ಶನಿವಾರ, ನವೆಂಬರ್ 25, 2017

ವೈದ್ಯರು, ಸರ್ಕಾರ ಹಾಗೂ ಸರಿ-ತಪ್ಪುಗಳ ಪರಿಭಾಷೆ



ವೈದ್ಯರು, ಸರ್ಕಾರ ಹಾಗೂ ಸರಿ-ತಪ್ಪುಗಳ ಪರಿಭಾಷೆ
“ಸಮರದಲ್ಲಿ ಸೋಲುವುದು ಅಪರಾಧವಲ್ಲ; ಆದರೆ ಆ ಸೋಲಿನಿಂದ ಏನನ್ನೂ ಕಲಿಯದೇ ಇರುವುದು ಮಹಾ ಅಪರಾಧ” ಎಂಬ ನಾಣ್ನುಡಿ ಇದೆ.

ಇತ್ತೀಚೆಗೆ ಸರ್ಕಾರ ಮತ್ತು ಖಾಸಗಿ ಆಸ್ಪತ್ರೆಗಳ ವೈದ್ಯರು KPME ಕಾಯ್ದೆಯ ವಿಷಯದಲ್ಲಿ ನಡೆಸಿದ “ಕದನ” ಮಾದರಿಯ ಪರಿಸ್ಥಿತಿಯಿಂದ ಯಾರು ಏನನ್ನು ಕಲಿತರೋ ತಿಳಿಯದು. ಸರ್ಕಾರದ ಪ್ರಭೃತಿಗಳ ಮೊಂಡಾಟ, ರಾಜಕಾರಣದ ಬೃಹತ್ ಶಕ್ತಿಯ ಅಸಹನೀಯ ಪ್ರದರ್ಶನ, “ಖಾಸಗೀ ಆಸ್ಪತ್ರೆಯ ವೈದ್ಯರಿಗೆ ತಕ್ಕ ಪಾಠ ಕಲಿಸುತ್ತೇವೆ” ಎಂಬ ಜಿದ್ದಿನ ಸಂಗಮ ಒಂದೆಡೆಯಾದರೆ, ಸರ್ಕಾರದ ವಿಧೇಯಕವನ್ನು ಹರತಾಳದಿಂದ, ಶಕ್ತಿ ಪ್ರದರ್ಶನದಿಂದ, “ನಾವು ಕೆಲಸ ಮಾಡದಿದ್ದರೆ ಏನಾಗುತ್ತದೆ ನೋಡಿ” ಎಂಬ ಬೆದರಿಕೆಯ ಸ್ವರೂಪದ ವೈದ್ಯರ ವಿರೋಧ ಮತ್ತೊಂದೆಡೆ. ಒಟ್ಟಿನಲ್ಲಿ, ಆನೆಗಳ ಕಾದಾಟದಲ್ಲಿ ಹುಲ್ಲು ನಾಶವಾದಂತೆ, ಈ ಕಾದಾಟದಲ್ಲಿ ಬಡವಾದದ್ದು ಸಾಮಾನ್ಯ ಪ್ರಜೆಯ ಜೀವ.

