ಭಾನುವಾರ, ನವೆಂಬರ್ 21, 2021

 **ಮಧುಮೇಹ ಅಂದರೆ ಏನು? ಅದಕ್ಕೆ ಪರಿಹಾರ ಏನು?**

ಇಂಟರ್‌ನ್ಯಾಶನಲ್ ಡಯಾಬಿಟಿಸ್ ಫೆಡರೇಶನ್ ಹಾಗೂ ವಿಶ್ವ ಆರೋಗ್ಯ ಸಂಸ್ಥೆಯ ಜಂಟಿ ಆಶ್ರಯದಲ್ಲಿ ಪ್ರತಿವರ್ಷವೂ ನವೆಂಬರ್ 14ರಂದು ಅಂತಾರಾಷ್ಟ್ರೀಯ ಮಧುಮೇಹ ದಿನವನ್ನು ಆಚರಿಸಲಾಗುತ್ತದೆ. 1922ರಲ್ಲಿ ಚಾರ್ಲ್ಸ್ ಬೆಸ್ಟ್ ಎಂಬಾತನ ಜೊತೆಯಲ್ಲಿ ಇನ್ಸುಲಿನ್ ಅನ್ನು ಕಂಡುಹಿಡಿದ ಸರ್ ಫ್ರೆಡರಿಕ್ ಬ್ಯಾಂಟಿಂಗ್ ಅವರ ಜನ್ಮದಿನ ಎಂಬ ಕಾರಣದಿಂದ ನವೆಂಬರ್ 14ನ್ನು ಈ ದಿನಾಚರಣೆಗಾಗಿ ಆರಿಸಿಕೊಳ್ಳಲಾಗಿದೆ. ಈ ಸಂಶೋಧನೆಗಾಗಿ ಸರ್ ಫ್ರೆಡರಿಕ್ ಬಾಂಟಿಂಗ್ ಅವರಿಗೆ ನೊಬೆಲ್ ಪ್ರಶಸ್ತಿಯ ಗೌರವವೂ ದೊರಕಿದೆ. ಮೊತ್ತಮೊದಲ ಬಾರಿಗೆ ಇನ್ಸುಲಿನ್ ಚುಚ್ಚುಮದ್ದನ್ನು ಯಶಸ್ವಿಯಾಗಿ ನೀಡಲಾದ ದಿನಕ್ಕೆ (23 ಜನವರಿ 1922) ಬರುವ ವರ್ಷ ನೂರು ತುಂಬಲಿದ್ದು, 'Insulin at 100' ಎಂಬ ಕಾರ್ಯಕ್ರಮದೊಂದಿಗೆ ಈ ಸಂದರ್ಭವನ್ನು ಆಚರಿಸಲಾಗುತ್ತಿದೆ.
ರಕ್ತದೊಳಗಿನ ಗ್ಲುಕೋಸ್ ಅಂಶ ಇನ್ಸುಲಿನ್ ಎಂಬ ರಸದೂತದ (hormone) ನೆರವಿನಿಂದ ಅಂಗಾಂಗಗಳ ಜೀವಕೋಶಗಳ ಒಳಗೆ ಸೇರುತ್ತದೆ. ಇನ್ಸುಲಿನ್ ಜಠರದ ಅಡಿಭಾಗದಲ್ಲಿರುವ ಮೇದೋಜೀರಕ (pancreas) ಗ್ರಂಥಿಯಿಂದ ಸ್ರವಿಸಲ್ಪಡುತ್ತದೆ. ಅಳಿಲಿನ ಬಾಲದ ಆಕಾರದಲ್ಲಿರುವ ಈ ಮೇದೋಜೀರಕ ಗ್ರಂಥಿಯ ತುಟ್ಟತುದಿಯ ಭಾಗಗಲ್ಲಿ ಇರುವ ಬೀಟಾ-ಕೋಶಗಳೆಂಬ (beta-cells) ವಿಶಿಷ್ಟ ಕೋಶಗಳಿಂದ ಇನ್ಸುಲಿನ್ ರಸದೂತ ಬಿಡುಗಡೆಯಾಗಿ ನೇರವಾಗಿ ರಕ್ತವನ್ನು ಸೇರುತ್ತದೆ. ಒಂದು ವೇಳೆ ಶರೀರದಲ್ಲಿ ಇನ್ಸುಲಿನ್ ಕೊರತೆಯಾದರೆ, ರಕ್ತದೊಳಗಿನ ಗ್ಲುಕೋಸ್ ಅಂಶ ಅಂಗಾಂಗಗಳ ಜೀವಕೋಶಗಳ ಒಳಗೆ ಸೇರುವುದು ಕಡಿಮೆಯಾಗುತ್ತದೆ. ಆಗ ಜೀವಕೋಶಗಳಿಗೆ ಶಕ್ತಿಯ ಸಂಚಯ ಕಡಿಮೆಯಾಗಿ, ಅವು ಕಾರ್ಯವಿಮುಖವಾಗಿ, ಕಡೆಗೆ ನಶಿಸುತ್ತವೆ. ಹೀಗೆ ಇನ್ಸುಲಿನ್ ಕೊರತೆ ಉಂಟಾಗುವ ಶರೀರದ ಅವ್ಯವಸ್ಥೆಯೇ ಮಧುಮೇಹ (diabetes mellitus).
ಮೇದೋಜೀರಕ ಗ್ರಂಥಿಯಲ್ಲಿ ಇನ್ಸುಲಿನ್ ಉತ್ಪಾದಿಸುವ ಕೋಶಗಳ ಸಂಖ್ಯೆಯಲ್ಲಿ ಅಥವಾ ಕಾರ್ಯದಕ್ಷತೆಯಲ್ಲಿ ಕೊರತೆಯಾದರೆ, ಆಗ ಇನ್ಸುಲಿನ್ ಸ್ರವಿಸುವ ಪ್ರಮಾಣ ಕಡಿಮೆ ಆಗುತ್ತದೆ. ಇದನ್ನು ಎರಡನೇ ಮಾದರಿಯ ಮಧುಮೇಹ ಎನ್ನಬಹುದು (Type 2 Diabetes Mellitus). ಆಹಾರದಲ್ಲಿನ ಸಕ್ಕರೆಯ ಅಂಶವನ್ನು ಕರುಳಿನ ಲೋಳೆಪದರದ ಕೋಶಗಳು ಹೀರುತ್ತಲೇ ಇರುವುದರಿಂದ ರಕ್ತದಲ್ಲಿನ ಗ್ಲುಕೋಸ್ ಪ್ರಮಾಣ ಹೆಚ್ಚುತ್ತಲೇ ಹೋಗುತ್ತದೆ. ಹೀಗಿದ್ದರೂ ಇನ್ಸುಲಿನ್ ಕೊರತೆಯ ಕಾರಣದಿಂದ ಆ ಗ್ಲುಕೋಸ್ ಅಂಗಾಂಗಗಳ ಜೀವಕೋಶಗಳಿಗೆ ತಲುಪುವುದಿಲ್ಲ. ಈ ಜೀವಕೋಶಗಳು “ನಾವು ಕೆಲಸ ಮಾಡಲು ನಮ್ಮಲ್ಲಿ ಗ್ಲುಕೋಸ್ ದಾಸ್ತಾನು ಇಲ್ಲ” ಎಂದು ಮೆದುಳಿಗೆ ಸಂದೇಶ ರವಾನಿಸುತ್ತವೆ. ಮೆದುಳು ಇದನ್ನು “ಜೀವಕೋಶಗಳಲ್ಲಿ ಗ್ಲುಕೋಸ್ ಇಲ್ಲ ಎಂದರೆ ಶರೀರಕ್ಕೆ ಆಹಾರದ ಅವಶ್ಯಕತೆ ಇದೆ” ಎಂದು ಅರ್ಥೈಸುತ್ತದೆ; ಹೊಟ್ಟೆಗೆ ಹಸಿವಿನ ಸಂಕೇತಗಳನ್ನು ರವಾನಿಸುತ್ತದೆ. ಹೀಗಾಗಿ ಮಧುಮೇಹದ ರೋಗಿಗಳಿಗೆ ಹಸಿವು ಹೆಚ್ಚು; ಯಾವಾಗಲೂ ಏನನ್ನಾದರೂ ತಿನ್ನುತ್ತಲೇ ಇರಬೇಕು ಎಂಬ ಬಯಕೆ. ಹೀಗೆ ಹೆಚ್ಚಾಗಿ ತಿನ್ನುತ್ತಲೇ ಇರುವುದರಿಂದ ಹೆಚ್ಚು ಹೆಚ್ಚು ಗ್ಲುಕೋಸ್ ರಕ್ತವನ್ನು ಸೇರುತ್ತಲೇ ಇರುತ್ತದೆ. ಇದೊಂದು ವಿಷಮ ಆವರ್ತನ ಚಕ್ರ (vicious cycle). ಹೀಗೆ ರಕ್ತಕ್ಕೆ ಸೇರಿದ ಗ್ಲುಕೋಸ್ ನ ಅಧಿಕತರ ಅಂಶ ಜೀವಕೋಶಗಳ ಒಳಗೆ ಹೋಗಲು ಸಾಧ್ಯವಾಗದೆ ರಕ್ತದಲ್ಲೇ ಉಳಿದುಬಿಡುತ್ತದೆ. ರಕ್ತದಲ್ಲಿ ಗ್ಲುಕೋಸ್ ಅಂಶದ ಪ್ರಮಾಣವನ್ನು ಪರೀಕ್ಷಿಸಿದಾಗ ಅದು ಸಾಮಾನ್ಯಕ್ಕಿಂತ ಅಧಿಕವಾಗಿರುತ್ತದೆ. ರಕ್ತದಲ್ಲಿ ಗ್ಲುಕೋಸ್ ಪ್ರಮಾಣ ಒಂದು ಮೇಲ್ಮಿತಿಗಿಂತ ಹೆಚ್ಚಾಗಿ ಏರಿದಾಗ ಕಡೆಗೆ ಮೂತ್ರಪಿಂಡಗಳು (kidney) ಆ ಅಧಿಕ ಗ್ಲುಕೋಸ್ ಅಂಶವನ್ನು ಸೋಸಿ ಮೂತ್ರದಲ್ಲಿ ಹೊರಹಾಕುತ್ತವೆ. ಆ ಹಂತದಲ್ಲಿ ಮೂತ್ರವನ್ನು ಪರೀಕ್ಷಿಸಿದರೆ ಅದರಲ್ಲಿ ಗ್ಲುಕೋಸ್ ಅಂಶ ಪತ್ತೆಯಾಗುತ್ತದೆ. ಹೀಗೆ ಮೂತ್ರದಲ್ಲಿ ಹೊರಹೋಗುವ ಗ್ಲುಕೋಸ್ ತನ್ನೊಂದಿಗೆ ಸಾಕಷ್ಟು ಪ್ರಮಾಣದ ನೀರನ್ನೂ ಜೊತೆಗೆ ಒಯ್ಯುತ್ತದೆ. ಈ ಕಾರಣಕ್ಕೇ ಮಧುಮೇಹ ರೋಗಿಗಳಲ್ಲಿ ಅತಿಮೂತ್ರ ಸಮಸ್ಯೆ ಕಾಡುತ್ತದೆ. ಶರೀರದಲ್ಲಿ ನೀರಿನ ಅಂಶ ಕಡಿಮೆಯಾಗಿ ದಾಹ ಹೆಚ್ಚುತ್ತದೆ. ಸಾಕಷ್ಟು ನೀರು ಕುಡಿಯಲು ಸಿಗದೇ ಹೋದರೆ ಅಥವಾ ನೀರು ಸೇವನೆ ತಡವಾದರೆ ಶರೀರ ನಿತ್ರಾಣವಾಗುತ್ತದೆ. ಸುಸ್ತು, ತಲೆಸುತ್ತು, ಬವಳಿಕೆ ಕಾಡುತ್ತವೆ.
