ಗುರುವಾರ, ಜೂನ್ 20, 2019




ವೈದ್ಯರ ಮೇಲೆ ಹಲ್ಲೆ – ದೀರ್ಘಕಾಲಿಕ ಪರಿಹಾರಗಳೇನು?

ಕರ್ತವ್ಯನಿರತ ವೈದ್ಯರ ಮೇಲೆ ಅಮಾನುಷ ಹಲ್ಲೆಗಳು ನಡೆಯುತ್ತಿರುವುದು ನಾಗರಿಕ ಸಮಾಜಕ್ಕೇ ಕಳಂಕ. ನೀತಿರಹಿತ ವೈದ್ಯರು ಇಲ್ಲವೇ ಇಲ್ಲ ಎಂದೇನಲ್ಲ; ನೂರು ವೈದ್ಯರಲ್ಲಿ ಒಬ್ಬರು ಅಂಥವರಿರಬಹುದು. “ಒಬ್ಬ ಕೆಟ್ಟ ವೈದ್ಯನ ಕಾರಣಕ್ಕೆ ಉಳಿದ ೯೯ ಮಂದಿ ಒಳ್ಳೆಯ ವೈದ್ಯರನ್ನು ದೂಷಿಸಬೇಡಿ” ಎಂದು ಹೇಳುವ ವೈದ್ಯ ಸಮುದಾಯ ಅಂತೆಯೇ ರೋಗಿಗಳಲ್ಲಿ ಶೇಕಡಾ ೯೯ ಮಂದಿ ಒಳ್ಳೆಯವರು ಇರುತ್ತಾರೆ ಎಂಬುದನ್ನೂ ಮರೆಯಬಾರದು. ಆ ಒಬ್ಬ ಕೆಟ್ಟ ರೋಗಿಯ ಕಾರಣಕ್ಕೆ ಉಳಿದ ೯೯ ಮಂದಿ ಒಳ್ಳೆಯ ರೋಗಿಗಳಿಗೆ ಶಿಕ್ಷೆ ಆಗದಂತೆ ಕಾಯುವುದು ಕೂಡ ವೈದ್ಯರ ಕರ್ತವ್ಯವೇ. ಒಂದು ವ್ಯತ್ಯಾಸವೆಂದರೆ, ಒಬ್ಬ ಕೆಟ್ಟ ವೈದ್ಯನನ್ನು ಶಿಕ್ಷಿಸಲು ಹತ್ತಾರು ಕಾನೂನಾತ್ಮಕ ದಾರಿಗಳಿವೆ. ಆದರೆ ಆ ಒಬ್ಬ ಕೆಟ್ಟ ರೋಗಿಯನ್ನು ಶಿಕ್ಷಿಸಲು ವ್ಯವಸ್ಥೆಯ ಬಳಿ ಸರಿಯಾದ ಒಂದೂ ನೀತಿಯಿಲ್ಲ! ಕೆಟ್ಟವರಿಗೆ ಶಿಕ್ಷೆ ಆದಾಗ ಎಲ್ಲರೂ ಸಂತೋಷಿಸುತ್ತಾರೆ; ಅಂತೆಯೇ ಅಮಾಯಕರಿಗೆ ಶಿಕ್ಷೆ ಆದಾಗ ಆಕ್ರೋಶ ಕೂಡ ಉಕ್ಕುತ್ತದೆ. ಇದನ್ನು ವೈದ್ಯರು ಮತ್ತು ರೋಗಿಗಳು – ಇಬ್ಬರೂ ನೆನಪಿಡಬೇಕು.
 
