ಮಂಗಳವಾರ, ಫೆಬ್ರವರಿ 8, 2022

 

ನಾವು ಕುಡಿಯಬೇಕಾದ ನೀರು – ಎಷ್ಟು? ಯಾವಾಗ? ಹೇಗೆ?


“ಬುದ್ಧಿವಂತರ ಪೇಯ ಯಾವುದು?” ಎನ್ನುವ ಪ್ರಶ್ನೆಗೆ ಉತ್ತರ: ನೀರು. “ವಯಸ್ಕ ವ್ಯಕ್ತಿ ದಿನಕ್ಕೆ ಎಂಟು ಲೋಟ ನೀರು ಕುಡಿಯಬೇಕು” ಎನ್ನುವ ಮಾತನ್ನು ಕೇಳಿರುತ್ತೇವೆ. ಆದರೆ, ನೀರನ್ನು ಯಾವ ಸಮಯದಲ್ಲಿ ಕುಡಿಯಬೇಕು ಎನ್ನುವ ಜಿಜ್ಞಾಸೆಗೆ ಸಮಂಜಸವಾದ ಉತ್ತರವನ್ನು ಹೆಚ್ಚು ಮಂದಿ ನೀಡಲಾರರು. “ದಾಹವಾದಾಗ ನೀರು ಕುಡಿಯಬೇಕು” ಎನ್ನುವ ನೇರ ತರ್ಕ ಸರಿಯೇ ಎಂಬ ಅನುಮಾನ ಹಲವರಲ್ಲಿದೆ. “ಊಟಕ್ಕೆ ಮುನ್ನ ನೀರು ಕುಡಿಯಬೇಕೇ ಅಥವಾ ಊಟದ ನಂತರವೇ?” ಎನ್ನುವ ಸರಳ ಪ್ರಶ್ನೆಗೆ ಬರುವ ಉತ್ತರಗಳು ಕೂಡ ಗೊಂದಲ ಮೂಡಿಸುತ್ತವೆ. ಈ ಬಗ್ಗೆ ವಿಜ್ಞಾನ ಏನು ಹೇಳುತ್ತದೆ?

ನಮ್ಮ ದೇಹದ ಬಹುಭಾಗ ನೀರು. “ಭೂಮಿಯ ಶೇಕಡಾ 66 ನೀರು; ಅಂತೆಯೇ, ದೇಹದ 66 ಪ್ರತಿಶತ ನೀರು” ಎನ್ನುವ ಚಮತ್ಕಾರದ ಮಾತಿದೆ. ಸುಮಾರು 70 ಕಿಲೋಗ್ರಾಂ ತೂಗುವ ವ್ಯಕ್ತಿಯ ಶರೀರದ ಸುಮಾರು 40-45 ಕಿಲೋಗ್ರಾಂ ನೀರು ಎಂದು ಅಂದಾಜಿಸಬಹುದು. ಸಣ್ಣ ಮಕ್ಕಳ ದೇಹದಲ್ಲಿ ಈ ನೀರಿನ ಪ್ರತಿಶತ ಪ್ರಮಾಣ ಅಧಿಕ; ವಯಸ್ಕರಲ್ಲಿ ಸ್ವಲ್ಪ ಕಡಿಮೆ. ಶರೀರದ ನೀರಿನ ಅಂಶ ಬಹುಮಟ್ಟಿಗೆ ಪುನರ್ಬಳಕೆಯಾಗುತ್ತದೆ. ಮೂತ್ರ, ಬೆವರು, ಶ್ವಾಸದ ಆರ್ದ್ರತೆ, ಮತ್ತು ವಾತಾವರಣದ ಉಷ್ಣತೆಗೆ ಚರ್ಮದಿಂದ ಆವಿಯಾಗುವ ನೀರಿನ ಪ್ರಮಾಣವನ್ನು ನಾವು ಶರೀರಕ್ಕೆ ಮತ್ತೆ ನೀಡಬೇಕು. ಇದಕ್ಕಾಗಿಯೇ ದಿನವೊಂದಕ್ಕೆ ಸುಮಾರು ಒಂದೂವರೆ ಲೀಟರ್ ನೀರನ್ನು ಕುಡಿಯುವ ಅಗತ್ಯವಿದೆ. ಈ ಪ್ರಮಾಣ ಪ್ರತಿಯೊಬ್ಬರಿಗೂ ಒಂದೇ ಅಲ್ಲ. ಹೆಚ್ಚು ಶ್ರಮದ ಕೆಲಸ ಮಾಡುವವರಿಗೆ, ರೋಗಿಗಳಿಗೆ, ಹಾರ್ಮೋನ್ ವ್ಯತ್ಯಯ ಇರುವವರಿಗೆ, ಚಯಾಪಚಯ ಕ್ರಿಯೆಗಳು ಅಧಿಕ ಮಟ್ಟದಲ್ಲಿ ಉಳ್ಳವರಿಗೆ ನೀರಿನ ಅಗತ್ಯ ಹೆಚ್ಚಾಗಿರುತ್ತದೆ. ಇದೇ ಅಲ್ಲದೆ, ನಾವು ಸೇವಿಸುವ ಆಹಾರದಲ್ಲೂ ನೀರಿನ ಅಂಶ ಇರುತ್ತದೆ.

