ಭಾನುವಾರ, ಅಕ್ಟೋಬರ್ 8, 2023

 ಮಗುವಿನ ಹೃದಯದಲ್ಲಿ ರಂಧ್ರ - ಪರಿಹಾರವೇನು?

ಡಾ. ಕಿರಣ್ ವಿ.ಎಸ್.

ವೈದ್ಯರು

ಹೃದಯದ ಕಾಯಿಲೆ ಎಂದರೆ ಕಣ್ಣ ಮುಂದೆ ಕೂದಲು ನರೆತ ವೃದ್ಧರ ಚಿತ್ರ ಬರುತ್ತಿತ್ತು. ಈಚೆಗೆ ಮೂವತ್ತರ ಹರೆಯದಲ್ಲೂ ಹೃದ್ರೋಗದಿಂದ ಬಳಲುತ್ತಿರುವವರನ್ನು ಕಾಣುತ್ತಿದ್ದೇವೆ. ಆದರೆ ಹೃದ್ರೋಗ ಚಿಕಿತ್ಸೆ ಮಾಡುವ ಪ್ರಮುಖ ಆಸ್ಪತ್ರೆಗಳಲ್ಲಿ "ಮಕ್ಕಳ ಹೃದ್ರೋಗ ವಿಭಾಗ"ಗಳನ್ನು ಕಂಡವರು, “ಮಕ್ಕಳಿಗೆ ಹೃದಯದ ಕಾಯಿಲೆ ಬರುತ್ತದೆಯೇ?” ಎಂದು ಅಚ್ಚರಿ ಪಡಬಹುದು.

ಮಕ್ಕಳಲ್ಲಿ ಕಾಣುವ ಹೃದಯದ ಸಮಸ್ಯೆಗಳು ವಿಶಿಷ್ಟವಾದವು. ಇವು ಹಿರಿಯರಲ್ಲಿ ಕಂಡುಬರುವ ಹೃದ್ರೋಗಗಳಿಗಿಂತ ಸಂಪೂರ್ಣ ಭಿನ್ನ. ವಯಸ್ಸಾದವರಲ್ಲಿ ಬಹುಮಟ್ಟಿಗೆ ಕಾಣುವುದು ಅಧಿಕ ರಕ್ತದೊತ್ತಡ, ಹೃದಯಕ್ಕೆ ರಕ್ತ ಪೂರೈಸುವ ಧಮನಿಗಳ ಅಡೆತಡೆ, ಹೃದಯದ ಮಾಂಸಖಂಡಗಳ ದೌರ್ಬಲ್ಯ ಮುಂತಾದುವು. ಆದರೆ, ಗರ್ಭಸ್ಥ ಶಿಶುವಿನ ಹೃದಯದ ರಚನೆಯಲ್ಲಿ ಆಗುವ ಜನ್ಮಜಾತ ದೋಷಗಳು ಮಗು ಹುಟ್ಟಿದ ಕೆಲಕಾಲದಲ್ಲಿ, ಇಲ್ಲವೇ ಎಳೆಯ ವಯಸ್ಸಿನಲ್ಲೇ ಕಾಣುತ್ತವೆ. ಹುಟ್ಟುವ ನೂರು ಮಕ್ಕಳಲ್ಲಿ ಒಂದು ಶಿಶುವಿಗೆ ಇಂತಹ ಜನ್ಮಜಾತ ಹೃದಯದ ಸಮಸ್ಯೆ ಇರುತ್ತದೆ ಎಂದು ಅಧ್ಯಯನಗಳು ತಿಳಿಸುತ್ತವೆ.  

ಹೃದಯ ಸರಳವಾದರೂ ಸಂಕೀರ್ಣವಾದ ಅಂಗ. ಆಕ್ಸಿಜನ್ ಪ್ರಮಾಣ ಕಡಿಮೆ ಇರುವ ಅಶುದ್ಧ ರಕ್ತ ಶರೀರದ ಎಲ್ಲೆಡೆಯಿಂದ ಅಪಧಮನಿಗಳ ಮೂಲಕ ಹೃದಯದ ಬಲಭಾಗವನ್ನು ಸೇರಿ, ಅಲ್ಲಿಂದ ಶ್ವಾಸಕೋಶಗಳನ್ನು ತಲುಪುತ್ತದೆ. ಅಲ್ಲಿ ಉಸಿರಾಟದ ಆಕ್ಸಿಜನ್ ಬೆರೆತು, ರಕ್ತದಲ್ಲಿನ ಆಕ್ಸಿಜನ್ ಪ್ರಮಾಣ ಹೆಚ್ಚಾಗಿ, ರಕ್ತ ಶುದ್ಧವಾಗುತ್ತದೆ. ಈ ಆಕ್ಸಿಜನ್-ಯುಕ್ತ ಶುದ್ಧ ರಕ್ತ ಹೃದಯದ ಎಡಭಾಗವನ್ನು ಸೇರಿ, ಅಭಿಧಮನಿಗಳ ಮೂಲಕ ಇಡೀ ಶರೀರಕ್ಕೆ ಸರಬರಾಜಾಗುತ್ತದೆ. ಅಶುದ್ಧ ಮತ್ತು ಶುದ್ಧ ರಕ್ತಗಳನ್ನು ಪ್ರತ್ಯೇಕಿಸಲು ಹೃದಯದ ಎಡ ಮತ್ತು ಬಲಭಾಗಗಳ ನಡುವೆ ಎರಡು ಗೋಡೆಗಳು ಇರುತ್ತವೆ. ರಕ್ತದ ಏಕಮುಖ ಸಂಚಾರವನ್ನು ನಿಯಂತ್ರಿಸಲು ಹೃದಯದಲ್ಲಿ ಸ್ವಯಂಚಾಲಿತ ಬಾಗಿಲಿನಂತಹ, ನಿಶ್ಚಿತ ಸಮಯಕ್ಕೆ ಸರಿಯಾಗಿ ತೆರೆದು, ಮುಚ್ಚಿಕೊಳ್ಳುವ ನಾಲ್ಕು ಕವಾಟಗಳು ಇರುತ್ತವೆ. ಶ್ವಾಸಕೋಶಗಳಿಗೆ ಮತ್ತು ಶರೀರಕ್ಕೆ ರಕ್ತ ಒಯ್ಯುವ ಸಲುವಾಗಿ ಬೇರೆ ಬೇರೆ ಧಮನಿಗಳು ಇರುತ್ತವೆ. ಹೀಗೆ, ಒಂದೇ ಹೃದಯದಲ್ಲಿ ಇದ್ದರೂ, ಅಶುದ್ಧ ಮತ್ತು ಶುದ್ಧ ರಕ್ತಗಳು ಪರಸ್ಪರ ಸಂಪರ್ಕಕ್ಕೆ ಬಾರದಂತೆ ವ್ಯವಸ್ಥೆ ಇರುತ್ತದೆ.

ಅಶುದ್ಧ ಮತ್ತು ಶುದ್ಧ ರಕ್ತಗಳನ್ನು ಪ್ರತ್ಯೇಕಿಸುವ ಗೋಡೆಗಳಲ್ಲಿ ರಂಧ್ರವಿದ್ದರೆ ಎರಡೂ ಬದಿಯ ರಕ್ತ ಒಂದರ ಜೊತೆಗೊಂದು ಬೆರೆಯುತ್ತದೆ. ಈ ರೀತಿಯ ರಂಧ್ರಗಳು ಜನನದಿಂದಲೇ ಇರುವುದರಿಂದ, ಎಳೆಯ ವಯಸ್ಸಿನಲ್ಲೇ ಪತ್ತೆಯಾಗುತ್ತವೆ. ಹೃದಯದ ನಾಲ್ಕು ಕವಾಟಗಳ ಪೈಕಿ ಯಾವುದೋ ಒಂದು ಕವಾಟದ ರಚನೆಯಲ್ಲಿ ದೋಷವಿದ್ದರೆ, ಅದು ಸರಿಯಾಗಿ ಮುಚ್ಚದೆಯೋ, ತೆರೆಯದೆಯೋ ಇರಬಹುದು. ಆಗಲೂ ರಕ್ತ ಸಂಚಾರದಲ್ಲಿ ಏರುಪೇರಾಗುತ್ತದೆ. ರಕ್ತ ಒಯ್ಯುವ ರಕ್ತನಾಳಗಳ ರಚನೆಯಲ್ಲಿ ಏನಾದರೂ ಸಮಸ್ಯೆ ಇದ್ದರೂ, ರಕ್ತ ಸಂಚಾರಕ್ಕೆ ಅಡ್ಡಿಯಾಗುತ್ತದೆ. ಶರೀರಕ್ಕೆ ರಕ್ತ ಪೂರೈಸುವ ಸಂಪೂರ್ಣ ಜವಾಬ್ದಾರಿ ಹೃದಯದ್ದೇ ಆದ್ದರಿಂದ, ಇಡೀ ರಕ್ತ ಸಂಚಾರ ವ್ಯವಸ್ಥೆಯ ಯಾವುದೇ ಹಂತದಲ್ಲಿ  ತೊಂದರೆಯಾದರೂ, ಅದರ ಪ್ರತ್ಯಕ್ಷ ಮತ್ತು ಪರೋಕ್ಷ ಪರಿಣಾಮ ಹೃದಯದ ಮೇಲೆಯೇ ಆಗುತ್ತದೆ.

