ಶನಿವಾರ, ಏಪ್ರಿಲ್ 4, 2020


ಕರೋನಾವೈರಸ್ ಕಲಿಸುತ್ತಿರುವ ಜೀವನ ಪಾಠಗಳು
ಡಾ. ಕಿರಣ್ ವಿ ಎಸ್
ವೈದ್ಯರು
ಯಾವುದೇ ಆರೋಗ್ಯ ಸಮಸ್ಯೆಯನ್ನಾದರೂ ಔಷಧಗಳಿಂದ ಗೆಲ್ಲಬಲ್ಲವು ಎಂಬ ಮಾನವ ಅಹಂಭಾವವನ್ನು ಕರೋನಾವೈರಸ್ ಭಗ್ನಗೊಳಿಸಿದೆ. 1940 ರ ದಶಕದಲ್ಲಿ ಪೆನಿಸಿಲಿನ್ ಔಷಧದ ಬಳಕೆ ಆರಂಭವಾದಾಗ ಸೋಂಕುಗಳನ್ನು ಶಾಶ್ವತವಾಗಿ ಗೆದ್ದೇ ಬಿಟ್ಟೆವು ಎಂಬ ಭ್ರಮೆ ಮೂಡಿತ್ತು. ಆ ನೀರ್ಗುಳ್ಳೆ ಒಡೆಯುವುದಕ್ಕೆ ಹೆಚ್ಚು ಕಾಲ ಹಿಡಿಯಲಿಲ್ಲ. ಬ್ಯಾಕ್ಟೀರಿಯಾಗಳು ತಮ್ಮ ಒಡಲಿನ ರಚನೆಯನ್ನೇ ಬದಲಿಸಿಕೊಂಡು ಪೆನಿಸಿಲಿನ್ ಪ್ರತಿರೋಧ ಬೆಳೆಸಿಕೊಂಡವು. ಆದರೆ, ಆ ವೇಳೆಗೆ ಔಷಧ ಪತ್ತೆಯ ಮೂಲ ತತ್ತ್ವಗಳನ್ನು ಅರಿತಿದ್ದ ಮನುಷ್ಯ ಬುದ್ಧಿ ಒಂದರೆ ಹಿಂದೆ ಒಂದು ಹೊಸ ಆಂಟಿಬಯಾಟಿಕ್ ಔಷಧಗಳನ್ನು ನಿರ್ಮಿಸುತ್ತಲೇ ಹೋಯಿತು. ಅಂತಲೇ, ವಿವಿಧ ಬಗೆಯ ಬ್ಯಾಕ್ಟೀರಿಯಾಗಳು ತಮ್ಮ ಆಂಟಿಬಯಾಟಿಕ್ ಪ್ರತಿರೋಧ ಸಾಮರ್ಥ್ಯವನ್ನೂ ಹೆಚ್ಚಿಸಿಕೊಳ್ಳುತ್ತಾ ಹೋದವು. ಯಾವುದೇ ಔಷಧಕ್ಕೆ ಜಗ್ಗದ “ಸೂಪರ್-ಬಗ್”ಗಳ ಯುಗ ಈಗಾಗಲೇ ಆರಂಭವಾಗಿದೆ. ಅದರ ಜೊತೆಗೇ ಸದ್ಯಕ್ಕೆ ಯಾವುದೇ ಔಷಧ ಲಭ್ಯವಿಲ್ಲದ ಕರೋನಾವೈರಸ್ ನ ಹೊಸ ತಳಿ COVID-19 ಕೂಡ ಜಗತ್ತನ್ನು ಆವರಿಸಿದೆ.

ಸಮಸ್ಯೆಗಳಿಗೆ ಇರುವ ಪರಿಹಾರಗಳ ಪೈಕಿ ಅತ್ಯಂತ ಸುಲಭವಾದದ್ದನ್ನು, ಅತ್ಯಂತ ಶೀಘ್ರವಾಗಿ ಪರಿಣಾಮ ಬೀರುವುದನ್ನು ಆಯ್ದುಕೊಳ್ಳುವುದು ನಮಗೆ ಅಭ್ಯಾಸವಾಗಿದೆ. ದೀರ್ಘಾವಧಿಯಲ್ಲಿ ಆ ಪರಿಹಾರ ಇನ್ಯಾವುದಾದರೂ ಸಮಸ್ಯೆಗಳನ್ನು ತಂದು ಒಡ್ಡೀತೇ ಎನ್ನುವ ಆಲೋಚನೆ ಮಾಯವಾಗುತ್ತಿದೆ. ಕ್ಷಣಿಕ ಪರಿಹಾರ ಥಟ್ಟನೆ ದೊರಕಿದರೆ ಸಾಕು ಎನ್ನುವ ಮನೋಭಾವ. ಆದರೆ, ನಮ್ಮ ಇಂತಹ ಚಿಂತನೆಗಳಿಗೆ ಸವಾಲು ಒಡ್ಡುವಂತೆ COVID-19 ಮಾದರಿಯ ಸಮಸ್ಯೆಗಳು ಆಗಾಗ ಬರುತ್ತವೆ. ಬದುಕಿನ ಕೆಲವು ಮೂಲಭೂತ ಅಂಶಗಳನ್ನು ನಾವು ಎಷ್ಟು ಅವಗಣನೆ ಮಾಡಿದ್ದೇವೆ ಎಂಬ ಸತ್ಯದ ಅರಿವಾಗುತ್ತದೆ.
ಜನಪ್ರಿಯ ಹ್ಯಾರಿ ಪಾಟರ್ ಸರಣಿಯ ಎರಡನೆಯ ಪುಸ್ತಕದಲ್ಲಿ ಡಂಬಲ್ಡೋರ್ ಮಹಾಶಯ “ನಾವು ಯಾರು ಎಂದ ನಿರ್ಧಾರವಾಗುವುದು ನಮ್ಮ ಸಾಮರ್ಥ್ಯಗಳಿಂದ ಅಲ್ಲ; ನಮ್ಮ ಆಯ್ಕೆಗಳಿಂದ” ಎನ್ನುತ್ತಾನೆ. ಆದರೆ, ಬಹಳ ಬಾರಿ ನಾವು ನಮ್ಮ ಆಯ್ಕೆಗಳನ್ನು ಪರಿಗಣಿಸುವುದೇ ಇಲ್ಲ. ಕಣ್ಣ ಮುಂದೆ ಕಂಡ ಸುಲಭದ ಮಾರ್ಗವನ್ನು ಆಯ್ದುಕೊಂಡು ಮರೆತುಬಿಡುತ್ತೇವೆ. ಕೇವಲ ವಿಪತ್ತಿನ ಸಮಯದಲ್ಲಿ ಮಾತ್ರ ಬೇರಾವುದೂ ದಾರಿ ಕಾಣದೆ ಹೋದಾಗ ಬಲವಂತವಾಗಿ ಆಯ್ಕೆಗಳನ್ನು ಹುಡುಕುತ್ತೇವೆ. “ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡಲು ಆರಂಭಿಸಬಾರದು” ಎಂದು ಚಿಕ್ಕಂದಿನಲ್ಲಿ ಓದಿದ್ದ ಸುಭಾಷಿತ ಆ ವೇಳೆಗೆ ಮರೆತಿರುತ್ತದೆ. 

ಕರೋನಾವೈರಸ್ ನಮ್ಮ ಆಯ್ಕೆಗಳನ್ನು ತೀರಾ ಸೀಮಿತಗೊಳಿಸಿದೆ! “ಚಿಕಿತ್ಸೆ ತಿಳಿಯದ ರೋಗಕ್ಕೆ ಕೇವಲ ನಿಯಂತ್ರಣವೇ ಪರಿಹಾರ” ಎಂದು ಮತ್ತೊಮ್ಮೆ ಕಲಿಯಲು ಸುಮಾರು ಶತಕೋಟಿ ರೂಪಾಯಿಗಳನ್ನು ವ್ಯಯಿಸಿದ್ದೇವೆ. ಜಗತ್ತಿನಾದ್ಯಂತ ಕರೋನಾವೈರಸ್ ಅಡ್ಡಗಾಲು ಹಾಕದ ಕ್ಷೇತ್ರವೇ ಇಲ್ಲ. ಪ್ರಪಂಚದ ಸಂಕೀರ್ಣ ಸ್ವರೂಪದ ವ್ಯವಸ್ಥೆಯನ್ನು ಈ ಮಟ್ಟಕ್ಕೆ ಓರೆ ಹಚ್ಚಿದ ಮತ್ತೊಂದು ದೃಷ್ಟಾಂತವನ್ನು ಜೀವಂತವಿರುವ ಯಾರೂ ಕಂಡಿಲ್ಲ. “ಚೀನಾಗೆ ನೆಗಡಿ ಆದರೆ ಇಡೀ ಪ್ರಪಂಚ ಸೀನುತ್ತದೆ” ಎಂಬ ತಮಾಷೆಯ ಮಾತು ತೀರಾ ಕ್ರೂರವಾಗಿ ನಿಜವಾಗಿದೆ. ಇಂತಹ ಪ್ರಸಂಗಗಳು ಇಲ್ಲಿಗೇ ಮುಗಿಯುವುದಿಲ್ಲ. ಕರೋನಾವೈರಸ್ ಅನ್ನು ಜಯಿಸಿದ ನಂತರವೂ ಅಂತಹುದೇ ಕಾಯಿಲೆಗಳು ಭವಿಷ್ಯದಲ್ಲಿ ಸಾಕಷ್ಟು ಬರಲಿವೆ. ಹಾಗಾಗಿ ಮತ್ತೊಮ್ಮೆ ಇಂತಹ ಸಂದಿಗ್ಧಕ್ಕೆ ಸಿಲುಕದಂತೆ ಈ ಸಂದರ್ಭದಿಂದ ಕಲಿಯಬೇಕಾದ ಪಾಠಗಳು ಹಲವಾರಿವೆ.