ಒಂದು ನಾಗರೀಕ ಪ್ರಜಾಪ್ರಭುತ್ವದಲ್ಲಿ “ಮುಷ್ಕರ”, “ಬಂದ್” ಎಂಬುದಕ್ಕೆ ಆಸ್ಪದವೇ ಇರಬಾರದು. ಆದರೆ ಇಂತಹ ಘಟನೆಗಳಿಂದ ನಮ್ಮ ನಾಗರೀಕತೆಯ ಮಟ್ಟ ತಿಳಿಯುವಂತಾಗಿದೆ. ನಮ್ಮದು ಪ್ರಜಾಪ್ರಭುತ್ವವೋ ಅಥವಾ ಗುಂಪು ದೊಂಬಿಯೋ ತಿಳಿಯದಾಗಿದೆ. ಮುಷ್ಕರ ಹೂಡುವವರ ಸಂಖ್ಯಾಬಾಹುಳ್ಯ ವ್ಯವಸ್ಥೆಯ ಗಮನ ಸೆಳೆಯುತ್ತದೆಯೇ ವಿನಃ ವಿಷಯದ ಗಹನತೆ ಅಲ್ಲ. ದೊಂಬಿಕೋರರು ಸಾರ್ವಜನಿಕ ಆಸ್ತಿಯನ್ನು ನಷ್ಟ ಮಾಡಿದರೆ ಸರ್ಕಾರ ಎಚ್ಚರಗೊಳ್ಳುವ ಸಾಧ್ಯತೆ ಹೆಚ್ಚು ಎನ್ನುವ ವಿಡಂಬನೆ ನಮ್ಮದು. ಪ್ರಾಯಶಃ ಅದೇ ಕಾರಣಕ್ಕೆ ಸುಮಾರು 20,೦೦೦ ವೈದ್ಯರು ಒಟ್ಟಾಗಿ ಸೇರಿ ಮನವಿ ಮಾಡಿದಾಗ ಕ್ಯಾರೆ ಅನ್ನದ ಸರ್ಕಾರ ಅದೇ ವೈದ್ಯರು ತಮ್ಮ ಸ್ವಂತ ಕೆಲಸ ಮಾಡುವುದನ್ನು ನಿಲ್ಲಿಸಿ ಅಸಹಕಾರ ತೋರಿದಾಗ ಎಚ್ಚೆತ್ತಿತು.

ಈ ರೀತಿಯ ಅಸಹಕಾರ, ಮುಷ್ಕರ – ಇವುಗಳೇ ದಾರಿಯೇ? “ನಮಗೆ ಬೇರಾವ ಪರ್ಯಾಯವಿತ್ತು?” ಎಂದು ಪ್ರಶ್ನಿಸುತ್ತದೆ ವೈದ್ಯ ಸಮೂಹ. ಜನಾಸಕ್ತಿಯ ದಾವೆಗೆ ಉತ್ತರಿಸುತ್ತಾ ನ್ಯಾಯಾಲಯ, “ಆ ವಿಧೇಯಕ ಮಂಡನೆಯಾಗಿ, ಚರ್ಚೆಯಾಗಿ, ಅಂಗೀಕಾರವಾಗಿ, ರಾಜ್ಯಪಾಲರ ಒಪ್ಪಿಗೆ ಪಡೆದು ಚಾಲ್ತಿಗೆ ಬಂದ ಮೇಲೂ ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು. ಮುಷ್ಕರದ ಅವಶ್ಯಕತೆ ಏನು?” ಎಂದು ವೈದ್ಯರನ್ನು ಪ್ರಶ್ನಿಸಿತು. ಹೌದು; ಆದರ್ಶ ಸಮಾಜದಲ್ಲಿ ಹಾಗೇ ನಡೆಯುತ್ತದೆ. ಆದರೆ ಆ ಮಟ್ಟದ ಆದರ್ಶವನ್ನು ನಮ್ಮ ಸಮಾಜ, ಸಮಾಜಪಾಲಕರು ಉಳಿಸಿಕೊಂಡಿದ್ದಾರೆಯೆ? ನಮ್ಮ ನ್ಯಾಯಾಲಯಗಳು ಅಷ್ಟು ತ್ವರಿತವಾಗಿ ನ್ಯಾಯನಿರ್ಣಯ ಮಾಡುತ್ತವೆಯೇ? ಎಂದೆಲ್ಲಾ ಕೇಳುವಂತಿಲ್ಲ.

