ಭಾನುವಾರ, ಏಪ್ರಿಲ್ 1, 2018



ಒಂದು ಸರಿಯಾದ ನಿರ್ಧಾರ

ಇಂಗ್ಲೀಶ್ ಮೂಲ: ಡಾ ರಾಜಸ್ ದೇಶಪಾಂಡೆ, ನರರೋಗ ತಜ್ಞರು, ಪುಣೆ
ಕನ್ನಡ ಭಾವಾನುವಾದ: ಡಾ ಕಿರಣ್ ವಿ. ಎಸ್.

“ದಾರಿ; ದಾರಿ: ಸೈಡ್ ಸೈಡ್; ದಾರಿ ಬಿಡಿ” 

ಸ್ಟ್ರೆಚರ್ ನ ಮೇಲೆ ಮಲಗಿಸಿದ್ದ ಹನ್ನೊಂದು ವರ್ಷದ ಬಾಲಕನಿಗೆ ತೀವ್ರ ರಕ್ತಸ್ರಾವ. ಆ ಸ್ಟ್ರೆಚರ್ ಅನ್ನು ತಳ್ಳುತ್ತಿದ್ದ ವಾರ್ಡ್ ಬಾಯ್ ಮತ್ತು ಆ ರೋಗಿಯ ಸಂಬಂಧಿಕರು ಹೀಗೆ ಕೂಗುತ್ತಾ ಆಸ್ಪತ್ರೆಯ ಇಕ್ಕಟ್ಟಿನ ದಾರಿಗಳಲ್ಲಿ ಅಡ್ಡಲಾಗಿ ನಿಂತಿದ್ದ ಜನರನ್ನು ಬದಿಗೆ ಸರಿಸಿ ಸ್ಟ್ರೆಚರ್ ಗೆ ದಾರಿ ಮಾಡುವ ಪ್ರಯತ್ನ ಮಾಡುತ್ತಿದ್ದರು.

ಅದೊಂದು ಸಣ್ಣ ಶಹರದ ಸರ್ಕಾರಿ ಆಸ್ಪತ್ರೆ. ಅಲ್ಲಿಂದ ನಗರದ ದೊಡ್ಡ ಆಸ್ಪತ್ರೆಗೆ ಸುಮಾರು ಒಂದು ತಾಸಿನ ಪ್ರಯಾಣ. ಆ ದಿನದ ತನ್ನ ಡ್ಯೂಟಿ ಮುಗಿಸಿ ಹೊರಟಿದ್ದ ಡಾ ಅಮಿತ್ ಈ ಸದ್ದನ್ನು ಕೇಳಿದ ಕೂಡಲೇ ತಿರುಗಿ ಬಂದ. ವರ್ಷಗಳಿಂದ ಮೆಹನತ್ತು ಮಾಡಿ, ಸುಮಾರು ಒಂದು ಲಕ್ಷ ಎಂ ಬಿ ಬಿ ಎಸ್ ವೈದ್ಯರ ಪೈಪೋಟಿಯಲ್ಲಿ ವಿಜಯಿಯಾಗಿ ಸರ್ಜರಿ ವಿಭಾಗದ ಸ್ನಾತಕೋತ್ತರ ವ್ಯಾಸಂಗಕ್ಕೆ ಸೀಟು ಪಡೆದಿದ್ದ ಡಾ ಅಮಿತ್ ಈ ವೃತ್ತಿಯಲ್ಲಿ ದೊಡ್ಡ ಹೆಸರು ಮಾಡುವ ಕನಸುಗಳನ್ನು ಹೊತ್ತಿದ್ದ. ಅದಕ್ಕೆ ಬೇಕಾಗುವ ಶಾರೀರಿಕ, ಬೌದ್ಧಿಕ ಮತ್ತು ಮಾನಸಿಕ ಶ್ರಮಕ್ಕೂ ಸಿದ್ಧನಾಗಿದ್ದ. ಆ ಸಣ್ಣ ಊರಿನ ಸರಕಾರೀ ಆಸ್ಪತ್ರೆಯಲ್ಲಿ ಇದ್ದ ತೀರಾ ನಿಕೃಷ್ಟ ಸೌಲಭ್ಯಗಳಲ್ಲೇ ಎಷ್ಟು ಚಿಕಿತ್ಸೆ ಮಾಡಬಹುದೋ ಅಷ್ಟನ್ನೂ ಮಾಡುವ ಕಿರಿಯ ವೈದ್ಯ ಆತ. ಅದರ ನಂತರವೂ ರೋಗಿಗೆ ಹೆಚ್ಚಿನ ಮಟ್ಟದ ಚಿಕಿತ್ಸೆ ಬೇಕೆಂದರೆ ನಗರದ ದೊಡ್ಡ ಆಸ್ಪತ್ರೆಗೆ ಸಾಗಿಸುವುದಲ್ಲದೆ ಬೇರೆ ವಿಧಿಯೇ ಇಲ್ಲದ ಆ ಜಾಗದಲ್ಲಿ ಆತನ ಕರ್ತವ್ಯ. ಕೈಗೆ ಗ್ಲೌಸ್ ಧರಿಸಿ ಸ್ಟ್ರೆಚರ್ ಮೇಲಿರುವ ಬಾಲಕನ ಚಿಕಿತ್ಸೆಗೆ ಡಾ ಅಮಿತ್ ಸನ್ನದ್ಧನಾದ. 