ಮೊದಲನೆಯ ಪಾಠ ನಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳುವ ಆವಶ್ಯಕತೆಯದ್ದು. ವೈಯಕ್ತಿಕ ಸ್ವಚ್ಛತೆಯನ್ನೂ ಮತ್ತೊಬ್ಬರಿಂದ ಬಲವಂತವಾಗಿ ಹೇಳಿಸಿಕೊಂಡ ಹೊರತು ಪಾಲಿಸದ, ಅನಾಗರಿಕ ವರ್ತನೆಯನ್ನು ಮತ್ತೊಬ್ಬರು ಅಸಹ್ಯಿಸಿದರೂ ಪರಿವೆ ಇಲ್ಲದೇ ಮುಂದುವರೆಸುವ ಸ್ವಭಾವದ ಮಂದಿ ದೇಶದ ತುಂಬಾ ತುಂಬಿದ್ದಾರೆ. ಸ್ವಚ್ಛತೆಯ ಮಹತ್ವ ಎಷ್ಟು ಎನ್ನುವುದನ್ನು ಕರೋನಾವೈರಸ್ ಕಲಿಸಿದೆ. ಇದು ಪ್ರತಿಯೊಬ್ಬ ನಾಗರಿಕನಿಗೂ, ನಮ್ಮನ್ನು ಆಳುವ ಸರ್ಕಾರಕ್ಕೂ ಎಂದಿಗೂ ಮರೆಯದ ಪಾಠ ಆಗಬೇಕು. ಅತ್ತ ಕರೋನಾವೈರಸ್ ಮರೆಯಾದ ಕೂಡಲೇ ಇತ್ತ ಪುನಃ ಹಳೆಯ ಕಚಡಾ ಜೀವನ ಶೈಲಿಗೆ ಮರಳಿದರೆ ಮುಂದಿನ ಬಾರಿ ಈ ಅವಕಾಶ ಕೂಡ ಸಿಗಲಾರದು ಎಂಬ ಎಚ್ಚರ, ಪರಿಜ್ಞಾನ ಇಲ್ಲದೇ ಹೋದರೆ ನಮ್ಮ ಶಿಕ್ಷಣಕ್ಕೆ ಯಾವ ಬೆಲೆಯೂ ಇಲ್ಲ. 

ಎರಡನೆಯ ಪಾಠ ಸಮಷ್ಟಿ ವರ್ತನೆ. ನಾವು ಬದುಕುತ್ತಿರುವ ಸಮಾಜ ಬಹಳ ಸಂಕೀರ್ಣ ಸ್ವರೂಪದ್ದು. ನಾವು ಬೆಳಗ್ಗೆ ಎದ್ದು ಮನೆಯ ಬಾಗಿಲಿನ ಮುಂದಿನಿಂದ ಹಾಲಿನ ಚೀಲ ತೆಗೆದು ಕಾಫಿ ಮಾಡಿ ಕುಡಿಯುತ್ತೇವೆ. ಇಂತಹ ಒಂದು ಸರಳ ಕ್ರಿಯೆಯ ಹಿಂದೆ ಕನಿಷ್ಟ ಹತ್ತಾರು ಕೊಂಡಿಗಳು ಇರುತ್ತವೆ. ಪಶುಗಳ ಮೇವು, ಹಿಂಡಿ, ಆರೋಗ್ಯ ನೋಡಿಕೊಳ್ಳುವ ತಂಡ; ಹೈನುಗಾರಿಕೆ ಮಾಡುವ ವ್ಯಕ್ತಿ; ಹಾಲಿನ ಸಂಗ್ರಹ ಮಾಡುವ ಒಕ್ಕೂಟ; ಹಾಲನ್ನು ಸಂಸ್ಕರಣೆ ಮಾಡುವ ಘಟಕ; ಸಂಸ್ಕರಿತ ಹಾಲನ್ನು ಚೀಲಕ್ಕೆ ಹಾಕುವ ಉದ್ಯಮ; ಅದನ್ನು ವಿತರಣೆ ಮಾಡುವ ವಾಹನ; ವಿತರಣಾ ಕೇಂದ್ರದಿಂದ ಸಣ್ಣ ಸ್ಥಳಗಳಿಗೆ ಒಯ್ಯುವ ಮಂದಿ; ಅಲ್ಲಿಂದ ಅದನ್ನು ಮನೆಮನೆಗೆ ತಲುಪಿಸುವ ಜನ – ಹೀಗೆ ಏಳೆಂಟು ಕೊಂಡಿಗಳು ಅನನ್ಯವಾಗಿ ಬೆಸೆದಿರುತ್ತವೆ. ಇದರಲ್ಲಿ ಯಾವುದೇ ಒಂದು ಕೊಂಡಿ ಕಳಚಿದರೂ ನಮಗೆ ಬೆಳಗಿನ ಕಾಫಿಯ ಸುಖ ಇಲ್ಲ. ಸಾಮಾನ್ಯ ಪರಿಸ್ಥಿತಿಗಳಲ್ಲಿ ಇವು ನಮ್ಮ ಗ್ರಹಿಕೆಗೆ ಬರುವುದೇ ಇಲ್ಲ. “ಹಾಲಿಗೆ ಹಣ ಕೊಡುತ್ತಿದ್ದೇನೆ” ಎಂಬ ಡೌಲು ಮಾತ್ರ ಇದ್ದೀತು. ಪ್ರಸ್ತುತ ಕರೋನಾವೈರಸ್ ನಮಗೆ ಸಮಷ್ಟಿಯ ಮಹತ್ವವನ್ನು ತಿಳಿಸಿದೆ. “ನಾನು ಪ್ರಪಂಚದ ಕೇಂದ್ರಬಿಂದು ಅಲ್ಲ” ಎನ್ನುವ ಸತ್ಯ ಹಲವರನ್ನು ಕಂಗಾಲು ಮಾಡಿರಬೇಕು! “ಪ್ರತಿಯೊಬ್ಬರೂ ತಪ್ಪದೇ ಶಿಸ್ತನ್ನು ಪಾಲಿಸಿದರೆ ಮಾತ್ರ ಇಡೀ ಸಮಷ್ಟಿಯ ಉಳಿವು; ಅದರಲ್ಲಿ ಒಬ್ಬರು ತಪ್ಪಿ ನಡೆದರೂ ಅದರ ಫಲ ಮತ್ತೊಬ್ಬರ ಮೇಲೆ ಆಗುತ್ತದೆ” ಎಂಬ ಅರಿವು ಮೂಡಿದೆ. ಇದು ಇಂತೆಯೇ ಉಳಿಯಬೇಕು. ಯಾರೇ ಆಗಲಿ; ಅವರ ಕೆಲಸ ನಮ್ಮ ಪಾಲಿಗೆ ನಗಣ್ಯವೇ ಇರಲಿ – ಸಮಾಜದ ಒಟ್ಟು ರಚನೆದಲ್ಲಿ ಅವರಿಗೆ ನಮ್ಮಷ್ಟೇ ಪಾಲಿದೆ ಎಂಬ ಸತ್ಯ ನಮ್ಮನ್ನು ಸದಾ ಎಚ್ಚರದಲ್ಲಿ ಇಡಬೇಕು.

