ಭಾನುವಾರ, ನವೆಂಬರ್ 1, 2026


 ಭಗವದ್ಗೀತೆ ಮತ್ತು ಆಧುನಿಕ ಮನೋವಿಜ್ಞಾನದ ಸಂಧಿಸ್ಥಾನಗಳು

ಲೇಖಕ: ಡಾ. ಕಿರಣ್ ವಿ.ಎಸ್.

ವೈದ್ಯರು

ಕುರುಕ್ಷೇತ್ರದ ವಿಶಾಲವಾದ ರಣರಂಗವು ಭಗವದ್ಗೀತೆಯಲ್ಲಿ ಅರ್ಜುನ ಮತ್ತು ಪಾರ್ಥಸಾರಥಿಯ ನಡುವಿನ ಸಂಭಾಷಣೆಗೆ ವೇದಿಕೆ. ಅವರಿಬ್ಬರ ಮಾತುಕತೆ ಮಾನವ ಮನಸ್ಸಿನ ನಿರಂತರ ಸಂಘರ್ಷದ ಆಳವಾದ ರೂಪಕ. ಸಮರದ ಮುನ್ನ ಬಂಧುಗಳನ್ನು ಕಂಡಾಗ, ಸ್ವಧರ್ಮ ಮತ್ತು ಮೋಹಗಳ ತಾಕಲಾಟವನ್ನು ಗುರುತಿಸಲಾಗದೆ ಕಂಗೆಟ್ಟ ಅರ್ಜುನ, ತೀವ್ರವಾದ ತುಮುಲ ಮತ್ತು ಆತಂಕದ ಸ್ಥಿತಿಗೆ ಕುಸಿಯುತ್ತಾನೆ. ತನ್ಮೂಲಕ ಆತ ಅತ್ಯಂತ ನಿರ್ಣಾಯಕ ಸಂದರ್ಭಗಳಲ್ಲಿ ಎಲ್ಲರೂ ಅನುಭವಿಸಬಹುದಾದ ಮನೋದೌರ್ಬಲ್ಯಗಳ ಪ್ರತೀಕವಾಗುತ್ತಾನೆ. ತನ್ನ ನಿಲುವನ್ನು ಸಮರ್ಥಿಸಲು ಮೇಲ್ನೋಟಕ್ಕೆ ತಾರ್ಕಿಕ ಎನಿಸುವ ಅಸಂಗತಗಳನ್ನು ಪಟ್ಟಿ ಮಾಡುತ್ತಾನೆ. ಸ್ವಧರ್ಮದಿಂದ ದೂರಾಗುವ ತನ್ನ ಪ್ರಯತ್ನಕ್ಕೆ ಪ್ರಾಪಂಚಿಕ ವ್ಯವಸ್ಥೆಯನ್ನು ಉಳಿಸುವ ದೊಡ್ಡ ಧ್ಯೇಯದ ರೂಪವನ್ನು ನೀಡಿ ಸಮರ್ಥನೆಗೆ ಇಳಿಯುತ್ತಾನೆ. ಆಧುನಿಕ ಮನೋವಿಜ್ಞಾನ ಇಂತಹ ಸ್ಥಿತಿಯನ್ನು ಇಚ್ಛಾಶಕ್ತಿಯ ಬಿಕ್ಕಟ್ಟು (crisis of will), ಋಣಾತ್ಮಕ ದ್ವಂದ್ವ, ಬುದ್ಧಿ-ಭಾವನೆಗಳ ಅಸಾಂಗತ್ಯ ಮೊದಲಾಗಿ ಗುರುತಿಸುತ್ತದೆ. ಈ ನಿಟ್ಟಿನಲ್ಲಿ ಭಗವದ್ಗೀತೆಯು ಅತ್ಯುನ್ನತ ಸ್ತರದ ಆನ್ವಯಿಕ ಮನೋವಿಶ್ಲೇಷಣೆಯ ಪ್ರಬಂಧ. ಮಾನವ ಮನಸ್ಸಿನ ದುಗುಡಗಳ ಪರಿಭಾಷೆ, ದುಃಖದ ಮೂಲ ಕಾರಣಗಳ ವಿಶ್ಲೇಷಣೆ, ಮತ್ತು ಆತ್ಮನಿಯಂತ್ರಣಕ್ಕೆ ಅತ್ಯಾಧುನಿಕ ಪರಿಹಾರಗಳನ್ನು ಸೂಚಿಸುವ ಅದ್ಭುತ ಆಕರವಾಗಿ ಭಗವದ್ಗೀತೆ ಏಕೀಭವಿಸುತ್ತದೆ.

