ಶನಿವಾರ, ಆಗಸ್ಟ್ 20, 2022

 ವೈದ್ಯರು ಮತ್ತು ಅಂಕಣ ಬರಹ – ಕೆಲವು ಒಳನೋಟಗಳು

ಡಾ. ಕಿರಣ್ ವಿ.ಎಸ್.

ಬೆಂಗಳೂರು

ಪ್ರಸ್ತುತ ಮಾಧ್ಯಮಗಳ ಪ್ರಮುಖ ಆಕರ್ಷಣೆ ಅವುಗಳ ಅಂಕಣಗಳು. ಮುದ್ರಣ ರೂಪದ ಸಂವಹನವಾಗಲಿ ಅಥವಾ ವಿದ್ಯುನ್ಮಾನ ಪತ್ರಿಕೆಗಳಾಗಲಿ, ವೈವಿಧ್ಯಮಯ ಅಂಕಣಗಳು ಓದುಗ ವೃಂದವನ್ನು ಸೆಳೆಯುತ್ತವೆ. ಸಾಮಾನ್ಯ ವಾರ್ತಾಪತ್ರಿಕೆಗಳಲ್ಲಿ ಸುದ್ಧಿಗಳ ಜೊತೆಗೆ ಅಂಕಣ ಬರಹಗಳು ಕಡ್ಡಾಯವಾಗಿ ಇರುತ್ತವೆ. ಆದರೆ, ಎಷ್ಟೋ ನಿಯತಕಾಲಿಕೆಗಳಲ್ಲಿ ಅಂಕಣಗಳದ್ದೇ ದರ್ಬಾರು.

ಅಂಕಣ ಬರಹಗಳ ಆಕರ್ಷಣೆಗೆ ಕಾರಣವಿದೆ. ಅವನ್ನು ಬರೆಯುವವರು ಆಯಾ ಕ್ಷೇತ್ರದ ತಜ್ಞರು ಅಥವಾ ಬಹುಕಾಲ ಬರವಣಿಗೆಯಲ್ಲಿ ಪಳಗಿ, ಓದುಗರ ನಾಡಿಮಿಡಿತ ಬಲ್ಲ ಹೆಸರಾಂತ ಲೇಖಕರು. ಅಂಕಣಗಳ ಪದಮಿತಿ ಅವನ್ನು ಹತ್ತು ಹದಿನೈದು ನಿಮಿಷಗಳಲ್ಲಿ ಓದಿ ಮುಗಿಸುವಂತಿರುತ್ತವೆ. ಸುಮಾರು ಏಳುನೂರು ಪದಗಳ ಅಂಕಣ ಬರಹದಲ್ಲಿ ಏನೋ ಒಂದು ಹೊಸತು ಸಿಗುತ್ತದೆ. ಅಂಕಣಗಳ ಭಾಷೆ ಹಗುರ; ಆರಾಮವಾಗಿ ಓದಿಸಿಕೊಳ್ಳುತ್ತದೆ. ಅಂಕಣಗಳು ಓದುಗರಿಂದ ಯಾವುದೇ ಪೂರ್ವಭಾವಿ ಜ್ಞಾನವನ್ನು ಅಪೇಕ್ಷಿಸುವುದಿಲ್ಲ; ಹೇಳಬೇಕಾದ್ದನ್ನು ಪ್ರಾಸ್ತಾವಿಕ ಮುನ್ನುಡಿಯೊಡನೆ ಆರಂಭಿಸಿ, ಕ್ಲುಪ್ತವಾಗಿ ಹೇಳಿ ಮುಗಿಸುತ್ತವೆ. ಕೆಲವೊಮ್ಮೆ ಕಥನ ರೂಪದಲ್ಲಿ, ಕೆಲವೊಮ್ಮೆ ಮನೋರಂಜಕವಾಗಿ ಅಂಶಗಳನ್ನು ಮುಂದಿಡುತ್ತವೆ. ಹೀಗಾಗಿ, ಕೇವಲ ಅಂಕಣ ಬರಹಗಳಿಗಾಗಿ ಪತ್ರಿಕೆಗಳನ್ನು ಖರೀದಿಸುವ ಓದುಗರು ಹೆಚ್ಚಾಗುತ್ತಿದ್ದಾರೆ.

ವೈದ್ಯಕೀಯ ವಿಷಯಗಳನ್ನು ಅಂಕಣರೂಪದಲ್ಲಿ ತರುವುದು ಸವಾಲಿನ ಸಂಗತಿ. ಆದರೆ, ಇದನ್ನು ಸಮರ್ಪಕವಾಗಿ, ಯಶಸ್ವಿಯಾಗಿ ಮಾಡುತ್ತಿರುವ ವೈದ್ಯ ಸಾಹಿತಿಗಳು ಹಲವರಿದ್ದಾರೆ ಎನ್ನುವುದು ವೈದ್ಯಕೀಯ ಕ್ಷೇತ್ರಕ್ಕೆ ಹೆಮ್ಮೆಯ ವಿಷಯ. ವೈದ್ಯಕೀಯ ರಂಗದ ಪ್ರಚಲಿತ ವಿದ್ಯಮಾನಗಳು, ಹೊಸ ಬೆಳವಣಿಗೆಗಳು, ಯಾವುದೇ ಬೆಳವಣಿಗೆಯ ಒಳನೋಟಗಳು, ಸಾಂದರ್ಭಿಕ ಪರಿಚಯಾತ್ಮಕ ಮಾಹಿತಿ, ವೈದ್ಯಕೀಯ ಪಯಣದ ಅನುಭವಗಳ ಕಥನ, ಸಂದೇಹಗಳ ನಿವಾರಣೆ - ಹೀಗೆ ಹಲವಾರು ವಿಷಯಗಳಿಗೆ ಅಂಕಣದ ಸ್ವರೂಪ ನೀಡಿ ಬರೆಯಬಹುದು. ಬರೆಯುವ ಆಸಕ್ತಿಯುಳ್ಳ, ಅಭಿರುಚಿಯುಳ್ಳ ಯಾರಾದರೂ ಅಂಕಣ ಬರೆಯಬಹುದು. ಒಮ್ಮೆ ಆರಂಭಿಸಿದರೆ ಕಾಲಕ್ರಮೇಣ ಬರವಣಿಗೆ ಪಳಗುತ್ತಾ ಹೋಗುತ್ತದೆ.

ವೈದ್ಯಕೀಯ ಅಂಕಣಗಳಿಗೆ ಓದುಗರ ಪ್ರತಿಕ್ರಿಯೆ ಏನು? ಸಾಮಾನ್ಯವಾಗಿ ರಾಜಕೀಯ, ಮನೋರಂಜನೆ, ಸಾಹಿತ್ಯಗಳ ಕುರಿತಾದ ಅಂಕಣಗಳಿಗೆ ಓದುಗರು ಮುಗಿಬೀಳುತ್ತಾರೆ. ಆದರೆ, ವೈದ್ಯಕೀಯ ಅಂಕಣಗಳಿಗೆ ಓದುಗರು ಕಡಿಮೆ. ಓದುಗರು ಇದಕ್ಕೆ ನೀಡುವ ಕಾರಣಗಳು ಹಲವು: ವೈದ್ಯಕೀಯ ಅಂಕಣಗಳು ಬೋರು ಹೊಡೆಸುತ್ತವೆ; ಅರ್ಥವಾಗದು; ಯಾವ ವಿಷಯ ಬರೆದಿದ್ದಾರೋ ಅದರ ಹಿನ್ನೆಲೆ ಸಾಮಾನ್ಯ ಓದುಗರಿಗೆ ತಿಳಿಯದು; ಓದುಗರಿಗೆ ಅಪರಿಚಿತವಾದ ಪಾರಿಭಾಷಿಕ ಪದಗಳ ಬಳಕೆ ಹೆಚ್ಚು. ಕಡೆಗೆ ಸಮಯ ಕೊಟ್ಟು ಓದಿದ ನಂತರ “ಏನೋ ಬರೆದಿದ್ದಾರೆ” ಎನ್ನುವ ಭಾವನೆ ಮೂಡುತ್ತದೆಯೇ ಹೊರತು, ಏನು ಬರೆದಿದ್ದಾರೆ ಎಂಬುದು ಎಷ್ಟೋ ಬಾರಿ ಸ್ಪಷ್ಟವಾಗುವುದಿಲ್ಲ ಎನ್ನುವುದು ಅನೇಕ ಓದುಗರ ಆಂಬೋಣ.

ಆದರೆ ಇದ್ಯಾವುದೂ ಮೀರಲಾಗದ ಸಮಸ್ಯೆಗಳಲ್ಲ. ಬರಹಗಾರನ ಸ್ಥಾನದಿಂದ ಓದುಗನ ದೃಷ್ಟಿಕೋನಕ್ಕೆ ಬದಲಾದರೆ ಕೆಲವು ಹೊಳಹುಗಳು ಗೋಚರಿಸುತ್ತವೆ. ಒಂದು ಅಂಕಣದಲ್ಲಿ ಒಂದೇ ವಿಷಯವನ್ನು ಹೇಳುವುದು ಒಳಿತು. ಹಲವಾರು ವಿಷಯಗಳ ಪ್ರಸ್ತಾಪ ಒದುಗರಿಗೆ ಗೊಂದಲ ಮೂಡಿಸಬಹುದು. ಅಂಕಣ ಬರಹ ರೋಗಿಗಳ ಸಮಾಲೋಚನೆಯ ರೂಪ ತಳೆಯಬಾರದು. ಯಾವುದಾದರೂ ರೋಗದ ವಿಷಯ ಚರ್ಚಿಸುವಾಗ ನಿರ್ದಿಷ್ಟ ಔಷಧಗಳ ಪ್ರಸ್ತಾಪ ಇಲ್ಲದಿರುವುದು ಸೂಕ್ತ. ಸಮಸ್ಯೆಯ ನಿರ್ವಹಣೆಗೆ ಕ್ಲುಪ್ತವಾಗಿ ಸಾಮಾನ್ಯ ಸ್ವರೂಪದ ಅಂಶಗಳನ್ನು ಹೇಗೆ ಪಾಲಿಸಬೇಕು ಎಂದು ಹೇಳುವುದು ಸಮಂಜಸ; ಚಿಕಿತ್ಸೆಯ ಬಗ್ಗೆ ಅಧಿಕ ಆಯ್ಕೆಗಳನ್ನು ನೀಡುವುದು ವಿಷಯ ಸ್ಪಷ್ಟತೆಯನ್ನು ಗೋಜಲು ಮಾಡುತ್ತದೆ. ವಿಷಯವನ್ನು ಸುತ್ತು-ಬಳಸಿ ಹೇಳುವುದಕ್ಕಿಂತ ನೇರವಾದ, ನಿಖರವಾದ ಮಾತು ಹೆಚ್ಚು ಪರಿಣಾಮಕಾರಿ.

ವೈದ್ಯಕೀಯ ಅಂಕಣಗಳು ಸಂವಹನದ ಒಂದು ವಿಧಾನ. ಇದರಲ್ಲಿ ಓದುಗರ ಅಪೇಕ್ಷೆಯನ್ನು ಅರ್ಥ ಮಾಡಿಕೊಳ್ಳುವುದು ಬರಹಕ್ಕೆ ಸರಿಯಾದ ದಾರಿ ತೋರುತ್ತದೆ. ಹೊಸದಾಗಿ ಬರವಣಿಗೆಯನ್ನು ಆರಂಭಿಸುವ ಹಲವು ಪರಿಣತ ವೈದ್ಯರಿಗೆ ಬರಹದ ವಿಷಯವನ್ನು ಎಲ್ಲಿಂದ ಆರಂಭಿಸಬೇಕು, ಏನೆಲ್ಲಾ ಹೇಳಬೇಕು, ಎಷ್ಟು ಹೇಳಬೇಕು ಎನ್ನುವ ಬಗ್ಗೆ ಗೊಂದಲ ಮೂಡಬಹುದು. ಒಂದು ಉದಾಹರಣೆ ಈ ಗೊಂದಲವನ್ನು ಪರಿಹರಿಸಬಹುದು. ನಮ್ಮ ಕಾರು ಕೆಟ್ಟಾಗ ಅದನ್ನು ನಾವು ಕಾರು ರಿಪೇರಿಯವರ ಬಳಿಗೆ ಒಯ್ಯುತ್ತೇವೆ. ಆಗ ಅವರು “ಕಾರು ಏಕೆ ಕೆಟ್ಟಿದೆ?” ಎಂದು ಸರಳವಾಗಿ ಹೇಳಬೇಕು ಎಂದು ಬಯಸುತ್ತೇವೆ. ಪರಿಣತ ಕಾರು ರಿಪೇರಿಯವ ಇದನ್ನು ಸಾಧ್ಯವಾದಷ್ಟೂ ಸರಳವಾಗಿ ನಮಗೆ ವಿವರಿಸಬೇಕು. ಅದರ ಬದಲಿಗೆ ಆತ ಕಾರಿನ ಭಾಗಗಳು, ಅದು ಕೆಲಸ ಮಾಡುವ ಹಿಂದಿನ ಭೌತಶಾಸ್ತ್ರ, ಅವುಗಳ ಪರಸ್ಪರ ಅವಲಂಬನೆಗಳ ಬಗ್ಗೆ ಮಾತನಾಡಿದರೆ ನಮಗೆ ತಲೆಚಿಟ್ಟು ಹಿಡಿದೀತು! ಅಂತೆಯೇ, ಆರೋಗ್ಯಕ್ಕೆ ಸಂಬಂಧಿಸಿದ ಯಾವುದಾದರೂ ಮಾಹಿತಿಯನ್ನು ಬಯಸುವ ಸಾಮಾನ್ಯ ಜನರಿಗೆ ಅದನ್ನು ಸಾಧ್ಯವಾದಷ್ಟೂ ಸರಳವಾಗಿ, ನೇರವಾಗಿ ಹೇಳುವುದು ಸಫಲ ಸಂವಹನವಾಗುತ್ತದೆ.

ವೈದ್ಯಕೀಯ ವಿಷಯಗಳನ್ನು ಬರೆಯುವಾಗ “ನಮ ಅಂಕಣದ ಓದುಗರು ಯಾರು?” ಎನ್ನುವ ಪ್ರಶ್ನೆ ಮಾರ್ಗಸೂಚಕ. ಆಯಾ ಋತುವಿನಲ್ಲಿ ಕಾಣುವ ಆರೋಗ್ಯ ಸಮಸ್ಯೆಗಳ ಬಗ್ಗೆ ಬರೆಯುವುದು ಹೆಚ್ಚು ಜನರನ್ನು ಆಕರ್ಷಿಸುತ್ತದೆ. ಅಂತೆಯೇ ಚಾಲ್ತಿಯಲ್ಲಿರುವ ಆರೋಗ್ಯ ಸಂಬಂಧಿ ಸುದ್ಧಿಗಳ ಕುರಿತಾಗಿ ಬರೆಯುವುದು ಜನರ ಆಸಕ್ತಿಯನ್ನು ಕೆರಳಿಸುತ್ತದೆ. ಅಂಕಣಕ್ಕೆ ಪದಮಿತಿ ಇರುವುದರಿಂದ ಪುಟ್ಟ ವಾಕ್ಯಗಳ ಬಳಕೆ ಒಳ್ಳೆಯದು. ಒಂದು ಪ್ಯಾರಾದಲ್ಲಿ ಒಂದು ವಿಷಯವನ್ನು ಹೇಳುವುದು ಓದುಗರಿಗೆ ಸರಳ ಓದಿನ ಅನುಭವ ನೀಡುತ್ತದೆ. ಮುಖ್ಯವಾದ ವಿಷಯಗಳಿಗೆ ಉದಾಹರಣೆಗಳನ್ನು, ದೃಷ್ಟಾಂತಗಳನ್ನು ಬಳಸಬಹುದು. ಇವುಗಳು ಸುದೀರ್ಘ ವಿವರಣೆಗಳಿಗಿಂತಲೂ ಪ್ರಭಾವಶಾಲಿ. ಓದುಗರ ಕುತೂಹಲ ಕೆರಳಿಸುವಷ್ಟು ಮಾಹಿತಿ ಸಾಕು; ಎಲ್ಲವನ್ನೂ ಹೇಳುವುದು ಲೇಖನದ ವ್ಯಾಪ್ತಿಯ ದೃಷ್ಟಿಯಿಂದ ಸಾಧ್ಯವಾಗದು.

