ಬುಧವಾರ, ಡಿಸೆಂಬರ್ 16, 2020

 


“ನಿರಾಮಯ” ಇ-ಪುಸ್ತಕದ ಎಲ್ಲಾ ಓದುಗರಿಗೆ ಸ್ವಾಗತ!
ವೈದ್ಯಕೀಯ ಸಾಹಿತ್ಯಕ್ಕೆ “ನಿರಾಮಯ” ಇ-ಪುಸ್ತಕ ಮತ್ತೊಂದು ಸೇರ್ಪಡೆ; ಅಂತರ್ಜಾಲದಲ್ಲಿ ಮುಕ್ತವಾಗಿ ಲಭ್ಯವಿದೆ.
“ನಿರಾಮಯ” ಪಡೆಯುವ ಬಗೆ:
1. “ನಿರಾಮಯ” ಇ-ಪುಸ್ತಕವನ್ನು Google Play Books ಮೂಲಕ ಉಚಿತವಾಗಿ ಪಡೆಯಬಹುದು. ಇದಕ್ಕೆ https://play.google.com/store/books/details?id=SLALEAAAQBAJ ಎಂಬ ಜಾಲತಾಣವನ್ನು ಪ್ರವೇಶಿಸಿ, ಅಲ್ಲಿ “Get ebook” ಎಂಬುದನ್ನು ಕ್ಲಿಕ್ ಮಾಡಿರಿ. Google ನಿಮ್ಮನ್ನು Sign in ಆಗುವಂತೆ ಕೇಳಬಹುದು. ಅದಕ್ಕೆ ಒಪ್ಪಿಗೆ ನೀಡಿ. ನಿಮ್ಮ gmail ಖಾತೆಯ login ಮತ್ತು password ಆಯ್ಕೆ ಬರುತ್ತದೆ. ನಿಮ್ಮ gmail ತೆರೆಯುವ ರೀತಿಯಲ್ಲಿಯೇ ತೆರೆಯಿರಿ. ಇದು Google ಅವರದ್ದೇ ತಾಣವಾದ್ದರಿಂದ ಮತ್ತೊಮ್ಮೆ ಹೊಸ ಖಾತೆ ತೆರೆಯುವ ಅಗತ್ಯವಿಲ್ಲ. ಈಗಾಗಲೇ ಇರುವ ನಿಮ್ಮ gmail ಖಾತೆಯೇ ಸಾಕು. ನೀವು login ಮಾಡಿದ ನಂತರ ತೆರೆದ ಪುಟದಲ್ಲಿ “Read” ಎಂಬ ಆಯ್ಕೆ ಬರುತ್ತದೆ. ಅದನ್ನು ಕ್ಲಿಕ್ ಮಾಡಿದರೆ, ಕೆಲವು ಸೆಕೆಂಡುಗಳಲ್ಲಿ “ನಿರಾಮಯ” ಇ-ಪುಸ್ತಕ ತೆರೆದುಕೊಳ್ಳುತ್ತದೆ. ಒಮ್ಮೆ ಹೀಗೆ ತೆರೆದರೆ, ಆನಂತರ “ನಿರಾಮಯ” ನಿಮ್ಮ Google Book ಖಾತೆಯ Library ನಲ್ಲಿ ಇರುತ್ತದೆ. ಮತ್ತೆ ಮತ್ತೆ ಅದನ್ನು download ಮಾಡುವ ಅಗತ್ಯ ಇಲ್ಲ. ಮೊದಲ ಪುಟದಿಂದ ಆರಂಭಿಸಿ ಓದಲು ಎಲ್ಲರಲ್ಲೂ ವಿನಂತಿ!
ಇಡೀ ಪುಸ್ತಕದಲ್ಲಿ 200 ಕ್ಕಿಂತ ಹೆಚ್ಚು ಅಪರೂಪದ ಚಿತ್ರಗಳಿವೆ. ಅದಕ್ಕೆ ಸಂಬಂಧಿಸಿದ ಮಾಹಿತಿ ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಆಯಾ ಚಿತ್ರದ ಜೊತೆಗಿವೆ. ಚಿತ್ರಗಳೇ “ನಿರಾಮಯ”ದ ಜೀವಾಳ. ಕಂಪ್ಯೂಟರ್ ನಲ್ಲಿ ಪ್ರತಿಯೊಂದು ಚಿತ್ರವನ್ನು ಕ್ಲಿಕ್ ಮಾಡಿದಾಗಲೂ ಅದು ಅಂತರ್ಜಾಲದಲ್ಲಿನ ಮೂಲ ಚಿತ್ರವನ್ನು ತೆರೆಯುತ್ತದೆ.
ಜೊತೆಗೆ, ಇಂಗ್ಲೀಷ್ ಮಾಹಿತಿಯಲ್ಲಿ ಕೆಲವು ಪದಗಳು ನೀಲಿ ಬಣ್ಣದಲ್ಲಿ ಇವೆ. ಅಂತಹ ಪದಗಳನ್ನು ಕ್ಲಿಕ್ ಮಾಡಿದರೆ, ಆ ಪದಕ್ಕೆ ಸಂಬಂಧಿಸಿದ ಅಧಿಕೃತ ಮಾಹಿತಿ ಇರುವ ಪುಟ ಅಂತರ್ಜಾಲದಲ್ಲಿ ತೆರೆದುಕೊಳ್ಳುತ್ತದೆ! ಹೀಗೆ, ಪುಸ್ತಕದ ಪ್ರತಿಯೊಂದು ಪುಟವೂ ಮಾಹಿತಿಯನ್ನು ಹಲವಾರು ಪಟ್ಟು ವಿಸ್ತರಿಸಬಲ್ಲದು!
ನಿಮ್ಮ ಮೊಬೈಲ್ ಫೋನ್ ನಲ್ಲಿ ಕೂಡ “ನಿರಾಮಯ” ಪುಸ್ತಕವನ್ನು ಹೀಗೆಯೇ ಓದಬಹುದು. ಆದರೆ, ಅದರಲ್ಲಿ ಚಿತ್ರಗಳು ಅಂತರ್ಜಾಲದ ಮೂಲಕ ತೆರೆದುಕೊಳ್ಳುವುದಿಲ್ಲ. ಜೊತೆಗೆ, ಮೊಬೈಲ್ ನ ಸಣ್ಣ ಪರದೆಯ ಮೇಲೆ ಚಿತ್ರಗಳನ್ನು ಅಸ್ವಾದಿಸುವುದು ಸ್ವಲ್ಪ ಕಷ್ಟ! ಉಳಿದಂತೆ, ಮಾಹಿತಿಯೆಲ್ಲಾ ಒಂದೇ.
2. “ನಿರಾಮಯ” ಇ-ಪುಸ್ತಕದ ಆವೃತ್ತಿಯನ್ನು https://archive.org/details/niramaya-1607197361.-print ಎಂಬ ಜಾಲತಾಣದಲ್ಲಿ ಪಡೆಯಬಹುದು. ಪರದೆಯ ಮೇಲೆ Full Screen ಆಯ್ಕೆ ಒತ್ತಿ, ಪುಸ್ತಕವನ್ನು ನೇರವಾಗಿ ಆ ಜಾಲತಾಣದಲ್ಲೇ ಓದಬಹುದು. ಅದು ಸುಲಭ ಮತ್ತು ಸರಳ. ಆ ಜಾಲತಾಣವನ್ನು ನಿಮ್ಮ ಬ್ರೌಸರ್ ನಲ್ಲಿ bookmark ಮಾಡಿಕೊಂಡರೆ, ಪದೇಪದೇ ಹುಡುಕುವ ಅಗತ್ಯ ಇರುವುದಿಲ್ಲ.
“ನಿರಾಮಯ” ಪುಸ್ತಕವನ್ನು ಓದುವ ಬಗೆ:
“ನಿರಾಮಯ” ಒಂದು ಅಸಾಂಪ್ರದಾಯಿಕ ಕೃತಿ. ಇದು non-linear ಮಾದರಿಯ ರಚನೆ. ಇದು ಮೂಲತಃ ವೈದ್ಯಕೀಯ ಇತಿಹಾಸದ ಹಲವಾರು ಕವಲುಗಳನ್ನು ಚಿತ್ರಗಳ ಮೂಲಕ ಪರಿಚಯಿಸುವ ಕೃತಿ. ಈ ಕವಲುಗಳು ಒಂದೇ ಕಾಲದಲ್ಲಿ ವಿವಿಧ ದಿಕ್ಕುಗಳಲ್ಲಿ ಬೆಳೆದವು. ಹೀಗಾಗಿ, ಒಂದೊಂದೇ ಕವಲನ್ನು ಸ್ಥೂಲವಾಗಿ ಪರಿಚಯಿಸುತ್ತಾ ಹೋದಂತೆ ಕಾಲದ ಮಾಪನದಲ್ಲಿ ಹಿಂದೆ ಮುಂದೆ ಆಗಾಗ ಸಂಚಾರ ಮಾಡುತ್ತಾ ಹೋಗುವುದು ಪುಸ್ತಕದ ಅಗತ್ಯ.
“ನಿರಾಮಯ”ದಲ್ಲಿ ಮಾತನಾಡುವುದು ಚಿತ್ರಗಳು! ಇದರ ಜೊತೆಗೆ ಇರುವ ವಿವರಣೆಗಳು ತೀರಾ ಸರಳ ಮತ್ತು ಸ್ಥೂಲ. ಇದು ಕೇವಲ ಪರಿಚಯದ ಪುಸ್ತಕ! ಪ್ರತಿಯೊಂದು ಚಿತ್ರವೂ ವೈದ್ಯಕೀಯ ಇತಿಹಾಸದ ಒಂದು ತುಣುಕನ್ನು ಪರಿಚಯಿಸುತ್ತವೆ. ಅದರ ಮುಂದಿನ ಹಂತವನ್ನು ಮುಂದಿನ ಚಿತ್ರದಲ್ಲಿ ಕಾಣಬಹುದು. ಎರಡರ ನಡುವೆ ಇರುವ ಇತಿಹಾಸದ ಭಾಗವನ್ನು ಪಡೆದುಕೊಳ್ಳುವುದು ಅವರವರ ಆಸಕ್ತಿಯ ವಿಷಯ! ಈ ಬಗ್ಗೆ ಪುಸ್ತಕದ “ಮೊದಲ ಮಾತು” ವಿಭಾಗದಲ್ಲಿ ಬರೆದಿದ್ದೇನೆ.
“ನಿರಾಮಯ” ಪುಸ್ತಕವನ್ನು ಯಾವುದೇ ನಿರ್ಬಂಧವಿಲ್ಲದೆ ಮುಕ್ತವಾಗಿಯೇ ಓದಬೇಕು. ಮೊದಲು ಪುಸ್ತಕದಲ್ಲಿನ ಚಿತ್ರವನ್ನು ನೋಡಿರಿ. ನಂತರ ಅದಕ್ಕೆ ಸಂಬಂಧಿಸಿದ ವಿವರಣೆಯನ್ನು ಕನ್ನಡದಲ್ಲೋ ಅಥವಾ ಇಂಗ್ಲೀಷ್ ನಲ್ಲೋ (ಅಥವಾ ಎರಡೂ ಭಾಷೆಗಳಲ್ಲೊ) ಓದಿರಿ. ಅದರ ನಂತರ ಚಿತ್ರದ ಮೇಲೆ ಕ್ಲಿಕ್ ಮಾಡಿದರೆ, ಚಿತ್ರದ ಮೂಲ ಜಾಲತಾಣ ತೆರೆದುಕೊಳ್ಳುತ್ತದೆ. ಈಗ ಆ ಚಿತ್ರದ ಪೂರ್ಣ ಸ್ವರೂಪವನ್ನು ಅದರ ಬಗ್ಗೆ ಓದಿರುವ ಮಾಹಿತಿಯ ಹಿನ್ನೆಲೆಯಲ್ಲಿ ಚೆನ್ನಾಗಿ ಅರ್ಥ ಮಾಡಿಕೊಳ್ಳಬಹುದು.
“ನಿರಾಮಯ” ಒಂದು ಬೃಹತ್ ಸಂಗ್ರಹ. ಇದರಲ್ಲಿ 200 ಕ್ಕೂ ಹೆಚ್ಚು ಚಿತ್ರಗಳಿವೆ! ಪ್ರತಿಯೊಂದು ಚಿತ್ರದ ಹಿಂದೆಯೂ ಚಂದದ ಇತಿಹಾಸವಿದೆ! ಹೀಗಾಗಿ, ದಿನಕ್ಕೆ 3-4 ಚಿತ್ರಗಳನ್ನು ಪುರುಸೊತ್ತಾಗಿ ನೋಡುತ್ತಾ ಹೋಗಬಹುದು. ಯಾವುದೇ ಪುಟವನ್ನಾದರೂ bookmark ಹಾಕಿ ಗುರುತು ಮಾಡಬಹುದು. ಮುಂದಿನ ಓದಿನಲ್ಲಿ ಅದೇ ಚಿತ್ರಕ್ಕೆ ಪುಸ್ತಕ ಮತ್ತೆ ತೆರೆಯುತ್ತದೆ. ಸಾಧ್ಯವಾದರೆ, ವಿವರಣೆಯ ಜೊತೆಗೆ ನೀಡಿರುವ ಅಧಿಕ ಮಾಹಿತಿಯ ಜಾಲತಾಣಗಳಲ್ಲಿನ ಮಾಹಿತಿಯನ್ನೂ ನೋಡಬಹುದು.
“ನಿರಾಮಯ” ವೈದ್ಯಕೀಯ ಇತಿಹಾಸದ ಬಗ್ಗೆ ಕನ್ನಡದಲ್ಲಿ ಬಂದಿರುವ ಮೊದಲ “ಕಾಫಿ-ಟೇಬಲ್” ಮಾದರಿಯ ಇ-ಪುಸ್ತಕ! ಯಾವುದೇ ಭಾರತೀಯ ಭಾಷೆಯಲ್ಲಿ ಇಂತಹ ಪ್ರಯೋಗ ಬಂದಿಲ್ಲ. ಇದು ಕನ್ನಡದ ಹೆಮ್ಮೆ!
“ನಿರಾಮಯ” ಪುಸ್ತಕದಲ್ಲಿನ ಯಾವುದೇ ಮಾಹಿತಿಯ ಬಗ್ಗೆ ಹೆಚ್ಚಿನ ಅಧ್ಯಯನ ಮಾಡುವ ಇಚ್ಛೆ ಇರುವವರು ಈ ಪುಸ್ತಕದ advanced ಆವೃತ್ತಿಯನ್ನು ಪಡೆಯಲು 
Techfiz Inc
 ಸಂಸ್ಥೆಯನ್ನು info@techfiz.com ಎಂಬ email ವಿಳಾಸದಲ್ಲಿ ಸಂಪರ್ಕಿಸಬಹುದು.
“ನಿರಾಮಯ”ದ ಪ್ರಸ್ತುತ ಆವೃತ್ತಿಗಳು ಸಂಪೂರ್ಣ ಉಚಿತ. ಇದನ್ನು Google playbook ನಿಂದಾಗಲೀ ಅಥವಾ archive ಜಾಲತಾಣದಿಂದಾಗಲೀ ಪಡೆಯಲು ಯಾವುದೇ ವೆಚ್ಚವಿಲ್ಲ. ಪುಸ್ತಕವನ್ನು ಓದಿ, ಮೆಚ್ಚಿದವರು ಯಾವುದಾದರೂ ದೇಣಿಗೆ ನೀಡಬಯಸಿದರೆ ಅದನ್ನು ನೇರವಾಗಿ ಶ್ರೀಯುತ ಓಂಶಿವಪ್ರಕಾಶ್ ಅವರು ನಡೆಸುತ್ತಿರುವ “ಸಂಚಿ ಫೌಂಡೇಶನ್ ®” ಎಂಬ ಕನ್ನಡ ಸಂಸ್ಥೆಗೆ ನೀಡಬಹದು. ಕನ್ನಡದ ಅಪರೂಪದ ಹಳೆಯ ಪುಸ್ತಕಗಳನ್ನು scan ಮಾಡಿ, ಅವನ್ನು ಅಂತರ್ಜಾಲದ archive ಜಾಲತಾಣಕ್ಕೆ ಸೇರಿಸಿ, ಮುಕ್ತವಾಗಿ ಎಲ್ಲರಿಗೂ ದೊರಕಿಸುವ ಒಳ್ಳೆಯ ಕೆಲಸದಲ್ಲಿ ಸಂಚಿ ಫೌಂಡೇಶನ್ ® ನ “ಸಂಚಯ” ಸಮುದಾಯ ನಿರತವಾಗಿದೆ. “ನಿರಾಮಯ” ಓದುಗರಿಂದ “ಸಂಚಯ”ದ ಕೆಲಸಗಳಿಗೆ ಮತ್ತಷ್ಟು ಪ್ರೇರಣೆ ಸಿಗಲಿ ಎಂದು ಹಾರೈಕೆ. ಈ ಬಗ್ಗೆ ಹೆಚ್ಚಿನ ಮಾಹಿತಿಗೆ ಶ್ರೀಯುತ ಓಂಶಿವಪ್ರಕಾಶ್ ಅವರನ್ನು info@sanchifoundation.org ಅಥವಾ info@sanchaya.org ಎಂಬ ವಿಳಾಸದಲ್ಲಿ ಸಂಪರ್ಕಿಸಬಹುದು.
“ನಿರಾಮಯ”ದ ಓದು ನಿರಾಳವಾಗಿ ಸಾಗಲಿ! ಪುಸ್ತಕದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಳ್ಳಲು ವಿನಂತಿ. ಇ-ಪುಸ್ತಕ ಪ್ರಪಂಚದಲ್ಲಿನ ಈ ನವೀನ ಪ್ರಯೋಗ ನಿಮಗೆ ಹೇಗೆನಿಸಿತು ಎಂಬುದನ್ನು ಮಾತ್ರ ತಪ್ಪದೇ ತಿಳಿಸಿ.

