ಭಾನುವಾರ, ಸೆಪ್ಟೆಂಬರ್ 4, 2022

 

ನಮ್ಮ ಶರೀರದ ಗಣಿತ

ಡಾ. ಕಿರಣ್ ವಿ. ಎಸ್.

ವೈದ್ಯರು

“ಸೃಷ್ಟಿ ನಿರ್ಮಾಣದಲ್ಲಿ ಯಾವುದಾದರೂ ಭಾಷೆಯ ಬಳಕೆ ಆಗಿದ್ದರೆ, ಅದು ನಿಸ್ಸಂಶಯವಾಗಿ ಗಣಿತವೇ” ಎಂದು ವಿಜ್ಞಾನಿಗಳ ಅನುಭವದ ಮಾತು. ಇದನ್ನು ವಿಶದಪಡಿಸಲು ಒಂದು ಕುತೂಹಲಕಾರಿ ತರ್ಕವನ್ನು ಕೆಲ ವಿಜ್ಞಾನಿಗಳು ಮುಂದಿಡುತ್ತಾರೆ. ಮಾನವ ಶರೀರದ ಅಧ್ಯಯನ ಎಂದರೆ, ಜೀವಶಾಸ್ತ್ರ. ಆದರೆ, ಶರೀರ ಸಾವಿರಾರು ರಾಸಾಯನಿಕ ಸಂಯುಕ್ತಗಳಿಂದ ಆಗಿದೆಯಷ್ಟೇ? ಹೀಗಾಗಿ, ಜೀವಶಾಸ್ತ್ರದ ಅಧ್ಯಯನದ ಮೂಲ ರಸಾಯನ ಶಾಸ್ತ್ರ ಎಂದಾಯಿತು. ರಾಸಾಯನಿಕ ಸಂಯುಕ್ತಗಳು ಮೂಲತಃ ಪರಮಾಣುಗಳಿಂದಲೇ ಆಗಿವೆ. ಪರಮಾಣುಗಳ ರಚನೆ, ಕಾರ್ಯವನ್ನು ವಿವರಿಸುವುದು ಭೌತಶಾಸ್ತ್ರದ ಮೂಲಕ. ಅಂದರೆ, ರಸಾಯನ ಶಾಸ್ತ್ರದ ಆಧಾರ ಭೌತಶಾಸ್ತ್ರ. ಯಾವುದೇ ಭೌತವಿಜ್ಞಾನಿ ಅಂತಿಮವಾಗಿ ಭೌತಶಾಸ್ತ್ರದ ಅಧ್ಯಯನ ಮಾಡುವುದು ಗಣಿತೀಯ ಸಮೀಕರಣಗಳ ಮೂಲಕ. ಹೀಗಾಗಿ, ಗಣಿತವೇ ನಮ್ಮೆಲ್ಲ ಜ್ಞಾನದ ಅಡಿಪಾಯ ಎಂದು ಸಾಧಿಸಿದಂತಾಯಿತು! ಯಾವುದೇ ಅಧ್ಯಯನ – ಅದು ವಿಜ್ಞಾನವಾಗಲೀ, ಅರ್ಥಶಾಸ್ತ್ರವಾಗಲೀ, ಸಾಮಾಜಿಕ ಸಂಶೋಧನೆಯಾಗಲೀ – ಕಡೆಗೆ ನೆರವು ಪಡೆಯುವುದು ಗಣಿತದಲ್ಲಿಯೇ.

ನಮ್ಮ ಶರೀರದ ಆರೋಗ್ಯ-ಅನಾರೋಗ್ಯಗಳನ್ನು ತಿಳಿಸಲು ಅಂಕಿಗಳು ಬಹಳ ನೆರವಾಗಿವೆ. ರಕ್ತದಲ್ಲಿನ ಸಕ್ಕರೆಯ ಅಂಶ ಹೆಚ್ಚಾಗಿದೆ ಎಂದರೆ, ಕೂಡಲೇ ಮಧುಮೇಹದ ಪರೀಕ್ಷೆ ಮಾಡಿಸಬೇಕು. ಥೈರಾಯ್ಡ್ ಚೋದಕಗಳ ಮಟ್ಟ ಕಡಿಮೆ ಆಗಿದೆ ಎಂದರೆ ಗಳಗಂಡದ ಪರೀಕ್ಷೆ ಆಗಬೇಕು. ಪ್ರಯೋಗಾಲಯದಲ್ಲಿ ಒಂದು ಚಮಚೆ ರಕ್ತ ತೆಗೆದುಕೊಂಡು ಹತ್ತು ಪುಟಗಳ ರಿಪೋರ್ಟ್ ನೀಡುತ್ತಾರೆ! ಪ್ರತಿಯೊಂದು ಪುಟದಲ್ಲೂ ಹತ್ತಾರು ಅಂಕಿಗಳು. ಮೆದುಳಿನ ಸಾಮರ್ಥ್ಯದಿಂದ ಹಿಡಿದು ಬೆವರಿನ ರಾಸಾಯನಿಕಗಳ ಮಟ್ಟದವರೆಗೆ ಅಂಕಿಗಳು ದೇಹದಲ್ಲಿ ಸರ್ವವ್ಯಾಪಿ.