“ವಜ್ರವನ್ನು ವಜ್ರದಿಂದಲೇ ಕತ್ತರಿಸಬೇಕು” ಎಂಬ ಮಾತು ಎರಡೂ ಬದಿಯಲ್ಲಿ ವಜ್ರಗಳು ಇದ್ದರೆ ಮಾತ್ರ ಸಮಂಜಸ! ಆದರೆ ಅಜ್ಞಾನ, ತಪ್ಪು ಮಾಹಿತಿ, ಅಹಂಭಾವ, ಅಧಿಕಾರದ ಮದ – ಇವುಗಳ ಸಂಯೋಗವನ್ನು ಎದುರಿಸುವುದು ಹೇಗೆ? ಇಲ್ಲಿ ವೈದ್ಯರು ಎಡವಿದರೆ? ಯಾವ ಆಧಾರದ ಮೇಲೆ ವೈದ್ಯರು ಮುಷ್ಕರಕ್ಕೆ ಇಳಿದರೋ, ಆ ಮಾಹಿತಿ ಸರಿಯಾಗಿತ್ತೇ? ಆ ವಿಷಯವಾಗಿ ಒಂದು ಒಗ್ಗಟ್ಟಿನ ಆಲೋಚನೆಯನ್ನು ವೈದ್ಯ ಸಂಘ ನಡೆಸಿತ್ತೇ? ಈ ವಿಷಯವಾಗಿ ಅಧಿಕಾರಯುತವಾಗಿ ಸೆಣಸಬಲ್ಲ ನಾಯಕರನ್ನು ವೈದ್ಯಸಂಘ ಗುರುತಿಸಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡಿತ್ತೇ? ಮುಷ್ಕರವಲ್ಲದೆ ಬೇರೆ ವಿಧಾನಗಳ ಬಗ್ಗೆ ಸಲಹೆ, ಅಭಿಪ್ರಾಯ ಪಡೆದಿತ್ತೇ? ಮುಷ್ಕರ ಏಕಪಕ್ಷೀಯವಾಗಿ ತೆಗೆದುಕೊಂಡ ನಿರ್ಧಾರವೇ? ಒಟ್ಟಿನಲ್ಲಿ ಒಂದು ಸಮರ್ಥ ಕಾರ್ಯತಂತ್ರದ ಅಭಾವ ಇತ್ತು ಎಂದು ಹಲವು ಹಿರಿಯ ವೈದ್ಯರು ಅಭಿಪ್ರಾಯ ಪಡುತ್ತಾರೆ. “ಸರ್ಕಾರದ ನಿರ್ಧಾರ ವಿವೇಚನಾರಹಿತವಾಗಿದ್ದರೂ, ನಮ್ಮ ಪ್ರತಿಧಾಳಿಯೂ ಅಷ್ಟೇ ಘೋರವಾಗಿದ್ದರೆ ಮಾತ್ರ ಕೆಲಸ ನಡೆಯುತ್ತದೆ” ಎಂಬ ವೈದ್ಯರ ನಿಲುವು ಸಮಂಜಸವೇ ಎಂಬ ಪ್ರಶ್ನೆ ಸಾರ್ವಜನಿಕರ ಮನದಲ್ಲಿ ಪ್ರಶ್ನೆಯಾಗಿಯೇ ಉಳಿಯಿತು.

ಹೌದು; ಖಾಸಗೀ ಆಸ್ಪತ್ರೆಗಳ ವೈದ್ಯ ಸಮೂಹ ಅಭೂತಪೂರ್ವವಾಗಿ ಒಗ್ಗಟ್ಟು ಪ್ರದರ್ಶಿಸಿ ಒಟ್ಟಾಗಿ ನಿಂತಿತು. ಆದರೆ ಅದಕ್ಕೆ ಪ್ರತಿಯೊಬ್ಬರಿಗೂ ತಮ್ಮದೇ ಆದ ಕಾರಣಗಳಿದ್ದವು. ನಿಶ್ಶಬ್ದವಾಗಿ ಬೆಂಬಲ ಸೂಚಿಸಿದ ಹಲವಾರು ವೈದ್ಯರು ಬೇರೆ ವಿಧಿಯಿಲ್ಲದೇ, ತಮ್ಮ ಮಾತು ಕೇಳುವರಿಲ್ಲದೆ, ತಮ್ಮ ವಿಚಾರವನ್ನು ಯಾರಿಗೆ ಹೇಳಬೇಕೋ ತಿಳಿಯದೆ, ವಿರೋಧ ವ್ಯಕ್ತಪಡಿಸಲಾಗದೆ, ಒಗ್ಗಟ್ಟಿಗೆ ಭಂಗ ತರಲಾಗದೆ ಸುಮ್ಮನಿದ್ದರು. ಸೂಕ್ಷ್ಮ ಸಂವೇದನೆಯ ಹಲವಾರು ವೈದ್ಯರು “ಎಲ್ಲರ ಒಳಿತಿಗಾಗಿ” ತಮ್ಮ ಮನದಾಳದ ಮಾತುಗಳನ್ನಾಡನಾಡದೆ ಇರಬೇಕಾಯಿತು.

