ಬುಧವಾರ, ಅಕ್ಟೋಬರ್ 5, 2022


 ಹೃದಯದ ಗಣಿತ

ಗರ್ಭಸ್ಥ ಭ್ರೂಣದಲ್ಲಿ ಕೆಲಸ ಮಾಡಲು ಆರಂಭಿಸುವ ಮೊಟ್ಟ ಮೊದಲ ಅಂಗ ಹೃದಯ. ಅಂತೆಯೇ, ಮರಣದ ವೇಳೆ ಶರೀರದಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸುವ ಕಡೆಯ ಅಂಗವೂ ಹೃದಯವೇ. ನಮ್ಮ ಮುಷ್ಟಿಯ ಗಾತ್ರದ ಹೃದಯ ದೇಹದ ಅಚ್ಚರಿಗಳಲ್ಲಿ ಒಂದು. ದಿನಕ್ಕೆ ಕನಿಷ್ಟ ಒಂದು ಲಕ್ಷದಂತೆ 70 ವರ್ಷದ ಜೀವನದಲ್ಲಿ 250 ಕೋಟಿ ಬಾರಿ ಒಂದೇ ಸಮನೆ, ಕ್ಷಣಮಾತ್ರವೂ ಪುರುಸೊತ್ತು ಇಲ್ಲದಂತೆ ಬಡಿಯುವ ಹೃದಯಕ್ಕೆ ಸಮಾನವಾದ ಯಂತ್ರವನ್ನು ಮಾನವ ಈವರೆಗೆ ಸೃಷ್ಟಿಸಿಲ್ಲ! ತಲೆಯಿಂದ ಕಾಲಿನವರೆಗೆ ಇರುವ ಬಹುತೇಕ ಜೀವಕೋಶಗಳಿಗೆ ಪೋಷಕಾಂಶ ಸರಬರಾಜು ಮಾಡುವುದು ಹೃದಯವೇ. ಇದಕ್ಕೆ ವಿಸ್ತಾರವಾದ ರಕ್ತನಾಳಗಳ ಜಾಲವನ್ನು ದೇಹದಾದ್ಯಂತ ಪಸರಿಸಿದೆ. ಶರೀರದ ಯಾವುದೇ ರಕ್ತನಾಳವನ್ನು ಹಿಡಿದು ಹೊರಟರೂ ಅದು ಕಡೆಗೆ ಹೃದಯವನ್ನೇ ಮುಟ್ಟುತ್ತದೆ. ಹೀಗೆ ಹೃದಯದಿಂದ ಹೊರಟ ರಕ್ತನಾಳಗಳನ್ನು ನೇರವಾಗಿ ಒಂದೇ ರೇಖೆಯುದ್ದಕ್ಕೂ ಹಾಸಿದರೆ, ಅದು ಭೂಮಿಯ ಸಮಭಾಜಕವೃತ್ತವನ್ನು ಒಂದೂವರೆ ಸಾರಿ ಸುತ್ತುಹಾಕುತ್ತದೆ!

ಹೃದಯದ ತೂಕ ಸುಮಾರು ಕಾಲು ಕೆಜಿ. ಅದರಲ್ಲಿ ಬಹುಪಾಲು ವಿಶಿಷ್ಟ ಮಾಂಸಖಂಡ. ವಿಶಿಷ್ಟ ಏಕೆಂದರೆ, ಇದು ಸ್ವಯಂಚಾಲಿತ. ಈ ಮಾಂಸಖಂಡ ಕೆಲಸ ಮಾಡಲು ಮಿದುಳಿನಿಂದ ನಿರ್ದೇಶನಗಳು ಬೇಕಿಲ್ಲ. “ಮಿದುಳು ಕೆಲಸ ಮಾಡದಿದ್ದರೂ ಗುಂಡಿಗೆ ಕೆಲಸ ಮಾಡುತ್ತದೆ” ಎಂದು ಕೆಲವರನ್ನು ಲೇವಡಿ ಮಾಡಲು ಹೇಳಿದರೂ, ಆ ಮಾತು ಎಲ್ಲರಲ್ಲೂ ಸತ್ಯವೇ! ಹೃದಯದ ಮಾಂಸಖಂಡ ಒಂದು ಬಾರಿ ಒತ್ತಿದರೆ ಸುಮಾರು 70 ಮಿಲಿಲೀಟರ್ ರಕ್ತ ದೇಹದೊಳಗೆ ಪ್ರವಹಿಸುತ್ತದೆ. ಅಂದರೆ, ನಿಮಿಷಕ್ಕೆ ಐದು ಲೀಟರ್; ಗಂಟೆಗೆ ಮೂರುನೂರು ಲೀಟರ್; ದಿನಕ್ಕೆ ಸುಮಾರು 7000 ಲೀಟರ್ ರಕ್ತವನ್ನು ಹೃದಯ ಶರೀರದ ಸಲುವಾಗಿ ಪಂಪ್ ಮಾಡುತ್ತದೆ. ಒಂದು ಜೀವನ ಕಾಲದಲ್ಲಿ ಹೃದಯ ಪಂಪ್ ಮಾಡುವ ರಕ್ತದ ಪ್ರಮಾಣ ಸುಮಾರು ಇಪ್ಪತ್ತು ಕೋಟಿ ಲೀಟರ್! ಒತ್ತಡ ನಿರ್ಮಿಸುವ ಬಲದಲ್ಲಿ ಲೆಕ್ಕ ಹಾಕಿದರೆ, ಪ್ರತೀ ದಿನ ಹೃದಯ ಉತ್ಪಾದಿಸುವ ನೂಕುಬಲದಿಂದ ಒಂದು ಖಾಲಿ ಬಸ್ ಅನ್ನು ಸಪಾಟಾದ ರಸ್ತೆಯಲ್ಲಿ ಸುಮಾರು ಮೂವತ್ತೈದು ಕಿಲೋಮೀಟರ್ ದೂರಕ್ಕೆ ತಳ್ಳಬಹುದು! ಅಂದರೆ, ಒಂದು ಜೀವಿತಾವಧಿಯಲ್ಲಿ ಹೃದಯ ಒತ್ತುವ ಒಟ್ಟು ಶಕ್ತಿಯಿಂದ ಆ ಬಸ್ ಅನ್ನು ಚಂದ್ರನ ಬಳಿ ತಲುಪಿಸಿ, ಚಂದ್ರಮಂಡಲಕ್ಕೆ ಒಂದು ಪ್ರದಕ್ಷಿಣೆ ಹಾಕಿಸಿ, ವಾಪಸ್ ಭೂಮಿಗೆ ತರಬಹುದಾದಷ್ಟು ತಾಕತ್ತು!

