ಭಾನುವಾರ, ಆಗಸ್ಟ್ 30, 2020

 

ಆರೋಗ್ಯ ಕ್ಷೇತ್ರದಲ್ಲಿ ಆತ್ಮನಿರ್ಭರತೆ – ನವಸವಾಲುಗಳು ಮತ್ತು ನವಸಾಧ್ಯತೆಗಳು

ಡಾ. ಕಿರಣ್ ವಿ. ಎಸ್.

“ಮನುಷ್ಯನ ಶಕ್ತಿ-ದೌರ್ಬಲ್ಯಗಳ ಪರಿಚಯ ಬಹಳ ಚೆನ್ನಾಗಿ ಆಗುವುದು ವಿಪತ್ತಿನ ಕಾಲದಲ್ಲಿ” ಎನ್ನುವ ಮಾತಿದೆ. 2020 ರ ಕರೊನಾವೈರಸ್ ಎಂಬ ಜಾಗತಿಕ ವಿಪತ್ತು, ನಮ್ಮ ಜಗತ್ತಿನ ಪ್ರತಿಯೊಂದು ಕ್ಷೇತ್ರವನ್ನೂ ನಡುಗಿಸಿದೆ. ಇದರಲ್ಲಿ ಅತ್ಯಂತ ನೇರವಾದ, ಪ್ರತ್ಯಕ್ಷವಾದ, ತೀವ್ರವಾದ ಆಘಾತವನ್ನು ಎದುರಿಸುತ್ತಿರುವುದು ವೈದ್ಯಕೀಯ ರಂಗ. ಬೇರೆಲ್ಲಾ ಕ್ಷೇತ್ರಗಳೂ ಈ ವಿಪತ್ತಿನ ಪರಿಣಾಮಗಳನ್ನು ಮಾತ್ರ ಅನುಭವಿಸುತ್ತಿವೆ. ಆದರೆ, ವೈದ್ಯಕೀಯ ರಂಗಕ್ಕೆ ಈ “ಅರಿಯದ ವೈರಿ”ಯನ್ನು ಪತ್ತೆ ಮಾಡುವ, ನಿಯಂತ್ರಿಸುವ, ಧಾಳಿಯನ್ನು ತಡೆಯುವ, ಅನಾಹುತಗಳನ್ನು ಸಂತೈಸುವ, ಇತರರನ್ನು ರಕ್ಷಿಸುವ, ಪರಿಹಾರ ಹುಡುಕುವ ಸವಾಲುಗಳೂ ಎದುರಾಗಿವೆ. ಜೊತೆಗೆ, ಇದೊಂದು ರೀತಿಯ ಆತ್ಮಘಾತಿ ಮಾರ್ಗ! ವೈದ್ಯಕೀಯ ರಂಗದ ಎಲ್ಲಾ ಸದಸ್ಯರೂ ತಂತಮ್ಮ ರಕ್ಷಣೆ ಮಾಡಿಕೊಳ್ಳುತ್ತಾ ಇದನ್ನು ಸಾಧಿಸಬೇಕು; ಇತರರಿಗೆ ಮುನ್ನ ಮರಣಕ್ಕೆ ತಮ್ಮನ್ನು ತಾವು ಒಡ್ಡಿಕೊಳ್ಳಬೇಕು. ನಮ್ಮಂತಹ ದೇಶಗಳಲ್ಲಿ ಕಾಯಿಲೆಯನ್ನಷ್ಟೇ ಅಲ್ಲದೇ, ವ್ಯವಸ್ಥೆಯ ಅಜ್ಞಾನ, ಅಸಹಕಾರ, ಅವಿವೇಚನೆ, ದರ್ಪ, ಕ್ರೌರ್ಯಗಳಂತಹ ಶತ್ರುಗಳನ್ನೂ ಸಹಿಸಿಕೊಳ್ಳಬೇಕು. ಪ್ರಾಯಶಃ, ಜಗತ್ತಿನಾದ್ಯಂತ ಪ್ರಸ್ತುತ ಪೀಳಿಗೆಯ ವೈದ್ಯಕೀಯ ಸದಸ್ಯರು ಎದುರಿಸಿರುವ ಅತೀ ದೊಡ್ಡ ಸವಾಲು: ಈ ಕರೊನಾವೈರಸ್ ಜಾಗತಿಕ ವಿಪತ್ತು.

ಪ್ರಪಂಚದಲ್ಲಿ ಯಾರೂ ಊಹೆ ಮಾಡಿರದ ರೀತಿಯಲ್ಲಿ ನಮ್ಮ ದೇಶ ಕರೊನಾವೈರಸ್ ವಿಪತ್ತನ್ನು ಎದುರಿಸಿದೆ. ಜನರು ಕೂಡ ಅಭೂತಪೂರ್ವ ರೀತಿಯಲ್ಲಿ ಸ್ಪಂದಿಸಿದ್ದಾರೆ. ಒಂದು ಮಟ್ಟದವರೆಗೆ ಇದಕ್ಕೆ ಅಭಿನಂದನೆ ಸಲ್ಲಬೇಕು. ಅಂತೆಯೇ, “ಕರೊನಾವೈರಸ್ ವಿಪತ್ತು ನಮ್ಮ ಆರೋಗ್ಯ ವ್ಯವಸ್ಥೆಯ ಪರಿಸ್ಥಿತಿಯನ್ನು ಅನಾವರಣಗೊಳಿಸಿದೆ” ಎನ್ನುವುದೂ ಕಟುಸತ್ಯ. ಮನೆಗೆ ಬೆಂಕಿ ಬಿದ್ದಾಗ ಬಾವಿ ತೊಡುವುದು ಜಾಣರ ಲಕ್ಷಣವಲ್ಲ; ಅದು ಪ್ರಾಯೋಗಿಕವೂ ಅಲ್ಲ. ಅಂತೆಯೇ, ಸ್ವಾತಂತ್ರ್ಯ ಬಂದ ಲಾಗಾಯ್ತು, ದಶಕಗಳಿಂದ ಒಂದೇ ಸಮನೆ ನಿರ್ಲಕ್ಷ್ಯಕ್ಕೆ ಒಳಗಾಗಿರುವ ನಮ್ಮ ಆರೋಗ್ಯ ವ್ಯವಸ್ಥೆಯಿಂದ ಕರೊನಾವೈರಸ್ ವಿಪತ್ತಿಗೆ “ಜಠಾಫಟ್” ಪರಿಹಾರ ಬಯಸುವುದು ಕೂಡ “ಮನೆಗೆ ಬೆಂಕಿ ಬಿದ್ದಾಗ ಬಾವಿ ತೊಡುವಷ್ಟೇ” ಅಪ್ರಾಯೋಗಿಕ.

ಕರೊನಾವೈರಸ್ ವಿಪತ್ತಿನಲ್ಲಿ ವೈದ್ಯಕೀಯ ರಂಗದಿಂದ ಅಪೇಕ್ಷೆಗಳೇನು?
1.      ಈ ವೈರಸ್ ನ ಬಗ್ಗೆ ನಿಖರ ಮಾಹಿತಿಯನ್ನು ಅಧಿಕಾರಿಗಳಿಗೆ, ಆಳುಗರಿಗೆ, ಜನಸಾಮಾನ್ಯರಿಗೆ ನೀಡಬೇಕು.
2.     ಕಾಯಿಲೆಯ ಲಕ್ಷಣಗಳನ್ನು ಸ್ಪಷ್ಟವಾಗಿ, ಸರಳವಾಗಿ ಜನರಿಗೆ ತಿಳಿಸಬೇಕು.
3.     ಕಾಯಿಲೆ ಬಾರದಂತೆ ಕಾಪಾಡಿಕೊಳ್ಳುವ ವಿಧಾನಗಳನ್ನು, ಅದರ ಜಾಗತಿಕ ಮತ್ತು ಸ್ಥಳೀಯ ಮಾರ್ಗಸೂಚಿಗಳನ್ನು ಎಲ್ಲರಿಗೂ ಅರ್ಥ ಮಾಡಿಸಬೇಕು.
4.    ಕಾಯಿಲೆ ಪತ್ತೆ ಮಾಡುವ ಸರಳ, ಶೀಘ್ರ, ಸೋವಿಯಾದ ವಿಧಾನವನ್ನು ಪತ್ತೆ ಮಾಡಿ ಬಳಸಬೇಕು.
5.     ಕಾಯಿಲೆಯ ಲಕ್ಷಣಗಳು ಇರುವವರನ್ನು ಸಾಧ್ಯವಾದಷ್ಟು ಬೇಗ ಪರೀಕ್ಷೆ ಮಾಡಿ, ಯಾವ ರೋಗವೆಂದು ಪತ್ತೆ ಮಾಡಬೇಕು.
6.     ಕಾಯಿಲೆ ಬಂದವರಿಗೆ ಸೂಕ್ತವಾದ ಚಿಕಿತ್ಸೆ ನೀಡಬೇಕು. ಅದಕ್ಕೆ ನಿರ್ದಿಷ್ಟವಾದ ಔಷಧಗಳನ್ನು ಪತ್ತೆ ಮಾಡಬೇಕು.
7.     ಈ ಕಾಯಿಲೆಯ ಬೃಹತ್ ಪ್ರಮಾಣವನ್ನು ಒಂದೆಡೆ ನಿಭಾಯಿಸುತ್ತಾ, ಉಳಿದ ಕಾಯಿಲೆಗಳ ನಿರ್ವಹಣೆಯಲ್ಲೂ ಯಾವುದೇ ಧಕ್ಕೆ ಆಗದಂತೆ ನೋಡಿಕೊಳ್ಳಬೇಕು.
8.     ಕಾಯಿಲೆಗೆ ಲಸಿಕೆ ತಯಾರಿಸಿ, ಅದನ್ನು ವ್ಯಾಪಕವಾಗಿ ನೀಡುವಂತೆ ಮಾಡಬೇಕು.
9.     ಸಾಮಾನ್ಯ ಜನರಲ್ಲಿ “ನಾವು ರೋಗವನ್ನು ಗೆಲ್ಲಬಲ್ಲೆವು” ಎನ್ನುವ ಆತ್ಮವಿಶ್ವಾಸ ಹೆಚ್ಚುವಂತಹ ಸತ್ಯಗಳನ್ನು ಮಾಧ್ಯಮಗಳ ಮೂಲಕ ತಿಳಿಸಬೇಕು.
10.   ಕಾಯಿಲೆ ತಗುಲಿದವರಿಗೆ, ಅವರ ಆಪ್ತರಿಗೆ ಸೂಕ್ತ ಸಲಹೆ ನೀಡಿ, ಅವರ ಮಾನಸಿಕ ಸ್ವಾಸ್ಥ್ಯವನ್ನು ಬಲಗೊಳಿಸಬೇಕು.
11.    ಕಾಯಿಲೆಯಿಂದ ಮರಣ ಹೊಂದಿದವರಿಂದ ವಿಶ್ಲೇಷಣೆಗಳಿಂದ, ಕಾಯಿಲೆಯ ವಿವಿಧ ಆಯಾಮಗಳನ್ನು ಅಧ್ಯಯನ ಮಾಡಬೇಕು.
12.   ಒಟ್ಟಾರೆ, ಇಡೀ ದೇಶ ಏಕತ್ರ ಭಾವದಿಂದ ಈ ವಿಪತ್ತನ್ನು ಗೆಲ್ಲಬೇಕು.

