ಸೋಮವಾರ, ನವೆಂಬರ್ 27, 2017



ಸರ್ವರಿಗೂ ಆರೋಗ್ಯ – ಹೀಗೊಂದು ಪರ್ಯಾಯ

ಸರ್ಕಾರ ಮತ್ತು ಖಾಸಗಿ ವೈದ್ಯರ ನಡುವೆ ಜಿದ್ದಾಜಿದ್ದಿಗೆ ಕಾರಣವಾದ KPME ಕಾಯ್ದೆಯ ಅತ್ಯಂತ ಗಮನಾರ್ಹ ಅಂಶವೆಂದರೆ ಖಾಸಗೀ ಆಸ್ಪತ್ರೆಗಳು ವಿಧಿಸುವ ಸೇವಾಶುಲ್ಕಗಳ ಪ್ರಮಾಣದ ನಿಯಂತ್ರಣ. ಅತ್ಯಂತ ಹೆಚ್ಚು ಟೀಕೆಗೊಳಗಾದ ಅಂಶವೂ ಇದೇ. ಯಾವುದೇ ಚಿಕಿತ್ಸೆಯ ಶುಲ್ಕಕ್ಕೆ ಒಂದು ಮಿತಿ ಇರಬೇಕು ಎಂದು ಸರ್ಕಾರ ಹೇಳಿದರೆ, ಆ ಪ್ರಕ್ರಿಯೆಯೇ ಅವೈಜ್ಞಾನಿಕ ಎಂದು ವೈದ್ಯರ ಅಭಿಪ್ರಾಯ.

ವೈದ್ಯೋದ್ಯಮಕ್ಕೆ ಯಾವುದೇ ಸಹಕಾರ ನೀಡದ, ಸಣ್ಣ ಪುಟ್ಟ ಕ್ಲಿನಿಕ್ ಗಳಿಗೆ ವ್ಯಾಪಾರ ಪರವಾನಗಿ (trade licence) ಹೆಸರಿನಲ್ಲಿ ಹಣ ವಸೂಲಿ ಮಾಡುವ, ನಮ್ಮ ದೇಶದಲ್ಲಿ ಇನ್ನೂ ತಯಾರಿಕೆಯೇ ಆರಂಭವಾಗಿಲ್ಲದ ಕಾರಣ ಬೇರೆ ವಿಧಿಯಿಲ್ಲದೇ ಹೊರದೇಶಗಳಿಂದ ತರಿಸಿಕೊಳ್ಳುವ ವೈದ್ಯಕೀಯ ಸಲಕರಣೆಗಳಿಗೆ ಮುಲಾಜಿಲ್ಲದೆ ವಾಣಿಜ್ಯ ಪ್ರತಿಶತ ತೆರಿಗೆ ಹಾಕುವ, ವಿದ್ಯುತ್, ನೀರು, ತೆರಿಗೆಯಲ್ಲಿ ಯಾವುದೇ ವಿನಾಯತಿ ನೀಡದ, ಸರ್ಕಾರಿ ಆರೋಗ್ಯ ಯೋಜನೆಗಳಿಗೆ ಬದ್ಧವಾಗಿರುವ ಖಾಸಗಿ ಆಸ್ಪತ್ರೆಗಳಿಗೆ ನೀಡಬೇಕಾದ ಹಣವನ್ನು ನೀಡದೆ ಸತಾಯಿಸುವ, ಲಂಚಕೋರ ಅಧಿಕಾರಿಗಳ ಉಗ್ರಾಣವಾಗಿರುವ ಸರ್ಕಾರಕ್ಕೆ ಖಾಸಗೀ ಆಸ್ಪತ್ರೆಗಳ ಶುಲ್ಕಗಳನ್ನು ನಿಯಂತ್ರಿಸುವ ಯಾವುದೇ ನೈತಿಕ ಹಕ್ಕಿಲ್ಲ ಎಂದು ಖಾಸಗಿ ಆಸ್ಪತ್ರೆಗಳ ನಿರ್ವಾಹಕರ ಅಳಲು.