ಶರೀರದ ಕ್ರಿಯೆಗಳಿಗೆ ಅವಶ್ಯಕವಾದಷ್ಟು ಪ್ರಮಾಣದ ಇನ್ಸುಲಿನ್ ದೊರಕದೇ ಹೋದಾಗ ಮೇದೋಜೀರಕ ಗ್ರಂಥಿಯ ಅಳಿದುಳಿದ ಬೀಟಾ ಕೋಶಗಳಿಂದ ಇನ್ಸುಲಿನ್ ಸ್ರವಿಕೆಯ ಪ್ರಮಾಣವನ್ನು ಹೆಚ್ಚಿಸಬಲ್ಲ ಔಷಧಗಳನ್ನು ಸೇವಿಸಿ ಶರೀರದ ಇನ್ಸುಲಿನ್ ಕೊರತೆಯನ್ನು ನೀಗಬೇಕಾಗುತ್ತದೆ. ಅಂದರೆ, ಮೇದೋಜೀರಕ ಗ್ರಂಥಿಯಲ್ಲಿ ಬೀಟಾ ಕೋಶಗಳ ಸಂಖ್ಯೆ ಕಡಿಮೆ ಇದ್ದರೂ ಈ ಔಷಧಗಳು ಇಂತಹ ಪ್ರತಿಯೊಂದು ಬೀಟಾ ಕೋಶವೂ ಹೆಚ್ಚಿಗೆ ಕೆಲಸ ಮಾಡುವಂತೆ ಪ್ರಚೋದಿಸಿ ಒಟ್ಟಾರೆ ಇನ್ಸುಲಿನ್ ಸ್ರವಿಕೆಯ ಪ್ರಮಾಣವನ್ನು ಹೆಚ್ಚಿಸುತ್ತವೆ. ಹೀಗಾಗಿ, ಇಂತಹ ಔಷಧಗಳು ಕೆಲಸ ಮಾಡಬೇಕೆಂದರೆ ಒಂದು ಕನಿಷ್ಠ ಸಂಖ್ಯೆಯ ಬೀಟಾ ಕೋಶಗಳು ಉಳಿದಿರಬೇಕು; ಹಾಗೂ, ಆ ಬೀಟಾ ಕೋಶಗಳು ಔಷಧಗಳ ಪ್ರಭಾವದಿಂದ ಹೆಚ್ಚಿನ ಇನ್ಸುಲಿನ್ ಸ್ರವಿಸಬಲ್ಲ ಸಾಮರ್ಥ್ಯವನ್ನು ಹೊಂದಿರಬೇಕು. ಇವೆರಡರಲ್ಲಿ ಯಾವುದೇ ಒಂದು ಇಲ್ಲವಾದರೂ ಇಂತಹ ಔಷಧಗಳು ನಿರುಪಯುಕ್ತವಾಗುತ್ತವೆ.
ಒಂದು ವೇಳೆ ಬೀಟಾ ಕೋಶಗಳು ಸಂಪೂರ್ಣವಾಗಿ ನಾಶವಾದರೆ, ಅಥವಾ ಯಾವುದಾದರೂ ವಿಷದ, ಕಾಯಿಲೆಯ, ಅಪಘಾತದ ಯಾ ಶಸ್ತ್ರಚಿಕಿತ್ಸೆಯ ಕಾರಣಗಳಿಂದ ಮೇದೋಜೀರಕ ಗ್ರಂಥಿಯ ಬಾಲದ ಭಾಗಕ್ಕೆ ಘಾಸಿಯಾದರೆ ಶರೀರದಲ್ಲಿ ಇನ್ಸುಲಿನ್ ಉತ್ಪಾದನೆ ಸಂಪೂರ್ಣವಾಗಿ ಸ್ಥಗಿತವಾಗಬಹುದು. ಇನ್ನು ಕೆಲವರಲ್ಲಿ ಹುಟ್ಟಿನಿಂದಲೇ ಈ ಬೀಟಾ ಕೋಶಗಳ ಅನುಪಸ್ಥಿತಿ ಇರಬಹುದು. ಇದನ್ನು ಒಂದನೆಯ ಮಾದರಿಯ ಮಧುಮೇಹ ಎನ್ನಬಹುದು (Type 1 Diabetes Mellitus). ಇದು ಮಧುಮೇಹದ ಅತ್ಯಂತ ತೀವ್ರತಮ ಹಂತ. ದೇಹ ಬಹಳ ಬೇಗ ಪ್ರಜ್ಞಾಹೀನ ಸ್ಥಿತಿಯನ್ನು ತಲುಪುತ್ತದೆ. ಇಂತಹ ಎಲ್ಲಾ ಸಂದರ್ಭಗಳಲ್ಲೂ ಮೇಲೆ ಹೇಳಿದ ಔಷಧಗಳು ನಿರುಪಯುಕ್ತ. ಬೀಟಾ ಕೋಶಗಳೇ ಇಲ್ಲವೆಂದ ಮೇಲೆ ಔಷಧಗಳು ಏನನ್ನು ಪ್ರಚೋದಿಸಬೇಕು? ಇಂತಹ ಸಂದರ್ಭಗಳಲ್ಲಿ ಚುಚ್ಚುಮದ್ದಿನ ಮೂಲಕ ಕೃತಕ ಇನ್ಸುಲಿನ್ ಅನ್ನು ಶರೀರಕ್ಕೆ ನೀಡಬೇಕಾಗುತ್ತದೆ.
ಕೆಲವು ವರ್ಷಗಳ ಹಿಂದೆ ಪ್ರಾಣಿಗಳ (ಮುಖ್ಯವಾಗಿ ಹಂದಿ ಮತ್ತು ದನ) ಮೇದೋಜೀರಕ ಗ್ರಂಥಿಗಳಿಂದ ಇನ್ಸುಲಿನ್ ಅನ್ನು ತೆಗೆದು ಚುಚ್ಚುಮದ್ದಿನ ರೂಪದಲ್ಲಿ ನೀಡಲಾಗುತ್ತಿತ್ತು. ಮನುಷ್ಯ ಶರೀರದ ಇನ್ಸುಲಿನ್‌ಗೂ ಪ್ರಾಣಿಜನ್ಯ ಇನ್ಸುಲಿನ್‌ಗೂ ಅತ್ಯಲ್ಪ ವ್ಯತ್ಯಾಸವಿರುತ್ತದೆ. ಇಂತಹ ಪ್ರಾಣಿಜನ್ಯ ಇನ್ಸುಲಿನ್ ಮಧುಮೇಹದ ಚಿಕಿತ್ಸೆಯಲ್ಲಿ ತಕ್ಕಮಟ್ಟಿಗೆ ಸಫಲವಾದರೂ ಕೆಲವು ಅಡ್ಡ ಪರಿಣಾಮಗಳನ್ನು ಉಂಟು ಮಾಡಬಹುದು. ಆದರೆ 1955 ನೆಯ ವರ್ಷದಲ್ಲಿ ಫ್ರೆಡ್ರಿಕ್ ಸ್ಯಾಂಗರ್ ಎಂಬ ವಿಜ್ಞಾನಿ ಮಾನವ ಇನ್ಸುಲಿನ್ ನ ರಾಸಾಯನಿಕ ರಚನೆಯನ್ನು ಕಂಡುಹಿಡಿದರು. ಇದನ್ನು ಉಪಯೋಗಿಸಿಕೊಂಡು ಆನಂತರದ ಅವಿಷ್ಕಾರಗಳು ಮಾನವ ಇನ್ಸುಲಿನ್ ಅನ್ನು ಕೃತಕವಾಗಿ ಯಥಾವತ್ತಾಗಿ ಪ್ರಯೋಗಶಾಲೆಗಳಲ್ಲಿ ತಯಾರಿಸಲು ಸಹಾಯ ಮಾಡಿದವು. ಇಂತಹ ಇನ್ಸುಲಿನ್ ನ ಅಡ್ಡ ಪರಿಣಾಮಗಳು ತೀರಾ ಕಡಿಮೆ. ಈ ರೀತಿಯ ಮಾನವ ಇನ್ಸುಲಿನ್ ನ ಕೃತಕ ತಯಾರಿಕೆ ಈಗ ಬೃಹತ್ ಪ್ರಮಾಣದಲ್ಲಿ ಕಾರ್ಖಾನೆಗಳಲ್ಲಿ ಆಗುತ್ತದೆ. ಇದರಿಂದ ನಿಖರ ರಚನೆಯ ಮಾನವ ಇನ್ಸುಲಿನ್ ಕಡಿಮೆ ಬೆಲೆಯಲ್ಲಿ ಸಿಗಲು ಆರಂಭವಾಗಿದೆ. ಪ್ರಪಂಚದಾದ್ಯಂತ ಮಧುಮೇಹ ರೋಗಿಗಳಿಗೆ ಇದು ವರದಾನವಾಗಿದೆ.
