ಭಾನುವಾರ, ಡಿಸೆಂಬರ್ 15, 2019



ಇಂದಿನ (15/12/2019) ವಿಶ್ವವಾಣಿ ಕನ್ನಡ ದಿನಪತ್ರಿಕೆಯಲ್ಲಿ ಪ್ರಕಟವಾದ ಲೇಖನ. ಇದು Kollegala Sharma ಅವರ "ಜಾಣಸುದ್ಧಿ" ವಿಜ್ಞಾನ ಧ್ವನಿಪತ್ರಿಕೆಯಲ್ಲಿ ದಿನಾಂಕ 13/12/2019 ರಂದು ಪ್ರಸಾರವಾಗಿತ್ತು. ಈ ಲೇಖನದ ಆಡಿಯೋ ಕೇಳಲು "ಜಾಣಸುದ್ಧಿ"ಯ ಲಿಂಕ್ ಅನ್ನು ಬಳಸಬಹುದು: https://anchor.fm/kollegala/episodes/117--21-e9gn1k

ಭೂಮಿಯಾಳದ ಕಾರ್ಬನ್ ಸಂಶೋಧನೆಯಲ್ಲಿ ಹೊಸ ಕೌತುಕಗಳು

ವೈಜ್ಞಾನಿಕ ಕಾದಂಬರಿಕಾರರಲ್ಲಿ ಪ್ರಮುಖ ಹೆಸರು ಜೂಲ್ಸ್ ವರ್ನ್ ಎಂಬ ಫ್ರೆಂಚ್ ಲೇಖಕ. ಕ್ರಿ ಶ 1864 ರಲ್ಲಿ ಆತ Journey to the Centre of the Earth ಎನ್ನುವ ವೈಜ್ಞಾನಿಕ ಸಾಹಸದ ಕಾದಂಬರಿಯನ್ನು ಬರೆದಿದ್ದ. ಭೂಮಿಯ ಆಂತರ್ಯಕ್ಕೆ ಜ್ವಾಲಾಮುಖಿಗಳ ಮೂಲಕ ಲಗ್ಗೆ ಇಡುವ ಸಾಹಸಿಗರ ಕತೆ ಅದು. ಆದರೆ, ಅಂತಹ ಪಯಣ ಕತೆಗಳಿಗಷ್ಟೇ ಮೀಸಲು. ಭೂಮಿಯ ಒಳಗೆ ನುಗ್ಗುವ ಪ್ರಯತ್ನವನ್ನೇನೂ ವಿಜ್ಞಾನಿಗಳು ಬಿಟ್ಟಿಲ್ಲವಾದರೂ ಆ ಪ್ರಯತ್ನದಲ್ಲಿ ಯಶಸ್ಸು ಕಂಡದ್ದು ಕಡಿಮೆ. ಭೂವಿಜ್ಞಾನದ ಪುಸ್ತಕಗಳಲ್ಲಿ ಭೂಮಿಯ ಒಡಲನ್ನು ಪದರ-ಪದರವಾಗಿ ಬಿಡಿಸಿ ಇಟ್ಟಂತಹ ಚಿತ್ರ ಕೇವಲ ಕಲ್ಪನೆಯ, ಅಂದಾಜಿನ ಚಿತ್ರಣ ಮಾತ್ರ. ಭೂಮಿಯ ಒಡಲು ಹೇಗಿರಬಹುದು ಎಂದು ವಿಜ್ಞಾನಿಗಳು ತರ್ಕ ಮಾಡಿದ್ದಾರೆಯೇ ಹೊರತು, ಅದನ್ನು ನೈಜವಾಗಿ ಕಂಡವರಿಲ್ಲ.