 


ಉದಯವಾಣಿ ದಿನಪತ್ರಿಕೆ "ಆಯುರ್ವೇದ ವೈದ್ಯರು ಶಸ್ತ್ರಚಿಕಿತ್ಸೆ ಮಾಡುವುದು ಸಮಂಜಸವೇ?" ಎನ್ನುವ ವಿಷಯದ ಬಗ್ಗೆ 13/12/2020 ರ ಭಾನುವಾರ ಕೆಲವು ವೈದ್ಯರ ಅಭಿಪ್ರಾಯಗಳನ್ನು ಪ್ರಕಟಿಸಿತ್ತು. ಇದರಲ್ಲಿ ನನ್ನ ಎರಡು ಮಾತು ಇಲ್ಲಿದೆ.

**ರೋಗಿಗಳ ಅವರ ಉತ್ತರವೇ ಸರಿಯಾದ ಉತ್ತರ**
"ಆಯುರ್ವೇದದ ಶಲ್ಯಚಿಕಿತ್ಸೆ ಓದಿರುವ ವೈದ್ಯರು ಆಧುನಿಕ ವೈದ್ಯಪದ್ಧತಿಯ ಅನುಸಾರವಾಗಿ ಶಸ್ತ್ರಚಿಕಿತ್ಸೆಗಳನ್ನು ಮಾಡಬೇಕೆ?" ಎಂಬ ಪ್ರಶ್ನೆಯಲ್ಲಿ ಸರಿ-ತಪ್ಪುಗಳ ಜಿಜ್ಞಾಸೆ ಇರಬೇಕಾದ್ದು ವೈದ್ಯರ ಮಟ್ಟದಲ್ಲಿ ಮಾತ್ರವಲ್ಲ; ಅದಕ್ಕೆ ಪ್ರಮುಖವಾಗಿ ಆಧಾರವಾಗಬೇಕಾದ್ದು ರೋಗಿಗಳ ಸುರಕ್ಷತೆ ಮತ್ತು ಶಸ್ತ್ರಚಿಕಿತ್ಸೆಯ ಸಫಲತೆ. ಗಡಿಯಾರದ ರಿಪೇರಿಗೆ ಅಥವಾ ಕಾರಿನ ಸರ್ವೀಸಿಗೆ ಕೂಡ ತಜ್ಞರನ್ನು ಬಯಸುವ ನಮ್ಮ ಸಮಾಜ, ತಮ್ಮ ಸ್ವಂತ ಶರೀರದ ಶಸ್ತ್ರಚಿಕಿತ್ಸೆಯಂತಹ ಸಂಕೀರ್ಣ ಪ್ರಕ್ರಿಯೆಗೆ “ಯಾವುದೋ ವೈದ್ಯಪದ್ಧತಿಯನ್ನು ಅಧ್ಯಯನ ಮಾಡಿ ಇನ್ಯಾವುದೋ ವೈದ್ಯಪದ್ಧತಿಯನ್ನು ಅನುಸರಿಸಿ ಮಾಡುವವರನ್ನು ಯಾವ ಮಾನದಂಡಗಳಿಂದ ಒಪ್ಪುತ್ತದೆ?” ಎಂಬುದು ನಾವು ಕೇಳಬೇಕಾದ ನೈಜ ಪ್ರಶ್ನೆ.
ಶಸ್ತ್ರಚಿಕಿತ್ಸೆ ಒಂದು ಸಾಂಘಿಕ ಪ್ರಯತ್ನ. ರೋಗ ಪತ್ತೆ ಮಾಡುವವರು, ಪ್ರಯೋಗಾಲಯಗಳು ಕ್ಷ-ಕಿರಣ ತಜ್ಞರು, ಅರಿವಳಿಕೆ ತಜ್ಞರು, ಶಸ್ತ್ರಚಿಕಿತ್ಸೆಯ ವೈದ್ಯರು, ತೀವ್ರ-ನಿಗಾ ಘಟಕದ ತಜ್ಞರು, ಫಿಸಿಯೋಥೆರಪಿ - ಹೀಗೆ ಹಲವಾರು ತಜ್ಞರ ತಂಡ ಏಕರೂಪವಾಗಿ ಬೆಸೆದುಕೊಂಡು ಮಾಡಬೇಕಾದ ಸರಣಿ ಪ್ರಕ್ರಿಯೆ. ಇಂತಹ ಸಂಕೀರ್ಣ ಸರಣಿಯ ಅತ್ಯುತ್ತಮ ನಿರ್ವಹಣೆಗೆ ಪ್ರತಿಯೊಬ್ಬರೂ ಒಂದೇ ಮಾದರಿಯ ತರಬೇತಿ ಹೊಂದಿರುವುದು ಬಹಳ ಮುಖ್ಯ.
ಹೀಗಾಗಿ, ಆಯುರ್ವೇದದ ಶಲ್ಯಚಿಕಿತ್ಸಕರು ಶಸ್ತ್ರಚಿಕಿತ್ಸೆ ಮಾಡಬೇಕೆಂದರೆ, ಇಡೀ ತಂಡವನ್ನು ಆಯುರ್ವೇದದ ಆಧಾರದ ಮೇಲೆ ಸಂಪೂರ್ಣವಾಗಿ ಕಟ್ಟಬೇಕಾಗುತ್ತದೆ. ನಮ್ಮ ಶಿಕ್ಷಣ ವ್ಯವಸ್ಥೆ ಇದನ್ನು ಸಫಲವಾಗಿ ಮಾಡಿದರೆ ಯಾರಿಗೂ ಅಭ್ಯಂತರವಿಲ್ಲ. ಆದರೆ ಬೇರೆ ಯಾವುದೋ ಪದ್ಧತಿಯಲ್ಲಿ ಅಧ್ಯಯನ ಮಾಡಿರುವವರನ್ನು ಮತ್ತೊಂದು ತಂಡದಲ್ಲಿ ಅನಾಮತ್ತಾಗಿ ಸೇರಿಸಿದರೆ ಅದು ಒಂದು ತಂಡವಾಗಿ ಉಳಿಯುವುದಿಲ್ಲ.
ಒಂದು ವೇಳೆ ಶಸ್ತ್ರಚಿಕಿತ್ಸೆ ಸಫಲವಾಗದಿದ್ದರೆ ಅದರ ಹೊಣೆಗಾರಿಕೆ ಯಾರದ್ದು? ಎರಡು ಬೇರೆ-ಬೇರೆ ಪದ್ಧತಿಗಳನ್ನು ಬೆರೆಸಿದ ತಂಡದಲ್ಲಿ ಸಾಫಲ್ಯವನ್ನು ಎಲ್ಲರೂ ಸಂಭ್ರಮಿಸುತ್ತಾರೆ. ಆದರೆ, ಸೋಲಿನ ಹೊಣೆಗಾರಿಕೆಗೆ ಯಾರೂ ಸಿದ್ಧರಿರುವುದಿಲ್ಲ. ಈ ದ್ವಂದ್ವದಲ್ಲಿ ಸೋಲುವವರು ರೋಗಿಗಳು. ಹಾಗೆ ಆಗುವುದು ಅಸಹನೀಯ ಮತ್ತು ವೈದ್ಯಕೀಯ ವ್ಯವಸ್ಥೆಯ ಮೂಲೋದ್ದೇಶದ ಸೋಲು.
ರೋಗಿಗಳ ಸುರಕ್ಷತೆಯ ದೃಷ್ಟಿಯಿಂದ ಮಾತ್ರ ಈ ಪ್ರಶ್ನೆಯನ್ನು ವಿವೇಚಿಸಬೇಕು. ಇದು ಯಾರೊಬ್ಬರ ಪ್ರತಿಷ್ಠೆಯ ಪ್ರಶ್ನೆ ಆಗಬಾರದು. “ನಮ್ಮ ಶಸ್ತ್ರಚಿಕಿತ್ಸೆಯನ್ನು ಯಾರು ಮಾಡಬೇಕು?” ಎಂಬುದನ್ನು ನಿರ್ಧರಿಸಬೇಕಾದವರು ಖುದ್ದು ರೋಗಿಗಳು! "ನಿಮ್ಮ ದೇಹದ ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನು ನೀವು ಶಲ್ಯಚಿಕಿತ್ಸೆ ಓದಿರುವ ಆಯುರ್ವೇದ ವೈದ್ಯರಿಂದ ಮಾಡಿಸಿಕೊಳ್ಳುತ್ತೀರಾ?" ಎಂದು ರೋಗಿಗಳನ್ನು ಕೇಳಬೇಕು. ಅವರ ಉತ್ತರವೇ ಸರಿಯಾದ ಉತ್ತರ.

