ಭಾನುವಾರ, ಏಪ್ರಿಲ್ 22, 2018



**ಸಮಗ್ರ ವೈದ್ಯಕೀಯ ವೃತ್ತಿಯನ್ನೇ ನಿಷೇಧಿಸಿರಿ**

ಇಂಗ್ಲೀಶ್ ಮೂಲ: ಡಾ ರಾಜಸ್ ದೇಶಪಾಂಡೆ, ನರರೋಗ ತಜ್ಞರು, ಪುಣೆ
ಕನ್ನಡ ಭಾವಾನುವಾದ: ಡಾ ಕಿರಣ್ ವಿ. ಎಸ್.

ಒಂದು ಮೋಜಿನ ಸಂಗತಿ ನೆನಪಾಗುತ್ತದೆ. ನಮಗೆ ತಿಳಿದಿದ್ದ ಒಬ್ಬರು ವಿಖ್ಯಾತ ಸರ್ಜನ್ ಇದ್ದರು. ಶಸ್ತ್ರಚಿಕಿತ್ಸಾ ಕೋಣೆಯ ದಿರಿಸಿನಲ್ಲಿ ಸದಾ ಕಂಗೊಳಿಸುತ್ತಿದ್ದರು. ರೋಗಿಯ ಚಿಂತಾಕ್ರಾಂತ ಸಂಬಂಧಿಗಳು ಶಸ್ತ್ರಚಿಕಿತ್ಸಾ ಕೋಣೆಯ ಬದಿಯಲ್ಲಿ ಕಾಯುತ್ತಾ ಆತನ ಶಸ್ತ್ರಚಿಕಿತ್ಸೆ ಯಶಸ್ವಿಯಾಗಲಿ ಎಂದು ಪ್ರಾರ್ಥಿಸುತ್ತಿದ್ದಾಗ, ಈ ವಿಖ್ಯಾತ ಸರ್ಜನ್ ನೇಮಿಸಿದ್ದ ಚತುರ ಅನುಭವೀ ವೈದ್ಯರುಗಳಲ್ಲಿ ಒಬ್ಬರು ಆ ಕಠಿಣ ಆಪರೇಶನ್ ಅನ್ನು ಮಾಡುತ್ತಿದ್ದರು. ಆ ಸಂದರ್ಭದಲ್ಲಿ ಈ ವಿಖ್ಯಾತ ಸರ್ಜನ್ ಮಹಾಶಯರು ಆಪರೇಶನ್ ಕೋಣೆಗೆ ಹೊಂದಿಕೊಂಡಂತೆ ಇದ್ದ ತಮ್ಮ ವೈಯುಕ್ತಿಕ ಕೋಣೆಯಲ್ಲಿ ಕುಳಿತು ಆಪರೇಶನ್ ಮುಗಿಯುವವರೆಗೆ ಟೆಲಿವಿಶನ್ ನೋಡುತ್ತಿರುತ್ತಿದ್ದರು. ಶಸ್ತ್ರಚಿಕಿತ್ಸೆ ಮುಗಿದ ನಂತರ ಹೊರಗೆ ಬಂದು ಬಹಳ ಸುಸ್ತಾದವರಂತೆ ನಟಿಸುತ್ತಾ, ದಯಾಳುವಿನ ನಗೆ ಬೀರುತ್ತಾ, ರೋಗಿಯ ಸಂಬಂಧಿಗಳಿಗೆ “ಇದೊಂದು ಅಸಾಧಾರಣ ಪ್ರಕರಣ. ನಿಮ್ಮ ರೋಗಿಯನ್ನು ಬಹುತೇಕ ಕಳೆದುಕೊಂಡು ಬಿಡಬೇಕಿತ್ತು. ನನ್ನ ಜ್ಞಾನ, ಅನುಭವವನ್ನೆಲ್ಲಾ ಸಮರ್ಪಿಸಿ, ಮಹಾನ್ ಪ್ರಯತ್ನದಿಂದ ಅವರನ್ನು ಉಳಿಸಿದ್ದೇನೆ. ನೀವು ಬಹಳ ಭಾಗ್ಯಶಾಲಿಗಳು” ಎನ್ನುತ್ತಿದ್ದರು. ರೋಗಿಯ ಮುಗ್ಧ ಸಂಬಂಧಿಗಳು ಕೃತಜ್ಞತೆಯ ಭಾವನೆಗಳಿಂದ ತುಂಬಿ ಆ ವಿಖ್ಯಾತ ವೈದ್ಯರ ಕಾಲಿಗೆ ಎರುಗುತ್ತಿದ್ದರು ಎಂಬುದನ್ನು ಹೇಳುವ ಅವಶ್ಯಕತೆಯೇ ಇಲ್ಲ. ತನ್ನ ರೋಗಿಯನ್ನು ಈ ದೊಡ್ಡ ಸರ್ಜನ್ ಮಹಾಶಯರು ಕನಿಷ್ಠ ಮುಟ್ಟಿಯೂ ಇಲ್ಲ ಎಂದು ಅವರಿಗೆ ತಿಳಿಯುವುದಂತೂ ದೂರದ ಮಾತು. ದೊಡ್ಡ ವೈದ್ಯರ ಬಿಲ್ಲಿನ ಮೊತ್ತ ಊದುತ್ತಿತ್ತು. ತನ್ನ ಪ್ರಾಣವನ್ನು ಉಳಿಸಿದವರು ಯಾರು ಎಂಬ ವಿಷಯ ರೋಗಿಗಾಗಲೀ, ಆತನ ಸಂಬಂಧಿಗಳಿಗಾಗಲೀ ಎಂದಿಗೂ ತಿಳಿಯುತ್ತಲೇ ಇರಲಿಲ್ಲ. ನಾವುಗಳು ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದಾಗ ಇಂತಹ ಘನ ವೈದ್ಯ ಮಹಾಶಯರಿಂದಲೇ ಜೀವನದಲ್ಲಿ ಏನನ್ನು ಮಾಡಬಾರದು ಎಂದು ಅರಿತದ್ದು! ಇತ್ತೀಚಿಗೆ ಲಂಡನ್ ನಗರದಲ್ಲಿ ನಡೆದ ಒಂದು ಮಾತು-ಕತೆ, ಭಾಷಣ ಈ ಕತೆಯನ್ನು ನೆನಪಿಸಿತು.

