ಭಾನುವಾರ, ಸೆಪ್ಟೆಂಬರ್ 4, 2022

 

ನಮ್ಮ ಶರೀರದ ಗಣಿತ

ಡಾ. ಕಿರಣ್ ವಿ. ಎಸ್.

ವೈದ್ಯರು

“ಸೃಷ್ಟಿ ನಿರ್ಮಾಣದಲ್ಲಿ ಯಾವುದಾದರೂ ಭಾಷೆಯ ಬಳಕೆ ಆಗಿದ್ದರೆ, ಅದು ನಿಸ್ಸಂಶಯವಾಗಿ ಗಣಿತವೇ” ಎಂದು ವಿಜ್ಞಾನಿಗಳ ಅನುಭವದ ಮಾತು. ಇದನ್ನು ವಿಶದಪಡಿಸಲು ಒಂದು ಕುತೂಹಲಕಾರಿ ತರ್ಕವನ್ನು ಕೆಲ ವಿಜ್ಞಾನಿಗಳು ಮುಂದಿಡುತ್ತಾರೆ. ಮಾನವ ಶರೀರದ ಅಧ್ಯಯನ ಎಂದರೆ, ಜೀವಶಾಸ್ತ್ರ. ಆದರೆ, ಶರೀರ ಸಾವಿರಾರು ರಾಸಾಯನಿಕ ಸಂಯುಕ್ತಗಳಿಂದ ಆಗಿದೆಯಷ್ಟೇ? ಹೀಗಾಗಿ, ಜೀವಶಾಸ್ತ್ರದ ಅಧ್ಯಯನದ ಮೂಲ ರಸಾಯನ ಶಾಸ್ತ್ರ ಎಂದಾಯಿತು. ರಾಸಾಯನಿಕ ಸಂಯುಕ್ತಗಳು ಮೂಲತಃ ಪರಮಾಣುಗಳಿಂದಲೇ ಆಗಿವೆ. ಪರಮಾಣುಗಳ ರಚನೆ, ಕಾರ್ಯವನ್ನು ವಿವರಿಸುವುದು ಭೌತಶಾಸ್ತ್ರದ ಮೂಲಕ. ಅಂದರೆ, ರಸಾಯನ ಶಾಸ್ತ್ರದ ಆಧಾರ ಭೌತಶಾಸ್ತ್ರ. ಯಾವುದೇ ಭೌತವಿಜ್ಞಾನಿ ಅಂತಿಮವಾಗಿ ಭೌತಶಾಸ್ತ್ರದ ಅಧ್ಯಯನ ಮಾಡುವುದು ಗಣಿತೀಯ ಸಮೀಕರಣಗಳ ಮೂಲಕ. ಹೀಗಾಗಿ, ಗಣಿತವೇ ನಮ್ಮೆಲ್ಲ ಜ್ಞಾನದ ಅಡಿಪಾಯ ಎಂದು ಸಾಧಿಸಿದಂತಾಯಿತು! ಯಾವುದೇ ಅಧ್ಯಯನ – ಅದು ವಿಜ್ಞಾನವಾಗಲೀ, ಅರ್ಥಶಾಸ್ತ್ರವಾಗಲೀ, ಸಾಮಾಜಿಕ ಸಂಶೋಧನೆಯಾಗಲೀ – ಕಡೆಗೆ ನೆರವು ಪಡೆಯುವುದು ಗಣಿತದಲ್ಲಿಯೇ.

ನಮ್ಮ ಶರೀರದ ಆರೋಗ್ಯ-ಅನಾರೋಗ್ಯಗಳನ್ನು ತಿಳಿಸಲು ಅಂಕಿಗಳು ಬಹಳ ನೆರವಾಗಿವೆ. ರಕ್ತದಲ್ಲಿನ ಸಕ್ಕರೆಯ ಅಂಶ ಹೆಚ್ಚಾಗಿದೆ ಎಂದರೆ, ಕೂಡಲೇ ಮಧುಮೇಹದ ಪರೀಕ್ಷೆ ಮಾಡಿಸಬೇಕು. ಥೈರಾಯ್ಡ್ ಚೋದಕಗಳ ಮಟ್ಟ ಕಡಿಮೆ ಆಗಿದೆ ಎಂದರೆ ಗಳಗಂಡದ ಪರೀಕ್ಷೆ ಆಗಬೇಕು. ಪ್ರಯೋಗಾಲಯದಲ್ಲಿ ಒಂದು ಚಮಚೆ ರಕ್ತ ತೆಗೆದುಕೊಂಡು ಹತ್ತು ಪುಟಗಳ ರಿಪೋರ್ಟ್ ನೀಡುತ್ತಾರೆ! ಪ್ರತಿಯೊಂದು ಪುಟದಲ್ಲೂ ಹತ್ತಾರು ಅಂಕಿಗಳು. ಮೆದುಳಿನ ಸಾಮರ್ಥ್ಯದಿಂದ ಹಿಡಿದು ಬೆವರಿನ ರಾಸಾಯನಿಕಗಳ ಮಟ್ಟದವರೆಗೆ ಅಂಕಿಗಳು ದೇಹದಲ್ಲಿ ಸರ್ವವ್ಯಾಪಿ.

ದೇಹದ ವಿಷಯದಲ್ಲಿ ಕೆಲವು ಅಂಕಿಗಳು ಸರಳ; ಕೆಲವು ಊಹಿಸಲೂ ಸಾಧ್ಯವಾದಷ್ಟು ಕಠಿಣ. ತಲೆಬುರುಡೆಯ ಒಳಗೆ ಭದ್ರವಾಗಿ ಕುಳಿತಿರುವ ಮೆದುಳಿನಲ್ಲಿ ಎರಡು ಅರೆಗೋಳಗಳಿವೆ. ಇದು ಸರಳ ಅಂಕಿ. ಮೆದುಳಿನಲ್ಲಿ ಒಟ್ಟು ಹತ್ತುಸಾವಿರ ಕೋಟಿ (ಒಂದರ ಮುಂದೆ ಹನ್ನೊಂದು ಸೊನ್ನೆಗಳು) ನರಕೋಶಗಳಿವೆ ಎಂದಾಗ ಆ ಸಂಖ್ಯೆ ಒಂದೇ ಏಟಿಗೆ ಅಂದಾಜಿಗೆ ಸಿಗಲಾರದು. ಈ ಪಾಟಿ ಸಂಖ್ಯೆಯ ನರಕೋಶಗಳು ತಂತಮ್ಮ ನಡುವೆ ಸುಮಾರು ಎರಡು ಕೋಟಿ ಕೋಟಿ (ಎರಡರ ಮುಂದೆ ಹದಿನಾಲ್ಕು ಸೊನ್ನೆಗಳು) ಸಂಪರ್ಕಗಳನ್ನು ಸಾಧಿಸುತ್ತವೆ ಎಂದರೆ, ಆ ಸಂಖ್ಯೆಯ ಗಾತ್ರ ಊಹೆಗೆ ನಿಲುಕುವುದೂ ಕಷ್ಟ! “ಈ ಲೆಕ್ಕಾಚಾರಗಳು ಏಕೆ ಬೇಕು? ಇವೆಲ್ಲಾ ಕೂದಲು ಎಣಿಸುವ ಕೆಲಸದಷ್ಟೇ ವ್ಯರ್ಥ” ಎಂದು ಯಾರಾದರೂ ಹೇಳಿದರೆ, “ಹುಲುಸಾಗಿ ಕೂದಲು ಉಳ್ಳ ಮಾನವನ ತಲೆಯಲ್ಲಿ ಸುಮಾರು ಒಂದು ಲಕ್ಷ ಕೂದಲ ತಂತುಗಳಿವೆ” ಎನ್ನುವ ಉತ್ತರವೂ ಸಿದ್ಧವಿದೆ. ಒಟ್ಟಿನಲ್ಲಿ, ನಾವು ಗಣಿತವನ್ನು ಬಿಟ್ಟರೂ ಗಣಿತ ನಮ್ಮನ್ನು ಬಿಡಲಾರದು.