----------------------
ಅಂತಾರಾಷ್ಟ್ರೀಯ ಮಧುಮೇಹ ದಿನದ ಪ್ರಯುಕ್ತ ಶ್ರೀಯುತ Srinidhi TG ಅವರ ejnana.com ಜಾಲತಾಣದಲ್ಲಿ 14/11/2021 ರಂದು ಪ್ರಕಟವಾಗಿರುವ ನನ್ನ ಲೇಖನ:
ಇ-ಜ್ಞಾನ ಜಾಲತಾಣದಲ್ಲಿನ ಮೂಲ ಸಚಿತ್ರ ಲೇೆಖನದ ಕೊಂಡಿ: https://www.ejnana.com/question-and-answer/what-is-diabetes

 **ಹೃದಯದ ಕಾಳಜಿ ವಹಿಸುವುದು ಹೇಗೆ? ಏಕೆ?**

ಹೃದಯದ ಆಂತರಿಕ ಸಮಸ್ಯೆಗಳು ಮತ್ತು ಇತರ ಅಂಗಗಳ ಕಾಯಿಲೆಯಿಂದ ಹೃದಯದ ಮೇಲೆ ಆಗುವ ಪರೋಕ್ಷ ಪರಿಣಾಮಗಳು - ಎರಡೂ ಅಪಾಯಕಾರಿ. ಆಂತರಿಕ ಸಮಸ್ಯೆಗಳಲ್ಲಿ ಪ್ರಮುಖವಾದದ್ದು ಕರೊನರಿ ರಕ್ತನಾಳಗಳ ಸಮಸ್ಯೆ. ಈ ರಕ್ತನಾಳಗಳು ಅಗತ್ಯ ಆಕ್ಸಿಜನ್ ಮತ್ತು ಪೋಷಕಾಂಶಗಳನ್ನು ರಕ್ತದ ಮೂಲಕ ಹೃದಯಕ್ಕೆ ತಲುಪಿಸುವ ಏಕೈಕ ಮಾರ್ಗ. ಯಾವುದೇ ಕಾರಣದಿಂದ ಈ ರಕ್ತನಾಳಗಳ ಒಳಭಾಗ ಪೂರ್ತಿಯಾಗಿ ಕಟ್ಟಿಕೊಂಡು ರಕ್ತಸಂಚಾರ ಸಾಧ್ಯವಿಲ್ಲದಂತಾದರೆ, ಆಗ ಹೃದಯದ ಸ್ನಾಯುಗಳಿಗೆ ಆಕ್ಸಿಜನ್ ಸರಬರಾಜು ನಿಂತುಹೋಗುತ್ತದೆ. ಒಂದು ಕ್ಷಣವೂ ಬಿಡುವಿಲ್ಲದಂತೆ ಕೆಲಸ ಮಾಡುವ ಹೃದಯಕ್ಕೆ ನಿರಂತರವಾಗಿ ಆಕ್ಸಿಜನ್ ಸರಬರಾಜು ಆಗುತ್ತಲೇ ಇರಬೇಕು. ಇದು ಕೆಲವು ನಿಮಿಷಗಳ ಕಾಲ ಸಂಪೂರ್ಣವಾಗಿ ನಿಂತುಹೋದರೆ ಹೃದಯದ ಸ್ನಾಯುಗಳು ಇಂಚಿಂಚಾಗಿ ಮರಣಿಸುತ್ತವೆ. ಇದು ಒಂದು ಹಂತ ತಲುಪಿದಾಗ ಹೃದಯದ ಕಾರ್ಯಕ್ಷಮತೆ ಹಠಾತ್ತಾಗಿ ಇಳಿದುಹೋಗುತ್ತದೆ. ರಕ್ತವನ್ನು ಪಂಪ್ ಮಾಡುವ ಸಾಮರ್ಥ್ಯ ತೀವ್ರವಾಗಿ ಕುಂದುತ್ತದೆ. ಆಗ ಶರೀರದ ಯಾವ ಅಂಗಕ್ಕೂ ರಕ್ತದ ಸರಬರಾಜು ಸರಿಯಾಗಿ ಆಗುವುದಿಲ್ಲ; ಎಲ್ಲಾ ಅಂಗಗಳೂ ಘಾಸಿಗೊಳ್ಳುತ್ತವೆ. ಈ ಪ್ರಕ್ರಿಯೆಗೆ ಹೃದಯಾಘಾತ ಎಂದು ಹೆಸರು. ಹೃದಯದ ಎಡಭಾಗಕ್ಕೆ ರಕ್ತ ಪೂರೈಸುವ ಕರೊನರಿ ರಕ್ತನಾಳ ಸಂಪೂರ್ಣವಾಗಿ ಕಟ್ಟಿಕೊಂಡರೆ ಹೃದಯಾಘಾತದ ಪ್ರಕ್ರಿಯೆ ವೇಗವಾಗಿ ಆಗುತ್ತದೆ. ಹೀಗೆ ಕೆಲವೇ ನಿಮಿಷಗಳಲ್ಲಿ ಶರೀರವನ್ನು ಸ್ತಬ್ಧಗೊಳಿಸಬಲ್ಲ ಇದನ್ನು ತೀವ್ರ ಹೃದಯಾಘಾತ ಎನ್ನಬಹುದು. (ಚಿತ್ರ 1) ಇದಕ್ಕೆ ಪ್ರತಿಯಾಗಿ, ಕರೊನರಿ ರಕ್ತನಾಳಗಳು ಭಾಗಶಃ ಕಟ್ಟಿಕೊಂಡರೆ, ಆಗ ರಕ್ತಸಂಚಾರ ಕಡಿಮೆ ಆಗುತ್ತದೆ; ಹೃದಯಾಘಾತದ ಪ್ರಕ್ರಿಯೆಗೆ ದಿನಗಳಿಂದ ವಾರಗಳ ಕಾಲ ಹಿಡಿಯುತ್ತದೆ. ಈ ರಕ್ತನಾಳಗಳು ಎಷ್ಟು ಪ್ರತಿಶತ ಕಟ್ಟಿಕೊಂಡಿವೆ; ವ್ಯಕ್ತಿ ಭೌತಿಕವಾಗಿ ಎಷ್ಟು ಸಕ್ರಿಯರಾಗಿದ್ದಾರೆ ಎನ್ನುವುದರ ಮೇಲೆ ಹೃದಯದ ಕಾರ್ಯಕ್ಷಮತೆಯ ನಿರ್ಧಾರವಾಗುತ್ತದೆ. ಇದನ್ನು ತಿಳಿಯಲು ಅಂಜಿಯೊಗ್ರಾಮ್ ಮೊದಲಾದ ಪರೀಕ್ಷೆಗಳು ನೆರವಾಗುತ್ತವೆ.
ಹೃದಯದ ಸ್ನಾಯುಗಳ ದೌರ್ಬಲ್ಯ, ಕವಾಟಗಳ ಸಾಮರ್ಥ್ಯ ಕುಂದುವಿಕೆ, ಹೃದಯದ ವಿದ್ಯುತ್ ಹರಿಯುವಿಕೆಯಲ್ಲಿನ ದೋಷಗಳು, ಹೃದಯದ ಕೋಣೆಗಳ ನಡುವಿನ ಗೋಡೆಗಳಲ್ಲಿ ಇರಬಹುದಾದ ರಂಧ್ರದಂತಹ ಜನ್ಮಜಾತ ಸಮಸ್ಯೆಗಳು (ಚಿತ್ರ 2), ಹೃದಯದಿಂದ ರಕ್ತವನ್ನು ಅಂಗಗಳಿಗೆ ಒಯ್ಯುವ ರಕ್ತನಾಳಗಳ ಸಮಸ್ಯೆಗಳು – ಇವೆಲ್ಲವೂ ಹೃದಯದ ಆರೋಗ್ಯವನ್ನು ಏರುಪೇರು ಮಾಡಬಲ್ಲವು. ಹೃದಯಾಘಾತದ ಪ್ರಮಾಣಕ್ಕೆ ಹೋಲಿಸಿದರೆ ಇಂತಹ ಸಮಸ್ಯೆಗಳು ಕಡಿಮೆ.
ಅಧಿಕ ರಕ್ತದೊತ್ತಡ ಅತ್ಯಂತ ಸಾಮಾನ್ಯವಾಗಿ ಕಾಣುವ ಸಮಸ್ಯೆ. ಇದು ಬಹುತೇಕ ಹೃದಯದ ಆಂತರಿಕ ಕಾರಣವಲ್ಲ. ಬದಲಿಗೆ, ರಕ್ತನಾಳಗಳು ಪೆಡಸುಗಟ್ಟುವಿಕೆ, ಯಾವುದೋ ಒಂದು ಅಂಗದ ರಕ್ತನಾಳಗಳು ಕಿರಿದಾಗಿ, ಅದಕ್ಕೆ ಸಾಕಷ್ಟು ಪ್ರಮಾಣದ ರಕ್ತ ಹರಿಯಲು ಆಗುವ ಅಡ್ಡಿ, ಶರೀರದ ಚೋದಕಗಳಲ್ಲಿನ ವ್ಯತ್ಯಾಸ ಮೊದಲಾದ ಕಾರಣಗಳಿವೆ. ಯಾವುದೇ ಕಾರಣದಿಂದ ಒಂದು ಅಂಗಕ್ಕೆ ರಕ್ತದ ಸರಬರಾಜು ಕಡಿಮೆಯಾದರೆ ಆ ಅಂಗ ಮಿದುಳಿಗೆ ಸೂಚನೆ ಕಳಿಸುತ್ತದೆ. ಕೂಡಲೇ ಮಿದುಳು ಹೃದಯಕ್ಕೆ ಸಂಕೇತಗಳನ್ನು ಕಳಿಸಿ, ಹೆಚ್ಚು ರಕ್ತವನ್ನು ಒತ್ತುವಂತೆ ತಿಳಿಸುತ್ತದೆ. ಆಗ ಹೃದಯದ ಸ್ನಾಯುಗಳು ಹೆಚ್ಚು ಕೆಲಸ ಮಾಡಿ ಅಧಿಕ ಒತ್ತಡವನ್ನು ನಿರ್ಮಿಸುತ್ತವೆ. ಈ ಒತ್ತಡ ಇತರ ರಕ್ತನಾಳಗಳಿಗೂ ಹರಿಯುತ್ತದೆ. ಈ ಮೂಲಕ ಇತರ ಅಂಗಗಳು ಅಗತ್ಯಕ್ಕಿಂತ ಹೆಚ್ಚು ರಕ್ತವನ್ನು ಅಧಿಕ ಒತ್ತಡದಲ್ಲಿ ಪಡೆಯುತ್ತವೆ. ಅವುಗಳ ಕೆಲಸದಲ್ಲೂ ವ್ಯತ್ಯಾಸ ಬರುತ್ತದೆ. ಅಧಿಕ ರಕ್ತದೊತ್ತಡ ತಂತಾನೇ ಒಂದು ಕಾಯಿಲೆಯಲ್ಲ; ಬದಲಿಗೆ ಶರೀರದಲ್ಲಿ ಆಗುತ್ತಿರುವ ವ್ಯತ್ಯಾಸಗಳ ಸೂಚಕ.
ಶರೀರದ ಅನೇಕ ಕಾಯಿಲೆಗಳು ಹೃದಯದ ಮೇಲೆ ಪರಿಣಾಮ ಬೀರುತ್ತವೆ. ಯಾವುದೋ ಅಂಗದ ಕ್ಯಾನ್ಸರ್ ರಕ್ತದ ಮೂಲಕ ಹೃದಯಕ್ಕೆ ವ್ಯಾಪಿಸಬಹುದು. ಶರೀರದ ಸೋಂಕುಗಳು ರಕ್ತದ ಹಾದಿ ಹಿಡಿದು ಹೃದಯವನ್ನು ತಲುಪಿ, ಸೋಂಕು ಹರಡಬಹುದು. ಹೃದಯದ ಯಾವುದೇ ಭಾಗವನ್ನಾದರೂ ಬಾಧಿಸಬಲ್ಲ ಸಾಮರ್ಥ್ಯ ಇರುವ ಕಾಯಿಲೆಗಳಿವೆ.