ಆಧುನಿಕ ಮನೋವಿಜ್ಞಾನ ಬಹುತೇಕ ಪಾಶ್ಚಾತ್ಯ ಮೂಲದ್ದು; ಮಾನವನ ವರ್ತನೆ ಮತ್ತು ಮಾನಸಿಕ ಪ್ರಕ್ರಿಯೆಗಳ ವೈಜ್ಞಾನಿಕ ಅಧ್ಯಯನಕ್ಕೆ ಸ್ಥಾಪಿತ ವಿಧಾನಗಳನ್ನು ಆಧರಿಸಿ ಅದು ಬೆಳೆಯುತ್ತಿದೆ. ಇಂತಹ ಪರಿಕಲ್ಪನೆಗಳನ್ನು ಭಗವದ್ಗೀತೆಯು ಸಾವಿರಾರು ವರ್ಷಗಳ ಹಿಂದೆಯೇ ಅನನ್ಯವಾದ ತಾತ್ತ್ವಿಕ ಚೌಕಟ್ಟಿನಲ್ಲಿ ಆಳವಾಗಿ ವಿಶ್ಲೇಷಿಸಿದೆ ಎಂಬುದು ಮನೋತಜ್ಞರ ಕುತೂಹಲಕ್ಕೆ ಕಾರಣವಾಗಿದೆ. ಆಧ್ಯಾತ್ಮಿಕ ಅಥವಾ ನೈತಿಕ ಗ್ರಂಥವನ್ನಾಗಿ ನೋಡಿದರೂ, ಭಗವದ್ಗೀತೆಯನ್ನು ಮನೋವೈಜ್ಞಾನಿಕ ಪಠ್ಯದ ಮಾದರಿಯಲ್ಲೇ ಅರ್ಥೈಸಬಹುದು. ಮನಸ್ಸಿನ ಕಾರ್ಯವೈಖರಿ, ಸ್ವಧರ್ಮದ ಮಹತ್ವ, ಭಾವನೆಗಳ ನಿಯಂತ್ರಣ, ಮತ್ತು ವೈಯಕ್ತಿಕ ಪರಿವರ್ತನೆಯ ಕಾರ್ಯವಿಧಾನಗಳ ಬಗ್ಗೆ ಭಗವದ್ಗೀತೆಯು ಆಧುನಿಕ ಮನಶಾಸ್ತ್ರಜ್ಞರನ್ನೂ ಅಚ್ಚರಿಗೊಳಿಸುವಷ್ಟು ನಿಖರ ಒಳನೋಟಗಳನ್ನು ನೀಡುತ್ತದೆ.

