ಗುರುವಾರ, ಜನವರಿ 18, 2018

ವೈದ್ಯರು, ರೋಗಿಗಳು ಮತ್ತು ಗ್ರಾಹಕ ವೇದಿಕೆ - ವಿಶ್ವಾಸದ ಪ್ರಪಾತಕ್ಕೆ ಆಹ್ವಾನ?



ಕಳೆದ ವಾರ ಪತ್ರಿಕೆಗಳಲ್ಲಿ ಪ್ರಕಟವಾದ ಒಂದು ಸುದ್ದಿ ವೈದ್ಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಅಪಸ್ಮಾರ (ಫಿಟ್ಸ್) ಸಮಸ್ಯೆಯಿಂದ ಬಳಲುತ್ತಿದ್ದ 9 ವರ್ಷದ ಮಗುವಿಗೆ ಮಕ್ಕಳ ನರರೋಗ ತಜ್ಞರೊಬ್ಬರು ಅಪಸ್ಮಾರದ ನಿಯಂತ್ರಣಕ್ಕೆ ಔಷಧ ಸೂಚಿಸಿದ್ದರು. ಮಗುವಿನ ಚರ್ಮದ ಮೇಲೆ ಈ ಔಷಧದ ಅಡ್ಡ-ಪರಿಣಾಮಗಳಿಂದ ಮಗು ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆಯುವಂತೆ ಆಯಿತು. ಔಷಧದ ಅಡ್ಡ-ಪರಿಣಾಮಕ್ಕೆ ವೈದ್ಯರನ್ನು ಹೊಣೆಯನ್ನಾಗಿಸಿ ಗ್ರಾಹಕ ವೇದಿಕೆ ಆ ವೈದ್ಯರಿಗೆ ರೂ.90,೦೦೦ ದಂಡ ವಿಧಿಸಿತು. ಔಷಧದಿಂದ ಅಡ್ಡ-ಪರಿಣಾಮ ಆಗಬಹುದೆಂದು ತಿಳಿದಿದ್ದರೂ ಆ ಔಷಧವನ್ನು ಸೂಚಿಸಿದ್ದಕ್ಕೆ ಈ ದಂಡ ಎಂದು ಹೇಳಲಾಗಿದೆ. ಇದು ಪತ್ರಿಕಾ ವರದಿಯಲ್ಲಿನ ಸಾರ.

ಈ ಪತ್ರಿಕಾ ವರದಿ ಸತ್ಯವೇ ಆಗಿದ್ದಲ್ಲಿ ಇದು ಕಳವಳಕಾರಿ ವಿಷಯ. ಸರಿ-ತಪ್ಪುಗಳ ಜಿಜ್ಞಾಸೆಗೆ ಹೋಗದೇ ಕೇವಲ ವಾಸ್ತವಿಕ ಅಂಶಗಳನ್ನು ಗಮನಿಸುತ್ತಾ ಹೋದರೆ ಈ ಕಳವಳದ ಕಾರಣ ತಿಳಿಯಬಹುದು. ಇದನ್ನು ಒಂದೊಂದಾಗಿ ನೋಡೋಣ.