ಹೃದಯದ ನಿರ್ವಹಣೆ ನಮ್ಮ ಜೀವನಶೈಲಿಗೆ ಸಂಬಂಧಿಸಿದ್ದು. ಕಾಯಿಲೆ ಬಂದ ನಂತರ ಚಿಕಿತ್ಸೆ ಪಡೆಯುವುದಕ್ಕಿಂತಲೂ ಕಾಯಿಲೆ ಬಾರದಂತೆ ನಿರ್ವಹಿಸುವುದು ಉತ್ತಮ. ತಾಜಾ ಹಣ್ಣು, ತರಕಾರಿ, ಧಾನ್ಯಗಳು, ಪ್ರೋಟೀನ್ ಅಂಶ ಅಧಿಕವಾಗಿರುವ ಆಹಾರ, ಜಿಡ್ಡಿನ ಅಂಶ ಕಡಿಮೆ ಇರುವ ಹೈನು ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಬೇಕು. ಆರೋಗ್ಯಕರ ಹೃದಯಕ್ಕಾಗಿ ದಿನಕ್ಕೆ ಕನಿಷ್ಠ ಮೂವತ್ತು ನಿಮಿಷಗಳ ಕಾಲ ಉಸಿರಾಟದ ಗತಿಯನ್ನು ಏರಿಸುವ ಶಾರೀರಿಕ ವ್ಯಾಯಾಮ ಮಾಡಬೇಕು; ವಾರಕ್ಕೆ ಎರಡು ದಿನ ಮಾಂಸಖಂಡಗಳ ಬಲವನ್ನು ಹೆಚ್ಚಿಸುವ ವ್ಯಾಯಾಮ ಇರಬೇಕು. ಪ್ರತಿದಿನವೂ ತಪ್ಪದೆ ವ್ಯಾಯಾಮ ಮಾಡುವುದು ಸೂಕ್ತ. ಧೂಮಪಾನ ಮತ್ತು ಮದ್ಯಪಾನಗಳು ಹೃದಯದ ಶತ್ರುಗಳು. ಉಪ್ಪು ಅಥವಾ ಸಕ್ಕರೆಯ ಅಂಶ ಅಧಿಕವಾಗಿರುವ ತಿನಿಸು ಮತ್ತು ಪಾನೀಯಗಳು, ಅಧಿಕ ಜಿಡ್ಡಿನ ಆಹಾರ ಹೃದಯದ ಅನಾರೋಗ್ಯಕ್ಕೆ ಕಾರಣವಾಗಬಹುದು. ದೈಹಿಕ ಮತ್ತು ಮಾನಸಿಕ ಒತ್ತಡದ ನಿಯಂತ್ರಣ ಹೃದಯದ ಮೇಲೆ ಬಹಳ ಉತ್ತಮ ಪರಿಣಾಮ ಬೀರಬಲ್ಲದು. ನಿದ್ರಾಹೀನತೆಯಿಂದ ಹೃದ್ರೋಗಗಳ ಸಾಧ್ಯತೆ ಅಧಿಕವಾಗುತ್ತದೆ.
------------------------------------------
ಶ್ರೀಯುತ Srinidhi TG ಅವರ ejnana.com ಜಾಲತಾಣದಲ್ಲಿ 12/11/2021 ರಂದು ಪ್ರಕಟವಾದ ಲೇಖನ. ಇದು ಎರಡು ಲೇಖನಗಳ ಪೈಕಿ ಎರಡನೆಯ ಭಾಗ. ಮೂಲ ಲೇಖನದ ಕೊಂಡಿ: https://www.ejnana.com/question-and-answer/care-for-heart

**ಹೃದಯದ ರಚನೆ ಮತ್ತು ಕಾರ್ಯ**

ಶರೀರದಲ್ಲಿನ ಪ್ರಮುಖ ಅಂಗಗಳ ಪೈಕಿ ಅತ್ಯಂತ ಸರಳ ಅಂಗ ಹೃದಯ. ಮಿದುಳು, ಯಕೃತ್, ಶ್ವಾಸಕೋಶ, ಮೂತ್ರಪಿಂಡಗಳಂತಹ ಇತರ ಪ್ರಮುಖ ಅಂಗಗಳು ಸಂಕೀರ್ಣ ರಾಸಾಯನಿಕ ಪ್ರಕ್ರಿಯೆಗಳ ಮೂಲಕ ಕೆಲಸ ಮಾಡುತ್ತವೆ. ಆದರೆ ಹೃದಯ ಹಾಗಲ್ಲ. ಅದು ಮುಖ್ಯವಾಗಿ ಕೆಲಸ ಮಾಡುವುದು ಯಾಂತ್ರಿಕ ಪಂಪ್ ಮಾದರಿಯಲ್ಲಿ. ಪಂಪ್ ಕೆಲಸ ಮಾಡಲು ಬೇಕಾದ ವಿದ್ಯುತ್ ಪೂರೈಕೆ ಕೂಡ ಹೃದಯದಲ್ಲೇ ಆಗುತ್ತದೆ.
ಸರಳವಾದರೂ ಹೃದಯದ ಕೆಲಸ ಅತ್ಯಂತ ಮಹತ್ವದ್ದು. ನಮ್ಮ ಶರೀರದ ಬಹುತೇಕ ಜೀವಕೋಶಗಳ ಕೆಲಸಕ್ಕೆ ಅಗತ್ಯವಾದ ಆಕ್ಸಿಜನ್ ಮತ್ತು ಪೋಷಕಾಂಶಗಳನ್ನು ರಕ್ತದ ಮೂಲಕ ಪೂರೈಸುವ ಪ್ರಮುಖ ಕ್ರಿಯೆಯನ್ನು ನಿರ್ವಹಿಸುವುದು ಹೃದಯ. ಅಂತೆಯೇ, ಜೀವಕೋಶಗಳು ಸೆಳೆದುಕೊಂಡ ಪೋಷಕಾಂಶ ಮತ್ತು ಆಕ್ಸಿಜನ್ ಅನ್ನು ರಕ್ತದಲ್ಲಿ ಮರುಪೂರಣ ಮಾಡಲು ನೆರವಾಗುವುದೂ ಹೃದಯವೇ. ಹೀಗೆ, ಹೃದಯದ್ದು ಗ್ರಾಹಕರಿಂದ ಹಣ ಸಂಗ್ರಹಿಸಿ ಇತರ ಗ್ರಾಹಕರಿಗೆ ನೀಡುವ ಬ್ಯಾಂಕಿನ ಕ್ಯಾಶಿಯರ್ ಕೆಲಸ!
ಕೆಲಸವಷ್ಟೇ ಅಲ್ಲ; ರಚನೆಯ ದೃಷ್ಟಿಯಿಂದಲೂ ಹೃದಯ ಬಹಳ ಸರಳ. ರಕ್ತ ಸಂಗ್ರಹಿಸುವ ಎರಡು ಕಕ್ಷೆಗಳು, ರಕ್ತವನ್ನು ಮುಂದಕ್ಕೆ ದೂಡುವ ಎರಡು ಪಂಪ್’ಗಳು, ಈ ಕಕ್ಷೆಗಳನ್ನು ಮತ್ತು ಪಂಪ್’ಗಳನ್ನು ಪ್ರತ್ಯೇಕವಾಗಿಸುವ ಎರಡು ಗೋಡೆಗಳು, ರಕ್ತಸಂಚಾರವನ್ನು ಏಕಮುಖವಾಗಿ ನಿರ್ವಹಿಸುವ ನಾಲ್ಕು ಕವಾಟಗಳು – ಇವು ಹೃದಯದ ಪ್ರಮುಖ ಭಾಗಗಳು. ಜೀವಕೋಶಗಳಿಗೆ ಆಕ್ಸಿಜನ್ ತಲುಪಿಸಿದ ನಂತರ ರಕ್ತದಲ್ಲಿ ಆಕ್ಸಿಜನ್ ಪ್ರಮಾಣ ಕಡಿಮೆ ಆಗುತ್ತದೆ. ಇಂತಹ ರಕ್ತ ಹೃದಯದ ಬಲಭಾಗಕ್ಕೆ ತಲುಪುತ್ತದೆ. ಅಲ್ಲಿಂದ ಈ ರಕ್ತವನ್ನು ಹೃದಯದ ಬಲಭಾಗದ ಪಂಪ್ ಶ್ವಾಸಕೋಶಗಳಿಗೆ ದೂಡುತ್ತದೆ. ಉಸಿರಿನಲ್ಲಿನ ಗಾಳಿಯ ಆಕ್ಸಿಜನ್ ಅಂಶ ಶ್ವಾಸಕೋಶಗಳಿಗೆ ತಲುಪಿ, ಈ ರಕ್ತಕ್ಕೆ ಆಕ್ಸಿಜನ್ ಮರುಪೂರಣ ಆಗುತ್ತದೆ. ಈಗ ಆಕ್ಸಿಜನ್ ಪ್ರಮಾಣ ಅಧಿಕವಾಗಿರುವ ರಕ್ತ ಹೃದಯದ ಎಡಭಾಗಕ್ಕೆ ಬರುತ್ತದೆ. ಅಲ್ಲಿಂದ ಪಂಪ್ ಆದ ರಕ್ತ ಶರೀರದ ಎಲ್ಲೆಡೆ ರಕ್ತನಾಳಗಳ ಮೂಲಕ ಹರಿದು ಜೀವಕೋಶಗಳಿಗೆ ಅಗತ್ಯವಾದ ಆಕ್ಸಿಜನ್ ಮತ್ತು ಪೋಷಕಾಂಶಗಳನ್ನು ತಲುಪಿಸುತ್ತದೆ. ಹೃದಯದ ಬಲಭಾಗದ ಪಂಪ್ ತನ್ನ ಪಕ್ಕದಲ್ಲೇ ಇರುವ ಶ್ವಾಸಕೋಶಗಳಿಗೆ ರಕ್ತ ಹರಿಸಿದರೆ, ಎಡಭಾಗದ ಪಂಪ್ ತಲೆಯ ಶಿಖರದಿಂದ ಕಾಲಿನ ತುದಿಯವರೆಗೆ ಎಲ್ಲೆಡೆ ರಕ್ತವನ್ನು ತಲುಪಿಸುತ್ತದೆ. ಹೀಗಾಗಿ, ಹೃದಯದ ಬಲಭಾಗದ ಪಂಪ್’ಗಿಂತ ಎಡಭಾಗದ ಪಂಪ್ ಸುಮಾರು ಐದಾರು ಪಟ್ಟು ಬಲಿಷ್ಠವಾದ ಸ್ನಾಯುಗಳನ್ನು ಹೊಂದಿದೆ. (ಚಿತ್ರ 1)
ಶರೀರದ ಬಹುತೇಕ ಅಂಗಗಳು ಕೆಲಸ ಮಾಡಲು ಮಿದುಳಿನ ಸಂಕೇತಗಳು ಬೇಕು. ಆದರೆ, ಹೃದಯದ ದೈನಂದಿನ ಕೆಲಸಕ್ಕೆ ಇಂತಹ ಸಂಕೇತಗಳ ನಿರಂತರ ಅಗತ್ಯವಿಲ್ಲ. ಈ ದೃಷ್ಟಿಯಿಂದ ಹೃದಯ ಒಂದು ಮಿತಿಯಲ್ಲಿ ಸ್ವಯಂಚಾಲಿಕ ಅಂಗ! ಹೃದಯದ ನಿಯಮಿತ ಬಡಿತಕ್ಕೆ ವಿದ್ಯುದಾವೇಶ ಬೇಕು. ಹೃದಯದಲ್ಲಿನ ಕೆಲವು ವಿಶಿಷ್ಟ ಕೋಶಗಳು ವಿದ್ಯುತ್ ತಯಾರಿಸಿ, ಇಡೀ ಹೃದಯಕ್ಕೆ ಸರಬರಾಜು ಮಾಡುತ್ತವೆ (ಚಿತ್ರ 2). ಹೀಗಾಗಿ, ಹೃದಯ ಸಾಮಾನ್ಯ ಸ್ಥಿತಿಯಲ್ಲಿ ಸ್ವತಂತ್ರ ಅಂಗ. ಆದರೆ, ಇದರ ಹೆಚ್ಚುವರಿ ನಿರ್ವಹಣೆ ಮಿದುಳಿನದ್ದು. ಹೃದಯದ ಗತಿಯಲ್ಲಿ ಏರುಪೇರಿನ ಅಗತ್ಯ ಬಿದ್ದಾಗ ಮಿದುಳು ಸಂಕೇತಗಳನ್ನು ಕಳಿಸುತ್ತದೆ.