ರಾತ್ರಿ ನಿದ್ರೆಯ ವೇಳೆ ಶರೀರ ಸಾಕಷ್ಟು ನೀರಿನ ಅಂಶವನ್ನು ಕಳೆದುಕೊಳ್ಳುತ್ತದೆ. ಹೀಗಾಗಿ, ಮುಂಜಾನೆ ಬೇರೆ ಯಾವುದೇ ಪೇಯಗಳಿಗೆ ಮೊದಲು ಒಂದು ಲೋಟ ಬೆಚ್ಚಗಿನ ನೀರನ್ನು ಸೇವಿಸುವುದು ಸೂಕ್ತ. ಜೀರ್ಣಾಂಗ ವ್ಯವಸ್ಥೆ ಬೆಳಗ್ಗೆ ಚೇತರಿಸಿಕೊಳ್ಳಲು ಬೇರೆ ಯಾವುದೇ ಪೇಯಗಳಿಗಿಂತ ನೀರಿನ ಸೇವನೆ ಉತ್ತಮ ವಿಧಾನ.

ವ್ಯಾಯಾಮ ನಮ್ಮ ದೈನಂದಿನ ಅಗತ್ಯ. ಹಿತಮಿತವಾದ ವ್ಯಾಯಾಮ ಮೈ-ಮನಸ್ಸುಗಳಿಗೆ ಉಲ್ಲಾಸ ನೀಡುತ್ತದೆ. ಶರೀರದ ಪ್ರತಿಯೊಂದು ಅಂಗವೂ ವ್ಯಾಯಮಕ್ಕೆ ಸ್ಪಂದಿಸುತ್ತದೆ. ವ್ಯಾಯಮದ ವೇಳೆ ಶರೀರ ಬಾಷ್ಪ ಮತ್ತು ಬೆವರಿನ ರೂಪದಲ್ಲಿ ನೀರನ್ನು ಕಳೆದುಕೊಳ್ಳುತ್ತದೆ. ಹೀಗಾಗಿ, ವ್ಯಾಯಮದ ಮುನ್ನ ಶರೀರದಲ್ಲಿ ನೀರಿನ ಅಂಶ ಕಡಿಮೆ ಇದ್ದರೆ ಬೇಗನೆ ಸುಸ್ತಾಗುತ್ತದೆ. ಸಾಧಾರಣ ವ್ಯಾಯಾಮ ಮಾಡುವವರು ಸುಮಾರು 30 ನಿಮಿಷಗಳ ಮುನ್ನ ಒಂದು ಲೋಟ ಬೆಚ್ಚಗಿನ ನೀರು ಕುಡಿಯುವುದು ಸೂಕ್ತ. ವ್ಯಾಯಮದ ವೇಳೆ ಶರೀರದಲ್ಲಿ ಉಂಟಾಗುವ ಅಧಿಕ ತಾಪವನ್ನು ಈ ನೀರು ನಿಯಂತ್ರಿಸುತ್ತದೆ. ಆದರೆ, ತೀವ್ರವಾದ ವ್ಯಾಯಾಮ ಮಾಡುವ ಕ್ರೀಡಾಪಟುಗಳು ಸೇವಿಸಬೇಕಾದ ನೀರಿನ ಪ್ರಮಾಣ ಹೆಚ್ಚಾಗಿರಬೇಕು. ಅಂತಹವರು ಈ ಕುರಿತಾಗಿ ತಜ್ಞರ ಸಲಹೆ ಪಡೆಯುವುದು ಒಳಿತು.