ಹಾಗೆಂದ ಮಾತ್ರಕ್ಕೆ ಎಲ್ಲಾ ಖಾಸಗಿ ಆಸ್ಪತ್ರೆಗಳೂ ಪ್ರಾಮಾಣಿಕ ಎನ್ನುವಂತಿಲ್ಲ. ಇಂದಿಗೂ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವ ನೂರಾರು ಖಾಸಗಿ ಆಸ್ಪತ್ರೆಗಳಿವೆ. ಇವರಲ್ಲಿ ಬಹಳ ಮಂದಿ ವೈದ್ಯರು ಸೇವಾಮನೋಭಾವ ಹೊಂದಿದವರೇ ಆಗಿದ್ದಾರೆ. ಎಷ್ಟೋ ಬಡರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಿ, ಜೊತೆಗೆ ತಮ್ಮ ಕೈಯಿಂದ ಅವರಿಗೆ ಹಣ ನೀಡಿರುವ ವೈದ್ಯರು ಅಪರೂಪವೇನಲ್ಲ. ಇಂತಹವರ ಸಂಖ್ಯೆ ಈಗಲೂ ಗಣನೀಯವಾಗಿದ್ದರೂ, ಅದಕ್ಕೆ ವಿರುದ್ಧವಾಗಿ ಅಪ್ರಾಮಾಣಿಕ ರೀತಿಯಲ್ಲಿ ಹಣ ಮಾಡುವವರೂ ಇದ್ದಾರೆ. ಇದಕ್ಕೆ ಕಾರಣಗಳನ್ನು ಹುಡುಕುತ್ತಾ ಹೋದರೆ ಅದು ಕಡೆಗೆ ಬೃಹತ್ ಮೊತ್ತದ ಕ್ಯಾಪಿಟೇಶನ್ ವಸೂಲಿಯಿಂದ ವೈದ್ಯಕೀಯ ಪದವಿಗಳನ್ನು ಮಾರುವ ವೈದ್ಯಕೀಯ ಮಹಾವಿದ್ಯಾಲಯಗಳಿಗೇ ಸುತ್ತಿಕೊಳ್ಳಬಹುದು! ಮಾನವನ ಮೂಲಭೂತ ದುರಾಸೆಯ ಪಾತ್ರವನ್ನು ನಿರ್ಲಕ್ಷಿಸಲು ಆಗದು.

ಎಲ್ಲರೂ ಸಮಸ್ಯೆಯ ವಿವಿಧ ಮುಖಗಳನ್ನೇ ಹೇಳುತ್ತಿದ್ದರೆ, ಪರಿಹಾರ ಸಿಗುವುದು ದೂರದ ಮಾತು. ನಮ್ಮ ದೇಶದ ಒಟ್ಟಾರೆ ಸಮಾಜೋ-ಆರ್ಥಿಕ ಸ್ಥಿತಿಗತಿ ಎಷ್ಟು ಜಟಿಲವೆಂದರೆ, ಸಮಸ್ಯೆಯ ಒಳಹೊಕ್ಕು ಯಾವುದೇ ಸಿಕ್ಕುಗಳನ್ನೂ ಬಿಡಿಸಲಾಗದು. ಪೆಟ್ಟಿಗೆಯ ಹೊರಗಿನ ಪರಿಹಾರಗಳ ಕಡೆಗೂ ಗಮನ ಹರಿಸಬೇಕು.

