ಮಂಗಳವಾರ, ಫೆಬ್ರವರಿ 8, 2022

 

ಕೋವಿಡ್ ನಂತರದ ಸುಸ್ತು – ಪರಿಹಾರಗಳೇನು?

“ಈಚೆಗೆ ಕೋವಿಡ್ ಹೊಸ ತಳಿಯ ಸೋಂಕು ಉಂಟಾಯಿತು. ಪುಣ್ಯಕ್ಕೆ ಆಸ್ಪತ್ರೆಗೆ ದಾಖಲಾಗುವ ಪರಿಸ್ಥಿತಿ ಬರಲಿಲ್ಲ. ಒಂದು ವಾರದೊಳಗೆ ಜ್ವರ ನಿಂತು, ಚೇತರಿಸಿಕೊಂಡೆ. ಆದರೆ, ಸುಸ್ತು ಮಾತ್ರ ಹಾಗೆಯೇ ಇದೆ. ಸಂಜೆ ನಾಲ್ಕು ಗಂಟೆ ಸುಮಾರಿಗೆ ಸ್ವಲ್ಪ ನಿದ್ರೆ ಮಾಡೋಣವೆನಿಸುತ್ತದೆ. ಮೊದಲಿನ ಹಾಗೆ ಚುರುಕಿಲ್ಲ. ಇದಿನ್ನೂ ಎಷ್ಟು ಕಾಲ ಇರುತ್ತದೆ?” ಎನ್ನುವ ಮಾತುಗಳು ಆಗಾಗ ಕೇಳಿಬರುತ್ತವೆ. ಕೋವಿಡ್ ಚೇತರಿಕೆಯ ನಂತರ ಈ ಸುಸ್ತು ಏಕಾಗುತ್ತಿದೆ? ಇದಕ್ಕೆ ಪರಿಹಾರಗಳೇನು? ಎಂಬ ಪ್ರಶ್ನೆಗಳಿಗೆ ಉತ್ತರಗಳ ಹುಡುಕಾಟ ನಡೆಯುತ್ತಿದೆ.

ಕೋವಿಡ್ ಕಾಯಿಲೆಗೆ ತುತ್ತಾದವರ ಪೈಕಿ ಅರ್ಧಕ್ಕಿಂತ ಹೆಚ್ಚು ಮಂದಿಗೆ ಚೇತರಿಕೆಯ ನಂತರವೂ ಸುಸ್ತಿನ ಲಕ್ಷಣಗಳು ಕಾಣುತ್ತವೆ. ಇಂತಹ ಬಹುತೇಕ ಮಂದಿ ಸುಮಾರು ಮೂರು ವಾರಗಳಲ್ಲಿ ಸಂಪೂರ್ಣವಾಗಿ ಗುಣ ಹೊಂದುತ್ತಾರೆ. ಆದರೆ, ತೀವ್ರ ಕಾಯಿಲೆಗೆ ತುತ್ತಾದ ಕೆಲವರಲ್ಲಿ ಈ ಸುಸ್ತು ದೀರ್ಘಕಾಲಿಕ ಸಮಸ್ಯೆಯಾಗಿ ಕಾಡುತ್ತದೆ. ಕೋವಿಡ್-19 ಮನುಷ್ಯರ ಪಾಲಿಗೆ ಹೊಚ್ಚಹೊಸ ಕಾಯಿಲೆ. ನಮ್ಮ ಶರೀರಕ್ಕೆ ಇದನ್ನು ನಿರ್ವಹಿಸುವ ಕಲೆ ಇನ್ನೂ ಸಂಪೂರ್ಣವಾಗಿ ಸಿದ್ಧಿಸಿಲ್ಲ. ಹೀಗಾಗಿ, ಇದರ ವಿರುದ್ಧ ಸೆಣಸಲು ಶರೀರ ನಡೆಸುವ ಸಿದ್ಧತೆಯ ಭಾಗವಾಗಿ ಸುಸ್ತು ಕಾಣಬಹುದು. ಜೊತೆಗೆ, ಕೋವಿಡ್-ಪೂರ್ವದಲ್ಲಿ ಇದ್ದ ವೈಯಕ್ತಿಕ ಆರೋಗ್ಯ ಪರಿಸ್ಥಿತಿ, ಶಾರೀರಿಕ ವ್ಯಾಯಾಮ, ವಿಶ್ರಾಂತಿಯ ಅನುಕೂಲತೆ, ನಿದ್ರೆ, ಕೆಲಸದ ಒತ್ತಡಗಳು, ಸಾಮಾಜಿಕ ಜವಾಬ್ದಾರಿಗಳು, ಕೌಟುಂಬಿಕ ಸಮಸ್ಯೆಗಳು, ಆತಂಕ – ಇವುಗಳೆಲ್ಲವೂ ಆರೋಗ್ಯದ ಪುನಶ್ಚೇತನದಲ್ಲಿ ಪಾತ್ರ ವಹಿಸುತ್ತವೆ.

ಕೋವಿಡ್ ನಂತರದ ಸುಸ್ತನ್ನು ನಿರ್ವಹಿಸುವುದು ಹೇಗೆ? ಈ ಸುಸ್ತು ವಾಸ್ತವ ಎಂಬ ಸತ್ಯವನ್ನು ಮನಗಾಣಬೇಕು. ಅನೇಕ ವೈರಸ್ ಸೋಂಕುಗಳು ಇಂತಹ ಸುಸ್ತನ್ನು ಉಂಟುಮಾಡುತ್ತವೆ. ಅದೇ ರೀತಿಯಲ್ಲಿ ಪ್ರಸ್ತುತ ಕೋವಿಡ್ ಕೂಡ. ಇದರಿಂದ ಸುಧಾರಿಸಿಕೊಳ್ಳಲು ಮೈ-ಮನಸ್ಸುಗಳಿಗೆ ವಿಶ್ರಾಂತಿ ಬೇಕಾಗುತ್ತದೆ. ಹೀಗಾಗಿ, ತೀರಾ ಒತ್ತಡದ, ಶ್ರಮ ಬಯಸುವ ಕೆಲಸಗಳನ್ನು ಮುಂದೂಡಬೇಕು. ಸಾಕಷ್ಟು ನಿದ್ರೆ, ವಿಶ್ರಾಂತಿಗಳ ಮೂಲಕ ಚೇತರಿಕೆಗೆ ಅವಕಾಶ ನೀಡಬೇಕು.

ಸುಸ್ತಿನ ವೇಳೆ ತೀವ್ರತರವಾದ ವ್ಯಾಯಾಮ ಸಲ್ಲದು. ಸರಳವಾದ ಯೋಗ, ಪ್ರಾಣಾಯಾಮ, ಒಳ್ಳೆಯ ಕೃತಿಗಳ ಓದು, ಧ್ಯಾನಗಳು ದೇಹದ ಚೇತರಿಕೆಯ ಅಗತ್ಯಗಳಿಗೆ ಪೂರಕವಾಗುತ್ತವೆ. ದೈನಂದಿನ ಸ್ನಾನದಿಂದ ಮಾಂಸಖಂಡಗಳ ಸೆಡವು ಕಡಿಮೆಯಾಗುತ್ತದೆ; ವಿಶ್ರಾಂತಿಗೆ ಬೇಕಾದ ಹಿನ್ನೆಲೆ ದೊರೆಯುತ್ತದೆ. ಶರೀರಕ್ಕೆ ಸಾಮಾನ್ಯವಾಗಿ ಅಗತ್ಯವಿರುವ ಚಟುವಟಿಕೆಗಳನ್ನು ತಪ್ಪದೇ ಮಾಡುವುದು ಸರಿಯಾದ ವಿಧಾನ. ಇದನ್ನು ಕ್ರಮೇಣ, ಹಂತಹಂತವಾಗಿ ಹೆಚ್ಚಿಸುತ್ತಾ ಹೋಗಬೇಕು. ಸಮತೋಲಿತ ಆಹಾರ, ಸಾಕಷ್ಟು ನೀರಿನ ಸೇವನೆ ಮುಖ್ಯ.   

ದಿನನಿತ್ಯದಲ್ಲಿ ನಮಗೆ ತಿಳಿಯದಂತೆಯೇ ಸಾಕಷ್ಟು ಸಂಕೀರ್ಣವಾದ ಕೆಲಸಗಳನ್ನು ಮಾಡುತ್ತಿರುತ್ತೇವೆ. ಇದರ ಅರಿವು ಮೂಡುವುದು ಸುಸ್ತಿನ ಸ್ಥಿತಿಯಲ್ಲಿಯೇ. ಇಂತಹ ಸಂಕೀರ್ಣ ಕೆಲಸಗಳನ್ನು ಘಟಕಗಳಾಗಿ ವಿಂಗಡಿಸಿ, ಒಂದೊಂದಾಗಿ ಮಾಡಬೇಕು. ಉದಾಹರಣೆಗೆ, ಮೆಟ್ಟಿಲು ಹತ್ತಬೇಕಾದಾಗ ಬದಿಯಲ್ಲಿರುವ ಆಸರೆಯನ್ನು ಬಳಸಿಕೊಳ್ಳಬೇಕು; ಕೆಲವು ಮೆಟ್ಟಿಲುಗಳನ್ನು ಹತ್ತಿದ ನಂತರ ಒಂದೆಡೆ ನಿಂತು, ಹತ್ತಾರು ಬಾರಿ ದೀರ್ಘವಾಗಿ ಉಸಿರಾಡಿ, ನಂತರ ಮುಂದುವರೆಯಬೇಕು; ಒಮ್ಮೆಗೇ ಎರಡು-ಮೂರು ಮಹಡಿ ಹತ್ತಬೇಕಾದ ಸಂದರ್ಭದಲ್ಲಿ ಪ್ರತಿಯೊಂದು ಹಂತದಲ್ಲಿಯೂ ಸ್ವಲ್ಪ ಕಾಲ ತಡೆಯುವುದು ಸೂಕ್ತ. ಹೀಗೆ, ಒಂದು ಸಂಕೀರ್ಣ ಕೆಲಸವನ್ನು ಅನೇಕ ಭಾಗಗಳಾಗಿ ವಿಂಗಡಿಸಿ ಮಾಡುವುದರಿಂದ ಆಯಾಸ ಕಡಿಮೆಯಾಗುತ್ತದೆ.    

