ಭಾನುವಾರ, ನವೆಂಬರ್ 21, 2021

ಒಂಟಿತನದ ಸಮಸ್ಯೆಯ ನಿವಾರಣೆಯಲ್ಲಿ ಧ್ಯಾನ ಮತ್ತು ಆಧ್ಯಾತ್ಮದ ಪಾತ್ರಗಳ ಕುರಿತಾದ ನನ್ನ ಲೇಖನ 28/9/2021 ರ ಪ್ರಜಾವಾಣಿ ದಿನಪತ್ರಿಕೆಯಲ್ಲಿ ಪ್ರಕಟವಾಗಿದೆ. ಈ ವಿಷಯವನ್ನು ಸೂಚಿಸಿ, ಪ್ರಕಟಿಸಿದ ಶ್ರೀಯುತ ಸೂರ್ಯಪ್ರಕಾಶ ಪಂಡಿತರಿಗೆ ಧನ್ಯವಾದಗಳು.

ಲೇಖನದ ಪೂರ್ಣ ಪಾಠ ಇಲ್ಲಿದೆ:
**ಏಕಾಂಗಿಭಾವದ ನಿವಾರಣೆಗೆ ಧ್ಯಾನದ ಉಪಾಯ**
ಮಾನವ ಮೂಲತಃ ಸಮಾಜಜೀವಿ. ಮಾನಸಿಕ ಸಾಂಗತ್ಯಕ್ಕೆ ಮನುಷ್ಯನ ಮನಸ್ಸು ಸದಾ ಹಾತೊರೆಯುತ್ತದೆ. ದೈಹಿಕ ಮತ್ತು ಮಾನಸಿಕ ಆರೋಗ್ಯದಲ್ಲಿ ನಾವು ಜೀವಿಸುವ ಪರಿಸರದ, ಅಲ್ಲಿನ ವ್ಯಕ್ತಿಗಳ ಪಾತ್ರ ಗಣ್ಯ. ಆತ್ಮೀಯ ಭಾವಕ್ಕಾಗಿ ಹಂಬಲಿಸುವ ಮನಸ್ಸಿಗೆ ಮುಕ್ತ ಮಾತುಕತೆಗಳ ಅಗತ್ಯವಿದೆ. ಬದುಕಿನಲ್ಲಿ ಇಂತಹ ಸಾಮಾಜಿಕ ಸಂಬಂಧ ಸಾಧ್ಯವಾಗದಿದ್ದಾಗ ಒಂಟಿತನ ಅಥವಾ ಏಕಾಂಗಿಭಾವ ಕಾಡುತ್ತದೆ. ವಯಸ್ಸಿನ ಅಂತರವಿಲ್ಲದೆ ಒಂಟಿತನ ಯಾರನ್ನಾದರೂ ಬಾಧಿಸಬಹುದು. ಹದಿನೆಂಟು ವರ್ಷ ವಯಸ್ಸಿನವರಿಗಿಂತ ಕಡಿಮೆ ಮತ್ತು 65 ವರ್ಷಗಳಿಗಿಂತ ವಯಸ್ಸಿನವರಲ್ಲಿ ಏಕಾಂಗಿಭಾವದ ಸಮಸ್ಯೆ ಹೆಚ್ಚು. ಸಾಕಷ್ಟು ಜನರ ಗುಂಪಿನಲ್ಲಿ ಇದ್ದರೂ ಮನಸ್ಸಿಗೆ ಹೊಂದಿಕೆಯಾಗದ ವ್ಯಕ್ತಿಗಳೇ ತುಂಬಿದ್ದರೆ, ಆಗಲೂ ಏಕಾಂಗಿಭಾವ ಆವರಿಸಬಹುದು. ತಮ್ಮದೇ ಮನೆಯ ಇತರ ಸದಸ್ಯರ ಮನೋಭಾವ ತಮಗೆ ಹೊಂದದೆ ಒಂಟಿತನ ಅನುಭವಿಸುವವರಿದ್ದಾರೆ. ಏಕಾಂಗಿಭಾವ ಅನುಭವಿಸುವ ಅನೇಕ ಮಂದಿ ಈಚೆಗೆ ಸಾಮಾಜಿಕ ಜಾಲತಾಣಗಳ ಮೇಲೆ ವಿಪರೀತ ಅವಲಂಬಿತರಾಗಿ, ಕಾಲಕ್ರಮೇಣ ಅದರಿಂದಲೂ ಮತ್ತಷ್ಟು ನಿರಾಸೆಪಟ್ಟಿದ್ದಾರೆ.