ಬುಧವಾರ, ನವೆಂಬರ್ 25, 2020


 **ನಿಮ್ಮ ಶಸ್ತ್ರಚಿಕಿತ್ಸೆ ಯಾರು ಮಾಡಬೇಕು?**

"ಆಯುರ್ವೇದ ಕಲಿತಿರುವವರು ಇನ್ನು ಮುಂದೆ ಶಸ್ತ್ರಚಿಕಿತ್ಸೆ ಮಾಡಬಹುದು" ಎಂದು ಸರ್ಕಾರ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಇದರ ಸಾಧಕಬಾಧಕಗಳ ಕುರಿತು ಚಿಂತಿಸುವಾಗ, ಒಂದು ಘಟನೆ ನೆನಪಾಯಿತು. ಕೆಲ ದಶಕಗಳ ಹಿಂದೆ “ಸಂಸ್ಕೃತ ಕಲಿಯುವವರು ಕಡಿಮೆಯಾಗಿದ್ದಾರೆ” ಎನ್ನುವ ಕಾರಣಕ್ಕೆ ಅಂದಿನ ಸರಕಾರ ಒಂದು ಭಯಂಕರ ಆಲೋಚನೆ ಮಾಡಿತು. ಪ್ರೌಢಶಾಲೆಯ ಮಟ್ಟದಲ್ಲಿ ಸಂಸ್ಕೃತ ತೆಗೆದುಕೊಂಡವರಿಗೆ ಧಾರಾಳವಾಗಿ ಅಂಕ ಕೊಡುವುದು! ಮೂರುವರ್ಷಗಳ ಅವಧಿಯಲ್ಲಿ ಸಣ್ಣವಯಸ್ಸಿನ ಮಕ್ಕಳು ಸಂಸ್ಕೃತ ಕಲಿಯುವುದು ಹೇಗೆ? ಚಿಂತೆಯಿಲ್ಲ; ಶೇಕಡಾ 15 ಅಂಕಗಳ ಪ್ರಶ್ನೆಗಳನ್ನು ಸಂಸ್ಕೃತದಲ್ಲಿ ಉತ್ತರಿಸಿದರೆ ಸಾಕು. ಉಳಿದ 85 ಅಂಕಗಳ ಪ್ರಶ್ನೆಗಳನ್ನು ಕನ್ನಡ, ಇಂಗ್ಲೀಷ್, ಇಲ್ಲವೇ ಮರಾಠಿ ಭಾಷೆಗಳಲ್ಲಿ ಉತ್ತರಿಸಬಹುದು ಎಂಬ ಏರ್ಪಾಡು. ಮಕ್ಕಳಿಗೆ ಸಂಸ್ಕೃತ ಭಾಷಾಭಿಮಾನ ಹೆಚ್ಚಾಗಿ, ಇನ್ನೆರಡು ದಶಕಗಳಲ್ಲಿ ದೇಶದ ತುಂಬಾ ಕಾಳಿದಾಸ, ಭಾರವಿ, ದಂಡಿ, ಮಾಘರಂತಹ ಕವಿಗಳು ಅಲೆದಾಡುತ್ತಾರೆ ಎಂಬ ಭ್ರಮೆ. ಯಾವುದೇ ಪರಿಣಾಮಗಳ ಬಗ್ಗೆ ಹಿಂದೆ-ಮುಂದೆ ಆಲೋಚಿಸದೇ ಈ ನಿರ್ಧಾರವನ್ನು ಸರ್ಕಾರ ಅಮಲುಗೊಳಿಸಿತ್ತು.
ಆದದ್ದೇ ಬೇರೆ! ಅಂಕಗಳ ಆಸೆಗೆ ಪ್ರೌಢಶಾಲೆಯಲ್ಲಿ ಸಂಸ್ಕೃತ ತೆಗೆದುಕೊಂಡವರಿಗೆ ಪದವಿಪೂರ್ವ ಓದಿನಲ್ಲಿ ತಮಗೆ ಬೇಕಾದ ಶಾಖೆ ಪಡೆಯಲಷ್ಟೇ ಇದು ನೆರವಾಯಿತು! ಕನ್ನಡ ಪ್ರಥಮ ಭಾಷೆ ಪರೀಕ್ಷೆಯಲ್ಲಿ 60 ಮುಟ್ಟುವುದು ತ್ರಾಸವಾಗಿದ್ದಾಗ, ಸಂಸ್ಕೃತ ಪರೀಕ್ಷೆಯನ್ನು ಕನ್ನಡದಲ್ಲಿ ಬರೆದವರು ಆರಾಮವಾಗಿ 90 ಪಡೆಯುತ್ತಿದ್ದರು! ಈ 30 ಅಂಕಗಳ ಅಂತರ ಎಷ್ಟೋ ಸಮರ್ಥ ವಿದ್ಯಾರ್ಥಿಗಳ ಪಾಲಿಗೆ ದುಬಾರಿಯಾಗುತ್ತಿತ್ತು. ಒಂದೆರಡು ವರ್ಷಗಳಲ್ಲಿ ಪದವಿಪೂರ್ವ ಕಾಲೇಜುಗಳು ಈ ಸಮಸ್ಯೆಯನ್ನು ಗ್ರಹಿಸಿದವು. ತಮ್ಮ ಕಾಲೇಜಿನ ಪ್ರವೇಶಕ್ಕೆ ಭಾಷೆಗಳಲ್ಲಿನ ಅಂಕಗಳನ್ನು ಹೊರತುಪಡಿಸಿ, ಕೇವಲ ಗಣಿತ, ವಿಜ್ಞಾನ, ಸಮಾಜ ವಿಷಯಗಳಲ್ಲಿ ಬಂದ ಅಂಕಗಳನ್ನು ಮಾತ್ರ ಪರಿಗಣಿಸಿದವು. ಮೊದಮೊದಲು ಇದನ್ನು ವಿರೋಧಿಸಿದ ಸರಕಾರ, ನಂತರ ತಾನೂ ಇದನ್ನೇ ಅನುಸರಿಸಿತು! ಮೊದಲೇ ಅಂಕಗಳ ಬೆನ್ನು ಬಿದ್ದಿದ್ದ ವಿದ್ಯಾರ್ಥಿಗಳು ಭಾಷೆಗಳನ್ನು ನಿರ್ಲಕ್ಷ್ಯ ಮಾಡಿದರು. “ಭಾಷೆಗಳಲ್ಲಿ ಜಸ್ಟ್-ಪಾಸ್ ಆದರೆ ಸಾಕು” ಎನ್ನುವ ಮನೋಭಾವ ಬೆಳೆಯಿತು. ವೈದ್ಯಕೀಯ ಮತ್ತು ಎಂಜಿನೀರಿಂಗ್ ಪ್ರವೇಶ ಪರೀಕ್ಷೆ ಬಂದ ಮೇಲಂತೂ ಪದವಿಪೂರ್ವ ವಿಜ್ಞಾನದಲ್ಲಿ ಭಾಷೆಗಳ ಕ್ಲಾಸು ಖಾಲಿ-ಖಾಲಿ! ಸಂಸ್ಕೃತ ಭಾಷೆ ಇದರಿಂದ ಎಷ್ಟು ಬೆಳೆಯಿತೋ ತಿಳಿಯದು. ಆದರೆ, ಅನೇಕ ತಲೆಮಾರುಗಳು ಭಾಷೆಯ ಕಲಿಕೆಯನ್ನು ಅವಗಣನೆ ಮಾಡಿ, ಅದು ನೀಡಬಹುದಾಗಿದ್ದ ಅತ್ಯುನ್ನತ ಅನುಭವಗಳಿಂದ ವಂಚಿತವಾದವು.
ಇದು ನಮ್ಮ ಸರ್ಕಾರಗಳ ಮಾದರಿ! ವ್ಯವಸ್ಥೆಗೆ ಪ್ರತಿಯೊಂದಕ್ಕೂ ಶಾರ್ಟ್-ಕಟ್ ಬೇಕು! ಆದರೆ, ಅದು ಪರಿಣಾಮಕಾರಿಯೇ? ಅದರಿಂದ ಅಪೇಕ್ಷಿತ ಫಲ ದಕ್ಕಿದೆಯೇ? ಎಲ್ಲಿ ಸೋತಿದ್ದೇವೆ? - ಇಂತಹ ಆತ್ಮಾವಲೋಕನಗಳು ನಿಷಿದ್ಧ! ತಳಪಾಯ ಭಧ್ರವಾಗಿರುವ ಭವ್ಯಮಹಲ್ ಯಾರದೋ ನಿರ್ಲಕ್ಷ್ಯದಿಂದ ಹಾಳಾಗಿದೆ ಎಂದರೆ, ಅದನ್ನು ವೈಜ್ಞಾನಿಕವಾಗಿ ಸಂರಕ್ಷಣೆ ಮಾಡುವುದಿಲ್ಲ. ಬದಲಿಗೆ, ಏಕಾಏಕಿ “ಇದು ವಾಸಕ್ಕೆ ಯೋಗ್ಯ” ಎಂದು ಘೋಷಿಸಿಬಿಡುತ್ತದೆ! ಕಟ್ಟಡದ ಒಳಗೆ ಬಂದವರು ಅದರ ಹೀನಾಯ ಸ್ಥಿತಿಯನ್ನು ಪ್ರಶ್ನಿಸಿದರೆ, “ಪಕ್ಕದ ಕಟ್ಟಡ ಗಟ್ಟಿಮುಟ್ಟಾಗಿದೆ. ಅಲ್ಲಿ ಉಳಿದುಕೊಳ್ಳಿ” ಎಂದು ಜಾರಿಕೊಳ್ಳುತ್ತದೆ!
ಆಯುರ್ವೇದ ನಮ್ಮ ದೇಶದ ಪ್ರಾಚೀನ ವೈದ್ಯಪದ್ದತಿ. ಎಷ್ಟೋ ಶತಮಾನಗಳು ರಾರಾಜಿಸಿದ ಚಿಕಿತ್ಸಾ ವಿಧಾನ. ನಾನಾ ಕಾರಣಗಳಿಂದ ಅವಗಣನೆಗೆ ಒಳಗಾಗಿದ್ದ ಇದರ ಪುನರುತ್ಥಾನ ಆಲೋಚನಾರ್ಹ. ಅದಕ್ಕೊಂದು ಸಮಗ್ರ ಕಾರ್ಯತಂತ್ರವೇ ಬೇಕು. ಸಂಸ್ಕೃತ ತಜ್ಞರು, ಆಯುರ್ವೇದ ಪಂಡಿತರು, ದೇಶೀ ಔಷಧ ತಜ್ಞರು, ಸಸ್ಯಶಾಸ್ತ್ರಜ್ಞರು, ಪ್ರಾಣಿತಜ್ಞರು, ವಂಶಪಾರಂಪರ್ಯವಾಗಿ ನಾಟಿವೈದ್ಯಚಿಕಿತ್ಸೆ ನೀಡುತ್ತಿರುವವರು – ಹೀಗೆ ಹಲವಾರು ಜ್ಞಾನಿಗಳಿರುವ ಸಮಿತಿಯಿಂದ ಕಾರ್ಯಸೂಚಿ ತಯಾರಾಗಬೇಕು. ಪುರಾತನ ಆಯುರ್ವೇದ ಗ್ರಂಥಗಳನ್ನು ಸಂಪಾದಿಸಿ, ಪರಿಷ್ಕರಿಸಬೇಕು. ಸಾವಿರಾರು ವರ್ಷಗಳ ಹಿಂದೆ ಇದ್ದ ಪದಗಳ ಅರ್ಥ; ಸಸ್ಯ/ಪ್ರಾಣಿಗಳ ಹೆಸರು; ವಿವರಣೆಯನ್ನು ಆಧರಿಸಿದ ಚಿಕಿತ್ಸೆಯ ಕ್ರಮವಿಧಾನ – ಮುಂತಾದ ಮೂಲಭೂತ ಅಂಶಗಳನ್ನು ನಿರ್ಧರಿಸಬೇಕು. ಪುರಾತನ ಪಠ್ಯಗಳನ್ನು ಪ್ರಸ್ತುತ ಕಾಲಘಟ್ಟದಲ್ಲಿ ಅನುಸರಿಸಲು ಯೋಗ್ಯವಾಗುವಂತೆ ನಿರ್ವಹಿಸಬೇಕು.
ದೇಶದ ತುಂಬಾ ಹಬ್ಬಿರುವ ಆಯುರ್ವೇದ ಕಾಲೇಜುಗಳ ಮೌಲ್ಯಮಾಪನ ಮಾಡಿ, ಕಟ್ಟುನಿಟ್ಟಾದ ಗುಣಮಟ್ಟ ನಿಷ್ಕರ್ಷೆ ಮಾಡಬೇಕು. ಆಯುರ್ವೇದ ವಿದ್ಯಾರ್ಥಿಗಳಿಗೆ ತಜ್ಞ ಸಮಿತಿ ನಿರ್ಧರಿಸಿರುವ ವೈಜ್ಞಾನಿಕ ಪಠ್ಯಕ್ರಮದಲ್ಲಿ ಕಿಂಚಿತ್ ದೋಷವೂ ಬಾರದಂತೆ ಅತ್ಯುನ್ನತ ಮಟ್ಟದ ಶಿಕ್ಷಣ ನೀಡಬೇಕು. ಆಯುರ್ವೇದ ವೈದ್ಯರು ಕೇವಲ ಆಯುರ್ವೇದದ ಚಿಕಿತ್ಸೆಯನ್ನಷ್ಟೇ ನೀಡುವಂತೆ ಕಾನೂನು ಮಾಡಬೇಕು. ಇದಕ್ಕೆ ಪೂರಕವಾಗಿ ಸರಕಾರವೇ ಆಯುರ್ವೇದ ಕ್ಲಿನಿಕ್ ಮತ್ತು ಆಸ್ಪತ್ರೆಗಳನ್ನು ನಿರ್ಮಿಸಿ ಪ್ರೋತ್ಸಾಹಿಸಬೇಕು. “ಆಯುರ್ವೇದ ಶಿಕ್ಷಣ ಎನ್ನುವುದು ಆಧುನಿಕ ವೈದ್ಯ ಪದ್ದತಿಗೆ ನುಗ್ಗುವ ಕಳ್ಳಮಾರ್ಗ” ಎನ್ನುವ ಜನರ ಭಾವನೆಯನ್ನು ಬದಲಾಯಿಸಬೇಕು. ಆಯುರ್ವೇದ ನಮ್ಮ ದೇಶದ ಸ್ವತ್ತು; ಅದನ್ನು ನಾವೇ ಕಾಪಾಡಿಕೊಳ್ಳಬೇಕು. ಆಯುರ್ವೇದದ ಉಳಿವಿಗೆ ಸರ್ಕಾರದ ನೆರವನ್ನು ವಿರೋಧಿಸುವಂತಹ ಮಾತುಗಳನ್ನು ಉಪೇಕ್ಷಿಸುವುದೇ ಸೂಕ್ತ!
ಆಯುರ್ವೇದದ ಕುರಿತಾಗಿ ಹೆಚ್ಚಿನ ವ್ಯಾಸಂಗ, ಸಂಶೋಧನೆ ಮಾಡುವವರಿಗೆ ತಜ್ಞರ ಸಮಿತಿಯ ಮೇಲುಸ್ತುವಾರಿಯಲ್ಲಿ ಸರಕಾರ ನೆರವು ನೀಡಬೇಕು. ಉದ್ಯಮಿಗಳನ್ನು ಇದಕ್ಕೆ ಪ್ರೇರೇಪಿಸಿ, ಉದ್ಯೋಗಸೃಷ್ಟಿ ಮಾಡಬಹುದು. ಕೇಂದ್ರೀಯ ಮಟ್ಟದಲ್ಲಿ ಆಯುರ್ವೇದ ನಿಗಮ ಸ್ಥಾಪನೆಯಾದರೆ ಮತ್ತಷ್ಟು ಒಳ್ಳೆಯದು. ಆಯುರ್ವೇದವೆಂದರೆ ಇಷ್ಟ ಬಂದುದ್ದನ್ನೆಲ್ಲಾ ಯದ್ವಾತದ್ವಾ ಮಾಡಬಹುದು ಎಂಬ ನಿಕೃಷ್ಟ ಭಾವನೆ ಇರಬಾರದು. ವೈಜ್ಞಾನಿಕತೆಗೆ ಇಂಬು ನೀಡುವಂತೆ, ಆಧುನಿಕ ಸಂಶೋಧನೆಯ ನಿಯಮಗಳು ಒಪ್ಪುವಂತೆ ಗುಣಮಟ್ಟದ ಸಾಧನೆ ಆಗಬೇಕು. ಇಲ್ಲವಾದರೆ ಪ್ರಪಂಚದ ಲೇವಡಿ ಶತಸ್ಸಿದ್ಧ! ಅದಕ್ಕೆ ಆಸ್ಪದ ಇರಬಾರದು. ಆಯುರ್ವೇದವನ್ನು ಪ್ರೋತ್ಸಾಹಿಸುವುದು ಹೀಗೆ. ಮೂರು ತಿಂಗಳ ಬ್ರಿಜ್-ಕೋರ್ಸ್ ಮಾಡುವಂತಹ ಸಲಹೆಗಳನ್ನು ಸರಕಾರಕ್ಕೆ ಯಾರು ನೀಡುತ್ತಾರೋ ತಿಳಿಯದು!
ಶಸ್ತ್ರಚಿಕಿತ್ಸೆಯ ವಿಷಯದಲ್ಲಿ ಆಯುರ್ವೇದ ಬಹಳ ಪ್ರಾಚೀನ ಸ್ಥಿತಿಯಲ್ಲಿಯೇ ಇದೆ. ಅಂದಿನ ಕಾಲದ ಶಸ್ತ್ರಚಿಕಿತ್ಸೆಯ ವಿಧಾನಗಳು ಇಂದಿಗೆ ಹೊಂದುವುದಿಲ್ಲ. ಶಸ್ತ್ರಚಿಕಿತ್ಸೆ ಎಂದರೆ ಕತ್ತರಿಸುವುದು, ಹೊಲಿಯುವುದು ಅಲ್ಲ! ಅದೊಂದು ಅತ್ಯಂತ ಸೂಕ್ಷ್ಮ ವಿಜ್ಞಾನ. ಕೆಲವೊಮ್ಮೆ ಮಿಲಿಮೀಟರ್ ವ್ಯತ್ಯಾಸ ಕೂಡ ಆಗುವಂತಿಲ್ಲ. ಈ ಮಟ್ಟದ ಪರಿಣತಿಯನ್ನು ಸಾಧಿಸುವುದಕ್ಕೆ ಎಷ್ಟೋ ವರ್ಷಗಳ ಅನುಭವ ಬೇಕು. ನೈಜಾರ್ಥದಲ್ಲಿ, ಶಸ್ತ್ರಚಿಕಿತ್ಸೆ ಎನ್ನುವುದು ಒಬ್ಬರ ಸಾಧನೆಯಲ್ಲ; ಒಂದು ತಂಡದ ಪ್ರಯತ್ನ. ಶಸ್ತ್ರಚಿಕಿತ್ಸೆಗೆ ಮುನ್ನ ಕಾಯಿಲೆ ಪತ್ತೆಗೆ ಅನುಸರಿಸುವ ನಿಖರವಾದ ವಿಧಾನ; ಎಂತಹ ಶಸ್ತ್ರಚಿಕಿತ್ಸೆ ಮಾಡಬೇಕೆನ್ನುವ ನಿರ್ಧಾರ; ಕಾಯಿಲೆಯ ಹಂತವನ್ನು ಅನುಸರಿಸಿ ಆರೈಕೆಯ ಮಟ್ಟದ ಚಿಂತನೆ; ಅರಿವಳಿಕೆಯ ಹಂತ ಮತ್ತು ಕಾರ್ಯಸೂಚಿ; ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ಆಗಬಹುದಾದ ಅನಾಹುತಗಳಿಗೆ ಪೂರ್ವಸಿದ್ಧತೆ; ಶಸ್ತ್ರಚಿಕಿತ್ಸೆ ನಂತರದ ಅವಧಿಯ ನಿಗಾ; ಲಭ್ಯವಿರುವ ನೂರಾರು ಔಷಧಗಳ ಪೈಕಿ ಆಯಾ ರೋಗಿಗೆ ನೀಡಬಹುದಾದ ಔಷಧಗಳ ನಿಷ್ಕೃಷ್ಟ ಲೆಕ್ಕಾಚಾರ; ಸೋಂಕು ಆಗದಂತೆ ನೋಡಿಕೊಳ್ಳಬೇಕಾದ ವಿಧಾನ; ರೋಗಿ ಗುಣ ಹೊಂದುವಾಗ ಗಮನಿಸಬೇಕಾದ ಪದ್ದತಿ – ಹೀಗೆ ಇದೊಂದು ಸಂಕೀರ್ಣ ಸರಣಿ! ಆಧುನಿಕ ವೈದ್ಯಪದ್ದತಿ ಈ ಮಟ್ಟ ತಲುಪುವುದಕ್ಕೆ ನೂರಾರು ವರ್ಷಗಳು ಹಿಡಿದಿವೆ. ಇಷ್ಟಾಗಿಯೂ ಅವಘಡಗಳು ಸಂಭವಿಸುತ್ತವೆ. ಪ್ರಪಂಚದಲ್ಲಿ ದಿನವೂ ಲಕ್ಷಾಂತರ ಶಸ್ತ್ರಚಿಕಿತ್ಸೆಗಳು ಆಧುನಿಕ ವೈದ್ಯಪದ್ದತಿಯ ನಿಯಮಗಳ ಅನುಸಾರ ನಡೆಯುತ್ತವೆ. ಪ್ರತಿಯೊಂದು ಅವಘಡವನ್ನೂ ದಾಖಲಿಸಿ, ಚರ್ಚಿಸಿ, ಆ ತಪ್ಪು ಮತ್ತೊಮ್ಮೆ ಮರುಕಳಿಸದಂತೆ ಪಾಠ ಕಲಿಯಲಾಗುತ್ತದೆ. ಮೂವತ್ತು ವರ್ಷಗಳ, ಸಾವಿರಾರು ಶಸ್ತ್ರಚಿಕಿತ್ಸೆಗಳ ಅನುಭವ ಇರುವ ಶಸ್ತ್ರಚಿಕಿತ್ಸಾತಜ್ಞರು ಕೂಡ ತಾವು ಪರಿಪೂರ್ಣ ಎಂದು ಭಾವಿಸುವುದಿಲ್ಲ. ಈ ಕ್ಷೇತ್ರದ ಸಂಕೀರ್ಣತೆ ಇಂತಹದ್ದು. ಒಂದು ವಾರ ಕಲಿಯದಿದ್ದರೆ ಹಿಂದೆ ಬಿದ್ದಂತೆ!