ಬಹುತೇಕ ಅಂಕಣ ಬರಹಗಳು ಸುಮಾರು 700 ಪದಗಳ ವ್ಯಾಪ್ತಿ ಹೊಂದಿರುತ್ತವೆ. ಇದರಲ್ಲಿ ಮೊದಲ 100 ಪದಗಳನ್ನು ಪ್ರವೇಶಕ್ಕೆ, ನಂತರದ 400 ಪದಗಳನ್ನು ವಿಷಯದ ವಿವರಣೆಗೆ, ಮುಂದಿನ 100 ಪದಗಳನ್ನು ವಿಶ್ಲೇಷಣೆಗೆ, ಅಂತಿಮ 100 ಪದಗಳನ್ನು ಸಾರಾಂಶ ಮತ್ತು ಉಪಸಂಹಾರಕ್ಕೆ ಸ್ಥೂಲವಾಗಿ ವಿಂಗಡಿಸಬಹುದು. ಬರಹ ಮುಕ್ತ ಸಂವಾದದಂತೆ ರೂಪುಗೊಂಡಾಗ ಓದುಗರ ಜೊತೆಗೆ ಸಂಬಂಧ ಏರ್ಪಡುತ್ತದೆ. ನಮ್ಮ ದೃಷ್ಟಿಕೋನಕ್ಕೆ ವಿರುದ್ಧವಾದ ಅಭಿಪ್ರಾಯ ಹೊಂದಿರುವವರನ್ನು ಗೌರವದಿಂದಲೇ ಸಂಬೋಧಿಸುವುದು ಸರಿಯಾದ ವಿಧಾನ. ಯಾವ ಕಾರಣಕ್ಕೂ ವೈಯಕ್ತಿಕ ಹಳಿಯುವಿಕೆ ಸಲ್ಲದು. ಇತರರ ಅಭಿಮತಗಳ ಬಗ್ಗೆ ನಮ್ಮ ವಿರೋಧ ಪ್ರಕಟಗೊಳ್ಳುವಾಗ ಸೂಕ್ತ ಪ್ರಮಾಣಲೇಖನಾವಳಿ ಒದಗಿಸಬೇಕು. ಇಲ್ಲವಾದರೆ ಗಾಳಿಯಲ್ಲಿ ಗುಂಡು ಹಾರಿಸಿದಂತಾಗಿ, ಓದುಗರ ಅಸಮ್ಮತಿಗೆ ಕಾರಣವಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಇದಮಿತ್ಥಂ ಎಂದು ಹೇಳುವುದಕ್ಕಿಂತಲೂ ಸಾಧ್ಯತೆಗಳನ್ನು ಸೂಚಿಸುವುದು ಒಳಿತು.

ಹೊಸದಾಗಿ ವೈದ್ಯಕೀಯ ಅಂಕಣ ಬರೆಯುವವರು ಕೆಲವು ಮಾರ್ಗಸೂಚಿಗಳನ್ನು ಗಮನಿಸಬಹುದು. ಆರಂಭದಲ್ಲಿ ಪರಿಣತ ಲೇಖಕರ ಕೆಲವು ಮಾದರಿ ಬರಹಗಳನ್ನು ಅಧ್ಯಯನ ಮಾಡಿದರೆ ಬರಹಗಳ ಧಾಟಿಯ ಪರಿಚಯವಾಗುತ್ತದೆ. ತಂತಮ್ಮ ಪರಿಣತಿಯ ವಿಷಯಗಳನ್ನು ಆಯ್ದುಕೊಂಡು, ಅದರ ಬಗ್ಗೆ ಬರೆಯುವುದು ಸೂಕ್ತ. ಯಾವುದಾದರೂ ವಿಷಯದ ಬಗ್ಗೆ ಸಣ್ಣ ಲೇಖನ ಬರೆದು, ಅದೇ ವಿಷಯವನ್ನು ಪರಿಣತ ಲೇಖಕರು ಹೇಗೆ ಬರೆದಿದ್ದಾರೆ ಎಂದು ಗಮನಿಸಿ, ಹೋಲಿಕೆ ಮಾಡಿಕೊಳ್ಳಬಹುದು. ಆಗ ಯಾವ್ಯಾವ ಅಂಶಗಳನ್ನು ನಿರೂಪಿಸಿದರೆ ಲೇಖನ ಮಹತ್ವಪೂರ್ಣವಾಗುತ್ತದೆ ಎಂಬುದರ ಪರಿಚಯವಾಗುತ್ತದೆ. ಪ್ರತಿಯೊಬ್ಬರಿಗೂ ತಮ್ಮ ಬರಹ ಆಪ್ತವೇ ಆಗುತ್ತದೆ. ಆದರೆ, ನಮ್ಮ ಲೇಖನವನ್ನು ನಾವು ಮಾತ್ರವೇ ಓದುವುದಿಲ್ಲ! ಹೀಗಾಗಿ, ನಮ್ಮ ಸಮಾಧಾನಕ್ಕಿಂತಲೂ ಓದುಗರ ಅಭಿಪ್ರಾಯವೇ ಮುಖ್ಯ. ಆದ್ದರಿಂದ ಸ್ವವಿಮರ್ಶೆ ಲೇಖಕರ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

ಬರೆದ ಲೇಖನ ಓದುಗರನ್ನು ತಲುಪಬೇಕು. ಹಿಂದಿನ ಕಾಲದಲ್ಲಿ ಇದಕ್ಕೆ ಪತ್ರಿಕೆಗಳು ಮಾತ್ರವೇ ಸಾಧನವಾಗುತ್ತಿದ್ದವು. ಆದರೆ ಇಂದಿನ ಸಾಮಾಜಿಕ ಜಾಲತಾಣಗಳ ಯುಗದಲ್ಲಿ ಓದುಗರನ್ನು ತಲುಪಲು ಹಲವಾರು ಮಾರ್ಗಗಳಿವೆ. ಪತ್ರಿಕೆಗಳು ನಮ್ಮ ಬರಹವನ್ನು ನಿರಾಕರಿಸಿದರೆ ಮನಗುಂದಬಾರದು. ಇಂತಹ ನಿರಾಕರಣೆ ಸಾಮಾನ್ಯ. ಪ್ರತಿಯೊಂದು ಲೇಖನದ ಜೊತೆಗೆ ಲೇಖಕರೂ ಬೆಳೆಯುತ್ತಾರೆ ಎನ್ನುವ ಮಾತು ಸತ್ಯ. ಒಳ್ಳೆಯ ಮಾಹಿತಿಯನ್ನು ಸರಳವಾಗಿ ತಿಳಿಸುವ ಲೇಖನಗಳನ್ನು ತಂತಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಪ್ರಕಟಿಸಿ, ಓದುಗರ ಅಭಿಪ್ರಾಯ ಸಂಗ್ರಹಿಸಬಹುದು. ಇಂದು ನಾವು ಕಾಣುವ ಹಲವಾರು ಪ್ರಸಿದ್ಧ ಅಂಕಣಕಾರರು ಈ ದಾರಿಯ ಮೂಲಕವೇ ಬೆಳೆದಿದ್ದಾರೆ. ಬರವಣಿಗೆಯ ಬಗ್ಗೆ ಪ್ರಾಮಾಣಿಕತೆ ಮತ್ತು ಶ್ರದ್ಧೆ ಇದ್ದರೆ ಕಾಲಕ್ರಮೇಣ ಲೇಖಕರ ಬೆಳವಣಿಗೆ ತಂತಾನೇ ಆಗುತ್ತದೆ.   

ಬಹುತೇಕ ಅಂಕಣಕಾರರು ತಮ್ಮ ಆರಂಭಿಕ ಲೇಖನಗಳಲ್ಲಿ ತಮ್ಮ ನೆಚ್ಚಿನ ಇತರ ಅಂಕಣಕಾರರ ಬರಹಗಳಿಂದ ಪ್ರಭಾವಿತರಾಗಿ, ತಮಗೇ ಅರಿವಿಲ್ಲದಂತೆ ಅಂತಹವರ ಶೈಲಿಯನ್ನು ಅನುಸರಿಸಿರುತ್ತಾರೆ. ಇದು ಅನುಚಿತವಲ್ಲ. ಶೈಲಿಯ ಅನುಕರಣೆಯನ್ನು ಪ್ರಜ್ಞಾವಂತ ಓದುಗರು ಗುರುತಿಸುತ್ತಾರೆ. ಲೇಖಕರು ಬೆಳೆಯುತ್ತಾ ಹೋದಂತೆ ಅನುಕರಣೆಯ ಹಿಡಿತದಿಂದ ಹೊರಬಂದು ತಮ್ಮದೇ ಶೈಲಿಯನ್ನು ರೂಪಿಸಿಕೊಳ್ಳಬೇಕು. ಬರೆಯುವ ವಿಷಯದ ಬಗ್ಗೆ ಹಿಡಿತವಿದ್ದಾಗ ಸ್ವಂತಿಕೆ ಸುಲಭ. ಲೇಖನವನ್ನು ಇನ್ನಷ್ಟು ಚಂದಗೊಳಿಸುವ ಬಗ್ಗೆ ಆಪ್ತರಿಂದ ಸಲಹೆ ಪಡೆಯಬಹುದು. ವಿಮರ್ಶೆ ಮತ್ತು ಆತ್ಮವಿಮರ್ಶೆಗಳು ಲೇಖಕರ ಬೆಳವಣಿಗೆಗೆ ರಹದಾರಿಗಳು.

ಯಾವುದಾದರೂ ಕಾಯಿಲೆಯ ಬಗ್ಗೆ ಇರಬಹುದಾದ ಪ್ರಮುಖ ಸಂದೇಹಗಳ ನಿವಾರಣೆಯ ಲೇಖನಗಳು, ವೈವಿಧ್ಯಮಯ ಮಾಹಿತಿ, ಪ್ರಚಲಿತ ಆರೋಗ್ಯ ಸಮಸ್ಯೆಯ ಬಗ್ಗೆ ಇತ್ತೀಚಿನ ಬೆಳವಣಿಗೆಗಳು, ವಿಷಯ ವಿಸ್ತಾರದ ಬರಹಗಳು ಓದುಗರ ಆಸಕ್ತಿಯನ್ನು ಕೆರಳಿಸುತ್ತವೆ. ಸರಿಯಾದ ಮಾಹಿತಿಯ ಪ್ರಸಾರವೇ ವೈದ್ಯಕೀಯ ಅಂಕಣಗಳ ಮೂಲೋದ್ದೇಶ. ಯಾವುದೇ ವಿಷಯವನ್ನೂ ತೀರಾ ಆಳವಾಗಿ ಚರ್ಚಿಸುವುದು ಸಮಂಜಸವಲ್ಲ. ಸಮಾಜದಲ್ಲಿನ ಸೂಕ್ಷ್ಮ ವಿಷಯಗಳನ್ನು ವೈದ್ಯಕೀಯ ಲೇಖನದಲ್ಲಿ ಪ್ರಸ್ತಾಪಿಸುವುದು ಸರಿಯಾದ ಮಾರ್ಗವಲ್ಲ. ಜನಪ್ರಿಯತೆಯ ಚಪಲಕ್ಕೆ ರಾಜಕೀಯ ವಿಷಯಗಳನ್ನು ಲೇಖನದ ಪರಿಧಿಯಲ್ಲಿ ತರುವುದು ಸರ್ವದಾ ಸರಿಯಾದ ಮಾರ್ಗವಲ್ಲ. ಇಂತಹ ಪ್ರಲೋಭನೆಗಳನ್ನು ಹತ್ತಿಕ್ಕುವುದು ವೈದ್ಯರ ಸಾಮಾಜಿಕ ಜವಾಬ್ದಾರಿ ಕೂಡ ಆಗಿದೆ.

ಬರೆದ ಪ್ರತಿಯೊಂದು ಅಕ್ಷರವೂ ಪತ್ರಿಕೆಗಳಲ್ಲಿ ಪ್ರಕಟವಾಗಬೇಕೆಂದೇನಿಲ್ಲ. ಆರಂಭದಲ್ಲಿ ಹಲವಾರು ವಿಷಯಗಳನ್ನು ಬರೆದು ಪಳಗುವುದು ಒಳ್ಳೆಯ ವಿಧಾನ. ಎಂದೋ ಲಹರಿ ಹುಟ್ಟಿದ ದಿನ ಬರೆದರೆ ಸಾಲದು. ಅಂಕಣ ಬರಹಕ್ಕೆ ಕೈಹಾಕುವವರು ಅದಕ್ಕೆ ಒಳ್ಳೆಯ ಸಿದ್ಧತೆಗಳನ್ನೂ ಮಾಡಿಕೊಳ್ಳಬೇಕು. ಪ್ರತಿದಿನವೂ ಯಾವುದಾದರೂ ವಿಷಯವನ್ನು ಆಲೋಚಿಸಿ, ಅದರ ಬಗ್ಗೆ ಇಂತಿಷ್ಟು ಪದಗಳನ್ನು ಬರೆಯುವುದು ಚಿಂತನೆಗಳ ಸರಾಗ ಹರಿವಿಗೆ ನೆರವಾಗುತ್ತದೆ. ನಮ್ಮದೇ ಸ್ವಂತ ಬ್ಲಾಗ್ ಅನ್ನು ಉಚಿತವಾಗಿ ತೆರೆದು, ನಾವು ಬರೆದದ್ದನ್ನು ಅದರಲ್ಲಿ ಪ್ರಕಟಿಸಿ, ಆಸಕ್ತರ ಗಮನ ಸೆಳೆದು, ಅವರ ಅಭಿಪ್ರಾಯಗಳನ್ನು ಸಂಗ್ರಹಿಸಬಹುದು. ಇದರಿಂದ ಆತ್ಮವಿಶ್ವಾಸ ಹೆಚ್ಚಿ, ಬರವಣಿಗೆಯ ಶೈಲಿ ಸುಧಾರಿಸುತ್ತದೆ.