ಸುಸ್ತು ಎನ್ನುವುದು ಕೇವಲ ಶರೀರದ ಭೌತಿಕ ಕ್ರಿಯೆಗಳ ಪರಿಣಾಮ ಮಾತ್ರವಲ್ಲ; ಅದು ಮಾನಸಿಕ ಸ್ಥಿತಿಗೂ ಸಂಬಂಧಿಸಿದ್ದು. “ಮುಂದೇನಾಗುವುದೋ” ಎಂಬ ಆಲೋಚನೆಯೇ ಹಲವರಲ್ಲಿ ಸುಸ್ತಿನ ಲಕ್ಷಣಗಳನ್ನು ಕಾಣಿಸುತ್ತದೆ. ಹೀಗಾಗಿ, ಆಯಾ ದಿನದ ಚಟುವಟಿಕೆಗಳನ್ನು ಸಾಧ್ಯವಾದಷ್ಟೂ ಯೋಜಿಸಿಕೊಳ್ಳಬೇಕು. ಯಾವ ಕೆಲಸಗಳನ್ನು ಕುಟುಂಬದ ಅಥವಾ ಕಛೇರಿಯ ಇತರರು ಮಾಡಬಹುದೋ, ಅದನ್ನು ಅವರಿಗೆ ವಹಿಸಬೇಕು. ತೀರಾ ಅಗತ್ಯ ಅನಿಸಿದ ಕೆಲಸಗಳನ್ನು ಮಾತ್ರ ಪ್ರಾಮುಖ್ಯತೆಗೆ ಅನುಸಾರವಾಗಿ ಮಾಡಬೇಕು. ಸಾಮಾನ್ಯ ದಿನಚರಿಯ ಧಾಂ-ಧೂಂ ಮಾದರಿಯ ಕೆಲಸಗಳನ್ನು ದೂರವಿಡಬೇಕು. ಎಲ್ಲೆಲ್ಲಿ ಭೌತಿಕ ಶ್ರಮದ ಅಗತ್ಯವಿಲ್ಲವೋ, ಅಲ್ಲಿ ಅದನ್ನು ಮಾಡದಿರುವುದೇ ಲೇಸು. ಆಯಾ ದಿನ ಮಾಡಿದ ಕೆಲಸಗಳನ್ನು ಒಂದೆಡೆ ನಮೂದಿಸುವುದು ಒಳಿತು. ಇದರಿಂದ ಯಾವ ಕೆಲಸ ಶ್ರಮದಾಯಕ; ಯಾವ ಕೆಲಸವನ್ನು ಇತರರಿಗೆ ವಹಿಸಬಹುದು; ಎಷ್ಟು ಶ್ರಮ ಸಹಿಸಲು ನಮಗೆ ಸಾಮರ್ಥ್ಯವಿದೆ; ಕೆಲಸ ಮಾಡುವ ಶಕ್ತಿ ಹೇಗೆ ಹೆಚ್ಚು/ಕಡಿಮೆ ಆಗುತ್ತಿದೆ ಎಂಬ ಮಾಹಿತಿಗಳು ದೊರೆಯುತ್ತವೆ. ಇವನ್ನೆಲ್ಲಾ ಅನುಸರಿಸಿದ ನಂತವೂ ಒಂದು ವೇಳೆ ಸುಸ್ತಿನ ಪ್ರಮಾಣ ಹೆಚ್ಚುತ್ತಲೇ ಇದ್ದರೆ, ವೈದ್ಯರನ್ನು ಭೇಟಿ ಮಾಡಬೇಕು.

ಸುಸ್ತಿನ ಪರಿಹಾರದಲ್ಲಿ ಮಾನಸಿಕ ಸಿದ್ಧತೆ ಬೇಕು. ಚೇತರಿಕೆ ಎಂಬುದು ಸ್ಪರ್ಧೆಯ ವಿಷಯವಲ್ಲ. ಯಾರು ಎಷ್ಟು ಬೇಗ ಚೇತರಿಸಿಕೊಂಡರು ಎನ್ನುವುದು ತುಲನೆ ಮಾಡುವ ಸಂಗತಿಯಲ್ಲ. ಹೀಗಾಗಿ, ಇತರರ ಜೊತೆ ಹೋಲಿಕೆ ಬೇಕಿಲ್ಲ. ಸುಧಾರಿಕೊಳ್ಳುವ ಪ್ರಕ್ರಿಯೆಯಲ್ಲಿ ಹಲವಾರು ಅಂಶಗಳು ಕಾರ್ಯಗತವಾಗುತ್ತವೆ. ಇದು ಪ್ರತಿಯೊಬ್ಬರಲ್ಲೂ ವಿಭಿನ್ನ. ಹೀಗಾಗಿ, ಯಾರೊಡನೆಯೂ ಹೋಲಿಸಿಕೊಂಡು ಬೇಸರಿಸಬೇಕಿಲ್ಲ. ಕೋವಿಡ್ ನಂತರದ ಸುಸ್ತು ಬಹುಮಟ್ಟಿಗೆ ತಾನೇತಾನಾಗಿ ಸರಿಹೋಗುವ ವಿಷಯ. ಈ ಪ್ರಕ್ರಿಯೆಯಲ್ಲಿ ಶರೀರ ಮತ್ತು ಮನಸ್ಸುಗಳಿಗೆ ಕಾಲಾವಕಾಶ ಮತ್ತು ಸಾಂತ್ವನ ನೀಡುವುದು ಅಗತ್ಯ.

-----------------------

08 ಫೆಬ್ರವರಿ 2022 ರ ಪ್ರಜಾವಾಣಿ ದಿನಪತ್ರಿಕೆಯಲ್ಲಿ ಪ್ರಕಟವಾದ ಲೇಖನ. ಕೊಂಡಿ: https://www.prajavani.net/health/solution-for-covid-tiredness-and-post-recovery-methods-for-healthy-living-908859.html?fbclid=IwAR3oFUUj6Xgl4_LRQ80LreHHZD8_nCPT0QUfQaL7zHNf1bdd7keYfca34uI 