ಹೋಲಿ ಹಬ್ಬದ ಸಮಯದಲ್ಲಿ ಪಿಚಕಾರಿ ಬಳಸಿದ ಅನುಭವ ನೆನಪಿಸಿಕೊಳ್ಳಿ. ಬಣ್ಣದ ನೀರು ತುಂಬಿದ ಪಿಚಕಾರಿಯನ್ನು ಮೆಲ್ಲಗೆ ಒತ್ತಿದರೆ ನೀರು ಅಲ್ಲೇ ಒಂದಷ್ಟು ದೂರದಲ್ಲಿ ಬೀಳುತ್ತದೆ. ಅದೇ, ಬಲವಾಗಿ ಒತ್ತಿದರೆ ನೀರು ಸುಮಾರು ಅಂತರದವರೆಗೆ ಗಾಳಿಯಲ್ಲಿ ಹಾರಿ ದೂರ ನಿಂತವರನ್ನೂ ತೋಯಿಸುತ್ತದೆ. ಅಂದರೆ, ಪಂಪ್ ಮಾಡುವ ಒತ್ತಡ ಹೆಚ್ಚಿದಷ್ಟೂ ಅದರ ಸಾಮರ್ಥ್ಯ ಅಧಿಕವಾಗುತ್ತದೆ ಎಂದಾಯಿತು. ಈಗ ತಲೆಯಿಂದ ಕಾಲಿನವರೆಗೆ ಹಬ್ಬಿರುವ ಜೀವಕೋಶಗಳಿಗೆ ಪೋಷಕಾಂಶಗಳನ್ನು ಹೃದಯವೇ ರಕ್ತದ ಮೂಲಕ ತಲುಪಿಸಬೇಕು ಎಂದರೆ, ಅದು ಸಾಕಷ್ಟು ಒತ್ತಡದಿಂದ ರಕ್ತವನ್ನು ಧಮನಿಗಳಲ್ಲಿ ತಳ್ಳಬೇಕು. ಈ ಒತ್ತಡವನ್ನೇ “ರಕ್ತದೊತ್ತಡ” ಅಥವಾ ಬ್ಲಡ್ ಪ್ರೆಶರ್ ಎನ್ನಲಾಗುತ್ತದೆ. ಹೀಗೆ ತಳ್ಳಿದ ರಕ್ತವನ್ನು ಮತ್ತಷ್ಟು ಮುಂದೆ ಸಂಚರಿಸುವಂತೆ ಮಾಡಲು ರಕ್ತನಾಳಗಳಲ್ಲೂ ತೆಳುವಾದ ಮಾಂಸಪಟ್ಟಿಗಳು ಇರುತ್ತವೆ. ಇಂತಹ ರಕ್ತನಾಳಗಳು ತಮ್ಮೊಳಗೆ ಹರಿಯುವ ರಕ್ತದ ಒತ್ತಡ ಶೂನ್ಯಕ್ಕೆ ಇಳಿಯದಂತೆ ನೋಡಿಕೊಂಡು, ಅದು ಅಂತೆಯೇ ಮುಂದೆ ಮುಂದೆ ಹರಿಯುತ್ತಲೇ ಇರುವಂತೆ ಹೃದಯಕ್ಕೆ ಕೆಲಸಕ್ಕೆ ಸಾಥ್ ನೀಡುತ್ತವೆ. ಹೃದಯ ಒತ್ತಿದಾಗ ಇಂತಹ ರಕ್ತನಾಳಗಳಲ್ಲಿ ಹೆಚ್ಚಿನ ಒತ್ತಡ ಇರುತ್ತದೆ. ಒತ್ತಿದ ನಂತರ ಮುಂದಿನ ಆವೃತ್ತಿಗೆ ರಕ್ತವನ್ನು ಹೃದಯ ಸಂಗ್ರಹಿಸುವಾಗ ರಕ್ತನಾಳಗಳ ಒತ್ತಡ ಕಡಿಮೆ ಆಗುತ್ತದೆ. ಹೀಗೆ, ರಕ್ತನಾಳಗಳಲ್ಲಿ ಮೇಲ್ಮಟ್ಟದ ಒತ್ತಡ ಹೃದಯದ ಕಾರಣದಿಂದ ಆದರೆ, ಕೆಳಮಟ್ಟದ ಒತ್ತಡ ರಕ್ತನಾಳಗಳ ಮಾಂಸಪಟ್ಟಿಗಳಿಂದ ಆಗುತ್ತದೆ. ಈ ಎರಡು ಸಂಖ್ಯೆಗಳೇ ನಾವು ರಕ್ತದ ಒತ್ತಡವನ್ನು ನಿರ್ದೇಶಿಸುವ ಸಿಸ್ಟೊಲ್ ಮತ್ತು ಡಯಸ್ಟೊಲ್ ಅಂಕಿಗಳು. ರಕ್ತದ ಒತ್ತಡ 120/80 ಎಂದರೆ, ಹೃದಯ ಒತ್ತುವಾಗ 120 ಅಂಶಗಳ ಒತ್ತಡ; ಹೃದಯ ರಕ್ತವನ್ನು ಶೇಖರಿಸುವಾಗ ರಕ್ತನಾಳಗಳ ಸಹಾಯಕ ಒತ್ತಡ 80 ಅಂಶಗಳು ಎಂದು ಅರ್ಥ. ಇದರ ಮಾಪನ ಆಗುವುದು ಪಾದರಸದ ಒತ್ತಡದ ಲೆಕ್ಕಾಚಾರದಲ್ಲಿ. ಒಂದು ಉದ್ದನೆಯ ಗಾಜಿನ ಕೊಳವೆಯಲ್ಲಿ ಸ್ವಲ್ಪ ಪಾದರಸವನ್ನು ಇಟ್ಟರೆ, ಹೃದಯದ ಪ್ರತಿಯೊಂದು ಸಂಕೋಚನ ಆ ಪಾದರಸದ ಮಟ್ಟವನ್ನು ಸುಮಾರು 120 ಮಿಲಿಮೀಟರ್ ನಷ್ಟು ಎತ್ತರಕ್ಕೆ ದೂಡಬಲ್ಲದು. ಪಾದರಸ ನೀರಿಗಿಂತ ಸುಮಾರು 13 ಪಟ್ಟು ಹೆಚ್ಚು ಭಾರ. ಅಂದರೆ, ಪಾದರಸದ ಬದಲಿಗೆ ಕೊಳವೆಯಲ್ಲಿ ನೀರನ್ನು ತುಂಬಿದರೆ, ಹೃದಯ ಒಮ್ಮೆ ಒತ್ತಿದಾಗ ಆ ನೀರು ಸುಮಾರು ಒಂದೂವರೆ ಮೀಟರ್ ಎತ್ತರಕ್ಕೆ ಚಿಮ್ಮಬಲ್ಲದು! ರಕ್ತದ ಶೇಕಡಾ 90 ಕ್ಕಿಂತ ಅಧಿಕ ಭಾಗ ನೀರಿನ ಅಂಶವೇ ಆಗಿರುವುದರಿಂದ, ರಕ್ತವೂ ಸುಮಾರು ಇಷ್ಟೇ ಎತ್ತರಕ್ಕೆ ಚಿಮ್ಮುತ್ತದೆ.