1.       ಚಿಕಿತ್ಸೆ ನೀಡಿದ ವೈದ್ಯರ ಅರ್ಹತೆ ಮತ್ತು ತಜ್ಞತೆ: ಮಗುವಿನ ಅಪಸ್ಮಾರದ ಸಮಸ್ಯೆಯನ್ನು ಪತ್ತೆ ಮಾಡಿ ಚಿಕಿತ್ಸೆ ನೀಡಿದ ಈ ವೈದ್ಯರು ಮಕ್ಕಳ ನರರೋಗ ತಜ್ಞರು. ಮಕ್ಕಳ ಆರೋಗ್ಯದ ವಿಷಯದಲ್ಲಿ ಎರಡು ಸ್ನಾತಕೋತ್ತರ ಪದವಿಗಳನ್ನು ಪಡೆದ ನಂತರ ನಮ್ಮ ದೇಶದ ಪ್ರತಿಷ್ಟಿತ ದೆಹಲಿಯ ಅಖಿಲ ಭಾರತ ಆಯುರ್ವಿಜ್ಞಾನ ಮಹಾ ಸಂಸ್ಥಾನದಲ್ಲಿ (AIIMS) ಮೂರು ವರ್ಷಗಳ ಕಾಲ ಅಧ್ಯಯನ ನಡೆಸಿ ಮಕ್ಕಳ ನರರೋಗ ಶಾಸ್ತ್ರದಲ್ಲಿ ಅತ್ಯುನ್ನತ ಪದವಿ ಪಡೆದಿರುವ ದೇಶದ ಕೆಲವೇ ಕೆಲವು ಮಕ್ಕಳ ನರರೋಗ ತಜ್ಞರಲ್ಲಿ ಒಬ್ಬರು. ಮಕ್ಕಳ ಅಪಸ್ಮಾರ ಸಮಸ್ಯೆಯ ವಿಶೇಷ ತಜ್ಞರು. ಇದುವರೆವಿಗೆ ಇಂತಹ ಸಹಸ್ರಾರು ಮಕ್ಕಳಿಗೆ ಚಿಕಿತ್ಸೆ ನೀಡಿರುವವರು. ಒಟ್ಟಾರೆ, ಏನೋ ಓದಿ ಏನೋ ಚಿಕಿತ್ಸೆ ಮಾಡುವ “ಸೇತುಬಂಧ” ವೈದ್ಯರ ಗುಂಪಿಗೆ ಸೇರಿದವರಲ್ಲ! ಇಲ್ಲಿ ಚಿಕಿತ್ಸೆ ನೀಡಿದ ವೈದ್ಯರು ಕೇವಲ ತಜ್ಞರಷ್ಟೇ ಅಲ್ಲ; ಅನುಭವಸ್ಥರು ಕೂಡ.

2.       ಚಿಕಿತ್ಸೆಗೆ ಬಳಸಿದ (ಅಡ್ಡ ಪರಿಣಾಮ ಉಂಟು ಮಾಡಿದ) ಔಷಧ: ಕಾರ್ಬಮಝಪಿನ್ ಎಂಬ ಹೆಸರಿನ ಈ ಔಷಧವನ್ನು 1953 ರಲ್ಲಿ ಕಂಡುಹಿಡಿಯಲಾಯಿತು. 1965 ರಿಂದ ಜಗತ್ತಿನಾದ್ಯಂತ ಅಪಸ್ಮಾರ ಸಮಸ್ಯೆಗೆ ಈ ಔಷಧವನ್ನು ಬಳಸಲಾಗುತ್ತಿದೆ. ಐದು ದಶಕಗಳಿಗೂ ಮೀರಿದ ಈ ಅವಧಿಯಲ್ಲಿ ಕೋಟ್ಯಾಂತರ ರೋಗಿಗಳು ಈ ಔಷಧದಿಂದ ತಮ್ಮ ಅಪಸ್ಮಾರದ ಸಮಸ್ಯೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದಾರೆ. ಅಪಸ್ಮಾರ ನಿಯಂತ್ರಣಕ್ಕೆ ಬಹಳ ಪರಿಣಾಮಕಾರಿ ಎಂದು ಸಾಕಷ್ಟು ಸೋವಿಯಾಗಿ ಲಭಿಸುವ ಈ ಔಷಧ ಹೆಸರು ಪಡೆದಿದೆ.

