ಭಾನುವಾರ, ಆಗಸ್ಟ್ 30, 2020

 

COVID-19 ರ ಅಂತ್ಯ ಹೇಗೆ?

ಡಾ. ಕಿರಣ್ ವಿ ಎಸ್.

ವೈದ್ಯರು

“ಈ ಹಾಳು ಕರೊನಾವೈರಸ್ ಕಾಯಿಲೆ ಯಾವಾಗ ಕೊನೆಯಾಗುತ್ತೋ ಕಾಣೆ” ಎನ್ನುವುದು ಪ್ರತಿಯೊಬ್ಬರ ಅಂತರಾಳದ ಮಾತು! ಮಾನವ ಇತಿಹಾಸ ಇಂತಹ ಹಲವಾರು ಜಾಗತಿಕ ವಿಪತ್ತುಗಳನ್ನು ಕಂಡಿದೆ. 1961 ರಲ್ಲಿ ಆರಂಭವಾದ ಕಾಲರಾ ರೋಗದ 7 ನೆಯ ಜಾಗತಿಕ ಆವೃತ್ತಿ ಇಂದಿಗೂ ಮುಂದುವರೆಯುತ್ತಿದೆ ಎನ್ನಲಾಗಿದೆ. ಆದರೆ, ನಮ್ಮ ಪೀಳಿಗೆಯವರನ್ನು ಇಷ್ಟು ಮಟ್ಟಿಗೆ ಕಾಡಿರುವ ಮೊದಲ ಸಾರ್ವತ್ರಿಕ ಸಾಂಕ್ರಾಮಿಕ ಆರೋಗ್ಯ ಸಮಸ್ಯೆ ಪ್ರಸ್ತುತ “COVID-19”.

“ಇದು ಯಾವಾಗ ಮುಗಿಯುತ್ತೆ?” ಎನ್ನುವ ಪ್ರಶ್ನೆಗೆ ಉತ್ತರ ನೀಡಲು ಮೊದಲು ಕೆಲವು ಅಂಶಗಳು ಅರ್ಥವಾಗಬೇಕು. ಸಾಂಕ್ರಾಮಿಕ ಕಾಯಿಲೆ ಎಂದರೆ “ಒಬ್ಬರಿಂದ ಮತ್ತೊಬ್ಬರಿಗೆ ಹರಡುವಂತದ್ದು”. ಪ್ರತಿಯೊಂದು ಸಾಂಕ್ರಾಮಿಕ ಕಾಯಿಲೆಯ ಹರಡುವಿಕೆ ವಿಭಿನ್ನ. ಮಲೇರಿಯಾ ಹರಡಲು ಸೊಳ್ಳೆ; ಕಾಲರಾ ಹರಡಲು ಮಲಿನ ನೀರು, ಆಹಾರಹೀಗೆ. ಸಾಂಕ್ರಾಮಿಕ ಕಾಯಿಲೆಗಳ ಹರಡುವಿಕೆಯನ್ನು “ಸೋಂಕಿನ ತ್ರಿಕೋನ”ದಿಂದ ತಿಳಿಯಬಹುದು (ಚಿತ್ರ 1). ಇದರಲ್ಲಿ ಒಂದೆಡೆ ರೋಗಕಾರಕ ಪರೋಪಜೀವಿ; ಮತ್ತೊಂದೆಡೆ ಆ ಜೀವಿಗೆ ಪೂರಕವಾಗಬಲ್ಲ ವಾತಾವರಣ; ಮೂರನೆಯ ಕಡೆ ರೋಗವನ್ನು ಅನುಭವಿಸುವ ಜೀವಿ. ಈ ಮೂರನ್ನೂ ಕೂಡಿಸುವುದು ಸಮಯ. COVID-19 ರ ವಿಷಯಕ್ಕೆ ಬಂದಾಗ, ರೋಗ ಅನುಭವಿಸುವುದು ಮನುಷ್ಯರು; ರೋಗಕಾರಕ COVID-19 ಎಂಬ ವೈರಸ್; ಈ ವೈರಸ್ ಹರಡಲು ಪೂರಕವಾದ ವಾತಾವರಣ ಎಂದರೆ, ಅದು ಸುಲಭದಲ್ಲಿ ಹರಡಬಲ್ಲ ರೀತಿಗಳು.    


ಚಿತ್ರ 1: ಸಾಂಕ್ರಾಮಿಕ ರೋಗಗಳ ತ್ರಿಕೋನ. ಚಿತ್ರ ಕೃಪೆ: https://www.flickr.com/photos/internetarchivebookimages/17758371250

 

