ಶನಿವಾರ, ಏಪ್ರಿಲ್ 4, 2020


ಕರೋನಾವೈರಸ್ ಕಲಿಸುತ್ತಿರುವ ಜೀವನ ಪಾಠಗಳು
ಡಾ. ಕಿರಣ್ ವಿ ಎಸ್
ವೈದ್ಯರು
ಯಾವುದೇ ಆರೋಗ್ಯ ಸಮಸ್ಯೆಯನ್ನಾದರೂ ಔಷಧಗಳಿಂದ ಗೆಲ್ಲಬಲ್ಲವು ಎಂಬ ಮಾನವ ಅಹಂಭಾವವನ್ನು ಕರೋನಾವೈರಸ್ ಭಗ್ನಗೊಳಿಸಿದೆ. 1940 ರ ದಶಕದಲ್ಲಿ ಪೆನಿಸಿಲಿನ್ ಔಷಧದ ಬಳಕೆ ಆರಂಭವಾದಾಗ ಸೋಂಕುಗಳನ್ನು ಶಾಶ್ವತವಾಗಿ ಗೆದ್ದೇ ಬಿಟ್ಟೆವು ಎಂಬ ಭ್ರಮೆ ಮೂಡಿತ್ತು. ಆ ನೀರ್ಗುಳ್ಳೆ ಒಡೆಯುವುದಕ್ಕೆ ಹೆಚ್ಚು ಕಾಲ ಹಿಡಿಯಲಿಲ್ಲ. ಬ್ಯಾಕ್ಟೀರಿಯಾಗಳು ತಮ್ಮ ಒಡಲಿನ ರಚನೆಯನ್ನೇ ಬದಲಿಸಿಕೊಂಡು ಪೆನಿಸಿಲಿನ್ ಪ್ರತಿರೋಧ ಬೆಳೆಸಿಕೊಂಡವು. ಆದರೆ, ಆ ವೇಳೆಗೆ ಔಷಧ ಪತ್ತೆಯ ಮೂಲ ತತ್ತ್ವಗಳನ್ನು ಅರಿತಿದ್ದ ಮನುಷ್ಯ ಬುದ್ಧಿ ಒಂದರೆ ಹಿಂದೆ ಒಂದು ಹೊಸ ಆಂಟಿಬಯಾಟಿಕ್ ಔಷಧಗಳನ್ನು ನಿರ್ಮಿಸುತ್ತಲೇ ಹೋಯಿತು. ಅಂತಲೇ, ವಿವಿಧ ಬಗೆಯ ಬ್ಯಾಕ್ಟೀರಿಯಾಗಳು ತಮ್ಮ ಆಂಟಿಬಯಾಟಿಕ್ ಪ್ರತಿರೋಧ ಸಾಮರ್ಥ್ಯವನ್ನೂ ಹೆಚ್ಚಿಸಿಕೊಳ್ಳುತ್ತಾ ಹೋದವು. ಯಾವುದೇ ಔಷಧಕ್ಕೆ ಜಗ್ಗದ “ಸೂಪರ್-ಬಗ್”ಗಳ ಯುಗ ಈಗಾಗಲೇ ಆರಂಭವಾಗಿದೆ. ಅದರ ಜೊತೆಗೇ ಸದ್ಯಕ್ಕೆ ಯಾವುದೇ ಔಷಧ ಲಭ್ಯವಿಲ್ಲದ ಕರೋನಾವೈರಸ್ ನ ಹೊಸ ತಳಿ COVID-19 ಕೂಡ ಜಗತ್ತನ್ನು ಆವರಿಸಿದೆ.