ಯಾವುದೇ ಸಮಸ್ಯೆಯ ಪರಿಹಾರಕ್ಕೆ ಮುಷ್ಕರ ಸರಿಯಾದ ಮಾರ್ಗವಲ್ಲ. ಒಂದು ಘಟನೆ ನಡೆದಾಗ ಮೇಲ್ನೋಟಕ್ಕೆ ಕೆಲವು ಕಾರಣಗಳು ಕಂಡರೂ, ಸಮಸ್ಯೆಯ ಪರಿಹಾರಕ್ಕೆ ಅದಕ್ಕಿಂತ ಆಳದ ವಿಷಯಗಳನ್ನು ಪರಿಗಣಿಸಬೇಕು. ವೈದ್ಯರ ಮೇಲೆ ಹಲ್ಲೆ ಖಾಸಗೀ ಮತ್ತು ಸರಕಾರೀ ಆಸ್ಪತ್ರೆಗಳಲ್ಲೂ ಜರುಗುತ್ತದೆ. ಖಾಸಗೀ ಆಸ್ಪತ್ರೆಗಳಲ್ಲಿ ಚಿಕಿತ್ಸೆಯ ಖರ್ಚು ಈಗಾಗಲೇ ಗಗನಕ್ಕೆ ಏರಿದೆ. “ಒಬ್ಬ ಸಾಮಾನ್ಯ ವ್ಯಕ್ತಿ ಇಪ್ಪತ್ತು ವರ್ಷ ದುಡಿದು ಕಾಪಿಟ್ಟಿದ್ದ ಉಳಿತಾಯವೆಲ್ಲ ಎರಡು ವಾರ ಖಾಸಗೀ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ ಖರ್ಚಾಗಿ ಹೋಗುತ್ತದೆ” ಎಂಬ ಮಾತಿನಲ್ಲಿ ತಥ್ಯವಿದೆ. ಖಾಸಗೀ ಆಸ್ಪತ್ರೆ ದುಬಾರಿ ಆಗುವುದಕ್ಕೆ ಏನು ಕಾರಣ? ಪ್ರತಿಯೊಂದು ಖಾಸಗೀ ಆಸ್ಪತ್ರೆಯ ಬೆನ್ನುಮೂಳೆ ಮುರಿಯುವಷ್ಟು ತೆರಿಗೆಯನ್ನು ಸರ್ಕಾರ ವಿಧಿಸುತ್ತದೆ. ಮಾರುಕಟ್ಟೆಯಲ್ಲಿ ನೆಲೆ ನಿಲ್ಲಬೇಕೆಂದರೆ ಈ ಖಾಸಗೀ ಆಸ್ಪತ್ರೆಗಳು ಸಿಕ್ಕಾಪಟ್ಟೆ ಹಣ ಖರ್ಚು ಮಾಡಿ ನವನವೀನ ತಂತ್ರಜ್ಞಾನವನ್ನು ಸದಾಕಾಲ ಅಳವಡಿಸಿಕೊಳ್ಳುತ್ತಲೇ ಇರಬೇಕು. ಈ ಸತ್ಯಗಳೆಲ್ಲಾ ರೋಗಿಗಳಿಗೆ ತಿಳಿಯುವುದು ಕಷ್ಟ. ಖಾಸಗೀ ಆಸ್ಪತ್ರೆಗಳಲ್ಲಿ ಹಣ ಖರ್ಚು ಮಾಡಿದ ಮಾತ್ರಕ್ಕೆ ಚಿಕಿತ್ಸೆ ಯಾವಾಗಲೂ ಫಲಕಾರಿಯೇ ಆಗಬೇಕು ಎಂದೇನಿಲ್ಲವಲ್ಲ? ಆದರೆ ಕೈ ಬರಿದಾಗುವಷ್ಟು ಹಣ ಖರ್ಚು ಮಾಡಿದ ಸಾಮಾನ್ಯ ಮನುಷ್ಯನಿಗೆ ಈ ಸತ್ಯ ಅರಿವಾಗುವುದು ಹೇಗೆ? ಕಷ್ಟಪಟ್ಟ ಹಣವೂ ಹೋಯಿತು; ತಮ್ಮ ಆತ್ಮೀಯರೂ ಮೃತರಾದರು ಎಂದರೆ ಅದನ್ನು ಸೈರಣೆಯಿಂದ ಸ್ವೀಕರಿಸುವ ಮನಸ್ಥಿತಿ ಎಲ್ಲರಿಗೂ ಇರಲಾರದು. ಅವರುಗಳ ಆ ಕ್ಷಣದ ಕೋಪಕ್ಕೆ ಆಹುತಿಯಾಗುವವರು ರೋಗಿಯನ್ನು ಅಲ್ಲಿಯವರೆಗೆ ಬದುಕಿಸಲು ಹೆಣಗಾಡಿದ ಬಡಪಾಯಿ ವೈದ್ಯರು. 