ಶರೀರದ ಅಂಗಗಳಿಗೆ ರಕ್ತದ ಹರಿವು ಕಡಿಮೆಯಾದರೆ, ಅವು ಹೃದಯಕ್ಕೆ ಸಂದೇಶ ಕಳಿಸಿ, ಮಿದುಳಿಗೆ ದೂರು ನೀಡುತ್ತವೆ. ಇದರಿಂದ ಹೃದಯ ತನ್ನ ಗತಿಯನ್ನು ಏರಿಸಿಕೊಂಡು, ಪ್ರತೀ ನಿಮಿಷಕ್ಕೆ ಹೆಚ್ಚು ಬಾರಿ ಬಡಿಯಲು ಆರಂಭಿಸುತ್ತದೆ. ಅಲ್ಲದೇ, ತನ್ನ ಸ್ನಾಯುಗಳ ಒತ್ತಡದ ಬಲವನ್ನೂ ಹಿಗ್ಗಿಸುತ್ತದೆ. ಹೀಗೆ, ಅಂಗಾಂಗಗಳಿಗೆ ಹೆಚ್ಚಿನ ರಕ್ತದ ಪೂರೈಕೆ ಆಗುತ್ತದೆ. ಈ ರೀತಿಯಲ್ಲಿ ಸಾಮಾನ್ಯಕ್ಕಿಂತ ಮೂರು ಪಟ್ಟು ಹೆಚ್ಚು ರಕ್ತವನ್ನು ಪಂಪ್ ಮಾಡುವ ಸಾಮರ್ಥ್ಯ ಹೃದಯಕ್ಕಿದೆ. ಚೆನ್ನಾಗಿ ತರಬೇತಿಗೊಂಡ ಕ್ರೀಡಾಪಟುಗಳಲ್ಲಿ ಈ ಸಾಮರ್ಥ್ಯ ಇನ್ನೂ ಹೆಚ್ಚಾಗಬಹುದು. ವ್ಯಾಯಾಮ, ಆತಂಕ, ಜ್ವರದಂತಹ ಸಂದರ್ಭಗಳಲ್ಲಿ ಶರೀರಕ್ಕೆ ಹೆಚ್ಚಿನ ರಕ್ತ ಪೂರೈಕೆಯ ಅಗತ್ಯವಿದೆ. ಹೀಗಾಗಿ, ಅಂತಹ ಸಂದರ್ಭಗಳಲ್ಲಿ ಹೃದಯದ ಬಡಿತ ಏರುತ್ತದೆ. ಗರ್ಭಿಣಿಯರಲ್ಲಿ ಅವರ ದೇಹದ ಅಗತ್ಯಗಳ ಜೊತೆಗೆ ಭ್ರೂಣದ ರಕ್ತಸಂಚಾರ ಕೂಡ ಆಗಬೇಕಾದ್ದರಿಂದ ಹೃದಯ ಹೆಚ್ಚು ಕಾರ್ಯಶೀಲವಾಗಿರುತ್ತದೆ. ಹೀಗಾಗಿ, ಹೃದಯದ ಕಾಯಿಲೆ, ದೌರ್ಬಲ್ಯ ಇರುವ ಸ್ತ್ರೀಯರಲ್ಲಿ ಗರ್ಭಧಾರಣೆ ಅಪಾಯಕಾರಿ ಆಗಬಹುದು.

ಹೃದಯದಲ್ಲಿ ನಾಲ್ಕು ಕವಾಟಗಳಿವೆ. ಎರಡು ಕವಾಟಗಳು ಹೃದಯದ ಕೋಣೆಗಳ ನಡುವೆ ಇದ್ದರೆ, ಉಳಿದೆರಡು ಹೃದಯದ ಪಂಪ್ ಮತ್ತು ಅದರಿಂದ ಹೊರಗೆ ಹೋಗುವ ರಕ್ತನಾಳಗಳ ನಡುವೆ ಇರುತ್ತವೆ. ರಕ್ತ ಸಂಚಾರಕ್ಕೆ ಅನುಗುಣವಾಗಿ ಈ ಕವಾಟಗಳು ಮುಚ್ಚಿ-ತೆರೆದು ಕೆಲಸ ಮಾಡುತ್ತವೆ. ಅನುಕ್ರಮವಾಗಿ ಕೋಣೆಗಳ ನಡುವಿನ ಕವಾಟಗಳು ತೆರೆದಿದ್ದಾಗ ರಕ್ತನಾಳಗಳ ಕವಾಟಗಳು ಮುಚ್ಚಿರುತ್ತವೆ. ಕವಾಟಗಳು ತೆರೆಯುವಾಗ ಆಗುವ ಸದ್ದು ಕೇಳಿಸುವುದಿಲ್ಲ. ಆದರೆ, ಕವಾಟಗಳು ಮುಚ್ಚುವಾಗ ಸದ್ದಾಗುತ್ತವೆ. ಹೀಗೆ, ಎರಡೂ ಬಗೆಯ ಕವಾಟಗಳು ಒಂದರ ಹಿಂದೊಂದು ಮುಚ್ಚುವಾಗ ಹೃದಯದ ‘ಲಬ್-ಡಬ್’ ಬಡಿತ ಆಗುತ್ತದೆ. ಈ ಕವಾಟಗಳ ಕೆಲಸದಲ್ಲಿ ಏರುಪೇರಾದಾಗ ಬಡಿತದ ಸದ್ದು ಬದಲಾಗುತ್ತದೆ. ಕೆಲವೊಮ್ಮೆ ರಕ್ತ ಹೃದಯದೊಳಗೆ ವಿರುದ್ಧ ದಿಕ್ಕಿನಲ್ಲೂ ಪ್ರವಹಿಸಬಹುದು. ಅನುಭವಿ ವೈದ್ಯರು ಸ್ಟೆಥೊಸ್ಕೋಪ್ ಮೂಲಕ ಈ ಬಡಿತದ ವಿನ್ಯಾಸಗಳನ್ನು ಕೇಳಿ, ಹೃದಯದ ಕಾರ್ಯದ ಬಗ್ಗೆ ಸಾಕಷ್ಟು ವಿವರಗಳನ್ನು ಪಡೆಯಬಲ್ಲರು. 