ಬರವಣಿಗೆ ವೈದ್ಯರ ಚಿಂತನೆಗಳ ಅಭಿವ್ಯಕ್ತಿಗೆ ಬಹಳ ಉತ್ತಮ ಮಾರ್ಗ. ಪ್ರತಿಯೊಬ್ಬ ವೈದ್ಯರೂ ಮೂಲತಃ ಶಿಕ್ಷಕರು. ಪ್ರತಿಯೊಂದು ವೈದ್ಯಕೀಯ ಸಮಾಲೋಚನೆಯೂ ಒಂದು ರೀತಿಯ ಶಿಕ್ಷಣ. ಹೀಗಾಗಿ, ತಮ್ಮ ಆಲೋಚನೆಗಳ ಸಂವಹನವನ್ನು ವೈದ್ಯರು ಪ್ರತಿದಿನವೂ ಹಲವರ ಜೊತೆ ಸಾಧಿಸುತ್ತಲೇ ಇರುತ್ತಾರೆ. ಇದಕ್ಕೆ ಮತ್ತಷ್ಟು ಮೂರ್ತರೂಪ ನೀಡುವುದು ಬರವಣಿಗೆ. ಮಾತನ್ನು ಬರಹವಾಗಿಸಲು ವ್ಯವಸ್ಥಿತ ಸಿದ್ಧತೆ, ಬದ್ಧತೆ ಬೇಕು ಎನ್ನುವುದನ್ನು ಬಿಟ್ಟರೆ, ವೈದ್ಯರಿಗಿಂತಲೂ ಉತ್ತಮ ಸಂವಹನಕಾರರು ವಿರಳ. ಪ್ರತಿಯೊಬ್ಬ ವೈದ್ಯರೂ ಈ ನಿಟ್ಟಿನಲ್ಲಿ ಹೆಜ್ಜೆಯಿಡಬೇಕು. ವೈದ್ಯಕೀಯ ಬರವಣಿಗೆ ನಮ್ಮ ಸಾಮಾಜಿಕ ಜವಾಬ್ದಾರಿಗಳಲ್ಲಿ ಒಂದು ಎನ್ನುವ ಭಾವನೆ ಬೆಳೆಸಿಕೊಂಡರೆ ಈ ಹಾದಿಯ ಪಯಣ ಸುಲಭವಾಗುತ್ತದೆ. ಬರವಣಿಗೆ ಎನ್ನುವುದು ವೈದ್ಯರ ಬದುಕಿನ ಒತ್ತಡವನ್ನು ತಗ್ಗಿಸುವ ಪ್ರಭಾವಶಾಲಿ ವಿಧಾನ. ಇದನ್ನು ಪ್ರತಿಯೊಬ್ಬ ವೈದ್ಯರೂ ಪ್ರಯತ್ನಿಸಬೇಕು. ನಿಮ್ಮ ಪ್ರಯತ್ನಕ್ಕೆ ಶುಭವಾಗಲಿ ಎಂದು ಹಾರೈಕೆ!

--------------------

IMA ವೈದ್ಯ ಲೇಖಕರ ಸಂಘ ಪ್ರಕಟಿಸಿದ ಲೇಖನ 

 

 ಶೀತಜ್ವರ - ಜ್ವರದ ಜಾಡ್ಯ; ಶೀತದ ಕಿರಿಕಿರಿ

ಡಾ. ಕಿರಣ್ ವಿ.ಎಸ್.

ವೈದ್ಯರು

ಬೇಸಿಗೆ, ಮಳೆ, ಚಳಿಗಾಲಗಳಿಗೆ ತಂತಮ್ಮ ವೈಶಿಷ್ಟ್ಯಗಳು ಇರುವಂತೆ, ಆಯಾ ಕಾಲಗಳ ಜೊತೆಗೆ ಸಾಂಕ್ರಾಮಿಕ ಕಾಯಿಲೆಗಳಿಗೂ ಬಲವಾದ ನಂಟಿವೆ. ಬೇಸಿಗೆಯಲ್ಲಿ ನಿರ್ಜಲೀಕರಣ, ಜ್ವರ, ಅತಿಸಾರಗಳು; ಚಳಿಗಾಲದಲ್ಲಿ ಶ್ವಾಸ ಸಂಬಂಧಿ ಕಾಯಿಲೆಗಳು; ಮಳೆಗಾಲದಲ್ಲಿ ಜ್ವರ, ಗಂಟಲು ಕೆರೆತ ಸಾಮಾನ್ಯ. ಕೋವಿಡ್-19 ರ ಅನುಭವದ ನಂತರವಂತೂ ಯಾವುದೇ ಜ್ವರ, ಮೈ-ಕೈ ನೋವು, ನೆಗಡಿ, ಕೆಮ್ಮುಗಳು “ಕೋವಿಡ್ ಮರುಕಳಿಸಿತೇ” ಎನ್ನುವ ಅನುಮಾನವನ್ನು ಪ್ರತಿಯೊಬ್ಬರಲ್ಲೂ ಹುಟ್ಟು ಹಾಕುತ್ತಿದೆ. ವೈರಸ್ ಶೀತಜ್ವರ ಅಥವಾ ಇನ್ಫ್ಲುಎನ್ಜಾ (ಸಾಮಾನ್ಯ ಭಾಷೆಯಲ್ಲಿ ಫ್ಲೂ) ಎನ್ನುವ ಸಾಮಾನ್ಯ ಕಾಯಿಲೆಗೆ ಹಲವಾರು ವೈರಸ್ ಮೂಲಗಳಿವೆ. ಇದು ಅಯಾ ಋತುವಿನಲ್ಲಿ ಸರಿಸುಮಾರು ಎಲ್ಲರನ್ನೂ ಕಾಡುತ್ತದೆ. ನೂರು ಡಿಗ್ರಿ ಫ್ಯಾರನ್ಹೀಟ್ ಆಸುಪಾಸಿನ ಜ್ವರ, ಆಲಸಿತನ, ಮೈ-ಕೈ ನೋವು, ತಲೆಶೂಲೆ, ರುಚಿಯಲ್ಲಿ ವ್ಯತ್ಯಾಸ, ನೆಗಡಿ, ಮೂಗು ಕಟ್ಟುವಿಕೆ, ಒಣಕೆಮ್ಮು, ಗಂಟಲು ಒಣಗುವಿಕೆ, ಘ್ರಾಣ ಸಾಮರ್ಥ್ಯ ಕುಂದುವಿಕೆ, ತಲೆಸುತ್ತು ಮೊದಲಾದ ಲಕ್ಷಣಗಳ ಈ ಕಾಯಿಲೆ ವರ್ಷದಲ್ಲಿ ಒಮ್ಮೆಯಾದರೂ ಪ್ರತಿಯೊಬ್ಬರನ್ನೂ ತಾಕಿ ಹೋಗುತ್ತದೆ.

ಶೀತಜ್ವರ ಬಹುಮಟ್ಟಿಗೆ ತಂತಾನೇ ಗುಣವಾಗುವ ಆರೋಗ್ಯ ಸಮಸ್ಯೆ. ಆದರೆ, ಕೆಲವರಲ್ಲಿ ಇದು ತೀವ್ರ ಕಾಯಿಲೆಗೆ ಕಾರಣವಾಗಬಹುದು. ಹೃದಯ ವೈಫಲ್ಯದ ರೋಗಿಗಳಿಗೆ, ಅಸ್ಥಮಾ ಪೀಡಿತರಿಗೆ, ಮಧುಮೇಹಿಗಳಿಗೆ, ಶ್ವಾಸಕೋಶದ ಸಮಸ್ಯೆಗಳಿಂದ ಬಳಲುವವರಿಗೆ, ಕ್ಯಾನ್ಸರ್ ಚಿಕಿತ್ಸೆ ಪಡೆಯುವವರಿಗೆ, ಯಕೃತ್ತಿನ ಅಥವಾ ಮೂತ್ರಪಿಂಡಗಳ ದೀರ್ಘಕಾಲಿಕ ಸಮಸ್ಯೆ ಉಳ್ಳವರಿಗೆ – ಹೀಗೆ ಅನೇಕರಲ್ಲಿ ಶೀತಜ್ವರ ಮಾರಕವಾಗಬಹುದು. ಪ್ರಸ್ತುತ ಇಂತಹ ಶೀತಜ್ವರದ ಲಕ್ಷಣಗಳು ಕೋವಿಡ್-19 ಸೋಂಕಿನ ಲಕ್ಷಣಗಳನ್ನು ಬಹಳ ಮಟ್ಟಿಗೆ ಹೋಲುವುದರಿಂದ ರೋಗಿಗಳ ಆತಂಕ ನೂರ್ಮಡಿಸುತ್ತದೆ.

ಶೀತಜ್ವರ ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಸಾಂಕ್ರಾಮಿಕ ಸೋಂಕು. ಫ್ಲೂ ಸೋಂಕಿತ ವ್ಯಕ್ತಿ ಸೀನಿದಾಗ ಅಥವಾ ಕೆಮ್ಮಿದಾಗ ಹೊರಬರುವ ಸಣ್ಣ ಹನಿಗಳು ಸುತ್ತಮುತ್ತಲಿನ ಆರು ಅಡಿ ಪರಿಧಿಯಲ್ಲಿ ಕೆಲಕಾಲ ಗಾಳಿಯಲ್ಲಿ ತೇಲುತ್ತವೆ. ಇಂತಹ ಹನಿಗಳಲ್ಲಿ ಶೀತಜ್ವರದ ವೈರಸ್ ಮನೆಮಾಡಿರುತ್ತದೆ. ಸೋಂಕಿತ ವ್ಯಕ್ತಿಯ ಸುತ್ತಮುತ್ತಲಿರುವ ನಿರೋಗಿ ವ್ಯಕ್ತಿಯ ಶ್ವಾಸನಾಳಗಳನ್ನು ಉಸಿರಿನ ಮೂಲಕ ಪ್ರವೇಶಿಸುವ ಈ ಹನಿಗಳಲ್ಲಿನ ಶೀತಜ್ವರದ ವೈರಸ್ ಅವರಲ್ಲೂ ಸೋಂಕಿಗೆ ಕಾರಣವಾಗುತ್ತದೆ. ಅಲ್ಲದೆ, ಸೋಂಕಿತ ವ್ಯಕ್ತಿಯ ಶ್ವಾಸದ್ರವಗಳನ್ನು ಹೊಂದಿದ ಬಟ್ಟೆಗಳು, ವಸ್ತುಗಳನ್ನು ಮುಟ್ಟಿದ ನಿರೋಗಿಗಳು ಹಾಗೆಯೇ ತಮ್ಮ ಮೂಗು, ಬಾಯಿಗಳನ್ನು ಸ್ಪರ್ಷಿಸಿದರೆ, ಅದರ ಮೂಲಕವೂ ಶೀತಜ್ವರ ವೈರಸ್ ಹರಡಬಹುದು. ನಗರ ಪ್ರದೇಶಗಳ ಸಣ್ಣ ಜಾಗಗಳಲ್ಲಿ ಬಹಳ ಮಂದಿ ಅಡಕವಾಗುವ ಸಂದರ್ಭಗಳಲ್ಲಿ ಒಬ್ಬರಿಂದ ಮತ್ತೊಬ್ಬರಿಗೆ ಬಹುಬೇಗನೆ ಸೋಂಕು ಹರಡುವುದು ಸಾಮಾನ್ಯ.

ಶೀತಜ್ವರದ ಬಳಲಿಕೆ ತ್ರಾಸವೆನಿಸಿದರೂ, ದೀರ್ಘಕಾಲಿಕ ಕಾಯಿಲೆಗಳಿಲ್ಲದ ಆರೋಗ್ಯವಂತರಲ್ಲಿ ಇದರ ಚಿಕಿತ್ಸೆ ಸರಳ. ಮುಖ್ಯವಾಗಿ ವಿಶ್ರಾಂತಿ, ಸಾಕಷ್ಟು ದ್ರವಾಹಾರ, ಕುಡಿಯಲು ಬೆಚ್ಚಗಿನ ನೀರಿನ ಬಳಕೆ, ಜ್ವರ ನಿವಾರಕ ಗುಳಿಗೆಗಳ ಮಿತವಾದ ಸೇವನೆ, ಉಪ್ಪುನೀರಿನಲ್ಲಿ ಗಂಟಲನ್ನು ಮುಕ್ಕಳಿಸುವುದು, ಒಳ್ಳೆಯ ನಿದ್ರೆ ಮೊದಲಾದುವುಗಳು ಸಾಕಾಗುತ್ತವೆ. ಶೀತಜ್ವರ ಸೋಂಕಿತರು ಸಾಧ್ಯವಾದಷ್ಟೂ ಇತರರಿಂದ ಅಂತರ ಕಾಯ್ದುಕೊಳ್ಳಬೇಕು; ಕೆಮ್ಮುವಾಗ ಅಥವಾ ಸೀನುವಾಗ ತಮ್ಮ ಮೂಗು-ಬಾಯಿಗಳನ್ನು ಬಟ್ಟೆ ಅಥವಾ ಟಿಶ್ಯೂ ಕಾಗದದಿಂದ ಮುಚ್ಚಿಕೊಳ್ಳಬೇಕು; ಅನುಮಾನವಿದ್ದರೆ ಕೋವಿಡ್-19 ಪರೀಕ್ಷೆ ಮಾಡಿಸಿಕೊಳ್ಳಬೇಕು; ಶೀತಜ್ವರದ ಲಕ್ಷಣಗಳು ಸಮಯಾನುಸಾರ ಕಡಿಮೆಯಾಗದಿದ್ದರೆ ವೈದ್ಯರನ್ನು ಕಂಡು ಚಿಕಿತ್ಸೆ ಪಡೆಯಬೇಕು.

ಶೀತಜ್ವರದ ಚಿಕಿತ್ಸೆಗೆ ನಿರ್ದಿಷ್ಟ ವೈರಸ್-ನಿರೋಧಕ ಔಷಧಗಳು ಇವೆಯಾದರೂ, ಅವು ಎಲ್ಲರಿಗೂ ಬೇಕಾಗುವುದಿಲ್ಲ. ಶೀತಜ್ವರ ನಿರ್ವಹಣೆಯಲ್ಲಿ ಜೀವಿರೋಧಕ (antibiotic) ಔಷಧಗಳ ಪಾತ್ರವಿಲ್ಲ. ಒಂದು ವೇಳೆ ವೈರಸ್ ಕಾಯಿಲೆಯ ಫಲಿತವಾಗಿ ರೋಗನಿರೋಧಕ ಸಾಮರ್ಥ್ಯ ಕುಂದಿ, ಬ್ಯಾಕ್ಟೀರಿಯಾ ಸೋಂಕು ಉಂಟಾದವರಲ್ಲಿ ಮಾತ್ರ ಜೀವಿರೋಧಕ ಔಷಧ ಕೆಲಸ ಮಾಡಬಲ್ಲದು. ಇದನ್ನು ವೈದ್ಯರು ನಿರ್ಧರಿಸಬೇಕೆ ಹೊರತು, ಶೀತಜ್ವರದ ರೋಗಿಗಳು ತಾವಾಗಿಯೇ ಅನಗತ್ಯ ಚಿಕಿತ್ಸೆ ಮಾಡಿಕೊಳ್ಳಬಾರದು. ಜೀವಿರೋಧಕ ಔಷಧಗಳ ಅಡ್ಡಪರಿಣಾಮಗಳು ಹಲವಾರು. ಜೊತೆಗೆ, ಅಗತ್ಯವಿಲ್ಲದೆಡೆ ಜೀವಿರೋಧಕ ಔಷಧಗಳನ್ನು ಬಳಸಿದರೆ ಅವುಗಳಿಗೆ ಪ್ರತಿರೋಧ ಬೆಳೆಯುತ್ತದೆ. ಮುಂದೊಂದು ದಿನ ಅಗತ್ಯ ಬಿದ್ದಾಗ ಅಂತಹ ಜೀವಿರೋಧಕ ಔಷಧ ಬಳಸಿದರೂ ಅದರ ಪರಿಣಾಮ ಆಗುವುದಿಲ್ಲ. ಈ ಬಗ್ಗೆ ಕಟ್ಟೆಚ್ಚರ ಅಗತ್ಯ.