ಸ್ಟ್ರೆಚರ್ ಮೇಲಿದ್ದ ಬಾಲಕ ಅರೆ ಪ್ರಜ್ಞಾವಸ್ಥೆಯಲ್ಲಿದ್ದ. ಬಾಲಕನ ಮುಖ, ಕೂದಲು ವಾಂತಿಯಿಂದ ಹೊಲಸಾಗಿ ಕೆಟ್ಟ ವಾಸನೆ ಬೀರುತ್ತಿತ್ತು. ತಲೆ ಬುರುಡೆಗೆ ಪೆಟ್ಟಾಗಿತ್ತು. ಬಲಗಾಲಿನ ಒಂದು ಮೂಳೆ ಮುರಿದಿತ್ತು. ಡಾ ಅಮಿತ್ ಮೊದಲು ರೋಗಿಯ ಕೈನ ರಕ್ತನಾಳ ಹುಡುಕಿ ಸಲೈನ್ ನೀಡಲು ಸೂಜಿ ಹಾಕಿ ದಾರಿ ಮಾಡಿದ. ತೀವ್ರವಾದ ರಕ್ತಸ್ರಾವದಲ್ಲಿ ರಕ್ತನಾಳಗಳೂ ಮುರುಟಿಕೊಂಡರೆ ಮುಗಿಯಿತು – ಸಲೈನ್ ನೀಡಲೂ ಕೂಡ ದೊಡ್ಡ ರಕ್ತನಾಳವನ್ನೇ ಛೇದಿಸಬೇಕು. ಸಣ್ಣ ಆಸ್ಪತ್ರೆಗಳಲ್ಲಿ ಅಂತಹ ವ್ಯವಸ್ಥೆ ಕನಸಿನ ಮಾತು. ಆದ್ದರಿಂದ ಹಾಗೆ ಆಗುವ ಮೊದಲು ರಕ್ತನಾಳಕ್ಕೆ ಸೂಜಿ ಸೇರಿಸಿ ದಾರಿಯನ್ನು ಉಳಿಸಿಕೊಳ್ಳಬೇಕು.