ಮೆದುಳು ಅಂತಿರಲಿ; ಅದರ ಬಗ್ಗೆ ತಿಳಿದಿರುವುದಕ್ಕಿಂತ ತಿಳಿಯದ್ದೇ ಹೆಚ್ಚು. ನಮ್ಮ ವಿವೇಚನೆಗೆ ದಕ್ಕುವ ಶ್ವಾಸಕೋಶಗಳನ್ನು ನೋಡೋಣ. ಎದೆಗೂಡಿನಲ್ಲಿ ಎರಡು ಶ್ವಾಸಕೋಶಗಳಿವೆ. ಮೂಗಿನಿಂದ ಸೆಳೆದ ಗಾಳಿ ಶ್ವಾಸನಾಳಕ್ಕೆ ಇಳಿದು, ಅಲ್ಲಿಂದ ಎರಡು ಕವಾಲಾಗಿ ಒಡೆದು ಎರಡೂ ಶ್ವಾಸಕೋಶಗಳನ್ನು ಸೇರಿ ಮತ್ತೆ ಮತ್ತೆ ಕವಲುಗಳಾಗಿ ಒಡೆಯುತ್ತಲೇ ಹೋಗುತ್ತದೆ. ಹೀಗೆ, ಒಂದು ಎರಡಾಗಿ, ಎರಡು ನಾಲ್ಕಾಗಿ, ನಾಲ್ಕು ಎಂಟಾಗಿ, ಎಂಟು ಹದಿನಾರಾಗಿ ಮುಂದುವರೆದು, ಒಟ್ಟು 23 ಬಾರಿ ಕವಲು ಒಡೆಯುತ್ತದೆ. ಈ ಸರಣಿಯ ಅತ್ಯಂತ ಕೊನೆಯ ಕವಲು ಒಂದು ಸಣ್ಣ ಬಲೂನಿನಂತಹ ರಚನೆಯಲ್ಲಿ ಕೊನೆಗೊಳ್ಳುತ್ತದೆ. ಉಸಿರಿನ ಆಕ್ಸಿಜನ್ ಮತ್ತು ದೇಹದ ಕಾರ್ಬನ್ ಡೈಆಕ್ಸೈಡ್ ಪರಸ್ಪರ ವಿನಿಯೋಗವಾಗುವುದು ಈ ಬಲೂನಿನಲ್ಲಿಯೇ. ಒಟ್ಟು 23 ಕವಲುಗಳು ಒಡೆದ ನಂತರ ಶ್ವಾಸಕೋಶಗಳಲ್ಲಿ ಇಂತಹ ಎಷ್ಟು ಬಲೂನುಗಳು ಇರಬಹುದು? ಆ ಸಂಖ್ಯೆಯನ್ನು ಉಸಿರು ಬಿಗಿ ಹಿಡಿದು ಕೇಳಬೇಕು. ಉತ್ತರ: ಸುಮಾರು 60 ಕೋಟಿ! ಗಣಿತದ ಹಿನ್ನೆಲೆ ಇಲ್ಲದಿದ್ದರೆ ಈ ಸಂಖ್ಯೆಯನ್ನು ಊಹಿಸುವುದೂ ಅಸಾಧ್ಯ.

ನಮ್ಮ ದೇಹದ ಸಮಸ್ತ ಕ್ರಿಯೆಗಳ ನಿರ್ವಹಣೆ ಮೆದುಳಿನದ್ದು. ಅದು ಕಣ್ಣಿನಿಂದ ನೋಡುವ ದೃಷ್ಟಿಯಾಗಲೀ, ಕಿವಿಯಿಂದ ಕೇಳುವ ಸದ್ದಾಗಲೀ, ಅಥವಾ ಹೃದಯಬಡಿತದ ಏರಿಳಿತವಾಗಲಿ – ಅದರ ವಿವರಗಳು ಮೆದುಳಿಗೆ ತಲುಪಲೇ ಬೇಕು. ಇಂದ್ರಿಯಗಳಿಂದ ಬಂದ ಮಾಹಿತಿಗಳ ಆಯಾ ಕ್ಷಣದ ಪರಿಸ್ಥಿತಿಯ ಲೆಕ್ಕಾಚಾರಗಳನ್ನು ಕ್ಷಣಮಾತ್ರದಲ್ಲಿ ಗ್ರಹಿಸಿ, ಏನು ಮಾಡಬೇಕೆಂಬ ವಿವರಗಳನ್ನು ಕೂಡಲೇ ಮಿಂಚಿನ ವೇಗದ ಮಾರೋಲೆಯಲ್ಲಿ ಕಳಿಸುವ ಮೆದುಳಿನ ಸಾಮರ್ಥ್ಯ ಯಾವುದೇ ಸೂಪರ್ ಕಂಪ್ಯೂಟರ್ ಗಿಂತ ಕಡಿಮೆಯದ್ದಲ್ಲ. ಈ ಸಂದೇಶಗಳ ಭಾಷೆ ಯಾವುದೇ ಆದರೂ ಅದಕ್ಕೆ ಗಣಿತವೇ ಅಡಿಪಾಯ!

ಶರೀರದ ಪ್ರಕ್ರಿಯೆಗಳು ಎಷ್ಟು ಸರಾಗವಾಗಿ ನಡೆಯುತ್ತಿವೆ ಎನ್ನುವ ಆಧಾರದ ಮೇಲೆ ಆಯಾ ಶರೀರ ಎಷ್ಟು ಆರೋಗ್ಯವಾಗಿದೆ ಎಂಬುದನ್ನು ನಿರ್ಧರಿಸಬಹುದು. ಅಂತೆಯೇ, ಈ ಕ್ರಿಯೆಗಳು ಹದಗೆಟ್ಟಾಗ ಯಾವುದೋ ಅನಾರೋಗ್ಯ ಆವರಿಸಿದೆ ಎಂದೂ ತಿಳಿಯಬಹುದು. ಇದು “ಹೌದು / ಇಲ್ಲ” ಎನ್ನುವ ಮಾತಾಯಿತು. “ಆರೋಗ್ಯ ಎಷ್ಟು ಹದಗೆಟ್ಟಿದೆ?” ಎಂದು ತಿಳಿಯುವುದು ಹೇಗೆ? ಈ “ಎಷ್ಟು” ಎನ್ನುವ ನಿರ್ಧಾರಕ್ಕೆ ಅಂದಾಜಿನ ಮಾಪನ ಸಾಲದು! ಅದಕ್ಕೆ ಇನ್ನೂ ತುಸು ನಿಖರವಾದ ಲೆಕ್ಕಾಚಾರವೇ ಬೇಕು. ಹೀಗೆ, ಯಾವುದೇ ಪ್ರಕ್ರಿಯೆಯ ಪರಿಮಾಣವನ್ನು ನಿರ್ಧರಿಸಲು ಅಂಕಿಗಳು ಬೇಕಾಗುತ್ತವೆ. ರಕ್ತದಲ್ಲಿ ಗ್ಲುಕೋಸ್ ಅಂಶ ಸರಾಸರಿ ಪ್ರತೀ ಮಿಲಿಲೀಟರ್ ಗೆ ಸುಮಾರು 100 ಮಿಲಿಗ್ರಾಂ ಇರಬೇಕು. ಇದು ಸರಾಸರಿ 150 ಕ್ಕೆ ಏರಿದರೆ ಮಧುಮೇಹದ ರೋಗಲಕ್ಷಣಗಳು ಕಾಣುವುದಿಲ್ಲವಾದರೂ, ನಿಗಾ ಬೇಕು. ಈ ಮಟ್ಟ ನಿರಂತರವಾಗಿ 200 ರ ಮೇಲೆಯೇ ಇದ್ದರೆ ಚಿಕಿತ್ಸೆಯನ್ನು ಮಾರ್ಪಡಿಸಬೇಕಾಗಬಹುದು. ಅದು 300 ಅನ್ನು ದಾಟಿದರೆ ಆಸ್ಪತ್ರೆಯ ನೆರವು ಬೇಕಾಗಬಹುದು. ರಕ್ತದ ಗ್ಲುಕೋಸ್ ಅಂಶವನ್ನು ನಿರ್ವಹಿಸುವ ಸಾಮರ್ಥ್ಯ, ರೋಗಲಕ್ಷಣಗಳು ಕಾಣುವಿಕೆ ಒಬ್ಬೊಬ್ಬ ಮಧುಮೇಹಿ ರೋಗಿಯಲ್ಲೂ ವಿಭಿನ್ನವಾಗಿರಬಹುದು. ಹೀಗಾಗಿ, ಚಿಕಿತ್ಸೆ ನೀಡಲು ಒಂದು ನಿರ್ದಿಷ್ಟ ಮಾನದಂಡ ಬೇಕಾಗುತ್ತದೆ. ಅದನ್ನು ಪೂರೈಸುವುದು ಗಣಿತ.