ಬ್ಯಾಂಕಿನ ಕ್ಯಾಶಿಯರ್ ದಿನವೂ ಲಕ್ಷಗಟ್ಟಲೇ ಹಣವನ್ನು ನಿರ್ವಹಿಸುತ್ತಿದ್ದರೂ ಅವರ ವೈಯಕ್ತಿಕ ಅಗತ್ಯಗಳಿಗೆ ಅದನ್ನು ಬಳಸುವಂತಿಲ್ಲ. ಬದಲಿಗೆ ಕ್ಯಾಶಿಯರ್ ತಮ್ಮ ಕೆಲಸಕ್ಕೆ ಸಂಬಳ ಪಡೆಯುತ್ತಾರೆ. ಹೀಗೆಯೇ, ಹೃದಯ ಇಡೀ ಶರೀರದ ಆಕ್ಸಿಜನ್ ಅಗತ್ಯ ಪೂರೈಸುವ ರಕ್ತವನ್ನು ಸರಬರಾಜು ಮಾಡಿದರೂ, ತನ್ನ ಸ್ವಂತ ಕೆಲಸಗಳ ನಿರ್ವಹಣೆಗೆ ಅದನ್ನು ಬಳಸಿಕೊಳ್ಳುವಂತಿಲ್ಲ. ಅದಕ್ಕೆ ಹೃದಯಕ್ಕೆ ರಕ್ತ ಸರಬರಾಜು ಮಾಡುವ ಪ್ರತ್ಯೇಕ ರಕ್ತನಾಳಗಳಿವೆ. ಹೃದಯದ ಮೇಲ್ಭಾಗದಿಂದ ಆರಂಭಿಸಿ ವ್ಯಾಪಿಸುವ, ಹೃದಯದ ಮೇಲಿಟ್ಟ ಕಿರೀಟದಂತೆ ಕಾಣುವ ಈ ರಕ್ತನಾಳಗಳಿಗೆ ಕರೊನರಿ ರಕ್ತನಾಳಗಳು ಎಂದು ಹೆಸರು. (ಚಿತ್ರ 3)
ಅಂಕಿಗಳ ಹಿಂದೆ ಬಿದ್ದವರು “ಹೃದಯ ನಿಮಿಷಕ್ಕೆ ಇಷ್ಟೇ ಬಾರಿ ಬಡಿಯಬೇಕು” ಎನ್ನುವ ಫರ್ಮಾನು ಹೊರಡಿಸುತ್ತಾರೆ! ಆದರೆ, ಹೃದಯ ಕೆಲಸ ಮಾಡುವುದು ಅಗತ್ಯಕ್ಕೆ ತಕ್ಕಂತೆಯೇ ಹೊರತು, ಗಡಿಯಾರದ ಮುಳ್ಳಿನ ಮೇಲಲ್ಲ. ವ್ಯಾಯಾಮ ಮಾಡುವಾಗ, ಗಾಬರಿ / ಉದ್ವೇಗ ಕಾಡಿದಾಗ ಶರೀರಕ್ಕೆ ಹೆಚ್ಚಿನ ರಕ್ತದ ಅಗತ್ಯ ಬೀಳುತ್ತದೆ. ಆ ಸಂದರ್ಭದಲ್ಲಿ ಹೃದಯ ವೇಗವಾಗಿ ಬಡಿದು ದೇಹದ ಅಗತ್ಯವನ್ನು ಪೂರೈಸುತ್ತದೆ. ಶರೀರ ಮರಳಿ ಸಹಜ ಸ್ಥಿತಿಗೆ ಬಂದಾಗ ಹೃದಯದ ಬಡಿತ ಸಾಮಾನ್ಯ ಸ್ಥಿತಿಗೆ ಬರುತ್ತದೆ. ಅಂತೆಯೇ ಗಾಢನಿದ್ರೆಯಲ್ಲಿರುವಾಗ ದೇಹಕ್ಕೆ ಅಧಿಕ ರಕ್ತ ಬೇಕಿಲ್ಲ. ಅಂತಹ ವೇಳೆ ಹೃದಯ ಸಾಮಾನ್ಯಕ್ಕಿಂತ ಕಡಿಮೆ ವೇಗದಲ್ಲಿ ಬಡಿಯುತ್ತದೆ. ಎಚ್ಚರವಿರುವ ವೇಳೆ ವಿಶ್ರಾಂತಿಯ ಸಮಯದಲ್ಲಿ ಹೃದಯದ ಬಡಿತ ನಿಮಿಷಕ್ಕೆ 60-80 ಇರುತ್ತದೆ.
ಇದು ಹೃದಯದ ರಚನೆ ಮತ್ತು ಕೆಲಸ. ಹೃದಯದ ಸಂಭಾವ್ಯ ಸಮಸ್ಯೆಗಳು ಮತ್ತು ಅದರ ನಿರ್ವಹಣೆಯ ಸೂತ್ರಗಳು ಮುಂದಿನ ಸಂಚಿಕೆಯಲ್ಲಿ.
------------------------------------------
ಶ್ರೀಯುತ Srinidhi TG ಅವರ ejnana.com ಜಾಲತಾಣದಲ್ಲಿ 10/ನವೆಂಬರ್/2021 ರಂದು ಪ್ರಕಟವಾದ ಲೇಖನ. ಇದು ಎರಡು ಲೇಖನಗಳ ಪೈಕಿ ಮೊದಲನೆಯ ಭಾಗ. ಮೂಲ ಲೇಖನದ ಕೊಂಡಿ: https://www.ejnana.com/question-and-answer/heart

ಪ್ರಜಾವಾಣಿ ದಿನಪತ್ರಿಕೆಯ “ಕ್ಷೇಮ-ಕುಶಲ” ವಿಭಾಗದಲ್ಲಿ ದಿನಾಂಕ 2/ನವೆಂಬರ್/2021 ರಂದು ಪ್ರಕಟವಾದ ನನ್ನ ಲೇಖನ. ಈ ಲೇಖನಕ್ಕೆ ವಿಷಯವನ್ನು ಸೂಚಿಸಿ, ಬರೆಯಿಸಿ, ಪ್ರಕಟಿಸಿದ ಆತ್ಮೀಯರಾದ ಶ್ರೀಯುತ ಸೂರ್ಯಪ್ರಕಾಶ ಪಂಡಿತರಿಗೆ ಧನ್ಯವಾದಗಳು.

ಹೃದಯ ಮತ್ತು ಜೀವನಶೈಲಿ
ಚಿಕಿತ್ಸೆಗಳ ಆದ್ಯತೆಯಲ್ಲಿ ಮೊದಲ ಸ್ಥಾನ ಹೃದಯದ್ದೇ. ಹೃದಯ-ಸಂಬಂಧಿ ಕಾಯಿಲೆಗಳು ಪ್ರತಿಯೊಬ್ಬರಲ್ಲೂ ತೀವ್ರ ಆತಂಕ ಮೂಡಿಸುತ್ತವೆ. ಅಧಿಕ ರಕ್ತದೊತ್ತಡ, ಹೃದಯದ ಧಮನಿಗಳ ರಕ್ತಸಂಚಾರಕ್ಕೆ ಅಡ್ಡಿ, ಜನ್ಮಜಾತ ಹೃದಯ ಸಮಸ್ಯೆಗಳು, ಹೃದಯದ ಕವಾಟಗಳ ದೋಷ, ಹೃದಯದ ಮಾಂಸಖಂಡಗಳ ದೌರ್ಬಲ್ಯ, ಹೃದಯದ ಮಿಡಿತದಲ್ಲಿನ ಏರುಪೇರು – ಹೀಗೆ ಹಲವಾರು ಅನಾರೋಗ್ಯಗಳು ಯಾವುದೇ ವಯೋಮಾನದಲ್ಲೂ ಹೃದಯವನ್ನು ಕಾಡಬಹುದು. ಇವುಗಳ ಪೈಕಿ ಹಲವಾರು ಸಮಸ್ಯೆಗಳನ್ನು ಸಮರ್ಥವಾಗಿ ನಿಯಂತ್ರಿಸಬಹುದು ಹೃದಯದ ಆರೋಗ್ಯವನ್ನು ಜತನದಿಂದ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಜೀವನಶೈಲಿಯ ಪಾತ್ರ ಮಹತ್ವದ್ದು.
ಯಾವುದೇ ಕಾಯಿಲೆಯ ನಿಗ್ರಹ ಮತ್ತು ನಿಯಂತ್ರಣದಲ್ಲಿ ಮೂರು ಹಂತಗಳಿವೆ. ಮೊದಲನೆಯ ಹಂತ ಕಾಯಿಲೆ ಬಾರದಂತೆ ತಡೆಯುವುದು. ಇದನ್ನು ಸಾಧಿಸಲು ಉತ್ತಮ ಆರೋಗ್ಯ ಪದ್ದತಿಗಳನ್ನು ರೂಡಿಸಿಕೊಳ್ಳಬೇಕು. ಕಾಯಿಲೆ ಯಾವ ಕಾರಣದಿಂದ ಬರಬಹುದು ಎಂಬುದನ್ನು ಅಂದಾಜಿಸಿ, ಅದಕ್ಕೆ ವಿರುದ್ಧವಾಗಿ ನಿರ್ದಿಷ್ಟ ಪ್ರತಿರಕ್ಷಣೆ ಕಲ್ಪಿಸಬಹುದು. ಎರಡನೆಯ ಹಂತ ಕಾಯಿಲೆಯನ್ನು ಆರಂಭದಲ್ಲೇ ಪತ್ತೆ ಹಚ್ಚಿ, ಅದನ್ನು ಚಿಕಿತ್ಸೆ ಮಾಡುವುದು. ಇದಕ್ಕಾಗಿ ಕಾಯಿಲೆಯ ಆರಂಭಿಕ ಲಕ್ಷಣಗಳ ಪರಿಚಯ ಇರಬೇಕು. ಮೂರನೆಯ ಹಂತ ಕಾಯಿಲೆಯ ಪರಿಣಾಮಗಳನ್ನು ಕಡಿಮೆ ಮಾಡುವುದು ಮತ್ತು ಕಾಯಿಲೆಯಿಂದ ಈಗಾಗಲೇ ಆಗಿರುವ ಶಾರೀರಿಕ ಸಮಸ್ಯೆಗಳನ್ನು ನಿಧಾನವಾಗಿ ಸಹಜ ಸ್ಥಿತಿಗೆ ತರುವುದು. ಹೃದಯದ ಕಾಯಿಲೆಗಳಿಗೂ ಈ ಮೂರು ಹಂತಗಳು ಅನ್ವಯವಾಗುತ್ತವೆ. ಈ ಮೂರೂ ಹಂತಗಳಲ್ಲಿ ಜೀವನಶೈಲಿಯ ಸುಧಾರಣೆಗಳು ಸಹಾಯಕ.
