ಭಾನುವಾರ, ಅಕ್ಟೋಬರ್ 8, 2023


 ಜಠರದ ಗಣಿತ

ಡಾ. ಕಿರಣ್ ವಿ.ಎಸ್.

ವೈದ್ಯರು

ಎಲ್ಲ ದಾನಗಳಿಗಿಂತಲೂ ಅನ್ನದಾನವೇ ಶ್ರೇಷ್ಟ. ವಸ್ತು, ವಾಹನ, ಸ್ಥಾನ, ಸಮ್ಮಾನ, ಪ್ರಾಣಿ, ಧನ, ಕನಕ ದಾನಗಳನ್ನು ಪಡೆಯುವ ಯಾಚಕ ಇನ್ನಷ್ಟು ಇದ್ದರೂ ಲೇಸು ಎನ್ನುತ್ತಾನೆ. ಇಂತಹುವುಗಳನ್ನು ಎಷ್ಟೇ ನೀಡಿದರೂ ಯಾಚಕನಿಗೆ ದಾನದ ಪ್ರಮಾಣದ ಬಗ್ಗೆ ತೃಪ್ತಿ ಇರುವುದಿಲ್ಲ. ಆದರೆ ಅನ್ನದಾನದಲ್ಲಿ ಮಾತ್ರ ಯಾಚಕನ ಬಾಯಿಂದ ಸಾಕು; ತೃಪ್ತಿಯಾಯಿತು ಎನ್ನುವ ಮಾತು ಬರುತ್ತದೆ. ಅದಕ್ಕಿಂತ ಮಿಗಿಲು ಯಾವುದೂ ಇಲ್ಲಎನ್ನುವ ಮಾತುಗಳನ್ನು ಹಿರಿಯರು ಹೇಳುವುದನ್ನು ಕೇಳಿರುತ್ತೇವೆ. ನಮ್ಮ ಬೇಕು-ಬೇಡಗಳನ್ನು ನಿರ್ವಹಿಸುವ ಮಿದುಳಿಗೆ ಸಾಕು ಎನ್ನುವ ಸಂಕೇತಗಳನ್ನು ಕಳಿಸುವಲ್ಲಿ ಮೊದಲ ಸ್ಥಾನ ಜಠರದ್ದು. ಜಠರಕ್ಕೆ ಹೊಟ್ಟೆ ಎಂದು ಸಾಮಾನ್ಯರ ಹೆಸರು. ಆದರೆ ಪ್ರತೀತಿಯಲ್ಲಿ ಜಠರ ಮತ್ತು ಕರುಳುಗಳನ್ನು ಹೊಂದಿರುವ ಇಡೀ ಭಾಗವನ್ನೂ ಕೆಲವರು ಹೊಟ್ಟೆ ಎಂದೇ ಗುರುತಿಸುತ್ತಾರೆ. ಈ ಗೊಂದಲದ ನಿವಾರಣೆಗಾಗಿ ಹೊಟ್ಟೆ ಎನ್ನುವ ಪದದ ಬದಲಿಗೆ ಜಠರ ಮತ್ತು ಕರುಳು ಎನ್ನುವ ಪ್ರತ್ಯೇಕ ಪದಗಳನ್ನು ಬಳಸಲಾಗುತ್ತದೆ.  

ಬಾಯಿಂದ ಆರಂಭವಾಗುವ ನಮ್ಮ ಆಹಾರ ವಿಲೇವಾರಿ ಅಂಗಗಳ ಸರಣಿ ಗಂಟಲಕುಳಿ (pharynx), ಅನ್ನನಾಳಗಳ ಮೂಲಕ ಜಠರವನ್ನು ತಲುಪಿ, ಅಲ್ಲಿಂದ ಸಣ್ಣ ಕರುಳು, ದೊಡ್ಡ ಕರುಳಿನ ಮೂಲಕ ಮಲದ್ವಾರವನ್ನು ತಲುಪುತ್ತದೆ. ಈ ಸರಣಿಯ ಮೊದಲ ನಿಲ್ದಾಣ ಜಠರ. ಅನ್ನನಾಳದ ಕೆಳತುದಿಯಿಂದ ಸಣ್ಣ ಕರುಳಿನ ಆರಂಭದವರೆಗೆ ಇದರ ಹರಹು. ಎದೆಯ ಭಾಗವನ್ನು ದೇಹದ ಕೆಳಗಿನ ಭಾಗದಿಂದ ಪ್ರತ್ಯೇಕಿಸುವ ವಪೆ (diaphragm) ಎನ್ನುವ ಮಾಂಸದ ಹಾಳೆಗೆ ಹೊಂದಿಕೊಂಡಂತೆ ಎಡಭಾಗದಲ್ಲಿ ಜಠರದ ಸ್ಥಾನ. ಎಡದಿಂದ ಮೊದಲಾಗಿ, ಶರೀರದ ಮಧ್ಯ ರೇಖೆಯನ್ನು ತುಸುವೇ ದಾಟಿ ಬಲಗಡೆಗೆ ಹೆಜ್ಜೆಯಿಡುವ ಜಠರ ಅಲ್ಲಿಗೆ ಕೊನೆಯಾಗಿ ಸಣ್ಣಕರುಳನ್ನು ಸೇರುತ್ತದೆ. ಮಾವಿನಕಾಯಿಯ ರಚನೆಯಂತೆ ಇಂಗ್ಲೀಷಿನ J ಅಕ್ಷರದ ರೀತಿಯಲ್ಲಿರುವ ಜಠರದ ಆಕಾರವನ್ನು ಉದ್ದುದ್ದವಾಗಿ ಸೀಳಿರುವ ಸಿಹಿಗುಂಬಳದ ತುಂಡಿಗೆ ಹೋಲಿಸಬಹುದು. ಜಠರದ ಅಡಿಭಾಗದ ಬದಿಯ ಉದ್ದ ಸುಮಾರು 30 ಸೆಂಟಿಮೀಟರ್.

ಮಾನವ ದೇಹ ಶಾಸ್ತ್ರಜ್ಞರು ಜಠರವನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿದ್ದಾರೆ. ಅನ್ನನಾಳ ಮುಂದುವರೆದು ಜಠರ ಆರಂಭವಾಗುವ ಭಾಗಕ್ಕೆ ಕಾರ್ಡಿಯಾ ಎಂದು ಹೆಸರು. ವಪೆಯ ಸಂಪರ್ಕಲ್ಲಿರುವ ಜಠರದ ಶಿರೋಭಾಗಕ್ಕೆ ಫಂಡಸ್ ಎನುತ್ತಾರೆ. ಆಹಾರವನ್ನು ಶೇಖರಿಸುವ ಜಠರದ ಬಹುತೇಕ ಮಧ್ಯಭಾಗವನ್ನು ಬಾಡಿ ಎನ್ನಬಹುದು. ಜಠರದ ಅಂತಿಮ ಭಾಗ ಮುಂದುವರೆದು ಸಣ್ಣ ಕರುಳನ್ನು ಸೇರುತ್ತದೆ. ಇದನ್ನು ಪೈಲೋರಸ್ ಎನುತ್ತಾರೆ. ಗ್ರೀಕ್ ಭಾಷೆಯಲ್ಲಿ ಪೈಲೋರಸ್ ಎಂದರೆ ಕಾವಲುಗಾರ. ಈ ಭಾಗದಲ್ಲಿರುವ ಬಲಶಾಲಿ ಮಾಂಸಪಟ್ಟಿಗಳು ಆಹಾರವನ್ನು ಸಣ್ಣಕರುಳಿಗೆ ತಳ್ಳಿ, ಅಲ್ಲಿಂದ ಅದು ಪುನಃ ಜಠರಕ್ಕೆ ವಾಪಸ್ ಬಾರದಂತೆ ಕಾಯುವುದರಿಂದ ಈ ಹೆಸರು. ಜಠರದ ಕಾಯಿಲೆಗಳ ತಜ್ಞರಿಗೆ ಅನಾರೋಗ್ಯ ಜಠರದ ಯಾವ ಪ್ರದೇಶದಲ್ಲಿದೆ ಎಂದು ಗುರುತಿಸುವುದಕ್ಕೆ ಈ ವಿಂಗಡಣೆ ಸಹಕಾರಿ. ಜಠರಕ್ಕೆ ಒಟ್ಟು ಐದು ರಕ್ತನಾಳಗಳು ಶುದ್ಧರಕ್ತವನ್ನು ಪೂರೈಸುತ್ತವೆ.

ಖಾಲಿ ಕೊಳವೆಯಂತಹ ರಚನೆಯ ಜಠರದ ಪ್ರತಿಯೊಂದು ಭಾಗದ ಗೋಡೆಯ ದಪ್ಪವೂ ಭಿನ್ನ. ಈ ಗೋಡೆಯ ಸರಾಸರಿ ದಪ್ಪ ಸುಮಾರು ಐದು ಮಿಲಿಮೀಟರ್. ಜಠರದ ಗೋಡೆಯಲ್ಲಿ ಐದು ಪದರಗಳಿವೆ. ಜಠರದ ಗೋಡೆಯ ಒಳಗಿನ ಭಾಗ ಅತ್ಯಂತ ನಯವಾದ ಲೋಳೆ ಪದರ ಹೊಂದಿದೆ. ಸೂಕ್ಷ್ಮದರ್ಶಕದಲ್ಲಿ ನೋಡಿದಾಗ ಈ ಲೋಳೆಪದರದ ಕೋಶಗಳಲ್ಲಿ ಸ್ಥಂಭಾಕಾರದ ರಚನೆಗಳಿರುತ್ತವೆ. ಲೋಳೆಪದರದ ಅಡಿಭಾಗದಲ್ಲಿ ಸಹಾಯಕ ಜೀವಕೋಶಗಳು, ಕೆಲವು ನರಗಳು ಇರುತ್ತವೆ. ಇದರ ಅಡಿಯಲ್ಲಿ ಜಠರದ ಬಲಶಾಲಿಯಾದ ಮೂರು ಪದರಗಳ ಮಾಂಸಪಟ್ಟಿಗಳಿವೆ. ಪ್ರತಿಯೊಂದು ಪದರದಲ್ಲೂ ಮಾಂಸಪಟ್ಟಿಗಳ ಎಳೆಗಳು ಬೇರೆ ಬೇರೆ ದಿಕ್ಕಿನಲ್ಲಿ ಹರಡುತ್ತವೆ. ಮೂರೂ ಪದರಗಳು ಒಟ್ಟಿಗೆ ಕೆಲಸ ಮಾಡಿ ಮೇಲಿನಿಂದ ಕೆಳಗಿನ ದಿಕ್ಕಿಗೆ ಸಂಕುಚಿಸಿದಾಗ ವೃತ್ತಾಕಾರವಾದ ಅಲೆಯ ನಿರ್ಮಾಣವಾಗಿ ಆಹಾರ ಕೆಳಗೆ ತಳ್ಳಲ್ಪಡುತ್ತದೆ. ಈ ಅಲೆಯನ್ನು ಪೆರಿಸ್ಟಾಲ್ಸಿಸ್ ಎನ್ನುತ್ತಾರೆ. ಈ ಅಲೆಗೆ ಕಾರಣವಾಗುವ ನರಗಳು ಎರಡನೆಯ ಮತ್ತು ಮೂರನೆಯ ಪದರಗಳ ನಡುವೆ ಇರುತ್ತವೆ. ಇಡೀ ಜೀರ್ಣಾಂಗದಲ್ಲಿ ಮೂರು ಪದರಗಳ ಮಾಂಸಪಟ್ಟಿಗಳು ಇರುವುದು ಜಠರದಲ್ಲಿ ಮಾತ್ರ. ಮಾಂಸಪಟ್ಟಿಗಳ ಅಡಿಭಾಗದಲ್ಲಿ ಎರಡು ನಯವಾದ ಆವರಣಗಳಿವೆ. ಇವು ಜಠರದ ಹೊರಭಾಗ ನಯವಾಗಿ ಇರುವಂತೆ ಕಾಯ್ದು, ಜಠರದ ಆಸುಪಾಸು ಇರುವ ಇತರ ಅಂಗಗಳಿಗೆ ಹಾನಿಯಾಗದಂತೆ ಕಾಪಾಡುತ್ತವೆ.