ಹೀಗಿರುವಾಗ ಸರಕಾರ ಏಕಾಏಕಿ ಆಯುರ್ವೇದದ ವೈದ್ಯರಿಗೆ ಶಸ್ತ್ರಚಿಕಿತ್ಸೆ ಮಾಡಲು ಅನುಮತಿ ನೀಡುವುದು ಎಷ್ಟು ಸರಿ ಎನ್ನುವ ಜಿಜ್ಞಾಸೆ. ಅದಕ್ಕೆ ಸಂಬಂಧಿಸಿದ ಪುಸ್ತಕಗಳು ಯಾವುವು? ಅವರು ಏನನ್ನು ಓದಬೇಕು? ಎರಡೂವರೆ ಸಾವಿರ ವರ್ಷಗಳ ಹಿಂದಿನ ಪಠ್ಯ ಓದಿ ಇಂದು ಶಸ್ತ್ರಚಿಕಿತ್ಸೆ ಮಾಡಲಾದೀತೇ? ಅರಿವಳಿಕೆಗೆ ಯಾವ ಆಯುರ್ವೇದ ಔಷಧ ನೀಡುತ್ತಾರೆ? ರೋಗಿಗೆ ಏನಾದರೂ ಅವಗಢಗಳಾದರೆ ಯಾರು ಹೊಣೆ? ಶಸ್ತ್ರಚಿಕಿತ್ಸೆಯ ನಂತರದ ನಿಗಾ ಸಮಯದಲ್ಲಿ ಯಾವ ಆಯುರ್ವೇದ ಔಷಧ ಬಳಸಬೇಕು? ಸರ್ವೋಚ್ಚ ನ್ಯಾಯಾಲಯ ಎರಡು ವಿಭಿನ್ನ ಚಿಕಿತ್ಸಾ ಪದ್ದತಿಗಳನ್ನು ಒಗ್ಗೂಡಿಸಬಾರದು ಎಂದು ತೀರ್ಪು ನೀಡಿದೆ. ಹೀಗಿರುವಾಗ, ಶಸ್ತ್ರಚಿಕಿತ್ಸೆ ಮಾತ್ರ ಆಯುರ್ವೇದದ ವೈದ್ಯರು ಮಾಡಿ, ಉಳಿದದ್ದನ್ನು ಆಧುನಿಕ ವೈದ್ಯ ಪದ್ಧತಿ ಮಾಡಲಾಗದು, ಅದು ನ್ಯಾಯಾಲಯದ ಅಧಿಸೂಚನೆಗೆ ವಿರುದ್ಧ! ಇದರ ನಿರ್ವಹಣೆ ಹೇಗೆ?
ಪ್ರಜೆಗಳ ಆರೋಗ್ಯದ ಬಗ್ಗೆ ಈಗ ಸದ್ಯಕ್ಕೆ ಸರಕಾರ ವ್ಯಯಿಸುತ್ತಿರುವ ಹಣ ತೀರಾ ತೀರಾ ಕಡಿಮೆ. ನಮ್ಮ ದೇಶದ ಬಹುತೇಕ ಮಂದಿ ತಮ್ಮ ಅನಾರೋಗ್ಯದ ಚಿಕಿತ್ಸೆಗೆ ತಾವೇ ಹಣ ಖರ್ಚು ಮಾಡಿ ದಾರಿ ಕಂಡುಕೊಳ್ಳುತ್ತಾರೆ. ವಾಸ್ತವ ಹೀಗಿರುವಾಗ, ಸರಕಾರ ಮಾಡುವ ಅವೈಜ್ಞಾನಿಕ ನಿರ್ಧಾರಗಳಿಂದ ಪ್ರಜೆಗಳು ತಮ ಕಷ್ಟಾರ್ಜಿತವನ್ನು ಖರ್ಚು ಮಾಡಿದ ನಂತರವೂ ಇಲ್ಲಸಲ್ಲದ ಸಮಸ್ಯೆಗಳಿಗೆ ಒಳಗಾಗಬಾರದು. ಒಂದು ವೇಳೆ ಆಯುರ್ವೇದ ವ್ಯಾಸಂಗ ಮಾಡಿದ ವೈದ್ಯರಿಗೆ ಶಸ್ತ್ರಚಿಕಿತ್ಸೆ ಮಾಡುವ ಸವಲತ್ತನ್ನು ನೀಡಲೇಬೇಕು ಎಂದು ಸರಕಾರಕ್ಕೆ ಅನಿಸಿದರೆ, ಆ ಹಠಕ್ಕೆ ಸಾಮಾನ್ಯ ಪ್ರಜೆಗಳ ಅನಾರೋಗ್ಯ ಪ್ರಯೋಗಶಾಲೆ ಆಗಬಾರದು. ಮೊದಲು ಸರಕಾರ ಆಯುರ್ವೇದ ಶಲ್ಯಚಿಕಿತ್ಸೆಯ ರೂಪುರೇಷೆಗಳನ್ನು ನಿರ್ಧರಿಸಬೇಕು. ಅದಕ್ಕೆ ಸಂವಾದಿಯಾದ ಅರಿವಳಿಕೆ, ಔಷಧಗಳು, ತೀವ್ರ ನಿಗಾ ಘಟಕ, ತುರ್ತುಚಿಕಿತ್ಸೆಯ ಆಯುರ್ವೇದ ತಜ್ಞರು – ಇವರನ್ನೆಲ್ಲಾ ಸಿದ್ಧಗೊಳಿಸಬೇಕು. ಈ ತಯಾರಿ ಆದ ಮೇಲೆ ಕಾನೂನಿನ ದೃಷ್ಟಿಯಿಂದ ಇದಕ್ಕೆ ಮಾನ್ಯತೆ ಕೊಡಿಸಬೇಕು. ಶಲ್ಯಚಿಕಿತ್ಸೆಯ ಅವಗಢಗಳಿಗೆ ಕಾನೂನಾತ್ಮಕ ಹೊಣೆಗಾರಿಕೆಯನ್ನು ಪ್ರಜೆಗಳ ಮುಂದೆ ಸ್ಪಷ್ಟಪಡಿಸಬೇಕು. ಇದಕ್ಕೆ ನ್ಯಾಯಾಂಗದ ಮಾನ್ಯತೆ ಕೊಡಿಸಬೇಕು. ಈ ಮೂಲಭೂತ ತಯಾರಿ ಇಲ್ಲದೇ ದುಡುಕಿನ ಹೆಜ್ಜೆಗಳನ್ನು ಇಡುವುದು ಪ್ರಜೆಗಳಿಗಾಗಲೀ, ಆಯುರ್ವೇದ ವೈದ್ಯರಿಗಾಗಲೀ ಅಪಾಯಕಾರಿಯಾಗಬಹುದು.
ಖಾಸಗಿ ಆಸ್ಪತ್ರೆಗಳೇ ರಾರಾಜಿಸುವ ನಮ್ಮ ಆರೋಗ್ಯ ವ್ಯವಸ್ಥೆಯಲ್ಲಿ ಪ್ರಾಮಾಣಿಕತೆಯ ಮಟ್ಟ ಕಡಿಮೆ ಎಂಬ ಭಾವನೆ ಜನಸಾಮಾನ್ಯರಲ್ಲಿ ಪ್ರಬಲವಾಗಿದೆ. ಅದಕ್ಕೆ ಪೂರಕ ಎಂಬಂತೆ ಖಾಸಗಿ ಆಸ್ಪತ್ರೆಗಳು ನಡೆದುಕೊಳ್ಳುತ್ತವೆ. ವಿದ್ಯಾರ್ಹತೆ ಇಲ್ಲದವರಿಗೆ ಕಡಿಮೆ ಸಂಬಳ ನೀಡಿ ಅವರನ್ನು ರೋಗಿಗಳ ಆರೈಕೆಗೆ ನೇಮಿಸಿಕೊಳ್ಳುವುದು, ಯಾರದೋ ಹಿರಿಯ ವೈದ್ಯರ ಹೆಸರಿನಲ್ಲಿ ರೋಗಿಯನ್ನು ದಾಖಲು ಮಾಡಿಕೊಂಡು ಮತ್ತೊಬ್ಬರಿಂದ ಅವರ ಚಿಕಿತ್ಸೆ ಮಾಡಿಸುವುದು, ಯಾವುದೇ ತರಬೇತಿ ಇಲ್ಲದ ದಾದಿಯರನ್ನು ತೀವ್ರನಿಗಾ ಘಟಕಗಳಲ್ಲಿ ಕೆಲಸ ಮಾಡಿಸುವುದು – ಹೀಗೆ ಹಲವಾರು ಒಳಸುಳಿಗಳು ನಮ್ಮ ಆರೋಗ್ಯ ವ್ಯವಸ್ಥೆಯನ್ನು ಕಾಡುತ್ತಿವೆ. ಇದರ ಮೇಲೆ ಸರಕಾರ ತೆಗೆದುಕೊಳ್ಳುವ ಪ್ರತಿಯೊಂದು ಅವೈಜ್ಞಾನಿಕ ನಿರ್ಧಾರವೂ ಖಾಸಗಿ ಆಸ್ಪತ್ರೆಗಳಿಗೆ ಮತ್ತಷ್ಟು ಬಲವನ್ನು ನೀಡುತ್ತವೆ. “ನಮ್ಮ ಸರ್ಜನ್ ನಿಮ್ಮ ಆಪರೇಷನ್ ಮಾಡುತ್ತಾರೆ” ಎಂದು ಖಾಸಗಿ ಆಸ್ಪತ್ರೆ ಹೇಳಿದಾಗ, ಅದು ಯಾವ ಸರ್ಜನ್ ಎಂಬುದು ನಮಗೇ ಖಾತ್ರಿ ಇರಬೇಕು. ಎರಡು ಸಾವಿರ ವರ್ಷಗಳ ಹಿಂದಿನ ಪಠ್ಯ ಓದಿರುವ ಸರ್ಜನ್ ಬಳಿ ತಮ್ಮ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಎಷ್ಟು ಮಂದಿ ಸಿದ್ಧವೋ ತಿಳಿಯದು. ಆ ಶಸ್ತ್ರಚಿಕಿತ್ಸೆಯ ವೇಳೆ ಏನಾದರೂ ಅವಗಢವಾಗಿ ನ್ಯಾಯ ಬೇಡಲು ಹೋದಾಗ, ನಮ್ಮ ಘನ ನ್ಯಾಯಾಲಯಗಳು ನೋಡುವುದು “ಆ ವೈದ್ಯ ಪಠ್ಯಪುಸ್ತಕದ ಮಾದರಿಯನ್ನು ಅನುಸರಿಸಿದ್ದಾನೋ ಇಲ್ಲವೋ; ಈ ಶಸ್ತ್ರಚಿಕಿತ್ಸೆಯ ವಿಷಯವಾಗಿ ಜಾಗತಿಕ ಮಾರ್ಗಸೂಚಿ ಏನಿದೆ? ಅದು ಇಲ್ಲಿ ಸರಿಯಾಗಿ ಪಾಲನೆ ಆಗಿದೆಯೇ; ಆಗಿರುವ ಅವಗಢದಲ್ಲಿ ಶಸ್ತ್ರಚಿಕಿತ್ಸಕರ ನಿರ್ಲಕ್ಷ್ಯ ಇದೆಯೇ ಇಲ್ಲವೇ?” ಎಂಬುದು. ಹೀಗಾಗಿ, ಯದ್ವಾತದ್ವಾ ಆದೇಶಗಳನ್ನು ಹೊರಡಿಸುವ ಮುನ್ನ ಸರಕಾರ ಶಲ್ಯ ಚಿಕಿತ್ಸೆಯ ಪಠ್ಯಕ್ರಮವನ್ನು ನಿಷ್ಕರ್ಷೆ ಮಾಡಲೇಬೇಕು. ಆಧುನಿಕ ವೈದ್ಯ ಪದ್ದತಿಯ ಜಾಗತಿಕ ಮಾರ್ಗಸೂಚಿಗಳಿಗೆ ಪೂರಕವಾದ ಆಯುರ್ವೇದ ಶಲ್ಯಚಿಕಿತ್ಸೆಯ ಮಾರ್ಗಸೂಚಿಗಳನ್ನು ನಿರ್ಮಾಣ ಮಾಡಬೇಕು. ಈ ರೀತಿಯ ಸಮ್ಯಕ್ ಪೂರ್ವತಯಾರಿ ಇಲ್ಲದೇ ಯಾರನ್ನೂ ದೂಡಬಾರದು. ಇದನ್ನು ಪಾಲಿಸದಿದ್ದರೆ ರೋಗಿಗಳಿಗೆ ನ್ಯಾಯ ಬೇಡುವ ಮಾರ್ಗವೂ ದಕ್ಕುವುದಿಲ್ಲ.
ಈ ವಿಷಯವಾಗಿ ಸಾರ್ವಜನಿಕರು ಜಾಗೃತರಾಗುವುದು ಅಗತ್ಯ. ಇದು ಆಧುನಿಕ ವೈದ್ಯ ಪದ್ದತಿ ಮತ್ತು ಆಯುರ್ವೇದದ ನಡುವಿನ ಜಟಾಪಟಿ ಎಂದು ಭಾವಿಸಿದರೆ, ವಿಷಯದ ಗಹನತೆಯನ್ನು ಅರ್ಥ ಮಾಡಿಕೊಳ್ಳುವಲ್ಲಿ ಸೋತಿದ್ದೇವೆ ಎಂದಾಯಿತು. ಇದು ಸರ್ಕಾರದ ಆತುರದ ಕ್ರಮವನ್ನು ಪ್ರಶ್ನಿಸುವ ನಿರ್ಧಾರ. ಪುನರ್ವಸತಿ ಎಂದರೆ ಹೊಸದಾದ ಮನೆಗಳನ್ನು ಕಟ್ಟಿಕೊಡುವುದೇ ಹೊರತು, ಇನ್ಯಾರೊ ಕಷ್ಟಪಟ್ಟು ಕಟ್ಟಿಕೊಂಡ ಮನೆಗಳಲ್ಲಿ ತೂರಿಕೊಳ್ಳುವಂತೆ ಆದೇಶಿಸುವುದಲ್ಲ. ಸರಕಾರಕ್ಕೆ ಆಯುರ್ವೇದದ ಪುನಶ್ಚೇತನ ಮಾಡುವ ಹೊಣೆಗಾರಿಕೆ ಇದ್ದರೆ, ಅದನ್ನು ಸರಿಯಾದ ದಾರಿಯಲ್ಲಿ ನಿರ್ವಹಿಸಬೇಕು. ಅದನ್ನು ಬಿಟ್ಟು ಸಾಮಾನ್ಯ ಜನರ ಆರೋಗ್ಯದ ವಿಷಯದಲ್ಲಿ ಅನವಶ್ಯಕ ಪ್ರಯೋಗ ಮಾಡಿ ಗೊಂದಲ ಮೂಡಿಸಬಾರದು. ಸರಕಾರಕ್ಕೆ ಈ ವಿಷಯದಲ್ಲಿ ಹಠವಿದ್ದರೆ, ಮೊದಲು ಕೆಲವು ನಿಗದಿತ ಸರ್ಕಾರಿ ಆಸ್ಪತ್ರೆಗಳಲ್ಲಿ “ಶಲ್ಯ ಚಿಕಿತ್ಸೆ” ಆಯುರ್ವೇದ ತಜ್ಞರನ್ನು ನೇಮಿಸಿಕೊಂಡು, ಐದು ವರ್ಷಗಳ ಕಾಲ ಅವರ ಕೆಲಸಕ್ಕೆ ಜನರ ಪ್ರತಿಸ್ಪಂದನೆ ಹೇಗಿರುತ್ತದೆ ಎಂದು ಮೌಲ್ಯಮಾಪನ ಮಾಡಿ ನಿರ್ಧರಿಸಲಿ. ಆ ಎಲ್ಲಾ ಮಾಹಿತಿಯನ್ನೂ ನ್ಯಾಯಾಲಯದ ಮುಂದೆ ಇಟ್ಟು ಅನುಮತಿ ಪಡೆಯಲಿ. ಆನಂತರ ಅದನ್ನು ಎಲ್ಲೆಡೆಯೂ ಜಾರಿಗೊಳಿಸಬಹುದೇ ಎಂಬುದು ನಿರ್ಧಾರವಾಗಲಿ.
ಕಟ್ಟಕಡೆಗೆ, ತಾನು ಯಾರಿಂದ ಚಿಕಿತ್ಸೆ ಪಡೆಯಬೇಕು ಎಂಬುದರ ಅಂತಿಮ ನಿರ್ಧಾರ ರೋಗಿಯದ್ದೇ! ಶಸ್ತ್ರಚಿಕಿತ್ಸೆ ಯಾರು ಮಾಡಬೇಕು ಎಂಬುದರ ಬಗ್ಗೆ ಪ್ರತಿಯೊಬ್ಬರಿಗೂ ಸ್ಪಷ್ಟತೆ ಇರಬೇಕು! ಪ್ರತಿಕ್ಷಣವೂ ಅಮೂಲ್ಯವಾಗುವ ತುರ್ತುಚಿಕಿತ್ಸೆಯ ಕಾಲದಲ್ಲಿ ಅತ್ಯುತ್ತಮ ಚಿಕಿತ್ಸೆಯೇ ಎಲ್ಲರಿಗೂ ಲಭಿಸಬೇಕು. ಅಂತಹ ಸಂದರ್ಭಗಳಲ್ಲಿ ನಮ್ಮ ಜೀವ ಉಳಿಸಲು ಯಾರು ಹಿತವರು ಎಂಬುದು ಅಂತಿಮ ಕ್ಷಣದ ನಿರ್ಧಾರ ಆಗಬಾರದು. ನಮ್ಮ ಜೀವನ್ಮರಣದ ಪ್ರಶ್ನೆ ಬಂದಾಗ ನಮ್ಮನ್ನು ಉಳಿಸಬೇಕಾದ್ದು ಸರ್ಕಾರದ ನಿರ್ಧಾರಗಳಲ್ಲ; ನಮ್ಮದೇ ಬುದ್ಧಿಪೂರ್ವಕ ಆಲೋಚನೆ! ಇಲ್ಲವಾದರೆ, ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡಿದವನ ಕತೆಯಾದೀತು!