ಮೂರನೆಯ ಪಾಠ ನಮ್ಮ ವ್ಯವಸ್ಥೆಯ ಸಾಮಾಜಿಕ ಜವಾಬ್ದಾರಿಯದ್ದು. “ಆರೋಗ್ಯವೇ ಮಹಾಭಾಗ್ಯ” ಎಂದೆಲ್ಲಾ ಉದ್ಧರಿಸುವ ನಮ್ಮ ರಾಜಕಾರಣ ದೇಶದ ಆರೋಗ್ಯ ವ್ಯವಸ್ಥೆಗೆ ನೀಡುವ ಹಣ ಮಾತ್ರ ದೇಶದ ಒಟ್ಟು ಖರ್ಚಿನ 0.3%! ಅದರಲ್ಲಿನ ಬಹುತೇಕ ಅಂಶವನ್ನು ಕರೋನಾವೈರಸ್ ಗಿಂತ ಕೆಡುಕಾದ ಭ್ರಷ್ಟಾಚಾರಿಗಳೆಂಬ ಕೆಟ್ಟ ಕ್ರಿಮಿಗಳು ನುಂಗಿಬಿಡುತ್ತಾರೆ. ಆದರೆ, ವಿಪತ್ತಿನ ಸಂದರ್ಭದಲ್ಲಿ ಮಾತ್ರ 130 ಕೋಟಿ ಜನರ ಇಡೀ ದೇಶ ಎದುರು ನೋಡುವುದು ಆರೋಗ್ಯ ವ್ಯವಸ್ಥೆಯ ಸಹಾಯವನ್ನೇ! ಇದೊಂದು ರೀತಿ ಒಂದು ಪಾವು ಮುಗ್ಗಲು ಅಕ್ಕಿಯನ್ನು ಕೊಟ್ಟು ಸಾವಿರ ಜನರಿಗೆ ಮೃಷ್ಟಾನ್ನ ತಯಾರು ಮಾಡಲು ಆಜ್ಞಾಪಿಸಿದಂತೆ. ಸಾಮಾನ್ಯ ಪರಿಸ್ಥಿತಿಯಲ್ಲಿ ಈ ಬಗ್ಗೆ ಎಷ್ಟೇ ಅಲವತ್ತುಕೊಂಡರೂ ವ್ಯವಸ್ಥೆಯದ್ದು ಮಾತ್ರ ದಿವ್ಯ ನಿರ್ಲಕ್ಷ್ಯ. ಕನಿಷ್ಟ ಕರೋನಾವೈರಸ್ ನ ಪ್ರಸ್ತುತ ವಿಪತ್ತು ನಮಗೆ ಆರೋಗ್ಯ ವ್ಯವಸ್ಥೆಯ ಸನ್ನದ್ಧತೆಯ ಆವಶ್ಯಕತೆಯನ್ನು ಮನವರಿಕೆ ಮಾಡಬೇಕು. ಸರ್ಕಾರವಷ್ಟೇ ಅಲ್ಲ; ಬೇಡದ್ದಕ್ಕೆ ಕೋಟ್ಯಾಂತರ ವೆಚ್ಚ ಮಾಡುವ ಖಾಸಗಿ ಸಂಸ್ಥೆಗಳು ಕೂಡ ಆರೋಗ್ಯ ವ್ಯವಸ್ಥೆಯ ಸುಧಾರಣೆಯ ಬಗ್ಗೆ ಸರ್ಕಾರದ ಜೊತೆ ಕೈ ಜೋಡಿಸಬೇಕು; ಇಲ್ಲವೇ ತಾವೇ ಈ ವಿಷಯದಲ್ಲಿ ಕ್ರಮ ತೆಗೆದುಕೊಳ್ಳಬೇಕು. ಒಬ್ಬ ತಾರಾಮಣಿಗೆ, ಓರ್ವ ಕ್ರಿಕೆಟಿಗನಿಗೆ ಕೆಲವು ಕ್ಷಣಗಳ ಜಾಹೀರಾತಿಗೆ ಹತ್ತು ಕೋಟಿ ಸಂಭಾವನೆ ನೀಡುವ ನಮ್ಮ ಖಾಸಗೀ ಸಂಸ್ಥೆಗಳು, ಆ ಹಣದಲ್ಲಿ ಒಂದು ಸುಸಜ್ಜಿತ ಸಂಶೋಧನಾ ಕೇಂದ್ರವನ್ನು ಎಲ್ಲಾ ರೀತಿಯ ಖರ್ಚುಗಳನ್ನು ತೂಗಿಸಿಕೊಂಡು, ಹತ್ತು ಮಂದಿ ವಿಜ್ಞಾನಿಗಳಿಗೆ ಕೈ ತುಂಬಾ ಸಂಬಳ ನೀಡಿ ಒಂದು ವರ್ಷ ಕಾಲ ನಡೆಸಬಹುದು ಎಂಬ ಸರಳ ತಾರ್ಕಿಕ ಸತ್ಯ ಅರಿಯಬೇಕು. ಯಾವುದೇ ವಿಪತ್ತಿನಲ್ಲಿ ನಮ್ಮ ಪರಿಹಾರ ಜ್ಞಾನದಿಂದ ಮಾತ್ರ ಬರುತ್ತದೆಯೇ ಹೊರತು ಶೋಕಿಯಿಂದ ಅಲ್ಲ ಎನ್ನುವ ಪಾಠ ಈಗ ಅರಿವಾಗಿದೆ. ಯಾವ ಕಾರಣಕ್ಕೂ ಈ ಕಲಿಕೆಯನ್ನು ಕಳೆದುಕೊಳ್ಳಬಾರದು. ಇದೇ ಮಾದರಿಯ ಮುಂದಿನ ವಿಪತ್ತು ಎಂದಾದರೂ ಬಂದೇ ಬರುತ್ತದೆ. ಅದಕ್ಕೆ ಇಂದಿನಿಂದಲೇ ಸಿದ್ಧರಾಗಬೇಕು. 

ನಾಲ್ಕನೆಯ ಪಾಠ ಪ್ರಕೃತಿಯ ಜೊತೆಗಿನ ಸಹಬಾಳ್ವೆ. ಮನುಷ್ಯರು ನಮಗೆ ನಾವು ಎಷ್ಟೇ ಮಹತ್ವ ಕೊಟ್ಟುಕೊಂಡರೂ ನಿಸರ್ಗದ ಪಾಲಿಗೆ ನಾವು ಕೋಟಿಯಲ್ಲಿ ಒಂದು ಜೀವ ವೈವಿಧ್ಯ ಅಷ್ಟೇ. ತನ್ನ ಕೋಟ್ಯಾಂತರ ಪ್ರಭೇದಗಳ ಜೀವಿಗಳನ್ನೂ ಸೊಗಸಾಗಿ ಸಾಕುವ ಸಾಮರ್ಥ್ಯ ಪ್ರಕೃತಿಗೆ ಇದೆ. ಇದೇ ಕಾರಣಕ್ಕೆ ನಿಸರ್ಗ ಕೆಲವು ಮಿತಿಗಳನ್ನು ಸೃಷ್ಟಿಸಿ, ಕೆಲವು ಗಡಿರೇಖೆಗಳನ್ನು ಹಾಕಿರುತ್ತದೆ. ಜೊತೆಗೆ, ಆ ನಿಯಮಗಳನ್ನು ಯಾವ ಜೀವಿಯೂ ಉಲ್ಲಂಘಿಸದಂತೆ ಕೆಲವು ಅಪಾಯಗಳನ್ನೂ ಜೋಡಿಸಿರುತ್ತದೆ. ಈ ಮಿತಿಗಳನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ. ಮಾನವ ಅಹಂಭಾವ ಈ ಮಿತಿಗಳನ್ನು ಉಲ್ಲಂಘಿಸಿದರೆ ಪ್ರಕೃತಿ ತಾನೆಷ್ಟು ಬಲಶಾಲಿ ಎಂದು ತೋರಿಸುತ್ತದೆ. ನಿಸರ್ಗಕ್ಕೆ ಮನುಷ್ಯ ಜೀವಿ ಒಂದು ಲೆಕ್ಕವೇ ಅಲ್ಲ; ಅಲ್ಪಾವಧಿಯಲ್ಲಿ ಮನುಷ್ಯ ಪ್ರಭೇದವನ್ನು ಹೊಸಕಿಹಾಕುವುದು ತನಗೆ ಬಹಳ ಸುಲಭ ಎಂದು ಪ್ರಕೃತಿ ತೋರಿದೆ. ಆದ್ದರಿಂದ ಇತರ ಜೀವಿಗಳ ಬಗೆಗಿನ ಮರ್ಯಾದೆ ನಮ್ಮ ಪರಮ ಆವಶ್ಯಕತೆ ಎನ್ನುವ ಪ್ರಸ್ತುತ ಕರೋನಾವೈರಸ್ ಕಲಿಸಿರುವ ಪಾಠವನ್ನು ಎಂದಿಗೂ ಮರೆಯುವಂತಿಲ್ಲ.
-------------------




ಕರೋನಾವೈರಸ್ – ಮಹತ್ವದ ಪ್ರಶ್ನೆಗಳಿಗೆ ಉತ್ತರಗಳು
ಡಾ. ಕಿರಣ್ ವಿ ಎಸ್
ವೈದ್ಯರು
COVID-19 ಕುರಿತಾಗಿ ಹಲವರಿಗೆ ತಪ್ಪು ತಿಳುವಳಿಕೆಗಳಿವೆ. ಸರಕಾರ ಸಮರೋಪಾದಿಯಲ್ಲಿ ಕ್ರಮಗಳನ್ನು ಕೈಗೊಳ್ಳುವುದನ್ನು ನೋಡಿದಾಗ ಇನ್ನಷ್ಟು ಪುಕಾರುಗಳು ಹರಡುತ್ತವೆ. COVID-19 ಹೇಗೆ ಹರಡುತ್ತದೆ? ಅದು ವ್ಯಾಪಿಸುವ ಹಂತಗಳು ಯಾವುವು? ನಿಯಂತ್ರಣದ ಮಹತ್ವವೇನು? COVID-19 ಎಷ್ಟು ಮಾರಕ? ಸರಕಾರ ಏಕೆ ಇಷ್ಟೊಂದು ಜಾಗ್ರತೆ ವಹಿಸುತ್ತಿದೆ? ವೈಯಕ್ತಿಕ ಮಟ್ಟದಲ್ಲಿ ನಾವೇನು ಮಾಡಬಹುದು? ಇತ್ಯಾದಿ ಪ್ರಶ್ನೆಗಳಿಗೆ ಬಹಳ ಜನರ ಬಳಿ ಸರಿಯಾದ ಉತ್ತರವಿಲ್ಲ. ಅದನ್ನು ತಿಳಿದರೆ ಮಾತ್ರ COVID-19 ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಬಹುದು. ಈ ನಿಟ್ಟಿನಲ್ಲಿ ಜನಸಾಮಾನ್ಯರನ್ನು ಕಾಡುತ್ತಿರುವ ಕೆಲವು ಮಹತ್ವದ ಪ್ರಶ್ನೆಗಳು ಮತ್ತು ಉತ್ತರಗಳು ಇಂತಿವೆ. 