ಇಡೀ ಶರೀರಕ್ಕೆ ರಕ್ತ ಸರಬರಾಜು ಮಾಡುವ ಹೃದಯ, ಆ ರಕ್ತವನ್ನು ತನಗಾಗಿ ಬಳಸಿಕೊಳ್ಳಲು ಮಾತ್ರ ಕಂಜೂಸು ಮಾಡುತ್ತದೆ! ಇಡೀ ಶರೀರದ ರಕ್ತಸಂಚಯದ ಶೇಕಡಾ 5 ಮಾತ್ರ ಹೃದಯಕ್ಕೆ ಲಭ್ಯವಾಗುತ್ತದೆ. ಅದನ್ನು ಪಡೆಯಲು ಕೆಲವು ವಿಶಿಷ್ಟ ರಕ್ತನಾಳಗಳನ್ನು ಹೃದಯ ನಿರ್ಮಿಸಿಕೊಂಡಿದೆ. ಈ ರಕ್ತನಾಳಗಳ ಆಂತರಿಕ ವ್ಯಾಸ ಯಾವುದೇ ಕಾರಣಕ್ಕೂ ಕಿರಿದಾದರೆ, ರಕ್ತಸಂಚಾರಕ್ಕೆ ಅಡ್ಡಿಯುಂಟಾಗಿ ಹೃದಯಾಘಾತ ಆಗುತ್ತದೆ.

ಕೆಲವು ರೋಗಿಗಳಲ್ಲಿ ಮಿದುಳು ಕೆಲಸ ಮಾಡುವುದನ್ನು ನಿಲ್ಲಿಸಿದರೂ ಹೃದಯ ಇನ್ನೂ ಚುರುಕಾಗಿಯೇ ಇರುತ್ತದೆ. ಅಂತಹವರ ಶ್ವಾಸಕ್ರಿಯೆಯನ್ನು ಕೃತಕವಾಗಿ ವೆಂಟಿಲೇಟರ್ ಮೂಲಕ ಮುಂದುವರೆಸುತ್ತಾ ಹೃದಯದ ಸ್ವಸ್ಥತೆಯನ್ನು ಕಾಪಾಡಬಹುದು. ಮಿದುಳು ಕೆಲಸ ಮಾಡುವುದನ್ನು ನಿಲ್ಲಿಸಿದ ವ್ಯಕ್ತಿ ಹೆಚ್ಚು ಕಾಲ ಜೀವಂತವಿರಲು ಸಾಧ್ಯವಿಲ್ಲ. ಇನ್ನು ಕೆಲವು ರೋಗಿಗಳಲ್ಲಿ ಶರೀರದ ಇತರ ಭಾಗಗಳು ಕೆಲಸ ಮಾಡುತ್ತಿದ್ದರೂ, ಹೃದಯ ಮಾತ್ರ ದುರ್ಬಲವಾಗಿರಬಹುದು. ಇಂತಹ ಸಂದರ್ಭದಲ್ಲಿ ಇನ್ನೂ ಕೆಲಸ ಮಾಡುತ್ತಿರುವ ಮೊದಲ ರೋಗಿಯ ಹೃದಯವನ್ನು ಎರಡನೆಯ ರೋಗಿಗೆ ಕಸಿ ಮಾಡಬಹುದು. ಮೊದಲ ರೋಗಿಯ ಶರೀರದಿಂದ ತೆಗೆದ ಹೃದಯವನ್ನು ಸುಮಾರು 5-ಡಿಗ್ರಿ ಸೆಂಟಿಗ್ರೇಡ್ ತಾಪಮಾನದಲ್ಲಿ ಕೆಲವು ಪೋಷಕಾಂಶಗಳನ್ನು ನೀಡುತ್ತಾ ಸುಮಾರು 4 ಗಂಟೆಗಳ ಕಾಲ ಸ್ವಸ್ಥವಾಗಿ ಇಡಬಹದು. ಇಷ್ಟು ಕಾಲದಲ್ಲಿ ಅದನ್ನು ಎರಡನೆಯ ರೋಗಿಯ ಶರೀರದಲ್ಲಿ ಶಸ್ತ್ರಚಿಕಿತ್ಸೆಯ ಮೂಲಕ ಸೇರಿಸಬೇಕಾಗುತ್ತದೆ.

ಹೃದಯದ ಗಣಿತ ಸೋಜಿಗವಷ್ಟೇ ಅಲ್ಲ; ವೈದ್ಯರ ಪಾಲಿಗೆ ಅತ್ಯಂತ ಆವಶ್ಯಕ ಕೂಡ. ಗಣಿತದ ನೆರವಿಲ್ಲದೆ ಹೃದಯದ ರಕ್ಷಣೆ ಪೂರ್ಣವಾಗದು.

--------------------

 ಕುತೂಹಲಿ ವಿಜ್ಞಾನ ಮಾಸಪತ್ರಿಕೆಯ ಅಕ್ಟೋಬರ್ 2022ರ ಸಂಚಿಕೆಯಲ್ಲಿ ಪ್ರಕಟವಾದ ಲೇಖನ. ಮೂಲ ಲೇಖನದ ಕೊಂಡಿ: https://www.flipbookpdf.net/web/site/4b084c0e80bb2d5098c65789ba482437c2bbe711202210.pdf.html?fbclid=IwAR1LMnUDHpFKlzjAe6xr7W5dSgf5vAuGOliZnMGY6D-6UT8CGWZF0FvntZc

 



ಆತ್ಮವಿಶ್ವಾಸಕ್ಕೆ ಹತ್ತು ಸೂತ್ರಗಳು

ಡಾ. ಕಿರಣ್ ವಿ.ಎಸ್.