ನವೆಂಬರ್ 25, 2020 ರ ವಿಶ್ವವಾಣಿ ದಿನಪತ್ರಿಕೆಯಲ್ಲಿನ ಲೇಖನ.

ಭಾನುವಾರ, ಆಗಸ್ಟ್ 30, 2020

 

COVID-19 ರ ಅಂತ್ಯ ಹೇಗೆ?

ಡಾ. ಕಿರಣ್ ವಿ ಎಸ್.

ವೈದ್ಯರು

“ಈ ಹಾಳು ಕರೊನಾವೈರಸ್ ಕಾಯಿಲೆ ಯಾವಾಗ ಕೊನೆಯಾಗುತ್ತೋ ಕಾಣೆ” ಎನ್ನುವುದು ಪ್ರತಿಯೊಬ್ಬರ ಅಂತರಾಳದ ಮಾತು! ಮಾನವ ಇತಿಹಾಸ ಇಂತಹ ಹಲವಾರು ಜಾಗತಿಕ ವಿಪತ್ತುಗಳನ್ನು ಕಂಡಿದೆ. 1961 ರಲ್ಲಿ ಆರಂಭವಾದ ಕಾಲರಾ ರೋಗದ 7 ನೆಯ ಜಾಗತಿಕ ಆವೃತ್ತಿ ಇಂದಿಗೂ ಮುಂದುವರೆಯುತ್ತಿದೆ ಎನ್ನಲಾಗಿದೆ. ಆದರೆ, ನಮ್ಮ ಪೀಳಿಗೆಯವರನ್ನು ಇಷ್ಟು ಮಟ್ಟಿಗೆ ಕಾಡಿರುವ ಮೊದಲ ಸಾರ್ವತ್ರಿಕ ಸಾಂಕ್ರಾಮಿಕ ಆರೋಗ್ಯ ಸಮಸ್ಯೆ ಪ್ರಸ್ತುತ “COVID-19”.