ಸಲೈನ್ ನೀಡುತ್ತಾ, ಬಾಹ್ಯ ರಕ್ತಸ್ರಾವಕ್ಕೆ ಕಟ್ಟು ಬಿಗಿಯುತ್ತಾ, ಆ ಬಾಲಕನ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಾ, ಡಾ ಅಮಿತ್ ರೋಗಿಯ ಸಂಬಂಧಿಗಳಿಂದ ಈ ಅಪಘಾತದ ಬಗ್ಗೆ ಮಾಹಿತಿ ಪಡೆಯತೊಡಗಿದ. ತಂದೆ ನಡೆಸುತ್ತಿದ್ದ ಬೈಕ್ ನ ಹಿಂಬದಿ ಸೀಟ್ ನಲ್ಲಿ ಕೂತಿದ್ದ ಬಾಲಕ, ತಂದೆಯ ಅಡ್ಡಾದಿಡ್ಡಿ ಚಾಲನೆಯ ಕಾರಣದಿಂದ ಬೈಕ್ ನಿಂದ ಬಿದ್ದುಬಿಟ್ಟಿದ್ದ. “ಸಣ್ಣ ಮಕ್ಕಳಿಗೆ ಹೆಲ್ಮೆಟ್ ಬೇಕಿಲ್ಲ” ಎಂಬ ತನ್ನ ತಂದೆಯ ನಿರ್ಧಾರದಿಂದ, ಬಿದ್ದ ಕೂಡಲೇ ಬಾಲಕನ ತಲೆಗೆ ಪೆಟ್ಟಾಗಿತ್ತು. ಹಿಂದಿನಿಂದ ಬಂದ ವಾಹನವೊಂದು ನಿಯಂತ್ರಣ ಸಾಧಿಸಲಾಗದೇ ಬಾಲಕನ ಬಲಗಾಲ ಮೇಲೆ ಹರಿದಿತ್ತು. ಈ ವಿಷಯವನ್ನು ತಡವರಿಸುತ್ತಾ ಹೇಳಿದ ಬಾಲಕನ ತಂದೆ ತಾನು ಕುಡಿದ ಸಾರಾಯಿನ ಅಮಲು ಇನ್ನೂ ಇಳಿದಿಲ್ಲ ಎಂಬುದನ್ನು ಸೂಚಿಸುವಂತೆ ವಾಸನೆ ಬೀರುತ್ತಿದ್ದ. ಅವನ ಜೊತೆಗೆ ಬಂದಿದ್ದ ಇನ್ನಿಬ್ಬರು ಸಂಬಂಧಿಗಳೂ ಸಾರಾಯಿಯ ವಿಷಯದಲ್ಲಿ ಅವನಿಗೆ ಪೈಪೋಟಿ ನೀಡುತ್ತಿದ್ದರು.

ಸುಮಾರು ಅರ್ಧ ಘಂಟೆಯ ಹರಸಾಹಸದಿಂದ ಹುಡುಗನ ಬಾಹ್ಯ ರಕ್ತಸ್ರಾವ ನಿಂತಿತ್ತು. ಸಮಯ ರಾತ್ರಿ ಹನ್ನೊಂದು ದಾಟಿತ್ತು. ಡಾ ಅಮಿತ್ ನ ಹೊಟ್ಟೆ ಚುರುಚುರು ಅನ್ನುತ್ತಿತ್ತು. ಆತನ ಮೊಬೈಲ್ ಫೋನ್ ಒಂದೇ ಸಮನೆ ರಿಂಗಣಿಸುತ್ತಿತ್ತು. ಗ್ಲೌಸ್ ಬಿಗಿದ ರಕ್ತಸಿಕ್ತ ಕೈಗಳಿಂದ ಅದನ್ನು ತೆಗೆಯುವುದಾದರೂ ಹೇಗೆ? ಡಾ ಅಮಿತ್ ಫೋನ್ ಕರೆಯನ್ನು ನಿರ್ಲಕ್ಷಿಸಿದ.
ಡ್ಯೂಟಿಯ ಮೇಲಿದ್ದ ನರ್ಸ್ ಬಂದು “ಡಾ ಅಮಿತ್, ನಿಮ್ಮ ಪತ್ನಿ ಫೋನ್ ಮಾಡಿದ್ದರು. ನಿಮ್ಮ ಮಗನಿಗೆ ನೂರ ಮೂರು ಡಿಗ್ರಿ ಜ್ವರ ಇದೆಯಂತೆ. ಬಹಳ ಸುಸ್ತಾಗಿದ್ದಾನಂತೆ. ಅವನನ್ನು ಮಕ್ಕಳ ವೈದ್ಯರ ಬಳಿ ನಿಮ್ಮ ಪತ್ನಿ ಒಯ್ದಿದ್ದಾರಂತೆ. ನಿಮಗೆ ಕೂಡಲೇ ಫೋನ್ ಮಾಡುವಂತೆ ಹೇಳಿದರು” ಎಂದು ಹೇಳಿ, ಡಾ ಅಮಿತ್ ನ ಕಿವಿಯಲ್ಲಿ “ನೀವು ಹೋಗಿ ನಿಮ್ಮ ಮಗನನ್ನು ನೋಡಿ. ಈ ರೋಗಿಗೆ ಸಾಕಷ್ಟು ಚಿಕಿತ್ಸೆ ನೀಡಿದ್ದೀರಿ. ದೊಡ್ದಾಸ್ಪತ್ರೆಗೆ ಕಳಿಸಿಬಿಡೋಣ. ನಾನು ರೆಫೆರಲ್ ಬರೆದುಕೊಡುತ್ತೇನೆ” ಎಂದರು. 