ನಾವು ಸೇವಿಸುವ ವಿಧವಿಧವಾದ ಆಹಾರವು ಕರುಳಿನಲ್ಲಿ ಜೀರ್ಣವಾಗಲು ಬೇಕಾದ ಪ್ರಮುಖ ತಯಾರಿ ಆಗುವುದು ಜಠರದಲ್ಲೇ. ಏಳು ಬಗೆಯ ಗ್ರಂಥಿಗಳು ಜಠರದಲ್ಲಿ ಸಕ್ರಿಯವಾಗಿವೆ. ಈ ಗ್ರಂಥಿಗಳಲ್ಲಿನ ವಿಶಿಷ್ಟ ಕೋಶಗಳು ಜಠರ ರಸವನ್ನು ಬಿಡುಗಡೆ ಮಾಡುತ್ತವೆ. ಇದರಲ್ಲಿ ಅತಿ ಮುಖ್ಯವಾದದ್ದು ಹೈಡ್ರೊಕ್ಲೋರಿಕ್ ಆಮ್ಲ. ಇದರಿಂದ ಜಠರದಲ್ಲಿ ಆಮ್ಲೀಯ ವಾತಾವರಣ ನಿರ್ಮಾಣವಾಗುತ್ತದೆ. ರಸಾಯನ ಶಾಸ್ತ್ರದ ಅತ್ಯಂತ ತೀಕ್ಷ್ಣ ಆಮ್ಲಗಳಲ್ಲಿ ಒಂದೆಂದು ಹೆಸರಾದ ಹೈಡ್ರೊಕ್ಲೋರಿಕ್ ಆಮ್ಲ ನಮ್ಮ ಆಹಾರದಲ್ಲಿ ಇರಬಹುದಾದ ಹಲವಾರು ರೋಗಕಾರಕ ಸೂಕ್ಷ್ಮಜೀವಿಗಳನ್ನು ನಿರ್ನಾಮ ಮಾಡುತ್ತದೆ. ಜೊತೆಗೆ, ಪ್ರೋಟೀನ್ ಪಚನಗೊಳಿಸುವ ಕಿಣ್ವಗಳನ್ನು ಪ್ರಚೋದಿಸುತ್ತದೆ. ಜಠರದಲ್ಲಿ ಉತ್ಪತ್ತಿಯಾಗುವ ಆಮ್ಲ ಒಂದು ಕ್ಷೌರದ ಬ್ಲೇಡ್ ಅನ್ನು ಕರಗಿಸಬಲ್ಲದು ಎಂದು ಅಂದಾಜಿದೆ. ಇಷ್ಟು ತೀಕ್ಷ್ಣ ಆಮ್ಲ ಜಠರವನ್ನೇ ಏಕೆ ಸುಟ್ಟುಹಾಕುವುದಿಲ್ಲ? ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ಜಠರದಲ್ಲಿ ಶ್ಲೇಷ್ಮಯುಕ್ತ ಲೋಳೆಯಂತಹ ವಸ್ತು ಸತತವಾಗಿ ತಯಾರಾಗುತ್ತಲೇ ಇರುತ್ತದೆ. ಇದು ಜಠರದ ಗೋಡೆ ಮತ್ತು ಆಮ್ಲದ ನಡುವೆ ಕವಚದಂತಹ ಪದರವನ್ನು ನಿರ್ಮಾಣ ಮಾಡುತ್ತದೆ. ಇದರಿಂದ ಆಮ್ಲದ ಪ್ರಭಾವ ಜಠರದ ಗೋಡೆಯ ಮೇಲೆ ನೇರವಾಗಿ ಆಗುವುದಿಲ್ಲ. ಸಣ್ಣಕರುಳಿನ ಮತ್ತು ಮೇದೋಜೀರಕ ಗ್ರಂಥಿಗಳು ಕ್ಷಾರಯುಕ್ತ ಬೈಕಾರ್ಬೊನೇಟ್ ಲವಣವನ್ನು ಉತ್ಪತ್ತಿ ಮಾಡುತ್ತವೆ. ಜಠರದಿಂದ ಸಣ್ಣಕರುಳನ್ನು ಸೇರುವ ಆಮ್ಲವನ್ನು ಇದು ತಟಸ್ಥಗೊಳಿಸುತ್ತದೆ.

ಆಮ್ಲದ ಜೊತೆಗೆ ಜಠರ ಮತ್ತಷ್ಟು ಮಹತ್ವದ ರಾಸಾಯನಿಕಗಳನ್ನು ಉತ್ಪತ್ತಿ ಮಾಡುತ್ತದೆ. ಶರೀರದ ಡಿ.ಎನ್.ಎ. ನಿರ್ವಹಣೆಯಲ್ಲಿ ಪಾತ್ರ ವಹಿಸುವ ವಿಟಮಿನ್ ಬಿ-12 ದೇಹಕ್ಕೆ ಲಭ್ಯವಾಗಲು ಅತ್ಯಗತ್ಯವಾದ ರಾಸಾಯನಿಕವೊಂದು ಜಠರದಲ್ಲೇ ತಯಾರಾಗುತ್ತದೆ. ಇದು ಲಭ್ಯವಾಗದೇ ಹೋದಲ್ಲಿ ಅಪಾಯಕಾರಿ ರಕ್ತಹೀನತೆ ಎಂಬ ಕಾಯಿಲೆಯಿಂದ ಬಳಲುವಂತಾಗುತ್ತದೆ. ಇದರ ಜೊತೆಗೆ ಪ್ರೋಟೀನ್ ಪಚನಕ್ಕೆ ಕಾರಣವಾಗುವ ಮಹತ್ವದ ಕಿಣ್ವವೊಂದನ್ನು ಜಠರ ತಯಾರಿಸುತ್ತದೆ. ಈ ಎಲ್ಲ ಗ್ರಂಥಿಗಳೂ ಸೇರಿ ದಿನವೊಂದಕ್ಕೆ ಸುಮಾರು ಒಂದೂವರೆ ಲೀಟರ್ ಜಠರ ರಸವನ್ನು ಉತ್ಪತ್ತಿ ಮಾಡುತ್ತವೆ.

ಜಠರ ಮೂಲತಃ ಆಹಾರದ ಸಂಗ್ರಹಾಲಯ. ಪ್ರಾಣಿಗಳಲ್ಲಿ ಇದರ ಅಗತ್ಯವೇನು; ಜಠರವೇ ಇಲ್ಲದೆ ನೇರವಾಗಿ ಕರುಳು ಇರುವ ಪ್ರಾಣಿಗಳೂ ಇಲ್ಲವೇ ಎಂಬ ಪ್ರಶ್ನೆ ಸಹಜ. ಜೀವವಿಕಾಸದಲ್ಲಿ ಬೇಟೆಯಾಡುವ ಹಂತಕ ಪ್ರಾಣಿಗಳು ಪ್ರಬಲವಾದಾಗ, ದುರ್ಬಲ ಪ್ರಾಣಿಗಳಿಗೆ ಆಹಾರ ದಕ್ಕಿದಾಗ ಬೇಗಬೇಗನೆ ತಿಂದು, ಸಾವಕಾಶವಾಗಿ ಜೀರ್ಣಿಸಿಕೊಳ್ಳುವ ಅಗತ್ಯ ಒದಗಿತು. ಆಗ ಬೆಳವಣಿಗೆಯಾದದ್ದು ಜಠರ. ಹೀಗಾಗಿ, ಜಠರದಲ್ಲಿ ಆಹಾರ ಸಂಗ್ರಹಕ್ಕೆ ಸಾಕಷ್ಟು ಜಾಗವಿದೆ. ಜಠರದ ಒಳಭಾಗದಲ್ಲಿ ಲೋಳೆಪದರದ ಮಡಿಕೆಗಳಿವೆ. ಇವುಗಳನ್ನು ರೂಗೇ ಎನ್ನುತ್ತಾರೆ. ಜಠರದಲ್ಲಿ ಆಹಾರ ಸಂಗ್ರಹವಾಗುತ್ತಿದ್ದಂತೆ ಈ ಮಡಿಕೆಗಳು ಸಪಾಟಾಗುತ್ತವೆ ಮತ್ತು ಜಠರದ ಸಂಗ್ರಹ ಸಾಮರ್ಥ್ಯ ಏರುತ್ತದೆ. ಈ ಮಡಿಕೆಗಳನ್ನೆಲ್ಲ ಸಪಾಟಾಗಿಸಿದರೆ ಜಠರದ ಕ್ಷೇತ್ರಫಲ ಸುಮಾರು ಮುಕ್ಕಾಲು ಚದರ ಮೀಟರ್ ಆಗಬಹುದು ಎಂದು ಅಂದಾಜು. ಇಷ್ಟು ಪ್ರದೇಶದಲ್ಲಿ ಸುಮಾರು ನಾಲ್ಕು ಲೀಟರ್ ದ್ರವ ತುಂಬಬಹುದು. ಖಾಲಿ ಜಠರದಲ್ಲಿ ರೂಗೇ ಮಡಿಕೆಗಳು ಒತ್ತೊತ್ತಾಗಿ ಇರುವಾಗ ಅದರ ಅಳತೆ ಸುಮಾರು 75 ಮಿಲಿಲೀಟರ್ ಮಾತ್ರ. ಅಂದರೆ, ಖಾಲಿ ಜಠರಕ್ಕೂ, ಸಂಪೂರ್ಣ ತುಂಬಿದ ಜಠರಕ್ಕೂ ಅಳತೆಯಲ್ಲಿ 50 ಪಟ್ಟು ವ್ಯತ್ಯಾಸ ಇರುತ್ತದೆ ಎಂದಾಯಿತು. ಆದರೆ ಇಷ್ಟು ಪ್ರಮಾಣ ತುಂಬಲು ನಮ್ಮ ಮಿದುಳು ಅವಕಾಶ ನೀಡುವುದಿಲ್ಲ. ಜಠರದ ಹಿಗ್ಗುವಿಕೆ ಒಂದು ಹಂತ ತುಂಬಿದ ಕೂಡಲೇ ಇಷ್ಟು ಸಾಕುಎನುವ ಸಂಕೇತಗಳನ್ನು ಮಿದುಳು ನೀಡುತ್ತದೆ. ಅದಕ್ಕಿಂತ ಹೆಚ್ಚಿಗೆ ತುಂಬಲು ಪ್ರಯತ್ನಿಸಿದರೆ ವಾಂತಿಯ ಮೂಲಕ ಜಠರದಲ್ಲಿನ ಆಹಾರವನ್ನು ಹೊರಹಾಕುತ್ತದೆ. ಆಹಾರದ ವಿಷಯದಲ್ಲಿ ಯಾಚಕನ ಸಾಕುಭಾವನೆಯ ಹಿನ್ನೆಲೆ ಇದೇ.

ಜಠರದಲ್ಲಿ ಕೆಲವೊಂದು ರಾಸಾಯನಿಕ ಚೋದಕಗಳೂ ಬಿಡುಗಡೆಯಾಗುತ್ತವೆ. ಈ ರಾಸಾಯನಿಕಗಳು ಜೀರ್ಣಾಂಗ ವ್ಯವಸ್ಥೆಯ ಮಹತ್ವದ ಅಂಶಗಳನ್ನು ನಿರ್ದೇಶಿಸುತ್ತವೆ. ಇಂತಹ ಐದು ಚೋದಕಗಳು ಈಗ ಪತ್ತೆಯಾಗಿವೆ. ಇವುಗಳ ಸಂಖ್ಯೆ ಇನ್ನೂ ಅಧಿಕ ಎಂದು ವಿಜ್ಞಾನಿಗಳ ಅಭಿಮತ.

ಜಠರ ಕೇವಲ ಆಹಾರ ಸಂಗ್ರಹಾಲಯವಷ್ಟೇ ಅಲ್ಲ, ಅದಕ್ಕಿಂತಲೂ ಮಿಗಿಲು ಎನ್ನುವುದಕ್ಕೆ ಅದರ ಗಣಿತವೇ ಪ್ರಮಾಣ.

--------------------

ಜುಲೈ-ಆಗಸ್ಟ್ 2023 ರ ಕುತೂಹಲಿ ವಿಜ್ಞಾನ ಮಾಸಪತ್ರಿಕೆಯಲ್ಲಿ ಪ್ರಕಟವಾದ ಲೇಖನ. ಸಂಪೂರ್ಣ ಸಂಚಿಕೆಯನ್ನು ಓದಲು ಕೊಂಡಿ: https://flipbookpdf.net/web/site/df1e3319edb3c0237b741164ec8fcb59c339a71b202310.pdf.html 

 ಹೃದಯಾಘಾತದ ಚಿಕಿತ್ಸೆಯ ನಂತರ....

ಡಾ. ಕಿರಣ್ ವಿ.ಎಸ್.