ವಿದೇಶದಲ್ಲಿ ಮಾತನಾಡುತ್ತಾ ನಮ್ಮ ದೇಶದ ಸನ್ಮಾನ್ಯ ಪ್ರಧಾನ ಮಂತ್ರಿಗಳು ಭಾರತದ ಸಮಗ್ರ ವೈದ್ಯಕೀಯ ವೃತ್ತಿಯ ಬಗ್ಗೆ ಕೀಳಾಗಿ, ಗೌಣವಾಗಿ ಮಾತನಾಡಿದ್ದು ದುರದೃಷ್ಟಕರ. ಪ್ರಪಂಚದಲ್ಲಿನ ಮುಂದುವರೆದ ರಾಷ್ಟ್ರಗಳಲ್ಲಿ ಪ್ರತೀ ಮೂವರಲ್ಲಿ ಒಬ್ಬರು ವೈದ್ಯರು ಭಾರತೀಯ ಮೂಲದವರು. ಅಂತಹವರು ಭಾರತವನ್ನು ಬಿಟ್ಟು ಹೊರದೇಶಗಳಿಗೆ ಹೋದ ಕಾರಣಗಳು - ನಮ್ಮಲ್ಲಿ ಅವಕಾಶಗಳ ಕೊರತೆ, ಕಡಿಮೆ ಆರ್ಥಿಕ ಪ್ರತಿಫಲ; ಅಷ್ಟೇಕೆ? ಮೂಲ ಭದ್ರತೆಯಲ್ಲೂ ಲೋಪ ಎಂದು. ಹೀಗೆ ವಿದೇಶಗಳಿಗೆ ಹಾರುವ ಅವಕಾಶಗಳು ಇದ್ದಾಗ್ಯೂ ನಮ್ಮ ದೇಶದಲ್ಲೇ ಉಳಿದು, ಇಲ್ಲೇ ಅಸ್ತಿತ್ವ ಕಂಡುಕೊಂಡು, ನಮ್ಮಲ್ಲೇ ದುಡಿಯುತ್ತಿರುವ ರಾಷ್ಟ್ರಾಭಿಮಾನಿ ವೈದ್ಯರ ಸಮೂಹವನ್ನು ಸನ್ಮಾನ್ಯ ಪ್ರಧಾನ ಮಂತ್ರಿಗಳು ನಿಕೃಷ್ಟವಾಗಿ ಭಾವಿಸಿದಂತೆ ಅನ್ನಿಸಿತು. ಭಾರತದ ಬಗೆಗಿನ ಪ್ರೀತಿ ಎಲ್ಲಿ ಹೋಯಿತು? ತಮ್ಮದೇ ದೇಶದ ಜನರನ್ನು ಕೀಳಾಗಿ ತೋರಿಸಿ ತಮ್ಮ ದೇಶಪ್ರೇಮವನ್ನು ಯಾರಾದರೂ ಪ್ರದರ್ಶಿಸುವರೇ?