“ಈ ಕಾಯಿಲೆ ಹೇಗೆ ಕೊನೆಗೊಳ್ಳುತ್ತದೆ” ಎಂಬ ಪ್ರಶ್ನೆಯನ್ನು ವಿವರಿಸಬೇಕು. “ಕೊನೆಗೊಳ್ಳುವುದು” ಎಂದರೆ, ಸಮಷ್ಟಿ ಸಮಾಜದ ಮೇಲೆ ಈ ಕಾಯಿಲೆಯ ಪರಿಣಾಮ ನಮ್ಮ ನಿಯಂತ್ರಣದಲ್ಲಿ ಇರಬೇಕು. ಅಥವಾ, ಈ ಕಾಯಿಲೆಯನ್ನೇ ನಿರ್ಮೂಲನೆ ಮಾಡಬೇಕು. ಎರಡನೆಯ ಆಯ್ಕೆ ಕಷ್ಟ. ಈ ಹಿಂದೆ ಸಿಡುಬು (smallpox) ರೋಗವನ್ನು ಪ್ರಪಂಚದಿಂದ ನಿರ್ಮೂಲನ ಮಾಡಿದ್ದೇವೆ. ಪೋಲಿಯೋ ಮತ್ತು ದಢಾರ (measles) ಕಾಯಿಲೆಗಳನ್ನೂ ನಿರ್ಮೂಲನ ಮಾಡುವತ್ತ ಧೃಡವಾದ ಹೆಜ್ಜೆಗಳನ್ನು ಇಟ್ಟಿದ್ದೇವೆ. ಇವೆಲ್ಲವೂ ವೈರಸ್-ಮೂಲದ ಕಾಯಿಲೆಗಳೇ. ಆದರೆ, ನಿರ್ಮೂಲನಕ್ಕೆ ಕಾಲ ಹಿಡಿಯುತ್ತದೆ. ಎರಡರ ಮಧ್ಯೆ ನಿಯಂತ್ರಣದ ಆಯ್ಕೆ ಹೆಚ್ಚು ಪ್ರಾಯೋಗಿಕ. ಚಿತ್ರ 2 ಮತ್ತು 3 ಮತ್ತು ಅವುಗಳ ಜೊತೆಗೆ ನೀಡಿರುವ ಅಡಿಟಿಪ್ಪಣಿಗಳು ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತವೆ.

ಚಿತ್ರ 2: COVID-19 ಸೇರಿದಂತೆ, ಯಾವುದೇ ಸಾಂಕ್ರಾಮಿಕ ಕಾಯಿಲೆಯ ಮೇಲೆ ನಿಯಂತ್ರಣದ ಪರಿಣಾಮ. ಈ ನಕ್ಷೆಯ ಉದ್ದದ ಗೆರೆ (x-ಅಕ್ಷ) ಸಮಯವನ್ನು ತೋರುತ್ತದೆ. ಎತ್ತರದ ಗೆರೆ (y-ಅಕ್ಷ) ಆಯಾ ಸಮಯದಲ್ಲಿ ಇರುವ ರೋಗಿಗಳ ಸಂಖ್ಯೆಯನ್ನು ತೋರುತ್ತದೆ. X-ಅಕ್ಷಕ್ಕೆ ಸಮಾನಾಂತರವಾಗಿರುವ ತುಂಡಾದ ರೇಖೆ ನಮ್ಮ ಆರೋಗ್ಯ ವ್ಯವಸ್ಥೆಯ ಸಾಮರ್ಥ್ಯವನ್ನು ತೋರುತ್ತದೆ. ಯಾವುದೇ ಸಮಯದಲ್ಲೂ ರೋಗಿಗಳ ಸಂಖ್ಯೆ ನಮ್ಮ ಆರೋಗ್ಯ ವ್ಯವಸ್ಥೆಯ ಸಾಮರ್ಥ್ಯವನ್ನು ಮೀರದಂತೆ ರೋಗದ ಪ್ರಸರಣವನ್ನು ಹತ್ತಿಕ್ಕುವುದು “ಸಫಲ ನಿಯಂತ್ರಣ” ಎನ್ನಿಸಿಕೊಳ್ಳುತ್ತದೆ. (ಚಿತ್ರ ಕೃಪೆ: ಎಸ್ಥರ್ ಕಿಮ್ ಮತ್ತು ಕಾರ್ಲ್ ಬರ್ಗ್ಸ್ಟಾರ್ಮ್ – http://ctbergstrom.com/covid19.html )

 

ಚಿತ್ರ 3: ರೋಗವನ್ನು ಚೆನ್ನಾಗಿ ನಿಯಂತ್ರಣದಲ್ಲಿ ಇಡಬೇಕೆಂದರೆ, x-ಅಕ್ಷಕ್ಕೆ ಸಮಾನಾಂತರವಾಗಿರುವ ತುಂಡಾದ ಗೆರೆಯನ್ನು ಸಾಧ್ಯವಾದಷ್ಟೂ ಎತ್ತರಿಸಬೇಕು. ಅಂದರೆ, ನಮ್ಮ ಆರೋಗ್ಯ ವ್ಯವಸ್ಥೆಯ ಸಾಮರ್ಥ್ಯವನ್ನು ಸಾಧ್ಯವಾದಷ್ಟೂ ಬೇಗ ಬೆಳೆಸಿಕೊಳ್ಳಬೇಕು. ಈ ತುಂಡಾದ ಗೆರೆ x-ಅಕ್ಷಕ್ಕಿಂತ ಎಷ್ಟು ಮೇಲೆ ಇರುತ್ತದೋ, ಕಾಯಿಲೆಯ ನಿಯಂತ್ರಣಕ್ಕೆ ಅಷ್ಟು ಕಡಿಮೆ ಸಮಯ ಹಿಡಿಯುತ್ತದೆ. (ಚಿತ್ರ ಕೃಪೆ: https://commons.wikimedia.org/wiki/File:20200403_Flatten_the_curve_animated_GIF.gif )

 

