ಬುಧವಾರ, ಫೆಬ್ರವರಿ 19, 2020

 
**ಕರೋನವೈರಸ್ – ಮಿಥ್ಯೆಗಳು ಮತ್ತು ಸತ್ಯಗಳು**
 
“ಸತ್ಯ ಕಾಲಿಗೆ ಚಪ್ಪಲಿ ಹಾಕಿಕೊಳ್ಳುವ ವೇಳೆಗೆ ಸುಳ್ಳು ಪ್ರಪಂಚವನ್ನು ಒಂದು ಬಾರಿ ಸುತ್ತಿ ಬಂದಿರುತ್ತದೆ” ಎಂಬ ಮಾತಿದೆ. ಸಾಮಾಜಿಕ ಜಾಲತಾಣಗಳು ಸಕ್ರಿಯವಾಗಿರುವ ಇಂದಿನ ವಿಶ್ವದಲ್ಲಿ ಸುಳ್ಳಿಗೆ ಮತ್ತಷ್ಟು ಬಲ ಬಂದಿದೆ ಎಂಬುದು ಖೇದದ ವಿಷಯ. ಪ್ರಸ್ತುತ ಪ್ರಪಂಚದ ನೆಮ್ಮದಿ ಕೆಡಿಸಿರುವ ಕರೋನವೈರಸ್ ವಿಷಯಕ್ಕೂ ಈ ಮಾತು ಅನ್ವಯ. “ವೈರಸ್ ಅನ್ನು ನಿಯಂತ್ರಿಸಬಲ್ಲೆವು ಎಂಬ ವಿಶ್ವಾಸ ಇದೆಯಾದರೂ, ಅದಕ್ಕಿಂತ ವೇಗವಾಗಿ ಹರಡುತ್ತಿರುವ ವದಂತಿಗಳನ್ನು ಹೇಗೆ ತಡೆಯುವುದು?” ಎಂದು ಕೆಲವು ತಜ್ಞರು ತಮ್ಮ ಅಸಹಾಯಕತೆ ವ್ಯಕ್ತಪಡಿಸುತ್ತಾರೆ. ವಿಶ್ವ ಆರೋಗ್ಯ ಸಂಸ್ಥೆ ಈಗ ಕರೋನ ವೈರಸ್ ಕಾಯಿಲೆಯ ಜೊತೆಜೊತೆಗೆ ವದಂತಿಗಳನ್ನು ನಿಯಂತ್ರಿಸಲು ಕೂಡ ಅಗಾಧ ಶ್ರಮ ವಹಿಸುತ್ತಿದೆ. 
 
ಮಿಥ್ಯೆಗಳು ಹರಡುವುದಕ್ಕೆ ಮೂರು ಕಾರಣಗಳು. ಮೊದಲನೆಯದು – ಅಧಿಕೃತ ಮಾಹಿತಿಯ ಕೊರತೆ. ಒಂದು ಜಾಗತಿಕ ಮಟ್ಟದ ಸಮಸ್ಯೆ ಎದುರಾದಾಗ ಅತ್ಯಂತ ಮುಖ್ಯ ಆವಶ್ಯಕತೆ ಆ ಸಮಸ್ಯೆಯ ನಿಯಂತ್ರಣ ಮತ್ತು ಪರಿಹಾರ. ಇದು ಸುಲಭದ ಮಾತಲ್ಲ. ಸಮಸ್ಯೆಯ ಬೇರಿನ ಆಳಕ್ಕೆ ಇಳಿಯದೇ ಹೋದರೆ ಉಪಯುಕ್ತ ಮಾಹಿತಿ ಲಭ್ಯವಾಗುವುದಿಲ್ಲ. ಈ ಪ್ರಕ್ರಿಯೆಗೆ ಕಾಲಾವಕಾಶ ಬೇಕು. ಸಮಸ್ಯೆಯನ್ನು ಒಂದು ಹಂತದವರೆಗೆ ಅರ್ಥ ಮಾಡಿಕೊಳ್ಳದೇ ಅದರ ಬಗ್ಗೆ ಸಾಮಾನ್ಯ ಜನರಿಗೆ ವಿವರಿಸಲು ಸಾಧ್ಯವಿಲ್ಲ. ಹೀಗಾಗಿ, ಅಧಿಕೃತ ಮಾಹಿತಿಗೆ ಸಮಯ ಹಿಡಿಯುತ್ತದೆ. ಆದರೆ, ಸುದ್ಧಿಗೆ ಹಾತೊರೆಯುವ ಜನರಿಗೆ ಇಷ್ಟು ತಾಳ್ಮೆ ಇರುವುದಿಲ್ಲ. ವಿಶ್ವ ಆರೋಗ್ಯ ಸಂಸ್ಥೆ ಒಂದು ವಿಷಯವನ್ನು ಜಗತ್ತಿಗೆ ತಿಳಿಸಿತು ಎಂದರೆ, ಆ ಪ್ರಕಟಣೆಯ ಹಿಂದೆ ಸಾವಿರಾರು ಜನಗಳ ನೂರಾರು ಗಂಟೆಗಳ ಶ್ರಮ ಇರುತ್ತದೆ. ಜೊತೆಗೆ, ಅದು ಸಂಶೋಧನೆಗಳ ಮೂಲದಿಂದ ಪಡೆದ, ಅನೇಕ ಬಾರಿ ಪರಿಷ್ಕರಿಸಿದ ಮೇಲೆ ಋಜುವಾತಾದ ಮಾಹಿತಿಯೇ ಆಗಿರುತ್ತದೆ. ಅದಕ್ಕೇ, ಸತ್ಯದ ಸಂಚಾರ ನಿಧಾನ. ಸತ್ಯವನ್ನು ಬಯಸುವವರು ತಾಳ್ಮೆ ವಹಿಸುವುದು ಮುಖ್ಯ. 
 