  • ·         COVID-19 ಹೇಗೆ ಹರಡುತ್ತದೆ?

COVID-19 ಮೂಲತಃ ಮನುಷ್ಯರ ಶ್ವಾಸಕೋಶ/ಶ್ವಾಸಮಾರ್ಗದ ಕಾಯಿಲೆ. ಅದು ಪ್ರಾಣಿಗಳನ್ನು ಕಾಡುವುದಿಲ್ಲ. ಮನುಷ್ಯರಲ್ಲೂ ಅದು ನಿರ್ದಿಷ್ಟವಾಗಿ ಆಘಾತ ಮಾಡುವುದು ಶ್ವಾಸಕ್ಕೆ ಸಂಬಂಧಿಸಿದ ಜೀವಕೋಶಗಳನ್ನು ಮಾತ್ರ. COVID-19 ಯಾವುದಾದರೂ ರೀತಿಯಲ್ಲಿ ಶ್ವಾಸಮಾರ್ಗವನ್ನು ತಲುಪಿದರೆ ಕಡೆಗೆ ಶ್ವಾಸಕೋಶಗಳನ್ನು ಮುಟ್ಟಬಹುದು. ಇದಕ್ಕೆ ಎರಡು ವಿಧಗಳಿವೆ. 

1. COVID-19 ಪೀಡಿತ ವ್ಯಕ್ತಿ ಒಂದು ವೇಳೆ ಇತರರ ಮೇಲೆ ನೇರವಾಗಿ ಸೀನಿದರೆ/ಕೆಮ್ಮಿದರೆ ರೋಗಿಯ ಸ್ರವಿಕೆಗಳು ನೇರವಾಗಿ ಇತರರ ಶ್ವಾಸಮಾರ್ಗದ ಮೇಲೆ ಬಿದ್ದು ಶ್ವಾಸಕೋಶಗಳನ್ನು ತಲುಪಬಹುದು. ರೋಗಿಯು ಕೆಮ್ಮುವಾಗ ಅಥವಾ ಸೀನುವಾಗ ತನ್ನ ಅಂಗೈಗಳನ್ನು ಅಡ್ಡಹಿಡಿದರೆ COVID-19 ಅವರ ಅಂಗೈಗಳಲ್ಲಿ ಉಳಿಯುತ್ತವೆ. ಅಂತಹವರು ಕೈ ತೊಳೆಯದೆ ಮತ್ತೊಬ್ಬರನ್ನು ಮುಟ್ಟಿದರೆ COVID-19 ವರ್ಗಾವಣೆ ಆಗುತ್ತದೆ. 

2. COVID-19 ಪೀಡಿತ ವ್ಯಕ್ತಿಯ ಶ್ವಾಸಮಾರ್ಗದ ಸ್ರವಿಕೆಗಳು ಬೇರೆ ವಸ್ತುಗಳ ಮೇಲೆ ಬಿದ್ದು, ಅಲ್ಲೇ ಕೆಲಗಂಟೆಗಳ ಕಾಲ ಉಳಿಯುತ್ತವೆ. ಬೇರೆ ಯಾರಾದರೂ ಅಂತಹ ವಸ್ತುಗಳನ್ನು ಮುಟ್ಟಿದರೆ ಅವರ ಚರ್ಮಕ್ಕೆ COVID-19 ಹತ್ತಿಕೊಳ್ಳಬಹುದು. ಅಂತಹವರು ತಂತಮ್ಮ ಶ್ವಾಸಮಾರ್ಗಗಳನ್ನು ಮುಟ್ಟಿದರೆ, COVID-19 ಅವರವರ ಶ್ವಾಸಕೋಶಗಳನ್ನು ತಲುಪಬಹುದು. ಅಥವಾ, ಚರ್ಮಕ್ಕೆ COVID-19 ಹತ್ತಿಸಿಕೊಂಡ ವ್ಯಕ್ತಿ ಮತ್ತೊಬ್ಬರನ್ನು ಸೋಕುವ ಮೂಲಕ ಅದನ್ನು ವರ್ಗಾಯಿಸಬಹುದು. 


  • ·         ಶ್ವಾಸಮಾರ್ಗಗಳು ಯಾವುವು?

ಮೂಗಿನಿಂದ ಆರಂಭವಾಗುವ ಉಸಿರಾಟದ ನಳಿಕೆ ಶ್ವಾಸಕೋಶಗಳನ್ನು ತಲುಪುತ್ತದೆ. ಕಣ್ಣುಗಳಿಂದ ಎರಡು ಸಣ್ಣ ನಳಿಕೆಗಳು ಮೂಗಿನ ಬದಿಗಳನ್ನು ಸೇರುತ್ತವೆ. ಗಂಟಲಿನ ಹಂತದಲ್ಲಿ ಬಾಯಿ ಮತ್ತು ಮೂಗಿನ ದ್ವಾರಗಳು ಒಂದನ್ನೊಂದು ಸೇರಿ ಮತ್ತೆ ಪ್ರತ್ಯೇಕವಾಗುತ್ತವೆ. ಹೀಗಾಗಿ, ಕಣ್ಣು, ಮೂಗು ಮತ್ತು ಬಾಯಿನ ಮೂಲಕ COVID-19 ಶ್ವಾಸಕೋಶಗಳನ್ನು ತಲುಪಬಹುದು. ಎಷ್ಟೋ ಬಾರಿ ನಮಗೇ ತಿಳಿಯದಂತೆ ಅಂಗೈಗಳಿಂದ ಕಣ್ಣು, ಮೂಗು, ಬಾಯಿಗಳನ್ನು ಸೋಕುತ್ತಿರುತ್ತೇವೆ. ಹಾಗಾಗಿ ನಮ್ಮ ಅರಿವಿಗೇ ಬಾರದಂತೆ COVID-19 ಶ್ವಾಸಕೋಶಗಳನ್ನು ಸೇರುವ ಸಾಧ್ಯತೆಗಳಿವೆ.


  • ·         COVID-19 ಕಾಯಿಲೆ ಹರಡುವಿಕೆಯ ನಾಲ್ಕು ಹಂತಗಳು ಯಾವುವು?

ಮೊದಲನೆಯ ಹಂತ: ಸಾಂಕ್ರಾಮಿಕ ಕಾಯಿಲೆ ಹೊರದೇಶದಿಂದ ಹೊಸದಾಗಿ ಕೆಲವು ರೋಗಿಗಳ ಮೂಲಕ ಬರುತ್ತದೆ. ಈ ಹಂತದಲ್ಲೇ ಅದರ ನಿಯಂತ್ರಣ ಮಾಡುವುದು ಅತ್ಯಂತ ಸೂಕ್ತ ವಿಧಾನ. ಆದರೆ, ಬಹಳಷ್ಟು ದೇಶಗಳು ಈ ಹಂತವನ್ನು ಮೊದಲಿನಲ್ಲೇ ಗುರುತಿಸುವುದಿಲ್ಲ. 

ಎರಡನೆಯ ಹಂತ: ರೋಗಪೀಡಿತರ ಆಸುಪಾಸಿನಲ್ಲಿ ಒಬ್ಬರಿಂದೊಬ್ಬರಿಗೆ ರೋಗ ಹರಡುತ್ತಾ ಹೋಗುತ್ತದೆ. ಈ ಹರಡುವಿಕೆಯನ್ನು ಈ ಹಂತದಲ್ಲೇ ನಿಯಂತ್ರಣ ಮಾಡುವುದು ಅತ್ಯಂತ ಸೂಕ್ತ. ರೋಗಿಗಳ ಪರೀಕ್ಷೆ/ಪ್ರತ್ಯೇಕಿಸುವಿಕೆ, ಸಾಮಾಜಿಕ ಅಂತರ – ಇವೆಲ್ಲಾ ಈ ಹಂತದಲ್ಲಿ ಬಹಳ ಫಲಕಾರಿ. ನಮ್ಮ ದೇಶ ಸದ್ಯಕ್ಕೆ ಅನುಭವಿಸುತ್ತಿರುವುದು ಈ ಹಂತವನ್ನೇ. 