ಪ್ರಸ್ತುತ ಕೋವಿಡ್-19 ಸೋಂಕು ಆರಂಭವಾದ ನಂತರ “ರಕ್ತದಲ್ಲಿ ಆಕ್ಸಿಜನ್ ಮಟ್ಟ ಅಳೆಯುವ” ಆಕ್ಸಿಮೀಟರ್ ಬಗ್ಗೆ ಎಲ್ಲರಲ್ಲೂ ಮಾಹಿತಿಯಿದೆ. ಆಕ್ಸಿಜನ್ ಮಟ್ಟ 94 ಕ್ಕಿಂತ ಕಡಿಮೆ ಬಂದರೆ ಆತಂಕವೂ ಇದೆ. ಕೋವಿಡ್ ಲಕ್ಷಣಗಳು ಇಲ್ಲದವರೂ ದಿನಕ್ಕೆ ನಾಲ್ಕಾರು ಬಾರಿ ತಮ್ಮ ಆಕ್ಸಿಜನ್ ಮಟ್ಟ ಪರೀಕ್ಷೆ ಮಾಡಿಕೊಳ್ಳುತ್ತಲೇ ಇರುತ್ತಾರೆ. ಆದರೆ, ಈ ಮಟ್ಟ 100 ನ್ನು ಏಕೆ ದಾಟುವುದಿಲ್ಲ? 94 ಮತ್ತು ನೂರರ ನಡುವೆ ಇರುವ ಅಂತರ ಕೇವಲ 6 ಆಗಿದ್ದರೂ ಅಷ್ಟೊಂದು ಆತಂಕ ಏಕೆ? ಅಸಲಿಗೆ ಈ ಅಂಕಿಗಳು ಏನನ್ನು ನಿರ್ಧರಿಸುತ್ತವೆ? ವೈದ್ಯರು ಈ ಅಂಕಿಗಳ ನೆರವಿನಿಂದ ಶ್ವಾಸಕೋಶಗಳ ಕೆಲಸದ ಬಗೆಗಿನ ಯಾವ್ಯಾವ ಮಾಹಿತಿಯನ್ನು ಪಡೆಯುತ್ತಾರೆ? ಇಂತಹ ಪ್ರಶ್ನೆಗಳು ಕೆಲವರನ್ನಾದರೂ ಕಾಡಿರುತ್ತವೆ. ಇದಕ್ಕೆ ಉತ್ತರಗಳನ್ನು ಹೇಳುವುದಕ್ಕೂ ಬೇಕಾದ್ದು ಗಣಿತದ ತಳಪಾಯ.

ಶರೀರದಲ್ಲಿನ ಗಣಿತ ಅತ್ಯಂತ ಸೋಜಿಗದ ವಸ್ತು. ಗಣಿತದ ನೆರವು ಇಲ್ಲದೇ ಅನಾರೋಗ್ಯದ ನಿರ್ವಹಣೆ ಸಾಧ್ಯವೇ ಇಲ್ಲ ಎನ್ನುವ ಮಟ್ಟಕ್ಕೆ ಇಂದಿನ ವೈದ್ಯವಿಜ್ಞಾನ ತಲುಪಿದೆ. ಚಿಕಿತ್ಸೆ ನಿಖರವಾದಷ್ಟೂ ಗಣಿತದ ಅವಲಂಬನೆ ಅಧಿಕವಾಗುತ್ತದೆ. ಏಕೆಂದರೆ, ಗಣಿತದಷ್ಟೂ ನಿಖರವಾದ ವಿಜ್ಞಾನ ಜಗತ್ತಿನಲ್ಲಿ ಬೇರಾವುದೂ ಇಲ್ಲ! ಮುಂದಿನ ಕೆಲವು ಸಂಚಿಕೆಗಳಲ್ಲಿ ಶರೀರಕ್ಕೆ, ಆರೋಗ್ಯಕ್ಕೆ, ಅನಾರೋಗ್ಯಕ್ಕೆ ಸಂಬಂಧಿಸಿದ ಕೆಲವು ಗಣಿತೀಯ ತತ್ತ್ವಗಳನ್ನು ಅತ್ಯಂತ ಸರಳವಾಗಿ ಪರಿಚಯ ಮಾಡಿಕೊಳ್ಳುತ್ತಾ ಸಾಗೋಣ. ಈ ಕುತೂಹಲಕಾರಿ ಪಯಣಕ್ಕೆ ಎಲ್ಲರಿಗೂ ಆಹ್ವಾನವಿದೆ.

-----------------

ಸೆಪ್ಟೆಂಬರ್ 2022 ರ ಕುತೂಹಲಿ ವಿಜ್ಞಾನ ಮಾಸಪತ್ರಿಕೆಯಲ್ಲಿ ಪ್ರಕಟವಾದ ಲೇಖನ. ಕೊಂಡಿ: https://www.flipbookpdf.net/web/site/d86d956f5cfd1e06ae36763d6c471ec959e7f977202208.pdf.html?fbclid=IwAR0LH9qtSqhiAKfikgx0isA7Xj5VjjFMDNkioJ5TnEo6Y_FURKD3Y_qFLeQ  

 ಬದಲಾವಣೆಯ ನಿರ್ವಹಣೆ ಹೇಗೆ?

ಡಾ. ಕಿರಣ್ ವಿ.ಎಸ್.

ವೈದ್ಯರು

“ಜಗತ್ತಿನಲ್ಲಿ ಬದಲಾವಣೆಯೇ ಶಾಶ್ವತ” (Change is the only permanent thing in the world) ಎನ್ನುವ ಮಾತಿದೆ. ಆದರೆ ಬಹುತೇಕರಿಗೆ ಬದಲಾವಣೆ ಸುಲಭವಲ್ಲ. ಯಾವುದೋ ಅನುಕೂಲಕರ ಸ್ಥಿತಿಗೆ ಹೊಂದಿಕೊಂಡ ಮನಸ್ಸನ್ನು ಅದರಿಂದ ಹೊರದೂಡುವುದು ಪ್ರತಿರೋಧವಿಲ್ಲದೆ ಸಾಧ್ಯವಾಗುವುದಿಲ್ಲ. ಅದರಲ್ಲೂ ಬದಲಾವಣೆಯೆಂಬುದು ಭೌತಿಕ ಮತ್ತು ಮಾನಸಿಕ ಕ್ಲೇಶಗಳನ್ನು ಉಂಟು ಮಾಡುವಂಥದ್ದಾಗಿದ್ದರೆ ಮತ್ತೂ ಕಷ್ಟ. ಒಂದೆಡೆ ಬದಲಾವಣೆ ಅನಿವಾರ್ಯ ಎಂಬುದನ್ನು ಒಪ್ಪಬೇಕು; ಮತ್ತೊಂದೆಡೆ ಬದಲಾವಣೆ ಆಗಬಾರದು ಎಂದು ಬಯಸುವ ಮನಸ್ಥಿತಿಯನ್ನೂ ಕಡೆಗಣಿಸಲಾಗದು. ಈ ತಾಕಲಾಟ ಜೀವನದ ಪ್ರಮುಖ ಸಂಘರ್ಷಗಳಲ್ಲಿ ಒಂದು.

ಜನಪ್ರಿಯ ಹ್ಯಾರಿ ಪಾಟರ್ ಸರಣಿಯಲ್ಲಿ “ಕತ್ತಲೆ ಮತ್ತು ಸಾವಿನಲ್ಲಿ ಅಜ್ಞಾತದ ಭಯವಿದೆ” ಎನ್ನುವ ಮಾತು ಬರುತ್ತದೆ. ಜೀವನದಲ್ಲಿ ಆಗುವ ಬದಲಾವಣೆಗಳ ಹಿಂದಿನ ಭೀತಿಗೂ “ಅಜ್ಞಾತದ ಭಯ”ವೇ ಕಾರಣ. ಎಷ್ಟೋ ಮಂದಿ ಈ ಬದಲಾವಣೆಗಳನ್ನು ಸ್ವೀಕರಿಸಲಾಗದೆ ಜೀವನದಲ್ಲಿ ಹಿಂದಡಿಯಿಡುತ್ತಾರೆ. ನೌಕರಿಯಲ್ಲಿ ಬಡ್ತಿಯ ಜೊತೆಗೆ ಬರುವ ಹೆಚ್ಚಿನ ಜವಾಬ್ದಾರಿಗಳಿಗೆ ಹೆದರಿ ಬಡ್ತಿಯನ್ನು ನಿರಾಕರಿಸಿದವರಿದ್ದಾರೆ. ಪರಿಣಾಮಗಳಿಗೆ ಹೆದರಿ ಪ್ರಯತ್ನವನ್ನೇ ಮಾಡದವರನ್ನು ನೋಡಿರುತ್ತೇವೆ. ಹೆದರಿಕೆಯ ನಿಲುವಿಗೆ ಪೂರಕವಾಗುವಂತಹ ಕತೆಗಳನ್ನು, ನೆಪಗಳನ್ನು, ಊಹೆಗಳನ್ನು ಹೆಣೆದು ತಮ್ಮನ್ನು ತಾವು ಸಮಾಧಾನ ಮಾಡಿಕೊಳ್ಳುವವರಿಗೆ ಕೊರತೆಯಿಲ್ಲ. ತಮ್ಮಂತಹ ನಿಲುವಿನ ಮತ್ತೊಬ್ಬರನ್ನು ಹುಡುಕಿ, ಅವರ ಜೊತೆಗೆ ನಿರ್ಧಾರಗಳನ್ನು ಸಮರ್ಥಿಸಿಕೊಳ್ಳುವುದು ಅನೇಕರ ವಿಧಾನ.

