ಶನಿವಾರ, ಆಗಸ್ಟ್ 20, 2022

 ತಲೆಸುತ್ತಿನ ಸುತ್ತಮುತ್ತ....

ಡಾ. ಕಿರಣ್ ವಿ.ಎಸ್.

ವೈದ್ಯರು

“ರಾತ್ರಿ ಮಲಗಿದಾಗ ಚೆನ್ನಾಗಿಯೇ ಇದ್ದೆ. ಬೆಳಗ್ಗೆ ಎದ್ದರೆ ತಲೆಯೆಲ್ಲ ಹಗುರವಾದ ಹಾಗಿತ್ತು; ಕಣ್ಣು ಮಂಜಾಗಿತ್ತು; ಸುತ್ತಮುತ್ತಲಿನ ಗೋಡೆಗೆಳೆಲ್ಲ ಗಿರಕಿ ಹೊಡೆಯುತ್ತಿದ್ದವು. ಹೊಟ್ಟೆ ತೊಳಸಿದಂತಾಯಿತು. ಹೆಜ್ಜೆ ಇಟ್ಟರೆ ಬಿದ್ದುಬಿಡುತ್ತೇನೆಂಬ ಭಯ. ಕಣ್ಣು ಮುಚ್ಚಿಕೊಂಡು ಹಾಗೆಯೇ ಮಂಚದ ಮೇಲೆ ಕೂರುವಂತಾಯಿತು. ಸ್ವಲ್ಪ ಕಾಲ ಕುಳಿತ ನಂತರ ಕಣ್ಣು ತೆರೆದಾಗ ತಲೆಸುತ್ತಿನ ಅನುಭವ ಕಡಿಮೆ ಆಯಿತಾದರೂ ಇನ್ನೂ ಪೂರ್ತಿಯಾಗಿ ವಾಸಿಯಾಗಿಲ್ಲ”. ಜೀವನದಲ್ಲಿ ಒಮ್ಮೆಯಾದರೂ ಈ ಅನುಭವ ಆಗದವರು ವಿರಳ.

ತಲೆಸುತ್ತು, ತಲೆತಿರುಗುವಿಕೆ, ತಲೆ ಗಿರಕಿ ಹೊಡೆದ ಅನುಭವ, ಶಿರೋಭ್ರಮಣ ಮುಂತಾದ ಹೆಸರುಗಳಿಂದ ಕರೆಯಲ್ಪಡುವ “ವರ್ಟೈಗೊ” (Vertigo) ಸಮಸ್ಯೆ ಬಹಳ ಸಾಮಾನ್ಯ. ಬಹುತೇಕ ಮಂದಿಗೆ ಇದು ತಾತ್ಕಾಲಿಕ ಅನುಭವ. ಆದರೆ ಈ ಸಮಸ್ಯೆ ಗಂಭೀರವಾದರೆ ದೀರ್ಘಕಾಲಿಕವಾಗಿಯೂ ಕಾಡಬಹುದು. ತಲೆಸುತ್ತಿನ ವೇಳೆ ಸುಮ್ಮನೆ ಒಂದೆಡೆ ನಿಂತಿದ್ದರೂ ನಾವೇ ತಿರುಗುತ್ತಿರುವಂತೆ ಅನಿಸಬಹುದು; ಇಲ್ಲವೇ, ನಮ್ಮ ಸುತ್ತಮುತ್ತಲಿನ ಗೋಡೆಗಳು, ವಸ್ತುಗಳು ಗಿರಕಿ ಹೊಡೆಯುತ್ತಿರುವಂತೆ ಭಾಸವಾಗಬಹುದು. ವಯಸ್ಸಾದಂತೆಲ್ಲಾ ಈ ಸಮಸ್ಯೆ ಅಧಿಕವಾಗುತ್ತದೆ. ತಲೆಸುತ್ತು ಬಂದಾಗ ಕೆಲವೊಮ್ಮೆ “ಸ್ವಲ್ಪ ನಡೆದರೆ ತಂತಾನೇ ಸರಿಹೋಗುತ್ತದೆ” ಎಂದು ಭಾವಿಸಿ, ಕೆಲ ಹೆಜ್ಜೆಗಳನ್ನಿಟ್ಟು, ಪ್ರಜ್ಞೆತಪ್ಪಿ ಬಿದ್ದು ಗಾಯಗೊಂಡವರಿದ್ದಾರೆ. ಸುಲಭವಾಗಿ ನಿರ್ಲಕ್ಷಿಸಲಾಗದ, ಉಪೇಕ್ಷೆ ಮಾಡಬಾರದಾದ ಸಮಸ್ಯೆಗಳಲ್ಲಿ ತಲೆಸುತ್ತು ಒಂದು.