ದೇಹದ ವಿಷಯದಲ್ಲಿ ಕೆಲವು ಅಂಕಿಗಳು ಸರಳ; ಕೆಲವು ಊಹಿಸಲೂ ಸಾಧ್ಯವಾದಷ್ಟು ಕಠಿಣ. ತಲೆಬುರುಡೆಯ ಒಳಗೆ ಭದ್ರವಾಗಿ ಕುಳಿತಿರುವ ಮೆದುಳಿನಲ್ಲಿ ಎರಡು ಅರೆಗೋಳಗಳಿವೆ. ಇದು ಸರಳ ಅಂಕಿ. ಮೆದುಳಿನಲ್ಲಿ ಒಟ್ಟು ಹತ್ತುಸಾವಿರ ಕೋಟಿ (ಒಂದರ ಮುಂದೆ ಹನ್ನೊಂದು ಸೊನ್ನೆಗಳು) ನರಕೋಶಗಳಿವೆ ಎಂದಾಗ ಆ ಸಂಖ್ಯೆ ಒಂದೇ ಏಟಿಗೆ ಅಂದಾಜಿಗೆ ಸಿಗಲಾರದು. ಈ ಪಾಟಿ ಸಂಖ್ಯೆಯ ನರಕೋಶಗಳು ತಂತಮ್ಮ ನಡುವೆ ಸುಮಾರು ಎರಡು ಕೋಟಿ ಕೋಟಿ (ಎರಡರ ಮುಂದೆ ಹದಿನಾಲ್ಕು ಸೊನ್ನೆಗಳು) ಸಂಪರ್ಕಗಳನ್ನು ಸಾಧಿಸುತ್ತವೆ ಎಂದರೆ, ಆ ಸಂಖ್ಯೆಯ ಗಾತ್ರ ಊಹೆಗೆ ನಿಲುಕುವುದೂ ಕಷ್ಟ! “ಈ ಲೆಕ್ಕಾಚಾರಗಳು ಏಕೆ ಬೇಕು? ಇವೆಲ್ಲಾ ಕೂದಲು ಎಣಿಸುವ ಕೆಲಸದಷ್ಟೇ ವ್ಯರ್ಥ” ಎಂದು ಯಾರಾದರೂ ಹೇಳಿದರೆ, “ಹುಲುಸಾಗಿ ಕೂದಲು ಉಳ್ಳ ಮಾನವನ ತಲೆಯಲ್ಲಿ ಸುಮಾರು ಒಂದು ಲಕ್ಷ ಕೂದಲ ತಂತುಗಳಿವೆ” ಎನ್ನುವ ಉತ್ತರವೂ ಸಿದ್ಧವಿದೆ. ಒಟ್ಟಿನಲ್ಲಿ, ನಾವು ಗಣಿತವನ್ನು ಬಿಟ್ಟರೂ ಗಣಿತ ನಮ್ಮನ್ನು ಬಿಡಲಾರದು.