ವೈದ್ಯರು

ಆತ್ಮವಿಶ್ವಾಸ ಜೀವನದ ಅಗತ್ಯಗಳಲ್ಲಿ ಒಂದು. ಬದುಕಿನ ಪಯಣದಲ್ಲಿ ಮುನ್ನಡೆಯುವುದಕ್ಕಾಗಲೀ, ಸವಾಲುಗಳನ್ನು ಸ್ವೀಕರಿಸುವುದಕ್ಕಾಗಲೀ, ಗಮ್ಯಗಳನ್ನು ತಲುಪುವದಕ್ಕಾಗಲೀ, ಮುಂದಿನ ಗುರಿಗಳನ್ನು ನಿರ್ಧರಿಸುವುದಕ್ಕಾಗಲೀ ಆತ್ಮವಿಶ್ವಾಸ ಆವಶ್ಯಕ. ಅಹಂಕಾರವನ್ನು ಆತ್ಮವಿಶ್ವಾಸವೆಂದು ಭ್ರಮಿಸುವವರು ಮತ್ತು ಆತ್ಮವಿಶ್ವಾಸದ ಕೊರತೆಯನ್ನು ವಿನಯವೆಂದು ಭಾವಿಸುವವರು ಸಾಕಷ್ಟಿದ್ದಾರೆ. ಆತ್ಮವಿಶ್ವಾಸ ಇತರರ ಮುಂದೆ ತೋರ್ಪಡಿಕೆಗಿಂತ ನಮ್ಮ ಆಂತರ್ಯಕ್ಕೆ ತಿಳಿದಿರಬೇಕಾದ ಸತ್ಯ. ಅದು ಜನ್ಮತಃ ಬರಬೇಕೆಂದೇನೂ ಇಲ್ಲ. ಆತ್ಮವಿಶ್ವಾಸವನ್ನು ಪ್ರಯತ್ನಗಳಿಂದ, ತರಬೇತಿಯಿಂದ ರೂಡಿಸಿಕೊಳ್ಳಬಹುದು. ಧೃಢವಾದ ಆತ್ಮವಿಶ್ವಾಸವು ಜೀವನದ ಹಾದಿಯನ್ನೇ ಬದಲಿಸಬಲ್ಲದು. ಈ ದಿಶೆಯಲ್ಲಿ ಕೆಲವು ಸೂತ್ರಗಳನ್ನು ಅನುಸರಿಸಬಹುದು.

1.      ಧನಾತ್ಮಕ ಚಿಂತನೆಗಳು: ಋಣಾತ್ಮಕ ಚಿಂತನೆಗಳು ಆತ್ಮವಿಶ್ವಾಸದ ಹಾದಿಯಲ್ಲಿ ತೊಡಕಾಗಬಹುದು. ಇದನ್ನು ನಿಧಾನವಾಗಿ ಧನಾತ್ಮಕವಾಗಿ ಬದಲಾಯಿಸಬೇಕು. “ನನ್ನಿಂದಾಗದು” ಎನ್ನುವುದನ್ನು “ಪ್ರಯತ್ನಿಸುತ್ತೇನೆ” ಎಂಬ ಹಂತಕ್ಕೆ, “ಸೋತುಹೋಗುತ್ತೇನೆ” ಎಂಬ ಭಾವವನ್ನು “ಪ್ರಯತ್ನಿಸಿದರೆ ಸಫಲನಾಗಬಹುದು” ಎನ್ನುವ ಸ್ಥಿತಿಗೆ ಕೊಂಡೊಯ್ಯಬೇಕು. ಪ್ರತಿದಿನವೂ ಕನಿಷ್ಠ ಒಂದು ಧನಾತ್ಮಕ ಚಿಂತನೆಯನ್ನು ಮಾಡುತ್ತೇನೆಂದು ನಿರ್ಧರಿಸಿ, ಪಾಲಿಸಬೇಕು. ಮನಸ್ಸಿನಲ್ಲಿ ಋಣಾತ್ಮಕ ಚಿಂತನೆಗಳು ಮೂಡಿದಾದ ಗಮನವನ್ನು ಬೇರೆಡೆಗೆ ಹರಿಸಬೇಕು; ಧನಾತ್ಮಕ ಚಿಂತನೆಗಳನ್ನು ಘನೀಕರಿಸಬೇಕು. ಇದರಿಂದ ಮನಸ್ಸಿನಲ್ಲಿ ಆತ್ಮವಿಶ್ವಾಸದ ಕೇಂದ್ರಬಿಂದು ಮೂಡಿದಂತಾಗುತ್ತದೆ. ಈ ಕಾಲಘಟ್ಟದಲ್ಲಿ ನಮ್ಮನ್ನು ಪ್ರೋತ್ಸಾಹಿಸುವ ಕುಟುಂಬವರ್ಗ ಮತ್ತು ಸ್ನೇಹಿತರ ಜೊತೆಯಲ್ಲಿ ಬೆರೆಯುವುದು ಒಳ್ಳೆಯ ವಿಧಾನ; ಅನಗತ್ಯ ಟೀಕಾಕಾರರಿಂದ ದೂರವಿರುವುದು ಸೂಕ್ತ. 