ಪಾಶ್ಚಾತ್ಯ ಸಿದ್ಧಾಂತಗಳು ಮಾನವ ಅಹಂನ ಸ್ವರೂಪ, ಸುಪ್ತಪ್ರಜ್ಞೆಯ ಕಂಡೀಷನಿಂಗ್, ಮತ್ತು ನಿರಾಸಕ್ತ ಕ್ರಿಯೆಗಳ ಅಧ್ಯಯನ-ಇವುಗಳನ್ನು ಆಧರಿಸಿಯೇ ಚಿಕಿತ್ಸೆಯನ್ನು ರೂಪುಗೊಳಿಸುತ್ತದೆ. ಅರ್ಜುನನಿಗೆ ಕೃಷ್ಣನ ಉಪದೇಶವು ಕೂಡ ಇಂತಹುದೇ ಚಿಕಿತ್ಸೆಯ ಸ್ವರೂಪದಲ್ಲಿದೆ. ಅರ್ಜುನನ ಗ್ಲಾನಿಯಿಂದ ಜನಿಸಿದ ಮಾನಸಿಕ ದೌರ್ಬಲ್ಯಗಳನ್ನು ನಿವಾರಿಸುವುದು ಭಗವದ್ಗೀತೆಯ ಉದ್ದೇಶ. ವ್ಯಕ್ತಿಯ ಕರ್ತವ್ಯ ಹಾಗೂ ಇಚ್ಛಾಸ್ವಾತಂತ್ರ್ಯಗಳ ನಡುವಿನ ಗೊಂದಲಗಳನ್ನು ದಾಟುವ ವಿಧಾನಗಳನ್ನು ತಿಳಿಸಿಕೊಡುವಲ್ಲಿ ಭಗವದ್ಗೀತೆಯು ಅಚಲವಾದ ಸ್ಪಷ್ಟತೆಯಿಂದ ಮಾರ್ಗದರ್ಶನ ಮಾಡುತ್ತದೆ. ಕೇವಲ ರೋಗಲಕ್ಷಣಗಳ ನಿರ್ವಹಣೆಗೆ ಸೀಮಿತಗೊಳಿಸದೆ, ಪರಿಪೂರ್ಣ ಮಾನಸಿಕ ಒಳಿತಿನತ್ತ ಒಯ್ಯುವ ಭಗವದ್ಗೀತೆಯು, ತಾತ್ವಿಕ ಮತ್ತು ಆಧ್ಯಾತ್ಮಿಕ ಭಾಷೆಯಲ್ಲಿ ಇಡೀ ಮಾನವ ಜನಾಂಗಕ್ಕೆ ಆಚರಣಯೋಗ್ಯವಾದ ಸಮಗ್ರ ಮಾದರಿಯನ್ನು ನೀಡಿದೆ.

ಈ ಹಿನ್ನೆಲೆಯಲ್ಲಿ ಭಗವದ್ಗೀತೆ ಮತ್ತು ಆಧುನಿಕ ಮನೋವಿಜ್ಞಾನಗಳ ಕೆಲವು ಸಂಧಿಸ್ಥಾನಗಳನ್ನು ಗುರುತಿಸಬಹುದು. ಭಗವದ್ಗೀತೆ ವಿವರಿಸುವ ಮನಸ್ಸು ಎಂಬುದು ಸಂವೇದನೆ ಮತ್ತು ಆಲೋಚನೆಗಳನ್ನು ಏಕತ್ರಗೊಳಿಸುವ ಸಾಧನವಾದರೆ, ಬುದ್ಧಿಯು ವಿವೇಚನೆ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುವ ಶಕ್ತಿ. ಆಧುನಿಕ ಮನೋವಿಜ್ಞಾನದಲ್ಲಿ ಇವು ಕ್ರಮವಾಗಿ Cognitive Apparatus ಮತ್ತು Executive Function ಗೆ ಸಂವಾದಿ.

ಅರ್ಜುನನು ಕೃಷ್ಣನಲ್ಲಿ ಶರಣಾಗತನಾಗಿ ಮಾರ್ಗದರ್ಶನ ಕೇಳುವುದು ಆಧುನಿಕ ಮನೋವಿಜ್ಞಾನದಲ್ಲಿ ಬಾಧಿತ ಹಾಗೂ ಚಿಕಿತ್ಸಕರ ನಡುವಿನ ಬಾಂಧವ್ಯದ ಸಂಕೇತ. ಕೃಷ್ಣನು ಇಲ್ಲಿ ಅರ್ಜುನನ ಮನೋವೈಜ್ಞಾನಿಕ ತಡೆಗಳನ್ನು ವಿಶ್ಲೇಷಿಸುವ ಮತ್ತು ಸ್ವಧರ್ಮ ಸಾಕ್ಷಾತ್ಕಾರತ್ತ ನಿರ್ದೇಶಿಸುವ ಗುರು-ಸ್ವರೂಪಿ ಮನೋಚಿಕಿತ್ಸಕನ ಪಾತ್ರವನ್ನು ನಿರ್ವಹಿಸುತ್ತಾನೆ.