ಎರಡನೆಯ ಕಾರಣ – ತಪ್ಪು ಮಾಹಿತಿಯ ಹರಡುವಿಕೆ. ಜನರು ಯಾವುದೇ ವಿಷಯವನ್ನೂ ತಮ್ಮ ಪೂರ್ವಗ್ರಹಗಳ ಅಚ್ಚಿನ ಎರಕದಲ್ಲಿಯೇ ನೋಡುತ್ತಾರೆ. ಯಾವುದೇ ದೇಶದ, ಜನಾಂಗದ, ಸಂಸ್ಕೃತಿಯ ಬಗ್ಗೆ ಇರುವ ಅರಿವಿನ ಮಿತಿಗಳು ವಾಸ್ತವವನ್ನು ಬಣ್ಣದ ಮಸೂರ ಉಳ್ಳ ಕನ್ನಡಕದ ಮೂಲ ನೋಡಿದಂತೆ ಬೇರೆಯೇ ಬಿಂಬವನ್ನು ಮೂಡಿಸುತ್ತವೆ. ಚೀನಾ ದೇಶದಲ್ಲಿ ಬಾವಲಿಗಳನ್ನು ಆಹಾರವಾಗಿ ಬಳಸುವುದರಿಂದ ಪ್ರಸ್ತುತ ಕರೋನಾ ವೈರಸ್ ಕಾಯಿಲೆ ಬಂದಿದೆ ಎಂದು ವಾದ ಮಾಡುವವರು, ಈ ರೀತಿಯ ಆಹಾರ ಸಂಸ್ಕೃತಿ ಅಲ್ಲಿ ಎಷ್ಟೋ ದಶಕಗಳಿಂದ ಇರಬಹುದು ಎಂಬ ಸತ್ಯವನ್ನು ಮರೆಯುತ್ತಾರೆ. ಜೊತೆಗೆ, ಯಾವುದೋ ದೇಶದಲ್ಲಿ ತೆಗೆದ ವಿಡಿಯೋ ಒಂದನ್ನು ಸಮೀಕರಿಸಿ ಮತ್ತಷ್ಟು ಗೊಂದಲಗಳನ್ನು ಸೃಷ್ಟಿಸುತ್ತಾರೆ. ಕರೋನವೈರಸ್ ಎಂಬುದು ಬಹಳ ಹಿಂದೆಯೇ ಪತ್ತೆ ಮಾಡಿದ್ದ ಒಂದು ಬಗೆಯ ವೈರಸ್. ಆ ವೈರಸ್ ನಲ್ಲಿ ಜೆನೆಟಿಕ್ ಬದಲಾವಣೆ ಆಗಿ ಈಗ ಅದರಲ್ಲೇ ಒಂದು ಹೊಸ ಪ್ರಭೇಧದ ವೈರಸ್ ನಿಸರ್ಗದಲ್ಲಿ ಸೃಷ್ಟಿಯಾಗಿದೆ. ವೈರಸ್ ಗಳಲ್ಲಿ ಈ ರೀತಿಯ ಜೆನೆಟಿಕ್ ಮಾರ್ಪಾಡುಗಳು ಸರ್ವೇಸಾಮಾನ್ಯ. ಹೀಗೆ ಮಾರ್ಪಾಡು ಹೊಂದಿದ ವೈರಸ್ ಗಳಲ್ಲಿ ಕೆಲವಕ್ಕೆ ಮನುಷ್ಯರಿಗೆ ಕಾಯಿಲೆ ತರುವ ಸಾಮರ್ಥ್ಯ ಇರಬಹುದು. ಈ ಪ್ರಕ್ರಿಯೆ ಶತಮಾನಗಳಿಂದ ನಡೆಯುತ್ತಲೇ ಇದೆ. ಈ ರೀತಿಯ ವಿಷಯಗಳನ್ನು ಅರೆಬರೆಯಾಗಿಯೋ ಅಥವಾ ತಿರುಚಿಯೋ ಹೇಳಿದರೆ ಆತಂಕ ಮೂಡುವುದು ಸಾಮಾನ್ಯ. ಸಾಲದ್ದಕ್ಕೆ, ಈ ವೈರಸ್ ನಿಂದ ಪಾರಾಗುವ ಹಲವಾರು ವಿಧಾನಗಳನ್ನು ಸೂಚಿಸುವ ಜನರು ಧಂಡಿಯಾಗಿ ಸಿಗುತ್ತದೆ. ಕೆಲವು ಬಾರಿ ಇಂತಹ ಮಂದಿ ಹೇಳಿದ ಅಪಾಯಕಾರಿ ಚಿಕಿತ್ಸೆ ಆರೋಗ್ಯಕರ ವ್ಯಕ್ತಿಯ ಜೀವಕ್ಕೆ ಎರವಾಗಬಹುದು. 
 
ಮೂರನೆಯ ಕಾರಣ - ದುರುದ್ದೇಶಪೂರ್ವಕ ಮಾಹಿತಿ ಹರಡುವಿಕೆ. ಜಾಲತಾಣಗಳ ಪ್ರಾಬಲ್ಯದ ಇಂದಿನ ಜಗತ್ತಿನಲ್ಲಿ ಅಧಿಕೃತತೆಯ ಮುಖವಾಡ ಧರಿಸಿ ವದಂತಿಗಳನ್ನು ಹಬ್ಬಿಸುವ ಸುದ್ಧಿಕೇಂದ್ರಗಳಿಗೆ ಕೊರತೆಯೇ ಇಲ್ಲ. ರೋಚಕವಾಗಿ ಸುಳ್ಳು ಮಾಹಿತಿ ಉಣಬಡಿಸುವ ಇಂತಹ ಮೂಲಗಳು ವದಂತಿಪ್ರಿಯರಿಗೆ ಹಬ್ಬ! ತಪ್ಪು ಮಾಹಿತಿಯೊಂದು ರೆಕ್ಕೆ-ಪುಕ್ಕಗಳನ್ನು ಸೇರಿಸಿಕೊಳ್ಳುತ್ತಾ, ಎಲ್ಲೆಡೆ ಹರಡುತ್ತಾ ಹೋದಂತೆ ಅದು ದುರುದ್ದೇಶಪೂರ್ವಕವಾಗಿ ಬದಲಾಗಬಹುದು. ಇಲ್ಲವೇ, ಏಕಾಏಕಿ ಯಾರದ್ದೋ ಮಾನಹಾನಿಗೊಳಿಸಲು ಅಥವಾ ತಮ್ಮ ಹಳೆಯ ಕಕ್ಷೆ ಸಾಧಿಸಲು ಸಮಯಕ್ಕೆ ಕಾಯುತ್ತಿರುವವರ ದಂಡು ಇಂತಹ ನಾಜೂಕಿನ ಸಂದರ್ಭಗಳಲ್ಲಿ ದುರುದ್ದೇಶಪೂರ್ವಕ ಮಾಹಿತಿ ಹರಡುವುದು ಸಾಮಾನ್ಯ. ಪ್ರಸ್ತುತ ಕರೋನವೈರಸ್ ಕಾಯಿಲೆಯಲ್ಲೂ ಜೈವಿಕ ಸಮರದ ವದಂತಿ, ಮುಖ-ಗವಜು ತಯಾರಿಸುವವರ ಹುನ್ನಾರ, ಲಸಿಕೆ ತಯಾರಿಕೆಯ ಕಂಪೆನಿಗಳ ಮಸಲತ್ತು, ರೋಗಿಗಳನ್ನು ಸರ್ಕಾರ ಸಾಯಿಸುತ್ತಿದೆ ಎಂಬ ಪಕ್ಕಾ ಸುಳ್ಳುಸುದ್ಧಿಗಳು ಈಗಲೂ ಸದ್ದು ಮಾಡುತ್ತಿವೆ. ಇದರ ಮಧ್ಯೆ ಧರ್ಮ-ಕರ್ಮಗಳನ್ನು ಎಳೆದು ತಂದು ಜನರ ನಡುವೆ ಅವಿಶ್ವಾಸ ಮೂಡಿಸುವ ಮೂರ್ಖರ ಹಾವಳಿ ಬೇರೆ! 
 