ನಮ್ಮ ಭೂಮಿಯ ರಚನೆ ಹೇಗಿದೆ? ಎಲ್ಲಕ್ಕಿಂತ ಮೇಲೆ ಹಲವಾರು ಅನಿಲಗಳ ಮಿಶ್ರಣವಾದ ನಮ್ಮ ಭೂಮಿಯ ವಾತಾವರಣವಿದೆ. ಭೂಮಿಯ ಗುರುತ್ವ ಬಲ ಈ ಗಾಳಿಗಳ ಪದರವನ್ನು ಹಿಡಿದಿಟ್ಟಿದೆ. ಭೂಮಿಯ ನೆಲಮಟ್ಟದ ಪದರದಲ್ಲಿ ನಮ್ಮ ಕಣ್ಣಿಗೆ ಕಾಣುವ ಜಗತ್ತಿದೆ. ಇದು ನೆಲ-ಜಲಗಳ ಜೋಡಿ. ಪ್ರಾಣಿ-ಸಸ್ಯಗಳ ಪ್ರಪಂಚ ಇಲ್ಲಿನದೇ. ಇದರ ಜೊತೆಗೆ ಸಮುದ್ರ, ಸಾಗರಗಳಿವೆ – ಅಲ್ಲಿನದೇ ವಿಸ್ಮಯಕಾರೀ ಜೀವ ವೈವಿಧ್ಯವಿದೆ. ಆದರೆ, ನಮಗೆ ಕಾಣದ ಮತ್ತೊಂದು ಹಂತವೂ ಭೂಮಿಯಲ್ಲಿದೆ. ಅದೇ ಭೂಮಿಯ ಒಡಲು. ನಾವು ನಿಂತಿರುವ ನೆಲದ ಆಳಕ್ಕೂ ಭೂಮಿ ವ್ಯಾಪಿಸಿದೆ. ನಮ್ಮ ಕಲ್ಪನೆಗೆ ನಿಲುಕದ, ನಾವು ಊಹಿಸಲೂ ಆಗದ ಸೋಜಿಗಗಳು ಭೂಮಿಯ ಆಳದಲ್ಲಿವೆ. ನಾವು ಜಗತ್ತಿನ ಹೊರಗೆ ಆಗಸದ ಕೋಟ್ಯಾಂತರ ಮೈಲಿಗಳಷ್ಟು ವ್ಯಾಪ್ತಿಯನ್ನು ಬಲ್ಲೆವು. ನಮ್ಮ ಭೂಮಿಯ ಒಡಲಿನೊಳಗೆ ಮಾಡಿರುವ ಪಯಣ ಮಾತ್ರ ತೀರಾ ಅತ್ಯಲ್ಪ. ನಾವು ನಿಂತ ನೆಲದಿಂದ ಭೂಮಿಯ ಅತ್ಯಂತ ಆಳದ ಒಡಲು ಸುಮಾರು 6370 ಕಿಲೋ ಮೀಟರ್ ಆಳದಲ್ಲಿದೆ. ಇದುವರೆಗೆ ಭೂಮಿಯ ಅತ್ಯಂತ ಆಳಕ್ಕೆ ತಲುಪಿದವರು ರಷ್ಯಾ ದೇಶದ ಸಾಹಸಿಗರು. ಅವರು ಸುಮಾರು ಹನ್ನೆರಡು ಕಿಲೋ ಮೀಟರ್ ಆಳವನ್ನಷ್ಟೇ ತಲುಪಲು ಸಾಧ್ಯವಾಯಿತು. ಜರ್ಮನ್ ವಿಜ್ಞಾನಿಗಳು ಸುಮಾರು ಒಂಬತ್ತು ಕಿಲೋ ಮೀಟರ್ ಆಳ ತಲುಪಿದ್ದಾರೆ. ಅಂದರೆ, ಭೂಮಿಯ ಆಂತರ್ಯದ ಶೇಕಡಾ 0.2 ರಷ್ಟಕ್ಕೂ ನಾವು ಇಳಿದಿಲ್ಲ ಎಂದು ತಿಳಿದಾಗ ನಾವು ಭೂಮಿಯ ಒಡಲಿನ ಬಗ್ಗೆ ಎಷ್ಟು ಕಡಿಮೆ ಅರಿತಿದ್ದೇವೆ ಎಂಬ ಅಂದಾಜು ಬರಬಹುದು. ಅಷ್ಟಕ್ಕೂ ಭೂಮಿಯ ಆಳದಲ್ಲಿ ಏನಿದೆ?