ಹೃದಯದ ಹಲವಾರು ಕಾಯಿಲೆಗಳಿಗೆ ಅನುವಂಶೀಯ ಕಾರಣಗಳಿವೆ. ಹೀಗಾಗಿ, ಹತ್ತಿರದ ರಕ್ತಸಂಬಂಧಿಗಳ ಹೃದಯ ಆರೋಗ್ಯ ಪರಿಸ್ಥಿತಿಯ ಪರಿಚಯ ಇರುವುದು ಒಳ್ಳೆಯದು. ಈ ವಿವರಗಳನ್ನು ವೈದ್ಯರೊಡನೆ ಚರ್ಚಿಸಿ, ‘ಇವುಗಳಲ್ಲಿ ಯಾವ ಅನಾರೋಗ್ಯ ಅನುವಂಶಿಕವಾಗಿ ಬರಬಹುದು’ ಎಂಬುದನ್ನು ಅರಿತು, ‘ಆ ಸಮಸ್ಯೆ ಬಾರದಂತೆ ಯಾವ ಕ್ರಮಗಳನ್ನು ಕೈಗೊಳ್ಳಬೇಕು’ ಎಂದೂ ತಿಳಿಯಬಹುದು.
ಹೃದಯದ ಆರೋಗ್ಯ ಮತ್ತು ಆಹಾರ ಜೊತೆಜೊತೆಯಾಗಿ ಸಾಗುತ್ತವೆ. ಸಾತ್ವಿಕ ಆಹಾರವನ್ನು ಪ್ರಜ್ಞಾಪೂರ್ವಕವಾಗಿ ಆಯ್ಕೆ ಮಾಡಿಕೊಳ್ಳಬೇಕು. ತಾಜಾ ಹಣ್ಣು, ತರಕಾರಿ, ಧಾನ್ಯಗಳು, ಪ್ರೋಟೀನ್ ಅಂಶ ಅಧಿಕವಾಗಿರುವ ಆಹಾರ, ಜಿಡ್ಡಿನ ಅಂಶ ಕಡಿಮೆ ಇರುವ ಹೈನು ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಬೇಕು.
“ಕೂರುವುದು ಆಧುನಿಕ ಧೂಮಪಾನ” ಎನ್ನುವ ಮಾತಿದೆ! ಧೂಮಪಾನದಿಂದ ಆರೋಗ್ಯದ ಮೇಲೆ ಆಗುವ ವ್ಯತಿರಿಕ್ತ ಪರಿಣಾಮಗಳು, ಯಾವುದೇ ಚಟುವಟಿಕೆಯಿಲ್ಲದೆ ವಿನಾ ಕಾರಣ ಕೂರುವುದರಿಂದಲೂ ಆಗುತ್ತದೆ ಎನ್ನಲಾಗಿದೆ. ಆರೋಗ್ಯಕರ ಹೃದಯಕ್ಕೆ ವ್ಯಾಯಾಮ ಬಹಳ ಮುಖ್ಯ. ದಿನಕ್ಕೆ ಕನಿಷ್ಠ ಮೂವತ್ತು ನಿಮಿಷಗಳ ಕಾಲ ಉಸಿರಾಟದ ಗತಿಯನ್ನು ಏರಿಸುವ ಶಾರೀರಿಕ ವ್ಯಾಯಾಮ ಮಾಡಬೇಕು. ಇದರಲ್ಲಿ ವಾರಕ್ಕೆ ಎರಡು ದಿನ ಮಾಂಸಖಂಡಗಳ ಬಲವನ್ನು ಹೆಚ್ಚಿಸುವ ವ್ಯಾಯಾಮ ಇರಬೇಕು. ವಾರದಲ್ಲಿ ಇಂತಿಷ್ಟು ದಿನ ಎನ್ನುವುದಕ್ಕಿಂತ ಪ್ರತಿದಿನವೂ ತಪ್ಪದೆ ವ್ಯಾಯಾಮ ಮಾಡುವುದು ಸೂಕ್ತ.
ಧೂಮಪಾನ ಮತ್ತು ಮದ್ಯಪಾನಗಳು ಹೃದಯದ ಶತ್ರುಗಳು. ಉಪ್ಪು ಅಥವಾ ಸಕ್ಕರೆಯ ಅಂಶ ಅಧಿಕವಾಗಿರುವ ತಿನಿಸು ಮತ್ತು ಪಾನೀಯಗಳು, ಅಧಿಕ ಜಿಡ್ಡಿನ ಆಹಾರ ಹೃದಯದ ಅನಾರೋಗ್ಯಕ್ಕೆ ಕಾರಣವಾಗಬಹುದು. ಇಂತಹುವುಗಳ ಬಳಕೆಯನ್ನು ಕಡಿಮೆಗೊಳಿಸುವುದು ಹೃದ್ರೋಗವನ್ನು ದೂರವಿಡಲು ಸಹಾಯಕ. ಯಾವುದಾದರೂ ಆರೋಗ್ಯ ಸಂಬಂಧಿ ಔಷಧಗಳನ್ನು ನಿಯಮಿತವಾಗಿ ಸೇವಿಸುತ್ತಿದ್ದರೆ, ಅವುಗಳನ್ನು ಅಕಾರಣವಾಗಿ ತಪ್ಪಿಸಬಾರದು. ಇದರ ಜೊತೆಗೆ ರಕ್ತದೊತ್ತಡ, ಮಧುಮೇಹ ಮುಂತಾದ ಸಮಸ್ಯೆಗಳನ್ನು ಸಾಧ್ಯವಾದಷ್ಟೂ ನಿಯಂತ್ರಣದಲ್ಲಿ ಇಡಬೇಕು.
ದೇಹದ ಬೊಜ್ಜು ಹೃದಯದ ಮೇಲೆ ವಿಪರೀತ ಒತ್ತಡ ಹೇರುತ್ತದೆ. ಶರೀರದ ತೂಕವನ್ನು ಅಂಕೆಯಲ್ಲಿ ಇಡುವುದು ಆರೋಗ್ಯದ ದೃಷ್ಟಿಯಿಂದ ಬಹಳ ಒಳ್ಳೆಯದು. “ನನ್ನ ದೇಹ; ನನ್ನ ಇಚ್ಛೆ” ಎಂದು ಬೊಜ್ಜನ್ನು ಸಮರ್ಥಿಸಿದರೆ, ಅದರ ಪರಿಣಾಮ ಹೃದಯದ ಮೇಲೆ ತಟ್ಟುವುದನ್ನು ತಪ್ಪಿಸಲಾಗದು. ಹೀಗಾಗಿ, ಬೊಜ್ಜು ಉಳ್ಳವರಿಗೆ ಆರೋಗ್ಯದ ಜವಾಬ್ದಾರಿ ಹೆಚ್ಚಾಗಿ ಇರಬೇಕು. ಆಹಾರ ತಜ್ಞರ ಸಲಹೆಯ ಮೇರೆಗೆ ಅಗತ್ಯ ಪೋಷಕಾಂಶಗಳುಳ್ಳ ಸಮತೋಲಿತ ಆಹಾರವನ್ನು ಸೇವಿಸಬೇಕು. ಅಧಿಕ ಕ್ಯಾಲರಿ ಉಳ್ಳ ಪದಾರ್ಥಗಳಿಂದ ದೂರವಿರಬೇಕು. ಇದು ಯಾವುದೇ ಲಿಂಗಭೇದವಿಲ್ಲದೆ ಎಲ್ಲರಿಗೂ ಅನ್ವಯಿಸುತ್ತದೆ.
ದೈಹಿಕ ಮತ್ತು ಮಾನಸಿಕ ಒತ್ತಡದ ನಿಯಂತ್ರಣ ಹೃದಯದ ಮೇಲೆ ಬಹಳ ಉತ್ತಮ ಪರಿಣಾಮ ಬೀರಬಲ್ಲದು. ಕೋಪ, ತುಮುಲಗಳು ಹೃದಯದ ರಕ್ತನಾಳಗಳನ್ನು ಸಂಕೋಚಿಸಿ, ಆಘಾತ ಉಂಟುಮಾಡಬಲ್ಲವು. ಮಾನಸಿಕ ಅಶಾಂತಿ, ಕೆಲಸದ ಒತ್ತಡಗಳ ಕಾರಣದಿಂದ ಅಧಿಕ ರಕ್ತದೊತ್ತಡಕ್ಕೆ ತುತ್ತಾಗುವವರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ. ಉದ್ವೇಗಗಳಿಗೆ ಸಿಲುಕಿ ಧೂಮಪಾನ, ಮದ್ಯಪಾನಗಳ ಚಟ ಬೆಳೆಸಿಕೊಂಡವರು ಇಬ್ಬಗೆಯಿಂದ ಹೃದಯದ ಕಾಯಿಲೆಗಳಿಗೆ ತುತ್ತಾಗುತ್ತಾರೆ. ಒತ್ತಡದಿಂದ ಬಳಲುವವರು ಮಾನಸಿಕ ಆರೋಗ್ಯ ಸಲಹೆಗಾರರ ಸಹಾಯ ಪಡೆಯಬೇಕು. ನಿಗದಿತ ವ್ಯಾಯಾಮ, ಪ್ರಾಣಾಯಾಮ, ಧ್ಯಾನಗಳು ಮನಸ್ಸಿನ ಉದ್ವೇಗವನ್ನು ಕಡಿಮೆ ಮಾಡುವಲ್ಲಿ ಬಹಳ ಸಹಕಾರಿ. ಕುಟುಂಬದ ಸದಸ್ಯರ ಜೊತೆಗಿನ ಮಾತುಕತೆ, ಸಮಾನಮನಸ್ಕ ಸ್ನೇಹಿತರ ಜೊತೆಗಿನ ಒಡನಾಟ, ಧಾರ್ಮಿಕ ಸಭೆಗಳಲ್ಲಿ ಭಾಗವಹಿಸುವಿಕೆ, ಸಾಮಾಜಿಕ ಹಿತದ ಕಾರ್ಯಗಳಲ್ಲಿ ಕೈಜೋಡಿಸುವಿಕೆ ಮುಂತಾದುವು ಮಾನಸಿಕ ತುಮುಲವನ್ನು ಗೆಲ್ಲುವಲ್ಲಿ ಮುಖ್ಯ ಪಾತ್ರ ವಹಿಸುತ್ತವೆ.
ಹೃದಯದ ಆರೋಗ್ಯದ ಮೇಲೆ ನಿದ್ರೆಯ ಪರಿಣಾಮ ಗಾಢವಾದದ್ದು. ಪ್ರಸ್ತುತ ಜೀವನಶೈಲಿಯಲ್ಲಿ ನಿದ್ರೆಯ ಬಗ್ಗೆ ಹೆಚ್ಚಿನ ಮಂದಿ ಸರಿಯಾದ ಗಮನ ನೀಡುತ್ತಿಲ್ಲ. ಇದರ ಪರಿಣಾಮವಾಗಿ ಸಣ್ಣ ವಯಸ್ಸಿನಲ್ಲೇ ಹೃದ್ರೋಗಗಳಿಗೆ ತುತ್ತಾಗುವವರ ಸಂಖ್ಯೆ ಬೆಳೆಯುತ್ತಿದೆ. ಉತ್ತಮ ಗುಣಮಟ್ಟದ, ಸರಿಯಾದ ಕಾಲಾವಧಿಯ ನಿದ್ರೆ, ಹೃದಯ ಮತ್ತು ರಕ್ತನಾಳಗಳ ಸಮಸ್ಯೆಗಳನ್ನು ಗುಣಪಡಿಸುತ್ತದೆ; ಹೃದಯದ ಕೆಲಸಕ್ಕೆ ಅಗತ್ಯವಾದ ಚೋದಕಗಳನ್ನು ಸರಿದೂಗಿಸುತ್ತದೆ; ಶರೀರದ ರಕ್ಷಕ ವ್ಯವಸ್ಥೆಯನ್ನು ಚುರುಕಾಗಿ ಇಟ್ಟು, ಕಾಯಿಲೆಗಳನ್ನು ದೂರವಿಡುತ್ತದೆ. ನಿದ್ರಾಹೀನತೆಯಿಂದ ಹೃದ್ರೋಗಗಳ ಸಾಧ್ಯತೆ ಅಧಿಕವಾಗುತ್ತದೆ.