3.       ಔಷಧದ ಅಡ್ಡ-ಪರಿಣಾಮ: ಜಗತ್ತಿನಲ್ಲಿ ಅಡ್ಡ-ಪರಿಣಾಮ ಇಲ್ಲದ ಯಾವುದೇ ಔಷಧವೂ ಇಲ್ಲ. ತಮ್ಮ ಔಷಧಕ್ಕೆ ಅಡ್ಡ-ಪರಿಣಾಮ ಇಲ್ಲವೆಂದು ಯಾರಾದರೂ ಹೇಳಿದಲ್ಲಿ ಅದು ಇಲ್ಲವೇ ಹಸೀ ಸುಳ್ಳು; ಅಥವಾ ಆ ಔಷಧವನ್ನು ವೈಜ್ಞಾನಿಕವಾಗಿ ಯಾರೂ ಪರೀಕ್ಷಿಸಿಲ್ಲ ಅಷ್ಟೇ. ಇದು ಯಾವುದೇ ವೈಜ್ಞಾನಿಕ ಚಿಕಿತ್ಸಾ ಪದ್ದತಿಯಾ ಔಷಧಕ್ಕೂ ಅನ್ವಯವಾಗುತ್ತದೆ. ಕಾರ್ಬಮಝಪಿನ್ ಔಷಧಕ್ಕೂ ಅಡ್ಡ ಪರಿಣಾಮಗಳು ಇವೆ. ಕೆಲವರಲ್ಲಿ ಈ ಔಷಧ ರಕ್ತಕಣಗಳ ಉತ್ಪತ್ತಿಯನ್ನು ಕಡಿಮೆ ಮಾಡಬಹುದು. ಇನ್ನು ಕೆಲವರಲ್ಲಿ ಮೂತ್ರದ ಉತ್ಪತ್ತಿಯನ್ನು ನಿಲ್ಲಿಸಬಹುದು. ದೃಷ್ಟಿದೋಷ ಮಾಡಬಹುದು. ಹೃದಯದ ಬಡಿತವನ್ನು ಏರುಪೇರು ಮಾಡಬಹುದು. ಚರ್ಮದ ಉರಿಯೂತ ಉಂಟಾಗಬಹುದು. ಕೆಲವು ಬಾರಿ ಚರ್ಮದ ತುಂಬಾ ಬೊಕ್ಕೆಗಳಾಗಿ ಗಂಭೀರ ಪರಿಣಾಮ ಆಗಬಹುದು. ಆದರೆ ಈ ಅಡ್ಡ-ಪರಿಣಾಮಗಳು ಎಲ್ಲರಲ್ಲೂ ಆಗುವುದಿಲ್ಲ.

4.       ಈ ಸಂದರ್ಭದಲ್ಲಿ ಆದದ್ದೇನು?: ಕಾರ್ಬಮಝಪಿನ್ ಔಷಧ ಸೇವಿಸಿದ ಈ ಮಗುವಿಗೆ ಅಪಸ್ಮಾರವೇನೋ ನಿಯಂತ್ರಣಕ್ಕೆ ಬಂತು. ಆದರೆ ಚರ್ಮದ ಉರಿಯೂತ ಕಾಣಿಸಿತು. ಇದನ್ನು ಪೋಷಕರು ಆರಂಭದಲ್ಲಿ ಗಮನಿಸದೇ ಔಷಧ ಮುಂದುವರೆಸಿದ ಪರಿಣಾಮವಾಗಿ ಚರ್ಮದ ಉರಿಯೂತ ತೀವ್ರ ಸ್ವರೂಪವನ್ನು ಪಡೆದು ಗಂಭೀರವಾಯಿತು. ಆಗ ಮಗುವನ್ನು ಬೇರೆ ಆಸ್ಪತ್ರೆಗೆ ಸೇರಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಯಿತು. ಚರ್ಮದ ಮೇಲೆ ಈ ರೀತಿಯ ತೀವ್ರ ಸ್ವರೂಪದ ಉರಿಯೂತ ಸುಮಾರು 10000 ದಲ್ಲಿ 1 ಎಂದು ಹೇಳಲಾಗಿದೆ. ಅಂದರೆ, ಸುಮಾರು 10,000 ಜನ ಕಾರ್ಬಮಝಪಿನ್ ಔಷಧ ಸೇವಿಸಿದರೆ, ಅವರಲ್ಲಿ ಒಬ್ಬರಿಗೆ ಈ ರೀತಿ ಜರುಗಬಹುದು. ಆದ್ದರಿಂದ ಇದನ್ನು ಸಾಮಾನ್ಯ ಅಡ್ಡ-ಪರಿಣಾಮ ಎಂದು ಪರಿಗಣಿಸುವುದಿಲ್ಲ. ಇದು ಅತ್ಯಂತ ವಿರಳವಾಗಿ ಗೋಚರಿಸುವ ಅಡ್ಡ-ಪರಿಣಾಮ ಎಂದು ಹೇಳಲಾಗಿದೆ.