ಯಾವುದೇ ಕಾಯಿಲೆ ಹೇಗೆ ವರ್ತಿಸುತ್ತದೆ? ಉದಾಹರಣೆಗೆ ಮಲೇರಿಯಾ ಕಾಯಿಲೆಯನ್ನು ಗಮನಿಸಬಹುದು. ಮಲೇರಿಯಾ ಕಾಯಿಲೆಗೆ ಕಾರಣ ಪ್ಲಾಸ್ಮೊಡಿಯಂ ಎಂಬ ಏಕಾಣುಸೂಕ್ಷ್ಮಜೀವಿ. ಅದು ಹರಡುವುದು ಅನಾಫಿಲಿಸ್ ಎಂಬ ಪ್ರಬೇಧದ ಹೆಣ್ಣು ಸೊಳ್ಳೆಯಿಂದ. ಬಾಧಿಸುವುದು ಮನುಷ್ಯರನ್ನು. ಈ ಪ್ರಬೇಧದ ಸೊಳ್ಳೆಗಳು ಯಾವ ವಾತಾವರಣದಲ್ಲಿ ಹುಲುಸಾಗಿ ಬೆಳೆಯುತ್ತವೋ, ಅಂತಹ ಪರಿಸರದಲ್ಲಿ ಮಲೇರಿಯಾ ಹಾವಳಿ ಹೆಚ್ಚು. ಈ ಮಲೇರಿಯಾವನ್ನು ನಿಯಂತ್ರಣದಲ್ಲಿ ಇಡಬೇಕೆಂದರೆ, ಮೇಲೆ ಕಾಣಿಸಿದ ಸೋಂಕಿನ ತ್ರಿಕೋನದ ಯಾವುದಾದರೂ ಬಾಹುವನ್ನು ಮುರಿಯಬೇಕು. ಮೂರು ಬಾಹುಗಳಿಗೆ ಮೂರು ದಾರಿಗಳು:

1.      ಪ್ಲಾಸ್ಮೊಡಿಯಂ ಏಕಾಣುಜೀವಿಯನ್ನು ಕೊಲ್ಲಬಲ್ಲ ಔಷಧ. ಇದರಿಂದ, ದೇಹದಲ್ಲಿರುವ ಪ್ಲಾಸ್ಮೊಡಿಯಂ ಸಾಯುತ್ತದೆ. ಕಾಯಿಲೆ ಕೊನೆಗೊಳ್ಳುತ್ತದೆ. ಆದರೆ, ಇದರ ಸಮಸ್ಯೆ ಎಂದರೆ, ಈ ಏಕಾಣುಜೀವಿಯ ಚಾಣಾಕ್ಷತೆ! ಅದು ಔಷಧದ ವಿರುದ್ಧ ಪ್ರತಿರೋಧ ಬೆಳೆಸಿಕೊಳ್ಳಬಲ್ಲದು. ಹೀಗಾಗಿ, ಹಿಂದೊಮ್ಮೆ ಪರಿಣಾಮಕಾರಿ ಆಗಿದ್ದ ಔಷಧ ಏಕಾಏಕಿ ತನ್ನ ಪ್ರಭಾವ ಕಳೆದುಕೊಳ್ಳುತ್ತದೆ! ಆಗ ಹೊಸ ಹೊಸ ಔಷಧಗಳ ಅನ್ವೇಷಣೆ ಅಗತ್ಯ. ಇದು ಸುಲಭದ ಮಾತಲ್ಲ. ಹೊಸ ಔಷಧಗಳ ಸಂಶೋಧನೆ ಬಹಳ ದುಬಾರಿಯಷ್ಟೆ ಅಲ್ಲ; ಬಹಳ ಕಾಲ ತೆಗೆದುಕೊಳ್ಳುವ ಪ್ರಕ್ರಿಯೆ.

2.     ಮಲೇರಿಯಾ ಕಾಯಿಲೆಯನ್ನು ಹರಡುವ ಸೊಳ್ಳೆಗಳನ್ನು ನಾಶ ಮಾಡುವುದು. ಇದಕ್ಕೆ ಕೀಟನಾಶಕಗಳನ್ನು ಬಳಸಲಾಗುತ್ತದೆ. ಅವು ಕೇವಲ ಸೊಳ್ಳೆಗಳನ್ನು ಮಾತ್ರವಲ್ಲದೆ, ಹಲವಾರು ಉಪಯುಕ್ತ ಕೀಟಗಳನ್ನೂ ಕೊಂದುಬಿಡುತ್ತವೆ. ಪರಿಸರದ ಸೂಕ್ಷ್ಮ ಸಮತೋಲನ ಏರುಪೇರು ಆಗುತ್ತದೆ. ಅಲ್ಲದೇ, ಕೀಟಗಳು ಇಂತಹ ಕೀಟನಾಶಕಗಳ ವಿರುದ್ಧ ಪ್ರತಿರೋಧ ಶಕ್ತಿ ಬೆಳೆಸಿಕೊಳ್ಳುತ್ತವೆ. ಪರಿಣಾಮ – ಮತ್ತಷ್ಟು ತೀವ್ರತೆಯ ಕೀಟನಾಶಕ ಬಳಕೆ – ಸಮತೋಲನ ಮತ್ತಷ್ಟು ಬಿಗಡಾಯಿಸುವಿಕೆ!