ವೈದ್ಯರು 

 

ನಮ್ಮನ್ನು ಕಾಡುವ ಕಾಯಿಲೆಗಳನ್ನು ಸ್ಥೂಲವಾಗಿ ಎರಡು ಬಗೆಯಾಗಿ ವಿಂಗಡಿಸಬಹುದು. ಮೊದಲನೆಯದು, ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಸಾಂಕ್ರಾಮಿಕ ಕಾಯಿಲೆಗಳು. ಇದಕ್ಕೆ ಕಾರಣ ರೋಗಾಣುಗಳು. ಈ ರೋಗಾಣುಗಳು ಗಾಳಿ, ನೀರು, ಆಹಾರ, ಸ್ಪರ್ಶ ಮೊದಲಾದ ಮಾಧ್ಯಮಗಳ ಮೂಲಕ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತವೆ. ಇಂತಹ ರೋಗಾಣುಗಳನ್ನು ಪತ್ತೆ ಮಾಡಿ, ಅವು ನಿಗ್ರಹಕ್ಕೆ ಬರುವಂತಹ ಜೀವಿರೋಧಕ ಔಷಧಗಳನ್ನು ಸರಿಯಾದ ಪ್ರಮಾಣದಲ್ಲಿ ಸಾಕಷ್ಟು ಅವಧಿಗೆ ಸೇವಿಸಿದರೆ ಕಾಯಿಲೆ ಇಲ್ಲವಾಗುತ್ತದೆ. ಇದನ್ನು ಸಂಪೂರ್ಣ ಚಿಕಿತ್ಸೆ ಎನ್ನಬಹುದು.

 

ಎರಡನೆಯದು, ಒಬ್ಬರಿಂದ ಮತ್ತೊಬ್ಬರಿಗೆ ನೇರವಾಗಿ ಹರಡದ ಕಾಯಿಲೆಗಳು. ಉದಾಹರಣೆಗೆ ಮಧುಮೇಹ, ಸಂಧಿವಾತ, ಪಾರ್ಶ್ವವಾಯು, ಕ್ಯಾನ್ಸರ್, ನರಗಳ ದೌರ್ಬಲ್ಯ, ಸ್ನಾಯುಗಳ ಸಮಸ್ಯೆ ಮೊದಲಾದುವು. ಇವು ದೀರ್ಘಕಾಲಿಕ ಕಾಯಿಲೆಗಳು. ಇವುಗಳಿಗೆ ಸಂಪೂರ್ಣ ಚಿಕಿತ್ಸೆ ಎಂಬುದಿಲ್ಲ. ಆದರೆ, ಈ ಕಾಯಿಲೆಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು, ಜೀವನವನ್ನು ಸರಾಗವಾಗಿ ನಡೆಸುವುದು ಸಾಧ್ಯ. ಇದಕ್ಕಾಗಿ ಜೀವನಶೈಲಿಯ ಬದಲಾವಣೆ, ಆಹಾರದಲ್ಲಿ ಸಂಯಮ, ಶಿಸ್ತಿನ ಬದುಕು, ನಿಯಮಿತ ಔಷಧ ಬಳಕೆ, ಸೂಕ್ತವಾದ ವ್ಯಾಯಾಮ, ಕ್ಲುಪ್ತ ಸಮಯದಲ್ಲಿ ಪರೀಕ್ಷೆಗಳನ್ನು ಮಾಡಿಸಿಕೊಂಡು ವೈದ್ಯರ ಸಲಹೆ ಪಡೆಯುವುದು ಮೊದಲಾದ ದಾರಿಗಳಿವೆ. ಇಂತಹ ಕಾಯಿಲೆಗಳ ಪೈಕಿ ಹೃದ್ರೋಗ ಪ್ರಮುಖವಾದದ್ದು.

 

ಹೃದ್ರೋಗಗಳಲ್ಲಿ ಹಲವಾರು ವಿಧಗಳು ಇವೆಯಾದರೂ ಬಹಳ ಜನರ ಸಮಸ್ಯೆ ಹೃದಯಾಘಾತದ್ದು. ಹೃದಯಕ್ಕೆ ರಕ್ತ ಸರಬರಾಜು ಮಾಡುವ ರಕ್ತನಾಳಗಳಲ್ಲಿ ಕೊಬ್ಬಿನ ಶೇಖರಣೆಯಾದಾಗ ರಕ್ತದ ಹರಿವಿಗೆ ಅಡಚಣೆಯಾಗುತ್ತದೆ. ಇದು ಒಂದು ಪ್ರಮಾಣವನ್ನು ಮೀರಿದಾಗ ಹೃದಯದ ಮಾಂಸಖಂಡಗಳಿಗೆ ರಕ್ತದ ಪೂರೈಕೆ ಇಲ್ಲದಂತಾಗಿ, ಅವು ನಶಿಸುತ್ತವೆ. ಇದನ್ನು ಹೃದಯಾಘಾತ ಎನ್ನಬಹುದು. ಇಂತಹ ಸಂದರ್ಭದಲ್ಲಿ ಸಾಧ್ಯವಾದಷ್ಟೂ ಬೇಗ ರಕ್ತನಾಳಗಳಲ್ಲಿ ಇರುವ ಅಡಚಣೆಯನ್ನು ನಿವಾರಿಸಿ, ರಕ್ತದ ಪೂರೈಕೆಯನ್ನು ಸರಾಗವಾಗಿಸಬೇಕು. ಇದಕ್ಕೆ ಹಲವಾರು ದಾರಿಗಳಿವೆ. ಆಂಜಿಯೋಗ್ರಾಂ ಮೂಲಕ ಅಡಚಣೆ ಇರುವ ರಕ್ತನಾಳವನ್ನು ಗುರುತಿಸಿ, ಅದರೊಳಗೆ ತೆಳುವಾದ ನಳಿಕೆಯನ್ನು ತೂರಿಸಿ, ಅಡಚಣೆ ಇರುವ ಭಾಗವನ್ನು ಬಲೂನುಗಳ ಮೂಲಕ ಹಿಗ್ಗಿಸಿ, ಅದು ಪುನಃ ಕುಸಿಯದಂತೆ ಸ್ಟೆಂಟ್ ಎನ್ನುವ ಲೋಹದ ಸುರಳಿಯ ಆಸರೆಯನ್ನು ನೀಡಬೇಕು. ಇದನ್ನು ಆಂಜಿಯೋಪ್ಲಾಸ್ಟಿ ಎನ್ನುತ್ತಾರೆ. ಇದು ಸಾಧ್ಯವಾಗದಿದ್ದರೆ ಹೃದಯದ ಶಸ್ತ್ರಚಿಕಿತ್ಸೆ ಮಾಡಿ, ಅಡಚಣೆ ಇರುವ ರಕ್ತನಾಳದ ಭಾಗವನ್ನು ತೆಗೆದುಹಾಕಿ, ಅದರ ಸ್ಥಾನದಲ್ಲಿ ಬೇರೊಂದು ಆರೋಗ್ಯವಂತ ರಕ್ತನಾಳವನ್ನು ಜೋಡಿಸಬೇಕು. ಇದನ್ನು ಬೈಪಾಸ್ ಶಸ್ತ್ರಚಿಕಿತ್ಸೆ ಎನ್ನಲಾಗುತ್ತದೆ. ಇವೆರಡೂ ಸಾಧ್ಯವಿಲ್ಲದಾಗ ರಕ್ತನಾಳಗಳ ಅಡಚಣೆಯನ್ನು ಕರಗಿಸಬಲ್ಲ ಔಷಧಿಗಳನ್ನು ನೀಡಿ ಸಮಸ್ಯೆಯನ್ನು ತಾತ್ಕಾಲಿಕವಾಗಿ ನಿವಾರಿಸಿಕೊಳ್ಳಬೇಕು.

 

ಈ ಯಾವುದೇ ಚಿಕಿತ್ಸೆಗಳೂ ಹೃದಯವನ್ನು ಮತ್ತೆ ಕೆಲಸ ಮಾಡುವ ಸ್ಥಿತಿಗೆ ತರಬಲ್ಲವಾದರೂ, ಬಹುತೇಕ ಸಂದರ್ಭಗಳಲ್ಲಿ ನೂರು ಪ್ರತಿಶತ ಆರೋಗ್ಯವಂತ ಹೃದಯವನ್ನು ಮತ್ತೆ ನೀಡಲಾರವು. ಅಲ್ಲದೆ, ಒಂದು ಬಾರಿ ಚಿಕಿತ್ಸೆಯಾದ ನಂತರ ಪುನಃ ಇದೇ ರೀತಿ ಆಗುವುದಿಲ್ಲ ಎಂದೇನೂ ಇಲ್ಲ. ಹೃದಯಕ್ಕೆ ರಕ್ತ ಸರಬರಾಜು ಮಾಡುವ ಮೂರು ಮುಖ್ಯ ರಕ್ತನಾಳಗಳಿವೆ. ಅದರಲ್ಲಿ ಒಂದು ನಾಳಕ್ಕೆ ಘಾಸಿಯಾದರೂ ಹೃದಯಾಘಾತ ಆಗಬಹುದು. ಈ ಮುನ್ನ ಚಿಕಿತ್ಸೆಗೆ ಒಳಪಟ್ಟ ರಕ್ತನಾಳದಲ್ಲೂ ಮತ್ತೆ ಸಮಸ್ಯೆ ಕಾಣಬಹುದು. ಅಥವಾ, ಉಳಿದೆರಡು ರಕ್ತನಾಳಗಳು ತೊಂದರೆಗೆ ಒಳಗಾಗಬಹುದು. ಒಟ್ಟಾರೆ, ಹೃದಯಾಘಾತದ ಚಿಕಿತ್ಸೆಯ ನಂತರ ಹೃದಯವನ್ನು ಮತ್ತಷ್ಟು ಜತನದಿಂದ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಇದಕ್ಕೆ ಕೆಲವು ಮಾರ್ಗಗಳನ್ನು ಪರಿಗಣಿಸಬಹುದು.

 

1. ಹೃದಯಾಘಾತದ ಚಿಕಿತ್ಸೆಯ ನಂತರ ಹಲವಾರು ಮಾತ್ರೆಗಳನ್ನು ನಿಯಮಿತವಾಗಿ ಸೇವಿಸಬೇಕಾಗುತ್ತದೆ. ಪ್ರಸ್ತುತ ಚಿಕಿತ್ಸೆಯ ಸಾಫಲ್ಯಕ್ಕೆ ಮತ್ತು ಮುಂದಿನ ಅವಘಡವನ್ನು ತಪ್ಪಿಸುವುದಕ್ಕೆ ಈ ಔಷಧಗಳು ಸಹಕಾರಿ. ಯಾವುದೇ ಕಾರಣಕ್ಕೂ ಔಷಧ ಸೇವನೆಯನ್ನು ತಪ್ಪಿಸಬಾರದು. ಇದರಲ್ಲಿ ಯಾವುದೇ ಮಾರ್ಪಾಡನ್ನೂ ಸ್ವತಃ ವೈದ್ಯರೇ ಸೂಚಿಸಬೇಕೇ ಹೊರತು, ರೋಗಿಗಳು ಖುದ್ದಾಗಿ ಮಾಡಬಾರದು.

2. ಹೃದಯಾಘಾತದ ತೀವ್ರತೆಯನ್ನು ಅವಲಂಬಿಸಿ ಅದನ್ನು ಮತ್ತೆ ಚೇತರಿಸಿಕೊಳ್ಳುವಂತೆ ಮಾಡಲು ವ್ಯವಸ್ಥಿತ ವಿಧಾನಗಳಿವೆ. ಎಂತಹ ಮತ್ತು ಎಷ್ಟು ವ್ಯಾಯಾಮ ಬೇಕು; ಮಾನಸಿಕ ಒತ್ತಡದ ನಿರ್ವಹಣೆ; ಆಹಾರದಲ್ಲಿ ಸೂಕ್ತ ಮಾರ್ಪಾಡು; ಜೀವನಶೈಲಿಯ ಬದಲಾವಣೆ; ಕೆಟ್ಟ ಚಟಗಳಿಂದ ದೂರವಿರುವುದು; ಸಮಾನಮನಸ್ಕರ ಒಡನಾಟ; ಮೊದಲಾದ ವಿಷಯಗಳ ಬಗ್ಗೆ ತಜ್ಞರ ಸಲಹೆ ಪಡೆದು ಕಟ್ಟುನಿಟ್ಟಾಗಿ ಪಾಲಿಸಬೇಕು.

3. ವೈದ್ಯರು ಸೂಚಿಸಿದ ವೇಳೆಗೆ ಅವರನ್ನು ಕಂಡು ಅಗತ್ಯವಾದ ಪರೀಕ್ಷೆಗಳನ್ನು ಮಾಡಿಸಿ, ಹೃದಯದ ಸ್ಥಿತಿಗತಿಗಳನ್ನು ಅರಿತುಕೊಳ್ಳಬೇಕು. ಚಿಕಿತ್ಸೆಯ ಸೂಕ್ತ ಮಾರ್ಪಾಡಿಗೆ ಇದು ಬಹಳ ಸಹಕಾರಿ. ಇಂತಹ ಭೇಟಿಗಳನ್ನು ನಿರ್ಲಕ್ಷಿಸಬಾರದು.