ಮೂರು ಬಗೆಯ ಏಕಾಂಗಿಭಾವವನ್ನು ತಜ್ಞರು ಗುರುತಿಸುತ್ತಾರೆ. ಸಾಂದರ್ಭಿಕ ಒಂಟಿತನದಲ್ಲಿ ಪರಿಸರದ ಪ್ರಭಾವ ಇರುತ್ತದೆ. ಮನಸ್ಸಿಗೆ ಹಿತಕರವಲ್ಲದ ಅನುಭವಗಳು; ಬಯಕೆ ಮತ್ತು ವಾಸ್ತವಗಳ ನಡುವಿನ ಅಂತರ; ಗೆಳೆಯರ ಅಗಲಿಕೆ; ಕುಟುಂಬದ ಸದಸ್ಯರ ಜೊತೆಗಿನ ಭಿನ್ನಾಭಿಪ್ರಾಯಗಳು; ಅಪಘಾತ, ಅವಗಢಗಳು ಏಕಾಂಗಿಭಾವವನ್ನು ಪ್ರೇರೇಪಿಸುತ್ತವೆ. ಬೆಳವಣಿಗೆಯ ಒಂಟಿತನದಲ್ಲಿ ವೈಯಕ್ತಿಕ ನ್ಯೂನತೆಗಳು; ವಿಕಸನದ ಕೊರತೆಗಳು; ಕುಟುಂಬ ಛಿದ್ರವಾಗುವಿಕೆ; ಆತ್ಮೀಯರ ಮರಣ; ಬಡತನ; ವಾಸ್ತವ್ಯದ ಸಮಸ್ಯೆಗಳು; ದೈಹಿಕ ಯಾ ಮಾನಸಿಕ ತೊಂದರೆಗಳು ಪಾತ್ರ ವಹಿಸುತ್ತವೆ. ಆಂತರಿಕ ಒಂಟಿತನದಲ್ಲಿ ವ್ಯಕ್ತಿತ್ವದ ಅಂಶಗಳು; ಸ್ವನಿಯಂತ್ರಣದ ಲೋಪಗಳು; ಮಾನಸಿಕ ಉದ್ವೇಗ; ಕೀಳರಿಮೆ; ಅಪರಾಧಿಭಾವ; ಹೊಂದಾಣಿಕೆ ಇಲ್ಲದಿರುವಿಕೆ ಇತ್ಯಾದಿ ಕಾರಣಗಳಿರುತ್ತವೆ.
ಏಕಾಂಗಿತನ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನಿದ್ರಾಹೀನತೆ, ಆಹಾರ ಸೇವನೆಯಲ್ಲಿ ಏರುಪೇರು, ಬೊಜ್ಜು, ರೋಗನಿರೋಧ ಶಕ್ತಿ ಕುಂಠಿತವಾಗುವಿಕೆ, ಅಧಿಕ ರಕ್ತದೊತ್ತಡ, ಹೃದಯಸಂಬಂಧಿ ಕಾಯಿಲೆಗಳು, ನೆನಪಿನ ಶಕ್ತಿಯ ಕ್ಷೀಣತೆ, ಸಮಸ್ಯಾಪರಿಹಾರ ತರ್ಕದಲ್ಲಿ ತೊಂದರೆಗಳು ಕಾಣಬಹುದು. ಒಂಟಿತನ ಮಾನಸಿಕವಾಗಿ ಹೆಚ್ಚು ಕುಗ್ಗಿಸುತ್ತದೆ. ಖಿನ್ನತೆ, ಕುಡಿತ, ಅಸಹಜ ವರ್ತನೆಯಂತಹ ಸಮಸ್ಯೆಗಳು ಗಾಢವಾದ ಪ್ರಭಾವ ಬೀರಬಹುದು. ಮಾನಸಿಕ ತುಮುಲ ತೀವ್ರವಾದಾಗ ಆತ್ಮಹತ್ಯೆಯ ಆಲೋಚನೆಗಳೂ ಬರಬಹುದು.