ವ್ಯಾಯಮದ ನಂತರವೂ ನೀರನ್ನು ಸೇವಿಸುವುದು ಅಗತ್ಯ. ಶರೀರ ಶ್ರಮದ ವೇಳೆ ಸಾಕಷ್ಟು ಬೆವರು ಹರಿಯುತ್ತದೆ. ಹೆಚ್ಚು ಕಾಲ ವ್ಯಾಯಾಮ ಮಾಡಿದಾಗ ಶರೀರ ನಿರ್ಜಲೀಕರಣ ಅನುಭವಿಸುತ್ತದೆ. ಹೀಗಾಗಿ, ಅಧಿಕ ಕಾಲ ವ್ಯಾಯಾಮ ಮಾಡುವವರು (ಉದಾಹರಣೆಗೆ, ಮ್ಯಾರಥಾನ್ ಓಟಗಾರರು) ವ್ಯಾಯಾಮದ ವೇಳೆಯಲ್ಲೇ ತುಸು ತುಸು ನೀರನ್ನು ಕುಡಿಯುತ್ತಿರಬೇಕು. ವ್ಯಾಯಾಮ ಮುಗಿದ ನಂತರ ಅರ್ಧ ಗಂಟೆಯ ಸುಮಾರಿಗೆ ಒಂದು ಲೋಟ ನೀರನ್ನು ಕುಡಿಯಬೇಕು. ಬೆವರಿನ ಜೊತೆಗೆ ಲವಣಗಳೂ ಹೊರಹೋಗುತ್ತವೆ. ಈ ಅಗತ್ಯ ಲವಣಗಳನ್ನು ಪುನಃ ಶರೀರಕ್ಕೆ ಸೇರಿಸುವುದು ಸೂಕ್ತ. ಸಮತೋಲಿತ ಆಹಾರದ ಜೊತೆಗೆ ಈ ಲವಣಗಳು ಶರೀರವನ್ನು ಸೇರುತ್ತವೆ. ಎಳೆನೀರಿನಂತಹ ನೈಸರ್ಗಿಕ ಪಾನೀಯಗಳು ಈ ನಿಟ್ಟಿನಲ್ಲಿ ಸಹಾಯಕ.

ಶರೀರದ ಚಯಾಪಚಯಗಳಿಂದ ಸದಾ ಕಾಲ ನೀರು ಬಾಷ್ಪವಾಗುತ್ತಲೆ ಇರುತ್ತದೆ. ಈ ನೀರಿನ ಅಂಶ ಒಂದು ಹಂತಕ್ಕಿಂತ ಕಡಿಮೆಯಾದಾಗ ನಮ್ಮ ಮಿದುಳು ಅದನ್ನು ದಾಹ ಎಂದು ಗುರುತಿಸುತ್ತದೆ. ಆಗ ನೀರು ಕುಡಿಯುವ ಬಯಕೆ ಕಾಡುತ್ತದೆ. ಅಂದರೆ, ನೀರಡಿಕೆ ಎಂಬುದು ನಮ್ಮ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿದೆ ಎಂದು ನಮ್ಮ ಮಿದುಳು ನೀಡುವ ಸಂಕೇತ. ಈ ಸೂಚನೆಯನ್ನು ಅವಗಣಿಸಿದರೆ, ಅಥವಾ ನೀರಿನ ಬದಲಿಗೆ ಸಕ್ಕರೆಯುಕ್ತ ಪೇಯಗಳನ್ನು ಸೇವಿಸಿದರೆ, ನೀರಡಿಕೆ ತಾತ್ಕಾಲಿಕವಾಗಿ ಇಂಗುತ್ತದೆ. ಸಕ್ಕರೆಯುಕ್ತ ಪಾನೀಯಗಳು ಮೂತ್ರಪಿಂಡಗಳ ಮೂಲಕ ಹೆಚ್ಚು ನೀರನ್ನು ಸೋಸಿ, ಇನ್ನಷ್ಟು ನೀರನ್ನು ಮೂತ್ರದಲ್ಲಿ ಹೊರಹಾಕುತ್ತವೆ. ಇಂತಹ ಪಾನೀಯಗಳ ಜೊತೆಗೆ ಸೇವಿಸಿದ ನೀರಿಗಿಂತ ಶರೀರ ಹೊರಹಾಕುವ ನೀರಿನ ಅಂಶವೇ ಅಧಿಕ. ಅದರಿಂದ ಸುಸ್ತು, ನಿತ್ರಾಣದಂತಹ ಲಕ್ಷಣಗಳು ಕಾಣಬಹುದು. ಹೀಗಾಗಿ, ದಾಹವಾದಾಗ ಮೊದಲು ಸಾಕಷ್ಟು ನೀರು ಕುಡಿಯುವುದು ಸರಿಯಾದ ಪದ್ದತಿ.