ಡಾ ಅಮಿತ್ ನ ಹೃದಯ ಜಗ್ಗಿತು. ಎರಡು ವರ್ಷದ ಅವನ ಮಗನಿಗೆ ತಂದೆಯನ್ನು ಕಂಡರೆ ಪ್ರಾಣ. ತನ್ನ ಮಗನ ಪರಿಸ್ಥಿತಿ ಡಾ ಅಮಿತ್ ನ ಮಾನಸಿಕ ಸಂತುಲತೆಯನ್ನು ಕುಗ್ಗಿಸಿತು. “ಅಪಾಯದಲ್ಲಿರುವ ರೋಗಿಯ ರಕ್ಷಣೆಯೇ ನಮ್ಮ ಆದ್ಯ ಕರ್ತವ್ಯ. ಅದನ್ನು ಎಂದಿಗೂ ನಿರ್ವಹಿಸಬೇಕು” ಎಂದು ತನ್ನ ಗುರುಗಳು ಹೇಳಿದ್ದು ತಲೆಯಲ್ಲಿ ಗುನುಗುತ್ತಿತ್ತು. ಆದರೆ ಓರ್ವ ತಂದೆಯಾಗಿ ತನ್ನ ಕರ್ತವ್ಯವನ್ನು ಬಲಿ ಕೊಡಬಹುದೇ? ಎಂಬ ಜಿಜ್ಞಾಸೆಯಲ್ಲಿ ಡಾ ಅಮಿತ್ ಕಂಗೆಟ್ಟ. ಫೋನ್ ತೆಗೆದು ತನ್ನ ಪತ್ನಿಗೆ ಕರೆ ಮಾಡಿದ. ಆ ಬದಿಯಿಂದ ಆಕೆ ಅಳುತ್ತಾ ಹೇಳಿದಳು “ಇಲ್ಲಿ ಮಗುವನ್ನು ಅಡ್ಮಿಟ್ ಮಾಡಿ ಎಂದು ಹೇಳುತ್ತಾರೆ. ಏನೂ ಹೇಳಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ನನಗೆ ಏನು ಮಾಡಬೇಕು ಎಂದೇ ತೋಚುತ್ತಿಲ್ಲ. ನೀವು ಬೇಗ ಬನ್ನಿ”.

ಡಾ ಅಮಿತ್ ಪತ್ನಿಯನ್ನು ಸಂತೈಸಲು ಪ್ರಯತ್ನಿಸಿದ. ಕರೆ ಕಟ್ ಆಯಿತು. ಆ ಗಾಯಾಳು ಬಾಲಕನನ್ನು ಒಮ್ಮೆ ನೋಡಿದ. ರಕ್ತಸ್ರಾವ ನಿಂತಿತ್ತು. ಬಾಲಕ ಇನ್ನೂ ಅರೆ ಪ್ರಜ್ಞಾವಸ್ಥೆಯಲ್ಲೇ ಇದ್ದ. ಮೆದುಳಿನ ಪರಿಸ್ಥಿತಿ ತಿಳಿಯದು. ಅದಕ್ಕೆ ಬೇಕಾದ ಸ್ಕ್ಯಾನ್ ವ್ಯವಸ್ಥೆ ಆ ಸಣ್ಣ ಸರಕಾರೀ ಆಸ್ಪತ್ರೆಯಲ್ಲಿ ಇಲ್ಲ. ಡಾ ಅಮಿತ್ ಆ ಬಾಲಕನ ತಂದೆಯನ್ನು ಕರೆಯುವಂತೆ ಹೇಳಿದ. ಆದರೆ ಅಲ್ಲಿಗೆ ನುಗ್ಗಿದ್ದು ಸುಮಾರು ಇಪ್ಪತ್ತು ದಾಂಡಿಗರ ಗುಂಪು. ಅವರಲ್ಲಿ ಬಹುತೇಕರು ಗಡದ್ದಾಗಿ ಸಾರಾಯಿ ಹೊಡೆದು ಕೆಟ್ಟ ಭಾಷೆಯಲ್ಲಿ ಕೂಗುತ್ತಿದ್ದರು. ಬಾಲಕನ ಪರಿಸ್ಥಿತಿಯನ್ನು ವಿವರಿಸುತ್ತಿದ್ದಂತೆ ಒಬ್ಬ ದಾಂಡಿಗ ಮುಂದೆ ನುಗ್ಗಿ “ನಮ್ಮ ಮಗುವಿಗೆ ಏನಾದರೂ ಆದರೆ ನಿನ್ನ ಸಮೇತ ಇಡೀ ಆಸ್ಪತ್ರೆಯನ್ನೇ ಸುಟ್ಟುಬಿಡುತ್ತೇವೆ” ಎಂದು ಅರಚಿದ. ಆ ಆಸ್ಪತ್ರೆಯ ರಕ್ಷಣೆಗೆಂದು ನಿಯುಕ್ತರಾಗಿದ್ದ ಇಬ್ಬರು ಸಣಕಲ ಸಿಬ್ಬಂದಿ ಡಾ ಅಮಿತ್ ಗಿಂತ ಅಸಹಾಯಕರಾಗಿ ನಿಂತಿದ್ದರು. 