ಇಂತಹ ಒಂದು ಪರಿಹಾರದ ಸಾಧ್ಯತೆಯನ್ನು ಈಗ ನೋಡೋಣ: ಭಾರತದ ಅತ್ಯಂತ ಯಶಸ್ವೀ ಸರ್ಕಾರಿ ಉದ್ಯಮವೆಂದರೆ ರೈಲ್ವೆ ನಿರ್ವಹಣೆ. ಇಡೀ ಭಾರತವನ್ನು ಬೆಸೆದಿರುವುದು ಈ ರೈಲ್ವೆ ಹಳಿಗಳೇ. ರೈಲು ಪ್ರಯಾಣವಿಲ್ಲದ ನಮ್ಮ ದೇಶವನ್ನು ಊಹಿಸಲೂ ಅಸಾಧ್ಯ. ಇಂತಹ ರೈಲಿನಲ್ಲೂ ಸರ್ಕಾರ ಅನೇಕ ಪ್ರಯಾಣ ದರಗಳ ಸ್ತರಗಳನ್ನು ಇಟ್ಟಿದೆ. ಅನುಕೂಲಕ್ಕೆ ತಕ್ಕಂತೆ ಪ್ರಯಾಣ ದರ. ಸುಮಾರು 18 ಲಕ್ಷ ರೂಪಾಯಿ ಟಿಕೇಟು ಬೆಲೆ ಇರುವ ಐಷಾರಾಮಿ ಮಹಾರಾಜ ರೈಲಿನಿಂದ ಹಿಡಿದು ತೀರಾ ಹತ್ತು ರೂಪಾಯಿ ಬೆಲೆಯ ಪ್ರಯಾಣಿಕರ ರೈಲಿನವರೆಗೆ ಇದರ ವ್ಯಾಪ್ತಿ ಇದೆ. ಒಂದೇ ರೈಲಿನಲ್ಲಿ ಮೊದಲ ದರ್ಜೆ, ವಾತಾನುಕೂಲಿ ದರ್ಜೆ, ಎರಡನೇ ದರ್ಜೆ, ಸಾಮಾನ್ಯ ದರ್ಜೆ – ಎಲ್ಲಾ ಇರುತ್ತವೆ. ಕಾಸಿಗೆ ತಕ್ಕಂತೆ ಕಜ್ಜಾಯ. ಎಲ್ಲಾ ರೀತಿಯ ಆರ್ಥಿಕ ಸ್ಥಿತಿಗತಿಯ ಪ್ರಜೆಗಳನ್ನೂ ರೈಲ್ವೆ ಈ ರೀತಿ ಬೆಸೆದಿದೆ.

ರೈಲಿಗೆ ಸಾಧ್ಯವಾದದ್ದು ಆಸ್ಪತ್ರೆಗೆ ಸಾಧ್ಯವಾಗದೇ? ಎಲ್ಲರಿಗೂ ಒಂದೇ ಮಾದರಿ ಎಂಬ ಸರ್ಕಾರಿ ಆಸ್ಪತ್ರೆಗಳು ಏಕಿರಬೇಕು? ಪ್ರಜೆಗಳ ಆರ್ಥಿಕ ಸಾಮರ್ಥ್ಯದ ಮೇಲೆ ರೈಲಿನಂತೆಯೇ ವಿಧವಿಧವಾದ ಕಾಸಿಗೆ ತಕ್ಕ ಕಜ್ಜಾಯದ ರೀತಿಯ ಸರ್ಕಾರಿ ಆಸ್ಪತ್ರ್ರೆಗಳು ಏಕಿರಬಾರದು?