ದೃಶ್ಯ ಮಾಧ್ಯಮದ ಬೇಜವಾಬ್ದಾರಿ ಮತ್ತೊಮ್ಮೆ ಬಯಲಾಯಿತು. ಸ್ವಯಂಘೋಷಿತ ದೇವಮಾನವರಿಗೆ, ಡೋಂಗಿ ಜ್ಯೋತಿಷಿಗಳಿಗೆ ತಾಸುಗಟ್ಟಲೆ ಸಮಯ ನೀಡುವ ಈ ದೃಶ್ಯ ಮಾಧ್ಯಮಗಳು, ಕನಿಷ್ಠ ಒಂದು ತಾಸಿನ ಕಾಲವನ್ನೂ ಅರ್ಥಬದ್ಧ ವಿಶ್ಲೇಷಣೆಗೆ ನೀಡಲಿಲ್ಲ. ಕಾನೂನು ಪಂಡಿತರು, ರಾಜಕಾರಣಿಗಳು, ವೈದ್ಯಪ್ರಮುಖರು, ಸಾಮಾನ್ಯ ಜನತೆ – ಇವರನ್ನು ಒಟ್ಟುಗೂಡಿಸಿ ಒಂದು ತಾಸಿನ ಚರ್ಚೆ ನಡೆಸಿದ್ದರೂ ಎಷ್ಟೋ ಪರಿಹಾರ ಸಿಗುತ್ತಿತ್ತು. ಆದರೆ ಅದು ನಡೆಯಲಿಲ್ಲ. ಮುಂದೆಂದಾದರೂ ಇಂತಹ ಚರ್ಚೆ ನಡೆಯುವ ಭರವಸೆಯೂ ಇಲ್ಲ. ನಮ್ಮ ದೇಶದ ದೃಶ್ಯ ಮಾಧ್ಯಮಕ್ಕೆ ಅದು ಬೇಕಿಲ್ಲ.
ಒಬ್ಬ ಸಾಮಾನ್ಯ ಪ್ರಜೆಯ ಮೇಲೆ ಈ ಘಟನಾವಳಿ ಎಂತಹ ಪರಿಣಾಮ ಬೀರಿತು ಎಂಬ ಬಗ್ಗೆ ಯಾರೂ ತಲೆ ಕೆಡಿಸಿಕೊಂಡಂತಿಲ್ಲ. ಅರೆಬರೆ ತಿಳಿದ ಕೆಲವು ಜನಸಾಮಾನ್ಯರು ಅರೆಬೆಂದ ನಿರ್ಣಯ ನೀಡಿ ತಮ್ಮ ಅಜ್ಞಾನವನ್ನು ಮೆರದದ್ದೇ ಆಯಿತು. ಇಡೀ ವಿಧೇಯಕದ ಸಾಧಕ-ಬಾಧಕಗಳನ್ನು ಜನಸಾಮಾನ್ಯರಿಗೆ ತಿಳಿಸುವ ಪ್ರಯತ್ನವನ್ನು ಯಾರೂ ಮಾಡಲಿಲ್ಲ ಎಂಬುದೇ ಖೇದದ ಸಂಗತಿ. ಸರ್ಕಾರ ತನ್ನ ಮೂಗಿನ ನೇರಕ್ಕೆ ಮಾತನಾಡಿದರೆ, ವೈದ್ಯರು ತಮ್ಮ ಆಲೋಚನೆಗಳನ್ನು ಮಾತ್ರ ಮುಂದಿಟ್ಟರು. ಒಬ್ಬರನ್ನು ಇನ್ನೊಬ್ಬರು ಹಳಿಯಲು ತೊಡಗಿಸಿಕೊಂಡ ಸಮಯವನ್ನು ಅರ್ಥಬದ್ಧ ವಿವರಣೆಯಲ್ಲಿ ತೊಡಗಿಸಿದ್ದರೆ ಜನಸಾಮಾನ್ಯರಿಗೆ ಕನಿಷ್ಠ ಈ ವಿಧೇಯಕ ಏನೆಂದಾದರೂ ತಿಳಿಯುತ್ತಿತ್ತು. ಕಡೆಗೆ ತಲುಪಿದ್ದು ತಪ್ಪು ಸಂದೇಶಗಳು ಮಾತ್ರ.