4. ಹೃದಯಾಘಾತವನ್ನು ಸೂಚಿಸಬಲ್ಲ ಯಾವುದೇ ಲಕ್ಷಣಗಳು ಕಂಡುಬಂದರೆ, ಅದನ್ನು ಶೀಘ್ರವಾಗಿ ವೈದ್ಯರ ಗಮನಕ್ಕೆ ತರಬೇಕು. ಈ ಮೊದಲಿನ ಅನಾರೋಗ್ಯದ ಅನುಭವವನ್ನು ಮುಂದಿನ ಆರೋಗ್ಯ ನಿರ್ವಹಣೆಯ ಕಲಿಕೆಗೆ ಸೂಕ್ತವಾಗಿ ಬಳಸಿಕೊಳ್ಳಬೇಕು.

5.  ಮತ್ತೊಮ್ಮೆ ಹೃದಯಾಘಾತಕ್ಕೆ ಕಾರಣವಾಗಬಲ್ಲ ಮಧುಮೇಹದಂತಹ ಕಾಯಿಲೆಗಳ ಸಮಗ್ರ ನಿರ್ವಹಣೆ, ಅಧಿಕ ರಕ್ತದೊತ್ತಡದ ನಿಗ್ರಹಗಳಿಗೆ ತಜ್ಞರ ಸಲಹೆ ಪಡೆದು ಸರಿಯಾಗಿ ಪಾಲಿಸಬೇಕು. ಹೃದಯಾಘಾತದ ಚಿಕಿತ್ಸೆಯ ವೇಳೆ ಇವು ಏರುಪೇರಾಗುವ ಸಾಧ್ಯತೆಗಳಿರುತ್ತವೆ. ಸಾಮಾನ್ಯವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗುವ ಮುನ್ನ ಈ ಅನಾರೋಗ್ಯಗಳನ್ನು ತಹಬಂದಿಗೆ ತರಲು ವೈದ್ಯರು ಶ್ರಮಿಸಿರುತ್ತಾರೆ. ಇಂತಹ ವೇಳೆಯಲ್ಲಿ ಮಧುಮೇಹದ ನಿಯಂತ್ರಣಕ್ಕೆ ಈ ಮೊದಲು ತೆಗೆದುಕೊಳ್ಳುತ್ತಿದ್ದ ಔಷಧಗಳ ಪ್ರಮಾಣ ಬದಲಾಗಬಹುದು. ಇದನ್ನು ವೈದ್ಯರ ಬಳಿ ಸರಿಯಾಗಿ ಚರ್ಚಿಸಿ, ಸೂಕ್ತವಾದ ಬದಲಾವಣೆಗಳನ್ನು ಮಾಡಿಕೊಳ್ಳಬೇಕು.

6. ಹೃದಯಾಘಾತದ ನಂತರದ ಅವಧಿಯಲ್ಲಿ ದೇಹತೂಕದ ನಿರ್ವಹಣೆ ಕಷ್ಟವಾಗುತ್ತದೆ. ಶರೀರದ ಚಲನೆಯಲ್ಲಿ, ವ್ಯಾಯಾಮದಲ್ಲಿ ಮಿತಿಗಳನ್ನು ವಹಿಸುವುದರಿಂದ, ಕೆಲ ಔಷಧಗಳ ಅಡ್ಡ-ಪರಿಣಾಮಗಳಿಂದ ಬೊಜ್ಜಿನ ಸಾಧ್ಯತೆ ಅಧಿಕವಾಗುತ್ತದೆ. ಶರೀರದ ತೂಕವನ್ನು ಜಾಣತನದಿಂದ ನಿರ್ವಹಿಸುವುದು ಅಗತ್ಯ. ಕ್ಯಾಲರಿಗಳು ಹೆಚ್ಚಾಗದಂತೆ ಶರೀರಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುವುದರಲ್ಲಿ ಆಹಾರ ತಜ್ಞರು ನೆರವಾಗಬಲ್ಲರು.

 

ಹೃದಯಾಘಾತದ ಚಿಕಿತ್ಸೆ ಒಂದು ಸಮಸ್ಯೆಯ ತಾತ್ಕಾಲಿಕ ಅಂತ್ಯವೂ ಹೌದು; ಮತ್ತೊಂದು ದೀರ್ಘಕಾಲಿಕ ಜವಾಬ್ದಾರಿಯೂ ಹೌದು. ಇದರ ಬಗ್ಗೆ ಅರಿವನ್ನು ಮೂಡಿಸಿಕೊಂಡು, ಸಮಸ್ಯೆ ಮತ್ತೊಮ್ಮೆ ಉಲ್ಬಣಗೊಳ್ಳದಂತೆ ಆರೋಗ್ಯವನ್ನು ಕಾಯ್ದುಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ.

--------------

(ದಿನಾಂಕ 03/10/2023 ರ ಪ್ರಜಾವಾಣಿಯ ಕ್ಷೇಮ ಕುಶಲ ವಿಭಾಗದಲ್ಲಿ ಪ್ರಕಟವಾದ ಲೇಖನ. ಮೂಲ ಲೇಖನದ ಕೊಂಡಿ: https://www.prajavani.net/health/health-care-after-heart-attack-doctor-suggestions-2503867) 

 ನಿರ್ಜಲೀಕರಣ - ಕಾರಣಗಳು ಮತ್ತು ಪರಿಹಾರಗಳು

ಡಾ. ಕಿರಣ್ ವಿ.ಎಸ್.

ವೈದ್ಯರು

ನಮ್ಮ ದೇಹದ ಬಹುಭಾಗ ನೀರು. “ಭೂಮಿಯ ಶೇಕಡಾ 66 ನೀರು; ಅಂತೆಯೇ, ದೇಹದ 66 ಪ್ರತಿಶತ ನೀರುಎನ್ನುವ ಚಮತ್ಕಾರದ ಮಾತಿದೆ. ಸುಮಾರು 70 ಕಿಲೋಗ್ರಾಂ ತೂಗುವ ವ್ಯಕ್ತಿಯ ಶರೀರದ 40-45 ಕಿಲೋಗ್ರಾಂ ನೀರು ಎಂದು ಅಂದಾಜಿಸಬಹುದು. ಸಣ್ಣ ಮಕ್ಕಳ ದೇಹದಲ್ಲಿ ಈ ನೀರಿನ ಪ್ರತಿಶತ ಪ್ರಮಾಣ ಅಧಿಕ; ವೃದ್ಧರಲ್ಲಿ ಸ್ವಲ್ಪ ಕಡಿಮೆ. ಮೂತ್ರ, ಬೆವರು, ಶ್ವಾಸದ ಆರ್ದ್ರತೆ, ಮತ್ತು ವಾತಾವರಣದ ಉಷ್ಣತೆಗೆ ಚರ್ಮದಿಂದ ಆವಿಯಾಗುವ ನೀರಿನ ಪ್ರಮಾಣವನ್ನು ನಾವು ಶರೀರಕ್ಕೆ ಮತ್ತೆ ನೀಡಬೇಕು. ನಾವು ಸೇವಿಸುವ ದ್ರವದ ಪ್ರಮಾಣ ನಮ್ಮ ದೇಹದಿಂದ ಹೊರ ಹೋಗುವ ನೀರಿನ ಅಂಶಕ್ಕಿಂತ ಕಡಿಮೆಯಾದರೆ ಶರೀರದ ಒಟ್ಟಾರೆ ನೀರಿನ ಮಟ್ಟ ಇಳಿದುಹೋಗುತ್ತದೆ. ಇದನ್ನೇ ನಿರ್ಜಲೀಕರಣ ಎನ್ನಬಹುದು.  

ಏಕಕೋಶ ಜೀವಿಗಳಿಂದ ಮೊದಲಾದ ಜೀವವಿಕಾಸ ಆರಂಭವಾದದ್ದು ಸಮುದ್ರದ ನೀರಿನಲ್ಲಿ. ಈ ಪ್ರಕ್ರಿಯೆ  ಮುಂದುವರೆದಂತೆಲ್ಲ ಬಹುಕೋಶ ಜೀವಿಗಳು ವಿಕಾಸಗೊಂಡವು. ಇದು ಮುಂದುವರೆದು ನೆಲದ ಮೇಲೆ ಬದುಕಬಲ್ಲ ಜೀವಿಗಳು ವಿಕಸನವಾದವು. ಜೀವವಿಕಾಸ ಪ್ರಕ್ರಿಯೆಯನ್ನು ಯಾವುದೇ ದಿಕ್ಕಿನಲ್ಲಿ ಗಮನಿಸಿದರೂ ಜೀವಿಗಳ ಒಡಲಿನಲ್ಲಿ ಸಮುದ್ರದ ವಾತಾವರಣವೇ ಇರುತ್ತದೆ ಎಂದು ತಜ್ಞರ ಅಭಿಮತ. ಹೀಗಾಗಿ, ಸಮುದ್ರದ ನೀರಿನಂತೆಯೇ ನಮ್ಮ ದೇಹವೂ ಹಲವಾರು ಲವಣಗಳಿಗೆ ಮನೆ. ಈ ಉಪ್ಪಿನ ಅಂಶ ದೇಹದ ನೀರಿನಲ್ಲಿ ಕರಗಿ ದ್ರಾವಣದ ರೂಪದಲ್ಲಿರುತ್ತದೆ. ಈ ಲವಣಗಳು ದೇಹದ ಕೆಲಸಗಳಿಗೆ ಅತ್ಯಗತ್ಯ. ಶರೀರದೊಳಗಿನ ನೀರು ಮತ್ತು ಲವಣಗಳ ಅನುಪಾತ ಒಂದು ನಿರ್ದಿಷ್ಟ ಮಟ್ಟವನ್ನು ಕಾಯ್ದುಕೊಳ್ಳಬೇಕು. ನೀರಿನ ಭಾಗ ಹೆಚ್ಚಾದರೆ ಲವಣಗಳ ಸಾಂದ್ರತೆ ಕಡಿಮೆಯಾಗುತ್ತದೆ. ಒಂದು ವೇಳೆ ದೇಹದಲ್ಲಿ ನಿರ್ಜಲೀಕರಣವಾದರೆ ಉಪ್ಪಿನ ಮಟ್ಟ ಏರುತ್ತದೆ. ಈ ಎರಡೂ ಸಂದರ್ಭಗಳಲ್ಲಿ ಶರೀರದ ನಿರ್ವಹಣೆ ಹಳಿ ತಪ್ಪುತ್ತದೆ.

ಶರೀರದ ಚಯಾಪಚಯಗಳಿಂದ ಸದಾ ಕಾಲ ನೀರು ಬಾಷ್ಪವಾಗುತ್ತಲೆ ಇರುತ್ತದೆ. ಈ ನೀರಿನ ಅಂಶ ಒಂದು ಹಂತಕ್ಕಿಂತ ಕಡಿಮೆಯಾದಾಗ ಮಿದುಳು ಅದನ್ನು ದಾಹ ಎಂದು ಗುರುತಿಸುತ್ತದೆ. ನೀರಡಿಕೆ ಎಂಬುದು ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿದೆ ಎಂದು ನಮ್ಮ ಮಿದುಳು ನೀಡುವ ಸಂಕೇತ. ಈ ಸೂಚನೆಯನ್ನು ಅವಗಣಿಸಿದರೆ, ಅಥವಾ ನೀರಿನ ಬದಲಿಗೆ ಸಕ್ಕರೆಯುಕ್ತ ಪೇಯಗಳನ್ನು ಸೇವಿಸಿದರೆ, ನೀರಡಿಕೆ ತಾತ್ಕಾಲಿಕವಾಗಿ ಇಂಗುತ್ತದೆ. ಸಕ್ಕರೆಯುಕ್ತ ಪಾನೀಯಗಳು ಮೂತ್ರಪಿಂಡಗಳ ಮೂಲಕ ಹೆಚ್ಚು ನೀರನ್ನು ಸೋಸಿ, ಇನ್ನಷ್ಟು ನೀರನ್ನು ಮೂತ್ರದಲ್ಲಿ ಹೊರಹಾಕುತ್ತವೆ. ಇಂತಹ ಪಾನೀಯಗಳ ಜೊತೆಗೆ ಸೇವಿಸಿದ ನೀರಿಗಿಂತ ಶರೀರ ಹೊರಹಾಕುವ ನೀರಿನ ಅಂಶವೇ ಅಧಿಕ. ಹೀಗಾಗಿ, ದಾಹವಾದಾಗ ಮೊದಲು ಸಾಕಷ್ಟು ನೀರು ಕುಡಿಯುವುದು ಸರಿಯಾದ ಪದ್ದತಿ.

