ಮಂಗಳವಾರ, ಫೆಬ್ರವರಿ 8, 2022

 

ಮುಂಜಾನೆ ಏಳುವ ಅಭ್ಯಾಸ – ವೈಜ್ಞಾನಿಕ ಹಿನ್ನೆಲೆ

Early to bed and early to rise; Makes a man healthy wealthy and wise ಎನ್ನುವ ಮಾತನ್ನು ಕೇಳಿರುತ್ತೇವೆ. “ವಿದ್ಯುತ್ ದೀಪಗಳು ಇರದಿದ್ದ ಹಳೆಯ ಕಾಲದಲ್ಲಿ ಕತ್ತಲೆ ಆದ ಮೇಲೆ ಹೆಚ್ಚು ಕೆಲಸ ಮಾಡುವ ಅವಕಾಶ ಇರಲಿಲ್ಲ. ಹೀಗಾಗಿ, ರಾತ್ರಿ ಬೇಗ ಮಲಗಿ ಬೆಳಗ್ಗೆ ಬೇಗ ಏಳುವುದು ಅವರಿಗೆ ಕೆಲಸದ ದೃಷ್ಟಿಯಿಂದ ಲಾಭದಾಯಕವಾಗಿತ್ತು. ಹೀಗಾಗಿ ಮುಂಜಾನೆ ಬೇಗ ಏಳುವದನ್ನು ರೂಢಿ ಮಾಡಿಕೊಳ್ಳುವಂತೆ ಹೇಳಲಾಗಿತ್ತು. ಈಗ ಆ ಮಿತಿಗಳು ಇಲ್ಲವಾದ್ದರಿಂದ ಮುಂಜಾನೆ ಬೇಗ ಏಳುವುದು ಅಗತ್ಯವಲ್ಲ. ನಮ್ಮ ಕೆಲಸದ ಅನುಕೂಲಕ್ಕೆ ತಕ್ಕಂತೆ ಯಾವಾಗ ಬೇಕೋ ಆವಾಗ ಸಾಕಷ್ಟು ನಿದ್ರೆ ಮಾಡಿದರಾಯಿತು” ಎನ್ನುವುದು ಆಧುನಿಕರ ವಾದ. The world never sleeps ಎನ್ನುವ, 24 ತಾಸುಗಳೂ ಕೆಲಸ ಮಾಡುವ ಪ್ರಪಂಚದಲ್ಲಿ ಬ್ರಾಹ್ಮಿ ಮುಹೂರ್ತದಲ್ಲಿ ಏಳುವುದು ವೈಜ್ಞಾನಿಕವೇ? ಈ ಬಗ್ಗೆ ಒಂದು ಜಿಜ್ಞಾಸೆ.

ನಿಸರ್ಗಕ್ಕೂ ನಮ್ಮ ದೇಹಕ್ಕೂ ಅಪಾರವಾದ ಹೊಂದಾಣಿಕೆಯಿದೆ. ಪ್ರತಿಯೊಂದು ಜೀವಿಯನ್ನು ವಿಕಸನಗೊಳಿಸುವಾಗಲೂ ನಿಸರ್ಗ ಅದರ ಅಗತ್ಯಗಳನ್ನು ಪರಿಗಣಿಸುತ್ತದೆ; ಅದಕ್ಕೆ ತಕ್ಕಂತೆ ಅಂಗಾಂಗಗಳನ್ನು, ಅವುಗಳ ನಿರ್ವಹಣೆಯನ್ನು ಸೃಜಿಸುತ್ತದೆ. ಜೊತೆಗೆ, ಇದರಲ್ಲಿ ಮಾರ್ಪಾಡಿನ ಸಾಕಷ್ಟು ಸಾಧ್ಯತೆಗಳನ್ನೂ ನೀಡಿರುತ್ತದೆ. ಈ ಕಾರಣಕ್ಕೇ ಸೃಷ್ಟಿಯ ಬಹುತೇಕ ಜೀವಿಗಳು ನಿಸರ್ಗದ ನಿಯಮಗಳಂತೆ ತಮ್ಮ ಜೀವನವನ್ನು ರೂಪಿಸಿಕೊಂಡಿವೆ. ದೈನಂದಿನ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುವುದು ಸೂರ್ಯ. ಜಗತ್ತಿನ ಆಯಾ ಭಾಗದ ಬೆಳಕು ಮತ್ತು ಉಷ್ಣತೆಯ ನಿರ್ವಹಣೆಯಲ್ಲಿ ಸೂರ್ಯನ ಪಾತ್ರ ಅತ್ಯಂತ ಮಹತ್ವದ್ದು. ವಿಕಾಸದ ಪ್ರಕ್ರಿಯೆಯಲ್ಲಿ ಇತರ ಜೀವಿಗಳಂತೆಯೇ ನಿರ್ಮಾಣವಾದ ಮಾನವನಲ್ಲೂ ಸೂರ್ಯನ ಪಾತ್ರ ಹಿರಿದಾದದ್ದು. ನಮ್ಮ ದೇಹದ ಅನೇಕ ಕ್ರಿಯೆಗಳು ಬೆಳಗು-ರಾತ್ರಿಯ ಆವರ್ತನಕ್ಕೆ ಹೊಂದಿಕೊಂಡಿವೆ. ನಿಯಮಿತವಾದ ಕಾಲಾವಧಿಗೆ ನಮ್ಮ ದೇಹವನ್ನು ಸೂರ್ಯರಶ್ಮಿಗೆ ಒಡ್ಡುವುದು ಆರೋಗ್ಯದ ದೃಷ್ಟಿಯಿಂದ ಆವಶ್ಯಕ.