ಬಹುತೇಕ ಮಂದಿಯ ಆಂತರಿಕ ರೋಗನಿರೋಧಕ ಶಕ್ತಿಯೇ ಶೀತಜ್ವರವನ್ನು ತಹಬಂದಿಯಲ್ಲಿ ಇಡುತ್ತದೆ. ಆದರೆ ಆಂತರಿಕ ರೋಗನಿರೋಧಕ ಶಕ್ತಿ ಕುಂಠಿತವಾದವರಲ್ಲಿ ಶೀತಜ್ವರಕ್ಕೆ ವೈರಸ್-ನಿರೋಧಕ ಔಷಧಗಳ ಚಿಕಿತ್ಸೆ ಅಗತ್ಯ. ಇಂತಹ ಕೆಲವರನ್ನು ಆಸ್ಪತ್ರೆಗೆ ದಾಖಲು ಮಾಡಬೇಕಾದ ತುರ್ತು ಬರಬಹುದು. ಅದರಲ್ಲೂ ಶ್ವಾಸಕೋಶ ಸಂಬಂಧಿ ಕಾಯಿಲೆಗಳು ಇರುವವರಲ್ಲಿ ಶೀತಜ್ವರ ಉಂಟಾದರೆ, ಅವರನ್ನು ತೀವ್ರನಿಗಾ ಘಟಕಗಳಲ್ಲಿ ಚಿಕಿತ್ಸೆಗೆ ಒಳಪಡಿಸಬೇಕಾಗುತ್ತದೆ. ಇಂತಹ ಗುಂಪಿನವರು ಶೀತಜ್ವರದ ಬಗ್ಗೆ ಬಹಳ ಜಾಗೃತರಾಗಿರಬೇಕು. ಆರಂಭಿಕ ಲಕ್ಷಣಗಳು ಕಂಡುಬಂದಾಗಲೇ ತಮ್ಮ ವೈದ್ಯರಿಗೆ ತೋರಿಸಿ ಚಿಕಿತ್ಸೆ ಆರಂಭಿಸಬೇಕು.

ಹೆಚ್ಚಿನ ಜನರಲ್ಲಿ ಪ್ರಾಣಾಪಾಯವಾಗದಿದ್ದರೂ, ತನ್ನ ವ್ಯಾಪ್ತಿಯ ಕಾರಣದಿಂದ ಶೀತಜ್ವರ ನಾಗರಿಕ ಸಮಾಜದ ಕೆಲಸಗಳನ್ನು ಏರುಪೇರು ಮಾಡಬಲ್ಲದು. ಶೀತಜ್ವರದ ಕಾರಣದಿಂದ ಕಚೇರಿಗಳಲ್ಲಿ ರಜೆ ಹಾಕುವವರ ಸಂಖ್ಯೆ ಏರುತ್ತದೆ. ಇದರಿಂದ ಕೆಲಸದ ಸರಪಣಿ ಅಲ್ಲಲ್ಲಿ ತುಂಡರಿಸಿದಂತಾಗಿ, ಮುಖ್ಯವಾದ ಕೆಲಸಗಳ ನಿರ್ವಹಣೆ ತಡವಾಗುತ್ತದೆ. ಶಾಲೆಯ ಮಕ್ಕಳು ತರಗತಿಯಲ್ಲಿ ಒಟ್ಟಾಗಿ ಕೂರುವುದರಿಂದ ಅವರಲ್ಲಿ ಶೀತಜ್ವರದ ಪರಸ್ಪರ ವಿನಿಮಯ ಹೆಚ್ಚು. ಮಕ್ಕಳ ಗೈರುಹಾಜರಿ ಪಠ್ಯಗಳ ಹೊಂದಾಣಿಕೆಯನ್ನು ಸಡಿಲವಾಗಿಸುತ್ತದೆ. ಒಟ್ಟಾರೆ, ನಾಗರಿಕ ಸಮಾಜದ ಸಂಕೀರ್ಣ ಕಾರ್ಯವೈಖರಿಗೆ ಶೀತಜ್ವರ ಪೆಟ್ಟು ನೀಡುತ್ತದೆ.

ಶೀತಜ್ವರವನ್ನು ತಡೆಯಲು ಸಕ್ಷಮವಾದ ಲಸಿಕೆ ಇದೆ. ಅನೇಕ ದೇಶಗಳಲ್ಲಿ ಈ ಲಸಿಕೆಯನ್ನು ಪ್ರತಿವರ್ಷ ಕಡ್ಡಾಯವಾಗಿ ಪಡೆಯಬೇಕು. ನಮ್ಮ ದೇಶದಲ್ಲಿ ಈ ಲಸಿಕೆಯನ್ನು “ಶೀತಜ್ವರದಿಂದ ಯಾರಿಗೆ ಹೆಚ್ಚು ಅಪಾಯ ಇದೆಯೋ, ಅವರು ಪಡೆಯಬಹುದು” ಎಂದು ಶಿಫಾರಸು ಮಾಡಲಾಗಿದೆ. ವೈದ್ಯಕೀಯ ವೃತ್ತಿಯಲ್ಲಿರುವವರು ಮತ್ತು ಶೀತಜ್ವರದಿಂದ ಪ್ರಾಣಾಪಾಯಕ್ಕೆ ಒಳಗಾಗಬಲ್ಲವರು ಇಂತಹ ವಾರ್ಷಿಕ ಲಸಿಕೆಯನ್ನು ಪಡೆಯುವುದು ಸೂಕ್ತ.

ಕೋವಿಡ್-19 ಜಾಗತಿಕ ಸೋಂಕು ನಮಗೆ ಹಲವಾರು ಒಳ್ಳೆಯ ಆರೋಗ್ಯ ಪದ್ದತಿಗಳ ಪರಿಚಯ ಮಾಡಿಸಿದೆ. ಜನಸಂಪರ್ಕಕ್ಕೆ ಬರುವ ಸಂದರ್ಭಗಳಲ್ಲಿ ಮಾಸ್ಕ್ ಧರಿಸುವುದು, ವ್ಯಕ್ತಿಗಳ ನಡುವೆ ಅಂತರ ಕಾಯ್ದುಕೊಳ್ಳುವುದು, ನೀರು ಮತ್ತು ಸಾಬೂನನ್ನು ಬಳಸಿ ಕೈಗಳನ್ನು ಕನಿಷ್ಠ 20 ಸೆಕೆಂಡುಗಳ ಕಾಲ ಆಗಾಗ್ಗೆ ತೊಳೆದುಕೊಳ್ಳುವುದು, ಅಕಾರಣವಾಗಿ ಮೂಗು-ಬಾಯಿಗಳನ್ನು ತಾಕದಿರುವುದು, ರೋಗ ಲಕ್ಷಣ ಉಳ್ಳವರ ತೀರಾ ಸಮೀಪ ಸುಳಿಯದಿರುವುದು, ವೈಯಕ್ತಿಕ ಸ್ವಚ್ಚತೆಗೆ ಆದ್ಯತೆ ನೀಡುವುದು, ಕೆಮ್ಮು-ನೆಗಡಿ-ಜ್ವರಗಳನ್ನು ಅಲಕ್ಷಿಸದೆ ಚಿಕಿತ್ಸೆ ಪಡೆಯುವುದು, ಲಸಿಕೆಗಳ ಮಹತ್ವ ಮೊದಲಾದ ಆರೋಗ್ಯ ರಕ್ಷಣೆಯ ವಿಧಾನಗಳ ಪ್ರಾಮುಖ್ಯತೆ ನಮಗೆ ಅರಿವಾಗಿದೆ. ಶೀತಜ್ವರದ ನಿಗ್ರಹದಲ್ಲೂ ಈ ಪದ್ದತಿಗಳು ಉತ್ತಮ ಪಾತ್ರ ವಹಿಸುತ್ತವೆ. ಕೋವಿಡ್-19 ಸೋಂಕಿನ ತಡೆಯುವಿಕೆಯಲ್ಲಿ ನಾವು ನಿರ್ವಹಿಸಿದ ಎಲ್ಲ ಎಚ್ಚರಗಳನ್ನು ಶೀತಜ್ವರದ ಸಂಬಂಧದಲ್ಲೂ ಕಡ್ಡಾಯವಾಗಿ ಪಾಲಿಸುವುದು ಒಳಿತು.

ಶೀತಜ್ವರದ ಲಕ್ಷಣಗಳು ಇತರ ಕಾಯಿಲೆಗಳ ಲಕ್ಷಣವನ್ನು ಬಹುವಾಗಿ ಹೋಲುವುದರಿಂದ ಎಲ್ಲ ಕಾಯಿಲೆಗಳನ್ನೂ ಶೀತಜ್ವರವೆಂದು ನಿರ್ಲಕ್ಷಿಸಲು ಸಾಧ್ಯವಿಲ್ಲ. ಒಂದು ವಾರದ ಸರಳ ಚಿಕಿತ್ಸೆಯಿಂದ ಶೀತಜ್ವರದ ರೋಗಲಕ್ಷಣಗಳು ಗುಣವಾಗದವರಲ್ಲಿ ಇತರ ಕಾಯಿಲೆಗಳ ಸಾಧ್ಯತೆ ಹೆಚ್ಚು. ಜೊತೆಗೆ, ರೋಗನಿರೋಧಕ ಶಕ್ತಿ ಕುಂಠಿತರಾದವರಷ್ಟೇ ಅಲ್ಲದೆ, ಒಂದು ವರ್ಷದೊಳಗಿನ ಮಕ್ಕಳು, 65 ವರ್ಷ ದಾಟಿದವರು, ಗರ್ಭಿಣಿಯರು, ಬಾಣಂತಿಯರು, ನಿಯಮಿತ ಆಸ್ಪಿರಿನ್ ಗುಳಿಗೆ ಸೇವಿಸುವವರು, ಶೀತಜ್ವರ ರೋಗಿಗಳ ಆರೈಕೆ ಮಾಡುವವರು, ಮುಂತಾದವರು ತಮಗೆ ಶೀತಜ್ವರದ ರೋಗಲಕ್ಷಣಗಳು ಕಂಡಾಗ ತಡಮಾಡದೆ ವೈದ್ಯರನ್ನು ಕಾಣಬೇಕು.  

----------------------------

ದಿನಾಂಕ 16/8/2022 ರ ಪ್ರಜಾವಾಣಿ ದಿನಪತ್ರಿಕೆಯಲ್ಲಿ ಪ್ರಕಟವಾದ ಲೇಖನ. ಪ್ರಕಟಿತ ಲೇಖನದ ಕೊಂಡಿ: https://www.prajavani.net/health/cold-fever-do-not-fear-here-top-tips-for-curing-963494.html


 

ನೆನಪು ಮತ್ತು ಕಲಿಕೆ – ಮರುಕಳಿಕೆಯ ಪ್ರಭಾವ

ಡಾ. ಕಿರಣ್ ವಿ.ಎಸ್.

ವೈದ್ಯರು

“ಪ್ರಪಂಚದಲ್ಲಿ ಇರೋದೆಲ್ಲ ನೆನಪಿರುತ್ತದೆ – ಪಠ್ಯ-ಪಾಠ ಒಂದು ಬಿಟ್ಟು” ಎನ್ನುವುದು ಮಕ್ಕಳ ಬಗ್ಗೆ ಅನೇಕ ಪೋಷಕರ ಅಳಲು. “ಪಾಪ ಮಗು ಎಷ್ಟೊಂದು ಸಾರಿ ಪಾಠ ಓದಿದರೂ ಪರೀಕ್ಷೆ ವೇಳೆಗೆ ನೆನಪೇ ಉಳಿಯೋದಿಲ್ಲ” ಎಂದು ಪೇಚಾಡುವವರೂ ಇದ್ದಾರೆ. ಮಕ್ಕಳ ನೆನಪಿನ ಶಕ್ತಿಯನ್ನೇ ಮುಖ್ಯವಾಗಿ ಪರೀಕ್ಷಿಸಲು ನಿರ್ಮಾಣವಾಗಿರುವ ನಮ್ಮ ಪರೀಕ್ಷಾ ವ್ಯವಸ್ಥೆ ಈ ಸಂಕಟಗಳಿಗೆ ಮತ್ತಷ್ಟು ಇಂಬು ನೀಡುತ್ತದೆ. ಕಲಿಕೆ ಎಂಬುದು ಯಾವುದೇ ವಿಷಯದ ಮೂಲತತ್ತ್ವಗಳ ಸರಿಯಾದ ಗ್ರಹಿಕೆ ಎಂದು ಅನಾದಿಕಾಲದಿಂದ ಹೇಳಲಾಗಿದೆ. ಆದರೆ ಈಗಲೂ ನಮ್ಮ ದೇಶದ ಶಿಕ್ಷಣ ವ್ಯವಸ್ಥೆ ವಿದ್ಯಾರ್ಥಿಯ ಬಾಯಿಪಾಠದ ಸಾಮರ್ಥ್ಯವನ್ನು ಬಹುವಾಗಿ ಓರೆಹಚ್ಚುತ್ತದೆ. ನೆನಪಿನ ಶಕ್ತಿಯ ಕುರಿತಾಗಿ ಆಧುನಿಕ ವಿಜ್ಞಾನ ಏನು ಹೇಳುತ್ತದೆ? ಕಲಿಕೆಯ ಬಗೆಗಿನ ಅಧ್ಯಯನಗಳು ತೋರುವ ದಾರಿ ಯಾವುದು? ಇದರ ಬಗ್ಗೆ ಒಂದು ಜಿಜ್ಞಾಸೆ.

ಪ್ರಪಂಚದ ಹಲವಾರು ದೇಶಗಳಲ್ಲಿ “ನೆನಪಿನ ಶಕ್ತಿಯ ಸ್ಪರ್ಧೆಗಳು” ನಡೆಯುತ್ತವೆ. ನೂರಾರು ಅಪರಿಚಿತ ವ್ಯಕ್ತಿಗಳ ಛಾಯಾಚಿತ್ರಗಳನ್ನು ಒಂದರ ಹಿಂದೆ ಮತ್ತೊಂದರಂತೆ ಕೆಲಕ್ಷಣಗಳ ಕಾಲ ತೋರಿಸಿ, ಸ್ವಲ್ಪ ಕಾಲದ ನಂತರ ಅವುಗಳನ್ನು ಗುರುತಿಸುವುದು; ಪರಸ್ಪರ ಸಂಬಂಧವಿಲ್ಲದ ನೂರಾರು ಪದಗಳನ್ನು ಒಮ್ಮೆ ಕೇಳಿ, ಕೆಲನಿಮಿಷಗಳ ನಂತರ ಅಂತೆಯೇ ಹೇಳುವುದು; ದೊಡ್ಡ ಸಂಖ್ಯೆಗಳನ್ನು ನಿಖರವಾಗಿ ಪುನರುಚ್ಚರಿಸುವುದು; ಒಂದು ಕಟ್ಟು ಇಸ್ಪೀಟು ಎಲೆಗಳನ್ನು ಚೆನ್ನಾಗಿ ಕಲೆಸಿ ಒಮ್ಮೆ ತೋರಿದಾಗ, ಸ್ಪರ್ಧಿ ಅದೇ ಅನುಕ್ರಮದಲ್ಲಿ ಯಾವ್ಯಾವ ಎಲೆಗಳು ಇವೆಯೆಂದು ಹೇಳುವುದು – ಹೀಗೆ ಹಲವಾರು ವಿಧದ ಸ್ಪರ್ಧೆಗಳು ನೆನಪಿನ ಶಕ್ತಿಗೆ ಕುರುಹಾಗಿ ಪರೀಕ್ಷೆಗೆ ಒಳಪಡುತ್ತವೆ. ಒಂದರ ಹಿಂದೊಂದರಂತೆ ಹೇಳಿದ ನೂರಾರು ಪದಗಳನ್ನು ಕೇಳಿದ ಮೇಲೆ ಹದಿನೈದು ನಿಮಿಷಗಳ ನಂತರ ಅವೆಲ್ಲವನ್ನೂ ಯಥಾವತ್ತಾಗಿ ಮತ್ತೆ ಹೇಳುವ ಸ್ಪರ್ಧಿಗಳನ್ನು ನೋಡಿದರೆ, “ಇವರೆಲ್ಲಾ ಹುಟ್ಟಿನಿಂದಲೇ ಅಪಾರ ನೆನಪಿನ ಶಕ್ತಿಯ ಸಿದ್ಧಿಯನ್ನು ಪಡೆದಿರುತ್ತಾರೆ” ಎನಿಸುವುದು ಸಾಮಾನ್ಯ.