ನಿರ್ಜಲೀಕರಣದ ಲಕ್ಷಣಗಳು ಹಲವಾರು - ದಾಹ, ತಲೆಸುತ್ತಿವಿಕೆ, ಬಾಯಿ ಒಣಗುವುದು, ಸುಸ್ತು, ನಿತ್ರಾಣ, ಮಂಕು ಕವಿಯುವುದು, ಕಣ್ಣು ಕಪ್ಪುಗಟ್ಟುವುದು, ಮೂತ್ರದ ಪ್ರಮಾಣ ಕಡಿಮೆಯಾಗುವುದು, ಮೂತ್ರ ಗಾಢ ಹಳದಿ ಬಣ್ಣಕ್ಕೆ ತಿರುಗುವುದು, ಮೊದಲಾದುವು. ಶರೀರದ ಸಹಜ ನೀರಿನ ಮಟ್ಟದಲ್ಲಿ ಎರಡು ಪ್ರತಿಶತ ಇಳಿಕೆಯಾದರೂ ಈ ಲಕ್ಷಣಗಳು ಕಾಣುತ್ತವೆ. ಮೂರು ಪ್ರತಿಶತ ಕಡಿಮೆಯಾದರೆ ಆಹಾರದ ರುಚಿ ಕಡಿಮೆಯಾಗಿ, ಪ್ರಜ್ಞೆ ತಪ್ಪುವಂತಾಗುತ್ತದೆ. ಇದಕ್ಕಿಂತ ಹೆಚ್ಚಿನ ಅಂಶ ನಷ್ಟವಾದರೆ ಆಸ್ಪತ್ರೆ ಸೇರುವ ಅಗತ್ಯ ಬರಬಹುದು.

ನಿರ್ಜಲೀಕರಣಕ್ಕೆ ಕಾರಣಗಳನ್ನು ಎರಡು ಮುಖ್ಯ ವಿಭಾಗಗಳಾಗಿ ಪರಿಗಣಿಸಬಹುದು: ಅಗತ್ಯಕ್ಕಿಂತ ಕಡಿಮೆ ನೀರಿನ ಸೇವನೆ. ಮತ್ತು ನೀರಿನ ಅಧಿಕ ನಷ್ಟ. ದೇಹದ ಸಹಜ ನೀರಿನ ಮಟ್ಟವನ್ನು ಕಾಯ್ದುಕೊಳ್ಳಲು ವಯಸ್ಕರು ದಿನವೊಂದಕ್ಕೆ ಕನಿಷ್ಠ ಒಂದೂವರೆ ಲೀಟರ್ ನೀರನ್ನು ಕುಡಿಯಬೇಕು. ಹೆಚ್ಚು ಶ್ರಮದ ಕೆಲಸ ಮಾಡುವವರಿಗೆ, ರೋಗಿಗಳಿಗೆ, ಹಾರ್ಮೋನ್ ವ್ಯತ್ಯಯ ಇರುವವರಿಗೆ, ಚಯಾಪಚಯ ಕ್ರಿಯೆಗಳು ಅಧಿಕ ಮಟ್ಟದಲ್ಲಿ ಉಳ್ಳವರಿಗೆ ನೀರಿನ ಅಗತ್ಯ ಹೆಚ್ಚಾಗಿರುತ್ತದೆ. ಕಾಯಿಲೆಯ ವೇಳೆಯಲ್ಲಿ, ಜ್ವರದ ಸಮಯದಲ್ಲಿ ದೇಹದಿಂದ ಅಧಿಕ ಪ್ರಮಾಣದ ನೀರು ಆವಿಯಾಗುತ್ತದೆ. ಬಿಸಿಲುಗಾಲದಲ್ಲಿ, ಸೂರ್ಯನ ಶಾಖ ಹೆಚ್ಚು ಇರುವ ದೇಶಗಳಲ್ಲಿ ಚರ್ಮದಿಂದ ಹೆಚ್ಚಿನ ಪ್ರಮಾಣದ ನೀರು ಇಂಗುತ್ತದೆ. ಅತಿಸಾರ ಭೇದಿ, ವಾಂತಿಯಂತಹ ಕಾಯಿಲೆಗಳ ವೇಳೆ ಅಲ್ಪ ಸಮಯದಲ್ಲಿ ಬಹಳಷ್ಟು ನೀರಿನ ಅಂಶ ಶರೀರದಿಂದ ಹೊರಹೋಗುತ್ತದೆ. ಮಧುಮೇಹಿಗಳಲ್ಲಿ, ಮದ್ಯಪಾನಿಗಳಲ್ಲಿ ಅತಿಮೂತ್ರದ ಮೂಲಕ ನೀರಿನ ಅಂಶ ಕಡಿಮೆಯಾಗುತ್ತದೆ. ಮುಕ್ತವಾಗಿ ಗಾಳಿಯಾಡದ, ಹೆಚ್ಚು ಜನಸಾಂದ್ರತೆಯುಳ್ಳ ಜಿಮ್'ಗಳಲ್ಲಿ ಸಹಜವಾಗಿಯೇ ವಾತಾವರಣದ ಉಷ್ಣತೆ ಹೆಚ್ಚಿರುತ್ತದೆ. ಅಲ್ಲಿ ಕಡಿಮೆ ಸಮಯದಲ್ಲಿ ಹೆಚ್ಚು ಶ್ರಮದ ವ್ಯಾಯಾಮ ಮಾಡುವಾಗ ಶರೀರದ ನೀರಿನ ಅಂಶ ಸಹಜಕ್ಕಿಂತಲೂ ವೇಗವಾಗಿ ನಷ್ಟವಾಗುತ್ತದೆ. ಆಗ ತೀವ್ರವಾಗಿ ಅಧಿಕವಾಗುವ ರಕ್ತದಲ್ಲಿನ ಲವಣದ ಅಂಶ ಹೃದಯದ ಬಡಿತವನ್ನು ಏರುಪೇರಾಗಿಸಬಹುದು. ಜಿಮ್'ಗಳಲ್ಲಿ ಗಂಟೆಗಟ್ಟಲೆ ಕಸರತ್ತು ಮಾಡಿದ ನಂತರ ಹಠಾತ್ತಾಗಿ ಹೃದಯದ ಸಮಸ್ಯೆ ಕಾಣುವವರಲ್ಲಿ ಈ ಕಾರಣವೂ ಒಂದು.

ನಿರ್ಜಲೀಕರಣಕ್ಕೆ ಇರುವ ಏಕೈಕ ಚಿಕಿತ್ಸೆ ಶರೀರದ ನೀರಿನ ಅಂಶವನ್ನು ಪುನಃ ಸಾಮಾನ್ಯ ಮಟ್ಟಕ್ಕೆ ತಲುಪಿಸುವುದು. ನೀರಿನ ನಷ್ಟವನ್ನು ನೀರಿನಿಂದಲೇ ತುಂಬಬೇಕು. ಅಲ್ಪ ಪ್ರಮಾಣದ ನಿರ್ಜಲೀಕರಣದ ಚಿಕಿತ್ಸೆಯಲ್ಲಿ ಓ.ಆರ್.ಎಸ್. ದ್ರಾವಣ, ನಿಂಬೆ ಪಾನಕ, ಅಕ್ಕಿಯ ಗಂಜಿ, ಸೂಪ್ ಮೊದಲಾದವು ಸಾಕಾಗುತ್ತವೆ.  ಆದರೆ, ನಿರ್ಜಲೀಕರಣ ತೀವ್ರವಾದಾಗ ರಕ್ತದಲ್ಲಿನ ಉಪ್ಪಿನ ಅಂಶಗಳನ್ನು ಅಳೆದು, ಅದಕ್ಕೆ ಸಂವಾದಿಯಾದ ಲವಣಯುಕ್ತ ನೀರಿನ ಬಳಕೆ ಬೇಕಾಗುತ್ತದೆ.  ಚಿಕಿತ್ಸೆಯ ಪ್ರತಿಯೊಂದು ಹಂತದಲ್ಲೂ ದೇಹದ ನೀರು ಮತ್ತು ಲವಣಗಳ ಅನುಪಾತವನ್ನು ಸರಿಯಾದ ಮಟ್ಟದಲ್ಲಿ ನಿರ್ವಹಿಸುವುದು ಬಹಳ ಮುಖ್ಯ. ಈ ಪ್ರಕ್ರಿಯೆಯಲ್ಲಿ ಅನುಪಾತ ಏರುಪೇರಾದರೆ ಜೀವಕ್ಕೆ ಅಪಾಯವಾಗಬಹುದು. ಲವಣಯುಕ್ತ ನೀರಿನ ಸೇವನೆ ಸಾಧ್ಯವಿಲ್ಲದಿರುವಾಗ ಸೂಕ್ತವಾದ ಸಲೈನ್ ದ್ರಾವಣವನ್ನು ನೇರವಾಗಿ ರಕ್ತನಾಳಕ್ಕೆ ಸೇರಿಸಬೇಕಾಗುತ್ತದೆ.

ಅವಕಾಶ ದೊರೆತಾಗಲೆಲ್ಲ ಸ್ವಲ್ಪ-ಸ್ವಲ್ಪ ನೀರು ಕುಡಿಯುತ್ತಿರುವುದು ಒಳಿತು. ನಮ್ಮ ವಾಸ ವಾತಾವರಣ ಮತ್ತು ಕೆಲಸದ ಪ್ರಮಾಣಕ್ಕೆ ಅನುಗುಣವಾಗಿ ಅಗತ್ಯವಾದಷ್ಟು ನೀರನ್ನು ಸೇವಿಸುವುದು ಬಹಳ ಮುಖ್ಯ. ನಿರ್ಜಲೀಕರಣ ಅನೇಕ ಕಾಯಿಲೆಗಳಿಗೆ ರಹದಾರಿ. ದೇಹದಲ್ಲಿನ ನೀರಿನ ಅಂಶವನ್ನು ಸರಿಯಾದ ಮಟ್ಟದಲ್ಲಿ ಕಾಯ್ದುಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಅತ್ಯಗತ್ಯ.

-------------------

(ದಿನಾಂಕ 12/9/2023 ರ ಪ್ರಜಾವಾಣಿಯ ಕ್ಷೇಮ ಕುಶಲ ವಿಭಾಗದಲ್ಲಿ ಪ್ರಕಟವಾದ ಲೇಖನ. ಮೂಲ ಲೇಖನದ ಕೊಂಡಿ: https://www.prajavani.net/health/body-needs-water-to-avoid-dehydration-2476139) 

 

 ಮಗುವಿನ ಹೃದಯದಲ್ಲಿ ರಂಧ್ರ - ಪರಿಹಾರವೇನು?

ಡಾ. ಕಿರಣ್ ವಿ.ಎಸ್.

ವೈದ್ಯರು

ಹೃದಯದ ಕಾಯಿಲೆ ಎಂದರೆ ಕಣ್ಣ ಮುಂದೆ ಕೂದಲು ನರೆತ ವೃದ್ಧರ ಚಿತ್ರ ಬರುತ್ತಿತ್ತು. ಈಚೆಗೆ ಮೂವತ್ತರ ಹರೆಯದಲ್ಲೂ ಹೃದ್ರೋಗದಿಂದ ಬಳಲುತ್ತಿರುವವರನ್ನು ಕಾಣುತ್ತಿದ್ದೇವೆ. ಆದರೆ ಹೃದ್ರೋಗ ಚಿಕಿತ್ಸೆ ಮಾಡುವ ಪ್ರಮುಖ ಆಸ್ಪತ್ರೆಗಳಲ್ಲಿ "ಮಕ್ಕಳ ಹೃದ್ರೋಗ ವಿಭಾಗ"ಗಳನ್ನು ಕಂಡವರು, ಮಕ್ಕಳಿಗೆ ಹೃದಯದ ಕಾಯಿಲೆ ಬರುತ್ತದೆಯೇ? ಎಂದು ಅಚ್ಚರಿ ಪಡಬಹುದು.

ಮಕ್ಕಳಲ್ಲಿ ಕಾಣುವ ಹೃದಯದ ಸಮಸ್ಯೆಗಳು ವಿಶಿಷ್ಟವಾದವು. ಇವು ಹಿರಿಯರಲ್ಲಿ ಕಂಡುಬರುವ ಹೃದ್ರೋಗಗಳಿಗಿಂತ ಸಂಪೂರ್ಣ ಭಿನ್ನ. ವಯಸ್ಸಾದವರಲ್ಲಿ ಬಹುಮಟ್ಟಿಗೆ ಕಾಣುವುದು ಅಧಿಕ ರಕ್ತದೊತ್ತಡ, ಹೃದಯಕ್ಕೆ ರಕ್ತ ಪೂರೈಸುವ ಧಮನಿಗಳ ಅಡೆತಡೆ, ಹೃದಯದ ಮಾಂಸಖಂಡಗಳ ದೌರ್ಬಲ್ಯ ಮುಂತಾದುವು. ಆದರೆ, ಗರ್ಭಸ್ಥ ಶಿಶುವಿನ ಹೃದಯದ ರಚನೆಯಲ್ಲಿ ಆಗುವ ಜನ್ಮಜಾತ ದೋಷಗಳು ಮಗು ಹುಟ್ಟಿದ ಕೆಲಕಾಲದಲ್ಲಿ, ಇಲ್ಲವೇ ಎಳೆಯ ವಯಸ್ಸಿನಲ್ಲೇ ಕಾಣುತ್ತವೆ. ಹುಟ್ಟುವ ನೂರು ಮಕ್ಕಳಲ್ಲಿ ಒಂದು ಶಿಶುವಿಗೆ ಇಂತಹ ಜನ್ಮಜಾತ ಹೃದಯದ ಸಮಸ್ಯೆ ಇರುತ್ತದೆ ಎಂದು ಅಧ್ಯಯನಗಳು ತಿಳಿಸುತ್ತವೆ.  