ಈ ಬಗ್ಗೆ ವಿಜ್ಞಾನ ಏನು ಹೇಳುತ್ತದೆ? ಅಮೆರಿಕದ ಮೂರು ಪ್ರಮುಖ ವಿಶ್ವವಿದ್ಯಾಲಯಗಳು ನಡೆಸಿದ ಒಂದು ಬೃಹತ್ ಸಂಶೋಧನೆಯಲ್ಲಿ 8,40,000 ಕ್ಕಿಂತಲೂ ಅಧಿಕ ಜನರನ್ನು ಅವರ ನಿದ್ರೆಯ ಬಗ್ಗೆ ವಿವರವಾಗಿ ಪರೀಕ್ಷಿಸಲಾಯಿತು. ಇಷ್ಟು ಬೃಹತ್ ಪ್ರಮಾಣದ ಅಧ್ಯಯನ ಈವರೆಗೆ ಆಗಿರಲಿಲ್ಲ. ಇದರಲ್ಲಿ ಹಲವಾರು ಕುತೂಹಲಕಾರಿ ಅಂಶಗಳು ಬೆಳಕಿಗೆ ಬಂದವು. ತಡವಾಗಿ ನಿದ್ರೆ ಮಾಡಿ, ತಡವಾಗಿ ಏಳುವವರು ಎಷ್ಟೇ ಕಾಲ ಮಲಗಿದ್ದರೂ ಖಿನ್ನತೆಯಿಂದ ಬಳಲುವುದು ಕಂಡುಬಂದಿತು. ಒಂದು ಹೆಜ್ಜೆ ಮುಂದೆ ಹೋದ ಈ ಅಧ್ಯಯನ, ಈ ಗುಂಪಿನ ಜನರನ್ನು ಒಂದು ತಾಸು ಮೊದಲು ಮಲಗಿಸಿ, ಒಂದು ತಾಸು ಶೀಘ್ರವಾಗಿ ಎಬ್ಬಿಸಿತು. ಅಂದರೆ, ನಿದ್ರೆಯ ಪ್ರಮಾಣ ಒಂದೇ ಇದ್ದರೂ, ಏಳುವ ಸಮಯ ಬೇಗ ಆಗಿತ್ತು. ಕೇವಲ ಈ ಒಂದು ಬದಲಾವಣೆಯಿಂದ ಖಿನ್ನತೆಯ ಪ್ರಮಾಣ ಸಾಕಷ್ಟು ಕಡಿಮೆಯಾಯಿತು. 2018 ರಲ್ಲಿ ಸುಮಾರು 32,000 ದಾದಿಯರನ್ನು ಒಂದು ಅಧ್ಯಯನದಲ್ಲಿ ಪರೀಕ್ಷಿಸಲಾಗಿತ್ತು. ಅವರಲ್ಲಿಯೂ ಬೇಗ ಮಲಗಿ ಬೇಗ ಏಳುವುದರಿಂದ ಖಿನ್ನತೆಯ ಪ್ರಮಾಣ ಸುಮಾರು ಶೇಕಡಾ 27 ಕಡಿಮೆ ಆಗಿತ್ತು.