ಒಂದು ಮಾದರಿಯ ಉದಾಹರಣೆಯೊಂದಿಗೆ ಇದನ್ನು ಸ್ಪಷ್ಟಪಡಿಸಬಹುದು: ನಗರಗಳಲ್ಲಿ ಮೆಟ್ರೋ ರೈಲಿನ ಕಡೆಯ ನಿಲ್ದಾಣದ ಆಸುಪಾಸಿನಲ್ಲಿ ಸುಮಾರು ನೂರು ಎಕರೆ ಸರ್ಕಾರಿ ಭೂಮಿಯಲ್ಲಿ ನಾಲ್ಕು ಸ್ತರದ ಸರ್ಕಾರಿ ಆಸ್ಪತ್ರೆಗಳು ನಿರ್ಮಾಣ ಆಗಬೇಕು. ಮೊದಲನೆಯ ಸ್ತರ ಸಂಪೂರ್ಣ ಉಚಿತ. ಇಲ್ಲಿ ಯಾವ ಚಿಕಿತ್ಸೆಗೂ ಹಣವಿಲ್ಲ. ಎರಡನೇ ಸ್ತರ ರಿಯಾಯತಿಯ ಆಧಾರದ ಚಿಕಿತ್ಸೆ. ಇಲ್ಲಿ ಯಾವುದೂ ಉಚಿತವಲ್ಲ. ಆದರೆ ಪ್ರತಿಯೊಂದು ಕೆಲಸಕ್ಕೂ ರಿಯಾಯತಿಯ ದರ ಇರಬೇಕು. ಮೂರನೆಯ ಸ್ತರ “ಲಾಭವಿಲ್ಲ-ನಷ್ಟವಿಲ್ಲ” ಮಾದರಿ. ಇಲ್ಲಿ ಪ್ರತಿಯೊಂದು ಚಿಕಿತ್ಸೆಗೂ ದರ ಇರಬೇಕು. ಒಟ್ಟಾರೆ ಈ ಮಾದರಿ ತನ್ನ ಆರ್ಥಿಕ ಅವಶ್ಯಕತೆಗಳನ್ನು ತಾನೇ ಪೂರೈಸಿಕೊಲ್ಲಬೇಕು. ಸಹಾಯಧನಕ್ಕಾಗಿ ಸರ್ಕಾರಕ್ಕೆ ಕೈ ಚಾಚಬಾರದು. ಆದರೆ ಇಲ್ಲಿ ಯಾವುದೇ ಲಾಭ ಮಾಡುವ ಅವಶ್ಯಕತೆ ಇರಬಾರದು. ನಾಲ್ಕನೆಯ ಸ್ತರ ಐಶಾರಾಮಿ ವ್ಯವಸ್ಥೆ. ಕಾರ್ಪೋರೆಟ್ ಆಸ್ಪತ್ರೆಗಳಲ್ಲಿ ಇರುವಂತೆ ಇಲ್ಲಿ ವ್ಯವಸ್ಥೆ ಇರಬೇಕು. ಈ ಸ್ತರದಲ್ಲಿ ಪ್ರತಿಯೊಂದು ಚಿಕಿತ್ಸೆಗೂ ಅದೇ ರೀತಿ ಶುಲ್ಕ ವಿಧಿಸಬೇಕು. ಆದರೆ ಸೌಲಭ್ಯವೂ ಹಾಗೆ ಇರಬೇಕು. ವೈದ್ಯರ ಮತ್ತು ಸಿಬ್ಬಂದಿಯ ವಸತಿ ಸೌಕರ್ಯ, ಶಾಲೆ, ಕಾಲೇಜು, ಅಗತ್ಯವಸ್ತುಗಳ ಲಭ್ಯತೆಯ ವಾಣಿಜ್ಯ ಸೌಕರ್ಯ ಅದೇ ನೂರೆಕರೆ ಪ್ರದೇಶದಲ್ಲಿ ಇರಬೇಕು.