ಆದರೆ ವಾಸ್ತವ ಹಾಗಿಲ್ಲ. 2005 ನೆಯ ಇಸವಿಯಲ್ಲಿ ಅಮೆರಿಕದಲ್ಲಿ ನಡೆದ ಇಂತಹ ಸ್ಪರ್ಧೆಯನ್ನು ವರದಿ ಮಾಡಲು ಹೋಗಿದ್ದ ಜೋಶುವಾ ಫೊಯರ್ ಎಂಬ 23 ವರ್ಷ ವಯಸ್ಸಿನ ಪತ್ರಕರ್ತರೊಬ್ಬರು ವಿಜೇತರ ಜೊತೆ ಸಂದರ್ಶನ ಮಾಡುವಾಗ, ಅವರುಗಳು ಇಂತಹ ಸ್ಪರ್ಧೆಗೆ ತರಬೇತಿ ಪಡೆದದ್ದನ್ನು ಕೇಳಿ ನಿಬ್ಬೆರಗಾದರು. ಅಂದರೆ, ಅಸಾಧಾರಣ ನೆನಪಿನ ಶಕ್ತಿ ಎನ್ನುವುದು ದೈವದತ್ತವಾಗಿ ಬಂದ ಪ್ರತಿಭೆ ಅಲ್ಲವೆಂದೂ, ಅದು ಕಠಿಣ ಪರಿಶ್ರಮದ ಸಾಧನೆಯೆಂದೂ ತಿಳಿಯಿತು. ಇದನ್ನು ಪರೀಕ್ಷಿಸಲು ಫೊಯರ್ ಬ್ರಿಟನ್ನಿನ “ನೆನಪಿನ ಶಕ್ತಿಯ ಗ್ರಾಂಡ್ ಮಾಸ್ಟರ್” ಎಂದು ಖ್ಯಾತರಾದ ಎಡ್ ಕುಕ್ ಅವರಲ್ಲಿ ತರಬೇತಿಗೆ ಸೇರಿದರು. ಅಲ್ಲಿನ ವ್ಯವಸ್ಥಿತ ತರಬೇತಿಯ ಮೂಲಕ ತಯಾರಾಗಿ, ಮರುವರ್ಷ 2006 ರ ನೆನಪಿನ ಶಕ್ತಿಯ ಸ್ಪರ್ಧೆಗಳಲ್ಲಿ ಭಾಗವಹಿಸಿ, ಚೆನ್ನಾಗಿ ಕಲೆಸಿದ 52 ಇಸ್ಪೀಟು ಎಲೆಗಳ ಸರಣಿಯನ್ನು ಕೇವಲ ಒಂದು ನೂರು ಸೆಕೆಂಡುಗಳ ಕಾಲ ನೋಡಿ, ಅದೇ ಅನುಕ್ರಮದಲ್ಲಿ ಒಂದೂ ತಪ್ಪಿಲ್ಲದಂತೆ ಹೇಳಿ, ಸ್ಪರ್ಧೆಯ ವಿಜೇತರೂ ಆದರು! ತಮ್ಮ ಈ ಕುತೂಹಲಕಾರಿ ಅನುಭವದ ಪ್ರಯಾಣವನ್ನು ಅವರು Moonwalking with Einstein ಎನ್ನುವ ಪುಸ್ತಕದಲ್ಲಿ ಬರೆದಿದ್ದಾರೆ; ನೆನಪಿನ ಶಕ್ತಿಯ ಬಗ್ಗೆ ಹಲವಾರು ಹೊಸನೋಟಗಳನ್ನು, ಒಳಸುಳಿಗಳನ್ನು ಚರ್ಚಿಸಿದ್ದಾರೆ.

ನೆನಪಿನ ಶಕ್ತಿಯನ್ನು ವೈಜ್ಞಾನಿಕ ತರಬೇತಿಯ ಮೂಲಕ ಯಾರು ಬೇಕಾದರೂ ಗಳಿಸಬಹುದು ಎಂದಾಯಿತು. ನಮ್ಮ ಮಿದುಳಿನಲ್ಲಿ ಅಪಾರವಾದ ಸಂಗತಿಗಳನ್ನು ದಾಖಲಿಸಬಹುದು. ಅದನ್ನು ವ್ಯವಸ್ಥಿತವಾಗಿ ಮರುಕಳಿಕೆ ಮಾಡುವುದು ನೆನಪಿನ ಶಕ್ತಿ ಎನಿಸಿಕೊಳ್ಳುತ್ತದೆ; ಇದನ್ನು ಕ್ರಮಬದ್ಧವಾಗಿ ಮಾಡಿದಷ್ಟೂ ನೆನಪು ಹರಿತವಾಗುತ್ತದೆ. ಈ ಬಗ್ಗೆ ವಿಜ್ಞಾನಿಗಳು ಸಂಶೋಧನೆಗಳನ್ನು ನಡೆಸಿದ್ದಾರೆ. ಇಂತಹ ಒಂದು ಅಧ್ಯಯನದಲ್ಲಿ ಸರಿಸುಮಾರು ಒಂದೇ ಓದಿನ ಮಟ್ಟದ ವಿದ್ಯಾರ್ಥಿಗಳ ಎರಡು ಗುಂಪುಗಳನ್ನು ಮಾಡಲಾಯಿತು. ಈ ವಿದ್ಯಾರ್ಥಿಗಳು ನಿಯಮಿತವಾಗಿ ಕಲಿಯುವ ವಿಷಯಗಳಿಗೆ ಯಾವುದೇ ನೇರ ಸಂಬಂಧವಿಲ್ಲದ ಒಂದು ಪುಟದಷ್ಟು ಮಾಹಿತಿಯ ಹಲವಾರು ಪ್ರತಿಗಳನ್ನು ಅಧ್ಯಯನ ತಂಡ ಮುದ್ರಿಸಿ ಇರಿಸಿಕೊಂಡಿತ್ತು. ಮೊದಲನೆಯ ಗುಂಪಿನ ವಿದ್ಯಾರ್ಥಿಗಳಲ್ಲಿ ಪ್ರತಿಯೊಬ್ಬರಿಗೂ ಇಂತಹ ಮಾಹಿತಿಯ ಒಂದೊಂದು ಪ್ರತಿಯನ್ನು ನೀಡಿ, ಇಪ್ಪತ್ತು ನಿಮಿಷಗಳ ಕಾಲ ಅದನ್ನು ಪದೇಪದೇ ಸಾಧ್ಯವಾದಷ್ಟು ಬಾರಿ ಓದಿಕೊಳ್ಳಲು ಹೇಳಲಾಯಿತು. ಎರಡನೆಯ ಗುಂಪಿಗೆ ಕೂಡ ಅದೇ ಮಾಹಿತಿಯ ಒಂದೊಂದು ಪ್ರತಿಯನ್ನು ನೀಡಿ, ಓದಲು ಕೇವಲ ಐದು ನಿಮಿಷಗಳ ಅವಧಿ ನೀಡಲಾಯಿತು. ಅವಧಿ ಮುಗಿದ ಕೂಡಲೆ ಆ ಪ್ರತಿಗಳನ್ನು ಪ್ರತಿಯೊಬ್ಬರಿಂದಲೂ ಹಿಂಪಡೆಯಲಾಯಿತು. ಇಪ್ಪತ್ತು ನಿಮಿಷಗಳ ನಂತರ ಮೊದಲು ಗುಂಪು ನಿರ್ಗಮಿಸಿದಾಗ ಎರಡನೆಯ ಗುಂಪಿಗೆ ಖಾಲಿ ಹಾಳೆಗಳನ್ನು ನೀಡಿ, ತಮಗೆ ನೆನಪಿರುವಷ್ಟು ಮಾಹಿತಿಯನ್ನು ಅದರಲ್ಲಿ ಬರೆಯುವಂತೆ ಹೇಳಲಾಯಿತು. ಕೆಲವು ನಿಮಿಷಗಳ ನಂತರ ಅವರು ಬರೆದಿರುವುದನ್ನು ವಾಪಸ್ ಪಡೆದು, ಮತ್ತೊಂದು ಖಾಲಿ ಹಾಳೆಯ ಮೇಲೆ ಮತ್ತೊಮ್ಮೆ ನೆನಪಿರುವಷ್ಟನ್ನು ಬರೆಯಲು ಹೇಳಿದರು. ಇದೇ ಪ್ರಕ್ರಿಯೆಯನ್ನು ಮೂರನೆಯ ಬಾರಿಯೂ ಮಾಡಿದರು. ಯಾರು ಎಷ್ಟು ಬರೆದರೆಂಬ ಯಾವುದೇ ವಿವರಣೆಯನ್ನೂ ಯಾರಿಗೂ ನೀಡಲಿಲ್ಲ. ಕೆಲದಿನಗಳ ನಂತರ ಆ ಎರಡೂ ಗುಂಪಿನ ವಿದ್ಯಾರ್ಥಿಗಳನ್ನು ಕರೆಸಿ, ಖಾಲಿ ಹಾಳೆಯ ಮೇಲೆ ಹಿಂದೆ ಓದಿದ್ದ ಮಾಹಿತಿಯನ್ನು ನೆನಪಿರುವಷ್ಟು ಬರೆಯಲು ಹೇಳಿದರು. ಇಪ್ಪತ್ತು ನಿಮಿಷಗಳ ಕಾಲ ಮಾಹಿತಿಯನ್ನು ಪದೇಪದೇ ಓದಿದ್ದ ಮೊದಲನೆಯ ಗುಂಪಿನ ವಿದ್ಯಾರ್ಥಿಗಳು ಸರಾಸರಿ ಶೇಕಡಾ ನಲವತ್ತು ಭಾಗ ಬರೆದಿದ್ದರು. ಅಚ್ಚರಿ ಎನ್ನುವಂತೆ, ಕೇವಲ ಐದು ನಿಮಿಷಗಳ ಕಾಲ ಮಾಹಿತಿಯನ್ನು ಓದಿ, ಮೂರು ಬಾರಿ ಅದನ್ನು ಮರುಕಳಿಕೆ ಮಾಡಿದ್ದ ಎರಡನೆಯ ಗುಂಪಿನ ವಿದ್ಯಾರ್ಥಿಗಳು ಸರಾಸರಿ ಶೇಕಡಾ ಅರವತ್ತೆರಡು ಭಾಗದ ಮಾಹಿತಿಯನ್ನು ಬರೆದಿದ್ದರು.

ಇಂತಹುದೇ ಅಧ್ಯಯನಗಳು ಅನೇಕ ವಿಧಾನಗಳಲ್ಲಿ ನಡೆದಿವೆ. ಪ್ರತಿಬಾರಿಯೂ ಪದೇಪದೇ ಓದುವುದಕ್ಕಿಂತ, ಓದಿನ ಮರುಕಳಿಕೆ ವಿಜಯ ಸಾಧಿಸಿದೆ. ಓದಿದ್ದನ್ನು ಮೆಲುಕು ಹಾಕುವುದು ಸರಳವಾದರೂ ಪರಿಣಾಮಕಾರಿ ಕಲಿಕೆಯ ವಿಧಾನ ಎಂದು ತಜ್ಞರ ಅಭಿಪ್ರಾಯ. ಆದರೆ ನಮ್ಮ ವ್ಯವಸ್ಥೆಯಲ್ಲಿ ಇದರ ಬಳಕೆ ಕಡಿಮೆ. ಓದಿದ್ದನ್ನೇ ಮತ್ತೆ ಮತ್ತೆ ಓದಲು ಇರುವ ಪ್ರೋತ್ಸಾಹ, ಅದರ ವ್ಯವಸ್ಥಿತ ಮೆಲುಕು ಹಾಕುವುದರಲ್ಲಿ ಇಲ್ಲ. ಈ ವಿಧಾನ ಶಾಲೆಯಿಂದ ಹಿಡಿದು ಕಾಲೇಜು ವಿದ್ಯಾರ್ಥಿಗಳವರೆಗೆ ಪ್ರತಿಯೊಂದು ವಯೋಮಾನದವರಿಗೂ ಸಾಫಲ್ಯ ನೀಡುತ್ತದೆ. ಹೀಗೆ ಮೆಲುಕು ಹಾಕುವುದನ್ನು ಕಾಲಕಾಲಕ್ಕೆ ಆಗಾಗ ಮಾಡುವುದು ಹೆಚ್ಚು ಪರಿಣಾಮಕಾರಿ. ಸಮರ್ಥವಾಗಿ ಬಳಸಿಕೊಂಡರೆ ಓದಿನ ಕುರಿತಾದ ಆಸಕ್ತಿ ಹೆಚ್ಚಿ, ಕಲಿಕೆಯ ಆಳ ಮತ್ತು ವಿಸ್ತಾರಗಳೂ ಹೆಚ್ಚುತ್ತವೆ ಎಂದು ಸಾಬೀತಾಗಿದೆ.

ನಿರಂತರ ಕಲಿಕೆಯ, ತಾನು ಕಲಿತದ್ದನ್ನು ಮತ್ತೊಬ್ಬರಿಗೆ ಹೇಳಿಕೊಡುವ ವಿಧಾನಗಳನ್ನು ಅಳವಡಿಸಿಕೊಂಡಿರುವ ಶಿಕ್ಷಣ ವ್ಯವಸ್ಥೆ ನಮ್ಮ ಆಧುನಿಕ ಕಲಿಕೆಯ ಸೂಕ್ಷ್ಮತೆಯನ್ನು, ಸಾಮರ್ಥ್ಯವನ್ನು ಹೆಚ್ಚಿಸಬಲ್ಲವು ಎಂಬುದು ವೈಜ್ಞಾನಿಕವಾಗಿ ಧೃಢಪಟ್ಟಿದೆ. ಇದಕ್ಕೆ ಪೂರಕವಾದ ಕಲಿಕೆಯ ಪದ್ದತಿಗಳನ್ನು ಅಳವಡಿಸಿಕೊಳ್ಳಬಲ್ಲ ವಿಧಾನಗಳನ್ನು ಶಿಕ್ಷಣ ನೀತಿಯಲ್ಲಿ ಸೇರ್ಪಡೆಗೊಳಿಸುವುದು ಸೂಕ್ತ. ಆರಂಭದ ಹಂತದಿಂದಲೇ ಕಲಿಯುವಿಕೆ ಮತ್ತು ಕಲಿಸುವಿಕೆ ಜೊತೆಗೂಡಿ ಸಾಗಿದರೆ ಸಮಾಜಕ್ಕೆ ಉತ್ತಮ ಶಿಕ್ಷಕರನ್ನು ನೀಡುವ ಸಾಧ್ಯತೆಗಳು ವೃದ್ಧಿಸುತ್ತವೆ. ಈ ನಿಟ್ಟಿನಲ್ಲಿ ನಮ್ಮ ಶಿಕ್ಷಣ ನೀತಿ ಗಮನ ಹರಿಸಬೇಕಿದೆ.