ಹೀಗೇಕೆ? ಇದಕ್ಕೆ ಕಾರಣಗಳನ್ನು ನಮ್ಮ ಜೀನ್ ಗಳಲ್ಲಿ ಹುಡುಕಬೇಕು. ನಿದ್ರೆಗೆ ಕಾರಣವಾಗುವ ಸುಮಾರು 340 ಜೀನ್ ಗಳನ್ನು ಈಗಾಗಲೇ ಪತ್ತೆ ಮಾಡಲಾಗಿದೆ. ಶೇಕಡಾ 42 ರಷ್ಟು ಜನರ ನಿದ್ರೆಯ ಸಮಯದ ಹಿಂದೆ ಇಂತಹ ಜೀನ್ ಗಳ ಬಲವಾದ ಪ್ರಭಾವವಿದೆ. ಜೀವ ವಿಕಾಸದ ಹಾದಿಯಲ್ಲಿ ನಮ್ಮ ಜೀನ್ ಗಳು ಸೂರ್ಯನ ಬೆಳಕಿನ ಪ್ರಮಾಣವನ್ನೇ ಅನುಸರಿಸಿವೆ. ನಿದ್ರೆಯ ಮೇಲೆ ನೇರ ಪರಿಣಾಮ ಬೀರುವ, ನಮ್ಮ ದೇಹದ ಪೀನಿಯಲ್ ಗ್ರಂಥಿಯಲ್ಲಿ ಬಿಡುಗಡೆಯಾಗುವ ಮೆಲಟೊನಿನ್ ಎಂಬ ಚೋದಕ ಬೆಳಕಿನ ಪ್ರಮಾಣವನ್ನು ಅನುಸರಿಸುತ್ತದೆ. ಅದು ಕೇವಲ ಕತ್ತಲೆಯಲ್ಲಿ ಬಿಡುಗಡೆಯಾಗುವ ಚೋದಕ. ದೇಹದ ಇತರ ಹಲವಾರು ರಾಸಾಯನಿಕಗಳಂತೆ ಇದು ಕೂಡ ಸಮಯಾನುಸಾರಿ, ಬೆಳಕಿನ ಆಜ್ಞಾವರ್ತಿ. ಸಹಜವಾಗಿ ಇದರ ಕೆಲಸದ ಹಿನ್ನೆಲೆಯಲ್ಲಿ ಜೀನ್ ಗಳ ಪ್ರಮುಖ ಪಾತ್ರವಿದೆ. ಇವೆಲ್ಲಾ ಜೀವವಿಕಾಸದ ಹಾದಿಯಲ್ಲಿ ಕಾಲಕ್ರಮೇಣ ಬಹಳ ನಿಧಾನವಾಗಿ ರೂಪುಗೊಂಡ ಪ್ರಕ್ರಿಯೆಗಳು. ಇವನ್ನು ಏಕಾಏಕಿ ಬದಲಾಯಿಸಲಾಗದು. ಈ ಜೀನ್ ಗಳ ಕೆಲಸವನ್ನು ಅನುಸರಿಸಿ ಮತ್ತೂ ಅನೇಕ ಜೀನ್ ಗಳು ತಮ್ಮ ಕೆಲಸ ನಿರ್ವಹಸುತ್ತವೆ. ಈ ಸರಣಿಯಲ್ಲಿ ಒಂದು ಪ್ರಕ್ರಿಯೆ ಬದಲಾದರೆ, ಅದರ ಮೇಲೆ ಅವಲಂಬಿತವಾದ ಅನೇಕ ಕಾರ್ಯಗಳು ಹದ ತಪ್ಪುತ್ತವೆ. ಈ ಇಡೀ ಸರಣಿಯ ಸಂಪೂರ್ಣ ಜ್ಞಾನ ನಮಗೆ ಇನ್ನೂ ಇಲ್ಲವಾದ್ದರಿಂದ ಯಾವ ವ್ಯಕ್ತಿಯಲ್ಲಿ ಯಾವ ನಿರ್ದಿಷ್ಟ ಬದಲಾವಣೆಗಳು ಆಗುತ್ತವೆ ಎಂಬುದನ್ನು ನಿರ್ಧರಿಸಲಾಗದು. ಒಟ್ಟಾರೆ, ಇದು ಅನೇಕ ದೈಹಿಕ ವೈಪರೀತ್ಯಗಳಿಗೆ ಕಾರಣವಾಗುತ್ತವೆ ಎಂಬುದನ್ನು ಮಾತ್ರ ಖಚಿತವಾಗಿ ಹೇಳಬಹುದು.