ಸಮಸ್ಯೆಗಳಿಗೆ ಇರುವ ಪರಿಹಾರಗಳ ಪೈಕಿ ಅತ್ಯಂತ ಸುಲಭವಾದದ್ದನ್ನು, ಅತ್ಯಂತ ಶೀಘ್ರವಾಗಿ ಪರಿಣಾಮ ಬೀರುವುದನ್ನು ಆಯ್ದುಕೊಳ್ಳುವುದು ನಮಗೆ ಅಭ್ಯಾಸವಾಗಿದೆ. ದೀರ್ಘಾವಧಿಯಲ್ಲಿ ಆ ಪರಿಹಾರ ಇನ್ಯಾವುದಾದರೂ ಸಮಸ್ಯೆಗಳನ್ನು ತಂದು ಒಡ್ಡೀತೇ ಎನ್ನುವ ಆಲೋಚನೆ ಮಾಯವಾಗುತ್ತಿದೆ. ಕ್ಷಣಿಕ ಪರಿಹಾರ ಥಟ್ಟನೆ ದೊರಕಿದರೆ ಸಾಕು ಎನ್ನುವ ಮನೋಭಾವ. ಆದರೆ, ನಮ್ಮ ಇಂತಹ ಚಿಂತನೆಗಳಿಗೆ ಸವಾಲು ಒಡ್ಡುವಂತೆ COVID-19 ಮಾದರಿಯ ಸಮಸ್ಯೆಗಳು ಆಗಾಗ ಬರುತ್ತವೆ. ಬದುಕಿನ ಕೆಲವು ಮೂಲಭೂತ ಅಂಶಗಳನ್ನು ನಾವು ಎಷ್ಟು ಅವಗಣನೆ ಮಾಡಿದ್ದೇವೆ ಎಂಬ ಸತ್ಯದ ಅರಿವಾಗುತ್ತದೆ.
ಜನಪ್ರಿಯ ಹ್ಯಾರಿ ಪಾಟರ್ ಸರಣಿಯ ಎರಡನೆಯ ಪುಸ್ತಕದಲ್ಲಿ ಡಂಬಲ್ಡೋರ್ ಮಹಾಶಯ “ನಾವು ಯಾರು ಎಂದ ನಿರ್ಧಾರವಾಗುವುದು ನಮ್ಮ ಸಾಮರ್ಥ್ಯಗಳಿಂದ ಅಲ್ಲ; ನಮ್ಮ ಆಯ್ಕೆಗಳಿಂದ” ಎನ್ನುತ್ತಾನೆ. ಆದರೆ, ಬಹಳ ಬಾರಿ ನಾವು ನಮ್ಮ ಆಯ್ಕೆಗಳನ್ನು ಪರಿಗಣಿಸುವುದೇ ಇಲ್ಲ. ಕಣ್ಣ ಮುಂದೆ ಕಂಡ ಸುಲಭದ ಮಾರ್ಗವನ್ನು ಆಯ್ದುಕೊಂಡು ಮರೆತುಬಿಡುತ್ತೇವೆ. ಕೇವಲ ವಿಪತ್ತಿನ ಸಮಯದಲ್ಲಿ ಮಾತ್ರ ಬೇರಾವುದೂ ದಾರಿ ಕಾಣದೆ ಹೋದಾಗ ಬಲವಂತವಾಗಿ ಆಯ್ಕೆಗಳನ್ನು ಹುಡುಕುತ್ತೇವೆ. “ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡಲು ಆರಂಭಿಸಬಾರದು” ಎಂದು ಚಿಕ್ಕಂದಿನಲ್ಲಿ ಓದಿದ್ದ ಸುಭಾಷಿತ ಆ ವೇಳೆಗೆ ಮರೆತಿರುತ್ತದೆ. 

ಕರೋನಾವೈರಸ್ ನಮ್ಮ ಆಯ್ಕೆಗಳನ್ನು ತೀರಾ ಸೀಮಿತಗೊಳಿಸಿದೆ! “ಚಿಕಿತ್ಸೆ ತಿಳಿಯದ ರೋಗಕ್ಕೆ ಕೇವಲ ನಿಯಂತ್ರಣವೇ ಪರಿಹಾರ” ಎಂದು ಮತ್ತೊಮ್ಮೆ ಕಲಿಯಲು ಸುಮಾರು ಶತಕೋಟಿ ರೂಪಾಯಿಗಳನ್ನು ವ್ಯಯಿಸಿದ್ದೇವೆ. ಜಗತ್ತಿನಾದ್ಯಂತ ಕರೋನಾವೈರಸ್ ಅಡ್ಡಗಾಲು ಹಾಕದ ಕ್ಷೇತ್ರವೇ ಇಲ್ಲ. ಪ್ರಪಂಚದ ಸಂಕೀರ್ಣ ಸ್ವರೂಪದ ವ್ಯವಸ್ಥೆಯನ್ನು ಈ ಮಟ್ಟಕ್ಕೆ ಓರೆ ಹಚ್ಚಿದ ಮತ್ತೊಂದು ದೃಷ್ಟಾಂತವನ್ನು ಜೀವಂತವಿರುವ ಯಾರೂ ಕಂಡಿಲ್ಲ. “ಚೀನಾಗೆ ನೆಗಡಿ ಆದರೆ ಇಡೀ ಪ್ರಪಂಚ ಸೀನುತ್ತದೆ” ಎಂಬ ತಮಾಷೆಯ ಮಾತು ತೀರಾ ಕ್ರೂರವಾಗಿ ನಿಜವಾಗಿದೆ. ಇಂತಹ ಪ್ರಸಂಗಗಳು ಇಲ್ಲಿಗೇ ಮುಗಿಯುವುದಿಲ್ಲ. ಕರೋನಾವೈರಸ್ ಅನ್ನು ಜಯಿಸಿದ ನಂತರವೂ ಅಂತಹುದೇ ಕಾಯಿಲೆಗಳು ಭವಿಷ್ಯದಲ್ಲಿ ಸಾಕಷ್ಟು ಬರಲಿವೆ. ಹಾಗಾಗಿ ಮತ್ತೊಮ್ಮೆ ಇಂತಹ ಸಂದಿಗ್ಧಕ್ಕೆ ಸಿಲುಕದಂತೆ ಈ ಸಂದರ್ಭದಿಂದ ಕಲಿಯಬೇಕಾದ ಪಾಠಗಳು ಹಲವಾರಿವೆ.