 **ಕೋವಿಡ್: ಆತಂಕ ಬೇಡ; ಇರಲಿ ಎಚ್ಚರ**

“ಈ ಕೋವಿಡ್ ವೈರಸ್ ನಿಂದ ಮುಕ್ತಿಯೇ ಇಲ್ಲವೇ? ಒಂದರ ಹಿಂದೆ ಮತ್ತೊಂದು ಹೆಸರಿನ ತಳಿಗಳು; ಇನ್ನೊಂದು ಅಲೆ ಎಂದು ಅಪ್ಪಳಿಸಲಿದೆಯೋ ಎಂಬ ಆತಂಕ; ಮಕ್ಕಳಿಗೆ ಏನಾಗುವುದೋ ಎಂಬ ಭಯ; ಪ್ರತಿ ಬಾರಿ ಲಾಕ್’ಡೌನ್ ಮಾಡಿದಾಗಲೂ ‘ಸರ್ಕಾರ ನಮ್ಮಿಂದ ಏನನ್ನೋ ಮುಚ್ಚಿಡುತ್ತಿದೆ’ ಎಂಬ ಗುಮಾನಿ; ಎರಡು ಬಾರಿ ಲಸಿಕೆ ಸಾಕೋ ಅಥವಾ ಇನ್ನೆಷ್ಟು ಬಾರಿ ಬೇಕೋ ಎಂದು ತಿಳಿಯದ ಸಂದಿಗ್ಧ; ಇಷ್ಟೆಲ್ಲಾ ಮಾಡಿದರೂ ಯಾರ್ಯಾರಿಗೋ ಕಾಯಿಲೆ ಬಂದಿದೆ ಎಂಬ ಸುದ್ಧಿಗಳು. ಸಾಕಾಗಿ ಹೋಗಿದೆ; ಬದುಕು ಸಹಜವಾಗಲು ಇನ್ನೆಷ್ಟು ವರ್ಷಗಳು ಬೇಕೋ ತಿಳಿಯದು” ಎಂಬ ಹತಾಶೆ ಒಬ್ಬಿಬ್ಬರದ್ದಲ್ಲ. ಇದರ ಮೇಲೆ ಅಬ್ಬರಿಸುವ ಟಿ.ವಿ. ಸುದ್ಧಿವಾಹಿನಿಗಳು, ಫೋನಿನ ಮೂಲಕ ನೇರವಾಗಿ ಮಿದುಳನ್ನೇ ತಲುಪುವ ಸಾಮಾಜಿಕ ಜಾಲತಾಣಗಳ ವದಂತಿಗಳು ಭೀತಿಯನ್ನು ಮತ್ತಷ್ಟು ಹೆಚ್ಚಿಸುತ್ತಿವೆ. ವಾಸ್ತವದ ಅರಿವು ಇಲ್ಲದಾಗ ಗೊಂದಲ, ತಳಮಳ ಸಹಜ. ಇಂತಹ ವಿಷಮ ವಾತಾವರಣದಲ್ಲಿ ಮನಸ್ಸಿನ ಶಾಂತಿ, ನೆಮ್ಮದಿಗಳನ್ನು ಕಾಪಾಡಿಕೊಳ್ಳುವ ಮಾರ್ಗಗಳೇನು?
‘ಕೋವಿಡ್-19 ರ ಬಗ್ಗೆ ಎಚ್ಚರವಿರಲಿ; ಆತಂಕ ಬೇಡ’ ಎಂದು ತಜ್ಞರು ಮೊದಲನೆಯ ದಿನದಿಂದಲೂ ಹೇಳುತ್ತಿದ್ದಾರೆ. ಆದರೆ, ಸಮಾಜದ ಸ್ಥಿತಿ ಇದಕ್ಕೆ ಸಂಪೂರ್ಣ ವಿಲೋಮವಾಗಿದೆ. ಎಚ್ಚರಿಕೆಗಳನ್ನು ಗಾಳಿಗೆ ತೂರಿ, ‘ಮಾಡಬೇಡಿ’ ಎಂಬ ಕೆಲಸಗಳನ್ನು ಬೇಕೆಂದೇ ಮಾಡುತ್ತಾ, ಅಗತ್ಯಕ್ಕಿಂತ ಹೆಚ್ಚಿನ ಆತಂಕಕ್ಕೆ ಒಳಗಾಗುವುದು ಬಹುತೇಕರ ದಿನಚರಿ. ‘ಅಶಿಸ್ತು ಮತ್ತು ಆತಂಕ ಒಟ್ಟಿಗೆ ಸಾಗುತ್ತವೆ’ ಎನ್ನುವ ಮಾತು ವಿಪತ್ತಿನ ಕಾಲದಲ್ಲಿ ಸಾಬೀತಾಗುತ್ತದೆ. ಜೀವನದಲ್ಲಿ ಶಿಸ್ತಿನ ಅಗತ್ಯವನ್ನು ಕೋವಿಡ್-19 ಎನ್ನುವ ಜಾಗತಿಕ ವಿಪತ್ತು ಇನ್ನಿಲ್ಲದಂತೆ ಒತ್ತಿ ಹೇಳಿದೆ; ಪ್ರತಿಯೊಂದು ತಳಿ, ಪ್ರತಿಯೊಂದು ಅಲೆ ಮತ್ತೆ ಮತ್ತೆ ಹೇಳುತ್ತಲೇ ಇವೆ. ಪ್ರಸ್ತುತ ಕೋವಿಡ್ ತಳಿಯೂ ಇದಕ್ಕೆ ಹೊರತಲ್ಲ.
ಕಾಯಿಲೆ ಯಾವುದಾದರೂ ಇರಲಿ; ಅದರ ತೀವ್ರತೆ ಹೇಗಾದರೂ ಇರಲಿ – ನಮ್ಮ ಮನಸ್ಸು ಮತ್ತು ಚಿಂತನೆಗಳನ್ನು ಅದಕ್ಕೆ ಹೊಂದಿಸಿಕೊಳ್ಳುವುದು ಮುಖ್ಯ. ‘ನಾಳೆ ಏನಾಗಬಹುದು’ ಎನ್ನುವ ಚಿಂತೆ ನಮ್ಮ ಇಂದಿನ ದಿನವನ್ನು ಕೆಡಿಸುತ್ತದೆ. ಹಾಗಾಗಿ, ವರ್ತಮಾನದಲ್ಲಿ ಜೀವಿಸುವುದು ಮುಖ್ಯ. ‘ಈ ದಿನ, ಈ ಘಳಿಗೆ ಕಾಯಿಲೆ ಬಾರದಂತೆ ಮಾಡಲು ಏನು ಮಾಡಬಹುದು’ ಎನ್ನುವ ಪ್ರಶ್ನೆಗೆ ಉತ್ತರಿಸಿ, ಅದಕ್ಕೆ ತಕ್ಕಂತೆ ನಡೆದುಕೊಳ್ಳುವುದು ಸೂಕ್ತ. ಸಮಾಜದಲ್ಲಿ ಕಾಯಿಲೆ ಸಾಕಷ್ಟು ಹರಡುತ್ತಿರುವ ವೇಳೆಯಲ್ಲಿ ಎಲ್ಲಾದರೂ ಜನಜಂಗುಳಿಯಲ್ಲಿ ಹೋಗಲು, ಸಮಾರಂಭಗಳಲ್ಲಿ ಭಾಗವಹಿಸಲು ಮನಸ್ಸು ಹಾತೊರೆದಾಗ, ಈ ಪ್ರಶ್ನೆ ನಮ್ಮನ್ನು ಎಚ್ಚರದಿಂದ ಇರುವಂತೆ ಮಾಡುತ್ತದೆ. ಈ ಸರಳವಾದ “ವರ್ತಮಾನದಲ್ಲಿ ಚಿಂತಿಸುವ ಪ್ರಕ್ರಿಯೆ” ಕೋವಿಡ್-19 ಹರಡುವ ಸಮಸ್ಯೆಯಿಂದ ನಮ್ಮನ್ನು ದೂರವಿಡಲು ಸಹಕಾರಿ.
ವಿಪರೀತ ಮಾಹಿತಿ ಹೆಕ್ಕುವಿಕೆ ಗೊಂದಲಗಳಿಗೆ ದೂಡುತ್ತದೆ. ‘ಅತಿ ಸರ್ವತ್ರ ವರ್ಜಯೇತ್’ ಎಂಬ ಮಾತು ಇಲ್ಲಿ ಅನ್ವಯವಾಗುತ್ತದೆ. ಅಂತರ್ಜಾಲದ ಮೇಲೆ ನಿಂತಿರುವ ಪ್ರಸ್ತುತ ಸುದ್ಧಿ ವ್ಯವಸ್ಥೆ ಕ್ಷಣಾರ್ಧದಲ್ಲಿ ನಮಗೆ ಮಾಹಿತಿಯ ಮಹಾಪೂರವನ್ನೇ ಒದಗಿಸುತ್ತದೆ. ಇದರಲ್ಲಿ ಕಾಳು ಯಾವುದು; ಜೊಳ್ಳು ಯಾವುದು; ಸತ್ಯ ಎಷ್ಟು; ಉತ್ಪ್ರೇಕ್ಷೆ ಎಷ್ಟು ಎಂಬುದನ್ನು ನಿರ್ಧರಿಸುವುದು ಎಲ್ಲರಿಗೂ ಸುಲಭವಲ್ಲ. ಅನಧಿಕೃತ, ಅಸತ್ಯ ಮಾಹಿತಿ ಎಂದಿಗೂ ಅಪಾಯಕಾರಿಯೇ. ಮಾಹಿತಿಯ ಪ್ರಮಾಣ ಹೆಚ್ಚಾದಷ್ಟೂ ತಪ್ಪು ಮಾಹಿತಿ ಸೇರುವ ಸಾಧ್ಯತೆ ಅಧಿಕ. ಹೀಗಾಗಿ, ಕೋವಿಡ್-19 ಕಾಯಿಲೆಯ ಬಗ್ಗೆ ಅಧಿಕೃತ ಮಾಹಿತಿ ಪಡೆಯುವುದು ಮುಖ್ಯ. ವಿಶ್ವಾಸಾರ್ಹ ಸರ್ಕಾರಿ ಜಾಲತಾಣಗಳು, ಪರಿಚಯದ ತಜ್ಞ ವೈದ್ಯರು ಈ ಬಗ್ಗೆ ನೆರವಾಗಬಲ್ಲರು. ಹೆಚ್ಚಿನ ಜನರನ್ನು ಆಕರ್ಷಿಸಲು ರೋಚಕ ಮಾಹಿತಿ ನೀಡುವ ಪೈಪೋಟಿಯಲ್ಲಿ ಮನಸ್ಸಿಗೆ ಘಾಸಿಯಾಗುವ ಸುದ್ಧಿವಾಹಿನಿಗಳಿಂದ ಸಂಪೂರ್ಣವಾಗಿ ದೂರವಿರುವುದು ಲೇಸು.
ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ. ಕೋವಿಡ್-19 ಕ್ಕಿಂತ ತೀವ್ರವಾದ, ಅಪಾಯಕಾರಿಯಾದ ನೂರಾರು ಕಾಯಿಲೆಗಳ ಸಂಕ್ರಮಣವನ್ನು ಈ ಪ್ರಪಂಚ ಈಗಾಗಲೇ ಕಂಡಿದೆ. ಅವುಗಳಿಂದ ಗೆದ್ದವರ ಪೀಳಿಗೆಯವರು ಪ್ರಪಂಚವನ್ನು ಈಗ ಮುನ್ನಡೆಸುತ್ತಿದ್ದಾರೆ. ಈ ಹಿಂದೆ ಆದಂತೆಯೇ ಈಗಲೂ ಕೋವಿಡ್-19 ರ ವಿರುದ್ಧ ಗೆಲುವು ಶತಸ್ಸಿದ್ಧ. ಅನಗತ್ಯ ಆತಂಕಕ್ಕೆ ಒಳಗಾಗದಂತೆ ತಾಳ್ಮೆಯಿಂದ, ಜಾಣ್ಮೆಯಿಂದ, ಸರಿಯಾದ ದಾರಿಯಲ್ಲಿ ಇದನ್ನು ನಿರ್ವಹಿಸಿದರೆ ಬಹಳ ಬೇಗ ಇದರಿಂದ ಜಗತ್ತು ಮುಕ್ತವಾಗುತ್ತದೆ. ಈ ವಾಸ್ತವದ ಅರಿವು ಎಲ್ಲರಲ್ಲೂ ಮೂಡಬೇಕು; ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಪ್ರಯತ್ನಶೀಲರಾಗಬೇಕು. ಈ ರೀತಿಯ ಸಾಂಘಿಕ ಪ್ರಯತ್ನದಿಂದ ಕೋವಿಡ್-19 ಎಂಬ ವಿಪತ್ತನ್ನು ಬೇಗನೆ ಗೆಲ್ಲಬಹುದು.
ಕೋವಿಡ್-19 ರ ಅನುಕ್ರಮ ತಳಿಗಳು ಯಾವ ರೀತಿ ವರ್ತಿಸುತ್ತಿವೆ ಎಂಬುದನ್ನು ಗಮನಿಸಿದರೆ, ವೈರಸ್ ಭವಿಷ್ಯದಲ್ಲಿ ರೂಪಾಂತರ ಹೊಂದಬಹುದಾದ ಪ್ರಕ್ರಿಯೆಯನ್ನು ಊಹಿಸಬಹುದು. ಈ ಅಧ್ಯಯನಗಳಿಂದ ವಿಜ್ಞಾನಿಗಳು ಮುಂದಿನ ದಿನಗಳನ್ನು ಕಾಯಿಲೆ ಮುಕ್ತವಾಗಿಸುವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಈ ಹಾದಿಯ ಪ್ರತಿಯೊಂದು ಹೆಜ್ಜೆಯೂ ನಮ್ಮನ್ನು ಸುರಕ್ಷಿತವಾಗಿಸುವತ್ತ ಮುನ್ನಡೆಸುತ್ತಿವೆ. ಈ ಅಧ್ಯಯನಗಳ ಫಲಗಳನ್ನು ಈಗಾಗಲೇ ನಾವು ನೋಡುತ್ತಿದ್ದೇವೆ. ಕಾಯಿಲೆ ಪತ್ತೆ ಮಾಡುವ ವಿಧಾನಗಳು, ಲಸಿಕೆಗಳು, ಔಷಧಗಳು, ಜೀವನಶೈಲಿಯಲ್ಲಿನ ಬದಲಾವಣೆಗಳು ಭವಿಷ್ಯದಲ್ಲಿ ಬರಬಹುದಾದ ಮತ್ತಷ್ಟು ಜಾಗತಿಕ ವಿಪತ್ತುಗಳನ್ನು ಎದುರಿಸುವ ಸಾಮರ್ಥ್ಯವನ್ನು ನಮಗೆ ನೀಡುತ್ತಿವೆ. ಕಷ್ಟಗಳು ಕಲಿಸುವುದನ್ನು ಸುಖ ಕಲಿಸಲಾರದು. ಪ್ರಸ್ತುತ ಕೋವಿಡ್-19 ಇದಕ್ಕೆ ಪ್ರಬಲ ಉದಾಹರಣೆ.
ಕಳೆದ ಎರಡು ವರ್ಷಗಳು ನಮಗೆ ಅನೇಕ ಜೀವನಮೌಲ್ಯಗಳನ್ನು ಕಲಿಸಿವೆ. ಕುಟುಂಬದ ಮಹತ್ವ; ಸಮಾಜದ ಬಗ್ಗೆ ಕಳಕಳಿ; ಅಪರಿಚಿತರಿಗೂ ನೆರವಾಗುವ ಮನೋಭಾವ; ಕಷ್ಟಕರ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವ ವಿಧಾನಗಳು; ಕಲಿಕೆಯ ಹೊಸ ಸಾಧ್ಯತೆಗಳು; ನಮ್ಮ ಸ್ಥಾಪಿತ ಮನೋವೃತ್ತಿಗಳನ್ನು ಪುನಃ ಪರಿಶೀಲಿಸುವ ಗುಣ; ಆಪ್ತರ ವಿಯೋಗವನ್ನು ಸಹಿಸುವ ಸ್ಥೈರ್ಯ; ಮಾನಸಿಕ ಧೃಢತೆ – ಮುಂತಾದ ಪಾಠಗಳು ಜೀವನದತ್ತ ನಮ್ಮ ನಿಲುವುಗಳನ್ನು ಬದಲಾಯಿಸಿವೆ. ಎಂತಹ ವಿಪತ್ತಿನ ಸಂದರ್ಭಗಳಲ್ಲೂ ಆಶಾಭಾವನೆ ಮತ್ತು ಧನಾತ್ಮಕ ಚಿಂತನೆಗಳು ನಮ್ಮ ವರ್ತಮಾನವನ್ನು ಸಹ್ಯವಾಗಿಸಿ, ಭವಿಷ್ಯವನ್ನು ಸುಂದರವಾಗಿಸುತ್ತವೆ. ಪ್ರಸ್ತುತ ವೈರಸ್ ತಳಿ ಕೋವಿಡ್-19 ರ ವಿಪತ್ತಿನ ಅಂತ್ಯದ ಆರಂಭವನ್ನು ಸೂಚಿಸುತ್ತಿದೆ ಎಂದು ತಜ್ಞರ ಅಭಿಮತ. ಈ ಮಾತು ನಿಜವಾಗಲಿ ಎಂಬುದು ಪ್ರತಿಯೊಬ್ಬರ ಮನಸ್ಸಿನ ಆಶಯ.
------------------------
ಪ್ರಜಾವಾಣಿ ದಿನಪತ್ರಿಕೆಯ "ಕ್ಷೇಮ-ಕುಶಲ" ಪುರವಣಿಯಲ್ಲಿ 11/ ಜನವರಿ /2022 ರಂದು ಪ್ರಕಟವಾದ ಲೇಖನ. ಮೂಲ ಲೇಖನದ ಕೊಂಡಿ: https://www.prajavani.net/health/covid-dont-fear-take-care-doctor-kiran-vs-article-simple-steps-for-covid-care-900768.html?fbclid=IwAR2q-yuThNHnML19qlSvSbHvsTU4c9nA47xQlgnQgUqwB2vl1xV5gIJCd9w 