ಆದರೆ ಜೀವನ ಬದಲಾವಣೆಗಳನು ಅಪ್ಪಿಕೊಳ್ಳುವುದರಲ್ಲಿದೆಯೇ ಹೊರತು, ಅದನ್ನು ನಿರಾಕರಿಸುವುದರಲ್ಲಿ ಅಲ್ಲ. ಈ ವಿಷಯದಲ್ಲಿ ನಮ್ಮ ಮನಸ್ಥಿತಿಯ ಬದಲಾವಣೆ ಪ್ರಮುಖ ಘಟ್ಟ. ಬದಲಾವಣೆ ಚಿಕ್ಕದೋ, ದೊಡ್ಡದೋ; ಪ್ರತ್ಯಕ್ಷವೋ, ಪರೋಕ್ಷವೋ; ನಮ್ಮ ನಿಯಂತ್ರಣದಲ್ಲಿ ಇದೆಯೋ, ಇಲ್ಲವೋ, ಅದು ಆಗುತ್ತಲೇ ಇರುತ್ತದೆ. ಬದುಕಿನ ಬದಲಾವಣೆಗಳ ಜೊತೆಗೆ ಎಷ್ಟು ಬೇಗ, ಎಷ್ಟು ಚೆನ್ನಾಗಿ ಸಮತೋಲನ ಸಾಧಿಸಬಲ್ಲೆವು ಎಂಬುದರ ಮೇಲೆ ಮನಸ್ಸಿನ ಪಕ್ವತೆ ನಿರ್ಧಾರವಾಗುತ್ತದೆ. ನಾವಿಂದು ಯಾವ ಪರಿಸ್ಥಿತಿಗೆ ಚೆನ್ನಾಗಿ ಹೊಂದಿಕೊಂಡು “ಇದು ಬದಲಾಗಬಾರದು” ಎಂದು ಬಯಸುತ್ತೇವೆಯೋ, ಅದು ಮೊದಲಿನಿಂದಲೂ ಹಾಗೆಯೇ ಇರಲಿಲ್ಲ; ಬದಲಿಗೆ, “ಯಾವ್ಯಾವುದೋ ಸ್ಥಿತ್ಯಂತರಗಳ ಮೂಲಕ ಹಾದು ಅದು ಇಂದು ಈ ಹಂತವನ್ನು ತಲುಪಿದೆ” ಎಂಬ ಅರಿವನ್ನು ಬೆಳೆಸಿಕೊಂಡರೆ ಬದಲಾವಣೆಗಳನ್ನು ಸ್ವೀಕರಿಸುವುದು ಸುಲಭವಾಗುತ್ತದೆ.  

ಬದಲಾವಣೆಗೆ ಅನೇಕ ರೀತಿಯ ಸ್ಪಂದನಗಳಿವೆ. ಕೆಲವರು ಅದನ್ನು ಸವಾಲಿನ ರೂಪದಲ್ಲಿ ತೆಗೆದುಕೊಳ್ಳುತ್ತಾರೆ. ಇನ್ನು ಕೆಲವರಿಗೆ ಅದೊಂದು ಕುತೂಹಲ. ಹಲವರಿಗೆ ಅದರ ಬಗ್ಗೆ ಹಿಂಜರಿಕೆ. ಮತ್ತಷ್ಟು ಮಂದಿಗೆ ಅದರ ಕುರಿತಾಗಿ ಭೀತಿ. ಇನ್ನಷ್ಟು ಮಂದಿಗೆ ಸಮಾಜದ ಪ್ರತಿಕ್ರಿಯೆಯ ಬಗ್ಗೆ ಭಯ. ಅನೇಕರಿಗೆ ಭವಿಷ್ಯದ ಚಿಂತೆ. ಹೀಗೆ, ಬದಲಾವಣೆ ಹಲವರಲ್ಲಿ ಹಲವಾರು ಪ್ರತಿಸ್ಪಂದನಗಳನ್ನು ಉಂಟುಮಾಡಬಲ್ಲದು. ಈ ಪೈಕಿ ಬದಲಾವಣೆಗಳನ್ನು ಹೊಸ ಅನುಭವದಂತೆ ಭಾವಿಸುವವರು ಅದರ ನಿರ್ವಹಣೆಯಲ್ಲಿ ಹೆಚ್ಚು ಸಫಲರಾಗುತ್ತಾರೆ ಎಂದು ಹೇಳಲಾಗಿದೆ.

ಬದಲಾವಣೆ ಕಡ್ಡಾಯವಾದಾಗ ಅದನ್ನು ಹೇಗಾದರೂ ನಿಭಾಯಿಸಲೇ ಬೇಕಾಗುತ್ತದೆ. ಅಂತಹ ಸಂದರ್ಭಗಳಲ್ಲಿ ಭಾವನೆಗಳನ್ನು, ಅನುಭವಗಳನ್ನು, ಸವಾಲುಗಳನ್ನು, ಕಾರ್ಯಸೂಚಿಗಳನ್ನು ಬರೆಯುವುದು ಒಳಿತೆಂದು ತಜ್ಞರ ಅಭಿಮತ. ಒಂದೆಡೆ ಕ್ರಮಬದ್ಧವಾಗಿ ಇವುಗಳನ್ನು ದಾಖಲಿಸುವುದು ಹೆಚ್ಚು ವಿಶ್ವಾಸವನ್ನು ನೀಡುತ್ತದೆ; ಮುಂದಿನ ಬಾರಿ ಬದಲಾವಣೆಗಳನ್ನು ಎದುರಿಸುವಾಗ ಸಹಾಯಕಾರಿಯಾಗುತ್ತದೆ. ಮನಸ್ಸಿನ ಅಮೂರ್ತ ಭಾವಗಳು ಲಿಖಿತ ರೂಪಕ್ಕೆ ಬಂದಾಗ ಹೆಚ್ಚು ಸ್ಪಷ್ಟವಾಗುತ್ತವೆ. ಆಗ ಅವುಗಳ ಪರಿಹಾರೋಪಾಯಗಳನ್ನು ಚೆನ್ನಾಗಿ ಮಾಡಬಹುದು.

ಕೆಲವು ಬದಲಾವಣೆಗಳು ಬಹಳ ಪ್ರಭಾವ ಬೀರಿದರೂ, ನಮ್ಮ ನಿಯಂತ್ರಣಕ್ಕೆ ಮೀರಿದವು. ದಶಕಗಳ ಗೆಳೆಯನ ಮರಣ, ಹಲವಾರು ವರ್ಷಗಳ ಉದ್ಯೋಗವನ್ನು ಏಕಾಏಕಿ ಕಳೆದುಕೊಳ್ಳುವುದು, ವಸತಿಯ ಬದಲಾವಣೆ ಮೊದಲಾದುವುಗಳು ನಮ್ಮನ್ನು ಬಹುವಾಗಿ ಬಾಧಿಸಿದರೂ, ಅವುಗಳ ಮೇಲೆ ನಮ್ಮ ಹತೋಟಿ ಇರುವುದಿಲ್ಲ. ಅಂತಹ ಸಂದರ್ಭಗಳಲ್ಲಿ ಹೊಸ ಪರಿಸ್ಥಿತಿಯನ್ನು ಸಾಧ್ಯವಾದಷ್ಟೂ ಬೇಗನೆ ಒಪ್ಪಿಕೊಳ್ಳಬೇಕಾಗುತ್ತದೆ. ನಿರಾಶೆ ಮತ್ತು ಋಣಾತ್ಮಕ ಚಿಂತನೆಗಳು ಮನಸ್ಸನ್ನು ಕುಗ್ಗಿಸುತ್ತವೆ. ಹೊಸ ಸಂದರ್ಭಕ್ಕೆ ಅನುಗುಣವಾಗಿ ಏನೆಲ್ಲಾ ಮಾಡಬಹುದು ಎನ್ನುವ ನಿಟ್ಟಿನಲ್ಲಿ ಧನಾತ್ಮಕ ಚಿಂತನೆ ಸಹಾಯಕ. ಈ ದಿಶೆಯಲ್ಲಿ ತಾಳ್ಮೆ, ಸೂಕ್ಷ್ಮವಾದ ಗಮನಿಸುವಿಕೆ, ಎಚ್ಚರಗಳು ಬಹಳ ಮುಖ್ಯ. ಬದಲಾವಣೆಯನ್ನು ಒಪ್ಪುವ ದಿಕ್ಕಿನಲ್ಲಿ ಹೊಸದೊಂದು ಕಲಿಕೆ ಅಗತ್ಯ ಎಂದಾಗ, ಅದನ್ನು ಶೀಘ್ರವಾಗಿ ಮಾಡುವುದು ಹೆಚ್ಚು ಅನುಕೂಲಕಾರಿ. ಇದರಿಂದ ಬದಲಾವಣೆಯತ್ತ ಹೆಚ್ಚಿನ ಜ್ಞಾನ ಒದಗುತ್ತದೆ; ಅದನ್ನು ನಿಭಾಯಿಸುವ ವಿಶ್ವಾಸ ಮೂಡುತ್ತದೆ.