ಈ ಪಟ್ಟಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಕೆಲವು ಸತ್ಯಗಳು ಅರಿವಾಗುತ್ತವೆ. ಸಾಮಾನ್ಯ ವೈದ್ಯರಾಗಲೀ ಅಥವಾ ಬೃಹತ್ ಆಸ್ಪತ್ರೆಯಾಗಲೀ – ಈ ಪಟ್ಟಿಯ ಒಂದು ಅಂಗ ಮಾತ್ರ. ಈ ಪಟ್ಟಿಯಲ್ಲಿನ ಕೆಲವು ಮಹತ್ವದ ಅಂಶಗಳನ್ನು ಸರ್ಕಾರವೇ ಖುದ್ದಾಗಿ ನಿರ್ವಹಿಸಬೇಕಾಗುತ್ತದೆ. ಅದು ವೈಯಕ್ತಿಕವಾಗಿಯಾಗಲೀ ಅಥವಾ ಒಂದು ಆಸ್ಪತ್ರೆಯ ಮಟ್ಟದಲ್ಲಿ ಆಗಲೀ ಮಾಡಲಾಗದು. ಇದು ಎಲ್ಲರ ಸಹಕಾರ, ಪ್ರಯತ್ನ, ಚಿಂತನೆಗಳನ್ನು ಒಟ್ಟುಗೂಡಿಸಿ ಸಾಧಿಸುವ ಬೃಹತ್ ಪ್ರಯತ್ನ. ಇದರಲ್ಲಿ ಯಾರೊಬ್ಬರು ತಮ್ಮ ಹೊಣೆಯಿಂದ ವಿಮುಖರಾದರೂ, ಉಳಿದವರ ಪ್ರಯತ್ನ ಫಲಿಸುವುದಿಲ್ಲ.

ಕರೊನಾವೈರಸ್ ನಮ್ಮೊಳಗಿರುವ ವಿಜ್ಞಾನಿಯನ್ನು ಬಯಲಿಗೆ ತಂದಿದೆ! ವೈರಸ್ ಎಂದರೇನು; ಕಾಯಿಲೆ ಎಂದರೇನು; ಲಸಿಕೆ ಎಂದರೇನು; ಚಿಕಿತ್ಸೆ ಎಂದರೇನು; ಸಾಂಕ್ರಾಮಿಕ ಎಂದರೇನು; ಕಾಯಿಲೆ ಬಾರದಂತೆ ತಡೆಯುವ ವಿಧಾನಗಳ ಮಹತ್ವ ಏನು – ಇಂತಹ ಸೂಕ್ಷ್ಮ ಸಂಗತಿಗಳು ಬಹುತೇಕ ಸಾಮಾನ್ಯ ಜನರಿಗೆ ಅರ್ಥವಾಗಿದೆ. ಜೊತೆಗೆ, ನಮ್ಮ ಸರ್ಕಾರಿ ಆರೋಗ್ಯ ವ್ಯವಸ್ಥೆ ಎಷ್ಟು ಅಪರ್ಯಾಪ್ತ ಎಂಬುದೂ ಅರಿವಿಗೆ ಬಂದಿದೆ. ಪ್ರಾಯಶಃ, ಇಡೀ ದೇಶದ ಒಟ್ಟಾರೆ ವೈದ್ಯಕೀಯ ಜ್ಞಾನವನ್ನು ಬೆಳೆಸಿದ ಮತ್ತೊಂದು ಕಾಯಿಲೆ ನಮ್ಮ ಪೀಳಿಗೆಯಲ್ಲಿ ಇರಲಿಕ್ಕಿಲ್ಲ! ನಮ್ಮ ವ್ಯವಸ್ಥೆಯ ಓರೆ-ಕೋರೆಗಳನ್ನು ತಿಳಿಯುವುದು, ಅದನ್ನು ತುಂಬಿಕೊಳ್ಳುವ ಒಳ್ಳೆಯ ಅವಕಾಶ. ಈ ನಿಟ್ಟಿನಲ್ಲಿ ನಾವು ಏನನ್ನು ಸಾಧಿಸಿದ್ದೇವೆ; ಏನನ್ನು ಸಾಧಿಸಬಹುದು ಎಂಬ ಜಿಜ್ಞಾಸೆ ಮಾಡಬಹುದು.

1.      ಮೊದಲನೆಯದಾಗಿ – ಆಸ್ಪತ್ರೆಗಳ, ವೈದ್ಯಕೀಯ ಸೇವೆಗಳ, ಸವಲತ್ತುಗಳ ವಿಷಯದಲ್ಲಿ ನಾವು ತೀರಾ ಹಿಂದುಳಿದಿದ್ದೇವೆ. 130 ಕೋಟಿಗೂ ಮೀರಿದ ಜನಸಂಖ್ಯೆಗೆ ನಮ್ಮಲ್ಲಿ ಇರುವುದು ಕೇವಲ 26000 ಸರ್ಕಾರಿ ಆಸ್ಪತ್ರೆಗಳು! ಅದರಲ್ಲಿನ ಒಟ್ಟೂ ಹಾಸಿಗೆಗಳು 715000 ಮಾತ್ರ. ತೀವ್ರ ನಿಗಾ ಘಟಕದ ಹಾಸಿಗೆಗಳು ಕೇವಲ 36000! ಅಂದರೆ, 50,000 ಪ್ರಜೆಗಳಿಗೆ ಒಂದು ಸರ್ಕಾರಿ ಆಸ್ಪತ್ರೆ; 1820 ಮಂದಿಗೆ ಸರ್ಕಾರಿ ಆಸ್ಪತ್ರೆಯ ಒಂದು ಹಾಸಿಗೆ; 36000 ನಾಗರಿಕರಿಗೆ ಸರ್ಕಾರಿ ಆಸ್ಪತ್ರೆಯ ತೀವ್ರ ನಿಗಾ ಘಟಕದ ಒಂದು ಹಾಸಿಗೆ! ಸಾರ್ವಜನಿಕ ಆರೋಗ್ಯಕ್ಕಾಗಿ ಸರಕಾರ ವ್ಯಯಿಸುವ ಮೊತ್ತ ದೇಶದ ಜಿ. ಡಿ. ಪಿ. ಯ ಶೇಕಡಾ 1.3 ಮಾತ್ರ! ಸರಕಾರ ಇಡೀ ದೇಶದ ಎಲ್ಲಾ ಬಗೆಯ ಆರೋಗ್ಯ ಕಾರ್ಯಗಳಿಗೆ ವ್ಯಯಿಸುವ ಮೊತ್ತ ದೇಶದ ಜಿ. ಡಿ. ಪಿ. ಯ ಶೇಕಡಾ 3.5! ಇದು ಇಡೀ ಪ್ರಪಂಚದ ಸರಾಸರಿಗಿಂತ ತೀರಾ ಕಡಿಮೆ. ಯಾವುದೇ ಸರ್ಕಾರಿ ಅನುದಾನ ಇಲ್ಲದ ಖಾಸಗಿ ಆಸ್ಪತ್ರೆಗಳು ಮತ್ತು ವೈದ್ಯರು ನಮ್ಮ ದೇಶದ ಶೇಕಡಾ 68 ಒಳರೋಗಿಗಳನ್ನೂ, ಶೇಕಡಾ 82 ಹೊರರೋಗಿಗಳನ್ನೂ ನಿರ್ವಹಿಸುತ್ತಾರೆ. ನಮ್ಮ ದೇಶದಲ್ಲಿ ಸುಮಾರು 44000 ಖಾಸಗಿ ಆಸ್ಪತ್ರೆಗಳಿವೆ. ಅವುಗಳಲ್ಲಿ ಸುಮಾರು 12 ಲಕ್ಷ ಹಾಸಿಗೆಗಳಿವೆ. ತೀವ್ರ ನಿಗಾ ಘಟಕಗಳಲ್ಲಿ ಸುಮಾರು 60,000 ಹಾಸಿಗೆಗಳಿವೆ. ಅಂದರೆ, ದೇಶದ ಬಹುಪಾಲು ಜನರ ಆರೋಗ್ಯದ ಹೊಣೆಯನ್ನು ಸರಕಾರ ಖಾಸಗಿಯವರ ಸುಪರ್ದಿಗೆ ಬಿಟ್ಟಿದೆ. ಇದು ಹೆಮ್ಮೆಯ ವಿಷಯವೇನೂ ಅಲ್ಲ. ಕರೊನಾವೈರಸ್ ವಿಪತ್ತಿನ ಕಾಲದಲ್ಲಿ ಇದರ ಬಗ್ಗೆ ಪ್ರಾಮಾಣಿಕವಾಗಿ ಗಮನ ಹರಿಸುವ ಸುವರ್ಣಾವಕಾಶ ಸರಕಾರಕ್ಕೆ ಇತ್ತು. ಆದರೆ, ತಾತ್ಕಾಲಿಕ ವ್ಯವಸ್ಥೆಗಳಿಗೆ ಇಂಬು ನೀಡಿದಷ್ಟು ಹಣ, ಸಮಯಗಳನ್ನು ನಮ್ಮ ವ್ಯವಸ್ಥೆ ಶಾಶ್ವತ ನಿರ್ಮಾಣಕ್ಕೆ ನೀಡಲಿಲ್ಲ. ಈ ವಿಪತ್ತು ಏನಾದರೂ ಒಳಿತನ್ನು ಮಾಡುವುದಾದರೆ, ಅದು ನಮ್ಮ ಸರ್ಕಾರಿ ಆರೋಗ್ಯ ವ್ಯವಸ್ಥೆಯನ್ನು ಬಲಗೊಳಿಸುವುದೇ ಆಗಲಿ ಎಂದು ಆಶಿಸಬೇಕು. ಆರೋಗ್ಯ ರಕ್ಷಣೆಗೆ ಅಧಿಕ ಹಣ ನೀಡಬೇಕು. ಸರ್ಕಾರಿ ಆಸ್ಪತ್ರೆಗಳ ಸಂಖ್ಯೆ, ಅನುದಾನ, ಸವಲತ್ತು ಹೆಚ್ಚಬೇಕು. ಸರ್ವಶಕ್ತವಾದ ಸರ್ಕಾರಿ ವ್ಯವಸ್ಥೆ ಇದನ್ನು ಗಮನಿಸಬೇಕು. ಆತ್ಮನಿರ್ಭರತೆ ಸಾಧಿಸುವಲ್ಲಿ ಇದು ಮಹತ್ವದ ಆವಶ್ಯಕತೆ.  