ಆತಂಕಕ್ಕೆ ಒಳಗಾದ ಜನ ಏನನ್ನಾದರೂ ನಂಬುವ ಮನಸ್ಥಿತಿಯಲ್ಲಿರುವುದು ಸಹಜ. ಅಂತಹ ಆತಂಕವನ್ನು ಕಡಿಮೆ ಮಾಡುವ ಪ್ರಾಮಾಣಿಕ ಪ್ರಯತ್ನ ನಮ್ಮದಾಗಬೇಕು. ಈ ನಿಟ್ಟಿನಲ್ಲಿ ಮಾಧ್ಯಮಗಳ ಪಾತ್ರ ತುಂಬಾ ದೊಡ್ಡದು. ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಮಾಹಿತಿಗೆ ಸ್ವಯಂ ಕಡಿವಾಣ ಹಾಕಬೇಕು. ತಪ್ಪು ಮಾಹಿತಿಯನ್ನು ನಿರ್ದಾಕ್ಷಿಣ್ಯವಾಗಿ ಖಂಡಿಸಬೇಕು. ಎಷ್ಟೋ ಬಾರಿ ಕಾಯಿಲೆಗಿಂತ ಹೆಚ್ಚಾಗಿ ವದಂತಿಗಳಿಂದ, ನಿರಾಧಾರವಾದ ಭಯದಿಂದ ನೋಯುವವರೇ ಹೆಚ್ಚು. ಕಾಯಿಲೆಯ ನಿಯಂತ್ರಣಕ್ಕೆ ಇಂತಹ ವದಂತಿಗಳು ಬಹಳ ಅಪಾಯಕಾರಿ. ಸಮರ್ಥವಾದ ಹಲವಾರು ಪ್ರಯತ್ನಗಳು ಕೇವಲ ಸುಳ್ಳುಸುದ್ಧಿಗಳಿಂದ ವಿಫಲವಾದ ಅನೇಕ ಉದಾಹರಣೆಗಳಿವೆ. 
 
ಪ್ರಸ್ತುತ ಕರೋನವೈರಸ್ ಕಾಯಿಲೆಯ ಬಗ್ಗೆ ಸತ್ಯಗಳನ್ನು ಪತ್ತೆ ಮಾಡುವುದು ಹೇಗೆ? ಕೆಲವು ಸರಳ ಮಾರ್ಗಗಳಿವೆ. ಸಾಮಾಜಿಕ ಜಾಲತಾಣಗಳಲ್ಲಿ ಬಂದ ಯಾವುದೇ ಸುದ್ಧಿಯನ್ನಾದರೂ ಆಧಾರವಿಲ್ಲದೇ ನಂಬಬಾರದು. ಅಂತಹ ಸುದ್ಧಿ ವಿನಾಶಕಾರಿ ಅನಿಸಿದರೆ ಅದನ್ನು ಯಾವ ಕಾರಣಕ್ಕೂ ಪಸರಿಸಬಾರದು. ಅದು ಆತಂಕಕ್ಕೆ ಕಾರಣವಾದರೆ ಕೂಡಲೇ ತಜ್ಞರನ್ನು ಕೇಳಿ ಅದರ ಬಗ್ಗೆ ವಿವರ ಪಡೆಯಬೇಕು. ಇಲ್ಲವೇ, ವಿಶ್ವಾಸಾರ್ಹ ಮೂಲಗಳಿಂದ ಆ ಸುದ್ಧಿಯ ಅಧಿಕೃತತೆಯನ್ನು ಪರಿಶೀಲಿಸಬೇಕು. 
 
ಕರೋನಾ ವೈರಸ್ ಕಾಯಿಲೆಯ ಬಗ್ಗೆ ವಿಶ್ವಾಸಾರ್ಹ ಮೂಲಗಳು ಯಾವುವು? ಮೊದಲನೆಯದು: ವಿಶ್ವ ಆರೋಗ್ಯ ಸಂಸ್ಥೆ (World Health Organization). ಪ್ರತಿದಿನವೂ ಹಲವಾರು ಬಾರಿ ಈ ಕಾಯಿಲೆಯ ಬಗ್ಗೆ ಮಾಹಿತಿಯನ್ನು ವಿಶ್ವ ಆರೋಗ್ಯ ಸಂಸ್ಥೆ ತನ್ನ ಜಾಲತಾಣದಲ್ಲಿ ಬಿತ್ತರಿಸುತ್ತಿದೆ. ಜೊತೆಗೆ, ಸಂಸ್ಥೆಯ ತಜ್ಞರು ಹಲವಾರು ಸುದ್ಧಿಜಾಲಗಳ ಮೂಲಕ ವಿಡಿಯೋ ಸಂದೇಶಗಳನ್ನು ಕಾಲಕಾಲಕ್ಕೆ ರವಾನಿಸಿ ಜನರಿಗೆ ಅಧಿಕೃತ ಮಾಹಿತಿ ತಲುಪಲು ಸಹಾಯ ಮಾಡುತ್ತಿದ್ದಾರೆ. ಈ ರೀತಿಯಾಗಿ ಕಾಯಿಲೆಗೆ ಸಂಬಂಧಿಸಿದ ಅತ್ಯಂತ ನಿಖರ ಮತ್ತು ವಿಶ್ವಾಸಾರ್ಹ ಸುದ್ಧಿಗಳನ್ನು ಕ್ಷಿಪ್ರವಾಗಿ ಪ್ರಪಂಚಕ್ಕೆ ತಲುಪುವಂತೆ ಮಾಡಲಾಗಿದೆ. ಕರೋನಾ ವೈರಸ್ ಕಾಯಿಲೆಯ ಬಗ್ಗೆ ಯಾವುದೇ ಮಾಹಿತಿ ವಿಶ್ವ ಆರೋಗ್ಯ ಸಂಸ್ಥೆಯ ಜಾಲತಾಣದಲ್ಲಿ ಇಲ್ಲವೆಂದರೆ ಆ ಮಾಹಿತಿ ಸುಳ್ಳು ಎಂದೇ ಅರ್ಥ. 
 