ಮೂರನೆಯ ಹಂತ: ರೋಗಿಗಳ ಸಂಖ್ಯೆ ಕ್ರಮೇಣ ಹೆಚ್ಚಾಗುತ್ತಾ ರೋಗ ಸಮುದಾಯದಲ್ಲಿ ಶೀಘ್ರವಾಗಿ ಹರಡುತ್ತದೆ. ಆ ಹಂತದಲ್ಲಿ ರೋಗಕಾರಕ ಸೂಕ್ಷ್ಮಜೀವಿ ಎಲ್ಲಿಂದ ಎಲ್ಲಿಗೆ ಹರಡುತ್ತಿದೆ ಎಂಬ ನಿಖರತೆಯಿಲ್ಲ. ರೋಗಿಗಳು ಹೆಚ್ಚಾದಂತೆ ಆರೋಗ್ಯ ವ್ಯವಸ್ಥೆಯ ಮೇಲಿನ ಒತ್ತಡ ಹೆಚ್ಚುತ್ತಾ ಹೋಗುತ್ತದೆ. ಸಾಮಾಜಿಕ ತಲ್ಲಣಗಳು ದೇಶದ ಪರಿಸ್ಥಿತಿಯನ್ನು ಬಿಗಡಾಯಿಸುತ್ತವೆ. ಸದ್ಯಕ್ಕೆ ಇಟಲಿ, ಸ್ಪೇನ್ ಮುಂತಾದ ಯುರೋಪಿಯನ್ ದೇಶಗಳು ಈ ಹಂತದಲ್ಲಿವೆ. 

ನಾಲ್ಕನೆಯ ಹಂತ: ರೋಗ ದೇಶವ್ಯಾಪಿಯಾಗುತ್ತದೆ. ದೇಶದ ಬಹುತೇಕ ಮಂದಿಗೆ ಸೋಂಕು ತಗುಲಿದಾಗ ಯಾರು ಯಾವ ಕ್ಷಣದಲ್ಲಿ ಅಪಾಯಕ್ಕೆ ಈಡಾಗುತ್ತಾರೆ ಎಂಬುದನ್ನು ತಿಳಿಯಲಾಗದು. ಇದು ನಿಯಂತ್ರಣವನ್ನು ಕೈ ಮೀರಿದ ಪರಿಸ್ಥಿತಿ.
ಇವೆಲ್ಲದರಿಂದ ಕೆಲವು ವಿಷಯಗಳು ಸ್ಪಷ್ಟವಾದವು. COVID-19 ನೇರವಾಗಿ ರೋಗಿಯಿಂದ ಮಾತ್ರ ಹರಡಬೇಕು ಎಂದೇನಿಲ್ಲ. ರೋಗಿಯ ಶ್ವಾಸಸ್ರವಿಕೆಗಳಿಂದ ಮಲಿನವಾಗಿರುವ ಯಾವುದೇ ವಸ್ತುಗಳ ಮೂಲಕ ಪರೋಕ್ಷವಾಗಿ ಯಾರಿಗೆ ಬೇಕಾದರೂ ಹರಡಬಹುದು. ಈ “ರೋಗಿ-ಸ್ರವಿಕೆ-ಮುಟ್ಟುವಿಕೆ-ವರ್ಗಾವಣೆ-ಸೋಂಕು-ಮತ್ತೊಬ್ಬ ರೋಗಿ” ಎನ್ನುವ ಚಕ್ರವನ್ನು ಮುರಿಯಬೇಕು. ಅದನ್ನು ಎಷ್ಟು ಬೇಗ, ಎಷ್ಟು ಪರಿಣಾಮಕಾರಿಯಾಗಿ ಮಾಡುತ್ತೇವೆ ಎನ್ನುವುದು ರೋಗದ ನಿಯಂತ್ರಣದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.


  • ·         COVID-19 ಬಹಳ ಅಪಾಯಕಾರಿ ಕಾಯಿಲೆಯೇ? ಅದು ಬಂದರೆ ಮರಣವೇ ಗತಿ ಎಂದು ಅರ್ಥವೇ?

ದೇಶದಲ್ಲಿ ಹರಡಿರುವ ಅತ್ಯಂತ ದೊಡ್ಡ ಆತಂಕಗಳಲ್ಲಿ ಇದೂ ಒಂದು. ಆದರೆ, ಈ ಆತಂಕ ನಿರಾಧಾರ. ಯಾವುದೇ ವೈರಸ್ ಕಾಯಿಲೆಯನ್ನಾಗಲೀ ನಿಯಂತ್ರಿಸಬಲ್ಲ ಶಕ್ತಿ ನಮ್ಮ ಶರೀರದಲ್ಲಿನ ರಕ್ಷಕ ವ್ಯವಸ್ಥೆಗೆ ಇರುತ್ತದೆ. ಆದರೆ COVID-19ರ ಜೆನೆಟಿಕ್ ರಚನೆ ಮಾರ್ಪಾಡಾಗಿರುವುದರಿಂದ ಅದನ್ನು ನಿಗ್ರಹಿಸಲು ಸ್ವಲ್ಪ ಅಧಿಕ ಕಾಲ ಹಿಡಿಯುತ್ತದೆ. ರಕ್ಷಕ ವ್ಯವಸ್ಥೆ ಸಮರ್ಥವಾಗಿರುವ ಬಹುತೇಕ ಮಂದಿಯಲ್ಲಿ  COVID-19 ಹೆಚ್ಚು ಅಪಾಯವನ್ನು ಮಾಡದೇ ತಣಿಯುತ್ತದೆ. ಆದರೆ, ಈ ರಕ್ಷಕ ವ್ಯವಸ್ಥೆ ಕುಂಠಿತವಾಗಿದ್ದರೆ COVID-19 ಶ್ವಾಸಕೋಶಗಳನ್ನು ತಲುಪಿ ತೀವ್ರ ನ್ಯುಮೋನಿಯಾ ಉಂಟುಮಾಡುತ್ತದೆ. ಅಂತಹವರನ್ನು ಆಸ್ಪತ್ರೆಯಲ್ಲಿ ದಾಖಲು ಮಾಡಬೇಕು. ಪರಿಸ್ಥಿತಿ ಹದಗೆಟ್ಟರೆ ತೀವ್ರ ನಿಗಾ ಘಟಕಗಳಲ್ಲಿ ಚಿಕಿತ್ಸೆಗೆ ಒಳಪಡಿಸಬೇಕು. ವಿಶ್ವ ಆರೋಗ್ಯ ಸಂಸ್ಥೆ ಗಮನಿಸಿರುವಂತೆ ನೂರು ಮಂದಿದೆ COVID-19 ಸೋಂಕು ತಗುಲಿದರೆ ಸುಮಾರು 85 ಮಂದಿಗೆ ಆಸ್ಪತ್ರೆಯ ಆವಶ್ಯಕತೆ ಇರುವುದಿಲ್ಲ. ಉಳಿದ 15 ಮಂದಿಗೆ ಆಸ್ಪತ್ರೆ ಚಿಕಿತ್ಸೆ ಬೇಕಾಗಬಹುದು. ಆದರೆ, ತೀವ್ರ ನಿಗಾ ಘಟಕದ ಚಿಕಿತ್ಸೆ ಬೇಕಾಗುವುದು ಕೇವಲ ನೂರರಲ್ಲಿ 4-5 ಮಂದಿಗೆ ಮಾತ್ರ. ಹೀಗಾಗಿ, COVID-19 ಭೀಕರ ಕಾಯಿಲೆಯೂ ಅಲ್ಲ; ಅದರಿಂದ ಎಲ್ಲರಿಗೂ ಮರಣ ಖಚಿತ ಎಂದೂ ಅಲ್ಲ. 


  • ·         ಅಪಾಯಕಾರಿಯಲ್ಲ ಎಂದ ಮೇಲೆ ಸರಕಾರ COVID-19 ಕುರಿತು ಇಷ್ಟೊಂದು ಕಟ್ಟುನಿಟ್ಟು ಏಕೆ ಮಾಡುತ್ತಿದೆ? ಸರಕಾರ ನಮ್ಮಿಂದ ಏನಾದರೂ ಮುಚ್ಚಿಡುತ್ತಿದೆಯೇ? 

ಇಲ್ಲ; ಸರ್ಕಾರದ ನಡೆಗಳು ಪಾರದರ್ಶಕವಾಗಿವೆ. ನಮಗೆ ಇದು ಒಂದು ರೀತಿಯ “ಹಾಸಿಗೆ ಇದ್ದಷ್ಟು ಕಾಲು ಚಾಚು” ಮಾದರಿಯ ಆವಶ್ಯಕತೆ. 