ಭಗವದ್ಗೀತೆಯಲ್ಲಿ ಆತ್ಮವು ಶಾಶ್ವತವಾದ, ಬದಲಾಗದ, ನಿಜವಾದ ಸತ್ಯ. ಅದನ್ನು ಹೊರತುಪಡಿಸಿ, ಅದರ ಅವಲಂಬನೆಯಲ್ಲಿರುವ ದೇಹ, ಮನಸ್ಸು, ಬುದ್ಧಿ, ಮತ್ತು ಅಹಂಗಳು ನಾಶವಾಗುವ ಉಪಾಧಿಗಳು. ಆಧುನಿಕ ಮನೋವಿಜ್ಞಾನವು ವ್ಯಕ್ತಿತ್ವವನ್ನು ಬಾಹ್ಯ ಪ್ರಭಾವದಿಂದ ರೂಪುಗೊಂಡ ಅಹಂನಿಂದ ಗುರುತಿಸಿದರೆ, ಭಗವದ್ಗೀತೆ ಆತ್ಮಚಿಂತನೆಯ ಮೂಲಕ ಅಹಂನ ಮಿತಿಗಳನ್ನು ಮೀರುವ ಮಾರ್ಗವನ್ನು ತೋರಿಸುತ್ತದೆ.

ಭಗವದ್ಗೀತೆಯು ಮಾನಸಿಕ ದುಃಖಕ್ಕೆ ಮೂಲ ಕಾರಣಗಳನ್ನು ಪಟ್ಟಿ ಮಾಡುತ್ತದೆ. ಬಯಕೆ ಈಡೇರದಿದ್ದಾಗ ಕ್ರೋಧ ಉಂಟಾಗಿ, ವಿವೇಕ ನಾಶವಾಗುತ್ತದೆ. ಭಾವನೆಗಳ ನಿಯಂತ್ರಣದಲ್ಲಿ ಆಗುವ ವೈಫಲ್ಯವನ್ನು ಆಧುನಿಕ ಮನೋವಿಜ್ಞಾನ ಇದೇ ಪರಿಭಾಷೆಯಲ್ಲಿ ವಿವರಿಸುತ್ತದೆ. ಭಗವದ್ಗೀತೆಯಲ್ಲಿ ಹೇಳುವ ಸಂಸ್ಕಾರಗಳು ಮೂಲತಃ ಗತದ ಕಾರ್ಯಗಳು ಮತ್ತು ಅನುಭವಗಳಿಂದ ಮನಸ್ಸಿನಲ್ಲಿ ಆಳವಾಗಿ ಬೇರೂರಿರುವ ಮಾನಸಿಕ ಪ್ರವೃತ್ತಿಯ ಮುದ್ರೆಗಳು. ಆಧುನಿಕ ಮನೋವಿಜ್ಞಾನ ವಿವರಿಸುವ “ಸುಪ್ತಪ್ರಜ್ಞೆಯಲ್ಲಿನ ನೆನಪುಗಳು ಮತ್ತು ನಂಬಿಕೆಗಳು ಯಾವ ರೀತಿ ನಮ್ಮ ವರ್ತನೆಯನ್ನು ನಿಯಂತ್ರಿಸುತ್ತವೆ” ಎಂಬುದಕ್ಕೆ ಸಂಸ್ಕಾರಗಳ ವಿವರಣೆ ಹೊಂದಿಕೆಯಾಗುತ್ತದೆ.

ಭಗವದ್ಗೀತೆಯು “ವ್ಯಕ್ತಿಯು ತನ್ನ ಹಿಂದಿನ ಕರ್ಮದ ಬಂಧನಕ್ಕೆ ಒಳಗಾಗಿದ್ದರೂ, ಪ್ರಯತ್ನ ಮತ್ತು ಬುದ್ಧಿಗಳ ಸಮನ್ವಯದ ಮೂಲಕ ಭವಿಷ್ಯದ ಕರ್ಮವನ್ನು ಉತ್ತಮಗೊಳಿಸುವ ಸ್ವಾತಂತ್ರ್ಯ ಹೊಂದಿರುತ್ತಾನೆ” ಎಂದು ಒತ್ತಿ ಹೇಳುತ್ತದೆ. ಇದು ಆಧುನಿಕ ಮನೋವಿಜ್ಞಾನದ "ಜೈವಿಕವಾಗಿ ಮತ್ತು ಪರಿಸರದಿಂದ ಮಿತಿಗಳಿಗೆ ಒಳಪಟ್ಟಿದ್ದರೂ, ಧನಾತ್ಮಕ ಚಿಂತನೆ ಮತ್ತು ನಿರಂತರ ಕೃಷಿಯ ನೆರವಿನಿಂದ ಜೀವನದಲ್ಲಿ ಬದಲಾವಣೆ ಸಾಧಿಸುವ ಸಾಮರ್ಥ್ಯ ನಮ್ಮಲ್ಲಿದೆ" ಎಂಬ ನಂಬಿಕೆಗೆ ಅನುಗುಣವಾಗಿದೆ.

