ಬುಧವಾರ, ಡಿಸೆಂಬರ್ 16, 2020

 


ಉದಯವಾಣಿ ದಿನಪತ್ರಿಕೆ "ಆಯುರ್ವೇದ ವೈದ್ಯರು ಶಸ್ತ್ರಚಿಕಿತ್ಸೆ ಮಾಡುವುದು ಸಮಂಜಸವೇ?" ಎನ್ನುವ ವಿಷಯದ ಬಗ್ಗೆ 13/12/2020 ರ ಭಾನುವಾರ ಕೆಲವು ವೈದ್ಯರ ಅಭಿಪ್ರಾಯಗಳನ್ನು ಪ್ರಕಟಿಸಿತ್ತು. ಇದರಲ್ಲಿ ನನ್ನ ಎರಡು ಮಾತು ಇಲ್ಲಿದೆ.

**ರೋಗಿಗಳ ಅವರ ಉತ್ತರವೇ ಸರಿಯಾದ ಉತ್ತರ**
"ಆಯುರ್ವೇದದ ಶಲ್ಯಚಿಕಿತ್ಸೆ ಓದಿರುವ ವೈದ್ಯರು ಆಧುನಿಕ ವೈದ್ಯಪದ್ಧತಿಯ ಅನುಸಾರವಾಗಿ ಶಸ್ತ್ರಚಿಕಿತ್ಸೆಗಳನ್ನು ಮಾಡಬೇಕೆ?" ಎಂಬ ಪ್ರಶ್ನೆಯಲ್ಲಿ ಸರಿ-ತಪ್ಪುಗಳ ಜಿಜ್ಞಾಸೆ ಇರಬೇಕಾದ್ದು ವೈದ್ಯರ ಮಟ್ಟದಲ್ಲಿ ಮಾತ್ರವಲ್ಲ; ಅದಕ್ಕೆ ಪ್ರಮುಖವಾಗಿ ಆಧಾರವಾಗಬೇಕಾದ್ದು ರೋಗಿಗಳ ಸುರಕ್ಷತೆ ಮತ್ತು ಶಸ್ತ್ರಚಿಕಿತ್ಸೆಯ ಸಫಲತೆ. ಗಡಿಯಾರದ ರಿಪೇರಿಗೆ ಅಥವಾ ಕಾರಿನ ಸರ್ವೀಸಿಗೆ ಕೂಡ ತಜ್ಞರನ್ನು ಬಯಸುವ ನಮ್ಮ ಸಮಾಜ, ತಮ್ಮ ಸ್ವಂತ ಶರೀರದ ಶಸ್ತ್ರಚಿಕಿತ್ಸೆಯಂತಹ ಸಂಕೀರ್ಣ ಪ್ರಕ್ರಿಯೆಗೆ “ಯಾವುದೋ ವೈದ್ಯಪದ್ಧತಿಯನ್ನು ಅಧ್ಯಯನ ಮಾಡಿ ಇನ್ಯಾವುದೋ ವೈದ್ಯಪದ್ಧತಿಯನ್ನು ಅನುಸರಿಸಿ ಮಾಡುವವರನ್ನು ಯಾವ ಮಾನದಂಡಗಳಿಂದ ಒಪ್ಪುತ್ತದೆ?” ಎಂಬುದು ನಾವು ಕೇಳಬೇಕಾದ ನೈಜ ಪ್ರಶ್ನೆ.
ಶಸ್ತ್ರಚಿಕಿತ್ಸೆ ಒಂದು ಸಾಂಘಿಕ ಪ್ರಯತ್ನ. ರೋಗ ಪತ್ತೆ ಮಾಡುವವರು, ಪ್ರಯೋಗಾಲಯಗಳು ಕ್ಷ-ಕಿರಣ ತಜ್ಞರು, ಅರಿವಳಿಕೆ ತಜ್ಞರು, ಶಸ್ತ್ರಚಿಕಿತ್ಸೆಯ ವೈದ್ಯರು, ತೀವ್ರ-ನಿಗಾ ಘಟಕದ ತಜ್ಞರು, ಫಿಸಿಯೋಥೆರಪಿ - ಹೀಗೆ ಹಲವಾರು ತಜ್ಞರ ತಂಡ ಏಕರೂಪವಾಗಿ ಬೆಸೆದುಕೊಂಡು ಮಾಡಬೇಕಾದ ಸರಣಿ ಪ್ರಕ್ರಿಯೆ. ಇಂತಹ ಸಂಕೀರ್ಣ ಸರಣಿಯ ಅತ್ಯುತ್ತಮ ನಿರ್ವಹಣೆಗೆ ಪ್ರತಿಯೊಬ್ಬರೂ ಒಂದೇ ಮಾದರಿಯ ತರಬೇತಿ ಹೊಂದಿರುವುದು ಬಹಳ ಮುಖ್ಯ.