ಎರಡನೆಯದು: ಯುರೋಪ್ ಮತ್ತು ಅಮೆರಿಕಾ ದೇಶಗಳ “ಕಾಯಿಲೆ ಸಂಶೋಧನೆಯ ಸಂಸ್ಥೆಗಳು”. ಬಹಳ ಉನ್ನತ ಮಟ್ಟದ ಸಂಶೋಧನೆಗೆ ಜಾಗತಿಕ ಮಟ್ಟದಲ್ಲಿ ಹೆಸರಾಗಿರುವ ವೈದ್ಯಕೀಯ ಸಂಶೋಧನಾ ಸಂಸ್ಥೆಗಳು ಹಗಲು-ರಾತ್ರಿಗಳ ಪರಿವೆ ಇಲ್ಲದೇ ಈ ನಿಟ್ಟಿನಲ್ಲಿ ಜಾಗೃತವಾಗಿವೆ. ಜನರಿಗೆ ಪ್ರಯೋಜನ ಆಗಬಲ್ಲ ಯಾವುದೇ ಹೊಸ ಮಾಹಿತಿ ಕಂಡುಬಂದರೆ, ಈ ಸಂಸ್ಥೆಗಳು ವಿಶ್ವ ಆರೋಗ್ಯ ಸಂಸ್ಥೆಯ ಮೂಲಕ ಅದನ್ನು ಪ್ರಪಂಚಕ್ಕೆ ತಿಳಿಸುತ್ತವೆ. ಜೊತೆಗೆ, ಆ ಬಗ್ಗೆ ತಮಗೆ ಕಂಡುಬಂದ ಹೊಸ ಮಾಹಿತಿಯ ಸಮಗ್ರ ವಿವರಗಳನ್ನು ಸಾಮಾನ್ಯ ಜನರಿಗೆ ಅರ್ಥವಾಗುವ ಭಾಷೆಯಲ್ಲಿ ಪ್ರಕಟಗೊಳಿಸುತ್ತವೆ. 
 
ವಿಶ್ವ ಆರೋಗ್ಯ ಸಂಸ್ಥೆ ಈ ಬಾರಿ ಒಂದು ಹೊಸ ಪ್ರಯತ್ನ ನಡೆಸಿದೆ. ಕೋಟಿಗಟ್ಟಲೆ ಸದಸ್ಯರಿರುವ ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ಕರೋನಾ ವೈರಸ್ ಕಾಯಿಲೆಯ ಬಗ್ಗೆ ಯಾರಾದರೂ ಮಾಹಿತಿ ಹಾಕಿದರೆ, ಅಂತಹ ಮಾಹಿತಿಯ ಅಧಿಕೃತತೆಯನ್ನು ಕೂಡಲೇ ತನ್ನ ಜಾಲತಾಣದಲ್ಲಿ ಪರೀಕ್ಷಿಸಿ, ನಂತರ ಆಯಾ ಸಾಮಾಜಿಕ ಜಾಲತಾಣದಲ್ಲಿ ಬಿಂಬಿಸುವ ಹಾಗೆ ವ್ಯವಸ್ಥೆ ಮಾಡಿದೆ. ಪಿಂಟೆರೆಸ್ಟ್ ಎನ್ನುವ ಸಾಮಾಜಿಕ ಜಾಲತಾಣ ಇಂತಹ ಒಪ್ಪಂದದ ಮುಂಚೂಣಿಯಲ್ಲಿ ನಿಂತು ತನ್ನ ಬದ್ಧತೆಯನ್ನು ಸಾರಿದೆ. ಸಾಮಾಜಿಕ ಜವಾಬ್ದಾರಿ ಉಳ್ಳ ಪ್ರತಿಯೊಬ್ಬ ನಾಗರಿಕನೂ ಮಾಡಬೇಕಾದ ಅವಶ್ಯ ಕೆಲಸ ಇದು. ಜೊತೆಗೆ, ಫ್ಯಾಕ್ಟ್ ಚೆಕ್ ನಂತಹ ಹಲವಾರು ತಾಣಗಳು ಈ ಕುರಿತಾದ ಯಾವುದೇ ಮಾಹಿತಿಯ ಅಧಿಕೃತತೆಯ ಪರಿಶೀಲನೆಯ ಬಗ್ಗೆ ಸಕ್ರಿಯವಾಗಿವೆ.
 
ವದಂತಿಗಳನ್ನು ದೂರವಿಡುವುದು ಕೂಡ ಪ್ರಸ್ತುತ ವಿಷಮ ಪರಿಸ್ಥಿಯಲ್ಲಿ ನಾವು ಜಗತ್ತಿಗೆ ಸಲ್ಲಿಸಬಹುದಾದ ಪ್ರಾಮಾಣಿಕ ಸೇವೆ. ಆ ನಿಟ್ಟಿನಲ್ಲಿ ಎಲ್ಲರೂ ಜಾಗೃತರಾಗಿರುವುದು ಅವಶ್ಯಕ.
-----------------
 

19/2/2020 ರ ವಿಶ್ವವಾಣಿ ದಿನಪತ್ರಿಕೆಯಲ್ಲಿ ಪ್ರಕಟವಾದ ಲೇಖನ. ಮೂಲ ಲೇಖನದ ಲಿಂಕ್:
ಈ ಲೇಖನ ಶ್ರೀಯುತ ಜಾಣಸುದ್ಧಿ ಧ್ವನಿಪತ್ರಿಕೆಯಲ್ಲಿ  18/2/2020 ರಂದು ಬಿತ್ತರವಾಗಿತ್ತು. ಜಾಣಸುದ್ಧಿಯಲ್ಲಿನ Audio ಆವೃತ್ತಿಗೆ ಲಿಂಕ್: https://anchor.fm/kollegala/episodes/127---18022020-eatjj7
 