2.     ಎರಡನೆಯದು – ಪಿ.ಪಿ.ಇ ಕಿಟ್ ಹೊಲಿಯುವುದು, ಮಾಸ್ಕ್ ಹೊಲಿಯುವುದು ಆರೋಗ್ಯವ್ಯವಸ್ಥೆಯನ್ನು ಬಲಪಡಿಸುವ ವಿಧಾನವಲ್ಲ. ಆದೇನಿದ್ದರೂ ಪ್ರಸ್ತುತ ಆವಶ್ಯಕತೆಗೆ ಹೊಲಿಗೆ ಉದ್ಯಮವನ್ನು ಸಜ್ಜುಗೊಳಿಸುವುದು ಅಷ್ಟೇ. ಇಂದಿನ ವಿಪತ್ತು ಕಲಿಸಿದ ಪಾಠಗಳನ್ನು ಸರಿಯಾಗಿ ಅರ್ಥಮಾಡಿಕೊಂಡು, ಭವಿಷ್ಯದ ವಿಪತ್ತುಗಳನ್ನು ಎದುರಿಸಲು ಅಗತ್ಯವಾದ ಒಂದು ಕಾರ್ಯನಿರ್ವಾಹಕ ಮಾರ್ಗಸೂಚಿ ನಮಗೆ ತುರ್ತಾಗಿ ಬೇಕಾಗಿದೆ. “ಸಂತೆಯ ವೇಳೆಗೆ ನಾಲ್ಕು ಮೊಳ ಹೂವು ಕಟ್ಟುವುದು” ನಮ್ಮ ವ್ಯವಸ್ಥೆಗೆ ಚೆನ್ನಾಗಿ ಅಭ್ಯಾಸವಾಗಿದೆ. ಈ ದಾರಿ ಕೂಡದು. ಭವಿಷ್ಯದ ವಿಪತ್ತುಗಳನ್ನು ಎದುರಿಸಲು ನಾವು ಇಂದಿನಿಂದಲೇ ಸಜ್ಜಾಗಬೇಕು. ಅದಕ್ಕೆ ಮೊಟ್ಟ ಮೊದಲು ವೈದ್ಯಕೀಯ ಕ್ಷೇತ್ರವನ್ನು ಸ್ವಾಯತ್ತಗೊಳಿಸಬೇಕು. ಸರ್ಕಾರ ಕೇವಲ ಮೇಲ್ವಿಚಾರಕನಂತೆ, ಮಾರ್ಗದರ್ಶಕನಂತೆ ಇರಬೇಕೇ ಹೊರತು ಜಿಗುಟಿನ ಯಜಮಾನನಂತೆ ಇರಬಾರದು! ಇದಕ್ಕೆ ಮುಖ್ಯವಾಗಿ ಭಾರತೀಯ ಆಡಳಿತ ಸೇವೆ, ಪೋಲೀಸ್ ಸೇವೆ ಇರುವಂತೆ “ಭಾರತೀಯ ಆರೋಗ್ಯ ಸೇವೆ” ಜಾರಿಗೆ ಬರಬೇಕು. ಅದನ್ನು ವೈದ್ಯರಲ್ಲದವರು ಪ್ರವೇಶಿಸಬಾರದು. ವೈದ್ಯಕೀಯ ಶಿಕ್ಷಣ, ಆಸ್ಪತ್ರೆಗಳ ನಿರ್ವಹಣೆ, ವೈದ್ಯಕೀಯ ಸಂಶೋಧನೆ, ಆರೋಗ್ಯ ಯೋಜನೆಗಳ ನಿರ್ಧಾರ ಮತ್ತು  ಕಾರ್ಯಗತಗೊಳಿಸುವಿಕೆ, ಹಣಕಾಸು ನಿಯಂತ್ರಣ, ಸುಪರ್ದಿ, ವೈದ್ಯಕೀಯ ಅಪರಾಧ ಪ್ರಕರಣಗಳ ವಿಚಾರಣೆ ಮತ್ತು ಶಿಕ್ಷೆ – ಮುಂತಾದುವುಗಳೆಲ್ಲಾ ಈ ಸ್ವಾಯತ್ತ ಸೇವೆಯ ಅಧೀನದಲ್ಲಿ ಇರಬೇಕು. ಪ್ರಾಮಾಣಿಕರು ಬೆಳೆಯುವಂತಹ ಪ್ರೋತ್ಸಾಹ, ಉತ್ತೇಜನದ ವಾತಾವರಣ ಇರಬೇಕು. “ಯಾವುದೇ ವಿಪತ್ತಿನ ಸಂದರ್ಭವನ್ನು ಮೊದಲ ಏಟಿಗೆ ಹೇಗೆ ನಿರ್ವಹಿಸಬೇಕು” ಎಂಬ ಕಾರ್ಯಸೂಚಿ ಇರಬೇಕು. ಒಮ್ಮೆ ಆ ವಿಪತ್ತಿನ ವಿವರಗಳು ಲಭ್ಯವಾದಂತೆ, ಅದನ್ನು ಅತ್ಯಂತ ಸಮರ್ಥವಾಗಿ ನಿರ್ವಹಿಸುವ ಹೊಣೆಗಾರಿಕೆ ಈ ಸ್ವಾಯತ್ತ ಸಂಸ್ಥೆಗೆ ನೀಡಬೇಕು. ಆರೋಗ್ಯ ವ್ಯವಸ್ಥೆಯಲ್ಲಿ ನಮ್ಮ ದೇಶ ಆತ್ಮನಿರ್ಭರ ಆಗಬೇಕೆಂದರೆ ಮೊಟ್ಟ ಮೊದಲು “ಭಾರತೀಯ ಆರೋಗ್ಯ ಸೇವೆ” ಆರಂಭವಾಗಬೇಕು. 

3.     ಮೂರನೆಯದು– ಖಾಸಗಿ ಆಸ್ಪತ್ರೆಗಳ ಜೊತೆಗಿನ ಸಮನ್ವಯವನ್ನು ಸರಕಾರ ಹೆಚ್ಚಿಸಬೇಕು. ಕರೊನಾವೈರಸ್ ವಿಪತ್ತಿನ ಕಾಲದಲ್ಲಿ ಖಾಸಗಿ ಆಸ್ಪತ್ರೆಗಳ ಪಾತ್ರವನ್ನು ಸರಕಾರ ಆರಂಭದಲ್ಲಿ ಪರಿಗಣಿಸಲೇ ಇಲ್ಲ! ಹೀಗೆ ಮಾಡುವುದರ ಪರಿಣಾಮವನ್ನು ಎಲ್ಲರೂ ಅನುಭವಿಸುವಂತೆ ಆಯಿತು. ಸರಕಾರ ಈ ಬಗ್ಗೆ ಕಣ್ಣು ಬಿಡುವಷ್ಟರಲ್ಲಿ ರೋಗದ ಪ್ರಮಾಣ ತೀವ್ರವಾಗಿತ್ತು. ಅರ್ಥಹೀನ ಕಾಯಿದೆಗಳನ್ನು ಹೇರುತ್ತಾ ಹೋದರೆ ಖಾಸಗಿಯವರ ಜೊತೆ ಸರ್ಕಾರಿ ವ್ಯವಸ್ಥೆಯ ಅಂತರ ಹೆಚ್ಚುತ್ತಲೇ ಹೋಗುತ್ತದೆ. ದೇಶದ ಆರೋಗ್ಯ ನಿರ್ವಹಣೆಯಲ್ಲಿ ತನ್ನ ಪಾಲಿನ ಗುರುತರ ಜವಾಬ್ದಾರಿಯನ್ನು ಖಾಸಗೀ ಆಸ್ಪತ್ರೆಗಳು, ವೈದ್ಯರು ನಿರ್ವಹಿಸುತ್ತಿದ್ದಾರೆ ಎಂಬ ಪ್ರಜ್ಞೆ ಸರ್ಕಾರಕ್ಕೆ ಇರಬೇಕು. ಅದಕ್ಕೆ ಸರ್ಕಾರ ಸ್ವಲ್ಪ ಕೃತಜ್ಞತೆಯನ್ನೂ ತೋರಬಹುದು! ಈ ನಿಟ್ಟಿನಲ್ಲಿ, ಎರಡೂ ಪಕ್ಷದವರೂ ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ಒಟ್ಟಿಗೆ ಕೆಲಸ ಮಾಡಬೇಕು. ಖಾಸಗಿ ಆಸ್ಪತ್ರೆಯವರಿಗೆ ವಿಧಿಸುವ ಅಧಿಕ ಸುಂಕ, ಮೇಲ್ಸ್ತರದ ವ್ಯಾಪಾರೀ ದರಗಳು, ಕಟ್ಟುನಿಟ್ಟಿನ ವ್ಯಾಪಾರೀ ಕಾಯಿದೆಗಳು, ವೈದ್ಯಕೀಯ ಉಪಕರಣಗಳ ಮೇಲಿನ ದುಬಾರಿ ಆಮದು ಸುಂಕ - ಇವನ್ನು ಸರ್ಕಾರ ಸಡಿಲಗೊಳಿಸಬೇಕು. ಇದಕ್ಕೆ ಪ್ರತಿಯಾಗಿ, ಖಾಸಗಿ ಆಸ್ಪತ್ರೆಗಳಲ್ಲಿ ಹೊರರೋಗಿಗಳು, ಸಾಮಾನ್ಯ ವಾರ್ಡ್ ನ ರೋಗಿಗಳಿಗೆ ರಿಯಾಯತಿ ದರದಲ್ಲಿ ಚಿಕಿತ್ಸೆ ಮಾಡುವಂತೆ ಸರಕಾರ ಒಡಂಬಡಿಕೆ ಮಾಡಿಕೊಳ್ಳಬೇಕು. ಆಸ್ಪತ್ರೆಗಳ ಲಾಭಾಂಶ ತೀರಾ ಕಡಿಮೆ ಆಗದಂತೆ, ಹಣಕಾಸು ತಜ್ಞರ ಸಲಹೆ ಪಡೆದು ಇದನ್ನು ನಿಭಾಯಿಸಬೇಕು. ಖಾಸಗೀ ಆಸ್ಪತ್ರೆಗಳನ್ನು ತಮ್ಮ ವೈರಿಯಂತೆ ಕಾಣದೇ, ದೇಶದ ಆರೋಗ್ಯ ನಿರ್ವಹಣೆಯಲ್ಲಿ ಸರ್ಕಾರದ ಪಾಲುದಾರನಂತೆ ಮಾನ್ಯತೆ ನೀಡಬೇಕು. ಉತ್ತಮ ಕಾರ್ಯಸಂಬಂಧದ ನಿರ್ಮಾಣ ಆಗಬೇಕು. ಖಾಸಗಿ ಆಸ್ಪತ್ರೆಗಳ ಸಹಕಾರ ಇಲ್ಲದೆ ಆರೋಗ್ಯ ನಿರ್ವಹಣೆಯಲ್ಲಿ ನಮ್ಮ ದೇಶ ಆತ್ಮನಿರ್ಭರವಾಗಲು ಸಾಧ್ಯವಿಲ್ಲ. ಅನುಮಾನ ಇರುವವರು ಒಮ್ಮೆ ಯಾವುದಾದರೂ ಸರ್ಕಾರಿ ಆಸ್ಪತ್ರೆಗೆ ಹಾಗೆಯೇ ಭೇಟಿ ನೀಡಿ ಪರಿಶೀಲಿಸಬಹುದು!