ಕೆಲವು ಬದಲಾವಣೆಗಳು ಸಮಯ ನೀಡುತ್ತವೆ; ಕೆಲವು ಹಠಾತ್ತಾಗಿ ಆಗುತ್ತವೆ. ಆದರೆ, ಯಾವುದೇ ಬದಲಾವಣೆಗೂ ಹೊಂದಿಕೊಳ್ಳಲು ಸಮಯ ಹಿಡಿಯುತ್ತದೆ. ದೊಡ್ಡಮೊತ್ತದ ಲಾಟರಿ ಬಹುಮಾನ ಗೆದ್ದ ಅನೇಕರು ಅದರಿಂದಾಗುವ ಬದಲಾವಣೆಗಳನ್ನು ನಿರ್ವಹಿಸಲಾಗದೆ ಬಹಳಷ್ಟು ಹಣವನ್ನು ಕಳೆದುಕೊಳ್ಳುತ್ತಾರೆ. ಹೊಸ ಪರಿಸ್ಥಿತಿಯ ಹೊಂದಾಣಿಕೆಗೆ ಸಮಯ ನೀಡಬೇಕು; ಈ ಸಮಯದಲ್ಲಿ ಬಲವಾದ ವಿವೇಚನೆ ಇರಬೇಕು. ಭವಿಷ್ಯದ ಕನಸುಗಳಿಗಿಂತ ವರ್ತಮಾನದ ವಾಸ್ತವವನ್ನು ಸರಿಯಾಗಿ ಗುರುತಿಸಬೇಕು. ದೊಡ್ದ ಬದಲಾವಣೆಗಳಿಗೆ ಹೊಂದಿಕೊಳ್ಳಲು ಸಣ್ಣ ಬದಲಾವಣೆಗಳನ್ನು ಕಾಲಾನುಸಾರ ಮಾಡುತ್ತಾ ಹೋಗಬೇಕು. ಅನೇಕ ಸಣ್ಣ ಬದಲಾವಣೆಗಳು ಒಗ್ಗೂಡಿ ದೊಡ್ದ ಸ್ಥಿತ್ಯಂತರವನ್ನು ನಿರ್ವಹಿಸಲು ನೆರವಾಗುತ್ತವೆ.

ಬದಲಾವಣೆಯ ಹಾದಿ ಒಮ್ಮುಖವಲ್ಲ. ಅಂದರೆ, ಆರಂಭಿಕ ಸಾಫಲ್ಯ-ವೈಫಲ್ಯಗಳು ನಮ್ಮ ಅಂತಿಮ ಗುರಿಯಲ್ಲ. ಕೆಲವೊಮ್ಮೆ ಒಂದಡಿ ಮುಂದಿಟ್ಟ ಮೇಲೆ ಎರಡಡಿ ಹಿಂದೆ ಹಾಕಬೇಕಾಗಬಹುದು. ಇದು ಸಹಜವಾದ ಪ್ರಕ್ರಿಯೆ. ಅಂತಹ ಸಂದರ್ಭಗಳಲ್ಲಿ ಧೃತಿಗೆಡುವ ಅಗತ್ಯವಿಲ್ಲ. ಬದಲಾವಣೆಯ ಹಾದಿಯಲ್ಲಿ ತೀರಾ ಕಠಿಣವಾದ ಆತ್ಮವಿಮರ್ಶೆ ಬೇಕಿಲ್ಲ. ಪರಿಸ್ಥಿತಿ ಹತೋಟಿಯಲ್ಲಿಲ್ಲ ಎನಿಸಿದಾಗ ಅಪರೂಪಕ್ಕೆ ಕಾಣುವ ಕಣ್ಣೀರಿನ ಹನಿಗಳು ದೌರ್ಬಲ್ಯದ ಸಂಕೇತವಲ್ಲ. ಮಾರ್ಗದಲ್ಲಿ ಅಡೆತಡೆಗಳು ಇದ್ದರೂ ಗಮ್ಯದ ಕಡೆಗಿನ ಗಮನ ಚಂಚಲವಾಗಬಾರದು. ಪ್ರಯತ್ನ ಸಾಕಷ್ಟಿದ್ದೂ ಸ್ವಲ್ಪವೇ ಪ್ರಗತಿಯಾದರೂ ಸರಿಯೇ, ಆತ್ಮವಿಶ್ವಾಸ ಕುಂದಬಾರದು.

ಬದಲಾವಣೆಯನು ನಿರ್ವಹಿಸುವಾಗ ಆದ್ಯತೆಗಳನ್ನು ಸ್ಪಷ್ಟಪಡಿಸಬೇಕು. ನೌಕರಿಯಲ್ಲಿ ಬದಲಾವಣೆಯಾದಾಗ, ಅದಕ್ಕೆ ಸಂಬಂಧಿಸಿದ ಕೆಲಸಗಳನ್ನು ಆಯಾ ಸಮಯದಲ್ಲಿ ಅಚ್ಚುಕಟ್ಟಾಗಿ ಮುಗಿಸುವ ಸಾಮರ್ಥ್ಯ ಗಳಿಸಿಕೊಳ್ಳುವುದು ಆದ್ಯತೆಯಾಗುತ್ತದೆ. ಕಚೇರಿಯಲ್ಲಿನ ಇತರರ ಜೊತೆಗೆ ಸಾಮಾಜಿಕ ಸಂಬಂಧ ಏರ್ಪಡುವುದು ನಂತರದ ಆದ್ಯತೆ. ಹೀಗೆ ಪ್ರತಿಯೊಂದು ಬದಲಾವಣೆಯೂ ಬಯಸುವ ಕರ್ತವ್ಯಗಳನ್ನು ಆದ್ಯತಾನುಸಾರ ನಿರ್ವಹಿಸುವುದು ಸಾಫಲ್ಯದ ಹಾದಿ. ಹೊಸ ದಾರಿಯಲ್ಲಿ ದೊರಕುವ ಸಣ್ಣಸಣ್ಣ ಅವಕಾಶಗಳನ್ನು ಸದುಪಯೋಗ ಮಾಡಿಕೊಂಡು ಮನಸ್ಸಿನ ವಿಶ್ವಾಸವನ್ನು ಹೆಚ್ಚಿಸಿಕೊಳ್ಳುವುದು ದೀರ್ಘಕಾಲಿಕವಾಗಿ ಲಾಭದಾಯಕ. ಹೊಸ ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿದೆಯೆಂಬ ನಂಬಿಕೆಯೇ ನಾವು ಬೆಳೆಯಲು ಅನುಕೂಲ.

ಬದಲಾವಣೆಯ ವೇಳೆ ನಿರ್ಧಾರಗಳನ್ನು ಕೈಗೊಳ್ಳುವಾಗ ಎಚ್ಚರವಿರಬೇಕು. ಏನನ್ನಾದರೂ ಕಳೆದುಕೊಂಡೇವು ಎಂಬ ಭೀತಿಯಲ್ಲಿ, ಯಾರನ್ನೋ ಮೆಚ್ಚಿಸಬೇಕೆನ್ನುವ ದುಡುಕಿನಲ್ಲಿ, ಪರಿಸ್ಥಿತಿ ನಮ್ಮ ಕೈಮೀರುತ್ತಿದೆ ಎನ್ನುವ ಸಿಟ್ಟಿನಲ್ಲಿ ಮಾಡುವ ನಿರ್ಧಾರಗಳು ಬಹುತೇಕ ತಪ್ಪಾಗುತ್ತವೆ. ಇಂತಹ ವೇಳೆಯಲ್ಲಿ ನಮ್ಮ ಆಯ್ಕೆಗಳನ್ನು ಒಂದೆಡೆ ಬರೆದಿಟ್ಟುಕೊಂಡು, ಆ ಪಟ್ಟಿಯನ್ನು ಕೂಲಂಕಷವಾಗಿ ಪರಿಶೀಲಿಸುವುದು ಒಳ್ಳೆಯ ನಡೆ.