5.       ಅಡ್ಡ-ಪರಿಣಾಮಗಳು ಸಂಭವಿಸುವ ಬಗ್ಗೆ ವೈದ್ಯರಿಗೆ ತಿಳಿಯದೇ?: ಅಡ್ಡ-ಪರಿಣಾಮಗಳ ಬಗ್ಗೆ ವೈದ್ಯಕೀಯ ವ್ಯಾಸಂಗದಲ್ಲಿ ಬಹಳ ಶಿಸ್ತಿನ ಅಧ್ಯಯನ ಇರುತ್ತದೆ. ವಿಶೇಷ ತಜ್ಞ ವೈದ್ಯರು ಕೆಲವೇ ಔಷಧಗಳನ್ನು ಬಳಸುತ್ತಾರೆ. ಆದ್ದರಿಂದ ಅವರಿಗೆ ತಾವು ಬರೆಯುವ ಪ್ರತಿಯೊಂದು ಔಷಧದ ಅಡ್ಡ-ಪರಿಣಾಮಗಳ ಬಗ್ಗೆ ಸಾಕಷ್ಟು ಮಾಹಿತಿ ಇರುತ್ತದೆ. ಆದರೆ, ಯಾವ ರೋಗಿಗೆ ಅಡ್ಡ-ಪರಿಣಾಮ ಆಗಬಹುದು ಎಂದು ಊಹಿಸುವುದೂ ಅಸಾಧ್ಯ. ಅಂತೆಯೇ, 10000 ದಲ್ಲಿ ಒಬ್ಬರಿಗೆ ತೀವ್ರವಾದ ಅಡ್ಡ-ಪರಿಣಾಮ ಆಗುತ್ತದೆ ಎಂದು ಎಲ್ಲಾ ಹತ್ತು ಸಾವಿರ ರೋಗಿಗಳಿಗೂ ಆ ಔಷಧದ ಚಿಕಿತ್ಸೆ ತಡೆಹಿಡಿಯುವುದೂ ಅಶಕ್ಯ. ರಸ್ತೆಯಲ್ಲಿ ಅಪಘಾತ ಆಗುತ್ತದೆಂದು ವಾಹನ ಸಂಚಾರವನ್ನೇ ನಿಲ್ಲಿಸಿಬಿಡುವುದಕ್ಕೆ ಆಗುತ್ತದೆಯೇ? ಪ್ರಸವದ ವೇಳೆ ಗರ್ಭವತಿಯರಿಗೆ ಅಪಾಯ ಸಂಭವಿಸಬಹುದೆಂದು ಯಾರೂ ಗರ್ಭ ಧರಿಸಬಾರದು ಎನ್ನುವುದು ಹಾಸ್ಯಾಸ್ಪದ. ಅಂತೆಯೇ, ಯಾರಿಗೆ ಔಷಧದ ಅಡ್ಡ-ಪರಿಣಾಮ ಆಗಬಹುದು ಎಂದು ತಿಳಿಯಲು ಸಾಧ್ಯವೇ ಇಲ್ಲದ ಪರಿಸ್ಥಿತಿಯಲ್ಲಿ “ಅಡ್ಡ-ಪರಿಣಾಮ ಆಗಬಹುದೆಂದು ತಿಳಿದಿದ್ದರೂ ಆ ಔಷಧವನ್ನು ಏಕೆ ಸೂಚಿಸಿದಿರಿ?” ಎಂದು ಪ್ರಶ್ನೆ ಮಾಡಿದರೆ ಏನು ಉತ್ತರ ಕೊಡಬೇಕು?