4.    ನಾಲ್ಕನೆಯದು – ವೈದ್ಯಕೀಯ ವ್ಯಾಸಂಗವನ್ನು ಆಮೂಲಾಗ್ರವಾಗಿ ಪರಿಶೀಲಿಸುವ ಅಗತ್ಯವಿದೆ. ಅದು ಆಧುನಿಕ ವೈದ್ಯ ಶಿಕ್ಷಣ ಮತ್ತು ಆಯುಷ್ – ಎರಡೂ ವಿಭಾಗಗಳಿಗೂ ಅನ್ವಯ ಆಗುತ್ತದೆ. ವೈದ್ಯಕೀಯ ವ್ಯಾಸಂಗದ ವಿಧಾನವನ್ನು ಬದಲಾಯಿಸಬೇಕು. ಸೈದ್ಧಾಂತಿಕ ವ್ಯಾಸಂಗವನ್ನು ಮಿತಿಗೊಳಿಸಿ ಪ್ರಾಯೋಗಿಕ ಅಂಶಗಳ ಕಡೆ ಹೆಚ್ಚು ಒತ್ತು ನೀಡುವ ಪಠ್ಯಕ್ರಮ ಜಾರಿಗೆ ಬರಬೇಕು. ಆಯುಷ್ ಪದ್ದತಿಯಲ್ಲಿ ಅಧ್ಯಯನ ಮಾಡಿದವರು, ಅದೇ ಪದ್ದತಿಯಲ್ಲಿ ಮಾತ್ರ ಚಿಕಿತ್ಸೆ ನೀಡುವ ಫರ್ಮಾನು ಬರಬೇಕು. ವೈದ್ಯಕೀಯ ಅಂತಿಮ ಪರೀಕ್ಷೆಯ ನಂತರದ ತರಬೇತಿ ಅವಧಿಯನ್ನು ಜಿಲ್ಲಾಸ್ಪತ್ರೆ ಅಥವಾ ತಾಲೂಕು ಆಸ್ಪತ್ರೆಗಳಲ್ಲಿ ಮಾಡಿಸಬೇಕು. ಹೊಸ ವೈದ್ಯರಿಗೆ ಅಲ್ಲಿ ಕೈಯಾರೆ ಕಲಿಯಲು ಅವಕಾಶಗಳು ದೊರೆಯುತ್ತವೆ. ಅಲ್ಲದೇ, ಅಂತಹ ಆಸ್ಪತ್ರೆಗಳ ಹಿರಿಯ ವೈದ್ಯರಿಗೆ ಅಗತ್ಯವಾಗಿ ಬೇಕಾದ ನುರಿತ ಸಹಾಯಕರೂ ದೊರೆತಂತಾಗುತ್ತದೆ. ಇದರ ಜೊತೆ, ವ್ಯಾಸಂಗದ ನಂತರ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಸೇವೆ ಒದಗಿಸುವ ನವವೈದ್ಯರಿಗೆ ಹಣ ಸಹಾಯ ಒದಗಿಸಿ, ಕೆಲವರ್ಷಗಳ ಕರಾರು ಪತ್ರವನ್ನೂ ಮಾಡಬಹದು. ಆರೋಗ್ಯ ಸೇವೆಗಳು ನಗರದಿಂದ ವಿಕೇಂದ್ರಿತಗೊಂಡು, ಗ್ರಾಮೀಣ ಪ್ರದೇಶಗಳನ್ನೂ ತಲುಪಬೇಕು. ಹೀಗೆ, ಕೆಲವು ವರ್ಷಗಳ ಕಾಲ ಅನುಭವ ಪಡೆದ ವೈದ್ಯರನ್ನು “ರಾಷ್ಟ್ರೀಯ ಆರೋಗ್ಯ ಸೇವೆಗಳ” ಸಲಹೆಗಾರರನ್ನಾಗಿ ಪರಿಗಣಿಸಬಹುದು. ಪ್ರತಿಯೊಬ್ಬ ವೈದ್ಯನಿಗೂ, ಪ್ರತಿಯೊಂದು ಹಂತದಲ್ಲೂ, ಕಾಲಕಾಲಕ್ಕೆ “ಕರೊನಾವೈರಸ್ ಮಾದರಿಯ ಆರೋಗ್ಯ ವಿಪತ್ತುಗಳನ್ನು ನಿರ್ವಹಿಸುವುದು ಹೇಗೆ” ಎನ್ನುವ ತರಬೇತಿ ಕಡ್ಡಾಯವಾಗಿ ನೀಡಬೇಕು. ನಮ್ಮ ದೇಶದ ಆರೋಗ್ಯ ವ್ಯವಸ್ಥೆ ಆತ್ಮನಿರ್ಭರವಾಗಲು ಹೀಗೆ ಬೇರುಮಟ್ಟದ ಕಾರ್ಯಸೂಚಿ ಬೇಕು.

5.     ಐದನೆಯದು – ಇಡೀ ದೇಶದ ಪ್ರಜೆಗಳ ಆರೋಗ್ಯ ವಿಮೆಯ ಸಂಪೂರ್ಣ ಉಸ್ತುವಾರಿಯನ್ನು ಸರ್ಕಾರವೇ ವಹಿಸಬೇಕು. ತೀರಾ ಕಡಿಮೆ ಬೆಲೆಯಲ್ಲಿ ವಾರ್ಷಿಕ ಎರಡು ಲಕ್ಷ ರೂಪಾಯಿವರೆಗಿನ ಕುಟುಂಬ ಆರೋಗ್ಯ ವಿಮೆ ಎಲ್ಲರಿಗೂ ನೀಡುವಂತೆ ಮಾಡಬೇಕು. ನಂತರ ಪ್ರತಿಯೊಂದು ಲಕ್ಷದ ಸ್ತರಕ್ಕೂ ಈ ಬೆಲೆಯನ್ನು ಘಾತ ರೂಪದಲ್ಲಿ ಏರಿಸುತ್ತಾ ಹೋಗಬಹುದು. ದೇಶದಲ್ಲಿನ ಅರ್ಧದಷ್ಟು ಕುಟುಂಬಗಳು ಈ ವಿಮೆಯ ಅಡಿಯಲ್ಲಿ ಬಂದರೂ, ಕೆಲವೇ ವರ್ಷಗಳಲ್ಲಿ ದೇಶದ ಆರೋಗ್ಯ ಕ್ಷೇತ್ರದ ನಕ್ಷೆಯೇ ಬದಲಾಗಿ ಹೋಗುತ್ತದೆ. ಸರ್ಕಾರೀ ಆಸ್ಪತ್ರೆಗಳಲ್ಲಿನ ಜನಸಂದಣಿ ಇಳಿದು, ಅಲ್ಲಿನ ಸೇವೆಗಳು ಉತ್ತಮಗೊಳ್ಳುತ್ತವೆ. ಖಾಸಗೀ ವಲಯ ಇನ್ನೂ ಸ್ಪರ್ಧಾತ್ಮಕವಾಗುತ್ತದೆ. ಆದರೆ, ವಿಮೆಯ ಹಣದಲ್ಲಿ ಯಾವುದೇ ಆವ್ಯವಹಾರ ಆಗದಂತೆ ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ತಂತ್ರಜ್ಞಾನದ ಸಂಪೂರ್ಣ ಸಹಕಾರ ಪಡೆಯಬೇಕು. ಯಾವುದೇ ಆಸ್ಪತ್ರೆ ಅವ್ಯವಹಾರದಲ್ಲಿ ಭಾಗಿಯಾಗಿರುವುದು ಧೃಡಪಟ್ಟರೆ ಕಟ್ಟುನಿಟ್ಟಾದ ಕ್ರಮ ಜರುಗಿಸಬೇಕು. ವ್ಯಾಪಕವಾದ ಆರೋಗ್ಯ ವಿಮೆಯ ಸಹಾಯ ಇಲ್ಲದೆ ಆರೋಗ್ಯ ಕ್ಷೇತ್ರದಲ್ಲಿ ದೇಶ ಆತ್ಮನಿರ್ಭರ ಆಗಲು ಸಾಧ್ಯವಿಲ್ಲ.