ಏಕಾಂಗಿಭಾವದ ಪರಿಹಾರದಲ್ಲಿ ವಿವಿಧ ವಿಧಾನಗಳಿವೆ. ಸಾಮಾಜಿಕ ಕೌಶಲ್ಯಗಳನ್ನು ರೂಪಿಸಿಕೊಂಡು, ಯಾವುದೋ ಒಂದು ಚಟುವಟಿಕೆಯಲ್ಲಿ ನಿರತವಾಗಿದ್ದರೆ ಒಂಟಿತನ ಕಾಡುವುದಿಲ್ಲ. ಏಕಾಂಗಿಭಾವದ ದೈಹಿಕ ಅಥವಾ ಮಾನಸಿಕ ಚಿಹ್ನೆಗಳು ಕಂಡುಬರುತ್ತಿದ್ದಂತೆ, ಅದನ್ನು ಗುರುತಿಸಿ ನಿವಾರಿಸುವ ಪ್ರಯತ್ನವನ್ನು ಬಂಧು-ಬಳಗದವರು, ಸ್ನೇಹಿತರು ಮಾಡಬೇಕು; ಯಾವುದಾದರೂ ಕೌಶಲ್ಯಗಳ ಬೆಳವಣಿಗೆಯನ್ನು ಪ್ರಚೋದಿಸಬೇಕು. ಒಂಟಿತನ ಅನುಭವಿಸುವವರಿಗೆ ಸಾಮಾಜಿಕ ಬೆಂಬಲ ಅಗತ್ಯ. ಅಂತಹವರ ಜೊತೆಗಿನ ಸಾಂಗತ್ಯಕ್ಕೆ ಸಮಾಜ ಇಂಬು ನೀಡಬೇಕು; ಇತರರೊಡನೆ ಬೆರೆಯಲು ಬೇಕಾದ ಅವಕಾಶಗಳನ್ನು ವಿಫುಲವಾಗಿ ಒದಗಿಸಬೇಕು. ಇದರಿಂದ ‘ಸಮಾಜ ತನ್ನ ಬಗ್ಗೆ ಕಾಳಜಿ ವಹಿಸುತ್ತಿದೆ’ ಎಂಬ ಭಾವನೆ ಬಂದು, ಒಂಟಿತನದ ಲಕ್ಷಣಗಳು ಕಡಿಮೆಯಾಗುತ್ತವೆ. ಸರಿಯಾದ ಸಮಯದಲ್ಲಿ ಪರಿಹಾರೋಪಾಯಗಳನ್ನು ಯೋಜಿಸಿದರೆ ಏಕಾಂಗಿಭಾವ ಕಾಡುವುದನ್ನು, ಅದರ ಪ್ರತಿಕೂಲ ಪರಿಣಾಮಗಳನ್ನು ತಡೆಯಬಹುದು.
ಒಂಟಿತನದ ನಿವಾರಣೆಯ ಮುಖ್ಯವಾದ ಉಪಾಯ ಧ್ಯಾನ ಮತ್ತು ಆಧ್ಯಾತ್ಮ. ಮನಸ್ಸಿನ ಚಾಂಚಲ್ಯವನ್ನು ನಿವಾರಿಸಲು ಗಮನವನ್ನು ಯಾವುದೋ ಒಂದು ವಿಷಯದತ್ತ ಕೇಂದ್ರೀಕರಿಸುವುದು ಉತ್ತಮ ಮಾರ್ಗ. ಗಮನಕ್ಕೆ ಇಂತಹುದೇ ವಿಷಯ ಆಗಿರಬೇಕೆಂಬ ಕಡ್ಡಾಯವಿಲ್ಲ. ಆಸ್ತಿಕರು ದೇವರ ಬಗ್ಗೆ ಆಲೋಚಿಸಬಹುದು; ಕರ್ಮಯೋಗಿಗಳು ತಾವು ಮಾಡುವ ಕೆಲಸದ ಬಗ್ಗೆ ಚಿತ್ತವನ್ನು ಹರಿಸಬಹುದು; ವಿಜ್ಞಾನಿಗಳು ತಮ್ಮ ಪ್ರಯೋಗದ ಬಗ್ಗೆ ಚಿಂತಿಸಬಹುದು – ಒಟ್ಟಾರೆ, ಏಕಚಿತ್ತವಾಗಿ ಮನಸ್ಸನ್ನು ಕಾರ್ಯೋನ್ಮುಖಗೊಳಿಸುವುದು ಫಲಕಾರಿ.