ಬದಲಾವಣೆಯ ಸಮಯದಲ್ಲಿ ನಮಗೆ ಬೆಂಬಲವಾಗಿ ನಿಂತವರಿಗೆ ಕೃತಜ್ಞರಾಗಿರಬೇಕು. ಉದ್ಯೋಗದಲ್ಲಿ ಬದಲಾವಣೆಗಳಾದಾಗ ಕೌಟುಂಬಿಕ ಬೆಂಬಲ ನೆರವಾಗುತ್ತದೆ. ನಾವು ಚೆನ್ನಾಗಿ ನಂಬುವ, ತೀರಾ ಆತ್ಮೀಯರಾದ ಕೆಲವರಲ್ಲಿ ಮಾತ್ರವೇ ನಮ್ಮ ದುಗುಡಗಳನ್ನು ಹಂಚಿಕೊಳ್ಳಬೇಕು. ಕೆಲವು ಬಾರಿ ಇಂತಹ ಮಾತುಕತೆಗಳು ನಮಗೇ ಅರಿವಿಲ್ಲದ ಮಾರ್ಗೋಪಾಯಗಳನ್ನು ತೋರುತ್ತವೆ. ನಮ್ಮ ಭೀತಿಗಳನ್ನು ಊರಿಗೆಲ್ಲಾ ಸಾರಬಾರದು. ಬದಲಾವಣೆಯ ಒತ್ತಡಗಳನ್ನು ಸಹಿಸುವ ಕಲೆಗಾರಿಕೆಯನ್ನು ಬೆಳೆಸಿಕೊಳ್ಳಬೇಕು. ಈ ವಿಷಯದಲ್ಲಿ ಮಾನಸಿಕ ತಜ್ಞರು ನೆರವಾಗಬಲ್ಲರು. ಯಾವುದೇ ದಾರಿ ತೋಚುತ್ತಿಲ್ಲವೆನಿಸಿದಾಗ ನಿಸ್ಸಂಕೋಚವಾಗಿ ಮಾನಸಿಕ ತಜ್ಞರನ್ನು ಭೇಟಿಯಾಗಿ ಸಮಯೋಚಿತ ಪರಿಹಾರಗಳನ್ನು ಕಂಡುಕೊಳ್ಳಬಹುದು.

--------------------

ದಿನಾಂಕ 30/8/2022 ರಂದು ಪ್ರಜಾವಾಣಿಯ ಕ್ಷೇಮ-ಕುಶಲ ವಿಭಾಗದಲ್ಲಿ ಪ್ರಕಟವಾದ ಲೇಖನ. ಕೊಂಡಿ: https://www.prajavani.net/health/change-and-mental-health-tips-to-accept-change-in-life-change-is-the-only-permanent-thing-in-the-967625.html

 

 

 

 

 ಕೋಪ ಬಂದಾಗ ಏನು ಮಾಡಬೇಕು?

ಡಾ. ಕಿರಣ್ ವಿ.ಎಸ್.

ವೈದ್ಯರು

ಸಿಟ್ಟಿನ ಕೈಗೆ ಬುದ್ಧಿ ನೀಡಬಾರದು”; “ಕೋಪದಲ್ಲಿ ಕೊಯ್ದುಕೊಂಡ ಮೂಗು ಶಾಂತವಾದಾಗ ಮರಳಿ ಬಾರದು” ಹೀಗೆ ಜನಪದದಲ್ಲಿ ಸಿಟ್ಟಿನ ಕುರಿತಾಗಿ ಇರುವಷ್ಟು ಗಾದೆಗಳು ಬೇರೆ ಯಾವ ಭಾವನೆಯ ಬಗ್ಗೆಯೂ ಇರಲಾರದು. ಕೋಪವು ಸಹಜವಾದ ಮತ್ತು ಆರೋಗ್ಯಕರವಾದ, ಆದರೆ ಬಹಳ ಪ್ರಬಲವಾದ ಉದ್ವೇಗ. ಹೀಗಾಗಿ, ಅದನ್ನು ಸರಿಯಾಗಿ ನಿರ್ವಹಿಸುವುದು ಮುಖ್ಯ. ಇಲ್ಲವಾದರೆ “ವೇದ ಸುಳ್ಳಾದರೂ ಗಾದೆ ಸುಳ್ಳಾಗದು” ಎನ್ನುವ ಮಾತಿಗೆ ನಮ್ಮ ಕೋಪವೇ ನಿದರ್ಶನವಾಗುತ್ತದೆ. ಕೋಪಕ್ಕೆ ತೀವ್ರವಾದ ಘಾತಕ ಶಕ್ತಿಯಿದೆ. ಅದು ಸಂಬಂಧಗಳನ್ನು ಹಾಳುಗೆಡವಬಲ್ಲದು; ಕೆಲಸಗಳನ್ನು ಕೆಡಿಸಬಲ್ಲದು; ಜೀವನದ ಗುಣಮಟ್ಟವನ್ನು ಇಳಿಸಬಲ್ಲದು. ಕೋಪವನ್ನು ನಮ್ಮ ನಿಯಂತ್ರಣದಲ್ಲಿ ಇರಿಸದಿದ್ದರೆ ನಾವೇ ಅದರ ನಿಯಂತ್ರಣಕ್ಕೆ ಸಿಲುಕಿಬಿಡುವ ಅಪಾಯವಿದೆ. ಶಾಂತಸ್ಥಿತಿಯಲ್ಲಿರುವಾಗ ಈ ಮಾತುಗಳನ್ನು ಬಹುತೇಕ ಎಲ್ಲರೂ ತಿಳಿದಿರುತ್ತಾರೆ; ಒಪ್ಪುತ್ತಾರೆ. ಆದರೆ, ಕೋಪ ಆವರಿಸಿದಾಗ ಇದ್ಯಾವುದೂ ಪರಿಗಣನೆಗೆ ಬಾರದೆ ಹೋಗುತ್ತದೆ.

ಕೋಪದ ಹಂತಗಳು ಹಲವಾರು. ಸಣ್ಣ ಚಡಪಡಿಕೆಯಿಂದ ಹಿಡಿದು ತೀವ್ರ ಆಕ್ರೋಶದವರೆಗೆ ಇದರ ವ್ಯಾಪ್ತಿ. ಕೋಪದ ಸಮಯದಲ್ಲಿ ಶರೀರ ಅನೇಕ ದೈಹಿಕ ಮತ್ತು ಮಾನಸಿಕ ಬದಲಾವಣೆಗಳಿಗೆ ಸಿಲುಕುತ್ತದೆ; ಹಾರ್ಮೋನುಗಳ ಮಟ್ಟ ಏರುಪೇರಾಗುತ್ತದೆ; ಹೃದಯದ ಬಡಿತ ಹೆಚ್ಚುತ್ತದೆ; ರಕ್ತದ ಒತ್ತಡ ಅಧಿಕವಾಗುತ್ತದೆ; ಉಸಿರಾಟದ ಗತಿ ಬದಲಾಗುತ್ತದೆ; ಮಾಂಸಖಂಡಗಳು ಬಿಗಿಯಾಗುತ್ತವೆ; ದೃಷ್ಟಿ ಮಂಜಾಗುತ್ತದೆ; ಆಲೋಚನೆಗಳು ಮಸುಕಾಗುತ್ತವೆ. ಶರೀರದಲ್ಲಿ ಇಷ್ಟೊಂದು ಬದಲಾವಣೆಗಳನ್ನು ತರಬಲ್ಲ ಭಾವನೆಗಳು ಹೆಚ್ಚಿಲ್ಲ.    