ಜೀವನದ ಉದ್ದಕ್ಕೂ ಬಿಡುವಿಲ್ಲದೆ ಕೆಲಸ ಮಾಡುವ ನಮ್ಮ ಹೃದಯವನ್ನು ಕ್ಷೇಮವಾಗಿ ಇಟ್ಟುಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಬಹಳ ಮುಖ್ಯ. ನಮ್ಮ ಜೀವನಶೈಲಿ ಮತ್ತು ಹೃದ್ರೋಗ ನಿಯಂತ್ರಣದ ನಡುವೆ ಬಲವಾದ ಸಂಬಂಧವಿದೆ. ನಮ್ಮ ದೈನಂದಿನ ಕಾರ್ಯಗಳಲ್ಲಿ ಇತಿಮಿತಿಯ ಶಿಸ್ತನ್ನು ರೂಢಿಸಿಕೊಳ್ಳುವುದು; ಧ್ಯಾನ ಮತ್ತು ಪ್ರಾಣಾಯಾಮಗಳ ಮೂಲಕ ಮನಸ್ಸನ್ನು ಶಾಂತವಾಗಿ ಇರಿಸಿಕೊಳ್ಳುವುದು ನಾವು ನಮ್ಮ ಹೃದಯಕ್ಕೆ ನೀಡಬಹುದಾದ ಅನುಪಮ ಕೊಡುಗೆಗಳಲ್ಲಿ ಒಂದು.
----------------------
ಮೂಲ ಲೇಖನದ ಕೊಂಡಿ:
-------------------





ಒಂಟಿತನದ ಸಮಸ್ಯೆಯ ನಿವಾರಣೆಯಲ್ಲಿ ಧ್ಯಾನ ಮತ್ತು ಆಧ್ಯಾತ್ಮದ ಪಾತ್ರಗಳ ಕುರಿತಾದ ನನ್ನ ಲೇಖನ 28/9/2021 ರ ಪ್ರಜಾವಾಣಿ ದಿನಪತ್ರಿಕೆಯಲ್ಲಿ ಪ್ರಕಟವಾಗಿದೆ. ಈ ವಿಷಯವನ್ನು ಸೂಚಿಸಿ, ಪ್ರಕಟಿಸಿದ ಶ್ರೀಯುತ ಸೂರ್ಯಪ್ರಕಾಶ ಪಂಡಿತರಿಗೆ ಧನ್ಯವಾದಗಳು.

ಲೇಖನದ ಪೂರ್ಣ ಪಾಠ ಇಲ್ಲಿದೆ:
**ಏಕಾಂಗಿಭಾವದ ನಿವಾರಣೆಗೆ ಧ್ಯಾನದ ಉಪಾಯ**
ಮಾನವ ಮೂಲತಃ ಸಮಾಜಜೀವಿ. ಮಾನಸಿಕ ಸಾಂಗತ್ಯಕ್ಕೆ ಮನುಷ್ಯನ ಮನಸ್ಸು ಸದಾ ಹಾತೊರೆಯುತ್ತದೆ. ದೈಹಿಕ ಮತ್ತು ಮಾನಸಿಕ ಆರೋಗ್ಯದಲ್ಲಿ ನಾವು ಜೀವಿಸುವ ಪರಿಸರದ, ಅಲ್ಲಿನ ವ್ಯಕ್ತಿಗಳ ಪಾತ್ರ ಗಣ್ಯ. ಆತ್ಮೀಯ ಭಾವಕ್ಕಾಗಿ ಹಂಬಲಿಸುವ ಮನಸ್ಸಿಗೆ ಮುಕ್ತ ಮಾತುಕತೆಗಳ ಅಗತ್ಯವಿದೆ. ಬದುಕಿನಲ್ಲಿ ಇಂತಹ ಸಾಮಾಜಿಕ ಸಂಬಂಧ ಸಾಧ್ಯವಾಗದಿದ್ದಾಗ ಒಂಟಿತನ ಅಥವಾ ಏಕಾಂಗಿಭಾವ ಕಾಡುತ್ತದೆ. ವಯಸ್ಸಿನ ಅಂತರವಿಲ್ಲದೆ ಒಂಟಿತನ ಯಾರನ್ನಾದರೂ ಬಾಧಿಸಬಹುದು. ಹದಿನೆಂಟು ವರ್ಷ ವಯಸ್ಸಿನವರಿಗಿಂತ ಕಡಿಮೆ ಮತ್ತು 65 ವರ್ಷಗಳಿಗಿಂತ ವಯಸ್ಸಿನವರಲ್ಲಿ ಏಕಾಂಗಿಭಾವದ ಸಮಸ್ಯೆ ಹೆಚ್ಚು. ಸಾಕಷ್ಟು ಜನರ ಗುಂಪಿನಲ್ಲಿ ಇದ್ದರೂ ಮನಸ್ಸಿಗೆ ಹೊಂದಿಕೆಯಾಗದ ವ್ಯಕ್ತಿಗಳೇ ತುಂಬಿದ್ದರೆ, ಆಗಲೂ ಏಕಾಂಗಿಭಾವ ಆವರಿಸಬಹುದು. ತಮ್ಮದೇ ಮನೆಯ ಇತರ ಸದಸ್ಯರ ಮನೋಭಾವ ತಮಗೆ ಹೊಂದದೆ ಒಂಟಿತನ ಅನುಭವಿಸುವವರಿದ್ದಾರೆ. ಏಕಾಂಗಿಭಾವ ಅನುಭವಿಸುವ ಅನೇಕ ಮಂದಿ ಈಚೆಗೆ ಸಾಮಾಜಿಕ ಜಾಲತಾಣಗಳ ಮೇಲೆ ವಿಪರೀತ ಅವಲಂಬಿತರಾಗಿ, ಕಾಲಕ್ರಮೇಣ ಅದರಿಂದಲೂ ಮತ್ತಷ್ಟು ನಿರಾಸೆಪಟ್ಟಿದ್ದಾರೆ.
ಮೂರು ಬಗೆಯ ಏಕಾಂಗಿಭಾವವನ್ನು ತಜ್ಞರು ಗುರುತಿಸುತ್ತಾರೆ. ಸಾಂದರ್ಭಿಕ ಒಂಟಿತನದಲ್ಲಿ ಪರಿಸರದ ಪ್ರಭಾವ ಇರುತ್ತದೆ. ಮನಸ್ಸಿಗೆ ಹಿತಕರವಲ್ಲದ ಅನುಭವಗಳು; ಬಯಕೆ ಮತ್ತು ವಾಸ್ತವಗಳ ನಡುವಿನ ಅಂತರ; ಗೆಳೆಯರ ಅಗಲಿಕೆ; ಕುಟುಂಬದ ಸದಸ್ಯರ ಜೊತೆಗಿನ ಭಿನ್ನಾಭಿಪ್ರಾಯಗಳು; ಅಪಘಾತ, ಅವಗಢಗಳು ಏಕಾಂಗಿಭಾವವನ್ನು ಪ್ರೇರೇಪಿಸುತ್ತವೆ. ಬೆಳವಣಿಗೆಯ ಒಂಟಿತನದಲ್ಲಿ ವೈಯಕ್ತಿಕ ನ್ಯೂನತೆಗಳು; ವಿಕಸನದ ಕೊರತೆಗಳು; ಕುಟುಂಬ ಛಿದ್ರವಾಗುವಿಕೆ; ಆತ್ಮೀಯರ ಮರಣ; ಬಡತನ; ವಾಸ್ತವ್ಯದ ಸಮಸ್ಯೆಗಳು; ದೈಹಿಕ ಯಾ ಮಾನಸಿಕ ತೊಂದರೆಗಳು ಪಾತ್ರ ವಹಿಸುತ್ತವೆ. ಆಂತರಿಕ ಒಂಟಿತನದಲ್ಲಿ ವ್ಯಕ್ತಿತ್ವದ ಅಂಶಗಳು; ಸ್ವನಿಯಂತ್ರಣದ ಲೋಪಗಳು; ಮಾನಸಿಕ ಉದ್ವೇಗ; ಕೀಳರಿಮೆ; ಅಪರಾಧಿಭಾವ; ಹೊಂದಾಣಿಕೆ ಇಲ್ಲದಿರುವಿಕೆ ಇತ್ಯಾದಿ ಕಾರಣಗಳಿರುತ್ತವೆ.
ಏಕಾಂಗಿತನ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನಿದ್ರಾಹೀನತೆ, ಆಹಾರ ಸೇವನೆಯಲ್ಲಿ ಏರುಪೇರು, ಬೊಜ್ಜು, ರೋಗನಿರೋಧ ಶಕ್ತಿ ಕುಂಠಿತವಾಗುವಿಕೆ, ಅಧಿಕ ರಕ್ತದೊತ್ತಡ, ಹೃದಯಸಂಬಂಧಿ ಕಾಯಿಲೆಗಳು, ನೆನಪಿನ ಶಕ್ತಿಯ ಕ್ಷೀಣತೆ, ಸಮಸ್ಯಾಪರಿಹಾರ ತರ್ಕದಲ್ಲಿ ತೊಂದರೆಗಳು ಕಾಣಬಹುದು. ಒಂಟಿತನ ಮಾನಸಿಕವಾಗಿ ಹೆಚ್ಚು ಕುಗ್ಗಿಸುತ್ತದೆ. ಖಿನ್ನತೆ, ಕುಡಿತ, ಅಸಹಜ ವರ್ತನೆಯಂತಹ ಸಮಸ್ಯೆಗಳು ಗಾಢವಾದ ಪ್ರಭಾವ ಬೀರಬಹುದು. ಮಾನಸಿಕ ತುಮುಲ ತೀವ್ರವಾದಾಗ ಆತ್ಮಹತ್ಯೆಯ ಆಲೋಚನೆಗಳೂ ಬರಬಹುದು.