ಹೃದಯದ ಸಮಸ್ಯೆ ಸಣ್ಣ ಮಟ್ಟದಲ್ಲಿದ್ದರೆ ಶರೀರಕ್ಕೆ ಯಾವುದೇ ಹಾನಿಯಾಗದೇ ಇರಬಹುದು. ಅಂತಹ ಮಕ್ಕಳು ಇತರ ಮಕ್ಕಳಂತೆ ಆರಾಮವಾಗಿ, ಚಟುವಟಿಕೆಯಿಂದಲೇ ಇರುತ್ತಾರೆ. ಬೇರೆ ಯಾವುದೋ ಅನಾರೋಗ್ಯದ ಸಂದರ್ಭದಲ್ಲಿ ಅಂತಹ ಮಕ್ಕಳನ್ನು ವೈದ್ಯರ ಬಳಿ ಒಯ್ದಾಗ, ಅವರ ಹೃದಯವನ್ನು ಪರೀಕ್ಷಿಸುವ ವೈದ್ಯರಿಗೆ ವಿಭಿನ್ನ ಸದ್ದು ಕೇಳುತ್ತದೆ. ಹೃದಯದ ರಂಧ್ರ ಅಥವಾ ದೋಷಪೂರ್ಣ ಕವಾಟದ ಮೂಲಕ ಹರಿಯುವ ರಕ್ತ ಮರ್ಮರ್ ಸದ್ದನ್ನೋ, ಅಥವಾ ಕ್ಲಿಕ್ ಸದ್ದನ್ನೋ ಮಾಡುತ್ತದೆ. ಅನುಭವಿ ವೈದ್ಯರು ಇಂತಹ ಸದ್ದನ್ನು ಖಚಿತವಾಗಿ ಗ್ರಹಿಸಬಲ್ಲರು. ಆದರೆ, ಪ್ರತಿಯೊಂದು ವಿಭಿನ್ನ ಸದ್ದಿಗೂ ಹೃದಯದ ಆಂತರಿಕ ದೋಷವೇ ಕಾರಣ ಎನ್ನಲಾಗದು. ಕೆಲವೊಮ್ಮೆ ಸಾಮಾನ್ಯ ಮಕ್ಕಳಲ್ಲೂ ಮರ್ಮರ್ ಸದ್ದು ಕೇಳಿಸುತ್ತದೆ. ಹೀಗಾಗಿ, ಹೃದಯದ ಸದ್ದು ವಿಭಿನ್ನವಾಗಿದ್ದರೆ, ವೈದ್ಯರು ಮಕ್ಕಳ ಹೃದಯದ ತಪಾಸಣೆ ಮಾಡಿಸುತ್ತಾರೆ.

ಹೃದಯದ ಜನ್ಮಜಾತ ಸಮಸ್ಯೆ ತೀವ್ರವಾಗಿದ್ದರೆ, ಅಂತಹ ಮಕ್ಕಳಲ್ಲಿ ಉಸಿರಾಟದ ಸಮಸ್ಯೆ, ಚರ್ಮ ಮತ್ತು ಲೋಳೆಪದರ ನೀಲಿಗಟ್ಟುವುದು, ಪದೇ ಪದೇ ಕಾಯಿಲೆ ಬೀಳುವುದು, ತೂಕ ಸರಿಯಾಗಿ ಏರದಿರುವುದು, ಹಾಲೂಡಿಸುವಾಗ ಮಗು ವಿಪರೀತ ಬೆವರುವುದು, ಬಿಟ್ಟು-ಬಿಟ್ಟು ಹಾಲು ಕುಡಿಯುವುದು, ಸರಿಯಾಗಿ ನಿದ್ರಿಸದಿರುವುದು ಮೊದಲಾದ ಗಂಭೀರ ಸಮಸ್ಯೆಗಳು ಕಾಣುತ್ತವೆ. ಶಿಶುವೈದ್ಯರ ಸಲಹೆ ಪಡೆದು, ಇಂತಹ ಮಕ್ಕಳನ್ನು ಸಾಧ್ಯವಾದಷ್ಟೂ ಬೇಗ ಮಕ್ಕಳ ಹೃದ್ರೋಗ ತಜ್ಞರಲ್ಲಿ ತಪಾಸಣೆ ಮಾಡಿಸಬೇಕು.

ಮಕ್ಕಳ ಜನ್ಮಜಾತ ಹೃದ್ರೊಗ ಸಮಸ್ಯೆಗಳು ಹಲವಾರು ಬಗೆಯವು. ಸರಳವಾದ ಸಣ್ಣ ರಂಧ್ರದಿಂದ ಹಿಡಿದು, ರಕ್ತನಾಳಗಳ ಅದಲಿ-ಬದಲಿ, ಹೃದಯದ ನಾಲ್ಕು ಕೋಣೆಗಳ ಪೈಕಿ ಒಂದು ಇಡೀ ಕೋಣೆಯೇ ಬೆಳವಣಿಗೆ ಆಗದಿರುವುದು, ಕವಾಟಗಳ ಅನುಪಸ್ಥಿತಿಯಂತಹ ಸಂಕೀರ್ಣ ಸಮಸ್ಯೆಗಳು ಇರುತ್ತವೆ. ಇಂತಹ ಪ್ರತಿಯೊಂದು ಸಮಸ್ಯೆಗೂ ಚಿಕಿತ್ಸೆ ಭಿನ್ನವಾಗಿರುತ್ತದೆ. “ಒಂದು ಶಿಶುವಿನ ಹೃದಯದಂತೆ ಮತ್ತೊಂದು ಇರುವುದಿಲ್ಲ” ಎಂದು ಮಕ್ಕಳ ಹೃದ್ರೋಗ ತಜ್ಞರು ಅಭಿಪ್ರಾಯ ಪಡುತ್ತಾರೆ.

ಪ್ರಸ್ತುತ ವೈದ್ಯಕೀಯ ವಿಜ್ಞಾನ ಬಹಳ ಪ್ರಗತಿ ಸಾಧಿಸಿದೆ. ಬಹುತೇಕ ಜನ್ಮಜಾತ ಹೃದ್ರೋಗ ಸಮಸ್ಯೆಗಳಿಗೆ ಈಗ ಪ್ರಮಾಣವತ್ತಾದ ಚಿಕಿತ್ಸೆಗಳಿವೆ. ಗರ್ಭಸ್ಥ ಭ್ರೂಣದ ಹಂತದಲ್ಲಿಯೇ ಹೃದ್ರೋಗವನ್ನು ನಿರ್ದಿಷ್ಟವಾಗಿ ಪತ್ತೆ ಮಾಡಬಲ್ಲ ತಂತ್ರಜ್ಞಾನವಿದೆ. ಸರಿಯಾದ ವೇಳೆಗೆ ವೈದ್ಯಕೀಯ ನೆರವು ಪಡೆದರೆ ಯಾವುದೇ ಜನ್ಮಜಾತ ಹೃದ್ರೋಗವನ್ನಾದರೂ ಸುಧಾರಿಸಬಲ್ಲ ಚಿಕಿತ್ಸೆಗಳಿವೆ. ಈಗಷ್ಟೇ ಜನಿಸಿದ ಮಗುವಿನ ಹೃದಯಕ್ಕೂ ಶಸ್ತ್ರಚಿಕಿತ್ಸೆ ಮಾಡಿ, ಸಮಸ್ಯೆಯನ್ನು ನಿಗ್ರಹಿಸಬಲ್ಲ ತೀವ್ರ ನಿಗಾ ಘಟಕಗಳಿವೆ. ಇಂತಹ ಸಂಕೀರ್ಣ ಚಿಕಿತ್ಸೆಯನ್ನು ಸಮರ್ಥವಾಗಿ ಮಾಡಬಲ್ಲ ಹಲವಾರು ಆಸ್ಪತ್ರೆಗಳು ನಮ್ಮ ದೇಶದಲ್ಲಿವೆ. ಒಂದು ಕಾಲದಲ್ಲಿ ಇಡೀ ಕುಟುಂಬವನ್ನು ಭೀತಿಗೆ ದೂಡುತ್ತಿದ್ದ ಮಕ್ಕಳ ಹೃದ್ರೋಗ ಈಗ ಪೋಷಕರಿಗೆ ಆತಂಕದ ವಿಷಯವಾಗಬೇಕಿಲ್ಲ.

----------------------------

(ದಿನಾಂಕ 5/9/2023 ರ ಪ್ರಜಾವಾಣಿಯ ಕ್ಷೇಮ ಕುಶಲ ವಿಭಾಗದಲ್ಲಿ ಪ್ರಕಟವಾದ ಲೇಖನ. ಮೂಲ ಲೇಖನದ ಕೊಂಡಿ: https://www.prajavani.net/health/health-tips-heart-problems-in-children-2466518) 

 ಹೃದಯದ ಆರೈಕೆ ಹೇಗೆ?

ಡಾ. ಕಿರಣ್.ವಿ.ಎಸ್.

ವೈದ್ಯರು

 

ಯಾರಾದರೂ ಪರಿಚಿತರೋ ಅಥವಾ ಹೆಸರು ಮಾಡಿರುವವರೋ ಮರಣಿಸಿದಾಗ ಮೊದಲು ಸಂಕಟವಾಗುತ್ತದೆ. ಅವರ ಮರಣದ ಕಾರಣ ಹೃದಯಾಘಾತ ಎಂದೇನಾದರೂ ತಿಳಿದರೆ ಆತಂಕವಾಗುತ್ತದೆ. ಅದರಲ್ಲೂ ಇತ್ತೀಚೆಗೆ ಮೂವತ್ತರ ಹರೆಯದ, ತಕ್ಕಮಟ್ಟಿಗೆ ಆರೋಗ್ಯಕರ ಜೀವನವನ್ನೇ ನಡೆಸುತ್ತಿದ್ದರೆಂದು ಭಾವಿಸುವವರಿಗೆ ಹೃದಯಾಘಾತವಾಯಿತು ಎಂದು ಸುದ್ಧಿ ಬಂದರೆ ಭೀತಿಯಾಗುತ್ತದೆ. ಸುದ್ಧಿಯ ಪರಿಣಾಮ ಮನಸ್ಸಿನ ಮೇಲೆ ಇರುವಾಗ ಆಸ್ಪತ್ರೆಗಳಿಗೆ, ಪ್ರಯೋಗಾಲಯಗಳಿಗೆ, ತಜ್ಞ ವೈದ್ಯರ ಬಳಿಗೆ ಹೋಗುವವರು ಎಷ್ಟೋ ಮಂದಿ. ಆದರೆ, ವೈದ್ಯರು ಹೇಳುವ ಜಾಗರೂಕತೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವವರು ವಿರಳ. ಕೆಲದಿನಗಳ ನಂತರ “ಎಲ್ಲರಿಗೂ ಏನೇನೋ ಆಗುತ್ತಿದ್ದರೂ ನನಗೇನೂ ಆಗುವುದಿಲ್ಲ” ಎನ್ನುವ ಮನೋಭಾವ ಬೆಳೆಯುತ್ತದೆ. ಕೆಲಕಾಲದ ನಂತರ ಮತ್ತೊಂದು ಇಂತಹುದೇ ಸುದ್ಧಿ, ಮತ್ತಷ್ಟು ಆತಂಕದ ದಿನಗಳು - ಈ ರೀತಿಯ ವರ್ತುಲ ವರ್ತನೆ ಕಾಣುತ್ತಿದ್ದೇವೆ. ಸರಳವಾಗಿ "ಹೃದಯದ ಆರೈಕೆ ಹೇಗೆ ಮಾಡಬೇಕು" ಎನ್ನುವುದರ ಜಿಜ್ಞಾಸೆ ಇಲ್ಲಿದೆ.