3.     ಪರಿಸರದ ಹಂತದಲ್ಲಿ ಮಾರ್ಪಾಡು: ಸೊಳ್ಳೆಗಳು ಹೇಗೆ ಬೆಳೆಯುತ್ತವೆ ಎಂಬುದನ್ನು ಅಧ್ಯಯನ ಮಾಡಿ, ಆ ಬೆಳವಣಿಗೆಗೆ ಪೂರಕವಾಗುವ ಅಂಶಗಳ ನಿಯಂತ್ರಣ. ನಿಂತ ನೀರಿನಲ್ಲಿ ಸೊಳ್ಳೆಗಳು ಬೆಳೆಯುತ್ತವೆ ಎಂದು ತಿಳಿದಾಗ, ಎಲ್ಲೂ ನೀರು ನಿಲ್ಲದಂತೆ ನಿಗಾ ವಹಿಸುವುದು; ನೀರು ನಿಂತಿದ್ದರೆ ಅದನ್ನು ಶುಚಿಗೊಳಿಸುವುದು; ಪರಿಸರಕ್ಕೆ ಹಾನಿ ಮಾಡದ ಸಸ್ಯಜನ್ಯ ವಸ್ತುಗಳನ್ನು ಬಳಸಿ ಸೊಳ್ಳೆಗಳ ಬೆಳವಣಿಗೆ ತಪ್ಪಿಸುವುದು (ಉದಾಹರಣೆಗೆ: ನೀರಿನಲ್ಲಿ ಸೊಳ್ಳೆಗಳ ಗೊದಮೊಟ್ಟೆಗಳನ್ನು ತಿನ್ನುವ ಮೀನುಗಳ ಪೋಷಣೆ; ನಿಂತ ನೀರಿನ ಮೇಲೆ ಬೇವಿನ ಎಣ್ಣೆಯ ಸಿಂಪಡಿಕೆ ಇತ್ಯಾದಿ) 

ಈಗ ಇದೇ ಮಾದರಿಯನ್ನು COVID-19 ಕ್ಕೆ ವಿಸ್ತರಿಸಿದರೆ, ಕಾಯಿಲೆ ನಿಯಂತ್ರಣದ ಒಳನೋಟಗಳು ದೊರೆಯುತ್ತವೆ. ಮೊದಲಿಗೆ COVID-19 ಬಗ್ಗೆ ಸ್ವಲ್ಪ ಮಾಹಿತಿ. COVID-19 ಎನ್ನುವುದು ಹಳೆಯ ಕರೊನಾವೈರಸ್ ನ ಹೊಸ ರೂಪ. ತನ್ನೊಳಗಿನ ಆರ್.ಎನ್.ಎ. ಎಂಬ ಜೀವಧಾತುವನ್ನು ಆಮೂಲಾಗ್ರವಾಗಿ ಬದಲಾವಣೆ ಮಾಡಿಕೊಂಡ ಕರೊನಾವೈರಸ್, ಅದರಿಂದ ತನ್ನ ಸುತ್ತ ಹೊಸ ರೀತಿಯ ಪ್ರೊಟೀನ್ ಕವಚವನ್ನು ನಿರ್ಮಿಸಿಕೊಂಡು ಈಗ COVID-19 ಎಂಬ ಹೊಸ ರೂಪ ಪಡೆದುಕೊಂಡಿದೆ. ಈ ಹೊಸ ರೂಪ ನಮ್ಮ ದೇಹದ ರಕ್ಷಕ ವ್ಯವಸ್ಥೆಗೆ ಹೊಸದು. ಹೀಗಾಗಿ, ಈ ಹೊಸರೂಪದ ವೈರಸ್ ವಿರುದ್ಧ ಹೋರಾಡಲು ನಮ್ಮ ರಕ್ಷಕ ವ್ಯವಸ್ಥೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಒಂದು ವೇಳೆ ರಕ್ಷಕ ವ್ಯವಸ್ಥೆ ಪ್ರತಿಕ್ರಿಯಿಸುವಷ್ಟರಲ್ಲಿ ವೈರಸ್ ತನ್ನ ಕೆಲಸ ಮೊದಲಿತ್ತು ಶರೀರಕ್ಕೆ ಹಾನಿ ಮಾಡಿದರೆ, ಆಗ ರೋಗ ಕಾಣುತ್ತದೆ. ಆದರೆ, ವೈರಸ್ ಆಟ ಶುರು ಆಗುವುದಕ್ಕೆ ಮುನ್ನವೇ ನಮ್ಮ ರಕ್ಷಕ ವ್ಯವಸ್ಥೆ ಎಚ್ಚೆತ್ತರೆ, ಆಗ ಶರೀರಕ್ಕೆ ಹೆಚ್ಚು ಘಾಸಿ ಆಗುವುದಿಲ್ಲ. ಒಂದು ವೇಳೆ ರಕ್ಷಕ ವ್ಯವಸ್ಥೆಯ ಬಲ ಯಾವುದಾದರೂ ಕಾರಣಕ್ಕೆ ಕುಂಠಿತವಾಗಿದ್ದರೆ, ಅಂತಹವರಲ್ಲಿ COVID-19 ಸೋಂಕು ಪ್ರಾಣಕ್ಕೆ ಎರವಾಗಬಹುದು. ವೃದ್ಧರಲ್ಲಿ, ಸಣ್ಣ ಮಕ್ಕಳಲ್ಲಿ, ಮಧುಮೇಹಿಗಳಲ್ಲಿ, ಸ್ಟೀರಾಯ್ಡ್ ಔಷಧ ಬಳಸುವವರಲ್ಲಿ, ಕುಂಠಿತ ರಕ್ಷಕ ವ್ಯವಸ್ಥೆಯ ಕಾಯಿಲೆ ಪೀಡಿತರಲ್ಲಿ – ಹೀಗೆ ಕೆಲವು ವಿಶೇಷ ಗುಂಪುಗಳನ್ನು ಬಿಟ್ಟರೆ, ಉಳಿದವರಲ್ಲಿ ಈ ಕಾಯಿಲೆ ಬಹುತೇಕ ಪ್ರಾಣಾಂತಕವಲ್ಲ.