ಒಂಟಿತನ ಋಣಾತ್ಮಕ ಚಿಂತನೆಗಳನ್ನು ಪ್ರಚೋದಿಸುತ್ತದೆ. ಕೋವಿಡ್-19 ರ ಜಾಗತಿಕ ವಿಪತ್ತು ಏಕಾಂಗಿಭಾವವನ್ನು ಮತ್ತಷ್ಟು ಹೆಚ್ಚಿಸಿದರೆ, ಕಾಯಿಲೆಗೆ ಸಂಬಂಧಿಸಿದ ಸುದ್ಧಿಗಳು, ಆತಂಕಗಳು, ಊಹಾಪೋಹಗಳು, ವದಂತಿಗಳು ಋಣಾತ್ಮಕ ಮನೋಭಾವವನ್ನು ಬೆಳೆಸುತ್ತಿವೆ. ಒಂದಕ್ಕೆ ಮತ್ತೊಂದು ಇಂಬುನೀಡುವಂತೆ, ಇವೆರಡೂ ಮಾನಸಿಕ ಸ್ಥಿತಿಯನ್ನು ಕುಗ್ಗಿಸುತ್ತವೆ. ಧ್ಯಾನ ಮತ್ತು ಆಧ್ಯಾತ್ಮಿಕ ಚಿಂತನೆಯಿಂದ ಆಗುವ ಒಳಿತಿನ ಪರಿಣಾಮಗಳನ್ನು ಸಂಶೋಧಕರು ವಿವೇಚಿಸಿದ್ದಾರೆ. ಧ್ಯಾನದಿಂದ ಮಾನಸಿಕ ಏಕಾಗ್ರತೆ ಹೆಚ್ಚುವುದನ್ನು ಸಂಶೋಧನೆಗಳು ಧೃಢಪಡಿಸಿವೆ. ಇದರಿಂದ ತಂತಮ್ಮ ಮಾನಸಿಕ ಸ್ಥಿತಿಗಳ ಬಗ್ಗೆ ಕಾರ್ಯ-ಕಾರಣ ಸಂಬಂಧವನ್ನು ಪತ್ತೆ ಮಾಡುವುದು ಸರಳವಾಗುತ್ತದೆ. ಸಮಸ್ಯೆಯ ಅಸ್ತಿತ್ವವನ್ನು ಒಪ್ಪಿಕೊಳ್ಳುವುದು ಅದರ ಪರಿಹಾರದಲ್ಲಿನ ಮೊದಲ ಹೆಜ್ಜೆ. ಈ ಪ್ರಕ್ರಿಯೆಯನ್ನು ಧ್ಯಾನ ಮತ್ತು ಆಧ್ಯಾತ್ಮಿಕ ಚಿಂತನೆಗಳು ಸರಳಗೊಳಿಸುತ್ತವೆ. ಧ್ಯಾನದಿಂದ ಜೀನ್ ಮಟ್ಟದಲ್ಲಿ ಬದಲಾವಣೆಗಳು ಆಗುತ್ತವೆಂದು ಅನೇಕ ಸಂಶೋಧನೆಗಳು ತೋರಿವೆ.