6.       ಪರಿಸ್ಥಿತಿ ಇಷ್ಟು ವಿಷಮವಾಗದಂತೆ ತಡೆಯಲು ಸಾಧ್ಯವಿರಲಿಲ್ಲವೇ? ಹಾಗಿದ್ದಲ್ಲಿ ಇದು ವೈದ್ಯಕೀಯ ನಿರ್ಲಕ್ಷ್ಯ ಏಕಲ್ಲ?: ಇದು ಕೇವಲ ವೈದ್ಯಕೀಯದ ಪ್ರಶ್ನೆಯಲ್ಲ. ಇದೊಂದು ಸಾಮಾಜಿಕ ಪ್ರಶ್ನೆ ಕೂಡ. ಯಾವುದೇ ಖಾಯಿಲೆಯ ಚಿಕಿತ್ಸೆ ಕೇವಲ ವೈದ್ಯರ ಜವಾಬ್ದಾರಿ ಮಾತ್ರವೇ ಅಲ್ಲ. ಅದೊಂದು ತಂಡದ ನಿರ್ವಹಣೆ ಇದ್ದಂತೆ. ಖಾಯಿಲೆ ಒಂದೆಡೆ – ಅದನ್ನು ನಿವಾರಿಸುವ, ನಿಯಂತ್ರಿಸುವ ಹೊಣೆಗಾರಿಕೆ ಇರುವವರು ಇನ್ನೊಂದೆಡೆ. ಈ ಎರಡನೇ ತಂಡದಲ್ಲಿ ರೋಗಿ, ರೋಗಿಯ ಆಪ್ತರು, ವೈದ್ಯರು, ಆಸ್ಪತ್ರೆ, ಔಷಧ, ಪರೀಕ್ಷೆಗಳು – ಎಲ್ಲವೂ ಇರುತ್ತವೆ. ಈ ಇಡೀ ತಂಡ ಒಟ್ಟುಗೂಡಿ ಖಾಯಿಲೆಯ ವಿರುದ್ಧ ಹೋರಾಡಬೇಕು. ಈ ತಿಳುವಳಿಕೆ ಎಲ್ಲರಿಗೂ ಅಗತ್ಯ. ಆದರೆ ನಮ್ಮಲ್ಲಿ ಈಚೆಗೆ ಈ ಹೊಣೆಯನ್ನು ಕೇವಲ ವೈದ್ಯರ, ಆಸ್ಪತ್ರೆಯ ಮೇಲೆ ಹಾಕುವ ಪರಿಪಾಠ ಅಧಿಕವಾಗುತ್ತಿದೆ. ಈ ಪ್ರಸಂಗದಲ್ಲೇ ನೋಡಿದರೆ, ವೈದ್ಯರ ಹೊಣೆ ಖಾಯಿಲೆಯನ್ನು ಪತ್ತೆ ಮಾಡುವುದು, ಅದಕ್ಕೆ ತಕ್ಕ ಔಷಧ ಸೂಚಿಸುವುದು, ಔಷಧದ ಬಗ್ಗೆ ವಿವರ ನೀಡುವುದು, ಹೇಗೆ ಖಾಯಿಲೆಯ ಪ್ರಗತಿಯನ್ನು ಮಾಪನ ಮಾಡುವುದು ಹೇಗೆಂದು ತಿಳಿಸುವುದು, ಪುನಃ ಪರೀಕ್ಷೆ ಮಾಡಿ ಖಾಯಿಲೆಯ ಪ್ರಗತಿಯ ಪರಿಷ್ಕರಣೆ ಮಾಡುವುದು – ಇಷ್ಟು. ಅದನ್ನು ಸದರಿ ವೈದ್ಯರು ಸರಿಯಾಗಿಯೇ ಮಾಡಿದ್ದಾರೆ ಎಂದು ರೋಗಿಯ ಆಪ್ತರು ಹಾಗೂ ಗ್ರಾಹಕ ವೇದಿಕೆ ಕೂಡ ಒಪ್ಪಿದೆ. ಆ ಮಗುವಿನ ಪೋಷಕರು ಮಗುವಿನ ಚರ್ಮದ ಮೇಲೆ ಆದ ಉರಿಯೂತ ಉಲ್ಬಣ ಆಗುವವರೆಗೆ ಅದನ್ನು ವೈದ್ಯರ ಗಮನಕ್ಕೆ ತಂದಿಲ್ಲ ಎಂಬ ಅಪವಾದವೂ ಇದೆ. ಇಲ್ಲಿ ಯಾವುದೇ ರೀತಿಯ ಪಕ್ಷಪಾತದ ಪ್ರಶ್ನೆ ಬರಬಾರದು. ಎರಡೂ ಬದಿಗಳಲ್ಲಿ ಸಂವಹನದ ಕೊರತೆ ಇತ್ತೇ? ಅದು ಹೇಗೆ ಆಯಿತು? ಅದನ್ನು ಸರಿಪಡಿಸುವುದು ಹೇಗೆ? ಎಂಬ ಪ್ರಶ್ನೆಗಳು ಹೆಚ್ಚು ಮೌಲಿಕವೇ ಹೊರತು, ಯಾರೊಬ್ಬರನ್ನೂ  ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವುದು ಅಲ್ಲ.