ಇನ್ನು ಸರಕಾರೀ ಆಸ್ಪತ್ರೆಗಳ ಪಾಡನ್ನಂತೂ ಕೇಳಲಾಗದು. ಸ್ವಾತಂತ್ರ್ಯ ಪಡೆದ ೭೨ ವರ್ಷಗಳಲ್ಲಿ “ಎಷ್ಟು ಜನಸಂಖ್ಯೆಗೆ ಎಷ್ಟು ಆಸ್ಪತ್ರೆಗಳು ಅವಶ್ಯಕ” ಎಂಬುದನ್ನು ಲೆಕ್ಕ ಹಾಕಲೂ ನಮ್ಮ ಆಳುಗರಿಗೆ, ಅಧಿಕಾರಿಗಳಿಗೆ ಆಗಿಲ್ಲ ಎಂಬುದು ದುಃಖದ ಸಂಗತಿ. ಸಾಗರದಂತೆ ಹರಿದು ಬರುವ ರೋಗಿಗಳ ಚಿಕಿತ್ಸೆಗೆ ಸರಕಾರೀ ಆಸ್ಪತ್ರೆಗಳಲ್ಲಿ ಇರುವುದು ಬೆರಳೆಣಿಕೆಯಷ್ಟು ವೈದ್ಯರು; ಮೂರು ಕಾಸಿನ ಸೌಲಭ್ಯಗಳು. ಯಾವ ರೋಗಿಯ ಕಡೆಗೂ ಸರಿಯಾಗಿ ಗಮನಹರಿಸಲಾಗದ ಪರಿಸ್ಥಿತಿ. “ವೈದ್ಯರು ತಮ್ಮನ್ನು ಉಪೇಕ್ಷೆ ಮಾಡುತ್ತಿದ್ದಾರೆ” ಎಂದು ಭಾವಿಸುವ ರೋಗಿಗೆ ಸಾಂತ್ವನ ಹೇಳುವವರು ಯಾರು? ಹಗಲು-ರಾತ್ರಿಗಳ ವ್ಯತ್ಯಾಸವಿಲ್ಲದೇ ತಮ್ಮನ್ನು ಉಪಚಾರ ಮಾಡುತ್ತಿರುವ ಕಿರಿಯ ವೈದ್ಯರು ಆ ವಿರಾಟ್ ವ್ಯವಸ್ಥೆಯ ಅತ್ಯಂತ ಅಸಹಾಯಕ ಅಂಶ ಎಂಬ ವಿಷಯ ರೋಗಿಗಳಿಗೆ ತಿಳಿದಿರುವುದೇ ಇಲ್ಲ. ತನ್ನ ಭವಿಷ್ಯದ ಕನಸು ಕಾಣುತ್ತಾ ಅಲ್ಲಿ ಕೆಲಸ ಮಾಡುತ್ತಿರುವ ಆ ಕಿರಿಯ ವೈದ್ಯ ಊಟ-ನಿದ್ದೆಗಳನ್ನೂ ಅಲಕ್ಷಿಸಿ ತನ್ನ ಆರೋಗ್ಯಕ್ಕೇ ಸಂಚಕಾರ ತಂದುಕೊಂಡಿದ್ದಾನೆ ಎಂಬ ಸತ್ಯ ಎಷ್ಟು ರೋಗಿಗಳಿಗೆ ತಿಳಿದಿರಬಹುದು? ದುರದೃಷ್ಟವಶಾತ್, ಕೆಟ್ಟ ರೋಗಿಗಳ ಮೃಗೀಯ ವರ್ತನೆಗೆ ಬಲಿಯಾಗುವ ಅಮಾಯಕರು ಕೂಡ ಇಂತಹ ಕಿರಿಯ ವೈದ್ಯರೇ. ಒಂದು ಹಲ್ಲೆ ಜೀವನದ ಬಗ್ಗೆ, ಮಾನವತೆಯ ಬಗ್ಗೆ ಇರುವ ಕನಸುಗಳನ್ನೆಲ್ಲಾ ನುಚ್ಚುನೂರು ಮಾಡಬಲ್ಲದು.