ಆರೋಗ್ಯದ ಸಂರಕ್ಷಣೆ ನಮ್ಮ ದೇಶದಲ್ಲಿ ಒಂದು ವಿಚಿತ್ರ ಪ್ರಕಾರವಾಗಿ ನಡೆಯುತ್ತದೆ. ಪರಿಸ್ಥಿತಿ ತೀರಾ ದಯನೀಯವಾದಾಗ ಮಾತ್ರ ಆಸ್ಪತ್ರೆಯ ಮುಖ ನೋಡುವ ಬಹಳಷ್ಟು ಜನ ನಮ್ಮಲ್ಲಿ ಇದ್ದಾರೆ. ಇಂತಹ ಪ್ರಜಾನೀಕಕ್ಕೆ ಆಸ್ಪತ್ರೆ ತಲುಪಿದಾಗ ಅಲ್ಲಿ ವೈದ್ಯರು ಇಲ್ಲದಿದ್ದರೆ ಆಘಾತವಾಗುವುದು ಸಾಮಾನ್ಯ. ಮೊದಲೇ ಕ್ಷೀಣಗೊಂಡ ಆರೋಗ್ಯ ಪರಿಸ್ಥಿತಿಯಲ್ಲಿ ಇಂತಹ ಆಘಾತ ಉಂಟು ಮಾಡುವ ಪರಿಣಾಮ ಅಷ್ಟಿಷ್ಟಲ್ಲ. ಅದನ್ನು ಅನುಭವಿಸಿದವರೇ ಬಲ್ಲರು. ಇದು ಒಂದು ರೀತಿ ಹೆಜ್ಜೆ ಇಟ್ಟ ನೆಲ ಕುಸಿದ ಪರಿಸ್ಥಿತಿ. ಇಂತಹ ಮನಸ್ಥಿತಿ ಉಳ್ಳ ಪ್ರಜೆಗಳ ಸಮೂಹಕ್ಕೆ ಆರೋಗ್ಯ ಸಂರಕ್ಷಣೆ ನೀಡುವುದು ಸುಲಭದ ಮಾತಲ್ಲ. ಇಂದಿಗೂ ಬಹಳಷ್ಟು ವೈದ್ಯರು ತುರ್ತುಚಿಕಿತ್ಸೆಯ ಸಂದರ್ಭದಲ್ಲಿ ತಮ್ಮ ಫೀಸಿನ ವಿಷಯದ ಬಗ್ಗೆ ಆಲೋಚಿಸುವುದಿಲ್ಲ. ಅನೇಕಾನೇಕ ವೈದ್ಯರು ವರ್ಷಗಟ್ಟಲೆ ಕೆಲಸ ಮಾಡಿಯೂ ಹಣದ ಬಗ್ಗೆ ನಿರ್ಲಿಪ್ತರಾಗಿರುವ ಉದಾಹರಣೆಗಳು ನಮ್ಮ ದೇಶದಷ್ಟು ಬೇರಾವುದೇ ದೇಶದಲ್ಲೂ ಇರಲಿಕ್ಕಿಲ್ಲ. ಸಾಮಾನ್ಯ ಪ್ರಜೆಗಳಿಗೆ ವೈದ್ಯರ ಬೇಗುದಿಗಳು ತಿಳಿದಿರುವ ಸಾಧ್ಯತೆ ಕಡಿಮೆ. ಅದನ್ನು ಅರಿಯಲು ಬಯಸುವವರು ಇನ್ನೂ ಕಡಿಮೆ! ಆದರೆ ವೈದ್ಯ ಮತ್ತು ವ್ಯವಸ್ಥೆಯ ಈ ಸಮರದಲ್ಲಿ ಹಲವಾರು ಅಮಾಯಕರ ಬಾಳು ಜಜ್ಜಿಹೋದದ್ದು ಸತ್ಯ. ಈ ಸಮರ ಅದೇ ಅಮಾಯಕನ ಹೆಸರಿನಲ್ಲಿ ನಡೆದದ್ದು ವಿಡಂಬನೆ.