“ಇದು ಯಾವಾಗ ಮುಗಿಯುತ್ತೆ?” ಎನ್ನುವ ಪ್ರಶ್ನೆಗೆ ಉತ್ತರ ನೀಡಲು ಮೊದಲು ಕೆಲವು ಅಂಶಗಳು ಅರ್ಥವಾಗಬೇಕು. ಸಾಂಕ್ರಾಮಿಕ ಕಾಯಿಲೆ ಎಂದರೆ “ಒಬ್ಬರಿಂದ ಮತ್ತೊಬ್ಬರಿಗೆ ಹರಡುವಂತದ್ದು”. ಪ್ರತಿಯೊಂದು ಸಾಂಕ್ರಾಮಿಕ ಕಾಯಿಲೆಯ ಹರಡುವಿಕೆ ವಿಭಿನ್ನ. ಮಲೇರಿಯಾ ಹರಡಲು ಸೊಳ್ಳೆ; ಕಾಲರಾ ಹರಡಲು ಮಲಿನ ನೀರು, ಆಹಾರಹೀಗೆ. ಸಾಂಕ್ರಾಮಿಕ ಕಾಯಿಲೆಗಳ ಹರಡುವಿಕೆಯನ್ನು “ಸೋಂಕಿನ ತ್ರಿಕೋನ”ದಿಂದ ತಿಳಿಯಬಹುದು (ಚಿತ್ರ 1). ಇದರಲ್ಲಿ ಒಂದೆಡೆ ರೋಗಕಾರಕ ಪರೋಪಜೀವಿ; ಮತ್ತೊಂದೆಡೆ ಆ ಜೀವಿಗೆ ಪೂರಕವಾಗಬಲ್ಲ ವಾತಾವರಣ; ಮೂರನೆಯ ಕಡೆ ರೋಗವನ್ನು ಅನುಭವಿಸುವ ಜೀವಿ. ಈ ಮೂರನ್ನೂ ಕೂಡಿಸುವುದು ಸಮಯ. COVID-19 ರ ವಿಷಯಕ್ಕೆ ಬಂದಾಗ, ರೋಗ ಅನುಭವಿಸುವುದು ಮನುಷ್ಯರು; ರೋಗಕಾರಕ COVID-19 ಎಂಬ ವೈರಸ್; ಈ ವೈರಸ್ ಹರಡಲು ಪೂರಕವಾದ ವಾತಾವರಣ ಎಂದರೆ, ಅದು ಸುಲಭದಲ್ಲಿ ಹರಡಬಲ್ಲ ರೀತಿಗಳು.    


ಚಿತ್ರ 1: ಸಾಂಕ್ರಾಮಿಕ ರೋಗಗಳ ತ್ರಿಕೋನ. ಚಿತ್ರ ಕೃಪೆ: https://www.flickr.com/photos/internetarchivebookimages/17758371250

 

“ಈ ಕಾಯಿಲೆ ಹೇಗೆ ಕೊನೆಗೊಳ್ಳುತ್ತದೆ” ಎಂಬ ಪ್ರಶ್ನೆಯನ್ನು ವಿವರಿಸಬೇಕು. “ಕೊನೆಗೊಳ್ಳುವುದು” ಎಂದರೆ, ಸಮಷ್ಟಿ ಸಮಾಜದ ಮೇಲೆ ಈ ಕಾಯಿಲೆಯ ಪರಿಣಾಮ ನಮ್ಮ ನಿಯಂತ್ರಣದಲ್ಲಿ ಇರಬೇಕು. ಅಥವಾ, ಈ ಕಾಯಿಲೆಯನ್ನೇ ನಿರ್ಮೂಲನೆ ಮಾಡಬೇಕು. ಎರಡನೆಯ ಆಯ್ಕೆ ಕಷ್ಟ. ಈ ಹಿಂದೆ ಸಿಡುಬು (smallpox) ರೋಗವನ್ನು ಪ್ರಪಂಚದಿಂದ ನಿರ್ಮೂಲನ ಮಾಡಿದ್ದೇವೆ. ಪೋಲಿಯೋ ಮತ್ತು ದಢಾರ (measles) ಕಾಯಿಲೆಗಳನ್ನೂ ನಿರ್ಮೂಲನ ಮಾಡುವತ್ತ ಧೃಡವಾದ ಹೆಜ್ಜೆಗಳನ್ನು ಇಟ್ಟಿದ್ದೇವೆ. ಇವೆಲ್ಲವೂ ವೈರಸ್-ಮೂಲದ ಕಾಯಿಲೆಗಳೇ. ಆದರೆ, ನಿರ್ಮೂಲನಕ್ಕೆ ಕಾಲ ಹಿಡಿಯುತ್ತದೆ. ಎರಡರ ಮಧ್ಯೆ ನಿಯಂತ್ರಣದ ಆಯ್ಕೆ ಹೆಚ್ಚು ಪ್ರಾಯೋಗಿಕ. ಚಿತ್ರ 2 ಮತ್ತು 3 ಮತ್ತು ಅವುಗಳ ಜೊತೆಗೆ ನೀಡಿರುವ ಅಡಿಟಿಪ್ಪಣಿಗಳು ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತವೆ.

ಚಿತ್ರ 2: COVID-19 ಸೇರಿದಂತೆ, ಯಾವುದೇ ಸಾಂಕ್ರಾಮಿಕ ಕಾಯಿಲೆಯ ಮೇಲೆ ನಿಯಂತ್ರಣದ ಪರಿಣಾಮ. ಈ ನಕ್ಷೆಯ ಉದ್ದದ ಗೆರೆ (x-ಅಕ್ಷ) ಸಮಯವನ್ನು ತೋರುತ್ತದೆ. ಎತ್ತರದ ಗೆರೆ (y-ಅಕ್ಷ) ಆಯಾ ಸಮಯದಲ್ಲಿ ಇರುವ ರೋಗಿಗಳ ಸಂಖ್ಯೆಯನ್ನು ತೋರುತ್ತದೆ. X-ಅಕ್ಷಕ್ಕೆ ಸಮಾನಾಂತರವಾಗಿರುವ ತುಂಡಾದ ರೇಖೆ ನಮ್ಮ ಆರೋಗ್ಯ ವ್ಯವಸ್ಥೆಯ ಸಾಮರ್ಥ್ಯವನ್ನು ತೋರುತ್ತದೆ. ಯಾವುದೇ ಸಮಯದಲ್ಲೂ ರೋಗಿಗಳ ಸಂಖ್ಯೆ ನಮ್ಮ ಆರೋಗ್ಯ ವ್ಯವಸ್ಥೆಯ ಸಾಮರ್ಥ್ಯವನ್ನು ಮೀರದಂತೆ ರೋಗದ ಪ್ರಸರಣವನ್ನು ಹತ್ತಿಕ್ಕುವುದು “ಸಫಲ ನಿಯಂತ್ರಣ” ಎನ್ನಿಸಿಕೊಳ್ಳುತ್ತದೆ. (ಚಿತ್ರ ಕೃಪೆ: ಎಸ್ಥರ್ ಕಿಮ್ ಮತ್ತು ಕಾರ್ಲ್ ಬರ್ಗ್ಸ್ಟಾರ್ಮ್ – http://ctbergstrom.com/covid19.html )

 

ಚಿತ್ರ 3: ರೋಗವನ್ನು ಚೆನ್ನಾಗಿ ನಿಯಂತ್ರಣದಲ್ಲಿ ಇಡಬೇಕೆಂದರೆ, x-ಅಕ್ಷಕ್ಕೆ ಸಮಾನಾಂತರವಾಗಿರುವ ತುಂಡಾದ ಗೆರೆಯನ್ನು ಸಾಧ್ಯವಾದಷ್ಟೂ ಎತ್ತರಿಸಬೇಕು. ಅಂದರೆ, ನಮ್ಮ ಆರೋಗ್ಯ ವ್ಯವಸ್ಥೆಯ ಸಾಮರ್ಥ್ಯವನ್ನು ಸಾಧ್ಯವಾದಷ್ಟೂ ಬೇಗ ಬೆಳೆಸಿಕೊಳ್ಳಬೇಕು. ಈ ತುಂಡಾದ ಗೆರೆ x-ಅಕ್ಷಕ್ಕಿಂತ ಎಷ್ಟು ಮೇಲೆ ಇರುತ್ತದೋ, ಕಾಯಿಲೆಯ ನಿಯಂತ್ರಣಕ್ಕೆ ಅಷ್ಟು ಕಡಿಮೆ ಸಮಯ ಹಿಡಿಯುತ್ತದೆ. (ಚಿತ್ರ ಕೃಪೆ: https://commons.wikimedia.org/wiki/File:20200403_Flatten_the_curve_animated_GIF.gif )

 

ಯಾವುದೇ ಕಾಯಿಲೆ ಹೇಗೆ ವರ್ತಿಸುತ್ತದೆ? ಉದಾಹರಣೆಗೆ ಮಲೇರಿಯಾ ಕಾಯಿಲೆಯನ್ನು ಗಮನಿಸಬಹುದು. ಮಲೇರಿಯಾ ಕಾಯಿಲೆಗೆ ಕಾರಣ ಪ್ಲಾಸ್ಮೊಡಿಯಂ ಎಂಬ ಏಕಾಣುಸೂಕ್ಷ್ಮಜೀವಿ. ಅದು ಹರಡುವುದು ಅನಾಫಿಲಿಸ್ ಎಂಬ ಪ್ರಬೇಧದ ಹೆಣ್ಣು ಸೊಳ್ಳೆಯಿಂದ. ಬಾಧಿಸುವುದು ಮನುಷ್ಯರನ್ನು. ಈ ಪ್ರಬೇಧದ ಸೊಳ್ಳೆಗಳು ಯಾವ ವಾತಾವರಣದಲ್ಲಿ ಹುಲುಸಾಗಿ ಬೆಳೆಯುತ್ತವೋ, ಅಂತಹ ಪರಿಸರದಲ್ಲಿ ಮಲೇರಿಯಾ ಹಾವಳಿ ಹೆಚ್ಚು. ಈ ಮಲೇರಿಯಾವನ್ನು ನಿಯಂತ್ರಣದಲ್ಲಿ ಇಡಬೇಕೆಂದರೆ, ಮೇಲೆ ಕಾಣಿಸಿದ ಸೋಂಕಿನ ತ್ರಿಕೋನದ ಯಾವುದಾದರೂ ಬಾಹುವನ್ನು ಮುರಿಯಬೇಕು. ಮೂರು ಬಾಹುಗಳಿಗೆ ಮೂರು ದಾರಿಗಳು:

1.      ಪ್ಲಾಸ್ಮೊಡಿಯಂ ಏಕಾಣುಜೀವಿಯನ್ನು ಕೊಲ್ಲಬಲ್ಲ ಔಷಧ. ಇದರಿಂದ, ದೇಹದಲ್ಲಿರುವ ಪ್ಲಾಸ್ಮೊಡಿಯಂ ಸಾಯುತ್ತದೆ. ಕಾಯಿಲೆ ಕೊನೆಗೊಳ್ಳುತ್ತದೆ. ಆದರೆ, ಇದರ ಸಮಸ್ಯೆ ಎಂದರೆ, ಈ ಏಕಾಣುಜೀವಿಯ ಚಾಣಾಕ್ಷತೆ! ಅದು ಔಷಧದ ವಿರುದ್ಧ ಪ್ರತಿರೋಧ ಬೆಳೆಸಿಕೊಳ್ಳಬಲ್ಲದು. ಹೀಗಾಗಿ, ಹಿಂದೊಮ್ಮೆ ಪರಿಣಾಮಕಾರಿ ಆಗಿದ್ದ ಔಷಧ ಏಕಾಏಕಿ ತನ್ನ ಪ್ರಭಾವ ಕಳೆದುಕೊಳ್ಳುತ್ತದೆ! ಆಗ ಹೊಸ ಹೊಸ ಔಷಧಗಳ ಅನ್ವೇಷಣೆ ಅಗತ್ಯ. ಇದು ಸುಲಭದ ಮಾತಲ್ಲ. ಹೊಸ ಔಷಧಗಳ ಸಂಶೋಧನೆ ಬಹಳ ದುಬಾರಿಯಷ್ಟೆ ಅಲ್ಲ; ಬಹಳ ಕಾಲ ತೆಗೆದುಕೊಳ್ಳುವ ಪ್ರಕ್ರಿಯೆ.

2.     ಮಲೇರಿಯಾ ಕಾಯಿಲೆಯನ್ನು ಹರಡುವ ಸೊಳ್ಳೆಗಳನ್ನು ನಾಶ ಮಾಡುವುದು. ಇದಕ್ಕೆ ಕೀಟನಾಶಕಗಳನ್ನು ಬಳಸಲಾಗುತ್ತದೆ. ಅವು ಕೇವಲ ಸೊಳ್ಳೆಗಳನ್ನು ಮಾತ್ರವಲ್ಲದೆ, ಹಲವಾರು ಉಪಯುಕ್ತ ಕೀಟಗಳನ್ನೂ ಕೊಂದುಬಿಡುತ್ತವೆ. ಪರಿಸರದ ಸೂಕ್ಷ್ಮ ಸಮತೋಲನ ಏರುಪೇರು ಆಗುತ್ತದೆ. ಅಲ್ಲದೇ, ಕೀಟಗಳು ಇಂತಹ ಕೀಟನಾಶಕಗಳ ವಿರುದ್ಧ ಪ್ರತಿರೋಧ ಶಕ್ತಿ ಬೆಳೆಸಿಕೊಳ್ಳುತ್ತವೆ. ಪರಿಣಾಮ – ಮತ್ತಷ್ಟು ತೀವ್ರತೆಯ ಕೀಟನಾಶಕ ಬಳಕೆ – ಸಮತೋಲನ ಮತ್ತಷ್ಟು ಬಿಗಡಾಯಿಸುವಿಕೆ!