6.     ಆರನೆಯದು – ಕಾರ್ಪೊರೇಟ್ ಕಂಪೆನಿಗಳಿಗೆ ಸಾಮಾಜಿಕ ಜವಾಬ್ದಾರಿಯ ಹೆಸರಿನಲ್ಲಿ ಅವರ ಲಾಭಾಂಶದ ಸಣ್ಣ ಅಂಶವನ್ನು ಸಮಾಜಮುಖಿ ಕಾರ್ಯಗಳಿಗೆ ವಿನಿಯೋಗಿಸಲು ಪ್ರೇರೆಪಿಸಲಾಗಿದೆ. ಅಂತೆಯೇ, ಇಂತಹ ಹಲವು ಕಂಪೆನಿಗಳಿಗೆ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಸೇವೆಗಳನ್ನು ಒದಗಿಸುವ ಜವಾಬ್ದಾರಿ ನೀಡಬೇಕು. ಒಂದು ಹೋಬಳಿ ಅಥವಾ ಸಣ್ಣ ತಾಲೂಕು ಕೇಂದ್ರದಲ್ಲಿ ಹೊರರೋಗಿ ವಿಭಾಗ ಅಥವಾ ಸಣ್ಣ ಆಸ್ಪತ್ರೆಯನ್ನು ಸ್ಥಾಪಿಸಿ, ಸಂಪೂರ್ಣವಾಗಿ ಆ ಕಂಪನಿಯೇ ಉಚಿತವಾಗಿಯೋ, ಇಲ್ಲವೇ ಸಾಂಕೇತಿಕವಾದ ಶುಲ್ಕಕ್ಕೋ ನಡೆಸಬೇಕು. ಇದರಲ್ಲಿ ಕೆಲಸ ಮಾಡುವ ವೈದ್ಯರಿಗೆ, ಆಯಾ ಕಂಪೆನಿ ಉದ್ಯೋಗಿಗಳ ಭತ್ಯೆ ಮತ್ತು ಇತರ ಪ್ರಯೋಜನಗಳನ್ನು ನೀಡಬೇಕು. ಆಗ ಇಂತಹ ಸ್ಥಳಗಳಲ್ಲಿ ಕೆಲಸ ಮಾಡಲು ಹಲವಾರು ವೈದ್ಯರು ಮುಂದಾಗುತ್ತಾರೆ. ಹೀಗೆ, ಸೌಲಭ್ಯ ವಂಚಿತ ಪ್ರದೇಶಗಳೂ ಆರೋಗ್ಯ ಕ್ಷೇತ್ರದ ವ್ಯಾಪ್ತಿಗೆ ಬರಬೇಕು. ಕಾರ್ಪೊರೇಟ್ ಕಂಪೆನಿಗಳಿಗೆ ಪರವಾನಗಿ ನೀಡುವ ಹಂತದಲ್ಲೇ ಸರಕಾರ ಇದನ್ನು ಒಡಂಬಡಿಕೆ ಮಾಡಿಕೊಳ್ಳಬೇಕು. ಈ ಒಡಂಬಡಿಕೆಯ ನಿರ್ವಹಣೆಯನ್ನು ರಾಷ್ಟ್ರೀಯ ಆರೋಗ್ಯ ಸೇವೆಗಳ ಅಡಿಯಲ್ಲಿ ಮಾಡಬಹುದು. ಸರಕಾರ ನೀಡುವ ಆರೋಗ್ಯ ಸೇವೆಗಳಿಗೆ ಇಂತಹ ಮಾದರಿಗಳು ಪೂರಕವಾಗಿ ಕೆಲಸ ಮಾಡುತ್ತಾ, ಆರೋಗ್ಯ ಸೇವೆಗಳ ಆತ್ಮನಿರ್ಭರತೆಗೆ ಸಹಕಾರ ನೀಡುತ್ತವೆ.