ಏಕಾಂಗಿಭಾವದ ಪರಿಹಾರದಲ್ಲಿ ವಿವಿಧ ವಿಧಾನಗಳಿವೆ. ಸಾಮಾಜಿಕ ಕೌಶಲ್ಯಗಳನ್ನು ರೂಪಿಸಿಕೊಂಡು, ಯಾವುದೋ ಒಂದು ಚಟುವಟಿಕೆಯಲ್ಲಿ ನಿರತವಾಗಿದ್ದರೆ ಒಂಟಿತನ ಕಾಡುವುದಿಲ್ಲ. ಏಕಾಂಗಿಭಾವದ ದೈಹಿಕ ಅಥವಾ ಮಾನಸಿಕ ಚಿಹ್ನೆಗಳು ಕಂಡುಬರುತ್ತಿದ್ದಂತೆ, ಅದನ್ನು ಗುರುತಿಸಿ ನಿವಾರಿಸುವ ಪ್ರಯತ್ನವನ್ನು ಬಂಧು-ಬಳಗದವರು, ಸ್ನೇಹಿತರು ಮಾಡಬೇಕು; ಯಾವುದಾದರೂ ಕೌಶಲ್ಯಗಳ ಬೆಳವಣಿಗೆಯನ್ನು ಪ್ರಚೋದಿಸಬೇಕು. ಒಂಟಿತನ ಅನುಭವಿಸುವವರಿಗೆ ಸಾಮಾಜಿಕ ಬೆಂಬಲ ಅಗತ್ಯ. ಅಂತಹವರ ಜೊತೆಗಿನ ಸಾಂಗತ್ಯಕ್ಕೆ ಸಮಾಜ ಇಂಬು ನೀಡಬೇಕು; ಇತರರೊಡನೆ ಬೆರೆಯಲು ಬೇಕಾದ ಅವಕಾಶಗಳನ್ನು ವಿಫುಲವಾಗಿ ಒದಗಿಸಬೇಕು. ಇದರಿಂದ ‘ಸಮಾಜ ತನ್ನ ಬಗ್ಗೆ ಕಾಳಜಿ ವಹಿಸುತ್ತಿದೆ’ ಎಂಬ ಭಾವನೆ ಬಂದು, ಒಂಟಿತನದ ಲಕ್ಷಣಗಳು ಕಡಿಮೆಯಾಗುತ್ತವೆ. ಸರಿಯಾದ ಸಮಯದಲ್ಲಿ ಪರಿಹಾರೋಪಾಯಗಳನ್ನು ಯೋಜಿಸಿದರೆ ಏಕಾಂಗಿಭಾವ ಕಾಡುವುದನ್ನು, ಅದರ ಪ್ರತಿಕೂಲ ಪರಿಣಾಮಗಳನ್ನು ತಡೆಯಬಹುದು.
ಒಂಟಿತನದ ನಿವಾರಣೆಯ ಮುಖ್ಯವಾದ ಉಪಾಯ ಧ್ಯಾನ ಮತ್ತು ಆಧ್ಯಾತ್ಮ. ಮನಸ್ಸಿನ ಚಾಂಚಲ್ಯವನ್ನು ನಿವಾರಿಸಲು ಗಮನವನ್ನು ಯಾವುದೋ ಒಂದು ವಿಷಯದತ್ತ ಕೇಂದ್ರೀಕರಿಸುವುದು ಉತ್ತಮ ಮಾರ್ಗ. ಗಮನಕ್ಕೆ ಇಂತಹುದೇ ವಿಷಯ ಆಗಿರಬೇಕೆಂಬ ಕಡ್ಡಾಯವಿಲ್ಲ. ಆಸ್ತಿಕರು ದೇವರ ಬಗ್ಗೆ ಆಲೋಚಿಸಬಹುದು; ಕರ್ಮಯೋಗಿಗಳು ತಾವು ಮಾಡುವ ಕೆಲಸದ ಬಗ್ಗೆ ಚಿತ್ತವನ್ನು ಹರಿಸಬಹುದು; ವಿಜ್ಞಾನಿಗಳು ತಮ್ಮ ಪ್ರಯೋಗದ ಬಗ್ಗೆ ಚಿಂತಿಸಬಹುದು – ಒಟ್ಟಾರೆ, ಏಕಚಿತ್ತವಾಗಿ ಮನಸ್ಸನ್ನು ಕಾರ್ಯೋನ್ಮುಖಗೊಳಿಸುವುದು ಫಲಕಾರಿ.
ಒಂಟಿತನ ಋಣಾತ್ಮಕ ಚಿಂತನೆಗಳನ್ನು ಪ್ರಚೋದಿಸುತ್ತದೆ. ಕೋವಿಡ್-19 ರ ಜಾಗತಿಕ ವಿಪತ್ತು ಏಕಾಂಗಿಭಾವವನ್ನು ಮತ್ತಷ್ಟು ಹೆಚ್ಚಿಸಿದರೆ, ಕಾಯಿಲೆಗೆ ಸಂಬಂಧಿಸಿದ ಸುದ್ಧಿಗಳು, ಆತಂಕಗಳು, ಊಹಾಪೋಹಗಳು, ವದಂತಿಗಳು ಋಣಾತ್ಮಕ ಮನೋಭಾವವನ್ನು ಬೆಳೆಸುತ್ತಿವೆ. ಒಂದಕ್ಕೆ ಮತ್ತೊಂದು ಇಂಬುನೀಡುವಂತೆ, ಇವೆರಡೂ ಮಾನಸಿಕ ಸ್ಥಿತಿಯನ್ನು ಕುಗ್ಗಿಸುತ್ತವೆ. ಧ್ಯಾನ ಮತ್ತು ಆಧ್ಯಾತ್ಮಿಕ ಚಿಂತನೆಯಿಂದ ಆಗುವ ಒಳಿತಿನ ಪರಿಣಾಮಗಳನ್ನು ಸಂಶೋಧಕರು ವಿವೇಚಿಸಿದ್ದಾರೆ. ಧ್ಯಾನದಿಂದ ಮಾನಸಿಕ ಏಕಾಗ್ರತೆ ಹೆಚ್ಚುವುದನ್ನು ಸಂಶೋಧನೆಗಳು ಧೃಢಪಡಿಸಿವೆ. ಇದರಿಂದ ತಂತಮ್ಮ ಮಾನಸಿಕ ಸ್ಥಿತಿಗಳ ಬಗ್ಗೆ ಕಾರ್ಯ-ಕಾರಣ ಸಂಬಂಧವನ್ನು ಪತ್ತೆ ಮಾಡುವುದು ಸರಳವಾಗುತ್ತದೆ. ಸಮಸ್ಯೆಯ ಅಸ್ತಿತ್ವವನ್ನು ಒಪ್ಪಿಕೊಳ್ಳುವುದು ಅದರ ಪರಿಹಾರದಲ್ಲಿನ ಮೊದಲ ಹೆಜ್ಜೆ. ಈ ಪ್ರಕ್ರಿಯೆಯನ್ನು ಧ್ಯಾನ ಮತ್ತು ಆಧ್ಯಾತ್ಮಿಕ ಚಿಂತನೆಗಳು ಸರಳಗೊಳಿಸುತ್ತವೆ. ಧ್ಯಾನದಿಂದ ಜೀನ್ ಮಟ್ಟದಲ್ಲಿ ಬದಲಾವಣೆಗಳು ಆಗುತ್ತವೆಂದು ಅನೇಕ ಸಂಶೋಧನೆಗಳು ತೋರಿವೆ.
ಏಕಾಂಗಿಭಾವದ ನಿರ್ಮೂಲನದಲ್ಲಿ ಆಯಾ ವ್ಯಕ್ತಿಯ ಪಾತ್ರವೂ ಮುಖ್ಯ. ಎಲ್ಲಿಯವರೆಗೆ ನಮ್ಮ ಬಗೆಗಿನ ಗ್ರಹಿಕೆ ಇತರರ ಅಭಿಪ್ರಾಯದ ಮೇಲೆ ನಿಂತಿರುತ್ತದೋ, ಅಲ್ಲಿಯವರೆಗೆ ಸ್ವಂತಿಕೆ ಬೆಳೆಯುವುದು ಕಷ್ಟ. ಇತರರಿಗೆ ನಾವು ಬೇಡವಾಗಿದ್ದೇವೆ ಎಂಬ ಭಾವನೆಯನ್ನು ಮನಸ್ಸಿನಿಂದ ತೊಡೆದುಹಾಕಬೇಕು. ಮನಸ್ಸಿಗೆ ಹಿತವೆನಿಸುವ ಹವ್ಯಾಸವನ್ನು ಹಚ್ಚಿಕೊಳ್ಳಬೇಕು. ಮತ್ತೊಬ್ಬರ ವರ್ತನೆಗಳನ್ನು ವಿಮರ್ಶೆ ಮಾಡುವ ಗೋಜಿಗೆ ಹೋಗಬಾರದು. ಬಹಳ ಆತ್ಮೀಯರಾದವರಲ್ಲಿ ಮನಸ್ಸಿನ ಭಾವನೆಗಳನ್ನು ಹಂಚಿಕೊಳ್ಳುವುದು ತಪ್ಪಲ್ಲ. ‘ನಮಗೆ ಬೇಕಾದವರು ಸದಾ ನಮ್ಮೊಂದಿಗೆ ಇರುತ್ತಾರೆ’ ಎನ್ನುವ ಖಾತ್ರಿಯಿಲ್ಲ. ಪ್ರಪಂಚವಾಗಲೀ, ಸಂಬಂಧಗಳಾಗಲೀ ಸ್ಥಾಯಿಯಲ್ಲ. ಹೀಗಾಗಿ, ನಮ್ಮ ಪರಿಚಯದ ವ್ಯಾಪ್ತಿಯನ್ನು ಹಿಗ್ಗಿಸಿಕೊಳ್ಳಬೇಕು. ನಮಗೆ ಆಪ್ಯಾಯವಾಗುವ ಹೊಸಹೊಸ ಸಾಧ್ಯತೆಗಳತ್ತ ಮನಸ್ಸನ್ನು ತೆರೆದುಕೊಳ್ಳಬೇಕು. ನಮ್ಮ ಸಂತಸದ ಕಾರಣವನ್ನು ಯಾರೋ ಒಬ್ಬರ ಅಸ್ತಿತ್ವದ ಮೇಲೆ ನಿಲ್ಲಿಸಲಾಗದು. ಹೀಗಾಗಿ, ಸಂಬಂಧಗಳ, ಗೆಳೆತನದ ಪರಿಧಿಯನ್ನು ವಿಸ್ತರಿಸಬೇಕು. ನಮ್ಮ ಅಗತ್ಯಗಳ ಸಲುವಾಗಿ ಕಾಲವನ್ನು ವ್ಯಯಿಸಬೇಕು. ಮನಸ್ಸಿನಲ್ಲಿ ಸುಪ್ತವಾಗಿರುವ ಕಲಿಕೆಯೊಂದನ್ನು ಸಾಕರಗೊಳಿಸುವ ಸಾಧ್ಯತೆಗಳನ್ನು ಪರಿಶೀಲಿಸಬೇಕು. ಇಂತಹ ಸ್ಥಿತಿಯನ್ನು ತಲುಪಲು ಧ್ಯಾನ ಅತ್ಯಂತ ಸಹಕಾರಿ. ಇದರಿಂದ ನಿಧಾನವಾಗಿ ಏಕಾಂಗಿಭಾವ ದೂರವಾಗುತ್ತದೆ. ವ್ಯಕ್ತಿಯ ಮತ್ತು ವ್ಯಕ್ತಿತ್ವದ ವಿಕಸನದಲ್ಲಿ ಆತ್ಮಸಂತೋಷ ಪ್ರಮುಖವಾದದ್ದು.
------------------
ಪ್ರಜಾವಾಣಿ ಪತ್ರಿಕೆಯಲ್ಲಿನ ಲೇಖನದ ಕೊಂಡಿ: https://www.prajavani.net/.../loneliness-and-depression...