ಊಟದ ಅರ್ಧ ಗಂಟೆ ಮುನ್ನ ಒಂದು ಲೋಟ ನೀರು ಕುಡಿಯುವುದು ಒಳ್ಳೆಯದು. ಇದು ಇಡೀ ಜೀರ್ಣಾಂಗ ವ್ಯವಸ್ಥೆಯನ್ನು ಉತ್ತೇಜಿಸುತ್ತದೆ. ಊಟದ ಸಮಯದಲ್ಲಿ ಆಹಾರದ ಜೊತೆಗೆ ತುಸು ನೀರನ್ನು ಕುಡಿಯಬಹುದು. ಆದರೆ, ಇದರ ಪ್ರಮಾಣ ಅತಿಯಾಗಬಾರದು. ಅಂತೆಯೇ, ಊಟದ ನಂತರ ಕೂಡಲೆ ಬಹಳ ನೀರು ಕುಡಿಯುವುದು ಜೀರ್ಣರಸಗಳನ್ನು ತೆಳುವಾಗಿಸಿ, ಸಾರಗುಂದಿಸುತ್ತವೆ; ಪಚನ ಕ್ರಿಯೆ ದುರ್ಬಲವಾಗುತ್ತದೆ. ಹೀಗಾಗಿ, ಊಟ ಮುಗಿಸಿದ ಕನಿಷ್ಠ ಅರ್ಧಗಂಟೆಯ ನಂತರ ಒಂದು ಲೋಟ ನೀರು ಕುಡಿಯುವುದು ಪಚನ ಕ್ರಿಯೆಗೆ ಸಹಕಾರಿ.

ಇತರ ವೇಳೆಯಲ್ಲಿ ಅವಕಾಶ ದೊರೆತಾಗಲೆಲ್ಲ ಸ್ವಲ್ಪ ಸ್ವಲ್ಪ ನೀರು ಕುಡಿಯುತ್ತಿರುವುದು ಒಳಿತು. ನಾವು ವಾಸ ಮಾಡುವ ವಾತಾವರಣ, ನಮ್ಮ ಕೆಲಸದ ಪ್ರಮಾಣ, ನಮ್ಮ ಶರೀರದ ಅಗತ್ಯಗಳಿಗೆ ತಕ್ಕಷ್ಟು ನೀರನ್ನು ಸೇವಿಸುವುದು ಬಹಳ ಮುಖ್ಯ. ನಿರ್ಜಲೀಕರಣ ಅನೇಕ ಕಾಯಿಲೆಗಳಿಗೆ ರಹದಾರಿ. ನೀರು ಜೀವನಾಧಾರ. ದೇಹದಲ್ಲಿನ ನೀರಿನ ಅಂಶವನ್ನು ಸರಿಯಾದ ಮಟ್ಟದಲ್ಲಿ ಕಾಯ್ದುಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಅತ್ಯಗತ್ಯ. ಶರೀರವನ್ನು ಪುನಶ್ಚೇತನಗೊಳಿಸಲು ನೀರಿಗಿಂತ ಮಿಗಿಲಾದ ಪೇಯ ಮತ್ತೊಂದಿಲ್ಲ.

--------------

ಜನವರಿ 2022 ರ "ಸೂತ್ರ" ವಿಜ್ಞಾನ ಮಾಸಪತ್ರಿಕೆಯಲ್ಲಿ ಪ್ರಕಟವಾದ ಲೇಖನ





ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