ಇದರ ಅರ್ಥವೇನು? ಮುಂಜಾನೆ ಬೇಗನೆ ಏಳುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು ಎಂದೇ? “ಖಚಿತವಾಗಿ ಹೌದು” ಎನ್ನುತ್ತಾರೆ ವಿಜ್ಞಾನಿಗಳು. ಮುಂಜಾನೆ ಬೇಗನೆ ಏಳುವುದರಿಂದ ದೈಹಿಕ, ಮಾನಸಿಕ ಆರೋಗ್ಯಗಳು ಸುಧಾರಿಸುತ್ತವೆ ಎಂಬುದನ್ನು ಸ್ಪಷ್ಟವಾಗಿ ನಿರೂಪಿಸಲಾಗಿದೆ.  ಇದೇ ಅಲ್ಲದೆ, ನೋಟಕ್ಕೆ ಕಾಣದ ಅನೇಕ ಸುಧಾರಣೆಗಳೂ ನಮ್ಮ ದೇಹದಲ್ಲಿ ಆಗುತ್ತವೆ ಎಂದು ಅವರ ಅಂದಾಜು. ಇದರ ಬಗೆ ಇನ್ನೂ ನಿಖರವಾದ ಸಂಶೋಧನೆಗಳು ನಡೆದರೆ ಈ ವಿವರಗಳು ಮತ್ತಷ್ಟು ಬಲಗೊಳ್ಳುತ್ತದೆ ಎಂದು ಅವರ ಅಭಿಪ್ರಾಯ.

“ನಿಮ್ಮ ಹಗಲನ್ನು ಮತ್ತಷ್ಟು ಬೆಳಗಾಗಿಸಿ; ನಿಮ್ಮ ರಾತ್ರಿಯನ್ನು ಇನ್ನಷ್ಟು ಕತ್ತಲಾಗಿಸಿ; ಸೂರ್ಯರಶ್ಮಿಗೆ ಮೈ ಒಡ್ಡುವಂತೆ ನಿಮ್ಮ ಕೆಲಸಕ್ಕೆ ನಡೆದೋ ಅಥವಾ ಬೈಸಿಕಲ್ ಸವಾರಿ ಮಾಡುತ್ತಲೋ ಹೋಗಿ; ಸಂಜೆ ಆಗುತ್ತಿದ್ದಂತೆ ನಿಮ್ಮ ಎಲೆಕ್ಟ್ರಾನಿಕ್ ಸಲಕರಣೆಗಳ ಬೆಳಕನ್ನು ಮಂದವಾಗಿಸಿ” ಎಂಬುದು ವಿಜ್ಞಾನಿಗಳ ಸಲಹೆ. ಇದನ್ನೇ ನಮ್ಮ ಹಿರಿಯರು “ಬ್ರಾಹ್ಮಿ ಮುಹೂರ್ತಕ್ಕೆ ಎದ್ದು, ಸೂರ್ಯನಿಗೆ ನಮನ ಸಲ್ಲಿಸಿ. ನಿಷ್ಠೆಯಿಂದ ಕೆಲಸ ಮಾಡಿರಿ. ಸಂಜೆಯ ನಂತರ ಮಲಗಿ ಸಾಕಷ್ಟು ಕಾಲ ನಿದ್ರಿಸಿರಿ” ಎಂದು ಹೇಳಿದ್ದರು.

ಒಳ್ಳೆಯ ಪದ್ದತಿಗಳು ವಿಜ್ಞಾನದ ಸಹಾಯದಿಂದ ಆವರ್ತನಗೊಂಡು ಮತ್ತಷ್ಟು ಹೊಳಪಿನಿಂದ ಹಿಂದಿರುಗುತ್ತವೆ!

----------------------

 ಡಿಸೆಂಬರ್ 2021 ರ 'ಸೂತ್ರ' ವಿಜ್ಞಾನ ಮಾಸಪತ್ರಿಕೆಯಲ್ಲಿ ಪ್ರಕಟವಾದ ಲೇಖನ 







 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