 

ನಾವು ಕುಡಿಯಬೇಕಾದ ನೀರು – ಎಷ್ಟು? ಯಾವಾಗ? ಹೇಗೆ?


“ಬುದ್ಧಿವಂತರ ಪೇಯ ಯಾವುದು?” ಎನ್ನುವ ಪ್ರಶ್ನೆಗೆ ಉತ್ತರ: ನೀರು. “ವಯಸ್ಕ ವ್ಯಕ್ತಿ ದಿನಕ್ಕೆ ಎಂಟು ಲೋಟ ನೀರು ಕುಡಿಯಬೇಕು” ಎನ್ನುವ ಮಾತನ್ನು ಕೇಳಿರುತ್ತೇವೆ. ಆದರೆ, ನೀರನ್ನು ಯಾವ ಸಮಯದಲ್ಲಿ ಕುಡಿಯಬೇಕು ಎನ್ನುವ ಜಿಜ್ಞಾಸೆಗೆ ಸಮಂಜಸವಾದ ಉತ್ತರವನ್ನು ಹೆಚ್ಚು ಮಂದಿ ನೀಡಲಾರರು. “ದಾಹವಾದಾಗ ನೀರು ಕುಡಿಯಬೇಕು” ಎನ್ನುವ ನೇರ ತರ್ಕ ಸರಿಯೇ ಎಂಬ ಅನುಮಾನ ಹಲವರಲ್ಲಿದೆ. “ಊಟಕ್ಕೆ ಮುನ್ನ ನೀರು ಕುಡಿಯಬೇಕೇ ಅಥವಾ ಊಟದ ನಂತರವೇ?” ಎನ್ನುವ ಸರಳ ಪ್ರಶ್ನೆಗೆ ಬರುವ ಉತ್ತರಗಳು ಕೂಡ ಗೊಂದಲ ಮೂಡಿಸುತ್ತವೆ. ಈ ಬಗ್ಗೆ ವಿಜ್ಞಾನ ಏನು ಹೇಳುತ್ತದೆ?

ನಮ್ಮ ದೇಹದ ಬಹುಭಾಗ ನೀರು. “ಭೂಮಿಯ ಶೇಕಡಾ 66 ನೀರು; ಅಂತೆಯೇ, ದೇಹದ 66 ಪ್ರತಿಶತ ನೀರು” ಎನ್ನುವ ಚಮತ್ಕಾರದ ಮಾತಿದೆ. ಸುಮಾರು 70 ಕಿಲೋಗ್ರಾಂ ತೂಗುವ ವ್ಯಕ್ತಿಯ ಶರೀರದ ಸುಮಾರು 40-45 ಕಿಲೋಗ್ರಾಂ ನೀರು ಎಂದು ಅಂದಾಜಿಸಬಹುದು. ಸಣ್ಣ ಮಕ್ಕಳ ದೇಹದಲ್ಲಿ ಈ ನೀರಿನ ಪ್ರತಿಶತ ಪ್ರಮಾಣ ಅಧಿಕ; ವಯಸ್ಕರಲ್ಲಿ ಸ್ವಲ್ಪ ಕಡಿಮೆ. ಶರೀರದ ನೀರಿನ ಅಂಶ ಬಹುಮಟ್ಟಿಗೆ ಪುನರ್ಬಳಕೆಯಾಗುತ್ತದೆ. ಮೂತ್ರ, ಬೆವರು, ಶ್ವಾಸದ ಆರ್ದ್ರತೆ, ಮತ್ತು ವಾತಾವರಣದ ಉಷ್ಣತೆಗೆ ಚರ್ಮದಿಂದ ಆವಿಯಾಗುವ ನೀರಿನ ಪ್ರಮಾಣವನ್ನು ನಾವು ಶರೀರಕ್ಕೆ ಮತ್ತೆ ನೀಡಬೇಕು. ಇದಕ್ಕಾಗಿಯೇ ದಿನವೊಂದಕ್ಕೆ ಸುಮಾರು ಒಂದೂವರೆ ಲೀಟರ್ ನೀರನ್ನು ಕುಡಿಯುವ ಅಗತ್ಯವಿದೆ. ಈ ಪ್ರಮಾಣ ಪ್ರತಿಯೊಬ್ಬರಿಗೂ ಒಂದೇ ಅಲ್ಲ. ಹೆಚ್ಚು ಶ್ರಮದ ಕೆಲಸ ಮಾಡುವವರಿಗೆ, ರೋಗಿಗಳಿಗೆ, ಹಾರ್ಮೋನ್ ವ್ಯತ್ಯಯ ಇರುವವರಿಗೆ, ಚಯಾಪಚಯ ಕ್ರಿಯೆಗಳು ಅಧಿಕ ಮಟ್ಟದಲ್ಲಿ ಉಳ್ಳವರಿಗೆ ನೀರಿನ ಅಗತ್ಯ ಹೆಚ್ಚಾಗಿರುತ್ತದೆ. ಇದೇ ಅಲ್ಲದೆ, ನಾವು ಸೇವಿಸುವ ಆಹಾರದಲ್ಲೂ ನೀರಿನ ಅಂಶ ಇರುತ್ತದೆ.

ರಾತ್ರಿ ನಿದ್ರೆಯ ವೇಳೆ ಶರೀರ ಸಾಕಷ್ಟು ನೀರಿನ ಅಂಶವನ್ನು ಕಳೆದುಕೊಳ್ಳುತ್ತದೆ. ಹೀಗಾಗಿ, ಮುಂಜಾನೆ ಬೇರೆ ಯಾವುದೇ ಪೇಯಗಳಿಗೆ ಮೊದಲು ಒಂದು ಲೋಟ ಬೆಚ್ಚಗಿನ ನೀರನ್ನು ಸೇವಿಸುವುದು ಸೂಕ್ತ. ಜೀರ್ಣಾಂಗ ವ್ಯವಸ್ಥೆ ಬೆಳಗ್ಗೆ ಚೇತರಿಸಿಕೊಳ್ಳಲು ಬೇರೆ ಯಾವುದೇ ಪೇಯಗಳಿಗಿಂತ ನೀರಿನ ಸೇವನೆ ಉತ್ತಮ ವಿಧಾನ.

ವ್ಯಾಯಾಮ ನಮ್ಮ ದೈನಂದಿನ ಅಗತ್ಯ. ಹಿತಮಿತವಾದ ವ್ಯಾಯಾಮ ಮೈ-ಮನಸ್ಸುಗಳಿಗೆ ಉಲ್ಲಾಸ ನೀಡುತ್ತದೆ. ಶರೀರದ ಪ್ರತಿಯೊಂದು ಅಂಗವೂ ವ್ಯಾಯಮಕ್ಕೆ ಸ್ಪಂದಿಸುತ್ತದೆ. ವ್ಯಾಯಮದ ವೇಳೆ ಶರೀರ ಬಾಷ್ಪ ಮತ್ತು ಬೆವರಿನ ರೂಪದಲ್ಲಿ ನೀರನ್ನು ಕಳೆದುಕೊಳ್ಳುತ್ತದೆ. ಹೀಗಾಗಿ, ವ್ಯಾಯಮದ ಮುನ್ನ ಶರೀರದಲ್ಲಿ ನೀರಿನ ಅಂಶ ಕಡಿಮೆ ಇದ್ದರೆ ಬೇಗನೆ ಸುಸ್ತಾಗುತ್ತದೆ. ಸಾಧಾರಣ ವ್ಯಾಯಾಮ ಮಾಡುವವರು ಸುಮಾರು 30 ನಿಮಿಷಗಳ ಮುನ್ನ ಒಂದು ಲೋಟ ಬೆಚ್ಚಗಿನ ನೀರು ಕುಡಿಯುವುದು ಸೂಕ್ತ. ವ್ಯಾಯಮದ ವೇಳೆ ಶರೀರದಲ್ಲಿ ಉಂಟಾಗುವ ಅಧಿಕ ತಾಪವನ್ನು ಈ ನೀರು ನಿಯಂತ್ರಿಸುತ್ತದೆ. ಆದರೆ, ತೀವ್ರವಾದ ವ್ಯಾಯಾಮ ಮಾಡುವ ಕ್ರೀಡಾಪಟುಗಳು ಸೇವಿಸಬೇಕಾದ ನೀರಿನ ಪ್ರಮಾಣ ಹೆಚ್ಚಾಗಿರಬೇಕು. ಅಂತಹವರು ಈ ಕುರಿತಾಗಿ ತಜ್ಞರ ಸಲಹೆ ಪಡೆಯುವುದು ಒಳಿತು.