ನಾಲ್ಕನೆಯ ಸ್ತರದಿಂದ ಬಂದ ಆದಾಯದಿಂದ ಮೊದಲ ಎರಡೂ ಸ್ತರಗಳು ನಡೆಯಬೇಕು. ಅದಕ್ಕಿಂತ ಮೀರಿದ ಖರ್ಚನ್ನು ಮಾತ್ರ ಸರ್ಕಾರ ಭರಿಸಬೇಕು. ಈ ನಾಲ್ಕು ಸ್ತರಗಳ ವ್ಯವಸ್ಥೆ ಒಟ್ಟಾರೆಯಾಗಿ ಆರ್ಥಿಕ ಸ್ವಾವಲಂಬನೆ ಸಾಧಿಸಬೇಕು. ಎರಡು, ಮೂರು ಮತ್ತು ನಾಲ್ಕನೆಯ ಸ್ತರದ ಶುಲ್ಕಗಳನ್ನು ನಿರ್ಧರಿಸಲು ಒಂದು ತಜ್ಞ ಸಮಿತಿ ಇರಬೇಕು. ಈ ಸಮಿತಿಯಲ್ಲಿ ಆರ್ಥಿಕ ತಜ್ಞರು, ಕಾನೂನು ತಜ್ಞರು ಮತ್ತು ವೈದ್ಯರು ಮಾತ್ರ ಇರಬೇಕು. ರಾಜಕಾರಣಿಗಳಿಗೆ ಎಡೆ ಇರಬಾರದು. ಪ್ರತೀ ಆರು ತಿಂಗಳಿಗೊಮ್ಮೆ ಈ ಸಮಿತಿ ಶುಲ್ಕಗಳನ್ನು ಪರಿಷ್ಕರಿಸಬೇಕು ಹಾಗೂ ಅದನ್ನು ಸಾರ್ವಜನಿಕವಾಗಿ ಜಾಲತಾಣಗಳಲ್ಲಿ ಪ್ರಕಟಿಸಬೇಕು. ಯಾವುದೇ ಖಾಸಗೀ ಆಸ್ಪತ್ರೆಯೂ ಈ ನಾಲ್ಕನೇ ಸ್ತರದ ಶುಲ್ಕಕ್ಕಿಂತ ಹೆಚ್ಚು ಶುಲ್ಕ ವಿಧಿಸಬಾರದು. ಕೆಳಗಿನ ಸ್ತರದಲ್ಲಿ ಕೆಲಸ ಮಾಡುವ ವೈದ್ಯರಿಗೆ ಹಾಗೂ ಸಿಬ್ಬಂದಿಗೆ ಅಧಿಕ ಸಂಬಳ ಇರಬೇಕು. ಯಾವ ಸ್ತರದಲ್ಲಿ ಎಷ್ಟು ಸಿಬ್ಬಂದಿ ಹಾಗೂ ವೈದ್ಯರು ಇರಬೇಕೆಂಬುದನ್ನೂ ಸಮಿತಿ ನಿರ್ಧರಿಸಬೇಕು. ಇಡೀ ಆರೋಗ್ಯ ಸಮುಚ್ಚಯದ ನಿರ್ವಹಣೆ ಸ್ವತಂತ್ರವಾಗಿರಬೇಕು. ಸರ್ಕಾರಿ ಅಧಿಕಾರಿಗಳ ಮತ್ತು ರಾಜಕಾರಣಿಗಳ ಪ್ರಭಾವ ಇಂತಹ ಸಮುಚ್ಚಯದ ದಿನನಿತ್ಯದ ನಿರ್ವಹಣೆಯಲ್ಲಿ ಇರಬಾರದು.

ಈ ನಾಲ್ಕು ಸ್ತರದ ವ್ಯವಸ್ಥೆ ಪಾರದರ್ಶಕವಾಗಿಯೂ, ಕಟ್ಟುನಿಟ್ಟಾಗಿಯೂ ಇರಬೇಕು. ಯಾವ ರೋಗಿ ಯಾವ ಸ್ತರದಲ್ಲಿ ಚಿತ್ಸೆ ಪಡೆಯಬೇಕೆಂದು ಸ್ವತಃ ಅವರೇ ನಿರ್ಧರಿಸಬೇಕು. ಆದಾಯರೇಖೆಯ ಕೆಳಗಿನ ಪಡಿತರ ಚೀಟಿ, ಆದಾಯ ಪ್ರಮಾಣ ಪತ್ರ ಇಂತಹುವಕ್ಕೆಲ್ಲಾ ಆಸ್ಪದವೇ ಇರಬಾರದು. ಮೂರನೇ ಸ್ತರಕ್ಕೆ ದಾಖಲಾಗಿ ಉಚಿತ ಚಿಕಿತ್ಸೆ ಮಾಡಿಸುವ ವ್ಯವಸ್ಥೆ ಇರಬಾರದು. ಪ್ರಭಾವೀ ಜನಗಳು ಮೊದಲನೆಯ ಸ್ತರದಲ್ಲಿ ಸೇರಿದಂತೆ ದಾಖಲೆ ತೋರಿಸಿ ನಾಲ್ಕನೆಯ ಸ್ತರದಲ್ಲಿ ಚಿಕಿತ್ಸೆ ಮಾಡಿಸುವಂತೆ ಇರಬಾರದು. ಎಲ್ಲಾ ಶುಲ್ಕಗಳೂ ನಗದುರಹಿತ ವ್ಯವಸ್ಥೆಯಲ್ಲೇ ಆಗಬೇಕು. ಅದಕ್ಕೆ ಬೇಕಾದ ಎಲ್ಲಾ ರೀತಿಯ ಸೌಕರ್ಯಗಳೂ ಆ ಪ್ರದೇಶದಲ್ಲೇ ಇರಬೇಕು. ಹಾಗೆಯೇ, ರೋಗಿಗಳ ಸಂಬಂಧಿಗಳಿಗೆ ಉಳಿದುಕೊಳ್ಳಲು ಇದೇ ಮಾದರಿಯ ಹಲವು ಸ್ತರಗಳ ಉಚಿತ ಧರ್ಮಶಾಲೆಯಿಂದ ಹಿಡಿದು ಐಶಾರಾಮಿ ಕೋಣೆಗಳವರೆಗೆ ವ್ಯವಸ್ಥೆ ಇರಬೇಕು. ಅದಕ್ಕೆ ತಕ್ಕ ಶುಲ್ಕವನ್ನೂ ಈ ಸಮಿತಿ ನಿರ್ಧರಿಸಬೇಕು. 