ಮೆದುಳು ಅಂತಿರಲಿ; ಅದರ ಬಗ್ಗೆ ತಿಳಿದಿರುವುದಕ್ಕಿಂತ ತಿಳಿಯದ್ದೇ ಹೆಚ್ಚು. ನಮ್ಮ ವಿವೇಚನೆಗೆ ದಕ್ಕುವ ಶ್ವಾಸಕೋಶಗಳನ್ನು ನೋಡೋಣ. ಎದೆಗೂಡಿನಲ್ಲಿ ಎರಡು ಶ್ವಾಸಕೋಶಗಳಿವೆ. ಮೂಗಿನಿಂದ ಸೆಳೆದ ಗಾಳಿ ಶ್ವಾಸನಾಳಕ್ಕೆ ಇಳಿದು, ಅಲ್ಲಿಂದ ಎರಡು ಕವಾಲಾಗಿ ಒಡೆದು ಎರಡೂ ಶ್ವಾಸಕೋಶಗಳನ್ನು ಸೇರಿ ಮತ್ತೆ ಮತ್ತೆ ಕವಲುಗಳಾಗಿ ಒಡೆಯುತ್ತಲೇ ಹೋಗುತ್ತದೆ. ಹೀಗೆ, ಒಂದು ಎರಡಾಗಿ, ಎರಡು ನಾಲ್ಕಾಗಿ, ನಾಲ್ಕು ಎಂಟಾಗಿ, ಎಂಟು ಹದಿನಾರಾಗಿ ಮುಂದುವರೆದು, ಒಟ್ಟು 23 ಬಾರಿ ಕವಲು ಒಡೆಯುತ್ತದೆ. ಈ ಸರಣಿಯ ಅತ್ಯಂತ ಕೊನೆಯ ಕವಲು ಒಂದು ಸಣ್ಣ ಬಲೂನಿನಂತಹ ರಚನೆಯಲ್ಲಿ ಕೊನೆಗೊಳ್ಳುತ್ತದೆ. ಉಸಿರಿನ ಆಕ್ಸಿಜನ್ ಮತ್ತು ದೇಹದ ಕಾರ್ಬನ್ ಡೈಆಕ್ಸೈಡ್ ಪರಸ್ಪರ ವಿನಿಯೋಗವಾಗುವುದು ಈ ಬಲೂನಿನಲ್ಲಿಯೇ. ಒಟ್ಟು 23 ಕವಲುಗಳು ಒಡೆದ ನಂತರ ಶ್ವಾಸಕೋಶಗಳಲ್ಲಿ ಇಂತಹ ಎಷ್ಟು ಬಲೂನುಗಳು ಇರಬಹುದು? ಆ ಸಂಖ್ಯೆಯನ್ನು ಉಸಿರು ಬಿಗಿ ಹಿಡಿದು ಕೇಳಬೇಕು. ಉತ್ತರ: ಸುಮಾರು 60 ಕೋಟಿ! ಗಣಿತದ ಹಿನ್ನೆಲೆ ಇಲ್ಲದಿದ್ದರೆ ಈ ಸಂಖ್ಯೆಯನ್ನು ಊಹಿಸುವುದೂ ಅಸಾಧ್ಯ.

ನಮ್ಮ ದೇಹದ ಸಮಸ್ತ ಕ್ರಿಯೆಗಳ ನಿರ್ವಹಣೆ ಮೆದುಳಿನದ್ದು. ಅದು ಕಣ್ಣಿನಿಂದ ನೋಡುವ ದೃಷ್ಟಿಯಾಗಲೀ, ಕಿವಿಯಿಂದ ಕೇಳುವ ಸದ್ದಾಗಲೀ, ಅಥವಾ ಹೃದಯಬಡಿತದ ಏರಿಳಿತವಾಗಲಿ – ಅದರ ವಿವರಗಳು ಮೆದುಳಿಗೆ ತಲುಪಲೇ ಬೇಕು. ಇಂದ್ರಿಯಗಳಿಂದ ಬಂದ ಮಾಹಿತಿಗಳ ಆಯಾ ಕ್ಷಣದ ಪರಿಸ್ಥಿತಿಯ ಲೆಕ್ಕಾಚಾರಗಳನ್ನು ಕ್ಷಣಮಾತ್ರದಲ್ಲಿ ಗ್ರಹಿಸಿ, ಏನು ಮಾಡಬೇಕೆಂಬ ವಿವರಗಳನ್ನು ಕೂಡಲೇ ಮಿಂಚಿನ ವೇಗದ ಮಾರೋಲೆಯಲ್ಲಿ ಕಳಿಸುವ ಮೆದುಳಿನ ಸಾಮರ್ಥ್ಯ ಯಾವುದೇ ಸೂಪರ್ ಕಂಪ್ಯೂಟರ್ ಗಿಂತ ಕಡಿಮೆಯದ್ದಲ್ಲ. ಈ ಸಂದೇಶಗಳ ಭಾಷೆ ಯಾವುದೇ ಆದರೂ ಅದಕ್ಕೆ ಗಣಿತವೇ ಅಡಿಪಾಯ!