ಮನುಷ್ಯ ಜೀವಿ ಮೂಲತಃ ಚತುಷ್ಪಾದಿಗಳಿಂದ ವಿಕಾಸವಾದರೂ ಎರಡು ಕಾಲಿನ ಮೇಲೆ ನಿಲ್ಲುವ, ನಡೆಯುವ ಹಂತಕ್ಕೆ ಏರಿದ ಪ್ರಾಣಿ. ಇದರ ಲಾಭಗಳೂ ಕೆಲವು; ಅಪಾಯಗಳೂ ಹಲವು. ನಾಲ್ಕು ಚಕ್ರದ ಕಾರು ಓಡಿಸುವಾಗ ನಮಗೆ ಸಮತೋಲನದ ಅಗತ್ಯ ಇರುವುದಿಲ್ಲ. ಆದರೆ ಎರಡು ಚಕ್ರದ ಬೈಸಿಕಲ್ ಅಥವಾ ಬೈಕ್ ಓಡಿಸುವವರಿಗೆ ಬೀಳದಂತೆ ಸಮತೋಲನವನ್ನು ನಿರ್ವಹಿಸುವುದು ಮುಖ್ಯ. ಅದೇ ರೀತಿಯಲ್ಲಿ ದ್ವಿಪಾದಿ ಮನುಷ್ಯರಲ್ಲಿ ಬೀಳದಂತೆ ಸಮತೋಲನ ಕಾಯ್ದುಕೊಳ್ಳುವುದು ಅಗತ್ಯ. ಇದನ್ನು ನಿರ್ವಹಿಸಲು ನಮ್ಮ ಶರೀರ ಹಲವಾರು ತಯಾರಿ ಮಾಡಿಕೊಂಡಿದೆ. ಶರೀರದ ಸಮತೋಲನವನ್ನು ಕಾಯ್ದುಕೊಳ್ಳುವ ಪ್ರಮುಖ ಅಂಗಗಳು ನಮ್ಮ ಒಳಕಿವಿಯಲ್ಲಿವೆ. ಪರಸ್ಪರ ಲಂಬಕೋನದಲ್ಲಿರುವ, ತಮ್ಮ ಒಡಲಿನ ಸ್ವಲ್ಪಭಾಗದಲ್ಲಿ ದ್ರವ ತುಂಬಿರುವ ಮೂರು ಅರ್ಧವರ್ತುಲಾಕಾರದ ಕೊಳವೆಗಳು, ಅದರ ಬದಿಯ ಎರಡು ಗಟ್ಟಿ ಚೀಲಗಳು, ಇವುಗಳಿಂದ ಮಾಹಿತಿಯನ್ನು ಒಯ್ಯುವ ನರಗಳು ದೇಹದ ಸಮತೋಲನ ನಿರ್ವಹಣೆಯ ಮುಖ್ಯ ಭಾಗಗಳು. ಅರ್ಧವರ್ತುಲಾಕಾರದ ಕೊಳವೆಗಳಲ್ಲಿನ ದ್ರವದ ಮಟ್ಟವನ್ನು ಗ್ರಹಿಸುವ ನರಗಳು, ವ್ಯಕ್ತಿಯ ತಲೆ ಯಾವ ಕೋನದಲ್ಲಿ ನಿಂತಿದೆ ಎಂದು ಮಿದುಳಿಗೆ ತಿಳಿಸುತ್ತವೆ. ಇಂತಹ ವಿಶಿಷ್ಟ ಮಾಹಿತಿಯನ್ನು ಕ್ರೋಢೀಕರಿಸುವ ಮಿದುಳಿನ ಭಾಗಕ್ಕೆ ಮತ್ತಷ್ಟು ಮಾಹಿತಿ ಕಣ್ಣುಗಳಿಂದ ಮತ್ತು ದೇಹದ ಕೀಲುಗಳಿಂದ ಬರುತ್ತದೆ. ಇವೆಲ್ಲವನ್ನೂ ಸಂಸ್ಕರಿಸುವ ಮಿದುಳು ಶರೀರದ ಸ್ಥಿತಿಯನ್ನು ಕ್ಷಣಮಾತ್ರದಲ್ಲಿ ನಿರ್ಧರಿಸಿ, ಯಾವುದೇ ಅಸಮತೋಲನವನ್ನು ಸರಿಪಡಿಸುವ ಸೂಚನೆಗಳನ್ನು ದೇಹದ ಮಾಂಸಖಂಡಗಳಿಗೆ ನೀಡುತ್ತದೆ. ಅದಕ್ಕೇ, ದೇಹ ಆಯ ತಪ್ಪಿ ಒಂದೆಡೆ ವಾಲಿದರೆ ಕೂಡಲೇ ಆ ಬದಿಯ ಕೈ ದೂರಕ್ಕೆ ಚಲಿಸಿ, ಭುಜದ ಮಾಂಸಖಂಡಗಳು ಗಟ್ಟಿಯಾಗಿ, ಹಸ್ತದ ಭಾಗ ಅಗಲವಾಗುತ್ತದೆ. ಇದು ಮಿದುಳಿನ ಮಿಂಚಿನ ವೇಗದ ಮಾಹಿತಿ ಸಂಸ್ಕರಣೆಗೆ ಸಾಕ್ಷಿ.