 

ಕಳೆದ ಎರಡು-ಮೂರು ದಶಕಗಳಲ್ಲಿ ಜನಸಾಮಾನ್ಯರ ಜೀವನಶೈಲಿ ಅನೂಹ್ಯ ಬದಲಾವಣೆಗಳನ್ನು ಕಂಡಿದೆ. ನಮ್ಮ ಹಿಂದಿನ ತಲೆಮಾರಿನ ಸಮಸ್ಯೆಗಳು, ಅಗತ್ಯಗಳು ನಮ್ಮ ತಲೆಮಾರಿಗೆ ಅನ್ವಯವಾಗುವುದಿಲ್ಲ. ಅಂತೆಯೇ, ಪ್ರಾಯಶಃ ನಮ್ಮ ಸಮಸ್ಯೆಗಳು ನಮ್ಮ ಮುಂದಿನ ಪೀಳಿಗೆಗೆ ಬದಲಾಗಿರುತ್ತವೆ. ಪ್ರಗತಿಯ ವೇಗಕ್ಕೆ ತಕ್ಕಂತೆ ಹೆಜ್ಜೆ ಹಾಕುವುದು ಯುವಜನತೆಯ, ಮಧ್ಯವಯಸ್ಕರ ಬದುಕಿನ ಭಾಗವೇ ಆಗಿಹೋಗಿದೆ. ಮಾನಸಿಕ ಒತ್ತಡವನ್ನು ಸಹಿಸಲು ಅನಾರೋಗ್ಯಕರ ಚಟಗಳಿಗೆ ಮೊರೆ ಹೋಗುವ ಜೀವನಶೈಲಿ, ಆದ್ಯತೆಗಳು ಬದಲಾದಂತೆ ಕಡಿಮೆಯಾಗುತ್ತಿರುವ ಕೌಟುಂಬಿಕ ಭದ್ರತೆ, ಆರೋಗ್ಯದ ಬಗ್ಗೆ ನಿರ್ಲಕ್ಷ್ಯ, ಬೀಸುಬೀಡಾದ ಆಹಾರ ಸೇವನೆ, ಸಾಮಾಜಿಕ ಬಾಂಧವ್ಯಗಳ ನಿರ್ವಹಣೆಯ ಹೆಸರಿನಲ್ಲಿ ಮದ್ಯಪಾನ, ಮಾದಕ ವಸ್ತುಗಳ ಚಟ. ಮೊದಲಾದುವು ಹೃದಯ ಮೇಲೆ ಬೀಳುವ ತೀವ್ರ ಒತ್ತಡಕ್ಕೆ ಕೊಡುಗೆಯಾಗಿವೆ. ಇವೆಲ್ಲವೂ ಒಂದು ಹಂತದಲ್ಲಿ "ಹಿಂದುರಗಲಾಗದ" ನಿರ್ಣಾಯಕ ಮಟ್ಟವನ್ನು ತಲುಪುತ್ತದೆ. ಸಾವಿನ ಸುದ್ಧಿಯೇನೋ ನಮ್ಮನ್ನು ತಲುಪುತ್ತದೆ; ಆದರೆ, ಅದಕ್ಕೆ ಕಾರಣವಾದ ನೈಜ ಅಂಶಗಳು ಸಾರ್ವಜನಿಕಗೊಳ್ಳುವುದು ತೀರಾ ಅಪರೂಪ. ಹೀಗಾಗಿ, ಇತರರ ಮರಣದ ಸುದ್ಧಿ ನಮ್ಮನ್ನು ಕಂಗೆಡಿಸುತ್ತದಾದರೂ, ಅದನ್ನು ಹೇಗೆ ತಡೆಯಬಹುದಿತ್ತು ಎನ್ನುವ ಮಾರ್ಗಗಳು ಸ್ಪಷ್ಟವಾಗುವುದಿಲ್ಲ. ವೈಯಕ್ತಿಕವಾಗಿ ಪ್ರತಿಯೊಬ್ಬರೂ ತಂತಮ್ಮ ಆರೋಗ್ಯ ಪರಿಸ್ಥಿತಿಯ ಆತ್ಮಾವಲೋಕನ ಮಾಡಿಕೊಳ್ಳುತ್ತಾ, ಪರಿಹಾರಗಳನ್ನು ಕಂಡುಕೊಳ್ಳುವುದು ಮುಖ್ಯ.

 

ಹೃದಯದ ಆರೋಗ್ಯಕ್ಕೆ ಎರವಾಗುತ್ತಿರುವ ಸಮಸ್ಯೆಗಳ ಪಟ್ಟಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ತಡೆಗಟ್ಟಬಹುದಾದ ಅಂಶಗಳೇ ಹೆಚ್ಚಾಗಿ ಇರುವುದು ಆಶಾದಾಯಕ ಸಂಗತಿ. ಅದನ್ನು ಪಾಲಿಸಬಲ್ಲ ಮನಸ್ಥಿತಿಯ ಕೊರತೆಯೇ ಸದ್ಯಕ್ಕೆ ಪ್ರಮುಖ ಸಮಸ್ಯೆ. ತಂಬಾಕು, ಮದ್ಯಪಾನ, ಮಾದಕ ವಸ್ತುಗಳಿಂದ ದೂರವಿರುವುದು; ಮಧುಮೇಹ, ಅಧಿಕ ರಕ್ತದೊತ್ತಡಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು; ದೈನಂದಿನ ವ್ಯಾಯಾಮ, ಪ್ರಾಣಾಯಾಮ, ಧ್ಯಾನಗಳ ಪಾಲನೆ; ಆಹಾರ ಸೇವನೆಯಲ್ಲಿ ಶಿಸ್ತು; ದಿನಕ್ಕೆ ಏಳು ಗಂಟೆಗಳಿಗಿಂತ ಕಡಿಮೆಯಿಲ್ಲದಂತೆ ನಿದ್ರೆ; ಹಣ ಮತ್ತು ಆರೋಗ್ಯದ ನಿರ್ವಹಣೆಯನ್ನು ತೂಗಬಲ್ಲ ಉದ್ಯೋಗದ ಆಯ್ಕೆ; ಕೌಟುಂಬಿಕ ಸಂಬಂಧಗಳ ಆರೋಗ್ಯಕರ ಪೋಷಣೆ; ಮನಸ್ಸಿನ ದುಗುಡಗಳನ್ನು ಚರ್ಚಿಸಿ, ದಾರಿ ಕಾಣಿಸಬಲ್ಲ ಸ್ನೇಹಿತರ, ಬಂಧುಗಳ ಆಪ್ತವಲಯದ ನಿರ್ಮಾಣ; ವೈಯಕ್ತಿಕ ಆರೋಗ್ಯದ ನಿರ್ವಹಣೆಗೆ ನಿಯಮಿತ ವೈದ್ಯರೊಬ್ಬರ ಸಲಹೆಗಳು; ಮಾನಸಿಕ ನೆಮ್ಮದಿಗೆ ಬೇಕಾದ ಜೀವನಶೈಲಿ, ಮೊದಲಾದುವು ವಯಸ್ಸಿನ ಅಂತರವಿಲ್ಲದೆ ಪ್ರತಿಯೊಬ್ಬರ ಆವಶ್ಯಕತೆಗಳಾಗಬೇಕು. ಮೂವತ್ತರ ಹರೆಯದಲ್ಲಿ ಸಂಭವಿಸುತ್ತಿರುವ ಹೃದಯಾಘಾತಗಳು ಎಚ್ಚರಿಕೆಯ ಗಂಟೆಗಳಾಗಿ, ದಿಕ್ಕು ತಪ್ಪುತ್ತಿರುವ ಬದುಕನ್ನು ಸರಿಯಾದ ಹಾದಿಯಲ್ಲಿ ತಿರುಗಿಸಬಲ್ಲ ಮಾರ್ಗದರ್ಶಿಯಾಗಬೇಕು.