------------------------------

ದಿನಾಂಕ 9/8/2022 ರ ಪ್ರಜಾವಾಣಿಯ ಕ್ಷೇಮ-ಕುಶಲ ಪುರವಣಿಯಲ್ಲಿ ಪ್ರಕಟವಾದ ಲೇಖನ

ವಿಶ್ವವಾಣಿ ದಿನಪತ್ರಿಕೆಯ ತಮ್ಮ ಭಾನುವಾರದ ಅಂಕಣದಲ್ಲಿ Srivathsa Joshi ಯವರು “ಬಯೋಮಿಮಿಕ್ರಿ” ಪುಸ್ತಕದ ಒಂದು ಅಧ್ಯಾಯದ ಬಗ್ಗೆ ತಿಳಿಸಿದ್ದಾರೆ. (31/7/2022)


https://www.facebook.com/srivathsa.joshi/posts/pfbid021PVnwib9pc5ZRKDrgRWFbLvFoY7Vju1xbjtse3oxrTPiPwAkRCyVfjw6ZXQNT3WPl 

Podcast(Audio): https://tilirutorana.s3.amazonaws.com/tt_338_31Jul2022.mp3

 ತಲೆಸುತ್ತಿನ ಸುತ್ತಮುತ್ತ....

ಡಾ. ಕಿರಣ್ ವಿ.ಎಸ್.

ವೈದ್ಯರು

“ರಾತ್ರಿ ಮಲಗಿದಾಗ ಚೆನ್ನಾಗಿಯೇ ಇದ್ದೆ. ಬೆಳಗ್ಗೆ ಎದ್ದರೆ ತಲೆಯೆಲ್ಲ ಹಗುರವಾದ ಹಾಗಿತ್ತು; ಕಣ್ಣು ಮಂಜಾಗಿತ್ತು; ಸುತ್ತಮುತ್ತಲಿನ ಗೋಡೆಗೆಳೆಲ್ಲ ಗಿರಕಿ ಹೊಡೆಯುತ್ತಿದ್ದವು. ಹೊಟ್ಟೆ ತೊಳಸಿದಂತಾಯಿತು. ಹೆಜ್ಜೆ ಇಟ್ಟರೆ ಬಿದ್ದುಬಿಡುತ್ತೇನೆಂಬ ಭಯ. ಕಣ್ಣು ಮುಚ್ಚಿಕೊಂಡು ಹಾಗೆಯೇ ಮಂಚದ ಮೇಲೆ ಕೂರುವಂತಾಯಿತು. ಸ್ವಲ್ಪ ಕಾಲ ಕುಳಿತ ನಂತರ ಕಣ್ಣು ತೆರೆದಾಗ ತಲೆಸುತ್ತಿನ ಅನುಭವ ಕಡಿಮೆ ಆಯಿತಾದರೂ ಇನ್ನೂ ಪೂರ್ತಿಯಾಗಿ ವಾಸಿಯಾಗಿಲ್ಲ”. ಜೀವನದಲ್ಲಿ ಒಮ್ಮೆಯಾದರೂ ಈ ಅನುಭವ ಆಗದವರು ವಿರಳ.

ತಲೆಸುತ್ತು, ತಲೆತಿರುಗುವಿಕೆ, ತಲೆ ಗಿರಕಿ ಹೊಡೆದ ಅನುಭವ, ಶಿರೋಭ್ರಮಣ ಮುಂತಾದ ಹೆಸರುಗಳಿಂದ ಕರೆಯಲ್ಪಡುವ “ವರ್ಟೈಗೊ” (Vertigo) ಸಮಸ್ಯೆ ಬಹಳ ಸಾಮಾನ್ಯ. ಬಹುತೇಕ ಮಂದಿಗೆ ಇದು ತಾತ್ಕಾಲಿಕ ಅನುಭವ. ಆದರೆ ಈ ಸಮಸ್ಯೆ ಗಂಭೀರವಾದರೆ ದೀರ್ಘಕಾಲಿಕವಾಗಿಯೂ ಕಾಡಬಹುದು. ತಲೆಸುತ್ತಿನ ವೇಳೆ ಸುಮ್ಮನೆ ಒಂದೆಡೆ ನಿಂತಿದ್ದರೂ ನಾವೇ ತಿರುಗುತ್ತಿರುವಂತೆ ಅನಿಸಬಹುದು; ಇಲ್ಲವೇ, ನಮ್ಮ ಸುತ್ತಮುತ್ತಲಿನ ಗೋಡೆಗಳು, ವಸ್ತುಗಳು ಗಿರಕಿ ಹೊಡೆಯುತ್ತಿರುವಂತೆ ಭಾಸವಾಗಬಹುದು. ವಯಸ್ಸಾದಂತೆಲ್ಲಾ ಈ ಸಮಸ್ಯೆ ಅಧಿಕವಾಗುತ್ತದೆ. ತಲೆಸುತ್ತು ಬಂದಾಗ ಕೆಲವೊಮ್ಮೆ “ಸ್ವಲ್ಪ ನಡೆದರೆ ತಂತಾನೇ ಸರಿಹೋಗುತ್ತದೆ” ಎಂದು ಭಾವಿಸಿ, ಕೆಲ ಹೆಜ್ಜೆಗಳನ್ನಿಟ್ಟು, ಪ್ರಜ್ಞೆತಪ್ಪಿ ಬಿದ್ದು ಗಾಯಗೊಂಡವರಿದ್ದಾರೆ. ಸುಲಭವಾಗಿ ನಿರ್ಲಕ್ಷಿಸಲಾಗದ, ಉಪೇಕ್ಷೆ ಮಾಡಬಾರದಾದ ಸಮಸ್ಯೆಗಳಲ್ಲಿ ತಲೆಸುತ್ತು ಒಂದು.

ಮನುಷ್ಯ ಜೀವಿ ಮೂಲತಃ ಚತುಷ್ಪಾದಿಗಳಿಂದ ವಿಕಾಸವಾದರೂ ಎರಡು ಕಾಲಿನ ಮೇಲೆ ನಿಲ್ಲುವ, ನಡೆಯುವ ಹಂತಕ್ಕೆ ಏರಿದ ಪ್ರಾಣಿ. ಇದರ ಲಾಭಗಳೂ ಕೆಲವು; ಅಪಾಯಗಳೂ ಹಲವು. ನಾಲ್ಕು ಚಕ್ರದ ಕಾರು ಓಡಿಸುವಾಗ ನಮಗೆ ಸಮತೋಲನದ ಅಗತ್ಯ ಇರುವುದಿಲ್ಲ. ಆದರೆ ಎರಡು ಚಕ್ರದ ಬೈಸಿಕಲ್ ಅಥವಾ ಬೈಕ್ ಓಡಿಸುವವರಿಗೆ ಬೀಳದಂತೆ ಸಮತೋಲನವನ್ನು ನಿರ್ವಹಿಸುವುದು ಮುಖ್ಯ. ಅದೇ ರೀತಿಯಲ್ಲಿ ದ್ವಿಪಾದಿ ಮನುಷ್ಯರಲ್ಲಿ ಬೀಳದಂತೆ ಸಮತೋಲನ ಕಾಯ್ದುಕೊಳ್ಳುವುದು ಅಗತ್ಯ. ಇದನ್ನು ನಿರ್ವಹಿಸಲು ನಮ್ಮ ಶರೀರ ಹಲವಾರು ತಯಾರಿ ಮಾಡಿಕೊಂಡಿದೆ. ಶರೀರದ ಸಮತೋಲನವನ್ನು ಕಾಯ್ದುಕೊಳ್ಳುವ ಪ್ರಮುಖ ಅಂಗಗಳು ನಮ್ಮ ಒಳಕಿವಿಯಲ್ಲಿವೆ. ಪರಸ್ಪರ ಲಂಬಕೋನದಲ್ಲಿರುವ, ತಮ್ಮ ಒಡಲಿನ ಸ್ವಲ್ಪಭಾಗದಲ್ಲಿ ದ್ರವ ತುಂಬಿರುವ ಮೂರು ಅರ್ಧವರ್ತುಲಾಕಾರದ ಕೊಳವೆಗಳು, ಅದರ ಬದಿಯ ಎರಡು ಗಟ್ಟಿ ಚೀಲಗಳು, ಇವುಗಳಿಂದ ಮಾಹಿತಿಯನ್ನು ಒಯ್ಯುವ ನರಗಳು ದೇಹದ ಸಮತೋಲನ ನಿರ್ವಹಣೆಯ ಮುಖ್ಯ ಭಾಗಗಳು. ಅರ್ಧವರ್ತುಲಾಕಾರದ ಕೊಳವೆಗಳಲ್ಲಿನ ದ್ರವದ ಮಟ್ಟವನ್ನು ಗ್ರಹಿಸುವ ನರಗಳು, ವ್ಯಕ್ತಿಯ ತಲೆ ಯಾವ ಕೋನದಲ್ಲಿ ನಿಂತಿದೆ ಎಂದು ಮಿದುಳಿಗೆ ತಿಳಿಸುತ್ತವೆ. ಇಂತಹ ವಿಶಿಷ್ಟ ಮಾಹಿತಿಯನ್ನು ಕ್ರೋಢೀಕರಿಸುವ ಮಿದುಳಿನ ಭಾಗಕ್ಕೆ ಮತ್ತಷ್ಟು ಮಾಹಿತಿ ಕಣ್ಣುಗಳಿಂದ ಮತ್ತು ದೇಹದ ಕೀಲುಗಳಿಂದ ಬರುತ್ತದೆ. ಇವೆಲ್ಲವನ್ನೂ ಸಂಸ್ಕರಿಸುವ ಮಿದುಳು ಶರೀರದ ಸ್ಥಿತಿಯನ್ನು ಕ್ಷಣಮಾತ್ರದಲ್ಲಿ ನಿರ್ಧರಿಸಿ, ಯಾವುದೇ ಅಸಮತೋಲನವನ್ನು ಸರಿಪಡಿಸುವ ಸೂಚನೆಗಳನ್ನು ದೇಹದ ಮಾಂಸಖಂಡಗಳಿಗೆ ನೀಡುತ್ತದೆ. ಅದಕ್ಕೇ, ದೇಹ ಆಯ ತಪ್ಪಿ ಒಂದೆಡೆ ವಾಲಿದರೆ ಕೂಡಲೇ ಆ ಬದಿಯ ಕೈ ದೂರಕ್ಕೆ ಚಲಿಸಿ, ಭುಜದ ಮಾಂಸಖಂಡಗಳು ಗಟ್ಟಿಯಾಗಿ, ಹಸ್ತದ ಭಾಗ ಅಗಲವಾಗುತ್ತದೆ. ಇದು ಮಿದುಳಿನ ಮಿಂಚಿನ ವೇಗದ ಮಾಹಿತಿ ಸಂಸ್ಕರಣೆಗೆ ಸಾಕ್ಷಿ.

ಸಮತೋಲನ ನಿರ್ವಹಿಸುವ ಕಿವಿಯ ಅಂಗಗಳು ಅಥವಾ ಅದನ್ನು ಸಂಸ್ಕರಿಸುವ ಮಿದುಳಿನ ಭಾಗದಲ್ಲಿ ಏರುಪೇರಾದರೆ ತಲೆಸುತ್ತು ಬರುತ್ತದೆ. ಒಳಕಿವಿಯ ಭಾಗಗಳಲ್ಲಿ ಸಮಸ್ಯೆ ಉಂಟಾದರೆ ಕಿವಿಯಲ್ಲಿ ಗುಂಯ್ ಸದ್ದು, ತಾತ್ಕಾಲಿಕ ಕಿವುಡು, ಹೊಟ್ಟೆ ತೊಳಸುವುದು, ವಾಂತಿ, ಕಣ್ಣಿನ ಪಾಪೆಗಳ ವೇಗದ ಚಲನೆ, ಅಸಮರ್ಪಕ ನಡಿಗೆ ಮೊದಲಾದವು ಕಾಣುತ್ತವೆ. ಆರಂಭದಲ್ಲಿ ಇವು ತೀವ್ರ ಸಮಸ್ಯೆ ತಂದೊಡ್ಡುತ್ತವೆ. ಆದರೆ ಮಿದುಳು ಈ ಸಮಸ್ಯೆಯನ್ನು ಗ್ರಹಿಸಿ, ಇತರ ಮೂಲಗಳಿಂದ ಅಧಿಕ ಮಾಹಿತಿ ಸಂಗ್ರಹಿಸಿ, ಪರಿಸ್ಥಿತಿಯನ್ನು ತಿಳಿಗೊಳಿಸುವ ಪ್ರಯತ್ನ ಮಾಡುತ್ತದೆ. ಈ ವೇಳೆಗೆ ಒಳಕಿವಿಯ ತಾತ್ಕಾಲಿಕ ಸಮಸ್ಯೆ ಪರಿಹಾರವಾದರೆ ತಲೆಸುತ್ತು ತಾನಾಗಿಯೇ ನಿಲ್ಲುತ್ತದೆ. ಕೆಲವೊಮ್ಮೆ ಇದರ ಪರಿಹಾರಕ್ಕೆ ಕೆಲವು ಮನೆಮದ್ದು, ಔಷಧಗಳು, ಸಾಕಷ್ಟು ವಿಶ್ರಾಂತಿ ನೆರವಾಗುತ್ತವೆ. ಆದರೆ, ಒಳಕಿವಿಯ ಸಮಸ್ಯೆ ತೀವ್ರ ಸ್ವರೂಪದ್ದಾಗಿದ್ದಲ್ಲಿ, ಅಥವಾ ಸಮತೋಲನ ನಿರ್ವಹಣೆಯ ಅಂಗಗಳ, ನರಗಳ ಕಾಯಿಲೆಗೆ ಸಂಬಂಧಿಸಿದ್ದಾಗಿದ್ದಲ್ಲಿ, ಇಲ್ಲವೇ ಮಿದುಳಿನ ಮಾಹಿತಿ ಸಂಸ್ಕರಣೆಯ ಭಾಗ ತೊಂದರೆಗೆ ಒಳಗಾಗಿದ್ದಲ್ಲಿ ತಲೆಸುತ್ತು ಪರಿಹಾರವಾಗುವುದಿಲ್ಲ; ಬದಲಿಗೆ ಉಲ್ಬಣಿಸಬಹುದು. ಅನತಿಕಾಲದಲ್ಲಿ ಪರಿಹಾರವಾಗದ ಅಥವಾ ಪದೇ ಪದೇ ಕಾಡುವ ತಲೆಸುತ್ತನ್ನು ನಿರ್ಲಕ್ಷಿಸುವಂತಿಲ್ಲ. ಇದರ ಕಾರಣವನ್ನು ಹುಡುಕಿ, ಸೂಕ್ತ ಪರಿಹಾರ ಕಂಡುಕೊಳ್ಳಲು ಮೊದಲು ಕಿವಿಯ ತಜ್ಞರನ್ನು, ಅಗತ್ಯವಾದರೆ ಮಿದುಳಿನ ತಜ್ಞವೈದ್ಯರನ್ನು ಕಾಣಬೇಕು. ತಲೆಸುತ್ತಿನ ನಿಖರ ಕಾರಣವನ್ನು ಪತ್ತೆ ಮಾಡಬಲ್ಲ ಹಲವಾರು ಪರೀಕ್ಷೆಗಳಿವೆ. ಇವನ್ನು ಅಗತ್ಯಾನುಸಾರ ತಜ್ಞವೈದ್ಯರು ಮಾಡಿಸುತ್ತಾರೆ. ತಲೆಸುತ್ತಿನ ಕಾರಣ ಪತ್ತೆಯಾದ ನಂತರ ಅದರ ಚಿಕಿತ್ಸೆಗೆ ವೈಜ್ಞಾನಿಕ ವಿಧಾನಗಳಿವೆ. 