ಗ್ರೀಕ್ ಮಿಥಕಗಳಲ್ಲಿ ಪ್ರೊಕ್ರೌಟಸ್ (ಡಮಾಸ್ಟೇಸ್ ಎಂದೂ ಕರೆಯುತ್ತಾರೆ) ಹೆಸರಿನ ದೈತ್ಯನ ಉಲ್ಲೇಖವಿದೆ. ಆತನ ಬಳಿ ಒಂದು ಕಬ್ಬಿಣದ ಮಂಚ ಇರುತ್ತದೆ. ದಾರಿಯಲ್ಲಿ ಸಿಕ್ಕಿದ ಬಡಪಾಯಿಗಳನ್ನು ಹೊತ್ತು ತಂದು ಆತ ಆ ಕಬ್ಬಿಣದ ಮಂಚಕ್ಕೆ ಕಟ್ಟುತ್ತಾನೆ. ಒಂದು ವೇಳೆ ಆತನ ಖೈದಿಯ ಶರೀರ ಆ ಮಂಚಕ್ಕಿಂತ ಉದ್ದ ಇದ್ದರೆ ಅಂತಹವರ ಕಾಲುಗಳನ್ನೋ, ತಲೆಯನ್ನೋ ಕಡಿದು ಆ ಮಂಚದ ಉದ್ದಕ್ಕೆ ಅವರನ್ನು ಸರಿಯಾಗಿಸುತ್ತಾನೆ. ಅದೇ ರೀತಿಯಲ್ಲಿ ನಾವು ಈಗ ಕರೋನಾವೈರಸ್ ಧಾಳಿಯನ್ನು ನಮ್ಮ ಆರೋಗ್ಯ ವ್ಯವಸ್ಥೆಯಲ್ಲಿ ಲಭ್ಯವಿರುವ ಹಾಸಿಗೆಗಳ ಸಂಖ್ಯೆಗೆ ಸರಿಯಾಗಿ ನಿಗ್ರಹಿಸುತ್ತಿದ್ದರೆ ಮಾತ್ರ ಗೆಲ್ಲುತ್ತೇವೆ. ಅಂದರೆ ಪ್ರೊಕ್ರೌಟಸ್ ತನ್ನ ಖೈದಿಗಳ ಕಾಲುಗಳನ್ನು ಕಡಿಯುತ್ತಿದ್ದ. ಆದರೆ ನಾವು ನಮ್ಮನ್ನು ಖೈದಿ ಮಾಡಿಕೊಂಡಿರುವ ಕರೋನಾವೈರಸ್ ಕಾಯಿಲೆಯ ಕಾಲುಗಳನ್ನು ಕಡಿಯಬೇಕು!   

ಸರ್ಕಾರದ ಕಾರ್ಯಸೂಚಿ ಮತ್ತು ಕ್ರಮಗಳು ಅತ್ಯಂತ ಸೂಕ್ತವಾಗಿವೆ ಎಂದು ನಮಗೆ ಹೇಗೆ ತಿಳಿಯುತ್ತದೆ? COVID-19 ರ ಅಪಾಯ ಅಧಿಕವಾಗಿರುವವರ ಸಂಖ್ಯೆ ನಮ್ಮ ದೇಶದಲ್ಲಿ ನೂರಕ್ಕೆ ಸುಮಾರು 8 ಮಂದಿ. ಅಂದರೆ, 130 ಕೋಟಿ ಜನಸಂಖ್ಯೆಯಲ್ಲಿ ಸುಮಾರು 10-11 ಕೋಟಿ ಮಂದಿ ಅಪಾಯದ ಸಾಧ್ಯತೆಯಲ್ಲಿದ್ದಾರೆ. ಆದರೆ, ನಮ್ಮ ದೇಶದಲ್ಲಿ ಇರುವ ಆಸ್ಪತ್ರೆಗಳಲ್ಲಿ ಅಷ್ಟೊಂದು ಮಂದಿಗೆ ಚಿಕಿತ್ಸೆ ನೀಡುವ ಸಾಮರ್ಥ್ಯವಿಲ್ಲ. ಜೊತೆಗೆ, ನಮ್ಮಲ್ಲಿ ತೀವ್ರ ನಿಗಾ ಘಟಕಗಳು ತೀರಾ ಕಡಿಮೆ. COVID-19 ಮಾದರಿಯ ಸಾಂಕ್ರಾಮಿಕ ಕಾಯಿಲೆ ಎಷ್ಟು ತೀವ್ರ ಸ್ವರೂಪದ್ದು ಎನ್ನುವುದಕ್ಕಿಂತ ಅದು ಎಷ್ಟು ಜನರನ್ನು ಒಮ್ಮೆಲೇ ಬಾಧಿಸಬಹುದು ಎಂಬ ಲೆಕ್ಕಾಚಾರ ಬಹಳ ಮುಖ್ಯ. ಎಲ್ಲಿಯವರೆಗೆ ಒಟ್ಟು ರೋಗಿಗಳ ಸಂಖ್ಯೆ ಆಸ್ಪತ್ರೆಯ ಸಾಮರ್ಥ್ಯಕ್ಕಿಂತ ಕಡಿಮೆ ಇರುತ್ತದೋ, ಅಲ್ಲಿಯವರೆಗೆ COVID-19 ಕಾಯಿಲೆ ನಿಯಂತ್ರಣದಲ್ಲಿದೆ ಎಂದು ಅರ್ಥ. ಅಂದರೆ, COVID-19 ರೋಗದ ಹರಡುವಿಕೆಯನ್ನು ಸಾಧ್ಯವಾದಷ್ಟೂ ನಿಧಾನ ಮಾಡಿದರೆ ಮಾತ್ರ ಯಾವೊಂದು ಸಮಯದಲ್ಲೂ ಎಲ್ಲಾ COVID-19 ರೋಗಿಗಳಿಗೂ ಚಿಕಿತ್ಸೆ ನೀಡಬಹುದು. COVID-19 ಕಾಯಿಲೆಯ ಹರಡುವಿಕೆಯ ಸ್ವರೂಪ ಗಮನಿಸಿದರೆ ಸರಕಾರದ ಕಟ್ಟುನಿಟ್ಟಿನ ಕ್ರಮ ಎಷ್ಟು ಸಮಂಜಸ ಎಂಬುದು ತಿಳಿಯುತ್ತದೆ. 

ಒಂದು ವೇಳೆ ನಿಯಂತ್ರಣ ಇಲ್ಲವಾದರೆ ಏನಾಗುತ್ತದೆ? ಇಟಲಿ ಮುಂದುವರೆದ ದೇಶ. ಅಲ್ಲಿನ ಆರೋಗ್ಯ ವ್ಯವಸ್ಥೆ ಬಹಳ ಸಮರ್ಥವಾದದ್ದು. ಇಟಲಿ ದೇಶದ ಆಸ್ಪತ್ರೆಗಳ ತೀವ್ರ ನಿಗಾ ಘಟಕಗಳು ಪ್ರಪಂಚದಲ್ಲೇ ಪ್ರಸಿದ್ಧಿ ಪಡೆದಿವೆ. ಅಲ್ಲಿನ ಸೋಂಕು ಕಾಯಿಲೆ ವಿಶೇಷಜ್ಞರು ಜಗತ್ತಿನ ಹೆಸರುವಾಸಿ ವೈದ್ಯರುಗಳ ಪಟ್ಟಿಯಲ್ಲಿ ಇದ್ದಾರೆ. ಯಾವುದೇ ಕಾಯಿಲೆಯನ್ನಾದರೂ ಚಿಕಿತ್ಸೆ ನೀಡಿ ಮಣಿಸಬಲ್ಲ ಸಾಮರ್ಥ್ಯ ಇಟಲಿ ದೇಶದ ಆಸ್ಪತ್ರೆಗಳಿಗೆ ಇದೆ. ಇಷ್ಟಾದರೂ ಇಂದು COVID-19 ಇಟಲಿ ದೇಶವನ್ನು ವಿಪರೀತ ಕಂಗೆಡಿಸಿದೆ. ಅದಕ್ಕೆ ಕಾರಣ ಅವರ ಆರೋಗ್ಯ ವ್ಯವಸ್ಥೆಯ ಅಸಾಮರ್ಥ್ಯವಲ್ಲ; ಅಲ್ಲಿ ನಿಯಂತ್ರಣವಿಲ್ಲದೆ ಹಬ್ಬಿದ COVID-19 ಸೋಂಕು. ಕಟ್ಟುನಿಟ್ಟಿನ ನಿಯಂತ್ರಣ ಪಾಲಿಸದ ಕಾರಣ ಅನತಿಕಾಲದಲ್ಲಿ COVID-19 ಕಾಯಿಲೆ ವೇಗವಾಗಿ ಹಬ್ಬಿದ್ದರಿಂದ ಒಮ್ಮೆಗೇ ಸಾವಿರಾರು ಮಂದಿ ರೋಗಿಗಳು ಆಸ್ಪತ್ರೆಗೆ ದಾಖಲಾಗುವಂತಾಯಿತು. ನೂರು ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಗೆ ಒಮ್ಮೆಲೇ ಸಾವಿರ ಮಂದಿ ರೋಗಿಗಳು ಚಿಕಿತ್ಸೆಗೆ ಬಂದಂತಾಯಿತು. ಅತ್ಯಂತ ವ್ಯವಸ್ಥಿತ ಸೌಲಭ್ಯಗಳಿದ್ದ ಇಟಲಿಯ ಆಸ್ಪತ್ರೆಗಳಲ್ಲಿ ಅವುಗಳ ಸಾಮರ್ಥ್ಯದ ಹತ್ತಾರು ಪಟ್ಟು ಹೆಚ್ಚು ಸಂಖ್ಯೆಯ ರೋಗಿಗಳನ್ನು ಒಮ್ಮೆಗೇ ಚಿಕಿತ್ಸೆ ಮಾಡುವಷ್ಟು ಅನುಕೂಲವಿಲ್ಲದೇ ಇಡೀ ಆರೋಗ್ಯ ವ್ಯವಸ್ಥೆ ಕುಸಿಯಿತು. ಅಂದರೆ, ಸಮಸ್ಯೆ ದೇಶದ ಆರೋಗ್ಯ ವ್ಯವಸ್ಥೆ ಎಷ್ಟು ಮುಂದುವರೆದಿದೆ ಎನ್ನುವುದಲ್ಲ; COVID-19 ಹರಡುವಿಕೆಯನ್ನು ಎಷ್ಟು ಕಟ್ಟುನಿಟ್ಟಿನ ನಿಯಂತ್ರಣದಲ್ಲಿ ಇಡಬೇಕು ಎನ್ನುವುದು. 