 

ಧೂಮಪಾನ ಮತ್ತು ಮದ್ಯಪಾನಗಳು ಹೃದಯದ ಶತ್ರುಗಳು. ಉಪ್ಪು ಅಥವಾ ಸಕ್ಕರೆಯ ಅಂಶ ಅಧಿಕವಾಗಿರುವ ತಿನಿಸು ಮತ್ತು ಪಾನೀಯಗಳು, ಅಧಿಕ ಜಿಡ್ಡಿನ ಆಹಾರಗಳು ಹೃದಯದ ಅನಾರೋಗ್ಯಕ್ಕೆ ಕಾರಣ. ಹೃದ್ರೋಗವನ್ನು ದೂರವಿಡುವಲ್ಲಿ ಇಂತಹುವುಗಳ ಬಳಕೆಯನ್ನು ಕಡಿಮೆಗೊಳಿಸುವುದು ಸಹಾಯಕ. ನಿಯಮಿತವಾಗಿ ಸೇವಿಸುವ ಆರೋಗ್ಯ ಸಂಬಂಧಿ ಔಷಧಗಳನ್ನು ಅಕಾರಣವಾಗಿ ಎಂದಿಗೂ ತಪ್ಪಿಸಬಾರದು. ರಕ್ತದೊತ್ತಡ, ಮಧುಮೇಹ ಮುಂತಾದ ಸಮಸ್ಯೆಗಳನ್ನು ಸಾಧ್ಯವಾದಷ್ಟೂ ನಿಯಂತ್ರಣದಲ್ಲಿ ಇಡಬೇಕು. ಹೃದಯದ ಆರೋಗ್ಯ ಮತ್ತು ಆಹಾರ ಜೊತೆಜೊತೆಯಾಗಿ ಸಾಗುತ್ತವೆ. ಸಾತ್ವಿಕ ಆಹಾರವನ್ನು ಪ್ರಜ್ಞಾಪೂರ್ವಕವಾಗಿ ಆಯ್ಕೆ ಮಾಡಿಕೊಳ್ಳಬೇಕು. ತಾಜಾ ಹಣ್ಣು, ತರಕಾರಿ, ಧಾನ್ಯಗಳು, ಪ್ರೋಟೀನ್ ಅಂಶ ಅಧಿಕವಾಗಿರುವ ಆಹಾರ, ಜಿಡ್ಡಿನ ಅಂಶ ಕಡಿಮೆ ಇರುವ ಹೈನು ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಬೇಕು.

 

ನಿಯಮಿತ ವ್ಯಾಯಾಮ ಔಷಧಗಳಷ್ಟೇ ಮಹತ್ವದ್ದು. “ಕೂರುವುದು ಆಧುನಿಕ ಧೂಮಪಾನ” ಎನ್ನುವ ಮಾತಿದೆ. ಯಾವುದೇ ಚಟುವಟಿಕೆಯಿಲ್ಲದೆ ವಿನಾ ಕಾರಣ ಕೂರುವುದರಿಂದ ಆರೋಗ್ಯದ ಮೇಲೆ ಆಗುವ ವ್ಯತಿರಿಕ್ತ ಪರಿಣಾಮಗಳು ಧೂಮಪಾನದಿಂದ ಆಗುವಷ್ಟೇ ತೀವ್ರವಾದ ಮಟ್ಟದವು ಎಂದು ಅಧ್ಯಯನಗಳು ತೋರಿವೆ. ಆರೋಗ್ಯಕರ ಹೃದಯಕ್ಕೆ ವ್ಯಾಯಾಮ ಬಹಳ ಮುಖ್ಯ. ದಿನಕ್ಕೆ ಕನಿಷ್ಠ ಮೂವತ್ತು ನಿಮಿಷಗಳ ಕಾಲ ಉಸಿರಾಟದ ಗತಿಯನ್ನು ಏರಿಸುವ ಶಾರೀರಿಕ ವ್ಯಾಯಾಮ ಮಾಡಬೇಕು. ಇದರಲ್ಲಿ ವಾರಕ್ಕೆ ಎರಡು ದಿನ ಮಾಂಸಖಂಡಗಳ ಬಲವನ್ನು ಹೆಚ್ಚಿಸುವ ವ್ಯಾಯಾಮ ಇರಬೇಕು. ವಾರದಲ್ಲಿ ಇಂತಿಷ್ಟು ದಿನ ಎನ್ನುವುದಕ್ಕಿಂತ ಪ್ರತಿದಿನವೂ ತಪ್ಪದೆ ವ್ಯಾಯಾಮ ಮಾಡುವುದು ಸರಿಯಾದ ವಿಧಾನ. ವಿಪರೀತ ದೇಹತೂಕ ಹೃದಯದ ಮೇಲೆ ತೀವ್ರವಾದ ಒತ್ತಡವನ್ನು ಹೇರುತ್ತದೆ. ಶರೀರದ ತೂಕವನ್ನು ನಿಯಂತ್ರಣದಲ್ಲಿ ಇಡುವುದು ಆರೋಗ್ಯದ ದೃಷ್ಟಿಯಿಂದ ಬಹಳ ಒಳ್ಳೆಯದು. ಆಧುನಿಕ ಕಾಲದಲ್ಲಿ ಬೊಜ್ಜನ್ನು ಸಮರ್ಥಿಸುವ ಜನರಿದ್ದಾರೆ. ವೈಯಕ್ತಿಕ ನಿಲುವುಗಳು ಏನೇ ಇದ್ದರೂ, ಅದರ ವ್ಯತಿರಿಕ್ತ ಪರಿಣಾಮಗಳು ಹೃದಯದ ಮೇಲೆ ಆಗುವುದನ್ನು ತಪ್ಪಿಸಲಾಗದು. ಬೊಜ್ಜಿನಿಂದ ಬಳಲುವವರು ತಮ್ಮ ಆರೋಗ್ಯದತ್ತ ಹೆಚ್ಚು ಜತನ ವಹಿಸಬೇಕು. ಆಹಾರ ತಜ್ಞರ ಸಲಹೆಯ ಮೇರೆಗೆ ಅಗತ್ಯ ಪೋಷಕಾಂಶಗಳುಳ್ಳ ಸಮತೋಲಿತ ಆಹಾರವನ್ನು ಸೇವಿಸುವುದು, ಅಧಿಕ ಕ್ಯಾಲರಿ ಆಹಾರ ಪದಾರ್ಥಗಳಿಂದ ದೂರವಿರುವುದು ಎಲ್ಲರಿಗೂ ಅನ್ವಯಿಸುತ್ತದೆ.

 

ದೈಹಿಕ ಮತ್ತು ಮಾನಸಿಕ ಒತ್ತಡದ ನಿಗ್ರಹ ಹೃದಯದ ಮೇಲೆ ಉತ್ತಮ ಪರಿಣಾಮ ಬೀರಬಲ್ಲದು. ಕೋಪ, ತುಮುಲಗಳು ಹೃದಯದ ರಕ್ತನಾಳಗಳನ್ನು ಸಂಕೋಚಿಸಿ, ಆಘಾತ ಉಂಟುಮಾಡಬಲ್ಲವು. ಮಾನಸಿಕ ಅಶಾಂತಿ, ಕೆಲಸದ ಒತ್ತಡಗಳ ಕಾರಣದಿಂದ ಅಧಿಕ ರಕ್ತದೊತ್ತಡಕ್ಕೆ ತುತ್ತಾಗುವವರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ. ಉದ್ವೇಗಗಳಿಗೆ ಸಿಲುಕಿ ಧೂಮಪಾನ, ಮದ್ಯಪಾನಗಳ ಚಟ ಬೆಳೆಸಿಕೊಂಡವರು ಇಬ್ಬಗೆಯಿಂದ ಹೃದಯದ ಕಾಯಿಲೆಗಳಿಗೆ ತುತ್ತಾಗುತ್ತಾರೆ. ತೀವ್ರ ಒತ್ತಡದಿಂದ ಬಳಲುವವರು ಮಾನಸಿಕ ಆರೋಗ್ಯ ಸಲಹೆಗಾರರ ಸಹಾಯ ಪಡೆಯಬೇಕು. ನಿಗದಿತ ಪ್ರಾಣಾಯಾಮ, ಧ್ಯಾನಗಳು ಮನಸ್ಸಿನ ಉದ್ವೇಗವನ್ನು ಕಡಿಮೆ ಮಾಡುವಲ್ಲಿ ಸಹಕಾರಿ. ಹೃದಯದ ಆರೋಗ್ಯದ ಮೇಲೆ ನಿದ್ರೆಯ ಪರಿಣಾಮ ಗಾಢವಾದದ್ದು. ಧಾವಂತದ ಜೀವನಶೈಲಿ ನಿದ್ರೆಯ ಬಗ್ಗೆ ತಾತ್ಸಾರ ವಹಿಸುತ್ತದೆ. ಇದರ ಪರಿಣಾಮವಾಗಿ ಸಣ್ಣ ವಯಸ್ಸಿನಲ್ಲೇ ಹೃದ್ರೋಗಗಳಿಗೆ ತುತ್ತಾಗುವವರ ಸಂಖ್ಯೆ ಬೆಳೆಯುತ್ತಿದೆ. ಉತ್ತಮ ಗುಣಮಟ್ಟದ, ಸರಿಯಾದ ಕಾಲಾವಧಿಯ ನಿದ್ರೆ ಹೃದಯ ಮತ್ತು ರಕ್ತನಾಳಗಳ ಸಮಸ್ಯೆಗಳನ್ನು ಗುಣಪಡಿಸುತ್ತದೆ; ಹೃದಯದ ಕೆಲಸಕ್ಕೆ ಅಗತ್ಯವಾದ ಚೋದಕಗಳನ್ನು ಸರಿದೂಗಿಸುತ್ತದೆ; ಶರೀರದ ರಕ್ಷಕ ವ್ಯವಸ್ಥೆಯನ್ನು ಚುರುಕಾಗಿ ಇಟ್ಟು, ಕಾಯಿಲೆಗಳನ್ನು ದೂರವಿಡುತ್ತದೆ.