ತಲೆಸುತ್ತಿನ ಕಾರಣ ಕೇವಲ ಒಳಕಿವಿ ಅಥವಾ ಮಿದುಳಿನ ಸಮಸ್ಯೆಯೇ ಆಗಬೇಕೆಂದಿಲ್ಲ. ಕೆಲವು ಸಂದರ್ಭಗಳಲ್ಲಿ ಶರೀರದ ಇತರ ಸಮಸ್ಯೆಗಳಿಂದಲೂ ತಲೆಸುತ್ತು ಆಗಬಹುದು. ಮಧುಮೇಹಿಗಳಲ್ಲಿ ರಕ್ತದಲ್ಲಿನ ಸಕ್ಕರೆಯ ಅಂಶದಲ್ಲಿ ಏರುಪೇರಾದಾಗ ತಲೆಸುತ್ತು ಕಾಣುತ್ತದೆ. ಅಂತಹ ವೇಳೆಯಲ್ಲಿ ಕೂಡಲೇ ರಕ್ತದ ಸಕ್ಕರೆಯ ಮಟ್ಟವನ್ನು ಪರಿಶೀಲಿಸಿ, ಪರಿಹಾರ ಕಂಡುಕೊಳ್ಳಬೇಕು. ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿ, ರಕ್ತದ ಒತ್ತಡ ಇಳಿದಾಗ, ಮಿದುಳಿಗೆ ಸಾಕಷ್ಟು ರಕ್ತ ಹರಿಯದೆ ತಲೆಸುತ್ತು ಉಂಟಾಗಬಹುದು. ಈ ನಿರ್ಜಲೀಕರಣವನ್ನು ತೊಡೆಯಲು ಸಾಕಷ್ಟು ಪ್ರಮಾಣದ ದ್ರವಗಳು, ಎಳೆನೀರು, ಓ.ಆರ್.ಎಸ್ ಪಾನಕ, ನೀರುಮಜ್ಜಿಗೆಗಳನ್ನು ಬಳಸಬೇಕು. ಈಚೆಗೆ ಶರೀರದ ತೂಕವನ್ನು ಶೀಘ್ರವಾಗಿ ಕಡಿಮೆ ಮಾಡಲು ಅನೇಕ ಅವೈಜ್ಞಾನಿಕ ವಿಧಾನಗಳಿಗೆ ಶರಣು ಹೋಗುವವರಿದ್ದಾರೆ. ಅಂತಹವರು ತಮ್ಮ ಆಹಾರ ಸೇವನೆಯಲ್ಲಿ ಹಠಾತ್ ಬದಲಾವಣೆ ಮಾಡಿಕೊಳ್ಳುತ್ತಾರೆ. ಇದನ್ನು ಶರೀರದ ವ್ಯವಸ್ಥೆ ಸಹಿಸಲು ಸಾಧ್ಯವಾಗದೆ ಹೋದರೆ ಆಗಾಗ ತಲೆಸುತ್ತು ಕಾಣುತ್ತದೆ. ಇಂತಹವರು ವೈದ್ಯರಲ್ಲಿಗೆ ಹೋದಾಗ ತಮ್ಮ ಹೊಸ ಆಹಾರ ಪದ್ದತಿಯ ಬಗ್ಗೆ ಅವರಿಗೆ ಮಾಹಿತಿ ನೀಡಬೇಕು. ಇಲ್ಲವಾದರೆ ತಲೆಸುತ್ತಿಗೆ ಅನೇಕ ಪರೀಕ್ಷೆಗಳನ್ನು ಮಾಡಿದರೂ ವೈದ್ಯರಿಗೆ ಕಾರಣ ತಿಳಿಯದೇ ಹೋಗಬಹುದು.  

ನಮ್ಮ ಶರೀರದ ಬಹುತೇಕ ಭಾಗ ನೀರು. ದೇಹದ ನೀರಿನ ಮಟ್ಟ ಕುಸಿದರೆ ಇಡೀ ವ್ಯವಸ್ಥೆ ಏರುಪೇರಾಗುತ್ತದೆ. ಹೀಗಾಗಿ ಸೂಕ್ತ ಪ್ರಮಾಣದಲ್ಲಿ ನೀರನ್ನು ಸೇವಿಸುವುದು ಬಹಳ ಅಗತ್ಯ. ನಾಲಿಗೆಯ ಚಪಲಕ್ಕೆ, ಸಾಮಾಜಿಕ ಒತ್ತಡಕ್ಕೆ, ಸೋಮಾರಿತನಕ್ಕೆ ಒಳಗಾಗಿ ನೀರಿನ ಬದಲಿಗೆ ಕಾಫಿ, ಚಹಾ, ಕೋಲಾಗಳಂತಹ ಸಕ್ಕರೆಯುಕ್ತ ರಾಸಾಯನಿಕ ಪೇಯಗಳನ್ನು ಸೇವಿಸುವುದು ದೇಹದ ನೀರಿನ ಅಂಶವನ್ನು ಅಸಹಜ ಸ್ಥಿತಿಗೆ ದೂಡುತ್ತದೆ. ಈ ಪೇಯಗಳು ಶರೀರದಿಂದ ಮತ್ತಷ್ಟು ನೀರಿನ ಅಂಶವನ್ನು ಹೊರಹಾಕುತ್ತವೆ. ಇಂತಹುದೇ ಪರಿಣಾಮವನ್ನು ಮದ್ಯಪಾನ ಮಾಡುವವರಲ್ಲಿ ಸಹ ನೋಡಬಹುದು. ಇದರಿಂದ ಉಂಟಾಗುವ ನಿರ್ಜಲೀಕರಣದಿಂದ ತಲೆಸುತ್ತು ಬರುತ್ತದೆ. ಹೀಗಾಗಿ, ತಲೆಸುತ್ತಿನ ಪ್ರಥಮ ಚಿಕಿತ್ಸೆಯಲ್ಲಿ ಸರಳ ದ್ರವಾಹಾರದ ಸಾಕಷ್ಟು ಬಳಕೆ ಉಪಯುಕ್ತ. ಸಂಚಾರದ ವೇಳೆ ಪುಸ್ತಕ ಓದುವುದು, ಫೋನು ನೋಡುವುದು, ಗಣಕದಲ್ಲಿ ಕೆಲಸ ಮಾಡುವುದು ಮೊದಲಾದ ಚಟುವಟಿಕೆಗಳು ಕೂಡ ತಲೆಸುತ್ತು ಉಂಟು ಮಾಡುತ್ತವೆ. ಅರಿವಿಗೆ ಬರುವ ಇಂತಹ ಕಾರಣಗಳನ್ನು ಪ್ರಜ್ಞಾಪೂರ್ವಕವಾಗಿ ತಡೆಯಬೇಕು. ಈ ರೀತಿಯ ತಲೆಸುತ್ತು ಬಂದ ನಂತರ ಚಿಕಿತ್ಸೆ ಪಡೆಯುವುದಕ್ಕಿಂತ ಅದನ್ನು ಬಾರದಂತೆ ನಿರ್ವಹಿಸುವುದು ಒಳ್ಳೆಯದು.

----------------------------

ದಿನಾಂಕ 26/7/2022 ರ ಪ್ರಜಾವಾಣಿ ದಿನಪತ್ರಿಕೆಯ “ಕ್ಷೇಮ-ಕುಶಲ” ವಿಭಾಗದಲ್ಲಿ ಪ್ರಕಟವಾದ ಲೇಖನ. ಕೊಂಡಿ: https://www.prajavani.net/health/headache-health-women-problem-957500.html

 ಕಾಯಿಲೆಯ ಅಸಹಜ ಭೀತಿ – ಪರಿಹಾರವೇನು?

ಡಾ. ಕಿರಣ್ ವಿ. ಎಸ್.

ವೈದ್ಯರು

“ಕಾಯಿಲೆ ಬೀಳುವುದಷ್ಟೇ ಅನಾರೋಗ್ಯವಲ್ಲ; ಕಾಯಿಲೆ ಬೀಳುತ್ತೇವೆಂಬ ಅಸಹಜ ಭೀತಿಯೂ ಒಂದು ವಿಧದ ವ್ಯಾಧಿ” ಎಂದು ವೈದ್ಯಕೀಯದಲ್ಲಿ ಮಾತಿದೆ. ಜಗತ್ತಿನಲ್ಲಿ ಕಾಯಿಲೆ ಇರುವವರು ಒಂದು ವಿಧದವರಾದರೆ, ದೈಹಿಕವಾಗಿ ಆರೋಗ್ಯವಾಗಿದ್ದರೂ ಯಾವುದೋ ಘೋರ ಕಾಯಿಲೆ ಬಂದೇಬಿಟ್ಟಿದೆಯೆಂಬ ಅತಾರ್ಕಿಕ ಭಯಯಲ್ಲಿ ಬದುಕುವವರು ಮತ್ತೊಂದು ಬಗೆ. ಕೋವಿಡ್-19 ಜಾಗತಿಕ ವಿಪತ್ತಿನ ವೇಳೆ ಈ ಭೀತಿ ತಾರಕಕ್ಕೆ ಏರಿತ್ತು. ಜನಸಾಮಾನ್ಯರಿಂದ ಈ ಭಯವನ್ನು ಕಳೆಯಲು ವೈದ್ಯಕೀಯ ಜಗತ್ತು ಪ್ರಾಯಶಃ ಕೋವಿಡ್ ರೋಗಿಗಳ ಚಿಕಿತ್ಸೆಯಲ್ಲಿ ವ್ಯಯಿಸಿದ್ದಕ್ಕಿಂತ ಹೆಚ್ಚಿನ ಸಮಯ, ಶ್ರಮ ವಹಿಸಿದೆ.

ಪ್ರಸ್ತುತ ಜಾಗತಿಕವಾಗಿ ಕಾಣುತ್ತಿರುವ ಮತ್ತೊಂದು ಸಮಸ್ಯೆ ಎಂದರೆ ತಮ್ಮ ಪ್ರತಿಯೊಂದು ಆರೋಗ್ಯ ಸಮಸ್ಯೆಯನ್ನೂ ಗೂಗಲ್ ಜಾಲತಾಣದಲ್ಲಿ ಹುಡುಕುವುದು. ಅದರಲ್ಲಿ ಬರುವ ಸಾವಿರಾರು ಪುಟಗಳ ಪೈಕಿ ಮೊದಲ ಕೆಲವನ್ನು ಓದಿ, ಮತ್ತಷ್ಟು ಗೊಂದಲವಾಗಿ, “ತನಗೆ ಯಾವುದೋ ಕೆಟ್ಟ ಕಾಯಿಲೆ ಬಂದಿದೆ” ಎಂದು ಭ್ರಮಿಸಿ ಗಾಬರಿಗೊಳ್ಳುವುದು. ಅದರ ಪರಿಹಾರಕ್ಕೆ ಹಲವಾರು ವೈದ್ಯರನ್ನು ಸಂಪರ್ಕಿಸಿ, ತಾವು ಓದಿದ್ದನ್ನೆಲ್ಲಾ ಅವರ ಬಳಿ ಹೇಳುತ್ತಾ, ಅವರ ಯಾವುದೇ ಪರಿಹಾರವನ್ನೂ ಒಪ್ಪದೇ ಆತಂಕಕ್ಕೆ ಒಳಗಾಗುವುದು. ಇದನ್ನು “ಸೈಬರ್-ಕಾಂಡ್ರಿಯಾ” ಎಂದು ಕರೆಯುತ್ತಾರೆ.

ವೈದ್ಯಕೀಯ ವ್ಯಾಸಂಗದ ವೇಳೆ ಕಾಯಿಲೆಗಳ ಕುರಿತಾದ ರೋಗಲಕ್ಷಣಗಳನ್ನು ವೈದ್ಯಕೀಯ ಪಠ್ಯಗಳಲ್ಲಿ ಓದುವಾಗ “ಈ ಕಾಯಿಲೆ ತನಗೇ ಇದೆ” ಎಂದು ಭ್ರಮಿಸುವುದು ಬಹುತೇಕ ವೈದ್ಯಕೀಯ ವಿದ್ಯಾರ್ಥಿಗಳ ಸಾಮಾನ್ಯ ಸಮಸ್ಯೆ. ಇದರಿಂದ ಮಾನಸಿಕವಾಗಿ ವಿಚಲಿತರಾಗಿ, ತಮ್ಮ ಆಸ್ಪತ್ರೆಗಳ ಹಿರಿಯ ವೈದ್ಯರನ್ನು ಎಡತಾಕುವವರು ಹಲವಾರು ಮಂದಿ.  