ಅಷ್ಟರಲ್ಲಿ ತನ್ನ ಚೇಲಾ ಪಟಾಲಂ ಜೊತೆಗೆ ಆ ಭಾಗದ ಪುರಸಭಾ ಸದಸ್ಯನ ಆಗಮನವಾಯಿತು. ಇನ್ನೆರಡು ತಿಂಗಳಲ್ಲಿ ಚುನಾವಣೆ. ಆತನಿಗೆ ಬೇಕಾದ್ದು ಜನರ ವೋಟು. ಅದಕ್ಕೆ ಸರಿಯಾಗಿ ಆತನ ಮಾತುಗಳು. ಆ ಇಡೀ ಸರಕಾರೀ ಆಸ್ಪತ್ರೆ ತನ್ನ ಸ್ವಂತ ಆಸ್ತಿ; ಅದರಲ್ಲಿ ಕೆಲಸ ಮಾಡುವವರೆಲ್ಲರೂ ತನ್ನ ಜವಾನರು ಎಂಬ ಧಾಟಿಯಲ್ಲಿ ಆ ರಾಜಕಾರಣಿ ಅರಚತೊಡಗಿದ. ಆತನ ಭಾಷೆ ಮತ್ತಷ್ಟು ನಾಟಕೀಯವಾಗಿಯೂ, ಕೊಳಕಾಗಿಯೂ ಇತ್ತು. ಒಟ್ಟಿನಲ್ಲಿ ಅಲ್ಲಿ ನೆರೆದಿದ್ದ ಜನಕ್ಕೆ ಖುಷಿ ಆಗಬೇಕು; ಅದಕ್ಕಾಗಿ ಯಾರ ಬಲಿ ಬಿದ್ದರೂ ಸರಿ ಎಂಬ ಧೋರಣೆ ಆತನದ್ದು.

ಡಾ ಅಮಿತ್ ಈ ಬುದ್ಧಿಹೀನ ಗುಂಪನ್ನು ಅವಲೋಕಿಸಿದ. ಪರಿಸ್ಥಿತಿ ಕೈ ಮೀರುವ ಎಲ್ಲಾ ಲಕ್ಷಣಗಳೂ ಇದ್ದವು. ಈಗ ಆ ಗಾಯಾಳು ಬಾಲಕನ ಜವಾಬ್ದಾರಿ ಅಷ್ಟೇ ಅಲ್ಲ; ತನ್ನ ಸ್ವಂತದ, ತನ್ನ ಸಿಬ್ಬಂದಿಯ, ಆಸ್ಪತ್ರೆಯಲ್ಲಿ ದಾಖಲಾಗಿರುವ ಇತರ ರೋಗಿಗಳ ಸುರಕ್ಷತೆಯೂ ಅವನ ಹೆಗಲಿಗೆ ಬೇತಾಳನಂತೆ ಬಂದು ಹತ್ತಿತ್ತು. ಆಗಬಹುದಾದ ಅನಾಹುತಕ್ಕೆ ತಾನು ಯಾವ ರೀತಿ ಕಾರಣ ಎಂಬುದು ಆತನಿಗೆ ಅರ್ಥವಾಗಲೇ ಇಲ್ಲ. ಇದರ ಜೊತೆ ತನ್ನ ಸ್ವಂತ ಮಗನ ಅನಾರೋಗ್ಯ ಬೇರೆ. ಡಾ ಅಮಿತ್ ದಿಗ್ಮೂಢನಾದ.