ಮೊದಲನೆಯ ಪಾಠ ನಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳುವ ಆವಶ್ಯಕತೆಯದ್ದು. ವೈಯಕ್ತಿಕ ಸ್ವಚ್ಛತೆಯನ್ನೂ ಮತ್ತೊಬ್ಬರಿಂದ ಬಲವಂತವಾಗಿ ಹೇಳಿಸಿಕೊಂಡ ಹೊರತು ಪಾಲಿಸದ, ಅನಾಗರಿಕ ವರ್ತನೆಯನ್ನು ಮತ್ತೊಬ್ಬರು ಅಸಹ್ಯಿಸಿದರೂ ಪರಿವೆ ಇಲ್ಲದೇ ಮುಂದುವರೆಸುವ ಸ್ವಭಾವದ ಮಂದಿ ದೇಶದ ತುಂಬಾ ತುಂಬಿದ್ದಾರೆ. ಸ್ವಚ್ಛತೆಯ ಮಹತ್ವ ಎಷ್ಟು ಎನ್ನುವುದನ್ನು ಕರೋನಾವೈರಸ್ ಕಲಿಸಿದೆ. ಇದು ಪ್ರತಿಯೊಬ್ಬ ನಾಗರಿಕನಿಗೂ, ನಮ್ಮನ್ನು ಆಳುವ ಸರ್ಕಾರಕ್ಕೂ ಎಂದಿಗೂ ಮರೆಯದ ಪಾಠ ಆಗಬೇಕು. ಅತ್ತ ಕರೋನಾವೈರಸ್ ಮರೆಯಾದ ಕೂಡಲೇ ಇತ್ತ ಪುನಃ ಹಳೆಯ ಕಚಡಾ ಜೀವನ ಶೈಲಿಗೆ ಮರಳಿದರೆ ಮುಂದಿನ ಬಾರಿ ಈ ಅವಕಾಶ ಕೂಡ ಸಿಗಲಾರದು ಎಂಬ ಎಚ್ಚರ, ಪರಿಜ್ಞಾನ ಇಲ್ಲದೇ ಹೋದರೆ ನಮ್ಮ ಶಿಕ್ಷಣಕ್ಕೆ ಯಾವ ಬೆಲೆಯೂ ಇಲ್ಲ. 