7.     ಏಳನೆಯದು – ಸರ್ಕಾರಿ ಆಸ್ಪತ್ರೆಗಳು ಕೆಲಸ ಮಾಡುವ ಇಡೀ ವಿನ್ಯಾಸವನ್ನು ಬದಲಾವಣೆ ಮಾಡಬೇಕು. ನಗರಗಳಲ್ಲಿ ಮೆಟ್ರೊ ರೈಲುಗಳ ಕಡೆಯ ನಿಲ್ದಾಣಗಳ ಸಮೀಪ ಮತ್ತು ಬೇರೆಡೆಗಳಲ್ಲಿ ಭಾರತೀಯ ರೈಲ್ವೆ ನಿಲ್ದಾಣಗಳ ಸಮೀಪ, ಸುಮಾರು ನೂರು ಎಕರೆ ಸರ್ಕಾರಿ ಭೂಮಿಯಲ್ಲಿ ನಾಲ್ಕು ಸ್ತರದ ಸರ್ಕಾರಿ ಆಸ್ಪತ್ರೆಗಳು ನಿರ್ಮಾಣ ಆಗಬೇಕು. ಮೊದಲನೆಯ ಸ್ತರ ಸಂಪೂರ್ಣ ಉಚಿತ. ಇಲ್ಲಿ ಯಾವ ಚಿಕಿತ್ಸೆಗೂ ಹಣವಿಲ್ಲ. ಎರಡನೇ ಸ್ತರ ರಿಯಾಯತಿಯ ಆಧಾರದ ಚಿಕಿತ್ಸೆ. ಇಲ್ಲಿ ಯಾವುದೂ ಉಚಿತವಲ್ಲ. ಆದರೆ, ಪ್ರತಿಯೊಂದು ಕೆಲಸಕ್ಕೂ ರಿಯಾಯತಿಯ ದರ ಇರಬೇಕು. ಮೂರನೆಯ ಸ್ತರ “ಲಾಭವಿಲ್ಲ-ನಷ್ಟವಿಲ್ಲ” ಮಾದರಿ. ಇಲ್ಲಿ ಪ್ರತಿಯೊಂದು ಚಿಕಿತ್ಸೆಗೂ ದರ ಇರಬೇಕು. ಈ ಮೂರನೆಯ ಮಾದರಿ ತನ್ನ ಆರ್ಥಿಕ ಅವಶ್ಯಕತೆಗಳನ್ನು ತಾನೇ ಪೂರೈಸಿಕೊಲ್ಲಬೇಕು. ಸಹಾಯಧನಕ್ಕಾಗಿ ಸರ್ಕಾರಕ್ಕೆ ಕೈ ಚಾಚಬಾರದು. ಆದರೆ, ಇಲ್ಲಿ ಯಾವುದೇ ಲಾಭ ಮಾಡುವ ಆವಶ್ಯಕತೆ ಇರಬಾರದು. ನಾಲ್ಕನೆಯ ಸ್ತರ ಐಶಾರಾಮಿ ವ್ಯವಸ್ಥೆ. ಕಾರ್ಪೋರೆಟ್ ಆಸ್ಪತ್ರೆಗಳಲ್ಲಿ ಇರುವಂತೆ ಇಲ್ಲಿ ವ್ಯವಸ್ಥೆ ಇರಬೇಕು. ಈ ಸ್ತರದಲ್ಲಿ ಪ್ರತಿಯೊಂದು ಚಿಕಿತ್ಸೆಗೂ ಅದೇ ರೀತಿ ಶುಲ್ಕ ವಿಧಿಸಬೇಕು. ಆದರೆ, ಸೌಲಭ್ಯವೂ ಹಾಗೆಯೇ ಇರಬೇಕು. ವೈದ್ಯರ ಮತ್ತು ಸಿಬ್ಬಂದಿಯ ವಸತಿ ಸೌಕರ್ಯ, ಶಾಲೆ, ಕಾಲೇಜು, ಅಗತ್ಯವಸ್ತುಗಳ ಲಭ್ಯತೆಯ ವಾಣಿಜ್ಯ ಸೌಕರ್ಯ, ಅದೇ ನೂರೆಕರೆ ಪ್ರದೇಶದಲ್ಲಿ ಇರಬೇಕು. ನಾಲ್ಕನೆಯ ಸ್ತರದಿಂದ ಬಂದ ಆದಾಯದಿಂದ ಮೊದಲ ಎರಡೂ ಸ್ತರಗಳು ನಡೆಯಬೇಕು. ಅದಕ್ಕಿಂತ ಮೀರಿದ ಖರ್ಚನ್ನು ಮಾತ್ರ ಸರ್ಕಾರ ಭರಿಸಬೇಕು. ಈ ನಾಲ್ಕು ಸ್ತರಗಳ ವ್ಯವಸ್ಥೆ ಒಟ್ಟಾರೆಯಾಗಿ ಆರ್ಥಿಕ ಸ್ವಾವಲಂಬನೆ ಸಾಧಿಸಬೇಕು. ಎರಡು, ಮೂರು ಮತ್ತು ನಾಲ್ಕನೆಯ ಸ್ತರದ ಶುಲ್ಕಗಳನ್ನು ನಿರ್ಧರಿಸಲು ಒಂದು ತಜ್ಞ ಸಮಿತಿ ಇರಬೇಕು. ಈ ಸಮಿತಿಯಲ್ಲಿ ಆರ್ಥಿಕ ತಜ್ಞರು, ಕಾನೂನು ತಜ್ಞರು ಮತ್ತು ವೈದ್ಯರು ಮಾತ್ರ ಇರಬೇಕು. ರಾಜಕಾರಣಿಗಳಿಗೆ ಎಡೆ ಇರಬಾರದು. ಪ್ರತೀ ಆರು ತಿಂಗಳಿಗೊಮ್ಮೆ ಈ ಸಮಿತಿ ಶುಲ್ಕಗಳನ್ನು ಪರಿಷ್ಕರಿಸಬೇಕು ಹಾಗೂ ಅದನ್ನು ಸಾರ್ವಜನಿಕವಾಗಿ ಜಾಲತಾಣಗಳಲ್ಲಿ ಪ್ರಕಟಿಸಬೇಕು. ಯಾವುದೇ ಖಾಸಗೀ ಆಸ್ಪತ್ರೆಯೂ ಈ ನಾಲ್ಕನೇ ಸ್ತರದ ಶುಲ್ಕಕ್ಕಿಂತ ಹೆಚ್ಚು ಶುಲ್ಕ ವಿಧಿಸಬಾರದು. ಕೆಳಗಿನ ಸ್ತರದಲ್ಲಿ ಕೆಲಸ ಮಾಡುವ ವೈದ್ಯರಿಗೆ ಹಾಗೂ ಸಿಬ್ಬಂದಿಗೆ ಅಧಿಕ ಸಂಬಳ ಇರಬೇಕು. ಯಾವ ಸ್ತರದಲ್ಲಿ ಎಷ್ಟು ಸಿಬ್ಬಂದಿ ಹಾಗೂ ವೈದ್ಯರು ಇರಬೇಕೆಂಬುದನ್ನೂ ಸಮಿತಿ ನಿರ್ಧರಿಸಬೇಕು. ಇಡೀ ಆರೋಗ್ಯ ಸಮುಚ್ಚಯದ ನಿರ್ವಹಣೆಯ ಹೊಣೆಗಾರಿಕೆ ಕೇವಲ “ರಾಷ್ಟ್ರೀಯ ಆರೋಗ್ಯ ಸೇವೆ”ಗಳ ಅಡಿಯಲ್ಲಿ ಇರಬೇಕು. ಸರ್ಕಾರಿ ಅಧಿಕಾರಿಗಳ ಮತ್ತು ರಾಜಕಾರಣಿಗಳ ಪ್ರಭಾವ ಇಂತಹ ಸಮುಚ್ಚಯದ ದಿನನಿತ್ಯದ ನಿರ್ವಹಣೆಯಲ್ಲಿ ಇರಬಾರದು. ಈ ನಾಲ್ಕು ಸ್ತರದ ವ್ಯವಸ್ಥೆ ಪಾರದರ್ಶಕವಾಗಿಯೂ, ಕಟ್ಟುನಿಟ್ಟಾಗಿಯೂ ಇರಬೇಕು. ಯಾವ ರೋಗಿ ಯಾವ ಸ್ತರದಲ್ಲಿ ಚಿಕಿತ್ಸೆ ಪಡೆಯಬೇಕೆಂದು ಸ್ವತಃ ಅವರೇ ನಿರ್ಧರಿಸಬೇಕು. ಆದಾಯರೇಖೆಯ ಕೆಳಗಿನ ಪಡಿತರ ಚೀಟಿ, ಆದಾಯ ಪ್ರಮಾಣ ಪತ್ರ ಇಂತಹುವಕ್ಕೆಲ್ಲಾ ಆಸ್ಪದವೇ ಇರಬಾರದು. ಮೂರನೇ ಸ್ತರಕ್ಕೆ ದಾಖಲಾಗಿ, ಮೊದಲ ಸ್ತರದ ಉಚಿತ ಚಿಕಿತ್ಸೆ ಮಾಡಿಸುವ ವ್ಯವಸ್ಥೆ ಇರಬಾರದು. ಪ್ರಭಾವೀ ಜನಗಳು ಮೊದಲನೆಯ ಸ್ತರದಲ್ಲಿ ಸೇರಿದಂತೆ ದಾಖಲೆ ತೋರಿಸಿ ನಾಲ್ಕನೆಯ ಸ್ತರದಲ್ಲಿ ಚಿಕಿತ್ಸೆ ಮಾಡಿಸುವಂತೆ ಇರಬಾರದು. ಎಲ್ಲಾ ಶುಲ್ಕಗಳೂ ನಗದುರಹಿತ ವ್ಯವಸ್ಥೆಯಲ್ಲೇ ಆಗಬೇಕು. ಅದಕ್ಕೆ ಬೇಕಾದ ಎಲ್ಲಾ ರೀತಿಯ ಸೌಕರ್ಯಗಳೂ ಆ ಪ್ರದೇಶದಲ್ಲೇ ಇರಬೇಕು. ಹಾಗೆಯೇ, ರೋಗಿಗಳ ಸಂಬಂಧಿಗಳಿಗೆ ಉಳಿದುಕೊಳ್ಳಲು ಇದೇ ಮಾದರಿಯ ಹಲವು ಸ್ತರಗಳ ಉಚಿತ ಧರ್ಮಶಾಲೆಯಿಂದ ಹಿಡಿದು ಐಶಾರಾಮಿ ಕೋಣೆಗಳವರೆಗೆ ವ್ಯವಸ್ಥೆ ಇರಬೇಕು. ಅದಕ್ಕೆ ತಕ್ಕ ಶುಲ್ಕವನ್ನೂ ಈ ಸಮಿತಿ ನಿರ್ಧರಿಸಬೇಕು. ಇದೇ ಮಾದರಿ, ಪ್ರತೀ 2೦೦ ಕಿ ಮೀ ಗಳಿಗೆ ಒಂದರಂತೆ, ರಾಷ್ಟ್ರವ್ಯಾಪಿ ಇರಬೇಕು. ಇಂತಹ ರಾಷ್ಟ್ರವ್ಯಾಪಿ ಆರೋಗ್ಯ ಸಮುಚ್ಚಯಗಳ ನಡುವೆ ಅಂತರ್ಜಾಲದ ವೀಡಿಯೊ ಸಂಪರ್ಕ ಇರಬೇಕು. ಕ್ಲಿಷ್ಟಕರ ರೋಗ ಸಮಸ್ಯೆಗಳಲ್ಲಿ ಇತರ ಹಿರಿಯ ವೈದ್ಯರ ಅಭಿಪ್ರಾಯ ಪಡೆಯುವ ಸೌಲಭ್ಯ ಪ್ರತೀ ಸಮುಚ್ಚಯಕ್ಕೂ ಇರಬೇಕು. ಒಂದು ಸಮುಚ್ಚಯದಿಂದ ಇನ್ನೊಂದೆಡೆಗೆ ರೋಗಿಯನ್ನು ವರ್ಗಾಯಿಸುವ ವ್ಯವಸ್ಥೆ ರೈಲು ಸಂಪರ್ಕದಿಂದ ಸುಲಭವಾಗಿ ಆಗಬೇಕು. ಪ್ರತಿಯೊಂದು ಆರೋಗ್ಯ ಸಮುಚ್ಚಯದ ನಿರ್ವಹಣೆಯನ್ನೂ ಪರಿಷ್ಕರಿಸಿ, ಅವರಿಗೆ ದರ್ಜೆಗಳನ್ನು ನೀಡಬೇಕು. ಈ ದರ್ಜೆ ಉತ್ತಮಗೊಳ್ಳಲು ಪ್ರೋತ್ಸಾಹ ಭತ್ಯೆ ನೀಡಬೇಕು. ಒಂದೇ ಸಮನೆ ಕೆಳ ದರ್ಜೆ ಪಡೆಯುವ ಆರೋಗ್ಯ ಸಮುಚ್ಚಯಗಳ ಮೇಲೆ ನಿಗಾ ವಹಿಸಿ ಅವನ್ನು ಸುಧಾರಿಸಬೇಕು. ವೈದ್ಯರನ್ನು ಹಾಗೂ ನುರಿತ ಸಿಬ್ಬಂದಿಯನ್ನು ಪದೇ ಪದೇ ವರ್ಗಾವಣೆ ಮಾಡಬಾರದು. ನಮ್ಮ ಇಡೀ ವ್ಯವಸ್ಥೆ ಆತ್ಮನಿರ್ಭರವಾಗಬೇಕೆಂದರೆ ಈ ಮಾದರಿಯ ಸಮುಚ್ಚಯಗಳು ಅತ್ಯಗತ್ಯ.