ಕಾಯಿಲೆಗಳ ಅಸಹಜ ಭೀತಿಗೆ ಹಲವಾರು ಆಯಾಮಗಳಿವೆ. ತಮಗೆ ಪರಿಚಯವಿರುವ ಯಾರಿಗೋ ಕ್ಯಾನ್ಸರ್ ಇದೆ ಎಂದು ಅರಿತವರೊಬ್ಬರು, ತಮಗೆ ತಲೆನೋವು ಬಂದ ಕೂಡಲೇ “ಇದು ಮಿದುಳಿನ ಕ್ಯಾನ್ಸರ್ ಇರಬಹುದು” ಎಂದು ಭ್ರಮಿಸಿ ಚಿಂತೆಗೊಳಗಾವುದು. ಅದು ನಿದ್ರಾಹೀನತೆಯಿಂದಲೋ, ಸೈನಸ್ ಸಮಸ್ಯೆಯಿಂದಲೋ, ಅಥವಾ ದೃಷ್ಟಿದೋಷದಿಂದಲೋ ಆದ ಸರಳ ತಲೆನೋವಿರಬಹುದು. ಆದರೆ, ತಾವು ಸಂಪರ್ಕಿಸುವ ವೈದ್ಯರ ಮೇಲೆ ನಂಬಿಕೆ ಇಲ್ಲದಿದ್ದರೆ, ಹಲವಾರು ಅನಗತ್ಯ ಪರೀಕ್ಷೆಗಳನ್ನು ಮಾಡಿಸಿಕೊಂಡು, ತಮಗೆ ತಿಳಿದ, ತಿಳಿಯದ ತಜ್ಞವೈದ್ಯರ ಬಳಿಗೆ ಹೋಗಿ ಚಿಂತಿತರಾಗುವವರು ಎಷ್ಟೋ ಮಂದಿ. ಯಾವುದೇ ತಜ್ಞವೈದ್ಯರನ್ನು ಸುಲಭವಾಗಿ, ಸೋವಿಯಾಗಿ ಸಂಪರ್ಕಿಸಲು ಸಾಧ್ಯವಿರುವ ನಮ್ಮಂತಹ ದೇಶಗಳಲ್ಲಿ ಇಂತಹ ಪ್ರಸಂಗಗಳು ಹೆಚ್ಚು. ಕೆಲವು ಮುಂದುವರೆದ ದೇಶಗಳಲ್ಲಿ ಹೀಗೆ ನೇರವಾಗಿ ತಜ್ಞವೈದ್ಯರನ್ನು ಸಂಪರ್ಕಿಸುವ ಅವಕಾಶ ಇರುವುದಿಲ್ಲ. ಮೊದಲು ಪ್ರಾಥಮಿಕ ಹಂತದ ವೈದ್ಯರನ್ನು ಕಂಡು, ತಮ್ಮ ಸಮಸ್ಯೆಯನ್ನು ಅವರಲ್ಲಿ ಚರ್ಚಿಸಬೇಕು. ಪ್ರಾಥಮಿಕ ವೈದ್ಯರು ಶಿಫಾರಸು ಮಾಡಿದರೆ ಮಾತ್ರ ತಜ್ಞವೈದ್ಯರನ್ನು ಕಾಣಬಹುದು. ಇಂತಹ ಸಂದರ್ಭದಲ್ಲಿ ಆತಂಕಕ್ಕೆ ಒಳಗಾದ ರೋಗಿಗಳು ಒಂದರ ಹಿಂದೊಂದರಂತೆ ಹಲವಾರು ಪ್ರಾಥಮಿಕ ವೈದ್ಯರನ್ನು ಕಂಡು, ತಮ್ಮನ್ನು ತಜ್ಞವೈದ್ಯರಿಗೆ ಶೀಘ್ರವಾಗಿ ಶಿಫಾರಸು ಮಾಡುವಂತೆ ಗೋಗರೆಯುವುದು ಸಾಮಾನ್ಯ. ಇದರ ನಂತರವೂ ತಜ್ಞವೈದ್ಯರ ಸಲಹೆಗೆ ಕೆಲವಾರಗಳಿಂದ ಕೆಲವು ತಿಂಗಳುಗಳು ಕಾಯಬೇಕು. ಈ ಅವಧಿಯಲ್ಲಿ ಅಸಹಜ ಭೀತಿಯ ರೋಗಿಗಳ ಮನಸ್ಥಿತಿ ತೀರಾ ನಾಜೂಕಿನದು. ಹತಾಶೆಯಿಂದ ಅವೈಜ್ಞಾನಿಕ ಪರಿಹಾರಗಳಿಗೆ ಶರಣುಹೋದವರಿದ್ದಾರೆ. ಇದರಿಂದ ಯಾತನೆ ಮತ್ತಷ್ಟು ತೀವ್ರವಾಗುತ್ತದೆ.

ಇನ್ನು ಕೆಲವರಿಗೆ ವೈದ್ಯರ ಬಳಿಗೆ ಹೋಗಲು ಭಯ. ಆದರೆ ತಮ್ಮ ಸಮಸ್ಯೆಗಳನ್ನು ಇತರರ ಬಳಿ ಸುಲಭವಾಗಿ ಚರ್ಚಿಸುತ್ತಾರೆ. ಅದರಲ್ಲಿ ಕೆಲವರು ತಮ್ಮ ಪರಿಚಿತರಿಗೆ ಆದ ತೀವ್ರವಾದ ಕಾಯಿಲೆಗಳ ಉದಾಹರಣೆಯನ್ನು ನೀಡುತ್ತಾರೆ. ಅದನ್ನು ಕೇಳಿದಾಕ್ಷಣ “ತನಗೂ ಅಂತಹ ಕಾಯಿಲೆಯೇ ಇದ್ದಿರಬಹುದು” ಎನ್ನುವ ಗುಮಾನಿ ಶುರುವಾಗುತ್ತದೆ. ಹೆಚ್ಚಿನ ಜನರ ಬಳಿ ಮಾತನಾಡಿದಷ್ಟೂ ಈ ಸಮಸ್ಯೆಗೆ ರೆಕ್ಕೆಪುಕ್ಕಗಳು ಸೇರುತ್ತಾ ಹೋಗುತ್ತವೆ. ಕಡೆಗೊಂದು ದಿನ ಧೈರ್ಯ ಮಾಡಿ ವೈದ್ಯರ ಬಳಿ ಹೋದಾಗ, ತಮಗೆ ವಾಸ್ತವದಲ್ಲಿ ಇದ್ದ ರೋಗಲಕ್ಷಣಗಳಿಗಿಂತಲೂ ತಾವು ಭ್ರಮೆಗೆ ಸಿಲುಕಿದ ಸಮಸ್ಯೆಗಳನ್ನೇ ಚರ್ಚಿಸುತ್ತಾರೆ. ಇದರಿಂದ ಅವರ ರೋಗನಿರ್ಧಾರವಾಗುವುದು ಗೋಜಲಾಗುತ್ತದೆ; ಅನಗತ್ಯ ಪರೀಕ್ಷೆಗಳಿಗೆ ದಾರಿಯಾಗುತ್ತದೆ.

ಮತ್ತೂ ಹಲವರು ತಮ್ಮ ಕುಟುಂಬದ, ಸ್ನೇಹಿತರ, ಪರಿಚಿತರ ಕಾಯಿಲೆಗಳ ವಿವರಗಳನ್ನು ಅರಿತಾಗ ತಮಗೂ ಅವರಿಗೂ ಇರುವ ಸಾಮ್ಯಗಳನ್ನು ಲೆಕ್ಕ ಹಾಕುತ್ತಾರೆ. ವಯಸ್ಸು, ಆರ್ಥಿಕ ಸ್ಥಿತಿ, ಮನೆಯ ಪರಿಸ್ಥಿತಿ, ಉದ್ಯೋಗ, ಚಟಗಳು, ಚಟುವಟಿಕೆಗಳು, ಹವ್ಯಾಸ ಮೊದಲಾದ ವಿವರಗಳನ್ನು ತಾಳೆ ಮಾಡುತ್ತಾ, ಅವರಿಗೆ ಬಂದದ್ದು ತನಗೂ ಬರಬಹುದು ಅಥವಾ ಈಗಾಗಲೇ ಬಂದುಬಿಟ್ಟಿದೆ ಎಂಬ ಭಯಕ್ಕೆ ಒಳಗಾಗುತ್ತಾರೆ. ಅದರಲ್ಲೂ ಆಪ್ತರೋ, ಪರಿಚಿತರೋ ಆಸ್ಪತ್ರೆಗೆ ಸೇರಿದರೆ, ಅಥವಾ ಅಂತಹ ಯಾರದ್ದೋ ಮರಣವಾದರೆ ಭೀತಿ ಮತ್ತಷ್ಟು ಉಲ್ಬಣಿಸುತ್ತದೆ. ಆ ಸಮಯದಲ್ಲಿ ವಿವೇಚನೆ ಕೆಲಸ ಮಾಡುವುದಿಲ್ಲ; ಅತಾರ್ಕಿಕ ಚಿಂತೆಗಳಿಗೆ ದಾರಿಯಾಗುತ್ತದೆ. ವೈದ್ಯರ ಬಳಿಗೆ ಬಂದು, ತಮಗೆ ತಲೆಯಿಂದ ಹಿಡಿದು ಕಾಲಿನವರೆಗೆ ಎಲ್ಲಾ ಪರೀಕ್ಷೆಗಳನ್ನೂ ಮಾಡುವಂತೆ ಆಗ್ರಹ ಮಾಡುತ್ತಾರೆ. ಅಂತಹವರ ಭೀತಿಯನ್ನು ನಗದಿಗೆ ಪರಿವರ್ತಿಸುವ “ಮಾಸ್ಟರ್ ಹೆಲ್ತ್ ಚೆಕ್ ಅಪ್” ಎನ್ನುವ ಯೋಜನೆಗಳೂ ಇವೆ! ಇಂತಹ ಪರೀಕ್ಷೆಗಳಲ್ಲಿ ಯಾವುದೋ ಒಂದು ಅಂಶ ಏರಿಳಿತವಾಗಿದೆ ಎಂದರೆ, ಅದನ್ನು ಹಿಡಿದು ಆತಂಕಿತರಾಗುತ್ತಾರೆ. ಮನಸ್ಸಿನಲ್ಲಿ ಕೆಟ್ಟ ಆಲೋಚನೆಗಳೇ ತುಂಬಿಕೊಳ್ಳುತ್ತವೆ. ಇದರಿಂದ ಸಹಜವಾಗಿಯೇ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ.

ಇದಕ್ಕೆ ಪರಿಹಾರವೇನು? ಮೊದಲನೆಯದಾಗಿ ಪ್ರತಿಯೊಬ್ಬರೂ ತಮ್ಮ ನಂಬಿಕೆಯ ಕುಟುಂಬ ವೈದ್ಯರನ್ನು ಆಯ್ದುಕೊಳ್ಳಬೇಕು. ನೂರಕ್ಕೆ ಎಂಬತ್ತು ಅನಾರೋಗ್ಯಗಳನ್ನು ಅವರು ಸರಿಪಡಿಸಬಲ್ಲರು. ಉಳಿದವಕ್ಕೆ ಯಾರನ್ನು ಕಾಣಬೇಕೆಂಬ ಸರಿಯಾದ ಸಲಹೆ ನೀಡಬಲ್ಲರು. ಜೊತೆಗೆ ಯಾವುದೇ ಅನಗತ್ಯ ಆತಂಕ ಕಾಡದಂತೆ ಧೈರ್ಯ ತುಂಬಿ ಪರಿಸ್ಥಿತಿಯನ್ನು ನಿರ್ವಹಿಸಬಲ್ಲರು. ಇದೊಂದು ರೀತಿ ಅರಿಯದ ಜಾಡಿನಲ್ಲಿ ಪ್ರಯಾಣ ಮಾಡುವಾಗ ದಾರಿಯನ್ನು ಚೆನ್ನಾಗಿ ಬಲ್ಲ ಮಾರ್ಗದರ್ಶಿ ಜೊತೆಗಿದ್ದಂತೆ. ಅಂತಹವರು ತಮ್ಮ ಬೆಂಬಲಕ್ಕೆ ಇದ್ದಾರೆಂಬ ಭಾವನೆಯೇ ಮನಸ್ಸನ್ನು ಹಗುರ ಮಾಡುತ್ತದೆ. ಚಿತ್ತವೆಂಬುದು ಸ್ಥಿಮಿತದಲ್ಲಿ ಇರುವಾಗ ತಪ್ಪು ನಿರ್ಧಾರಗಳ ಸಾಧ್ಯತೆ ಕಡಿಮೆ.

ಎರಡನೆಯದಾಗಿ, ಆರೋಗ್ಯಕ್ಕೆ ಸಂಬಂಧಿಸಿದ ಜಾಲತಾಣಗಳನ್ನು ನೋಡುವಾಗ ಬಹಳ ಎಚ್ಚರ ವಹಿಸಬೇಕು. ಸಾಮಾನ್ಯವಾಗಿ ಗೂಗಲ್ ಜಾಲತಾಣದಲ್ಲಿ ಹುಡುಕುವಾಗ ಬಹುತೇಕ ಮಂದಿ ಒಂದೆರಡು ಪುಟಗಳಿಗಿಂತ ಹೆಚ್ಚು ಮುಂದೆ ಹೋಗುವುದಿಲ್ಲ. ಅನೇಕ ಬಾರಿ ಸರಿಯಾಗಿ ಹುಡುಕಲು ಬಾರದಿದ್ದಾಗ ಸಮಂಜಸ ಮಾಹಿತಿ ನೀಡುವ ಪುಟಗಳು ಮೊದಲು ಕಾಣುವುದಿಲ್ಲ. ಹೀಗಾಗಿ, ತಪ್ಪು ಮಾಹಿತಿಗೆ ಆಹಾರವಾಗುವ ಸಾಧ್ಯತೆಗಳೇ ಹೆಚ್ಚು. ಬಹುತೇಕ ವೈದ್ಯರು ವೈದ್ಯಕೀಯ ಜಾಲತಾಣಗಳ ಬಗ್ಗೆ ಚೆನ್ನಾಗಿ ತಿಳಿದಿರುತ್ತಾರೆ. ರೋಗಿಯ ಆಯಾ ಕಾಯಿಲೆಗೆ ನಿಖರ ಮಾಹಿತಿ ನೀಡಬಲ್ಲ ಜಾಲತಾಣಗಳನ್ನು ಅವರೇ ಸೂಚಿಸಬಲ್ಲರು. ಹೀಗಾಗಿ, ಗೂಗಲ್ ಮಾಡುವುದಕ್ಕಿಂತ ಮೊದಲು ವೈದ್ಯರನ್ನು ಕಾಣುವುದು ಸೂಕ್ತ.

ಒಮ್ಮೆ ಕಾಯಿಲೆಯ ಅಸಹಜ ಭೀತಿ ಗೀಳಿನ ಸ್ವರೂಪ ಪಡೆದರೆ, ಆಗ ಮನೋವೈದ್ಯರ ಸಲಹೆ ಬೇಕಾಗಬಹುದು. ಇದನ್ನು ಕೂಡ ಮುಕ್ತ ಮನಸ್ಸಿನಿಂದಲೇ ಸ್ವೀಕರಿಸಬೇಕು. ಈ ನಿಟ್ಟಿನಲ್ಲಿ ರೋಗಿಗಿಂತಲೂ ಹೆಚ್ಚಾಗಿ ಅವರ ಕುಟುಂಬ ಅಥವಾ ಗೆಳೆಯರು ನಿರ್ಧಾರ ತೆಗೆದುಕೊಳ್ಳಬೇಕು. ಈ ಗೀಳನ್ನು ಯಶಸ್ವಿಯಾಗಿ ಗುಣಪಡಿಸಬಲ್ಲ ವಿಧಾನಗಳಿವೆ.

ಆರೋಗ್ಯ ರಕ್ಷಣೆ ನಮ್ಮ ವೈಯಕ್ತಿಕ ಮತ್ತು ಸಾಮಾಜಿಕ ಜವಾಬ್ದಾರಿ. ಆದರೆ, ಅದು ಅಗತ್ಯಕ್ಕಿಂತ ವಿಪರೀತವೂ ಆಗಬಾರದು. ಜೀವನದ ಇತರ ವಿಷಯಗಳಂತೆ ಇದರಲ್ಲೂ ಒಂದು ಸುವರ್ಣ ಮಧ್ಯಮಾರ್ಗವನ್ನೇ ಅನುಸರಿಸಬೇಕು.

------------------------

ಪ್ರಜಾವಾಣಿ ದಿನಪತ್ರಿಕೆಯ ಕ್ಷೇಮ-ಕುಶಲ ವಿಭಾಗದಲ್ಲಿ ದಿನಾಂಕ 19/7/2022 ರಂದು ಪ್ರಕಟವಾದ ಲೇಖನ. ಕೊಂಡಿ: https://www.prajavani.net/health/worrying-excessively-about-illness-may-become-seriously-ill-955566.html  

ಈ ಲೇಖನದ ಧ್ವನಿ ಮುದ್ರಿತ ಪ್ರತಿ (podcast): https://anchor.fm/prajavani/episodes/ep-e1ldf90/a-a894ti9