ಶರೀರದ ಪ್ರಕ್ರಿಯೆಗಳು ಎಷ್ಟು ಸರಾಗವಾಗಿ ನಡೆಯುತ್ತಿವೆ ಎನ್ನುವ ಆಧಾರದ ಮೇಲೆ ಆಯಾ ಶರೀರ ಎಷ್ಟು ಆರೋಗ್ಯವಾಗಿದೆ ಎಂಬುದನ್ನು ನಿರ್ಧರಿಸಬಹುದು. ಅಂತೆಯೇ, ಈ ಕ್ರಿಯೆಗಳು ಹದಗೆಟ್ಟಾಗ ಯಾವುದೋ ಅನಾರೋಗ್ಯ ಆವರಿಸಿದೆ ಎಂದೂ ತಿಳಿಯಬಹುದು. ಇದು “ಹೌದು / ಇಲ್ಲ” ಎನ್ನುವ ಮಾತಾಯಿತು. “ಆರೋಗ್ಯ ಎಷ್ಟು ಹದಗೆಟ್ಟಿದೆ?” ಎಂದು ತಿಳಿಯುವುದು ಹೇಗೆ? ಈ “ಎಷ್ಟು” ಎನ್ನುವ ನಿರ್ಧಾರಕ್ಕೆ ಅಂದಾಜಿನ ಮಾಪನ ಸಾಲದು! ಅದಕ್ಕೆ ಇನ್ನೂ ತುಸು ನಿಖರವಾದ ಲೆಕ್ಕಾಚಾರವೇ ಬೇಕು. ಹೀಗೆ, ಯಾವುದೇ ಪ್ರಕ್ರಿಯೆಯ ಪರಿಮಾಣವನ್ನು ನಿರ್ಧರಿಸಲು ಅಂಕಿಗಳು ಬೇಕಾಗುತ್ತವೆ. ರಕ್ತದಲ್ಲಿ ಗ್ಲುಕೋಸ್ ಅಂಶ ಸರಾಸರಿ ಪ್ರತೀ ಮಿಲಿಲೀಟರ್ ಗೆ ಸುಮಾರು 100 ಮಿಲಿಗ್ರಾಂ ಇರಬೇಕು. ಇದು ಸರಾಸರಿ 150 ಕ್ಕೆ ಏರಿದರೆ ಮಧುಮೇಹದ ರೋಗಲಕ್ಷಣಗಳು ಕಾಣುವುದಿಲ್ಲವಾದರೂ, ನಿಗಾ ಬೇಕು. ಈ ಮಟ್ಟ ನಿರಂತರವಾಗಿ 200 ರ ಮೇಲೆಯೇ ಇದ್ದರೆ ಚಿಕಿತ್ಸೆಯನ್ನು ಮಾರ್ಪಡಿಸಬೇಕಾಗಬಹುದು. ಅದು 300 ಅನ್ನು ದಾಟಿದರೆ ಆಸ್ಪತ್ರೆಯ ನೆರವು ಬೇಕಾಗಬಹುದು. ರಕ್ತದ ಗ್ಲುಕೋಸ್ ಅಂಶವನ್ನು ನಿರ್ವಹಿಸುವ ಸಾಮರ್ಥ್ಯ, ರೋಗಲಕ್ಷಣಗಳು ಕಾಣುವಿಕೆ ಒಬ್ಬೊಬ್ಬ ಮಧುಮೇಹಿ ರೋಗಿಯಲ್ಲೂ ವಿಭಿನ್ನವಾಗಿರಬಹುದು. ಹೀಗಾಗಿ, ಚಿಕಿತ್ಸೆ ನೀಡಲು ಒಂದು ನಿರ್ದಿಷ್ಟ ಮಾನದಂಡ ಬೇಕಾಗುತ್ತದೆ. ಅದನ್ನು ಪೂರೈಸುವುದು ಗಣಿತ.