ಮೊದಲು ಒಂದು ವಿಷಯ ಸ್ಪಷ್ಟಪಡಿಸೋಣ. ಕೆಲವು ಭ್ರಷ್ಟ ವೈದ್ಯರು ಇದ್ದಾರೆ; ಔಷಧ ಕಂಪೆನಿಗಳಿಂದ ಲಾಭ ಪಡೆಯುವವರು ಇದ್ದಾರೆ; ತಪ್ಪು ವಿಧಾನಗಳಿಂದ ಹಣ ಮಾಡುವಲ್ಲಿ ಭಾಗಿಯಾದವರು ಇದ್ದಾರೆ. ಇಂತಹವರ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಅಧಿಕಾರವೂ ಇದೆ; ಇಂತಹವರಿಗೆ ದಂಡನೆ ನೀಡಲು ನ್ಯಾಯ ವ್ಯವಸ್ಥೆಯೂ ಸರ್ಕಾರದಲ್ಲಿ ಇದೆ. ವೈದ್ಯಕೀಯ ವ್ಯಾಸಂಗದ ಸೀಟುಗಳನ್ನು ಮೆರಿಟ್ ಇಲ್ಲದ ಶ್ರೀಮಂತರಿಗೆ ಮಾರಲು ಸರ್ಕಾರ ಅನುಮತಿಸಿದ ದಿನವೇ ಈ ಭ್ರಷ್ಟಾಚಾರ ಮೊಳೆತು ಹೆಮ್ಮರವಾಯಿತು. ನಮ್ಮ ಸರ್ಕಾರ ಕೋಟಿಗಟ್ಟಲೆ ಬೆಲೆಯ ವೈದ್ಯಕೀಯ ಸೀಟುಗಳನ್ನು ಖಾಸಗೀ ಮೆಡಿಕಲ್ ಕಾಲೇಜುಗಳಲ್ಲಿ ಮಾರಲು ಅಂಗೀಕರಿಸುತ್ತದೆ.

ನಮ್ಮ ದೇಶದಲ್ಲಿ ಎಷ್ಟು ಮಂದಿ ರಾಜಕೀಯ ನಾಯಕರು ಖಾಸಗೀ ವೈದ್ಯಕೀಯ ಕಾಲೇಜುಗಳ ಮಾಲೀಕರಾಗಿದ್ದಾರೆ? ಅವುಗಳಲ್ಲಿ ಸ್ನಾತಕ, ಸ್ನಾತಕೋತ್ತರ ಸೀಟುಗಳನ್ನು ಹಣಕ್ಕೆ ಮಾರಾಟ ಮಾಡಿ ಅವರು ಎಷ್ಟು ಆದಾಯ ಕಮಾಯಿಸುತ್ತಾರೆ? ಇಂತಹ ವಿಷಯಗಳ ಬಗ್ಗೆಯೂ ಸನ್ಮಾನ್ಯ ಪ್ರಧಾನ ಮಂತ್ರಿಗಳು ಮಾತನಾಡಬೇಕೆಂದು ನಾವು ಬಯಸುತ್ತೇವೆ. ಔಷಧಗಳ ಮತ್ತು ಸ್ಟೆಂಟ್ ಗಳ ಬೆಲೆಯನ್ನು ಇಳಿಸಿದಂತೆ ವೈದ್ಯಕೀಯ ವ್ಯಾಸಂಗದ ಸೀಟುಗಳ ಬೆಲೆಯನ್ನೂ ಏಕೆ ಇಳಿಸಬಾರದು?

“ಭಾರತೀಯ ವೈದ್ಯರು ಸಿಂಗಾಪುರಕ್ಕೆ ಹೋಗುವುದು ಬಡ ರೋಗಿಗಳನ್ನು ಚಿಕಿತ್ಸೆ ಮಾಡಲು ಅಲ್ಲ” ಎಂದು ಸನ್ಮಾನ್ಯ ಪ್ರಧಾನ ಮಂತ್ರಿಗಳು ಹೇಳಿದರು. ಪ್ರಧಾನ ಮಂತ್ರಿಗಳು ಲಂಡನ್ ನಗರದಲ್ಲಿ ಭಾರತೀಯ ಬಡ ರೈತರ ಸೇವೆ ಮಾಡುತ್ತಿದ್ದರೇ? ಪ್ರಧಾನ ಮಂತ್ರಿಗಳ ವಿದೇಶ ಯಾತ್ರೆಗಳಲ್ಲಿ ಎಷ್ಟು ಮಂದಿ ಬಡ ರೈತರು ಅಥವಾ ಕಾರ್ಮಿಕರು ಅವರ ನಿಯೋಗದಲ್ಲಿ ಜೊತೆಯಾಗಿ ಹೋಗಿದ್ದಾರೆ? ಪ್ರಪಂಚವನ್ನು ವ್ಯಾಪಕವಾಗಿ ಸಂಚಾರ ಮಾಡಿರುವ ನಮ್ಮ ಪ್ರಧಾನ ಮಂತ್ರಿಗಳು ಉನ್ನತ ವ್ಯಾಸಂಗ ಪಡೆದಿರುವ ವೈದ್ಯರ ವಿದೇಶ ಪ್ರವಾಸದ ಬಗ್ಗೆ ಲಘುವಾಗಿ ಮಾತನಾಡುವುದು ಯೋಗ್ಯವಲ್ಲ. ವಿದೇಶಗಳಲ್ಲಿನ ವೈದ್ಯಕೀಯ ತಜ್ಞರ ಜೊತೆ ವ್ಯವಹರಿಸಿ, ಕಲಿತು, ತಮ್ಮ ವ್ಯಾಸಂಗದ ಹರಹುಗಳನ್ನು ಹೆಚ್ಚಿಸಿಕೊಳ್ಳುವ ಅವಶ್ಯಕತೆ ಭಾರತೀಯ ವೈದ್ಯರಿಗೆ ಇದೆ. ಭಾರತದ ರಾಜಕಾರಣ ನಮ್ಮ ದೇಶವನ್ನು ಬಡತನದಲ್ಲಿ ಬಿಗಿದು ಇಟ್ಟಿದೆ ಎಂಬ ಕಾರಣಕ್ಕೆ ನಮ್ಮ ದೇಶದ ವೈದ್ಯರು ವಿಶ್ವದಾದ್ಯಂತ ಮಾದರಿಯಾಗಿರುವ ವೈದ್ಯಕೀಯ ವ್ಯಾಸಂಗದ ಪರಿಭಾಷೆಯನ್ನು ಬದಲಿಸಲು ಸಾಧ್ಯವಿಲ್ಲ. ಸಿಂಗಾಪುರ, ಲಂಡನ್ ಇತ್ಯಾದಿ ವಿದೇಶಿ ಆಸ್ಪತ್ರೆಗಳಿಗೆ ತಮ್ಮ ಚಿಕಿತ್ಸೆಗೆ ಎಡತಾಕುವ ನಮ್ಮ ರಾಜಕಾರಣಿಗಳು ಅಲ್ಲಿ ಮಜಾ ಮಾಡಲೇನೂ ಹೋಗುವುದಿಲ್ಲ. ಅಂತೆಯೇ ಭಾರತದ ವೈದ್ಯರೂ ವಿದೇಶಗಳಿಗೆ ಕೇವಲ ಪ್ರವಾಸದ ಉದ್ದೇಶದಿಂದ ಹೋಗುವುದಿಲ್ಲ. ವೈದ್ಯಕೀಯ ರಂಗದ ನವೀನ ಜ್ಞಾನ-ತಂತ್ರಜ್ಞಾನ, ಪರಿಣತಿಗಳನ್ನು ಭಾರತದ ಜನತೆಗೆ ತಲುಪಿಸುವ ಉನ್ನತ ಉದ್ದೇಶ ಈ ಪ್ರವಾಸಗಳ ಪ್ರಥಮ ಆದ್ಯತೆ ಆಗಿರುತ್ತದೆ.