ಸಮತೋಲನ ನಿರ್ವಹಿಸುವ ಕಿವಿಯ ಅಂಗಗಳು ಅಥವಾ ಅದನ್ನು ಸಂಸ್ಕರಿಸುವ ಮಿದುಳಿನ ಭಾಗದಲ್ಲಿ ಏರುಪೇರಾದರೆ ತಲೆಸುತ್ತು ಬರುತ್ತದೆ. ಒಳಕಿವಿಯ ಭಾಗಗಳಲ್ಲಿ ಸಮಸ್ಯೆ ಉಂಟಾದರೆ ಕಿವಿಯಲ್ಲಿ ಗುಂಯ್ ಸದ್ದು, ತಾತ್ಕಾಲಿಕ ಕಿವುಡು, ಹೊಟ್ಟೆ ತೊಳಸುವುದು, ವಾಂತಿ, ಕಣ್ಣಿನ ಪಾಪೆಗಳ ವೇಗದ ಚಲನೆ, ಅಸಮರ್ಪಕ ನಡಿಗೆ ಮೊದಲಾದವು ಕಾಣುತ್ತವೆ. ಆರಂಭದಲ್ಲಿ ಇವು ತೀವ್ರ ಸಮಸ್ಯೆ ತಂದೊಡ್ಡುತ್ತವೆ. ಆದರೆ ಮಿದುಳು ಈ ಸಮಸ್ಯೆಯನ್ನು ಗ್ರಹಿಸಿ, ಇತರ ಮೂಲಗಳಿಂದ ಅಧಿಕ ಮಾಹಿತಿ ಸಂಗ್ರಹಿಸಿ, ಪರಿಸ್ಥಿತಿಯನ್ನು ತಿಳಿಗೊಳಿಸುವ ಪ್ರಯತ್ನ ಮಾಡುತ್ತದೆ. ಈ ವೇಳೆಗೆ ಒಳಕಿವಿಯ ತಾತ್ಕಾಲಿಕ ಸಮಸ್ಯೆ ಪರಿಹಾರವಾದರೆ ತಲೆಸುತ್ತು ತಾನಾಗಿಯೇ ನಿಲ್ಲುತ್ತದೆ. ಕೆಲವೊಮ್ಮೆ ಇದರ ಪರಿಹಾರಕ್ಕೆ ಕೆಲವು ಮನೆಮದ್ದು, ಔಷಧಗಳು, ಸಾಕಷ್ಟು ವಿಶ್ರಾಂತಿ ನೆರವಾಗುತ್ತವೆ. ಆದರೆ, ಒಳಕಿವಿಯ ಸಮಸ್ಯೆ ತೀವ್ರ ಸ್ವರೂಪದ್ದಾಗಿದ್ದಲ್ಲಿ, ಅಥವಾ ಸಮತೋಲನ ನಿರ್ವಹಣೆಯ ಅಂಗಗಳ, ನರಗಳ ಕಾಯಿಲೆಗೆ ಸಂಬಂಧಿಸಿದ್ದಾಗಿದ್ದಲ್ಲಿ, ಇಲ್ಲವೇ ಮಿದುಳಿನ ಮಾಹಿತಿ ಸಂಸ್ಕರಣೆಯ ಭಾಗ ತೊಂದರೆಗೆ ಒಳಗಾಗಿದ್ದಲ್ಲಿ ತಲೆಸುತ್ತು ಪರಿಹಾರವಾಗುವುದಿಲ್ಲ; ಬದಲಿಗೆ ಉಲ್ಬಣಿಸಬಹುದು. ಅನತಿಕಾಲದಲ್ಲಿ ಪರಿಹಾರವಾಗದ ಅಥವಾ ಪದೇ ಪದೇ ಕಾಡುವ ತಲೆಸುತ್ತನ್ನು ನಿರ್ಲಕ್ಷಿಸುವಂತಿಲ್ಲ. ಇದರ ಕಾರಣವನ್ನು ಹುಡುಕಿ, ಸೂಕ್ತ ಪರಿಹಾರ ಕಂಡುಕೊಳ್ಳಲು ಮೊದಲು ಕಿವಿಯ ತಜ್ಞರನ್ನು, ಅಗತ್ಯವಾದರೆ ಮಿದುಳಿನ ತಜ್ಞವೈದ್ಯರನ್ನು ಕಾಣಬೇಕು. ತಲೆಸುತ್ತಿನ ನಿಖರ ಕಾರಣವನ್ನು ಪತ್ತೆ ಮಾಡಬಲ್ಲ ಹಲವಾರು ಪರೀಕ್ಷೆಗಳಿವೆ. ಇವನ್ನು ಅಗತ್ಯಾನುಸಾರ ತಜ್ಞವೈದ್ಯರು ಮಾಡಿಸುತ್ತಾರೆ. ತಲೆಸುತ್ತಿನ ಕಾರಣ ಪತ್ತೆಯಾದ ನಂತರ ಅದರ ಚಿಕಿತ್ಸೆಗೆ ವೈಜ್ಞಾನಿಕ ವಿಧಾನಗಳಿವೆ. 