ಕೋಪಕ್ಕೆ ಕಾರಣವಾಗುವ ವಿಷಯಗಳು ಆಂತರಿಕವೂ ಇರಬಹುದು ಅಥವಾ ಬಾಹ್ಯವೂ ಆಗಬಹುದು. ಕಿರಿಕಿರಿ ಮಾಡುವ ವ್ಯಕ್ತಿಗಳು, ಹತಾಶೆಗೆ ಕಾರಣವಾಗುವ ಸಂದರ್ಭಗಳು, ಹಳೆಯ ಘಟನೆಗಳ ನೆನಪುಗಳು ಮೊದಲಾದುವು ಸಿಟ್ಟನ್ನು ತರಿಸಬಹುದು. ಕೋಪದ ಮೊದಲ ಪ್ರತಿಕ್ರಿಯೆ ಎದುರಾಳಿಯ ಮೇಲೆ ಮುಗಿಬೀಳುವ ಆಕ್ರಮಣ ಪ್ರವೃತ್ತಿ. ಇದು ಸರಿಸುಮಾರು ಎಲ್ಲ ಪ್ರಾಣಿಗಳಲ್ಲೂ ಕಾಣುವ ನಡವಳಿಕೆ. ಆದರೆ ಕಾನೂನು, ಸಭ್ಯತೆ, ಸಾಮಾನ್ಯ ಜ್ಞಾನ, ಸಾಮಾಜಿಕ ಕಟ್ಟುಪಾಡುಗಳ ನಿಯಂತ್ರಣದಲ್ಲಿರುವ ನಾಗರಿಕ ಸಮಾಜದಲ್ಲಿ ಈ ರೀತಿಯ ವರ್ತನೆ ಘಾತಕವಾಗಬಲ್ಲದು. ಹೀಗಾಗಿ, ಎಷ್ಟೇ ಸಹಜವಾದ ಭಾವನೆಯಾದರೂ, ಕೋಪವನ್ನು ನಿರ್ವಹಿಸುವುದು ಜೀವನದ ಅಗತ್ಯಗಳಲ್ಲಿ ಒಂದು.

ಸಿಟ್ಟಿನ ನಿಯಂತ್ರಣದಲ್ಲಿ ಹಲವಾರು ದಾರಿಗಳಿವೆ. ಮೊದಲನೆಯ ಉದಾಹರಣೆ ಕೋಪದ ಅಭಿವ್ಯಕ್ತಿ. ಆಕ್ರಮಣಶೀಲವಲ್ಲದ ರೀತಿಯಲ್ಲಿ ಸಿಟ್ಟನ್ನು ಹೊರಹಾಕುವುದು ಆರೋಗ್ಯಕರ ವಿಧಾನವೂ ಹೌದು. ಆಯಾ ಸಂದರ್ಭದಲ್ಲಿ ಕೋಪ ತರಿಸುವ ಕಾರಣವೇನು; ಆ ಕಾರಣವನ್ನು ಬದಿಗೊತ್ತಿ ಗಮ್ಯವನ್ನು ಸಾಧಿಸಲು ಸಾಧ್ಯವೇ; ಈ ಹಾದಿಯಲ್ಲಿ ಇರಬಹುದಾದ ಅಡಚಣೆಗಳೇನು; ಈ ಪರಿಸ್ಥಿತಿಯಲ್ಲಿ ಬೇರೆ ಯಾವ ಪರ್ಯಾಯಗಳಿವೆ – ಮೊದಲಾದ ವಿಷಯಗಳನ್ನು ವಿಶ್ಲೇಷಿಸಿ, ನಮ್ಮ ಅಗತ್ಯಗಳನ್ನು ಸಾಧಿಸಿಕೊಳ್ಳಬೇಕಾಗುತ್ತದೆ. ಉದಾಹರಣೆಗೆ, ಯಾವುದೋ ತುರ್ತು ಕೆಲಸಕ್ಕೆ ಹೋಗುವಾಗ ವಾಹನ ಸಂಚಾರದ ದಟ್ಟಣೆಯಿಂದ ಮನಸ್ಸು ವ್ಯಗ್ರವಾಗುತ್ತದೆ. ಮುಂದೆ ಇರುವ ವಾಹನ ಹೊರಡುವುದು ಕೆಲಕ್ಷಣಗಳು ತಡವಾದರೂ ಅಸಾಧ್ಯ ಸಿಟ್ಟು ಬರುತ್ತದೆ. ಇಂತಹ ಸಂದರ್ಭದಲ್ಲಿ ಕೆಲವರು ಜೋರಾಗಿ ಹಾರ್ನ್ ಒತ್ತಿ ಸದ್ದು ಮಾಡುತ್ತಾರೆ; ಕೆಲವರು ಕೆಟ್ಟ ಭಾಷೆ ಬಳಸಿ ಕೂಗಾಡುತ್ತಾರೆ; ಕೆಲವರು ಆಂಗಿಕ ಚೇಷ್ಟೆ ಮಾಡುತ್ತಾರೆ; ಕೆಲವರು ಹೊಡೆಯಲು ಮುಂದಾಗುತ್ತಾರೆ; ಕೆಲವರು ಇತರ ವಾಹನಗಳ ಸಂಚಾರಕ್ಕೆ ಅಪಾಯವಾಗುವಂತೆ ತಮ್ಮ ವಾಹನವನ್ನು ಭರ್ರನೆ ಪಕ್ಕದ ಲೇನ್ ಗೆ ತಿರುಗಿಸುತ್ತಾರೆ. ಇವು ಹೆಚ್ಚಿನದೇನನ್ನೂ ಸಾಧಿಸಲಾರವು. ಜೊತೆಗೆ ಅಪಾಯಕಾರಿ ಕೂಡ. ಇದರ ಬದಲಿಗೆ ತಂತ್ರಜ್ಞಾನದ ಸಹಾಯ ಪಡೆಯುವುದು ಸೂಕ್ತ. ಗಮ್ಯದಲ್ಲಿರುವ ವ್ಯಕ್ತಿಗೆ ಫೋನು ಮಾಡಿ ಸಂದರ್ಭವನ್ನು ವಿವರಿಸಿ, ಕೆಲನಿಮಿಷಗಳ ಹೆಚ್ಚಿನ ಅವಧಿಯನ್ನು ಕೊಡುವಂತೆ ಕೇಳುವುದು; ವಾಹನ ಸಂಚಾರದ ದಟ್ಟಣೆಯನ್ನು ತೋರುವ ಆಪ್ ಗಳನ್ನು ಬಳಸಿ ಪರ್ಯಾಯ ಮಾರ್ಗಗಳನ್ನು ಹುಡುಕುವುದು; ಸಂಚಾರ ದಟ್ಟಣೆಯಿಂದ ಮುಕ್ತವಾಗಿರುವ ಮೆಟ್ರೋ ರೈಲುಗಳನ್ನು ಬಳಸುವುದು; ವಿಡಿಯೋ ಕರೆಗಳ ಮೂಲಕ ಕೆಲಸವನ್ನು ಸಾಧಿಸುವುದು – ಇಂತಹ ಹಲವಾರು ಮಾರ್ಗಗಳು ಎಷ್ಟೋ ಬಾರಿ ನಮ್ಮ ಖುದ್ದು ಓಡಾಟಕ್ಕೆ ಪರ್ಯಾಯವಾಗಬಲ್ಲವು. ಸಿಟ್ಟನ್ನು ನಿಯಂತ್ರಿಸಿದರೆ ಮಾತ್ರ ಇತರ ದಾರಿಗಳು ಕಾಣುತ್ತವೆ. ಇಲ್ಲವಾದರೆ ವಾಹನದ ಹಾರ್ನ್ ಕೂಡ ನಮ್ಮ ಮನಸ್ಸಿನಂತೆಯೇ ಕೆಟ್ಟುಹೋಗುತ್ತದೆ.