ಭೂಮಿಯ ಒಡಲಿನ ವಿಷಯ ತಿಳಿಯಲು ನಾವು ಕಾರ್ಬನ್ ಬಗ್ಗೆ ಅರಿಯಬೇಕು. ಪರಮಾಣು ಪಟ್ಟಿಯಲ್ಲಿ ಆರನೆಯ ಸ್ಥಾನದಲ್ಲಿ ಇರುವ ಇಂಗಾಲ ಅಥವಾ ಕಾರ್ಬನ್, ಇಡೀ ಜೀವವಿಜ್ಞಾನಕ್ಕೆ ಆಧಾರ. ಕಾರ್ಬನ್ ಇಲ್ಲದೇ ಜೀವವೇ ಇಲ್ಲ. ಇಡೀ ಪ್ರಪಂಚದ ಜೀವಿಗಳ ಅಸ್ತಿತ್ವ ಕಾರ್ಬನ್. ನಮ್ಮ ಆಹಾರದ ಪ್ರಮುಖ ಭಾಗ ಕಾರ್ಬನ್ ಸಂಯುಕ್ತಗಳು. ಜಗತ್ತಿನ ಹೊಸ ತಂತ್ರಜ್ಞಾನಗಳ ಬೆನ್ನೆಲುಬು ಕಾರ್ಬನ್ ಆಧಾರಿತ ವಸ್ತುಗಳೇ. ವಾಯುಮಾಲಿನ್ಯದ ಪ್ರಮುಖ ಕಾರಣ ಕೂಡ ಕಾರ್ಬನ್-ಡೈ-ಆಕ್ಸೈಡ್ ಅನಿಲ. ಹೀಗೆ, ಕಾರ್ಬನ್ ಇಲ್ಲದ ಪ್ರಸ್ತುತ ಪ್ರಪಂಚ ಊಹೆಗೋ ಕಷ್ಟ. ಕಳೆದ ಹಲವಾರು ದಶಕಗಳಿಂದ ಕಾರ್ಬನ್ ಕುರಿತಾದ ಸಂಶೋಧನೆಗಳು ವಿಜ್ಞಾನದ ಪ್ರಮುಖ ಭಾಗ.

ಕಾರ್ಬನ್ ಸಂಶೋಧನೆಯಲ್ಲಿ ಎರಡು ಭಾಗಗಳಿವೆ. ಒಂದು – ಭೂಮಿಯ ಮೇಲಿನ ಸ್ತರಗಳ ಕಾರ್ಬನ್ ಅಧ್ಯಯನ. ಇದರಲ್ಲಿ ನಮ್ಮ ವಾತಾವರಣ, ಸಮುದ್ರ, ಭೂಮಿಯ ಮೇಲಿನ ಕಾರ್ಬನ್ ಮೂಲಗಳನ್ನು ಅಧ್ಯಯನ ಮಾಡುವುದು. ಎರಡನೆಯದು – ಭೂಮಿಯೊಳಗಿನ ಕಾರ್ಬನ್ ಸಂಶೋಧನೆ. ಜಗತ್ತಿನ ಶೇಕಡಾ 90 ಕಾರ್ಬನ್ ಭೂಮಿಯ ಆಳದಲ್ಲಿದೆ. ಈ ಭೂಮಿಯಾಳದ ಕಾರ್ಬನ್ ಹೇಗಿದೆ? ಎಷ್ಟಿದೆ? ಅದರ ಚಲನೆ ಹೇಗೆ? ಅದು ಎಲ್ಲೆಲ್ಲಿ ಖರ್ಚಾಗಿ ಮತ್ತೆ ಎಲ್ಲೆಲ್ಲಿಂದ ಉತ್ಪತ್ತಿ ಆಗುತ್ತದೆ? ಭೂಮಿಯಾಳದ ಒತ್ತಡದಲ್ಲಿ ಹೇಗೆ ರೂಪಾಂತರ ಹೊಂದುತ್ತದೆ? ಅಲ್ಲಿನ ಬೇರೆ ವಸ್ತುಗಳ ಜೊತೆ ಹೇಗೆ ಸೇರುತ್ತದೆ? ಇವುಗಳನ್ನೆಲ್ಲಾ ಅಧ್ಯಯನ ಮಾಡುವುದು ಹಲವು ರೋಮಾಂಚನಕಾರಿ ವಿಷಯಗಳನ್ನು ತಿಳಿಸುತ್ತದೆ. ಈ ಕುರಿತಾಗಿ ದಶಕಗಳಿಂದ ಅಧ್ಯಯನ ಮಾಡಿರುವ ಕೇಂಬ್ರಿಜ್ ವಿಶ್ವವಿದ್ಯಾಲಯದ ಪ್ರೊಫೆಸರ್ ಮೇರಿ ಎಡ್ಮಂಡ್ಸ್ ಮತ್ತು ಅಮೇರಿಕಾದ ಕಾರ್ನೆಗಿ ವಿಜ್ಞಾನ ಸಂಸ್ಥೆಯ ಡಾ. ರಾಬರ್ಟ್ ಹೇಝನ್ ಈ ಬಗ್ಗೆ ಹಲವಾರು ಕುತೂಹಲಕಾರಿ ವಿದ್ಯಮಾನಗಳನ್ನು ಈಚೆಗೆ ನೇಚರ್ ಪತ್ರಿಕೆಯ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.

ಭೂಮಿಯ ಅತ್ಯಂತ ಆಳದಲ್ಲಿ ಕಬ್ಬಿಣ ಸಾಂದ್ರವಾಗಿದೆ ಎಂದು ವಿಜ್ಞಾನಿಗಳು ಈಗಾಗಲೇ ತಿಳಿದಿದ್ದಾರೆ. ಅದರ ಜೊತೆಗೆ, ಜಗತ್ತಿನ ಶೇಕಡಾ 66 ರಷ್ಟು ಕಾರ್ಬನ್ ಕಬ್ಬಿಣದ ಕಾರ್ಬೈಡ್ ರೂಪದಲ್ಲಿ ಭೂಗರ್ಭದಲ್ಲಿದೆ ಎಂದು ಪತ್ತೆಯಾಗಿದೆ. ಹೀಗೆ ಕಾರ್ಬನ್ ಜೊತೆಗೆ ಸೇರಿದ ಕಬ್ಬಿಣ ಉಕ್ಕಿನ ಸ್ವರೂಪವನ್ನು ಪಡೆಯುತ್ತದೆ. ಭೂಮಿಯ ಮೇಲೆ ಘನ ರೂಪದಲ್ಲಿ ಇರುವ ಹಲವಾರು ಖನಿಜಗಳು ಮತ್ತು ಕಾರ್ಬನ್ ಭೂಮಿಯ ಆಳದ ಅಪಾರ ಒತ್ತಡದಿಂದ ದ್ರವರೂಪದಲ್ಲಿ ಕೂಡ ಇರುತ್ತದೆ. ಕಬ್ಬಿಣದಂತಹ ಅನೇಕ ಖನಿಜಗಳು ಆ ಒತ್ತಡದಲ್ಲಿ ಕಾರ್ಬನ್ ಜೊತೆಗೆ ಭಿನ್ನವಾಗಿ ವರ್ತಿಸಿ ವಿಶೇಷ ಮಾದರಿಯ ಕಾರ್ಬನ್ ಸಂಯುಕ್ತಗಳಾಗುತ್ತವೆ. ಇಂತಹ ಹಲವಾರು ಖನಿಜ ಮತ್ತು