ವ್ಯಾಯಮದ ನಂತರವೂ ನೀರನ್ನು ಸೇವಿಸುವುದು ಅಗತ್ಯ. ಶರೀರ ಶ್ರಮದ ವೇಳೆ ಸಾಕಷ್ಟು ಬೆವರು ಹರಿಯುತ್ತದೆ. ಹೆಚ್ಚು ಕಾಲ ವ್ಯಾಯಾಮ ಮಾಡಿದಾಗ ಶರೀರ ನಿರ್ಜಲೀಕರಣ ಅನುಭವಿಸುತ್ತದೆ. ಹೀಗಾಗಿ, ಅಧಿಕ ಕಾಲ ವ್ಯಾಯಾಮ ಮಾಡುವವರು (ಉದಾಹರಣೆಗೆ, ಮ್ಯಾರಥಾನ್ ಓಟಗಾರರು) ವ್ಯಾಯಾಮದ ವೇಳೆಯಲ್ಲೇ ತುಸು ತುಸು ನೀರನ್ನು ಕುಡಿಯುತ್ತಿರಬೇಕು. ವ್ಯಾಯಾಮ ಮುಗಿದ ನಂತರ ಅರ್ಧ ಗಂಟೆಯ ಸುಮಾರಿಗೆ ಒಂದು ಲೋಟ ನೀರನ್ನು ಕುಡಿಯಬೇಕು. ಬೆವರಿನ ಜೊತೆಗೆ ಲವಣಗಳೂ ಹೊರಹೋಗುತ್ತವೆ. ಈ ಅಗತ್ಯ ಲವಣಗಳನ್ನು ಪುನಃ ಶರೀರಕ್ಕೆ ಸೇರಿಸುವುದು ಸೂಕ್ತ. ಸಮತೋಲಿತ ಆಹಾರದ ಜೊತೆಗೆ ಈ ಲವಣಗಳು ಶರೀರವನ್ನು ಸೇರುತ್ತವೆ. ಎಳೆನೀರಿನಂತಹ ನೈಸರ್ಗಿಕ ಪಾನೀಯಗಳು ಈ ನಿಟ್ಟಿನಲ್ಲಿ ಸಹಾಯಕ.

ಶರೀರದ ಚಯಾಪಚಯಗಳಿಂದ ಸದಾ ಕಾಲ ನೀರು ಬಾಷ್ಪವಾಗುತ್ತಲೆ ಇರುತ್ತದೆ. ಈ ನೀರಿನ ಅಂಶ ಒಂದು ಹಂತಕ್ಕಿಂತ ಕಡಿಮೆಯಾದಾಗ ನಮ್ಮ ಮಿದುಳು ಅದನ್ನು ದಾಹ ಎಂದು ಗುರುತಿಸುತ್ತದೆ. ಆಗ ನೀರು ಕುಡಿಯುವ ಬಯಕೆ ಕಾಡುತ್ತದೆ. ಅಂದರೆ, ನೀರಡಿಕೆ ಎಂಬುದು ನಮ್ಮ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿದೆ ಎಂದು ನಮ್ಮ ಮಿದುಳು ನೀಡುವ ಸಂಕೇತ. ಈ ಸೂಚನೆಯನ್ನು ಅವಗಣಿಸಿದರೆ, ಅಥವಾ ನೀರಿನ ಬದಲಿಗೆ ಸಕ್ಕರೆಯುಕ್ತ ಪೇಯಗಳನ್ನು ಸೇವಿಸಿದರೆ, ನೀರಡಿಕೆ ತಾತ್ಕಾಲಿಕವಾಗಿ ಇಂಗುತ್ತದೆ. ಸಕ್ಕರೆಯುಕ್ತ ಪಾನೀಯಗಳು ಮೂತ್ರಪಿಂಡಗಳ ಮೂಲಕ ಹೆಚ್ಚು ನೀರನ್ನು ಸೋಸಿ, ಇನ್ನಷ್ಟು ನೀರನ್ನು ಮೂತ್ರದಲ್ಲಿ ಹೊರಹಾಕುತ್ತವೆ. ಇಂತಹ ಪಾನೀಯಗಳ ಜೊತೆಗೆ ಸೇವಿಸಿದ ನೀರಿಗಿಂತ ಶರೀರ ಹೊರಹಾಕುವ ನೀರಿನ ಅಂಶವೇ ಅಧಿಕ. ಅದರಿಂದ ಸುಸ್ತು, ನಿತ್ರಾಣದಂತಹ ಲಕ್ಷಣಗಳು ಕಾಣಬಹುದು. ಹೀಗಾಗಿ, ದಾಹವಾದಾಗ ಮೊದಲು ಸಾಕಷ್ಟು ನೀರು ಕುಡಿಯುವುದು ಸರಿಯಾದ ಪದ್ದತಿ.

ಊಟದ ಅರ್ಧ ಗಂಟೆ ಮುನ್ನ ಒಂದು ಲೋಟ ನೀರು ಕುಡಿಯುವುದು ಒಳ್ಳೆಯದು. ಇದು ಇಡೀ ಜೀರ್ಣಾಂಗ ವ್ಯವಸ್ಥೆಯನ್ನು ಉತ್ತೇಜಿಸುತ್ತದೆ. ಊಟದ ಸಮಯದಲ್ಲಿ ಆಹಾರದ ಜೊತೆಗೆ ತುಸು ನೀರನ್ನು ಕುಡಿಯಬಹುದು. ಆದರೆ, ಇದರ ಪ್ರಮಾಣ ಅತಿಯಾಗಬಾರದು. ಅಂತೆಯೇ, ಊಟದ ನಂತರ ಕೂಡಲೆ ಬಹಳ ನೀರು ಕುಡಿಯುವುದು ಜೀರ್ಣರಸಗಳನ್ನು ತೆಳುವಾಗಿಸಿ, ಸಾರಗುಂದಿಸುತ್ತವೆ; ಪಚನ ಕ್ರಿಯೆ ದುರ್ಬಲವಾಗುತ್ತದೆ. ಹೀಗಾಗಿ, ಊಟ ಮುಗಿಸಿದ ಕನಿಷ್ಠ ಅರ್ಧಗಂಟೆಯ ನಂತರ ಒಂದು ಲೋಟ ನೀರು ಕುಡಿಯುವುದು ಪಚನ ಕ್ರಿಯೆಗೆ ಸಹಕಾರಿ.

ಇತರ ವೇಳೆಯಲ್ಲಿ ಅವಕಾಶ ದೊರೆತಾಗಲೆಲ್ಲ ಸ್ವಲ್ಪ ಸ್ವಲ್ಪ ನೀರು ಕುಡಿಯುತ್ತಿರುವುದು ಒಳಿತು. ನಾವು ವಾಸ ಮಾಡುವ ವಾತಾವರಣ, ನಮ್ಮ ಕೆಲಸದ ಪ್ರಮಾಣ, ನಮ್ಮ ಶರೀರದ ಅಗತ್ಯಗಳಿಗೆ ತಕ್ಕಷ್ಟು ನೀರನ್ನು ಸೇವಿಸುವುದು ಬಹಳ ಮುಖ್ಯ. ನಿರ್ಜಲೀಕರಣ ಅನೇಕ ಕಾಯಿಲೆಗಳಿಗೆ ರಹದಾರಿ. ನೀರು ಜೀವನಾಧಾರ. ದೇಹದಲ್ಲಿನ ನೀರಿನ ಅಂಶವನ್ನು ಸರಿಯಾದ ಮಟ್ಟದಲ್ಲಿ ಕಾಯ್ದುಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಅತ್ಯಗತ್ಯ. ಶರೀರವನ್ನು ಪುನಶ್ಚೇತನಗೊಳಿಸಲು ನೀರಿಗಿಂತ ಮಿಗಿಲಾದ ಪೇಯ ಮತ್ತೊಂದಿಲ್ಲ.

--------------

ಜನವರಿ 2022 ರ "ಸೂತ್ರ" ವಿಜ್ಞಾನ ಮಾಸಪತ್ರಿಕೆಯಲ್ಲಿ ಪ್ರಕಟವಾದ ಲೇಖನ





 

ಮುಂಜಾನೆ ಏಳುವ ಅಭ್ಯಾಸ – ವೈಜ್ಞಾನಿಕ ಹಿನ್ನೆಲೆ

Early to bed and early to rise; Makes a man healthy wealthy and wise ಎನ್ನುವ ಮಾತನ್ನು ಕೇಳಿರುತ್ತೇವೆ. “ವಿದ್ಯುತ್ ದೀಪಗಳು ಇರದಿದ್ದ ಹಳೆಯ ಕಾಲದಲ್ಲಿ ಕತ್ತಲೆ ಆದ ಮೇಲೆ ಹೆಚ್ಚು ಕೆಲಸ ಮಾಡುವ ಅವಕಾಶ ಇರಲಿಲ್ಲ. ಹೀಗಾಗಿ, ರಾತ್ರಿ ಬೇಗ ಮಲಗಿ ಬೆಳಗ್ಗೆ ಬೇಗ ಏಳುವುದು ಅವರಿಗೆ ಕೆಲಸದ ದೃಷ್ಟಿಯಿಂದ ಲಾಭದಾಯಕವಾಗಿತ್ತು. ಹೀಗಾಗಿ ಮುಂಜಾನೆ ಬೇಗ ಏಳುವದನ್ನು ರೂಢಿ ಮಾಡಿಕೊಳ್ಳುವಂತೆ ಹೇಳಲಾಗಿತ್ತು. ಈಗ ಆ ಮಿತಿಗಳು ಇಲ್ಲವಾದ್ದರಿಂದ ಮುಂಜಾನೆ ಬೇಗ ಏಳುವುದು ಅಗತ್ಯವಲ್ಲ. ನಮ್ಮ ಕೆಲಸದ ಅನುಕೂಲಕ್ಕೆ ತಕ್ಕಂತೆ ಯಾವಾಗ ಬೇಕೋ ಆವಾಗ ಸಾಕಷ್ಟು ನಿದ್ರೆ ಮಾಡಿದರಾಯಿತು” ಎನ್ನುವುದು ಆಧುನಿಕರ ವಾದ. The world never sleeps ಎನ್ನುವ, 24 ತಾಸುಗಳೂ ಕೆಲಸ ಮಾಡುವ ಪ್ರಪಂಚದಲ್ಲಿ ಬ್ರಾಹ್ಮಿ ಮುಹೂರ್ತದಲ್ಲಿ ಏಳುವುದು ವೈಜ್ಞಾನಿಕವೇ? ಈ ಬಗ್ಗೆ ಒಂದು ಜಿಜ್ಞಾಸೆ.