ನಿರ್ಲೇಪ ಕರ್ಮಯೋಗದಲ್ಲಿ ‘ಫಲದ ಮೇಲಿನ ಆಸಕ್ತಿಯನ್ನು ಬದಿಗಿಟ್ಟು ಕರ್ತವ್ಯವನ್ನು ಮಾಡಬೇಕು’ ಎನ್ನುವ ಮಂತ್ರ ಪ್ರಬಲವಾದ ‘ಅರಿವಿನ ಮರು-ರೂಪಿಸುವಿಕೆ’. ಇದು ಮನುಷ್ಯನ ಚಿತ್ತವೃತ್ತಿಯನ್ನು “ನಿಯಂತ್ರಿಸಲು ಅಸಾಧ್ಯವಾದ ಫಲಿತಾಂಶ”ಗಳಿಂದ ಹೊರತೆಗೆದು, “ನಿಯಂತ್ರಿಸಲು ಸಾಧ್ಯವಿರುವ ಪ್ರಯತ್ನ”ಗಳತ್ತ ಹೊರಳಿಸುತ್ತದೆ. ಈ ಮೂಲಕ ಆತಂಕ ಮತ್ತು ಕಾರ್ಯಕ್ಷಮತೆಯ ಒತ್ತಡವನ್ನು ಕಡಿಮೆ ಮಾಡುತ್ತದೆ. ಆಧುನಿಕ ಮನೋವೈದ್ಯದಲ್ಲಿ ಇಂತಹ ವಿಭಾಗೀಕರಣ ಅತ್ಯಂತ ಫಲಪ್ರದ ಚಿಕಿತ್ಸೆಯ ಪದ್ಧತಿ.

ಸ್ಥಿತಪ್ರಜ್ಞ ವ್ಯಕ್ತಿತ್ವವೆಂದರೆ ಸ್ಥಿರವಾದ ಪ್ರಜ್ಞೆ ಹಾಗೂ ಬುದ್ಧಿಶಕ್ತಿಗಳನ್ನು ಹೊಂದುವುದು. ಇಂತಹ ಸಾಧಕನು ಸುಖ-ದುಃಖ, ಯಶಸ್ಸು-ವೈಫಲ್ಯಗಳಿಂದ ವಿಚಲಿತನಾಗದೆ ಭಾವನಾತ್ಮಕವಾಗಿ ಸಮಚಿತ್ತನಾಗಿರುತ್ತಾನೆ. ಸ್ಥಿತಪ್ರಜ್ಞ ಪರಿಕಲ್ಪನೆಯು ಎಲ್ಲ ರೀತಿಯ ಲಾಭ-ನಷ್ಟಗಳನ್ನು ಸಮಾನವಾಗಿ ಸ್ವೀಕರಿಸುವ ಮಾನಸಿಕ ಸ್ಥಿತಿಯನ್ನು ವಿವರಿಸುತ್ತದೆ. ಈ ಅತ್ಯುನ್ನತ ಮಾನಸಿಕ ಸ್ಥಿತಿ ಭಗವದ್ಗೀತೆಯ ಆದರ್ಶಕ್ಕೆ ಸೂಕ್ತ ಉದಾಹರಣೆ. ಇದನ್ನು ಸಾಧಿಸಲು ನಾಲ್ಕು ಹಂತಗಳನ್ನು ವಿವರಿಸಲಾಗುತ್ತದೆ: ಭಾವನೆಗಳ ಗ್ರಹಿಕೆ; ಗ್ರಹಿಸಿದ ಭಾವಗಳ ಸೂಕ್ತ ಸಂಯೋಜನೆ; ಸಂಯೋಜನೆಯ ಅನುಕ್ರಮದಲ್ಲಿ ಅವುಗಳ ಅರ್ಥವಿವರಣೆ; ಮತ್ತು ಅಂತಿಮವಾಗಿ ಅರ್ಥೈಸಿಕೊಂಡ ವಿವರಗಳ ಸರಿಯಾದ ನಿರ್ವಹಣೆ. ಈ ನಾಲ್ಕು ಹಂತಗಳ ಪರಿಕಲ್ಪನೆಯು ಸಮಕಾಲೀನ ಮನೋವಿಜ್ಞಾನದಲ್ಲಿ ವ್ಯಕ್ತಪಡಿಸಲಾಗುವ ಭಾವನಾತ್ಮಕ ಸಮತೋಲನ ಮತ್ತು ನಿರ್ಲಿಪ್ತ ಚಿತ್ತವ್ಯಾಪಾರದ ಕಲ್ಪನೆಯನ್ನು ನಿಕಟವಾಗಿ ಹೋಲುತ್ತದೆ. ಸ್ಥಿತಪ್ರಜ್ಞ ಸ್ಥಿತಿ ಎಲ್ಲರೂ ಪಡೆಯಬೇಕೆಂದು ಬಯಸುವ, ಆದರೆ ಸುಲಭದಲ್ಲಿ ದಕ್ಕಿಸಿಕೊಳ್ಳಲಾಗದ ಉನ್ನತ ಆದರ್ಶ.