8.    ಎಂಟನೆಯದು – ಶ್ರೇಣೀಕೃತ ಆರೋಗ್ಯ ವ್ಯವಸ್ಥೆಯ ನಿರ್ಮಾಣ. ಮುಂದುವರೆದ ದೇಶಗಳ ವೈದ್ಯಕೀಯ ಚಿಕಿತ್ಸೆಯಲ್ಲಿ ಪ್ರಾಥಮಿಕ, ದ್ವಿತೀಯ ಮತ್ತು ತೃತೀಯ ಎಂಬ ಮೂರು ಹಂತಗಳಿವೆ. ಯಾವುದೇ ರೋಗಿಗೆ ಮೊಟ್ಟ ಮೊದಲು ಚಿಕಿತ್ಸೆ ನೀಡುವವರು ಪ್ರಾಥಮಿಕ ಹಂತದ ವೈದ್ಯರು. ಅವರು ರೋಗಿಯ ಕಾಯಿಲೆಯ ವಿವರಗಳನ್ನು ಕೇಳಿ ತಿಳಿದು, ದೈಹಿಕ ಪರೀಕ್ಷೆ ಮಾಡಿ, ರೋಗಿಯ ರೋಗ ಲಕ್ಷಣಗಳಿಗೆ ಯಾವುದು ಅತ್ಯಂತ ಸಾಮಾನ್ಯ ಕಾರಣವೋ, ಅಂತಹ ಕಾರಣಕ್ಕೆ ಚಿಕಿತ್ಸೆ ನೀಡುತ್ತಾರೆ. ರೋಗ ಗುಣವಾಗದಿದ್ದರೆ, ಅದರ ಮುಂದಿನ ಕಾರಣದ ಚಿಕಿತ್ಸೆ ನಡೆಯುತ್ತದೆ. ಪ್ರಾಥಮಿಕ ಹಂತದಲ್ಲಿ ಪ್ರಯೋಗಾಲಯದ ಪರೀಕ್ಷೆಗಳು ತೀರಾ ಕಡಿಮೆ. ಶೇಕಡಾ 80 ರಷ್ಟು ಕಾಯಿಲೆಗಳು ಈ ಹಂತದಲ್ಲೇ ಗುಣವಾಗುತ್ತವೆ. ಆ ರೀತಿಯಲ್ಲಿ ಗುಣ ಆಗದಿದ್ದರೆ ಮಾತ್ರ, ಪ್ರಾಥಮಿಕ ಹಂತದಿಂದ ರೋಗಿ ದ್ವಿತೀಯ ಹಂತಕ್ಕೆ ಏರಬೇಕಾಗುತ್ತದೆ. ದ್ವಿತೀಯ ಹಂತದ ವೈದ್ಯರ ವಿದ್ಯಾರ್ಹತೆ ಹೆಚ್ಚು ಇರುತ್ತದೆ. ಇಂತಹ ರೋಗಿಗಳನ್ನು ಪರೀಕ್ಷಿಸಿದ ಅನುಭವವೂ ಹೆಚ್ಚು ಇರುತ್ತದೆ. ಇದರ ಆಧಾರದ ಮೇಲೆ, ಅವರು ಕೆಲವು ಪರೀಕ್ಷೆಗಳನ್ನು ಮಾಡಿ ಚಿಕಿತ್ಸೆ ನೀಡುತ್ತಾರೆ. ರೋಗಿಯ ಕಾಯಿಲೆಯ ಕಾರಣಗಳು ಈ ಹಂತದಲ್ಲಿ ಬಹುತೇಕ ಪತ್ತೆಯಾಗುತ್ತವೆ. ನೂರಕ್ಕೆ ತೊಂಭತ್ತೈದಕ್ಕಿಂತ ಅಧಿಕ ರೋಗಿಗಳು ಈ ಹಂತದಲ್ಲಿ ಗುಣಪಡುತ್ತಾರೆ. ಈ ಸ್ತರದ ಚಿಕಿತ್ಸೆಗೂ ಗುಣವಾಗದ ಪ್ರತಿಶತ ಐದಕ್ಕಿಂತ ಕಡಿಮೆ ರೋಗಿಗಳು ಮಾತ್ರ ಮೂರನೆಯ ಹಂತದ ಚಿಕಿತ್ಸೆಗೆ ಒಳಪಡಬೇಕಾಗುತ್ತದೆ. ಇಲ್ಲಿ ಆ ವಿಷಯದ ವಿಶೇಷ ತಜ್ಞರು ಇರುತ್ತಾರೆ. ಈ ಹಂತದ ಪ್ರಯೋಗಾಲಯದ ಪರೀಕ್ಷೆಗಳು ಕೂಡ ಅಧಿಕ ಮತ್ತು ದುಬಾರಿ. ತೀರಾ ಅಸಾಮಾನ್ಯ ಕಾಯಿಲೆಗಳಿಗೆ ಮಾತ್ರ ಇವನ್ನು ಬಳಸಬೇಕು. ಇದರ ಸ್ಪಷ್ಟ ಕಲ್ಪನೆ ಆ ತಜ್ಞ ವೈದ್ಯರಿಗೆ ಇರುತ್ತದೆ. ಇಷ್ಟಾಗಿಯೂ ನಾಲ್ಕೈದು ಸಾವಿರಕ್ಕೆ ಒಬ್ಬ ರೋಗಿಗೆ ಕಾಯಿಲೆಯ ನಿಖರ ಕಾರಣ ತಿಳಿಯದೇ ಹೋಗಬಹುದು. ಇಂತಹ ಅಪರೂಪದ ರೋಗಿಗಳಲ್ಲಿ ವೈದ್ಯಕೀಯ ಸಂಶೋಧನೆ ನಡೆಯುತ್ತದೆ. ಮುಂದುವರೆದ ದೇಶಗಳಲ್ಲಿ ಸಾಮಾನ್ಯವಾಗಿ ಯಾವ ರೋಗಿಯೂ ಸೀದಾ ಮೂರನೇ ಹಂತದ ತಜ್ಞ ವೈದ್ಯರನ್ನು ಸಂಪರ್ಕಿಸಲು ಸಾಧ್ಯವಿಲ್ಲ. ಮೊದಲ ಶ್ರೇಣಿಯಿಂದ ಎರಡನೇ ಶ್ರೇಣಿಗೆ, ಆನಂತರವೇ ಮೂರನೆಯ ಶ್ರೇಣಿಗೆ ಅಧಿಕೃತವಾಗಿ ವರ್ಗಾವಣೆ ಆಗಬೇಕು. ವ್ಯವಸ್ಥೆಯ ಶಿಸ್ತು ಹಾಗಿದೆ. ಒಂದು ವೇಳೆ ವ್ಯವಸ್ಥೆಯ ಶಿಸ್ತನ್ನು ಮೀರಬೇಕೆಂದರೆ ಅದಕ್ಕೆ ಬಹಳ ದುಬಾರಿ ವೆಚ್ಚ ತೆರಬೇಕಾಗುತ್ತದೆ. ಆದರೆ, ನಮ್ಮ ದೇಶದಲ್ಲಿ ಈ ರೀತಿಯ ಶಿಸ್ತನ್ನು ಚಿಕಿತ್ಸೆಯ ಅವಶ್ಯಕತೆ ಎಂದು ಪರಿಗಣಿಸಿಯೇ ಇಲ್ಲ. ನಮ್ಮ ದೇಶದ ಯಾವುದೇ ಸರ್ಕಾರವೂ ವೈದ್ಯಕೀಯ ಶ್ರೇಣೀಕೃತ ವ್ಯವಸ್ಥೆಯನ್ನು ನಿರ್ಮಿಸಿಯೇ ಇಲ್ಲ. ಕನಿಷ್ಠ ಅದರ ಬಗ್ಗೆ ಕಾಳಜಿಯನ್ನೂ ತೆಗೆದುಕೊಂಡಿಲ್ಲ! ಈ ವ್ಯವಸ್ಥೆಯ ಪ್ರಾಥಮಿಕ ಹಂತದಲ್ಲಿ ಶೇಕಡಾ 80 ವೈದ್ಯರು ಇರಬೇಕು. ದ್ವಿತೀಯ ಹಂತದಲ್ಲಿ ಪ್ರತಿಶತ ಹದಿನೈದು ಮಂದಿ ತಜ್ಞವೈದ್ಯರು ಇರಬೇಕು. ಅಂತಿಮ ಹಂತದ ವಿಶೇಷ ತಜ್ಞರ ಸಂಖ್ಯೆ ಶೇಕಡಾ ಐದು ಇದ್ದರೆ ಸಾಕು. ಆದರೆ ನಮ್ಮ ದೇಶದಲ್ಲಿ ಈ ಸಂಖ್ಯೆಗಳು ಬೆಚ್ಚಿಬೀಳಿಸುವಷ್ಟು ಏರುಪೇರಾಗಿವೆ. ನಮ್ಮ ಜನಕ್ಕೆ ತೀರಾ ಸಣ್ಣ ಸಮಸ್ಯೆಗೂ “ಸ್ಪೆಷಲಿಸ್ಟ್”ಗಳೇ ಬೇಕು! “ಯಾವ ರೋಗಿಗೆ ಯಾರು ಚಿಕಿತ್ಸೆ ನೀಡಬೇಕು” ಎಂಬುದನ್ನು ಖುದ್ದು ರೋಗಿಯೋ ಅಥವಾ ಅವರ ಆಪ್ತರೋ  ನಿರ್ಧರಿಸುತ್ತಾರೆ! ಎಲ್ಲ ರೋಗಿಗಳೂ “ತಜ್ಞ ವೈದ್ಯರನ್ನೇ ಕಾಣಬೇಕು” ಎನ್ನುವ ಧಾವಂತದಿಂದ, ನಮ್ಮ ದೇಶದಲ್ಲಿ ಕೇವಲ ಮೊದಲ ಹಂತದ ವೈದ್ಯಕೀಯ ವ್ಯಾಸಂಗ ಮಾಡಿದವರಿಗೆ ಹೆಚ್ಚು ಸಾಮಾಜಿಕ ಮನ್ನಣೆ ಇಲ್ಲ. ಹೀಗಾಗಿ, ಬಹುತೇಕ ವೈದ್ಯರು ತಜ್ಞ ವ್ಯಾಸಂಗ ಮಾಡಲು ಮುಂದಾಗುತ್ತಿದ್ದಾರೆಯೇ ವಿನಃ, ಪ್ರಾಥಮಿಕ ಶ್ರೇಣಿಯಲ್ಲಿ ಕೆಲಸ ಮಾಡಲು ಸಿದ್ಧರಿಲ್ಲ. ಇದರಿಂದ ಉಂಟಾದ ನಿರ್ವಾತದ ಪರಿಣಾಮ, ಪ್ರಾಥಮಿಕ ಹಂತದಲ್ಲಿ ಖೊಟ್ಟಿ ವೈದ್ಯರು ತುಂಬಿದ್ದಾರೆ. ಈ ಮೋಸಗಾರರು ವೈದ್ಯಕೀಯ ವ್ಯಾಸಂಗವನ್ನೇ ಮಾಡದ ಖೂಳರು ಆಗಿರಬಹುದು; ಇಲ್ಲವೇ ಯಾವುದೋ ಬೇರೆ ವಿಧಾನದ ವೈದ್ಯಕೀಯ ಪದ್ಧತಿಯ ವ್ಯಾಸಂಗ ಮಾಡಿ, ತಾವು ಎಂದಿಗೂ ಓದದೇ ಇರುವ ಆಧುನಿಕ ವೈದ್ಯ ಪದ್ದತಿಯ ಔಷಧಗಳನ್ನು ಬೇಕಾಬಿಟ್ಟಿ ಬರೆಯುವ ಪಾಖಂಡಿಗಳಿರಬಹುದು. ಒಟ್ಟಿನಲ್ಲಿ, ನಮ್ಮ ಪ್ರಾಥಮಿಕ ಶ್ರೇಣಿಯ ವೈದ್ಯಕೀಯ ಚಿಕಿತ್ಸೆ ಗಬ್ಬೆದ್ದು ಹೋಗಿದೆ. ಇದರಲ್ಲಿ ಸರ್ಕಾರದ ಪಾತ್ರ ಎಷ್ಟೋ, ಸಮಾಜದ ಪಾತ್ರವೂ ಅಷ್ಟೇ ಇದೆ. ಈ ಹಳ್ಳವನ್ನು ಕೆಣಕಿ ಕಣಿವೆ ಮಾಡಲು ರಾಜಕಾರಣ, ಮಾಧ್ಯಮ, ವೈದ್ಯಕೀಯ ಉದ್ಯಮ ನಡೆಸುವ ಪಟ್ಟಭದ್ರರು ಇದ್ದಾರೆ. ಇದು ನಮ್ಮ ವ್ಯವಸ್ಥೆಯ ವಿಪರ್ಯಾಸ. ಈ ಸಮಸ್ಯೆಗಳನ್ನು ಮೀರಬೇಕಂದರೆ ನಮ್ಮ ಸರ್ಕಾರಕ್ಕೆ ಒಂದು ಸ್ಪಷ್ಟ ಆರೋಗ್ಯ ನೀತಿ ಬೇಕು. ನಮ್ಮ ದೇಶದ ವಿಚಿತ್ರ ಸಮಸ್ಯೆಗಳಿಗೆ ನಮ್ಮದೇ ಆದ ವಿನೂತನ ಪರಿಹಾರಗಳು ಬೇಕು. ಶ್ರೇಣೀಕೃತ ಆರೋಗ್ಯ ವ್ಯವಸ್ಥೆಯ ನಿರ್ಮಾಣವನ್ನು ಸರ್ಕಾರ ಕಟ್ಟುನಿಟ್ಟಾಗಿ ಮಾಡಬೇಕು. ಎಲ್ಲಾ ಸರಕಾರೀ ಹಾಗೂ ಖಾಸಗೀ ಆರೋಗ್ಯ ಸಂಸ್ಥೆಗಳಿಗೆ ವರ್ಗೀಕೃತ ಶ್ರೇಣಿ ನೀಡಬೇಕು. ಅವುಗಳಲ್ಲಿ ಇರುವ ಅನುಕೂಲಕ್ಕೆ ತಕ್ಕಂತೆ, ಅವುಗಳು ಮಾಡಬಹುದಾದ ಚಿಕಿತ್ಸೆಯನ್ನು ನಿಯಂತ್ರಿಸಬೇಕು. ಆತ್ಮನಿರ್ಭರವಾಗಬೇಕೆಂದರೆ ಇಡೀ ವ್ಯವಸ್ಥೆಯಲ್ಲಿ ಶಿಸ್ತು ಅತ್ಯಗತ್ಯ. ಶಿಸ್ತು ಇಲ್ಲದ ದೇಶ ಉದ್ಧಾರವಾದ ಉದಾಹರಣೆಗಳು ಇತಿಹಾಸದಲ್ಲಿ ಇಲ್ಲವೇ ಇಲ್ಲ!