3.     ಪರಿಸರದ ಹಂತದಲ್ಲಿ ಮಾರ್ಪಾಡು: ಸೊಳ್ಳೆಗಳು ಹೇಗೆ ಬೆಳೆಯುತ್ತವೆ ಎಂಬುದನ್ನು ಅಧ್ಯಯನ ಮಾಡಿ, ಆ ಬೆಳವಣಿಗೆಗೆ ಪೂರಕವಾಗುವ ಅಂಶಗಳ ನಿಯಂತ್ರಣ. ನಿಂತ ನೀರಿನಲ್ಲಿ ಸೊಳ್ಳೆಗಳು ಬೆಳೆಯುತ್ತವೆ ಎಂದು ತಿಳಿದಾಗ, ಎಲ್ಲೂ ನೀರು ನಿಲ್ಲದಂತೆ ನಿಗಾ ವಹಿಸುವುದು; ನೀರು ನಿಂತಿದ್ದರೆ ಅದನ್ನು ಶುಚಿಗೊಳಿಸುವುದು; ಪರಿಸರಕ್ಕೆ ಹಾನಿ ಮಾಡದ ಸಸ್ಯಜನ್ಯ ವಸ್ತುಗಳನ್ನು ಬಳಸಿ ಸೊಳ್ಳೆಗಳ ಬೆಳವಣಿಗೆ ತಪ್ಪಿಸುವುದು (ಉದಾಹರಣೆಗೆ: ನೀರಿನಲ್ಲಿ ಸೊಳ್ಳೆಗಳ ಗೊದಮೊಟ್ಟೆಗಳನ್ನು ತಿನ್ನುವ ಮೀನುಗಳ ಪೋಷಣೆ; ನಿಂತ ನೀರಿನ ಮೇಲೆ ಬೇವಿನ ಎಣ್ಣೆಯ ಸಿಂಪಡಿಕೆ ಇತ್ಯಾದಿ) 

ಈಗ ಇದೇ ಮಾದರಿಯನ್ನು COVID-19 ಕ್ಕೆ ವಿಸ್ತರಿಸಿದರೆ, ಕಾಯಿಲೆ ನಿಯಂತ್ರಣದ ಒಳನೋಟಗಳು ದೊರೆಯುತ್ತವೆ. ಮೊದಲಿಗೆ COVID-19 ಬಗ್ಗೆ ಸ್ವಲ್ಪ ಮಾಹಿತಿ. COVID-19 ಎನ್ನುವುದು ಹಳೆಯ ಕರೊನಾವೈರಸ್ ನ ಹೊಸ ರೂಪ. ತನ್ನೊಳಗಿನ ಆರ್.ಎನ್.ಎ. ಎಂಬ ಜೀವಧಾತುವನ್ನು ಆಮೂಲಾಗ್ರವಾಗಿ ಬದಲಾವಣೆ ಮಾಡಿಕೊಂಡ ಕರೊನಾವೈರಸ್, ಅದರಿಂದ ತನ್ನ ಸುತ್ತ ಹೊಸ ರೀತಿಯ ಪ್ರೊಟೀನ್ ಕವಚವನ್ನು ನಿರ್ಮಿಸಿಕೊಂಡು ಈಗ COVID-19 ಎಂಬ ಹೊಸ ರೂಪ ಪಡೆದುಕೊಂಡಿದೆ. ಈ ಹೊಸ ರೂಪ ನಮ್ಮ ದೇಹದ ರಕ್ಷಕ ವ್ಯವಸ್ಥೆಗೆ ಹೊಸದು. ಹೀಗಾಗಿ, ಈ ಹೊಸರೂಪದ ವೈರಸ್ ವಿರುದ್ಧ ಹೋರಾಡಲು ನಮ್ಮ ರಕ್ಷಕ ವ್ಯವಸ್ಥೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಒಂದು ವೇಳೆ ರಕ್ಷಕ ವ್ಯವಸ್ಥೆ ಪ್ರತಿಕ್ರಿಯಿಸುವಷ್ಟರಲ್ಲಿ ವೈರಸ್ ತನ್ನ ಕೆಲಸ ಮೊದಲಿತ್ತು ಶರೀರಕ್ಕೆ ಹಾನಿ ಮಾಡಿದರೆ, ಆಗ ರೋಗ ಕಾಣುತ್ತದೆ. ಆದರೆ, ವೈರಸ್ ಆಟ ಶುರು ಆಗುವುದಕ್ಕೆ ಮುನ್ನವೇ ನಮ್ಮ ರಕ್ಷಕ ವ್ಯವಸ್ಥೆ ಎಚ್ಚೆತ್ತರೆ, ಆಗ ಶರೀರಕ್ಕೆ ಹೆಚ್ಚು ಘಾಸಿ ಆಗುವುದಿಲ್ಲ. ಒಂದು ವೇಳೆ ರಕ್ಷಕ ವ್ಯವಸ್ಥೆಯ ಬಲ ಯಾವುದಾದರೂ ಕಾರಣಕ್ಕೆ ಕುಂಠಿತವಾಗಿದ್ದರೆ, ಅಂತಹವರಲ್ಲಿ COVID-19 ಸೋಂಕು ಪ್ರಾಣಕ್ಕೆ ಎರವಾಗಬಹುದು. ವೃದ್ಧರಲ್ಲಿ, ಸಣ್ಣ ಮಕ್ಕಳಲ್ಲಿ, ಮಧುಮೇಹಿಗಳಲ್ಲಿ, ಸ್ಟೀರಾಯ್ಡ್ ಔಷಧ ಬಳಸುವವರಲ್ಲಿ, ಕುಂಠಿತ ರಕ್ಷಕ ವ್ಯವಸ್ಥೆಯ ಕಾಯಿಲೆ ಪೀಡಿತರಲ್ಲಿ – ಹೀಗೆ ಕೆಲವು ವಿಶೇಷ ಗುಂಪುಗಳನ್ನು ಬಿಟ್ಟರೆ, ಉಳಿದವರಲ್ಲಿ ಈ ಕಾಯಿಲೆ ಬಹುತೇಕ ಪ್ರಾಣಾಂತಕವಲ್ಲ.

1. COVID-19 ಕೊಲ್ಲಬಲ್ಲ ಯಾವುದೇ ಪಕ್ಕಾ ಔಷಧ ಸದ್ಯಕ್ಕೆ ಲಭ್ಯವಿಲ್ಲ. ಹಲವಾರು ಔಷಧಗಳನ್ನು ಪ್ರಯೋಗ ಮಾಡಿದ್ದಾರಾದರೂ, ಅದರಲ್ಲಿ ಯಾವುದೇ ಒಂದೂ ಸದ್ಯಕ್ಕೆ “ಪಕ್ಕಾ” ಎನ್ನುವಂತಹ ಪರಿಣಾಮ ತೋರಿಲ್ಲ. ಸಾಮಾನ್ಯವಾಗಿ, ವೈರಸ್ ಕಾಯಿಲೆಗಳಿಗೆ ಔಷಧ ಬೇಕಾಗುವುದು ವಿಶೇಷ ಪರಿಸ್ಥಿತಿಗಳಲ್ಲಿ ಮಾತ್ರ. ಬಹುತೇಕ ಮಿಕ್ಕೆಲ್ಲರೂ ಔಷಧದ ನೆರವಿಲ್ಲದೇ, ತಮ್ಮ ರಕ್ಷಕ ವ್ಯವಸ್ಥೆಯ ಬಲದಿಂದಲೇ ಗುಣ ಹೊಂದುತ್ತಾರೆ. COVID-19 ಸೋಂಕಿನಲ್ಲೂ ಎಲ್ಲರಿಗೂ ವೈರಸ್ ಕೊಲ್ಲಬಲ್ಲ ಔಷಧ ಬೇಡ. ಆದರೆ, ಇಲ್ಲಿ ಔಷಧವೇ ಇಲ್ಲದ ಕಾರಣ, ವಿಶೇಷ ಗುಂಪಿನ ರೋಗಿಗಳಿಗೂ ಚಿಕಿತ್ಸೆ ನೀಡುವುದು ಕಷ್ಟವಾಗಿದೆ. ಹೀಗಾಗಿ, ರಕ್ಷಕ ವ್ಯವಸ್ಥೆಯನ್ನು ಜಾಗೃತಗೊಳಿಸಿವುದು ಬಿಟ್ಟರೆ ಬೇರೆ ಪರ್ಯಾಯವಿಲ್ಲ.

2. COVID-19 ನಮ್ಮ ದೇಹವನ್ನು ಸೇರುವುದು ಶ್ವಾಸಮಾರ್ಗಗಳ ಮೂಲಕ. ಹೀಗಾಗಿ, ಶ್ವಾಸಮಾರ್ಗಗಳ ಹಾದಿಯಲ್ಲಿ ಒಂದು ತಡೆಯನ್ನು ನಿರ್ಮಿಸಿ, ಅದಕ್ಕೆ ವೈರಸ್ ಸೀದಾ ಸೇರುವುದನ್ನು ತಡೆಯಬೇಕು. ಮಾಸ್ಕ್ ಗಳು, ಪಾರದರ್ಶಕ ವೈಸರ್ ಗಳು – ಇವುಗಳ ಬಳಕೆಯಿಂದ ವೈರಸ್ ನ ದಾರಿಯಲ್ಲಿ ತಡೆ ನಿರ್ಮಿಸಿದಂತೆ ಆಗುತ್ತದೆ. ಇದರ ಜೊತೆಗೆ, ಶರೀರದ ಆರೋಗ್ಯದ ಕಡೆಗೆ ನಿಗಾ ವಹಿಸಿ, ಅದನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳುವುದು, ಬೇರೆ ಯಾವುದೇ ದೈಹಿಕ / ಮಾನಸಿಕ ಕಾಯಿಲೆಗಳನ್ನು ನಿಯಂತ್ರಣದಲ್ಲಿ ಇಡುವುದು ಮುಖ್ಯವಾಗುತ್ತದೆ.    

3. ಚಿಕಿತ್ಸೆ ಇಲ್ಲದ ಕಾಯಿಲೆಯಲ್ಲಿ, ಅದರ ಪ್ರಸರಣವನ್ನು ನಿಯಂತ್ರಿಸಬೇಕು ಎಂದರೆ ಸಾಮಾಜಿಕ ಶಿಸ್ತು ಅತ್ಯಗತ್ಯ. ಸಾಮಾಜಿಕ ಅಂತರದ ಪಾಲನೆ, ಅನಗತ್ಯ ಓಡಾಟಕ್ಕೆ ಕಡಿವಾಣ, ಗುಂಪು ಸೇರದಿರುವುದು, ವೈಯಕ್ತಿಕ ಶಿಸ್ತಿನ ಪರಿಪಾಲನೆ – ಇಂತಹ ವಿಷಯಗಳ ಬಗ್ಗೆ ಕಟ್ಟೆಚ್ಚರ ಇರಬೇಕು. ನಾವು ವಾಸಿಸುವ, ಓಡಾಡುವ ವಾತಾವರಣದಲ್ಲಿ ವೈರಸ್ ಪ್ರಸರಣಕ್ಕೆ ಹೆಚ್ಚು ಆಸ್ಪದ ಇಲ್ಲದಂತೆ ಕಾಯ್ದುಕೊಳ್ಳಬೇಕು.

COVID-19 ಸಮಸ್ಯೆಯ ಅಂತ್ಯ ಹೇಗೆ? ಅದು ಯಾವ ದಾರಿಯಲ್ಲಾದರೂ ಆಗಬಹುದು. ಆದರೆ, ಅದರ ಅಂತ್ಯವಂತೂ ಖಚಿತ! ಎಷ್ಟು ಕಾಲದಲ್ಲಿ ಅಂತ್ಯವಾಗಬಹುದು? ಇದಕ್ಕೆ ನಿಖರ ಉತ್ತರವಿಲ್ಲ! ಇದು ಹಲವಾರು ಅಸ್ಥಿರತೆಗಳ ಮೂಲಕ ಹಾದುಹೋಗುವುದರಿಂದ, ನಿಶ್ಚಿತವಾಗಿ ಹೇಳಲಾಗದು. ಕೆಲವು ಮಾರ್ಗಗಳನ್ನು ಊಹಿಸಬಹುದು.

1. COVID-19 ಅನ್ನು ನಿವಾರಿಸುವ ಒಂದು ಪಕ್ಕಾ ಔಷಧ ಲಭ್ಯವಾದರೆ ಬಹಳ ಸಹಾಯಕವಾಗುತ್ತದೆ! ಈಗ ಹಲವಾರು ವೈರಸ್-ನಿರೋಧಕ ಔಷಧಗಳನ್ನು ಈ ಪರಿಣಾಮಕ್ಕೆ ಪರೀಕ್ಷೆ ಮಾಡುತ್ತಿದ್ದಾರೆ. ಒಂದು ವೇಳೆ ಯಾವುದೋ ಒಂದು ಅಥವಾ ಕೆಲವು ಔಷಧಗಳ ಜೋಡಿ COVID-19 ವಿರುದ್ಧ ಪಕ್ಕಾ ಪರಿಣಾಮ ಬೀರಿದರೆ, ಆಗ ಈ ಯುದ್ಧದ ಗೆಲುವು ನಮ್ಮದೇ! ಈ ಸಾಂಕ್ರಾಮಿಕಕ್ಕೆ ಮಂಗಳ ಹಾಡುವ ಆರಂಭ!