 

ಉತ್ತಮ ಆರೋಗ್ಯ ಪದ್ದತಿಗಳನ್ನು ರೂಡಿಸಿಕೊಳ್ಳುವುದು; ಕಾಯಿಲೆಯನ್ನು ಆರಂಭದಲ್ಲೇ ಪತ್ತೆ ಹಚ್ಚಿ ಚಿಕಿತ್ಸೆ ಪಡೆಯುವುದು; ಕಾಯಿಲೆಯ ಪರಿಣಾಮಗಳನ್ನು ತಹಬಂದಿಗೆ ತರುವುದು; ಮತ್ತು ಕಾಯಿಲೆಯಿಂದ ಈಗಾಗಲೇ ಆಗಿರುವ ಶಾರೀರಿಕ ಸಮಸ್ಯೆಗಳನ್ನು ನಿಧಾನವಾಗಿ ಸಹಜ ಸ್ಥಿತಿಗೆ ತರುವುದು - ಈ ಹಂತಗಳು ಹೃದಯದ ಕಾಯಿಲೆಗಳ ನಿರ್ವಹಣೆಯಲ್ಲಿ ಪ್ರಮುಖ ಮೈಲಿಗಲ್ಲುಗಳು. ಹೃದಯದ ಆರೈಕೆಯಲ್ಲಿ ಶಿಸ್ತುಬದ್ಧ ಬದುಕಿನ ವಿಧಾನಗಳು ಮತ್ತು ಜೀವನಶೈಲಿಯ ಸುಧಾರಣೆಗಳು ಪ್ರತಿಯೊಬ್ಬರಿಗೂ ಅಗತ್ಯ.

-----------------------

(ದಿನಾಂಕ 15/8/2023 ರ ಪ್ರಜಾವಾಣಿಯ ಕ್ಷೇಮ ಕುಶಲ ವಿಭಾಗದಲ್ಲಿ ಪ್ರಕಟವಾದ ಲೇಖನ. ಮೂಲ ಲೇಖನದ ಕೊಂಡಿ: https://www.prajavani.net/health/heart-and-health-what-are-the-caring-things-kannada-article-2439447 )

 

 ಆಟದ ನಿಯಮಗಳಷ್ಟೇ ಜೀವನದ ನಿಯಮಗಳೂ ಮುಖ್ಯ

ಡಾ. ಕಿರಣ್‌ ವಿ.ಎಸ್.

ವೈದ್ಯರು

 

 

ಆಟೋಟದ ಪಂದ್ಯಗಳಲ್ಲಿ ಹೆಚ್ಚು ಗೆಲ್ಲುವವರು ಯಾರು? ಕೇವಲ ಅತ್ಯಂತ ಹೆಚ್ಚಿನ ಕೌಶಲ್ಯವುಳ್ಳವರೋ, ಅಧಿಕ ಬಲಶಾಲಿಗಳೋ, ದೊಡ್ಡ ಸಂಖ್ಯೆಯ ಬೆಂಬಲಿಗರಿರುವವರೋ ಮಾತ್ರವೇ ಅಲ್ಲ. ಬದಲಿಗೆ, ತಕ್ಕ ಮಟ್ಟಿನ ಕೌಶಲ್ಯ, ಬಲ ಮತ್ತು ಬೆಂಬಲಗಳ ಜೊತೆಗೆ ಆಟದ ನಿಯಮಗಳ ಪರಿಪೂರ್ಣ ಜ್ಞಾನ ಉಳ್ಳವರು. ಇದಕ್ಕೆ ಹತ್ತಾರು ಉದಾಹರಣೆಗಳನ್ನು ನೀಡಬಹುದು. ಕ್ರಿಕೆಟ್ ಆಟದಲ್ಲಿ ಮಳೆಯಿಂದ ಪಂದ್ಯ ಕಡಿತವಾಗುವ ಅನುಮಾನವಿದ್ದಾಗ, ನಿಯಮಗಳ ಲೆಕ್ಕಾಚಾರ ಇರುವ ತಂಡ ಗೆಲ್ಲುವ ಸಾಧ್ಯತೆ ಹೆಚ್ಚು. ಓಟದ ಪಂದ್ಯಗಳ ವೇಳೆ ಅಂತಿಮ ಗೆರೆ ಮುಟ್ಟುವ ಸಂದರ್ಭದಲ್ಲಿ ತಲೆಯನ್ನು ಮುಂದಕ್ಕೆ ಚಾಚಿ ನಿಯಮಗಳ ರೀತ್ಯಾ ಗೆದ್ದವರು ಅದೆಷ್ಟೋ ಮಂದಿ ಇದ್ದಾರೆ. ನಮ್ಮ ಸಾಮರ್ಥ್ಯಕ್ಕೆ ಸಮಾನರಾದ ನಾಲ್ಕಾರು ಮಂದಿ ನಮ್ಮ ಜೊತೆಗೆ ಸ್ಪರ್ಧಿಸುತ್ತಿದ್ದಾರೆ ಎಂದಾಗ ನಿಯಮಗಳ ಸಮ್ಯಕ್ ಅರಿವನ್ನು ಮೂಡಿಸಿಕೊಳ್ಳುವುದು ಗೆಲುವಿಗೆ ಹಾದಿಯಾಗಬಹುದು. ಇಂತಹ ಎಡೆಗಳಲ್ಲಿ ಕೇವಲ ನಿಯಮಗಳ ಪರಿಚಯ ಮಾತ್ರವೇ ಗೆಲುವು ಕಾಣಿಸುವುದಿಲ್ಲ. ಬದಲಿಗೆ, ಉಳಿದೆಲ್ಲ ಧನಾತ್ಮಕ ಅಂಶಗಳ ಜೊತೆಗೆ ನಿಯಮಗಳನ್ನೂ ಚೆನ್ನಾಗಿ ಅರಿತಿರುವ ಸಂಗತಿ ಕೆಲಸಕ್ಕೆ ಬರುತ್ತದೆ.

 

ನಿಯಮಗಳು ಆಟಗಳ ವಿಷಯದಲ್ಲಿ ಮಾತ್ರವೇ ಪ್ರಸ್ತುತ ಎಂದಲ್ಲ. ಜೀವನದ ಪ್ರತಿಯೊಂದು ಹಂತದಲ್ಲೂ ನಿಯಮಗಳು ಇರುತ್ತವೆ. ಬದುಕಿನ ನಿಯಮಗಳಲ್ಲಿ ಕೆಲವು ಲಿಖಿತ; ಹಲವು ಅಲಿಖಿತ; ಬಹುತೇಕವು ನಿರಂತರವಾಗಿ ಬದಲಾಗುತ್ತಿರುವ ನಿಯಮಗಳು. ಜೀವನದಲ್ಲಿ ಯಶಸ್ಸು ಕಂಡ ಅಧಿಕ ಮಂದಿ ತಮ್ಮ ವ್ಯವಹಾರದ ನಿಯಮಗಳನ್ನು ಅರಿತಿರುತ್ತಾರೆ. ತೀರಾ ಬಲಶಾಲಿಗಳು ಈ ನಿಯಮಗಳನ್ನು ಬದಲಿಸಬಲ್ಲರು ಕೂಡ. ಇದನ್ನೆಲ್ಲ ಮೀರಿ "ಪೆಟ್ಟಿಗೆಯಿಂದ ಹೊರಗಿನ ಚಿಂತನೆ" ಮಾಡುವವರಿಗೂ ನಿಯಮಗಳ ಪರಿಚಯ ಚೆನ್ನಾಗಿ ಇರಬೇಕಾದದ್ದು ಮುಖ್ಯವಾಗುತ್ತದೆ. ಅರಿಯದ ನಿಯಮಗಳನ್ನು ಮೀರುವುದಾದರೂ ಹೇಗೆ?!

 