ಎರಡನೆಯ ಪಾಠ ಸಮಷ್ಟಿ ವರ್ತನೆ. ನಾವು ಬದುಕುತ್ತಿರುವ ಸಮಾಜ ಬಹಳ ಸಂಕೀರ್ಣ ಸ್ವರೂಪದ್ದು. ನಾವು ಬೆಳಗ್ಗೆ ಎದ್ದು ಮನೆಯ ಬಾಗಿಲಿನ ಮುಂದಿನಿಂದ ಹಾಲಿನ ಚೀಲ ತೆಗೆದು ಕಾಫಿ ಮಾಡಿ ಕುಡಿಯುತ್ತೇವೆ. ಇಂತಹ ಒಂದು ಸರಳ ಕ್ರಿಯೆಯ ಹಿಂದೆ ಕನಿಷ್ಟ ಹತ್ತಾರು ಕೊಂಡಿಗಳು ಇರುತ್ತವೆ. ಪಶುಗಳ ಮೇವು, ಹಿಂಡಿ, ಆರೋಗ್ಯ ನೋಡಿಕೊಳ್ಳುವ ತಂಡ; ಹೈನುಗಾರಿಕೆ ಮಾಡುವ ವ್ಯಕ್ತಿ; ಹಾಲಿನ ಸಂಗ್ರಹ ಮಾಡುವ ಒಕ್ಕೂಟ; ಹಾಲನ್ನು ಸಂಸ್ಕರಣೆ ಮಾಡುವ ಘಟಕ; ಸಂಸ್ಕರಿತ ಹಾಲನ್ನು ಚೀಲಕ್ಕೆ ಹಾಕುವ ಉದ್ಯಮ; ಅದನ್ನು ವಿತರಣೆ ಮಾಡುವ ವಾಹನ; ವಿತರಣಾ ಕೇಂದ್ರದಿಂದ ಸಣ್ಣ ಸ್ಥಳಗಳಿಗೆ ಒಯ್ಯುವ ಮಂದಿ; ಅಲ್ಲಿಂದ ಅದನ್ನು ಮನೆಮನೆಗೆ ತಲುಪಿಸುವ ಜನ – ಹೀಗೆ ಏಳೆಂಟು ಕೊಂಡಿಗಳು ಅನನ್ಯವಾಗಿ ಬೆಸೆದಿರುತ್ತವೆ. ಇದರಲ್ಲಿ ಯಾವುದೇ ಒಂದು ಕೊಂಡಿ ಕಳಚಿದರೂ ನಮಗೆ ಬೆಳಗಿನ ಕಾಫಿಯ ಸುಖ ಇಲ್ಲ. ಸಾಮಾನ್ಯ ಪರಿಸ್ಥಿತಿಗಳಲ್ಲಿ ಇವು ನಮ್ಮ ಗ್ರಹಿಕೆಗೆ ಬರುವುದೇ ಇಲ್ಲ. “ಹಾಲಿಗೆ ಹಣ ಕೊಡುತ್ತಿದ್ದೇನೆ” ಎಂಬ ಡೌಲು ಮಾತ್ರ ಇದ್ದೀತು. ಪ್ರಸ್ತುತ ಕರೋನಾವೈರಸ್ ನಮಗೆ ಸಮಷ್ಟಿಯ ಮಹತ್ವವನ್ನು ತಿಳಿಸಿದೆ. “ನಾನು ಪ್ರಪಂಚದ ಕೇಂದ್ರಬಿಂದು ಅಲ್ಲ” ಎನ್ನುವ ಸತ್ಯ ಹಲವರನ್ನು ಕಂಗಾಲು ಮಾಡಿರಬೇಕು! “ಪ್ರತಿಯೊಬ್ಬರೂ ತಪ್ಪದೇ ಶಿಸ್ತನ್ನು ಪಾಲಿಸಿದರೆ ಮಾತ್ರ ಇಡೀ ಸಮಷ್ಟಿಯ ಉಳಿವು; ಅದರಲ್ಲಿ ಒಬ್ಬರು ತಪ್ಪಿ ನಡೆದರೂ ಅದರ ಫಲ ಮತ್ತೊಬ್ಬರ ಮೇಲೆ ಆಗುತ್ತದೆ” ಎಂಬ ಅರಿವು ಮೂಡಿದೆ. ಇದು ಇಂತೆಯೇ ಉಳಿಯಬೇಕು. ಯಾರೇ ಆಗಲಿ; ಅವರ ಕೆಲಸ ನಮ್ಮ ಪಾಲಿಗೆ ನಗಣ್ಯವೇ ಇರಲಿ – ಸಮಾಜದ ಒಟ್ಟು ರಚನೆದಲ್ಲಿ ಅವರಿಗೆ ನಮ್ಮಷ್ಟೇ ಪಾಲಿದೆ ಎಂಬ ಸತ್ಯ ನಮ್ಮನ್ನು ಸದಾ ಎಚ್ಚರದಲ್ಲಿ ಇಡಬೇಕು.