9.     ಒಂಭತ್ತನೆಯದು - ಸ್ವಾವಲಂಬನೆ. ವೈದ್ಯಕೀಯ ಚಿಕಿತ್ಸೆ ಅತ್ಯಂತ ಉನ್ನತ ತಂತ್ರಜ್ಞಾನವನ್ನು ಬೇಡುವ, ಅಪಾರ ಸಂಶೋಧನಾ ಸಾಮರ್ಥ್ಯವನ್ನು ಅವಲಂಬಿಸಿರುವ ಕ್ಷೇತ್ರ. ಇದಕ್ಕೆ ಸರ್ಕಾರಿ ಮತ್ತು ಖಾಸಗಿ ಸಂಶೋಧನಾ ಪ್ರಯೋಗಾಲಯಗಳ ಪೂರಕ ಸಹಯೋಗ ಬಹಳ ಮುಖ್ಯ. ರೋಗ ಪತ್ತೆ ಮಾಡುವ ಬೃಹತ್ ಸ್ಕ್ಯಾನಿಂಗ್ ಉಪಕರಣಗಳಾಗಲೀ ಅಥವಾ ರಕ್ತದಲ್ಲಿನ ಸೋಂಕನ್ನು ಪತ್ತೆ ಮಾಡುವ ಪುಟ್ಟ ಕಿಟ್ ಮಾದರಿಯ ಸಾಧನಗಳಾಗಲೀ, ದೇಶೀಯವಾಗಿ ತಯಾರಾಗಬೇಕು. ಇದಕ್ಕೆ ಬೇಕಾದ ಅತ್ಯಾಧುನಿಕ ತಂತ್ರಜ್ಞಾನ, ಇವನ್ನು ನಿರ್ಮಿಸುವ ಅತ್ಯಂತ ಸೂಕ್ಷ್ಮ, ನಿಖರ ಯಂತ್ರಗಳು, ಇದಕ್ಕೆ ಬೇಕಾದ ಕುಶಲ ತಂತ್ರಜ್ಞರು, ಈ ಸಾಧನೆಯ ಹಿಂದಿನ ಬುದ್ಧಿವಂತಿಕೆಗೆ ಕಾರಣವಾಗುವ ಪ್ರಜ್ಞಾವಂತರು – ಇವೆಲ್ಲವೂ ಇಡಿಯಾಗಿ ನಮ್ಮ ದೇಶದಲ್ಲೇ ಆಗಬೇಕು. ಜಾಗತಿಕವಾಗಿ ನೋಡಿದರೆ, ಇಂತಹ ಪ್ರತಿಯೊಂದು ತಂತ್ರಜ್ಞಾನದ ಹಿಂದೆಯೂ, ಪ್ರತೀ ಹಂತದಲ್ಲೂ ಭಾರತೀಯರ ಶ್ರಮ ಇದ್ದೇ ಇರುತ್ತದೆ. ಆದರೆ, ಅದು ಭಾರತದಲ್ಲಿ ಆಗುವುದಿಲ್ಲ ಎನ್ನುವುದು ವಿಪರ್ಯಾಸ. ಇದರ ಹಿಂದಿರುವ ಕಾರಣಗಳು ಅನೇಕ. “ಇದನ್ನೆಲ್ಲಾ ಮೀರಿ ನಮ್ಮ ವ್ಯವಸ್ಥೆಯನ್ನು ಆತ್ಮನಿರ್ಭರವಾಗಿಸಲು ನಮ್ಮ ಸರ್ಕಾರಗಳು ತಯಾರಾಗಿವೆಯೇ” ಎಂಬುದು ಯಕ್ಷಪ್ರಶ್ನೆ. ಇದಕ್ಕೆ “ದೇಶ ಆತ್ಮನಿರ್ಭರವಾಗಬೇಕು” ಎಂದು ಆಣತಿ ಕೊಡಿಸಿದವರೇ ಉತ್ತರ ಹೇಳಬೇಕು.

ವೈದ್ಯಕೀಯ ಕ್ಷೇತ್ರದಲ್ಲಿ ಆತ್ಮನಿರ್ಭರವಾಗುವುದು ಕರೊನಾವೈರಸ್ ನಿಯಂತ್ರಣಕ್ಕಿಂತ ಬಹಳ ದೊಡ್ಡ ಸಮಸ್ಯೆ. ಇದು ಸುಲಭವೂ ಅಲ್ಲ; ಸರಳವೂ ಅಲ್ಲ! ಆದರೆ, ಅಶಕ್ಯವೂ ಅಲ್ಲ. ಆತ್ಮನಿರ್ಭರವಾಗಲು ನಮ್ಮ ದೇಶದಲ್ಲಿ ಪೂರಕವಾಗುವ ಹಲವಾರು ಅಂಶಗಳಿವೆ. ಜಾಗತಿಕ ಮಟ್ಟದಲ್ಲಿ ಹೆಮ್ಮೆ ಪಡುವಂತಹ ವೈದ್ಯರು, ಸಂಶೋಧಕರು, ತಂತ್ರಜ್ಞರು, ದಾದಿಯರು, ವಿಜ್ಞಾನಿಗಳು ನಮ್ಮ ದೇಶದಲ್ಲಿದ್ದಾರೆ. ವೈದ್ಯಕೀಯವನ್ನು ವೃತ್ತಿಗಿಂತ ಸೇವೆ ಎಂದು ಪರಿಗಣಿಸಿರುವ ಮಂದಿ ನಮ್ಮ ದೇಶದಲ್ಲಿ ಇರುವಷ್ಟು, ಪ್ರಾಯಶಃ ಜಗತ್ತಿನ ಯಾವ ದೇಶದಲ್ಲೂ ಇಲ್ಲ. ನಮ್ಮ ದೇಶದ ವೈದ್ಯಕೀಯ ಕ್ಷೇತ್ರದ ಸದಸ್ಯರಲ್ಲಿರುವ ಕಷ್ಟಸಹಿಷ್ಣುತೆ, ತಾಳ್ಮೆ, ಮಾನವೀಯತೆ ಇಡೀ ಪ್ರಪಂಚಕ್ಕೆ ಮಾದರಿ. ನಮಗೆ ಆತ್ಮನಿರ್ಭರವಾಗುವುದು ಕಷ್ಟದ ಮಾತಲ್ಲ. ನಮ್ಮಲ್ಲಿ ಅದಕ್ಕೆ ಅಗತ್ಯವಾದ ಎಲ್ಲವೂ ಇದೆ. ಆದರೆ, ಇವೆಲ್ಲಾ ಸಾಧನಗಳೂ, ಒಂದು ಚಿತ್ರವನ್ನು ಹರಿದು ಅದರ ತುಣುಕುಗಳನ್ನು ಕೋಣೆಯ ತುಂಬೆಲ್ಲಾ ಹರಡಿದಂತಹ ಪರಿಸ್ಥಿತಿಯಲ್ಲಿದೆ. ಆ ತುಣುಕುಗಳನ್ನು ಹೆಕ್ಕಿ, ಸರಿಯಾದ ರೀತಿಯಲ್ಲಿ ಜೋಡಿಸುವುದು, ಪ್ರಾಯಶಃ ಇಡೀ ದೇಶದ ಪ್ರತಿಯೊಬ್ಬರ ಕರ್ತವ್ಯ. ಹೀಗೆ ಮಾಡಲು ಪೂರಕ ವಾತಾವರಣವನ್ನು ನಿರ್ಮಿಸುವುದು ನಮ್ಮ ವ್ಯವಸ್ಥೆಯ ಹೊಣೆ. ವಿಫಲಗೊಳಿಸುವ ಶಕ್ತಿಗಳನ್ನು ಮೀರುವುದು ಪ್ರತಿಯೊಬ್ಬರೂ ಮಾಡಬೇಕಾದ ಪ್ರಯತ್ನ. ನಮ್ಮ ಆತ್ಮನಿರ್ಭರತೆ ನಮ್ಮ ಆಶಯ, ಹೊಣೆ, ಕನಸು, ಅಗತ್ಯ, ಮತ್ತು ಧ್ಯೇಯವಾಗಿರಬೇಕು ಕೂಡ.

--------------------------

 

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