ವೈದ್ಯರ ಮೇಲೆ ಹಲ್ಲೆಗಳು ಆಗದಂತೆ ಮಾಡಲು ಸಾಧ್ಯವೇ? ಸಮಸ್ಯೆಯ ಮೂಲವನ್ನು ಪರಿಷ್ಕರಿಸಿದ್ದಲ್ಲದೇ ಇದು ಸಾಧ್ಯವಿಲ್ಲ. ಮುಷ್ಕರಗಳಿಂದ ಪ್ರಯೋಜನವಿಲ್ಲ. ಈಗಾಗಲೇ ವಿಪರೀತ ಕೆಲಸದಿಂದ ಹೈರಾಣಾಗಿರುವ ಅಲ್ಪಸಂಖ್ಯೆಯ ಪೋಲೀಸರನ್ನು ವೈದ್ಯರ ರಕ್ಷಣೆಯ ಕೆಲಸಕ್ಕೆ ನಿಯೋಜಿಸುವುದು ಅಸಾಧ್ಯ. ರಾಜಕಾರಣಿಗಳ ಭರವಸೆಗಳನ್ನಂತೂ ನಂಬಲಾಗದು. ನಮ್ಮ ನ್ಯಾಯಾಂಗದ ವೇಗ ಕಿಡಿಗೇಡಿಗಳಿಗೆ ಮರೆಯದಂತಹ ಪಾಠ ಕಲಿಸುವಷ್ಟು ಕ್ಷಿಪ್ರವಾಗಿಲ್ಲ. ಹೀಗಿರುವಾಗ ಪರಿಹಾರ ಹೇಗೆ?

ಈ ಸಮಸ್ಯೆಗೆ ದೀರ್ಘಕಾಲೀನ ಪರಿಹಾರಗಳೇ ದಾರಿ. ಹಲ್ಲೆಗಳಿಗೆ ಹೆದರಿ ವೈದ್ಯವೃತ್ತಿಯನ್ನು ಆಯ್ದುಕೊಳ್ಳಲು ನಿರಾಕರಿಸುತ್ತಿರುವ ಪೀಳಿಗೆ ಈಗಾಗಲೇ ಆರಂಭವಾಗಿದೆ. ಇದು ಅಪಾಯಕಾರಿ ಪ್ರವೃತ್ತಿ. ಮುಂದಿನ ಪೀಳಿಗೆಯ ಆರೋಗ್ಯ ರಕ್ಷಣೆ, ಅದನ್ನು ಮಾಡುವ ವೈದ್ಯರ ಸುರಕ್ಷೆ, ಕಡುಬಡವರಿಗೂ ಸಿಗಬೇಕಾದ ವೈದ್ಯಕೀಯ ಸೌಲಭ್ಯ, ಅದಕ್ಕೆ ಬೇಕಾದ ಆರ್ಥಿಕತೆ, ಇದನ್ನು ಸಾಧ್ಯಮಾಡಬೇಕಾದ ಉನ್ನತ ಮಟ್ಟದ ವೈದ್ಯಕೀಯ ಶಿಕ್ಷಣ, ಅಗಾಧವಾಗಿ ಬೆಳೆಯುತ್ತಿರುವ ಜನಸಂಖ್ಯೆಗೆ ಒದಗಿಸಬೇಕಾದ ವೈದ್ಯಕೀಯ ಸವಲತ್ತುಗಳು – ಇವನ್ನೆಲ್ಲಾ ಒಟ್ಟುಗೂಡಿಸಿಯೇ ಪರಿಹಾರ ಹುಡುಕಬೇಕು. ಅಂತಹ ಕೆಲವೊಂದು ಪರಿಹಾರಗಳನ್ನು ಆಲೋಚಿಸಬಹುದು:

೧. ಮೊಟ್ಟಮೊದಲಿಗೆ IAS, IPS ಗಳ ರೀತಿಯಲ್ಲಿ IMS (ಭಾರತ ವೈದ್ಯಕೀಯ ಸೇವೆ) ನಿರ್ಮಾಣವಾಗಬೇಕು. ೨೧ನೆಯ ಶತಮಾನಕ್ಕೆ ಬೇಕಾದ ವೈದ್ಯಕೀಯ ಅವಶ್ಯಕತೆಗಳನ್ನು ಆಲೋಚಿಸಿ, ಪೂರೈಸಿ, ನಿಭಾಯಿಸಬಲ್ಲ ಸ್ವಾಯತ್ತ ವ್ಯವಸ್ಥೆ ಬೇಕು. ಕಳೆದ ಏಳು ದಶಕಗಳಲ್ಲಿ ಅಧಿಕಾರಿಗಳು, ರಾಜಕಾರಣಿಗಳು ಈ ವಿಷಯದಲ್ಲಿ ಹೀನಾಯವಾಗಿ ಸೋತಿದ್ದಾರೆ. ಇದು ಹೀಗೆಯೇ ಮುಂದುವರಿಯಲಾಗದು. ಸರಿಯಾದ ಯೊಜನೆಗಳಿಲ್ಲದೆ ಯಾವುದೇ ಮಹತ್ಕಾರ್ಯವನ್ನೂ ಸಾಧಿಸಲಾಗದು.