1. COVID-19 ಕೊಲ್ಲಬಲ್ಲ ಯಾವುದೇ ಪಕ್ಕಾ ಔಷಧ ಸದ್ಯಕ್ಕೆ ಲಭ್ಯವಿಲ್ಲ. ಹಲವಾರು ಔಷಧಗಳನ್ನು ಪ್ರಯೋಗ ಮಾಡಿದ್ದಾರಾದರೂ, ಅದರಲ್ಲಿ ಯಾವುದೇ ಒಂದೂ ಸದ್ಯಕ್ಕೆ “ಪಕ್ಕಾ” ಎನ್ನುವಂತಹ ಪರಿಣಾಮ ತೋರಿಲ್ಲ. ಸಾಮಾನ್ಯವಾಗಿ, ವೈರಸ್ ಕಾಯಿಲೆಗಳಿಗೆ ಔಷಧ ಬೇಕಾಗುವುದು ವಿಶೇಷ ಪರಿಸ್ಥಿತಿಗಳಲ್ಲಿ ಮಾತ್ರ. ಬಹುತೇಕ ಮಿಕ್ಕೆಲ್ಲರೂ ಔಷಧದ ನೆರವಿಲ್ಲದೇ, ತಮ್ಮ ರಕ್ಷಕ ವ್ಯವಸ್ಥೆಯ ಬಲದಿಂದಲೇ ಗುಣ ಹೊಂದುತ್ತಾರೆ. COVID-19 ಸೋಂಕಿನಲ್ಲೂ ಎಲ್ಲರಿಗೂ ವೈರಸ್ ಕೊಲ್ಲಬಲ್ಲ ಔಷಧ ಬೇಡ. ಆದರೆ, ಇಲ್ಲಿ ಔಷಧವೇ ಇಲ್ಲದ ಕಾರಣ, ವಿಶೇಷ ಗುಂಪಿನ ರೋಗಿಗಳಿಗೂ ಚಿಕಿತ್ಸೆ ನೀಡುವುದು ಕಷ್ಟವಾಗಿದೆ. ಹೀಗಾಗಿ, ರಕ್ಷಕ ವ್ಯವಸ್ಥೆಯನ್ನು ಜಾಗೃತಗೊಳಿಸಿವುದು ಬಿಟ್ಟರೆ ಬೇರೆ ಪರ್ಯಾಯವಿಲ್ಲ.

2. COVID-19 ನಮ್ಮ ದೇಹವನ್ನು ಸೇರುವುದು ಶ್ವಾಸಮಾರ್ಗಗಳ ಮೂಲಕ. ಹೀಗಾಗಿ, ಶ್ವಾಸಮಾರ್ಗಗಳ ಹಾದಿಯಲ್ಲಿ ಒಂದು ತಡೆಯನ್ನು ನಿರ್ಮಿಸಿ, ಅದಕ್ಕೆ ವೈರಸ್ ಸೀದಾ ಸೇರುವುದನ್ನು ತಡೆಯಬೇಕು. ಮಾಸ್ಕ್ ಗಳು, ಪಾರದರ್ಶಕ ವೈಸರ್ ಗಳು – ಇವುಗಳ ಬಳಕೆಯಿಂದ ವೈರಸ್ ನ ದಾರಿಯಲ್ಲಿ ತಡೆ ನಿರ್ಮಿಸಿದಂತೆ ಆಗುತ್ತದೆ. ಇದರ ಜೊತೆಗೆ, ಶರೀರದ ಆರೋಗ್ಯದ ಕಡೆಗೆ ನಿಗಾ ವಹಿಸಿ, ಅದನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳುವುದು, ಬೇರೆ ಯಾವುದೇ ದೈಹಿಕ / ಮಾನಸಿಕ ಕಾಯಿಲೆಗಳನ್ನು ನಿಯಂತ್ರಣದಲ್ಲಿ ಇಡುವುದು ಮುಖ್ಯವಾಗುತ್ತದೆ.    

3. ಚಿಕಿತ್ಸೆ ಇಲ್ಲದ ಕಾಯಿಲೆಯಲ್ಲಿ, ಅದರ ಪ್ರಸರಣವನ್ನು ನಿಯಂತ್ರಿಸಬೇಕು ಎಂದರೆ ಸಾಮಾಜಿಕ ಶಿಸ್ತು ಅತ್ಯಗತ್ಯ. ಸಾಮಾಜಿಕ ಅಂತರದ ಪಾಲನೆ, ಅನಗತ್ಯ ಓಡಾಟಕ್ಕೆ ಕಡಿವಾಣ, ಗುಂಪು ಸೇರದಿರುವುದು, ವೈಯಕ್ತಿಕ ಶಿಸ್ತಿನ ಪರಿಪಾಲನೆ – ಇಂತಹ ವಿಷಯಗಳ ಬಗ್ಗೆ ಕಟ್ಟೆಚ್ಚರ ಇರಬೇಕು. ನಾವು ವಾಸಿಸುವ, ಓಡಾಡುವ ವಾತಾವರಣದಲ್ಲಿ ವೈರಸ್ ಪ್ರಸರಣಕ್ಕೆ ಹೆಚ್ಚು ಆಸ್ಪದ ಇಲ್ಲದಂತೆ ಕಾಯ್ದುಕೊಳ್ಳಬೇಕು.

COVID-19 ಸಮಸ್ಯೆಯ ಅಂತ್ಯ ಹೇಗೆ? ಅದು ಯಾವ ದಾರಿಯಲ್ಲಾದರೂ ಆಗಬಹುದು. ಆದರೆ, ಅದರ ಅಂತ್ಯವಂತೂ ಖಚಿತ! ಎಷ್ಟು ಕಾಲದಲ್ಲಿ ಅಂತ್ಯವಾಗಬಹುದು? ಇದಕ್ಕೆ ನಿಖರ ಉತ್ತರವಿಲ್ಲ! ಇದು ಹಲವಾರು ಅಸ್ಥಿರತೆಗಳ ಮೂಲಕ ಹಾದುಹೋಗುವುದರಿಂದ, ನಿಶ್ಚಿತವಾಗಿ ಹೇಳಲಾಗದು. ಕೆಲವು ಮಾರ್ಗಗಳನ್ನು ಊಹಿಸಬಹುದು.

1. COVID-19 ಅನ್ನು ನಿವಾರಿಸುವ ಒಂದು ಪಕ್ಕಾ ಔಷಧ ಲಭ್ಯವಾದರೆ ಬಹಳ ಸಹಾಯಕವಾಗುತ್ತದೆ! ಈಗ ಹಲವಾರು ವೈರಸ್-ನಿರೋಧಕ ಔಷಧಗಳನ್ನು ಈ ಪರಿಣಾಮಕ್ಕೆ ಪರೀಕ್ಷೆ ಮಾಡುತ್ತಿದ್ದಾರೆ. ಒಂದು ವೇಳೆ ಯಾವುದೋ ಒಂದು ಅಥವಾ ಕೆಲವು ಔಷಧಗಳ ಜೋಡಿ COVID-19 ವಿರುದ್ಧ ಪಕ್ಕಾ ಪರಿಣಾಮ ಬೀರಿದರೆ, ಆಗ ಈ ಯುದ್ಧದ ಗೆಲುವು ನಮ್ಮದೇ! ಈ ಸಾಂಕ್ರಾಮಿಕಕ್ಕೆ ಮಂಗಳ ಹಾಡುವ ಆರಂಭ!

2. COVID-19 ವಿರುದ್ಧದ ಲಸಿಕೆಗಳು ಪರೀಕ್ಷೆಯ ಹಂತದಲ್ಲಿವೆ. ಲಸಿಕೆಗಳು ಮೂಲತಃ ಆಯಾ ರೋಗಕಾರಕದ ವಿರುದ್ಧ ನಮ್ಮ ರಕ್ಷಕ ವ್ಯವಸ್ಥೆಯನ್ನು ಜಾಗೃತಗೊಳಿಸಿ, ರೋಗದ ತೀವ್ರತೆಯನ್ನು ತಗ್ಗಿಸುವ ಸಾಧನಗಳು. ಇವು ಚಿಕಿತ್ಸೆ ಅಲ್ಲ; ರೋಗತೀವ್ರತೆಯ ಪ್ರತಿಬಂಧಕಗಳು ಮಾತ್ರ. ಈಗಾಗಲೇ ಕಾಯಿಲೆ ಆಗಿರುವವರಲ್ಲಿ ಇದು ಹೆಚ್ಚಿನ ಪರಿಣಾಮ ಬೀರುವುದಿಲ್ಲ. ಆದರೆ, ಸದ್ಯಕ್ಕೆ ಸೋಂಕು ತಗುಲದ ಜನರಲ್ಲಿ ರೋಗನಿರೋಧಕ ಶಕ್ತಿ ನೀಡಬಲ್ಲವು. ಆದರೆ, ಲಸಿಕೆಯ ಉಪಲಬ್ದತೆ ಇನ್ನೂ ಯಾವಾಗ ಎಂಬುದು ತಿಳಿಯದು. ಸುರಕ್ಷತೆ ಮತ್ತು ಪರಿಣಾಮ - ಎರಡನ್ನೂ ಲಸಿಕೆಗಳು ಸಾಧಿಸಬೇಕು. ಅದನ್ನು ಮಾಡಲು ಸಮಯ ಹಿಡಿಯುತ್ತದೆ.

3. COVID-19 ಮಾದರಿಯ ವೈರಸ್ ಗಳು ಒಮ್ಮೊಮ್ಮೆ ತಂತಾನೇ ಮಾರ್ಪಾಡಾಗಿ ನಿಷ್ಕ್ರಿಯವಾಗುವ ಸಾಧ್ಯತೆಗಳೂ ಇರುತ್ತವೆ. ಆದರೆ, ಹೆಚ್ಚಿನ ಸಂಶೋಧನೆ ಇಲ್ಲದೆ ಇಂತಹ ಊಹೆಗಳನ್ನು ಮಾಡುವುದು ವೈಜ್ಞಾನಿಕವಲ್ಲ.