2.     ಸೋಲು-ಗೆಲುವು: ಜೀವನದಲ್ಲಿ ಸೋಲು-ಗೆಲವುಗಳು ಜೊತೆಜೊತೆಯಾಗಿಯೇ ಹೋಗುತ್ತವೆ. ಗೆಲುವುಗಳನ್ನು ಮರೆತರೂ, ಸೋಲುಗಳು ಹೆಚ್ಚು ಕಾಲ ನೆನಪಿರುತ್ತವೆ. ಮುನ್ನಡೆಯುವ ಮನಸ್ಥಿತಿಯವರು ಸೋಲುಗಳು ಕಲಿಸುವ ಪಾಠಗಳನ್ನು ಮಾತ್ರ ಕಾಪಿಟ್ಟುಕೊಳ್ಳುತ್ತಾರೆ. ಆದರೆ ಋಣಾತ್ಮಕ ಚಿಂತನೆಯವರು ಸೋಲಿನ ಅನಗತ್ಯ ವಿವರಗಳನ್ನು ಮರೆಯಲಾಗದೆ ಕೊರಗುತ್ತಾರೆ. ಸೋಲಿನ ಭೌತಿಕ ಕುರುಹುಗಳನ್ನು ದೃಷ್ಟಿಯಿಂದ ದೂರ ಮಾಡುವುದು ಧನಾತ್ಮಕ ಚಿಂತನೆಯಲ್ಲಿ ಪರಿಣಾಮಕಾರಿ. ಸೋಲನ್ನು ಸದಾ ನೆನಪಿಸುವ ಯಾವ್ಯಾವ ಸಂಗತಿಗಳನ್ನು ಮರೆಯಬೇಕೆಂದು ಪಟ್ಟಿ ಮಾಡುವುದು ಸಹಾಯಕ. ಸೋಲಿನ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದನ್ನು ಕಲಿಯಬೇಕು. ಅಂತೆಯೇ, ವಿಜಯದ ಕುರುಹುಗಳನ್ನು ಕಣ್ಣಿಗೆ ಕಾಣುವಂತೆ ಇಡುವುದು ಒಳ್ಳೆಯದು. ಆದರೆ, ಆ ಗೆಲುವಿನ ನಶೆಯಲ್ಲೇ ಉಳಿಯಬಾರದು.

3.     ಬಲ-ದೌರ್ಬಲ್ಯ: ಪ್ರತಿಯೊಬ್ಬರಿಗೂ ಕೆಲವು ಬಲಗಳು, ದೌರ್ಬಲ್ಯಗಳು ಇರುತ್ತವೆ. ಅವುಗಳ ಪರಿಚಯ ಇರಬೇಕು. “ನಮ್ಮ ಕೌಶಲ್ಯಗಳ ಬಗೆ ಹೆಮ್ಮೆ ಇರಬೇಕು; ಹಮ್ಮು ಇರಬಾರದು” ಎನ್ನುವ ಮಾತಿದೆ. ಬರವಣಿಗೆ, ನೃತ್ಯ, ಚಿತ್ರಕಲೆ, ಸಂಗೀತ, ವಾಕ್ಪಟುತ್ವ, ಹೀಗೆ ನಮ್ಮ ಬಲ ಯಾವುದೋ ಅದನ್ನು ಮತ್ತಷ್ಟು ಬಲಗೊಳಿಸುವತ್ತ ದೈನಂದಿನ ಪ್ರಯತ್ನ ಇರಬೇಕು. ಅದಕ್ಕೆ ಸಂಬಂಧಿಸಿದ ಇತರ ಹವ್ಯಾಸಗಳನ್ನು ರೂಢಿಸಿಕೊಳ್ಳಬಹುದು. ಆಗ ಅದೇ ಕ್ಷೇತ್ರದಲ್ಲಿ ಸಾಧನೆ ಮಾಡಿರುವವರ ಪರಿಚಯವಾಗುತ್ತದೆ. ಇದರಿಂದ ನಮ್ಮ ಕೌಶಲ್ಯಕ್ಕೆ ಹೊಸ ಆಯಾಮಗಳು ದೊರೆತಂತಾಗುತ್ತದೆ. ಆ ವಿಷಯದಲ್ಲಿ ಮುಂದುವರೆದಷ್ಟೂ ಆತ್ಮವಿಶ್ವಾಸ ವೃದ್ಧಿಸುತ್ತದೆ. ಅದೇ ರೀತಿ ನಮ್ಮ ದೌರ್ಬಲ್ಯಗಳ ಪರಿಚಯವೂ ಇರಬೇಕು. ಅದನ್ನು ಪಟ್ಟಿ ಮಾಡಿ, ಒಂದೊಂದೇ ಅಂಶವನ್ನು ಬದಲಾಯಿಸಲು ನಾವು ಏನು ಮಾಡಬಹುದೆಂಬ ಆಲೋಚನೆಯೂ ದೌರ್ಬಲ್ಯಗಳ ಮೇಲೆ ನಮ್ಮ ನಿಯಂತ್ರಣವನ್ನು ಬೆಳೆಸುತ್ತದೆ. ಕೆಲವೊಮ್ಮೆ ಅಕಾರಣವಾಗಿ ನಾವು ದೌರ್ಬಲ್ಯವೆಂದು ಭಾವಿಸಿದ ಅಂಶ ಹಾಗಲ್ಲವೆಂದು ಅರಿತಾಗ ಆತ್ಮವಿಶ್ವಾಸ ಏರುತ್ತದೆ.

4.    ಅಭಿನಂದನೆಯ ಸ್ವೀಕಾರ: ಆತ್ಮವಿಶ್ವಾಸದ ಕೊರತೆ ಇರುವವರು ಹೊಗಳಿಕೆಯನ್ನು ಸಮಸ್ಥಿತಿಯಲ್ಲಿ ಸ್ವೀಕರಿಸಲಾರರು; ತಮಗೆ ಅಭಿನಂದನೆ ಸಲ್ಲಿಸುವವರನ್ನು ಅನುಮಾನದಿಂದಲೇ ನೋಡುತ್ತಾರೆ. ಈ ಮನಸ್ಥಿತಿಯಿಂದ ಹೊರಗೆ ಬರುವುದು ಸೂಕ್ತ. ನಮ್ಮ ಕುರಿತಾಗಿ ಒಳ್ಳೆಯ ಮಾತುಗಳನ್ನಾಡಿದವರಿಗೆ ನಗುಮೊಗದೊಡನೆ ಧನ್ಯವಾದಗಳನ್ನು ಹೇಳಿದರೆ ಅದನ್ನು ನೀಡಿದವರಿಗೂ ಸಾರ್ಥಕ ಎನಿಸುತ್ತದೆ. ಆತ್ಮವಿಶ್ವಾಸ ಬೆಳೆಯಲು ಇದೊಂದು ದಾರಿ. ನಮ್ಮ ಬಗ್ಗೆ ನಮಗೇ ಅನುಮಾನವಿದ್ದಾಗ ಒಳ್ಳೆಯ ಭಾವ ಮೂಡುವುದಿಲ್ಲ. ಹಾಗೆಯೇ, ಸುಳ್ಳು ಮಾತುಗಳನ್ನು ಆಡುತ್ತಾ, ನಮ್ಮಲ್ಲಿ ಇಲ್ಲದ ಗುಣಗಳನ್ನು ನಮಗೆ ಆರೋಪಿಸುವವರನ್ನು ಸಾಧ್ಯವಾದಷ್ಟೂ ದೂರ ಇಡಬೇಕು. ಇದನ್ನು ಮಾಡಲು ನಮ್ಮ ಬಲ-ದೌರ್ಬಲ್ಯಗಳ ಬಗ್ಗೆ ಸರಿಯಾದ ಅರಿವು ಇರುವುದು ಮುಖ್ಯವಾಗುತ್ತದೆ. ಇಲ್ಲವಾದರೆ ಸುಳ್ಳು ಹೊಗಳಿಕೆಯ ಹೊನ್ನಶೂಲಕ್ಕೆ ಏರಿದಂತಾಗುತ್ತದೆ.