ಹೃದಯ ಸರಳವಾದರೂ ಸಂಕೀರ್ಣವಾದ ಅಂಗ. ಆಕ್ಸಿಜನ್ ಪ್ರಮಾಣ ಕಡಿಮೆ ಇರುವ ಅಶುದ್ಧ ರಕ್ತ ಶರೀರದ ಎಲ್ಲೆಡೆಯಿಂದ ಅಪಧಮನಿಗಳ ಮೂಲಕ ಹೃದಯದ ಬಲಭಾಗವನ್ನು ಸೇರಿ, ಅಲ್ಲಿಂದ ಶ್ವಾಸಕೋಶಗಳನ್ನು ತಲುಪುತ್ತದೆ. ಅಲ್ಲಿ ಉಸಿರಾಟದ ಆಕ್ಸಿಜನ್ ಬೆರೆತು, ರಕ್ತದಲ್ಲಿನ ಆಕ್ಸಿಜನ್ ಪ್ರಮಾಣ ಹೆಚ್ಚಾಗಿ, ರಕ್ತ ಶುದ್ಧವಾಗುತ್ತದೆ. ಈ ಆಕ್ಸಿಜನ್-ಯುಕ್ತ ಶುದ್ಧ ರಕ್ತ ಹೃದಯದ ಎಡಭಾಗವನ್ನು ಸೇರಿ, ಅಭಿಧಮನಿಗಳ ಮೂಲಕ ಇಡೀ ಶರೀರಕ್ಕೆ ಸರಬರಾಜಾಗುತ್ತದೆ. ಅಶುದ್ಧ ಮತ್ತು ಶುದ್ಧ ರಕ್ತಗಳನ್ನು ಪ್ರತ್ಯೇಕಿಸಲು ಹೃದಯದ ಎಡ ಮತ್ತು ಬಲಭಾಗಗಳ ನಡುವೆ ಎರಡು ಗೋಡೆಗಳು ಇರುತ್ತವೆ. ರಕ್ತದ ಏಕಮುಖ ಸಂಚಾರವನ್ನು ನಿಯಂತ್ರಿಸಲು ಹೃದಯದಲ್ಲಿ ಸ್ವಯಂಚಾಲಿತ ಬಾಗಿಲಿನಂತಹ, ನಿಶ್ಚಿತ ಸಮಯಕ್ಕೆ ಸರಿಯಾಗಿ ತೆರೆದು, ಮುಚ್ಚಿಕೊಳ್ಳುವ ನಾಲ್ಕು ಕವಾಟಗಳು ಇರುತ್ತವೆ. ಶ್ವಾಸಕೋಶಗಳಿಗೆ ಮತ್ತು ಶರೀರಕ್ಕೆ ರಕ್ತ ಒಯ್ಯುವ ಸಲುವಾಗಿ ಬೇರೆ ಬೇರೆ ಧಮನಿಗಳು ಇರುತ್ತವೆ. ಹೀಗೆ, ಒಂದೇ ಹೃದಯದಲ್ಲಿ ಇದ್ದರೂ, ಅಶುದ್ಧ ಮತ್ತು ಶುದ್ಧ ರಕ್ತಗಳು ಪರಸ್ಪರ ಸಂಪರ್ಕಕ್ಕೆ ಬಾರದಂತೆ ವ್ಯವಸ್ಥೆ ಇರುತ್ತದೆ.

ಅಶುದ್ಧ ಮತ್ತು ಶುದ್ಧ ರಕ್ತಗಳನ್ನು ಪ್ರತ್ಯೇಕಿಸುವ ಗೋಡೆಗಳಲ್ಲಿ ರಂಧ್ರವಿದ್ದರೆ ಎರಡೂ ಬದಿಯ ರಕ್ತ ಒಂದರ ಜೊತೆಗೊಂದು ಬೆರೆಯುತ್ತದೆ. ಈ ರೀತಿಯ ರಂಧ್ರಗಳು ಜನನದಿಂದಲೇ ರುವುದರಿಂದ, ಎಳೆಯ ವಯಸ್ಸಿನಲ್ಲೇ ಪತ್ತೆಯಾಗುತ್ತವೆ. ಹೃದಯದ ನಾಲ್ಕು ಕವಾಟಗಳ ಪೈಕಿ ಯಾವುದೋ ಒಂದು ಕವಾಟದ ರಚನೆಯಲ್ಲಿ ದೋಷವಿದ್ದರೆ, ಅದು ಸರಿಯಾಗಿ ಮುಚ್ಚದೆಯೋ, ತೆರೆಯದೆಯೋ ಇರಬಹುದು. ಆಗಲೂ ರಕ್ತ ಸಂಚಾರದಲ್ಲಿ ಏರುಪೇರಾಗುತ್ತದೆ. ರಕ್ತ ಒಯ್ಯುವ ರಕ್ತನಾಳಗಳ ರಚನೆಯಲ್ಲಿ ಏನಾದರೂ ಸಮಸ್ಯೆ ಇದ್ದರೂ, ರಕ್ತ ಸಂಚಾರಕ್ಕೆ ಅಡ್ಡಿಯಾಗುತ್ತದೆ. ಶರೀರಕ್ಕೆ ರಕ್ತ ಪೂರೈಸುವ ಸಂಪೂರ್ಣ ಜವಾಬ್ದಾರಿ ಹೃದಯದ್ದೇ ಆದ್ದರಿಂದ, ಇಡೀ ರಕ್ತ ಸಂಚಾರ ವ್ಯವಸ್ಥೆಯ ಯಾವುದೇ ಹಂತದಲ್ಲಿ  ತೊಂದರೆಯಾದರೂ, ಅದರ ಪ್ರತ್ಯಕ್ಷ ಮತ್ತು ಪರೋಕ್ಷ ಪರಿಣಾಮ ಹೃದಯದ ಮೇಲೆಯೇ ಆಗುತ್ತದೆ.

ಹೃದಯದ ಸಮಸ್ಯೆ ಸಣ್ಣ ಮಟ್ಟದಲ್ಲಿದ್ದರೆ ಶರೀರಕ್ಕೆ ಯಾವುದೇ ಹಾನಿಯಾಗದೇ ಇರಬಹುದು. ಅಂತಹ ಮಕ್ಕಳು ಇತರ ಮಕ್ಕಳಂತೆ ಆರಾಮವಾಗಿ, ಚಟುವಟಿಕೆಯಿಂದಲೇ ಇರುತ್ತಾರೆ. ಬೇರೆ ಯಾವುದೋ ಅನಾರೋಗ್ಯದ ಸಂದರ್ಭದಲ್ಲಿ ಅಂತಹ ಮಕ್ಕಳನ್ನು ವೈದ್ಯರ ಬಳಿ ಒಯ್ದಾಗ, ಅವರ ಹೃದಯವನ್ನು ಪರೀಕ್ಷಿಸುವ ವೈದ್ಯರಿಗೆ ವಿಭಿನ್ನ ಸದ್ದು ಕೇಳುತ್ತದೆ. ಹೃದಯದ ರಂಧ್ರ ಅಥವಾ ದೋಷಪೂರ್ಣ ಕವಾಟದ ಮೂಲಕ ಹರಿಯುವ ರಕ್ತ ಮರ್ಮರ್ ಸದ್ದನ್ನೋ, ಅಥವಾ ಕ್ಲಿಕ್ ಸದ್ದನ್ನೋ ಮಾಡುತ್ತದೆ. ಅನುಭವಿ ವೈದ್ಯರು ಇಂತಹ ಸದ್ದನ್ನು ಖಚಿತವಾಗಿ ಗ್ರಹಿಸಬಲ್ಲರು. ಆದರೆ, ಪ್ರತಿಯೊಂದು ವಿಭಿನ್ನ ಸದ್ದಿಗೂ ಹೃದಯದ ಆಂತರಿಕ ದೋಷವೇ ಕಾರಣ ಎನ್ನಲಾಗದು. ಕೆಲವೊಮ್ಮೆ ಸಾಮಾನ್ಯ ಮಕ್ಕಳಲ್ಲೂ ಮರ್ಮರ್ ಸದ್ದು ಕೇಳಿಸುತ್ತದೆ. ಹೀಗಾಗಿ, ಹೃದಯದ ಸದ್ದು ವಿಭಿನ್ನವಾಗಿದ್ದರೆ, ವೈದ್ಯರು ಮಕ್ಕಳ ಹೃದಯದ ತಪಾಸಣೆ ಮಾಡಿಸುತ್ತಾರೆ.

ಹೃದಯದ ಜನ್ಮಜಾತ ಸಮಸ್ಯೆ ತೀವ್ರವಾಗಿದ್ದರೆ, ಅಂತಹ ಮಕ್ಕಳಲ್ಲಿ ಉಸಿರಾಟದ ಸಮಸ್ಯೆ, ಚರ್ಮ ಮತ್ತು ಲೋಳೆಪದರ ನೀಲಿಗಟ್ಟುವುದು, ಪದೇ ಪದೇ ಕಾಯಿಲೆ ಬೀಳುವುದು, ತೂಕ ಸರಿಯಾಗಿ ಏರದಿರುವುದು, ಹಾಲೂಡಿಸುವಾಗ ಮಗು ವಿಪರೀತ ಬೆವರುವುದು, ಬಿಟ್ಟು-ಬಿಟ್ಟು ಹಾಲು ಕುಡಿಯುವುದು, ಸರಿಯಾಗಿ ನಿದ್ರಿಸದಿರುವುದು ಮೊದಲಾದ ಗಂಭೀರ ಸಮಸ್ಯೆಗಳು ಕಾಣುತ್ತವೆ. ಶಿಶುವೈದ್ಯರ ಸಲಹೆ ಪಡೆದು, ಇಂತಹ ಮಕ್ಕಳನ್ನು ಸಾಧ್ಯವಾದಷ್ಟೂ ಬೇಗ ಮಕ್ಕಳ ಹೃದ್ರೋಗ ತಜ್ಞರಲ್ಲಿ ತಪಾಸಣೆ ಮಾಡಿಸಬೇಕು.

ಮಕ್ಕಳ ಜನ್ಮಜಾತ ಹೃದ್ರೊಗ ಸಮಸ್ಯೆಗಳು ಹಲವಾರು ಬಗೆಯವು. ಸರಳವಾದ ಸಣ್ಣ ರಂಧ್ರದಿಂದ ಹಿಡಿದು, ರಕ್ತನಾಳಗಳ ಅದಲಿ-ಬದಲಿ, ಹೃದಯದ ನಾಲ್ಕು ಕೋಣೆಗಳ ಪೈಕಿ ಒಂದು ಇಡೀ ಕೋಣೆಯೇ ಬೆಳವಣಿಗೆ ಆಗದಿರುವುದು, ಕವಾಟಗಳ ಅನುಪಸ್ಥಿತಿಯಂತಹ ಸಂಕೀರ್ಣ ಸಮಸ್ಯೆಗಳು ಇರುತ್ತವೆ. ಇಂತಹ ಪ್ರತಿಯೊಂದು ಸಮಸ್ಯೆಗೂ ಚಿಕಿತ್ಸೆ ಭಿನ್ನವಾಗಿರುತ್ತದೆ. ಒಂದು ಶಿಶುವಿನ ಹೃದಯದಂತೆ ಮತ್ತೊಂದು ಇರುವುದಿಲ್ಲಎಂದು ಮಕ್ಕಳ ಹೃದ್ರೋಗ ತಜ್ಞರು ಅಭಿಪ್ರಾಯ ಪಡುತ್ತಾರೆ.