ಪ್ರಸ್ತುತ ಕೋವಿಡ್-19 ಸೋಂಕು ಆರಂಭವಾದ ನಂತರ “ರಕ್ತದಲ್ಲಿ ಆಕ್ಸಿಜನ್ ಮಟ್ಟ ಅಳೆಯುವ” ಆಕ್ಸಿಮೀಟರ್ ಬಗ್ಗೆ ಎಲ್ಲರಲ್ಲೂ ಮಾಹಿತಿಯಿದೆ. ಆಕ್ಸಿಜನ್ ಮಟ್ಟ 94 ಕ್ಕಿಂತ ಕಡಿಮೆ ಬಂದರೆ ಆತಂಕವೂ ಇದೆ. ಕೋವಿಡ್ ಲಕ್ಷಣಗಳು ಇಲ್ಲದವರೂ ದಿನಕ್ಕೆ ನಾಲ್ಕಾರು ಬಾರಿ ತಮ್ಮ ಆಕ್ಸಿಜನ್ ಮಟ್ಟ ಪರೀಕ್ಷೆ ಮಾಡಿಕೊಳ್ಳುತ್ತಲೇ ಇರುತ್ತಾರೆ. ಆದರೆ, ಈ ಮಟ್ಟ 100 ನ್ನು ಏಕೆ ದಾಟುವುದಿಲ್ಲ? 94 ಮತ್ತು ನೂರರ ನಡುವೆ ಇರುವ ಅಂತರ ಕೇವಲ 6 ಆಗಿದ್ದರೂ ಅಷ್ಟೊಂದು ಆತಂಕ ಏಕೆ? ಅಸಲಿಗೆ ಈ ಅಂಕಿಗಳು ಏನನ್ನು ನಿರ್ಧರಿಸುತ್ತವೆ? ವೈದ್ಯರು ಈ ಅಂಕಿಗಳ ನೆರವಿನಿಂದ ಶ್ವಾಸಕೋಶಗಳ ಕೆಲಸದ ಬಗೆಗಿನ ಯಾವ್ಯಾವ ಮಾಹಿತಿಯನ್ನು ಪಡೆಯುತ್ತಾರೆ? ಇಂತಹ ಪ್ರಶ್ನೆಗಳು ಕೆಲವರನ್ನಾದರೂ ಕಾಡಿರುತ್ತವೆ. ಇದಕ್ಕೆ ಉತ್ತರಗಳನ್ನು ಹೇಳುವುದಕ್ಕೂ ಬೇಕಾದ್ದು ಗಣಿತದ ತಳಪಾಯ.

ಶರೀರದಲ್ಲಿನ ಗಣಿತ ಅತ್ಯಂತ ಸೋಜಿಗದ ವಸ್ತು. ಗಣಿತದ ನೆರವು ಇಲ್ಲದೇ ಅನಾರೋಗ್ಯದ ನಿರ್ವಹಣೆ ಸಾಧ್ಯವೇ ಇಲ್ಲ ಎನ್ನುವ ಮಟ್ಟಕ್ಕೆ ಇಂದಿನ ವೈದ್ಯವಿಜ್ಞಾನ ತಲುಪಿದೆ. ಚಿಕಿತ್ಸೆ ನಿಖರವಾದಷ್ಟೂ ಗಣಿತದ ಅವಲಂಬನೆ ಅಧಿಕವಾಗುತ್ತದೆ. ಏಕೆಂದರೆ, ಗಣಿತದಷ್ಟೂ ನಿಖರವಾದ ವಿಜ್ಞಾನ ಜಗತ್ತಿನಲ್ಲಿ ಬೇರಾವುದೂ ಇಲ್ಲ! ಮುಂದಿನ ಕೆಲವು ಸಂಚಿಕೆಗಳಲ್ಲಿ ಶರೀರಕ್ಕೆ, ಆರೋಗ್ಯಕ್ಕೆ, ಅನಾರೋಗ್ಯಕ್ಕೆ ಸಂಬಂಧಿಸಿದ ಕೆಲವು ಗಣಿತೀಯ ತತ್ತ್ವಗಳನ್ನು ಅತ್ಯಂತ ಸರಳವಾಗಿ ಪರಿಚಯ ಮಾಡಿಕೊಳ್ಳುತ್ತಾ ಸಾಗೋಣ. ಈ ಕುತೂಹಲಕಾರಿ ಪಯಣಕ್ಕೆ ಎಲ್ಲರಿಗೂ ಆಹ್ವಾನವಿದೆ.

-----------------

ಸೆಪ್ಟೆಂಬರ್ 2022 ರ ಕುತೂಹಲಿ ವಿಜ್ಞಾನ ಮಾಸಪತ್ರಿಕೆಯಲ್ಲಿ ಪ್ರಕಟವಾದ ಲೇಖನ. ಕೊಂಡಿ: https://www.flipbookpdf.net/web/site/d86d956f5cfd1e06ae36763d6c471ec959e7f977202208.pdf.html?fbclid=IwAR0LH9qtSqhiAKfikgx0isA7Xj5VjjFMDNkioJ5TnEo6Y_FURKD3Y_qFLeQ  

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