ಜೀವನದಲ್ಲಿ ಗೆಲುವು ಸಾಧಿಸುವ ವಿಷಯದಲ್ಲಿ ಆಲ್ಬರ್ಟ್ ಐನ್’ಸ್ಟೈನ್ ಅವರ ಮಾತು ಪ್ರಸಿದ್ಧ "ಮೊದಲು ಆಟದ ನಿಯಮಗಳನ್ನು ಕಲಿಯಬೇಕು. ಆನಂತರ ಉಳಿದ ಎಲ್ಲರಿಗಿಂತಲೂ ಚೆನ್ನಾಗಿ ಆಡಬೇಕು". ಶಾಲೆಯ ವಿಷಯಕ್ಕೆ ಬಂದಾಗ, ಆಯಾ ತರಗತಿಯ ಎಲ್ಲ ವಿದ್ಯಾರ್ಥಿಗಳೂ ಒಂದೇ ರೀತಿಯ ಸಮವಸ್ತ್ರ ತೊಟ್ಟು, ಒಂದೇ ಶಾಲೆಗೆ ಬಂದು, ಒಂದೇ ಶಿಕ್ಷಕರ ಬಳಿ ಕಲಿಯುತ್ತಾರೆ. ಅವರೆಲ್ಲಿ ಬಹುತೇಕರು ಸರಿಸುಮಾರು ಒಂದೇ ರೀತಿಯ ಕೌಟುಂಬಿಕ ಹಿನ್ನೆಲೆಯವರು. ಮನೆಯಲ್ಲಿ ಅವರ ಪೋಷಕರೆಲ್ಲರೂ ತಮ್ಮ ಮಕ್ಕಳ ಶಿಕ್ಷಣದ ಬಗ್ಗೆ ತಕ್ಕಮಟ್ಟಿಗೆ ನಿಗಾ ವಹಿಸುತ್ತಾರೆ. ಅಂದರೆ, ಒಂದೇ ಮೈದಾನದಲ್ಲಿ ಓಡುವ ಸ್ಪರ್ಧಿಗಳ ರೀತಿಯಲ್ಲಿ ಭೂಮಿಕೆ ಇರುತ್ತದೆ ಎಂದಾಯಿತು. ಹೀಗಿರುವಾಗ ಕೆಲವರು ಹೆಚ್ಚು ಸಫಲರಾಗುತ್ತಾರೆ; ಹಲವರು ಎಷ್ಟೇ ಪ್ರಯತ್ನಿಸಿದರೂ ಮೊದಲ ಸ್ಥಾನಕ್ಕೆ ಬರಲಾರದೆ ಉಳಿಯುತ್ತಾರೆ. ಇಂತಹ ಸಂದರ್ಭಗಳನ್ನು ಅಧ್ಯಯನ ಮಾಡಿದ ಸಂಶೋಧಕರಿಗೆ ಗೆಲ್ಲುವ ವಿದ್ಯಾರ್ಥಿಗಳ ಬಗ್ಗೆ ಕೆಲವೊಂದು ಮಹತ್ವದ ಮಾಹಿತಿ ದೊರೆತವು. ಸಫಲ ವಿದ್ಯಾರ್ಥಿಗಳು ಪರೀಕ್ಷೆಯ ನಿಯಮಗಳನ್ನು ಉಳಿದವರಿಗಿಂತಲೂ ಚೆನ್ನಾಗಿ ಅರಿತಿರುತ್ತಾರೆ. ತಮಗೆ ವಿಷಯ ತಿಳಿದಿದೆ ಎಂದ ಮಾತ್ರಕ್ಕೆ ಮೂರು ಅಂಕಗಳ ಪ್ರಶ್ನೆಗೆ ಮೂರು ಪುಟಗಳ ಉತ್ತರ ಬರೆಯಬಾರದು ಎಂಬ ಪರಿಜ್ಞಾನ ಅವರಿಗೆ ಇರುತ್ತದೆ. ಮೌಲ್ಯಮಾಪಕರ ಮನಸ್ಥಿತಿಯನ್ನು ಅವರು ಬಲ್ಲರು. "ನಿಮಗೆ ಇಷ್ಟ ಬಂದ ಅನುಕ್ರಮದಲ್ಲಿ ಪ್ರಶ್ನೆಗಳಿಗೆ ಉತ್ತರಿಸಬಹುದು" ಎನ್ನುವ ಆಯ್ಕೆ ಇದ್ದರೂ ಅವರು ಪ್ರಶ್ನೆಪತ್ರಿಕೆಯ ನಿರ್ದಿಷ್ಟ ಕ್ರಮವನ್ನೇ ಅನುಸರಿಸುತ್ತಾರೆ. ಉತ್ತರದ ಯಾವ ಅಂಶಗಳನ್ನು ಪರೀಕ್ಷಕರು ಅಂಕಗಳಿಗೆ ಪರಿಗಣಿಸುತ್ತಾರೆಂಬ ಸ್ಪಷ್ಟತೆ ಅವರಿಗೆ ಇರುತ್ತದೆ. ಅಂತಹ ಅಂಶಗಳನ್ನು ತಪ್ಪದೇ ಸ್ಫುಟವಾಗಿ ಬರೆದು, ಮೌಲ್ಯಮಾಪಕರ ಗಮನ ಸೆಳೆಯುತ್ತಾರೆ. ಅಂದರೆ, ಒಟ್ಟಾರೆ ಅವರಿಗೆ ಪರೀಕ್ಷೆಯ, ಮೌಲ್ಯಮಾಪನದ ನಿಯಮಗಳ ಪರಿಚಯ ಚೆನ್ನಾಗಿ ಇರುತ್ತದೆ. ಆ ಅರಿವನ್ನು ಬಳಸಿಕೊಂಡು ಸ್ಪರ್ಧೆಯಲ್ಲಿ ಮೇಲೇರುತ್ತಾರೆ. ಈ ನಿಯಮಗಳ ಪರಿಚಯ ಇಲ್ಲದ ವಿದ್ಯಾರ್ಥಿಗಳು ಹೆಚ್ಚಿನ ಶ್ರಮ ವಹಿಸಿದರೂ ಅಂಕಗಳ ವಿಷಯದಲ್ಲಿ ಹಿಂದುಳಿಯುವ ಸಾಧ್ಯತೆಗಳಿರುತ್ತವೆ.

 

ಇಂತಹ ಅರಿವು ಜೀವನದ ಪ್ರತಿಯೊಂದು ಹಂತದಲ್ಲೂ ನೆರವಿಗೆ ಬರುತ್ತದೆ. ಜೀವನ ಶಿಕ್ಷಣದ ತರಬೇತುದಾರರು "ಸ್ಥಾನ ಪಲ್ಲಟ" ಎನ್ನುವ ಮಾದರಿಯನ್ನು ಬಳಸುತ್ತಾರೆ. ಉದಾಹರಣೆಗೆ, ನೀವು ಯಾವುದೋ ಒಂದು ನೌಕರಿಗೆ ಅರ್ಜಿ ಹಾಕಿದ್ದೀರಿ ಎಂದು ಭಾವಿಸಿ. ಅದಕ್ಕೆ ಸಿದ್ಧತೆಯಾಗಿ ನಿಮ್ಮ ಸಾಮಾನ್ಯ ಜ್ಞಾನವನ್ನು ಬೆಳೆಸಿಕೊಳ್ಳುವ ಪುಸ್ತಕ ಓದುತ್ತೀರಿ. ಸಂದರ್ಶಕರು ಏನು ಪ್ರಶ್ನೆಗಳನ್ನು ಕೇಳಬಹುದು ಎಂದು ತಲೆ ಕೆಡಿಸಿಕೊಳ್ಳುತ್ತೀರಿ. ಎಂತಹ ಬಟ್ಟೆ ತೊಟ್ಟು ಸಂದರ್ಶನಕ್ಕೆ ಹೋಗಬೇಕು ಎಂದು ಆಲೋಚಿಸುತ್ತೀರಿ. ಇವೆಲ್ಲದಕ್ಕಿಂತಲೂ ಪರಿಣಾಮಕಾರಿ ವಿಧಾನವೆಂದರೆ, ನಿಮ್ಮನ್ನು ನೀವೇ ಸಂದರ್ಶಕರೆಂದು ಭಾವಿಸುವುದು. ಈಗ ನೀವು ಓರ್ವ ಅಭ್ಯರ್ಥಿಯನ್ನು ಕೆಲಸಕ್ಕೆ ನಿಯಮಿಸಬೇಕಿದೆ. ಅಂತವರಿಂದ ನಿಮ್ಮ ನಿರೀಕ್ಷೆ ಏನು? ಇದಕ್ಕೆ ಉತ್ತರಿಸಬೇಕೆಂದರೆ ಆ ಕೆಲಸಕ್ಕೆ ಬೇಕಾದ ಅರ್ಹತೆಗೆ ಯಾವ ನಿಯಮಗಳು ಪಾಲನೆಯಾಗಬೇಕು ಎನ್ನುವುದನ್ನು ತಿಳಿದಿರಬೇಕು. ನೀವೀಗ ಸಂಸ್ಥೆಯ ಆಡಳಿತ ನಿರ್ವಾಹಕರಾಗಿ ಸೇರಬೇಕಿದೆ. ಒಂದು ವೇಳೆ ಅಂತಹ ನಿರ್ವಾಹಕರನ್ನು ನೀವೇ ಆಯ್ಕೆ ಮಾಡಬೇಕೆಂದರೆ ಮೊದಲು ಸಂಸ್ಥೆಯ ಆಡಳಿತ ವಿಧಾನಗಳ ಪರಿಚಯ ಇರಬೇಕು. ಯಾವ ಮಟ್ಟದಲ್ಲಿ ಲೋಪ-ದೋಷಗಳಿವೆ; ಯಾವ ಸ್ತರದಲ್ಲಿ ಉನ್ನತಿಯ ಅಗತ್ಯವಿದೆ; ಯಾವ ಹಂತದಲ್ಲಿ ಸಂಸ್ಥೆ ಮತ್ತಷ್ಟು ಬೆಳವಣಿಗೆಯನ್ನು ಬಯಸುತ್ತದೆ ಎನ್ನುವ ಸ್ಪಷ್ಟತೆ ಸಂದರ್ಶಕರಿಗೆ ಇರಬೇಕಾಗುತ್ತದೆ. ಈ ನಿಯಮಗಳನ್ನು ಸಮರ್ಪಕವಾಗಿ ತುಂಬುವ ಅಭ್ಯರ್ಥಿಗೆ ಕೆಲಸ ದೊರೆಯುವ ಸಾಧ್ಯತೆಗಳು ಬಲವಾಗುತ್ತವೆ. ಈಗ ನೀವೇ ಅಂತಹ ಅಭ್ಯರ್ಥಿ ಆಗಬೇಕೆಂದರೆ ಏನು ಮಾಡಬೇಕು? ಈ ರೀತಿ ಆಲೋಚಿಸಿದಾಗ ನಿಮ್ಮ ಸಿದ್ಧತೆಯ ಹಂದರವೇ ಬದಲಾಗಿ ಹೋಗುತ್ತದೆ. ಸಂದರ್ಶನದ ನಿಯಮಗಳ ಅರಿವು ನಿಮ್ಮ ಯಶಸ್ಸಿನ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ.

 

ಜೀವನದಲ್ಲಿ ಯಶಸ್ವಿಯಾದ ಬಹುತೇಕರು ತಮ್ಮ ಕಾರ್ಯಕ್ಷೇತ್ರದ ನಿಯಮಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡುತ್ತಲೇ ಇರುತ್ತಾರೆ. ವಿಪರೀತ ವೇಗದಲ್ಲಿ ಮುನ್ನಡೆಯುತ್ತಿರುವ ಜಾಗತಿಕ ಪ್ರಗತಿ ನಿಯಮಗಳನ್ನು ನಿರಂತರವಾಗಿ ಬದಲಿಸುತ್ತಲೇ ಇರುತ್ತದೆ. ಇದನ್ನು ಅರಿತು, ಕ್ಲುಪ್ತ ವೇಳೆಗೆ ಸರಿಯಾದ ಬದಲಾವಣೆಗಳನ್ನು ಮಾಡಿಕೊಳ್ಳುತ್ತಾ ಸಾಗುವುದು ವೈಯಕ್ತಿಕವಾಗಿ ಮತ್ತು ಸಾಂಘಿಕವಾಗಿ ಬಹಳ ಮುಖ್ಯ. ನಿಯಮಗಳನ್ನು ಚೆನ್ನಾಗಿ ಅರಿತವರು ಮಾತ್ರವೇ ನಿಯಮಗಳನ್ನು ಬದಲಿಸಬಲ್ಲರು ಎಂಬ ಮಾತು ನಮ್ಮ ಕಾಲಘಟ್ಟದ ನಿಯಮಗಳಲ್ಲಿ ಒಂದು.