ಈ ರೀತಿಯ ಪರಿಸ್ಥಿತಿಗಳನ್ನು ನಮ್ಮ ಸಮಾಜ ಅರ್ಥೈಸುವುದೇ ಬೇರೆ ರೀತಿ. “ಆ ವೈದ್ಯ ಗಾಂಚಲಿ ಮಾಡಿರಬೇಕು; ದುಡ್ಡಿಗಾಗಿ ಬೇರೆ ಕಡೆ ರೋಗಿಯನ್ನು ವರ್ಗಾಯಿಸಿರಬೇಕು” ಇನ್ನೂ ಮುಂತಾದ ಆರೋಪಗಳು ಸರ್ವೇಸಾಮಾನ್ಯ. ಬುದ್ಧಿಜೀವಿ ಅನಿಸಿಕೊಂಡವರಂತೂ “ವೈದ್ಯರು ರೋಗಿಯ ಕುಡುಕ ನಿಕಟವರ್ತಿಗಳ ಜೊತೆಯಲ್ಲಿ ಕರುಣೆಯಿಂದ ಮಾತನಾಡಲು ಕಲಿಯಬೇಕು” ಎಂದು ಉದ್ದುದ್ದ ಭಾಷಣಗಳನ್ನೇ ಬಿಗಿದಾರು. ನ್ಯಾಯದಾತರು “ಒದೆ ತಿನ್ನಲು ಇಷ್ಟ ಇಲ್ಲದಿದ್ದರೆ ಕೆಲಸ ಬಿಟ್ಟು ತೊಲಗಿ” ಎನ್ನುವ ಅಣಿಮುತ್ತುಗಳನ್ನು ಉದುರಿಸಿಯಾರು. ಆದರೆ ಇಂತಹ ಫರ್ಮಾನುಗಳನ್ನು ಹೊರಡಿಸುವ ಮಂದಿಯ ಸುತ್ತಾ ಬಲವಾದ ಕಾವಲು ಪಡೆ. ಯಾವ ಗೂಂಡಾ ಕೂಡ ಅವರ ಬಳಿ ಸುಳಿಯುವಂತಿಲ್ಲ. ಒಂದು ಕೇಸು ನಿರ್ಧಾರವಾಗಲು ದಶಕಗಳೇ ಉರುಳಿದರೂ ಪ್ರಶ್ನಿಸುವಂತಿಲ್ಲ. ಲಕ್ಷಾವಧಿ ಕೇಸುಗಳು ನಿರ್ಧಾರವಾಗಲು ಬಾಕಿ ಇದ್ದರೂ ಅವರಿಗೆ ಬೇಸಿಗೆ ರಜೆ; ಚಳಿಗಾಲದ ರಜೆ – ಇತ್ಯಾದಿ.