ಭಗವದ್ಗೀತೆಯಲ್ಲಿ ಸತ್ತ್ವ, ರಜಸ್ಸು, ಮತ್ತು ತಮಸ್ಸು ಎಂಬ ತ್ರಿಗುಣಗಳ ಪರಿಕಲ್ಪನೆ ಮಹತ್ವದ್ದು. ಇವುಗಳ ಪರಸ್ಪರ ಮಥನ ಮಾನವನ ಸ್ವಭಾವ ಮತ್ತು ವರ್ತನೆಯನ್ನು ನಿರ್ಧರಿಸುತ್ತವೆ. ಅಂತೆಯೇ, ಮಾನಸಿಕ ತಜ್ಞರು ‘ಸಹಜ ಪ್ರವೃತ್ತಿ, ವಾಸ್ತವ, ಮತ್ತು ನೈತಿಕತೆ’ ಎಂಬ ಮೂರು ಚಿತ್ತವೃತ್ತಿಗಳ ನಡುವಿನ ಸಂಘರ್ಷದಲ್ಲಿ ಮಧ್ಯಸ್ಥಿಕೆ ವಹಿಸುವ ಆಲೋಚನೆಯ ಮಹತ್ವವನ್ನು ವಿವರಿಸುತ್ತಾರೆ. ಆಧುನಿಕ ಚಿಕಿತ್ಸಕರಿಗೂ ಸವಾಲು ಎನಿಸುವ ಈ ಸಂಕೀರ್ಣ ಸಂದರ್ಭವನ್ನು ಪರಿಷ್ಕರಿಸಲು ಭಗವದ್ಗೀತೆಯು ಸ್ಪಷ್ಟವಾದ ಮಾರ್ಗಗಳನ್ನು ಸೂಚಿಸುತ್ತದೆ. ಮಾನಸಿಕ ಸ್ಥಿಮಿತವನ್ನು ಸಾಧಿಸಲು ಶ್ರಮಿಸುವ ಆಧುನಿಕ ಮನೋವಿಶ್ಲೇಷಣಾತ್ಮಕ ಪ್ರಯತ್ನಗಳಿಗೆ ಭಗವದ್ಗೀತೆಯು ಸೂಚಿಸುವ ನಿರ್ಲೇಪ (non-attachment) ಮತ್ತು ವರ್ತಮಾನ ಸ್ಥಿತಿಯ ಅರಿವಿನ (present-moment awareness) ಸೂಚನೆಗಳು ತಳಹದಿಯಾಗಿವೆ.