ಮೂಲ ಪ್ರಶ್ನೆಗೆ ಹಿಂದಿರುಗೋಣ. ಅತ್ಯಂತ ವಿರಳವಾಗಿ ಘಟಿಸುವ ಕೆಲವು ಔಷಧೀಯ ಅಡ್ಡ-ಪರಿಣಾಮಗಳಿಗೆ ವೈದ್ಯರನ್ನು ಹೊಣೆಗಾರರನ್ನಾಗಿಸುವುದು ಎಷ್ಟು ಸೂಕ್ತ? ಇಡೀ ಸರಣಿಯಲ್ಲಿ ಎಲ್ಲೇ ತಪ್ಪು ಸಂಭವಿಸಿದ್ದರೂ ಅದನ್ನು ವೈದ್ಯರ ತಲೆಗೇ ಕಟ್ಟುವುದು ಆಘಾತಕಾರಿ ಮಾತ್ರವಲ್ಲ, ಅಪಾಯಕಾರಿ ಕೂಡ. ಸಮಾಜದ ಮತ್ತು ರೋಗಿಗಳ ಹಿತದೃಷ್ಟಿಯಿಂದ ಈ ರೀತಿಯ ನಿರ್ಣಯಗಳು ತೀವ್ರವಾದ ದೂರಗಾಮಿ ಪರಿಣಾಮಗಳನ್ನು ಬೀರಬಹುದು. ಯಾವ ಔಷಧ ಯಾವ ರೀತಿಯ ಅಡ್ಡ-ಪರಿಣಾಮ ಮಾಡಬಹುದೆಂದು ನಿರ್ಧರಿಸುವುದೇ ಅಸಾಧ್ಯವಾಗಿರುವಾಗ ಚಿಕಿತ್ಸೆ ನೀಡಲು ಹೇಗೆ ಸಾಧ್ಯ? ಅಂತಹ ಸಂದರ್ಭದಲ್ಲಿ ತೀರಾ ಕಡಿಮೆ ಅಡ್ಡ-ಪರಿಣಾಮ ಮಾಡಬಹುದಾದ ಯಾವುದೋ ಔಷಧವನ್ನು ಸೂಚಿಸಬೇಕಾಗುತ್ತದೆ. ಅಂತಹ ಔಷಧದ ಎಲ್ಲಾ ಅಡ್ಡ-ಪರಿಣಾಮಗಳನ್ನೂ ಬರವಣಿಗೆಯಲ್ಲಿ ನೀಡಿ ರೋಗಿಯ ಆಪ್ತರಿಂದ ಸಹಿ ಪಡೆಯಬೇಕಾಗುತ್ತದೆ. ಅಂತಹ ಔಷಧ ಅಷ್ಟೇನೂ ಫಲಕಾರಿಯಾಗದ ಚಿಕಿತ್ಸೆ ಆಗಿರಬಹುದು ಅಥವಾ ವಿಪರೀತ ದುಬಾರಿಯೂ ಆಗಿರಬಹುದು. ಇಲ್ಲಿ ಚಿಕಿತ್ಸೆ ನೀಡುವ ವೈದ್ಯರು ರೋಗಿಗಳ ಒಳಿತಿಗಿಂತ ತಮ್ಮ ಸ್ವಂತದ ಒಳಿತನ್ನು ಕಾಯುವ ಪರಿಸ್ಥಿತಿ ಎದುರಾಗುತ್ತದೆ. ಹೀಗೆ ಪ್ರತಿಯೊಂದು ರೋಗಿಗೂ ವಿರಳವಾಗಿ ಆಗಬಲ್ಲ ಪ್ರತಿಯೊಂದೂ ಅಡ್ಡ-ಪರಿಣಾಮವನ್ನೂ ವಿವರಿಸುತ್ತಾ ಅಧಿಕ ಸಮಯ ವ್ಯಯಿಸಿದರೆ ಇಡೀ ದಿನದಲ್ಲಿ ಬೆರಳೆಣಿಕೆಯ ಕೆಲವೇ ರೋಗಿಗಳಿಗೆ ಚಿಕಿತ್ಸೆ ನೀಡಲು ಮಾತ್ರ ಸಾಧ್ಯ. ಪ್ರತಿಯೊಂದು ಇಂತಹ ಸಮಾಲೋಚನೆಯೂ ಅತ್ಯಂತ ದುಬಾರಿ ಆಗಲೇಬೇಕು. ಅಷ್ಟಲ್ಲದೇ, ಹೆಚ್ಚು ರೋಗಿಗಳನ್ನು ನೋಡಲು ಸಾಧ್ಯವಾಗದಿರುವ ಕಾರಣ ತಜ್ಞರ ಸಲಹೆಗೆ ತಿಂಗಳುಗಟ್ಟಲೆ ಕಾಯುವ ಪರಿಸ್ಥಿತಿಯೂ ಬರಬಹುದು. ಇದರ ನಷ್ಟ ಯಾರಿಗೆ ಎನ್ನುವುದು ಕನ್ನಡಿಯಷ್ಟೇ ಸ್ಪಷ್ಟ.

ಈ ತೀರ್ಪಿನ ಇನ್ನೊಂದು ಭಯಾನಕ ಮುಖವೂ ಮುಖ್ಯ. ಬಹಳ ಪರಿಣಾಮಕಾರಿಯಾದ, ಸಾಕಷ್ಟು ಸುರಕ್ಷಿತ ಎಂದು ವಿಶ್ವದಾದ್ಯಂತ ನಿರೂಪಿಸಲ್ಪಟ್ಟಿರುವ ಕಾರ್ಬಮಝಪಿನ್ ಔಷಧಕ್ಕೆ ಅತ್ಯಲ್ಪ ಪ್ರಮಾಣದಲ್ಲಿ ಸಂಭವಿಸುವ ಒಂದು ಅಡ್ಡ-ಪರಿಣಾಮವನ್ನು ಈ ತೀರ್ಪಿನಲ್ಲಿ ಉಲ್ಲೇಖಿಸಿ ಮಹತ್ವ ನೀಡಿದ್ದಾರೆ. ಸಹಜವಾಗಿ ಈಗಾಗಲೇ ಈ ಔಷಧ ಸೇವಿಸುತ್ತಿರುವ ಸಹಸ್ರಾರು ರೋಗಿಗಳಲ್ಲಿ ಈ ಸುದ್ದಿ ಆತಂಕ ಮೂಡಿಸುತ್ತದೆ. ಆ ಭಯದ ಪರಿಣಾಮದಿಂದ ಹಲವಾರು ಮಂದಿ ಔಷಧ ಸೇವನೆಯನ್ನು ನಿಲ್ಲಿಸುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು. ಇದರಿಂದ ಉಂಟಾಗುವ ಪರಿಣಾಮ ಭಯಂಕರ. ಅಪಸ್ಮಾರದ ರೋಗಿಗಳು ಹಠಾತ್ತನೆ ಔಷಧ ಸೇವನೆ ನಿಲ್ಲಿಸಿದರೆ ಅದು ಅವರ ಜೀವಕ್ಕೇ ಎರವಾಗಬಹುದು. ತೀರ್ಪಿನ ಈ ಕರಾಳ ಮುಖವನ್ನು ನಿರ್ಣಾಯಕರು ಗಮನಿಸಿದಂತಿಲ್ಲ.