ಡಾ ಅಮಿತ್ ಆಲೋಚಿಸಿದ. ಒಂದು ವೇಳೆ ಈ ಕುಡುಕ ಗೂಂಡಾ ಗುಂಪಿನ ಕೈಗೆ ಸಿಕ್ಕಿ ತಾನು ಸತ್ತೇ ಹೋದರೆ? ಸರ್ಕಾರ, ಕಾನೂನು, ರೋಗಿಯ ಸಂಬಂಧಿಗಳು, ಮಾಧ್ಯಮ, ಸಮಾಜ – ಯಾರೊಬ್ಬರೂ ಆ ಮೃತ ವೈದ್ಯನ ಹೆಂಡತಿ-ಮಕ್ಕಳ ಬಗ್ಗೆ ಆಲೋಚಿಸುವುದಾಗಲೀ, ಕನಿಕರ ತೋರುವುದಾಗಲೀ ಮಾಡುವುದಿಲ್ಲ. ನಮ್ಮ ಆರೋಗ್ಯ ಚೆನ್ನಾಗಿದ್ದಾಗ ವೈದ್ಯ ಒಳ್ಳೆಯವನೋ ಅಲ್ಲವೋ ಎಂಬ ಚಿಂತೆ ಯಾರಿಗಿರುತ್ತದೆ? ಸತ್ತ ವೈದ್ಯನೂ ಅಂತೆಯೇ. ಒಬ್ಬ ಒಳ್ಳೆಯ ವೈದ್ಯ ಹೀಗೆ ತನ್ನದಲ್ಲದ ತಪ್ಪಿಗೆ ಗೂಂಡಾಗಳಿಂದ ಹೊಡೆತ ತಿಂದು ಸತ್ತಾಗ ಆ ವೈದ್ಯನ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡಿದ ಉದಾಹರಣೆ ನಮ್ಮ ದೇಶದಲ್ಲಿ ಇದುವರೆಗೂ ಇಲ್ಲ. ಹೋಗಲೀ ಸಮಾಜವಾದರೂ ಆ ಮೃತ ವೈದ್ಯನ ಕುಟುಂಬಕ್ಕೆ ಆಸರೆಯಾಗಿ ನಿಂತ ಉದಾಹರಣೆ? ಊಹೂ; ಅದೂ ಇಲ್ಲ.

ಈ ಮಧ್ಯೆ ಆ ಗಾಯಾಳು ಬಾಲಕನ ತಾಯಿ ಬಂದು ಡಾ ಅಮಿತ್ ನ ಮುಂದೆ ಗೋಳಾಡಿದಳು. ಆ ನಿಸ್ಸಹಾಯಕ ತಾಯಿಯಲ್ಲಿ ಡಾ ಅಮಿತ್ ತನ್ನದೇ ಪರಿಸ್ಥಿತಿಯನ್ನು ಕಂಡ. ತನ್ನ ಪತ್ನಿಯೂ ಹೀಗೇ ಕಂಗಾಲಾಗಿರಬಹುದೆಂದು ಅವನಿಗೆ ಅನಿಸಿತು. ಬದಿಗೆ ಹೋಗಿ ಫೋನ್ ತೆರೆದು ತನ್ನ ಪತ್ನಿಯೊಂದಿಗೆ ಮಾತನಾಡಿದ. ಆಕೆ ಬಿಕ್ಕುತ್ತಾ ಹೇಳಿದಳು “ಮಗುವನ್ನು ಅಡ್ಮಿಟ್ ಮಾಡಿದ್ದಾರೆ. ಪರೀಕ್ಷೆಗಳಿಗೆ ರಕ್ತ ತೆಗೆದಿದ್ದಾರೆ. ಏನೂ ಹೇಳಲಾಗದು ಎನ್ನುತ್ತಿದ್ದಾರೆ”. ಆತಂಕ ಆಕೆಯ ದನಿಯಲ್ಲಿ ಮಡುವಾಗಿತ್ತು. ಡಾ ಅಮಿತ್ ತನ್ನ ಪತ್ನಿಯನ್ನು ಸಂತೈಸುತ್ತಿದ್ದಾಗಲೇ ಮತ್ತೆ ಆ ಬದಿಯಿಂದ ಜೋರು ಕೂಗಾಟಗಳು ಕೇಳಿದವು. ಕರೆ ಕಟ್ ಮಾಡಿ ಆ ಬದಿಗೆ ಹೋದ. 