ವಸ್ತುಸ್ಥಿತಿಗಳು ಪ್ರತಿಯೊಬ್ಬರ ದೃಷ್ಟಿಕೋನದಲ್ಲೂ ಭಿನ್ನವಾಗಿದ್ದವು. ಎಲ್ಲರ ಆರೋಗ್ಯದ ದೃಷ್ಟಿಯಿಂದ ಖಾಸಗೀ ಆಸ್ಪತ್ರೆಗಳನ್ನು ಒಂದು ಶಿಸ್ತಿನಲ್ಲಿ ಇಡಬೇಕು ಎಂಬ ಭಾವನೆ ಸರ್ಕಾರದ್ದಾಗಿದ್ದರೆ, ತಮ್ಮ ಸುಪರ್ದಿಯಲ್ಲಿರುವ ಆಸ್ಪತ್ರೆಗಳನ್ನೇ ಸರಿಯಾಗಿ ನಡೆಸುವ ಸಾಮರ್ಥ್ಯವಿಲ್ಲದ ಸರ್ಕಾರ ನಮ್ಮ ಮೇಲೆ ಸವಾರಿ ಮಾಡುವುದೇಕೆ ಎಂಬ ತರ್ಕ ಖಾಸಗೀ ಆಸ್ಪತ್ರೆಗಳದ್ದು. ಅವರವರ ಪರಿಭಾಷೆಯಲ್ಲಿ ಅವರವರು ಸರಿ ಎಂಬ ಭಾವನೆ. ಮತ್ತೊಬ್ಬರ ಹುಳುಕಿನ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುತ್ತಿದ್ದ ಎರಡೂ ಬದಿಯವರಿಗೆ ತಮ್ಮ ಪದದಡಿಯ ದೋಷಗಳನ್ನು ಮುಚ್ಚಿಕೊಳ್ಳುವ ತವಕ. ಈ ಕದನದಲ್ಲಿ ಬಲಶಾಲಿಯಾದವನ ಬಾಧ್ಯತೆ ಹೆಚ್ಚು. ಆದರೆ ಇಲ್ಲಿ ಬಲಶಾಲಿ ವ್ಯವಸ್ಥೆಯ ತರ್ಕಕ್ಕೆ ಮೀರಿದ ಅಹಂಭಾವ ಇಡೀ ಸಂದರ್ಭವನ್ನು ಹುಚ್ಚುಹುಚ್ಚಾಗಿ ಕೊಂಡೊಯ್ಯಿತು. ಕಡೆಗೆ ಈ ಸಮರದಲ್ಲಿ ಗೆದ್ದವರಾರೋ ತಿಳಿಯದು. ಆದರೆ ಸೋತದ್ದು ಮಾತ್ರ ಸಾಮಾನ್ಯ ಜನತೆ.

ಇದರಿಂದ ಕಲಿತಿದ್ದಾದರೂ ಏನು? ಅಂತಹ ಪಾಠಗಳು ಏನೂ ಕಾಣುತ್ತಿಲ್ಲ. ಮುಂದೆಂದಾದರೂ ಇಂತಹುದೇ ಸಂದರ್ಭ ಒದಗಿದರೆ ಅದನ್ನು ಈ ಅನುಭವದಿಂದ ಉತ್ತಮವಾಗಿ ನಿರ್ವಹಿಸಬಹುದೇ? ಪ್ರಾಯಶಃ ಇಲ್ಲ. ಈಗಿನ ಕಲಿಕೆ ಮುಂದೆ ಇಂತಹ ಸಂದರ್ಭಗಳೇ ಬಾರದಂತೆ ನೋಡಿಕೊಳ್ಳಲು ಕಲಿಸಿತೇ? ದುರದೃಷ್ಟವಶಾತ್, ಈ ಪ್ರಶ್ನೆಗೂ ಉತ್ತರ ಋಣಾತ್ಮಕವೇ.
ಕದನವಾಯಿತು. ಗೆದ್ದವರು ಗೆಲ್ಲಲಿಲ್ಲ; ಸೋತವರ ಮೀಸೆ ಮಣ್ಣಾಗಲಿಲ್ಲ; ಯಾರೂ ಏನನ್ನೂ ಕಲಿಯಲೂ ಇಲ್ಲ.
-----
 (ನವೆಂಬರ್ 2017 ರಲ್ಲಿ "ವಿಶ್ವವಾಣಿ" ಕನ್ನಡ ದಿನಪತ್ರಿಕೆಯಲ್ಲಿ ಪ್ರಕಟವಾದ ಲೇಖನ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