ಈ ಲೇಖನದ ಜೊತೆ ಇರುವ ನಕ್ಷೆಯನ್ನು ಒಮ್ಮೆ ಗಮನಿಸಿ. ಇದರಲ್ಲಿ X-ಅಕ್ಷ ಸಮಯವನ್ನೂ, Y-ಅಕ್ಷ ಆಸ್ಪತ್ರೆಯ ಚಿಕಿತ್ಸೆ ಅಗತ್ಯ ಇರುವ ರೋಗಿಗಳನ್ನೂ ಸೂಚಿಸುತ್ತದೆ. X-ಅಕ್ಷಕ್ಕೆ ಸಮಾನಾಂತರವಾಗಿರುವ ಭಿನ್ನವಾದ ನೇರ ಗೆರೆ ನಮ್ಮ ಆಸ್ಪತ್ರೆಗಳ ಸಾಮರ್ಥ್ಯವನ್ನು ತೋರುತ್ತದೆ. ನಕ್ಷೆಯಲ್ಲಿ ತೋರಿಸಿರುವಂತೆ, ಎತ್ತರದ ಕಮಾನು ಕಡಿಮೆ ಕಾಲದಲ್ಲಿ ಆರೋಗ್ಯ ವ್ಯವಸ್ಥೆಯ ಸಾಮರ್ಥ್ಯವನ್ನು ಮೀರಿ ವೇಗವಾಗಿ ಹರಡುವ ಕಾಯಿಲೆಯನ್ನು ಸೂಚಿಸಿದೆ. ಇಟಲಿ ದೇಶದ ಪರಿಸ್ಥಿತಿ ಹೀಗಿದೆ. ಅದಕ್ಕೆ ಪ್ರತಿಯಾಗಿ ಕಡಿಮೆ ಎತ್ತರದ ಎರಡನೆಯ ಕಮಾನು ಕಟ್ಟುನಿಟ್ಟಿನ ನಿಯಂತ್ರಣಗಳ ದೆಸೆಯಿಂದ ಕಾಯಿಲೆ ಹೇಗೆ ನಿಧಾನವಾಗಿ ಹರಡುತ್ತದೆ ಎಂದು ತೋರುತ್ತದೆ. ಅಂದರೆ, ಕಾಯಿಲೆಯ ಹರಡುವಿಕೆಯನ್ನು ನಾವು ಎಷ್ಟು ಕಾಲ ವಿಸ್ತರಿಸಬಲ್ಲೆವೋ, ಅಷ್ಟು ಕಾಲ ನಾವು ಎಲ್ಲಾ ಕಾಯಿಲೆ ಪೀಡಿತರಿಗೂ ಚಿಕಿತ್ಸೆ ನೀಡಬಲ್ಲೆವು. ಹೀಗಾಗಿ ಒಟ್ಟಾರೆ ಪರಿಸ್ಥಿತಿ ಆರೋಗ್ಯ ವ್ಯವಸ್ಥೆಯ ಸಾಮರ್ಥ್ಯದ ಒಳಗೇ ಉಳಿಯುತ್ತದೆ. ನಾವು ಲಾಕ್-ಡೌನ್ ನಂತಹ ನಿಯಂತ್ರಣಗಳ ಮೂಲಕ ಸಾಧಿಸಬೇಕಾದ್ದು ಇದನ್ನೇ. ಯಾವುದೇ ಕಾರಣಕ್ಕೂ ನಾವು ಎತ್ತರದ ಕಮಾನಿನ ರೀತಿಯಲ್ಲಿ ಮುಂದುವರೆಯುವಂತಿಲ್ಲ. ಅದಕ್ಕಾಗಿಯೇ ನಮ್ಮ ದೇಶದಲ್ಲಿ ಕಟ್ಟುನಿಟ್ಟಿನ ನಿಯಂತ್ರಣ ಸಫಲವಾಗುವುದು ನಮ್ಮ ಉಳಿವಿನ ದೃಷ್ಟಿಯಿಂದ ಬಹಳ ಮುಖ್ಯ.


  • ·         ವೈಯಕ್ತಿಕ ದೃಷ್ಟಿಯಿಂದ COVID-19 ನಿಯಂತ್ರಣ ಹೇಗೆ ಮಾಡಬೇಕು?

1. COVID-19 ರೋಗ ಪತ್ತೆಯಾದ ರೋಗಿಗಳನ್ನು ಪ್ರತ್ಯೇಕಿಸಿ ಚಿಕಿತ್ಸೆ ನೀಡಬೇಕು. “ಅವರ ಶ್ವಾಸಸ್ರವಿಕೆಗಳಲ್ಲಿ COVID-19 ಇಲ್ಲ” ಎನ್ನುವವರೆಗೆ ಅವರ ಚಿಕಿತ್ಸೆ ಮುಂದುವರೆಯುತ್ತದೆ. ಆನಂತರ ಅವರು ಸಮಾಜಕ್ಕೆ ಅಪಾಯಕಾರಿ ಅಲ್ಲ. COVID-19 ಇರಬಹುದೆಂದು ಶಂಕೆ ಇರುವವರನ್ನೂ ಪ್ರತ್ಯೇಕಿಸಿ ರೋಗಲಕ್ಷಣಗಳಿಗೆ ನಿಗಾ ಇಡಬೇಕು. ಮುಖಗವಸು ಎಲ್ಲರಿಗೂ ಕಡ್ಡಾಯ ಅಲ್ಲ. ಕೇವಲ ಯಾರ ಬಳಿಯಾದರೂ ಹತ್ತಿರದಿಂದ ಕೆಲಸ ಮಾಡುವ ತುರ್ತು ಇರುವವರಿಗೆ ಮಾತ್ರ ಮುಖಗವಸು ಇರಬೇಕು. 

2. ರೋಗಿಯಾಗಿರಲಿ, ಬಿಡಲಿ; ಎಲ್ಲರೂ ವೈಯಕ್ತಿಕ ಸ್ವಚ್ಛತೆಯ ಬಗ್ಗೆ ಗಮನ ಕೊಡಬೇಕು. COVID-19 ಸೋಂಕಿನ ಆರಂಭಿಕ ಹಂತಗಳಲ್ಲಿ ಯಾವುದೇ ರೋಗಲಕ್ಷಣ ಕಾಣದೇ ಇರಬಹುದು. ಅಂತಹವರಲ್ಲೂ ಅಲ್ಪಪ್ರಮಾಣದ COVID-19 ಶ್ವಾಸಸ್ರವಿಕೆ ಆಗುತ್ತಿರಬಹುದು. ಹೀಗಾಗಿ ವೈಯಕ್ತಿಕ ಸ್ವಚ್ಛತೆ ಎಲ್ಲರಿಗೂ ಕಡ್ಡಾಯ. ಅಂಗೈಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಸೌಮ್ಯ ಸಾಬೂನು ಮತ್ತು ನೀರಿನಿಂದ ಅಂಗೈಗಳನ್ನು ಚೆನ್ನಾಗಿ ತೊಳೆದುಕೊಳ್ಳುವುದು ಉತ್ತಮ. ಅದು ಸಾಧ್ಯವಿಲ್ಲ ಎಂದಾದರೆ ಮಾತ್ರ ಆಲ್ಕೋಹಾಲ್-ಯುಕ್ತ ಸ್ಯಾನಿಟೈಸರ್ ಬಳಸಬೇಕು. ಸೀನುವಾಗ ಮತ್ತು ಕೆಮ್ಮುವಾಗ ಟಿಷ್ಯೂ ಕಾಗದ ದೊರೆಯದೇ ಹೋದರೆ ಅಂಗೈಗಳ ಬದಲಿಗೆ ಮೊಣಕೈ ಅಡ್ಡ ಹಿಡಿಯಬೇಕು. ಒಮ್ಮೆ ಬಳಸಿದ ಟಿಷ್ಯೂ ಕಾಗದ ಕಿಸೆಯಲ್ಲಿ ಇಡಬಾರದು; ಮತ್ತೊಮ್ಮೆ ಬಳಸಬಾರದು. ಒಟ್ಟಾರೆ ಹೇಗಾದರೂ ಶ್ವಾಸಸ್ರವಿಕೆಯ ಹರಡುವಿಕೆಯನ್ನು ತಡೆಯಬೇಕು.