ಆ ಬದಿಯಲ್ಲಿ ಮತ್ತೋರ್ವ ಮಹಿಳಾ ರಾಜಕಾರಣಿ ಬಂದಿದ್ದರು. ಆಕೆಯದು ವಿರೋಧ ಪಕ್ಷ. ಸೀದಾ ಆ ಗಾಯಾಳು ಬಾಲಕನ ಬಳಿ ಹೋಗಿ ಅವನ ಶರೀರವನ್ನು ಜಗ್ಗುತ್ತಾ, ಅವನ ತಲೆಯನ್ನು ಹೊರಳಾಡಿಸುತ್ತಾ “ಏಯ್. ಏಯ್” ಎಂದು ಮಾತನಾಡಲು ಪ್ರಯತ್ನಿಸುತ್ತಿದ್ದಳು. ಆ ವಿಕೃತಿಯಲ್ಲಿ ಆ ಗಾಯಾಳು ಬಾಲಕನಿಗೆ ಮತ್ತೆ ರಕ್ತ ಜಿನುಗಿದ್ದನ್ನು ಕಂಡು ಡಾ ಅಮಿತ್ ಅಲ್ಲಿಗೆ ಓಡಿದ. ಅವನನ್ನು ಅಡ್ಡ ತಡೆದ ಆ ಮಹಿಳಾ ರಾಜಕಾರಣಿ “ಮಗು ಯಾಕೆ ಮಾತನಾಡುತ್ತಿಲ್ಲ? ಏನು ಕತ್ತೆ ಕಾಯಕ್ಕೆ ನಿಮಗೆಲ್ಲಾ ಸಂಬಳ ಕೊಟ್ಟು ಇಟ್ಟುಕೊಂಡಿದ್ದೀವಾ? ಮಗೂನ ಪರಿಸ್ಥಿತಿ ಕೂಡಲೇ ಸರಿ ಮಾಡಿದರೆ ಸೈ. ಇಲ್ಲವಾದರೆ ನಾಳೆ ಟಿ ವಿ ಚಾನಲ್ ಗಳಲ್ಲಿ ನಿನ್ನ ಬಂಡವಾಳ ಮಣ್ಣು ಪಾಲಾಗುತ್ತೆ ನೋಡು” ಎಂದು ತಾರಕ ಸ್ವರದಲ್ಲಿ ಅರಚಿದಳು.
ಡಾ ಅಮಿತ್ ಗೆ ಎಲ್ಲಾ ದ್ವಂದ್ವಗಳಿಗೂ ಒಮ್ಮೆಲೇ ಉತ್ತರ ದೊರಕಿದಂತಾಯಿತು. ತಾನು ಮಾಡಬೇಕಾದ ಕೆಲಸವೇನು? ತನ್ನ ಪಾಲಿಗೆ ಸರಿಯಾದ ನಿರ್ಧಾರ ಯಾವುದು? ಎಂಬ ಪ್ರಶ್ನೆಗಳಿಗೆ ಏಕಾಏಕಿ ಉತ್ತರ ದೊರಕಿ ಮನಸ್ಸು ನಿರುಮ್ಮಳವಾಯಿತು.  
                             --------------

ಮೂಲ ಲೇಖಕರ ಪರಿಚಯ: ಡಾ ರಾಜಸ್ ದೇಶಪಾಂಡೆ ಪುಣೆಯ ಪ್ರಖ್ಯಾತ ರುಬಿ ಹಾಲ್ ಕ್ಲಿನಿಕ್ ನಲ್ಲಿ ನರರೋಗ ತಜ್ಞರಾಗಿ ಹೆಸರು ಮಾಡಿದ್ದಾರೆ. ಹಲವಾರು ಪುಸ್ತಕಗಳನ್ನೂ, ಜನಪ್ರಿಯ ಲೇಖನಗಳನ್ನೂ ಬರೆದಿದ್ದಾರೆ. ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಹಲವಾರು ಲೇಖನಗಳು ಸಾಮಾಜಿಕ ಜಾಲತಾಣಗಳಲ್ಲಿ ವಿಫುಲ ಚರ್ಚೆಗೆ ಒಳಗಾಗಿವೆ. ಪ್ರಸ್ತುತ ಲೇಖನ ಲೇಖಕರ ವೈಯುಕ್ತಿಕ ಅಭಿಪ್ರಾಯ. ಈ ಲೇಖನವನ್ನು ಯಾವುದೇ ಬದಲಾವಣೆ ಮಾಡದೇ ಯಾರು ಬೇಕಾದರೂ ಹಂಚಿಕೊಳ್ಳಬಹುದು.

ಬುಧವಾರ 4/ಏಪ್ರಿಲ್/2018 ರಂದು "ವಿಶ್ವವಾಣಿ" ಕನ್ನಡ ದಿನಪತ್ರಿಕೆಯಲ್ಲಿ ಪ್ರಕಟವಾದ ಲೇಖನ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