ಇದೇ ಮಾದರಿ ಪ್ರತೀ 2೦೦ ಕಿ ಮೀ ಗಳಿಗೆ ಒಂದರಂತೆ ರಾಜ್ಯವ್ಯಾಪಿ ಇರಬೇಕು. ಇಂತಹ ಪ್ರತೀ ಸೌಲಭ್ಯವೂ ಯಾವುದಾದರೂ ರೈಲ್ವೆ ನಿಲ್ದಾಣಕ್ಕೆ ಸಮೀಪವಾಗಿ ಇರಬೇಕು. ಇಂತಹಾ ರಾಜ್ಯವ್ಯಾಪಿ ಆರೋಗ್ಯ ಸಮುಚ್ಚಯಗಳ ನಡುವೆ ಅಂತರ್ಜಾಲದ ವೀಡಿಯೊ ಸಂಪರ್ಕ ಇರಬೇಕು. ಕ್ಲಿಷ್ಟಕರ ರೋಗ ಸಮಸ್ಯೆಗಳಲ್ಲಿ ಇತರ ಹಿರಿಯ ವೈದ್ಯರ ಅಭಿಪ್ರಾಯ ಪಡೆಯುವ ಸೌಲಭ್ಯ ಪ್ರತೀ ಸಮುಚ್ಚಯಕ್ಕೂ ಇರಬೇಕು. ಒಂದು ಸಮುಚ್ಚಯದಿಂದ ಇನ್ನೊಂದೆಡೆಗೆ ರೋಗಿಯನ್ನು ವರ್ಗಾಯಿಸುವ ವ್ಯವಸ್ಥೆ ಈ ರೈಲು ಸಂಪರ್ಕದಿಂದ ಸುಲಭವಾಗಿ ಆಗಬೇಕು. ಪ್ರತಿಯೊಂದು ಆರೋಗ್ಯ ಸಮುಚ್ಚಯದ ನಿರ್ವಹಣೆಯನ್ನೂ ಸಮಿತಿ ಪರಿಷ್ಕರಿಸಿ ಅವರಿಗೆ ದರ್ಜೆಗಳನ್ನು ನೀಡಬೇಕು. ಈ ದರ್ಜೆ ಉತ್ತಮಗೊಳ್ಳಲು ಪ್ರೋತ್ಸಾಹ ಭತ್ಯೆ ನೀಡಬೇಕು. ಒಂದೇ ಸಮನೆ ಕೆಳ ದರ್ಜೆ ಪಡೆಯುವ ಆರೋಗ್ಯ ಸಮುಚ್ಚಯಗಳ ಮೇಲೆ ನಿಗಾ ವಹಿಸಿ ಅವನ್ನು ಸುಧಾರಿಸಬೇಕು. ವೈದ್ಯರನ್ನು ಹಾಗೂ ನುರಿತ ಸಿಬ್ಬಂದಿಯನ್ನು ಪದೇ ಪದೇ ವರ್ಗಾವಣೆ ಮಾಡಬಾರದು.