೨. ಪ್ರತಿಯೊಂದು ಸರಕಾರೀ ಆಸ್ಪತ್ರೆಗಳಲ್ಲೂ ಉಚಿತ ವೈದ್ಯಕೀಯ ಸೇವೆಗಳೇ ಅಲ್ಲದೇ ಹಣ ಸಂದಾಯ ಮಾಡಿ ಪಡೆಯಬಹುದಾದ ರೀತಿಯ ಸೇವೆಗಳೂ ಇರಬೇಕು. ಸರ್ಕಾರವೇ ನಡೆಸುವ ರೈಲುಗಳಲ್ಲಿ ಮೊದಲ ದರ್ಜೆ, ವಾತಾನುಕೂಲಿ ದರ್ಜೆ, ಸಾಮಾನ್ಯ ದರ್ಜೆ ಇರುವಂತೆಯೇ ಸರಕಾರೀ ಆಸ್ಪತ್ರೆಗಳಲ್ಲೂ ಇರಬೇಕು. ಇದರಿಂದ ಉತ್ಪನ್ನವಾದ ಆದಾಯ ಬಡವರ ಚಿಕಿತ್ಸೆಗೆ ಬಳಕೆಯಾಗಿ, ಸರ್ಕಾರದ ಮೇಲಿನ ಅವಲಂಬನೆ ತಗ್ಗಬೇಕು.

೩. ಸರಕಾರೀ ಆಸ್ಪತ್ರೆಗಳಲ್ಲಿ ಮತ್ತು ಮೆಡಿಕಲ್ ಕಾಲೇಜುಗಳಲ್ಲಿ ಸೇವೆ ಮಾಡಲು ಬಯಸುವ ತಜ್ಞ ಖಾಸಗೀ ವೈದ್ಯರಿಗೆ ಅವಕಾಶ ಕಲ್ಪಿಸಬೇಕು. ಇಂತಹ ತಜ್ಞರಿಗೆ ತೆರಿಗೆ ರಿಯಾಯತಿಯನ್ನೋ, ಸಾಂಕೇತಿಕ ಸಂಭಾವನೆಯನ್ನೋ, ಜೊತೆಗೆ ಒಂದು ಗೌರವ ಹುದ್ದೆಯನ್ನೂ ನೀಡಬೇಕು. ನಮ್ಮ ದೇಶದಲ್ಲಿ ಹೇರಳವಾಗಿ ಲಭ್ಯವಿರುವ, ಸೇವಾಮನೋಭಾವವಿರುವ ಖಾಸಗೀ ತಜ್ಞವೈದ್ಯರನ್ನು ಸಾಂಕೇತಿಕವಾಗಿ ಸರಕಾರೀ ಆರೋಗ್ಯ ವ್ಯವಸ್ಥೆಯಲ್ಲಿ ಮಿಳಿತಗೊಳಿಸಿದರೆ ಅದು ನಮ್ಮ ಆರೋಗ್ಯ ವ್ಯವಸ್ಥೆಯ ಚಹರೆಯನ್ನೇ ಬದಲಾಯಿಸಬಹುದು.  

೪. ಕಾರ್ಪೋರೆಟ್ ಸಂಸ್ಥೆಗಳ ಸಾಮಾಜಿಕ ಜವಾಬ್ದಾರಿಯನ್ನು (CRS) ಬಳಸಿಕೊಂಡು ಪ್ರತಿಯೊಂದು ಖಾಸಗೀ ಆಸ್ಪತ್ರೆಯಲ್ಲೂ ಕೆಲವು ಹಾಸಿಗೆಗಳನ್ನು ಬಡವರಿಗೆ ಉಚಿತ ಚಿಕಿತ್ಸೆಗೆ ನೀಡಬೇಕು. ಇದರ ಸರಿಯಾದ ಉಪಯೋಗದ ಜವಾಬ್ದಾರಿ IMS ಮೇಲೆ ಇರಬೇಕು.