---------------------

(ದಿನಾಂಕ 08/08/2023 ರ ಪ್ರಜಾವಾಣಿಯ ಕಲೆ-ಸಾಹಿತ್ಯ ವಿಭಾಗದಲ್ಲಿ ಪ್ರಕಟವಾದ ಲೇಖನ. ಮೂಲ ಲೇಖನದ ಕೊಂಡಿ: https://www.prajavani.net/art-culture/article-features/article-on-life-lessons-2430467 )

 ಮಕ್ಕಳಿಗೆ ಕತೆ ಹೇಳುವುದನ್ನು ಮರೆಯದಿರಿ

 

ಡಾ. ಕಿರಣ್ ವಿ.ಎಸ್.

ವೈದ್ಯರು

 

ಬಾಲ್ಯದಲ್ಲಿ "ಒಂದೂರಲ್ಲಿ ಒಬ್ಬ ರಾಜ" ಎನ್ನುವ ಮಾತು ಕಿವಿಗೆ ಬಿದ್ದ ಕೂಡಲೇ ಮಾಡುವುದೆಲ್ಲವನ್ನೂ ಬಿಟ್ಟು ಅದನ್ನು ಹೇಳುವವರ ಹಿಂದೆ ಹೋಗುವ ತವಕವಿತ್ತು. ಕೆಲವು ಬಾರಿಯಂತೂ ಈ ಮುನ್ನ ಕೇಳಿದ್ದ ಕತೆಗಳನ್ನೇ ದುಂಬಾಲು ಬಿದ್ದು ಮತ್ತೆ ಮತ್ತೆ ಕೇಳುವ ಮನಸ್ಸಿತ್ತು. ಕತೆಗಳ ಸೊಬಗೇ ಅಂತಹದ್ದು. ಅದನ್ನು ರಸವತ್ತಾಗಿ ನಿರೂಪಿಸುವವರು ದೊರೆತರಂತೂ ಸ್ವರ್ಗಕ್ಕೆ ಮೂರೇ ಗೇಣು! ಕತೆ ಕೇಳುವಷ್ಟು ಹೊತ್ತೂ ನಾವು ನಾವಲ್ಲ. ನಮ್ಮ ಇಹವನ್ನು ಒಂದು ಬೇರೆಯೇ ಮಾಯಾಲೋಕಕ್ಕೆ ಒಯ್ಯುವ ಸಾಮರ್ಥ್ಯ ಇರುವುದು ಕತೆಗಳ ನಿರೂಪಣೆಯ ಪ್ರಕ್ರಿಯೆಗೆ.

 

ಕತೆ ಹೇಳುವುದು ವಿಶಿಷ್ಟ ಕಲೆಗಾರಿಕೆ. ಮಾತಿನ ಏರಿಳಿತಗಳ ಜೊತೆಗೆ ಆಂಗಿಕಭಾವಗಳನ್ನು ಕೂಡಿಸಿ ಕತೆಯ ಅಂಶಗಳನ್ನು ಚಿತ್ರವತ್ತಾಗಿ ನಿರೂಪಿಸುತ್ತಾ ಕೇಳುಗರಲ್ಲಿ ಊಹಾಲೋಕವನ್ನು ಸೃಜಿಸಬಲ್ಲ ಶಕ್ತಿ ಇರುವುದು ಕಥನಕ್ಕೆ. ನಮ್ಮ ಬುದ್ಧಿಗೆ ಸರಕು ಒದಗುವುದು ಐದು ಇಂದ್ರಿಯಗಳಿಂದ. ಕತೆ ಕೇಳುವ ಪ್ರಕ್ರಿಯೆಯಲ್ಲಿ ಕಿವಿಯ ಪಾತ್ರ ಹಿರಿದು. ನಿರೂಪಕರು ಕಥನದ ವೇಳೆ ತಮ್ಮ ದೇಹಭಾಷೆಯನ್ನೂ ಮೇಳೈಸುತ್ತಿದ್ದರೆ ಕೇಳುಗರ ಕಣ್ಣಿಗೂ ಮಾಹಿತಿ ಒದಗುತ್ತದೆ. ಮಕ್ಕಳು ಕತೆಗಳನ್ನು ಕೇಳುವಾಗ ಮತ್ತು ಕಾಮಿಕ್ಸ್ ನಂತಹ ಸಚಿತ್ರ ಕತೆ ಪುಸ್ತಕಗಳನ್ನು ಓದುವಾಗ ಅವರ ಮಿದುಳಿನಲ್ಲಿ ಆಗುವ ಬದಲಾವಣೆಗಳನ್ನು ವಿಜ್ಞಾನಿಗಳು ಸಂಶೋಧಿಸಿದ್ದಾರೆ. ಎರಡೂ ಸಂದರ್ಭಗಳಲ್ಲಿ ಮೊದಲನೆಯ ಬಾರಿ ಮಿದುಳು ಸಮಾನವಾಗಿ ಜಾಗೃತವಾಗುತ್ತವೆ. ಕಲ್ಪನೆಗಳಿಗೆ ಕಾರಣವಾಗುವ ಮಿದುಳಿನ ಮುಂಭಾಗದಲ್ಲಿ ರಕ್ತ ಸಂಚಾರ ಸರಿಸುಮಾರು ಒಂದೇ ಪ್ರಮಾಣದಲ್ಲಿ ಹೆಚ್ಚುತ್ತದೆ. ಅದೇ ಕಾಮಿಕ್ಸ್ ಕತೆಯನ್ನು ಮತ್ತೊಮ್ಮೆ ಓದಿದಾಗ ರಕ್ತ ಸಂಚಾರ ಅಷ್ಟಾಗಿ ಏರುವುದಿಲ್ಲ. ಅಂದರೆ, ಈ ಪುನರಾವರ್ತಿತ ಪ್ರಸಂಗಕ್ಕೆ ಮಿದುಳು ಹೆಚ್ಚೇನೂ ಸ್ಪಂದಿಸುವುದಿಲ್ಲ; "ಇದು ಈಗಾಗಲೇ ಆಗಿದೆಯಲ್ಲ; ಮತ್ತೆ ಏನಿದೆ" ಎನುವ ರೀತಿ ವರ್ತಿಸುತ್ತದೆ. ಆದರೆ ಕೇಳಿದ ಕತೆಯನ್ನು ಮತ್ತೊಮ್ಮೆ ಆಲಿಸುವಾಗಲೂ ಮಿದುಳಿಗೆ ಮೊದಲ ಬಾರಿ ಆದ ಅನುಭವವೇ ಆಗುವಂತೆ ರಕ್ತ ಸಂಚಾರದಲ್ಲಿ ಏರಿಕೆ ಆಗುತ್ತದೆ. ಅಂದರೆ ಕತೆ ಕೇಳುವ ಅನುಭವ ಪ್ರತಿ ಬಾರಿಯೂ ನವನವೀನ. ಅದಕ್ಕೇ ಮಕ್ಕಳು ಹಿರಿಯರನ್ನು "ಆ ಮಂಗನ ಕತೆ ಹೇಳು; ಈ ಮೊಲದ ಕತೆ ಹೇಳು" ಎಂದು ಪದೇ ಪದೇ ಬೇಡಿಕೊಳ್ಳುತ್ತಾರೆ.

 

ಪರಿಣಾಮಕಾರಿಯಾಗಿ ಕತೆ ಹೇಳುವ ಲಾಭವನ್ನು ಪ್ರತಿಯೊಂದು ನಾಗರಿಕತೆಯೂ ಅನಾದಿಕಾಲದಿಂದ ಕಂಡುಕೊಂಡಿದೆ. ನಮ್ಮ ದೇಶದ ಪಂಚತಂತ್ರ, ಹಿತೋಪದೇಶ; ಗ್ರೀಕರ ಈಸೋಪನ ಕತೆಗಳು; ಯುರೋಪಿನ ಆಂಡರ್'ಸನ್ ಅವರ ಕಾಲ್ಪನಿಕಗಳು ಮೊದಲಾಗಿ ಕಥನ ಇತಿಹಾಸವಿಲ್ಲದ ದೇಶವೇ ಇಲ್ಲ. ಕತೆ ಹೇಳುವುದರಿಂದ ಮತ್ತು ಕೇಳುವುದರಿಂದ ಬಹಳಷ್ಟು ಲಾಭಗಳಿವೆ. ಕತೆಗಳು ಮಕ್ಕಳ ಊಹಾಶಕ್ತಿಯನ್ನು ಹೆಚ್ಚಿಸುತ್ತವೆ. ಭವಿಷ್ಯದಲ್ಲಿ ತಾವು ಎದುರಿಸಬೇಕಾದ ಸವಾಲಿನ ಸಂದರ್ಭಗಳನ್ನು ಊಹಿಸಿಕೊಂಡು, ತಯಾರಿ ಮಾಡಿಕೊಳ್ಳಬಲ್ಲವರು ಹೆಚ್ಚು ಸಫಲರಾಗುತ್ತಾರೆ ಎಂದು ವಿಜ್ಞಾನ ಹೇಳುತ್ತದೆ. ಅದರ ಬೇರುಗಳು ಅವರು ಬಾಲ್ಯದಲ್ಲಿ ಕೇಳುವ ಕತೆಗಳಲ್ಲಿವೆ. ಹಿರಿಯರಿಂದ ಕತೆಗಳಿಗೆ ಪರಿಚಿತರಾಗುವ ಮಕ್ಕಳಿಗೆ ತಮ್ಮ ಇತಿಹಾಸ, ಸಂಸ್ಕೃತಿಗಳ ಪರಿಚಯ ಚೆನ್ನಾಗಿ ಆಗುತ್ತದೆ. ಅವರ ಕಲಿಕೆಯ ಸಾಮರ್ಥ್ಯ ಹೆಚ್ಚುತ್ತದೆ.