ಸರ್ಕಾರ ಇಚಿಸಿದರೆ ಈ ಮಾದರಿ ಪೂರ್ಣಪ್ರಮಾಣದಲ್ಲಿ ಕೇವಲ ಎರಡು ವರ್ಷಗಳಲ್ಲಿ ಜಾರಿಗೆ ಬರಬಹುದು. ಇಂತಹ ಆರೋಗ್ಯ ಸಮುಚ್ಚಯಗಳಲ್ಲಿ ಒಳ್ಳೆಯ ಸಂಬಳ, ಅನುಕೂಲ, ಭೀತಿಯಿಲ್ಲದ ವಾತಾವರಣ, ಪ್ರೋತ್ಸಾಹ, ರಕ್ಷಣೆಗಳನ್ನು ನೀಡಿದರೆ ವೈದ್ಯರು ರಾಜ್ಯದ ಯಾವುದೇ ಮೂಲೆಯಲ್ಲಾದರೂ ಕೆಲಸಕ್ಕೆ ಹೋಗಲು ತಯಾರಾಗುತ್ತಾರೆ. ಆರೋಗ್ಯ ನಿರ್ವಹಣೆಗೆ ಈಗ ಸರ್ಕಾರ ಖರ್ಚು ಮಾಡುವುದಕ್ಕಿಂತ ಕಡಿಮೆ ಖರ್ಚಿನಲ್ಲಿ ಈ ಮಾದರಿ ಕೆಲಸ ಮಾಡಬಲ್ಲದು. ದೇಶವ್ಯಾಪಿ ಆರೋಗ್ಯ ಆಂದೋಲನ ಈ ಮಾದರಿಯಿಂದ ಸಾಧ್ಯ. ಒಂದು ತಜ್ಞ ಸಮಿತಿ ಈ ಮಾದರಿಯನ್ನು ಸುಧಾರಿಸಿ ಅಂತಿಮ ನೀಲಿನಕ್ಷೆ ತಯಾರಿಸಬೇಕು.

ಎಷ್ಟೇ ಸಮಸ್ಯೆಗಳು ಕಾಡಿದರೂ ನಮ್ಮ ದೇಶದಲ್ಲಿ ಇನ್ನೂ ಪ್ರಾಮಾಣಿಕತೆ, ಕೆಲಸ ಮಾಡುವ ಉತ್ಸಾಹ ಪ್ರಜೆಗಳಲ್ಲಿ ಜೀವಂತವಾಗಿದೆ. ಸರ್ಕಾರ ವಿಫಲವಾಗಿರುವ ಎಡೆಗಳಲ್ಲಿ ಖಾಸಗಿಯವರು ದಿಗ್ವಿಜಯ ಸಾಧಿಸುತ್ತಿದ್ದಾರೆ ಎಂಬುದೇ ಈ ಮಾತಿಗೆ ಸಾಕ್ಷಿ. ಪ್ರಜೆಗಳ ಆರೋಗ್ಯ ನಿರ್ವಹಣೆಯಲ್ಲಿ ಸರ್ಕಾರ ಯಶಸ್ಸು ಸಾಧಿಸಬೇಕು. ಸರ್ವರಿಗೂ ಆರೋಗ್ಯ ಎಂಬ ಮಾತು ಕನಸಾಗಿ ಉಳಿಯಬಾರದು.
-------------------------------
  (ನವೆಂಬರ್ 2017 ರಲ್ಲಿ "ವಿಶ್ವವಾಣಿ" ಕನ್ನಡ ದಿನಪತ್ರಿಕೆಯಲ್ಲಿ ಪ್ರಕಟವಾದ ಲೇಖನ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