ಭಗವದ್ಗೀತೆಯು ಮತ್ತೆ-ಮತ್ತೆ ಸಂಪೂರ್ಣ ಎಚ್ಚರದ ಸ್ಥಿತಿಯಲ್ಲಿ ಸ್ವಧರ್ಮಕ್ಕೆ ಒತ್ತು ನೀಡುತ್ತದೆ; ಕ್ರಿಯೆಯ ಫಲಗಳಿಂದ ನಿರ್ಲಿಪ್ತವಾಗುವ ಮತ್ತು ಬಾಹ್ಯ ಸಂದರ್ಭಗಳ ಅನಿತ್ಯತೆಯನ್ನು ಸ್ವೀಕರಿಸುವ ಮನಸ್ಥಿತಿಯನ್ನು ಬೋಧಿಸುತ್ತದೆ. ಇಂತಹ ಒಳನೋಟಗಳು, ಪರಿಸ್ಥಿತಿಗಳ ಪ್ರಭಾವವನ್ನು ಒಪ್ಪಿಕೊಂಡು, ಹೊಂದಿಕೊಳ್ಳಬಲ್ಲ ನಮ್ಯವನ್ನು ಬೆಳೆಸಿಕೊಳ್ಳುವ, ಮತ್ತು ಮಾನಸಿಕ ವೇದನೆಯನ್ನು ಕಡಿಮೆ ಮಾಡುವಲ್ಲಿ ಪ್ರಯೋಜನಕಾರಿ. ಇದೇ ಫಲಿತಾಂಶಗಳು ಆಧುನಿಕ ಮನೋವಿಜ್ಞಾನದ ಸಂಶೋಧನೆಗಳೊಂದಿಗೆ ಹೊಂದಾಣಿಕೆ ಆಗುತ್ತವೆ.

ವ್ಯಕ್ತಿಯ ವೈಯಕ್ತಿಕ ಬೆಳವಣಿಗೆಯ ಪಯಣದಲ್ಲಿ ಅನಿವಾರ್ಯವಾಗಿ ಒದಗುವ ದುಃಖಗಳನ್ನು ನಿರಾಕರಿಸುವುದು ಅಸಾಧ್ಯ. ಆದರೆ, ದುಃಖದ ಬಗೆಗಿನ ದೃಷ್ಟಿಕೋನವನ್ನು ಪರಿವರ್ತಿಸುವುದು ಭಗವದ್ಗೀತೆಯ ಪ್ರಮುಖ ಉಪದೇಶಗಳಲ್ಲಿ ಒಂದು. ದುಃಖವು ಮಾನವನ ಅಸ್ತಿತ್ವದ ಸಹಜ ಭಾಗ. ಇದು ಆತ್ಮವಿಮರ್ಶೆಯ ಹಾದಿಯನ್ನು ಹಿಡಿದು ಆಧ್ಯಾತ್ಮಿಕ ಮತ್ತು ಮಾನಸಿಕ ವಿಕಾಸಕ್ಕೆ ಪ್ರೇರಕ ಶಕ್ತಿಯಾಗಬಹುದು. ದುಃಖ ಮತ್ತು ಆಂತರಿಕ ಸಂಘರ್ಷವನ್ನು ಎದುರಿಸುವುದರ ಮೂಲಕ ಪ್ರಬುದ್ಧತೆಯ ಹಂತಕ್ಕೆ ಏರುವ ಚಿಕಿತ್ಸಕ ಸಾಧ್ಯತೆಗಳನ್ನು ಆಧುನಿಕ ಮನೋವಿಜ್ಞಾನ ಕೂಡ ಗ್ರಹಿಸಿದೆ. ಇದರ ಮೂಲ ಸ್ವರೂಪವನ್ನು ಭಗವದ್ಗೀತೆಯಲ್ಲಿ ಸ್ಪಷ್ಟವಾಗಿ ಕಾಣಬಹುದು.