 

ಕತೆಗಳು ಮಕ್ಕಳಿಗೆ ಆಲಿಸುವ ತಾಳ್ಮೆಯನ್ನು ನೀಡುತ್ತವೆ. ಕಥನಗಳನ್ನು ಪುನಃ ಕೇಳುವ ಮಕ್ಕಳು ಕೂಡ ತಮಗೆ ಇದು ತಿಳಿದಿದೆ ಎಂದು ಮಧ್ಯೆ ಬಾಯಿ ಹಾಕುವುದಿಲ್ಲ. ಬದಲಿಗೆ ಹೆಚ್ಚು ಆಸಕ್ತಿಯಿಂದ ವಿವರಗಳನ್ನು ಆಲಿಸುತ್ತಾರೆ. ಪ್ರಸ್ತುತ ಜೀವನದಲ್ಲಿ ಆಲಿಸುವ ಗುಣ ಬಹಳ ಮುಖ್ಯ. "ಆಸಕ್ತಿಯಿಂದ ಕೇಳಿಸಿಕೊಳ್ಳುವವರು ಗೆಲ್ಲುವುದು ಹೆಚ್ಚು" ಎಂದು ಮಾನವ ಸಂಪನ್ಮೂಲದ ಕಾರ್ಪೊರೆಟ್ ಪ್ರಭೃತಿಗಳೂ ಹೇಳುತ್ತಾರೆ. ಕಥನಗಳು ಮಕ್ಕಳ ಶಬ್ದಶಕ್ತಿಯನ್ನು ಹೆಚ್ಚಿಸುತ್ತವೆ; ಹೆಚ್ಚು ಪದಗಳು ಅವರಿಗೆ ಪರಿಚಿತವಾಗುವುದಷ್ಟೇ ಅಲ್ಲದೆ, ಅವನ್ನು ಎಂತಹ ಸಂದರ್ಭಗಳಲ್ಲಿ ಬಳಸಬೇಕೆನ್ನುವ ಪರಿಜ್ಞಾನವೂ ಬೆಳೆಯುತ್ತದೆ. ಒಳ್ಳೆಯ ಭಾಷೆಯನ್ನು. ಪರಿಣಾಮಕಾರಿಯಾದ ಪದಗಳನ್ನು ಮಾತು-ಬರಹಗಳಲ್ಲಿ ಬಳಸಬಲ್ಲವರು ಸಾಮಾಜಿಕ ಏಣಿಯನ್ನು ಬಹಳ ಬೇಗ ಏರಬಲ್ಲರು. ಅಂತಹವರ ಬಗ್ಗೆ ಎಲ್ಲರಿಗೂ ಅಭಿಮಾನ; ಅವರು ಎಲ್ಲರಿಗೂ ಬೇಕು. ಕತೆಗಳನ್ನು ಅನುಭವಿಸುವ ಮಕ್ಕಳ ಸಹಾನುಭೂತಿ ವೃದ್ಧಿಸುತ್ತದೆ. ಅವರು ಇತರರ ಜೊತೆಗೆ ಭಾವನಾತ್ಮಕವಾಗಿ ಗುರುತಿಸಿಕೊಳ್ಳಬಲ್ಲರು. ಮಾನವ ಸಂಪನ್ಮೂಲಗಳ ಅಗತ್ಯ ತೀವ್ರವಾಗಿರುವ ಇಂದಿನ ದಿನಗಳಲ್ಲಿ ಇಂತಹ ವ್ಯಕ್ತಿಗಳು ಯಾವುದೇ ಉದ್ಯಮಕ್ಕೂ ಬಹಳ ಅಗತ್ಯವಾಗಿ ಬೇಕಾಗುತ್ತಾರೆ.   

 

ಇಂದಿನ ದಿನಗಳಲ್ಲಿ ಮಕ್ಕಳು ಪರದೆಗಳಿಗೆ ಅಂಟಿಕೊಳ್ಳುವ ಅಪಾಯ ಹೆಚ್ಚಾಗಿದೆ. ದೂರದರ್ಶನದ ಪರದೆ, ಲ್ಯಾಪ್'ಟಾಪ್ ಪರದೆ, ಮೊಬೈಲ್ ಫೋನಿನ ಪರದೆ, ಕಂಪ್ಯೂಟರಿನ ಪರದೆ - ಹೀಗೆ ವಿವಿಧ ಪರದೆಗಳನ್ನು ದಿನದ ಹಲವಾರು ಗಂಟೆಗಳ ಕಾಲ ಏಕಾಂಗಿಯಾಗಿ ವೀಕ್ಷಿಸುತ್ತಾರೆ. ಅವರ ಶಾಲೆಯ ಪ್ರಾಜೆಕ್ಟುಗಳಿಂದ ಹಿಡಿದು, ಸ್ನೇಹಿತರ ಒಡನಾಟ ಹಾಗೂ ಮನರಂಜನೆಯವರೆಗೆ ಪರದೆಗಳೇ ಆಧಾರ. ಇದರಿಂದ ಆಗಬಹುದಾದ ಅನಾಹುತಗಳ ಬಗ್ಗೆ ಅನೇಕಾನೇಕ ಅಧ್ಯಯನಗಳು ನಡೆದಿವೆ. ಇದು ಬೆಳೆದು ಅವಲಂಬನೆಯೆಂಬ ಮನೋವ್ಯಾಧಿಯ ಹಂತ ತಲುಪಿ, ಮಕ್ಕಳು ಪರದೆಗಳ ದಾಸ್ಯದಿಂದ ಹೊರಬರಲು ಮನೋವೈದ್ಯರ ಸಹಾಯ ಬೇಕಾಗುತ್ತದೆ. ಈ ನಿಟ್ಟಿನಲ್ಲಿ ಕತೆ ಹೇಳುವುದು ಬಹಳ ಸಹಕಾರಿ. ಪರದೆಗಳು ನೀಡದ ಶಕ್ತ ಅನುಭವವನ್ನು ಸಮರ್ಥ ಕಥನಕಾರರು ನೀಡಬಲ್ಲರು. ಆದರೆ, ಕುಟುಂಬಗಳಲ್ಲಿ ಈ ಕಲೆಗಾರಿಕೆ ಕ್ರಮೇಣ ನಶಿಸುತ್ತಿರುವುದು ನಮಗೆ ಎಚ್ಚರಿಕೆಯ ಗಂಟೆಯಾಗಬೇಕು.

 

ಕತೆ ಕೇಳುವುದಷ್ಟೇ ಅಲ್ಲ; ಕತೆಗಳನ್ನು ಹೇಳುವ ಕಲೆಯೂ ಮಕ್ಕಳಲ್ಲಿ ಬೆಳೆಯಬೇಕು. ತಾನು ಹಲವು ಬಾರಿ ಕೇಳಿರುವ ಕತೆಯನ್ನು ಇತರರಿಗೆ ಹೇಳುವಾಗ ಮಕ್ಕಳ ಕಲ್ಪನೆಯ ಸಾಮರ್ಥ್ಯ  ಜಾಗೃತವಾಗುತ್ತದೆ. ನೆನಪಿನ ಶಕ್ತಿ ಬೆಳೆಯುತ್ತದೆ. ಮಾಹಿತಿಯನ್ನು ವ್ಯವಸ್ಥಿತವಾಗಿ ಪ್ರಸ್ತುತ ಪಡಿಸುವ ರೂಡಿಯಾಗುತ್ತದೆ. ಕತೆಯೊಳಗೆ ತನಗೆ ಇಷ್ಟವಾಗದ ಅಂಶಗಳನ್ನು ಕಡಿತಗೊಳಿಸಿ, ತನಗೆ ನೆಚ್ಚುವ ವಿವರಗಳನ್ನು ಸೇರಿಸುವ ಯುಕ್ತಾಯುಕ್ತ ವಿವೇಚನೆ ಆರಂಭವಾಗುತ್ತದೆ. ಸಣ್ಣ ವಯಸ್ಸಿನಿಂದ ಕತೆಗಳನ್ನು ಹೇಳುವ ಅಭ್ಯಾಸ ಮಾಡಿಕೊಂಡ ಮಕ್ಕಳಿಗೆ ಸಭಾಕಂಪನ ಕಾಡುವುದು ಕಡಿಮೆ. ಅಗತ್ಯ ವಿವರಗಳನ್ನು ನಿರ್ದಿಷ್ಟ ಕ್ರಮದಲ್ಲಿ ಸ್ಪಷ್ಟವಾಗಿ ಹೇಳಬಲ್ಲವರು ತಮ್ಮ ವೃತ್ತಿ-ಪ್ರವೃತ್ತಿಗಳಲ್ಲಿ ಒಳ್ಳೆಯ ಪ್ರಗತಿ ಸಾಧಿಸಬಲ್ಲರು.

 

ಮಕ್ಕಳಿಗೆ ಚೆನ್ನಾದ ಕತೆಗಳನ್ನು ಕೇಳಿಸುವ, ಅವರಿಂದ ಹೇಳಿಸುವ ಪ್ರಕ್ರಿಯೆಯನ್ನು ಆರಂಭಿಸಿ ಮುಂದುವರೆಸಲು "ಇಂದಿನ ದಿನವೇ ಶುಭದಿನವು".

------------------

(ದಿನಾಂಕ 25/7/2023 ರ ಪ್ರಜಾವಾಣಿಯ ಕ್ಷೇಮ ಕುಶಲ ವಿಭಾಗದಲ್ಲಿ ಪ್ರಕಟವಾದ ಲೇಖನ. ಮೂಲ ಲೇಖನದ ಕೊಂಡಿ: https://www.prajavani.net/health/importance-of-story-telling-and-listening-in-life-2405471 )