ತಲೆಸುತ್ತಿನ ಕಾರಣ ಕೇವಲ ಒಳಕಿವಿ ಅಥವಾ ಮಿದುಳಿನ ಸಮಸ್ಯೆಯೇ ಆಗಬೇಕೆಂದಿಲ್ಲ. ಕೆಲವು ಸಂದರ್ಭಗಳಲ್ಲಿ ಶರೀರದ ಇತರ ಸಮಸ್ಯೆಗಳಿಂದಲೂ ತಲೆಸುತ್ತು ಆಗಬಹುದು. ಮಧುಮೇಹಿಗಳಲ್ಲಿ ರಕ್ತದಲ್ಲಿನ ಸಕ್ಕರೆಯ ಅಂಶದಲ್ಲಿ ಏರುಪೇರಾದಾಗ ತಲೆಸುತ್ತು ಕಾಣುತ್ತದೆ. ಅಂತಹ ವೇಳೆಯಲ್ಲಿ ಕೂಡಲೇ ರಕ್ತದ ಸಕ್ಕರೆಯ ಮಟ್ಟವನ್ನು ಪರಿಶೀಲಿಸಿ, ಪರಿಹಾರ ಕಂಡುಕೊಳ್ಳಬೇಕು. ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿ, ರಕ್ತದ ಒತ್ತಡ ಇಳಿದಾಗ, ಮಿದುಳಿಗೆ ಸಾಕಷ್ಟು ರಕ್ತ ಹರಿಯದೆ ತಲೆಸುತ್ತು ಉಂಟಾಗಬಹುದು. ಈ ನಿರ್ಜಲೀಕರಣವನ್ನು ತೊಡೆಯಲು ಸಾಕಷ್ಟು ಪ್ರಮಾಣದ ದ್ರವಗಳು, ಎಳೆನೀರು, ಓ.ಆರ್.ಎಸ್ ಪಾನಕ, ನೀರುಮಜ್ಜಿಗೆಗಳನ್ನು ಬಳಸಬೇಕು. ಈಚೆಗೆ ಶರೀರದ ತೂಕವನ್ನು ಶೀಘ್ರವಾಗಿ ಕಡಿಮೆ ಮಾಡಲು ಅನೇಕ ಅವೈಜ್ಞಾನಿಕ ವಿಧಾನಗಳಿಗೆ ಶರಣು ಹೋಗುವವರಿದ್ದಾರೆ. ಅಂತಹವರು ತಮ್ಮ ಆಹಾರ ಸೇವನೆಯಲ್ಲಿ ಹಠಾತ್ ಬದಲಾವಣೆ ಮಾಡಿಕೊಳ್ಳುತ್ತಾರೆ. ಇದನ್ನು ಶರೀರದ ವ್ಯವಸ್ಥೆ ಸಹಿಸಲು ಸಾಧ್ಯವಾಗದೆ ಹೋದರೆ ಆಗಾಗ ತಲೆಸುತ್ತು ಕಾಣುತ್ತದೆ. ಇಂತಹವರು ವೈದ್ಯರಲ್ಲಿಗೆ ಹೋದಾಗ ತಮ್ಮ ಹೊಸ ಆಹಾರ ಪದ್ದತಿಯ ಬಗ್ಗೆ ಅವರಿಗೆ ಮಾಹಿತಿ ನೀಡಬೇಕು. ಇಲ್ಲವಾದರೆ ತಲೆಸುತ್ತಿಗೆ ಅನೇಕ ಪರೀಕ್ಷೆಗಳನ್ನು ಮಾಡಿದರೂ ವೈದ್ಯರಿಗೆ ಕಾರಣ ತಿಳಿಯದೇ ಹೋಗಬಹುದು.  