5.     ಭೀತಿ-ಆತಂಕ: ಬದುಕಿನಲ್ಲಿ ಭೀತಿ, ಆತಂಕಗಳು ಸಹಜ. ನಮ್ಮ ಹಿಂಜರಿಕೆಗಳನ್ನು ಮೀರುವುದು ಬೆಳವಣಿಗೆಯ ಚಿಹ್ನೆ. ಇದು ಏಕಾಏಕಿ ಆಗುವಂಥದ್ದಲ್ಲ. ಇದಕ್ಕೆ ಸಮಯ ನೀಡಬೇಕು. ಆರಂಭದ ಹಿನ್ನಡೆಗಳಿಗೆ ಸಿದ್ಧರಾಗಿರಬೇಕು. ಈ ಹಾದಿಯಲ್ಲಿ ಗೆಲುವು ಮತ್ತು ಅನುಭವ ಎಂಬ ಎರಡು ಆಯ್ಕೆಗಳು ಇರುತ್ತವೆ. ಯಾವುದನ್ನೂ ಸೋಲು ಎಂದು ಭಾವಿಸದಿದ್ದರೆ, ಆಯಾ ಪ್ರಸಂಗದ ಅನುಭವ ನಮ್ಮನ್ನು ಮುಂದಿನ ಪ್ರಯತ್ನಕ್ಕೆ ಸಜ್ಜಾಗಿಸುತ್ತದೆ. ಕೈಯಿಟ್ಟ ಕೆಲಸ ಏಕೆ ಆಗಲಿಲ್ಲ? ನಮ್ಮ ವಿಧಾನವನ್ನು ಬದಲಾಯಿಸಿಕೊಳ್ಳಬಹುದೇ? ಕೆಲಸ ಸಾಧಿಸಲು ಯಾವ ಮಾರ್ಗಗಳಿವೆ? ಈ ಮಾರ್ಗಗಳ ಪೈಕಿ ನಮ್ಮ ವೈಯಕ್ತಿಕ ಕೌಶಲ್ಯಕ್ಕೆ ಯಾವ ಹಾದಿ ಸೂಕ್ತ? ಈ ಮೊದಲಾದ ಪ್ರಶ್ನೆಗಳು ಅನುಭವದ ಮೂಲಕ ಬರುತ್ತವೆ. ಇಂತಹ ಒಳನೋಟಗಳು ಆತ್ಮವಿಶ್ವಾಸ ಹೆಚ್ಚಿಸಲು ಸಹಕಾರಿ. ಈ ನಿಟ್ಟಿನಲ್ಲಿ ಬಹಳ ತಾಳ್ಮೆ ಬೇಕು. ಆರಂಭದ ವೈಫಲ್ಯಗಳ ಬಗ್ಗೆ ಕೊರಗಿ, ದುಡುಕಿನ ನಿರ್ಧಾರ ತೆಗೆದುಕೊಳ್ಳುವ ವಿರುದ್ಧ ಮನಸ್ಸನ್ನು ಸಜ್ಜಾಗಿಸಬೇಕು.

6.     ಏಕಾಗ್ರತೆಯ ಅಗತ್ಯ: ಹೊಸ ಪ್ರಯತ್ನದ ಸಮಯದಲ್ಲಿ ಸಾಕಷ್ಟು ಕಾಲಾವಕಾಶಕ್ಕೆ ಎಡೆಯಿರಬೇಕು. ಹತ್ತಾರು ಕೆಲಸಗಳ ನಡುವೆ ಅರೆಮನಸ್ಕರಾಗಿ ಮಾಡುವ ಪ್ರಯತ್ನಗಳು ವಿಫಲವಾಗುವ ಸಾಧ್ಯತೆಗಳೇ ಅಧಿಕ. ಸಾಧನೆಯೆಂಬುದು ಸಮಯ ಮತ್ತು ಪ್ರಯತ್ನಗಳನ್ನು ಬಯಸುತ್ತದೆ. ಅವುಗಳನ್ನು ನೀಡಲು ಸಾಧ್ಯವಾಗದಿದ್ದರೆ, ಪ್ರಯತ್ನದಿಂದ ಪಲಾಯನ ಮಾಡದೇ, ಸೂಕ್ತವಾದ ಸಮಯಕ್ಕೆ ವರ್ಗಾಯಿಸಬೇಕು. ಸಬೂಬುಗಳಿಂದ ಇತರರನ್ನು ನಂಬಿಸಬಹುದೇ ಹೊರತು, ನಮ್ಮ ಮನಸ್ಸನ್ನಲ್ಲ. ಹಿಮ್ಮೆಟ್ಟುವ ಪ್ರಕ್ರಿಯೆ ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ.