ಹೀಗಾಗಿ, ಆಯುರ್ವೇದದ ಶಲ್ಯಚಿಕಿತ್ಸಕರು ಶಸ್ತ್ರಚಿಕಿತ್ಸೆ ಮಾಡಬೇಕೆಂದರೆ, ಇಡೀ ತಂಡವನ್ನು ಆಯುರ್ವೇದದ ಆಧಾರದ ಮೇಲೆ ಸಂಪೂರ್ಣವಾಗಿ ಕಟ್ಟಬೇಕಾಗುತ್ತದೆ. ನಮ್ಮ ಶಿಕ್ಷಣ ವ್ಯವಸ್ಥೆ ಇದನ್ನು ಸಫಲವಾಗಿ ಮಾಡಿದರೆ ಯಾರಿಗೂ ಅಭ್ಯಂತರವಿಲ್ಲ. ಆದರೆ ಬೇರೆ ಯಾವುದೋ ಪದ್ಧತಿಯಲ್ಲಿ ಅಧ್ಯಯನ ಮಾಡಿರುವವರನ್ನು ಮತ್ತೊಂದು ತಂಡದಲ್ಲಿ ಅನಾಮತ್ತಾಗಿ ಸೇರಿಸಿದರೆ ಅದು ಒಂದು ತಂಡವಾಗಿ ಉಳಿಯುವುದಿಲ್ಲ.
ಒಂದು ವೇಳೆ ಶಸ್ತ್ರಚಿಕಿತ್ಸೆ ಸಫಲವಾಗದಿದ್ದರೆ ಅದರ ಹೊಣೆಗಾರಿಕೆ ಯಾರದ್ದು? ಎರಡು ಬೇರೆ-ಬೇರೆ ಪದ್ಧತಿಗಳನ್ನು ಬೆರೆಸಿದ ತಂಡದಲ್ಲಿ ಸಾಫಲ್ಯವನ್ನು ಎಲ್ಲರೂ ಸಂಭ್ರಮಿಸುತ್ತಾರೆ. ಆದರೆ, ಸೋಲಿನ ಹೊಣೆಗಾರಿಕೆಗೆ ಯಾರೂ ಸಿದ್ಧರಿರುವುದಿಲ್ಲ. ಈ ದ್ವಂದ್ವದಲ್ಲಿ ಸೋಲುವವರು ರೋಗಿಗಳು. ಹಾಗೆ ಆಗುವುದು ಅಸಹನೀಯ ಮತ್ತು ವೈದ್ಯಕೀಯ ವ್ಯವಸ್ಥೆಯ ಮೂಲೋದ್ದೇಶದ ಸೋಲು.
ರೋಗಿಗಳ ಸುರಕ್ಷತೆಯ ದೃಷ್ಟಿಯಿಂದ ಮಾತ್ರ ಈ ಪ್ರಶ್ನೆಯನ್ನು ವಿವೇಚಿಸಬೇಕು. ಇದು ಯಾರೊಬ್ಬರ ಪ್ರತಿಷ್ಠೆಯ ಪ್ರಶ್ನೆ ಆಗಬಾರದು. “ನಮ್ಮ ಶಸ್ತ್ರಚಿಕಿತ್ಸೆಯನ್ನು ಯಾರು ಮಾಡಬೇಕು?” ಎಂಬುದನ್ನು ನಿರ್ಧರಿಸಬೇಕಾದವರು ಖುದ್ದು ರೋಗಿಗಳು! "ನಿಮ್ಮ ದೇಹದ ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನು ನೀವು ಶಲ್ಯಚಿಕಿತ್ಸೆ ಓದಿರುವ ಆಯುರ್ವೇದ ವೈದ್ಯರಿಂದ ಮಾಡಿಸಿಕೊಳ್ಳುತ್ತೀರಾ?" ಎಂದು ರೋಗಿಗಳನ್ನು ಕೇಳಬೇಕು. ಅವರ ಉತ್ತರವೇ ಸರಿಯಾದ ಉತ್ತರ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