ಮೂರನೆಯ ಪಾಠ ನಮ್ಮ ವ್ಯವಸ್ಥೆಯ ಸಾಮಾಜಿಕ ಜವಾಬ್ದಾರಿಯದ್ದು. “ಆರೋಗ್ಯವೇ ಮಹಾಭಾಗ್ಯ” ಎಂದೆಲ್ಲಾ ಉದ್ಧರಿಸುವ ನಮ್ಮ ರಾಜಕಾರಣ ದೇಶದ ಆರೋಗ್ಯ ವ್ಯವಸ್ಥೆಗೆ ನೀಡುವ ಹಣ ಮಾತ್ರ ದೇಶದ ಒಟ್ಟು ಖರ್ಚಿನ 0.3%! ಅದರಲ್ಲಿನ ಬಹುತೇಕ ಅಂಶವನ್ನು ಕರೋನಾವೈರಸ್ ಗಿಂತ ಕೆಡುಕಾದ ಭ್ರಷ್ಟಾಚಾರಿಗಳೆಂಬ ಕೆಟ್ಟ ಕ್ರಿಮಿಗಳು ನುಂಗಿಬಿಡುತ್ತಾರೆ. ಆದರೆ, ವಿಪತ್ತಿನ ಸಂದರ್ಭದಲ್ಲಿ ಮಾತ್ರ 130 ಕೋಟಿ ಜನರ ಇಡೀ ದೇಶ ಎದುರು ನೋಡುವುದು ಆರೋಗ್ಯ ವ್ಯವಸ್ಥೆಯ ಸಹಾಯವನ್ನೇ! ಇದೊಂದು ರೀತಿ ಒಂದು ಪಾವು ಮುಗ್ಗಲು ಅಕ್ಕಿಯನ್ನು ಕೊಟ್ಟು ಸಾವಿರ ಜನರಿಗೆ ಮೃಷ್ಟಾನ್ನ ತಯಾರು ಮಾಡಲು ಆಜ್ಞಾಪಿಸಿದಂತೆ. ಸಾಮಾನ್ಯ ಪರಿಸ್ಥಿತಿಯಲ್ಲಿ ಈ ಬಗ್ಗೆ ಎಷ್ಟೇ ಅಲವತ್ತುಕೊಂಡರೂ ವ್ಯವಸ್ಥೆಯದ್ದು ಮಾತ್ರ ದಿವ್ಯ ನಿರ್ಲಕ್ಷ್ಯ. ಕನಿಷ್ಟ ಕರೋನಾವೈರಸ್ ನ ಪ್ರಸ್ತುತ ವಿಪತ್ತು ನಮಗೆ ಆರೋಗ್ಯ ವ್ಯವಸ್ಥೆಯ ಸನ್ನದ್ಧತೆಯ ಆವಶ್ಯಕತೆಯನ್ನು ಮನವರಿಕೆ ಮಾಡಬೇಕು. ಸರ್ಕಾರವಷ್ಟೇ ಅಲ್ಲ; ಬೇಡದ್ದಕ್ಕೆ ಕೋಟ್ಯಾಂತರ ವೆಚ್ಚ ಮಾಡುವ ಖಾಸಗಿ ಸಂಸ್ಥೆಗಳು ಕೂಡ ಆರೋಗ್ಯ ವ್ಯವಸ್ಥೆಯ ಸುಧಾರಣೆಯ ಬಗ್ಗೆ ಸರ್ಕಾರದ ಜೊತೆ ಕೈ ಜೋಡಿಸಬೇಕು; ಇಲ್ಲವೇ ತಾವೇ ಈ ವಿಷಯದಲ್ಲಿ ಕ್ರಮ ತೆಗೆದುಕೊಳ್ಳಬೇಕು. ಒಬ್ಬ ತಾರಾಮಣಿಗೆ, ಓರ್ವ ಕ್ರಿಕೆಟಿಗನಿಗೆ ಕೆಲವು ಕ್ಷಣಗಳ ಜಾಹೀರಾತಿಗೆ ಹತ್ತು ಕೋಟಿ ಸಂಭಾವನೆ ನೀಡುವ ನಮ್ಮ ಖಾಸಗೀ ಸಂಸ್ಥೆಗಳು, ಆ ಹಣದಲ್ಲಿ ಒಂದು ಸುಸಜ್ಜಿತ ಸಂಶೋಧನಾ ಕೇಂದ್ರವನ್ನು ಎಲ್ಲಾ ರೀತಿಯ ಖರ್ಚುಗಳನ್ನು ತೂಗಿಸಿಕೊಂಡು, ಹತ್ತು ಮಂದಿ ವಿಜ್ಞಾನಿಗಳಿಗೆ ಕೈ ತುಂಬಾ ಸಂಬಳ ನೀಡಿ ಒಂದು ವರ್ಷ ಕಾಲ ನಡೆಸಬಹುದು ಎಂಬ ಸರಳ ತಾರ್ಕಿಕ ಸತ್ಯ ಅರಿಯಬೇಕು. ಯಾವುದೇ ವಿಪತ್ತಿನಲ್ಲಿ ನಮ್ಮ ಪರಿಹಾರ ಜ್ಞಾನದಿಂದ ಮಾತ್ರ ಬರುತ್ತದೆಯೇ ಹೊರತು ಶೋಕಿಯಿಂದ ಅಲ್ಲ ಎನ್ನುವ ಪಾಠ ಈಗ ಅರಿವಾಗಿದೆ. ಯಾವ ಕಾರಣಕ್ಕೂ ಈ ಕಲಿಕೆಯನ್ನು ಕಳೆದುಕೊಳ್ಳಬಾರದು. ಇದೇ ಮಾದರಿಯ ಮುಂದಿನ ವಿಪತ್ತು ಎಂದಾದರೂ ಬಂದೇ ಬರುತ್ತದೆ. ಅದಕ್ಕೆ ಇಂದಿನಿಂದಲೇ ಸಿದ್ಧರಾಗಬೇಕು. 