ಬುಧವಾರ, ಫೆಬ್ರವರಿ 5, 2020




**ಕರೋನಾವೈರಸ್ - ಜೈವಿಕ ಸಮರದ ಆತಂಕ ಬೇಡ**

ಚೀನಾ ದೇಶದಲ್ಲಿ ಕರೋನಾವೈರಸ್ ನಿಂದ ಹಬ್ಬಿರುವ ನ್ಯುಮೋನಿಯಾ ಕಾಯಿಲೆಯ ಬಗ್ಗೆ ಈ ವರ್ಷದ ಜನವರಿ ನಡುವಿನಲ್ಲಿ ಪ್ರಪಂಚಕ್ಕೆ ತಿಳಿಯಿತು. ಅಂದಿನಿಂದ ಈ ಎರಡು ವಾರಗಳಲ್ಲಿ ಈ ಕಾಯಿಲೆ ಜಗತ್ತಿನ ಬಹಳಷ್ಟು ದೇಶಗಳಲ್ಲಿ ಹರಡಿದೆ. ವಿಶ್ವ ಆರೋಗ್ಯ ಸಂಸ್ಥೆ ಇದನ್ನು ಹತ್ತಿಕ್ಕಲು ಎಲ್ಲಾ ರೀತಿಯ ಸಿದ್ಧತೆಗಳನ್ನೂ ತ್ವರಿತಗತಿಯಲ್ಲಿ ಮಾಡಿಕೊಂಡಿದೆ. ಈ ಮಧ್ಯೆ “ಕರೋನಾವೈರಸ್ ಜೈವಿಕ ಸಮರದ ಭಾಗ” ಎನ್ನುವ ವದಂತಿಗಳು ಹರಡುತ್ತಿವೆ. ಈಗ ಕಂಡಿರುವ ಕರೋನಾವೈರಸ್ ನ್ಯುಮೋನಿಯಾ ಕೂಡ ಜಗತ್ತಿನಲ್ಲಿ ಸಾಮಾನ್ಯವಾಗಿ ಆಗಾಗ ಕಾಣುವ ಕಾಯಿಲೆಯ ಪ್ರಭೇಧವೇ ಹೊರತು ಯಾವುದೇ ರೀತಿಯ ಜೈವಿಕ ಸಮರ ಅಲ್ಲ. ಈ ಬಗ್ಗೆ ಯಾವುದೇ ಆತಂಕ ಬೇಕಿಲ್ಲ.

ಮೊದಲಿಗೆ – ಜೈವಿಕ ಸಮರ (Biological Warfare) ಎಂದರೇನು? ಯುದ್ಧದಲ್ಲಿ ಮದ್ದುಗುಂಡು, ಬಂದೂಕು, ಫಿರಂಗಿಗಳಂತಹ ಆಯುಧಗಳ ಬಳಕೆ ಸಹಜ. ಆದರೆ, ರಹಸ್ಯ ಪ್ರಯೋಗಾಲಯಗಳಲ್ಲಿ ಹೊಸ ಮಾದರಿಯ ರೋಗಕಾರಕ ಸೂಕ್ಷ್ಮಾಣುಜೀವಿಗಳನ್ನು ಸೃಷ್ಟಿಸಿ ಶತ್ರುದೇಶದಲ್ಲಿ ಹಬ್ಬಿಸಿದರೆ? ಅದರಿಂದ ಹಿಂದೆಂದೂ ಕಂಡಿರದ ಹೊಸ ರೋಗವನ್ನು ವಿನಾಶಕ್ಕಾಗಿ ಪ್ರಯೋಗಿಸಿದಂತೆ ಆಗುತ್ತದೆ. ಈಗಾಗಲೇ ಅಸ್ತಿತ್ವದಲ್ಲಿ ಇರುವ ಕೆಲವು ರೋಗಕಾರಕ ಸೂಕ್ಷ್ಮಾಣುಜೀವಿಗಳ ಜೆನೆಟಿಕ್ ರಚನೆಯನ್ನು ಬದಲಾಯಿಸಿದರೂ ಇಂತಹದೇ ಪರಿಣಾಮ ಆಗಬಹುದು. ನಿಸರ್ಗದಲ್ಲಿ ಸಹಜವಾಗಿ, ಆದರೆ ನಿಧಾನವಾಗಿ ಆಗುವ ಈ ಪ್ರಕ್ರಿಯೆಯನ್ನು ಪ್ರಯೋಗಾಲಯಗಳಲ್ಲಿ ತೀವ್ರಗತಿಯಲ್ಲಿ, ಅಧಿಕ ವಿನಾಶಕಾರಿಯಾಗಿ ಮಾಡುವ ಕ್ರೂರ ಪದ್ದತಿಯೇ ಜೈವಿಕ ಸಮರ.