3. ಅಕಾರಣವಾಗಿ ಯಾರನ್ನೂ ಮುಟ್ಟಬಾರದು. ಜನಜಂಗುಳಿ ಇರುವಾಗ ಅವರಲ್ಲಿ ಯಾರು ರೋಗಿಯ ಸಂಪರ್ಕಕ್ಕೆ ಬಂದಿದ್ದಾರೆ; ಯಾರು ಸುರಕ್ಷಿತ ಎಂಬ ಖಾತ್ರಿ ಇರುವುದಿಲ್ಲ. ಓರ್ವ ರೋಗಿ ತನ್ನ ಸಂಪರ್ಕಕ್ಕೆ ಬಂದ ಪ್ರತಿಯೊಬ್ಬರಿಗೂ ರೋಗ ಹರಡಬಲ್ಲ. ಅಂತಹ ಪ್ರತಿಯೊಬ್ಬರೂ ಮತ್ತಷ್ಟು ಜನಕ್ಕೆ ಅದನ್ನು ಹರಡಬಲ್ಲರು. ರೋಗ ಬೃಹತ್ತಾಗಿ ವ್ಯಾಪಿಸುವುದು ಹೀಗೆಯೇ. ಹೀಗಾಗಿ ಅಂತರ ಕಾಯ್ದುಕೊಳ್ಳುವುದು ಅತ್ಯಗತ್ಯ. ಇದನ್ನು ಒಳ್ಳೆಯ ಮಾತಿನಲ್ಲಿ ಹೇಳಿದಾಗ ತಾತ್ಸಾರ ಮಾಡಿದ ಕೆಲವು ಬುದ್ಧಿಹೀನರ ದೆಸೆಯಿಂದ ಇಂದು ದೇಶವನ್ನೆಲ್ಲಾ ಬಂದ್ ಮಾಡುವ ಪರಿಸ್ಥಿತಿ ಬಂದಿದೆ. ಒಬ್ಬರಿಂದ ಮತ್ತೊಬ್ಬರಿಗೆ ಆರು ಅಡಿಗಳ ಅಂತರ ಕಾಯ್ದುಕೊಳ್ಳಬೇಕು. ಆಗ COVID-19 ವರ್ಗಾವಣೆಯನ್ನು ನಿಗ್ರಹಿಸಬಹುದು.

4. ಶ್ವಾಸಮಾರ್ಗಕ್ಕೆ ಸಾವಿರಾರು ಬಗೆಯ ಸೋಂಕುಗಳು ಬರುತ್ತವೆ. ಅವೆಲ್ಲವೂ COVID-19 ಎಂಬ ಭೀತಿ ಬೇಡ. ಯಾವುದೇ ರೋಗಲಕ್ಷಣಗಳು ಕಂಡರೆ ಮೊದಲು ವೈದ್ಯರನ್ನು ಕಾಣಬೇಕು. ಮುಂದಿನ ಪರೀಕ್ಷೆಗಳನ್ನು ಅವರೇ ನಿರ್ಧರಿಸುತ್ತಾರೆ. “ನಾನು ನಿನ್ನೆ ದಿನಸಿ ಅಂಗಡಿಯ ಸಾಲಿನಲ್ಲಿ ನಿಂತಿದ್ದೆ. ಈಗ ಗಂಟಲು ಕೆರೆಯುತ್ತಿದೆ. ನನಗೆ COVID-19 ಪರೀಕ್ಷೆ ಮಾಡಿಸಿ” ಎಂದು ದುಂಬಾಲು ಬೀಳುವ ಅಗತ್ಯವಿಲ್ಲ. ತೀರಾ ಅನುಮಾನ ಇದ್ದಲ್ಲಿ ವೈದ್ಯರ ಸಲಹೆ ದೊರೆಯುವವರೆಗೆ ಸಾಮಾಜಿಕ ಅಂತರ ಕಾಯ್ದುಕೊಂಡು ತಮ್ಮನ್ನು ತಾವು ಪ್ರತ್ಯೇಕವಾಗಿ ಇಟ್ಟುಕೊಳ್ಳಬಹುದು. ವೈದ್ಯರ ಸಲಹೆ ಇಲ್ಲದೇ ಸ್ವತಃ COVID-19 ಪರೀಕ್ಷೆಗಳನ್ನು ಹುಡುಕಿಕೊಂಡು ಹೋಗುವುದು ಬೇಡ. ಇದರಿಂದ ವಂಚಕರಿಗೆ ರಹದಾರಿ ನೀಡಿದಂತಾಗುತ್ತದೆ. ಸರಕಾರ COVID-19 ಪರೀಕ್ಷೆಗಳಿಗೆ ಸಾಕಷ್ಟು ಸಿದ್ಧತೆ ಮಾಡಿಕೊಂಡಿದೆ. ಅಗತ್ಯವಿದ್ದವರಿಗೆ ಖಂಡಿತಾ ಪರೀಕ್ಷೆಯ ಸೌಲಭ್ಯ ದೊರೆಯಲಿದೆ. COVID-19 ಪರೀಕ್ಷೆ ಯಾರಿಗೆ ಯಾವಾಗ ಮಾಡಿಸಬೇಕು ಎಂಬ ನಿಖರತೆ ವೈದ್ಯರಿಗಿದೆ. ವಿನಾಕಾರಣ ಭೀತಿಯ ಆವಶ್ಯಕತೆ ಇಲ್ಲ.

ಒಂದು ಮಹಾವಿಪತ್ತಿನ ಕಾಲದಲ್ಲಿ ಅತ್ಯಂತ ಕಠಿಣ ನಿರ್ಧಾರಗಳ ಆವಶ್ಯಕತೆ ಇರುತ್ತದೆ. ಆದರೆ, ಒಂದು ಕೈಯಿಂದ ಚಪ್ಪಾಳೆ ತಟ್ಟಲಾಗದು. ಹೀಗಾಗಿ ಸರ್ಕಾರದ ನಿಲುವುಗಳನ್ನು ಜನತೆ ಮುಕ್ತಮನಸ್ಸಿನಿಂದ ಬೆಂಬಲಿಸಬೇಕು; ಸಹಕರಿಸಬೇಕು. ಇದೊಂದು ರೀತಿಯ “ಮಾಡು ಇಲ್ಲವೇ ಮಡಿ” ಸಂದರ್ಭ. ಇಲ್ಲಿ ಚೌಕಾಸಿಗಳಿಗೆ ಆಸ್ಪದವಿಲ್ಲ. ಪೊಳ್ಳು ಮಾತುಗಳಿಂದ COVID-19 ನಿಯಂತ್ರಣ ಸಾಧ್ಯವಿಲ್ಲ. ಯಾವುದೇ ಕಾರಣಕ್ಕೂ ಈ ಕಾಯಿಲೆ ಮೂರನೆಯ ಹಂತ ತಲುಪುವುದಕ್ಕೆ ಬಿಡಬಾರದು. ಇದಕ್ಕೆ ಜನತೆಯ ಸಹಕಾರ ಅತ್ಯಗತ್ಯ. ಪ್ರಪಂಚದ ಹಲವಾರು ದೇಶಗಳು ಈ ಮಾದರಿಯ ಕಠಿಣ ಪ್ರಯತ್ನಗಳಿಂದ COVID-19 ನಿಯಂತ್ರಣ ಸಾಧಿಸುತ್ತಿವೆ. 

ಗ್ರೀಕ್ ಮಿಥಕಗಳಲ್ಲಿನ ಪ್ರೊಕ್ರೌಟಸ್ ದೈತ್ಯನನ್ನು ಥೆಸ್ಯೂಸ್ ಎಂಬ ಮಹಾವೀರ ಸಂಹಾರಿಸುತ್ತಾನೆ. ಆದರೆ, ನಮ್ಮ ದೇಶದ ಕರೋನಾವೈರಸ್ ವಿರುದ್ಧದ ಹೋರಾಟದಲ್ಲಿ ನಾವೆಲ್ಲರೂ ವೈಯಕ್ತಿಕವಾಗಿ ಥೆಸ್ಯೂಸ್ ಆಗಬೇಕಾದ ಅಗತ್ಯವಿದೆ. ಇದನ್ನು ಸಾಧ್ಯವಾಗಿಸುವುದು ನಮ್ಮ ಕೈಲಿದೆ. ಈ ನಿಟ್ಟಿನಲ್ಲಿ ಯಾವ ಎಚ್ಚರಿಕೆಯನ್ನೂ ನಾವು ಕಡೆಗಣಿಸುವಂತಿಲ್ಲ.  
-----------------

ನಕ್ಷೆ: COVID-19 ಹರಡುವಿಕೆಯಲ್ಲಿ ನಿಯಂತ್ರಣದ ಪಾತ್ರ (ವಿಕಿಮೀಡಿಯಾ ಚಿತ್ರ)