ನಿಸರ್ಗಕ್ಕೂ ನಮ್ಮ ದೇಹಕ್ಕೂ ಅಪಾರವಾದ ಹೊಂದಾಣಿಕೆಯಿದೆ. ಪ್ರತಿಯೊಂದು ಜೀವಿಯನ್ನು ವಿಕಸನಗೊಳಿಸುವಾಗಲೂ ನಿಸರ್ಗ ಅದರ ಅಗತ್ಯಗಳನ್ನು ಪರಿಗಣಿಸುತ್ತದೆ; ಅದಕ್ಕೆ ತಕ್ಕಂತೆ ಅಂಗಾಂಗಗಳನ್ನು, ಅವುಗಳ ನಿರ್ವಹಣೆಯನ್ನು ಸೃಜಿಸುತ್ತದೆ. ಜೊತೆಗೆ, ಇದರಲ್ಲಿ ಮಾರ್ಪಾಡಿನ ಸಾಕಷ್ಟು ಸಾಧ್ಯತೆಗಳನ್ನೂ ನೀಡಿರುತ್ತದೆ. ಈ ಕಾರಣಕ್ಕೇ ಸೃಷ್ಟಿಯ ಬಹುತೇಕ ಜೀವಿಗಳು ನಿಸರ್ಗದ ನಿಯಮಗಳಂತೆ ತಮ್ಮ ಜೀವನವನ್ನು ರೂಪಿಸಿಕೊಂಡಿವೆ. ದೈನಂದಿನ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುವುದು ಸೂರ್ಯ. ಜಗತ್ತಿನ ಆಯಾ ಭಾಗದ ಬೆಳಕು ಮತ್ತು ಉಷ್ಣತೆಯ ನಿರ್ವಹಣೆಯಲ್ಲಿ ಸೂರ್ಯನ ಪಾತ್ರ ಅತ್ಯಂತ ಮಹತ್ವದ್ದು. ವಿಕಾಸದ ಪ್ರಕ್ರಿಯೆಯಲ್ಲಿ ಇತರ ಜೀವಿಗಳಂತೆಯೇ ನಿರ್ಮಾಣವಾದ ಮಾನವನಲ್ಲೂ ಸೂರ್ಯನ ಪಾತ್ರ ಹಿರಿದಾದದ್ದು. ನಮ್ಮ ದೇಹದ ಅನೇಕ ಕ್ರಿಯೆಗಳು ಬೆಳಗು-ರಾತ್ರಿಯ ಆವರ್ತನಕ್ಕೆ ಹೊಂದಿಕೊಂಡಿವೆ. ನಿಯಮಿತವಾದ ಕಾಲಾವಧಿಗೆ ನಮ್ಮ ದೇಹವನ್ನು ಸೂರ್ಯರಶ್ಮಿಗೆ ಒಡ್ಡುವುದು ಆರೋಗ್ಯದ ದೃಷ್ಟಿಯಿಂದ ಆವಶ್ಯಕ.

ಈ ಬಗ್ಗೆ ವಿಜ್ಞಾನ ಏನು ಹೇಳುತ್ತದೆ? ಅಮೆರಿಕದ ಮೂರು ಪ್ರಮುಖ ವಿಶ್ವವಿದ್ಯಾಲಯಗಳು ನಡೆಸಿದ ಒಂದು ಬೃಹತ್ ಸಂಶೋಧನೆಯಲ್ಲಿ 8,40,000 ಕ್ಕಿಂತಲೂ ಅಧಿಕ ಜನರನ್ನು ಅವರ ನಿದ್ರೆಯ ಬಗ್ಗೆ ವಿವರವಾಗಿ ಪರೀಕ್ಷಿಸಲಾಯಿತು. ಇಷ್ಟು ಬೃಹತ್ ಪ್ರಮಾಣದ ಅಧ್ಯಯನ ಈವರೆಗೆ ಆಗಿರಲಿಲ್ಲ. ಇದರಲ್ಲಿ ಹಲವಾರು ಕುತೂಹಲಕಾರಿ ಅಂಶಗಳು ಬೆಳಕಿಗೆ ಬಂದವು. ತಡವಾಗಿ ನಿದ್ರೆ ಮಾಡಿ, ತಡವಾಗಿ ಏಳುವವರು ಎಷ್ಟೇ ಕಾಲ ಮಲಗಿದ್ದರೂ ಖಿನ್ನತೆಯಿಂದ ಬಳಲುವುದು ಕಂಡುಬಂದಿತು. ಒಂದು ಹೆಜ್ಜೆ ಮುಂದೆ ಹೋದ ಈ ಅಧ್ಯಯನ, ಈ ಗುಂಪಿನ ಜನರನ್ನು ಒಂದು ತಾಸು ಮೊದಲು ಮಲಗಿಸಿ, ಒಂದು ತಾಸು ಶೀಘ್ರವಾಗಿ ಎಬ್ಬಿಸಿತು. ಅಂದರೆ, ನಿದ್ರೆಯ ಪ್ರಮಾಣ ಒಂದೇ ಇದ್ದರೂ, ಏಳುವ ಸಮಯ ಬೇಗ ಆಗಿತ್ತು. ಕೇವಲ ಈ ಒಂದು ಬದಲಾವಣೆಯಿಂದ ಖಿನ್ನತೆಯ ಪ್ರಮಾಣ ಸಾಕಷ್ಟು ಕಡಿಮೆಯಾಯಿತು. 2018 ರಲ್ಲಿ ಸುಮಾರು 32,000 ದಾದಿಯರನ್ನು ಒಂದು ಅಧ್ಯಯನದಲ್ಲಿ ಪರೀಕ್ಷಿಸಲಾಗಿತ್ತು. ಅವರಲ್ಲಿಯೂ ಬೇಗ ಮಲಗಿ ಬೇಗ ಏಳುವುದರಿಂದ ಖಿನ್ನತೆಯ ಪ್ರಮಾಣ ಸುಮಾರು ಶೇಕಡಾ 27 ಕಡಿಮೆ ಆಗಿತ್ತು.

ಹೀಗೇಕೆ? ಇದಕ್ಕೆ ಕಾರಣಗಳನ್ನು ನಮ್ಮ ಜೀನ್ ಗಳಲ್ಲಿ ಹುಡುಕಬೇಕು. ನಿದ್ರೆಗೆ ಕಾರಣವಾಗುವ ಸುಮಾರು 340 ಜೀನ್ ಗಳನ್ನು ಈಗಾಗಲೇ ಪತ್ತೆ ಮಾಡಲಾಗಿದೆ. ಶೇಕಡಾ 42 ರಷ್ಟು ಜನರ ನಿದ್ರೆಯ ಸಮಯದ ಹಿಂದೆ ಇಂತಹ ಜೀನ್ ಗಳ ಬಲವಾದ ಪ್ರಭಾವವಿದೆ. ಜೀವ ವಿಕಾಸದ ಹಾದಿಯಲ್ಲಿ ನಮ್ಮ ಜೀನ್ ಗಳು ಸೂರ್ಯನ ಬೆಳಕಿನ ಪ್ರಮಾಣವನ್ನೇ ಅನುಸರಿಸಿವೆ. ನಿದ್ರೆಯ ಮೇಲೆ ನೇರ ಪರಿಣಾಮ ಬೀರುವ, ನಮ್ಮ ದೇಹದ ಪೀನಿಯಲ್ ಗ್ರಂಥಿಯಲ್ಲಿ ಬಿಡುಗಡೆಯಾಗುವ ಮೆಲಟೊನಿನ್ ಎಂಬ ಚೋದಕ ಬೆಳಕಿನ ಪ್ರಮಾಣವನ್ನು ಅನುಸರಿಸುತ್ತದೆ. ಅದು ಕೇವಲ ಕತ್ತಲೆಯಲ್ಲಿ ಬಿಡುಗಡೆಯಾಗುವ ಚೋದಕ. ದೇಹದ ಇತರ ಹಲವಾರು ರಾಸಾಯನಿಕಗಳಂತೆ ಇದು ಕೂಡ ಸಮಯಾನುಸಾರಿ, ಬೆಳಕಿನ ಆಜ್ಞಾವರ್ತಿ. ಸಹಜವಾಗಿ ಇದರ ಕೆಲಸದ ಹಿನ್ನೆಲೆಯಲ್ಲಿ ಜೀನ್ ಗಳ ಪ್ರಮುಖ ಪಾತ್ರವಿದೆ. ಇವೆಲ್ಲಾ ಜೀವವಿಕಾಸದ ಹಾದಿಯಲ್ಲಿ ಕಾಲಕ್ರಮೇಣ ಬಹಳ ನಿಧಾನವಾಗಿ ರೂಪುಗೊಂಡ ಪ್ರಕ್ರಿಯೆಗಳು. ಇವನ್ನು ಏಕಾಏಕಿ ಬದಲಾಯಿಸಲಾಗದು. ಈ ಜೀನ್ ಗಳ ಕೆಲಸವನ್ನು ಅನುಸರಿಸಿ ಮತ್ತೂ ಅನೇಕ ಜೀನ್ ಗಳು ತಮ್ಮ ಕೆಲಸ ನಿರ್ವಹಸುತ್ತವೆ. ಈ ಸರಣಿಯಲ್ಲಿ ಒಂದು ಪ್ರಕ್ರಿಯೆ ಬದಲಾದರೆ, ಅದರ ಮೇಲೆ ಅವಲಂಬಿತವಾದ ಅನೇಕ ಕಾರ್ಯಗಳು ಹದ ತಪ್ಪುತ್ತವೆ. ಈ ಇಡೀ ಸರಣಿಯ ಸಂಪೂರ್ಣ ಜ್ಞಾನ ನಮಗೆ ಇನ್ನೂ ಇಲ್ಲವಾದ್ದರಿಂದ ಯಾವ ವ್ಯಕ್ತಿಯಲ್ಲಿ ಯಾವ ನಿರ್ದಿಷ್ಟ ಬದಲಾವಣೆಗಳು ಆಗುತ್ತವೆ ಎಂಬುದನ್ನು ನಿರ್ಧರಿಸಲಾಗದು. ಒಟ್ಟಾರೆ, ಇದು ಅನೇಕ ದೈಹಿಕ ವೈಪರೀತ್ಯಗಳಿಗೆ ಕಾರಣವಾಗುತ್ತವೆ ಎಂಬುದನ್ನು ಮಾತ್ರ ಖಚಿತವಾಗಿ ಹೇಳಬಹುದು.

ಇದರ ಅರ್ಥವೇನು? ಮುಂಜಾನೆ ಬೇಗನೆ ಏಳುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು ಎಂದೇ? “ಖಚಿತವಾಗಿ ಹೌದು” ಎನ್ನುತ್ತಾರೆ ವಿಜ್ಞಾನಿಗಳು. ಮುಂಜಾನೆ ಬೇಗನೆ ಏಳುವುದರಿಂದ ದೈಹಿಕ, ಮಾನಸಿಕ ಆರೋಗ್ಯಗಳು ಸುಧಾರಿಸುತ್ತವೆ ಎಂಬುದನ್ನು ಸ್ಪಷ್ಟವಾಗಿ ನಿರೂಪಿಸಲಾಗಿದೆ.  ಇದೇ ಅಲ್ಲದೆ, ನೋಟಕ್ಕೆ ಕಾಣದ ಅನೇಕ ಸುಧಾರಣೆಗಳೂ ನಮ್ಮ ದೇಹದಲ್ಲಿ ಆಗುತ್ತವೆ ಎಂದು ಅವರ ಅಂದಾಜು. ಇದರ ಬಗೆ ಇನ್ನೂ ನಿಖರವಾದ ಸಂಶೋಧನೆಗಳು ನಡೆದರೆ ಈ ವಿವರಗಳು ಮತ್ತಷ್ಟು ಬಲಗೊಳ್ಳುತ್ತದೆ ಎಂದು ಅವರ ಅಭಿಪ್ರಾಯ.

