ್ಲಾಕ್-ಚೈನ್ ತಂತ್ರಜ್ಞಾನವನ್ನು ಬಳಸಿದ ನಂತರವೂ ಕೂಡ ಬೇಕಾದ್ದು ಅದೇ ಮಾರ್ಗ! 

(Vishwavani - 29/10/2019)
-----------------


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