ಕಾರ್ಬನ್ ದ್ರವಗಳ ಬೆಸುಗೆಯಿಂದ ವಿಶಿಷ್ಟ ಖನಿಜ ಸಂಯುಕ್ತಗಳು ತಯಾರಾಗುತ್ತವೆ. ಕಾರ್ಬನ್ ವಜ್ರವಾಗುವುದು ಕೂಡ ಇಂತಹ ಒತ್ತಡದ ಸ್ಥಿತಿಯಲ್ಲೇ. ಇಂತಹ ವಜ್ರಗಳ ಸೃಷ್ಟಿಯಲ್ಲಿ, ಭೂಪದರಗಳ ಚಲನೆಯಲ್ಲಿ, ಜ್ವಾಲಾಮುಖಿಗಳ ಸ್ಫೋಟಗಳಲ್ಲಿ ಈ ದ್ರವ-ಖನಿಜಗಳ ಪಾತ್ರದ ಬಗ್ಗೆ ವಿಜ್ಞಾನಿಗಳು ಹೊಸ ಹೊಸ ವಿಷಯಗಳನ್ನು ತಿಳಿಯುತ್ತಿದ್ದಾರೆ.

ಸಮುದ್ರದ ಆಳ ಹೆಚ್ಚಾದಂತೆಲ್ಲಾ ಹಲವಾರು ಸ್ಥಳಗಳಲ್ಲಿ ಭೂಗರ್ಭದ ಜೊತೆ ಸಂಪರ್ಕ ಇರುತ್ತದೆ. ಅಂತಹ ಸಮುದ್ರದ ಆಳದಲ್ಲಿ ಬದುಕುವ ಜೀವಿಗಳು ತಯಾರಿಸುವ ಹಲವಾರು ವಿಶಿಷ್ಟ ಕಾರ್ಬನ್ ಸಂಯುಕ್ತಗಳು ಭೂಗರ್ಭ ಸೇರುತ್ತವೆ ಎಂದು ವಿಜ್ಞಾನಿಗಳ ಅಧ್ಯಯನ ತಿಳಿಸಿದೆ. ಭೂಮಿಯ ಆಳದಲ್ಲಿ ನೀರು ಹೇಗೆ ವರ್ತಿಸಬಹುದು ಎಂಬುದು ಕುತೂಹಲಕಾರಿ ಪ್ರಯೋಗ. ಭೂಗರ್ಭದ ಹಲವಾರು ಪ್ರದೇಶಗಳು ಆಳಸಮುದ್ರದ ಜೊತೆ ಸಂಪರ್ಕ ಹೊಂದಿವೆ. ಭೂಮಿಯ ಆಳದಲ್ಲಿನ ದ್ರವ-ಖನಿಜಗಳ ಚಲನೆಯಿಂದ ಸಮುದ್ರದ ಆಳದ ಮಟ್ಟ ಬದಲಾಗುತ್ತಲೇ ಇರುತ್ತದೆ. ಅಷ್ಟು ಆಳದ ಒತ್ತಡದಲ್ಲಿ ವಸ್ತುಗಳ ಸಾಂದ್ರತೆ ಹೆಚ್ಚುತ್ತಲೇ ಹೋಗುತ್ತದೆ. ಅಲ್ಲಿನ ಕೆಲವೇ ಕಿ.ಮೀ ವ್ಯಾಪ್ತಿಯ ಪ್ರದೇಶದ ಒಟ್ಟು ತೂಕ ಭೂಮಿಯ ಮೇಲಿನ ಎಲ್ಲಾ ಮನುಷ್ಯರ ಒಟ್ಟು ತೂಕಕ್ಕಿಂತ 250 ಪಟ್ಟು ಹೆಚ್ಚು ಎಂದರೆ ಆ ಸಾಂದ್ರತೆಯನ್ನು ಕಲ್ಪಿಸಿಕೊಳ್ಳಬಹುದು.