4. COVID-19 ಸೋಂಕು ತಗುಲಿದರೆ ರಕ್ಷಕ ವ್ಯವಸ್ಥೆ ಬಹುಮಟ್ಟಿಗೆ ಅದನ್ನು ನಿಭಾಯಿಸುತ್ತದೆ. ಅಂತಹವರು ಪಾರಾಗುತ್ತಾರೆ. ಒಮ್ಮೆ ಪಾರಾದರೆ, ಅಂತಹವರ ಶರೀರದಲ್ಲಿ COVID-19 ವಿರುದ್ಧ ರೋಗನಿರೋಧಕ ಶಕ್ತಿ ಬೆಳೆದಿರುತ್ತದೆ. ಮತ್ತೊಮ್ಮೆ ಅವರಿಗೆ COVID-19 ಸೋಂಕು ತಾಕಿದರೆ, ಅವರ ಶರೀರ ಅದನ್ನು ಸಮರ್ಥವಾಗಿ ಎದುರಿಸಬಲ್ಲದು. ಅದೇ ಕಾರಣಕ್ಕೆ, ಜಗತ್ತಿನಾದ್ಯಂತ COVID-19 ಸೋಂಕು ತಗುಲಿ ಉಳಿದವರು ಬಹಳ ಮಂದಿ ಇದ್ದಾರೆ. ಸಾವಿನ ಪ್ರಮಾಣ ಬಹಳ ಕಡಿಮೆ. ನಮ್ಮ ದೇಶದಲ್ಲಿ COVID-19 ಸೋಂಕಿತರು ಸಾವಿಗೆ ಈಡಾಗಿರುವುದು ಶೇಕಡಾ 2.2 ಎಂದು ಪತ್ತೆಯಾಗಿದೆ. ಅಂದರೆ, ನೂರು ಸೋಂಕಿತರಲ್ಲಿ ಸುಮಾರು 98 ಮಂದಿ ಗುಣಮುಖರಾಗುತ್ತಾರೆ ಎಂದು ಊಹಿಸಬಹುದು. ಒಂದು ವೇಳೆ ಯಾವುದೇ ಔಷಧ ಅಥವಾ ಲಸಿಕೆ ಲಭ್ಯವಾಗದೇ ಹೋದರೆ, ನಿಧಾನವಾಗಿ COVID-19 ಸೋಂಕು ಎಲ್ಲರಲ್ಲೂ ಹರಡುತ್ತಾ, ಅವರಲ್ಲಿ ರೋಗನಿರೋಧಕ ಶಕ್ತಿಯನ್ನು ಬೆಳೆಸುತ್ತಾ ಹೋಗಬಹುದು. ಇದು ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಸಾಂಕ್ರಾಮಿಕ ಕಾಯಿಲೆ. ಒಂದು ವೇಳೆ, ಸೋಂಕು ತಗುಲಿಲ್ಲದ ಒಬ್ಬರ ಸುತ್ತಾ, ಈಗಾಗಲೇ ಸೋಂಕು ತಗುಲಿ ಗುಣಮುಖರಾಗಿರುವವರೇ ಇದ್ದರೆ? COVID-19 ಗುಣವಾಗಿರುವವರು ಮತ್ತೆ ಅದೇ ಸೋಂಕನ್ನು ಹರಡುವ ಸಾಧ್ಯತೆ ತೀರಾ ತೀರಾ ಕಡಿಮೆ! ಅಂದರೆ, COVID-19 ಸೋಂಕು ಇನ್ನೂ ಬಂದಿರದ ವ್ಯಕ್ತಿಯ ಸುತ್ತಾ, ಸೋಂಕನ್ನು ಪಸರಿಸಲು ಸಾಧ್ಯವಿಲ್ಲದ ಮಂದಿಯ ಕೋಟೆ ಇದೆ ಎಂದಾಯಿತು! ಹೀಗೆ, ಸಮಾಜದ ಬಹುತೇಕ ಮಂದಿಗೆ COVID-19 ಸೋಂಕು ತಗುಲಿ, ಗುಣವಾದರೆ ಅವರ ಜೊತೆಗೆ ಇರುವ ಸೋಂಕು ತಗುಲದೇ ಇರುವವರೂ ಸುರಕ್ಷಿತರೇ ಆಗುತ್ತಾರೆ. ಈ ರೀತಿಯ ರಕ್ಷಣೆಯನ್ನು “ಸಮೂಹ ಪ್ರತಿರಕ್ಷೆ” (herd immunity) ಎನ್ನುತ್ತಾರೆ. ಇದು ಆಗಬೇಕಾದರೆ, ಆಯಾ ಪ್ರದೇಶದ ಶೇಕಡಾ 50-70 ಮಂದಿ ಈಗಾಗಲೇ ಸೋಂಕಿತರಾಗಿ, ಗುಣವಾಗಬೇಕು! ಇದು ಪ್ರಾಯೋಗಿಕವಾಗಿ ಸಾಧ್ಯವಾದರೂ, ಇದಕ್ಕೆ ತಗುಲುವ ಕಾಲ ಬಹಳ ಹೆಚ್ಚು. ಜೊತೆಗೆ, ಅಸ್ಥಿರತೆಗಳು ಇಲ್ಲಿ ವಿಪರೀತ! ಹೀಗಾಗಿ, ಇದು ಪ್ರಾಯೋಗಿಕ ಆಯ್ಕೆ ಅಲ್ಲ! ಅದರಲ್ಲೂ, ನಮ್ಮಂತಹ ಅಧಿಕ ಜನಸಂಖ್ಯೆಯ, ಕಡಿಮೆ ಆರೋಗ್ಯ ಸೌಲಭ್ಯಗಳ ದೇಶಕ್ಕೆ ಇದು ಸರಿಯಾದ ಆಯ್ಕೆ ಅಲ್ಲ!

COVID-19 ಬಗ್ಗೆ ಹೆದರಿಕೆ ಬೇಕಿಲ್ಲ; ಆದರೆ ಎಚ್ಚರಿಕೆ ಬೇಕು. ಅನಗತ್ಯವಾಗಿ ಸೋಂಕಿಗೆ ಒಡ್ಡಿಕೊಳ್ಳುವ ದುಸ್ಸಾಹಸ ಬೇಡ; ಆದರೆ, ಸೋಂಕು ತಗುಲಿದರೆ ಆತಂಕವೂ ಬೇಡ! ಕೆಲವು ಮೂಲಭೂತ ಸಲಹೆಗಳನ್ನು ಪಾಲಿಸಿದರೆ ಸಾಕು. ಈ ಸೋಂಕು ಕೊನೆಯಾಗುತ್ತದೆ. ಅದರಲ್ಲಿ ಅನುಮಾನವೇ ಇಲ್ಲ. ಅಲ್ಲಿಯವರೆಗೆ ನಮ್ಮ ಎಚ್ಚರದಲ್ಲಿ ನಾವಿರಬೇಕು. 