“ನಿಮ್ಮ ಹಗಲನ್ನು ಮತ್ತಷ್ಟು ಬೆಳಗಾಗಿಸಿ; ನಿಮ್ಮ ರಾತ್ರಿಯನ್ನು ಇನ್ನಷ್ಟು ಕತ್ತಲಾಗಿಸಿ; ಸೂರ್ಯರಶ್ಮಿಗೆ ಮೈ ಒಡ್ಡುವಂತೆ ನಿಮ್ಮ ಕೆಲಸಕ್ಕೆ ನಡೆದೋ ಅಥವಾ ಬೈಸಿಕಲ್ ಸವಾರಿ ಮಾಡುತ್ತಲೋ ಹೋಗಿ; ಸಂಜೆ ಆಗುತ್ತಿದ್ದಂತೆ ನಿಮ್ಮ ಎಲೆಕ್ಟ್ರಾನಿಕ್ ಸಲಕರಣೆಗಳ ಬೆಳಕನ್ನು ಮಂದವಾಗಿಸಿ” ಎಂಬುದು ವಿಜ್ಞಾನಿಗಳ ಸಲಹೆ. ಇದನ್ನೇ ನಮ್ಮ ಹಿರಿಯರು “ಬ್ರಾಹ್ಮಿ ಮುಹೂರ್ತಕ್ಕೆ ಎದ್ದು, ಸೂರ್ಯನಿಗೆ ನಮನ ಸಲ್ಲಿಸಿ. ನಿಷ್ಠೆಯಿಂದ ಕೆಲಸ ಮಾಡಿರಿ. ಸಂಜೆಯ ನಂತರ ಮಲಗಿ ಸಾಕಷ್ಟು ಕಾಲ ನಿದ್ರಿಸಿರಿ” ಎಂದು ಹೇಳಿದ್ದರು.

ಒಳ್ಳೆಯ ಪದ್ದತಿಗಳು ವಿಜ್ಞಾನದ ಸಹಾಯದಿಂದ ಆವರ್ತನಗೊಂಡು ಮತ್ತಷ್ಟು ಹೊಳಪಿನಿಂದ ಹಿಂದಿರುಗುತ್ತವೆ!

----------------------

 ಡಿಸೆಂಬರ್ 2021 ರ 'ಸೂತ್ರ' ವಿಜ್ಞಾನ ಮಾಸಪತ್ರಿಕೆಯಲ್ಲಿ ಪ್ರಕಟವಾದ ಲೇಖನ 







 