ನಮ್ಮ ಶರೀರದ ಬಹುತೇಕ ಭಾಗ ನೀರು. ದೇಹದ ನೀರಿನ ಮಟ್ಟ ಕುಸಿದರೆ ಇಡೀ ವ್ಯವಸ್ಥೆ ಏರುಪೇರಾಗುತ್ತದೆ. ಹೀಗಾಗಿ ಸೂಕ್ತ ಪ್ರಮಾಣದಲ್ಲಿ ನೀರನ್ನು ಸೇವಿಸುವುದು ಬಹಳ ಅಗತ್ಯ. ನಾಲಿಗೆಯ ಚಪಲಕ್ಕೆ, ಸಾಮಾಜಿಕ ಒತ್ತಡಕ್ಕೆ, ಸೋಮಾರಿತನಕ್ಕೆ ಒಳಗಾಗಿ ನೀರಿನ ಬದಲಿಗೆ ಕಾಫಿ, ಚಹಾ, ಕೋಲಾಗಳಂತಹ ಸಕ್ಕರೆಯುಕ್ತ ರಾಸಾಯನಿಕ ಪೇಯಗಳನ್ನು ಸೇವಿಸುವುದು ದೇಹದ ನೀರಿನ ಅಂಶವನ್ನು ಅಸಹಜ ಸ್ಥಿತಿಗೆ ದೂಡುತ್ತದೆ. ಈ ಪೇಯಗಳು ಶರೀರದಿಂದ ಮತ್ತಷ್ಟು ನೀರಿನ ಅಂಶವನ್ನು ಹೊರಹಾಕುತ್ತವೆ. ಇಂತಹುದೇ ಪರಿಣಾಮವನ್ನು ಮದ್ಯಪಾನ ಮಾಡುವವರಲ್ಲಿ ಸಹ ನೋಡಬಹುದು. ಇದರಿಂದ ಉಂಟಾಗುವ ನಿರ್ಜಲೀಕರಣದಿಂದ ತಲೆಸುತ್ತು ಬರುತ್ತದೆ. ಹೀಗಾಗಿ, ತಲೆಸುತ್ತಿನ ಪ್ರಥಮ ಚಿಕಿತ್ಸೆಯಲ್ಲಿ ಸರಳ ದ್ರವಾಹಾರದ ಸಾಕಷ್ಟು ಬಳಕೆ ಉಪಯುಕ್ತ. ಸಂಚಾರದ ವೇಳೆ ಪುಸ್ತಕ ಓದುವುದು, ಫೋನು ನೋಡುವುದು, ಗಣಕದಲ್ಲಿ ಕೆಲಸ ಮಾಡುವುದು ಮೊದಲಾದ ಚಟುವಟಿಕೆಗಳು ಕೂಡ ತಲೆಸುತ್ತು ಉಂಟು ಮಾಡುತ್ತವೆ. ಅರಿವಿಗೆ ಬರುವ ಇಂತಹ ಕಾರಣಗಳನ್ನು ಪ್ರಜ್ಞಾಪೂರ್ವಕವಾಗಿ ತಡೆಯಬೇಕು. ಈ ರೀತಿಯ ತಲೆಸುತ್ತು ಬಂದ ನಂತರ ಚಿಕಿತ್ಸೆ ಪಡೆಯುವುದಕ್ಕಿಂತ ಅದನ್ನು ಬಾರದಂತೆ ನಿರ್ವಹಿಸುವುದು ಒಳ್ಳೆಯದು.

----------------------------

ದಿನಾಂಕ 26/7/2022 ರ ಪ್ರಜಾವಾಣಿ ದಿನಪತ್ರಿಕೆಯ “ಕ್ಷೇಮ-ಕುಶಲ” ವಿಭಾಗದಲ್ಲಿ ಪ್ರಕಟವಾದ ಲೇಖನ. ಕೊಂಡಿ: https://www.prajavani.net/health/headache-health-women-problem-957500.html

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