1. ಆರೋಗ್ಯ ಸುಧಾರಣೆ – ಆರೋಗ್ಯಕರ ವಿಧಾನಗಳಿಂದ ನಮ್ಮ ದೈಹಿಕ / ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಒಳ್ಳೆಯ ಜೀವನ ಶೈಲಿ, ಸಂತುಲಿತ ಆಹಾರ, ವ್ಯಾಯಾಮ, ಸಾಕಷ್ಟು ನೀರಿನ ಸೇವನೆ, ಉಸಿರಾಟದ ವ್ಯಾಯಾಮಗಳು – ಇಂತಹ ವಿಧಾನಗಳು ಸೂಕ್ತ.

2. ನಿರ್ದಿಷ್ಟ ರಕ್ಷಣೆ – ಸಾಮಾಜಿಕ ಅಂತರ, ಮಾಸ್ಕ್ ಬಳಕೆ, ವೈಯಕ್ತಿಕ ಸ್ವಚ್ಛತೆ, ಕೈಗಳನ್ನು ಸಾಬೂನು, ನೀರಿನಿಂದ ಆಗಾಗ ತೊಳೆಯುವಿಕೆ, ಅನಗತ್ಯವಾಗಿ ಮುಖವನ್ನು ಮುಟ್ಟದಿರುವುದು – ಇವನ್ನೆಲ್ಲಾ ನಿಷ್ಠೆಯಿಂದ ಪಾಲಿಸಬೇಕು. ನಾಲ್ಕು ದಿನ ಮಾಡಿ ಐದನೆಯ ದಿನ ಯಾವುದೇ ರಿಯಾಯತಿ ನಿರೀಕ್ಷಿಸುವಂತಿಲ್ಲ!

3. ಕಾಯಿಲೆಯ ಯಾವುದೇ ಲಕ್ಷಣಗಳು ಕಂಡುಬಂದರೆ ಆತಂಕ ಪಡುವ ಅಗತ್ಯವಿಲ್ಲ. ಕುಟುಂಬ ವೈದ್ಯರೇ ಸರಿಯಾದ ಸಲಹೆ ನೀಡುತ್ತಾರೆ. ಜೊತೆಗೆ ಸರಕಾರ ಅನೇಕ ಸಹಾಯವಾಣಿಗಳನ್ನೂ ನೀಡಿದೆ. ಅವುಗಳ ಪ್ರಯೋಜನವನ್ನೂ ಪಡೆಯಬಹುದು.

4. ಕಾಯಿಲೆ ನಿಯಂತ್ರಣಕ್ಕೆ ಬರುತ್ತಿಲ್ಲ ಎಂದಾಗ ಮಾತ್ರ ಆಸ್ಪತ್ರೆಯ ಆವಶ್ಯಕತೆ ಇರುತ್ತದೆ. ಕೆಲವು ಅಂಶಗಳನ್ನು ಗಮನಿಸಿ ಇದನ್ನು ವೈದ್ಯರು ನಿರ್ಧರಿಸುತ್ತಾರೆ. ಇದರ ಬಗ್ಗೆ ಭಯ ಬೇಕಿಲ್ಲ.

5. ಕಾಯಿಲೆ ಬಂದು ಗುಣವಾದವರು ತಮ್ಮ ಒಳ್ಳೆಯ ಅನುಭವಗಳನ್ನು ತಿಳಿಸುತ್ತಾ ಇತರರಲ್ಲಿ ಚೈತನ್ಯ ತುಂಬುವ ಪ್ರಯತ್ನ ಮಾಡಬೇಕು. ವಿಪತ್ತಿನ ಕಾಲದಲ್ಲಿ ಅಸಹನೆಗಳೂ ಇರಬಹುದು. ಆದರೆ, ಸಮೂಹ ಪ್ರಜ್ಞೆಯ ದೃಷ್ಟಿಯಿಂದ, ಎಲ್ಲರಿಗೂ ಒಲಿತನ್ನು ಮಾಡುವ ಯೋಜನೆಗಳು ನಮ್ಮದಾಗಬೇಕು.

COVID-19 ಕೊನೆಯಾಗುತ್ತದೆ. ಅದರಲ್ಲಿ ಸಂಶಯವೇ ಇಲ್ಲ! ಇದರಲ್ಲಿ ಸ್ವಲ್ಪ ಪಾತ್ರ ವೈದ್ಯರದ್ದು; ಸ್ವಲ್ಪ ಪಾತ್ರ ಸಂಶೋಧಕರದ್ದು; ಸ್ವಲ್ಪ ಪಾತ್ರ ವ್ಯವಸ್ಥೆಯದ್ದು. ಅಧಿಕತರ ಪಾತ್ರ ಸಮಾಜದ್ದು! ದೇಶದ ಪ್ರತಿಯೊಬ್ಬರೂ ಸಮಷ್ಟಿಯನ್ನು ಗಮನದಲ್ಲಿ ಇಟ್ಟುಕೊಂಡು ಕೆಲಸ ಮಾಡುವ ಅವಕಾಶವನ್ನು COVID-19 ಒದಗಿಸಿದೆ! ಅದನ್ನು ಕಳೆದುಕೊಳ್ಳಬಾರದು – ಸಮಾಜಮುಖಿಯಾಗುವ ಒಳ್ಳೆಯ ಅವಕಾಶ ತಪ್ಪಿಹೋಯಿತೆಂದು ಭವಿಷ್ಯದಲ್ಲಿ ನಾವು ನಿರಾಶರಾಗಬಾರದು! 

-----------------