 **ಕೋವಿಡ್ ಇನ್ನೂ ಹೋಗಿಲ್ಲ... ಕೋವಿಡ್-19 ಅಲೆಗಳು ತಾವಾಗಿಯೇ ಬರುವುದಿಲ್ಲ**

ಜಾಗತಿಕ ವಿದ್ಯಮಾನಗಳನ್ನು ಗಮನಿಸುವ ಜನರನ್ನು ಒಂದು ಮಹತ್ವದ ಪ್ರಶ್ನೆ ಕಾಡುತ್ತಿದೆ: ಈಗ ಯುರೋಪನ್ನು ಬಾಧಿಸುತ್ತಿರುವ ನವೀನ ಕೋವಿಡ್-19 ವೈರಸ್ ತಳಿ ಭಾರತದಲ್ಲೂ ಮೂರನೆಯ ಅಲೆಗೆ ಕಾರಣವಾಗಬಹುದೇ? “ಹೌದು” ಅಥವಾ “ಇಲ್ಲ” ಎನ್ನುವುದು ಪ್ರಜೆಗಳ ನಿಯಂತ್ರಣದಲ್ಲಿದೆ ಎಂಬುದು ಸತ್ಯ. ಪ್ರಪಂಚದ ಯಾವುದೇ ಸರ್ಕಾರವೂ ಎಷ್ಟೇ ಕಟ್ಟುನಿಟ್ಟಿನ ಕಾಯಿದೆಗಳನ್ನು ಮಾಡಿದರೂ, ಜನರ ಸಹಕಾರವಿಲ್ಲದೆ ಅದು ಸಫಲವಾಗದು. ಒಂದು ಜಾಗತಿಕ ಪಿಡುಗಿನ ನಿಯಂತ್ರಣದಲ್ಲಿ ಸರ್ಕಾರದ ಪಾತ್ರಕ್ಕಿಂತಲೂ ಜನರ ಶಿಸ್ತುಬದ್ಧ ನಡವಳಿಕೆಯೇ ಮುಖ್ಯ.
ತಳಿ ರೂಪಾಂತರ ಯಾವುದೇ ವೈರಸ್’ನ ಸಹಜ ಗುಣ. ಇಂತಹ ರೂಪಾಂತರಿ ತಳಿ ಅಧಿಕ ರೋಗಕಾರಕವೂ ಆಗಿರಬಹುದು; ಇಲ್ಲವೇ ಶಕ್ತಿಹೀನವೂ ಆಗಬಹುದು. ಕೋವಿಡ್-19 ರೂಪಾಂತರಗೊಳ್ಳುವುದು ಮನುಷ್ಯರ ದೇಹದಲ್ಲಿ. ಹೀಗಾಗಿ, ಅಧಿಕ ಮಂದಿ ಕಾಯಿಲೆಗೆ ಈಡಾದರೆ ವೈರಸ್ ರೂಪಾಂತರದ ಸಾಧ್ಯತೆಗಳು ಹೆಚ್ಚಾಗುತ್ತವೆ. ಒಮ್ಮೆ ರೂಪಾಂತರ ಹೊಂದಿದರೆ ಇನ್ನೂ ಹೆಚ್ಚು ಜನರು ಕಾಯಿಲೆಗೆ ತುತ್ತಾಗುತ್ತಾರೆ. ಆಗ ವೈರಸ್ ಮತ್ತೊಮ್ಮೆ ರೂಪಾಂತರ ಹೊಂದಬಹುದು. ಇದೊಂದು ವಿಷಮ ಆವರ್ತನ ಚಕ್ರ. ಯಾವುದೋ ಒಂದು ಹಂತದಲ್ಲಿ ಈ ಚಕ್ರವನ್ನು ಮುರಿಯಬೇಕು. ಅತ್ಯಂತ ಸಫಲವಾಗಿ ಈ ಚಕ್ರವನ್ನು ಭಿನ್ನ ಮಾಡುವ ಸಾಧ್ಯತೆ ಇರುವುದು ಕಾಯಿಲೆಯ ಪ್ರಮಾಣವನ್ನು ಕಡಿಮೆ ಮಾಡುವುದರಲ್ಲಿ. ಅಂದರೆ ಎಷ್ಟು ಕಡಿಮೆ ಜನರಿಗೆ ಕಾಯಿಲೆ ತಗಲುತ್ತದೋ ವೈರಸ್ ರೂಪಾಂತರ ಹೊಂದುವ ಸಾಧ್ಯತೆ ಅಷ್ಟೇ ಕಡಿಮೆಯಾಗುತ್ತದೆ.
ಹೀಗಾಗಿ, ವೈರಸ್ ಹರಡುವಿಕೆಯನ್ನು ಮಿತಗೊಳಿಸುವುದು ಬಹಳ ಮುಖ್ಯ. ಇದಕ್ಕೆ ಸಂಯಮಶೀಲ ವರ್ತನೆ ಅಗತ್ಯ. ಮೂರನೆಯ ಅಲೆಯನ್ನು ತಡೆಯಬೇಕೆಂದರೆ ಕೆಲವು ಹೆಜ್ಜೆಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ.
1. ಕೋವಿಡ್-19 ಲಸಿಕೆ ಪ್ರಮುಖವಾದ ಹೆಜ್ಜೆ. ಇದು ರೂಪಾಂತರ ತಳಿಯ ಮೇಲೆ ಸಂಪೂರ್ಣ ಪರಿಣಾಮ ಬೀರುತ್ತದೆಯೋ ಇಲ್ಲವೋ ಎಂಬುದು ಮುಖ್ಯವಲ್ಲ; ಲಸಿಕೆಗಳು ಕೋವಿಡ್-19 ವೈರಸ್ ಹರಡುವಿಕೆಯನ್ನು ನಿಯಂತ್ರಿಸುತ್ತವೆ ಎಂಬುದು ನಿರ್ವಿವಾದ. ಲಸಿಕೆಯಿಂದ ಉತ್ಪತ್ತಿಯಾದ ಸಂರಕ್ಷಣೆ ಹೊಸ ತಳಿಯ ವಿರುದ್ಧವೂ ಸಾಕಷ್ಟು ಪ್ರಭಾವ ಬೀರಬಲ್ಲದು ಎಂದು ತಜ್ಞರ ಅಭಿಮತ. ಲಸಿಕಾಕರಣ ಅಧಿಕವಾದಷ್ಟೂ ಮೂರನೆಯ ಅಲೆಯ ಸಾಧ್ಯತೆ ಕಡಿಮೆಯಾಗುತ್ತದೆ. ಹೀಗಾಗಿ, ಪ್ರತಿಯೊಬ್ಬರೂ ಸಾಧ್ಯವಾದಷ್ಟೂ ಶೀಘ್ರವಾಗಿ ಎರಡು ಬಾರಿ ಕೋವಿಡ್-19 ಲಸಿಕೆ ಹಾಕಿಸಿಕೊಳ್ಳುವುದು ಅತ್ಯಗತ್ಯ.
2. ಕೋವಿಡ್-19 ಪಿಡುಗು ಈಗಲೂ ಜೀವಂತವಾಗಿದೆ ಎಂಬ ಎಚ್ಚರಿಕೆ ಇರಬೇಕು. ಕೋವಿಡ್-ಪೂರ್ವ ಕಾಲ ಇನ್ನೂ ಬಂದಿಲ್ಲ. ಹೀಗಾಗಿ, ಹೆಚ್ಚು ಜನಸಂದಣಿ ಸರಿಯಲ್ಲ; ಜಾತ್ರೆಗಳು, ಸಮಾರಂಭಗಳು, ಮಾಲ್’ಗಳು ಮೊದಲಾದುವುಗಳಿಗೆ ಈಗ ಸಮಯ ಉಚಿತವಲ್ಲ ಎಂಬುದನ್ನು ಜನರೇ ಅರಿಯಬೇಕು. ಸರ್ಕಾರದ ಒತ್ತಾಯಗಳಿಂದ ಜನರ ಪ್ರತಿರೋಧ ಬೆಳೆಯುತ್ತದೆ. ಅದನ್ನು ಮನಗಂಡ ಸರ್ಕಾರಗಳು ಈ ವಿಷಯಗಳಲ್ಲಿ ಮೃದುಧೋರಣೆ ತಳೆಯುತ್ತವೆ. ಆದರೆ ಸರ್ಕಾರದ ಮೃದುಧೋರಣೆ ಅಶಿಸ್ತಿಗೆ ಆಹ್ವಾನವಾಗಬಾರದು. ಮೂರನೆಯ ಅಲೆ ಬಂದರೆ ಅತ್ಯಂತ ಅಧಿಕ ಸಂಕಟಕ್ಕೆ ಒಳಗಾಗುವವರು ಸಾಮಾನ್ಯ ಪ್ರಜೆಗಳೇ ಎಂಬುದು ನಮ್ಮ ಗಮನದಲ್ಲಿರಬೇಕು. ಸರ್ಕಾರದ ನೀತಿ ಹೇಗೆಯೇ ಇದ್ದರೂ, ನಾವು ವೈಯಕ್ತಿಕ ಮತ್ತು ಸಮಷ್ಟಿ ಶಿಸ್ತನ್ನು ಪಾಲಿಸುವುದು ಬಹಳ ಮುಖ್ಯ.
3. ಪ್ರಯಾಣಗಳನ್ನು ಮಾಡದಿರುವುದು ಲೇಸು. ಸಾಂಕ್ರಾಮಿಕ ಕಾಯಿಲೆಯೊಂದು ಸಾಕಷ್ಟು ವ್ಯಾಪಿಸಿರುವಾಗ, ಪ್ರತಿಯೊಬ್ಬರನ್ನೂ ಕಾಯಿಲೆಯ ವಾಹಕರಂತೆಯೇ ಪರಿಗಣಿಸಬೇಕು. ಯಾರಿಂದ ರೋಗ ಹರಡಬಹುದು ಎಂದು ನಿಖರವಾಗಿ ಹೇಳಲಾಗದು. ಆದ್ದರಿಂದ, ಪರಕೀಯರೊಡನೆ ಬೆರೆಯದಿರುವುದು ಸೂಕ್ತ. ತೀರಾ ಅಗತ್ಯವಲ್ಲದಿದ್ದರೆ ಯಾವುದೇ ಪ್ರಯಾಣವೂ ಸಲ್ಲದು. ಮನೆಯಿಂದಲೇ ಕೆಲಸ ಮಾಡುವ ಅವಕಾಶವಿದ್ದರೆ, ಅದನ್ನು ಬಳಸಿಕೊಳ್ಳಬೇಕು.
4. ಕೋವಿಡ್-19 ಆರಂಭದಿಂದಲೂ ವೈಯಕ್ತಿಕ ಸ್ವಚ್ಚತೆಗೆ ಇಂಬುನೀಡಲಾಗಿದೆ. ಈಗಲೂ ಅದನ್ನು ತಪ್ಪದೇ ಪಾಲಿಸಬೇಕು. ಬಿರುಸಾದ ಮಳೆಯಲ್ಲಿ ಸಂಚರಿಸುವ ವೇಳೆ ನಮ್ಮನ್ನು ಅತ್ಯಂತ ಹೆಚ್ಚು ಕಾಪಾಡುವುದು ನಾವು ಹಿಡಿದಿರುವ ಕೊಡೆ. ಅಂತೆಯೇ, ಸಮಾಜದಲ್ಲಿ ಕಾಯಿಲೆ ಎಷ್ಟೇ ವ್ಯಾಪಿಸಿದ್ದರೂ, ವೈಯಕ್ತಿಕ ರಕ್ಷಣೆ ಕಾಯಿಲೆಯಿಂದ ನಮ್ಮನ್ನು ದೂರವಿಡಬಲ್ಲದು. ಬಾಯಿ ಮತ್ತು ಮೂಗನ್ನು ಮುಚ್ಚುವಂತೆ ಕಡ್ಡಾಯ ಮಾಸ್ಕ್ ಧಾರಣೆ; ಆರು ಅಡಿ ಸಾಮಾಜಿಕ ಅಂತರ; ಕೈಗಳನ್ನು ಸಾಬೂನು ಮತ್ತು ನೀರಿನಿಂದ ಆಗಾಗ ತೊಳೆದು ಸ್ವಚ್ಚವಿಡುವುದು; ವೈಯಕ್ತಿಕ ನೈರ್ಮಲ್ಯ; ಇತರರನ್ನು ಸುರಕ್ಷಿತವಾಗಿ ಇರುವಂತೆ ಪ್ರೇರೇಪಿಸುವುದು; ಎಚ್ಚರಿಕೆಯ ಅಂಶಗಳನ್ನು ಕುಟುಂಬ ಸದಸ್ಯರ ಜೊತೆ ಕಾಲಕಾಲಕ್ಕೆ ಚರ್ಚಿಸುತ್ತಾ ಅವರನ್ನು ಸನ್ನದ್ಧರಾಗಿ ಇಡುವುದು; ರೋಗದ ಮೊದಲ ಲಕ್ಷಣಗಳು ಕಂಡ ಒಡನೆಯೇ ಅಂತಹವರನ್ನು ಇತರರಿಂದ ಪ್ರತ್ಯೇಕಿಸುವುದು; ವೈದ್ಯರ ಸಲಹೆ ಪಡೆದು ಪರೀಕ್ಷೆ, ಚಿಕಿತ್ಸೆ ಮಾಡಿಸುವುದು – ಮೊದಲಾದ ಎಚ್ಚರಗಳು ಸದಾ ಇರಬೇಕು. ಇದರಲ್ಲಿ ಯಾವ ರೀತಿಯ ವಿನಾಯತಿಯೂ ಸಲ್ಲದು.
5. ಮಕ್ಕಳನ್ನು ಶಾಲೆಗೆ ಕಳುಹಿಸಬಹುದೇ? ವಿಶ್ವ ಆರೋಗ್ಯ ಸಂಸ್ಥೆ ಇದಕ್ಕೆ ಕೆಲವು ಮಾರ್ಗಸೂಚಿಗಳನ್ನು ನೀಡಿದೆ. ಆಯಾ ದೇಶದ, ಪ್ರಾಂತ್ಯದಲ್ಲಿ ಇರುವ ಕಾಯಿಲೆಯ ಮಟ್ಟವನ್ನು ಅನುಸರಿಸಿ ಇದಕ್ಕೆ ಪರಿಹಾರ ಕಂಡುಕೊಳ್ಳಲು ಸಲಹೆ ನೀಡಿದೆ. ಕಾಯಿಲೆಯ ಹರಡುವಿಕೆ ಯಾವ ಪ್ರಾಂತ್ಯಗಳಲ್ಲಿ ಅಧಿಕವೋ, ಅಂತಹ ಎಡೆಗಳಲ್ಲಿ ಶಾಲೆಗಳು ತೆರೆಯದಿರುವುದೇ ಲೇಸು. ಇಂತಹ ಪ್ರದೇಶಗಳಲ್ಲಿ ದೂರಶಿಕ್ಷಣ, ಆನ್ಲೈನ್ ತರಗತಿಗಳು ಯಾವ ಕಾರಣಕ್ಕೂ ಕೊನೆಯಾಗಬಾರದು ಎಂಬ ಕಳಕಳಿಯಿದೆ. ಶಾಲೆಯ ನಿರ್ವಾಹಕರಿಗೆ, ಶಿಕ್ಷಕರಿಗೆ ಕೋವಿಡ್-19 ಕಾಯಿಲೆಯ ಪ್ರಸರಣದ ಬಗ್ಗೆ ಸೂಕ್ತ ಶಿಕ್ಷಣ, ಮಾರ್ಗದರ್ಶನ, ಸಹಾಯವಾಣಿ ಸೌಲಭ್ಯ ನೀಡಿ, ಶಾಲೆಯನ್ನು ಕಾಯಿಲೆರಹಿತ ಪ್ರಾಂತ್ಯವನ್ನಾಗಿ ಪರಿವರ್ತಿಸುವಲ್ಲಿ ಸಹಕಾರ ನೀಡಬೇಕಿದೆ. ಇದನ್ನು ಆಯಾ ಪ್ರಾಂತ್ಯದ ಶಿಕ್ಷಣಾಧಿಕಾರಿಗಳು, ಶಾಲೆಗಳ ನಿರ್ವಾಹಕರು ವಿಶ್ಲೇಷಿಸಿ, ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು.
ಕೋವಿಡ್-19 ಇನ್ನೂ ಕೊನೆಯಾಗಿಲ್ಲ; ಸದ್ಯದಲ್ಲೇ ಕೊನೆಯಾಗುವುದೂ ಇಲ್ಲ; ಮೂರನೆಯ ಅಲೆಗೆ ಮುಕ್ತಾಯವೂ ಅಲ್ಲ. ಕೋವಿಡ್-19 ಅಲೆಗಳು ತಾವಾಗಿಯೇ ಬರುವುದಿಲ್ಲ. ಬೇಜವಾಬ್ದಾರಿ ಸಮಾಜ ಅದನ್ನು ಬರಮಾಡಿಕೊಳ್ಳುತ್ತದೆ. ಅವಜ್ಞೆ ಹೆಚ್ಚಿದಷ್ಟೂ ಅವು ವೇಗವಾಗಿ, ತೀಕ್ಷ್ಣವಾಗಿ ಬರುತ್ತವೆ. ಶಿಸ್ತನ್ನು ಪಾಲಿಸದಿದ್ದರೆ ಮತ್ತೆಮತ್ತೆ ಬರುತ್ತಲೇ ಇರುತ್ತವೆ. ಈ ಮಾತಿಗೆ ಈಗಾಗಲೇ ಯುರೋಪಿನ ಅನೇಕ ದೇಶಗಳು ಸಾಕ್ಷಿಯಾಗಿವೆ; ಸಂಯಮರಹಿತ ಸಮಾಜಗಳು ತಮ್ಮ ಸರದಿಗಾಗಿ ಕಾದಿವೆ. ನಮ್ಮ ದೇಶ ಮತ್ತೊಂದು ಅಲೆಗೆ ತುತ್ತಾಗದಿರುವುದು ಸಾರ್ವಜನಿಕರ ಕಟ್ಟೆಚ್ಚರದಲ್ಲಿದೆ.
----------------------------
30/11/2021 ರಂದು ಪ್ರಜಾವಾಣಿ ದಿನಪತ್ರಿಕೆಯಲ್ಲಿ ಪ್ರಕಟವಾದ ಲೇಖನ. ಕೊಂಡಿ: https://www.prajavani.net/health/covid-and-omicron-be-aware-888302.html?fbclid=IwAR1IrBQ0e_oDzYnQO9PVmergNeZ0dv9K3pG2YA-TtoQnSbSBoPkUiIDt45I