ಏಕಾಂಗಿಭಾವದ ನಿರ್ಮೂಲನದಲ್ಲಿ ಆಯಾ ವ್ಯಕ್ತಿಯ ಪಾತ್ರವೂ ಮುಖ್ಯ. ಎಲ್ಲಿಯವರೆಗೆ ನಮ್ಮ ಬಗೆಗಿನ ಗ್ರಹಿಕೆ ಇತರರ ಅಭಿಪ್ರಾಯದ ಮೇಲೆ ನಿಂತಿರುತ್ತದೋ, ಅಲ್ಲಿಯವರೆಗೆ ಸ್ವಂತಿಕೆ ಬೆಳೆಯುವುದು ಕಷ್ಟ. ಇತರರಿಗೆ ನಾವು ಬೇಡವಾಗಿದ್ದೇವೆ ಎಂಬ ಭಾವನೆಯನ್ನು ಮನಸ್ಸಿನಿಂದ ತೊಡೆದುಹಾಕಬೇಕು. ಮನಸ್ಸಿಗೆ ಹಿತವೆನಿಸುವ ಹವ್ಯಾಸವನ್ನು ಹಚ್ಚಿಕೊಳ್ಳಬೇಕು. ಮತ್ತೊಬ್ಬರ ವರ್ತನೆಗಳನ್ನು ವಿಮರ್ಶೆ ಮಾಡುವ ಗೋಜಿಗೆ ಹೋಗಬಾರದು. ಬಹಳ ಆತ್ಮೀಯರಾದವರಲ್ಲಿ ಮನಸ್ಸಿನ ಭಾವನೆಗಳನ್ನು ಹಂಚಿಕೊಳ್ಳುವುದು ತಪ್ಪಲ್ಲ. ‘ನಮಗೆ ಬೇಕಾದವರು ಸದಾ ನಮ್ಮೊಂದಿಗೆ ಇರುತ್ತಾರೆ’ ಎನ್ನುವ ಖಾತ್ರಿಯಿಲ್ಲ. ಪ್ರಪಂಚವಾಗಲೀ, ಸಂಬಂಧಗಳಾಗಲೀ ಸ್ಥಾಯಿಯಲ್ಲ. ಹೀಗಾಗಿ, ನಮ್ಮ ಪರಿಚಯದ ವ್ಯಾಪ್ತಿಯನ್ನು ಹಿಗ್ಗಿಸಿಕೊಳ್ಳಬೇಕು. ನಮಗೆ ಆಪ್ಯಾಯವಾಗುವ ಹೊಸಹೊಸ ಸಾಧ್ಯತೆಗಳತ್ತ ಮನಸ್ಸನ್ನು ತೆರೆದುಕೊಳ್ಳಬೇಕು. ನಮ್ಮ ಸಂತಸದ ಕಾರಣವನ್ನು ಯಾರೋ ಒಬ್ಬರ ಅಸ್ತಿತ್ವದ ಮೇಲೆ ನಿಲ್ಲಿಸಲಾಗದು. ಹೀಗಾಗಿ, ಸಂಬಂಧಗಳ, ಗೆಳೆತನದ ಪರಿಧಿಯನ್ನು ವಿಸ್ತರಿಸಬೇಕು. ನಮ್ಮ ಅಗತ್ಯಗಳ ಸಲುವಾಗಿ ಕಾಲವನ್ನು ವ್ಯಯಿಸಬೇಕು. ಮನಸ್ಸಿನಲ್ಲಿ ಸುಪ್ತವಾಗಿರುವ ಕಲಿಕೆಯೊಂದನ್ನು ಸಾಕರಗೊಳಿಸುವ ಸಾಧ್ಯತೆಗಳನ್ನು ಪರಿಶೀಲಿಸಬೇಕು. ಇಂತಹ ಸ್ಥಿತಿಯನ್ನು ತಲುಪಲು ಧ್ಯಾನ ಅತ್ಯಂತ ಸಹಕಾರಿ. ಇದರಿಂದ ನಿಧಾನವಾಗಿ ಏಕಾಂಗಿಭಾವ ದೂರವಾಗುತ್ತದೆ. ವ್ಯಕ್ತಿಯ ಮತ್ತು ವ್ಯಕ್ತಿತ್ವದ ವಿಕಸನದಲ್ಲಿ ಆತ್ಮಸಂತೋಷ ಪ್ರಮುಖವಾದದ್ದು.
------------------
ಪ್ರಜಾವಾಣಿ ಪತ್ರಿಕೆಯಲ್ಲಿನ ಲೇಖನದ ಕೊಂಡಿ: https://www.prajavani.net/.../loneliness-and-depression...

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