2. COVID-19 ವಿರುದ್ಧದ ಲಸಿಕೆಗಳು ಪರೀಕ್ಷೆಯ ಹಂತದಲ್ಲಿವೆ. ಲಸಿಕೆಗಳು ಮೂಲತಃ ಆಯಾ ರೋಗಕಾರಕದ ವಿರುದ್ಧ ನಮ್ಮ ರಕ್ಷಕ ವ್ಯವಸ್ಥೆಯನ್ನು ಜಾಗೃತಗೊಳಿಸಿ, ರೋಗದ ತೀವ್ರತೆಯನ್ನು ತಗ್ಗಿಸುವ ಸಾಧನಗಳು. ಇವು ಚಿಕಿತ್ಸೆ ಅಲ್ಲ; ರೋಗತೀವ್ರತೆಯ ಪ್ರತಿಬಂಧಕಗಳು ಮಾತ್ರ. ಈಗಾಗಲೇ ಕಾಯಿಲೆ ಆಗಿರುವವರಲ್ಲಿ ಇದು ಹೆಚ್ಚಿನ ಪರಿಣಾಮ ಬೀರುವುದಿಲ್ಲ. ಆದರೆ, ಸದ್ಯಕ್ಕೆ ಸೋಂಕು ತಗುಲದ ಜನರಲ್ಲಿ ರೋಗನಿರೋಧಕ ಶಕ್ತಿ ನೀಡಬಲ್ಲವು. ಆದರೆ, ಲಸಿಕೆಯ ಉಪಲಬ್ದತೆ ಇನ್ನೂ ಯಾವಾಗ ಎಂಬುದು ತಿಳಿಯದು. ಸುರಕ್ಷತೆ ಮತ್ತು ಪರಿಣಾಮ - ಎರಡನ್ನೂ ಲಸಿಕೆಗಳು ಸಾಧಿಸಬೇಕು. ಅದನ್ನು ಮಾಡಲು ಸಮಯ ಹಿಡಿಯುತ್ತದೆ.

3. COVID-19 ಮಾದರಿಯ ವೈರಸ್ ಗಳು ಒಮ್ಮೊಮ್ಮೆ ತಂತಾನೇ ಮಾರ್ಪಾಡಾಗಿ ನಿಷ್ಕ್ರಿಯವಾಗುವ ಸಾಧ್ಯತೆಗಳೂ ಇರುತ್ತವೆ. ಆದರೆ, ಹೆಚ್ಚಿನ ಸಂಶೋಧನೆ ಇಲ್ಲದೆ ಇಂತಹ ಊಹೆಗಳನ್ನು ಮಾಡುವುದು ವೈಜ್ಞಾನಿಕವಲ್ಲ.

4. COVID-19 ಸೋಂಕು ತಗುಲಿದರೆ ರಕ್ಷಕ ವ್ಯವಸ್ಥೆ ಬಹುಮಟ್ಟಿಗೆ ಅದನ್ನು ನಿಭಾಯಿಸುತ್ತದೆ. ಅಂತಹವರು ಪಾರಾಗುತ್ತಾರೆ. ಒಮ್ಮೆ ಪಾರಾದರೆ, ಅಂತಹವರ ಶರೀರದಲ್ಲಿ COVID-19 ವಿರುದ್ಧ ರೋಗನಿರೋಧಕ ಶಕ್ತಿ ಬೆಳೆದಿರುತ್ತದೆ. ಮತ್ತೊಮ್ಮೆ ಅವರಿಗೆ COVID-19 ಸೋಂಕು ತಾಕಿದರೆ, ಅವರ ಶರೀರ ಅದನ್ನು ಸಮರ್ಥವಾಗಿ ಎದುರಿಸಬಲ್ಲದು. ಅದೇ ಕಾರಣಕ್ಕೆ, ಜಗತ್ತಿನಾದ್ಯಂತ COVID-19 ಸೋಂಕು ತಗುಲಿ ಉಳಿದವರು ಬಹಳ ಮಂದಿ ಇದ್ದಾರೆ. ಸಾವಿನ ಪ್ರಮಾಣ ಬಹಳ ಕಡಿಮೆ. ನಮ್ಮ ದೇಶದಲ್ಲಿ COVID-19 ಸೋಂಕಿತರು ಸಾವಿಗೆ ಈಡಾಗಿರುವುದು ಶೇಕಡಾ 2.2 ಎಂದು ಪತ್ತೆಯಾಗಿದೆ. ಅಂದರೆ, ನೂರು ಸೋಂಕಿತರಲ್ಲಿ ಸುಮಾರು 98 ಮಂದಿ ಗುಣಮುಖರಾಗುತ್ತಾರೆ ಎಂದು ಊಹಿಸಬಹುದು. ಒಂದು ವೇಳೆ ಯಾವುದೇ ಔಷಧ ಅಥವಾ ಲಸಿಕೆ ಲಭ್ಯವಾಗದೇ ಹೋದರೆ, ನಿಧಾನವಾಗಿ COVID-19 ಸೋಂಕು ಎಲ್ಲರಲ್ಲೂ ಹರಡುತ್ತಾ, ಅವರಲ್ಲಿ ರೋಗನಿರೋಧಕ ಶಕ್ತಿಯನ್ನು ಬೆಳೆಸುತ್ತಾ ಹೋಗಬಹುದು. ಇದು ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಸಾಂಕ್ರಾಮಿಕ ಕಾಯಿಲೆ. ಒಂದು ವೇಳೆ, ಸೋಂಕು ತಗುಲಿಲ್ಲದ ಒಬ್ಬರ ಸುತ್ತಾ, ಈಗಾಗಲೇ ಸೋಂಕು ತಗುಲಿ ಗುಣಮುಖರಾಗಿರುವವರೇ ಇದ್ದರೆ? COVID-19 ಗುಣವಾಗಿರುವವರು ಮತ್ತೆ ಅದೇ ಸೋಂಕನ್ನು ಹರಡುವ ಸಾಧ್ಯತೆ ತೀರಾ ತೀರಾ ಕಡಿಮೆ! ಅಂದರೆ, COVID-19 ಸೋಂಕು ಇನ್ನೂ ಬಂದಿರದ ವ್ಯಕ್ತಿಯ ಸುತ್ತಾ, ಸೋಂಕನ್ನು ಪಸರಿಸಲು ಸಾಧ್ಯವಿಲ್ಲದ ಮಂದಿಯ ಕೋಟೆ ಇದೆ ಎಂದಾಯಿತು! ಹೀಗೆ, ಸಮಾಜದ ಬಹುತೇಕ ಮಂದಿಗೆ COVID-19 ಸೋಂಕು ತಗುಲಿ, ಗುಣವಾದರೆ ಅವರ ಜೊತೆಗೆ ಇರುವ ಸೋಂಕು ತಗುಲದೇ ಇರುವವರೂ ಸುರಕ್ಷಿತರೇ ಆಗುತ್ತಾರೆ. ಈ ರೀತಿಯ ರಕ್ಷಣೆಯನ್ನು “ಸಮೂಹ ಪ್ರತಿರಕ್ಷೆ” (herd immunity) ಎನ್ನುತ್ತಾರೆ. ಇದು ಆಗಬೇಕಾದರೆ, ಆಯಾ ಪ್ರದೇಶದ ಶೇಕಡಾ 50-70 ಮಂದಿ ಈಗಾಗಲೇ ಸೋಂಕಿತರಾಗಿ, ಗುಣವಾಗಬೇಕು! ಇದು ಪ್ರಾಯೋಗಿಕವಾಗಿ ಸಾಧ್ಯವಾದರೂ, ಇದಕ್ಕೆ ತಗುಲುವ ಕಾಲ ಬಹಳ ಹೆಚ್ಚು. ಜೊತೆಗೆ, ಅಸ್ಥಿರತೆಗಳು ಇಲ್ಲಿ ವಿಪರೀತ! ಹೀಗಾಗಿ, ಇದು ಪ್ರಾಯೋಗಿಕ ಆಯ್ಕೆ ಅಲ್ಲ! ಅದರಲ್ಲೂ, ನಮ್ಮಂತಹ ಅಧಿಕ ಜನಸಂಖ್ಯೆಯ, ಕಡಿಮೆ ಆರೋಗ್ಯ ಸೌಲಭ್ಯಗಳ ದೇಶಕ್ಕೆ ಇದು ಸರಿಯಾದ ಆಯ್ಕೆ ಅಲ್ಲ!

COVID-19 ಬಗ್ಗೆ ಹೆದರಿಕೆ ಬೇಕಿಲ್ಲ; ಆದರೆ ಎಚ್ಚರಿಕೆ ಬೇಕು. ಅನಗತ್ಯವಾಗಿ ಸೋಂಕಿಗೆ ಒಡ್ಡಿಕೊಳ್ಳುವ ದುಸ್ಸಾಹಸ ಬೇಡ; ಆದರೆ, ಸೋಂಕು ತಗುಲಿದರೆ ಆತಂಕವೂ ಬೇಡ! ಕೆಲವು ಮೂಲಭೂತ ಸಲಹೆಗಳನ್ನು ಪಾಲಿಸಿದರೆ ಸಾಕು. ಈ ಸೋಂಕು ಕೊನೆಯಾಗುತ್ತದೆ. ಅದರಲ್ಲಿ ಅನುಮಾನವೇ ಇಲ್ಲ. ಅಲ್ಲಿಯವರೆಗೆ ನಮ್ಮ ಎಚ್ಚರದಲ್ಲಿ ನಾವಿರಬೇಕು. 

1. ಆರೋಗ್ಯ ಸುಧಾರಣೆ – ಆರೋಗ್ಯಕರ ವಿಧಾನಗಳಿಂದ ನಮ್ಮ ದೈಹಿಕ / ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಒಳ್ಳೆಯ ಜೀವನ ಶೈಲಿ, ಸಂತುಲಿತ ಆಹಾರ, ವ್ಯಾಯಾಮ, ಸಾಕಷ್ಟು ನೀರಿನ ಸೇವನೆ, ಉಸಿರಾಟದ ವ್ಯಾಯಾಮಗಳು – ಇಂತಹ ವಿಧಾನಗಳು ಸೂಕ್ತ.

2. ನಿರ್ದಿಷ್ಟ ರಕ್ಷಣೆ – ಸಾಮಾಜಿಕ ಅಂತರ, ಮಾಸ್ಕ್ ಬಳಕೆ, ವೈಯಕ್ತಿಕ ಸ್ವಚ್ಛತೆ, ಕೈಗಳನ್ನು ಸಾಬೂನು, ನೀರಿನಿಂದ ಆಗಾಗ ತೊಳೆಯುವಿಕೆ, ಅನಗತ್ಯವಾಗಿ ಮುಖವನ್ನು ಮುಟ್ಟದಿರುವುದು – ಇವನ್ನೆಲ್ಲಾ ನಿಷ್ಠೆಯಿಂದ ಪಾಲಿಸಬೇಕು. ನಾಲ್ಕು ದಿನ ಮಾಡಿ ಐದನೆಯ ದಿನ ಯಾವುದೇ ರಿಯಾಯತಿ ನಿರೀಕ್ಷಿಸುವಂತಿಲ್ಲ!

3. ಕಾಯಿಲೆಯ ಯಾವುದೇ ಲಕ್ಷಣಗಳು ಕಂಡುಬಂದರೆ ಆತಂಕ ಪಡುವ ಅಗತ್ಯವಿಲ್ಲ. ಕುಟುಂಬ ವೈದ್ಯರೇ ಸರಿಯಾದ ಸಲಹೆ ನೀಡುತ್ತಾರೆ. ಜೊತೆಗೆ ಸರಕಾರ ಅನೇಕ ಸಹಾಯವಾಣಿಗಳನ್ನೂ ನೀಡಿದೆ. ಅವುಗಳ ಪ್ರಯೋಜನವನ್ನೂ ಪಡೆಯಬಹುದು.

4. ಕಾಯಿಲೆ ನಿಯಂತ್ರಣಕ್ಕೆ ಬರುತ್ತಿಲ್ಲ ಎಂದಾಗ ಮಾತ್ರ ಆಸ್ಪತ್ರೆಯ ಆವಶ್ಯಕತೆ ಇರುತ್ತದೆ. ಕೆಲವು ಅಂಶಗಳನ್ನು ಗಮನಿಸಿ ಇದನ್ನು ವೈದ್ಯರು ನಿರ್ಧರಿಸುತ್ತಾರೆ. ಇದರ ಬಗ್ಗೆ ಭಯ ಬೇಕಿಲ್ಲ.

5. ಕಾಯಿಲೆ ಬಂದು ಗುಣವಾದವರು ತಮ್ಮ ಒಳ್ಳೆಯ ಅನುಭವಗಳನ್ನು ತಿಳಿಸುತ್ತಾ ಇತರರಲ್ಲಿ ಚೈತನ್ಯ ತುಂಬುವ ಪ್ರಯತ್ನ ಮಾಡಬೇಕು. ವಿಪತ್ತಿನ ಕಾಲದಲ್ಲಿ ಅಸಹನೆಗಳೂ ಇರಬಹುದು. ಆದರೆ, ಸಮೂಹ ಪ್ರಜ್ಞೆಯ ದೃಷ್ಟಿಯಿಂದ, ಎಲ್ಲರಿಗೂ ಒಲಿತನ್ನು ಮಾಡುವ ಯೋಜನೆಗಳು ನಮ್ಮದಾಗಬೇಕು.

COVID-19 ಕೊನೆಯಾಗುತ್ತದೆ. ಅದರಲ್ಲಿ ಸಂಶಯವೇ ಇಲ್ಲ! ಇದರಲ್ಲಿ ಸ್ವಲ್ಪ ಪಾತ್ರ ವೈದ್ಯರದ್ದು; ಸ್ವಲ್ಪ ಪಾತ್ರ ಸಂಶೋಧಕರದ್ದು; ಸ್ವಲ್ಪ ಪಾತ್ರ ವ್ಯವಸ್ಥೆಯದ್ದು. ಅಧಿಕತರ ಪಾತ್ರ ಸಮಾಜದ್ದು! ದೇಶದ ಪ್ರತಿಯೊಬ್ಬರೂ ಸಮಷ್ಟಿಯನ್ನು ಗಮನದಲ್ಲಿ ಇಟ್ಟುಕೊಂಡು ಕೆಲಸ ಮಾಡುವ ಅವಕಾಶವನ್ನು COVID-19 ಒದಗಿಸಿದೆ! ಅದನ್ನು ಕಳೆದುಕೊಳ್ಳಬಾರದು – ಸಮಾಜಮುಖಿಯಾಗುವ ಒಳ್ಳೆಯ ಅವಕಾಶ ತಪ್ಪಿಹೋಯಿತೆಂದು ಭವಿಷ್ಯದಲ್ಲಿ ನಾವು ನಿರಾಶರಾಗಬಾರದು! 

-----------------