ಹಾಗೆಂದು ಪ್ರತಿಯೊಂದು ವೈದ್ಯಕೀಯ ಸ್ಖಾಲಿತ್ಯವನ್ನೂ ಸಮರ್ಥನೆ ಮಾಡುತ್ತಿಲ್ಲ ಎಂಬುದನ್ನು ಗಮನಿಸಬೇಕು. ವೈದ್ಯರು ತಪ್ಪು ಮಾಡಿದರೆ ಅದಕ್ಕೆ ಶಿಕ್ಷೆ ಆಗಬೇಕು. ಅದರಲ್ಲಿ ಸಂದೇಹವಿಲ್ಲ. ನಮ್ಮ ದೇಶದಲ್ಲಿ ತಪ್ಪು ಮಾಡಿದರೆ ಶಿಕ್ಷೆಗೆ ಒಳಪಡಿಸುವ ಅತ್ಯಂತ ಅಧಿಕ ಮಾರ್ಗಗಳು ಇರುವುದು ವೈದ್ಯರ ಮೇಲೆ ಮಾತ್ರ! ಆದರೆ ಆ ತಪ್ಪುಗಳ ನಿರ್ಧಾರ ಕನಿಷ್ಠ ವೈಜ್ಞಾನಿಕ ಮಟ್ಟದಲ್ಲಿ ಇರಬೇಕು. ಭಾವನಾತ್ಮಕವಾಗಿ ಮಾತ್ರ ಆಲೋಚಿಸಿ ನಿರ್ಧಾರ ತೆಗೆದುಕೊಂಡರೆ ಅದು ಯಾರಿಗೋ ಮಾಡುವ ಅನ್ಯಾಯ ಆಗುತ್ತದೆ. ಕಡೆಗೆ ಇದರ ವ್ಯತಿರಿಕ್ತ ಪರಿಣಾಮ ಆಗುವುದು ಸಮಷ್ಟಿ ಸಮಾಜದ ಮೇಲೆ ಎಂಬುದನ್ನು ಮರೆಯಬಾರದು. ವೈದ್ಯಕೀಯ ಚಿಕಿತ್ಸೆ ಒಂದು ಸುವರ್ಣ ಮಧ್ಯಮಾರ್ಗದ ಪ್ರಯಾಣ ಆಗಬೇಕೇ ವಿನಃ ಋಣಾತ್ಮಕ ದಾರಿಯದ್ದಲ್ಲ. ಕನಿಷ್ಠ, ವೈದ್ಯರಿಗೆ ಶಿಕ್ಷೆ ಪ್ರಕಟಿಸುವವರಿಗೆ ವೈದ್ಯಕೀಯ ಜ್ಞಾನ ಅತ್ಯಗತ್ಯ ಎಂಬ ಕಾನೂನು ಇರುವುದು ಸೂಕ್ತ. ಇಂತಹ ಪ್ರಕರಣಗಳಲ್ಲಿ ಹಿರಿಯ ವೈದ್ಯರ ಸೇರ್ಪಡೆ ನ್ಯಾಯದ ದೃಷ್ಟಿಯಿಂದ ಬಹಳ ಸ್ವಾಗತಾರ್ಹ. ವೈದ್ಯಕೀಯ ಶಿಕ್ಷಣ ಮತ್ತು ಸೇವೆ ಹದಗೆಡುತ್ತಿರುವ ಕಾಲಘಟ್ಟದಲ್ಲಿರುವ ನಮ್ಮ ದೇಶದಲ್ಲಿ ಈ ಅವಿಶ್ವಾಸದ ಪ್ರಪಾತ ಮುಚ್ಚುವ ಪ್ರಯತ್ನಗಳು ಆಗಬೇಕೇ ಹೊರತು, ಅದನ್ನು ಇನ್ನೂ ಆಳವಾಗಿಸುವ ನಿರ್ಣಯಗಳಲ್ಲ.
----------------------
 (ಜನವರಿ 2018 ರಲ್ಲಿ "ವಿಶ್ವವಾಣಿ" ಕನ್ನಡ ದಿನಪತ್ರಿಕೆಯಲ್ಲಿ ಪ್ರಕಟವಾದ ಲೇಖನ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