ಮತ್ತೊಂದು ದಾರಿ ಕೋಪವನ್ನು ನುಂಗಿಕೊಳ್ಳುವುದು. ಈ ರೀತಿ ಹತ್ತಿಕ್ಕಿದ ಕೋಪವನ್ನು ಬೇರೆ ಯಾವುದಾದರೂ ಹಾದಿಯಲ್ಲಿ ಹಾಯಿಸಬೇಕು. ಸಿಟ್ಟಿನಿಂದ ಕುದಿಯುವ ಮನಸ್ಸಿಗೆ ಯಾವುದಾದರೂ ಮಾರ್ಗೋಪಾಯ ಬೇಕು. ಇಲ್ಲವಾದರೆ ಅದು ನಮ್ಮ ಶರೀರದ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಕೋಪವನ್ನು ನಿರ್ವಹಿಸಲಾಗದೇ ಆಂತರಿಕವಾಗಿ ನುಂಗಿಕೊಳ್ಳುವವರಲ್ಲಿ ಅಧಿಕ ರಕ್ತದೊತ್ತಡ, ಖಿನ್ನತೆ, ನರಗಳ ದೌರ್ಬಲ್ಯ, ಹೃದ್ರೋಗಗಳು ಕಾಡಬಹುದು. ಸಿನಿಕರು, ಹಗೆ ಸಾಧಿಸುವ ಮನಸ್ಥಿತಿಯವರು, ಇತರರ ಕುರಿತು ಕೀಳಾಗಿ ಮಾತನಾಡುವವರು, ಪ್ರತಿಯೊಂದು ವಿಷಯವನ್ನೂ ಅವಹೇಳನ ಮಾಡುವವರು, ಸಂಬಂಧಗಳನ್ನು ನಿಭಾಯಿಸುವ ತಾಕತ್ತು ಇಲ್ಲದವರು, ಯಾವುದೇ ಸಲಹೆಯನ್ನೂ ಪೂರ್ವಾಪರ ವಿವೇಚನೆಯಿಲ್ಲದೆ ಕುಹಕವಾಡುವ ಬಹುತೇಕ ಮಂದಿಗೆ ತಮ್ಮ ಕೋಪವನ್ನು ನಿಯಂತ್ರಿಸುವ ಸಾಮರ್ಥ್ಯ ಇರುವುದಿಲ್ಲ. ಅಂತಹವರ ಪ್ರಕ್ಷುಬ್ಧ ಮನಸ್ಥಿತಿಗೆ ಕಾರಣ ಬಹುಕಾಲದಿಂದ ಆಂತರಿಕವಾಗಿ ನುಂಗಿಕೊಂಡ ಸಿಟ್ಟಿನ ಪ್ರಸಂಗಗಳು. ಆದರೆ ಆ ವಾಸ್ತವದ ಪ್ರಜ್ಞೆ ಅವರಲ್ಲಿ ಇರುವುದಿಲ್ಲ. ಸಿಟ್ಟನ್ನು ಹತ್ತಿಕ್ಕಬೇಕಾದ ಇಂತಹ ಪರಿಸ್ಥಿತಿಗಳಲ್ಲಿ ಕೂಡಲೆ ಆಲೋಚನೆಯ ಧಾಟಿಯನ್ನು ಬದಲಾಯಿಸಬೇಕು. ಯಾವುದಾದರೂ ಧನಾತ್ಮಕ ಸಂಗತಿಯ ಬಗ್ಗೆ ಯೋಚಿಸಬೇಕು. ಈ ಮುನ್ನ ಸ್ವಲ್ಪ ಸಮಯ ವಹಿಸಿ ನಿರ್ಧಾರಕ್ಕೆ ಬರಲು ಯೋಜಿಸಿದ್ದ ಇತರ ಕೆಲವು ವಿಷಯಗಳನ್ನು ಚಿಂತಿಸಬಹುದು. ಕೋಪಕ್ಕೆ ಕಾರಣವಾಗಿರುವ ಪ್ರಸಂಗದಿಂದ ಮನಸ್ಸನ್ನು ವಿಮುಖಗೊಳಿಸುವುದು ಸಿಟ್ಟಿನ ನಿರ್ವಹಣೆಯ ತಂತ್ರಗಳಲ್ಲಿ ಒಂದು.

ಕೋಪವನ್ನಾಗಲೀ, ಕೋಪಕ್ಕೆ ಕಾರಣವಾಗಿರುವ ಸಂಗತಿಗಳನ್ನಾಗಲೀ ಅರ್ಥಮಾಡಿಕೊಂಡು, ಅದಕ್ಕೆ ರಚನಾತ್ಮಕವಾಗಿ ಪ್ರತಿಕ್ರಿಯಿಸುವುದು ಸಿಟ್ಟನ್ನು ನಿಭಾಯಿಸುವ ಅತ್ಯಂತ ಪರಿಣಾಮಕಾರಿ ವಿಧಾನ. ಆದರೆ, ಇದು ಸುಲಭವಲ್ಲ. ಇದನ್ನು ಸಾಧಿಸಲು ಸಾಕಷ್ಟು ಪ್ರಯತ್ನ, ಕೆಲವೊಮ್ಮೆ ತರಬೇತಿ, ಹಿಡಿಯುತ್ತದೆ. ಕೋಪದ ವೇಳೆಯಲ್ಲಿ ನಮ್ಮ ವೈಚಾರಿಕ ಜ್ಞಾನ ಕುಂದುತ್ತದೆ; ತರ್ಕಶಕ್ತಿ ಕುಂಠಿತವಾಗುತ್ತದೆ. ಕೆಲವೊಮ್ಮೆ ಮನಸ್ಸು ಸಿಟ್ಟಿನ ಘಟನೆಯನ್ನೇ ಪದೇ ಪದೇ ನೆನೆಯುತ್ತಾ “ತರಚು ಗಾಯವ ಕೆರೆದು ಹುಣ್ಣನಾಗಿಸುವ” ಕಪಿಯಂತೆ ವರ್ತಿಸುತ್ತದೆ. ಇಂತಹ ತರ್ಕಶೂನ್ಯ ವೇಳೆಯಲ್ಲಿ ಚಿಂತನೆಗಳನ್ನು ನಿಗ್ರಹಿಸುವುದು ಕಷ್ಟಸಾಧ್ಯ. ಋಣಾತ್ಮಕ ಆಲೋಚನೆಗಳು ಪ್ರವಹಿಸುವಾಗ “ಎಲ್ಲವೂ ಮುಗಿದುಹೋಯಿತು” ಎನ್ನುವುದಕ್ಕಿಂತಲೂ “ಇಂತಹ ಅನೇಕ ಸಂಕಷ್ಟಗಳನ್ನು ಈಗಾಗಲೇ ಅನುಭವಿಸಿ ಗೆದ್ದಿದ್ದೇನೆ. ಇದೂ ಒಂದು ಅನುಭವ ಮಾತ್ರ” ಎನ್ನುವ ಮನಸ್ಥಿತಿ ಪರಿಣಾಮಕಾರಿ.

ಸಿಟ್ಟನ್ನು ಸಮರ್ಥಿಸಿಕೊಳ್ಳುವುದು ಅದಕ್ಕೆ ವಶರಾದಂತೆ. ಕೋಪವೆನ್ನುವುದು ನ್ಯಾಯಬದ್ಧವಾಗಿಯೇ ಇದ್ದರೂ, ಅದರಿಂದ ಹೊರಗೆ ನಿಂತು ಆಲೋಚಿಸವುದು ಸೂಕ್ತ. ಸಿಟ್ಟಿನ ವೇಳೆ ಆಡುವ ಅತಾರ್ಕಿಕ ಮಾತುಗಳು ನಮ್ಮ ಪರವಾಗಿ ಸಹಾನುಭೂತಿ ಇರುವವರನ್ನೂ ನಮ್ಮಿಂದ ದೂರ ಮಾಡಬಲ್ಲದು. ಎಲ್ಲ ಸಂದರ್ಭಗಳನ್ನೂ ಏಕಾಂಗಿಯಾಗಿ ನಿಭಾಯಿಸಲಾಗದು. ಇತರರ ಸಹಕಾರ ಬೇಕಾದಾಗ, ಸಿಟ್ಟನ್ನು ನಿಯಂತ್ರಿಸಬಲ್ಲ ವ್ಯಕ್ತಿಯ ಬಗ್ಗೆ ತಂಡದ ಎಲ್ಲರಿಗೂ ಗೌರವ ಬೆಳೆಯುತ್ತದೆ. ಕೋಪದ ವೇಳೆ ಉಸಿರಾಟದ ಬಗ್ಗೆ ಗಮನ ಕೊಡುವುದು, ಸ್ನಾಯುಗಳ ಬಿಗಿತವನ್ನು ಸಡಿಲಗೊಳಿಸುವುದು ಪರಿಣಾಮಕಾರಿ. ಇದರಿಂದ ಗಮನ ಒಂದೆಡೆ ಕೇಂದ್ರೀಕೃತವಾಗಿ, ತರ್ಕಬದ್ಧ ಆಲೋಚನೆಗೆ ಸಹಕಾರಿಯಾಗುತ್ತದೆ. ಸಿಟ್ಟು ಶಾಂತವಾದಾಗ, ಯಾವ ಕಾರಣಕ್ಕಾಗಿ ಅನಗತ್ಯ ಉದ್ವೇಗಕ್ಕೆ ಒಳಗಾದವೆಂದು ವಿವೇಚಿಸಿ, ಭವಿಷ್ಯದಲ್ಲಿ ಅದಕ್ಕೆ ಆಸ್ಪದ ನೀಡದಿರುವುದು ಕೋಪದ ನಿರ್ವಹಣೆಯಲ್ಲಿ ಪ್ರಮುಖ ಬೆಳವಣಿಗೆ. ಇದ್ಯಾವುದೂ ಕೆಲಸಕ್ಕೆ ಬಾರದಿದ್ದರೆ ಮಾನಸಿಕ ತಜ್ಞರನ್ನು ಕಾಣಬೇಕು.

-------------------------

ದಿನಾಂಕ 23/8/2022 ರ ಪ್ರಜಾವಾಣಿ ದಿನಪತ್ರಿಕೆಯ “ಕ್ಷೇಮ-ಕುಶಲ” ವಿಭಾಗದಲ್ಲಿ ಪ್ರಕಟವಾದ ಲೇಖನ. ಕೊಂಡಿ: https://www.prajavani.net/health/anger-management-techniques-how-to-overcome-it-965541.html