ಸನ್ಮಾನ್ಯ ಪ್ರಧಾನ ಮಂತ್ರಿಗಳು ತಾವು ಸ್ಟೆಂಟ್ ಗಳ ಬಗ್ಗೆ “ವಿಚಾರಿಸಿ”, ವೈದ್ಯರುಗಳು ರೋಗಿಗಳನ್ನು ದುಬಾರಿ ಸ್ಟೆಂಟ್ ಗಳನ್ನು ಕೊಳ್ಳುವಂತೆ “ಮರಳು ಮಾಡಿ, ಮೋಸ ಮಾಡುತ್ತಿದ್ದರು” ಎಂಬುದನ್ನು ಕಂಡುಕೊಂಡಿದ್ದಾಗಿ ಹೇಳಿದರು. ಈ ಮೊದಲು ಹಲವಾರು ಸಂದರ್ಭಗಳಲ್ಲಿ ಮಾತನಾಡುತ್ತಾ ಸ್ವಯಂ ಪ್ರಧಾನ ಮಂತ್ರಿಗಳೇ ತಾವು ಬಹಳ ವ್ಯಾಸಂಗ ಮಾಡಿದವರಲ್ಲವೆಂದೂ, ಯಾವುದೇ ವೈದ್ಯಕೀಯ ಚರ್ಚೆಗೆ ಬಹಳ ಹೆಚ್ಚಿನ ವ್ಯಾಸಂಗ, ವೈಜ್ಞಾನಿಕ ಆಧಾರಗಳು ಹಾಗೂ ಸಂಖ್ಯಾಶಾಸ್ತ್ರದ ಪರಿಣತಿ ಅವಶ್ಯಕ ಎಂದು ಹೇಳಿದ್ದಾರೆ. ಈ ರೀತಿಯ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುನ್ನ ಪ್ರಧಾನ ಮಂತ್ರಿಗಳು ಇದಕ್ಕೆ ಸರಿಯಾದ ತಜ್ಞರನ್ನೂ, ವಿಭಾಗಗಳನ್ನೂ, ವೈದ್ಯರನ್ನೂ ಸಂಪರ್ಕಿಸಿ ಸಲಹೆ ಪಡೆದಿದ್ದಾರೆ ಎಂಬುದು ಖಚಿತ. “ನಾನು ಪತ್ತೆ ಮಾಡಿ ಬದಲಾಯಿಸಿದೆ” ಎಂದು ಹೇಳುವ ಬದಲಿಗೆ “ನಮ್ಮ ತಜ್ಞರ ಸಮಿತಿ ಹೀಗೆ ಮಾಡಿತು” ಎಂದೇಕೆ ಅವರು ಹೇಳಬಾರದು? ಖಾಸಗೀ ವಿಷಯಗಳನ್ನು ಕಾಪಾಡುವ ಕಾನೂನಿನ ಪರಿಧಿಯಲ್ಲಿ ಯಾವ ಸ್ಟೆಂಟ್ ಯಾರಿಗೆ ಹಾಕಲಾಗುತ್ತದೆ ಎಂಬ ವಿಷಯ ಯಾರಿಗೂ ತಿಳಿಯುವುದಕ್ಕೆ ಆಸ್ಪದವಿಲ್ಲ. ಆದರೆ ವೈದ್ಯರುಗಳು ನೋಡುವಂತೆ, ರಾಜಕಾರಣಿಗಳು ಮತ್ತು ಸರ್ಕಾರದಲ್ಲಿನ ಉನ್ನತ ಅಧಿಕಾರಿಗಳು “ಅತ್ಯುತ್ತಮ ವಿದೇಶೀ ಆಮದು ಸ್ಟೆಂಟ್” ಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ.