ಪ್ರಸ್ತುತ ವೈದ್ಯಕೀಯ ವಿಜ್ಞಾನ ಬಹಳ ಪ್ರಗತಿ ಸಾಧಿಸಿದೆ. ಬಹುತೇಕ ಜನ್ಮಜಾತ ಹೃದ್ರೋಗ ಸಮಸ್ಯೆಗಳಿಗೆ ಈಗ ಪ್ರಮಾಣವತ್ತಾದ ಚಿಕಿತ್ಸೆಗಳಿವೆ. ಗರ್ಭಸ್ಥ ಭ್ರೂಣದ ಹಂತದಲ್ಲಿಯೇ ಹೃದ್ರೋಗವನ್ನು ನಿರ್ದಿಷ್ಟವಾಗಿ ಪತ್ತೆ ಮಾಡಬಲ್ಲ ತಂತ್ರಜ್ಞಾನವಿದೆ. ಸರಿಯಾದ ವೇಳೆಗೆ ವೈದ್ಯಕೀಯ ನೆರವು ಪಡೆದರೆ ಯಾವುದೇ ಜನ್ಮಜಾತ ಹೃದ್ರೋಗವನ್ನಾದರೂ ಸುಧಾರಿಸಬಲ್ಲ ಚಿಕಿತ್ಸೆಗಳಿವೆ. ಈಗಷ್ಟೇ ಜನಿಸಿದ ಮಗುವಿನ ಹೃದಯಕ್ಕೂ ಶಸ್ತ್ರಚಿಕಿತ್ಸೆ ಮಾಡಿ, ಸಮಸ್ಯೆಯನ್ನು ನಿಗ್ರಹಿಸಬಲ್ಲ ತೀವ್ರ ನಿಗಾ ಘಟಕಗಳಿವೆ. ಇಂತಹ ಸಂಕೀರ್ಣ ಚಿಕಿತ್ಸೆಯನ್ನು ಸಮರ್ಥವಾಗಿ ಮಾಡಬಲ್ಲ ಹಲವಾರು ಆಸ್ಪತ್ರೆಗಳು ನಮ್ಮ ದೇಶದಲ್ಲಿವೆ. ಒಂದು ಕಾಲದಲ್ಲಿ ಇಡೀ ಕುಟುಂಬವನ್ನು ಭೀತಿಗೆ ದೂಡುತ್ತಿದ್ದ ಮಕ್ಕಳ ಹೃದ್ರೋಗ ಈಗ ಪೋಷಕರಿಗೆ ಆತಂಕದ ವಿಷಯವಾಗಬೇಕಿಲ್ಲ.

----------------------------

(ದಿನಾಂಕ 5/9/2023 ರ ಪ್ರಜಾವಾಣಿಯ ಕ್ಷೇಮ ಕುಶಲ ವಿಭಾಗದಲ್ಲಿ ಪ್ರಕಟವಾದ ಲೇಖನ. ಮೂಲ ಲೇಖನದ ಕೊಂಡಿ: https://www.prajavani.net/health/health-tips-heart-problems-in-children-2466518) 

 ಹೃದಯದ ಆರೈಕೆ ಹೇಗೆ?

ಡಾ. ಕಿರಣ್.ವಿ.ಎಸ್.

ವೈದ್ಯರು

 

ಯಾರಾದರೂ ಪರಿಚಿತರೋ ಅಥವಾ ಹೆಸರು ಮಾಡಿರುವವರೋ ಮರಣಿಸಿದಾಗ ಮೊದಲು ಸಂಕಟವಾಗುತ್ತದೆ. ಅವರ ಮರಣದ ಕಾರಣ ಹೃದಯಾಘಾತ ಎಂದೇನಾದರೂ ತಿಳಿದರೆ ಆತಂಕವಾಗುತ್ತದೆ. ಅದರಲ್ಲೂ ಇತ್ತೀಚೆಗೆ ಮೂವತ್ತರ ಹರೆಯದ, ತಕ್ಕಮಟ್ಟಿಗೆ ಆರೋಗ್ಯಕರ ಜೀವನವನ್ನೇ ನಡೆಸುತ್ತಿದ್ದರೆಂದು ಭಾವಿಸುವವರಿಗೆ ಹೃದಯಾಘಾತವಾಯಿತು ಎಂದು ಸುದ್ಧಿ ಬಂದರೆ ಭೀತಿಯಾಗುತ್ತದೆ. ಸುದ್ಧಿಯ ಪರಿಣಾಮ ಮನಸ್ಸಿನ ಮೇಲೆ ಇರುವಾಗ ಆಸ್ಪತ್ರೆಗಳಿಗೆ, ಪ್ರಯೋಗಾಲಯಗಳಿಗೆ, ತಜ್ಞ ವೈದ್ಯರ ಬಳಿಗೆ ಹೋಗುವವರು ಎಷ್ಟೋ ಮಂದಿ. ಆದರೆ, ವೈದ್ಯರು ಹೇಳುವ ಜಾಗರೂಕತೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವವರು ವಿರಳ. ಕೆಲದಿನಗಳ ನಂತರ ಎಲ್ಲರಿಗೂ ಏನೇನೋ ಆಗುತ್ತಿದ್ದರೂ ನನಗೇನೂ ಆಗುವುದಿಲ್ಲಎನ್ನುವ ಮನೋಭಾವ ಬೆಳೆಯುತ್ತದೆ. ಕೆಲಕಾಲದ ನಂತರ ಮತ್ತೊಂದು ಇಂತಹುದೇ ಸುದ್ಧಿ, ಮತ್ತಷ್ಟು ಆತಂಕದ ದಿನಗಳು - ಈ ರೀತಿಯ ವರ್ತುಲ ವರ್ತನೆ ಕಾಣುತ್ತಿದ್ದೇವೆ. ಸರಳವಾಗಿ "ಹೃದಯದ ಆರೈಕೆ ಹೇಗೆ ಮಾಡಬೇಕು" ಎನ್ನುವುದರ ಜಿಜ್ಞಾಸೆ ಇಲ್ಲಿದೆ.

 

ಕಳೆದ ಎರಡು-ಮೂರು ದಶಕಗಳಲ್ಲಿ ಜನಸಾಮಾನ್ಯರ ಜೀವನಶೈಲಿ ಅನೂಹ್ಯ ಬದಲಾವಣೆಗಳನ್ನು ಕಂಡಿದೆ. ನಮ್ಮ ಹಿಂದಿನ ತಲೆಮಾರಿನ ಸಮಸ್ಯೆಗಳು, ಅಗತ್ಯಗಳು ನಮ್ಮ ತಲೆಮಾರಿಗೆ ಅನ್ವಯವಾಗುವುದಿಲ್ಲ. ಅಂತೆಯೇ, ಪ್ರಾಯಶಃ ನಮ್ಮ ಸಮಸ್ಯೆಗಳು ನಮ್ಮ ಮುಂದಿನ ಪೀಳಿಗೆಗೆ ಬದಲಾಗಿರುತ್ತವೆ. ಪ್ರಗತಿಯ ವೇಗಕ್ಕೆ ತಕ್ಕಂತೆ ಹೆಜ್ಜೆ ಹಾಕುವುದು ಯುವಜನತೆ, ಮಧ್ಯವಯಸ್ಕರ ಬದುಕಿನ ಭಾಗವೇ ಆಗಿಹೋಗಿದೆ. ಮಾನಸಿಕ ಒತ್ತಡವನ್ನು ಸಹಿಸಲು ಅನಾರೋಗ್ಯಕರ ಚಟಗಳಿಗೆ ಮೊರೆ ಹೋಗುವ ಜೀವನಶೈಲಿ, ಆದ್ಯತೆಗಳು ಬದಲಾದಂತೆ ಕಡಿಮೆಯಾಗುತ್ತಿರುವ ಕೌಟುಂಬಿಕ ಭದ್ರತೆ, ಆರೋಗ್ಯದ ಬಗ್ಗೆ ನಿರ್ಲಕ್ಷ್ಯ, ಬೀಸುಬೀಡಾದ ಆಹಾರ ಸೇವನೆ, ಸಾಮಾಜಿಕ ಬಾಂಧವ್ಯಗಳ ನಿರ್ವಹಣೆಯ ಹೆಸರಿನಲ್ಲಿ ಮದ್ಯಪಾನ, ಮಾದಕ ವಸ್ತುಗಳ ಚಟ. ಮೊದಲಾದುವು ಹೃದಯ ಮೇಲೆ ಬೀಳುವ ತೀವ್ರ ಒತ್ತಡಕ್ಕೆ ಕೊಡುಗೆಯಾಗಿವೆ. ಇವೆಲ್ಲವೂ ಒಂದು ಹಂತದಲ್ಲಿ "ಹಿಂದುರಗಲಾಗದ" ನಿರ್ಣಾಯಕ ಮಟ್ಟವನ್ನು ತಲುಪುತ್ತದೆ. ಸಾವಿನ ಸುದ್ಧಿಯೇನೋ ನಮ್ಮನ್ನು ತಲುಪುತ್ತದೆ; ಆದರೆ, ಅದಕ್ಕೆ ಕಾರಣವಾದ ನೈಜ ಅಂಶಗಳು ಸಾರ್ವಜನಿಕಗೊಳ್ಳುವುದು ತೀರಾ ಅಪರೂಪ. ಹೀಗಾಗಿ, ಇತರರ ಮರಣದ ಸುದ್ಧಿ ನಮ್ಮನ್ನು ಕಂಗೆಡಿಸುತ್ತದಾದರೂ, ಅದನ್ನು ಹೇಗೆ ತಡೆಯಬಹುದಿತ್ತು ಎನ್ನುವ ಮಾರ್ಗಗಳು ಸ್ಪಷ್ಟವಾಗುವುದಿಲ್ಲ. ವೈಯಕ್ತಿಕವಾಗಿ ಪ್ರತಿಯೊಬ್ಬರೂ ತಂತಮ್ಮ ಆರೋಗ್ಯ ಪರಿಸ್ಥಿತಿಯ ಆತ್ಮಾವಲೋಕನ ಮಾಡಿಕೊಳ್ಳುತ್ತಾ, ಪರಿಹಾರಗಳನ್ನು ಕಂಡುಕೊಳ್ಳುವುದು ಮುಖ್ಯ.

 

ಹೃದಯದ ಆರೋಗ್ಯಕ್ಕೆ ಎರವಾಗುತ್ತಿರುವ ಸಮಸ್ಯೆಗಳ ಪಟ್ಟಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ತಡೆಗಟ್ಟಬಹುದಾದ ಅಂಶಗಳೇ ಹೆಚ್ಚಾಗಿ ಇರುವುದು ಆಶಾದಾಯಕ ಸಂಗತಿ. ಅದನ್ನು ಪಾಲಿಸಬಲ್ಲ ಮನಸ್ಥಿತಿಯ ಕೊರತೆಯೇ ಸದ್ಯಕ್ಕೆ ಪ್ರಮುಖ ಸಮಸ್ಯೆ. ತಂಬಾಕು, ಮದ್ಯಪಾನ, ಮಾದಕ ವಸ್ತುಗಳಿಂದ ದೂರವಿರುವುದು; ಮಧುಮೇಹ, ಅಧಿಕ ರಕ್ತದೊತ್ತಡಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು; ದೈನಂದಿನ ವ್ಯಾಯಾಮ, ಪ್ರಾಣಾಯಾಮ, ಧ್ಯಾನಗಳ ಪಾಲನೆ; ಆಹಾರ ಸೇವನೆಯಲ್ಲಿ ಶಿಸ್ತು; ದಿನಕ್ಕೆ ಏಳು ಗಂಟೆಗಳಿಗಿಂತ ಕಡಿಮೆಯಿಲ್ಲದಂತೆ ನಿದ್ರೆ; ಹಣ ಮತ್ತು ಆರೋಗ್ಯದ ನಿರ್ವಹಣೆಯನ್ನು ತೂಗಬಲ್ಲ ಉದ್ಯೋಗದ ಆಯ್ಕೆ; ಕೌಟುಂಬಿಕ ಸಂಬಂಧಗಳ ಆರೋಗ್ಯಕರ ಪೋಷಣೆ; ಮನಸ್ಸಿನ ದುಗುಡಗಳನ್ನು ಚರ್ಚಿಸಿ, ದಾರಿ ಕಾಣಿಸಬಲ್ಲ ಸ್ನೇಹಿತರ, ಬಂಧುಗಳ ಆಪ್ತವಲಯದ ನಿರ್ಮಾಣ; ವೈಯಕ್ತಿಕ ಆರೋಗ್ಯದ ನಿರ್ವಹಣೆಗೆ ನಿಯಮಿತ ವೈದ್ಯರೊಬ್ಬರ ಸಲಹೆಗಳು; ಮಾನಸಿಕ ನೆಮ್ಮದಿಗೆ ಬೇಕಾದ ಜೀವನಶೈಲಿ, ಮೊದಲಾದುವು ವಯಸ್ಸಿನ ಅಂತರವಿಲ್ಲದೆ ಪ್ರತಿಯೊಬ್ಬರ ಆವಶ್ಯಕತೆಗಳಾಗಬೇಕು. ಮೂವತ್ತರ ಹರೆಯದಲ್ಲಿ ಸಂಭವಿಸುತ್ತಿರುವ ಹೃದಯಾಘಾತಗಳು ಎಚ್ಚರಿಕೆಯ ಗಂಟೆಗಳಾಗಿ, ದಿಕ್ಕು ತಪ್ಪುತ್ತಿರುವ ಬದುಕನ್ನು ಸರಿಯಾದ ಹಾದಿಯಲ್ಲಿ ತಿರುಗಿಸಬಲ್ಲ ಮಾರ್ಗದರ್ಶಿಯಾಗಬೇಕು.