7.     ಹೋಲಿಕೆಯ ವೈಫಲ್ಯ: “ಹೋಲಿಕೆ ಮಾಡಿಕೊಳ್ಳುವವರಿಗೆ ಸಂತೃಪ್ತಿಯಿಲ್ಲ” ಎನ್ನುವ ಮಾತಿದೆ. ನೆನ್ನೆಗಿಂತ ನಾಳೆ ಚಂದವಾಗಿರಬೇಕೆಂದರೆ ನಮಗೆ ನಾವೇ ಹೋಲಿಕೆಯಾಗಬೇಕು. ಪ್ರತಿಯೊಬ್ಬರ ಜೀವನದ ಹಾದಿ, ಸವಾಲುಗಳು ವಿಭಿನ್ನ. ಹೀಗಾಗಿ, ಯಾರದ್ದೋ ಸಾಧನೆಗೆ ಮತ್ತೊಬ್ಬರ ಬೆಳವಣಿಗೆ ಹೋಲಿಕೆಯಾಗುವುದಿಲ್ಲ. ನಮಗೇನು ಬೇಕೆಂಬುದು ನಮಗೆ ತಿಳಿದಿರಬೇಕು. ಅದನ್ನು ಇತರರ ಜೊತೆಗೆ ಹೋಲಿಸುವುದು ಅರ್ಥಹೀನ. ಈ ನಿಟ್ಟಿನಲ್ಲಿ ಪ್ರಾಮಾಣಿಕ ಆತ್ಮಾವಲೋಕನ ಸಹಕಾರಿ. ಸಾಮಾಜಿಕ ಜಾಲತಾಣಗಳಲ್ಲಿ ಕಾಣುವ ಮಂದಿ ತಮಗೆ ಬೇಕಾದ ವಿಷಯಗಳನ್ನು ಮಾತ್ರ ಪ್ರಸ್ತಾಪಿಸುತ್ತಾರೆ. ಅದನ್ನು ನೋಡಿ ಅವರ ಬಗ್ಗೆ ಏನೇನೋ ಕಲ್ಪಿಸಿಕೊಂಡು, ಅವರ ಹೋಲಿಕೆಯಲ್ಲಿ ನಮ್ಮ ಕೊರತೆಗಳನ್ನು ಕುರಿತು ಕೊರಗುವುದು ಹಾಸ್ಯಾಸ್ಪದವಾಗುತ್ತದೆ.

8.     ತಪ್ಪುಗಳ ನಿರ್ವಹಣೆ: ತಪ್ಪು ಮಾಡದವರು ಯಾರೂ ಇಲ್ಲ. ಆದರೆ ತಪ್ಪನ್ನು ನಾವು ಹೇಗೆ ನಿರ್ವಹಿಸುತ್ತೇವೆಂಬುದು ಮುಖ್ಯ. ತಪ್ಪನ್ನು ಗುರುತಿಸಿ, ನಮ್ಮ ತಪ್ಪಿನಿಂದ ಯಾರಿಗಾದರೂ ತೊಂದರೆಯಾಗಿದ್ದರೆ ಅವರ ಕ್ಷಮೆ ಬೇಡಿ, ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ಮಾಡುವುದು, ಮುಂದಿನ ಬಾರಿ ಇಂತಹ ತಪ್ಪಾಗದಂತೆ ಎಚ್ಚರ ವಹಿಸುವುದು ಆತ್ಮವಿಶ್ವಾಸದ ವೃದ್ಧಿಗೆ ಸಹಕಾರಿ. ತಪ್ಪನ್ನೇ ಕುರಿತಾಗಿ ಆಲೋಚಿಸುತ್ತಾ ಕೊರಗುವುದು ತಪ್ಪನ್ನು ಹಲವಾರು ಬಾರಿ ಮರುಕಳಿಸಿದಂತೆ. ಹಿಂದೆ ಮಾಡಿದ ತಪ್ಪು ನಮ್ಮ ಭವಿಷ್ಯದ ಸೂಚಕವಲ್ಲ. ಅದನ್ನು ಸರಿತಿದ್ದುವ ನೂರಾರು ಸಾಧ್ಯತೆಗಳು ಜೀವನದ ಉದ್ದಕ್ಕೂ ದೊರೆಯುತ್ತವೆ.

9.     ಪರಿಪೂರ್ಣತೆಯೆಂಬ ಗೀಳು: ಪರಿಪೂರ್ಣತೆ ಚಂದವೆನಿಸಿದರೂ ಅದು ಗೀಳಾಗಬಾರದು. ಯಾವುದೇ ಸಂಗತಿ ಗೀಳಿನ ಸ್ವರೂಪ ಪಡೆದರೆ ಹಲವಾರು ಅವಕಾಶಗಳು ಕೈತಪ್ಪಿ ಹೋಗಬಹುದು. ಮಾಡುವ ಕೆಲಸವನ್ನು ತಪ್ಪುಗಳಿಗೆ ಆಸ್ಪದವಿಲ್ಲದಂತೆ ತೃಪ್ತಿಕರವಾಗಿ ಮಾಡಿದರೆ ಸಾಕಾಗುವಾಗ ಅದಕ್ಕೆ ಪರಿಪೂರ್ಣತೆಯ ಅಗತ್ಯ ಬರುವುದಿಲ್ಲ. ಪರಿಪೂರ್ಣತೆಯ ಗೀಳು ಆತ್ಮವಿಶ್ವಾಸದ ಸಾಧನೆಗೆ ಅಡ್ಡಿಯಾಗಬಹುದು; ಕೌಟುಂಬಿಕ ಮತ್ತು ವೃತ್ತಿ ಸಂಬಂಧಗಳನ್ನು ಹದಗೆಡಿಸಬಹುದು.

10.   ಕೃತಜ್ಞತೆ: ನಮ್ಮ ಬೆಂಬಲಕ್ಕೆ ನಿಲ್ಲುವವರ ಬಗ್ಗೆ ಪ್ರಾಮಾಣಿಕ ಕೃತಜ್ಞತಾಭಾವ ಇರುವುದು ಮುಖ್ಯ. ಇದರಿಂದ ಮನಸ್ಸಿನ ಶಾಂತಿ ಬೆಳೆಯುತ್ತದೆ. ಜೀವನದ ಸೊಬಗನ್ನು ಬೆಳೆಸುತ್ತಿರುವ ಸ್ನೇಹಿತರ, ಆತ್ಮೀಯರ ಪಟ್ಟಿ ಮಾಡುವುದರಿಂದ ನಮ್ಮ ನೆರವಿಗೆ ನಿಲ್ಲಬಲ್ಲವರ ಬಗ್ಗೆ ಕೃತಜ್ಞತೆ ಮೂಡುತ್ತದೆ. ಇದು ಮನಸ್ಸಿನ ಸ್ಥೈರ್ಯವನ್ನು ಹಿಗ್ಗಿಸುತ್ತದೆ. ಆತ್ಮವಿಶ್ವಾಸ ಬೆಳೆಯಲು ಇದೊಂದು ಪ್ರಮುಖ ಮಾರ್ಗ.  

--------------

ದಿನಾಂಕ 20/9/2022 ರ ಪ್ರಜಾವಾಣಿಯ ಕ್ಷೇಮ ಕುಶಲ ವಿಭಾಗದಲ್ಲಿ ಪ್ರಕಟವಾದ ಲೇಖನ. ಕೊಂಡಿ: https://www.prajavani.net/health/ten-formulas-for-self-confidence-973382.html