ಯುದ್ಧಗಳಲ್ಲಿ ಬಳಸುವ ಪರಮಾಣು ಬಾಂಬ್ ಅಥವಾ ರಾಸಾಯನಿಕ ಅಸ್ತ್ರಗಳು ಒಂದು ನಿಶ್ಚಿತ ಪ್ರದೇಶದಲ್ಲಿ ವ್ಯಾಪಕ ವಿನಾಶಕ್ಕೆ ಕಾರಣವಾಗುತ್ತವೆ. ಆದರೆ, ಜೈವಿಕ ಸಮರದಲ್ಲಿ ಬಳಸುವ ರೋಗಕಾರಕ ಸೂಕ್ಷ್ಮಜೀವಿಗಳು ಜಗತ್ತಿನ ಯಾವುದೇ ದೇಶಕ್ಕೂ ಹಬ್ಬಬಹುದು. ಯಾರದೋ ಮನೆಗೆ ಇಟ್ಟ ಬೆಂಕಿ ಇಡೀ ಊರನ್ನೇ ಸುಡುವಂತೆ, ಪ್ರಪಂಚವೆಲ್ಲಾ ಈ ಹೊಸ ಕಾಯಿಲೆಗೆ ಬಲಿಯಾಗಬಹುದು. ಜೈವಿಕ ಸಮರ ಮನುಷ್ಯನ ತೀವ್ರ ಕ್ರೌರ್ಯದ ಪ್ರತೀಕ. ಇದನ್ನು ಗುರುತಿಸಿದ ಹಲವಾರು ದೇಶಗಳು 1975 ರಲ್ಲೇ ಜೈವಿಕ ಸಮರದ ವಿರುದ್ಧವಾಗಿ ನಿಂತು, ಇಂತಹ ಸಮರ ನೀತಿಯನ್ನು ತಾವೆಂದೂ ಬಳಸುವುದಿಲ್ಲ ಎಂದು ನಿರ್ಧರಿಸಿದವು. ಪ್ರಸ್ತುತ, ಪ್ರಪಂಚದ 183 ದೇಶಗಳು ಜೈವಿಕ ಸಮರಕ್ಕೆ ವಿರೋಧವಾಗಿವೆ. ಇದರಲ್ಲಿ ಚೀನಾ ದೇಶ ಕೂಡ ತಾತ್ವಿಕವಾಗಿ ಸೇರಿದೆ. ಜೈವಿಕ ಸಮರಕ್ಕೆ ಕಾರಣವಾಗುವ ಯಾವುದೇ ಪ್ರಯೋಗವನ್ನು ನಡೆಸುವುದಿಲ್ಲವೆಂದೂ, ಬೇರೆ ಯಾರಾದರೂ ಅಂತಹ ಸಮರ ನಡೆಸಿದಲ್ಲಿ ಅದನ್ನು ವಿಶ್ವ ಸಂಸ್ಥೆಗೆ ವರದಿ ಮಾಡುತ್ತೇವೆ ಎಂದೂ, ಈ ರೀತಿಯ ಸಮರದಿಂದ ಹಾನಿಗೆ ಒಳಗಾಗುವ ದೇಶ ಚೇತರಿಸಕೊಳ್ಳಲು ಎಲ್ಲಾ ಸದಸ್ಯ ದೇಶಗಳೂ ಸಂಪೂರ್ಣ ಸಹಕಾರ ಕೊಡುತ್ತೇವೆ ಎಂದೂ ಒಪ್ಪಂದ ಮಾಡಿಕೊಂಡಿವೆ. ಹೀಗಾಗಿ, ಪ್ರಸ್ತುತ ಪರಿಸ್ಥಿತಿಯಲ್ಲಿ ಜೈವಿಕ ಸಮರದ ಭಯ ನಿರಾಧಾರ.

ಚೀನಾ ನ್ಯೂಮೋನಿಯಾಗೆ ಕಾರಣವಾಗಿರುವ ಕರೋನಾವೈರಸ್ ಯಾವುದೋ ಹೊಸ ವೈರಸ್ ಅಲ್ಲ. ಇದು ಬಹಳ ಕಾಲದಿಂದ ಚೆನ್ನಾಗಿ ತಿಳಿದಿರುವ ಸೂಕ್ಷ್ಮಾಣುಜೀವಿ. ವೈರಸ್ ಗಳು ಜೀವ ಇರುವ ಮತ್ತು ಜೀವ ಇಲ್ಲದವುಗಳ ನಡುವಿನ ಪ್ರಭೇಧಗಳು. ಬೇರೆ ಜೀವಿಗಳಿಗೆ ಹೋಲಿಸಿದರೆ ವೈರಸ್ ಗಳಲ್ಲಿ ಇರುವ ಜೆನೆಟಿಕ್ ಸಂಯುಕ್ತ ಸರಳವಾದದ್ದು. ಈ ಜೆನೆಟಿಕ್ ರಚನೆ ಯಾವಾಗಲೂ ಅಲ್ಪ-ಸ್ವಲ್ಪ ಬದಲಾವಣೆ ಹೊಂದುತ್ತಾ ವಿಕಾಸವಾಗುತ್ತಲೇ ಇರುತ್ತದೆ. ಅವು ಒಂದು ಮಟ್ಟಿನ ಬದಲಾವಣೆ ಹೊಂದಿದಾಗ ಅದರ ರೋಗಕಾರಕ ಶಕ್ತಿ ಹೆಚ್ಚುತ್ತದೆ. ಕೆಲವೊಮ್ಮೆ, ವೈರಸ್ ಒಳಗಿನ ಜೆನೆಟಿಕ್ ರಚನೆ ಏಕಾಏಕಿ ಬದಲಾವಣೆ ಹೊಂದಬಹುದು. ಆಗ ಅವುಗಳ ರೋಗಕಾರಕ ಶಕ್ತಿ ತೀವ್ರವಾಗುತ್ತದೆ. ಸದ್ಯದ ಕರೋನಾವೈರಸ್ ಕೂಡ ಇಂತಹುದೇ ಬದಲಾವಣೆ ಹೊಂದಿರುವ ಸಾಧ್ಯತೆಯೇ ಹೆಚ್ಚು.