ಕೃಷ್ಣನ ಉಪದೇಶದ ನಂತರ ಅರ್ಜುನನು ಚೇತರಿಸಿಕೊಂಡು ಆಲೋಚನೆಯ ಸ್ಪಷ್ಟತೆ ಮತ್ತು ದೃಢ ಸಂಕಲ್ಪವನ್ನು ಸಾಧಿಸುವುದು ಚಿಕಿತ್ಸಕ ಪರಿವರ್ತನೆಯ ಶ್ರೇಷ್ಠ ಉದಾಹರಣೆಯಾಗಿ ನಿಲ್ಲುತ್ತದೆ. ಆಧುನಿಕ ಮನೋವಿಜ್ಞಾನದಲ್ಲಿ ಚಿಕಿತ್ಸೆಯೆಂಬುದು ಧ್ಯೇಯವನ್ನು ಸಾಧಿಸುವ ಪ್ರಕ್ರಿಯೆ. ಅದರ ಸಾಧನೆಗೆ ಸರಿಯಾದ ಮಾರ್ಗದರ್ಶನ, ವಾಸ್ತವದ ಜ್ಞಾನ, ಮತ್ತು ಶಿಸ್ತುಬದ್ಧ ಅಭ್ಯಾಸಗಳು ಮುಖ್ಯ. ಆಂತರಿಕ ಅಡೆತಡೆಗಳನ್ನು ನಿವಾರಿಸುವ ಯಥಾವತ್ ದಾರಿಗಳನ್ನು ಭಗವದ್ಗೀತೆ ಸೂಚಿಸಿದೆ.

ಸ್ವಧರ್ಮ ಪರಿಪಾಲನೆ, ಭಾವನಾತ್ಮಕ ನಿಯಂತ್ರಣ, ಮತ್ತು ಮಾನಸಿಕ ಧೃಡತೆಗೆ ಸಂಬಂಧಿಸಿದ ಪ್ರಾಚೀನ ಜ್ಞಾನ ಮತ್ತು ಸಮಕಾಲೀನ ಚಿಂತನೆಯ ನಡುವಿನ ಏಕತೆಯನ್ನು ಭಗವದ್ಗೀತೆ ಮತ್ತು ಆಧುನಿಕ ಮನೋವಿಜ್ಞಾನದ ನಡುವಿನ ಸಂಧಿಸ್ಥಾನಗಳು ಸ್ಪಷ್ಟವಾಗಿ ತೋರುತ್ತವೆ. ಆತ್ಮಾವಲೋಕನ, ನಿರ್ಲಿಪ್ತ ಸ್ಥಿತಿ, ಮತ್ತು ಶಿಸ್ತುಬದ್ಧ ಅಭ್ಯಾಸಗಳಂತಹ ತತ್ತ್ವಗಳ ಮೂಲಕ ಎರಡೂ ಪರಂಪರೆಗಳು ಆಂತರಿಕ ಸಂಘರ್ಷವನ್ನು ನಿವಾರಿಸಲು ಮತ್ತು ಮಾನಸಿಕ ಯೋಗಕ್ಷೇಮವನ್ನು ಸಾಧಿಸಲು ಪ್ರಾಯೋಗಿಕ ಮಾರ್ಗದರ್ಶನ ನೀಡುತ್ತವೆ. ಇಂತಹ ಶ್ರೀಮಂತ ಒಳನೋಟಗಳಿಂದ ಭಗವದ್ಗೀತೆ ಆಧುನಿಕ ಮಾನಸಿಕ ದೃಷ್ಟಿಕೋನಗಳನ್ನು ಸಮೃದ್ಧಗೊಳಿಸುತ್ತಿದೆ. ಪ್ರಸ್ತುತ ಜಗತ್ತಿಗೆ ಅಗತ್ಯವಾದ ಶಾಂತಿ, ನೈತಿಕ ಜೀವನಶೈಲಿ, ಮತ್ತು ವೈಯಕ್ತಿಕ ಉತ್ತುಂಗವನ್ನು ಉತ್ತೇಜಿಸುವಲ್ಲಿ ಭಗವದ್ಗೀತೆಯ ಪಾತ್ರವನ್ನು ಜಗತ್ತು ಮತ್ತೊಮ್ಮೆ-ಮಗದೊಮ್ಮೆ ಮನಗಾಣುತ್ತಿದೆ.

-------------------

ಡಿಸೆಂಬರ್ 2025 ರ ಸ್ವರ್ಣವಲ್ಲಿಪ್ರಭಾ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