ಆಳ ಸಮುದ್ರದ ಅಧ್ಯಯನದಿಂದ, ಅಲ್ಲಿನ ಕಲ್ಲುಗಳ ಮತ್ತು ದ್ರವದ ವಿಶ್ಲೇಷಣೆಯಲ್ಲಿ ಅನೇಕ ಅಮೈನೋ ಆಮ್ಲಗಳು, ಕಾರ್ಬನ್ ಸಂಯುಕ್ತಗಳು ಪತ್ತೆಯಾಗಿವೆ. ಭೂಮಿಯ ಮೇಲೆ ಜೀವ ಶುರುವಾದದ್ದೇ ಸಾಗರಗಳಲ್ಲಿ ಅಲ್ಲವೇ? ಅಂದ ಮೇಲೆ ಜೀವಿಗಳ ಉಗಮ ಹೇಗೆ ಆಯಿತು ಎಂಬುದರ ಸುಳಿವು ಕೂಡ ಈ ಪ್ರದೇಶಗಳ ಅಧ್ಯಯನದಿಂದಲೇ ತಿಳಿಯಬಹುದು. ಒಟ್ಟಾರೆ, ಭೂಮಿಯಾಳದ ಕಾರ್ಬನ್ ಅಧ್ಯಯನ ಒಂದು ರೀತಿಯಲ್ಲಿ ಭೂವಿಜ್ಞಾನ, ರಸಾಯನ ವಿಜ್ಞಾನ, ಜೀವವಿಜ್ಞಾನಗಳ ಸಂಗಮ. ಸೂರ್ಯನ ಬೆಳಕು ಪ್ರವೇಶಿಸದ ಈ ಪ್ರದೇಶಗಳ ಒತ್ತಡ, ತಾಪಮಾನ ಊಹೆಗೆ ನಿಲುಕದಂತಹದ್ದು. ಇಲ್ಲಿ ಜರುಗುವ ವೈಜ್ಞಾನಿಕ ಪ್ರಕ್ರಿಯೆಗಳನ್ನು ಅರ್ಥ ಮಾಡಿಕೊಳ್ಳುವುದು ನಮ್ಮ ತಿಳಿವಿನ ವಿಸ್ತಾರವನ್ನು ಬಹಳವಾಗಿ ಹೆಚ್ಚಿಸುತ್ತದೆ.

ಆಳಕ್ಕೆ ಇಳಿದಷ್ಟೂ ಕುತೂಹಲಗಳನ್ನೇ ನೀಡುವ ಭೂಮಿಯ ಆಂತರ್ಯ ಮುಂದಿನ ದಶಕಗಳಲ್ಲಿ ಕಾರ್ಬನ್ ಅಧ್ಯಯನದಿಂದ ಮತ್ತಷ್ಟು ಸಂಕೀರ್ಣವಾಗಲಿದೆ. ಭವಿಷ್ಯದಲ್ಲಿ ಭೂಮಿಯ ಮತ್ತು ಸಮುದ್ರದ ಆಳಗಳಿಗೆ ಇಳಿಯಬಲ್ಲ ಹೊಸ ಉಪಕರಣಗಳು, ತಂತ್ರಜ್ಞಾನ, ಕಂಪ್ಯೂಟರ್ ಆಧಾರಿತ ವಿಶ್ಲೇಷಣೆ ಬರಲಿವೆ. ಭೂವಿಜ್ಞಾನಿಗಳು, ಲೋಹತಜ್ಞರು, ಜೀವವಿಜ್ಞಾನಿಗಳು ಸೇರಿ ಅಧ್ಯಯನ ನಡೆಸಲಿದ್ದಾರೆ. ತೀವ್ರ ಒತ್ತಡದಲ್ಲಿ ಕಾರ್ಬನ್ ಸಂಯುಕ್ತಗಳು ಯಾವ ರೀತಿ ವರ್ತಿಸುತ್ತೇವೆ ಎಂಬುದರ ಮೇಲೆ ನಮ್ಮ ಭವಿಷ್ಯದ ಹಲವಾರು ಅವಿಷ್ಕಾರಗಳು ಬೆಳೆಯಲಿವೆ. ಜೊತೆಗೆ, ಬೇರೆ ಗ್ರಹಗಳಲ್ಲಿ ಯಾವ ಮಾದರಿಯ ಸಂಯುಕ್ತಗಳು ಇರಬಹುದೆಂಬ ಅಂದಾಜು ಕೂಡ ನಿಖರವಾಗಲಿದೆ. ತೀವ್ರ ಒತ್ತಡದ ಪರಿಸ್ಥಿತಿಗಳಲ್ಲಿ ಸಾಂದ್ರತೆ ಹೆಚ್ಚಾಗುವುದರಿಂದ ಕಡಿಮೆ ಜಾಗದಲ್ಲಿ ಹೆಚ್ಚಿನ ವಸ್ತುಗಳನ್ನು ಹೇಗೆ ಅಡಕಗೊಳಿಸಬಹುದು ಎಂಬ ತಂತ್ರಜ್ಞಾನ ಬೆಳೆಯಲಿದೆ. ಇದರಿಂದ ಯಂತ್ರಗಳ ಗಾತ್ರ ಕಿರಿದಾಗಿ, ಅವನ್ನು ಡ್ರೋನ್ ಗಳಲ್ಲಿ ಅಳವಡಿಸಿ ಅದರ ಸಾಮರ್ಥ್ಯ ಹೆಚ್ಚಿಸಬಹುದು. ನೆಲದಾಳದ ದ್ರವಗಳ ಚಲನೆಯನ್ನು ತಿಳಿಯುವುದರಿಂದ ಜ್ವಾಲಾಮುಖಿಗಳ ವರ್ತನೆಯನ್ನು, ಸಮುದ್ರ ತಳಮಟ್ಟದ ಏರಿಳಿತವನ್ನು ಊಹಿಸಬಹುದು. ಬೆಳಕುರಹಿತ ಒತ್ತಡದ ಪರಿಸ್ಥಿತಿಗಳಲ್ಲಿ ಜೀವರಸಾಯನಗಳು ಹೇಗೆ ವರ್ತಿಸುತ್ತವೆ ಎಂದು ತಿಳಿಯಬಹುದು. ಜಗತ್ತಿನಲ್ಲಿ ಜೀವ ಹೇಗೆ ಹುಟ್ಟಿತು ಎನ್ನುವುದರಿಂದ ಹಿಡಿದು ಜೀವವಿಜ್ಞಾನದ ಹಲವಾರು ರಹಸ್ಯಗಳು ಬಯಲಾಗಬಹುದು. ಭೂಮಿಯಾಳದ ಕಾರ್ಬನ್ ಸಂಯುಕ್ತಗಳ ಅಧ್ಯಯನ ನಮ್ಮ ಭವಿಷ್ಯವನ್ನು ತೋರುವ ಬೆಳಕಿನ ಕಿಂಡಿ; ನಮ್ಮ ಭವಿಷ್ಯದ ಹಲವಾರು ಅವಶ್ಯಕತೆಗಳಿಗೆ ಉತ್ತರ ಕೂಡ.

ವಿಶ್ವವಾಣಿ ಪತ್ರಿಕೆಯಲ್ಲಿನ ಲೇಖನದ ಲಿಂಕ್: http://epaper.vishwavani.news/bng/e/bng/15-12-2019/7


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