ಪ್ರಸ್ತುತ ಪ್ರಭೇಧದ ಕರೋನಾವೈರಸ್ ನಿಸರ್ಗದಲ್ಲೇ ಬದಲಾವಣೆ ಹೊಂದಿದ ವೈರಸ್ ಎಂದು ನಮಗೆ ಹೇಗೆ ತಿಳಿದಿದೆ? ಇದು ಪ್ರಯೋಗಾಲಯದಲ್ಲಿ ಬೆಳೆಸಿದ ಹೊಸ ವೈರಸ್ ಅಲ್ಲ ಎಂದು ಖಾತ್ರಿ ಏನು? 2012 ರ ಸುಮಾರಿಗೆ ಚೀನಾ ದೇಶದ ಯುನ್ನಾನ್ ಪ್ರಾಂತ್ಯದ ಕೆಲವು ಗುಹೆಗಳಲ್ಲಿದ್ದ ಬಾವಲಿಗಳನ್ನು ಅಧ್ಯಯನ ಮಾಡಲು ಆರಂಭಿಸಿದ ವಿಜ್ಞಾನಿಗಳು ನಾಲ್ಕು ಬೇರೆಬೇರೆ ಪ್ರಭೇಧದ ಬಾವಲಿಗಳಲ್ಲಿ ಕೆಲವು ಹೊಸ ಮಾದರಿಯ ಕರೋನಾವೈರಸ್ ಗಳನ್ನು ಪತ್ತೆ ಮಾಡಿದ್ದರು. 2017 ರಲ್ಲಿ ಈ ಐದು ವರ್ಷಗಳ ಅಧ್ಯಯನದ ವಿವರಗಳನ್ನು ವೈಜ್ಞಾನಿಕ ಪತ್ರಿಕೆಗಳಲ್ಲಿ ಪ್ರಕಟಿಸಿದ್ದರು. ಆಗ ಅವರು ಪತ್ತೆ ಮಾಡಿದ್ದ ಕರೋನಾವೈರಸ್ ಜೆನೆಟಿಕ್ ನಕ್ಷೆಗೂ, ಈಗ ರೋಗಕಾರಕ ಆಗಿರುವ ಕರೋನಾವೈರಸ್ ಜೆನೆಟಿಕ್ ನಕ್ಷೆಗೂ 96% ಸಾಮ್ಯತೆ ಇದೆ. ಜೊತೆಗೆ, ಖಾಸಗಿ ಆರೋಗ್ಯ ಸಂಸ್ಥೆಯೊಂದು ಯುನ್ನಾನ್ ಪ್ರಾಂತ್ಯದ ಗುಹೆಗಳ ಆಸುಪಾಸಿನಲ್ಲಿ ವಾಸವಿರುವ 2000 ಜನರ ರಕ್ತವನ್ನು ಪರಿಶೀಲಿಸಿದೆ. ಅವರಲ್ಲಿ ಸುಮಾರು 60 ಕ್ಕೂ ಹೆಚ್ಚು ಮಂದಿಯಲ್ಲಿ ಪ್ರಸ್ತುತ ಕರೋನಾವೈರಸ್ ನ ಪ್ರತಿಕಾಯಗಳು (antibodies) ಲಭಿಸಿವೆ. ಇದು ಸಾಧ್ಯವಾಗಬೇಕಾದರೆ, ಆ ವೈರಸ್ ಗಳು ಬಾವಲಿಗಳಿಂದ ಮನುಷ್ಯರಿಗೆ ಈಗಾಗಲೇ ಹಬ್ಬಿರಬೇಕು. ಅಂದರೆ, 2012-17 ರಲ್ಲಿ ಬಾವಲಿಗಳಲ್ಲಿ ಪತ್ತೆ ಮಾಡಿದ್ದ ಕರೋನಾವೈರಸ್ ಗಳೇ ಈಗ ಅಲ್ಪಸ್ವಲ್ಪ ಮಾರ್ಪಾಡು ಹೊಂದಿ ಇಂದಿನ ಸಮಸ್ಯೆಗೆ ಕಾರಣ ಆಗಿದೆ ಎನ್ನುವುದು ಖಾತ್ರಿ! ಇದು ಪ್ರಯೋಗಾಲಯದಲ್ಲಿ ಬೆಳೆಸಿದ್ದ ವೈರಸ್ ಆಗಿದ್ದರೆ ಇದರ ವಿರುದ್ಧದ ಪ್ರತಿಕಾಯಗಳು ಯಾರಲ್ಲಿಯೂ ಇರುತ್ತಿರಲಿಲ್ಲ. ಹೀಗಾಗಿ, ಇಂದಿನ ರೋಗಕಾರಕ ಕರೋನಾವೈರಸ್ ಜೈವಿಕ ಸಮರದ ಭಾಗವಾಗಿರಲು ಸಾಧ್ಯವೇ ಇಲ್ಲ.