ಮುಂದಿನ ವಿದೇಶ ಪ್ರವಾಸದ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ನಮ್ಮ ಸನ್ಮಾನ್ಯ ಪ್ರಧಾನ ಮಂತ್ರಿಗಳು ನಮ್ಮ ದೇಶದ ಸರ್ಕಾರಿ ಆಸ್ಪತ್ರೆಗಳ ಸ್ಥಿತಿ-ಗತಿ, ಆರೋಗ್ಯಕ್ಕಾಗಿ ನಮ್ಮ ಸರ್ಕಾರ ಮೀಸಲಿಟ್ಟಿರುವ ವಿತ್ತೀಯ ನಿಧಿ, ದೇಶದುದ್ದಕ್ಕೂ ಇರುವ ಗ್ರಾಮೀಣ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಭ್ಯವಿರುವ ಆರೋಗ್ಯ ಸೇವೆಗಳ ಗುಣಮಟ್ಟ, ನಮ್ಮ ಆರೋಗ್ಯ ಕ್ಷೇತ್ರದಲ್ಲಿ ಇರುವ ಸಿಬ್ಬಂದಿ ಮತ್ತು ತಜ್ಞ ವೈದ್ಯರ ತೀವ್ರ ಕೊರತೆ, ದೇಶದ ಆಸ್ಪತ್ರೆಗಳ ತೀವ್ರ ನಿಗಾ ಘಟಕಗಳಲ್ಲಿನ ವ್ಯವಸ್ಥೆಯ, ಶಸ್ತ್ರಚಿಕಿತ್ಸಾ ಕೊಠಡಿಗಳ, ಆಧುನಿಕ ತಂತ್ರಜ್ಞಾನದ ತೀಕ್ಷ್ಣ ಅಭಾವ – ಇವುಗಳ ಬಗ್ಗೆ ಮಾತನಾಡುತ್ತಾರೆಂದು ಬಯಸುತ್ತೇವೆ.

ಇದೆ ರೀತಿ, ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ನಮ್ಮ ಸ್ನಾತಕ / ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳ ಹಾಸ್ಟೆಲ್ ಗಳಲ್ಲಿನ ಅಮಾನವೀಯ ಪರಿಸ್ಥಿತಿ, ಸಣ್ಣ ಕೋಣೆಯೊಂದನ್ನು ನಾಲ್ಕಾರು ವಿದ್ಯಾರ್ಥಿಗಳು ಒತ್ತರಿಸಿಕೊಂಡು ಹಂಚಿಕೊಳ್ಳಬೇಕಾದ ದಯನೀಯ ಸ್ಥಿತಿ, ಅಂತೆಯೇ ಸರ್ಕಾರಿ ಅಧಿಕಾರಿಗಳಿಗೆ, ಮಂತ್ರಿ ಮಹೋದಯರಿಗೆ ಮೀಸಲಿಟ್ಟಿರುವ ವೈಭವೋಪೇತ ಬೃಹತ್ ಸರಕಾರೀ ಬಂಗಲೆಗಳು ವರ್ಷದ ಬಹಳಷ್ಟು ದಿನಗಳು ಖಾಲಿ ಬಿದ್ದಿರುವ ವಿಷಯವನ್ನೂ ನಮ್ಮ ಪ್ರಧಾನ ಮಂತ್ರಿಗಳು ಪ್ರಸ್ತಾಪಿಸಲಿ ಎಂದೂ ಬಯಸುತ್ತೇವೆ.