ನಾಲ್ಕನೆಯ ಪಾಠ ಪ್ರಕೃತಿಯ ಜೊತೆಗಿನ ಸಹಬಾಳ್ವೆ. ಮನುಷ್ಯರು ನಮಗೆ ನಾವು ಎಷ್ಟೇ ಮಹತ್ವ ಕೊಟ್ಟುಕೊಂಡರೂ ನಿಸರ್ಗದ ಪಾಲಿಗೆ ನಾವು ಕೋಟಿಯಲ್ಲಿ ಒಂದು ಜೀವ ವೈವಿಧ್ಯ ಅಷ್ಟೇ. ತನ್ನ ಕೋಟ್ಯಾಂತರ ಪ್ರಭೇದಗಳ ಜೀವಿಗಳನ್ನೂ ಸೊಗಸಾಗಿ ಸಾಕುವ ಸಾಮರ್ಥ್ಯ ಪ್ರಕೃತಿಗೆ ಇದೆ. ಇದೇ ಕಾರಣಕ್ಕೆ ನಿಸರ್ಗ ಕೆಲವು ಮಿತಿಗಳನ್ನು ಸೃಷ್ಟಿಸಿ, ಕೆಲವು ಗಡಿರೇಖೆಗಳನ್ನು ಹಾಕಿರುತ್ತದೆ. ಜೊತೆಗೆ, ಆ ನಿಯಮಗಳನ್ನು ಯಾವ ಜೀವಿಯೂ ಉಲ್ಲಂಘಿಸದಂತೆ ಕೆಲವು ಅಪಾಯಗಳನ್ನೂ ಜೋಡಿಸಿರುತ್ತದೆ. ಈ ಮಿತಿಗಳನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ. ಮಾನವ ಅಹಂಭಾವ ಈ ಮಿತಿಗಳನ್ನು ಉಲ್ಲಂಘಿಸಿದರೆ ಪ್ರಕೃತಿ ತಾನೆಷ್ಟು ಬಲಶಾಲಿ ಎಂದು ತೋರಿಸುತ್ತದೆ. ನಿಸರ್ಗಕ್ಕೆ ಮನುಷ್ಯ ಜೀವಿ ಒಂದು ಲೆಕ್ಕವೇ ಅಲ್ಲ; ಅಲ್ಪಾವಧಿಯಲ್ಲಿ ಮನುಷ್ಯ ಪ್ರಭೇದವನ್ನು ಹೊಸಕಿಹಾಕುವುದು ತನಗೆ ಬಹಳ ಸುಲಭ ಎಂದು ಪ್ರಕೃತಿ ತೋರಿದೆ. ಆದ್ದರಿಂದ ಇತರ ಜೀವಿಗಳ ಬಗೆಗಿನ ಮರ್ಯಾದೆ ನಮ್ಮ ಪರಮ ಆವಶ್ಯಕತೆ ಎನ್ನುವ ಪ್ರಸ್ತುತ ಕರೋನಾವೈರಸ್ ಕಲಿಸಿರುವ ಪಾಠವನ್ನು ಎಂದಿಗೂ ಮರೆಯುವಂತಿಲ್ಲ.
-------------------



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