ಇಂದಿನ ಚೀನಾ ನ್ಯುಮೋನಿಯಾ ಕೇವಲ ಒಂದು ಕಾಯಿಲೆಯಷ್ಟೇ ಅಲ್ಲ; ಅದು ಮನುಷ್ಯನ ಬುದ್ಧಿಹೀನ ದುರಾಸೆಯ ಪ್ರತಿಬಿಂಬ ಕೂಡ. ನಿಸರ್ಗದಲ್ಲಿ ಲಕ್ಷಾಂತರ ಪ್ರಭೇಧಗಳ ಜೀವಿಗಳಿವೆ. ಪ್ರತಿಯೊಂದು ಜೀವವರ್ಗಕ್ಕೂ ತನ್ನದೇ ಆದ ಕಾಯಿಲೆಗಳು, ಆ ಕಾಯಿಲೆಗಳನ್ನು ಉಂಟು ಮಾಡುವ ವಿಶಿಷ್ಟ ಬಗೆಯ ಸೂಕ್ಷ್ಮಾಣುಜೀವಿಗಳೂ ಇರುತ್ತವೆ. ಆದರೆ, ಮನುಷ್ಯನ ದುರಾಸೆ ಜೀವವರ್ಗಗಳ ನಡುವಿನ ಗಡಿಗಳನ್ನು ಆಕ್ರಮಿಸಿ ಎಲ್ಲರ ಆಸ್ತಿತ್ವಕ್ಕೂ ಸಂಚಕಾರ ತರುತ್ತಿದೆ. ಆಹಾರ ವೈವಿಧ್ಯದ ಹೆಸರಿನಲ್ಲಿ ಬಾವಲಿಗಳನ್ನು ಕೂಡ ಭಕ್ಷಿಸುವ, ಸಂಪತ್ತಿನ ಶೋಧದಲ್ಲಿ ಇತರ ಜೀವವರ್ಗಗಳ ಪ್ರಾಂತ್ಯವನ್ನು ಪ್ರವೇಶಿಸಿ ಅವನ್ನು ಹಾಳುಗೆಡವುವ ಬುದ್ಧಿ ನಮಗೆ ಹೊಸದಲ್ಲ. ಇಂತಹ ಅತಾರ್ಕಿಕ ನಡೆಗಳಿಂದ ಆಯಾ ಪ್ರಾಣಿಗಳಿಗಷ್ಟೇ ಸೀಮಿತವಾಗಿದ್ದ ಸೂಕ್ಷ್ಮಾಣು ಜೀವಿಗಳಿಗೆ ಮಾನವ ಶರೀರವನ್ನು ಪ್ರವೇಶಿಸುವ ಅವಕಾಶ ನೀಡಿ ಈಗಾಗಲೇ ಸಾಕಷ್ಟು ಕಾಯಿಲೆಗಳನ್ನು ನಮ್ಮೊಳಗೆ ಎಳೆದುಕೊಂಡಿದ್ದೇವೆ. ಈ ಪಟ್ಟಿಯಲ್ಲಿ ಕರೋನಾವೈರಸ್ ನ್ಯುಮೋನಿಯಾ ಹೊಸ ಸೇರ್ಪಡೆ ಅಷ್ಟೇ.
ಇದು ಜೈವಿಕ ಸಮರ ಅಲ್ಲ ಎನ್ನುವುದು ಖಚಿತ. ಅದರ ಬಗ್ಗೆ ಆತಂಕ ಪಡಬೇಕಿಲ್ಲ. ಆದರೆ, ಪ್ರಸ್ತುತ ಕರೋನಾವೈರಸ್ ಬಗ್ಗೆ ಎಚ್ಚರಿಕೆಯಿಂದ ಇರಲೇಬೇಕು. ಸದ್ಯಕ್ಕೆ ಜನವರಿ ಅಂತ್ಯದ ವೇಳೆಗೆ ಚೀನಾ ದೇಶದಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಮಂದಿ ಕರೋನಾವೈರಸ್ ನ್ಯುಮೋನಿಯಾ ಪೀಡಿತರಾಗಿದ್ದಾರೆ; ಅವರಲ್ಲಿ 213 ಮಂದಿ ಮರಣಿಸಿದ್ದಾರೆ. ಅದರ ಜೊತೆಗೆ, 18 ವಿವಿಧ ದೇಶಗಳಲ್ಲಿ 98 ಮಂದಿಯಲ್ಲಿ ಈ ಕಾಯಿಲೆ ಪತ್ತೆ ಆಗಿದೆಯಾದರೂ, ಯಾವುದೇ ಮರಣ ಸಂಭವಿಸಿಲ್ಲ. ಈ ನಿಟ್ಟಿನಲ್ಲಿ ಚೀನಾ ದೇಶ ತೆಗೆದುಕೊಂಡಿರುವ ಕಟ್ಟುನಿಟ್ಟಿನ ಕ್ರಮಗಳು ಶ್ಲಾಘನೀಯ. ಆದರೆ, ಕೆಲವು ಹಿಂದುಳಿದ ದೇಶಗಳಿಗೆ ಈ ರೋಗ ಹಬ್ಬಿದರೆ, ಅದನ್ನು ನಿಯಂತ್ರಿಸಬಲ್ಲ ಸಾಮರ್ಥ್ಯ ಅಲ್ಲಿನ ದುರ್ಬಲ ಆರೋಗ್ಯ ವ್ಯವಸ್ಥೆಗಳಿಗೆ ಇರಲಿಕ್ಕಿಲ್ಲ. ಹೀಗಾಗಿ ವಿಶ್ವ ಆರೋಗ್ಯ ಸಂಸ್ಥೆ ಕರೋನಾವೈರಸ್ ನ್ಯುಮೋನಿಯಾ “ಆರೋಗ್ಯದ ವಿಷಯದಲ್ಲಿ ಜಾಗತಿಕ ತುರ್ತು ಪರಿಸ್ಥಿತಿ” ಎಂದು ಘೋಷಿಸಿದೆ (Global Health Emergency). ಈ ರೀತಿಯ ಘೋಷಣೆಯನ್ನು 2009 ರಲ್ಲಿ ಹಂದಿ ಜ್ವರ, 2014 ರಲ್ಲಿ ಪೋಲಿಯೋ ಮತ್ತು ಇಬೊಲಾ, 2016 ರಲ್ಲಿ ಝೀಕಾ, 2019 ರಲ್ಲಿ ಮತ್ತೆ ಇಬೊಲಾ ಕಾಯಿಲೆಗಳಿಗಾಗಿ ಮಾಡಲಾಗಿತ್ತು. ಇಂತಹ ಘೋಷಣೆಯಿಂದ ಹಿಂದುಳಿದ ದೇಶಗಳಲ್ಲಿ ಕರೋನಾವೈರಸ್ ಕಾಣಿಸಿದರೆ, ಅದನ್ನು ಜಾಗತಿಕ ಮಟ್ಟದ ಸುರಕ್ಷತಾ ಕ್ರಮಗಳನ್ನು ಬಳಸಿ ನಿಯಂತ್ರಿಸಲು ವಿಶ್ವ ಆರೋಗ್ಯ ಸಂಸ್ಥೆ ಆಯಾ ದೇಶಗಳಿಗೆ ನೆರವಾಗುತ್ತದೆ.

ಯಾವುದೇ ಜಾಗತಿಕ ತುರ್ತು ಪರಿಸ್ಥಿತಿ ಎದುರಾದಾಗ ಮೊದಲು ಮಾಡಬೇಕಾದ ಕೆಲಸ ವದಂತಿಗಳನ್ನು ಹತ್ತಿಕ್ಕುವುದು. ಅಧಿಕೃತ ಮೂಲದ ಸುದ್ಧಿಗಳು ಮಾತ್ರ ನಂಬಲರ್ಹ. ಬೇರೆ ಯಾವುದೇ ದಾರಿಯಲ್ಲಿ ಬಂದ ಸುಳ್ಳು ಮಾಹಿತಿಯನ್ನು ನಿರ್ಲಕ್ಷಿಸಬೇಕು. ಯಾವುದೇ ಕಾರಣಕ್ಕೂ ವದಂತಿಗಳ ಬಗ್ಗೆ ಚರ್ಚೆ ಮಾಡಬಾರದು; ವದಂತಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬಾರದು. ತಪ್ಪು ಮಾಹಿತಿ ಹಂಚುವವರಿಗೆ ತಿಳಿಹೇಳಬೇಕು. ಧೈರ್ಯದಿಂದ ಒಗ್ಗಟ್ಟಾಗಿ ನಿಂತರೆ ಜಗತ್ತನ್ನೇ ಗೆಲ್ಲಬಹುದು. ಒಂದು ವೈರಸ್ ಕಾಯಿಲೆ ಗೆಲ್ಲುವುದು ದೊಡ್ಡದೇನಲ್ಲ. ಅದಕ್ಕೆ ಬೇಕಾದ ಶಿಸ್ತು, ಸಂಯಮ, ಎಚ್ಚರ ಬಹಳ ಮುಖ್ಯ.
---------------

ವಿಶ್ವವಾಣಿ ದಿನಪತಿಕೆಯಲ್ಲಿ 5/ಫೆಬ್ರವರಿ/2020 ಯಂದು ಪ್ರಕಟವಾಗಿರುವ ಲೇಖನ. ಕೊಂಡಿ: http://epaper.vishwavani.news/bng/e/bng/05-02-2020/6

1/ಫೆಬ್ರವರಿ/2020 ರಂದು "ಜಾಣ ಸುದ್ಧಿ" ಧ್ವನಿಪತ್ರಿಕೆಯಲ್ಲಿ ಬಿತ್ತರವಾಗಿತ್ತು. ಆಡಿಯೋ ಆವೃತ್ತಿಯ ಕೊಂಡಿ: (ಸಂಚಿಕೆ 124) https://anchor.fm/kollegala/episodes/124--30-eait1p