ಹಾಗೆ ನಮ್ಮ ಸನ್ಮಾನ್ಯ ಪ್ರಧಾನ ಮಂತ್ರಿಗಳು ನಮ್ಮ ದೇಶದ ಒಳ್ಳೆಯ ವೈದ್ಯರ ಬಗ್ಗೆ, ಭಾರತೀಯ ವೈದ್ಯರುಗಳು ವೈದ್ಯಕೀಯ ಕ್ಷೇತ್ರಗಳಲ್ಲಿ ಸಾಧಿಸಿರುವ ಅಸಾಧಾರಣ ಸಾಧನೆಗಳ ಬಗ್ಗೆ, ತಮ್ಮ ವೈಯುಕ್ತಿಕ ಕಷ್ಟ ನಷ್ಟಗಳನ್ನು ಬದಿಗಿಟ್ಟು ಗ್ರಾಮೀಣ ಭಾರತದಲ್ಲಿ ಅಸಾಮಾನ್ಯ ಸೇವೆ ಸಲ್ಲಿಸುತ್ತಿರುವ ಸಾವಿರಾರು ವೈದ್ಯರುಗಳ ಬಗ್ಗೆ, “ವೈದ್ಯಕೀಯ ಪ್ರವಾಸ” ಎಂಬ ಹೆಸರಿನಲ್ಲಿ ಸಾವಿರಾರು ವಿದೇಶೀಯರು ಭಾರತಕ್ಕೆ ಆಗಮಿಸಿ ಚಿಕಿತ್ಸೆ ಪಡೆಯಲು ಕಾರಣಕರ್ತರಾದ ವೈದ್ಯಕೀಯ ಸಾಧಕರ ಬಗ್ಗೆ, ಸರ್ಕಾರದ ಯಾವುದೇ ನೆರವಿಲ್ಲದೆ ಧರ್ಮಾಸ್ಪತ್ರೆಗಳನ್ನು ನಡೆಸುತ್ತಿರುವವರ ಬಗ್ಗೆ, ಅಂತಾರಾಷ್ಟ್ರೀಯ ಗುಣಮಟ್ಟದ ಚಿಕಿತ್ಸಾ ಪದ್ದತಿಗಳನ್ನು ನಮ್ಮ ದೇಶದ ರೋಗಿಗಳ ಅನುಕೂಲಕ್ಕೆ ತರುತ್ತಿರುವ ವೈದ್ಯಕೀಯ ತಜ್ಞರ ಬಗ್ಗೆ, ಸರ್ಕಾರದ ಪ್ರತಿಯೊಂದು ಆರೋಗ್ಯ ಕಾರ್ಯಕ್ರಮಗಳನ್ನು, ಪೋಲಿಯೋ ಮುಂತಾದ ಲಸಿಕಾಕರಣವನ್ನು, ತಾಯಿ-ಶಿಶು ಆರೋಗ್ಯ ಮುಂತಾದ, ಬಹಳ ಜತನ ಬಯಸುವ ಕಾರ್ಯಕ್ರಮಗಳನ್ನು ವರ್ಷದುದ್ದಕ್ಕೂ ತಮ್ಮ ಶ್ರಮದಿಂದ ನಿರಂತರವಾಗಿ ನಡೆಸಿ ಅದರ ಸಫಲತೆಗೆ ಕಾರಣರಾದ ತಳಮಟ್ಟದ ವೈದ್ಯರು ಮತ್ತು ಆರೋಗ್ಯ ಸಹಾಯಕರ ಬಗ್ಗೆ, ಇದ್ಯಾವುದನ್ನೂ ಮಾಧ್ಯಮಗಳಿಗೆ ಒಂದು ಸಣ್ಣ ಪೋಸು ಕೊಡದೆ ಮಾಡುವ ಸಾಧಕರ ಬಗ್ಗೆಯೂ ಭಾಷಣಗಳಲ್ಲಿ ಪ್ರಸ್ತಾಪಿಸುವರೆಂದು ಆಶಿಸುತ್ತೇವೆ. ದುರದೃಷ್ಟವಶಾತ್, ಪ್ರಧಾನ ಮಂತ್ರಿಗಳ ಇತ್ತೀಚಿನ ಮಾತುಗಳಿಂದ ನಮ್ಮ ದೇಶದಲ್ಲಿ ಒಳ್ಳೆಯ ವೈದ್ಯರುಗಳೇ ಇಲ್ಲವೆಂಬ ಭಾವನೆ ವ್ಯಕ್ತವಾಗುತ್ತದೆ.

ಸರಕಾರೀ ಯೋಜನೆಗಳ ಅಡಿಯಲ್ಲೂ ಬಡರೋಗಿಗಳು ಸಾಮಾನ್ಯ ವಾರ್ಡ್ ಗಳಲ್ಲೂ, ಅದೇ ಯೋಜನೆಯ ಅಡಿಯಲ್ಲಿ ಅದೇ ಕಚೇರಿಯ ಸರ್ಕಾರದ ಉನ್ನತ ಅಧಿಕಾರಿಗಳು ಖಾಸಗೀ ಆಸ್ಪತ್ರೆಗಳ ವೈಭವೋಪೇತ ವಾರ್ಡ್ ಗಳಲ್ಲಿ ಚಿಕಿತ್ಸೆ ಪಡೆಯುವ ಸೌಲಭ್ಯವಿದೆ! ಆರೋಗ್ಯರಕ್ಷಣೆಯ ವಿಷಯದಲ್ಲಿ ಸರ್ಕಾರದ ಈ ಪಕ್ಷಪಾತಿ “ವರ್ಗ-ತಾರತಮ್ಯ” ಸಮರ್ಥಿಸಲಾಗದು. ಇದರ ಬಗ್ಗೆಯೂ ಪ್ರಧಾನ ಮಂತ್ರಿಗಳು ಮಾತನಾಡುವರೆಂದು ಆಶಯ.

ಭಾರತ ದೇಶದ ಆರೋಗ್ಯ ಕ್ಷೇತ್ರದಲ್ಲಿ ಒಳ್ಳೆಯ ಬದಲಾವಣೆಗಳನ್ನು ತರಲು ಸಹಾಯಮಾಡಬಲ್ಲ ವೈದ್ಯರು, ಮಂತ್ರಿಗಳು, ಆರೋಗ್ಯ ಇಲಾಖೆಯ ಅಧಿಕಾರಿಗಳು – ಇವರ ಬಗ್ಗೆಯೂ ಪ್ರಧಾನ ಮಂತ್ರಿಗಳು ಮಾತನಾಡುವರೇ? ಸಮಗ್ರ ಆಧುನಿಕ ವೈದ್ಯ ಪದ್ಧತಿ ಒಂದು ವೇಳೆ ಇಷ್ಟೊಂದು ಕೆಟ್ಟದಾಗಿದ್ದರೆ, ಪ್ರಧಾನ ಮಂತ್ರಿಗಳು ಅದನ್ನು ಸಂಪೂರ್ಣವಾಗಿ ನಿಷೇಧಿಸಿ, ಮಹಾನ್ ಶಕ್ತಿಗಳನ್ನು ಹೊಂದಿರುವ ಬಾಬಾಗಳು ಮತ್ತು ಗುರುಗಳ ನೆರವಿನಿಂದ ನವೀನ ಆರೋಗ್ಯ ವ್ಯವಸ್ಥೆಯನ್ನು ಇಂದು ದೇಶಕ್ಕೆ ನೀಡಬಾರದೇಕೆ?

ನಮ್ಮ ದೇಶದಾದ್ಯಂತ ಹೇಗೆ ವೈದ್ಯರ ಮೇಲೆ ಅಮಾನುಷ ಹಲ್ಲೆಗಳು, ಕ್ರೌರ್ಯಗಳು ಸಂಭವಿಸುತ್ತಿವೆ, ಅಂತಹ ಅಕಾರ್ಯಗಳನ್ನು ನಮ್ಮ ಪ್ರಧಾನ ಮಂತ್ರಿಗಳು ಸಮರ್ಥಿಸುತ್ತಾರೆಯೇ ಎಂಬುದನ್ನು ಅಂತಾರಾಷ್ಟ್ರೀಯ ವೇದಿಕೆಯೊಂದರಲ್ಲಿ ಅವರು ಮಾತನಾಡುವರೆಂದು ನಾವು ಸರ್ವಥಾ ಬಯಸುತ್ತೇವೆ.

ಭಾರತದ ಜನತೆ ಬಹಳ ಉತ್ತಮವಾದ ಆರೋಗ್ಯ ರಕ್ಷಣೆಗೆ ಅರ್ಹರಾಗಿದ್ದಾರೆ. ಇದು ಬಹಳಷ್ಟು ಜನಕ್ಕೆ ಉತ್ತಮವಾದ ಆರೋಗ್ಯ ರಕ್ಷಣೆಯ ಸೌಕರ್ಯಗಳು ಲಭ್ಯವಾಗುವುದರೊಡನೆ ಆರಂಭವಾಗಬೇಕು. ಒಬ್ಬ ಸಾಮಾನ್ಯ ಪ್ರಜೆಗೆ ನಿಲುಕುವ ಬೆಲೆಗೆ ಉನ್ನತ ಆರೋಗ್ಯ ಸೌಲಭ್ಯಗಳು ಸರ್ಕಾರೀ ಆಸ್ಪತ್ರೆಗಳಲ್ಲಿ ದೇಶದಾದ್ಯಂತ ಎಲ್ಲಾ ವರ್ಗದ ಜನರಿಗೂ ದೊರೆಯುವಂತೆ ಆಗಬೇಕು. ಈ ರೀತಿ ಯಾವುದೇ ವರ್ಗೀಕರಣವಿಲ್ಲದೆ, ತಾರತಮ್ಯ ಎಣಿಸದೆ, ಸರ್ಕಾರೀ ಮಟ್ಟದಲ್ಲಿ ಯಾವುದೇ ರೀತಿಯ ಚಿಕಿತ್ಸೆಯ ಮಂಜೂರಾತಿಯನ್ನೂ ಒಂದೇ ದಿನದಲ್ಲಿ ನೀಡುವಷ್ಟು ಸಿಬ್ಬಂದಿ ಹಾಗೂ ವಿತ್ತೀಯ ನಿಧಿಯ ಸಹಕಾರವನ್ನು ಸರ್ಕಾರ ನೀಡಬೇಕು. ಜನತೆಗೆ ಇಂತಹ ಯಾವುದೇ ಪರ್ಯಾಯಗಳನ್ನೇ ನೀಡದೆ, ಖಾಸಗೀ ಅರೋಗ್ಯ ಸಂಸ್ಥೆಗಳನ್ನು ಏಕರೂಪವಾಗಿ ದೂಷಿಸುತ್ತಾ, ರಾಷ್ಟ್ರೀಯ, ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಅವುಗಳ ಬಗ್ಗೆ ಹೀನಾಯವಾಗಿ ಮಾತನಾಡುವುದು ಕೇವಲ ಕ್ರೂರ ಅರ್ಥಹೀನತೆಯಷ್ಟೇ ಅಲ್ಲ; ಅದರಿಂದ ರೋಗಿಗಳು ಮತ್ತು ವೈದ್ಯರ ನಡುವಿನ ಕಂದಕವೂ ಹಿಗ್ಗುತ್ತಲೇ ಹೋಗುತ್ತದೆ. ಪ್ರಾಸಂಗಿಕವೆಂದರೆ, ನಮ್ಮ ದೇಶದ ಖಾಸಗೀ ಆರೋಗ್ಯ ಸಂಸ್ಥೆಗಳು ಲಕ್ಷಾಂತರ ಬಡರೋಗಿಗಳಿಗೂ ಚಿಕಿತ್ಸೆ ನೀಡುತ್ತವೆ; ಅಂತೆಯೇ ಈ ದೇಶವನ್ನು ನಡೆಸುವ ಮಂತ್ರಿಗಳಿಗೆ ಕೂಡ ಚಿಕಿತ್ಸೆ ನೀಡುತ್ತವೆ.