೫. ವೈದ್ಯಕೀಯ ಶಿಕ್ಷಣದ ಆಮೂಲಾಗ್ರ ಪರಿಶೀಲನೆ ಆಗಬೇಕು. ಪಾಶ್ಚಾತ್ಯರ ನಕಲನ್ನು ಬಿಟ್ಟು ನಮ್ಮ ಸಮಾಜಕ್ಕೆ ಅವಶ್ಯಕವಿರುವ ವೈದ್ಯಕೀಯ ಶಿಕ್ಷಣ ನೀತಿ ಇರಬೇಕು. 

೬. ಪ್ರತಿಯೊಂದು ತಾಲ್ಲೂಕು ಕೇಂದ್ರಗಳಲ್ಲೂ ಒಂದೊಂದು ಎರಡನೇ ಸ್ತರದ ತಜ್ಞರ ಆಸ್ಪತ್ರೆ, ಪ್ರತಿಯೊಂದು ಜಿಲ್ಲಾ ಕೇಂದ್ರಗಳಲ್ಲೂ ಒಂದೊಂದು ಮೂರನೆಯ ಸ್ತರದ ತಜ್ಞರ ಆಸ್ಪತ್ರೆ ಇರಬೇಕು. ತಮ್ಮ ಆದಾಯವನ್ನು ತಾವೇ ಪಡೆಯಬಲ್ಲ ವ್ಯವಸ್ಥೆಯನ್ನು ಈ ಆಸ್ಪತ್ರೆಗಳು ಮಾಡಿಕೊಳ್ಳುವಂತೆ ಇರಬೇಕು. ಇದು IMS ಸುಪರ್ದಿಯಲ್ಲಿ ಜರುಗಬೇಕು.

ಇಂತಹ ಹಲವಾರು ದೂರಗಾಮಿ ಆಲೋಚನೆಗಳಿಂದ ಮಾತ್ರ ಪ್ರಜೆಗಳ ಆರೋಗ್ಯ ಪರಿಸ್ಥಿತಿ ಸುಧಾರಿಸಲು ಸಾಧ್ಯ. ಕ್ಷಣಿಕ ಪರಿಹಾರಗಳಿಂದ ಯಾವುದೇ ಬದಲಾವಣೆ ಸಾಧ್ಯವಿಲ್ಲ. ಯಾವುದೇ ಆಮೂಲಾಗ್ರ ಬದಲಾವಣೆಯೂ ರಾತ್ರೋರಾತ್ರಿ ಆಗುವುದಿಲ್ಲ. ವೈದ್ಯಕೀಯ ಕ್ಷೇತ್ರದಲ್ಲಿನ ಹಿರಿಯ ಸಾಧಕರು, ಜ್ಞಾನವೃದ್ಧರು ಈ ವಿಷಯವಾಗಿ ತಮ್ಮ ಚಿಂತನೆಗಳನ್ನು ಹರಿಸಿ ಸರ್ಕಾರಕ್ಕೆ ಸ್ಪಷ್ಟವಾದ ಮಾರ್ಗದರ್ಶನ ಮಾಡಬೇಕು. ಯೋಜನಾಬದ್ಧವಾಗಿ, ವ್ಯವಸ್ಥಿತವಾಗಿ ಈ ಸುಧಾರಣೆಗಳನ್ನು ಸಾಧಿಸದೆ ಇದ್ದರೆ ಬಡಪಾಯಿ ವೈದ್ಯರ ಮೇಲೆ ಹಲ್ಲೆಗಳೂ ನಿಲ್ಲುವುದಿಲ್ಲ; ಜನಸಾಮಾನ್ಯರಿಗೆ ಮುಷ್ಕರಗಳ ಬಿಸಿಯೂ ತಪ್ಪುವುದಿಲ್ಲ.

(ದಿನಾಂಕ ೨೦/೬/೨೦೧೯ ರಂದು ವಿಶ್ವವಾಣಿ ಕನ್ನಡ ದಿನಪತ್ರಿಕೆಯಲ್ಲಿ ಪ್ರಕಟವಾದ ಲೇಖನ)
------------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