 

ಧೂಮಪಾನ ಮತ್ತು ಮದ್ಯಪಾನಗಳು ಹೃದಯದ ಶತ್ರುಗಳು. ಉಪ್ಪು ಅಥವಾ ಸಕ್ಕರೆಯ ಅಂಶ ಅಧಿಕವಾಗಿರುವ ತಿನಿಸು ಮತ್ತು ಪಾನೀಯಗಳು, ಅಧಿಕ ಜಿಡ್ಡಿನ ಆಹಾರಗಳು ಹೃದಯದ ಅನಾರೋಗ್ಯಕ್ಕೆ ಕಾರಣ. ಹೃದ್ರೋಗವನ್ನು ದೂರವಿಡುವಲ್ಲಿ ಇಂತಹುವುಗಳ ಬಳಕೆಯನ್ನು ಕಡಿಮೆಗೊಳಿಸುವುದು ಸಹಾಯಕ. ನಿಯಮಿತವಾಗಿ ಸೇವಿಸುಆರೋಗ್ಯ ಸಂಬಂಧಿ ಔಷಧಗಳನ್ನು ಅಕಾರಣವಾಗಿ ಎಂದಿಗೂ ತಪ್ಪಿಸಬಾರದು. ರಕ್ತದೊತ್ತಡ, ಮಧುಮೇಹ ಮುಂತಾದ ಸಮಸ್ಯೆಗಳನ್ನು ಸಾಧ್ಯವಾದಷ್ಟೂ ನಿಯಂತ್ರಣದಲ್ಲಿ ಇಡಬೇಕು. ಹೃದಯದ ಆರೋಗ್ಯ ಮತ್ತು ಆಹಾರ ಜೊತೆಜೊತೆಯಾಗಿ ಸಾಗುತ್ತವೆ. ಸಾತ್ವಿಕ ಆಹಾರವನ್ನು ಪ್ರಜ್ಞಾಪೂರ್ವಕವಾಗಿ ಆಯ್ಕೆ ಮಾಡಿಕೊಳ್ಳಬೇಕು. ತಾಜಾ ಹಣ್ಣು, ತರಕಾರಿ, ಧಾನ್ಯಗಳು, ಪ್ರೋಟೀನ್ ಅಂಶ ಅಧಿಕವಾಗಿರುವ ಆಹಾರ, ಜಿಡ್ಡಿನ ಅಂಶ ಕಡಿಮೆ ಇರುವ ಹೈನು ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಬೇಕು.

 

ನಿಯಮಿತ ವ್ಯಾಯಾಮ ಔಷಧಗಳಷ್ಟೇ ಮಹತ್ವದ್ದು. ಕೂರುವುದು ಆಧುನಿಕ ಧೂಮಪಾನಎನ್ನುವ ಮಾತಿದೆ. ಯಾವುದೇ ಚಟುವಟಿಕೆಯಿಲ್ಲದೆ ವಿನಾ ಕಾರಣ ಕೂರುವುದರಿಂದ ಆರೋಗ್ಯದ ಮೇಲೆ ಆಗುವ ವ್ಯತಿರಿಕ್ತ ಪರಿಣಾಮಗಳು ಧೂಮಪಾನದಿಂದ ಆಗುವಷ್ಟೇ ತೀವ್ರವಾದ ಮಟ್ಟದವು ಎಂದು ಅಧ್ಯಯನಗಳು ತೋರಿವೆ. ಆರೋಗ್ಯಕರ ಹೃದಯಕ್ಕೆ ವ್ಯಾಯಾಮ ಬಹಳ ಮುಖ್ಯ. ದಿನಕ್ಕೆ ಕನಿಷ್ಠ ಮೂವತ್ತು ನಿಮಿಷಗಳ ಕಾಲ ಉಸಿರಾಟದ ಗತಿಯನ್ನು ಏರಿಸುವ ಶಾರೀರಿಕ ವ್ಯಾಯಾಮ ಮಾಡಬೇಕು. ಇದರಲ್ಲಿ ವಾರಕ್ಕೆ ಎರಡು ದಿನ ಮಾಂಸಖಂಡಗಳ ಬಲವನ್ನು ಹೆಚ್ಚಿಸುವ ವ್ಯಾಯಾಮ ಇರಬೇಕು. ವಾರದಲ್ಲಿ ಇಂತಿಷ್ಟು ದಿನ ಎನ್ನುವುದಕ್ಕಿಂತ ಪ್ರತಿದಿನವೂ ತಪ್ಪದೆ ವ್ಯಾಯಾಮ ಮಾಡುವುದು ಸರಿಯಾದ ವಿಧಾನ. ವಿಪರೀತ ದೇಹತೂಕ ಹೃದಯದ ಮೇಲೆ ತೀವ್ರವಾದ ಒತ್ತಡವನ್ನು ಹೇರುತ್ತದೆ. ಶರೀರದ ತೂಕವನ್ನು ನಿಯಂತ್ರಣದಲ್ಲಿ ಇಡುವುದು ಆರೋಗ್ಯದ ದೃಷ್ಟಿಯಿಂದ ಬಹಳ ಒಳ್ಳೆಯದು. ಆಧುನಿಕ ಕಾಲದಲ್ಲಿ ಬೊಜ್ಜನ್ನು ಸಮರ್ಥಿಸುವ ಜನರಿದ್ದಾರೆ. ವೈಯಕ್ತಿಕ ನಿಲುವುಗಳು ಏನೇ ಇದ್ದರೂ, ಅದರ ವ್ಯತಿರಿಕ್ತ ಪರಿಣಾಮಗಳು ಹೃದಯದ ಮೇಲೆ ಆಗುವುದನ್ನು ತಪ್ಪಿಸಲಾಗದು. ಬೊಜ್ಜಿನಿಂದ ಬಳಲುವವರು ತಮ್ಮ ಆರೋಗ್ಯದತ್ತ ಹೆಚ್ಚು ಜತನ ವಹಿಸಬೇಕು. ಆಹಾರ ತಜ್ಞರ ಸಲಹೆಯ ಮೇರೆಗೆ ಅಗತ್ಯ ಪೋಷಕಾಂಶಗಳುಳ್ಳ ಸಮತೋಲಿತ ಆಹಾರವನ್ನು ಸೇವಿಸುವುದು, ಅಧಿಕ ಕ್ಯಾಲರಿ ಆಹಾರ ಪದಾರ್ಥಗಳಿಂದ ದೂರವಿರುವುದು ಎಲ್ಲರಿಗೂ ಅನ್ವಯಿಸುತ್ತದೆ.

 

ದೈಹಿಕ ಮತ್ತು ಮಾನಸಿಕ ಒತ್ತಡದ ನಿಗ್ರಹ ಹೃದಯದ ಮೇಲೆ ಉತ್ತಮ ಪರಿಣಾಮ ಬೀರಬಲ್ಲದು. ಕೋಪ, ತುಮುಲಗಳು ಹೃದಯದ ರಕ್ತನಾಳಗಳನ್ನು ಸಂಕೋಚಿಸಿ, ಆಘಾತ ಉಂಟುಮಾಡಬಲ್ಲವು. ಮಾನಸಿಕ ಅಶಾಂತಿ, ಕೆಲಸದ ಒತ್ತಡಗಳ ಕಾರಣದಿಂದ ಅಧಿಕ ರಕ್ತದೊತ್ತಡಕ್ಕೆ ತುತ್ತಾಗುವವರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ. ಉದ್ವೇಗಗಳಿಗೆ ಸಿಲುಕಿ ಧೂಮಪಾನ, ಮದ್ಯಪಾನಗಳ ಚಟ ಬೆಳೆಸಿಕೊಂಡವರು ಇಬ್ಬಗೆಯಿಂದ ಹೃದಯದ ಕಾಯಿಲೆಗಳಿಗೆ ತುತ್ತಾಗುತ್ತಾರೆ. ತೀವ್ರ ಒತ್ತಡದಿಂದ ಬಳಲುವವರು ಮಾನಸಿಕ ಆರೋಗ್ಯ ಸಲಹೆಗಾರರ ಸಹಾಯ ಪಡೆಯಬೇಕು. ನಿಗದಿತ ಪ್ರಾಣಾಯಾಮ, ಧ್ಯಾನಗಳು ಮನಸ್ಸಿನ ಉದ್ವೇಗವನ್ನು ಕಡಿಮೆ ಮಾಡುವಲ್ಲಿ ಸಹಕಾರಿ. ಹೃದಯದ ಆರೋಗ್ಯದ ಮೇಲೆ ನಿದ್ರೆಯ ಪರಿಣಾಮ ಗಾಢವಾದದ್ದು. ಧಾವಂತದ ಜೀವನಶೈಲಿ ನಿದ್ರೆಯ ಬಗ್ಗೆ ತಾತ್ಸಾರ ವಹಿಸುತ್ತದೆ. ಇದರ ಪರಿಣಾಮವಾಗಿ ಸಣ್ಣ ವಯಸ್ಸಿನಲ್ಲೇ ಹೃದ್ರೋಗಗಳಿಗೆ ತುತ್ತಾಗುವವರ ಸಂಖ್ಯೆ ಬೆಳೆಯುತ್ತಿದೆ. ಉತ್ತಮ ಗುಣಮಟ್ಟದ, ಸರಿಯಾದ ಕಾಲಾವಧಿಯ ನಿದ್ರೆ ಹೃದಯ ಮತ್ತು ರಕ್ತನಾಳಗಳ ಸಮಸ್ಯೆಗಳನ್ನು ಗುಣಪಡಿಸುತ್ತದೆ; ಹೃದಯದ ಕೆಲಸಕ್ಕೆ ಅಗತ್ಯವಾದ ಚೋದಕಗಳನ್ನು ಸರಿದೂಗಿಸುತ್ತದೆ; ಶರೀರದ ರಕ್ಷಕ ವ್ಯವಸ್ಥೆಯನ್ನು ಚುರುಕಾಗಿ ಇಟ್ಟು, ಕಾಯಿಲೆಗಳನ್ನು ದೂರವಿಡುತ್ತದೆ.

 

ಉತ್ತಮ ಆರೋಗ್ಯ ಪದ್ದತಿಗಳನ್ನು ರೂಡಿಸಿಕೊಳ್ಳುವುದು; ಕಾಯಿಲೆಯನ್ನು ಆರಂಭದಲ್ಲೇ ಪತ್ತೆ ಹಚ್ಚಿ ಚಿಕಿತ್ಸೆ ಪಡೆಯುವುದು; ಕಾಯಿಲೆಯ ಪರಿಣಾಮಗಳನ್ನು ತಹಬಂದಿಗೆ ತರುವುದು; ಮತ್ತು ಕಾಯಿಲೆಯಿಂದ ಈಗಾಗಲೇ ಆಗಿರುವ ಶಾರೀರಿಕ ಸಮಸ್ಯೆಗಳನ್ನು ನಿಧಾನವಾಗಿ ಸಹಜ ಸ್ಥಿತಿಗೆ ತರುವುದು - ಈ ಹಂತಗಳು ಹೃದಯದ ಕಾಯಿಲೆಗಳ ನಿರ್ವಹಣೆಯಲ್ಲಿ ಪ್ರಮುಖ ಮೈಲಿಗಲ್ಲುಗಳು. ಹೃದಯದ ಆರೈಕೆಯಲ್ಲಿ ಶಿಸ್ತುಬದ್ಧ ಬದುಕಿನ ವಿಧಾನಗಳು ಮತ್ತು ಜೀವನಶೈಲಿಯ ಸುಧಾರಣೆಗಳು ಪ್ರತಿಯೊಬ್ಬರಿಗೂ ಅಗತ್ಯ.

-----------------------

(ದಿನಾಂಕ 15/8/2023 ರ ಪ್ರಜಾವಾಣಿಯ ಕ್ಷೇಮ ಕುಶಲ ವಿಭಾಗದಲ್ಲಿ ಪ್ರಕಟವಾದ ಲೇಖನ. ಮೂಲ ಲೇಖನದ ಕೊಂಡಿ: https://www.prajavani.net/health/heart-and-health-what-are-the-caring-things-kannada-article-2439447 )