ಈ ದೇಶದ ಯಾವುದೇ ರಾಜಕೀಯ ನಾಯಕ ಯಾ ರಾಜಕೀಯ ಪಕ್ಷದ ಬಗ್ಗೆ  ಯಾವುದೇ ವೈಯುಕ್ತಿಕ ವಿರೋಧವಿಲ್ಲ. ಭಾರತದ ಆರೋಗ್ಯ ಕ್ಷೇತ್ರದಲ್ಲಿ ಒಳ್ಳೆಯ ಬದಲಾವಣೆಗಳು ಬರುತ್ತವೆ ಎಂಬ ಸದಾಶಯವಿದೆ. ಒಳ್ಳೆಯ ವೈದ್ಯರು ಈ ದೇಶದ ಹೆಮ್ಮೆ; ಪ್ರತಿಷ್ಠೆ. ಇವರ ಬಗ್ಗೆ ಅಭಿಮಾನದಿಂದ ಮಾತನಾಡುವುದು ನಮ್ಮ ಅವಶ್ಯಕತೆ. ವೈದ್ಯಕೀಯ ಕ್ಷೇತ್ರದ ಒಳಿತನ್ನು ಸಮರ್ಥಿಸಿಕೊಳ್ಳುವುದು, ರಕ್ಷಿಸುವುದು ಒಂದು ಜರೂರತ್ತು. ಒಬ್ಬ ಒಳ್ಳೆಯ ವೈದ್ಯನಿಗೆ ತನ್ನ ವೃತ್ತಿಯ ಬಗ್ಗೆ ಇರುವಷ್ಟೇ ಪ್ರೀತಿ, ಅಭಿಮಾನ ತನ್ನ ರೋಗಿಗಳ ಬಗ್ಗೆಯೂ, ತನ್ನ ದೇಶದ ಬಗ್ಗೆಯೂ ಇರುತ್ತದೆ.
 -----------------------
ವಿಶ್ವವಾಣಿಯ 24/4/2018 ಸಂಚಿಕೆಯಲ್ಲಿ ಪ್ರಕಟಿತ ಲೇಖನ. ಇಂಗ್ಲೀಷ್ ಮೂಲ: ಡಾ ರಾಜಸ್ ದೇಶಪಾಂಡೆ. ಕನ್ನಡ ಭಾವಾನುವಾದ: ಡಾ ಕಿರಣ್ ವಿ ಎಸ್.

ಡಾ ರಾಜಸ್ ದೇಶಪಾಂಡೆ ಪುಣೆಯ ಪ್ರಖ್ಯಾತ ರುಬಿ ಹಾಲ್ ಕ್ಲಿನಿಕ್ ನಲ್ಲಿ ನರರೋಗ ತಜ್ಞರಾಗಿ ಹೆಸರು ಮಾಡಿದ್ದಾರೆ. ಹಲವಾರು ಪುಸ್ತಕಗಳನ್ನೂ, ಜನಪ್ರಿಯ ಲೇಖನಗಳನ್ನೂ ಬರೆದಿದ್ದಾರೆ. ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಹಲವಾರು ಲೇಖನಗಳು ಸಾಮಾಜಿಕ ಜಾಲತಾಣಗಳಲ್ಲಿ ವಿಫುಲ ಚರ್ಚೆಗೆ ಒಳಗಾಗಿವೆ. ಪ್ರಸ್ತುತ ಲೇಖನ ಲೇಖಕರ ವೈಯುಕ್ತಿಕ ಅಭಿಪ್ರಾಯ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